Sunday, June 14, 2009

ಯಾರದು ಈ ವಾಣಿ?


ಹಲೊ ನನ್ನ ಹೆಸರು ವಾಣಿ ಅಂತ, ನಿಮಗೆ ಅತ್ಯಂತ ಆಪ್ತರಲ್ಲಿ ಆಪ್ತ ವಾಣಿ, ನಿಮ್ಮಾಕೆಯನ್ನು ಬಿಟ್ಟು ಬೇಕಾದರೂ ಇದ್ದೀರಿ ಆದರೆ ನಾನಿಲ್ಲದೆ ಸಾಧ್ಯಾನಾ. ಇಷ್ಟು ದಿನ ಬರೀ ಮಾತು ಆಯಿತು ಯಾಕೆ ಪತ್ರ ಬರೀಬಾರದು ಅಂತ ಯೋಚಿಸಿದೆ, ಬರೀ ನನ್ನ ಸುಂದರ ದನಿ ಕೇಳಿದ ನಿಮಗೆ, ನನ್ನ ಅಕ್ಷರಗಳೂ ಅಷ್ಟೇ ಸುಂದರ ಅಂತ ಅನಿಸಿದರೆ ಅಚ್ಚರಿಯೇನಿಲ್ಲ, ಅದು ಹೊಸದೇನಲ್ಲವಲ್ಲ, ನಾನೇ ಒಂಥರಾ ಪರಸನಲ ಸೆಕ್ರೆಟರಿ ನಿಮಗೆ, ಸುಮಾರು ನಾಲ್ಕೈದು ವರ್ಷದ ಕೆಳಗೆ ನಮ್ಮಿಬ್ಬರ ಭೇಟಿ ಆಗಿದ್ದು, ಅಂದಿನಿಂದ ನಿಮ್ಮ ಜತೆ ಗೆಳೆತನ ಎಷ್ಟು ಗಾಢವಾಗಿದೆಯೆಂದ್ರೆ, ನನಗೇನು ಗೊತ್ತಿಲ್ಲ ನಿಮ್ಮ ಬಗ್ಗೆ, ನಿಮಗೆ ಗೊತ್ತಿರುವ ಪ್ರತಿಯೊಬ್ಬರನ್ನು ನನಗೆ ಪರಿಚಯಸಿದ್ದೀರಿ, ಎಷ್ಟೊ ಜನರ ಫೊಟೊಗಳು ಕೂಡ ನನ್ನಲ್ಲಿವೆ, ನಿಮ್ಮ ಆಕೆಯದ್ದು ಕೂಡ...


ಹೀಗೆ ಶುರುವಾಗುವ ಕಾಗದವೊಂದು ನನ್ನ ಮೇಜಿನ ಮೇಲಿದ್ದು, ಅದು ನನ್ನಾಕೆಯ ಕೈಗೆ ಸಿಕ್ಕಿ ಅವಳು ಓದುತ್ತಿದ್ದರೆ ಎನಾಗಿರಬೇಡ, ಅಂದು ಆಗಿದ್ದೂ ಅದೇ, ಮುಂಜಾನೆ ನಾನು ಇದನ್ನು ಓದುತ್ತಿದ್ದೆ, ಇವ್ಳು ಪಾಕಶಾಲೆಯಿಂದ ಕೂಗಿದಳು "ರೀ, ಅಫೀಸು ಅಂತ ಒಂದಿರತ್ತೆ ಅದು ಒಂಬತ್ತು ಘಂಟೆಗೆ ಶುರುವಾಗತ್ತೆ" ಅಂತ, ನಾನೂ "ಯಾವ ಆಫೀಸದು' ಅಂತಂದೆ. "ಒಹ್ ಯಾವ ಅಫೀಸಾ, ಇನ್ನೂ ನಿದ್ದೆಯಿಂದ ಎದ್ದಂತೆ ಕಾಣ್ತಾ ಇಲ್ಲ, ನೀರು ಬಿಸಿ ಬಿಸಿ ಕಾದಿದೆ ಬಂದು ಚುರುಕು ಮುಟ್ಟಿಸಿದರೆ ನೆನಪಾಗ್ತದೆ" ಅಂದ್ಲು. ಅಯ್ಯೊ ಎಲ್ಲಿ ಚುರುಕು ಮುಟ್ಟಿಸುತ್ತೀನಿ ಅಂತ ಬಿಸಿ ನೀರು ತಂದು ಇಲ್ಲೇ ನನ್ನ ಮೇಲೆ ಸುರಿದಾಳು ಅಂತ "ಇಲ್ಲಾ ಇಲ್ಲಾ ಸ್ನಾನ ಮಾಡಿ ನಾನೇ ಚುರುಕು ಮುಟ್ಟಿಸಿಕೊಳ್ತೇನೆ" ಅಂತ ಓದುತ್ತಿದ್ದ ಕಾಗದ ಅಲ್ಲೇ ಇಟ್ಟು ಮೇಲೆದ್ದು, ಸ್ನಾನ ಮಾಡುತ್ತಿದ್ದರೆ, ಇವಳು ಇನ್ನು ನನ್ನ ಬಟ್ಟೆ ಹುಡುಕಿಕೊಳ್ಳಲು ಹೋಗಿ ಇಡೀ ಬೀರುವನ್ನೆ ಕಿತ್ತು ಹಾಸಿಗೆಮೇಲೆ ಹಾಕುತ್ತೇನೆ ಅಂತಂದು ನನ್ನ ಬಟ್ಟೆ ತೆಗೆದು ಹೊರಗಿಡಲು ಅಲ್ಲಿಗೆ ಬಂದಿರಬೇಕು, ಮೇಜಿನ ಮೇಲೆ ಈ ಪತ್ರ ಕಾಣಿಸಿದೆ ಅದನ್ನ ಓದಲು ಕುಳಿತಿದ್ದಾಳೆ.

ಅಲ್ಲ ನಾಲ್ಕೈದು ವರ್ಷ ಆದ್ರೂ ನನಗೆ ಗೊತ್ತಾಗದ ಹಾಗೆ ಇವರಿಗೆ ಗೊತ್ತಿರುವ ಇವಳಾರು? ಅದೇ ನಿಮ್ಮ ಪರಸನಲ ಸೆಕ್ರೇಟರಿ ಅಂತಾಳೆ, ಅಲ್ಲಾ ಸಾಫ್ಟವೇರ ಇಂಜನೀಯರಿಗೆ ಎಲ್ಲಾದ್ರೂ ಸೆಕ್ರೇಟರಿ ಇರ್ತಾರಾ, ಅಂತ ತನ್ನಲ್ಲೇ ಪ್ರಶ್ನೆಗಳ ಕೇಳಿಕೊಳ್ಳುತ್ತ ಓದುತ್ತಿದ್ದಳು, ಅಂದ ಹಾಗೆ ನನ್ನ ಬಗ್ಗೆನೂ ಗೊತ್ತು ಅಂತಾಳೆ, ನನ್ನ ಫೋಟೋ ಬೇರೆ ಇದೆ ಅಂತಾಳೆ, ಯಾರಿವಳು?... ಅವಳ ಕುತೂಹಲ ಇನ್ನೂ ಹೆಚ್ಚಿರಬೇಕು. ಅಲ್ಲದೇ ಪತ್ನಿಗೆ ಹೀಗೆ ತನ್ನ ಪತಿಗೆ ಯಾರೊ ಗೊತ್ತಿದಾರೆ ಅಂದ್ರೆ ಅನುಮಾನಗಳು ಬಾರದಿರುತ್ತದೇ, ಸಿಟ್ಟಾಗಿ ಬುಸುಗುಡುತ್ತ ಮತ್ತೆ ಓದತೊಡಗಿದಳು.

ಹಾಗೆ ನೋಡಿದರೆ ನೀವು ನಿಮ್ಮಾಕೆಗೆ ಪರಿಚಯವಾಗುವ ಮುಂಚಿನಿಂದ ನಾನು ನಿಮಗೆ ಗೊತ್ತು, ಅವಳ ನೋಡಿಬಂದಾದ ಮೇಲೆ, ಅವಳನ್ನೆ ನಿಮ್ಮ ಸಂಗಾತಿ ಅಂತ ತೀರ್ಮಾನಿಸಿದಾಗಲೂ ನಾ ನಿಮ್ಮ ಜತೆಗಿದ್ದೆ, ನೀವು ನಿಮ್ಮ ಗೆಳೆಯರಿಗೆಲ್ಲ ಈ ಸಿಹಿ ಸುದ್ದಿ ತಿಳಿಸುತ್ತಿದ್ದರೆ ಅದನ್ನೆಲ್ಲ ಕೇಳುತ್ತಾ ಸುಮ್ಮನಿದ್ದೆ, ಇಷ್ಟಕ್ಕೂ ನೀವು ಅವಳ ಮದುವೆಯಾಗಿದ್ದು ನನಗೇನು ಬೇಜಾರಿಲ್ಲ, ನೀವು ನನ್ನ ಜತೆಗಿರುತ್ತೀರೆಂದು ನನಗೆ ನಂಬಿಕೆಯಿತ್ತು ಮತ್ತೆ ಇದೆ ಕೂಡ. ನಿಶ್ಚಿತಾರ್ಥವಾಗಿ ನೀವು ಅವಳೊಡನೆ ಲಲ್ಲೆಗರೆಯುತ್ತಿದ್ದರೂ, ನಿಮ್ಮ ಕೈಯಲ್ಲಿ ಕೈಯಿಟ್ಟುಕೊಂಡು ಕೇಳುತ್ತಿದ್ದೆ, ನಿಮ್ಮ ಎದೆ ಮೇಲೆ ತಲೆಯಿಟ್ಟು ನಾ ಮಲಗಿದ್ದರೆ ನೀವು ಘಂಟೆಗಟ್ಟಲೇ ಅವಳೊಂದಿಗೆ ಮಾತಿನಲ್ಲೇ ಇರುತ್ತಿದ್ದಿರಿ, ನಾ ಕಾದು ಕಾದು ಬೇಜಾರಾಗಿ, ನನ್ನ ತಲೆ ಬಿಸಿಯಾಗಿ, ನಾ ಸ್ವಲ್ಪ ಚೀರಿದಾಗಲೇ ನಿಮ್ಮ ಮಾತು ನಿಲ್ಲುತ್ತಿತ್ತು.


