ಮುಂಜಾನೆ ಟಿಫಿನ್ನಿಗೆ ಅಂತ ಉಪ್ಪಿಟ್ಟು ಮಾಡಿದ್ಲು, ಅದೇ ಖಾರಭಾಥ್, ಉಪಮಾ ಅಂತಾರಲ್ಲ ಅದೇ ನಮ್ಮೂರಲ್ಲಿ ಉಪ್ಪಿಟ್ಟು. ನನಗೆ ಟೇಬಲ್ಲಿನ ಮೇಲೆ ಹಾಕಿಟ್ಟು ಸ್ನಾನಕ್ಕೆ ಹೋಗಿದ್ಲು, ಸ್ವಲ್ಪ ಸುಡು ಸುಡು ಬಿಸಿ ಇತ್ತು, ಆರಲಿ ಅಂತ ಕಾದು ಕೂತಿದ್ದೆ, ಸ್ನಾನ ಮುಗಿಸಿ, ನೀರು ಹೀರಲು ತಲೆಗೆ ಟವೆಲ್ಲು ಹಾಕಿ ತುರುಬು ಕಟ್ಟಿಕೊಳ್ಳುತ್ತ ಬಂದವಳು, ನನ್ನ ಮುಖದ ಮುಂದೆ ಕೈಯಾಡಿಸಿದಳು, ಡ್ರಾಪ್ ಕೇಳಲು ನಿಲ್ಲು ಅಂತ ಸೂಚಿಸುವರಂತೆ, "ಏನು ಧ್ಯಾನ ಮಾಡ್ತಾ ಇದೀರ, ಉಪ್ಪಿಟ್ಟು ಆರಿ ಹೋದರೆ ಏನು ಚೆನ್ನಾಗಿರ್ತದೆ ತಿನ್ನಿ" ಅಂದ್ಲು. "ಹೂಂ, ತಪಸ್ಸು ಮಾಡ್ತಾ ಇದ್ದೆ, ಊರ್ವಶಿ ಏನಾದರೂ ಪ್ರತ್ಯಕ್ಷ ಆಗ್ತಾಳೋ ಅಂತ" ಅಂದೆ, "ದೇವರು ಪ್ರತ್ಯಕ್ಷ ಆಗಲಿ ಅಂತ ಎಲ್ರೂ ತಪಸ್ಸು ಮಾಡಿದ್ರೆ ಊರ್ವಶಿಗಾಗಿ ತಪಸ್ಸು ಮಾಡೋರು ನೀವೆ ಅಂತ ಕಾಣ್ತದೆ, ಊರ್ವಶಿ ಎನೂ ಇಲ್ಲ... ನಿಮಗೆ ನಾನೇ ವಾಸಿ" ಅಂತ ಬುದ್ಧಿ ಹೇಳಿದಳು, ಬುದ್ಧಿ ಬಂತೋ ಇಲ್ವೊ ಗೊತ್ತಿಲ್ಲ, ಆ ಕಡೆ ನಡೆದಿದ್ದವಳ ಕೈ ಹಿಡಿದೆಳೆದು, ಯಾವಾಗಿನಂತೆ, ಆ ಕೇಶರಾಶಿಯ ಸುವಾಸನೆ ಎಳೆದು ಬಿಟ್ಟುಕೊಟ್ಟೆ, ಆಗ ತಾನೆ ಮಜ್ಜನಗೈದ ಮುಡಿಯ ಪರಿಮಳ ಮುದ ಕೊಡುತ್ತದೆ, ಕೈಸೆರೆ ಬಿಡಿಸಿಕೊಂಡು, ಧ್ಯಾನ ಮಾಡುತ್ತ ಪೂಜೆ ಮಾಡಲು ಹೊರಟಳು. ಇತ್ತ ಉಪ್ಪಿಟ್ಟು, "ನಿನ್ನ ಊರ್ವಶಿಯೊಂದಿಗಿನ ಸರಸ ಸಾಕು, ವಸಿ ನನ್ನ ಪರಿಮಳವೂ ನೋಡು" ಅಂತ ಬಿಸಿ ಉಗಿ(ಆವಿ) ಬಿಟ್ಟಿತು. ಒಂದು ತುತ್ತು ಊದಿ ಆರಿಸಿ ಬಾಯಿಗಿಟ್ಟೆ, ಉಪ್ಪಿಟ್ಟು ಉಪ್ಪುಪ್ಪಾಗಿತ್ತು.
