"ರೀ, ಆ ಕೊನೇಮನೇಲಿ ಒಂದು ಹುಡುಗಿ ಇತ್ತಲ್ಲ, ಕಪ್ಪಗಿದ್ರೂ ಮುಖದಲ್ಲಿ ಖಳೆಯಿದೆ, ಕೃಷ್ಣ ಸುಂದರಿ ಅಂತೆಲ್ಲ ಅಂತಿದ್ರಲ್ಲ ಆ ಹುಡುಗಿ, ಪ್ರೀತ್ಸಿ ಅದ್ಯಾವುದೊ ಹುಡುಗನ ಜತೆ ಓಡಿ ಹೋಗಿದಾಳಂತೆ. ಪಾಪ ಅವರಮ್ಮ ಗೊಳೊ ಅಂತ ಅಳ್ತಾ ಇದಾಳೆ" ಅನ್ನುತ್ತ ಹೊರಗೆ ಹೋದವಳು, ಅಲ್ಲೇ ನಿಂತು ಪಕ್ಕದ ಮನೆ ಪದ್ದು ಜತೆ ಅಂತೆ ಕಂತೆಗಳೆಲ್ಲ ಮಾತಾಡಿ ಬಂದಳು. ನಾನು ಅಲ್ಲೇ ಯೋಚಿಸ್ತಾ ಕೂತಿದ್ದೆ, "ಏನು ನೀವು ಪದ್ದು ಜತೆ ಓಡಿ ಹೋಗೊಕೇ ಏನಾದ್ರೂ ಪ್ಲಾನ ಮಾಡ್ತಾ ಇದೀರಾ, ಹೇಗೆ" ಅಂತ ಕೇಳಿದ್ಲು, ನಾ ತಿರುಗಿ ಕೇಳಿದ್ದು ಒಂದೇ ಪ್ರಶ್ನೇ "ಪ್ರೀತ್ಸೊದ್ ತಪ್ಪಾ?"...
ಸ್ವಲ್ಪ ಹೊತ್ತು ಅವಳಿಗೇನು ಹೇಳಬೇಕು ಹೊಳೀಲೇ ಇಲ್ಲ, ಚಹ ಮಾಡ್ತಾ ಇದ್ದೋಳು, ಸಕ್ಕರೆ ಬದಲಿ ಉಪ್ಪು ಹಾಕಿಯಾಳು ಅಂತ ಸಕ್ಕರೆ ಡಬ್ಬಿ ನಾನೇ ಎತ್ತಿ ಕೊಟ್ಟೆ, "ಆದ್ರೂ ಈ ಲವ್ವು ಗಿವ್ವು ಎಲ್ಲಾ ಯಾಕೋ ಸರಿ ಹೋಗಲ್ಲರೀ" ಅಂತ ವಿಷಯ ತೆಗೆದು ಹಾಕಲು ನೋಡಿದಳು. "ಲವ್ ಅಂದ್ರೇನು?", ನಾ ಪ್ರಶ್ನೇ ಕೇಳಿ ತಲೆ ತಿಂತೀನಿ ಅಂದ್ರೆ, ಇವರು ನಂಗೇ ಕೇಳ್ತಿದಾರಲ್ಲ ಅನ್ನೋ ಹಾಗೆ ನೋಡಿದವಳು, "ಲವ್ ಅಂದ್ರೆ ಪ್ರೀತಿ, ಪ್ರೇಮ..." ಅಂದ್ಲು, "ಮತ್ತೇ" ಅಂದೆ, "ರೀ ಇನ್ನೂ ಜಾಸ್ತಿ ಗೊತ್ತಿಲ್ಲ ಕಪಾಟಿನಲ್ಲಿ ಡಿಕ್ಷನರಿ ಇದೆ, ಬೇಕಾದ್ರೆ ತೆಗೆದು ನೋಡಿ" ಅಂದಳು. "ಹಾಗಾದ್ರೆ ಪ್ರೀತ್ಸೊದು ಎಲ್ಲ ಸರಿ ಹೋಗಲ್ಲ ಅನ್ನು, ನನ್ನ ಪ್ರೀತಿಸಬೇಡ ಹಾಗಾದ್ರೆ" ಅಂತಂದೆ, "ಯಾಕೆ ನಾನೇನು ನೀವ ಕೆಟ್ಟೊದ್ನಾ, ಪಕ್ಕದ ಮನೆ ಪದ್ದು, ಹಾಲಿನಂಗಡಿ ಹಾಸಿನಿ ಅಂತ ಯಾರ್ ಯಾರನ್ನೊ ಪ್ರೀತ್ಸೋಕೇ" ಅಂತ ಹುಸಿ ಮುನಿಸಿದಳು, "ಅಂದ್ರೆ ನಾನು ಅವರನ್ನ ಪ್ರೀತಿಸ್ತೀನಿ..." ಮರುಪ್ರಶ್ನೆ ಎಸೆದೆ, "ಇಲ್ಲಾ.. ಹಾಗೇನಿಲ್ಲ, ನೀವ ಯಾರನ್ನ ಪ್ರೀತಿಸ್ತೀರಿ ನಂಗೆ ಗೊತ್ತು" ಅಂದ್ಲು ಕಳ್ಳ ನೋಟದಿ ನೋಡುತ್ತ. "ಯಾರಾ ಬೆಡಗಿ" ಅಂದೆ, ನಾಚಿ "ಛೀ ಹೋಗ್ರೀ ಮುಂಜಾನೆ ಮುಂಜಾನೆ ಬೇರೆ ಕೆಲ್ಸ ಇಲ್ವಾ ನಿಮಗೆ" ಅಂತ ಬಯ್ಕೊಂಡು ಟೀ ಕಪ್ಪು ತಂದು ಕೈಲಿಟ್ಟಳು. "ಹಾಗಾದ್ರೆ ಪ್ರೀತ್ಸೊದ ತಪ್ಪಾ?" ಮತ್ತದೇ ಪ್ರಶ್ನೆ, "ಈ ಲವ್ ಎಲ್ಲ ಹುಚ್ಚು, ಆದ್ರೆ ನೀವ ನನ್ನ ಪ್ರೀತ್ಸೊದು ತಪ್ಪಲ್ಲ ಬಿಡಿ" ಅಂತ ಅರ್ಥ ಮಾಡಿಸ ನೋಡಿದವಳು, ಒಳಗೊಳಗೆ ತಾನೇ ಗೊಂದಲಕ್ಕೊಳಗಾದಳು. "ಮತ್ತೆ ನೀನೇ ಲವ ಅಂದ್ರೆ ಪ್ರೀತಿ ಅಂದೆ, ಈಗ ನೋಡಿದ್ರೆ, ನಾನ ಮಾಡಿದ್ರೆ ಸರಿ ಅಂತೀಯ, ಆ ಹುಡುಗಿ ಮಾಡಿದ್ರೆ ತಪ್ಪು ಅಂತೀಯ, ನಾನೇನು ದೊಣ್ಣೆನಾಯಕನಾ ನನಗೊಂದು ನ್ಯಾಯ, ಊರಿಗೊಂದು ನ್ಯಾಯಾ ಮಾಡೋಕೆ" ವಾದಕ್ಕಿಳಿದೆ. "ರೀ ಅವಳದು ಹುಚ್ಚು ಪ್ರೀತಿ ಅದಕ್ಕೇ ಹಾಗಂದಿದ್ದು", ಸಿಡುಕಿದಳು. "ಓಹ್ ಅದರಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನು" ಅಂತಂದರೆ, "ಎಷ್ಟು ವಿಧ ಅಂತ ಬೇಕಿದ್ರೆ, ಪ್ರೇಮಲೋಕದ ಹೀರೊ ರವಿಚಂದ್ರನ್ ಹತ್ರ ಹೋಗಿ ಕೇಳಿ ಹೇಳ್ತಾರೆ" ಅಂತ ಮಾರುತ್ತರವಿಟ್ಟಳು. ನಾ ಹೇಳುವುದು ಹೇಳಿಯಾಗಿತ್ತು ಇನ್ನು ಅವಳ ಚಿಂತನೆಗೆ ಬಿಟ್ಟು, ನಾ ಹೊರ ನಡೆದೆ.
