"ರೀ ರವಿವಾರ ಅಲ್ಲ ಇಂದು, ರವಿ ಕಣ್ಣು ಬಿಡೊವರೆಗೆ ಅಂತ ಕಾಯ್ತಾ ಮಲಗೋಕೇ, ಸೋಮವಾರ ಆಫೀಸಿಗೆ ಹೊಗ್ಬೇಕು ಎದ್ದೇಳೀ" ಇದು ನಾಲ್ಕನೇ ಸಾರಿ ಏಳಿಸಿರಬೇಕು ಅವಳು, ಇನ್ನು ಏಳಿಸಲ್ಲ ಏಳೊ ಹಾಗೆ ಮಾಡ್ತಾಳೆ ಅಷ್ಟೇ, ಅಲ್ಲೇ ಮಲಗಿದಲ್ಲೇ "ಆಫೀಸಿಗೆ ಹೋಗಿಯಾದ್ರೂ ಯಾವ ಘನ ಕಾರ್ಯ ಮಾಡಬೇಕಿದೆ, ಮಲಗಲು ಬಿಡೆ, ಬೆಂಚಗೆ ಹಾಕೀದಾರೆ" ಅಂತಂದೆ. "ಅಯ್ಯೊ ರೆಸೆಷನ್ ಅಂತ ಹೀಗಾ ಮಾಡೊದು, ಕಾಸ್ಟ್ ಕಟಿಂಗ ಅಂತಾ ಇರೊ ಚೇರು ಕಿತ್ಕೊಳ್ಳೊದಾ?" ಅಂದ್ಲು, "ಕೆಲ್ಸ ಇದ್ರೆ ಸರಿ ತಲೇ ಮೇಲೆ ಬೇಕಾದ್ರೂ ಕೂರಿಸಿಕೊಳ್ಳೋರು, ಇಲ್ಲಾಂದ್ರೆ ನೆಲದ ಮೇಲೂ ಕೂರಿಸ್ತಾರೆ, ಏನ್ ಮಾಡ್ತೀಯ" ಅಂತ ಅಲವತ್ತುಕೊಂಡೆ. "ಸರಿ ಬೆಂಚು, ಅಂದ್ರೆ ಕುಷನ ಇರೊ ಮೆತ್ತನೆ ಚೇರಿಲ್ಲ ಅಂತ, ಮನೇಲಿ ಹೀಗೆ ಮಲಗೋಕಾಗುತ್ತಾ, ಎದ್ದೇಳ್ರೀ" ಅಂತ ದನಿಯೇರಿಸಿದಳು. "ಲೇ, ಬೆಂಚ ಅಂದ್ರೆ ನಿಜವಾದ ಬೆಂಚ್ ಅಲ್ಲ, ಯಾವುದೇ ಪ್ರೊಜೆಕ್ಟ್ ಕೆಲಸ ಇಲ್ಲದೇ ಹಾಗೇ ಕೂರಿಸಿರೋದು, ಮತ್ತೊಂದು ಪ್ರೊಜೆಕ್ಟು ಬರೊವರೆಗೆ ಕಾಯ್ರಿ ಅಂತ" ಬೆಂಚಿನಲ್ಲಿ ಕೂತ ಸಿಟ್ಟಿನಲ್ಲಿ ಘರ್ಜಿಸಿದೆ. "ಒಹೋ ಹಾಗಾ, ನನಗೇನ್ರಿ ಗೊತ್ತಾಗಬೇಕು, ಬೆಂಚ್ ಅಂದ್ರೆ ಮರದ ಕಟ್ಟಿಗೇಲಿ ಮಾಡಿರೋ ಸ್ಟೂಲು ಅನ್ಕೊಂಡಿದ್ದೆ, ಮ್... ಈ ಕ್ಲಿನಿಕನಲ್ಲಿ ಡಾಕ್ಟ್ರು ಬರೊವರೆಗೆ ಕಾಯ್ರಿ ಅಂತ ಬೆಂಚ್ ಹಾಕಿ ಕ್ಯೂನಲ್ಲಿ ಕೂರಿಸಿರ್ತಾರಲ್ಲ ಹಾಗನ್ನಿ" ಅಂದ್ಲು "ಹಾಂ... ಅದೇ ನರ್ಸು, ನರ್ಗೀಸು ಯಾವಾಗ ಬರತಾಳೆ ಅಂತ..." ಅಂತಿದ್ದಂಗೆ ಮಧ್ಯದಲ್ಲಿ "ಮ್, ಯಾವಗ ಬರ್ತಾಳೇ, ಯಾವ ಇಂಜೆಕ್ಷನ್ ಕೊಡ್ತಾಳೆ ಅಂತ ಕಾಯ್ತೀರಲ್ಲ, ಹಾಗಲ್ವಾ" ಅಂತ ರೇಗಿಸಿದಳು. "ಅದೂ ಸರಿನೇ ಯಾವ ಪ್ರೊಜೆಕ್ಟ ಬರತ್ತೆ ಏನ್ ತಲೆನೋವು ತರತ್ತೆ ಅಂತಾನೇ ಕಾಯ್ತೀವಿ" ಅಂದೆ. "ಸರಿ ಈವತ್ತು ಲೇಟಾಗಿ ಹೋಗ್ತೀರ ಹಾಗಿದ್ರೆ" ಅಂತ ಅಲ್ಲಿಗೆ ಬಂದಳು, "ಬೇಡ ಅಂದ್ರೆ ಹೋಗೋದೂ ಇಲ್ಲ" ಅಂದೆ. "ಹೋಗದಿದ್ರೆ ಅಷ್ಟೇ, ಹೊರಗೆ ಬೆಂಚು ಹಾಕಿ, ವಾಚಮನ್ ಮಾಡಿ ಆಫೀಸಾದ್ರೂ ಕಾಯು ಅಂತಾರೆ" ಅಂದ್ಲು. ಮೊದಲೇ ರಿಸೇಷನ್ ಎಲ್ಲಿ ಹಾಗೇ ಮಾಡಿಯಾರು ಅಂತ ಮೇಲೆದ್ದೆ.