ತುತ್ತು ತಿಂದವನು, ಇಂಗು ತಿಂದ ಮಂಗನಂತೆ ಮುಖ ಮಾಡಿಕೊಂಡು ಕೂತೆ, ಇನ್ನೂ ಪ್ಲೇಟು ತುಂಬ ಉಪ್ಪಿಟ್ಟು ಇತ್ತು, "ನಿನ್ನ ನಲ್ಲೆಯ ಸಿಹಿ ಮುತ್ತುಗಳೇ ಬೇಕೇ ನಿಂಗೆ, ತಿನ್ನು ಉಪ್ಪು ಉಪ್ಪು ಉಪ್ಪಿಟ್ಟು" ಅಂತ ಅಣಕಿಸುತ್ತಿತ್ತು. ಅಗರಬತ್ತಿಯ ಪರಿಮಳ ಸೂಸುತ್ತ ಹೊರಬಂದಳು, ನನ್ನ ಮುಖ ನೋಡಿ ಮಂತ್ರ ಪಟಿಸುತ್ತಲೇ, ಏನು ಅನ್ನುವಂತೆ ಹುಬ್ಬು ಮೇಲೇರಿಸಿದಳು, "ಉಪ್ಪಿಟ್ಟೂ ಅಂತ ಗೊತ್ತು... ಆದ್ರೆ, ಎನೂ ಇಲ್ಲ ಉಪ್ಪು ಬಿಟ್ಟು" ಅಂದೆ, "ಸ್...." ಅಂತ ತಲೆ ಮೇಲೆ ಕೈಯಿಂದ ಕುಟ್ಟಿಕೊಂಡವಳು, ಮಂತ್ರ ಮುಗಿಸಿ ಬಂದು ಹಲ್ಲು ಕಿರಿದಳು, "ಅಯ್ಯೊ... ಕೈಜಾರಿ ಸ್ವಲ್ಪ ಜಾಸ್ತಿ ಬಿದ್ದಿರಬೇಕು ರೀ..." ಅಂತ. ನಾ ನಗುತ್ತ ಮತ್ತೊಂದು ತುತ್ತಿಗೆ ಕೈ ಹಾಕುತ್ತಿದ್ದರೆ, ಬೇಡವೆಂದು ಕಸಿದುಕೊಂಡು ಪಾಕಶಾಲೆ ಸೇರಿದಳು, ನಾನೂ ಹಿಂಬಾಲಿಸಿದೆ "ಪರವಾಗಿಲ್ಲ ಕೊಡೆ ತಿಂತೀನಿ" ಅನ್ನುತ್ತ, ತಾನೂ ಸ್ವಲ್ಪ ಬಾಯಿಗಿಟ್ಟುಕೊಂಡು ರುಚಿ ನೋಡಿದವಳು, ಸಿಟ್ಟಿನಿಂದ ನೋಡಿ "ಅದ ಹೇಗೆ ತಿಂತೀರಾ, ಬಹಳ ಉಪ್ಪಾಗಿದೆ, ಬೀಪೀ ಜಾಸ್ತಿ ಆದರೆ ನನ್ನ ಮೇಲೆ ಹಾರಾಡ್ತೀರ.. ಎನೂ ಬೇಡ" ಅಂತ ತವೆ ಬಿಸಿ ಮಾಡಲಿಟ್ಟಳು, "ಬೇಗ ಬ್ರೆಡ ಟೋಸ್ಟ ಮಾಡಿ ಕೊಡ್ತೀನಿ ತಿಂದು ಹೋಗಿ" ಅಂತನ್ನುತ್ತ. "ಟೈಮಿದೆ ಬಿಡು ಇನ್ನೂ" ಅಂದು ಅಲ್ಲೇ ಇದ್ದ ಕಡಲೇಬೀಜ ನಾಲ್ಕು ತಿನ್ನುತ್ತ ಹೊರಬಂದೆ.