ಟೀವೀ ಆನ್ ಮಾಡಿ ಕೂತರೆ, ಎಲ್ಲಾ ಚಾನಲ್ಲಿನಲ್ಲಿ ಪ್ರೀತಿ, ಪ್ರೇಮ... ಯಾರಿಗೂ ಅದೇನು ಅಂತ ಪೂರ್ಣ ಗೊತ್ತಿಲ್ಲ ಆದ್ರೂ ಫಿಲ್ಮ್, ಧಾರವಾಹಿ ನೂರು, ಕಾಲೇಜು ಹುಡುಗಿ, ಹುಡುಗ ಕರೆತಂದು ಪ್ರೇಮ ಅರಳಿತು ಅಂತ ತೋರಿಸಿಬಿಡ್ತಾರೆ. ಬೇಜಾರಾಗಿ ಆಫ್ ಮಾಡಿ ಕೂತಿದ್ದೆ, ಎಣಿಸಿದಂತೆ ಇವಳು ಬಂದಳು, ವಿಷಯ ತಲೆ ತಿಂತಿದೆ ಅದಕ್ಕೆ ಇಲ್ಲಿ ಬಂದಿದಾಳೆ ಅಂತ ಗೊತ್ತು, ಹತ್ತಿರ ಕೂತು, ನನ್ನ ಕೈಲಿದ್ದ ನಿಶ್ಚಿತಾರ್ಥ ಉಂಗುರ ಹಾಕಿ ತೆಗೆಯೋದು ಮಾಡುತ್ತ ಕೂತಳು, ಉಂಗುರ ತೆಗೆದು ಅವಳ ಕೈಗಿತ್ತೆ, ಏನು ಮಾತಾಡು, ಸಾಕು ಒಳಗೊಳಗೆ ತಳಮಳಿಸಿದ್ದು ಅನ್ನುವಂತೆ. "ರೀ ನಿಶ್ಚಿತಾರ್ಥದ ಉಂಗುರ ಅದು ಪ್ರೀತಿಯಿಂದ ಹಾಕಿದ್ದು, ಏನ್ ಹಾಗೆ ತೆಗೆದುಹಾಕ್ತೀರಾ" ಅಂತ ಮುಖ ಕೆಂಪಾಗಿಸಿದಳು, "ಒಹೋ ಉಂಗುರ ಹಾಕಲು ಪ್ರೀತಿ ಬೇಕು" ಅಂತ ಉದ್ಗಾರ ತೆಗೆದೆ. "ಹೂಂ ಮತ್ತೆ ನಮ್ಮ ಚಿಕ್ಕಪ್ಪನ ಮಗಳಿಗೆ ಅವಳ ಗಂಡ ಪ್ರೀತಿಯಿಂದ ಚಿನ್ನದ ನೆಕ್ಲೇಸ್ಸು, ಬಳೆ ತಂದುಕೊಟ್ಟೀದಾನೆ" ಅಂದ್ಲು. "ಪ್ರೀತಿಯನ್ನ ಚಿನ್ನದಲ್ಲಿ ಅಳೆಯಬಹುದು ಅಂದ್ರೆ, ನೀ ನನ್ನ ಒಂದು ಹತ್ತು ಗ್ರಾಮ್ ಪ್ರೀತಿಸ್ತೀಯಾ ಹಾಗಾದ್ರೆ, ಈ ಉಂಗುರ ಚೈನು ಅಷ್ಟಾಗ್ತದೆ" ಅಂತಂದೆ, "ಹೋಗ್ಲೀ ನೀವೇ ಹೇಳ್ರಿ ಪ್ರೀತಿ ಅಂದ್ರೆ ಏನು ಅಂತ, ನಾನೇನ್ ಹೇಳಿದ್ರೂ ತಪ್ಪೇ ನಿಮಗೆ, ಮೊದಲಿನಂಗೆ ಪ್ರೀತೀನೇ ಇಲ್ಲ" ಮತ್ತವಳ ಮಾತಿನಲ್ಲಿ ಪ್ರೀತಿ ಇಣುಕಿತ್ತು, ಆದರೆ ಈ ಸಾರಿ ಏನಾದ್ರೂ ಅದನ್ನು ಉದ್ಧರಿಸಿ ಏನಾದ್ರೂ ಹೇಳಿದ್ರೆ, ಏನಾಗುತ್ತೊ ಗೊತ್ತಿಲ್ಲ ಅನ್ನೋ ಭೀತಿ ಆಗಿ ಸುಮ್ಮನೇ "ನಂಗೂ ಗೊತ್ತಿಲ್ಲ" ಅಂದೆ. "ಗೊತ್ತಿಲ್ಲ ಅಂದ್ರೆ ಮುಂಜಾನೆಯಿಂದ ನನ್ನ ತಲೆ ಯಾಕೆ ತಿನ್ಬೇಕಿತ್ತು, ಈಗ ಏನಾದ್ರೂ ಸರಿ ಹೇಳಲೇಬೇಕು" ಅಂತ ಹಠ ಹಿಡಿದಳು. "ನಿನ್ನ ಫ್ರೆಂಡ ಪ್ರೀತಿ ಅಂತ ಇದ್ಲಲ್ಲ ಅವಳ ಪ್ರೀತಿ ಎಲ್ಲಿಗೆ ಬಂತು, ಅವಳನ್ನ ಕೇಳಿದ್ರೆ ಹೇಳ್ತಾಳೆ, ಎಕ್ಸಪರ್ಟ ಅವಳು" ಅಂದೆ, "ಅಯ್ಯೊ ಅವಳಾ, ಅವಳ ಹೆಸ್ರು ಪ್ರೀತಿ ಅಂತ ಅದಕ್ಕೇ ಇಟ್ಟಿದ್ದು, ಸ್ಕೂಲಲ್ಲೇ ನಾಲ್ಕು ಬಾಯ್ ಫ್ರೆಂಡ್ಸ ಇದ್ರು ಅವಳಿಗೆ, ಲವ್ವೇ ಲೈಫಾಗಿತ್ತು, ಬಟ್ಟೆ ಬದಲಿಸಿದ ಹಾಗೆ ಲವರ್ಸ ಬದಲಾಯಿಸ್ತಾ ಇದ್ಲು, ಫೋನು ಮಾಡಿದಾಗ ಒಮ್ಮೆ ಹೊಸ ಹುಡುಗನ ಹೆಸ್ರು, ಎಷ್ಟು ಅಂದ್ರೆ, ಹುಡುಗರ ಹೆಸರು ರಿಪೀಟ ಆಗಿ ಹಳೆ, ಹೊಸ ಅಂತ ಹೆಸರಿನ ಹಿಂದೆ ಸೇರಿಸಬೇಕಾಗಿತ್ತು ಅಷ್ಟು ಜನ... ಅವಳನ್ನೇನ್ ಕೇಳ್ತೀರಾ" ಅಂತ ಅವಳ ಜನ್ಮ ಜಾಲಾಡಿದಳು, "ಹೋಗ್ಲಿ ನನ್ನ ಲವ್ ಮಾಡ್ತಾಳ ಅಂತಾನಾದ್ರೂ ಕೇಳ್ತಿದ್ದೆ" ಅಂದೆ, "ಪ್ರೀತ್ಸೊಕೆ ಅಂತ ಮದುವೆಯಾಗಿ ಮಡದಿ ಅಂತ ನಾನಿಲ್ವಾ, ಅವಳ್ಯಾಕೆ ಬೇಕು ನಿಮ್ಗೆ" ಅಂತ ದುರುಗುಟ್ಟಿದಳು, "ಹಾಗಾದ್ರೆ, ಪ್ರೀತ್ಸೊಕೆ ಮದುವೆ ಆಗಬೇಕು, ಮದುವೆ ಆದಮೇಲೆ ಮಡದಿಯನ್ನೇ ಪ್ರೀತಿಸ್ಬೇಕು" ಕೇಳಿದಷ್ಟು ಕ್ಲಿಷ್ಟವಾಗುತ್ತಾ ನಡೆದಿತ್ತು ವಿಷಯ.