ಸ್ನಾನ ಮಾಡಿ ಬರ್ತಿದ್ದಂಗೆ, ಬಿಸಿ ಬಿಸಿ ಉಪ್ಪಿಟ್ಟು(ಉಪಮಾ, ಖಾರಾಭಾತ್, ಕಾಂಕ್ರೀಟು!) ಮಾಡಿದ್ಲು. ರುಚಿಯಾಗಿತ್ತು, ಇನ್ನಷ್ಟು ಹಾಕು ಅಂದ್ರೆ "ಗಡದ್ದಾಗಿ ತಿಂದ್ರೆ ಅಷ್ಟೇ ಮೊದ್ಲೇ ಕೆಲ್ಸ ಇಲ್ಲ ಅಂತೀದೀರ ನಿದ್ರೆ ಬರತ್ತೆ ಸಾಕು" ಅಂದ್ಲು, ಆಸೆಗಣ್ಣಿಂದ ಇನ್ನೊಮ್ಮೆ ನೋಡಿದ್ದಕ್ಕೆ ಮತ್ತೆ ಕೇಳಿದ್ದಕ್ಕಿಂತ ಜಾಸ್ತಿಯೇ ಬಡಿಸಿದಳು. "ಬೆಂಚ್ ಮೇಲೆ ಅಂದ್ರೆ ಏನ್ರೀ ಮಾಡಿತೀರಾ ಆಫೀಸಲ್ಲಿ" ಅಂತ ಮತ್ತೆ ಮಾತಿಗಿಳಿದಳು "ಆಂ, ಬೆಂಚ್ ಮೇಲೆ ಕೂತು ಬೆಂಚ್ ಬಿಸಿ ಮಾಡ್ತೀವಿ ಕೋಳಿ ಮೊಟ್ಟೆಗೆ ಕಾವು ಕೊಟ್ಟ ಹಾಗೆ." ಅಂತಂದರೆ, ನಗುತ್ತ "ರೀ ನಿಜ ಹೇಳ್ರೀ ಏನ್ ಮಾಡ್ತೀರಾ" ಅಂದ್ಲು. "ಎನ್ ಮಾಡೋದು ಅಂದ್ರೆ, ಇರೋಬರ್ಒ ಎಲ್ಲ ಈಮೈಲ ಐಡಿ ಎಲ್ಲ ನೆನಪು ಮಾಡಿ ಮಾಡಿಕೊಂಡು ಇಪ್ಪತ್ತು ಸಾರಿ ತೆಗೆದುನೋಡೋದು, ಎಲ್ಲ ಆನಲೈನ್ ಪೇಪರು ಮೂಲೇ ಮೂಲೆ ಕೂಡ ಬಿಡದೇ ಓದಿ, ಎರಡು ಗೇಮು ಆಡಿ, ಟೀಗೆ ಅಂತ ಹೋಗಿ ತಾಸು ಹರಟೆ ಹೊಡೆದು, ಮತ್ತೆ ಬಂದು ಕೂತು ಬೆಂಚ್ ಬಿಸಿ ಮಾಡೋದು" ಅಂದೆ, "ಇದೆಲ್ಲ ಮಾಡೋಕೆ ನಿಮಗೆ ಕಂಪನಿ ಸಂಬಳ ಕೊಡಬೇಕು" ಅಂದ್ಲು, "ಯಾಕೆ ಇಷ್ಟು ದಿನ ಕತ್ತೆ ಥರ ಕೆಲಸಾ ಮಾಡಿಲ್ವಾ, ಸ್ಟವ ಮೇಲೆ ಕಟ್ಟಿ ಕೂರಿಸಿ, ಮಾಡು ಮಾಡು ಅಂತ ನಾಲ್ಕು ಜನರ ಕೆಲಸ ಒಬ್ಬನ ಕೈಲಿ ಮಾಡಿಸಿ, ಅವರು ಕಂತೆ ಕಂತೆ ದುಡ್ಡು ಎಣಿಸಿಲ್ವಾ" ಅಂದೆ, "ಅದೂ ಸರಿಯೇ, ಮುಂಜಾನೆ ಏಳಕ್ಕೆ ಹೋದ್ರೆ, ರಾತ್ರಿ ಏಳಕ್ಕೆ ಮರಳಿ ಹೊರಟರೆ ಹಾಫ್ ಡೇನಾ ಅಂತ ಕೇಳಿದ್ದ ಬಗ್ಗೆ ಹೇಳಿದ್ರಲ್ಲ" ಅಂತ ಮರುಕಪಟ್ಟಳು. "ನಮ್ಮ ಕೆಲಸಾನೇ ಹಾಗೇ ಇದ್ರೆ ರಾಶಿ ರಾಶಿ ಇರತ್ತೆ, ಇಲ್ಲಾಂದ್ರೆ ಏನೂ ಇಲ್ಲ" ಅಂದೆ. "ಅಲ್ಲ ನಿಮ್ಮನ್ನ ಹೀಗೆ ಖಾಲಿ ಕೂರಿಸಿ ಸಂಬಳ ಕೊಟ್ರೆ ಅವರಿಗೇನು ಲಾಭ" ಮರುಪ್ರಶ್ನಿಸಿದಳು "ಈ ಕಂಪನಿಗಳು ಯಾವಗ್ಲೂ ಎಂಬತ್ತು ಪರ್ಸೆಂಟು ಮಾತ್ರ ಕೆಲಸಗಾರರು ಕಾರ್ಯನಿರತಾಗಿರುವ ಹಾಗೇ ನೋಡಿಕೋತಾರೆ, ಉಳಿದವರು ಹೊಸ ಕೆಲಸ ಬರ್ತಿದ್ದಂಗೆ ಇರಲಿ ಅಂತ ಇಟ್ಕೊತಾರೆ. ಅಲ್ಲೀವರೆಗೆ, ಯಾವುದೊ ಒಂದು ಟ್ರೇನಿಂಗ ಇಲ್ಲ ಕೆಲ್ಸಕ್ಕೆ ಬಾರದ ಪ್ರೊಜೆಕ್ಟು ಕೊಟ್ಟು ಕೂರಿಸಿರ್ತಾರೆ" ಅಂದೆ. "ಹೂಂ ಮತ್ತೆ ಎಷ್ಟು ದಿನಾ ಹೀಗೆ", "ಬಹಳ ದಿನ ಏನೂ ಇರಲ್ಲ, ತಿಂಗಳುಗಟ್ಟಲೇ ಕೂತವರೂ ಇದ್ದಾರೆ ಆದ್ರೂ, ಬಹಳ ದಿನ ಆದ್ರೆ ಕಿತ್ತು ಹಾಕ್ತಾರೆ, ಇಲ್ಲ ಅವರೇ ಯಾವುದೊ ಹೊಸ ಕೆಲಸ ನೋಡಿಕೊಂಡು ಹೊರಟು ಬಿಡುತ್ತಾರೆ" ಅಂತನ್ನುತ್ತ ಟೀ ಎಲ್ಲಿ ಅಂದೆ, "ಕೆಲಸ ಇಲ್ಲ ಅಂದ್ರೆ ಆಫೀಸಲ್ಲೇ ಹತ್ತು ಸಾರಿ ಟೀಗೆ ಹೋಗ್ತೀರ ನನಗೆ ಗೊತ್ತು, ಅಲ್ಲೇ ಕುಡಿಯಹೋಗಿ" ಅಂತಂದ್ಲು "ಮ್... ಟೀ ಸಿಗರೇಟು ಅಂತ ನಾಲ್ಕಾರು ಸಾರಿ ಒಡಾಡಿದರೆ ಟೈಮ್ ಪಾಸ್ ಆಗತ್ತೆ ಬಿಡು" ಅಂದೆ, "ರೀ, ಸಿಗರೇಟಾ... ಅದೇನಾದ್ರೂ ಶುರು ಮಾಡಿಕೊಂಡ್ರೆ ಅಷ್ಟೇ ಮನೆ ದಾರೀನ ಮರೆತುಬಿಡಿ, ಮನೆಗೆ ಸೇರಿಸೋದೇ ಇಲ್ಲ" ಅಂತ ಎಚ್ಚರಿಕೆ ಕೊಟ್ಲು. "ಬೇರೆಯವರ ಜತೆ ಹಾಗೇ ಸುಮ್ನೆ ಹೋಗ್ತೀನಿ ಅಷ್ಟೇ" ಅಂದೆ. "ಹಾಗೆ ಸುಮ್ನೇನೆ ವಾಪಸ್ಸು ಬರಬೇಕು" ಅಂತ ಅಪ್ಪಣೆಯಾಯಿತು.
ಇನ್ನೇನು ಹೊರಡಬೇಕು ಅಂತಿದ್ದರೆ "ಹೇಗೂ ಖಾಲಿ ಅಲ್ವಾ, ನನ್ನ ಸ್ವಲ್ಪ ಮಾರ್ಕೆಟವರೆಗೆ ಡ್ರಾಪ್ ಮಾಡಿ ಹೋಗ್ರೀ" ಅಂದ್ಲು ಇದೊಳ್ಳೆ ಹೇಳಿದ್ದೆ ತಪ್ಪಾಯಿತಲ್ಲ, ಏನೊ ಸ್ವಲ್ಪ ಕೆಲಸ ಇಲ್ಲ ಅಂತಂದರೆ ಇವಳು ಬೇರೆ ಏನೂ ಇಲ್ಲವೇನೊ ಅನ್ನೊ ಹಾಗೆ ಮಾಡ್ತಿದಾಳೆ, ಇರಲಿ ಅಂತ ಅವಳ ಕರೆದೊಯ್ದು, ಮಾರ್ಕೆಟನಲ್ಲಿ ಇಳಿಸಿದರೆ, "ಇನ್ನೊಂದು ಸ್ವಲ್ಪ ಕಾಯ್ದರೆ, ತರಕಾರಿ ತೆಗೆದುಕೊಂಡು ಬಂದು ಬಿಡ್ತೀನಿ ಮತ್ತೆ ನನ್ನ ಮನೆಗೆ ಡ್ರಾಪ್ ಮಾಡಿ ಹೊರಡಬಹುದಲ್ಲ" ಅಂದ್ಲು "ಅದೊ ಅಲ್ಲಿ ನೋಡು ಅವಕ್ಕೆ ಆಟೊ ಅಂತಾರೆ ಅದನ್ನ ತೆಗೆದುಕೊಂಡು ಮನೆಗೆ ಹೋಗಬಹುದು" ಅಂತ ಅಲ್ಲಿರುವ ಅಟೊಗಳತ್ತ ಕೈಮಾಡಿ ಅಂದರೆ ನಗುತ್ತ ಸಂತೆಯಲ್ಲಿ ಮಾಯವಾದಳು...