ಮತ್ತೆ ಡೈನಿಂಗ ಟೇಬಲ್ ಮೇಲೆ ಆಸೀನರಾದಾಗ ಮುಂದೆ ಬಿಸಿಬಿಸಿ ಟೋಸ್ಟಗಳಿದ್ದವು, ಅವಳು ಅಲ್ಲೇ ಚೇರು ಎಳೆದುಕೊಂಡು ಕುಳಿತಳು, "ನೀನು ತಿನ್ನಲ್ವಾ" ಅಂತ ಕೇಳಿದೆ, ಅಮೇಲೇ ಆ ಉಪ್ಪು ಉಪ್ಪಿಟ್ಟು ತಿನ್ನುವ ಪ್ಲಾನ ಏನಾದ್ರೂ ಮಾಡಿದ್ದಾಳೊ ಅಂತ ತಿಳಿದುಕೊಳ್ಳಲು, ಈ ಗೃಹಿಣಿಯರ ಮನೋಭಾವಗಳೇ ಹಾಗೆ, ಎಲ್ಲಿ ಹಾಳಾಗುತ್ತದೆ ಅಂತ ಉಪ್ಪಿದ್ದರೂ ತಿನ್ನಲು ನೋಡುತ್ತಾರೆ, ಆದರೆ ಅದು ತಿನ್ನಲು ಆಗಲ್ಲ ಅಂತ ಗೊತ್ತಾಗಿದ್ದರಿಂದ, ತನಗೂ ಟೊಸ್ಟ ಮಾಡಿಕೊಂಡಿದ್ದಳು, ಟೀ ಮಾಡಲಿಟ್ಟಿದ್ದೇನೆ, ಅದರ ಜತೆ ತನಗೂ ಟೊಸ್ಟ ತರುತ್ತೇನೆ ಅಂತದದ್ದು, ಕೇಳಿ ಸುಮ್ಮನಾದೆ.
ಹಾಗೇ ತಿನ್ನುತ್ತಿದ್ದವ ಏನೊ ನೆನಪಾಗಿ ಸುಮ್ಮನೇ ನಕ್ಕೆ, ಇವಳು ಇನ್ಯಾವ ತಪ್ಪು ಮಾಡಿದೆನೊ ಈ ಸಾರಿ, ಅಂತ ಗಾಬರಿಯಾಗಿ "ಮತ್ತೆ ಏನಾಯ್ತು, ಸರಿ ಇಲ್ವಾ" ಕೇಳಿದ್ಲು. "ಉಪ್ಪು!! ನೆನಪಿದೇನಾ..." ಅಂದೆ, ಹುಬ್ಬು ಗಂಟಿಕ್ಕಿದವಳು ನೆನಪಾಗಿ "ಒಹ್ ಅದ ಹೇಗೆ ಮರೆಯೋಕಾಗುತ್ತೆ" ಅಂದ್ಲು, ಅದು ಮರೆಯೋಕಾಗದ ಘಟನೆಯೇ ಸರಿ.
ಆಗ ಮದುವೆಯಾದ ಹೊಸತು, ಮೊದಲ ಬಾರಿ ಅಡುಗೆ ಮಾಡಲು ಪಾಕಶಾಲೆಗೆ ಕಾಲಿಟ್ಟಿದ್ದಳು, ಸೊಸೆ ಮಾಡುವ ಊಟದ ರುಚಿ ನೊಡಲು ಮನೆಯೇ ಕಾದಿತ್ತು, ಅಮ್ಮನಿಗೆ ಅವಳೆಲ್ಲ ಮಾಡ್ತಾಳೆ ಇಲ್ಲಿ ಬಾ ಕೂರು ಅಂದರೂ, ಆಗಾಗ ಹೋಗಿ ತರಕಾರಿ ಹೆಚ್ಚಿ ಕೊಡಲೇ, ಖಾರ ಅಲ್ಲಿದೆ, ಮೆಣಸು ಇಲ್ಲಿದೆ ಅಂತ ಹೇಳಿಬರುತ್ತಿದ್ದಳು, ನನ್ನ ಮಗನಿಗೆ ಇನ್ನು ಅಡಿಗೆ ಮಾಡಿ ಹಾಕುವಳು ಇವಳೇ, ಹೇಗೆ ಮಾಡುತ್ತಾಳೊ, ಹಾಸ್ಟೆಲ್ಲು ಹೊಟೇಲು ಅಂತ ತಿಂದವನಿಗೆ ಮನೆ ಅಡಿಗೆ ಮಾಡಿಹಾಕುವಳು, ಸರಿ ಇಲ್ಲದಿದ್ದರೆ ಹೇಗೆ ಅಂತ ಆತಂಕ ಬೇರೆ. ಮೊದಲ ಸಲ ಎಲ್ಲಿ ಯಾವ ಡಬ್ಬಿ ಎಲ್ಲಿದೆ ಸಿಗಲಿಕ್ಕಿಲ್ಲ ಅಂತಲೂ ಇರಬಹುದು, ಕೇಳಲು ಸಂಕೋಚ ಮಾಡಿಕೊಂಡಾಳು ಅಂತ ಕೂಡ ಏನೋ. ನಾನೂ ಒಳ ಹೋಗಿ ನೋಡಿದೆ, ಮೊದಲ ಬಾರಿ ಅತ್ತೆ ಮನೆಯಲ್ಲಿ ಅಡಿಗೆ, ಏನನ್ನುತ್ತಾರೊ, ರುಚಿಯಾಗಿರದಿದ್ದರೆ! ಇವಳ ಕಣ್ಣುಗಳಲ್ಲೂ ಭಯ ಕಂಡಿತು, ಕಣ್ಣು ಮುಚ್ಚಿ ನಿಧಾನವಾಗಿ ತೆರೆದು, ಕಣ್ಣಲ್ಲೇ ಎನೂ ಹೆದರಬೇಡ ಎಲ್ಲ ಸರಿಯಾಗುತ್ತದೆ ಮಾಡು, ಅಂತ ಹೇಳಿ ಬಂದೆ.
