Sunday, June 28, 2009

ಕಾಡಿನ codeಕೋಣ


ಮುಂಜಾನೆ ಎಂಟಾಗಿತ್ತು, ಏಳೋಕೆ ಮನಸೇ ಇರಲಿಲ್ಲ, ಹಾಗೆ ಹಾಸಿಗೆಯಲ್ಲೇ ಬಿದ್ದುಕೊಂಡು ರಾತ್ರಿ ಕನಸು ಕಂಡಿದ್ದು ಸಾಕಾಗಲಿಲ್ಲವೆಂದು, ಮುಂಜಾನೆ ಹಗಲುಗನಸು ಕಾಣುತ್ತಿದ್ದೆ, ಇವಳು ಸುಮಾರು ಏಳು ಘಂಟೆಗೇ ಎದ್ದಿರಬೇಕು, ದಿನಾಲೂ ಕಾಡಿಸಿ ಏಳಿಸೋದು ಇದ್ದೇ ಇದೆ, ಇಂದಾದರೂ ರಜೆ ಪಾಪ ಮಲಗಲಿ ಬಿಡು ಅಂತ ಅವಳೂ ಏಳಿಸಿರಲಿಲ್ಲ, ಕಿಟಕಿಯಲ್ಲಿ ಮೋಡ ಕವಿದು, ಚೂರು ಹನಿ ಹನಿ ಮಳೆಯಾಗಿ ತಣ್ಣನೆ ಸೂಸುಗಾಳಿ ಬೀಸುತ್ತಿದ್ದರೆ, ಹಾಸಿಗೆಯಲ್ಲಿ ಹೊದ್ದು ಮಲಗಿದ್ರೆ ಏನು ಸುಖ ಅಂತೀರಾ, ಈಗ ಬಿಸಿ ಬಿಸಿ ಚಹ, ಕೈಯಲ್ಲಿ ದಿನಪತ್ರಿಕೆಯೊಂದಿದ್ದರೆ, ಇನ್ನೂ ಘಂಟೆ ಎರಡು ಘಂಟೆ ಇಲ್ಲಿಂದ ಕದಲಿದರೆ ಕೇಳಿ.

ಅವಳ ಕರೆದು ಕೇಳಿದರಾಯ್ತು ಅಂತ ಎದ್ದು ಅಲ್ಲೇ ಕೂತೆ, "ರೀ" ಅಂದ್ಲು ಮಂಚ ಕದಲಿ ಸದ್ದು ಕೇಳಿರಬೇಕು, "ಹಾಂ ಎದ್ದೆ ಎದ್ದೆ ಟೀ ಕೊಡ್ತೀಯಾ" ಅಂದೆ, "ಹೂಂ ಹಾಲು ಕರೆಯೋಕೆ ಹೊಗೋಣಂತೆ, ನಿಮ್ಮ ಪ್ರೆಸಿಡೆಂಟ ಏನೊ ಹೇಳ್ತೀದಾರೆ ನೋಡಬನ್ನಿ ಇಲ್ಲಿ" ಅಂದ್ಲು, ಹಾಲು ಕರೆಯೋದಾ, ನಾವ್ಯಾವಾಗ ಎಮ್ಮೆ ಸಾಕಿದ್ವಿ, ಒಮ್ಮೆ ಚಿವುಟಿ ನೋಡಿಕೊಂಡೆ ಇನ್ನೂ ಕನಸಲ್ಲಿ ಇದ್ದೀನೇನೊ ಅಂತ,(ಹೇ ನಾನೇ ಚಿವುಟಿಕೊಂಡ್ರೆ ಕನಸಲ್ಲೂ ನೋವಾಗುತ್ತೆ!) ಅವಳನ್ನು ಒಮ್ಮೆ ಕೇಳಿ ಖಚಿತ ಮಾಡಿಕೊಂಡು ಬಿಡೋಣ ಅಂತ "ಇದೇನು ಕನಸಾ" ಅಂದೆ, "ಬಂದೆ ತಾಳಿ ಚಿವುಟಿ ಬಿಡ್ತೀನಿ" ಅಂದ್ಲು, ಅಯ್ಯೋ ಅವಳು ಚಿವುಟೋದಾ!, ಸಿಕ್ರೆ ಚಾನ್ಸು ಬಿಡ್ತಾಳಾ ಅಂತಾ ಹೆದರಿ, ಇದ್ದ ಸ್ವಲ್ಪ ನಿದ್ದೆ ಹಾರಿಹೋಗಿ "ಏ ಕನಸಲ್ಲ, ಕನಸಲ್ಲ... ಗೊತ್ತಾಯ್ತು ಬಿಡು, ಅಂದ ಹಾಗೆ ಏನೊ ನಮ್ಮ ಪ್ರೆಸಿಡೆಂಟು ಏನೋ ಹೇಳ್ತಾ ಇದಾರೆ ಅಂತಿದ್ದೆ, ಮೊದಲೇ ಮಹಿಳಾ ಪ್ರೆಸಿಡೆಂಟು ಮಹಿಳಾ ಮೀಸಲಾತಿ ಜಾರಿ ಮಾಡಿ ಬಿಟ್ರೊ ಏನ್ ಕಥೆ!" ಅಂದೆ, ಅದರಿಂದ ಏನು ಉಪಯೋಗ ಆಗುತ್ತೊ ಇಲ್ವೊ ಗೊತ್ತಿಲ್ಲ ಆದ್ರೆ, ಇವಳು ನನ್ನ ಸಂಬಳದಲ್ಲಿ ತನಗಿಷ್ಟು ಮೀಸಲು ಬೇಕು ಅಂತ ಹಕ್ಕು ಸಾಧಿಸಿ ಬಿಡ್ತಾಳೆ ಅನ್ನೊ ಭಯ ನಂಗೆ!. "ರೀ ಅದಲ್ಲ ಇಲ್ನೋಡಿ,
ಸೇ ನೋ ಟು ಬ್ಯಾಂಗಲೋರ್, ಸೇ ಯೆಸ್ ಟು ಬಫೆಲೊ ಅಂತೀದಾರೆ, ಬೆಂಗಳೂರು ಬಿಟ್ಟು, ಎಮ್ಮೆ ಕೋಣಾ ಸಾಕಿಕೊಂಡು ಹಾಲು ಕರೆಯೋಕೆ ಹೋಗಿ ಅಂತೀದಾರೆ, ಅಲ್ಲ ನಿಮ್ಮ ಹಳ್ಳಿಲಿರೊ ಮಾವ ಏನದ್ರೂ ಅವರನ್ನ ಭೇಟಿ ಆಗಿ ಈ ಐಡಿಯಾ ಕೊಟ್ಟು ಬಂದ್ರಾ ಅಂತಾ.." ಅಂದ್ಲು, ಅಲ್ಲಾ ಅಮೇರಿಕಾ ಪ್ರೆಸಿಡೆಂಟು ನಮ್ಮ ಪ್ರೆಸಿಡೆಂಟು ಆಗಿದ್ದು ಯಾವಾಗ ಅಂತ, ಏನು ಅಮೇರಿಕಾ ಕಂಪನಿಗಳಿಗೆ ಕೆಲ್ಸಾ ಮಾಡ್ತೀವಿ ಅಂತ ಅಮೇರಿಕಾಕ್ಕೇ ಕಳಿಸಿಬಿಡ್ತೀದಾಳಲ್ಲ, ಅಂತಾ ತರಾಟೆಗೆ ತೆಗೆದುಕೊಳ್ಳೋಣ ಅನಿಸಿದ್ರೂ, ಬೇಡ ಬಿಡು ಅಂತ ಬಿಟ್ಟು, ಅವಳು ಅದನ್ನು ಅರ್ಥೈಸಿದ ರೀತಿಗೆ ನಗು ಬಂದು "ಲೇ ಬಫೆಲೊ ಅಂದ್ರೆ ಅಲ್ಲಿನ ಊರು, ಅಲ್ಲಿ ಕಂಪನಿ ಬೆಳೆಸಿ ಅಂತಾ ಹೇಳ್ತೀದಾರೆ, ನಮಗೆ ಎಮ್ಮೆ ಕೋಣ ಸಾಕಿ ಬೆಳೆಸಿ ಅಂತಲ್ಲ" ಅಂದೆ.