ಲೇಟಾಗಿ ಹೊರಟದ್ದರಿಂದ ಟ್ರಾಫಿಕ್ಕಿನಲ್ಲಿ ಸಿಕ್ಕು ಆಫೀಸು ತಲುಪುವಲ್ಲಿ ಸಾಕು ಸಾಕಾಗಿ ಹೋಗಿತ್ತು, ಆಗಲೇ ನನ್ನ ಬೆಂಚುಮೇಟುಗಳು(ಈ ಕ್ಲಾಸಮೇಟಗಳ ಹಾಗೆ) ಬಂದು ಬಿಸಿ ಟೀ ಹೀರಲು ಹೋಗಿದ್ದರು ನಾನೂ ಸೀದ ಅಲ್ಲಿಗೇ ಹೋದೆ, ನಾನು ಬಂದದ್ದು ನೋಡಿ ಅವರಿಗೂ ಖುಷಿ, ಇವನೊಂದಿಗೆ ಇನ್ನಷ್ಟು ಹೊತ್ತು ಹರಟೆ ಹೊಡೆದರಾಯ್ತು ಅಂತ. ಮನೇಲಿರೊ ಹೆಂಡತಿಯಿಂದ ಹಿಡಿದು ದಾರಿಯಲ್ಲಿ ಕಾಣುವ ದಾರಿಹೋಕರ ತನಕ ಯಾವುದನ್ನೂ ಬಿಡದೇ ಎಲ್ಲದರ ಬಗ್ಗೆ ಮಾತಾಡಿ ಆಯ್ತು. ಮತ್ತೆ ಬಂದು ಬೆಂಚಿನಲ್ಲಿ ಸಾರಿ... ಚೇರಿನಲ್ಲಿ ಕೂತವರು ಇರೊಬರೊ ಸೈಟುಗಳನ್ನೆಲ್ಲ ತೆಗೆದು ನೋಡಿ ಇಂಟರನೆಟ್ಟಿನಲ್ಲೂ ದಟ್ಟಣೆ ಜಾಸ್ತಿಯಾದಮೇಲೆ ಮುಂದೇನು?... ಅನ್ನುವ ಪ್ರಶ್ನೆ ಎದ್ದಿತು. ಕೆಲವರು ಮೊದಲೇ ತಂದಿದ್ದ ಟಿ.ಟಿ ಬ್ಯಾಟಗಳನ್ನು ತೆಗೆದುಕೊಂಡು ಸ್ಪೋರ್ಟ್ಸ್ ರೂಮಿಗೆ ನುಗ್ಗಿದರೆ, ಶಾಲೇ ಆಟದ ಪಿರಿಯಡನಲ್ಲೇ ಆಡದವ ಇಲ್ಲೇನು ಆಟ ಆಡಿಯೇನು ಅಂತ, ಇವಳೇನು ಮಾಡುತ್ತಿದ್ದಾಳೆ ಅಂತ ನೋಡಲು ರಿಂಗಣಿಸಿದೆ. ಆಕಡೆಯಿಂದ ಉತ್ತರವೇ ಇಲ್ಲ, ಮತ್ತೆರಡು ಸಾರಿ ಫೋನು ಮಾಡಿದ ಮೇಲೆ ಸಿಕ್ಕಳು "ಏನ್ರೀ" ಅಂದ್ಲು, "ಎಷ್ಟು ಸಾರಿ ಫೋನು ಮಾಡಿದರೂ ಸಿಕ್ತಿಲ್ಲ ಏನ್ ಮಾಡ್ತಾ ಇದ್ದೆ" ಅಂದೆ "ನಿಮ್ಮಂಗೆ ಎನು ಬೆಂಚಮೇಲೆ ಇದೀನಾ, ಮನೇ ಕೆಲಸ ಇತ್ತು ಮಾಡ್ತಾ ಇದ್ದೆ" ಅಂತ ಕಿಚಾಯಿಸಿದಳು, "ಕೆಲಸ ಇದ್ರೆ ಮಾಡಬಹುದು ಇಲ್ಲ ಅಂದ್ರೆ ಸುಮ್ನೆ ಕೂರೋದಂದ್ರೆ ಸುಮ್ನೇನಾ" ಅಂದೆ. "ಬನ್ನಿ ಮನೆಗೆ ಹಾಗಿದ್ರೆ, ಸೊಪ್ಪು ಕತ್ತರಿಸಿ ಕೊಡುವಿರಂತೆ ನನಗೆ" ಅಂದ್ಲು, "ನಾಳೆಯಿಂದ ಬ್ಯಾಗಲ್ಲಿ ಹಾಕಿ ಬಿಡು, ಕೀಬೋರ್ಡು ಸರಿಸಿಟ್ಟು ಇಲ್ಲೇ ಕತ್ತರಿಸುತ್ತ ಕೂರುತ್ತೇನೆ" ಅಂತ ಫೋನಿಟ್ಟೆ. ಗೂಗಲ್ಲು ಟಾಕ್ (ಮೆಸ್ಸೆಂಜರ, ಒಂಥರ ಚಿಕ್ಕ ಅಂಚೆ ಕಳಿಸುವ ಹಾಗೆ ಸಂದೇಶ ಬರೆದು ಮಾತಾಡುವ ಸಾಫ್ಟವೇರ್, ಹಾಗೆ ಮಾತಾಡುವುದಕ್ಕೆ ಚಾಟಿಂಗ ಅಂತಾರೆ) ಚಾಟಿಂಗನಲ್ಲಿ ಸಿಕ್ಕವರಿಗೆಲ್ಲ, ಹೈ ಹೇಳಿ ಬಂದಾಯ್ತು, ನನ್ನ ತಂಟೆಯಿಂದ ಬೇಸತ್ತು ಎಲ್ರೂ ಬೀಜೀ ಅಂತ ತಮ್ಮ ತಮ್ಮ ಸ್ಟೇಟಸ್ಸು ಬದಲಾಯಿಸಿದರು, ಕೆಲವರೋ ನಾನು ಪುಟಗಟ್ಟಲೇ ಮೆಸೇಜು ಬರೆದರೆ ಒಂದೊಂದು ಸ್ಮೈಲೀ [ನಗು ಮುಖದ ಸಂಕೇತ :) ] ಹಾಕಿ, ಇಲ್ಲ ಹೂಂ... ಹಾಂ... ಅಂತ ಉತ್ತರಿಸಿ... ಖಾಲಿ, ಕೆಲಸ ಇಲ್ಲದೇ ಕೂತು ನಮ್ಮ ತಲೆ ತಿಂತಿದಾನೆ ಅಂತ ಬಯ್ದುಕೊಂಡು ಮಾತು ಮುಗಿಸಿದರು.
ಮಧ್ಯಾಹ್ನ ಊಟದ ಸಮಯವಾಗುವ ಹೊತ್ತಿಗೆ ನಾಲ್ಕು ಸಾರಿ ಫೋನು ಮಾಡಿಯಾಗಿತ್ತು ಅವಳಿಗೆ, ಕೊನೆಗಂತೂ ನಿಮ್ಮ ಮ್ಯಾನೇಜರ ನಂಬರು ಕೊಡಿ, ಕೆಲಸ ಕೊಡ್ತೀರಾ ಇಲ್ಲ ಅಂತ ಅವರನ್ನೇ ತರಾಟೆಗೆ ತೆಗೆದುಕೋತೀನಿ ಅಂತಂದಳು, ಮತ್ತೆ ಫೋನು ಮಾಡುವ ಧೈರ್ಯವಾಗಲಿಲ್ಲ. ಎಷ್ಟೊ ಸಾರಿ ಊಟ ಕೂಡ ಮಾಡದೆ ಹಾಗೇ ಕೆಲಸ ಮಾಡುತ್ತಿದ್ದವ ಎಲ್ಲ ಸರಿಯಾಗಿ ಊಟಕ್ಕೆ ಹಾಜರಾಗಿದ್ದೆ. ಅಲ್ಲಿಯಾದರೂ ಸಮಯ ಕಳೆದೀತು ಅಂತ.
