Sunday, June 21, 2009

ನೀಳ.. ನೀಲವೇಣಿ, Nil ವೇಣಿಯಾದಾಗ


ಊರಲ್ಲಿ ಮದುವೆಯಿದೆ ಹೋಗಿ ಬರ್ತೀನಿ ಅಂದವಳು, ಇಂದು ಬರುವಳಿದ್ದಳು. ಅವಳು ಬಂದು ಫೋನು ಮಾಡಿ ಬನ್ನಿ ಅಂತ ಕರೆಯುವ ಮೊದಲೇ ನಾನೇ ಅಲ್ಲಿ ಹೋಗಿ ನಿಂತು ಕಾಯ್ದು ಅವಳಿಗೆ ಒಂದು ಸರಪ್ರೈಜ (ಅಶ್ಚರ್ಯ) ಕೊಡೋಣ ಅಂತ ತೀರ್ಮಾನಿಸಿದ್ದೆ. ಹಾಗಾಗಿ ಆರೂವರೆಗೆ ಬಸ್ ನಿಲ್ದಾಣದಲ್ಲಿದ್ದೆ, ಬಸ್ಸು ಯಾವಾಗ ಬರುತ್ತದೆಂದು ಕೇಳಿದ್ದು ಏಳೂವರೆ ಅಗಬಹುದು, ಬಸ್ ನಂ ಕೂಡ ಗೊತ್ತಾಗಿತ್ತು, ಏಳು ಘಂಟೆ ಇವಳ ಫೋನು ಬಂತು, "ರೀ ಬಸ್ ನಿಲ್ದಾಣಕ್ಕೆ ಕರೆಯೋಕೆ ಏನೂ ಬರಬೇಡಿ, ನಾನೇ ಬರ್ತೀನಿ" ಅಂತ ಅಂದ್ಲು, "ಲೇ ಬ್ಯಾಗ್ ಬಹಳ ಇರ್ತವೆ ನಾ ಬರ್ತೀನಿ" ಅಂತಂದೆ, "ಇಲ್ಲ ಬ್ಯಾಗ ಯಾವುದೂ ಇಲ್ಲ, ಇರೋದು ಒಂದೇ ಸೂಟಕೇಸ ನಾನೇ ಬರ್ತೀನಿ" ಅಂತ ಅವಳು. ನಾನಿಲ್ಲಿ ಬಂದು ನಿಂತೀದೀನಿ ಅಂತ ಹೇಗೆ ಹೇಳಲಿ, "ಇಲ್ಲಾ ನಾ ಬರ್ತೀನಿ" ಅಂತ ಫೋನಿಟ್ಟೆ. ಅವಳಿಗೂ ಅನಿಸಿರಬೇಕು ಯಾವಗ್ಲೂ ಬಾ ಅಂದ್ರೆ, ಬರಲೇಬೇಕಾ ಅನ್ನೋರು ಇಂದ್ಯಾಕೆ ಬರ್ತೀನಿ ಅಂತೀದಾರೆ, ಅಲ್ದೇ ಎದ್ದು ರೆಡಿ ಆಗಿರೊ ಹಾಗಿದೆ, ನಿದ್ದೆಗಣ್ಣಲ್ಲಿ ಮಾತಾಡೊರು, ಹಾಗೇನು ಅನಿಸಲಿಲ್ಲ ಇಂದು ಅಂತ.

ಅವಳು ಬರೊ ಹೊತ್ತಿಗೆ ಏಳೂವರೆ ಆಗಿತ್ತು, ಎರಡು ರೌಂಡ ಟೀ ಮುಗಿದಿತ್ತು, ಖಾಲಿ ಕೂತು ಬೇಜಾರು ಏನ್ ಮಾಡ್ಲಿ, ಟೀನಾದ್ರೂ ಕುಡಿಯೋಣ ಅಂತ. ಅದೇ ಬಸ್ಸು ನಂ ಕರೆಕ್ಟಾಗಿ ನೋಡಿದೆ, ಬಸ್ ನಿಲುಗಡೆ ಆಕಡೆ ಇತ್ತು, ಸರಿ ಅವಳು ಅಲ್ಲಿ ಇಳಿದು ಖಚಿತವಾಗಿ, ರೋಡಿನ ಆಕಡೆ ನೋಡುತ್ತ ನಿಂತಿರುತ್ತಾಳೆ, ಯಾಕೆಂದ್ರೆ ನಾ ಆಕಡೆಯಿಂದ ತಾನೇ ಯಾವಾಗ್ಲೂ ಬರೊದು ಅಂತ, ಈಕಡೆ ಹಿಂದಿನಿಂದ ನಿಧಾನವಾಗಿ ಹೋಗಿ ಅವಳಿಗೆ ಕಣ್ಣು ಮುಚ್ಚಿ ಹಿಡಿದು ಸರಪ್ರೈಜ್ ಮಾಡಬೇಕು ಅಂತ ಹೊರಟೆ. ಬಸ್ ಮರೆಗೆ ನಿಂತು ನೋಡುತ್ತಿದ್ದೆ, ಇಬ್ಬರು ಮೂರು ಜನ ಮಹಿಳೆಯರಿದ್ರು, ಇವಳು? ಅಲ್ಲಿಲ್ಲ, ಅಯ್ಯೊ ನನ್ನ ಪ್ಲಾನ ಗೊತ್ತಾಗಿ ಇಲ್ಲಿ ನನ್ನ ಹಿಂದೆ ಏನಾದ್ರೂ ಬಂದು ನಿಂತೀದಾಳ ಅಂತ ಹಿಂತಿರುಗಿ ನೋಡಿದೆ ಅಲ್ಲೂ ಯಾರೂ ಇಲ್ಲ, ಬೇರೆ ಎಲ್ಲಾದ್ರೂ ಇಳಿದಳಾ? ಬಸ್ಸು ಮುಂದೆ ಹೊರಟಿತು, ಮರೆ ಇಲ್ಲದಾಯಿತು, ಅದೊ ಅಲ್ಲಿ ಆ ಬಿಳಿ ಸೀರೆ ತಿಳಿ ನೀಲಿ ಅಂಚಿನದು ಎಲ್ಲೊ ನೋಡಿದ ಹಾಗಿದೆ, ಸೂಟಕೇಸ್ ಕೈಯಲ್ಲಿದೆ, ಅವಳೇನಾ, ಅಲ್ಲಲ್ಲ ಅವಳಿಗೆ ಉದ್ದ ಜಡೆಯಿದೆ ಇದ್ಯಾರೋ ಬೇರೆ!!! ಚೋಟುದ್ದ ಕೂದಲು ಇರುವ ಇವಳಾರೊ ಬೇರೆ ಇರಬೇಕೆಂದು ಅಂದುಕೊಂಡರೂ ನಿಧಾನಕ್ಕೆ ಗೊತ್ತಾಯಿತು ಅದು ನನ್ನಾಕೆಯೇ...

ಅವಳಿಗೆ ಸರಪ್ರೈಜ್ ಕೊಡಲು ಬಂದ ನನಗೇ ಆಶ್ಚರ್ಯವಾಗಿತ್ತು. ಅಲ್ಲಾ ಅಷ್ಟು ಉದ್ದ ಜಡೆ ಕತ್ತರಿಸಲು ಏನಾಗಿತ್ತು?. ಹೇಳಿದ್ಯಾರು ಕತ್ತರಿಸಲು? ಹೀಗೆ ಪ್ರಶ್ನೆಗಳು ಎಳುತ್ತಿದ್ದವು, ನಿಧಾನವಾಗಿ ಅವಳತ್ತ ನಡೆದೆ, ಕಣ್ಣು ಮುಚ್ಚಿ ಚಕಿತಗೊಳಿಸಲಂತೂ ಅಲ್ಲ, ಅಷ್ಟರಲ್ಲಿ ಅವಳೆ ಇತ್ತ ತಿರುಗಿದಳು. ಒಳ್ಳೇದೇ ಆಯ್ತು, ಕಂಗಳು ಅರಳಿದ್ದವು, ನಾ ಅವಳ ಮುಖದತ್ತ ನೋಡಲಿಲ್ಲ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕೆನಿಸಲಿಲ್ಲ, ಕಣ್ಣು ತಪ್ಪಿಸಿ, ಅವಳ ಸೂಟಕೇಸಗೆ ಕೈ ಚಾಚಿದೆ. ಕೊಡದೆ ಹಿಂತೆಗೆದಳು, ನಾನೇನು ಅನ್ನಲಿಲ್ಲ, "ಅಟೋ!!" ಅಂತ ಚೀರಿದೆ, ಅದನ್ನೇ ಕಾಯುತ್ತಿದ್ದವನಂತೆ ಅವನೋಡಿ ಬಂದ, "ಸೂಟಕೇಸ ಒಂದೇ ಇದೆ ಅಟೊ ಯಾಕೆ" ಅಂತ ಅವಳನ್ನುತ್ತಿದ್ದರೂ ನಾ ಹತ್ತಿ ಕುಳಿತಿದ್ದೆ.

ಅಟೊ ನಿಧಾನವಾಗಿ ಸಾಗುತ್ತಿದ್ದರೆ, ಅದೆಲ್ಲೊ ಆಚೆ ನೋಡುತ್ತ ಕುಳಿತಿದ್ದೆ, ಅಲ್ಲಿ ರೋಡಿನಲ್ಲೇನು ಇತ್ತು, ಅದೇನು ಮಹಾ ಪ್ರೇಕ್ಷಣೀಯ ಸ್ಥಳವಂತೂ ಅಲ್ಲ, ಅದೇ ಧೂಳು, ಹೊಗೆ, ನಾಲ್ಕು ಗಾಡಿಗಳು, ಸಾಲು ಸಾಲು ಅಂಗಡಿಗಳು, ಆದರೂ ಅಲ್ಲೆ ನೋಡುತ್ತಿದ್ದೆ, ಅವಳೊಂದಿಗೆ ಮಾತಾಡುವ ಮನಸಿರಲಿಲ್ಲ, ಅಷ್ಟರಲ್ಲಾಗಲೇ ಅವಳೀಗೂ ಗೊತ್ತಾಗಿತ್ತು ನನಗೆ ಬೇಜಾರಾಗಿದೆಯೆಂದು.

ಅವಳ ಕೂದಲು ಅವಳ ಜಡೆ ಅವಳು ಕತ್ತರಿಸಿದರೇನು ಉದ್ದ ಬೆಳೆಸಿದರೇನು ಅಲ್ವಾ, ಆದರೇನು ಮಾಡಲಿ ಅದರೊಂದಿಗೆ ನನ್ನ ಹಲವಾರು ಸುಂದರ ನೆನಪುಗಳು ಇದ್ದವಲ್ಲ, ಒಂದೇ ಎರಡೆ, ಅವಳ ನೋಡಲು ಹೋದಾಗ,
ಅಮ್ಮ ಮೊದಲೇ ಹೇಳಿದ್ದಳು ಉದ್ದ ಜಡೆಯ ಹುಡುಗಿ ಅಂತ ಅಂತಿರ್ತೀಯಲ್ಲ ಈ ಹುಡುಗಿಯದಿದೆ ಅಂತ, ಅವಳು ಬಂದು ಮುಂದೆ ಕುಳಿತರೆ ನನಗೆ ಮುಖಕ್ಕಿಂತ ಆ ಉದ್ದ ಜಡೆ ನೋಡುವ ತವಕ. ಅಮ್ಮನಿಗೆ ಅದರಲ್ಲೂ ಸನ್ನೆ ಮಾಡಿ ಎಲ್ಲಿ ಕಾಣುತ್ತಿಲ್ಲ ಅಂತ ಹುಬ್ಬು ಹಾರಿಸಿದ್ದೆ, "ಲೋ ಪೆಕರ, ಮುಂದೆ ಕೂತೀದಾಳಲ್ಲ ಅವಳೇ ಹುಡುಗಿ" ಅಂತ ಕಿವಿಯಲ್ಲಿ ಪಿಸುಗುಟ್ಟಿದ್ದರು, ನಾ ಹುಡುಗಿ ಎಲ್ಲಿ ಅಂತ ಕೇಳಿದ್ದಿರಬೇಕು ಅಂತ ಅವರು ತಿಳಿದದ್ದು, "ಜಡೆ' ಅಂದಾಗ!!... ಅಮ್ಮನ ಮುಖ ಕೆಂಪಾಗಿತ್ತು, ಬರುತ್ತಿದ್ದ ನಗು ತಡೆದುಕೊಂಡು, "ಬಾಮ್ಮ ಇಲ್ಲಿ ನಮ್ಮ ಹತ್ರ ಕೂತ್ಕೊಬಾ" ಅಂತ ಹತ್ತಿರ ಕರೆದಾಗ ಅವಳು ಎದ್ದು ಬರುತ್ತಿರಬೇಕಾದರೆ, ಕಂಡಿತ್ತು ನನಗೆ ಆ ನೀಳ ನೀಲವೇಣಿ... ನೋಡಿ ಬಂದಾದ ಮೇಲೆ ಅಮ್ಮ ಕಾಡಿಸಿದ್ದೇ ಕಾಡಿಸಿದ್ದು ನೀ ಗಳಿಸಿದ್ದೆಲ್ಲಾ ಅವಳ ಕೂದಲಿಗೆ ಎಣ್ಣೆ, ಶಾಂಪೂಗೆ ಹಾಕೋದರಲ್ಲೇ ಖಾಲಿ ಆಗುತ್ತದೆ ಅಂತ. ಆ ಮೊದಲ ನೋಟದಲ್ಲೇ ಅಷ್ಟು ಆಕರ್ಷಿಸಿಬಿಟ್ಟಿತ್ತು. "ಹುಡುಗಿ ಹೇಗಿದಾಳೊ" ಅಂತ ಅಮ್ಮ ಕೇಳಿದ್ರೆ, "ಜಡೆ ಸೂಪರ್" ಅನ್ನೋನು, ಅಪ್ಪ "ಬರೀ ಜಡೆ ನೋಡಿ ಬಂದೀದಾನೆ ಏನು ನೋಡು, ಮುಖ ನೋಡಿದಂತೇ ಇಲ್ಲ" ಅನ್ನೋರು ಅಮ್ಮನಿಗೆ. ಅಪ್ಪನಿಗೂ ಖುಷಿ, ಸೊಸೆಯಾಗಿ ಅವಳು ಬಂದರೆ ಮುಂದೆ ಬೋಳಾಗಿರುವ ತನ್ನ ತಲೆಯಲ್ಲಿ ಕೂದಲು ಹುಟ್ಟಿಸಲು ಅವಳಲ್ಲಿ ಏನಾದ್ರೂ ಉಪಾಯ ಸಿಗಬಹುದೆಂದು!.