"ನಂಗೆ ಅಪ್ಪ ಅಮ್ಮ ಅಂದ್ರೆ ತುಂಬಾ ಪ್ರೀತಿ ಅಂತೀವಲ್ಲ ಅದೂ ಪ್ರೀತೀನಾ, ಅವರನ್ನ ಪ್ರೀತ್ಸೊದ ತಪ್ಪಾ" ಅಂತ ಇವಳು ನನ್ನ ಪ್ರಶ್ನೆ ನನಗೆ ತಿರುಗಿ ಕೊಟ್ಟಳು, "ಹಾಂ ಈಗ ಕರೆಕ್ಟ ವಿಷಯಕ್ಕೆ ಬಂದೆ ನೋಡು, ಪ್ರೀತ್ಸೊದು ತಪ್ಪಾ, ಸರೀನಾ ಅಂತ ಹೇಳಬೇಕೆಂದರೆ, ಪ್ರೀತಿ ಅನ್ನೋದು ಏನು ಅನ್ನೊದರ ಮೇಲೆ ನಿಂತಿದೆ" ಅಂದೆ. "ಅದಕ್ಕೇ ನೀವು ಆಗಲಿಂದ ಪ್ರೀತಿ ಅಂದ್ರೇನು ಅಂತ ಕೇಳ್ತಾ ಇದ್ದದು, ಸರಿ ನಂಗಂತೂ ಏನೂ ತಿಳೀತಿಲ್ಲ" ಅಂತ ಅಸಹಾಯಕತೆ ಪ್ರದರ್ಶಿಸಿದಳು. "ಮಡದಿಗೆ ಮನೇಲಿ ಮುದ್ದು ಕೊಡೊದು ಪ್ರೀತೀನಾ, ಲಾಲಬಾಗನಲ್ಲಿ ಲವರ್ಗೆ ಲೋಚಲೊಚ ಲಿಪ್ಕಿಸ್ಸು ಕೊಡೋದು ಪ್ರೀತೀನಾ" ಅಂತ ನಿರ್ಭಿಡೆಯಿಂದ ಕೇಳಿದೆ, ಅಷ್ಟೆ ನೇರವಾಗಿ ಅವಳೂ "ಎರಡಕ್ಕೂ ಲವ್ ಅಂತನೇ ಅಂತಾರೆ, ಆದ್ರೆ ನಂಗೊತ್ತಿಲ್ಲ ಯಾವುದು ಸರಿ ಅಂತ" ಹೇಳಿದಳು. "ಆಗಲಿಂದ ಹೇಳಿದ್ದು ಇದನ್ನೇ, ಪ್ರೀತಿಯ ನಿರ್ಧಿಷ್ಟ ವ್ಯಾಖ್ಯಾನ ಆಗುವವರೆಗೆ ಅದು ಸರಿ ತಪ್ಪು ಅಂತ ಹೇಗೆ ಹೇಳೊದು, ಈ ಸಂದಿಗ್ಧತೆ, ಅಸ್ಪಷ್ಟತೆ ಇರುವವರೆಗೆ ಅದಕ್ಕೆ ಉತ್ತರ ಏನು? ಪ್ರೀತಿ ಬಗ್ಗೆ ಬರೆದರೆ ಪ್ರಬಂಧ ಮಂಡಿಸುವಷ್ಟು ವಿಷಯವಿದೆ" ಅಂತ ಕೈಚೆಲ್ಲಿದೆ, "ಹಾಗಾದ್ರೆ, ಆ ಹುಡುಗಿ ಓಡಿ ಹೋಗಿದ್ದು ತಪ್ಪು ಸರಿ ಅಂತ ಹೇಳೊಕಾಗಲ್ಲ" ಅಂದ್ಲು. "ಹೇಳಬಹುದು, ಆದರೆ ಪ್ರೀತಿ ಬಗ್ಗೆ ಹೇಳೊಕೆ ಆಗಲ್ಲ, ಅವರು ಸುಖವಾಗಿ ಬಾಳಿದರೆ ಅಲ್ಲಿ ನಿಜವಾಗಿ ಪ್ರೀತಿ ಇತ್ತು, ಇಲ್ಲಾಂದ್ರೆ ಇಲ್ಲ, ಏನೇ ಆದರೂ ಆ ಹುಡುಗಿ ಮಾಡಿದ್ದು ನನ್ನ ಮಟ್ಟಿಗೆ ತಪ್ಪೇ" ಅಂದೆ "ಯಾಕೆ, ಪ್ರೀತಿ ಕುರುಡು ಅಂತಾರಲ್ಲ ಯಾರ ಮೇಲೊ ಬಂದು ಬಿಡುತ್ತದೆ" ಅಂದ್ಲು, "ಪ್ರೀತಿ ಕುರುಡಾ? ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿದವರು ನಾವು, ಆ ಬಂಧನಕ್ಕಿರಬೇಕಾದ ಗಟ್ಟಿತನ ಇಲ್ಲದೇ ಹುಳುಕು ಕಾಣದಿರಲಿ ಅಂತ... ಹದಿಹರೆಯದ ಹುಡುಗ ಹುಡುಗಿಯರದು ಇದೇ ತಪ್ಪು, ಹುಚ್ಚು ಆಕರ್ಷಣೆಯೇ ಪ್ರೀತಿ ಅಂದುಕೊಂಡು, ಪ್ರೀತಿ ಕುರುಡು, ಬಾಲಿಶ, ಮುಗ್ಧ ಅಂತ ಹಣೆಪಟ್ಟಿ ಕಟ್ಟಿಬಿಡುತ್ತಾರೆ, ಅಲ್ಲಿರುವುದು ಪ್ರೀತಿ ಅಲ್ಲ ಅದು ಆಕರ್ಷಣೆ" ಅಂದರೆ "ಆದ್ರೆ ಆಕರ್ಷಣೆಯಿಂದಲೇ ಪ್ರೀತಿ ಅಲ್ವೇ" ಅಂದ್ಲು. "ಅದೇ ಆಕರ್ಷಣೆಯೇ ಪ್ರೀತಿ ಅಲ್ಲವಲ್ಲ, ಹದಿಹರೆಯ ಹಾಗೇ, 'ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು' ಅಂತ ಕವಿಗಳು ಸುಮ್ನೇ ಹೇಳಿದ್ದಲ್ಲ, ಅಲ್ಲಿ ಆಕರ್ಷಣೆ ಸಹಜ, ಅದು ಪ್ರೀತಿ ಅಲ್ಲ ಅಂತ ತಿಳಿದರೆ ಉತ್ತಮ" ಅಂದೆ. "ಹೂಂ ಹೂಂ... ಮತ್ತೆ ನಿಮಗೆ ಯಾರ ಮೇಲೆ ಆಕರ್ಷಣೆ ಬೆಳೆದಿತ್ತು?" ಅಂತ ಹುಬ್ಬು ಹಾರಿಸಿದ್ಲು, ನಸು ನಕ್ಕೆ. "ಹೇಳ್ರೀ..." ಅಂತ ತಿವಿದಳು "ಲೇ ಎಣಿಕೆ ಮಾಡ್ತಾ ಇದೀನೀ ತಾಳೇ" ಅಂದೆ. "ಹಾಂ" ಅಂತ ಬರಿಗೈಯಲ್ಲಿ ಪಟ ಪಟ ಹೊಡೀತಾ ಇದ್ಲು ಪ್ರೀತಿಯಿಂದ... "ಪ್ರೀತಿಸ್ತಾ ಇರೋದು ನಿನ್ನ ಮಾತ್ರ, ಪ್ರೀತ್ಸೊದ ತಪ್ಪಾ" ಅಂದೆ... ಆ ತುಟಿಯಿಂದ ಉತ್ತರ ಬರಲಿಲ್ಲ... ಬೇರೆ ಎನು ಸಿಕ್ಕಿತು ಇಲ್ಲಿ ಹೇಳಬೇಕಿಲ್ಲ...