ಊಟವಾದ ನಂತರ ಹಾಗೆ ಒಂದು ಸುತ್ತು ಸುತ್ತಿ ಬಂದದ್ದಾಯ್ತು, ಸುತ್ತಾಡುವಾಗ ಕಂಡ ಸುಂದರಿಯರ ನೋಡಿದಾಗ, ಪಕ್ಕದಮನೆ ಪದ್ದು ಜತೆಗೆ ಇನ್ನೂ ಕೆಲವು ಪಕ್ಕದ ಕಂಪನಿಯ ಕನ್ಯಾಮಣಿಯರೂ ಸೇರಿಕೊಂಡರು ನನ್ನ ಲಿಸ್ಟಿಗೆ, ಇಂದು ಇವಳಿಗೆ ಹೇಳಿ ಕಾಡಲು ಹೊಸ ಮುಖಗಳು ಸಿಕ್ಕ ಖುಷಿಯಾಯ್ತು. ವಾಪಸ್ಸು ಬಂದು ನೋಡಿದರೆ ಇವಳಿಂದ ಮಿಸ ಕಾಲ್ ಬಂದಿದ್ದವು, ಅವಸರದಲ್ಲಿ ಮೊಬೈಲು ಮರೆತು ಹೋಗಿದ್ದೆ, ಕಾಲ್ ಮಾಡಿದ್ರೆ "ರೀ ಕೆಲಸ ಇಲ್ಲ ಅಂದ ಮೇಲೆ ಯಾವ ಮೀಟಿಂಗ ಇತ್ತು, ನನ್ನ ಕಾಲ್ ಯಾಕೆ ರಿಸೀವ ಮಾಡಲಿಲ್ಲ" ಅಂತ ಜಗಳಕ್ಕಿಳಿದಳು. "ಇಲ್ಲಾ ಕಣೆ ನಮ್ಮ ಹೆಚ್.ಆರ್ ಡಿಪಾರ್ಟಮೆಂಟಗೆ (ಮಾನವ ಸಂಪನ್ಮೂಲ ಇಲಾಖೆ) ಹೋಗಿದ್ದೆ, ಹೊಸ ಕೆಲಸ ಏನಾದ್ರೂ ಬರುವುದಿದೆಯಾ ಅಂತ ಕೇಳಿ ಬರಲು" ಅಂದರೆ "ಅಲ್ಲಿ ಯಾವ ಹೊಸ ಹುಡುಗಿ ಹುಡುಕೀದೀರಾ? ಸುಮ್ನೇ ಕೆಲಸದ ನೆಪ ಮಾಡಿ ಮಾತಾಡಿಸಿ ಬರಲು" ಅಂತ ಸಂಶಯಿಸಿದಳು. "ಪಕ್ಕದ ಕಂಪನೀಲಿ ಹೊಸ ಹೊಸಾ ಹುಡುಗೀರು ಇರೊವಾಗ, ನಮಗಿಲ್ಲೇನು ಕೆಲಸ" ಅಂತ ಬಾಣ ಬಿಟ್ಟೆ "ರೀ ನಿಮ್ಮ ಕಂಪನೀಲಿ ಕೆಲಸ ಇಲ್ಲ ಅಂತ ಪಕ್ಕದ ಕಂಪನಿಗೂ ನಿಮ್ಮ ಕಾರ್ಯಕ್ಷೇತ್ರ ಬೆಳೆಸಿಕೊಂಡೀದೀರಾ, ಈ ಬೆಂಚ ಅಂದ್ರೆ, ಅದಕ್ಕೆ ಕಟ್ಟಿ ಹಾಕಿ ಕೂರಿಸಬೇಕು ನಿಮ್ಮನ್ನ, ಸುತ್ತಾಡೊಕೆ ಬಿಡ್ತಾರಲ್ಲ ಅದೇ ತಪ್ಪು" ಅಂತ ಬಯ್ದುಕೊಂಡಳು.
ಸಂಜೆ ನಾಲ್ಕಕ್ಕೆ ಇನ್ನೊಂದು ರೌಂಡು ಟೀ, ಹರಟೆ ಮುಗಿಸಿ, ಬಂದು ಕೂತರೆ ಮತ್ತಷ್ಟು ಬೇಸರವಾಗುತ್ತಿತ್ತು, ಹಾಗೂ ಹೀಗೂ ಸಮಯ ಸಾಗಿಸಿ ಐದೂವರೆಗೆ ಮನೆಕಡೆ ನಡೆದೆ, ಮಳೆಯಲ್ಲಿ ತೋಯಿಸಿಕೊಂಡು ಮನೆ ಸೇರಿದೆ, ಏನು ಬೇಗ ಬಂದೀದಾರೆ ಅಂತ ಪಕ್ಕದ ಮನೆ ಪದ್ದು ಕೂಡ ಆಶ್ಚರ್ಯದಿಂದ ನೋಡುತಿದ್ದಳು. ಏಷ್ಟೋ ದಿನಗಳ ನಂತರ ಬೇಗ ಮನೆಗೆ ಬಂದಿರುವೆ ಅಂತ ನನ್ನಾಕೆಗೊ ಖುಷಿ, ಬಿಸಿ ಮಿರ್ಚಿ ಬಜ್ಜಿ, ಮಾಡಿಕೊಟ್ಟಳು ತಿನ್ನುತ್ತ ಆಫೀಸಿನಲ್ಲಿ ಮಾಡಿದ ಕಿತಾಪತಿಗಳನ್ನೆಲ್ಲ ಹರಟಿದೆವು, "ನಾಳೆನೂ ಹೀಗೇನಾ" ಅಂದ್ಲು, "ಅಬ್ಬಾ ನನ್ನ ಕೈಲಾಗಲ್ಲ ಕೆಲಸ ಇಲ್ದೇ ಖಾಲಿ ಕೂರೊಕೆ" ಅಂದೆ, "ಮತ್ತೇನು ಮಾಡ್ತೀರಾ?" ಅಂತ ಕೇಳಿದ್ದಕ್ಕೆ "ಯಾವುದೋ ಟ್ರ್ಏನಿಂಗ ಸೇರಿ ಬಿಡ್ತೀನಿ, ಸಮಯ ಸದುಪಯೋಗ ಆಗುತ್ತೆ" ಅಂದೆ. "ಸ್ವಲ್ಪ ದಿನ ವಿಶ್ರಾಂತಿ ಇರಲಿ, ಏನವಸರ ಕೆಲಸ ಮತ್ತೆ ಇದ್ದೇ ಇದೆಯಲ್ಲ" ಅಂದ್ಲು "ವಿಶ್ರಾಂತಿ ಅಂದರೆ ಖಾಲಿ ಕೂತರೆ ಮಾತ್ರ ಅಂತಲ್ಲ ಪ್ರತೀದಿನ ಮಾಡುವ ಕೆಲಸ ಬಿಟ್ಟು ಹೊಸದನ್ನೇದಾರೂ ಮಾಡಿದರೂ ಅದರಲ್ಲೂ ವಿಶ್ರಾಂತಿ ಸಿಕ್ಕಂತೆಯೇ, ಅದರಲ್ಲೂ ಇಷ್ಟು ದಿನ ಖಾಲಿ ಒಂದು ದಿನ ಕೂಡ ಕೂರದೇ ಇರೋದ್ರಿಂದ ನನಗಾಗಲ್ಲ" ಅಂದದ್ದಕ್ಕೆ "ಸರಿ ಹಾಗದ್ರೆ ನಾಳೆ ತರಕಾರಿ ಸೊಪ್ಪಿನ ಜತೆ ಎರಡು ಈರುಳ್ಳಿನೂ ಹಾಕ್ತೀನಿ ಕತ್ತರಿಸಿಕೊಂಡು ಬನ್ನಿ" ಅಂದ್ಲು. "ಈ ಎರಡು ಟೊಮ್ಯಾಟೋನೂ ಬೇಕು ಕಚ್ಚಿ ತಿನ್ನೋಕೆ" ಅಂತ ಅವಳ ಕೆಂಪು ಕೆನ್ನೆ(ಗಲ್ಲ) ಹಿಚುಕಿದೆ, ಕೊಸರಿಕೊಂಡು ಓಡಿದಳು.