ಚಟಪಟ ಸದ್ದು ಕೇಳಿತು, ಸಾರಿಗೆ ವಗ್ಗರಣೆ ಹಾಕುತ್ತಿದ್ದಳು, ಅಮ್ಮ ಹೋಗಿ, ಪೂರ್ತಿ ಮಾಡುವವರೆಗೂ ತಡೆದುಕೊಳ್ಳಲು ಆಗದೇ, ರುಚಿ ನೋಡಲು ಸ್ವಲ್ಪ ಸೌಟಿನಲ್ಲಿ ತೆಗೆದುಕೊಂಡು ಸರಕ್ಕೆಂದು ಹೀರಿದ ಸದ್ದು ಬಂತು, ಅಮ್ಮನ ಮುಖ ಕಪ್ಪಿಟ್ಟಿರಬೇಕು, ಇವಳು ಹೇಗಾಗಿದೆ? ಅಂತ ಕೇಳಿದಳು ಅಂತ ಕಾಣುತ್ತದೇ, ಅಮ್ಮ "ಉಪ್ಪು ಜಾಸ್ತಿಯಾಗಿದೆ" ಅಂತನ್ನುತ್ತಿದ್ದಂತೇ, ಇದಕ್ಕೇ ಕಾಯುತ್ತಿದ್ದರೇನೊ ಅನ್ನುವಂತೆ ಸೋದರ ಸಂಬಂಧಿಯೊಬ್ಬರು, "ಈಗೀನ ಹುಡುಗೀರಿಗೆ ಅಡಿಗೆ ಮಾಡ್ಲಿಕ್ಕೆ ಎಲ್ಲಿ ಬರ್ತದೆ, ಓದಿದ್ದೇವೆ ಅಂತ ಅಡಿಗೆ ಮನೆಗೆ ಕಾಲಿಟ್ಟಿರಲ್ಲ" ಅಂತ ಮೂದಲಿಸಿದರು, ಅಡುಗೆ ಮನೆ ನಮ್ಮ ಡಿಪಾರ್ಟಮೆಂಟ ಅಲ್ಲ ಅಂತ ಇರಬೇಕಾಗಿದ್ದವ ನಾನು, ಈ ಪರಿಸ್ಥಿತಿ ಕೈಮೀರುವ ಎಲ್ಲ ಲಕ್ಷಣ ಕಂಡು ಅಲ್ಲಿಗೆ ಧಾವಿಸಿದೆ. ಈ ಮನೆಗಳಲ್ಲಿ ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೊಂದಿಗೆ ಸಂಬಂಧಗಳಿಗೆ ಉಪ್ಪಿಗಿಂತ ಜಾಸ್ತಿ ಹುಳಿ ಹಿಂಡಲು ಕಾದಿರುತ್ತಾರೆ ಕೆಲವರು... ಅದಕ್ಕೇ ಜಾಗರೂಕರಾಗಿರಬೇಕು.