ಜಡೆಯೂ ಒಂದು ಕಾರಣ ಸೇರಿ ಅಂತೂ ಅವಳೇ ನನ್ನಾಕೆಯಾಗುವಳೆಂದು ತೀರ್ಮಾನವಾಗಿತ್ತು, ತಂಗಿ, "ಅಣ್ಣಾ, ನನಗೆ ಡೌಟು ಎಲ್ಲೊ ಸಪ್ಲಿಮೆಂಟ್ ಎನಾದ್ರೂ ಹಾಕಿದಾರಾ" ಅಂತ ಬೇರೆ ಅನುಮಾನಿಸಿ ನನಗೆ ನಿದ್ದೆ ಬಾರದ ಹಾಗೆ ಮಾಡಿಟ್ಟಿದ್ದಳು, ಅದು ನಿಜವಾದ ಕೂದಲೇ ಅನ್ನೊ ತನಿಖೆ ಮಾಡೊ ವರದಿ ಒಪ್ಪಿಸುವ ಕಾರ್ಯ ಅವಳಿಗೆ ಕೊಟ್ಟಿದ್ದೆ, ಅದಕ್ಕೆ ಪ್ರತಿಯಾಗಿ ಎರಡು ಡ್ರೆಸ್ಸು, ಒಂದು ಜತೆ ಚಪ್ಪಲಿ ತಂಗಿಗೆ ತನಿಖೆಯ ಶುಲ್ಕವಾಗಿ ಸಂದಾಯವಾಗಿತ್ತು, ವರದಿ ನೋಡಿ ಖುಷಿಯಾಗಿತ್ತು ಅನ್ನೋದು ಸಮಾಧಾನ. ಮದುವೆಗೆ ಕೇಶಾಲಂಕಾರಕ್ಕೆ ಮಲ್ಲಿಗೆ ದಂಡೆ(ಮುಡಿಯಿಂದ ಅಡಿವರೆಗೂ ಅಂದ್ರೆ ತಲೆ ಮೇಲೆ ಪೂರ್ತಿ ಹಾಗೂ ಜಡೆ ಉದ್ದದವರೆಗೂ ಆವರಿಸುವ ಹಾಗೆ ಕಟ್ಟುವ ಮಾಲೆ) ಮಾಡಿಸಲು ಹೋದರೆ ಅದಕ್ಕೆ ದುಪ್ಪಟ್ಟು ದುಡ್ಡು ತೆತ್ತಿದ್ದು, ಅಷ್ಟು ಉದ್ದದ ಜಡೆಯ ಅಲಂಕಾರದ ಕ್ಲೊಜಪ್ ಫೋಟೊ ಒಂದೇ ಫ್ರೇಮಿನಲ್ಲಿ ತೆಗೆಯಲು ಆ ಫೊಟೊಗ್ರಾಫರ ಹೆಣಗಾಡಿದ್ದು, ಕೇಳಲೇಬೇಡಿ.

ನಮ್ಮಲ್ಲಿ ಮದುವೆ ದಿನ ಮದುಮಕ್ಕಳಿಗೆ ಅರಿಷಿಣ ಹಚ್ಚಿ ತಲೆಗೆ ನೀರು ಹಾಕುವ ಸಂಪ್ರದಾಯವಿದೆ, ಹಾಗಾಗಿ ನಮ್ಮ ಮದುವೆಯ ಅರಿಷಿಣ ನೀರು ಸ್ನಾನಕ್ಕೆ ನೀರು ಹಾಕಿದರೆ ಅವಳ ಕೂದಲು ನೆನೆಯಲು ನೀರು ತಂದು ತಂದು ಹಾಕಿ ಕೈ ಸೋತು ಹೋಯ್ತು ಅಂತ ಕೆಲಸದಾಕೆ ಮುಲುಗಿದ್ದು ಅಮ್ಮನಿಂದ ಕೇಳಿ ನಕ್ಕಿದ್ದೆ. ಮದುವೆಯ ಅಕ್ಷತಾರೋಪಣೆಗೆ ಸ್ಟೇಜಿನಲ್ಲಿ ನಿಂತಾಗ ಅವಳ ಜಡೆ ಎರಡು ಸಾರಿ ಹಿಡಿದೆಳದದ್ದು ಅವಳ ಮುಖ ಮುನಿದು ಕೆಂಪಗಾಗಿದ್ದು, ಮದುವೆಯ ವಿಡಿಯೊನಲ್ಲಿ ಇನ್ನೂ ಭದ್ರವಾಗಿದೆ.

ಮದುವೆ ಆದ ಮೇಲೆ, ಅದೇ ಜಡೆಯಿಂದ ಎಷ್ಟು ಏಟು ತಿಂದಿದ್ದೆ, ಅಡುಗೆ ಮಾಡುತ್ತಿದ್ದ ಅವಳ ಹಿಂದೆ ಬಂದು ನಿಂತು ಅದನ್ನ ಎಳೆದರೆ ಸಿಟ್ಟು ಬರದೇ ಇದ್ದೀತೆ, ಅಮ್ಮ ಇಲ್ಲ ಅಂತ ಗೊತ್ತಗುತ್ತಿದ್ದಂತೇ, ಕೀಟಲೆ ಮಾಡುತ್ತಿದ್ದ ನನಗೆ ಅದರಿಂದಲೇ ಚಾವಟಿಯ ಏಟಿನಂತೆ ಎರಡು ಬಾರಿಸುತ್ತಿದ್ದಳು. ಮುಂಜಾನೆ ಏಳುವುದು ಅಷ್ಟೇ, ಅವಳು ಬಂದು ಅದೇ ಕೂದಲಿನ ತುದಿಯಿಂದ ಕಿವಿಯಲ್ಲಿ ಕಚಗುಳಿಯಿಟ್ಟು ಎಬ್ಬಿಸುವವಳು, ಹಾಗೆ ಮಾಡಿ ತಪ್ಪಿಸಿಕೊಂಡು ಓಡುತ್ತಿದ್ದರೆ ಅವಳ ಅದೇ ಜಡೆಯ ಬಳಸಿ ಹಿಡಿದುಬಿಡುತ್ತಿದ್ದೆ, ತರಲೆಗಿಳಿಯುತ್ತಿದ್ದ ನನ್ನ ಅವಳೆಷ್ಟು ಬಾರಿ ಅದೇ ಜಡೆಯಲ್ಲಿ ಕೈಕಟ್ಟಿ ಕೂರಿಸಿಲ್ಲ, ಕೈಕೊಳ ತೊಟ್ಟ ಅಪರಾಧಿಯಂತೆ ಅವಳ ಹಿಂದೆ ಸುಮ್ಮನೆ ಕೂರುತ್ತಿದ್ದೆ, ಕನಿಕರ ಬಂದು ಕಟ್ಟು ಬಿಚ್ಚಿ ಬಿಟ್ಟರೆ ಮತ್ತೆ ತರಲೆ ಶುರು. ತಲೆ ತೊಳೆದು ಕೂದಲು ಗಂಟು ಗಂಟಾಗಿ ಬಿಡಿಸಲಾಗದಂತಾದಾಗ, ಕತ್ತರಿಸಿ ಬಿಡ್ತೀನಿ ಸಾಕಾಗಿದೆ ಅಂತ ಅವಳು ಅನ್ನುತ್ತಿದ್ದರೆ, ಆ ಕಗ್ಗಂಟುಗಳ ಬಿಡಿಸಲು ನಾ ಸಹಾಯ ಮಾಡಿಲ್ಲವೇ, ಇಷ್ಟೆಲ್ಲ ಮಧುರ ನೆನಪುಗಳಿರುವ ಆ ನೀಳ ಕೂದಲು ಕತ್ತರಿಸಲು ಅವಳಿಗೆ ಮನಸಾದರೂ ಹೇಗೆ ಬಂತು, ಕತ್ತರಿಸಲೇ ಬೇಕಿದ್ದರೆ ಒಮ್ಮೆ... ಒಮ್ಮೆ... ನನ್ನ ಕೇಳಿದ್ದರೆ, ಅವಳ ಇಚ್ಛೆಗೆ ನಾ ಬೇಡ ಎನ್ನುತ್ತಿರಲಿಲ್ಲವಾದರೂ
ಕೊನೇ ಸಾರಿ ಮುಟ್ಟಿ, ಬೆರಳುಗಳನ್ನೆ ಬಾಚಣಿಕೆ ಮಾಡಿ ಒಮ್ಮೆ ಬಾಚಿ, ಹಿಡಿದೆಳೆದು ಕೀಟಲೆ ಮಾಡಿ, ಕಚಗುಳಿಯಿಟ್ಟುಕೊಂಡು, ಕೊನೆ ಸ್ಮರಣೆಗಳನ್ನು ಕಾದಿಟ್ಟುಕೊಳ್ಳುತ್ತಿದ್ದೆನಲ್ಲ. ಕೊನೆ ಸಾರಿ ಕೊನೆ ಬೈ ಕೂಡ ಸರಿಯಾಗಿ ಹೇಳಲಾಗದಂತೆ, ಊರಲ್ಲೇ ಕತ್ತರಿಸಿ ಚೋಟುದ್ದ ಮಾಡಿಟ್ಟುಕೊಂಡು ಬಂದಿದ್ದಾಳಲ್ಲ.