ನಾವೆಲ್ಲ ಹೀಗೇನೆ ಕೆಲಸ ಇದ್ರೆ, ಜಾಸ್ತಿ ಇದೆ ಅಂತ ಹಲುಬಿದರೆ, ಇಲ್ಲದಾಗ, ಖಾಲಿ ಬೇಜಾರು ಅಂತ ಕೊರಗುತ್ತೇವೆ. ಇರುವುದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ ಅಂತಾರಲ್ಲ ಹಾಗೆ. ಇರೊ ಪ್ರತೀದಿನವೂ ಹೊಸತು, ಕೆಲಸ ಇರಲಿ ಇಲ್ಲದಿರಲಿ ಆನಂದವಾಗಿರಲು ಪ್ರಯತ್ನಿಸಿದರೆ. ನಾವೇ ಏನೊ ಒಂದು ರಚನಾತ್ಮಕ ಸೃಜನಾತ್ಮಕ ಕೆಲಸ ಹುಡುಕಿಕೊಂಡು ಅದರಲ್ಲಿ ತೊಡಗಿಸಿಕೊಂಡರೆ, ಬೇಜಾರು ಅನ್ನೊ ಪದ ನಮ್ಮ ಹತ್ತಿರ ಕೂಡ ಸುಳಿಯಲಿಕ್ಕಿಲ್ಲ, ಕೆಲವೊಮ್ಮೆ ಅದೂ ಬೇಜಾರಾಗಬಹುದಾದರೂ ತಕ್ಕಮಟ್ಟಿಗೆ ಬೇಜಾರು ಕಮ್ಮಿಯಾದೀತು ಅಲ್ಲವೇ.
ರಾತ್ರಿ ಮಲಗುವಾಗ ಕೇಳುತ್ತಿದ್ದಳು, "ನಾಳೆ ಏನ್ ಮಾಡ್ತೀರಾ ಹಾಗಿದ್ರೆ" , "ಖಾಲಿ ಅಂತೂ ಕೂರೊದಿಲ್ಲ ಏನೊ ಒಂದು ಕೆಲ್ಸ ಹುಡುಕಿಕೊಂಡು ಮಾಡುತ್ತೇನೆ, ಯಾವದಾದ್ರೂ ಹೊಸ ವಿಷಯ ಕಲಿಯುತ್ತೇನೇ, ಇಲ್ಲ ಹೊಸದನ್ನು ಪ್ರಯತ್ನಿಸುತ್ತೇನೆ, ನಿನ್ನ ಕೆಲಸ ಏನಾದ್ರೂ ಆಗಬೇಕಿದ್ರೆ ಹೇಳು, ತರಕಾರಿ ಹೆಚ್ಚುವುದು ಬಿಟ್ಟು" ಅಂತ ಪೂರ್ವ ಶರತ್ತಿನೊಂದಿಗೆ ಕೇಳಿದರೆ, "ದಿನಸಿ ಪಟ್ಟಿ ಬರೆಯುವ ಸಾಫ್ಟವೇರ ಎನಾದ್ರೂ ಮಾಡಿಕೊಡ್ತೀರಾ" ಅಂತ ಬೇಡಿಕೆ ಇಟ್ಟವಳಿಗೆ "ಪೇಪರು ಪೆನ್ನು ಕೊಡು ಕೈಯಲ್ಲೇ ಬರೆದು ಕೊಡ್ತೀನಿ, ಕೀಬೋರ್ಡು ಕುಟ್ಟಿದ್ದು ಜಾಸ್ತಿ ಆಗಿದೆ, ಬರೆದರೆ ಕೈಬರಹವಾದರೂ ಸುಧಾರಿಸೀತು." ಅಂತ ಹೊಸ ಪ್ರಯತ್ನಕ್ಕೆ ಮುನ್ನಡಿಯಿಟ್ಟೆ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/sumne.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
16 comments:
One Day in a Software Company (-Benching) ಪುಸ್ತಕ ಓದಿದ ಹಾಗೆ ಆಯ್ತು. ಅಲ್ಲಾ ಪ್ರಭುರಾಜ, ಖಾಲೀ ಕೂತಾಗಲೇ ಇದನ್ನ ಬರೆದಿರಾ?
ಪ್ರಭು ಅವರೇ,
ಕಳೆದ ವಾರದ ಲೇಖನವನ್ನೂ ಸೇರಿಸಿ ಈ ವಾರವೇ ಓದಿದೆ. ಹುಡುಕಾಟ ಹುಡುಗಾಟದ ಲೇಖನ ತುಂಬಾ ನಗು ತರಿಸಿತ್ತು! ಈ ವಾರದ ಲೇಖನದಿಂದ ನೀವು ಬೆಂಚಿನ ಮೇಲೆ ಕುಳಿತಿರುವುದಾಗಿ ತಿಳಿಯಿತು! ಮತ್ತೆ ನಿಮಗೆ ಒಂದು ಹೊಸ ಪ್ರಾಜೆಕ್ಟ್ ಸಿಗುವವರೆಗೂ ನಿಮ್ಮ ಭಾಮೈದನಿಗೆ, ಹುಡುಗಿಯ ಅನ್ವೇಷಣೆ ಮುಂದುವರಿಸಬಹುದಲ್ಲ, ಪಾಪ ಅವನೂ ಸಹ ಜೀವನದಲ್ಲಿ ಸೆಟಲ್ ಆಗಲಿ ಅಲ್ಲವಾ?
ಎಂದಿನಂತೆ ನಿಮ್ಮ ಲೇಖನ ಶೈಲಿ ಸೂಪರ್, ಪ್ರತಿ ಬಾರಿಯೂ ಮೆಚ್ಚುಗೆಯಾಗುತ್ತದೆ. ಅವುಗಳನ್ನು ವಿಶ್ಲೇಷಿಸಿ ಬರೆಯಲು ಕೆಲವೊಮ್ಮೆ ಪದಗಳೇ ಸಿಗುವುದಿಲ್ಲ!!!
sunaath
Only One day can be like this, not everyday sir... ಖಾಲಿ ಅಂತ ಕೂರಲ್ಲ, ಅದರಲ್ಲೂ ಆಫೀಸಿನಲ್ಲಿ ಎಲ್ಲ ಬರೆಯಲ್ಲ, ವೀಕೆಂಡಿಗೆ ಸಮಯ ಮಾಡಿಕೊಂಡು ಬರೆದದ್ದು.
SSK ಅವರಿಗೆ
ಹುಡುಕಾಟ ಹುಡುಗಾಟ ಹಾಸ್ಯಕ್ಕೆ ಒತ್ತು ಕೊಟ್ಟು ಬರೆದದ್ದು, ಎಲ್ಲ ಲೇಖನಗಳನ್ನೂ ತಪ್ಪದೇ ಓದುವ ನಿಮಗೆ ನನ್ನ ಕೃತಜ್ಞತೆಗಳು.
ಭಾಮೈದನಿಗೆ ಕನ್ಯಾ ಹುಡುಕಿದ್ದೀನಿ, ಬಾಬ್ ಕಟ ರೋಸಿ ಅಂತ, ಆದ್ರೆ ಯಾಕೊ ನನ್ನಾಕೆಗೆ ಮನಸಿಲ್ಲ, ಅವನನ್ನ "ಸೇಲ್" ಅಲ್ಲಲ್ಲ "ಸೆಟಲ್ಲ್" ಮಾಡೀನಿ ಕೈ ಬಿಡೋದು!, ಯೋಚನೆ ಮಾಡಬೇಡಿ...