ನಮ್ಮ ಮನೆಯಲ್ಲಿ ಅಜ್ಜಿಗೆ ಬೀಪೀ ಜಾಸ್ತಿಯಾದ ಮೇಲೆ, ಅಪ್ಪ "ಎಲ್ರೂ ಉಪ್ಪು ಕಮ್ಮಿ ತಿಂದರೇ ಒಳ್ಳೇದು" ಅಂತ ಹೇಳಿ, ಅಮ್ಮನಿಗೆ ಕಮ್ಮಿ ಉಪ್ಪು ಹಾಕು ಎಲ್ರಿಗೂ ಹೊಂದಿಕೆಯಾಗುತ್ತದೆ ಅಂತ ಕಟ್ಟಪ್ಪಣೆ ಮಾಡಿದರು, ಅಮ್ಮನ ಕೈಯಡುಗೆ ಉಪ್ಪು ಕಮ್ಮಿಯಾದರೂ ರುಚಿಕಳೆದುಕೊಳ್ಳಲಿಲ್ಲ, ನಮಗೂ ಕಡಿಮೆ ಉಪ್ಪಿನ ಊಟ ಒಗ್ಗಿ ಹೋಯಿತು, ಊರಿಂದ ಬಂದ ಸೋದರಮಾವ, ಉಪ್ಪು ಖಾರ ಇಲ್ಲದೆ ಸಪ್ಪೆ ಊಟ ಏನು ತಿಂತೀರಿ ಅಂತ, ಉಪ್ಪು ಉದುರಿಸಿಕೊಂಡು, ಹಸಿ ಕೆಂಪುಖಾರ ನಂಜಿಕೊಂಡೇ ಊಟ ಮಾಡುತ್ತಿದ್ದುದು ನಮ್ಮಲ್ಲಿ. ಹೀಗೆ ನಮ್ಮ ಮನೆಯಲ್ಲಿ ಉಪ್ಪಿನ ಉಪಯೋಗ ಕಮ್ಮಿಯಾಗಿತ್ತು, ಹೀಗಾಗಿ ಅವಳು ಸರಿ ಪ್ರಮಾಣ ಹಾಕಿದ್ದರೂ ಜಾಸ್ತಿ ಅಂತ ಅಮ್ಮನಿಗೆ ಅನಿಸಿದ್ದರೆ ಅಚ್ಚರಿಯಿರಲಿಲ್ಲ.
ಆ ಮೂದಲಿಸಿದ ಸಂಬಂಧಿಗೆ, ಇದೆಲ್ಲ ನಮ್ಮನೆಯಲ್ಲಿ ನಿನ್ನಾಟ ನಡೆಯಲ್ಲ ಅಂತ ತಿಳುವಳಿಕೆ ಬರುವಂತೆ "ಮೊದಲ ಸಲ ಅಲ್ವಾ, ಎನೊ ಮಿಸ್ಟೇಕು ಆಗುತ್ತದೆ, ಅಲ್ದೇ ನಮ್ಮನೇಲಿ ಉಪ್ಪು ಕಮ್ಮಿ ಉಪಯೋಗಿಸ್ತೀವಿ ಅಮ್ಮನಿಗೆ ಅದು ಗೊತ್ತಿದೆ" ಅಂತ ಮಧ್ಯಪ್ರವೇಶಿಸಿದೆ ಅಮ್ಮನ ಕಣ್ಣಿನಲ್ಲಿ ನೋಡುತ್ತ... "ಹೌದು, ಹೌದು ನಮ್ಮನೇಲಿ ಅಡಿಗೆಗೆ ಉಪ್ಪು ಕಮ್ಮಿ" ಅಮ್ಮ ಅಂತ ಅನುಮೋದಿಸಿದಳು. ಇವಳ ಹಣೆಯಲ್ಲಿ ಬೆವರು ಹನಿ ಮೂಡಿದ್ದವು ಭೀತಿಯಿಂದ, ಸೌಟು ಇಸಿದುಕೊಂಡು ಸ್ವಲ್ಪ ಕೈಯಲ್ಲಿ ಸಾರು ಹಾಕಿಕೊಂಡು ಆರಿಸಲು ಊದುತ್ತ... ಅವಳ ಹಣೆಗೂ ಸ್ವಲ್ಪ ಊದಿದೆ ಬೆವರ ಹನಿ ಹೋಗಲಾಡಿಸಲು... ರುಚಿ ನೋಡಿದೆ, ನಿಜವಾಗಲೂ ಉಪ್ಪು ಸ್ವಲ್ಪ ಜಾಸ್ತಿಯಾಗಿತ್ತು, ಅವಳಿಗೂ ಕೈಯಲ್ಲಿ ಹಾಕಿದೆ ರುಚಿ ನೋಡಿದವಳು, ನನ್ನಡೆಗೆ ಮುಂದೇನು ಅನ್ನುವಂತೆ ನೋಡಿದಳು, ನೋಟದಲ್ಲೇ ನೋ ಪ್ರಾಬ್ಲಂ ಅನ್ನುವಂತೆ ನಸುನಕ್ಕೆ.