ಹೀಗೆ ನನ್ನ ಯೋಚನೆಗಳೂ ಇನ್ನೂ ಸಾಗುತ್ತಿದ್ದವು, ಅಟೊಗಿಂತ, ಅದರ ಪಕ್ಕ ಹೋಗುವ ಬೈಕುಗಳಂತೆ ವೇಗವಾಗಿ... ಅವಳೆ ತಡವಿ ಕೇಳಿದ್ಲು, "ಯಾಕೊ ಒಂಥರಾ ಇದೀರಲ್ಲ" ಅಂತ, ಮತ್ತಿನ್ನೇನು ಇಷ್ಟೊತ್ತಿಗಾಗಲೇ, ಪ್ರಶ್ನೆಗಳ ಸುರಿಮಳೆಯೇ ಸುರಿಸುತ್ತಿದ್ದೆ ಅವಳ ಮೇಲೆ, ಹೀಗೆ ಒಮ್ಮೆಲೆ ಸುಮ್ಮನಾಗಿದ್ದರೆ... ಅಗಲಿದ ನೀಳವೇಣಿಗೆ ಶೃದ್ಧಾಂಜಲಿ ಅನ್ನುವಂತೆ ಮೌನಾಚರಣೆಯಲ್ಲಿದ್ದೆ. ಅವಳಿಗೂ ಗೊತ್ತಿತ್ತು ಆ ಜಡೆ ಮೇಲೆ ನನಗೆಷ್ಟು ಪ್ರೀತಿ ಅಂತ, ಅದಕ್ಕೆ ಬೇಜಾರಾಗಿದ್ದೀನಿ ಅಂತ, ಆದರೆ ನಾನೇ ನಾನಾಗಿ ಕೇಳುವವರೆಗೂ ಹೇಳುವುದು ಬೇಡ ಅಂದು ಸುಮ್ಮನಾಗಿದ್ಲು, ಅದಕ್ಕೆ ಅಲ್ವೆ ನಾ ಕರೆದುಕೊಂಡು ಹೋಗಲು ಬರ್ತೀನಿ ಅಂದ್ರೂ, ಬೇಡ ಅಂದಿದ್ದು. ಸುಮ್ನೇ ಅವಳ ಕಡೆ ತಿರುಗಿ, ಏನೂ ಹೇಳದೆ ಕೂತೆ, ಮತ್ತೆ ಕೇಳಿದ್ಲು "ಬಹಳ ಹೊತ್ತಾಗಿತ್ತು ಅನಿಸತ್ತೆ ಬಂದು, ಯಾಕೆ ಬೇಗ ಬಂದ್ರಿ" ಅಂತ, "ಏನಿಲ್ಲ ಹಾಗೆ ಸುಮ್ನೆ" ಅಂದೆ, ನನಗೆ ಜಾಸ್ತಿ ಮಾತಾಡಲು ಮನಸಿಲ್ಲ ಅನ್ನುವಂತೆ, ಅಟೊನವನು ಮಿರರನಲ್ಲಿ ನೋಡಿ, ಅವನ ಮಾತಿನ ಚಪಲಕ್ಕೆ, "ಸಾರ್ ಆರೂವರೆಯಿಂದ ಕಾಯ್ತಾ ಇದಾರೆ ಮೇಡಮ್" ಅಂದ, ಏಯ್ ನಿನ್ನ ಕೆಲಸ ನೋಡೋ ಅಂತ ಹರಿಹಾಯಬೇಕೆನಿಸಿತು. ಇವಳು ಅಶ್ಚರ್ಯವಾಗಿ "ಹೌದಾ ಅಷ್ಟು ಬೇಗ ಯಾಕೆ ಬಂದ್ರಿ" ಅಂದ್ಲು "ಹಂ, ಸುಮ್ನೇ" ಅಂದು ಮತ್ತೆ ರಸ್ತೆಮುಖಿಯಾದೆ... ಆಮೇಲೆ ಯಾರೂ ಮಾತಾಡಲಿಲ್ಲ, ಮನೆ ಹತ್ತಿರ ಬಂದಾಗ ತಿರುವುಗಳನ್ನು ಅವಳೇ ಹೇಳಿದ್ಲು, ಸುಮ್ನೆ ದುಡ್ಡು ತೆತ್ತು ಕೆಳಗಿಳಿದೆ. ಪಕ್ಕದಮನೆ ಪದ್ದು ಹೊರಗೆ ಬಂದಳಾದರೂ, ಅವಳ ಹೊಸ ಗೆಟಪ್ಪು.. Nil-ವೇಣಿ(ವೇಣಿಯಿಲ್ಲದ) ನೋಡಿ ಕೇಳಲೇಬೇಕೆಂದವಳು, ತುಟಿವರೆಗೆ ಬಂದ ಮಾತು ತಡೆದು ಒಳ ನಡೆದಳು ಒಂದು ಮುಗುಳ್ನಗೆ ಮಾತ್ರ ಕೊಟ್ಟು.

"ಟೀ ಬೇಕಾ" ಅಂದ್ಲು, ಒಳನಡೆಯುತ್ತಿದ್ದಂತೆ, "ಬೇಡ, ಆಗಲೇ ಎರಡು ಸಾರಿ ಆಯ್ತು" ಅಂದೆ. "ಅಷ್ಟು ಬೇಗ ಯಾಕೆ ಬರಬೇಕಿತ್ತು, ನಾ ಬರ್ತಿದ್ದೆನಲ್ಲ, ಸುಮ್ನೇ ಛಳೀಲಿ ಅಲ್ಲಿ ಕಾದಿದ್ದು" ಅಂದರೂ ಬರೀ ಹೂಂ ಹಾಂ ಗಳೇ ಎಷ್ಟೋ ಹೊತ್ತು ಉತ್ತರಗಳಾಗಿದ್ವು. ಟೀವೀ ಹಚ್ಚಿಕೊಂಡು ಕೂತರೆ, ಅದೇ ಚಾನಲು ಬದಲಿಸುತ್ತಿದ್ದರೆ ಸನಸಿಲ್ಕ ಶಾಂಪೂ ಜಾಹೀರಾತು ಬರಬೇಕೆ, ಗಾಯದ ಮೇಲೆ ಉಪ್ಪು ಸವರಿದಂತೆ. ಆಫ ಮಾಡಿದೆ.

ನಾನಿನ್ನು ಕೇಳೊದೇ ಇಲ್ಲ ಅಂತ ಅವಳಿಗೆ ಖಚಿತವಾಗಿರಬೇಕು, ಅದಕ್ಕೆ ಅವಳೆ ಮಾತು ತೆಗೆದಳು, "ಯಾಕೊ ಹೊಸ ಹೇರಸ್ಟೈಲ್ ನೋಡಿದಂತಿಲ್ಲ ನೀವು" ಅಂತ "ಕಾಣುತ್ತಿದೆಯಲ್ಲ" ಅಂದೆ ನೀರಸವಾಗಿ "ಹೇಗಿದೆ" ಅಂತ ಕೇಳಿದ್ದಕ್ಕೆ, "ಚೆನ್ನಾಗಿದೆ" ಅಂದೆ. "ನಿಮಗೆ ಇಷ್ಟ ಆಗಿಲ್ಲ ನನಗೆ ಗೊತ್ತು" ಅಂದ್ಲು, "ಮತ್ತೆ ಕೇಳೊದು ಯಾಕೆ, ನಿಂಗೆ ಗೊತ್ತಿದೆಯಂದ ಮೇಲೆ" ಅಂದೆ. "ಇದೇ ಈಗ ಹೊಸ ಫ್ಯಾಷನ್ನು ಕಣ್ರೀ" ಅಂದ್ಲು "ನಾನೇನು ಇಲ್ಲಾ ಅನಲಿಲ್ಲವಲ್ಲ" ಅಂತಂದೆ. "ನಿಮಗೇನು ಗೊತ್ತು, ಅಷ್ಟುದ್ದ ಕೂದಲು ಆರೈಕೆ ಮಾಡಿ ಕಾಯ್ದುಕೊಳ್ಳೊದು ಎಷ್ಟು ಕಷ್ಟ ಅಂತ", ಅಂತ ವಾದಕ್ಕಿಳಿದರೆ "ಬಾಬ್ ಕಟ್ ಮಾಡಿಸಬೇಕಿತ್ತು ಬಾಚೊ ತೊಂದ್ರೇನು ಇರ್ತಿರಲಿಲ್ಲ" ಅಂದು ಸುಮ್ಮನಾದೆ. "ನೀವ್ಯಾಕೆ ಮೀಸೆ ಬಿಡಲ್ಲ, ಕ್ಲೀನ್ ಶೇವ ಮಾಡ್ತೀರಿ" ಅಂತ ನನ್ನ ತಪ್ಪಿನಲ್ಲಿ ಸಿಕ್ಕಿ ಹಾಕಿಸನೋಡಿದ್ಲು. "ನಾನ್ ಮೀಸೆ ಬಿಡುವುದಕ್ಕೂ, ನಿನ್ನ ಕೂದಲಿಗೂ ಏನು ಸಂಬಂಧ" ಅಂತಂದೆ. "ಯಾಕಿಲ್ಲ, ನಾನಾದರೆ ಕೂದಲು ಉದ್ದ ಬಿಡಬೇಕು, ನೀವು ಮೀಸೆ ಬಿಡಲ್ಲ ಅಂತೀರಿ" ಅಂದ್ಲು, "ನಾನೇನು ಉದ್ದ ಕೂದಲು ಬಿಡು ಅಂತ ಕೇಳುತ್ತಿಲ್ಲವಲ್ಲ, ಅಲ್ಲದೆ ನಾನು ಮೀಸೆ ಬಿಟ್ಟು, ಪ್ರಯತ್ನ ಮಾಡಿದ್ದೆ ಅಮ್ಮ ತಂಗಿ ಸರಿ ಕಾಣುವುದಿಲ್ಲ ನಿನಗೆ ಅಂತ ಹಾಸ್ಯ ಮಾಡಿದ್ದಕ್ಕೆ ತೆಗೆದದ್ದು, ನೀ ಚೆನ್ನಾಗಿ ಕಾಣ್ತೀನಿ ಅಂದ್ರೆ ಟ್ರೈ ಮಾಡ್ತೀನಿ" ಅಂದೆ, "ಒಹ್ ಅತ್ತೆ ಹೇಳಿದ್ದು ನೆನಪಿದೆ, ಹೇಗೆ ಕಾಣ್ತಿದ್ರಿ ಅಂತ.. ತಂಗಿ 'ಒಳ್ಳೆ ಸ್ಲಂ-ಬಾಲ ಫಿಲಂ ವಿಜಯ ಥರಾ ಕಾಣ್ತಿದಿ' ಅಂತ ಕಾಡಿಸಿದಮೇಲೆ ಶೇವ ಮಾಡಿದ್ರಂತೆ, ಬೇಡ ಬಿಡ್ರೀ ನಿಮ್ಗೆ ಚೆನ್ನಾಗಿ ಕಾಣಲ್ಲ" ಅಂತ ನಕ್ಕಳು, ತಂಗಿ ಕಾಡಿಸಿದ್ದು ನೆನಪಾಗಿ ನಗು ಬಂತಾದರೂ, ಬಿಗುಮಾನಕ್ಕೆ ನಗದೇ ಇದ್ದು ಬಿಟ್ಟೆ.

ಈ ಫ್ಯಾಶನ್ನು ಅಂತ ಇತ್ತೀಚೆಗೆ ಹುಡುಗರು ಉದ್ದ ಉದ್ದ ಕೂದಲು ಬೆಳೆಸಿ, ಜುಟ್ಟು ಕಟ್ಟಿಕೊಂಡು ಕಿವಿಯಲ್ಲಿ ಕಿವಿಯೋಲೆ(ರಿಂಗ್) ಹಾಕಿಕೊಂಡು, ಕೈಗೆ ಚೈನು ಬಳೆ ಹಾಕಿಕೊಂಡ್ರೆ... ಹುಡುಗೀರು, ಬಾಬ್ ಕಟ ಮಾಡಿ ಕಿವಿಯೊಲೆ ಮೂಗು ನತ್ತು ಬಿಟ್ಟು, ಹೊಕ್ಕಳಿಗೆ ರಿಂಗ ಹಾಕಿಕೊಂಡು, ಜೀನ್ಸ ಪ್ಯಾಂಟ ಕೈಗೆ ಕಡಗ ಹಾಕಿ.. ಸಿಗರೇಟು ಹೊಗೆಯಲ್ಲಿ ಗಂಡಸ್ರಿಗೆ ನಾವೇನು ಕಮ್ಮಿ ಅಂತ ಕಳೆದುಹೋಗುತ್ತಿದ್ದಾರೆ, ನೋಡಿದ್ರೆ ಇದೇ ಲೇಟೇಸ್ಟ ಫ್ಯಾಷನ್ನು... ನನಗೆ ಏನೂ ಗೊತ್ತಿಲ್ಲ ಯಾವುದು ಸರಿ ಯಾವುದು ತಪ್ಪು ಅಂತ, ಆದ್ರೆ ಯಾರು ಹುಡುಗಿ ಯಾರು ಹುಡುಗ ಅಂತ ಗೊತ್ತಾಗದಷ್ಟು ಬದಲಾದಾಗ ಬೇಜಾರಗುತ್ತದೆ. ಹಾಗೆ ನೋಡಿದ್ರೆ, ನಮ್ಮ ಅಜ್ಜ, ಮುತ್ತಜ್ಜ ಈಗಿದ್ದಿದ್ರೆ, "ನಮ್ಮ ಕಾಲದಲ್ಲಿ, ದೋತಿ, ಟೊಪಿ, ಇಲ್ಲ ಪೇಠ(ಪಟಗ) ತಲೆಗೆ ಸುತ್ತಿ ಏನು ಚೆನ್ನಾಗಿತ್ತು, ಹೆಣ್ಣು ಮಕ್ಕಳು ಸೀರೆ, ಲಂಗ ದಾವಣಿಯಲ್ಲಿ ಏನು ಚೆನ್ನಾಗಿ ಕಾಣ್ತಾ ಇದ್ರು, ಇವು ನೋಡು ಹುಡುಗ್ರು ಪ್ಯಾಂಟ ಶರ್ಟ ಅಂತೆ, ಹುಡುಗೀರು ಚೂಡಿ, ಪ್ರಾಕು ಅಂತೆ ಎನೂ ಎಲ್ಲ ಬದಲಾಗಿ ಹೋಯ್ತು" ಅಂತ ಬಯ್ದುಕೊಳ್ಳುತ್ತಿದ್ದರೇನೊ.
ಕಾಲ ಬದಲಾಗುತ್ತ ಹೋಗುತ್ತದೆ, ನಾವೂ ಬದಲಾಗುತ್ತ ಹೋಗುತ್ತೇವೆ ಆದರೆ ಹಳೆ ನೆನಪುಗಳು ಹಾಗೆ ಇನ್ನೂ ನಮ್ಮನ್ನು ಹಿಂಬಾಲಿಸಿ ಬರುತ್ತಿರುತ್ತವೆ...