ಶೈಲಿ ಅಂದ್ರೆ ಅಂತಾ ಏನು ವಿಶೇಷವಿಲ್ಲ, ಸುಮ್ನೇ ನಾನು ನನ್ನಾಕೆ ಕೂತು ಮುಂಜಾನೆಗೆ ಏಳೊದ್ರಿಂದ ಸುರುವಾಗಿ ಸಂಜೇವರೆಗೆ ಯಾವುದೋ ವಿಷಯದ ಬಗ್ಗೆ ಹರಟೋದು :) ನಮ್ಮ ಹರಟೆ ನಿಮಗಿಷ್ಟವಾಗಿದ್ದು ನನಗೂ ಖುಷಿ...
ಹಹಹ ಚೆನ್ನಾಗಿದೆ ನಿಮ್ಮ ಬೆಂಚು ಕತೆ.
ಆಫೀಸ್ ನಲ್ಲಿ ಟೈಮ್ ಪಾಸು ಮಾಡೋದು ಒಂದು ಕಲೆ, ಎಲ್ಲರಿಗು ದಕ್ಕು ವಂತದ್ದು ಅಲ್ಲ. ನನ್ನ ಬ್ಲಾಗಿನ ಮೊದಲ ಲೇಖನ ಇದೆ ವಿಷಯಕ್ಕೆ related ಇತ್ತು.
ಆಮೇಲೆ ನೀವು ಯಾಕೆ ನಿಮ್ಮಾಕೆ ಗೆ ಫೋನ್ ಮಾಡೋದೇ ಮೊಬೈಲ್ ಉಪಯೋಗಿಸುವಿರಿ? ಆಫೀಸ್ ನಲ್ಲಿ ದೇವ್ರು ಫೋನ್ ಇಟ್ಟಿರೋದು ಏನಕ್ಕೆ? ಅದರಿಂದ ಪಕ್ಕದ ಕ್ಯಾಬಿನ್ ನ ಸುಂದರಿಯರಿಗೂ ಕಾಲ್ ಮಾಡಬಹುದು!!! ಪ್ರಯತ್ನಿಸಿ, ನಾಳೆ ಇಂದ ಬೆಂಚ್ ಕೂಡ ಇಂಟರೆಸ್ಟಿಂಗ್ ಆಗಿ ಇರುತ್ತೆ.
ಪ್ರಭು ಅವರೆ,
ಯಾವಾಗಿನ ಹಾಗೆ ಸೊಗಸಾದ ಲೇಖನ ..... ನೀವು ಹೇಳಿದ್ದು ಸರಿಯಾಗೇ ಇದೆ ... ಬೆ೦ಚ ನಲ್ಲಿ ಕೂತಾಗ ಆಗುವ ತಳಮಳ ,ಆತ೦ಕ ???? ಕೇಳಲೇ ಬೇಡಿ .. ನಿಮ್ಮ ಈ ಬರಹದ ಥೀಮ್ ,ಸ್ನೇಹದ ಕೊ೦ಡಿ ನಿದಾನವಾಗಿ ಕಳುಚುತ್ತಿದೆ ಎ೦ದು ಹೇಳುತ್ತಿದ್ದಿರಿ ??? ... ಗೂಗಲ್ ಟಾಕ್ ನಲ್ಲಿ ಹೇಳಿದ್ದು ೧೦೦% ನಿಜ ... ಎಲ್ಲರು ನಾನು ಸೇರಿ ಎಲ್ಲರು ಮಾಡುವುದು ಅದನ್ನೇ .. ಇನ್ನು ಸ್ವಲ್ಪ ಸುಧಾರಿಸುವ ಭರವಸೆಯನ್ನು ಕೊಡುತ್ತೇನೆ !!! (ರಾಜಕಾರಣಿ ಭರವಸೆ) ಅಲ್ಲ ಎ೦ದು ಇನ್ನು೦ದು ಭರವಸೆಯನ್ನು ನೀಡುತ್ತೇನೆ ...:-) :-) :-)
ಪ್ರಭು
ಚೆನ್ನಾಗಿದೆ
ಕೆಲವೆಡೆ ನಗು ಉಕ್ಕಿ ಬಂತು
ನಗ್ತಾ ಇದ್ದಾಗ ಪಕ್ಕದ ಕ್ಯಾಬಿನ್ನಿಂದಾನೂ ಕುಸುಕು ನಗು ಕೇಳಿಸ್ತಾ ಇತ್ತು
ಏನಪ್ಪ ಇದು ಅಂತ ಎದ್ದು ನಿಂತು ನೋಡಿದ್ರೆ ಅವರು ಮೇಡಮ್ಗೆ ಏನೋ ಆಗಿ ಹೋಗಿದೆ ಅಂತ ನನ್ನ ಬಗ್ಗೆ ನಗ್ತಾ ಇದ್ದಾರೆ.
ಟೈಮ್ ಪಾಸ್ ಮಾಡೋದು ಹೇಗೆ ಅಂತಾ ಚೆನ್ನಾಗಿ ಹೇಳಿದ್ದೀರಾ
ಪ್ರಭು,
ನೀವು ಹೇಳಿದ್ದು ನಿಜ. ಕೆಲಸ ಇಲ್ಲದಿರುವುದಕ್ಕಿಂತ ಹೆಚ್ಚಿನ ಕೆಲಸವೇ ಮೇಲು. ಸಮಯ ಕಳಿಯೋದೆ ದೊಡ್ಡ ಸಮಸ್ಯೆ.
ಆದರೆ ನಿಮ್ಮ ಬರಹಗಳನ್ನು ಓದುತಿದ್ದರೆ, ಸಮಯ ಹೋಗೋದೇ ಗೊತ್ತಾಗಲ್ಲ. ನಾನು ಡೆಡ್ಲೈನು ಮೀರಿದರೆ ಅದು ನಿಮ್ಮಿನ್ದಾನೆ!!
ಬಾಲು ಅವರಿಗೆ
ನಿಮ್ಮ ಬ್ಲಾಗನಲ್ಲಿ ಟೈಮ ಪಾಸ್ ಸಾಕಷ್ಟು ಐಡಿಯಾಗಳಿವೆ... ಆದರೆ ಲೇಖನದಲ್ಲಿ ಹೇಳಿದ್ದು ಟೈಮ ಪಾಸ್ ಮಾಡದೇ ರಚನಾತ್ಮಕ ಕೆಲಸಗಳಲ್ಲಿ ನಮ್ಮನ್ನು ನಾವು ಯಾಕೆ ತೊಡಗಿಸಿಕೊಳ್ಳಬಾರದು ಅಂತ.
ಮೊಬೈಲು ಹತ್ತು ತಾಸು ಮಾತಾಡಲು ಫ್ರೀ(ಮಾತಾಡಲು ಸಮಯವಿರುವುದಿಲ್ಲ ಆ ಮಾತು ಬೇರೆ), ಕಾರ್ಪೋರೇಟ ಕನೆಕ್ಷನ್!!! ಅಲ್ಲದೇ ಆಫೀಸಿನ ಫೋನು ಪರಸನಲ್ ಕೆಲ್ಸಕ್ಕೆ ಬಳಸುವುದರ ಬಗ್ಗೆ ನನಗೆ ಒಳ್ಳೆ ಅಭಿಪ್ರಾಯ ಇಲ್ಲ... ಪಕ್ಕದ ಕ್ಯಾಬಿನ ಎಲ್ಲ ಬೇಡ ಸರ್, ಪಕ್ಕದ ಕಂಪನಿವರೆಗೆ ಕಾರ್ಯಕ್ಷೇತ್ರ ಬೆಳೆಸಿರಬೇಕಾದರೆ!