ಹಳ್ಳೀಲಿರೊ ಮಾವನಿಗೆ ರಿಸೆಶನ್ ಕೆಲ್ಸಾ ಎಲ್ಲ ಹೋಗ್ತಾ ಇವೆ ಅಂದಿದ್ದಕ್ಕೆ, "ಏಯ ಏನ್ ಚಿಂತೆ ಮಾಡ್ಬೇಡಾ ಎರಡು ಎಮ್ಮೆ ಸಾಕಿದರೆ ಜೀವನಾ ಅಗ್ತದೆ" ಅಂತ ಧೈರ್ಯ ಹೇಳಿದ್ದ! ಅವ್ನಿಗೆ ಗೊತ್ತಿದ್ದ ಮಟ್ಟಿಗೆ, ಈಗ ಅದ್ದನ್ನೇ ಇವರು ಹೇಳ್ತಾ ಇದಾರೆ ಅಂತ ನನ್ನಾಕೆ. ಅಲ್ಲದೆ ಬಫೆಲೊ, ಬೈಸನು, ಅಂದ್ರೆ ಕೋಣ, ಕಾಡುಕೋಣ ಹಾಗೆ ಎಮ್ಮೆ ಕೂಡ ಅಂದ ಮೇಲೆ ಅದನ್ನೇ ಹೇಳಿರಬೇಕು ಅಂತ ಅಂದುಕೊಂಡಿದ್ರೆ ಎನ್ ಮಾಡ್ತೀರಾ. ಅವಳು ಒಳಗೆ ಬಂದು ಕೂತು, "ನನಗೇ ಹೇಗ್ರೀ ಗೊತ್ತಾಗಬೇಕು, ಬಫೆಲೊ ಅಂತ ಊರು ಇರತ್ತೆ ಅಂತ, ನಮ್ಮಲ್ಲಿ ಇದೆಯಲ್ಲ ಕೋಣನಕುಂಟೆ, ಎಮ್ಮಿಕೇರಿ ಅಂತ ಆ ಥರ ಇದೂ ಬಿಡಿ ಹಾಗಾದ್ರೆ" ಅಂದ್ಲು, "ಹೂಂ ಅದೇ ನೋಡು" ಅಂದೆ. "ರೀ ಮತ್ತೆ ನಮ್ಮ ಕಥೆ" ಅಂದ್ಲು, "ನಮ್ಮ ಕಥೆನಾ, ಅದೊಂದು ಒಂಥರಾ ಹಸಿರು ಕಾನನದೂರಿನ ಕಥೆ" ಅಂದೆ "ಓಹ್, ಆ ಥರಾ ಕಥೆನಾ! ರೀ ಹೇಳಿ ಪ್ಲೀಜ್...." ಅಂತಂದ್ಲು, "ಲೇ ಮುಂಜಾನೆ ಮುಂಜಾನೆ ಕಥೆನಾ, ಕಥೆ ಎಲ್ಲಾ ರಾತ್ರಿ ಮಲಗೋವಾಗ" ಅಂತ ಎದ್ದೇಳೋಕೆ ನೋಡಿದೆ, ಹೊದಿಕೆಯೊಂದಿಗೆ ನನ್ನೂ ಸೇರಿಸಿ ಅಲ್ಲಿ ಕಟ್ಟಿ ಹಾಕಿ "ಈಗ ಹೇಳ್ತೀರೊ ಇಲ್ವೊ" ಅಂತೆ ರಚ್ಚೆ ಹಿಡಿದಳು, ಇನ್ನು ಕಥೇ ಹೇಳದೆ ಬೇರೆ ದಾರಿಯಿರಲಿಲ್ಲ, ಅವಳಿಗಾಗಿ ಕಥೆ ಕಟ್ಟತೊಡಗಿದೆ...

ಹಸಿರು ಕಾನನದೂರಿನಲ್ಲಿ ಚುನಾವಣೆ ನಡೆದಿತ್ತು, ಅದೇ ಸಮಯದಲ್ಲಿ ಬರಗಾಲ ಅಪ್ಪಳಿಸಿ, ಕಾನನದೂರು ತತ್ತರಿಸಿತ್ತು, ಆ ಬರಗಾಲದ ಕಾವು ಹಳ್ಳಿಯೂರಿಗೆ ತಟ್ಟಿತ್ತಲ್ಲ, ಹಳ್ಳಿಯೂರು ಕೂಡ ಕಾನನದ ಚುನಾವಣೆಯ ಎದುರು ನೋಡುತಿತ್ತು, ಆರಿಸಿ ಬರಲು, ಚುನಾವಣೆಗೆ ನಿಂತ ಹುಲಿರಾಯ, ಹೇಳಿಕೆಗಳ ಕೊಡುತ್ತಿದ್ದ, ಕಾನನದ ಪ್ರಾಣಿ ಪಕ್ಷಿಗಳೆಲ್ಲ ಅವನನ್ನೇ ಬೆಂಬಲಿಸುವಂತೆ... ಬೆರಳೆಣಿಕೆಯ ತೋಳಗಳನ್ನು ಸದೆ ಬಡೆಯುತ್ತೇನೆ, ಇಲ್ಲಿ ಭಯೋತ್ಪಾದನೆ ಮಾಡುವ ಯಾರನ್ನೂ ಬಿಡೋದಿಲ್ಲ, ಅಂತ ಕುರಿಗಳನ್ನೆಲ್ಲ ಸೆಳೆದರೆ, ಮರಗಳನ್ನು ನೆಡುತ್ತೇನೆ, ಹಸಿರು ಬೆಳೆಸುತ್ತೇನೆ ಅಂತಿದ್ದಂಗೆ ಪ್ರಾಣಿ ಪಕ್ಷಿಗಳಿಗೆ ಹಣ್ಣಿನಾಸೆಯಾಗಿ ಬಿಡುತ್ತಿತ್ತು. ಹೀಗಿರುವಾಗ ಕಾನನದ ಕೋಣಗಳಿಗೆ ಹೆಚ್ಚು ಹೊಲಗಳನ್ನು ಮಾಡಿ, ನಿಮಗೆ ಕೆಲಸ ಸಿಗುವಂತೆ ಮಾಡುತ್ತೇನೆ, ಅಂತ ಹೇಳಿಕೆ, ಹಳ್ಳಿಯೂರಿನ ಎತ್ತು ಹಸುಗಳು ಕಾನನದಲ್ಲಿ ಹೆಚ್ಚಾದವೆಂದು ನಮ್ಮ ಕೆಲಸ ಎಲ್ಲ ಹೋಗುತ್ತಿವೆಯೆಂದು ಬೇಸತ್ತಿದ್ದ ಅವೂ ಖುಷಿಯಾಗಿದ್ದವು, ಹಳ್ಳಿಯೂರಿನ ಹೋರಿಗಳೂ ಅಲ್ಲಿ ಹೊಲಗಳು ಹೆಚ್ಚಾದರೆ ನಮಗೂ ಕೆಲ್ಸ ಸಿಗುತ್ತೆಂದು ಖುಷಿ ಪಟ್ಟವು.