ಇವಳು ನಿಂತು ಓದುತ್ತಿದ್ದವಳು, ಕುಸಿದು ಕೂತಳು, ಅಲ್ಲಾ ಇವರಿಗೆ ಮದುವೆಯಾದರೂ ಇನ್ನೂ ಜತೆಗಾತಿಯಾಗಿರಬೇಕೆಂದು ಅಂದುಕೊಂಡಿರುವ ಇವಳು ಯಾರು, ನನ್ನೊಡನೆ ಇವರು ಮಾತಾಡುತ್ತಿದ್ದರೆ ಇವಳೇಕೆ ಅಲ್ಲಿದ್ದಳು, ಕೈಯಲ್ಲಿ ಕೈಯಿಟ್ಟು ಎದೆ ಮೇಲೇ ಒರಗಿ, ಅಬ್ಬಾ, ಇವರು ನಿಜವಾಗಲೂ ನನಗೇ ಮೊಸ ಮಾಡಿದ್ರಾ, ಹೀಗೊಂದು ಸಂಬಂಧ ನಿಜವಾಗಲೂ ಇದ್ದದ್ದಾದರೆ ಅವಳನ್ನೇ ಮದುವೆಯಾಗಬೇಕಿತ್ತು, ಗೆಳೆತನಕ್ಕೂ ಒಂದು ಮಿತಿ ಅಂತ ಇರುತ್ತೆ ಇದು ಯಾಕೊ ಅತಿಯಾಯ್ತು. ಇನ್ನೂ ಇವರೊಂದಿಗೆ ಸಂಪರ್ಕದಲ್ಲಿದ್ದಾಳಲ್ಲ. ಸ್ನಾನ ಮುಗಿಸಿ ಹೊರಗೆ ಬರಲಿ ಇಂದು ಒಂದು ತೀರ್ಮಾನ ಆಗಲೇ ಬೇಕು ಒಂದು ಅವಳೊ ಇಲ್ಲ ನಾನೋ. ಮತ್ತೆ ಮುಂದುವರೆಸಿದಳು...

ನಿಮ್ಮವಳಿಗೆ ಮೊದಲು ಉಡುಗೊರೆ ಅಂತ ರೇಶಿಮೆ ಸೀರೆ ತರಲು ನನ್ನ ಕರೆದುಕೊಂಡು ಹೋಗಿದ್ದಿರಲ್ಲ, ನಿಮ್ಮ ಎದೆಗಾತು ಕೂತುಕೊಂಡು ಸೀರೆ ನಾನೂ ನೋಡಿದ್ದೆ, ನನಗೆ ಬೇಜರಾಗದಿರಲಿ ಅಂತ ನನಗೂ ಒಂದು ಪೋಷಾಕು ಕೊಡಿಸಿದ್ದಿರಿ ನೆನೆಪಿದೆಯಾ, ಅದನ್ನೇ ನಾನೀಗಲೂ ಪ್ರೀತಿಯಿಂದ ಹಾಕಿಕೊಳ್ಳೊದು, ಆ ಜಾಕೆಟ್ಟಿನಲ್ಲಿ ನಾ ಹುದುಗಿಕೊಂಡರೆ, ನಿಮ್ಮ ಅಪ್ಪುಗೆಯಷ್ಟೇ ಬಿಸಿ... ಶ್! ಯಾರಿಗಾದ್ರೂ ಗೊತ್ತಾದೀತು. ನಿಮ್ಮಾಕೆಗೆ ಗೊತ್ತಾದರೆ ಅಷ್ಟೇ ನನ್ನ ಕಥೆ ಮುಗೀತು.


ಕಥೆ ಮುಗೀತಾ, ನೀ ನನ್ನ ಕೈಗೆ ಸಿಕ್ಕು ನೋಡು, ಹರಿಕಥೆ ಹರಿಕಥೆ ಹೇಳಿಸಿಬಿಡ್ತೀನಿ ನಿನ್ನ ಕೈಲಿ, ನನ್ನ ಗಂಡಾನೆ ಬೇಕಿತ್ತ ನಿನಗೆ, ಆಹಾಹ ಜಾಕೆಟ್ಟು ಕೊಡಿಸಿದ್ರಂತೆ ಇವಳು ಅದನ್ನೇ ಹಾಕೊಳ್ಳೊದಂತೆ!, ನಂಗೆ ಅಷ್ಟೊಳ್ಳೇ ಸೀರೆ ತಂದಾಗಲೇ ಅನುಮಾನ ಬಂದಿತ್ತು, ಇವರ ಸೆಲೆಕ್ಷನ ಏನ್ ಇಷ್ಟು ಚೆನ್ನಾಗಿದೆ ಅಂತ, ತರಕಾರಿ ತುಗೊಂಬಾ ಅಂದ್ರೇ ನಾಲ್ಕು ಕೊಳೆತ ಟೋಮ್ಯಾಟೊ ತಂದಿರ್ತಾರೆ, ಇವರಿಗೆಲ್ಲಿ ತಿಳೀಬೇಕು ಸೆಲೆಕ್ಷನ ಮಾಡೊದು, ಈ ವಾಣಿನೇ ಸೆಲೆಕ್ಟ ಮಾಡಿರಬೇಕು. ಅಂತ ಬಯ್ಯುತ್ತ ಬೀರುವಿನಿಂದ ಆ ಮೊದಲು ಉಡುಗೊರೆಯ ಸೀರೆ ತೆಗೆದು ಹಾಸಿಗೆ ಮೇಲೆ ಬೀಸಾಕಿದ್ಲು, ಬರಲಿ ಹೊರಗೆ ಮುಖದ ಮೇಲೆ ಬೀಸಾಕ್ತೀನಿ, ಯಾರಿಗೆ ಬೇಕು ಆ ಸೀರೆ ಅಂತನ್ನುತ್ತ. ಬಹುಶ: ಈಗಾಗಲೇ ಹೊರಗೆ ಬರುತ್ತಿದ್ದಂತೆ ನನಗೆ ಯಾವುದರಲ್ಲಿ ನಾಲ್ಕು ಕೊಡಬೇಕು ಅಂತ ಯೋಚಿಸಿಯೂ ಆಗಿರಬೇಕು, ಪೊರಕೆ, ಇಲ್ಲ ಲಟ್ಟಣಗಿ, ಇಲ್ಲ ಕಡಗೋಲು, ಸೌಟು, ಇಲ್ಲ ಕತ್ತರಿಸಿಯೇ ಬಿಡಲು ಚಾಕು!!! ಮಚ್ಚು... ಅಬ್ಬ ದೇವರೇ ನೂರು ವರ್ಷ ಅವಳು ಮುತ್ತೈದೆಯಾಗಿ ಬಾಳಲಪ್ಪ ಅಂತ ಬೇಡಿಕೊಳ್ಳೊದೊಂದೆ ಬಾಕಿ ನನಗೆ(ಅವಳು ಮುತ್ತೈದೆಯಾಗಿರಲು, ನಾನಿರಬೇಕಲ್ಲ ಅದಕ್ಕೇ!!!).