roopa ಅವರಿಗೆ
ಬೆಂಚಿನಲ್ಲಿ ತಳಮಳ ಆತಂಕ ಇದ್ದೇ ಇರುತ್ತದೆ, ಆದರೆ ಬಹಳ ದಿನಗಳು ನಿರಂತರ ಕೆಲಸದ ನಂತರ ಹೀಗೆ ಸ್ವಲ್ಪ ಪ್ರೀ ಟೈಮ್ ಸಿಕ್ಕಿರುವುದು ಇದೇ ಮೊದಲು. ಬರಹದ ಥೀಮ್ ಟೈಮ್ ಪಾಸ ಮಾಡದೇ ಸಿಕ್ಕ ಸಮಯ ರಚನಾತ್ಮಕ ಕೆಲಸದಲ್ಲಿ ಯಾಕೆ ತೊಡಗಿಸಿಕೊಳ್ಳಬಾರದು ಅಂತ. ಈ ಗೂಗಲ್ ಟಾಕ್ ಬಗ್ಗೆ ಹೇಳುವಾಗ, ಬರೀ ಅಲ್ಲಿನ ಸ್ಥಿತಿ ಬಗ್ಗೆ ಹೇಳಿದ್ದು, ಎಲ್ರೂ ಗೆಳೆಯರು ಮೆಸೇಜ ಮಾಡಿದಾಗ ಮಾತಾಡುತ್ತ ಕೂರಲೇಬೇಕಿಲ್ಲ, ಕೆಲಸವಿದ್ದರೆ ಮೊದಲು ಕೆಲಸ, ಖಾಲಿ ಇದ್ದರೆ ಸರಿ ಇಲ್ಲದಿದ್ದರೆ, ಇಲ್ಲ,(ನಾನು ಎಷ್ಟೊ ಸಾರಿ ಬೀಜಿ ಅಂತ ಗೆಳೆಯರಿಗೆ ಹೇಳುತ್ತೇನೆ,ಅವರು ಅರ್ಥ ಮಾಡಿಕೊಳ್ಳಬೇಕು ಅಷ್ಟೆ.)
ರಾಜಕಾರಣಿ ಭರವಸೆ ಅಂತ ಗೊತ್ತಾಯಿತು ಬಿಡಿ, ಅಲ್ಲೇ ಎರಡು ಸ್ಮೈಲೀ ಹಾಕಿದ್ದೀರಿ :)
ರೂಪ ಅವರಿಗೆ
ಒಹ್ ಅಷ್ಟೊಂದು ನಕ್ಕುಬಿಟ್ರಾ!... ಎನೋ ಸ್ವಲ್ಪ ಹಾಸ್ಯ ಬರೆದೆ, ಪಕ್ಕದ ಕ್ಯಾಬಿನ್ನಿಗೂ ಬ್ಲಾಗ ಲಿಂಕ್ ಕಳಿಸಿಬಿಡಿ ಅವರೂ ಇನ್ನಷ್ಟು ನಗಲಿ :)
ಟೈಮ ಪಾಸ ಮಾಡಿದ್ದು ಹೇಳಿದ್ದೇನೆ ಹೊರತು, ಮಾಡಿ ಅಂತ ಅಲ್ಲ, ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅಂತಲೇ ಹೇಳುವ ಉದ್ದೇಶ.ಕೊನೇ ಪ್ಯಾರಾದ ಹಿಂದಿನದರಲ್ಲಿ ಅದನ್ನೇ ಬರೆದದ್ದು.
ರಾಜೀವ ಅವರಿಗೆ
ನಿಜ ಕೆಲಸ ಇದ್ದರೇ ಮೇಲು, ಇಲ್ಲದಿದ್ದರೆ ಏನು ಮಾಡಲೂ ತಿಳಿಯುವುದಿಲ್ಲ, ಸಧ್ಯ ಕೆಲವು ಟ್ರೇನಿಂಗ್ ಮತ್ತು ಮೀಟಿಂಗಗಳು ಇವೆ ಅಲ್ಲದೆ ಹೊಸದನ್ನೇನೊ ಕಲಿಯುತ್ತಿದ್ದೇನೆ, ನಾ ಖಾಲಿ ಕೂರಲು ಆಗಲ್ಲ ಬಿಡಿ.
ಸಮಯ ಸಿಕ್ಕಾಗ ಮಾತ್ರ ಓದಿ ಅಂತಲೇ ನನ್ನ ಸಲಹೆ, ಡೆಡಲೈನ ಮೀರಿದರೆ ನನ್ನ ಹೊಣೆ ಮಾಡಬೇಡಿ. ಅವರಿಗೆ ಇದರಿಂದ ನಿಮ್ಮ ಕೆಲಸವಾಗುತ್ತಿಲ್ಲ ಅಂತ ಗೊತ್ತಾದರೆ ನನ್ನ ಸೈಟ್ ಬ್ಲಾಕ್ ಮಾಡಿಬಿಟ್ಟಾರು!!!
ಪ್ರಭು,
ಸಾಪ್ಟ್ವೇರಿಗಳ ಒಂದೊಂದೆ ವಿಚಾರವನ್ನು ಹೊರಗೆಳೆದು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೀರಿ. ಬೆಂಚಿಂಗ್ ಅನ್ನುವ ಪದಗಳನ್ನು ನನ್ನ ಗೆಳೆಯರು ಮಾತಾಡಿಕೊಳ್ಳುತ್ತಿದ್ದರು. ಅರ್ಥ ಗೊತ್ತಾಗಿರಲಿಲ್ಲ. ಮತ್ತೆ ನಿಮ್ಮ ಆಫೀಸಿನ ಪ್ರಾಜೆಕ್ಟ್ ಇಲ್ಲದ ದಿನವನ್ನು ನಿಮ್ಮದೇ ಶೈಲಿಯ ನವಿರು ಹಾಸ್ಯದೊಂದಿಗೆ ಚೆನ್ನಾಗಿ ವಿವರಿಸಿದ್ದೀರಿ. ಮತ್ತೆ ವಿಚಾರದಲ್ಲಿ ಹಾಸ್ಯವಿದ್ದರೂ ಕೆಲವೊಂದು ವಿಚಾರಗಳು ಚಿಂತನೆಗೊಳಗಾಗುವಂತೆ ಮಾಡುತ್ತೆ....
ಮುಂದುವರಿಯಲಿ...
ಎಸ್..!!!.ಮತ್ತೊಂದು ಪ್ರಬುದ್ಧ...ಬ್ಲಾಗಾಯಣದ ಕಥೆ...ಓದೋದಕ್ಕೆ ಹೆಣಗಾಡೋ ಪ್ರಮೇಯಾನೇ ಇಲ್ಲ...ಎರಡಕ್ಷರದ ನಂತರ..ಎನೋ..ನಾವೇ ಬರೆದಹಾಗೆ ಓದಿಸ್ಕೊಂಡು ಹೋಗುತ್ತೆ...ಸಾಫ್ಟಿಗಳು...ಹಾರ್ಡಿಗಳಾಗಿರ್ತಾರೆ ಅನ್ನೋದು ನಿಮ್ಮನ್ನ ನೋಡಿ ಹೇಳಬಹುದು...ಛೇ..ಛೇ..ಕೋಪಬಂತಾ..?? ಹಾರ್ಡೀರೀ...ಯಪ್ಪಾ ನಾ ಹೇಳಿದ್ದ್ ಹಂಗಾ ಯಾಕ್ ಹುಬ್ ಮ್ಯಾಲ್ಮಾಡೀರಿ..??