ಅಂತೂ ಇಂತೂ ಚುನಾವಣೆ ಮುಗಿಯಿತು, ಹುಲಿರಾಯ ಆರಿಸಿ ಬಂದ, ಕಾನನದ ತುಂಬ ಸಮಸ್ಯೆಗಳಿದ್ದವು, ಅದನ್ನೆಲ್ಲಾ ನಿಭಾಯಿಸಬೇಕಿತ್ತು, ಒಂದೊಂದೇ, ಕಾರ್ಯಕ್ರಮಗಳು ಶುರುವಾದವು, ಹಾಗೆ ಬಂದದ್ದೆ ಕಾನನದ ಕೆಲಸವಿಲ್ಲದ ಕೋಣಗಳ ಸಮಸ್ಯೆ, ಮೊದಲೇ ಬರಗಾಲ ಹೊಲಗಳಲ್ಲಿ ಬಿತ್ತನೆಯಿಲ್ಲ, ಬೆಳೆಯಿಲ್ಲ ಎಲ್ಲಿ ಕೆಲಸ, ಕೋಣಗಳು ಕಂಗಾಲಾಗಿದ್ದವು. ಹುಲಿರಾಯನ ಮುಂದೆ ಸಮಸ್ಯೆ ಬಂತು, ಮೊದಲೇ ಬರಗಾಲ ಕೋಣಗಳಿಗೆ ಕೆಲಸ ಕೊಡಿ ಅಂತ ಅಂದ್ರೆ ಜಮೀನುದಾರರು ಎಲ್ಲಿ ಕೆಲಸ ಕೊಟ್ಟಾರು, ಜಮೀನುದಾರರೇ, ಬಿತ್ತನೆ ಬೀಜಗಳಿಗೆ ಹುಲಿರಾಯನಿಂದ ಏನಾದರೂ ಕಡಿತ, ಸಬ್ಸಿಡಿ ಸಿಗುತ್ತೊ ಅಂತ ಎದುರು ನೋಡುತ್ತಿದ್ದರೆ, ಕೆಲಸ ಎಲ್ಲಿ. ಹುಲಿರಾಯ ಇಕ್ಕಟ್ಟಿನಲ್ಲಿ ಸಿಕ್ಕ, ಎಲ್ಲ ಅಂಕಿ ಅಂಶಗಳು ನೋಡಿದಾಗ ಕಾನನದ ಬಹಳ ಕೆಲಸ ಹಳ್ಳಿಯೂರಿನ ಹೋರಿ, ಎತ್ತುಗಳಿಂದಾಗುತ್ತಿದೆ ಅಂತ ತಿಳಿದು ಬಂತು, ಹುಲಿರಾಯನಿಗೆ ಸಧ್ಯದ ಪರಿಹಾರ ಬೇಕಿತ್ತು, ಅದಕ್ಕೇ
"ಕೆಲಸಕ್ಕೆ ಹಳ್ಳಿಯೂರಿನ ಹೋರಿಗಳು ಬೇಡ, ಕಾನನದ ಕಾಡುಕೊಣಗಳೇ ಸರಿ" ಅಂತ ಫರ್ಮಾನು ಹೊರಡಿಸಿಬಿಟ್ಟ...

ಹಳ್ಳಿಯೂರಿನಲ್ಲಿ ಹಾಹಾಕಾರವೆದ್ದಿತು, ಹಳ್ಳಿಯೂರಿನ ಕಥೆ ಮುಗಿಯಿತು ಅಂದ್ರು, ಹಳ್ಳಿಯೂರಿನ ಹೋರಿ ಎತ್ತುಗಳು ಚಿಂತಾಕ್ರಾಂತರಾದವು, ಎತ್ತುಗಳ ಜೀವನ ಎತ್ತೊ ಎನ್ನೋಹಾಗೆ ಆಯಿತು, ಕಾನನದೂರಿನ ಕೋಣಗಳಿಗೆ ಖುಷಿಯಾಯ್ತು. ಆದರೆ ಜಮೀನುದಾರರಲ್ಲಿ ತಳಮಳ ಶುರುವಾಯ್ತು, ಕಾನನದ ಕೋಣಗಳಿಗೆ ಕೆಲಸ ಕೊಟ್ಟರೆ, ಸಬ್ಸಿಡಿ, ಬಿತ್ತನೆ ಬೀಜ, ಕಡಿಮೆ ದರದಲ್ಲಿ ಹೊಸ ಹೊಲಗಳು, ಕೊಡುವುದೇನೊ ಸರಿ ಆದರೆ ಇದೆಲ್ಲ ಸಾಧ್ಯವೇ ಅನ್ನೊ ಪ್ರಶ್ನೆ ಎದುರಾಯಿತು.

ಕಾನನದಲ್ಲಿ ಮೊದ ಮೊದಲು ಒಕ್ಕಲುತನ ಶುರುವಾದಾಗ ಬೆರಳೆಣಿಕೆಯಷ್ಟೇ ಕೋಣಗಳಿದ್ದವು ಅವೇ ಊಳುತ್ತಿದ್ದವು, ಬೆಳೆ ಬರುತ್ತಿತ್ತು, ಬೆಳೆ ಬೇಡಿಕೆ ಹೆಚ್ಚು ಹೆಚ್ಚು ಆಗುತ್ತಿದ್ದಂತೆ, ಹೊಲಗಳು ಹೆಚ್ಚಾದವು, ಊಳಲು, ನೇಗಿಲು ಎಳೆಯಲು ಬಂಡಿ(ಚಕ್ಕಡಿ) ಕಟ್ಟಲು, ಕೋಣಗಳು ಸಾಕಾಗಲಿಲ್ಲ, ಆಗ ಕಂಡಿದ್ದೇ, ಹಳ್ಳಿಯೂರಿನ ಹೋರಿಗಳು... ತಂದು ತರಬೇತಿ ಕೊಟ್ಟರೆ ಇನ್ನೂ ಹೆಚ್ಚು ಇಳುವರಿ ತೆಗೆಯಬಹುದು, ಅಂತ ಜಮೀನುದಾರರು ಅಂದರು ಕಾನನದ ಆಗಿನ ರಾಜ ಹೂಂಗುಟ್ಟಿದ್ದ, ಕಾನನಕ್ಕೆ ಹೋರಿಗಳು ಬಂದವು, ತರಬೇತಿ ಪಡೆದವು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರತೊಡಗಿತು, ಹೆಚ್ಚು ಕೆಲಸಗಳು, ಹಳ್ಳಿಯೂರಿಗೆ ಬಂದವು, ಕಾನನದ ಹೊಲದಲ್ಲಿ ಬಿತ್ತುವ ಬೀಜಗಳು ಹಳ್ಳಿಯಲ್ಲಿ ಹಸನಾದವು, ಬೆಳೆದ ಧಾನ್ಯಗಳು ಹಿಟ್ಟಾದವು, ಎಣ್ಣೆ ಕಾಳುಗಳಿಂದ ಎಣ್ಣೆ ಹಳ್ಳಿಯೂರಿನಲ್ಲಿ ತಯ್ಯಾರಾಯ್ತು, ಗಾಣಕ್ಕೆ ಹಳ್ಳಿಯೂರಿನ ಹೋರಿ ಎತ್ತುಗಳು ಸುತ್ತು ಹೊಡೆದವು. ಕಾನನದಿಂದ ನೇಗಿಲು, ಕೊಡಲಿ, ಕುಡುಗೋಲು, ಕುಂಟೆ, ಬಂಡಿಯ ಗಾಲಿ, ಎಲ್ಲದರ ರೂಪ ರೇಷೆಗಳು ಬಂದರೆ, ಇಲ್ಲಿ ತಯ್ಯಾರಾದವು. ಒಟ್ಟಿನಲ್ಲಿ ಹಳ್ಳಿಯೂರು ಹೋರಿಗಳು, ಕಾನನದ ಕೆಲಸಗಳನ್ನೆಲ್ಲ ಮಾಡತೊಡಗಿದವು ಅದೂ ಕಡಿಮೆ ಖರ್ಚಿನಲ್ಲಿ., ಜಮೀನುದಾರರು ಹೆಚ್ಚು ಹೆಚ್ಚು, ಕೆಲಸ ಇಲ್ಲಿ ಕಳಿಸಿದರು, ಹಿಡುವಳಿದಾರರು ಹಿಗ್ಗಿ ಹೋದರು. ಹಳ್ಳಿಯೂರು, ಕಾನನದೂರಿನ ಕೆಲಸದ ಕೇಂದ್ರಬಿಂದುವಾಯಿತು.