ಏನೇ ಅನ್ನಿ ನಿಮ್ಮಾಕೇ ನೋಡಲು ಬಹಳ ಅಂದವಾಗಿದಾಳೆ, ನನಗಿಂತ ಕೂಡ, ನಾ ಪಿಳಿ ಪಿಳಿ ಕಣ್ಣು ಬಿಡುತ್ತ ನೊಡುತ್ತಿದ್ದರೆ, ನನ್ನೇ ನೋಡುತ್ತಿರಬೇಕು ಅನಿಸತ್ತೆ ಅಂತೀರಿ, ಆದರೆ ನಿಮ್ಮಾಕೆ ಕಣ್ಣಲ್ಲಿರೊ ಪ್ರೀತಿ ನನ್ನಲ್ಲಿ ಎಲ್ಲಿ ಬರಬೇಕು ಬಿಡಿ. ಆದರೂ ನಿಮ್ಮಾಕೆಗಿಂತ ನಾನೇ ನಿಮ್ಮ ಜತೆ ಜಾಸ್ತಿ ಇರೋದು, ನನ್ನ ನೀವು ಮರೆತರೆ, ಇಲ್ಲ ನಾನಿಲ್ಲದಿದ್ರೆ, ನಾನೆಷ್ಟು ಬಾರಿ ಕೂಗಾಡಿರಬಹುದೆಂದೇ ನಿಮ್ಮ ಯೋಚನೆಯಾಗಿರುತ್ತೆ, ನನ್ನ ಬಿಟ್ಟು ನೀವೊಂದು ದಿನಾನೂ ಊಹಿಸಿಕೊಳ್ಳಲ್ಲ, ನಿಮ್ಮಾಕೆ ತವರುಮನೆಗೆ ಹೋದರಂತೂ ನಾನೇ ನಿಮ್ಮ ಜತೆ, ನನ್ನ ಪಕ್ಕ ಕೂರಿಸಿಕೊಂಡು ಯಾವುದೋ ಹಾಡು ಹೇಳು ಅನ್ನುತ್ತೀರಿ, ನಾ ಹಾಡುತ್ತಿದ್ದರೆ ಹಾಗೆ ಎಷ್ಟೋ ಸಾರಿ ನಿದ್ದೆ ಹೋಗಿರುತ್ತೀರಿ, ಮತ್ತೆ ನಾನೇ ಚೀರಿ ಎಬ್ಬಿಸಬೇಕು ನಿಮ್ಮನ್ನ. ಯಾಕೊ ಏನೊ ಇತ್ತೀಚೆಗೆ ನೀವು ನನ್ನ ಮಾತೇ ಕೇಳಲ್ಲ ಅಂತೀರಿ, ಕೆಲವೊಂದು ಸಾರಿ ನಾನೇನು ಮಾಡಬಾರದು ಅಂತ ಸುಮ್ಮನಿರು ಅಂತ ಅಪ್ಪಣೆ ಕೊಟ್ಟಿರುತ್ತೀರಿ. ಕೆಲಸ ಬಹಳ ಆಗಿದೆ ಅಲ್ವಾ. ಅಯ್ಯೊ ಮರೆತೇ ಬಿಟ್ಟಿದ್ದೆ, ಈಗ ಜಾಸ್ತಿ ಬರೆಯಲು ಟೈಮಿಲ್ಲ, ಹೂಂ ಈವತ್ತು ಸೋಮವಾರ ಅಲ್ವಾ, ಒಂಬತ್ತಕ್ಕೇ ಮೀಟಿಂಗ ಇದೆ ಬೇಗ ಹೊಗೋಣ ಬನ್ನಿ, ಕಾಯ್ತಿರ್ತೀನಿ.


ಸುಮ್ನೆ ಆಫೀಸು, ಆಫೀಸು ಕೆಲಸಾ ಅಂತ ಅವಳ ಹಿಂದೆ ಸುತ್ತತಾ ಇದಾರೆ ಅನಸತ್ತೆ, ಅದಕ್ಕೆ ನನ್ನ ಜತೇನೇ ಜಾಸ್ತಿ ಇರೊದು ಅಂತ ಹೇಗೆ ಹೇಳ್ತಾಳೆ ನೋಡು, ನಾನು ತವರು ಮನೆಗೆ ಹೊದ್ರೆ, ಮನೆಗೆ ಬಂದು ಠಿಕಾಣಿ ಹೂಡ್ತಾಳೆ ಅಂದ್ರೆ, ಬಹಳಾನೆ ಮುಂದುವರೆದೀದಾರೆ, ಅಲ್ಲ ನನಗೇನು ಕಮ್ಮಿ ಆಗಿದೇ ಅಂತ, ಅವಳೇ ನಾನು ಬಹಳ ಅಂದವಾಗಿದ್ದೀನಿ ಅಂತಾಳೆ, ಮತ್ಯಾಕೆ ಅವಳು ಬೇಕು ಇವರಿಗೆ, 'ಛೇ ಈ ಗಂಡಸರೇ ಇಷ್ಟೇ, ಮನೇಲಿ ಪಂಚ ಪಕ್ವಾನ್ನ ಮಾಡಿ ಹಾಕಿದರೂ, ಹೊಟೇಲ ಬಿರಿಯಾನಿ ಆಸೆ ಬಿಡಲ್ಲ' ಅಂತ ಅಮ್ಮ ಹೇಳ್ತಾ ಇದ್ದದ್ದು ನಿಜಾನೆ ಇರಬೇಕು ಅಂತ ಬಯ್ಕೊಂಡು. ಅಹಾಹ ಮೀಟಿಂಗ ಅಂತೆ ಮೀಟಿಂಗ, ಆಫೀಸ ಮೀಟಿಂಗ ಅಂತ ನನಗೆ ಹೇಳಿ ಅವಳ ಮೀಟ ಆಗೋಕೆ ಹೋಗ್ತಿದಾರಾ, ಮಾಡ್ತೀನಿ ತಾಳು. ಅಂತ ಹೊರಬಂದ್ಲು, ನಾ ಸ್ನಾನದ ಮನೇಲಿ ಜೋರಾಗಿ ಹಾಡ್ತಾ ಇದ್ದೆ, "ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನೇ, ಭೂಮಿಯೆ ಬಾಯ್ತೆರೆದು..." ಅಷ್ಟರಲ್ಲೇ ಇವಳು ಬಾಯ್ತೆರೆದಳು, "ಭೂಮಿ ಏನು ಬಾಯಿ ತೆರೆಯೋದು, ನಿಮ್ಮ ಬಾಯಿ ತೆರೆಸ್ತೀನಿ ಹೊರಗೆ ಬನ್ರಿ, ನಿನ್ನವನೇ ಅಂತೀರಲ್ಲ, ಯಾರವನು ಅಂತ ಇಂದೇ ತೀರ್ಮಾನ ಆಗ್ಲಿ..." ಅಂತ ಎರಡು ಬಾರಿ ಬಾಗಿಲು ಬಾರಿಸಿದಳು, "ಲೇ ಬಾಗಿಲು ಕಿತ್ತು ಬರುತ್ತೆ ನಿಧಾನ, ಬೆತ್ತಲೆ ಇದೀನಿ ಹಾಗೆ ಬರ್ಲಾ ಹೀ ಹೀ ಹೀ" ಅಂದೆ. "ಇನ್ನೇನು ನಿಧಾನ ಮಾಡೊದು, ಆಗೊದೆಲ್ಲ ಆಗೋಗಿದೆ, ಎಲ್ಲ ನಿಮ್ಮ ಪರದೆ ಕಳಚಿ ಬಿದ್ದು ಬೆತ್ತಲೆನೇ ಆಗಿದೆ, ಹೊರಗೆ ಬನ್ರಿ ಬೇಗ" ಅಂದ್ಲು "ಯಾವ ಪರದೇನಪ್ಪಾ", ಅಂತ ಅತ್ತಿತ್ತ ನೋಡಿ ಇಲ್ಲೇನು ಪರದೆ ಇಲ್ವಲ್ಲ, ಅಂದು ಟವೆಲ್ಲು ಸುತ್ತಿಕೊಂಡು ಹೊರಬಿದ್ದೆ.