ಪ್ರೀತಿ ಅನ್ನೊ ಪದಕ್ಕೆ ಎನು ಅರ್ಥ ಎಂದು ಹೇಳೊದೆ ಕಷ್ಟ ಹಾಗಿರುವಾಗ, ಆಕರ್ಷಣೆಯೇ ಪ್ರೀತಿ ಅಂತ ಅಂದುಕೊಳ್ಳುವವರನ್ನು ನೋಡಿದ್ರೆ ಬೇಜಾರಾಗುತ್ತದೆ, ಪ್ರೀತಿಗೆ ಒಂದು ರೀತಿ ಬದ್ಧತೆ ಬೇಕು, ನಂಬಿಕೆ ಬೇಕು, ನಿಸ್ವಾರ್ಥ ಮನೊಭಾವಬೇಕು, ಅದೆಲ್ಲ ಎಲ್ಲೂ ಕಾಣುತ್ತಿಲ್ಲ, ಇಲ್ಲ ಅಂತ ನಾ ಹೇಳುತ್ತಿಲ್ಲ, ಆದರೆ ಎಲ್ಲೊ ಕೆಲವೊಂದು ನೂರಕ್ಕೊಂದು ಉದಾಹರಣೆ ಸಿಕ್ಕೀತು. ಈಗ ಏನಾಗಿದೆ ಅಂದ್ರೆ, ಮೊಬೈಲುಗಳಲ್ಲಿ ಎಸ್ಸೆಂಸ್ಸು ಫ್ರೀ ಅಂತ ದಿನಕ್ಕೆ ನೂರು ಸಂದೇಶ ಕಳಿಸಿ, ಆಕಾಶದೆತ್ತರಕ್ಕೆ ನಮ್ಮ ಪ್ರೀತಿ, ಸಮುದ್ರದಾಳದಷ್ಟು ಆಳವಾಗಿ(ಡೀಪ್ ಲವ್) ಪ್ರೀತಿಸ್ತೀನಿ ಅಂತೆಲ್ಲ ಮೇಸುಜು ಬರೆದು (ಅಕಾಶ ಮುಟ್ಟಿ ಬಾ ಅಂತ ಹೇಳ್ಬೇಕು, ಇಲ್ಲ ಸಮುದ್ರಕ್ಕೆ ಹಾರಿ ಆಳ ಅಳೆದು ಬಾ ಅನ್ಬೇಕು!), ಆರ್ಕುಟ ಫೇಸಬುಕನಲ್ಲಿ ಲವ್ಸ ಲವ್ಸ ಯೂ ಅಂದು, ಜೀ-ಟಾಕ, ಯಾಹೂನಲ್ಲಿ ಹಹಹ ಅಂತ ಸುಮ್ಸುಮ್ನೇ ನಕ್ಕು, ಮೇಲ್ನಲ್ಲಿ ಹೂವು, ಹಾಡು ಅಂತ ಪತ್ರಗಳ ಮಳೆಗರೆದು... ಲವ್ ಅನ್ಕೊಂಡು ಬಿಡ್ತಾ ಇದಾರೆ. ಇದೆಲ್ಲ ಪ್ರೀತಿ ಅನ್ಕೊಂಡು, ಅಲ್ಲ ಅಂತ ಆಮೇಲೆ ತಿಳಿದು, ಇಲ್ಲ ಇನ್ನು ಬೇರೆ ಯಾರೊ ಕಡೆಗೆ ಆಕರ್ಷಣೆಯಾಗಿ, ರಕ್ತದಲ್ಲಿ ಪತ್ರ ಬರೆದು(ತಮ್ಮದೇ ಇಲ್ದಿದ್ರೂ ಕೊಳೀದು ಆದೀತು), ಅತ್ತು ಕರೆದು, ಇಲ್ಲ ಸತ್ತೇ ಹೋಗಿಬಿಟ್ಟರೆ, ಇದನ್ನೇ ಪ್ರೀತಿ ಅಂದು... ಪ್ರೀತ್ಸೊದ್ ತಪ್ಪಾ ಅಂದ್ರೆ ಏನು ಹೇಳಬೇಕು... ಈ ಅಟೊಗಳ ಹಿಂದೆ ಚೂರಿ ಚುಚ್ಚಿದ ಹೃದಯದ ಚಿತ್ರಗಳ ಹಿಂದೆ ಒಂದು ಚಿತ್ರಕಥೆಗಾಗುವಷ್ಟು ಕಥೆಯಿರುತ್ತದೆ ಕೇಳಿ ನೋಡಿ... ಈ ಮನಸ್ಸು ದುಂಬಿಯ ಹಾಗೆ, ಇಂದು ಗುಲಾಬಿ ಅಂದ ನೋಡಿದ್ರೆ, ನಾಳೆ ಸಂಪಿಗೆ ಸುವಾಸನೆ ಬಂತು ಅಂತ ಅತ್ತ ಹೊರಟು ಬಿಡುತ್ತದೆ, ಅದಕ್ಕೇ ಏನೊ ಹಿರಿಯರು ಮದುವೆ ಅಂತ ಮಾಡಿ, ಪ್ರೀತಿಸಿಕೊಳ್ಳಿ ಅಂದು ಬಿಡ್ತಾ ಇದ್ದಿದ್ದು.
ಸಂಜೆ ಗಾರ್ಡನ್ನಿನಲ್ಲಿ ಸುತ್ತೋಕೆ ಹೋಗಿದ್ವಿ, ಅಮ್ಮನ ವಯಸ್ಸಿನ ಅಂಟಿಯೊಬ್ಬರು ಎದುರು ಬಂದು, "ನಿಮ್ದು ಲವ್ ಮ್ಯಾರೇಜಾ? ಏನು ಅನ್ಯೊನ್ಯವಾಗಿದೀರಾ" ಅಂದ್ರು... ಇಬ್ರೂ ಒಬ್ಬರ ಮುಖ ಒಬ್ರು ನೋಡ್ಕೊಂಡು ನಗುತ್ತ "ಒಂದ್ರೀತಿ ಹಾಗೇನೆ, ಆದ್ರೆ ಮ್ಯಾರೇಜ ಆದ್ಮೇಲೆ ಲವ್ ಮಾಡ್ತಾ ಇದೀವಿ" ಅಂದ್ವಿ. "ನನ್ನ ಮಗಾನೂ ಇದಾನೇ, ಲವ್ ಲವ್ ಅಂತ ಅದ್ಯಾವ್ದೋ ಹುಡುಗೀ ಹಿಂದೆ ಸುತ್ತತಾ ಇದಾನೇ" ಅಂತ ಗೊಣಗುತ್ತ ನಡೆದರು, ಮುಂದೆ ಹೊರಟಿದ್ವಿ, ಇವಳು ತಿರುಗಿ "ಅಂಟೀ ಪ್ರೀತ್ಸೊದ್ ತಪ್ಪಾ?" ಅಂತ ಕೇಳಿದ್ಲು... ಅವರಿಗೆ ಏನು ಹೇಳ್ಬೇಕೊ ತಿಳೀಲೇ ಇಲ್ಲ... ನಗ್ತಾ ಹೊರಟೇ ಹೋದ್ರು, ಇವಳು ನನ್ನ ಮುಖ ನೋಡಿ ನಗ್ತಾ ಇದ್ಲು. "ಏನೇ ಅನ್ನು ಕಣೇ, ಅಂಟೀನಾ ಪ್ರೀತ್ಸೊದು ತಪ್ಪೇ!!!" ಅಂತ ತರಲೇ ಮಾಡಿದೆ, ಹಿಡಿದ ಅಂಗೈ ಚಿವುಟಿದ್ಲು ಪ್ರೀತಿಯಿಂದ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/preetsod-tappaa.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
22 comments:
ಪ್ರಭು....
" ಪ್ರೀತ್ಸೋದು ದೇವರಾಣೆ ತಪ್ಪಿಲ್ಲ...
ನನ್ನನ್ನೇ ಪ್ರೀತ್ಸಿ" ಅಂತಿದ್ದಾರೆ ನನ್ನಾಕೆ..!
ಸೊಗಸಾದ ಬರಹ... ಹಾಸ್ಯದ ಲೇಪದೊಂದಿಗೆ ಚಿಂತನೆಗೂ ಹಚ್ಚುತ್ತದೆ....
ಕೆಲಸದ ಒತ್ತಡಗಳಿಂದ ಪ್ರತಿಕ್ರಿಯೆ ಕೊಡಲಾಗಲಿಲ್ಲ...
ಬೇಸರಿಸ ಬೇಡಿ...
ಈ ಲೇಖನಕ್ಕೆ ಮೊದಲಿಗನಾಗಿ ಬಂದಿರುವೆ...
ಓದಿದ ಮೇಲೆ ನಿಮ್ಮ ಲೇಖನ ಗುಂಗು ಹಾಗೆಯೇ ಇರುತ್ತದೆ...
ಇದು ನಿಮ್ಮ ಯಶಸ್ಸಿನ ಗುಟ್ಟು..!
ಅಭಿನಂದನೆಗಳು....
ಪ್ರಭು ಅವರೆ,
" ಪ್ರೀತ್ಸೋದು ತಪ್ಪಲ್ಲ" ಆದ್ರೆ ಪ್ರೀತಿ ನೆಪದಲ್ಲಿ ಮನೆಯವರನ್ನ ದೂರಮಾಡಿಕೊಳ್ಳುವುದು ಖಂಡಿತಾ ತಪ್ಪು ಅಂತ ನನ್ನ ಅಭಿಪ್ರಾಯ!
ಮತ್ತೊಂದು ಸೊಗಸಾದ ಬರಹ. ಹಾಸ್ಯದ ಟಚ್ ಇದ್ದರೂ ಕೊನೆಯಲ್ಲಿ ಯೋಚಿಸುವಂತೆ ಮಾಡುತ್ತದ್ದೆ!
ಪ್ರೀತ್ಸೋದು ತಪ್ಪಿಲ್ಲ ಅಂತ ಪ್ರೇಮಬರಹಗಾರರು ಹೇಳಿದ ಮೇಲೆ ಮುಗಿತು ಬಿಡಿ!!! ನನ್ನ ಮನೆಯವರು ಕೇಳುತ್ತಲಿದ್ದಾರೆ ವಾರಕ್ಕೊಂದು ಲೇಖನ ಬರೆಯಲು ಇವರಿಗೆ ವಿಷಯಗಳು ಎಲ್ಲಿ ಸಿಗುತ್ತವೆ ಎಂದು ಹ ಹ ಹ ಹ...