ನನಗೆ ಅವಳು ಕೂದಲು ಕತ್ತರಿಸಿದ್ದಕ್ಕೆ ಸಿಟ್ಟೇನಿರಲಿಲ್ಲ, ಹಾಗೆ ಹೇಳುತ್ತಿದ್ದೀನೊ ಏನೊ... ಅದರೊಂದಿಗಿನ ಆ ಮಧುರ ನೆನಪುಗಳು ಕಳೆದುಹೋದವಲ್ಲ ಅನ್ನೋ ಬೇಜಾರಿತ್ತು. ಅವಳಿಗಿಷ್ಟವಿಲ್ಲದಾದ ಮೇಲೆ ನನ್ನದೇನು, ನನ್ನ ಅಭಿಪ್ರಾಯಗಳನ್ನು ಅವಳ ಮೇಲೆ ಯಾಕೆ ಹೇರಲಿ, ಚೋಟುದ್ದ ಕೂದಲಾದ್ರೂ ಅವಳಿಗೆ ಅದೂ ಚೆನ್ನಾಗೇ ಕಾಣ್ತಾ ಇತ್ತು, ಮೊದಲಿನಂತೆ ತಲೆ ತುಂಬ ಕಾಣುವಂತ ತುರುಬು ಅವಳು ಕಟ್ಟಲಿಕ್ಕಿಲ್ಲ, ಕೀಟಲೆ ಮಾಡಿ ತಪ್ಪಿಸಿಕೊಳ್ಳ ಹೋದರೆ, ಮೊದಲಿನಂತೆ ಜಡೆ ಹಿಡಿದು ಎಳೆಯಲಾಗದೇ ನನ್ನ ಕೈಗೆ ಸಿಗಲಿಕ್ಕಿಲ್ಲ, ಏಳುವಾಗ ಕಚಗುಳಿ, ಮಲಗುವಾಗ ಆಟವಾಡಲು ಜಡೆಯಿರಲಿಕ್ಕಿಲ್ಲ ಅಷ್ಟೇ.

ಮಧ್ಯಾಹ್ನ ಊಟ ಮಾಡುತ್ತ, "ಈ ಸ್ಟೈಲು ಚೆನ್ನಾಗಿ ಕಾಣ್ತಿದೆ, ನಿನಗೆ" ಅಂದೆ. "ಅತ್ತೆ ಏನಂತಾರೊ ಏನೊ" ಅಂದ್ಲು. "ಏನಾದ್ರೂ ಹೇಳಿದರಾಯ್ತು ಬಿಡು, ನಿನ್ಗೂ ಅರೈಕೆ ಮಾಡಿಕೊಳ್ಳಲು ಹೇಗೂ ತೊಂದ್ರೆ ಆಗಿತ್ತಲ್ಲ" ಅಂದೆ "ಇಲ್ಲಾ ಹಾಗೇನಿಲ್ಲ, ಎರಡು ಮೂರು ತಿಂಗಳು ಮತ್ತೆ ಉದ್ದ ಬಂದು ಬಿಡತ್ತೆ, ಅಮ್ಮ ಸ್ಪೇಷಲ್ ಕೇಶತೈಲ ಬೇರೆ ಕೊಟ್ಟೀದಾಳೇ, ನನ್ನ ಕೂದಲು ಬೆಳವಣಿಗೆ ಬೇಗ" ಅಂದ್ಲು, "ಅಲ್ಲ ನಿನಗೆ ಬೇಕಂತ ಹೊಸ ಕಟ್ ಮಾಡ್ಸಿದೀಯಾ, ಮತ್ಯಾಕೆ ಬೆಳೆಸೋದು" ಅಂದೆ, "ಪ್ಚ್.." ಅಂತ ಲೊಚಗುಟ್ಟಿದ್ಲು. ನನಗೇಕೊ ಅನುಮಾನ ಬಂತು, "ನಿಜ ನಿನಗಿಷ್ಟ ಅಂತಾನೆ ಕಟ್ ಮಾಡಿಸಿದ ಮೇಲೆ ಇರಲಿ ಬಿಡು" ಅಂದೆ, "ಹಾಂ, ಹಾಂ ಇಷ್ಟ" ಅಂದ್ಲು "ನಿಜ ಹೇಳು ನೀನೇನೊ ಮುಚ್ಚಿಡ್ತಾ ಇದೀಯಾ, ನನ್ನ ಮುಂದೆ ನಿನಗೆ ಸುಳ್ಳು ಹೇಳೊಕೆ ಬರಲ್ಲ" ಅಂದೆ, ನನಗೀಗ ಯಾಕೊ ಅನುಮಾನ ಧೃಢವಾಗಿತ್ತು, "ಇಲ್ಲ, ಇಲ್ಲ ಇಷ್ಟ ಅಂತಾನೆ ಕಟ ಮಾಡ್ಸಿದ್ದು" ಅಂದ್ಲು "ಆಯ್ತು ನಂಬಿದೆ" ಅಂದೆ.. ಈ ಇಲ್ಲ ಇಲ್ಲ.. ಅನ್ನೊದೇ ಅಲ್ಲೇನೊ ಇದೆ ಅಂತ ಸೂಚನೆ ಕೊಡುತ್ತಿತ್ತು... "ನಿಜವಾಗ್ಲೂ ರೀ" ಅಂದ್ಲು. ಅವಳಿಗೆ ಗೊತ್ತಾಗಿತ್ತು ನಾ ನಂಬಿಲ್ಲ ಅಂತ ಇನ್ನು ನಿಜ ಹೇಳೊವರೆಗೆ ಅದು ಸರಿ ಹೋಗಲ್ಲ ಅಂತ.. ಆದರೂ ಕಾದು ನೋಡಿದ್ಲು... ಕೊನೆಗೆ ಹೇಳುವ ತೀರ್ಮಾನ ಮಾಡಿದಂತಿತ್ತು...

ಊಟವಾದ ಮೇಲೆ ಹಾಗೇ ಒರಗಿದ್ದೆ, ಬಂದು ಎದೆಯ ಮೇಲೆ ತಲೆಯಿಟ್ಟು ಮಲಗಿದ್ಲು, ಅಭ್ಯಾಸ ಬಲದಿಂದ ಕೈ ಅವಳ ತಲೆಯತ್ತ ಹೋಯ್ತು, ಮೊದಲಿನಂತೆ ಜಡೆ ಕೈಗೆ ಸಿಗುತ್ತದೆಂದು... ಮತ್ತೆ ನೆನಪಾಗಿ, ಕೈ ಹಿಂದೆ ತಲೆಗೆ ಆಧಾರ ಮಾಡಿಕೊಂಡೆ. "ಸಿಟ್ಟಾಗಲ್ಲ ಅಂದ್ರೆ ನಿಜ ಹೇಳ್ತೀನಿ", ಅಂದ್ಲು... ಒಹ್ ನನ್ನ ಫೂಲ ಮಾಡಲು ಎಲ್ಲೊ ವಿಗ್ ಹಾಕಿಕೊಂಡೀದಾಳೊ ಅಂತ ಅನಿಸಿ, ಹಿಡಿದೆಳದು ಖಚಿತ ಮಾಡಿಕೊಂಡೆ "ರೀ.. ನಿಜವಾಗ್ಲೂ ಕಟ್ ಮಾಡಿದ್ದೆ" ಅಂತ ಚೀರಿದ್ಲು. "ಇಷ್ಟ ಇಲ್ದೆ ಕಟ್ ಮಾಡೀದೀಯ ಅಂತಾಯ್ತು" ಅಂದೆ. "ಕಟ್ ಮಾಡಲೇ ಬೇಕಿತ್ತು" ಅಂದ್ಲು, "ಅಂದ್ರೆ... ಬಿಡಿಸಿ ಹೇಳು"... "ಅದೂ, ನನ್ನ ತಮ್ಮ ಇದಾನಲ್ಲ..." ಅವಳು ಹೇಳುತ್ತಿದ್ರೆ "ಹೂಂ ನಿನ್ನ ತಮ್ಮ...." ಅಂದೆ... "ರೀ ನೀವು ಸಿಟ್ಟಗ್ತಿದೀರಾ... ಅದಕ್ಕೆ ನಾ ಹೇಳಲ್ಲ ಅಂದಿದ್ದು"... "ಇಲ್ಲ, ಇಲ್ಲ ಈಗ ಹೇಳು" ಅಂದೆ... "ಅದೇ ನನ್ನ ತಮ್ಮ ಇದಾನಲ್ಲ ಚಿವಿಂಗ(ಬಬಲ್) ಗಂ ತಿಂತಾನಾ... ಅದು ಏನೊ ಆಟ ಮಾಡೋಕೆ ಹೋಗಿ, ಚೇರಿಗೆ ಅಂಟಿಸಿದಾನಾ... ಅದು ನನ್ನ ಕೂದಲಿಗೆ ಅಂಟಿ ಬಿಡಿಸೋಕೆ ಬರದ ಹಾಗೆ ಆಗಿತ್ತಾ... ಆ ಕೊನೇ ಮನೆಲಿರ್‍ಒ ಇತ್ತೀಚೆಗೆ ಬ್ಯೂಟೀ ಪಾರ್ಲರ ಕೊರ್ಸ ಮಾಡಿರೋ ಹುಡುಗಿ ಅದನ್ನಷ್ಟೇ ಕಾಣದ ಹಾಗೆ ಕತ್ತರಿಸ್ತೀನಿ ಅಂತ ಹೋದ್ಲಾ, ಅದೇನೊ ಕತ್ತರಿಸಿದ್ಲೊ, ಒಂಥರಾ ವಿಕಾರವಾಗಿ ಕಾಣೋಕೆ ಶುರುವಾಯ್ತಾ, ಅದನ್ನ ಸರಿ ಮಾಡೊಕೆ ಅಂತ ಹೋಗಿ ಇನ್ನಷ್ಟು ಕತ್ತರಿಸಿದ್ಲಾ, ಕೊನೆಗೆ ಈ ಲೇವಲ್ಲಿಗೆ ಕತ್ತರಿಸ ಬೇಕಾಯ್ತು" ಅಂತ ನನ್ನ ಮುಖಾನೇ ನೋಡ್ತಾ ಇದ್ಲು... "ಚೇರಿಗೆ ಅಂಟಿಸಿದ್ನಾ... ಅದು ಅಷ್ಟು ಅಂಟಿತಾ" ಅಂದೆ. "ನಿಜ ಹೇಳಬೇಕೆಂದ್ರೆ, ಕೂದಲಿಗೇ ಅಂಟಿಸಿದ್ದ.." ಅಂದ್ಲು ನಿಧಾನವಾಗಿ... "ಕತ್ತೇ ಬಡವ... ಒಂದೊಯ್ದು, ನನ್ನಾಕೆ ಜಡೇನೆ ಸಿಕ್ಕಿತ್ತಾ ಅವನಿಗೆ, ಸಿಗಲಿ ನನ್ನ ಕೈಗೆ ತಲೆ ಬೋಳಿಸಿ... ಅಷ್ಟೇ ಯಾಕೆ ಹುಬ್ಬು, ಬಂದಿರೊ ಚಿಗುರು ಮೀಸೆ ಎಲ್ಲ ಬೋಳಿಸಿ ಗುರುತು ಹತ್ತದ ಹಾಗೆ ಮಾಡಿ ಕಳಿಸ್ತೀನಿ" ಅಂತ ಸಿಟ್ಟಿಗೆದ್ದೆ, "ಅದಕ್ಕೆ ನಾ ಸಿಟ್ಟಿಗೆ ಬರಲ್ಲ ಅಂದ್ರೆ ಹೇಳ್ತೀನಿ ಅಂದಿದ್ದು, ಏನೋ ಹುಡುಗ ಬುದ್ಧಿ ಹಾಗೆ ಮಾಡಿದೆ ಪಾಪ" ಅಂದ್ಲು. "ಅಯ್ಯೊ ಸಿಟ್ಟಿಗೆ ಯಾಕೆ... ಬೇಡ, ಪಾಪ ಪ್ರೀತಿಯಿಂದ್ಲೇ ಮೊಟ್ಟೇ ಮಾಡಿ ಕಳಿಸ್ತೀನಿ, ಸಿಗಲಿ... ಅವಳು ಪಾರ್ಲರ ಹುಡುಗಿ.. ಅವಳಿಗೆ ಬಾಬ ಕಟ ಗ್ಯಾರಂಟಿ..." ಅಂದೆ "ಅವಳು ಮೊದಲೇ ಬಾಬ್ ಕಟ" ಅಂತ ನಕ್ಳು. "ನಾನು ಹೇಳ್ದೆ ಕೇಳ್ದೆ ಕಟ್ ಮಾಡಿದೆ ಅಂತ ಮುಖ ಇಷ್ಟೊತ್ತು ಹೇಗೆ ಗಂಟು ಹಾಕಿತ್ತು, ನೋಡು" ಅಂತ ಮತ್ತೆ ಗಹಗಹಿಸಿ ನಗುತ್ತ ಅ ಚೊಟುದ್ದ ಕೂದಲುಗಳನ್ನೇ ನನ್ನ ಮುಖದ ಮೇಲೆ ಹರಡಿದಳು... ನನ್ನ ಮುಖ ನಾಚಿ ಕೆಂಪಾಗತೊಡಗಿತು... ಹಾಗೇ ಜಡೆಯ ಹಳೆಯ ನೆನಪುಗಳೊಂದೊಂದೇ ಹೊರಗಿಡುತ್ತ ಮಾತಾಡುತ್ತ ಸಮಯ ಕಳೆಯಿತು... ಸಂಜೆಯಾಯಿತು... ಹೀಗೆ ಮತ್ತೆ ಸಿಕ್ತೀನಿ, ಅವಳ ತಮ್ಮ ಎಲ್ಲಾದ್ರೂ ಕಾಣಿಸಿದ್ರೆ ತಿಳಿಸಿ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/neelaveni.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