ಎಲ್ಲೋ ಓದಿದ್ದ ಟಿಪ್ಸ ನೆನಪಿತ್ತು, ಅಮ್ಮನ ಹೊರಕಳಿಸಿ, ಟೀವೀ ನೋಡಹೋಗು ಅಂತಂದು, ಆಲೂಗಡ್ಡೆ(ಬಟಾಟಿ, ಪೊಟ್ಯಾಟೊ) ಕೊಡು ಅಂದೆ ನನ್ನಾಕೆಗೆ, ಹತ್ತುವರ್ಷ ಹೊರಗೇ ತಿಂದವನಿಗೇನು ಗೊತ್ತಿರಬಹುದು ಅನ್ನುವ ಅನುಮಾನದಲ್ಲೇ ತಂದುಕೊಟ್ಟಳು, ಚೆನ್ನಾಗಿ ತೊಳೆದು ಎರಡು ಹೋಳು ಮಾಡಿ, ಸಾರಿನಲ್ಲಿ ಮುಳುಗಿಸಿದೆ, ಒಂದು ಹದಿನೈದು ನಿಮಿಷ ಹಾಗೇ ಇರಲಿ ಹೆಚ್ಚಿನ ಉಪ್ಪು ಹೀರಿಕೊಳ್ಳುತ್ತವೆ, ಆಮೇಲೆ ಅವನ್ನ ತೆಗೆದುಹಾಕಿ, ಸ್ವಲ್ಪ ಚಿಟಿಕೆ ಬೆಲ್ಲ ಹಾಕಿ ಕುದಿಸಿಬಿಡು. ಊಟಕ್ಕೆ ನೀಡುವಾಗ, ತುಪ್ಪ ಹಾಕಿ ನೀಡು ಎಲ್ಲ ಸರಿ ಹೋಗುತ್ತದೆ ಅಂದೆ. ಅವಳ ಸೆರಗು ತೆಗೆದುಕೊಂಡು ಅವಳ ಹಣೆಗೆ ಒತ್ತಿದೆ, ಸ್ವಲ್ಪ ನಿರಾಳವಾದಳು... ಹೇಳಿದಂತೇ ಮಾಡಿದಳು, ಅಪ್ಪ ಎರಡನೇ ಬಾರಿ ಅನ್ನ ಹಾಕಿಸಿಕೊಂಡಾಗಲೇ ಗೊತ್ತಾಯ್ತು, ಇಷ್ಟವಾಗಿದೆ ಎಂದು. ಅಮ್ಮನ ಮುಖದಲ್ಲಿ ಲಾಸ್ಯ ಮನೆ ಮಾಡಿತ್ತು, ಉಪ್ಪಿನ ತಪ್ಪಾದರೂ ಮನೆ ಒಪ್ಪ ಓರಣವಾಗಿತ್ತು. ಅಮ್ಮ ಬಂದು ಏನೋ ಮಾಡಿದೆ ಅಂತ ಕೇಳುತ್ತಲೇ ಇದ್ದಳು, ಎಲ್ಲ ನಿನ್ನ ಸೊಸೆಯ ಮ್ಯಾಜಿಕ ಅನ್ನುತ್ತಿದ್ದೆ. ಅದರೊಂದಿಗೆ, ತಪ್ಪು ತಪ್ಪೇ, ಆದರೆ ತಪ್ಪು ತಿದ್ದಬಹುದು ಕೂಡ, ತಪ್ಪನ್ನೇ ದೊಡ್ಡದು ಮಾಡಿದರೆ ಅದೇ ದೊಡ್ಡ ತಪ್ಪು. ಈ ಮನೆಗೆ ಯಾರು ಹುಳಿ ಹಿಂಡಲು ಬಂದರೂ ಅಷ್ಟೇ ಏನೂ ಆಗದು, ಸಿಹಿ ಸಿಂಚನಗೈಯ್ಯಲಾಗದಿರಬಹುದು, ಆದ್ರೆ ಹುಳಿಯನ್ನಂತೂ ಇಂಗಿಸಿಕೊಳ್ಳುತ್ತೇವೆ ಅನ್ನುವ ಒಂದು ಸಂದೇಶ ಮನೆಯಲ್ಲಿ ಎಲ್ಲರಿಗೂ ರವಾನೆಯಾಗಿತ್ತು.