ಮತ್ತೊಂದು ಒಳ್ಳೆಯ ಬರಹ ತುಂಬಾ ಇಷ್ಟವಾಯಿತು...ಧನ್ಯವಾದಗಳು
ಸಿಮೆಂಟು ಮರಳಿನ ಮಧ್ಯೆ ಅವರಿಗೆ
ನನ್ನಾಕೆ ಕೂಡ ಅದನ್ನೇ ಹೇಳಿದಳು ಸರ್, ಪಕ್ಕದ ಮನೆ ಪದ್ದು ಬೇಡ, ನನ್ನನ್ನೇ ಪ್ರೀತ್ಸಿ ಅಂತ, ಅದೇನು ತಪ್ಪಲ್ಲ ಬಿಡಿ, ಆದರೆ ಪದ್ದು ಪ್ರೀತಿಸ್ತೀನಿ ಅಂದ್ರೆ ತಪ್ಪು!
ನಿಮಗೆ ಬಿಡುವಾದಾಗ ಓದಿ ಪ್ರತಿಕ್ರಿಯಿಸಿ ನನಗೇನೂ ಬೇಸರವಿಲ್ಲ, ನನಗೆ ಬರೆಯವ ಹುಚ್ಚು ಬರೆಯುತ್ತಿರುತ್ತೇನೆ.
ಚಿಂತನೆಗೀಡು ಮಾಡಿದರೆ ಸಂತೋಷ, ಚಿಂತೆಗೀಡು ಮಾಡದಿದ್ರೆ ಸಾಕು :)
ರೂpaश्री ಅವರಿಗೆ
ಪ್ರೀತಿ ನೆಪದಲ್ಲಿ ಮನೆಯವರನ್ನ ದೂರ ಮಾಡಿಕೊಳ್ಳುವುದು ಖಂಡಿತ ತಪ್ಪು, ಇಷ್ಟಕ್ಕೂ ಮನೆಯವರ ಮೇಲೂ ಪ್ರೀತಿ ತಾನೇ ಇರೋದು... ಆದರೆ ಈಗೀಗೆ ಪ್ರೀತಿ ಆಕರ್ಷಣೆ ನಡುವಿನ ವ್ಯತ್ಯಾಸ ತಿಳಿಯದೇ ದುಡುಕಿಬಿಡುತ್ತಾರಲ್ಲ ಅವರ ಬಗ್ಗೆಯೇ ಬೇಜಾರು.
ಮನಸು ಅವರಿಗೆ
ನಿಜವಾದ ಬದ್ಧತೆ ಇರುವ ಪ್ರೀತಿ ಎಲ್ಲಿದೆ ಈಗ ಅಂಥ ಪ್ರೀತಿ ಇದ್ದರೆ ತಪ್ಪಿಲ್ಲ ಆದರೆ ಆಕರ್ಷಣೆಯೇ ಪ್ರೀತಿ ಅಂದುಕೊಂಡರೆ ತಪ್ಪು. ಹೀಗಾಗಿಯೇ ನಾನು ಪ್ರೀತಿಯ ನಿಜವಾದ ವ್ಯಾಖ್ಯಾನದ ಹೊರತು ಉತ್ತರವಿಲ್ಲ ಎಂದಿದ್ದೇನೆ.
ಎನೊ ವಾರಕ್ಕೊಂದು ತಪ್ಪದಂತೆ ಬರೆಯುತಿದ್ದೇನೆ, ಅನಿವಾರ್ಯ ಕಾರಣ ತಪ್ಪಿದ ಹೊರತು, ಇದೇ ವಿಷಯ ಅಂತ ಆರಿಸಿಕೊಂಡು ಬರೆಯುವುದಿಲ್ಲ ಹಾಗೆ ನನಗೆ ಬರೆಯಲು ಬರುವುದಿಲ್ಲ, ತಟ್ಟನೆ ಹೊಳೆದ ಸನ್ನಿವೇಷಕ್ಕೆ ಕಥೆಯಂತೆ ಮಾತುಕತೆ ಶುರು ಮಾಡಿಬಿಡುತ್ತೇನೆ.. ಬಹಳ ಸಾರಿ ಎಲ್ಲ ಬರೆದು ಶೀರ್ಷಿಕೆ ಬರೆಯುತ್ತೇನೆ, ಮನಸಿಗೆ ಅನಿಸಿದ್ದೇ ವಿಷಯವಾಗುತ್ತದೆ.
ಪ್ರಭು,
ನಿಮ್ಮ ಲೇಖನ ನಾನು ನನ್ನಾಕೆ ಒಟ್ಟಿಗೆ ನೋಡಿದ್ವಿ.....
ಪ್ರೀತ್ಸೋದು ತಪ್ಪಲ್ಲ....ಪ್ರೀತ್ಸು ತಪ್ಪೇನಿಲ್ಲ.....
ಮತ್ತೊಂದು ಸೊಗಸಾದ ಬರಹ...
ಮುಂದಿನ ವಾರಕ್ಕೆ ಕಾಯ್ತಾ ಇರ್ತಿನಿ....ಹೊಸ ವಿಷಯಕ್ಕೆ...
ಪ್ರಭು ,
ಯಾವಗಿನ ಹಾಗೆ ಸು೦ದರ ಹಾಗು ಮನ ಮುಟ್ಟುವ ಶೈಲಿ. ನೀವು ಹೇಳಿದ್ದು ಸರಿ . ನಿಮ್ಮ ಬೆ೦ಬಲಕ್ಕೆ ನಾನು ಇದ್ದೇನೆ .. ಬರಿ ಆಕರ್ಷಣೆ ಎ೦ದರೆ ಅದು ಯಾವಾಗಲು ಶಾಶ್ವತ ಅಲ್ಲ .. ಎಲ್ಲಿಯೋ ಓದಿದ ನೆನಪು .. "೫೦ ವರ್ಷದ ನ೦ತರ ಯೋಚಿಸಿದರು
ನಾನು ಈ ವ್ಯಕ್ತಿ ಯೂ೦ದಿಗೆ ಸುಖವಾಗಿ ಇರುತ್ತೇನೆ ಎ೦ದು ಬಲವಾಗಿ ಅನ್ನಿಸಿದರೆ ಹಾಗು ಅವರನ್ನು ಈಗ ಹೇಗೆ ಇದ್ದಾರೆಯೋ ಹಾಗೆ ಅವರನ್ನು ಸ್ವಿಕರಿಸುತ್ತೇನೆ ಅ೦ದರೆ ಅವರ ಧನತಾತ್ಮಕ ಹಾಗು ಋನಾತಾತ್ಮಕ ಎರಡನ್ನು ಸಮನಾಗಿ ಸ್ವಿಕರಿಸುತ್ತೇನೆ " ಎ೦ದು ಅನ್ನಿಸಿದರೆ . ಆ ಮನುಷ್ಯನನ್ನು ಪ್ರೀತಿಸಿ ಮದುವೆ ಆಗುವುದು ಸರಿ .. ಇಲ್ಲದಿದ್ದರೆ ನಮ್ಮ ಜೀವನಕ್ಕೆ ನಾವೇ ಕಲ್ಲು ಚಪ್ಪಡಿ ಹಾಗಿದ ಹಾಗೆ ..
ಚಿಂತನೆಗೂ ಹಚ್ಚುವ ಬರಹ ..ನಿಮ್ಮ ಲೇಖನದ ಗುಂಗು ಯಾವಾಗಲು ಹಾಗೆಯೇ ಇರುತ್ತದೆ..
ಪ್ರೀತಿನೆ ಜೀವನ ಅ೦ತ ಕವಿಗಳು ಅ೦ತಾರೆ,
ಪ್ರೀತ್ಸು ತಪ್ಪೆನಿಲ್ಲ ಅ೦ತ ಸಿಮೆಮ, ಕಾದ೦ಬರಿ ಹೆಳುತ್ತವೆ,
ಪ್ರೀತಿಸಿದ್ರೆ ಬಾರಿಸ್ತಿನಿ ಅ೦ತ ಅಪ್ಪ, ಅಮ್ಮ ಹೆಳ್ತಾರೆ,
ಪ್ರೀತಿಸಿ ನೇಣು ಹಾಕಿಕೊ೦ಡು ಸಾಯಿರಿ, ಅದನ್ನ ಲೈವ್ ಕವರೇಜ್ ಮಾಡಿ ನಮ್ಮ ಟಿ ಅರ್ ಪಿ ನ ಎರಿಸ್ಕೊತಿವಿ ಅ೦ತ ಟೀವಿ ಚಾನೆಲ್ ಗಳು ಹೆಳುತ್ತವೆ!!!