21 comments:

Anonymous said...

prabu khare helari, nimage maduvin agilla. nivu illa illa anuda nodidra sansaya bartada, nimaga maduvi agada ishta maduvi ghatana bariyaka elli kalpana bantu, illa nimma blog bhala dina atu nodateni ommenu baradilla, adra inda kele biduna ant. nimma kai hidadavald punyn.
-
sangeeta.

Prabhuraj Moogi said...

Anonymous ಅವರಿಗೆ.
ಸಂಗೀತಾ, ನೀವು ಉತ್ತರಕರ್ನಾಟಕದವರು ಅಂತ ಅನಿಸತ್ತೆ, ಬಹಳ ಆತ್ಮೀಯತೆಯಿಂದ ಬರೆದಿದ್ದೀರಿ, ನೀವಷ್ಟೇ ಅಲ್ಲ ಇಲ್ಲಿ ಬಹಳ ಜನ ಇನ್ನೂ ನನ್ನ ಮದುವೆಯಾಗಿಲ್ಲ ಅಂತ ಅಂದ್ರೆ ನಂಬಲು ತಯಾರಿಲ್ಲ. ಹೇಗೆ ಹೇಳಲಿ, ಹೀಗೆ ಓದ್ತಾ ಇರಿ ಒಂದುದಿನ ನನ್ನ ಮದುವೆ ಕರೆಯೋಲೆ ಕೂಡ ಇಲ್ಲೇ ಹಾಕಿ ಬಿಡ್ತೀನಿ ಆವಾಗಲಾದ್ರೂ ನಿಮ್ಮ ಸಂಶಯ ನಿವಾರಣೆ ಆದೀತು, ಅಂಥ ಹುಡುಗಿ ಸಿಕ್ರೆ ಅದು ನನ್ನ ಪುಣ್ಯ ಕೂಡ.

Rajesh M ಬರೆಯುತ್ತಾರೆ (ಕಮೆಂಟ ವಿಂಡೊವನಲ್ಲಿ ಪ್ರಾಬ್ಲಂ ಇದೆ ಅಂತ ಮೈಲ್ ಕಳಿಸಿದ್ದಾರೆ)
ಪ್ರಭುಗಳೇ,
ಹುಡುಗಿಯ ತಮ್ಮನನ್ನು ನಮಗೆ ಹುಡುಕಲು ಹೇಳಿ ಆ ಮೂಲಕ ಹುಡುಗಿಯನ್ನು ಹುಡುಕಿಕೊಳ್ಳಲು ಹವಣಿಕೆಯೇ?
ಎಷ್ಟು ನಿಜ ಅಲ್ವ ಉದ್ದ ಜಡೆ ನಿಜಕ್ಕೂ ಹುಡುಗಿಯರಿಗೆ ಅದೆಷ್ಟು ಸೊಗಸಾಗಿ ಕಾಣುತ್ತೆ, ಆದರೆ ಆಧುನಿಕತೆಯ ಹೆಸರಿನಲ್ಲಿ ಎಲ್ಲಾ ಕಡೆ ಅದೇನೇನೋ ತರಾವರಿ ಹೇರ್ ಕಟ್ ಶುರುವಾಗಿ ಬಿಟ್ಟಿದೆ ಬಿಡಿ, ಆ ಉದ್ದ ಕೂದಲನ್ನು ಸಂಬಾಲಿಸುವುದು ಅವರಿಗೆ ಒಂದು ಕಷ್ಟ ಕರ ಕೆಲಸವೇ ಸರಿ ಅಲ್ವ.
ಬರಹ ಚೆನ್ನಾಗಿದೆ, ಭಗವಂತ ನೀಳವೇಣಿಯನ್ನೇ ನಿಮಗೆ ದಯಪಾಲಿಸಲಿ ಎಂಬುದು ನನ್ನ ಹಾರೈಕೆ ಕೂಡ.

Rajesh M ಅವರಿಗೆ
ನೀವು ಹೇಳಿದ್ದು ನಿಜ ಸರ್ ನಂಗೂ ಹಾಗೆ ಪ್ರಾಬ್ಲಂ ಆಗ್ತಿದೆ.. ಕಮೆಂಟ ಪೇಜ ಬೇರೆ ಮಾಡಿ ಬಿಡ್ತೀನಿ ನೋಡೋಣ ಆಗ ಸರಿ ಹೋಗಬಹುದು. ಕಮೆಂಟು ಮೈಲ್ ಮಾಡಿದ್ದಲ್ಲದೇ, ಈ ತೊಂದರೆ ನನ್ನ ಗಮನಕ್ಕೆ ತಂದಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
ತಮ್ಮನ ಹುಡುಕಿ ಹುಡುಗಿ ಹುಡುಕುವ ಹವಣಿಕೆ ಏನಿಲ್ಲ ಸರ್ ಆದ್ರೆ ಹಾಗೆ ಸಿಕ್ಕರೆ ನನಗೂ ಸಂತೋಷ. ಹುಡುಗಿಯರಿಗೆ ನೀಳ ಜಡೆ ನಿಜವಾಗಲೂ ಬಹಳ ಚೆನ್ನಾಗಿ ಕಾಣತ್ತೆ , ಕೆಲವರಿಗೆ ಅಷ್ಟು ಉದ್ದ ಬೆಳೆಯಲ್ಲ ಪಾಪ, ಇನ್ನು ಕೆಲವರು ಬೆಳೆಯಲು ಬಿಡಲ್ಲ!... ನೀಲವೇಣಿ ಸಿಕ್ಕರೆ ಇದಕ್ಕಿಂತ ತುಂಟತನದ ಐಡಿಯಾಗಳಿವೆ.. ಎಲ್ಲ ಪ್ರಯೋಗ ಗ್ಯಾರಂಟಿ....

SSK said...

ಪ್ರಭು ಅವರೇ,
ಲೇಖನ ಅಧ್ಬುತವಾಗಿತ್ತು! ನೀವು ಕೂದಲು ಕಟ್ ಮಾಡಿಸಿದ್ದಾಳೆಂದು ಬರೆದಿರುವುದನ್ನು ಓದುವ ಮುಂಚೆಯೇ ನಾನಂದುಕೊಂಡೆ ಆಕೆ ತಿರುಪತಿಗೆ ಹೋಗಿ ಗುಂಡು (ಬೋಳಿಸಿಕೊಂಡು) ಮಾಡಿಸಿಕೊಂಡು ಬಂದಿರಬೇಕೆಂದು!
ಲೇಖನ ಎಂದಿನಂತೆ ಹಾಸ್ಯಮಯವಾಗಿದೆ, ತುಂಬಾ ನಗು ಬಂತು.
ಮತ್ತೆ ನಿಮಗೊಂದು ವಿಷಯ ಹೇಳಲಾ? ಅದೇನೆಂದರೆ ನೀವೀಗ ಬರೆಯುತ್ತಿರುವ ಲೇಖನಗಳು ಕಲ್ಪನೆಗೆ ದೂರವಾಗಿ, ವಾಸ್ತವಕ್ಕೆ ಹತ್ತಿರವಾಗಿದೆ!!
ನಮಗೂ ಈಗ ತವಕ, ನಿಮ್ಮ ಮದುವೆಯ ಸುದ್ದಿ ಯಾವಾಗ ತಿಳಿಸುತ್ತೀರೆಂದು!
ಅಂದಹಾಗೆ ಈಗಲೇ ರೆಡಿನಾ ಅಥವಾ ತಂಗಿಯ ಮದುವೇ ಆದ ಮೇಲಾ?
(ಕೊನೆಯ ಸಾಲು ನಿಮಗೆ ವಯಕ್ತಿಕ ಎನಿಸಿದರೆ ಕ್ಷಮಿಸಿ. ಉತ್ತರಿಸದಿದ್ದರೂ ಪರವಾಗಿಲ್ಲ ಆದರೆ ದಯವಿಟ್ಟು ತಪ್ಪು ತಿಳಿಯಬೇಡಿ.)

ವಿನುತ said...

ಅ೦ತೂ ಕೊನೆಗೂ ನಿಮ್ಮ ಪತ್ನಿಯನ್ನು ಸಮರ್ಥಿಸಿಕೊ೦ಡಿರಿ (ಕಾರಣವಿಲ್ಲದೆ, ನಿಮಗೆ ಹೇಳದೆ ಯಾವ ಕೆಲಸವನ್ನೂ ಮಾಡುವುದಿಲ್ಲವೆ೦ದು)! ಚೆನ್ನಾಗಿದೆ ಬರಹ. ಎ೦ದಿನ೦ತೆ ಸರಾಗವಾಗಿ ಓದಿಸಿಕೊ೦ಡು ಹೋಗುತ್ತದೆ. ಚಿಕ್ಕ ಕೂದಲಿಗೆ ಆಧುನಿಕತೆಯ ಕಾರಣ, ಅದನ್ನು ಸ೦ಭಾಳಿಸುವ ಕಾರಣಗಳೆಷ್ಟು ಸರಿಯೋ ಗೊತ್ತಿಲ್ಲ, ಆದರೆ ಕೆಲವರಿಗೆ ಇಷ್ಟವಿದ್ದರೂ, ಅಷ್ಟುದ್ದ ಕೂದಲು ಬೆಳೆಯುವುದಿಲ್ಲ ಎ೦ಬುದೂ ಅಷ್ಟೇ ನಿಜ.

ಬಾಲು said...