ಹೀಗೆ ಹಳ್ಳಿಯೂರಿನ ಹೋರಿಗಳ ಮೇಲೆ ಅವಲಂಬಿತರಾಗಿದ್ದ ಜಮೀನುದಾರರಿಗೆ ಒಮ್ಮೆಲೆ ಎಲ್ಲೆಡೆ ಕೋಣಗಳನ್ನು ಉಪಯೋಗಿಸಿ ಅಂತ ಫರ್ಮಾನು ಕಸಿವಿಸಿ ಉಂಟು ಮಾಡಿತು, ಹುಲಿರಾಯನ ಶೀಘ್ರ ಪರಿಹಾರ ಸರಿ ಹೋಗುವಂತೆ ಕಾಣಲಿಲ್ಲ, ಮೊದಲಿಗೆ ತರಬೇತಿ ಹೊಂದಿದ ಅಷ್ಟೊಂದು ಕೋಣಗಳ ಕೊರತೆ, ಎರಡನೆಯದಾಗಿ ಬರಗಾಲದಲ್ಲಿ ಮೊದಲೇ ಹುಲ್ಲಿನ ಕೊರತೆ, ಹಿಡಿ ಹುಲ್ಲಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಹೋರಿಗಳಿರುವಾಗ ಹೊರೆಗಟ್ಟಲೇ ಹುಲ್ಲು ತಿನ್ನುವ ಕೋಣಗಳಿಗೆ ಎಲ್ಲಿಂದ ಹುಲ್ಲು ತರಬೇಕೆಂಬ ಚಿಂತೆ. ಹೋರಿಗಳೊಂದಿಗೆ ಹೊಸ ಹೊಸ ಊಳುಮೆ ತಂತ್ರಗಳನ್ನು ಕಂಡು ಹಿಡಿದ ಹಿಡುವಳಿದಾರರಿಗೆ ಅವುಗಳನ್ನು ಬಿಟ್ಟುಬಿಡಲು ಹಿಂಜರಿಕೆ. ಇತ್ತ ಹುಲಿರಾಯನ ಅಪ್ಪಣೆ, ಅದೇ ಕಥೆ ಎಲ್ಲ ಕಡೆ, ಕೆಲ ಪತ್ರಿಕೆಗಳು ಬರೆದವು, ಚರ್ಚೆಗಳಾದವು ಇದೇ ಪರಿಹಾರ ಯಾರಲ್ಲೂ ಇಲ್ಲದಂಥ ಪರಿಸ್ಥಿತಿ ಆಯ್ತು.

ಅಷ್ಟೊತ್ತು ಕಥೆ ಕೇಳುತ್ತ ಸುಮ್ನೆ ಕೂತವಳು "ಮತ್ತೆ ಇನ್ನೇನಾಗತ್ತೆ ಹಳ್ಳಿಯೂರಿಗೆ ಪರಿಹಾರವಿಲ್ವಾ" ಅಂದ್ಲು, "ಹಾಗೆ ನೋಡಿದ್ರೆ ಈಗ ಕಾನನದೂರಿಗೂ ಪರಿಹಾರ ಸಿಕ್ಕಿಲ್ಲ", ಅಂದೆ "ಅಯ್ಯೋ ಕಾನನದೂರು ಹಾಳಾಗಿ ಹೋಗ್ಲಿ, ಹಳ್ಳಿಯೂರಿನ ಕಥೆ ಹೇಳಿ" ಅಂದ್ಲು. "ನೋಡು ಇದೆ ತಪ್ಪು" ಅಂದೆ, "ಏನ್ ತಪ್ಪು, ಹಳ್ಳಿಯೂರಿನ ಚಿಂತೆ ನಮಗೇ ಅಲ್ವಾ" ಅಂದ್ಲು, ಅವಳು ಭಾವುಕಳಾಗಿರುವುದು ಗೊತ್ತಾಗುತ್ತಿತ್ತು, ಈ ಕಥೆ ಬಿಡು ನಮ್ಮ ಕಥೆ ಏನು ನಾಳೆ ಅನ್ನೋ ಭೀತಿ ಆಗಿತ್ತು, ಹತ್ತಿರ ಕರೆದು ತಲೆ ನೇವರಿಸುತ್ತ "ಮಾವನಿಗೆ ಎರಡು ಎಮ್ಮೆ ಕೊಂಡು ಕೊಡು ಅಂತ ಫೋನು ಮಾಡೋದು" ಅಂದೆ, ಮುಖದಲ್ಲಿ ಮಂದಹಾಸ ಮಿನುಗಿತು, ಎದೆಗೆರಡು ತಟ್ಟಿ "ತರಲೆ ಬೇಡ ಪರಿಹಾರ ಹೇಳಿ" ಅಂದ್ಲು. "ಅಯ್ಯೋ ನಾನು ಪರಿಹಾರ ಕೊಡೊ ಹಾಗಿದ್ರೆ ಇಲ್ಲಿ ಯಾಕೆ ಇರ್ತಿದ್ದೆ ಆದ್ರೂ ಮನಸಿಗೆ ಅನಿಸಿದ್ದು ಹೇಳಬೇಕೆಂದ್ರೆ ಹೇಳಬಲ್ಲೆ" ಅಂದೆ. "ಹೇಳಿ ಮತ್ತೆ" ಅಂದ್ಲು.

ಇದು ಬರೀ ಹಳ್ಳಿಯೂರಿನ ಸಮಸ್ಯೆಯಲ್ಲ, ಕಾನನದ್ದೂ ಕೂಡ, ಹಾಗೆ ಕಾನನದ ಹುಲಿರಾಯ ಕೊಟ್ಟ ಪರಿಹಾರ ಕಾನನಕ್ಕೇ ಸರಿಹೋಗುತ್ತಿಲ್ಲ, ಆದರೆ ಹಾಗೆ ಮಾಡಿದ್ದಕ್ಕೆ ದೂರುವಂತಿಲ್ಲ, ಯಾಕೆಂದರೆ ಈಗ ನಾವು ಹಳ್ಳಿಯೂರಿನ ಬಗ್ಗೆ ಚಿಂತಿಸಿದಂತೆ.. ಕಾನನದ ರಾಜ ಕಾನನದ ಬಗ್ಗೆ ಚಿಂತಿಸಿದ್ದರಲ್ಲಿ ತಪ್ಪಿಲ್ಲ, ಆದರೆ ಸಮಸ್ಯೆ ಇಬ್ಬರದೂ ಆಗಿರುವುದರಿಂದ ಪರಿಹಾರ ಇಬ್ಬರಿಗೂ ಬೇಕು.

ಎಲ್ಲಾ ರಾಜಕೀಯ... ಈಗ ಜಮೀನುದಾರರು ಏನು ಮಾಡಬಹುದು, ಹುಲಿರಾಯನ ಚುನಾವಣೆಗೆ ಸಹಾಯ ಮಾಡಿದವರು ಇವರೇ, ಅವನ ಪ್ರಚಾರ ಸಭೆಗಳಿಗೆ ಜಾಗ, ಅಲ್ಲಲ್ಲಿ ಸಭೆಗಳಿಗೆ ತಿರುಗಲು ಬಂಡಿ ಕೊಟ್ಟು, ಹುಲ್ಲು ಹಣ್ಣುಗಳ ವ್ಯವಸ್ಥೆ ಎಲ್ಲ ಮಾಡಿದವ್ರು ಇವರು, ಈಗ ಈ ಫರ್ಮಾನು ಹಿಂತೆಗೆಯುವಂತೆ ಒತ್ತಡ ತರುವ (ಲಾಬಿ ಅಂತಾರೆ ಅದಕ್ಕೆ) ಕೆಲಸ ಮಾಡಬಹುದು, ಹಾಗೆ ಹುಲಿರಾಯ ಅದಕ್ಕೆ ಮಣಿದು ಒಪ್ಪಿಕೊಳ್ಳಲೂಬಹುದು, ಯಾಕೆಂದರೆ ಮತ್ತೆ ಚುನಾವಣೆಗೆ ಇವರಿಲ್ಲದೇ ಎನೂ ಆಗಲ್ಲ. ಹಾಗೇ ಹುಲಿರಾಯನ ಸಲಹೆಗಾರರೂ ಪರಿಸ್ಥಿತಿ ಅವಲೋಕನ ಮಾಡಿ ಇರುವ ಕೆಲವೇ ಕೋಣಗಳಿಂದ ಕೆಲಸ ಸಾಗದು, ಅಲ್ಲದೇ ಹೀಗೆ ಕಟ್ಟುನಿಟ್ಟು ನೀತಿಗಳು ಜಾರಿಗೆ ಬಂದ್ರೆ ಕೆಲವು ಜಮೀನುದಾರರು ಒಕ್ಕಲುತನವನ್ನೇ ಬಿಡಬಹುದು, ಮೊದಲೇ ಬರಗಾಲ ಅದರ ಮೇಲೆ ಇದು ಇನ್ನೂ ದುಷ್ಪರಿಣಾಮ ಮಾಡಬಹುದು ಅಂತ ಮನವರಿಕೆ ಮಾಡಿ ಕೊಡಬಹುದು. ಅಲ್ಲದೆ ಕಡಿಮೆ ಖರ್ಚು ಮತ್ತು ಕ್ವಾಲಿಟಿಗೆ ಹೆಸರಾದ ಹಳ್ಳಿಯೂರಿನೊಂದಿಗೆ ಸೇರಿ ಹುಲಿರಾಯ ಹಳ್ಳಿಯ ಸಹಭಾಗಿತ್ವದಲ್ಲಿ ಹನಿ ನೀರಾವರಿಯಂಥ ಪರಿಹಾರದ ಯೋಜನೆಗಳಿಗೆ ಪ್ರಯತ್ನಿಸಬೇಕು. ಕಾನನಕ್ಕಷ್ಟೆ ಅಲ್ಲದೇ ಹಳ್ಳಿಯೂರಿಗೂ ಹೀಗೆ ತಾತ್ಕಾಲಿಕ ಪರಿಹಾರ ಸಿಗಬಹುದು.