ನನ್ನ ಪ್ರಕಾರ ಪ್ರೀತಿ ಮಾಡೊದು ತಪ್ಪಲ್ಲ, ಆದರೆ ಒ೦ದು ಪ್ರೀತಿಗಾಗಿ ಹಲವಾರು ಜನರ ನ೦ಬಿಕೆ, ವಿಶ್ವಾಸ ಕಳೆದು ಕೊ೦ಡರೆ ನಷ್ಟ ನಮಗೆ ಅಲ್ಲವ?..
(ಪ್ರೀತಿ ಮಾಡೋದು ತಪ್ಪಲ್ಲ, ಆದರೆ ಹೆ೦ಡತಿಗೆ ಗೊತ್ತಾಗಬಾರದು ಅಷ್ಟೆ!! - ತಮಾಶೆಗೆ)
ಪ್ರೀತ್ಸೋದ್ ತಪ್ಪಾ? ಇದರ ಬಗ್ಗೆ ನಿಮ್ಮ ಲೇಖನ ಓದಿ, ನನ್ನ ಆಫೀಸಿನಲ್ಲಿ ಕೆಲಸ ಮಾದುವವನನ್ನ ಕೇಳ್ದೆ. "ಪ್ರೀತಿ ಬಗ್ಗೆ ಹೀಗೆ ರಿಸರ್ಚ್ ಮಾಡ್ತಾ ಇದ್ರೆ ಮುದುಕ ಆಗ್ಬಿಡ್ತಿಯಾ. ಆಮೇಲಿ ಪ್ರೀತಿ ಮಾಡಿ ಏನ್ ಸುಖ?" ಅಂತ ನನಗೇ ಮರುಪ್ರಶ್ನೆ ಹಾಕಿದ. ನಾನಂತೂ ಈ ಲವ್ವು ಗಿವ್ವು ಅಂತ ಬೀಳಲಿಲ್ಲ. ಬಿದ್ದಿದ್ದರೆ ಅವನ ಪ್ರಶ್ನೆಗೆ ಉತ್ತರಿಸಬಹುದಿತ್ತೇನೋ.
ಪ್ರಭು,
In my opinion, love is broader term which has many dimensions. Let us talk about current topic. I have seen lot of love affairs of my friends since from my school days!!!. Out of which there are very few which are ended in marriage. I really don’t know why especially in INDIA we make lot of fuss about lovers. 99% of our movies will be on love stories. But still the success rate of love marriages is very less.
So” ಪ್ರೀತ್ಸೋದು ತಪ್ಪ” is a very difficult question to answer!!!!!
ಪ್ರಭು,
ಹಳೆ ಗಾದೆ ಮಾತೊಂದು ನೆನಪಾಯ್ತು:
"ಪ್ರೀತಿಸೋದು ತಪ್ಪಲ್ಲ; ಪ್ರೀತಿಸಿ ಮದುವೆಯಾಗೋದು ತಪ್ಪು!"
ಚೆ೦ದದ ಬರಹ. ಉತ್ತರ ಸಿಗದ ಪ್ರಶ್ನೆಗಳನ್ನೇ ಕೇಳ್ತೀರಿ ಪಾಪ ನಿಮ್ಮಾಕೆಗೆ! :) ಓದುಗರ ತಲೆಗೂ ಹುಳ ಬಿಡ್ತೀರಿ! :)
ಸವಿಗನಸು ಅವರಿಗೆ
ಮನಸು ಸವಿಗನಸು ಸೇರಿ ನಿಮ್ಮ ಪ್ರೀತಿ ಹೀಗೆ ಇದ್ದು ನನ್ನ ಕಲ್ಪನೆಗಳ ಸಂಸಾರ ಅಲ್ಲಿಯಾದರೂ ನನಸಾಗಲಿ...
ಪ್ರೀತ್ಸೋದು ತಪ್ಪಲ್ಲ....ಪ್ರೀತ್ಸು ತಪ್ಪೇನಿಲ್ಲ... ಪಕ್ಕದ ಮನೆ ಪದ್ದುನಲ್ಲ... ಪಕ್ಕದಲ್ಲಿರುವ ಪತ್ನಿಗೆಯಾಗು ನಲ್ಲ.
:) ಮತ್ತೆ ಸಿಗೋಣ ಮುಂದಿನವಾರ.
roopa ಅವರಿಗೆ
ಬಹಳ ಚೆನ್ನಾಗಿ ಹೇಳಿದರಿ, ಐವತ್ತು ವರ್ಷದ ನಂತರವೂ ಸುಖವಾಗಿರುತ್ತೇನೆ ಅಂದರೆ ಅವರನ್ನೇ ಸ್ವೀಕರಿಸಿ ಅಂತ... [ಆದ್ರೆ ಐವತ್ತು ವರ್ಷ ಬದುಕುತ್ತೇವೆ ಇಲ್ಲೊ ಗೊತ್ತಿಲ್ಲ :) ಸುಮ್ನೇ ತಮಾಶೆ]
ಆಯ್ಕೆ ಮಾಡುವಾಗ ನಿಮ್ಮ ಸೂತ್ರ ಸರಿಯಾಗುತ್ತದೆ,
ವೈಯಕ್ತಿಕವಾಗಿ ನನ್ನ ಕೇಳೊದಾದ್ರೆ ಮದುವೆಯಾದವರನ್ನೇ ಪ್ರೀತ್ಸೋದು ಒಳ್ಳೇದು, ನನಗೆ ಈ ಪ್ರೀತಿ ಪ್ರೇಮ(ಮದುವೆ ಮುಂಚಿನ)ಇವುಗಳಲ್ಲಿ ನಂಬಿಕೆ ಇಲ್ಲ. ಅದಕ್ಕೇ ಮದುವೆಗೆ ಮುಂಚೆ ಕೂಡ ನನಗೆ ನಾಳೆ ಮದುವೆಯಾಗಲಿರುವ ನನ್ನಾಕೆಯ ಮೇಲೇ ಪ್ರೀತಿ.
ಬಾಲು ಅವರಿಗೆ
ಹ ಹ ಹ ಚೆನ್ನಾಗಿವೆ ನಿಮ್ಮ ವ್ಯಾಖ್ಯಾನಗಳು, ಚಾನೆಲ್ಲಿನ ಬಗ್ಗೆ ಬರೆದದ್ದು ಬಹಳೆ ನಿಜ ಅನಿಸಿತು.
ನಂಬಿಕೆ ವಿಶ್ವಾಸ ಬೆಳೆಸುವಂಥದ್ದೇ ಪ್ರೀತಿ, ಆದರೆ ಈಗ ಪ್ರೀತಿ ಅಂತ ಓಡಿ ಹೋಗೋರು ಆ ನಂಬಿಕೆಗೇ ಅರ್ಹತೆ ಕಳೆದುಕೊಂಡುಬಿಡುತ್ತಾರೆ.
ಹೆಂಡತಿಗೆ ಗೊತ್ತಾದರೂ ತೊಂದರೆಯಿರಬಾರದು ಅಂದರೆ, ಹೆಂಡತಿಯನ್ನೇ ಪ್ರೀತಿಸಬೇಕು :)
ರಾಜೀವ ಅವರಿಗೆ
ಪ್ರೀತಿ ಬಗ್ಗೆ ರಿಸರ್ಚ್ ಮಾಡ್ತಾ ಇರೋದೇ ಬೇಡ, ಬೇಗ ಮದುವೆಯಾಗಿ, ಪತ್ನಿಯನ್ನೇ ಪ್ರೀತ್ಸಿ!
ಲವ್ಲ್ಲಿ ಬೀಳದಿದ್ದದ್ದೇ ಒಳ್ಳೇದು,ಅದಕ್ಕೇ ಅದನ್ನು ಬೀಳೊದು ಅನ್ನೋದು, ಏಳೊದು ಅಂತಲ್ಲ :)
Ajay ಅವರಿಗೆ
I do agree with your opinion. Love is a term with different definitions.
The reason for the failures of these affairs is that... It was not love, It was just attraction, and they thought it's love, and finally it ended up like that...
Everybody want to sell nice dreams, nobody bothers whether they are in reality or not... so they make movies and earn...
Absolutely true, it's difficult to answer as there are many contexts for it... and in each context it is different...
sunaath ಅವರಿಗೆ
ಈ ಗಾದೆ ಕೇಳಿರಲಿಲ್ಲ... "ಪ್ರೀತಿಸೋದು ತಪ್ಪಲ್ಲ; ಪ್ರೀತಿಸಿ ಮದುವೆಯಾಗೋದು ತಪ್ಪು!"... ಮದುವೆಯಾಗಿ ಪ್ರೀತಿಸದಿರುವುದೂ ತಪ್ಪು...