ಆದದ್ದನ್ನೆಲ್ಲ ಅಮ್ಮನಿಗೆ ಇವಳು ಹೇಳಿ, ಅಮ್ಮನ ಹೆಮ್ಮೆಯ ಮಗನನ್ನಾಗಿಸಿದಳು, ಎಷ್ಟೊ ಬಾರಿ ಅದನ್ನು ಪ್ರಸ್ತಾಪಿಸಿ ನಕ್ಕಿದ್ದೇವೆ, ಅಮ್ಮನ ಹತ್ತಿರ ಇವಳು ಇನ್ನೂ ಅಡುಗೆಯಲ್ಲಿ ಪಳಗಿದ್ದಾಳೆ, ಆ ಹುಳಿ ಸಾರಿನ ಪ್ರಸಂಗ ಇನ್ನೂ ನೆನಪಿದೆ, ಆ ನೆನಪು ಮಾತ್ರ ಸಿಹಿ ಸವಿ ನೆನಪಿನಂತೆ.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅಂತ ಸುಮ್ನೇ ಗಾದೆ ಬಂದಿದ್ದಾ, ಉಪ್ಪು ಹೆಚ್ಚಾದರೂ ತಪ್ಪೇ, ಕಡಿಮೆಯಾದರೂ ತಪ್ಪೇ, ಪ್ರಮಾಣಕ್ಕೆ ತಕ್ಕದಾಗಿದ್ದರೆ ಮಾತ್ರ ರುಚಿ, ಉಪ್ಪು ಜಾಸ್ತಿ ಆಗಿದೆ ಅಂತ ಬೀಪೀ ಏರಿಸಿಕೊಂಡು ಎಷ್ಟು ಮನೆಗಳಲ್ಲಿ ಜಗಳವಾಗಿಲ್ಲ, ಅದಕ್ಕೇ ರಾತ್ರಿ ಉಪ್ಪು ಕೇಳಬಾರದು ಮನೆಯಲ್ಲಿ ಜಗಳವಾಗುತ್ತದೆ ಅಂತ ಮೂಢನಂಬಿಕೆ ಬಂದಿದ್ದೇನೊ. ಅಂತೂ ಉಪ್ಪು ಮಾತ್ರ ಅಡಿಗೆಗೆ ಬೇಕೇ ಬೇಕು. ಉಪ್ಪಿನ ಸೇವನೆಯಿಂದ ಬೀಪೀ ಜಾಸ್ತಿ ಆಗುತ್ತದೆ ಅಂತ ವೈಜ್ಞಾನಿಕ ಕಾರಣವೇನೊ ಇದೆ ಆದರೆ ಉಪ್ಪು ಜಾಸ್ತಿ ಆದದ್ದಕ್ಕೇ, ಇನ್ನೂ ತಿನ್ನುವ ಮೊದಲೇ ಬೀಪೀ ಜಾಸ್ತಿ ಮಾಡಿಕೊಂಡು ಉಪ್ಪಿನ ಮೇಲೆ ಉರಿದುಬೀಳುವವರನ್ನು ನೋಡಿದ್ದೇನೆ. ಈ ಕ್ಷಣಿಕ ಆವೇಶ ತರವಲ್ಲ, ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡ ಕಂದಕಗಳನ್ನು ಸೃಷ್ಟಿಸಬಹುದು, ಸ್ವಲ್ಪ ಸಹನೆ ಇದ್ದರೆ ಸಾಕು, ನನ್ನನ್ನೂ ಸೇರಿಸಿಕೊಂಡು ಹೇಳುತ್ತಿರುವುದು, ನನಗಿದೆ ಬೇರೆಯವರಿಗೆ ಇಲ್ಲ ಅಂತಲ್ಲ. ಹಾಗಂತ ಉಪ್ಪು ಜಾಸ್ತಿಯಿದ್ದರೂ ತಿನ್ನಿ ಅಂತಲ್ಲ, ರಕ್ತದೊತ್ತಡ(ಬೀಪೀ) ಜಾಸ್ತಿ ಆಗಿ ಹೃದಯದ ಖಾಯಿಲೆಗಳು ಬಂದಾವು ಉಪ್ಪು ಸ್ವಲ್ಪ ಕಡಿಮೆ ಮಾಡಿ, ಅತ್ತ ಬಿಟ್ಟು ಬಿಟ್ಟರೆ ಐಯೋಡಿನ ಕೊರತೆಯಾದೀತು, ಅದಕ್ಕೆ ರುಚಿಗೆ ಹಿತ ಮಿತಕ್ಕೆ ತಕ್ಕಷ್ಟು ಇರಲಿ, ಆಗ ಜೀವನ ನಳಪಾಕವಾಗುತ್ತದೆ.