ಆದರೆ ಹುಲಿರಾಯ ಕಾನನದ ಚಿಂತೆ ಮಾಡೇ ಮಾಡುತ್ತಾನೆ, ಕೋಣಗಳ ಕಳವಳಕ್ಕೆ ಅವನು ಕಿವಿಯಾಗಾಲೇಬೇಕು, ಹಳ್ಳಿಯೂರಿಗೆ ಇದೊಂದು ಎಚ್ಚರಿಕೆ, ಸರಿಯಾಯಿತಲ್ಲ ಅಂತ ನಿಟ್ಟುಸಿರು ಬಿಡಲು ಸಾಧ್ಯವಿಲ್ಲ, ಹೀಗೆ ಸಧ್ಯ ಹಳ್ಳಿಯೂರಿನ ಸಮಸ್ಯೆಗೆ ಪರಿಹಾರ ಸಿಕ್ಕರೂ, ಮುಂದೆ ಭವಿಷ್ಯದಲ್ಲಿ ಹಳ್ಳಿಯೂರು ಎಲ್ಲದಕ್ಕೂ ಹಸಿರು ಕಾನನದತ್ತ ಮುಖಮಾಡಿ ನಿಲ್ಲದೇ ಸ್ವತಂತ್ರವಾಗಲು ಪ್ರಯತ್ನಿಸಬೇಕು, ಸರಿ ಆವಾಗ ಸಿಕ್ಕ ಕೆಲಸಗಳನ್ನು ತಂದು ಇಲ್ಲಿ ಮಾಡಿ ಕಾನನಕ್ಕೆ ಕಳಿಸಿದ್ದಾಯ್ತು, ಇನ್ನು ಹಳ್ಳಿಯೂರಲ್ಲೂ, ಭೂಮಿಯಿದೆ ಅದನ್ನೂ ಊಳಿದರೆ ಹೇಗೆ ಅಂತ ಚಿಂತಿಸಬೇಕು, ಪರಿಣಿತ ಎತ್ತು ಹೋರಿಗಳೂ ಇರುವ ಹಳ್ಳಿಯೂರಲ್ಲೂ ಹಸಿರು ಕ್ರಾಂತಿಯ ಶಕೆ ಶುರು ಮಾಡಬೇಕು,
ಕಾನನದೂರಿನ ಗುತ್ತಿಗೆ ಕೆಲಸ ಮಾಡಿ ಗಳಿಸಿದ ಗುತ್ತಿಗೆದಾರರು, ಇಲ್ಲೂ ಬಿತ್ತನೆ ಕಾರ್ಯಕ್ಕೆ ಕೈ ಹಾಕಬೇಕು, ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗಲಿಕ್ಕಿಲ್ಲ, ಆದರೆ ಆ ಕಡೆಗೆ ಮುಂದಡಿಯಿಡಬೇಕು.

ಅವಳಿಗೂ ಸರಿಯೆನ್ನಿಸಿರಬೇಕು "ಹೀಗೆ ಆದ್ರೆ ಎಲ್ಲ ಚೆನ್ನಾಗಿರುತ್ತಲ್ವಾ" ಅಂದ್ಲು, "ಹೂಂ ಇರತ್ತೆ, ಆದರೆ ಎಲ್ಲ ಆಗಬೇಕಲ್ಲ, ಆಗತ್ತೆ ಅನ್ನೋ ಆಶಾಭಾವನೆ ಇರಬೇಕು ಅಷ್ಟೇ, ಅಲ್ದೆ ಇದು ಬರೀ ನನ್ನ ಅನಿಸಿಕೆ, ಸರಿಯೊ ತಪ್ಪೊ ನನಗೂ ಗೊತ್ತಿಲ್ಲ, ಬರಗಾಲ ಕಳೆದು ಬೇಗ ಮಳೆಗಾಲ ಬೇಗ ಬಂದು ಬಿಡಲಿ, ಬೆಳೆ ಬೆಳೆದು ಒಕ್ಕಿ, ರಾಶಿ ಹಾಕಿ ಜಾತ್ರೆ ಮಾಡಿಬಿಡೋಣ" ಅನ್ನೋಷ್ಟರಲ್ಲಿ, ಹೊರಗೆ ಚೂರು ಚೂರು ಹನಿಯಾಗುತ್ತಿದ್ದ ಮಳೆ ಧೋ ಎಂದು ಸುರಿಯತೊಡಗಿತು, ಸೂರು ಹನಿಗಳೆರಡು ಅವಳ ಕೆನ್ನೆಗೆ ಸಿಡಿದವು, ಅದ ತಪ್ಪಿಸಲು ನನ್ನ ಮತ್ತಷ್ಟು ಅವುಚಿಕೊಂಡಳು, "ಒಂದು ಕಪ್ಪು ಟೀ ಸಿಕ್ಕಿದ್ದರೆ ಚೆನ್ನಾಗಿರೋದು" ಅಂದೆ, "ಪಕೊಡಾ ಜತೆಗೆ" ಅಂದ್ಲು ಬಾಯಲ್ಲಿ ನೀರೂರಿತು... "ಚಹಕ್ಕೆ ಎಮ್ಮೆ ಹಾಲೇ ಹಾಕು ದಟ್ಟವಾಗಿರ್ತದೆ" ಅಂದೆ ಬೇಕಂತಲೇ... "ಕಾನನದೂರಿನಂತೆ ಎಮ್ಮೆ ಹಾಲೇ ಅಂದ್ರೆ ಆಗಲ್ಲಾರೀ, ಹಳ್ಳಿಯೂರಿಂದ ಹಸುಗಳ ಹಾಲು ಜಾಸ್ತಿ ಬರೋದು, ಎಲ್ಲ ಸೇರಿ ನಂದಿನಿಯಾಗೋದು, ನಂದಿನಿ ಹಾಲಿನದು ಚಹ ಸಿಗತ್ತೆ ಬೇಕಂದ್ರೆ, ಎಮ್ಮೆ ಹಾಲೇ ಅಂದ್ರೆ, ಮೊದಲು ಎಮ್ಮೆ ಸಾಕಿ ಅದು ಹಾಲು ಕರೆಯೋವರೆಗೆ ಕಾಯ್ತೀರಾ" ಅಂದ್ಲು. ನನ್ನ ಕಥೆ ಅರ್ಥವಾದಂತೆ ಕಾಣಿಸಿತು... "ಸಧ್ಯ ಬಾಯಾರಿದೆ, ಬೇಕಿರೊದು ಹಾಲಿನ ಚಹ ಅಲ್ವಾ ಅದೇ ತಾ" ಅಂದೆ. ನಸುನಗುತ್ತ ಪಾಕಶಾಲೆಗೆ ನಡೆದಳು... ಮಳೆ ಸುರಿಯುತ್ತಿದ್ದ ಕಿಟಕಿ ಕಡೆಗೆ ಮುಖ ಮಾಡಿ ಕುಳಿತೆ...