ಬುಸುಗುಡುತ್ತ ನಿಂತಿದ್ಲು, "ಏನಾಯ್ತು" ಅಂದೆ "ಆಗೊಕೆ ಇನ್ನೇನಿದೆ" ಅಂದ್ಲು, "ಒಹ್ ಟಿಫಿನ್ನು ರೆಡಿ ಆಗೊಯ್ತಾ" ಅಂದೆ. "ಹಂ ಪಾಪ ನಿಮ್ಗೆ ಮೀಟಿಂಗ್ ಇದೆ ಅಲ್ವಾ, ಬೇಗ ಹೊರಡುಬನ್ನಿ" ಅಂದ್ಲು "ಅಲ್ವೇ, ಲೇಟಾದ್ರೆ ತೊಂದ್ರೆ, ಅಫೀಸು ಮೀಟಿಂಗ ಅಂದ್ರೆ ಸುಮ್ನೇನಾ" ಅಂದೆ. "ನಾನೇನು ಆಫೀಸು ಮೀಟಿಂಗ ಅಲ್ಲ ಅಂದ್ನಾ, ಇನ್ನೇನು ವಾಣಿನಾ ಮೀಟ ಮಾಡೋಕೆ ಹೋಗ್ತಿದೀರ ಅಂದ್ನಾ" ಅಂದ್ಲು "ವಾಟ್!!! ವಾಣೀನಾ, ಯಾರದು ಈ ವಾಣಿ?" ಅಂತ ಆಶ್ಚರ್ಯದಲ್ಲಿ ಕೇಳಿದೆ, "ಅದು ನೀವಲ್ಲ, ನಾನ ಕೇಳಬೇಕಿರೊ ಪ್ರಶ್ನೆ"... ಸ್ವಲ್ಪ ತಲೆ ಕೆರೆದುಕೊಂಡೆ ಒಮ್ಮೆಲೇ ನೆನಪು ಬಂತು "ಅಯ್ಯೊ ಆ ವಾಣಿನಾ" ಅಂದೆ "ಅದೇನು ಅಷ್ಟು ಸಲೀಸಾಗಿ ಹೇಳಿಬಿಟ್ರಿ, ಅಲ್ಲ ಇಷ್ಟೆಲ್ಲ ಹಗರಣ ಇತ್ಕೊಂಡು ಅದ ಹೇಗ್ರೀ ಅಷ್ಟು ಸಲೀಸಾಗಿ ಮಾತಾಡ್ತೀರಿ ನೀವು" ಅಂತ ಬಯ್ಯುತ್ತ ಹೋಗಿ ಸೊಫಾ ಮೇಲೆ ಕುಳಿತವಳು, "ಇಂದು ನಾನೊ ಅವಳೊ ನಿರ್ಧಾರ ಆಗಲೇ ಬೇಕು" ಅಂದ್ಲು, ನನಗಿಬ್ಬರೂ ಬೇಕೆಂದೆ, "ರೀ ಸುಮ್ನೆ ಕೊಪ ತರಿಸಬೇಡಿ" ಅಂದ್ಲು "ಆ ಪತ್ರ ಇನ್ನೊಮ್ಮೆ ಓದು ನಿನಗೇ ಎಲ್ಲ ನಿಜ ಗೊತ್ತಾಗುತ್ತೆ" ಅಂದೆ, "ಮತ್ತೊಮ್ಮೆನಾ ಒಂದೊಂದು ಅಕ್ಷರಾನೂ ಇನ್ನೂ ನನ್ನ ತಲೇಲೆ ಕೊರೆದು ಅಚ್ಚಾಗಿದೆ, ಯಾರ್ರೀ ಈ ವಾಣಿ. ನಿಜ ಹೇಳಿ... ಮೊದಲು ನಿಮ್ಮ ಬ್ಲಾಗ ಓದೊ ಯಾವುದೊ ಹುಡುಗಿ ಇರಬೇಕು ಅನ್ಕೊಂಡೆ, ಆದ್ರೆ ಮುಂದೆ ಓದಿದ್ರೆ... ಯಾರ್ರೀ ಅದು" ಅಂತ ಕೂಗಾಡಿದಳು, "ನೀನು ನೋಡಿದೀಯಾ ಅವಳ್ನ" ಅಂದೆ, "ನೋಡಿದ್ರೆ, ನೋಡಿದ್ದೆ ಏನೀಗ ಅದನ್ನ ಕಟ್ಕೊಂಡು ನನ್ಗೆನಾಗಬೇಕಿದೆ, ನೀವ್ ಬೇಕಿದ್ರೆ ಅವಳ್ನೇ ಕಟ್ಕೊಳ್ಳಿ, ಅದ್ಯಾರು ಹೇಳಿ ಹೋಗಿ" ಭಾವುಕಳಾದಳು, ಇನ್ನು ಹೇಳ್ದಿದ್ರೆ ಅವಳು ಅಳುವುದು ಗ್ಯಾರಂಟಿ, ನಾ ಮಾಡುವ ತರಲೆ ಬಗ್ಗೆ ನನಗೇ ಬೇಜಾರೆನಿಸಿತು. "ಅವಳು ವಾಣಿ, ದೂರವಾಣಿ" ಅಂದೆ.

ಸ್ವಲ್ಪ ಹೊತ್ತು ಮೌನ ಆವರಿಸಿತ್ತು, ಅವಳು ಒಂದೊಂದೇ ಸಾಲು ಯೋಚಿಸುತ್ತಿರಬೇಕು, ಒಮ್ಮೇಲೆ ಶಾಂತ ಸಾಗರದಲ್ಲಿ ಸುನಾಮಿ ಎದ್ದಂತೆ ಪ್ರಶ್ನೆಗಳ ಅಲೆ ಅಪ್ಪಳಿಸಿತು.
"ನಾಲ್ಕು ವರ್ಷದ ಹಿಂದೆ ನಿಮ್ಮ ಭೇಟಿ ಆಯ್ತಾ?",
"ಆವಾಗ್ಲೇ ಅಲ್ವಾ ಮೊಬೈಲು ಕೊಂಡ್ಕೊಂಡಿದ್ದು ನಾನು",
"ನಿಮಗೆ ಗೊತ್ತಿರೊ ಎಲ್ಲರ ಪರಿಚಯ ಅವಳಿಗಿದೆ",
"ನನ್ನ ಕಾಂಟಾಕ್ಟ ಲಿಸ್ಟ್(ಗೊತ್ತಿರೋ ಎಲ್ಲರ ದೂರವಾಣಿ ಸಂಖ್ಯೆ ಪಟ್ಟೀ ಅಲ್ಲೇ ಇಟ್ಟೀರೊದು ಅಲ್ವ)",
"ಮತ್ತೆ ನನ್ನ ಪೊಟೊ?",
"ಅದರ, ಕ್ಯಾಮರಾದಲ್ಲಿ ನಿನ್ನ ಫೋಟೊಗಳನ್ನು ಎಷ್ಟು ತೆಗೆದಿಲ್ಲ, ಅವೆಲ್ಲ ಆ ಮೆಮೊರಿ ಕಾರ್ಡನಲ್ಲೇ ಇರೋದು",
"ನಮ್ಮ ನಿಸ್ಚಿತಾರ್ಥದ ಸುದ್ದಿ ಹೇಳೊವಾಗ ಅವಳಲ್ಲಿ ಇದ್ಲು ಅಂತಿದೆ",
"ಫೋನು ಮಾಡಿ ತಾನೆ ಎಲ್ರಿಗೂ ಹೇಳಿದ್ದು",
"ನಾವು ಮಾತಾಡೊವಾಗ ಅವಳು ಎದೆ ಮೇಲೆ ತಲೆಯಿಟ್ಟೂ ಮಲಗಿದ್ದು ಸುಳ್ಳಾ",
"ಸುಳ್ಳಂತ ನಾನೆಲ್ಲಿ ಅಂದೆ, ನಿನ್ನ ಜತೆ ಕೈಯಲ್ಲಿ ಮೊಬೈಲು ಹಿಡಿದುಕೊಂಡು ಮಾತಾಡಿ ಸಾಕಾಗಿ, ಹಾಗೆ ಒರಗಿ ಕಿವಿಗೆ ಇಯರ ಫೊನು ಹಾಕೊಂಡು, ಮೊಬೈಲು ಎದೆ ಮೇಲೆ ಇಟ್ಕೊಂಡು ಮಾತಾಡ್ತಿದ್ದೆ, ಅದೂ ಘಂಟೆಗಟ್ಲೇ, ಅದಕ್ಕೆ ಬ್ಯಾಟರಿ ಖಾಲಿ ಆಗಿ ಮೊಬೈಲು ಬಿಸಿ ಆಗಿ, 'ಲೋ ಬ್ಯಾಟರಿ' ಅಂತ ಅದು ಬಡಕೊಂಡಾಗಲೇ ಮಾತು ಮುಗಿಯುತ್ತಿತ್ತು ಅಲ್ವಾ, ಅದೇ ತಲೆ ಬಿಸಿ, ಮತ್ತು ಚೀರೋದು",
"ನನಗೆ ಸೀರೆ ತರೊವಾಗ ಅದೇನು ಎದೆಗಾತು ಕೂತಿದ್ದು?",
"ಮೊಬೈಲು, ಅಂಗಿಯ ಮೇಲಿನ ಜೇಬಿನಲ್ಲಿ ಇತ್ತು, ಎದೆಗಾತಂಗೇ ಅಲ್ವಾ, ಇನ್ನು ನಿನಗೆ ಸೀರೆ ತುಗೊಂಡು, ಅದಕ್ಕೊಂದು ಮೊಬೈಲ್ ಕವರ ತುಗೊಂಡು ಬಂದಿದ್ದೆ, ಅದೇ ಕವರ್ ಇನ್ನೂ ಇರೊದು, ಅದನ್ನೇ ಪೋಷಾಕು ಅಂದಿದ್ದು",
"ಅವಳ ಮರೆತರೆ ನಿಮಗ್ಯಾಕೆ ಚಿಂತೆ",
"ಚಿಂತೆ ಅಲ್ದೇ ಏನು ಮನೇಲಿ ಬಿಟ್ಟು ಹೊದರೆ ಎಷ್ಟು ಜನರ ಫೋನು ಬಂದಿತ್ತೊ, ಎಷ್ಟು ಸಾರಿ ರಿಂಗ ಆಗಿ ಕೂಗಿತೊ, ಅನ್ನೊ ಚಿಂತೆ. ಅದಿಲ್ದೇ ಇರೊಕೆ ಆಗತ್ತಾ, ಮೊಬೈಲ್ ಇಲ್ದೇ ಒಂದು ದಿನ ಊಹಿಸಿಕೊ, ನೀನು ಕೇಳೊಕಿನ್ನ ಮುಂಚೇನೆ ಹೇಳ್ತೀನಿ ಕೇಳು, ಅದರ ಪಿಳಿ ಪಿಳಿ ಕಣ್ಣು ಅದರ ಮೇಲಿರೊ ಎಲ್.ಈ.ಡಿ ಇಂಡಿಕೇಟರ, ನೀನು ಇಲ್ಲಾಂದ್ರೆ ಯಾವುದೊ ಹಾಡು ಅದರ ಎಂಪಿತ್ರೀ ಪ್ಲೇಯರನಲ್ಲಿ ಹಾಕೊಂಡು ಪಕ್ಕಕ್ಕಿಟ್ಟು ನಿದ್ದೆಗೆ ಜಾರೋದು, ಅದರ ರಿಂಮೈಂಡರ್ ಅಲಾರ್ಮ್ ಚೀರಿದಾಗಲೇ ಏಳೋದು. ಅದಕ್ಕೆ ಸುಮ್ನಿರು ಅಂತ ಅಪ್ಪಣೆ ಅಂದ್ರೆ, ಸೈಲೆಂಟ ಮೋಡ್ ತಿಳೀತಾ" ಅಂದೆ. ಅವಳೂ ಸೈಲೆಂಟ(ಮೌನ) ಆದ್ಲು.