ವಿನುತ ಅವರಿಗೆ
ಅವಳೇನು ಕಮ್ಮಿಯಾ ತರಲೆ ಉತ್ತರಗಳನ್ನೇ ಕೊಡುತ್ತಾಳೆ :) ಹುಳು ನನ್ನ ತಲೆಯಷ್ಟೇ ತಿನ್ನುತ್ತಿದ್ದರೆ ಒಬ್ಬಂಟಿ ಎನಿಸುತ್ತದ್ದೆ ಅದಕ್ಕೆ ಈ ಪ್ರಶ್ನೆಗಳನ್ನು ಹೊರದೂಡಿಬಿಡುವುದು...
ಪ್ರಭು,
ಒಳ್ಳೆಯ ಸಂಕಟಕ್ಕೆ ಸಿಕ್ಕಿಹಾಕಿಸಿಬಿಟ್ರಿ...
ಒಂದು ಬ್ಯಾಚುಲರ್ ರೂಂನಲ್ಲಿ ನಾಲ್ವರು.
೧] ಬೈಕಿನ ಮೇಲೆ ಹುಡುಗಿಯನ್ನು ಹುಡುಗ ಕೂಡಿಸಿಕೊಂಡು MGರೋಡಲ್ಲಿ ಕೈಬಿಟ್ಟುಕೊಂಡು ಹೋಗೋದು ಪ್ರೀತಿ ಅನ್ನೋನು ಒಬ್ಬ.
೨]ಮದುವೆಯಾಗಿ ಡೈವರ್ಸ್ ಕೊಟ್ಟು ಬ್ಯಾಚುಲರ್ ರೂಂನಲ್ಲಿ ಪ್ರೀತಿ ಅಂದ್ರೆ ವೈರಾಗ್ಯ ಅಂತ ಚರ್ಚೆ ಮಾಡುವವನು ಒಬ್ಬ.
೩]ಸದಾ ಪ್ರೀತಿ ಪ್ರೇಮ ಅಂತ ಕನಸು ಕಾಣುತ್ತಾ ಸ್ವರ್ಗದಲ್ಲಿ ತೇಲುತ್ತಾ ಇರುವವನೊಬ್ಬ
೪]ಪ್ರೀತಿಸಿದ ಹುಡುಗಿಗೆ ಹೇಗೆ ಇಷ್ಟವೋ ಹಾಗೆ ಇರಲು ಸ್ವತಂತ್ರ ಕೊಟ್ಟು ಅವಳ ಆನಂದವನ್ನು ನೋಡುತ್ತಾ enjoy ಮಾಡಬೇಕು ಎನ್ನುವವನೊಬ್ಬ.
ಹೀಗೆ ನಾಲ್ಕು ವಿಧದ ಪಾತ್ರಗಳನ್ನಿಟ್ಟುಕೊಂಡು ಹತ್ತು ವರ್ಷದ ಹಿಂದೆ ಒಂದು ನಾಟಕ ಮಾಡಿದ್ದೆವು. ಬಲು ಮಜವಿತ್ತು ಆಗ ಎಲ್ಲೆಲ್ಲೋ ಊರುಸುತ್ತಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದೇವು. ನಾಲ್ಕು ಪಾತ್ರಗಳಲ್ಲಿ ನಾನು ಒಂದು ಪಾತ್ರ ಮಾಡಿದ್ದೆ.
ನಿಮ್ಮ ಲೇಖನ ಓದಿ ನನಗೆ ಹಳೆಯ ನೆನಪಾಯಿತು.
ಹೌದು ಪ್ರೀತ್ಸೋದು ತಪ್ಪಾ.. ನನ್ನ ಶ್ರೀಮತಿಗೆ ಕೇಳಿದೆ
ನಿಮ್ಮ ಪ್ರೀತಿ ಜಾಸ್ತಿಯಾಯ್ತು. ನನಗೆ ಸ್ವಲ್ಪ ಉಸಿರಾಡುವುದಕ್ಕೆ ಬಿಡ್ರಿ...ಊರಿಗಾದ್ರೂ ಹೋಗಿ ಬರ್ತೀನಿ ಅನ್ನಬೇಕೆ ನನ್ನಾಕೆ!
ಉತ್ತರ ನೀವೆ ಹೇಳಬೇಕು!
ಪ್ರಭು ಸರ್ ,
ತುಂಬಾ ಚೆನ್ನಾಗಿ ಬರಿತೀರಿ ಕಣ್ರೀ .. ಇಲ್ಲೂ ಚೆನ್ನಾಗಿ ಹಾಸ್ಯದ ಒರೆ ಹಚ್ಚಿದ್ದೀರಿ ..ಇದೇ ತರಹ ಚಂದದ ಲೇಖನಗಳು ಬರ್ತಾ ಇರಲಿ
ಹೀಗೆ ಅಗಾಧವಾಗಿ ಕ್ಲಿಷ್ಟಕರವಾದ ಪ್ರಶ್ನೆಗಳನ್ನಾ ಕೇಳೋ ನಿಮ್ಮಾK ಬೇಗ ಸಿಗಲಿ .. :)
ಲೇಖನ ತುಂಬಾ ಚೆನ್ನಾಗಿದೆ ಪ್ರಭು ಅವರೆ....
ಮದುವೆ ಯಾಕಾಗಬೇಕು ಮತ್ತು ಪ್ರಿತ್ಸೋದು ತಪ್ಪಾ, ಯೋಚಿಸುವಂತೆ ಮಾಡುತ್ತವೆ ...
ಹೀಗೆ ಬರಿತಾಇರಿ ..
shivu ಅವರಿಗೆ
ಅಬ್ಬಾ ನಾಟಕಗಳನ್ನೂ ಮಾಡಿದ್ದೀರಾ... ನಾಲ್ಕು ಪಾತ್ರಗಳೂ ವಿಭಿನ್ನ ಮನೊಭಾವದ ಸೂಚಕಗಳು... ಆ ನಾಟಕದ ಬಗ್ಗೆ ಸಾಧ್ಯವಾದರೆ ಬ್ಲಾಗ್ ಪೋಸ್ಟ ಹಾಕಿ...ಎಲ್ಲರೂ ಓದಬಹುದು..
ಶ್ರೀಮತಿಯವರು ಊರಿಗೆ ಹೋಗಿ ಬರಲಿ ಬಿಡಿ.. ನನ್ನಾಕೆಯನ್ನೂ ಕಳಿಸಲು ಪ್ರಯತ್ನಿಸುತ್ತಿದ್ದೇನೆ, ಎಲ್ಲಿ ಪದ್ದು ಜತೆ ಪ್ರೀತ್ಸಿ ಓಡಿಹೋಗ್ತೀನೊ ಅಂತ ಹೊಗಳೆ ತಯ್ಯಾರಿಲ್ಲ!
Ranjita ಅವರಿಗೆ
ಎನೊ ಮನದಲ್ಲಿ ಮೂಡುವ ಕಲ್ಪನೆಗೆಗಳು, ಬ್ಲಾಗಗೆ ಹರಿದು ಬರುತ್ತವೆ... ಪ್ರಶ್ನೆ ಕೇಳೊ ನನ್ನಾಕೆಗಾಗಿ ಹಾರೈಸಿದ್ದಕ್ಕೆ ಧನ್ಯವಾದಗಳು, ನಾನು ಸಾಧ್ಯವಾದಷ್ಟು ತರಲೆ ಉತ್ತರ ಕೊಡುತ್ತ ಇದ್ದು ಬಿಡುತ್ತೇನೆ.
Manju ಅವರಿಗೆ
ಬ್ಲಾಗಗೆ ಸ್ವಾಗತ... ಎಲ್ಲರ ಯೊಚನೆಗಳು ನನ್ನವೂ ಕೂಡ ಅವೇ. ಎಷ್ಟು ಯೋಚಿಸಿದರೂ ಉತ್ತರ ಹೊಳೆಯದು.
ಪ್ರಿಯೆ ನಿನ್ನ ಮುಖಾರವಿಂದಕೆ ಭ್ರಮರ ಚುಂಬನವಿಡುವುದನು ಸಹಿಸದೆ ಹೊಡೆದುರುಳಿಸಿದೆ- ಇದು ದುಶ್ಯಂತ ಶಕುಂತಲೆಯಲಿ ಅನುರಕ್ತನಾದಾಗ ಹೇಳಿದ ಮಾತು..ಅಂದ್ರೆ ನೀವು ಕೇಳಿಸಿಕೊಡ್ರಾ ಅವನು ಹೇಳಿದ್ದನ್ನ ಅಂತ ಕೇಳ್ಬೇಡಿ... ನಾನು ಕೇಳಿದೆ ಅಂತಲ್ಲ........ ನೀವು ಹಾಕಿರೋ ಬ್ಲಾಗ್ ಪೋಸ್ಟನ್ನ ನೋಡಿ ಹೇಳ್ಬೇಕಾಯ್ತು.