ಈ ಲೇಖನ ನನ್ನ ಅನಿಸಿಕೆ ಅಷ್ಟೆ ಇಲ್ಲಿ ಯಾರು ತಪ್ಪು ಯಾರು ಸರಿ ಅಂತ ಹೇಳುವ ಉದ್ದೇಶ ನನ್ನದಲ್ಲ, ಹಾಗೆ ಯಾವುದಕ್ಕೊ ಯಾರನ್ನೊ ಹೋಲಿಸಿ ಅವಮಾನಿಸಿಲ್ಲ, ಬರೀ ಸಮಸ್ಯೆಯ ಸರಳ ತಿಳುವಳಿಕೆಗೆ ತೆಗೆದುಕೊಂಡ ಉದಾಹರಣೆಗಳು ಮಾತ್ರ. ಕೊಟ್ಟ ಪರಿಹಾರವೊ ನನ್ನ ಮನಸಿಗನ್ನಿಸಿದ್ದು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಅದು ಸರಿಯಾಗಿರಲೂ ಬೇಕಿಲ್ಲ, ಹಸಿರು ಕಾನನದೂರಿನಿಂದ ಲೇಖನಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಈ ಲೇಖನ ಬರೆಯಲು ಪ್ರೇರಣೆ, ಇನ್ನೂ ಕೂಡ ದಿನಾಲೂ ಹತ್ತು ಹದಿನೈದು ಪ್ರತಿಕ್ರಿಯೆಗಳು ಬರುತ್ತಿರುತ್ತವೆ, ಎಲ್ಲರಿಗೂ(ಹೌದು ಪ್ರತಿಯೊಬ್ಬರಿಗೂ) ಮರುಪತ್ರ ಬರೆದಿದ್ದೇನೆ, ಯಾರಿಗಾದರೂ ಸಿಕ್ಕಿಲ್ಲದಿದ್ದಲ್ಲಿ ನಿಮ್ಮ ಕಂಪನಿಯ ಈ-ಮೇಲ ಗಳಲ್ಲಿ ಬ್ಲಾಕ ಆಗಿರಬಹುದು ಅಷ್ಟೇ, ಅದನ್ನು ಹಂಚಿ ಹಾಗೂ ಪ್ರತಿಕ್ರಿಯೆ ಬರೆದು ಪ್ರೊತ್ಸಾಹಿಸಿದ ಎಲ್ಲರಿಗೂ ನಾನು ಚಿರಋಣಿ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

Combined (hasiru kanana + codekoNa)Document in PDF format www.telprabhu.com/kaanan-kodakona.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

14 comments:

Veenashree Gaddad said...

hi....
i was waiting for your blog from morning...
i thought may be you were busy, so you dont post your blog today.Finally you posted.Thanks..

SSK said...

ಪ್ರಭು ಅವರೇ,
software ಭಾಷೆಯ ಜೊತೆಗೆ hardware (ಹೊಲ, ಗದ್ದೆ, ಉಳುಮೆ, ಹಳ್ಳಿ ಜೀವನ ಇನ್ನೂ ಮುಂತಾದುವು) ನ ಭಾಷೆಯ ಮೇಲೂ ಒಳ್ಳೆ ಹಿಡಿತವಿದೆ ನಿಮಗೆ!
ಸರಳ ಭಾಷೆಯ ಚಂದದ ಲೇಖನಕ್ಕೆ ಧನ್ಯವಾದಗಳು!
ಅಂದ ಹಾಗೆ ನಿಮ್ಮವಳ ತುಂಟಾಟ, ಚೇಷ್ಟೆ ಎಲ್ಲಾ ಈ ಲೇಖನದಲ್ಲಿ ಕಮ್ಮಿಯಾಗಿದೆ ಅಲ್ಲವೇ? (ಪಾಪ ಆಕೆಯೂ ಕೂಡ ರಿಸೆಶನ್ ಆಚರಿಸುತ್ತಿದ್ದಾಳೋ ಹ್ಯಾಗೆ?)

Prabhuraj Moogi said...

Veenashree Gaddad ಅವರಿಗೆ
Hi
I usually write weekly, some times it gets late by the time I post, even midnight several times. sorry for making you wait... keep visting...

SSK ಅವರಿಗೆ
ನಾವು ಈ ಸಾಫ್ಟವೇರನಿಂದಲೇ ಹೊಟ್ಟೆ ಬಟ್ಟೆಗೆ ಗಳಿಸಿಕೊಂಡ್ರೂ... ಹೊಲದಲ್ಲಿ ಬಿತ್ತಿ ಬೆಳೆ ಬಂದ್ರೆ ತಾನೆ ಊಟ... ಹಳೆಯ ಬೇರುಗಳನ್ನು ಕಿತ್ತೆಸೆಯೋಕೆ ಆಗುತ್ತ... ಹಾಗೇ ಅದು... ಹಳ್ಳಿ ಜೀವನದ ಸೊಗಡೆ ಬೇರೆ... ಅದರ ಬಗ್ಗೆ ಒಮ್ಮೆ ಬರೆಯುತ್ತೇನೆ ತಾಳಿ... ತುಂಟಾಟ ಬೇಕೆಂತಲೇ ಕಮ್ಮಿ ಮಾಡಿದ್ದು, ಇಲ್ಲಂದ್ರೆ ಅವಳಿಗೇನು ತರಲೇ ಮಾಡ್ತಾನೇ ಇರ್ತಾಳೆ, ಹೀಗೆ ಕಮೆಂತ ಬರಬಹುದು ಎಂದು ಅನಿಸಿತ್ತು... ಸ್ವಲ್ಪ ಗಂಭೀರ ವಿಷಯ ತೀರ ಸರಳವಾಗಿ ಹೇಳಬೇಕಿದ್ದರಿಂದ, ಅವಳ ಬಗ್ಗೆ ಜಾಸ್ತಿ ಕಲ್ಪಿಸಲಿಲ್ಲ...ಹಾಗೆ ಅದಕ್ಕೆ ಜಾಗ ಕೂಡ ಕಲ್ಪಿಸಲಿಲ್ಲ. ಹೀಗೆ ಬರ್ತಾ ಇರಿ...

ರಾಜೀವ said...

ಪ್ರಭು ಅವರೇ,

ನೀವು ಹೇಳಿದ್ದು ನಿಜವೇ. ಇಲ್ಲಿನ ಗುತ್ತಿಗೆದಾರರು ಬಿತ್ತನೆ ಕಾರ್ಯಕ್ಕೆ ಕೈ ಹಾಕಲೇಬೇಕು. ನಮ್ಮ ಗುತ್ತಿಗೆದಾರರು (in Wipro, Infosys etc) in-house project, CoE ಎಂಬ ಹೆಸರಿನಲ್ಲಿ, ಸ್ವಲ್ಪ ಬಿತ್ತನೆ ಕೆಲಸ ಮಾಡುತ್ತಲೇ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅದೂ ನಿಂತು ಹೋಗಿದೆ.

ಅಥವಾ ನಮಗೆ ಬಿತ್ತುವುದು ಹೇಗೆ ಎಂದು ಮರೆತುಹೂಗಿಯೂ?

ಸಾಗರದಾಚೆಯ ಇಂಚರ said...

ಪ್ರಭು ಸರ್,
ಹಸಿರು ಕಾನನದೂರಿನ ಕಥೆ ಎಲ್ಲಿಯವರೆಗೆ. ತುಂಬಾ ವಾಸ್ತವಿಕ ಬರಹ. ಶೈಲಿ ಉತ್ತಮವಾಗಿದೆ, ಬಹಳ ಹಿಡಿಸಿತು

sunaath said...