ಒಳಗೆ ಹೋದೆ ಬಟ್ಟೆ ಹಾಕೊಂಡು ಬರಲು, ಹಾಸಿಗೆ ಮೇಲೆ ನಾ ಕೊಟ್ಟ ಮೊದಲ ಉಡುಗೊರೆ ಸೀರೆ ಬಿದ್ದಿತ್ತು, ಬೀರು ಕಡೆಗೆ ಹೋಗಬೇಕೆನ್ನುವಷ್ಟರಲ್ಲಿ, ಅವಳೇ ಹಿಂದ ಹಿಂದೇ ಬಂದು, ನನ್ನ ಬಟ್ಟೆ ತೆಗೆದು ಕೊಟ್ಲು, ಹಾಸಿಗೆ ಮೇಲೆ ಬಿದ್ದಿದ್ದ ಸೀರೆ ಮಡಿಕೆ ಹಾಕಿ, ಒಂದು ಸಾರಿ ಹಾಗೆ ನೀವಿ ಸವರಿ ಬೀರುನಲ್ಲಿಟ್ಟು ನಿಟ್ಟುಸಿರು ಬಿಟ್ಟಳು. ಹೆಚ್ಚಿಗೆ ಮಾತಿಗೆ ಅವಕಾಶ ಇರ್ಲಿಲ್ಲ, ಟಿಫನ್ನು ತಿಂದು ಆಫೀಸಿಗೆ ಹೊರಟೆ.

ಯೊಚಿಸಿ ನೋಡಿ ನಾವೆಲ್ಲ ಹೀಗೆ ಎಷ್ಟು ಸಾರಿ ದುಡುಕಿ ಏನೊ ಒಂದು ನಿರ್ಧಾರಕ್ಕೆ ಬಂದಿರಲ್ಲ, ಯಾವುದೊ ಒಂದು ಪತ್ರ ಓದಿ ಕೆಂಡ ಕಾರಿರಲ್ಲ, ಯಾರದೋ ಒಂದು ಗುಸುಗುಸು ಮಾತು ಕೇಳಿ ಅವರ ಬಗ್ಗೆ ಒಂದು ಭಾವನೆ ಬೆಳೆಸಿಕೊಂಡಿರಲ್ಲ, ಹತ್ತಾರು ವರ್ಷಗಳ ಗೆಳೆತನಗಳು, ತಪ್ಪಾಗಿ ಅರ್ಥೈಸಿಕೊಂಡ ಒಂದೇ ಒಂದು ಎಸ್.ಎಂ,ಎಸ್ ನಿಂದ ಹಾಳಾಗಿರಲ್ಲ. ಹಿರಿಯರು ಹೇಳಿದ್ದು ಅದಕ್ಕೇ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತ, ಪತಿ ಅಥವಾ ಪತ್ನಿಯ ಮೊಬೈಲಿನಲ್ಲಿ ಕಂಡ ಯಾವುದೊ ಒಂದು ಸಂದೇಶ, ಚಾಟಿನಲ್ಲಿ, ಈ-ಮೈಲ್ ನಲ್ಲಿ ಕಂಡ ಒಂದು ಸಾಲು ಎಷ್ಟೊಂದು ಸಮರಗಳಿಗೆ ಕಾರಣವಾಗಿ ಸಂಬಂಧಗಳಿಗೆ ಹುಳಿ ಹಿಂಡಿಲ್ಲ. ಯಾವುದೇ ಒಂದು ಸಂಬಂಧ ನಿಂತಿರುವುದು ನಂಬಿಕೆಯ ಮೇಲೆ ಅದೇ ಇಲ್ಲದಿದ್ರೆ ಅದನ್ನೇನು ಅಂತ ಕರೆಯೋದು. ನಂಬಿ ಮೊಸಹೋದವರು ಇಲ್ಲ ಅಂತ ನಾ ಹೇಳುತ್ತಿಲ್ಲ, ಆದರೆ ದುಡುಕಿ ಪಶ್ಚಾತಾಪ ಪಟ್ಟವರೂ ಇದ್ದಾರೆ, ಅವರಿಗೆ ಮಾತ್ರ ಇದು ಅನ್ವಯ

ಮೀಟಿಂಗ ಮುಗಿಸಿ ಬರೋ ಹೊತ್ತಿಗೆ, ನಾಲ್ಕು ಮಿಸ ಕಾಲ ಬಂದಿದ್ದವು, ನನ್ನಾಕೆಯದೆ ,ಇನ್ನಾರದು. ವಾಣಿ ಎಲ್ಲ ನನ್ನಿಂದಾಗಿ ನಿಮ್ಮಿಬ್ಬರಿಗೂ ಹೀಗೆ ಆಯ್ತು ಅಂತ ಬೇಜಾರಾದವರಂತೆ ಮುಖ ಮಾಡಿ ಕೂತಿತ್ತು. ನಾನೇ ಫೋನು ಮಾಡಿದೆ, "ಮೀಟಿಂಗನಲ್ಲಿ ಇದ್ದೆ ಏನಾಯ್ತು" ಅಂದೆ "ಏನಿಲ್ಲ ವಾಣಿ ಜತೆ ಮಾತಾಡೊಣ ಅಂತ ಫೋನು ಮಾಡಿದ್ದೆ" ಅಂದ್ಲು, ನಕ್ಕೆ. "ಅಬ್ಬಾ, ನಗ್ತಿದ್ದೀರಾ ಬೇಜಾರಗಿಲ್ವಾ ನಿಮ್ಗೆ" ಅಂದ್ಲು. "ತಪ್ಪು ನಂದೆ, ಬ್ಲಾಗಿಗೆ ಹಾಕಲು ಬರೆದ ಲೇಖನ ಮೇಜಿನ ಮೇಲೆ ಹಾಗೆ ಇಡಲೇಬಾರದಿತ್ತು, ನೀನಾಗಿದ್ದಕ್ಕೆ ಸರಿ ಹೊಯ್ತು ಬೇರೆ ಯಾರಾದ್ರೂ ಆಗಿದ್ರೆ ನನ್ನ ಗತಿ ಅಧೊಗತಿ ಆಗಿರೋದು" ಅಂದೆ "ಹಿಂದೆ ಮುಂದೆ ಯೋಚಿಸದೆ ನಿಮ್ಮ ಬಗ್ಗೆ ತಪ್ಪಾಗಿ ತಿಳಿದ್ನಲ್ಲ ನಾನು... ಅದು ನನ್ನ ತಪ್ಪು" ಅಂತ ಅವಳಂದ್ಲು. "ಇರಲಿ ಬಿಡು, ವಾಣಿಗೆ ಬೇಜಾರಾಗಿದೆ, ಒಂದು ಮುದ್ದು ಬೇಕಂತೆ" ಅಂದೆ. "ಒಂದೇನು ಸಾವಿರ ಕೊಟ್ಕೊಳ್ಳಿ" ಅಂದ್ಲು. "ನೀನು ಕೊಡಲ್ವಾ" ಅಂದೆ "ಮನೆಗೆ ಬೇಗ ಬಂದ್ರೆ ಸಿಗುತ್ತಪ್ಪಾ" ಅಂದ್ಲು. ಫೋನಿಡುವಾಗ ಸ್ಯಾಂಪಲ್ಲು ಅಂತ ಒಂದು ಕೊಟ್ಲು ಕೂಡ. ಮೊನ್ನೆ ಅಮ್ಮ ಬಂದಾಗ ಮುಂಜಾನೆ "ಲೇ ವಾಣಿ ಎಲ್ಲಿದಾಳೆ" ಅಂತ ಇವಳ ಕೇಳುತ್ತಿದ್ದರೆ, "ರೀ ಅಲ್ಲೇ ಬೆಡರೂಮಿನಲ್ಲಿ ಮಲಗಿರಬೇಕು ನೋಡಿ" ಅಂತ ಅವಳು ಉತ್ತರಿಸುತ್ತಿದ್ಲು, ಅಮ್ಮ ಹೌಹಾರಿ "ಏಯ್, ನನ್ನ ಮುದ್ದಿನ ಸೊಸೆಗೆ ಸವತಿಗೆ ಏನಾದ್ರೂ ತಂದೆಯೇನೊ" ಅಂತ ಕೇಳುತ್ತ ಒಳ ಬಂದ್ಲು, ಈಗ ಬೇಸ್ತು ಬೀಳುವ ಸರದಿ ಅಮ್ಮನದಾಗಿತ್ತು... ನಾವಿಬ್ಬರೂ ನಗುತ್ತಿದ್ರೆ, ಅಮ್ಮ ಕೇಳುತ್ತಿದ್ಲು "ಯಾರದು ಈ ವಾಣಿ?"