"ಈ ಫ್ಯಾಶನ್ನು ಅಂತ ಇತ್ತೀಚೆಗೆ ಹುಡುಗರು ಉದ್ದ ಉದ್ದ ಕೂದಲು ಬೆಳೆಸಿ, ಜುಟ್ಟು ಕಟ್ಟಿಕೊಂಡು ಕಿವಿಯಲ್ಲಿ ಕಿವಿಯೋಲೆ(ರಿಂಗ್) ಹಾಕಿಕೊಂಡು, ಕೈಗೆ ಚೈನು ಬಳೆ ಹಾಕಿಕೊಂಡ್ರೆ... ಹುಡುಗೀರು, ಬಾಬ್ ಕಟ ಮಾಡಿ ಕಿವಿಯೊಲೆ ಮೂಗು ನತ್ತು ಬಿಟ್ಟು, ಹೊಕ್ಕಳಿಗೆ ರಿಂಗ ಹಾಕಿಕೊಂಡು, ಜೀನ್ಸ ಪ್ಯಾಂಟ ಕೈಗೆ ಕಡಗ ಹಾಕಿ.. ಸಿಗರೇಟು ಹೊಗೆಯಲ್ಲಿ ಗಂಡಸ್ರಿಗೆ ನಾವೇನು ಕಮ್ಮಿ ಅಂತ ಕಳೆದುಹೋಗುತ್ತಿದ್ದಾರೆ, ನೋಡಿದ್ರೆ ಇದೇ ಲೇಟೇಸ್ಟ ಫ್ಯಾಷನ್ನು"............

ಇ ಮಾತು ತುಮ್ಬನೆ ಸತ್ಯ. ಕೆಲ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೆಟ್ಟೆ ಸೇದೋದು ನೋಡಿದ್ರೆ ಏನೇನೋ ಅನ್ನಿಸುತ್ತೆ.

ಲೇಖನ ಚೆನ್ನಾಗಿದೆ, ಆಮೇಲೆ ಇಲ್ಲೊಬ್ಬ ಚೆವಿಂಗ್ ಗಮ್ ತಿಂತ ಇದ್ದಾನೆ, ನಿಮ್ಮ ಮೈದುನ ಇರಬಹುದು ಅಂತ ನಂ ಗುಮಾನಿ, ಕಲಿಸಲೇ? ಚೆನ್ನಾಗಿ ತದುಕಿ ಕಳ್ಸಿ. :) :)

sunaath said...

ಪ್ರಭು,
ಎಂದಿನಂತೆ ಸರಸವಾದ, ಸುರಸವಾದ ಲೇಖನ. ಆದರೂ ನಿಮಗೆ
ಒಂದು ವಾರ್ನಿಂಗ ಕೊಡೋಡು ಒಳ್ಳೇದು ಅನಿಸ್ತದೆ:
ನೀಳವೇಣೀನೇ ಬೇಕು ಅಂತ ನೀವು ಈಗಿನ ಕಾಲದಲ್ಲಿ ಹಟ ಹಿಡಿದು ಕೂತ್ಕೋಬೇಡಿ. ಬ್ರಹ್ಮಚಾರಿಯಾಗಿ ಉಳಿಯೋದಾದೀತು.

Ittigecement said...

ಪ್ರಭು....

ನೀಲವೇಣಿಯ ಜೊತೆಗಿನ
ಸರಸ ಸಲ್ಲಾಪ ..
ಉದ್ದನೆಯ ಜಡೆಯ ಸೊಗಸು ನನಗೆ ಗೊತ್ತು.....
ನಿಮ್ಮದು ಬರೀ ಕಲ್ಪನೆಯಾದರೆ....
ನಾನು ನಿಜಜೀವನದಲ್ಲಿ ಅನುಭವಿಸುತ್ತಿದ್ದೇನೆ...

ನಿಮ್ಮ ಕಲ್ಪನೆಯ ಬರಹ ಎಷ್ಟು ಹತ್ತಿರವಾಗುತ್ತದೆಂದರೆ...
ಇದು ನನ್ನದೇ ಘಟನೆ ಎನ್ನುವಷ್ಟು....
(ನನ್ನಾಕೆಯ ಮೂರಡಿ ಜಡೆ ಇನ್ನೂ ಜೀವಂತವಾಗಿದೆ)

ಸೊಗಸಾದ ಲೇಖನ...
ನನ್ನಾಕೆಯೂ ಖುಷಿ ಪಟ್ಟಳು...

ಅವಳೂ ನಿಮ್ಮ ಬರಹದ ಅಭಿಮಾನಿ ಮಾರಾಯ್ರೆ...

ರಾಜೀವ said...

ಪ್ರಭುಗಳೇ, ನಿಮ್ಮ ಕಲ್ಪನೆಗೆ "ಹಾಟ್ಸ್ ಆಫ್".
ನೀವು ಕೈ ಹಿಡಿಯುವವರು ನೀಳ ನೇಲವೇಣಿಯಗಿರಲಿ.

ಹೀಗೇ ಬರೆಯುತ್ತಿರಿ.

Prabhuraj Moogi said...

SSK ಅವರಿಗೆ
ಅಯ್ಯೊ ತಿರುಪತಿ ಗುಂಡು ಮಾಡಿಸಿದ್ದರೆ ನಾ ಗುರುತೇ ಹಿಡಿಯುತ್ತಿರಲಿಲ್ಲ! ಅಲ್ಲದೆ ಈ ದೇವರಿಗೆ ಮುಡಿ ಕೊಡುವುದರ ವೈಯಕ್ತಿಕ ವಿರೋಧಿ, ಯಾಕೊ ಉಪೇಂದ್ರರ ಡೈಲಾಗ್ "ದೇವರಿಗೆ ಕೂದಲು ಯಾಕೆ ಕೊಡ್ತೀಯ ಮತ್ತೆ ಬೆಳೆಯತ್ತೆ ಅಂತ ಗೊತ್ತು, ಅದೇ ಕೈ, ಕಾಲು ಕೊಡು ನೋಡೊಣ" ನೆನಪಿಗೆ ಬರುತ್ತದೆ... ವಾಸ್ತವ ನನ್ನ ಕಲ್ಪನೆ ಲೋಕದಿಂದ ಎಳೆದು ಹೊರತರುತ್ತಿದೆ ಅಂದ ಹಾಗಾಯ್ತು.
ಸ್ವಲ್ಪ ದಿನ, ಇಬ್ಬರೂ ಒಟ್ಟಿಗೆ ಆಗಬಹುದು, ಇನ್ನೂ ಏನೂ ನಿರ್ಧರಿಸಿಲ್ಲ, ಅದರಲ್ಲೇನು ವೈಯಕ್ತಿಕ ಮುಚ್ಚು ಮರೆ ಇಲ್ಲ ಬಿಡಿ :)

ವಿನುತ ಅವರಿಗೆ
ಅವಳ ಪಾತ್ರಕ್ಕೂ ನಾನೇ ಮಾತು, ನಾನೇ ಬರೆಯುತ್ತೇನೆ ಹಾಗಾಗಿ ಅವಳು ನನಗೆ ಗೊತ್ತಿಲ್ಲದೇ ಎನೂ ಮಾಡದ ಹಾಗೆ ನಾ ಸೃಷ್ಟಿಸಿರಬಹುದು, ಆದರೆ ನಾಳೆ ನೈಜ ಸಂಗಾತಿ ಹೀಗೇ ಇರಲಿಕ್ಕಿಲ್ಲ. ಕೆಲವರಿಗೆ ಬೆಳೆಯುತ್ತದೆ ಆದರೆ ಈ ಹಣೆ ಬಹಳ ದೊಡ್ಡದಾಗುತ್ತದೆಂದೂ ಕಟ್ ಮಾಡ್ತಾರೆ(ಹಿಂದೆ ಜಡೆ ಭಾರಕ್ಕೆ ಮುಂದೆ ಕೂದಲು ಹೋಗಿ), ಅನೇಕ ಕಾರಣಗಳು ಚಿಕ್ಕ ಕೂದಲುಗಳಿಗೆ, ಅವರವರ ಇಷ್ಟ.

ಬಾಲು ಅವರಿಗೆ
ಸೀರೆ ಮರ್ಯಾದೆ ತೆಗೆದು ಬಿಡ್ತಾರೆ ಸರ್ ಹಾಗೆ ಮಾಡಿ, ಭಾರತೀಯ ಗೌರವಯುತ ನಾರಿಯ ಸಂಕೇತದಂತೆ ಇರೊದು ಸೀರೆ, ಏನ್ ಮಾಡ್ತೀರ ಎಲ್ಲ ಆಧುನಿಕತೆ.
ಅವನ್ನೇನು ಮಾಡಲಿ ಅವನ ಅಕ್ಕನ ಫೋನು ನಂಬರು ಇದ್ದರೆ ಕೊಡಿ, ಅವನಿಗೆ ಬುದ್ಧಿ ಕಲಿಸಿ ಅಂತ ಹೇಳ್ತೀನಿ!!!(ಮದುವೆಯಿಲ್ದೇ ಮೈದುನನೆಲ್ಲಿ, ಆದ್ರೆ ಅವನ ಅಕ್ಕ ನನ್ನಾಕೆ ಆಗಬಹುದಿದ್ದರೆ, ಸುಮ್ನೇ ಚೆಕ್ ಮಾಡೊಣ ಅಂತ ನಂಬರು ಕೇಳಿದ್ದು! ಯಾರಿಗೂ ಹೇಳ್ಬೇಡಿ).

sunaath ಅವರಿಗೆ
ಸುನಾಥ ಸರ್, ನೀಳವೇಣಿಯಗದಿದ್ರೂ ವೇಣಿ ಅಂತ ಒಂದು ಇರೊ(ಚೋಟುದ್ದನಾದ್ರೂ ಇರಲಿ) ಹುಡುಗೀನಾದ್ರೂ ಬೇಡವೇ...ಒಳ್ಳೆ ವಾರ್ನಿಂಗ ಕೊಟ್ಟೀದೀರಿ, ಅಮ್ಮ ಖುಶಿ, ಅಂಥ ಹುಡುಗಿ ಹುಡುಕೊ ತಾಪತ್ರಯ ತಪ್ಪಿತು ಅಂತ.

ಸಿಮೆಂಟು ಮರಳಿನ ಮಧ್ಯೆ ಅವರಿಗೆ
ನೀವು ತುಂಬಾ ಲಕ್ಕಿ ಸರ್ ಹಾಗಾದ್ರೆ. ನನ್ನ ಕಲ್ಪನೆ ನಿಮಗೆ ವಾಸ್ತವ, ಸ್ವಲ್ಪ ಇಲ್ಲಿನ ಕೀಟಲೆಗಳನ್ನ ಟ್ರೈ ಮಾಡಿ ನೋಡಿ! :) ನಾನು ಹೇಳಿದ್ದು ಅಂತ ಮಾತ್ರ ಹೇಳ್ಬೇಡಿ. ನೀವು ಮತ್ತೆ ನಿಮ್ಮಾಕೆ ಇಬ್ಬರಿಗೂ ತುಂಬಾ ಧನ್ಯವಾದಗಳು, ನಿಮ್ಮ ಜೀವನ ನನ್ನ ಕಲ್ಪನೆಗಳಿಗೂ ಮೀರಿದಷ್ಟು ಚೆನ್ನಾಗಿರಲಿ ಅನ್ನೋದೆ ನನ್ನ ಹಾರೈಕೆ.

ರಾಜೀವ ಅವರಿಗೆ
ನನ್ನ ಬ್ಲಾಗ್ ಗೆ ಸ್ವಾಗತ, ನನ್ನಾಕೆ ನೀಲವೇಣಿ ಆಗದಿದ್ರೂ ಪರವಾಗಿಲ್ಲ ಆದ್ರೆ NAIL(ಉಗುರು)+ವೇಣಿ ಆಗದಿರಲಿ... ಎಲ್ಲಿ ಪರಚಿಬಿಟ್ಟಾಳು ಅಂತ ಭಯ :)

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ..
ಜಡೆ ಪುರಾಣ ತುಂಬಾ ಚನ್ನಾಗಿದೆ ಪ್ರಭು...

Prabhuraj Moogi said...

ಶಿವಪ್ರಕಾಶ್ ಅವರಿಗೆ:
:) ಥ್ಯಾಂಕ್ಸ ಸರ್, ಹೀಗೆ ಬರ್ತಾ ಇರಿ, ಇನ್ನೂ ಹಲವು ಪುರಾಣಗಳು ಬರಲಿವೆ.

Roopa said...