shivu ಅವರಿಗೆ
ನಾನೂ ಸಾಫ್ಟವೇರಿ ಹೀಗಾಗಿ ನಮ್ಮ ವಿಷಯಗಳನ್ನು ನನಗೆ ಹಂಚಿಕೊಳ್ಳಲಾಗುತ್ತಿದೆ. ಬೆಂಚ್ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ ಪ್ರಾಜೆಕ್ಟ ಇಲ್ಲದೆ ಕೆಲ ದಿನ ಹಾಗೆ ಎಲ್ಲರೂ ಇರುತ್ತಾರೆ ಆದರೆ ಅದನ್ನೇನು ಕೆಲಸವೇ ಇಲ್ಲ ಅಂತ ಹೇಳಲಾಗಲ್ಲ, ಏನೋ ಒಂದು ಟ್ರೇನಿಂಗ್ ಇಲ್ಲ ಏನೋ ಕೆಲಸ ಕೊಟ್ಟು ಕೂರಿಸಲಾಗಿರತ್ತೆ, ಅದು ಈ ಬಿಜಿನೆಸ್ಸಿನ ಒಂದು ಭಾಗ. ಕೆಲವೊಂದು ವಿಷಯಗಳು ಗಂಭೀರ ಬೆಂಚ್ ಅಂತಿದ್ದಂಗೆ ಜನ ಟೈಮ್ ಪಾಸ್ ಮಾಡುತ್ತಾರೆ ಹಾಗೆ ಮಾಡದೆ ಒಳ್ಳೆ ರಚನಾತ್ಮಕ ಕೆಲಸದಾಲಿ ತೊಡಗಿಕೊಂಡರೆ ಎಲ್ರಿಗೂ ಉತ್ತಮ
ಜಲನಯನ ಅವರಿಗೆ
ಬರವಣಿಗೆ ಹಾಗೇ ಓದಿಸಿಕೊಂಡು ಹೋಗೋ ಹಾಗೆ ಇದ್ದರೆ ಚೆನ್ನ ಓಡಿಸಿಬಿಡುವ ಹಾಗಿದ್ದರೆ ಕಷ್ಟ! :) :)
ಸಾಫ್ಟಿಗಳು ಹಾರ್ಡ ಸಾಫ್ಟ ಎಲ್ಲ ರೀತಿ ಆಗ್ತಾರೆ, ಅಡ್ಜಸ್ಟ್ ಮಾಡ್ಕೊಳ್ಳೋದು ಅವರಿಗೆ(ನಮಗೆ) ಸರ್ವೇ ಸಾಮಾನ್ಯ.. ಅಯ್ಯೋ ಕೋಪ ಯಾಕೆ ಸರ್ ಹಾಗೇನಿಲ್ಲ.
"ಅಯ್ಯ ನೀವೇನ ಅಂಥಾದ್ದು ಕೆಟ್ಟ ಅಂದಿಲ್ಲ ಬಿಡ್ರೀ, ನಮಗ ಜನ ಬಯ್ದ ಬಯ್ದ ಈಗ ಯಾರ ಏನ್ ಅಂದ್ರೂ ಏನೂ ಸಿಟ್ಟsss... ಬರೂದಿಲ್ಲ. ಹಿಂಗಾಗಿ ಸಿಟ್ಟ ಎಲ್ಲಿ ಬರತದ ಹೇಳ್ರೀ, ನೀವ್ ಹಿಂಗ್ ಚಲೋ ಚಲೋ ಕಾಮೆಂಟ್ ಬರೀತಿರ್ರಿಪಾ"
ಪ್ರಭುದೇವಾ,
ನಿಮ್ಮ ಕಾಲ್ಪನಿಕ ಕಥಾನಕ ನಿಜಕ್ಕೂ ರೋಚಕ. ಬಹಳ ಚೆನ್ನಾಗಿ ಬರಿತೀರಾ .
ಕೆಲಸ ಇಲ್ಲದೆ ಸುಮ್ಮನೆ ಕಾಲಾಹರಣ ಮಾಡೋದು ಅಂದ್ರೆ ಬೇಜಾರೇ. ಕಾಲೇಜಿಗೆ ರಜೆ ಇದ್ದಾಗಲೇ time pass ಆಗೋದಿಲ್ಲ. ಇನ್ನು ಯಾವಾಗಲು ಕೈ ತುಂಬಾ ಕೆಲಸ ಇದ್ದೋರಿಗೆ ಅಂತೂ ಖಾಲಿ ಕೂರೋದಕ್ಕೆ ಭಾರಿ ಕಷ್ಟ.
brighter side ನೋಡಿ , ಯಾವ್ದಾದ್ರು ಪುರುಸೊತ್ತು ಸಿಗದೇ ಸತ್ತು ಹೋಗಿದ್ದ ಹವ್ಯಾಸ ಇದ್ರೆ ಎಚ್ಚರಿಸಿ time pass ಮಾಡಿ . ಬೇಗ ಬೆಂಚ್ ಇಂದ ಚೇರಿಗೆ ಬಡ್ತಿ ಆಗ್ಲಿ :)
PARAANJAPE K.N. ಅವರಿಗೆ
ಧನ್ಯವಾದಗಳು ಸರ್, ಏನೊ ಮನದಲ್ಲಿ ಕಾಡುವ ಕಲ್ಪನೆಗಳು ಬರವಣಿಗೆಯಲ್ಲಿ ದಾರಿ ಕಂಡುಕೊಳ್ಳುತ್ತಿವೆ.
Greeshma ಅವರಿಗೆ
ಯಾವಾಗಲು ಕೈ ತುಂಬಾ ಕೆಲಸ ಇದ್ದೋರಿಗೆ ಅಂತೂ ಖಾಲಿ ಕೂರೋದಕ್ಕೆ ಭಾರಿ ಕಷ್ಟ, ಇದಂತೂ ನೂರಕ್ಕೆ ನೂರು ಸರಿ... ಖಾಲಿ ಕೂರೋದಂದ್ರೆ ಸಾಕು ಸಾಕಾಗಿ ಹೋಗುತ್ತದೆ ಆದರೆ ನನಗೇನೊ ಕೆಲಸಗಳಿದ್ದು ಹಾಗಾಗಿಲ್ಲ, ಅದಕ್ಕೆ ಖುಷಿ.
ಹವ್ಯಾಸ ಬಡಿದೆಬ್ಬಿಸುವ ಸಲಹೆ ಬಹಳ ಒಳ್ಳೇದು,ಖಾಲಿ ಅಂತ ಬಡಿದೆಬ್ಬಿಸುವಂತೆ ಮಲಗಬಾರದು :)
ಚೇರಿಗೆ ಬಡ್ತಿ ಯಾವಾಗ ಗೊತ್ತಿಲ್ಲ, ಅಲ್ಲೀವರೆಗೆ ನನಗೆ ನಾಅನೆ ಹುಡುಕಿಕೊಂಡು ಒಂದು ಕೆಲ್ಸ ಮಾಡುತ್ತಿದ್ದೇನೆ. ಹಾಗಾಗಿ ತೊಂದ್ರೆ ಇಲ್ಲ, ಖಾಲಿ ಇಲ್ಲ.
ಬೆ೦ಚಿನ ಅನುಭವ ಕಥನ, ಸಮಸ್ಯೆಗಳೊ೦ದಿಗೆ, ಪರಿಹಾರೋಪಾಯಗಳೊ೦ದಿಗೆ ಚೆನ್ನಾಗಿ ಮೂಡಿಬ೦ದಿದೆ. ಈಗ೦ತೂ ಬೆ೦ಚ್ ಅನ್ನೋ concept ಅ೦ದ್ರೆ non billable ಅಷ್ಟೇ ಆಗಿದೆ. ಅದರ ಹೊರತಾಗಿ ಅವರಿಗೆ internal ಪ್ರಾಜೆಕ್ಟ್ ಗಳಿರುತ್ತವೆ. Training, Certification exams ಹೀಗೆ ಹತ್ತು ಹಲವು ಕಾರ್ಯ ಚಟುವಟಿಕೆಗಳು. ಬೆ೦ಚಿನಲ್ಲಿರುವವರಿಗೆ ಇರುವಷ್ಟು ಜವಾಬ್ದಾರಿ ಬಹುಶ: ಪ್ರಾಜೆಕ್ಟ್ ನಲ್ಲಿ ಇರುವವರಿಗೆ ಇರುವುದಿಲ್ಲ :)
ವಿನುತ ಅವರಿಗೆ
non billable ಅಷ್ಟೇ ಅನ್ನೊದಂತೂ ಸತ್ಯ, ನನಗೂ ಹಲವು training, internal projects, ಕೊಡಲಾಗಿದೆ... ಬೆಂಚಗಿಂತ ಪ್ರಾಜೆಕ್ಟಾಲ್ಲಿರೋದೇ ವಾಸಿ...
Post a Comment