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ನನ್ನ ಬ್ಲಾಗ ಓದುಗರು ಯಾರಾದ್ರೂ ವಾಣಿ ಅಂತ ಇದ್ರೆ ದಯವಿಟ್ಟು ಕ್ಷಮಿಸಿ, ಈ ಪಾತ್ರಕ್ಕೆ ಇದಕ್ಕಿಂತ ಚೆಂದವಾದ ಹೆಸ್ರು ನನಗೆ ಸಿಕ್ಕಲಿಲ್ಲ, ಹಾಗೆ ಈ ಪಾತ್ರ ಕಾಲ್ಪನಿಕ, ಹಾಗಾಗಿ ಬೇಜಾರಾಗಬೇಕಿಲ್ಲ. ನಿಜ ಜೀವನದಲ್ಲಿ ಹೀಗೆ ಇಂಥ ಘಟನೆಗಳು ಇಷ್ಟು ಧೀರ್ಘಕ್ಕೆ ಹೋಗುತ್ತವೊ ಇಲ್ವೊ ಗೊತ್ತಿಲ್ಲ, ಆದರೆ ದುಡುಕಿ ಪಶ್ಚಾತ್ತಾಪ ಪಟ್ಟವರಿಗೆ ಒಂದು ಒಳ್ಳೆ ಮೆಸೇಜು ಕೊಡಲು ನನಗೆ ಇದಕ್ಕಿಂತ ಒಳ್ಳೆ ಕಥೆ ಹೆಣೆಯಲಾಗಲಿಲ್ಲ. ಬರೆದದ್ದೆಲ್ಲ ಸಂತೊಷ ಮತ್ತು ಸಂದೇಶಕ್ಕಾಗಿ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/vaani.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

28 comments:

Ittigecement said...

ಪ್ರಭು ...

ಎಷ್ಟು ಚಂದವಾಗಿ ಬರೆದಿದ್ದೀರಿ ಮಾರಾಯ್ರೆ....?..!!

ಸ್ವಲ್ಪ.. ಸ್ವಲ್ಪ ನಶೆಯೇರಿ....
ಸಣ್ಣದಾಗಿ ತೇಲಿ ಬರುವ ಸಂಗೀತದಲ್ಲಿ...
ಸಣ್ಣಬೆಳಕಿನ ಮೊಂಬತ್ತಿಯಲ್ಲಿ....
ರಸದೂಟ ಮಾಡಿದಂತಿದೆ....
ನಲ್ಲೆಯೊಡನೆ....ಏಕಾಂತದಲಿ...

ವಾಹ್...! ಪ್ರಭು ..
ಇದಕ್ಕಿಂತ ಹೆಚ್ಚಿಗೆ ಹೇಳಲು ನನ್ನ ಬಳಿ ಶಬ್ಧಗಳಿಲ್ಲ...

ಅಭಿನಂದನೆಗಳು...

Prabhuraj Moogi said...

ಸಿಮೆಂಟು ಮರಳಿನ ಮಧ್ಯೆ ಅವರಿಗೆ:
ಅಷ್ಟು ಚೆನ್ನಾಗಿತ್ತಾ, ಇತ್ತೀಚೆಗೆ ಬಹಳ ಏಕತಾನತೆ ಬಂದಿದೆ ನಿಮ್ಮ ಬರಹಕ್ಕೆ ಅಂತ ಯಾರೊ ಬರೆದಿದ್ದರು, ಅದಕ್ಕೆ ಹೊಸ ನಿರೂಪಣೆಯ ಪ್ರಯತ್ನ ಮಾಡುತ್ತಿದ್ದೆ, ಹೀಗೆ ಬ್ಲಾಗನ ಖಾಯಂ ಓದುಗರೊಬ್ಬರು ಮೂರನೆ ವ್ಯಕ್ತಿಯೊಂದಿಗೆ ಕತೆ ಬರೆಯಿರಿ ಅಂತ ಹೇಳಿದ್ದು ಇಷ್ಟವಾಗಿ ಪ್ರಯತ್ನಿಸಿದೆ, ನೀವು ಹೇಳಿದ್ದು ಕೇಳಿದರೆ ಅದು ನಿಜಕ್ಕೂ ವರ್ಕ ಆಗಿದೆ ಅನ್ಸತ್ತೆ.. ತುಂಬಾ ಧನ್ಯವಾದ ಸರ್ ಹೀಗೆ ಬರತಾ ಇರಿ.

Keshav.Kulkarni said...

ಕತೆಯ ಮಧ್ಯದಲ್ಲೇ ಸಸ್ಪೆನ್ಸ್ ಒಡೆದೋಯ್ತು. ಆದರೂ ಚೆನ್ನಾಗಿದೆ.

Prabhuraj Moogi said...

Keshav Kulkarni ಅವರಿಗೆ
ಸಸ್ಪೆನ್ಸ ಕಥೆ ಮಧ್ಯದಲ್ಲೇ ಒಡೆದುಹೋಗಲೇಬೇಕಿತ್ತು, ಇಲ್ಲಾಂದ್ರೆ ಕೊಡಬೇಕಾದ ಮೆಸೇಜ ಕೊಡೊಕೆ ಆಗ್ತಾ ಇರ್ಲಿಲ್ಲ, ಅಲ್ಲದೇ ಬರೆದ ಒಂದೊಂದು ಸಾಲುಗಳಿಗೂ ಅರ್ಥ್ ಕೊಡಬೇಕಿತ್ತು.

Nisha said...

ವಾವ್ ಪ್ರಭು, ನಿಮ್ಮ ಹೊಸ ಪ್ರಯತ್ನಕ್ಕೆ ೧೦೦ ಕ್ಕೆ ೧೦೦ ಅಂಕಗಳು ನಮ್ಮೆಲ್ಲರ ವತಿಯಿಂದ. ಸೊಗಸಾಗಿದೆ, ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ನಿಮ್ಮ ಕಲ್ಪನಾ ಶಕ್ತಿಗೆ ಹ್ಯಾಟ್ಸ್ ಆಫ್.

sunaath said...

ಪ್ರಭುರಾಜ,
ನಿಮ್ಮ ಲೇಖನಗಳಲ್ಲಿ ಏಕತಾನತೆ ಅನ್ನುವದೇ ಇಲ್ಲ. ಪ್ರತಿ ಲೇಖನದ ಥೀಮ್ ದಾಂಪತ್ಯದ ಸರಸವೇ ಆದರೂ ಸಹ, ಪ್ರತಿ ಸಾರಿಯೂ ಇದು ನವೀನವಾಗಿ ಹಾಗೂ ಸರಸವಾಗಿ ಇರುತ್ತದೆ. ಈ ಲೇಖನಕ್ಕೆ ಕಾರಣಳಾದ ನಿಮ್ಮ ವಾಣಿಗೆ ನನ್ನ ಅಭಿನಂದನೆಗಳು.

Prabhuraj Moogi said...

Nisha ಅವರಿಗೆ
ಪರೀಕ್ಷೆ ಬರೆದು ಪಾಸಾದಷ್ಟೆ ಖುಷಿ ನನಗಾಗಿದೆ, ಕುತೂಹಲ, ಕೌತುಕತೆ, ಕಲ್ಪನೆ, ಕೂಡಿ ಕಥೆಯಾಗಿದೆ...

sunaath ಅವರಿಗೆ
ಹೌದು ಸರ್ ನೀವು ಹೇಳಿದ್ದು ಕೇಳಿದ ಮೇಲೆ ನನಗೂ ಹಾಗೆ ಅನಿಸಿದೆ, ಥೀಮ ಮಾತ್ರ ನನ್ನಾಕೆ ನನ್ನ ಸಂಭಾಷಣೆ ಆದರೆ ವಿಷಯಗಳು ಬೇರೆ ಬೇರೆ... ನೀವು ಹೇಳಿದ ಮೇಲಂತೂ ಇನ್ನಷ್ಟು ಬರೆಯಲು ಸ್ಪೂರ್ಥಿ ಸಿಕ್ಕಿದೆ, ಮತ್ತೆ ನಮ್ಮಿಬ್ಬರ ಸಂಭಾಷಣೆಗೆ ಹೀಗೆ ಬರುತ್ತಿರಿ... ವಾಣಿ ನಿಮ್ಮ ಕಮೇಂಟು ನೋಡಿ ಖುಷಿಯಾಗಿ ಕಣ್ಣು ಪಿಳಿಕಿಸಿ, ಮತ್ತೆ ಮೆಲ್ಲನೆ ಮುಗುಳ್ನಕ್ಕಳು.