ಚೆನ್ನಾಗಿದೆ ಪ್ರಭು
ಗಂಡಸರಿಗೆ ಈ ನೀಳ ಜಡೆಯವಳೆಂದರೆ ಬಹು ಪ್ರೀತಿ . ನಮ್ಮವರ ಕಣ್ಣು ನೀಳ ವೇಣಿಯರ ಕೇಶರಾಶಿಯ ಕಡೆಗೆ ಹಾಯುವುದುಂಟು. ಮತ್ತೊಮ್ಮೆ ನನ್ನ ಕೂದಲ ಕಡೆಗೊಮ್ಮೆ ಕಣ್ಣು ಹಾಯಿಸಿ ನಿಟ್ಟಿಸುರಿಡುತ್ತಾರೆ. ನಾನು ಕಣ್ಣಲ್ಲೇ ಗದರುತ್ತೇನೆ . ಅವರು ತೆಪ್ಪಗಾಗುತ್ತಾರೆ.

ಆದರೂ ನಿಮ್ಮವಳನ್ನು ಬಿಟ್ಟುಕೊಟ್ಟಿಲ್ಲ ನೀವು ಕೊನೆಯಲ್ಲಿ ಅದನ್ನು ಮೈದುನನ ಮೇಲೆ ಹಾಕಿ ನಿಮ್ಮವಳನ್ನು ಸಮರ್ಥಿಸಿಕೊಂಡಿದ್ದೀರಾ .

ಈ ಲೇಖನ ನೀತಿ ಇದಿರಬಹುದೇ?
ಅವರವರ ಪಾಡಿಗೆ ಅವರವರನ್ನು ಬಿಟ್ಟುಬಿಡಿ ಎಂದು. ಆಗ ಗಂಡ ಹೆಂಡಿರ ನಡುವೆ ಜಗಳವೆಂಬುದೇ ಇರಲಿಕ್ಕಿಲ್ಲ

Unknown said...

Prabhu, Nimma bhrahagallu Chennagidhe, nimme kalpanege hats off!!!
-Naveen

shivu.k said...

ಪ್ರಭು,

ಹಾಗೇ ಸುಮ್ಮನೇ ಓದುತ್ತಾ ಹೋಗಿ...


"ಬ್ಯುಟಿ ಪಾರ್ಲರ್‍ನಲ್ಲಿ ನಮ್ಮನ್ನು ಬಿಡುತ್ತಾರಾ...."

"ಅಲ್ಲಿ ನಿಮಗೇನು ಕೆಲಸ"

"ಯಾಕಂದ್ರೆ ಅಲ್ಲಿ ಅನೇಕ ಹುಡುಗಿಯರ ಫೋಟೋದಲ್ಲಿನ ಕೂದಲುಗಳ ವಿನ್ಯಾಸ ನೋಡಿ ನಿನ್ನ ತಲೆಕೂದಲಿಗೆ ಹೊಂದುವಂತೆ ಕಟ್ ಮಾಡಲು ಹೇಳಬಹುದಲ್ವಾ..."

ಅಲ್ಲಿ ಯಾರನ್ನು ಬಿಡಲ್ಲಾ ಗೊತ್ತಾ....

ನಾನು ಬೇಕಾದರೇ ಅವರ ಬಳಿ ಮಾತಾಡುತ್ತೇನೆ...

ರೀ ಸುಮ್ಮನೇ ಗಾಡಿ ಓಡಿಸ್ರೀ...ನೀವು ಹೇಳಿದಂತೆ ಮಾಡಲಿಕ್ಕೆ ನನ್ನ ಕೂದಲು ಹಾಗೆ ಇಲ್ಲವಲ್ಲ...

ಅಲ್ಲ ಕಣೇ ಒಮ್ಮೆ ನೋಡಿಬಿಡುವ ಅಂತಾ...

ಅದು ಆಗಲ್ಲ ಕಣ್ರೀ....

ನೋಡು ನಾನು ನಿನ್ನ ಕೂದಲನ್ನು ನೋಡಿದಾಗ ಹೇಗೆ ಕಟ್ ಮಾಡಿಸಿದರೇ ಚೆನ್ನಾಗಿ ಕಾಣುತ್ತದೆಂಬ ಕಲ್ಪನೆ ನನಗೆ ಇದೆ...ಅದಕ್ಕಾಗಿ ಈ ಪ್ರಯತ್ನ ಅಷ್ಟೇ...

ನಿಮ್ ಪ್ರಯತ್ನ ಯಶಸ್ಸಾಗೋಲ್ಲ ಬಿಡಿ ನನಗೆ ಹೇಗೆ ಬೇಕೋ ಹಾಗೆ ಮಾಡಿಸ್ಕೋತೀನಿ...

ನನಗೆ ಆ ಕ್ಷಣ ಸಿಟ್ಟು ಬಂತು...ಸುಮ್ಮನೇ ಗಾಡಿ ಓಡಿಸುತ್ತಿದ್ದೆ...ಅವಳು ಏನೇನೋ ಮಾತಾಡಿದಳು...ನಾನು ಅದಕ್ಕೆ ಉತ್ತರಿಸಲಿಲ್ಲ...
ಮನೆಗೆ ಬಂದೆವು.ಬಂದವನು ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಬಿಸಿ ಬಿಸಿ ಟಿ ಮಾಡಿಕೊಟ್ಟಳು. ಮಾತುಕತೆಗಳು ಇರಲಿಲ್ಲ...ಬ್ಲಾಗಿ ಓದಿ ನನ್ನ ಮನಸ್ಸು ಬದಲಾಯಿತೇನೋ...ಹೋಗಲಿ ನಿನಗಿಷ್ಟ ಬಂದ ಹಾಗೆ ಮಾಡಿಸಿಕೋ ನಾನೇನು ಪಾರ್ಲರ್‌ಗೆ ಬರೋಲ್ಲ...

ಪರ್ವಾಗಿಲ್ಲ....ನಾಳೆ ನಿಮಗೆ ಕೆಲಸ ಕಡಿಮೆಯಿದೆ ನನಗೆ ಗೊತ್ತು...ನನ್ನನ್ನು ಪಾರ್ಲರ್‌ವರೆಗೆ ಡ್ರಾಪ್ ಮಾಡಿಬಿಡಿ...ಅದಕ್ಕೂ ಮೊದಲು ಅವಳ ಬಳಿ ಮಾತಾಡುತ್ತೇನೆ...ನೀವು ಬರುತ್ತೀರಿ ಅಂದರೆ ಅವಳು ಒಪ್ಪುತ್ತಾಳೆ...

ಅವಳ್ಯಾಕೆ ಒಪ್ಪುತ್ತಾಳೆ...

ನೀವು ದೊಡ್ಡ ಫೋಟೋಗ್ರಾಪರ್ ಅಂತ ಅವಳಿಗೆ ಹೇಳಿಬಿಟ್ಟಿದ್ದೇನೆ ಅವಳು ಟಿ.ವಿ ಸಂದರ್ಶನದಲ್ಲಿ ನಿಮ್ಮನ್ನು ನೋಡಿದ್ದಾಳಂತೆ.....ಅವಳಿಗೂ ನಿಮ್ಮನ್ನೂ ನೋಡಬೇಕೆನ್ನಿಸಿದೆಯಂತೆ...

ಹೌದಾ...ಹಾಗಾದ್ರೆ ಬರುತ್ತೇನೆ...

ಅಲ್ಲಿ ಬಂದು ನಿಮಗೆ ಯಾವರೀತಿ ನನ್ನ ಕೂದಲು ಕಟ್ ಮಾಡಿಸಿಕೊಳ್ಳಬೇಕು ಅಂತ ಹೇಳಿ ಹೋಗಿಬಿಡಬೇಕು..ಅಲ್ಲಿ ಜಾಸ್ತಿ ಹೊತ್ತು ಗಂಡಸರು ಇರುವಂತಿಲ್ಲ...

ಆಯ್ತು...ಹಾಗೆ ಮಾಡುತ್ತೇನೆ...[ನನ್ನನ್ನು ಟಿ.ವಿ. ಸಂದರ್ಶನದಲ್ಲಿ ನೋಡಿದ ಬ್ಯುಟಿ ಪಾರ್ಲರ್ ಮಹಿಳೆ ಬಗ್ಗೆ ನನಗೆ ಖುಷಿಯೆನಿಸಿ ಒಪ್ಪಿಕೊಂಡಿದ್ದೆ...]

ಇದು ಸತ್ಯ ಘಟನೆ...ನಡೆದಿದ್ದು ಇಂದು...ಸಮಯ. ೮.ಗಂಟೆ.. ರಾತ್ರಿ...

"ಒಲವೇ ಜೀವನ ಲೆಕ್ಕಾಚಾರ" ಸಿನಿಮಾ ನೋಡಿ ಬರುವಾಗ..

ಪ್ರಭು..ನಿಮ್ಮ ಲೇಖನದ ನೀಲವೇಣಿ ಲೇಖನದ ಬರವಣಿಗೆಗೂ ನನ್ನ ಇವತ್ತಿನ ನಿಜ ಆನುಭವ ಎರಡರ ವಿಚಾರ ಒಂದೇ ಆಗಿದ್ದರಿಂದ...ಹೇಳಬೇಕಿನಿಸಿತು....

ನಿಮ್ಮ ಉತ್ತರ ನಿರೀಕ್ಷಿಸುತ್ತೇನೆ....

Prabhuraj Moogi said...

ರೂಪಾ ಅವರಿಗೆ:
ಹೌದು ಅದು ನಿಜವಿರಬಹುದು, ನೀಳಜಡೆಯವರು ನಮಗಿಷ್ಟವಾಗಬಹುದು, ಆದರೆ ಅದನ್ನು ಕಾಪಾಡಿಕೊಳ್ಳುವ ಆರೈಕೆ ಮಾಡುವ ಕಷ್ಟವೆಲ್ಲ ಹೆಣ್ಣುಮಕ್ಕಳಿಗಲ್ಲವೇ... ಆದರೂ ನೀಳಜಡೆಯವರನ್ನು ನೋಡಲು ಏನೊ ಖುಷಿ, ನಿಮ್ಮೆಜಮಾನರೂ ನೋಡಿದರೆ ನೋಡಲು ಬಿಡಿ.
ಅವಳನ್ನು ನಾನೆಲ್ಲಾದರೂ ಬಿಟ್ಟುಕೊಡಲಿಕ್ಕೆ ಸಾಧ್ಯಾನಾ... ಇನ್ನು ನೀತಿ ಅಂತ ಏನೂ ಇಲ್ಲ ಆದ್ರೆ, ಈ ಹುಡುಗರು ಉದ್ದ ಕೂದಲು ಬಿಡೋದು, ಹುಡುಗಿಯರು ಹುಡುಗರಂತೆ ಚಿಕ್ಕದಾಗಿ ಕಟ್ ಮಾಡಿಸಿಕೊಳ್ಳೊದು ಯಾಕೊ ಸರಿಯಲ್ಲ ಅಂತ ಹೇಳಲಿಚ್ಚಿಸಿದ್ದೆ, ಹುಡುಗಿಯರಿಗೆ ಉದ್ದ ಕೂದಲು ನಿಜವಗ್ಲೂ ಚೆನ್ನಾಗಿ ಕಾಣುತ್ತದೆ, ಕಾಣದಿದ್ರೆ ಬೇಡ, ಆದರೆ ಆಧುನಿಕತೆ ಹೆಸರಿನಲ್ಲಿ ಹುಚ್ಚು ಹುಚ್ಚು ವೇಷಗಳು ಸರಿ ಹೋಗಲಿಕ್ಕಿಲ್ಲ(ಉದಾ:ಹೊಕ್ಕಳಿಗೆ ರಿಂಗ್, ಅನಾಹುತಗಳಿಗೆ ಎಡೆ ಮಾಡಿಕೊಡುತ್ತದೆ).. ಅದೇ ಹೇಳಬೇಕೆಂದಿದ್ದೆ ಆದರೆ ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ ಅವರವರ ಇಷ್ಟ ಅಂತ ಹೇಳಿದ್ದು....