ಅಲ್ರೀ ಪ್ರಭು ನಾವು ಸಂತೋಷವಾಗಿ ಸಂಸಾರ ಮಾಡ್ಬೇಕು ಅಂತೀರೋ ಇಲ್ಲವೋ?? ಆ ದಿನ ಮದ್ವೆ ಯಾಕೆ ಆದದ್ದು ಅಂತ ಬ್ಲಾಗ್ ಪೋಸ್ಟ ನಲ್ಲೇ ನಮ್ಮೆಲ್ಲರ ಹೆಂಡ್ತೀರು ಕನಿಷ್ಟ ಒಂದಿನ ಮಾತು ಬಿಡೋ ಹಾಗೆ ಮಾಡಿದ್ರಿ...ಈಗ ಇದೊಂದು ಹೊಸ ಬೊಂಬು....ಅಲ್ಲಲ್ಲ...ಬಾಂಬು... ಪ್ರೀತ್ಸೋದ್ ತಪ್ಪಾ..? ಹುಚ್ಚ ನಾನು...ನಿಮ್ಮ ಬ್ಲಾಗ್ ನೋಡಿ ಕೇಳ್ಬಿಟ್ಟೆ ನೋಡಿ...ಯಾರನ್ನ ಅಂತೀರಾ...ನನ್ನಾK ನಾ?? ಅಲ್ಲಲ್ಲ...for a change... ಪಕ್ಕದಮನೆ PG ಆಗಿದ್ದ ಶೈಲೂ ಅನ್ನೋ MNC ಬೆಡಗಿಗೆ...ಎಲ್ಲಿದ್ದಳೋ..ಕೇಳಿಸ್ಕೊಳ್ಳೋದೇ ನನ್ನಾK.
ಈ ಗ ನೀವೇ ಹೆಲ್ಪ್ ಮಾಡಿ ಹೇಗೆ ಅವಳನ್ನ ತವರಿಂದ ಕರೆಸಿಕೊಳ್ಳೋದು ಅಂತ ಹೇಳಿ..??
Good thinking now a days from you...but spare us..please...hahahaha
ಜಲನಯನ ಅವರಿಗೆ
ಸರ್ ನಿಮ್ಮ ಕಮೆಂಟ್ ನೋಡಿ, ನನ್ನಾಕೆ "ಪ್ರಿಯ ನಿನೊಂದು ಭ್ರಮರದಂತೆ ನಿನ್ನ ಮನವ ಸೆಳೆದು ಚುಂಬನಕ್ಕೆ ಕಾದಿರುವ ಈ ಪುಷ್ಪಗಳ ಹೊಡೆದುರುಳಿಸುವೆ" ಅಂತ ನನ್ನ ಅನುರಕ್ತೆ ಇಡೀ ಹೂದೋಟದಲ್ಲಿರುವ ಹೂಗಳನ್ನೆಲ್ಲ ಕಿತ್ತು ಹಾಕುತ್ತಿದ್ದಾಳೆ ಎನು ಮಾಡಲಿ.
ಹ ಹ ಹ, ನಿಮ್ಮ ಸಂಸಾರ ಸರಸಮಯವಾಗೇ ಇರಲಿ ಅಂತ ಬ್ಲಾಗ ಬರೆಯುವುದು ಅಲ್ಲಲ್ಲಿ ಸ್ವಲ್ಪ ಮಿಸ್ಟೇಕು ಆಗಿ ಹೀಗಾಗುತ್ತದೆ.
ಸರ್ ಶೈಲೂನ ನನಗೆ ರೀಡಿರೆಕ್ಟ ಮಾಡಿಬಿಡಿ!!, ನಿಮ್ಮಾಕೆಯನ್ನ ತವರಿಂದ ಕರೆಸಿಕೊಳ್ಳುವ ಐಡಿಯಾ ಹೇಳುತ್ತೇನಿ... ಡಂ.. ಟಂ.. ಡಿಶುಂ..!!! ಎಲ್ಲಿಂದ ಸೌಂಡ್.. ಸರ್ ನನ್ನಾಕೆ ಈ ಕಂಮೆಂಟ ನೋಡಿ ತಲೆ ಮೇಲೆ ಚೊಂಬು ತೆಗೆದುಕೊಂಡು ಕುಟ್ಟುತ್ತಿದ್ದಾಳೆ ಆಮೇಲೆ ಸಿಕ್ತೀನಿ.
Hello,
Preethi nijavade adali adake
geluvu kanditha..
"ಪ್ರೀತ್ಸೊದ್ ತಪ್ಪಾ?" prashnege olle uttara kotidiri
innu mundhe yarre ee prashne kelidru uttara " ನನ್ನಾK -Prabhu" ravara blog visist madi yenuthene
Chenndada baraha :)
ಪ್ರೀತಿಯಿ೦ದ ವೀಣಾ :) ಅವರಿಗೆ
ಅಂಥ ನಿಜವಾದ ಪ್ರೀತಿ ಈಗ ಸಿಗುತ್ತದೆ ಅಂತೀರಾ... ಅಂಥದು ಸಿಕ್ಕರೆ ಗೆಲುವು ಖಂಡಿತವಾಗಬಹುದೇನೊ ಆದರೂ ನನಗೆ ಅದರಲ್ಲಿ(ಪ್ರೀತಿ ಪ್ರೇಮ ಲವ್) ವೈಯಕ್ತಿಕವಾಗಿ ನಂಬಿಕೆ ಇಲ್ಲ... ಇದೇ ಲೇಖನ ಉತ್ತರ ಆಗಲಿಕ್ಕಿಲ್ಲ, ನನ್ನದು ಅದಕ್ಕೊಂದು ಉತ್ತರ ಕಂಡು ಹಿಡಿಯುವ ಪ್ರಯತ್ನ...
ಖಂಡಿತ ಓದಲು ಹೇಳಿ, ನನ್ನಾಕೆ ಮತ್ತು ನಾನು ಅವರ ತಲೆಯನ್ನೂ ಇನ್ನೂ ಹಲವು ಪ್ರಶ್ನೆಗಳೊಂದಿಗೆ ತಿಂದು ಹಾಕುತ್ತೇವೆ :)
'ಪ್ರಿತ್ಸೋದು ತಪ್ಪಾ?' ಪ್ರಶ್ನೆ ಯಾರಿಗೆ ಬೇಕಾದರು ಕೇಳಿ, ಉತ್ತರ ಹೇಳಲಿಕ್ಕೆ ಶುರು ಮಾಡುವುದು 'ನಗು'ವಿನಿಂದಲೇ....
ಅಂದ್ರೆ ಉತ್ತರ ಗೊತ್ತಿದ್ದೂ ಪ್ರಶ್ನೆ ಕೇಳುವವರ ತಲೇಲಿ ಏನ್ ಇದೆ ಅಂತ ತಿಳ್ಕೊಳಕ್ಕ? ಯಾಕೋ ನಿಮ್ಮ ಇ ಚೆ೦ದದ ಬರಹದಲ್ಲಿ ಅದೇ ಅನುಭವ ಆಗಿದೆ......
Raghu ಅವರಿಗೆ
ಹೌದೌದು ನಾನೂ ನೋಡಿದ್ದೀನಿ ಕೇಳಿದರೆ ಉತ್ತರ ಹೇಳಲಿಕ್ಕೆ ಶುರು ಮಾಡುವುದು 'ನಗು'ವಿನಿಂದಲೇ.
ಒಂದು ರೀತಿ ಜನರ ಮನದಲ್ಲಿ ಏನಿದೆ ಅಂತ ತಿಳಿಯುವ ಉದ್ದೇಶ ಇತ್ತಾದರೂ ಅದೇ ಉದ್ದೇಶವೇನಾಗಿರಲಿಲ್ಲ... ಸದ್ಯ ಪರಿಪೂರ್ಣ ಉತ್ತರವಂತೂ ನನಗೆ ಗೊತ್ತಿಲ್ಲ, ಹದಿಹರೆಯದ ಪ್ರೀತಿ ಬರೀ ಆಕರ್ಷಣೆ ಆದರೆ, ಮದುವೆಯಾಗಿ ಬದ್ಧತೆ ಇರುವ ಪ್ರೀತಿ ತಪ್ಪಲ್ಲ ಅಂತ ಅನಿಸಿಕೆಯಿದೆ...
Post a Comment