ಮನಸು said...

prabhu super!!!! hahaha

mattade kivimatinondige nimma lekhana bahaLa istavayitu.

thnx

Unknown said...

ದೂರ'ವಾಣಿ' ಹೆಸರು ಹೇಳಿ escape ಆಗ್ತಾ ಇದ್ದೀರಾ ಅನ್ಸ್ತಿದೆ . ಇರ್ಲಿ ಬಿಡಿ , ಈ ಹೆಂಗಸರ ಕೈಯಿಂದ ಏನಾದ್ರು ಹೇಳಿ ಬಚಾವ್ ಆದ್ರೆ ಸಾಕು.

Nice article. Very funny.

Veena DhanuGowda said...

Ahaaaa yen talent ri nimdhu
"vani" & dhura"vani", mast ide.....
intade yeno iruthe anta expect madi nanu koneya para modlu odi amele purthi odde
ha ha ha chennagide....
nimma sreemathi ge nijja thilide idire olle pooje agthitu misss madkondri :)

ಶಿವಪ್ರಕಾಶ್ said...

ha ha ha...
channagide prabhu..

Unknown said...

nimma prayogakke naanu 100 kke 100 a0ka koDuttEne. yaavaagina haage sogasaada baraha. modalaardavannu Oduttiddaaga nimma patniya0te(kalpaneya patni)
ellaa puruSharige shaapa haakuttaa Oduttidde. konege naanu nimma patni haagu taayiya0te bestu bidde. .. :-) :-)
nimma I posTanalli nimma taayiyannu taruva prayatna yasviyaagide. yaavaagalu Odugarige o0du nirIkShe mu0dina lEKana Enirabahudu e0du .. aadare I sala namage nIvu suLivannu nIDiddiri. "mu0dina ka0tinalli atte soseyara madhya nanna kaarubaaru e0du" ...... UhisuttiddEne .. :-) :-) namage gottaayitu e0du badalaayisuttiraadare namage tiLisi .. :-) :-) :-)

ಸಾಗರದಾಚೆಯ ಇಂಚರ said...

ಪ್ರಭು,
ತುಂಬಾ ಚೆನ್ನಾಗಿ ಇದೇರಿ,
ಕಥೆ ಚೆನ್ನಾಗಿ ಕಟ್ಟುತ್ತಿರ,
ಬೇಗನೆ ನಿಮ್ಮ ಬಾಳಿಗೂ ಒಂದು ವಾಣಿ ಬರಲಿ, ಅಗ್ಲದ್ರೂ ದೂರವಾಣಿಯಿಂದ ದೂರ ಹೋಗ್ತೀರಾ ನೋಡೋಣಾ,
ಒಳ್ಳೆಯ ಬರಹ

Prabhuraj Moogi said...

ಮನಸು ಅವರಿಗೆ:
ಒಹ್ ರಜೆಯಲ್ಲೂ ಸಮಯ ಬಿಡುವು ಮಾಡಿಕೊಂಡು ನನ್ನ ಬ್ಲಾಗ್ಗೆ ಬಂದಿದ್ದಕ್ಕೆ ಮೊದಲು ಅನಂತ ಧನ್ಯವಾದಗಳು. ತಮ್ಮ ಪ್ರೋತ್ಸಾಹ ಹೀಗೆ ಇದ್ದರೆ, ಲೇಖನ... ಕಿವಿಮಾತು... ಹೀಗೆ ಇರುತ್ತದೆ. ಬರುತ್ತಿರಿ..

Rajesh ಅವರಿಗೆ :
ದೂರವಾಣಿ ನಿಜಾನೆ ಸರ್ ಸುಳ್ಳು ಯಾಕೆ ಹೇಳಲಿ, ಬಚಾವಾಗುವ ಯೋಚನೆ ಏನಾದರೂ ತಪ್ಪು ಮಾಡಿದ್ರೆ ತಾನೇ..

ಪ್ರೀತಿಯಿ೦ದ ವೀಣಾ :) ಅವರಿಗೆ
ಒಹ್ ಮೊದಲೇ ಕೊನೆ ಪ್ಯಾರಾ ಓದಿದಿರಾ ನನಗಿಂತ ಇಂಟಲಿಜೆಂಟ ಕಣ್ರೀ ನೀವು, ಇನ್ನೂ ಸ್ವಲ್ಪ್ ಕಾದಿಸೋಣ ಅಂತಿದ್ದೆ ಆದ್ರೆ ಪೂಜೆ ಆಗೋ ಭಯ ನಂಗೂ ಆಯ್ತು ಅದಕ್ಕೆ ಬೇಗ ಹೇಳಿಬಿಟ್ಟೆ.

ಶಿವಪ್ರಕಾಶ್ ಅವರಿಗೆ
ಥ್ಯಾಂಕ್ಸ್ ಹೀಗೆ ಬರ್ತಾ ಇರಿ..

roopa ಅವರಿಗೆ
ಇಲ್ಲಿಗೆ ನೂರಕ್ಕೆ ಇನ್ನೂರು ಅಂಕ ಬಂದ ಹಾಗಾಯಿತು(ನಿಶಾ ಅವರದೂ ಸೇರಿಸಿ), ಮುಂದಿನ ಲೇಖನ ಏನಿರಬಹುದು ಅಂತ ನೀವು ಗೆಸ್ ಮಾಡಿದಂತೆ ನಾನೂ ಕೂಡ ಮಾಡುತ್ತಿರಲೇಬೇಕು, ನಾನೂ ಗೊತ್ತಿರಲ್ಲ ಏನು ಬರೀತೀನಿ ಅಂತ, ಬರೆಯೋವಾಗಲೇ ಏನಾದರೂ ನಿರ್ದರಿಸಿ ಬರೆಯಲು ಶುರುವಿಟ್ಟುಕೊಂಡರೆ ಅದೇ ಲೇಖನವಾಗುತ್ತದೆ ಅಷ್ಟೇ... ನಾನೂ ಬರೆಯಬೇಕೆಂದರೆ ಈ ಅತ್ತೆ ಸೊಸೆ ಜಗಳ ಆಡುವುದಿಲ್ಲವೇ ಏನು ಮಾಡಲಿ. ಮುಂದಿನ ವಾರ ಏನು ಬರೆಯುತ್ತೀನೋ ನನಗೂ ಗೊತ್ತಿಲ್ಲ ...

ಸಾಗರದಾಚೆಯ ಇಂಚರ ಅವರಿಗೆ
ನನ್ನದೇ ನನ್ನಾಕೆಯ ಒಂದು ವಾಣಿ(ದನಿ) ಬಂದರೆ ದೂರವಾಣಿ ದೂರವಾಗುತ್ತೀನೋ ಏನೋ ನೀವಂದಂತೆ ಆದರೆ ಕಲ್ಪನೆ ಮಾತ್ರ ನಿಲ್ಲಲಿಕ್ಕಿಲ್ಲ.

ಸಂದೀಪ್ ಕಾಮತ್ said...

ತುಂಬಾ ಚೆನ್ನಾಗಿದೆ ಪ್ರಭು:)

Prabhuraj Moogi said...

ಸಂದೀಪ್ ಕಾಮತ್ ಅವರಿಗೆ
ತುಂಬಾ ಧನ್ಯವಾದ ಸಂದೀಪ್ ಸರ್, ಹೀಗೇ ಬರ್ತಾ ಇರಿ..

ಗೀತಾ ಗಣಪತಿ said...

ಪ್ರಭು,
ನಿಮ್ಮ ಎಲ್ಲ ಪೋಸ್ಟ್ಸ್ ಓದಿದ್ದೇನೆ..ಪ್ರತಿಯೊಂದು ಸಹ ಓದಿ ಮುಗಿಸೋ ಹೊತ್ತಿಗೆ 'so sweet, so cute' ಅನ್ನಿಸೋ ಹಾಗಿರುತ್ತೆ. ತುಂಬಾ ಚೆನ್ನಾಗಿ ಬರೀತೀರ..ದಯವಿಟ್ಟು ಹೀಗೆ ಬರೀತಾ ಇರಿ. ಹಾಗೆ ನಿಮಗೆ ಇಂಥವಳೇ ಸಂಗಾತಿಯಾಗಿ ಬರಲೆಂದು ನನ್ನ ಹಾರೈಕೆ :)

Prabhuraj Moogi said...