ಪ್ರಭುರಾಜ,
ಸಮಸ್ಯೆಯನ್ನು ಹಾಗೂ ಉತ್ತರವನ್ನು ತುಂಬಾ ಚೆನ್ನಾಗಿ ಬಿಡಿಸಿ
ಇಟ್ಟಿದ್ದೀರಿ. ನಮ್ಮ ಹೊಲವನ್ನು ನಾವು ಸುಧಾರಿಸಿಕೊಳ್ಳೋದೇ
ಅಂತಿಮ ಉಪಾಯ!

Ittigecement said...

ಪ್ರಭು...

ಭೇಷ್...!!...

ಸಮಸ್ಯೆಯನ್ನು ತುಂಬಾ ಗಂಭೀರವಾಗಿ ವಿಶ್ಲೇಷಿಸಿದ್ದೀರಿ...
ವಾಸ್ತವದ ತಳಹದಿಯಮೇಲೆ...

"ಕಾನನದೂರಿನ ಗುತ್ತಿಗೆ ಕೆಲಸ ಮಾಡಿ ಗಳಿಸಿದ ಗುತ್ತಿಗೆದಾರರು,
ಇಲ್ಲೂ ಬಿತ್ತನೆ ಕಾರ್ಯಕ್ಕೆ ಕೈ ಹಾಕಬೇಕು,"

ಮೇಲಿನ ಮಾತುಗಳಲ್ಲಿ ಪರಿಹಾರವನ್ನೂ ಕೊಟ್ಟಿದ್ದೀರಿ....

ನಿಮ್ಮ ಬರಹಗಳು ಇಷ್ಟವಾಗುತ್ತವೆ....

ಸ್ವಲ್ಪ ದಿನ ನಿಮ್ಮಾಕೆಯ ಸಂಗಡ ಹಳ್ಳಿ ಜೀವನ ನೋಡಿ ಬನ್ನಿ...
ಡಿಫರಂಟಾಗಿರುತ್ತದೆ...
(ನಮಗೆ ಓದಲೂ ಮಜವಾಗಿರುತ್ತದೆ)

ನೀವು ಹೇಗೇ ಬರೆದರೂ ಚೆನ್ನ.....

Prabhuraj Moogi said...

ರಾಜೀವ್ ಅವರಿಗೆ
ನಮ್ಮಲ್ಲಿ ಗುತ್ತಿಗೆ ಕೆಲ್ಸ ಬಹಳ ಚೆನ್ನಾಗೆ ನಡೆದಿದೆ, ಅದು ಸರಿ, ಮೊದಲು ಕೂಡ ಇಂಥ ಕಂಪನಿಗಳು ಬಿತ್ತನೆ ಕಾರ್ಯ ಮಾಡಿದ್ದವು ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ.. ಅದು ಇನ್ನೂ ಹೆಚ್ಚಿ, ಅವರೂ ಹಿಡುವಳಿದಾರರಾಗಲಿ ಅಂತಲೇ ನನ್ನ ಆಶಯ...
ಬಿತ್ತುವುದು ಮರೆತಿಲ್ಲ ಸರ್, ಮರೆತಿದ್ದರೂ ತಾತ್ಕಾಲಿಕ, ಕಳೆ ಕೀಳುವ ಕೆಲ್ಸ ಸ್ವಲ್ಪ ಬಹಳ ಮಾಡಿದ್ದೀವಿ ಇನ್ನು ಬಿತ್ತೊದೊಂದೇ ಬಾಕಿ...

ಸಾಗರದಾಚೆಯ ಇಂಚರ ಅವರಿಗೆ
ಹಸಿರು ಕಾನನ ಒಂದು ದಟ್ಟಡವಿ ಹುಡುಕಿದಷ್ಟೂ ಹೊಸ ಹೊಸ ವಿಷಯಗಳು ಸಿಗುತ್ತವೆ, ಅದನ್ನ ಸಮಯಕ್ಕೆ ತಕ್ಕಂತೆ ಬರೆಯುತ್ತಲಿರುತ್ತೇನೆ.. ನಿಮಗಿಷ್ಟವಾಗಿದ್ದು ನನಗೆ ಸಂತೋಷ.. ಹೀಗೇ ಬರುತ್ತಿರಿ

sunaath ಅವರಿಗೆ
ನಮ್ಮ ಹೊಲ ನಾವು ಸುಧಾರಿಸಿಕೊಳ್ಳಲೇಬೇಕು, ಅದಕ್ಕೆ ನಮ್ಮಲ್ಲೂ ಜಮೀನುದಾರರು ಮುಂದೆ ಬರಬೇಕು...

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಹೌದು ಸರ್ ಕಾನನದೂರಿನ ಗುತ್ತಿಗೆ ಆಗ ಮಾಡಲೇಬೇಕಿತ್ತು ಮಾಡಿದರು ಅದರಲ್ಲಿ ತಪ್ಪಿಲ್ಲ, ಅದರಿಂದಲೇ ಹಳಿಯೂರಿಗೆ ತಕ್ಕ ಮಟ್ಟಿನ ಅನುಭವ ಬಂದದ್ದು, ಈಗ ಅದೇ ಅನುಭವ ಉಪಯೋಗಿಸಿ ಇಲ್ಲಿ ಬಿತ್ತಿ ಬೆಳೆದರೆ ಬೆಲೆ ಬರಬಹುದಲ್ಲವೇ ಅನಿಸಿತು, ಅದೆಷ್ಟು ನಿಜವೊ ಗೊತ್ತಿಲ್ಲ ಆದರೆ ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆಯಿದ್ದೇ ಇದೆ, ಗುತ್ತಿಗೆದಾರರು ಚಿಂತಿಸಲಿ.
ಆಕೆಯೊಂದಿಗೆ ಹಳ್ಳಿಗೆ ಹೋಗಿ ಒಮ್ಮೆ ಬರೆಯುತ್ತೇನೆ ಆದರೆ ಎಲ್ಲರಿಗೂ ಈ ಹಳ್ಳಿಯ ಸೊಗಡಿನ ವಿಭಿನ್ನ ಭಾಷೆ ಅರ್ಥವಾಗುತ್ತೊ ಇಲ್ವೊ ಅನ್ನೊ ಸಂಶಯ ಹೆದರಿಕೆ ಇದೆ, ಅದಕ್ಕೆ ಬರೆದಿರಲಿಲ್ಲ, ಅದನ್ನೂ ಒಮ್ಮೆ ಪ್ರಯತ್ನಿಸಿಬಿಡೋಣ

ವಿನುತ said...

ಸೊಗಸಾದ ಚಿ೦ತನೆ. ಸರಳ ಶೈಲಿ. ಹಸಿರು ಕಾನನದೂರು ಅಷ್ಟೊ೦ದು ಹಸಿರಾಗಿರಲು ಅದೆಷ್ಟು ಹಳ್ಳಿಗಳು ಶ್ರಮಿಸಿವೆಯೋ! ಅದೇ ಶ್ರಮವನ್ನು ತಮ್ಮ ಸ್ವ೦ತ ಹಳ್ಳಿಯನ್ನೂ ಹಸಿರಾಗಿಸಲು ಬಳಸಿದರೆ ಚೆನ್ನ. ಈ ನಿಟ್ಟಿನಲ್ಲಿ ಪ್ರಯತ್ನಗಳ೦ತೂ ಈಗ ಬರುತ್ತಿವೆ ಎನ್ನುವುದೇ ಆಶಾದಾಯಕ ಸ೦ಗತಿ.

Anonymous said...

ಎಲ್ಲರಿಗೂ ಅರ್ಥವಾಗುವ ಹಾಗೆ ಸರಳವಾಗಿ ವಿಶ್ಲೇಶಿಸುತ್ತಾ ಹೋಗಿದ್ದಿರಿ.