Naveen ಅವರಿಗೆ
ಧನ್ಯವಾದ, ಏನೊ ಕಲ್ಪನೆಗಳು ತಲೇಲಿ ಬಂದು ಕೈ ಚುರುಗುಟ್ಟುತ್ತದೆ ಬರೆಯುತ್ತೇನೆ..

shivu ಅವರಿಗೆ
ಅಬ್ಬಾ ಎಷ್ಟು ಸಮಯ ತೆಗೆದುಕೊಂಡು ಪ್ರತಿಕ್ರಿಯೆ ಬರೆದಿದ್ದೀರಿ ಸರ್ ಮೊದಲಿಗೆ ಅದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬಹಳ ಚೆನ್ನಾಗಿದೆ ನಿಮ್ಮ ಸಂಭಾಷಣೆ. ಅದೂ ನಿಜ ಜೀವನದಲ್ಲೂ ಹೀಗೆ ಪತಿ ಪತ್ನಿ ಇಷ್ಟು ಚೆನ್ನಾಗಿ ಮಾತಾಡ್ತಾರಾ ಅಂತ ನನಗೆ ನಂಬಿಕೆ ಇರಲಿಲ್ಲ, ಆದರೆ ನಿಜ, ಹೀಗೇ ನಿಮ್ಮ ಜೀವನ ಇದ್ದರೆ, ನೀವು ಅತ್ಯಂತ ಅದೃಷ್ಟವಂತರು. ಅಂತೂ ಇಂತೂ ಹೇರಕಟ ಯಾವುದು ಅಂತ ನೀವೇ ನಿರ್ಧರಿಸುವವರಿದ್ದೀರಿ,(ಒಂದು ಹೇಳ್ಲಾ, ಉದ್ದ ಜಡೆಯಿದ್ರೆ ಕಟ್ ಮಾಡಲೇಬೇಡ ಅಂತ ಹೇಳಿ, ಉದ್ದ ಜಡೆ ಏನು ಲಕ್ಷಣ ಅಂತೀರಾ..).
ಸರ್ ನಾನು ಕಲ್ಪನೆ ಮಾಡಿ ಬರೆದ್ರೆ, ನೀವು ಸುಮ್ನೇ ನಿಮ್ಮ ಮನೆ ಮಾತು ಕಥೆ ಬರೆದ್ರೆ ಸಾಕು ಅದೇ ಸಕತ್ತಾಗಿರ್ತದೆ... ನಿಮ್ಮ ಜೀವನವೇ ಒಲವಿನಿಂದ ತುಂಬಿದೆ ಲೆಕ್ಕಾಚಾರ ಮಾಡಲಾಗದಷ್ಟು!

shivu.k said...

ಪ್ರಭು,

ಮನೆಗೆ ಬಂದೆ ನಿಮ್ಮ ಬ್ಲಾಗ್ ಓದಿದೆ...ಬರುವಾಗ ನಡೆದಿದ್ದ ಮಾತುಕತೆ ನೆನಪಾಯಿತು...ಒಂದೇ ನಿಮಿಷದಲ್ಲಿ ಬರೆದೆ...
ಮತ್ತೆ ಇವನ್ನೆಲ್ಲಾ ಸ್ವಾರಸ್ಯವಾಗಿ ಬರೆಯಲು ನೀವಿದ್ದಿರಲ್ಲ..ಮತ್ತೆ ಬರೆಯಲು enjoy ಮಾಡಲು ನನಗೇ ಬೇರೆ ವಿಚಾರಗಳೇ ಇವೆಯಲ್ಲಾ....ನೀವು ಹೀಗೆ ಬರೆಯುತ್ತಿರಿ....ನಾನು ಅದಕ್ಕೆ ತಕ್ಕಂತೆ ಆನುಭವವನ್ನು ಹೀಗೆ ಕೊಡುತ್ತಿರುತ್ತೇನೆ...

ಧನ್ಯವಾದಗಳು..

Prabhuraj Moogi said...

shivu ಅವರಿಗೆ
ಬಹಳ ಚೆನ್ನಾಗಿತ್ತು ಸರ್ ನಿಮ್ಮ ಕಮೇಂಟ್... ನಿಮ್ಮ ಬರವಣಿಗೆ ವಿಭಿನ್ನ ವಿಚಾರಗಳದ್ದಾಗಿರುತ್ತದೆ, ಹೀಗೇ ಬರೆಯುತ್ತಿರುತ್ತೇನೆ, ನಿಮ್ಮ ಅನಿಸಿಕೆಗಳು ಹೀಗೆ ಬರುತ್ತಿರಲಿ..
ಧನ್ಯವಾದಗಳು...

Royal Enfield said...

ಪ್ರಭು ಅವರಿಗೆ,
ಸಂಜೆಯ ವಂದನೆಗಳು,
ನಿಮ್ಮ ಬ್ಲಾಗನ್ನಾ ನೋಡಿದ(/ ಓದಿದ) ಮೇಲೆ, ಬಹಳ ಹಿಂದೆ ಕಳೆದು ಹೋದ ವಸ್ತು( ಸಂಗಾತಿ) ಮರಳಿ ಸಿಕ್ಕಷ್ಟು ಖುಷಿ ಆಗಿದೆ.(ನಾನೂ Bhiಚಿಯವರ ಮತ್ತು ಅವರ ಬರವಣಿಗೆಗಳ ಅಭಿಮಾನಿಗಳಲ್ಲಿ ಒಬ್ಬ) .ಇದಕ್ಕಾಗಿ ನಿಮಗೆ ನಾನು ದನ್ಯವಾದಗಳನ್ನು ಹೇಳಬಯಸುತ್ತೇನೆ. ಇವತ್ತು ಕೆಲಸವಿದ್ರು ಕೂಡಾ ಪೂರಾ ದಿನ ನಿಮ್ಮ ಬರವಣಿಗೆಗಳನ್ನೇ ಓದುತ್ತಾ ಕುಳಿತಿದ್ದೆ, ಕೆಲಸದ ಸಮಯ ಮುಗಿದ್ದಿದ್ದೆ ಗೊತ್ತಗಲ್ಲಿಲ್ಲಾ, ವೇಳೆಯಾಗಿದ್ದರಿಂದ ನಿಮಗೆ ನನ್ನ ಅನಿಸಿಕೆ ಹೆಚ್ಚಿಗೆ ಹೇಳಲಿಕ್ಕೆ ಅಗಲ್ಲಿಲ್ಲಾ...
ಕ್ಷಮಿಸಿ,
ಮತ್ತೆ ಸಿಗೋಣ..
ಇಂತಿ ನಿಮ್ಮ ಬರವಣಿಗೆಗಳ ಓದುಗ,
ಶಿದ್ದು

Prabhuraj Moogi said...

Royala Enfield ಶಿದ್ದು ಅವರಿಗೆ
ಮೊದಲಿಗೆ ನನ್ನ ಬ್ಲಾಗಗೆ ಸ್ವಾಗತ, ನಿಮಗೆ ಇದು ಕಳೆದ ನೆನಪುಗಳನ್ನು ಮರಳಿ ತಂದ ಹಾಗಾಗಿದ್ದು ಕೇಳಿ ನನಗೂ ಖುಶಿಯಾಯ್ತು. ಅಬ್ಬ ಬೀಚೀ ಅವರ ಲೇಖನಗಳು ಎನು ವಿಚಿತ್ರವಾಗಿದ್ದವು ಬಹಳ ಓದಿಲ್ಲ ಆದರೂ ಅವರ ಗೂಡಾರ್ಥಗಳು ಬಹಳ ಚೆನ್ನಾಗಿರುತ್ತಿದ್ದವು...
ಕೆಲಸದ ನಡುವೆ ಸಮಯ ಸಿಕ್ಕಾಗ ಓದಿ, ಬಹಳ ಲೇಖನಗಳಿವೆ ಹಾಗೂ ಇನ್ನ್ನೊ ಬರಲಿವೆ :)
ನಿಮ್ಮ ಅನಿಸಿಕೆಗಳನ್ನು ಹೀಗೇ ತಿಳಿಸುತ್ತಿರಿ.

Royal Enfield said...

ಪ್ರಭುರವರಿಗೆ,
ಸಂಜೆಯ ವಂದನೆಗಳು,
ನಿಮ್ಮ ಮೊದಲ ಲೇಖನದಿಂದ ನಿಮ್ಮ ಇತ್ತೀಚಿನ "ಹುಡುಕಾಟ ಹುಡುಗಾಟ" ದವರೆಗಿನ ಲೇಖನದೊಳಗಿನ ಸ್ವಾರಸ್ಯವನ್ನು ಸವಿದಿದ್ದೇವೆ. ಇನ್ನೂ ನಿಮ್ಮ ನಂತರದ ಲೇಖನದ ದಾರಿಯನ್ನು ನೋಡುತ್ತಾ ಇದ್ದೇವೆ...
ಸರ್ ನಿಮಗೆ ಗೊತ್ತಿರಬೇಕು, ಒಂದು ಸರ್ತಿ ಓದುವ ಚಟ ಬಿದ್ದಿತೆಂದರೆ, ಅದನ್ನು ನಿಗಿಸುವುದು ಬಹಳ ಕಷ್ಟ ಅಲ್ವ ಸರ್.. ಅದ್ದರಿಂದ ನೀವು ನಿಮ್ಮ ಬಿಡುವಿನ ವೇಳೆಯಲ್ಲಿ ನಮ್ಮಲ್ಲೆರಿಗೂ ನಿಮ್ಮ ಲೇಖನದಿಂದ ಓದುವ ಚಟದ ಆಸೆಯನ್ನು ನಿಗಿಸಲಿಕ್ಕೆ ಪ್ರಯತ್ನಿಸಿ.... ಅದಕ್ಕಪೂರ್ವದಲ್ಲಿ ದನ್ಯವಾದ ಹೇಳ ಬಯಸುತ್ತೇನೆ..
ಮತ್ತು
ನಿಮಗೆ ಬಿಡುವು ಸಿಕ್ಕರೆ Bhiಚಿಯವರ "ಕಮಲೆಯ ಓಲೆಗಳು"ನ್ನು ಓದಿ ಸರ್.. ನನಗೆ ಅನ್ನಿಸುತ್ತೆ ನೀವು ಓದಿರಬಹುದು ಅಂತ... ಅದರೂ ಅದು ನನಗೆ ಒಂದು ಅತಿ ನೆಚ್ಚಿನ ಪುಸ್ತಕವಾಗಿದ್ದರಿಂದ ನಿಮಗೆ ತಿಳಿಸಲು ಇಚ್ಚಿಸಿದೆ...
ನಿಮ್ಮ ಮುಂದಿನ ಲೇಖನದ ನಿರೀಕ್ಷೆಯಲ್ಲಿ,
ಶಿದ್ದು ಪಟ್ಟಣಶೆಟ್ಟಿ.

Prabhuraj Moogi said...

Royal Enfield ಶಿದ್ದು ಪಟ್ಟಣಶೆಟ್ಟಿ ಅವರಿಗೆ
ಎಲ್ಲ ಲೇಖನಗಳನ್ನು ಓದಿದ್ದಕ್ಕೆ ಮೊದಲು ಧನ್ಯವಾದಗಳು... ಓದುವ ಚಟವೇ ಹಾಗೇ... ಇತ್ತೀಚೆಗಂತೂ ಸೋಮವಾರವೆಂದರೆ ಲೇಖನಕ್ಕೆ ಕಾಯುವಂತಾಗಿದೆ ಅಂತ ಕೆಲವ್ರು ಬರೆದಿದ್ದಾರೆ ಕೂಡ, ಅಷ್ಟು ಇಷ್ಟಪಟ್ಟು ಓದುವ ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳು... ನನಗೂ ಬರೆಯುವ ಗೀಳು ಅಂಟಿಕೊಂಡಿದೆ ಬರೆಯುತ್ತಿರುತ್ತೇನೆ, ಸಮಯದ ಅಭಾವದ ಹೊರತು...
Bhiಚಿಯವರ "ಕಮಲೆಯ ಓಲೆಗಳು" ಬಗ್ಗೆ ಕೇಳಿರಲಿಲ್ಲ, ಹಾಗೆ ನೋಡಿದರೆ ಕಾರಣಾಂತರಗಳಿಂದ ನಾನು ಏಷ್ಟೊ ಒಳ್ಳೊಳ್ಳೆ ಕನ್ನಡದ ಪುಸ್ತಕಗಳನ್ನು ಓದಿಲ್ಲ. ಖಂಡಿತ ಓದುತ್ತೇನೆ, ಯಾವಾಗ ಗೊತ್ತಿಲ್ಲ ಹೀಗೆ ಓದುಗರು ಸಲಹೆ ನೀಡಿದ ಪುಸ್ತಕಗಳ ಲಿಸ್ಟು ಬೆಳೆಯುತ್ತಿದೆ :) ಬೇಗ ಒಂದೊಂದು ಓದಲು ಶುರು ಮಾಡಬೇಕು...