ಗೀತಾ ಗಣಪತಿ ಅವರಿಗೆ
ಒಹ್ ಎಲ್ಲ ಪೋಸ್ಟ್ ಓದಿದಿರಾ, ನನ್ನ ಬ್ಲಾಗ್ ಗೆ ಅಷ್ಟು ಸಮಯ ಮೀಸಲಿರಿಸಿದ್ದಕ್ಕೆ ತುಂಬಾ ಧನ್ಯವಾದಗಳು, ಅಂತದೆ ಸತಿ ಸಿಗುವಳೋ ಇಲ್ವೋ ಗೊತ್ತಿಲ್ಲಾ ಆದರೂ ನಿಮ್ಮ ಹಾರೈಕೆ ನಿಜವಾದ್ರೆ ನನಗೂ ಖುಷಿ, ಹೀಗೆ ಬರ್ತಾ ಇರಿ..

ಬಾಲು said...

ನಾನು ನೂರು ಕೊಡುತ್ತಾ ಇದ್ದೇನೆ, ನೂರಕ್ಕೆ ಮುನ್ನೂರು ಆಯಿತು!! :)

ಚೆನ್ನಾಗಿ ಕಥೆ ಹಣೆದಿದ್ದಿರಿ. ಸುಲಲಿತ ವಾಗಿ ಓದಿಸಿಕೊಂಡು ಹೋಗುತ್ತದೆ.

ನೀತಿ ಇದೆ, ಸ್ವಲ್ಪ ಸಸ್ಪೆನ್ಸ್ ಇದೆ, ಕಥೇಲಿ ಸಡನ್ ತಿರುವು ಇದೆ. ಎಲ್ಲಕಿಂತ ಮುಖ್ಯವಾಗಿ ಓದುಗರಿಗೆ ಒಳ್ಳೆಯ ಅನುಭೂತಿ ಸಿಕ್ಕಿದೆ.

Anonymous said...

ಮಸ್ತ ಬರದಿರಿ,

ನಿಮ್ಮೂ ಎಲ್ಲಾ ಲೇಖನಗಳನ್ನು ಓದಿ ಮುಗಿಸಿದೆ, ಛಲೋ ಬರಿದಿರಿ, ಎಲ್ಲಾ ಒಂದಕ್ಕಿಂತ ಒಂದು ಮಸ್ತ...

ಪ್ರೀತಿಯಿರಲಿ
ಶೆಟ್ಟರು

shivu.k said...

ಪ್ರಭು,

ಲೇಖನ ತುಂಬಾ ಚೆನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ...ಮದ್ಯದಲ್ಲೇ ಸಸ್ಪೆನ್ಸ್ ಓಪೆನ್ ಆಗಬಾರದಿತ್ತು...ಕೊನೆಯವರೆಗೆ ಇದ್ದಿದ್ದರೇ ಇನ್ನಷ್ಟು ಕಾತುರದಿಂದ ಓದಿಸಿಕೊಂಡು ಹೋಗುತ್ತಿತ್ತು ಅನ್ನುವುದು ನನ್ನ ಭಾವನೆ..ಆದ್ರೂ ನೀವು ಬರೆಯುವ ದಾಂಪತ್ಯ ವಿಚಾರಕ್ಕೇಕೆ ಸಸ್ಪೆನ್ಸ್ ಅಲ್ವಾ...

ವಿನುತ said...

ಸಸ್ಪೆನ್ಸ್ ಇರ್ಲಿಲ್ಲ (ಬಹುಶ: ಐ ಟಿ ಜಗತ್ತಿನ ಕೊಡುಗೆ ಅ೦ತ ಕಾಣತ್ತೆ :( ). ಆದ್ರೆ ನೀವು ಏನು ಹೇಳ್ತಿರ ಅನ್ನುವ ಕುತೂಹಲ ಇತ್ತು. ಚೆನ್ನಾಗಿ ಬರೆದಿದ್ದೀರಿ.

Prabhuraj Moogi said...

ಬಾಲು ಅವರಿಗೆ
ಒಟ್ಟು ಮುನ್ನೂರು ಆಯ್ತು, ಅಂತೂ ಖುಷಿಯಾಯ್ತು.. ನೀತಿ ಪಾಠ ಯಾವಗಲೂ ಇರತ್ತೆ ಸ್ವಲ್ಪ್ ಸಸ್ಪೆನ್ಸ ಬರೆಯಲು ಟ್ರೈ ಮಾಡಿದೆ..

somekanasu ಅವರಿಗೆ
ಎಲ್ಲ ಪೋಸ್ಟ್ ಓದಿದಿರಾ, ನನ್ನ ಬ್ಲಾಗ್ ಗೆ ಅಷ್ಟು ಸಮಯ ಮೀಸಲಿರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.. ಏನೋ ವಾರಕ್ಕೊಂದು ವಿಷಯದ ಬಗ್ಗೆ ಬರೀತೀನಿ... ಹೀಗೆ ಬರ್ತಾ ಇರಿ...

shivu ಅವರಿಗೆ
ಮಧ್ಯದಲ್ಲೇ ಸಸ್ಪೆನ್ಸ್ ಓಪೆನ್ ಮಾಡ ಬಾರದಿತ್ತು ಆದ್ರೆ ಮೆಸೇಜ್ ಕೊಡೋಕೆ ಆಗ್ತಿರಲಿಲ್ಲ ಅಂತ ಹಾಗೆ ಮಾಡಿದೆ.. ದಾಂಪತ್ಯಕ್ಕೆ ಸಸ್ಪೆನ್ಸ್ ಬೇಕಿಲ್ಲ ಅದೂ ಸರಿ... ಸಸ್ಪೆನ್ಸ ಕೊನೆವರೆಗೂ ಇಟ್ಟಿದ್ರೂ ವೀಣಾ (ಮೇಲೆ ಕಮೆಂಟ ಕೊಟ್ಟೇದಾರೆ)ಅವರು ಮಾತ್ರ ಮೊದಲು ಕೊನೆ ಸಾಲು ಓದುತ್ತಿದ್ದರಿಂದ ಅವರಿಗಂತೂ ಸಸ್ಪೆನ್ಸ ಗೊತ್ತಾಗಿಬಿಟ್ಟಿರೋದು :)

ವಿನುತ ಅವರಿಗೆ
ಒಳ್ಳೆ ಗೆಸ್ಸ್ ಮಾಡೀದೀರಾ, ವಾಣಿ ಅಂತ ಹೆಸರಿಟ್ಟಾಗಲೇ ಒಂದು ಸುಳಿವು ಕೊಟ್ಟಿದ್ದೆ, ಇನ್ನು ಮಾತು ದನಿ ಅನ್ನೋವಾಗ ಇನ್ನೂ ಹಲವು ಸುಳಿವು ಬಿಟ್ಟು ಕೊಟ್ಟಿದ್ದೆ..

ನವೀನ್ said...

too good yaar..............i like it very much.

naveen

Raghavendra said...

ಸೂಪರ್ .. ಪ್ರಯತ್ನಕ್ಕೆ ಫಲ ದೊರಕಿತಿದೆ... ನಿಜಕ್ಕೂ ತುಂಬಾ ಚೆನ್ನಾಗಿ ಬರೆದಿದಿರಾ ೧೦೦/೧೦೦ :)
ನಿಮ್ಮ ಹುಡ್ಗೀರ್ ಲಿಸ್ಟ್ ಅಲ್ಲಿ ವಾಣಿ ಒಬ್ಬಳು ಸೇರ್ಕೊಂಡ್ ಹಾಗೈತು .. ವಾಣಿ, ಪಕ್ಕದ ಮನೆ ಪದ್ದು, ಹಾಲ ಕೊಡು ಹಾಸಿನಿ . ಹೆಸರ ಚೆನ್ನಾಗಿ ಇಡ್ತಿರ.. ಕಥೇಲಿ ಸಸ್ಪೆನ್ಸ್ 'ಬೆಳದಿಂಗಳ ಬಾಲೆ' ತರಹ ಬೆಲ್ಕೊಂಡ್ ಹೋಗಿದೆ..
ಹೀಗೆ ಬರಿತಾ ಇರಿ

ರಘು

Prabhuraj Moogi said...

ನನ್ನ ಹೆಸರು ನವೀನ್ ಅವರಿಗೆ
ಥ್ಯಾಂಕ್ಸ ನವೀನ್ ಹೀಗೆ ಬರ್ತಾ ಇರಿ

Raghavendra ಅವರಿಗೆ
ಒಟ್ಟು ನಾಲ್ಕು ನೂರು ಅಂಕಗಳಾಯಿತು! ಅದೂ ಸರಿ ನಮ್ಮ ಕಲ್ಪನೆ ಲೋಕಕ್ಕೆ ಇನ್ನೊಂದು ಪಾತ್ರ ಸೇರಿಕೆ ಆಯ್ತು... ಬರ್ತಾ ಇರಿ.

Shridhar B said...

Lo prabhu I really really liked this one man.. Hey.. I gave ur previous article to my GF.. She is quite happy with it after reading.. I will give this onr also..
Keep writing....
All the Best

Prabhuraj Moogi said...

TO: Shridhar B
Thanks Shridhar, Sure you can give a full Collection it self, you can get it from my site at Nannaake