"ಕಾನನದೂರಿನ ಗುತ್ತಿಗೆ ಕೆಲಸ ಮಾಡಿ ಗಳಿಸಿದ ಗುತ್ತಿಗೆದಾರರು, ಇಲ್ಲೂ ಬಿತ್ತನೆ ಕಾರ್ಯಕ್ಕೆ ಕೈ ಹಾಕಬೇಕು," ಎಂಬ ಹಳ್ಳಿಯೂರಿನ ಎಲ್ಲರ ಯೋಚನೆಯನ್ನು ಗುತ್ತಿಗೆದಾರರು ಅರ್ಥೈಸಿಕೊಳ್ಳಬೇಕು.

ನಿಮ್ಮ ಎಲ್ಲ ಲೇಖನಗಳನ್ನು ಓದಿದೆ, ಚೆನ್ನಾಗಿ ಬರೆದಿದ್ದಿರಿ, ಓದ್ತಾ, ಓದ್ತಾ ಕೆಲವೊಮ್ಮೆ ಇದು ನಿಮ್ಮದೇ ಕಥೆಯೆನೋ ಅನ್ನುವಷ್ಟು ಚೆನ್ನಾಗಿ ಬರೆದಿದ್ದಿರಿ.

ಲಗೂನ ನಿಮಗ ಕಂಕಣಬಲ ಕೂಡಿ ಬರಲಿ

-ಶೆಟ್ಟರು

Prabhuraj Moogi said...

ವಿನುತ ಅವರಿಗೆ
ಕಾನನದ ಹಸಿರಿಗೆ ಎಷ್ಟು ಹಳ್ಳಿಗಳು ಶ್ರಮಿಸಿವೆಯೋ ಏನೊ ಆದರೆ, ಕಾನನ ಬೆಳೆದರೆ ಹಳ್ಳಿಯೂರು ಕುಗ್ರಾಮವಾದಂತಿದೆ.. ಗುತ್ತಿಗೆದಾರರೂ ಚಿಂತಿಸುತ್ತಿದ್ದರೆ ಆದರೆ ಹಳಿಯೂರಲ್ಲಿ ಅಷ್ಟು ದುಡ್ಡು ಹಾಕುವ ರಿಸ್ಕ್ ತೆಗೆದುಕೊಳ್ಳಲು ಭಯ ಅಷ್ಟೇ.

somekanasu ಅವರಿಗೆ
ನೋಡೊಣ ಶೆಟ್ಟರೇ, ರೆಸೆಶನ ಕಲಿಸಿದ ಪಾಠದಿಂದ ಏನಾದ್ರೂ ಯಾರಾದ್ರೂ ಮುಂದೆ ಬರುತ್ತಾರೊ ಏನೊ ಅಂತ...
ಎಲ್ಲಾ ಕಥೆಗಳನ್ನು ಓದಿದಿರಾ..ನನ್ನ ಬ್ಲಾಗಗೆ ಅಷ್ಟು ಸಮಯ ಮೀಸಲಿರಿಸಿದ್ದಕ್ಕೆ ತುಂಬಾ ಧನ್ಯವಾದಗಳು, ಕಥೆಗಳು ನನ್ನದಲ್ಲದಿರಬಹುದು ಕಲ್ಪನೆ ಏಲ್ಲೊ ನನ್ನೂ ಅಲ್ಲಿಗೆ ಎಳೆದು ತಂದಿದೆ ಅಂತನ್ನಬಹುದು.
ಎಲ್ಲ ಕಾಲ ಕೂಡಿಬಂದಾಗ ಶುಭಮಸ್ತು... :)

shivu.k said...

ಪ್ರಭು,

ನಿಮ್ಮ ಮೊದಲ ಹಸಿರು ಕಾನನದೂರಿನಲ್ಲಿ ಓದಿದ ಮೇಲೆ ಅದರ ಮುಂದುವರಿದ ಭಾಗವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ...ಈ ಲೇಖನವನ್ನು ನಿಮ್ಮಾಕೆಯೊಂದಿಗೆ ಚರ್ಚಿಸುವುದು ನಿಮ್ಮ ಹೆಗ್ಗಳಿಕೆ. ಕಾನನದೂರಿನವರು ಕೊಟ್ಟ order ಅಲ್ಲಿ ಫಲ ನೀಡದಿರುವುದು...ಮತ್ತೆ ಹಳ್ಳೀಯೂರಿನ ಹಸುಗಳೇ ಗತಿ ಎನ್ನುವ ಸಂಗತಿ ಅವರ ಅರಿವಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕೇನೋ...

ಹಿಂದಿನ ಲೇಖನ ಜಡೆ ವೇರ್ ನಿಂದ ಏಕದಂ ಸಾಪ್ಟ್‌ವೇರಿಗೆ ನೆಗೆದಿರುವಿರಲ್ಲ...ಏನ್ ಸಮಾಚಾರ...

ಜಲನಯನ said...

ರೀ ಪ್ರಭೂ ಸರ್ರ...ಹ್ಯಾಂಗ್ ಬರೀತೀರ್ರೀಯಪ್ಪಾ...ನಿಮ್ಮಾಕೀಮ್ಯಾಗ ಈ ನಮೂನೆ..ಅಂಜ್ಕೆ ಗಿಂಜ್ಕೆ ಆಗೋಣಿಲ್ಲೇನು..?? ನಿಮ್ಗ ನೀವಾ ಸಾಟಿ ಬಿಡ್ರಿ... ಆದ್ರೂ...ಈ ಸಂಚ್ಕ್ಯಾಗ ಖಾರ ಒಂಚೂರ್ ಕಮ್ಮಿನಾ ಅನ್ಸ್ ತೈತಿ..ಅಲ್ಲಾ...???

Prabhuraj Moogi said...

shivu ಅವರಿಗೆ
ಹಿಂದೆ ಹಸಿರುಕಾನನ ಕೂಡ ಅವಳೊಂದಿಗೇ ಚರ್ಚಿಸಿದ್ದೆ ಹಾಗೇ ಇದೂ ಕೂಡ... ಕಾನನದಲ್ಲಿ ಆ ಕಾನೂನು ಈಗ ಫಲ ನೀಡಿರದಿರಬಹುದು ಆದರೂ ಮುಂದೆ ಕಾನನದ ಕಟ್ಟಳೆಗಳು ಜಾಸ್ತಿಯಾಗುತ್ತಲೇ ಇರುತ್ತವೆ... ಇದು ನಮಗೆ ಎಚ್ಚರಿಕೆ...
ಈ ಹಸಿರುಕಾನನ ಬಹಳ ಇಷ್ಟವಾಗಿ ಎಲ್ರೂ ಹೀಗೆ ಇನ್ನೊಂದು ಬರೆ ಅಂತ ಪತ್ರ ಬರೆಯುತ್ತಿದ್ದರು ಅದಕ್ಕೆ ಬರೆಯಲೇ ಬೇಕಾಯ್ತು, ನನ್ನಾಕೆ ನನಗೆ ಮಾತಾದಲು ಯಾವ ವಿಷಯವಾದರೇನು ಬಿಡಿ..

ಜಲನಯನ ಅವರಿಗೆ
ನಿಮ್ಮ ಕಮೆಂಟ ಬಹಳ ಸ್ಪೇಷಿಯಲ ಆಗಿರ್ತದೆ ಯಾವಾಗ್ಲೂ...
ಸರ್ ಅಂಜೆಕಿ ಆಕಿ ಹತ್ರ ಯಾಕ ಅಂತ, ನನ್ನಾಕಿ ಜತೆ ನಾ ಮಾತಾಡಾಕ ಎಲ್ಲಿ ಅಂಜಕಿ.. ಈ ಸಂಚ್ಕ್ಯಾಗ ಬೇಕಂತನ ಖಾರ ಕಮ್ಮಿ ಮಾಡೇನಿ... ಬರೀ ಖಾರಾ ಜಾಸ್ತಿ ಆದ್ರ ಹೇಳೂ ವಿಷಯ ಗಂಟಲಿನ್ಯಾಗ ಇಳೀಲಿಲ್ಲ ಅಂದ್ರ ಅಂತ... ಮುಂದಿನ ಸಲ ಮತ್ತ ಖಾರ ಮಿರ್ಚಿಬಜ್ಜಿ ಇರ್ತದ!! ಬರತಾ ಇರಿ...