ಆ ಘಟನೆಯ ಮರು ಉಲ್ಲೇಖ ಇವಳ ಮೊಗದಲ್ಲಿ ನಗು ತಂದಿತ್ತು "ರೀ, ಉಪ್ಪಿಟ್ಟಿಗೂ ಏನಾದ್ರೂ ಐಡಿಯಾ ಇದೇನಾ" ಪ್ರಶ್ನಿಸಿದಳು, "ನಾನೇನು ಅಡುಗೆಭಟ್ಟ ಅನ್ಕೊಂಡಿದೀಯಾ" ಅಂದೆ. "ಮತ್ತೆ ಆಗ ಹೇಗೆ ಆ ಐಡಿಯಾ ಸಿಕ್ಕಿತ್ತು" ಅಂದ್ಲು. "ಎಲ್ಲೊ ಓದಿದ ನೆನಪಿತ್ತು, ಮತ್ತೆ ಈಗ ಏನ್ಮಾಡ್ತೀಯಾ" ಅಂದೆ. "ನಳ ಮಹರಾಜರೇ, ಪಾಕಶಾಲೆ ನಮಗೆ ಬಿಟ್ಟು, ನಿಮ್ಮ ಕಂಪ್ಯೂಟರ ಕುಟ್ಟಲು ಜಾಗ ಖಾಲಿ ಮಾಡಿ" ಅಂದಾಗಲೇ ಆಫೀಸಿನ ನೆನಪಾಯಿತು, "ಅಮ್ಮನಿಗೆ ಗೊತ್ತಿದ್ರೆ ಕೇಳು" ಅನ್ನುತ್ತ ಎದ್ದೆ, ಹಳೆ ನೆನಪಿನೊಂದಿಗೆ ಹರಟೆ ಹೊಡೆದರಾಯ್ತು ಅದನ್ನ ಕೇಳುವ ನೆಪದಲ್ಲಿ ಅಂತ, ಅಮ್ಮನಿಗೆ ಫೋನು ಮಾಡಲು ನಡೆದಳು. ಮತ್ತೆ ನನ್ನಾಕೆಯೊಂದಿಗೆ, ಉಪ್ಪು ಜಾಸ್ತಿಯಾದರೆ, ಸಕ್ಕರೆ ಹಾಕಿ, ಸಿಹಿಯಾದರೆ, ಖಾರ ಹಾಕಿ ಮತ್ತೆ ಇಂಥದ್ದೇ ಖಾರಾಬಾಥ... ಅಲ್ಲಲ್ಲ ಖಾಸಭಾತಗಳೊಂದಿಗೆ ಸಿಕ್ತೀನಿ
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/uppu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
31 comments:
ಪ್ರಭುರಾಜ,
ಉಪ್ಪಿಟ್ಟಿಗೆ ಉಪ್ಪು ಜಾಸ್ತಿಯಾದರೆ ಮತ್ತೊಂದು ಉಪಾಯವಿದೆ.
ಹೆಂಡತಿಯಿಂದ ಬೆಲ್ಲ ಇಸದುಕೋಬೇಕು.
ಮತ್ತೊಮ್ಮೆ ಹಾಗೆ ಆದರೆ,ಮಾಡಿ ನೋಡಿ!
hello prabhuraj,
Uppitina katte superrrr
uppitige upppu jasthi adaga adake sakare beresi kondu thinda nenapu
taste chenda irola but adru k....
waiting for next week :)
ಪ್ರಭು..
ನಿಮ್ಮ ಲೇಖನ ಓದುತ್ತಿದ್ದರೆ..
"ನನಗೂ ಮದುವೆಯಾಗ ಬೇಕು ಅನ್ನಿಸುತ್ತದೆ.." ಅಂತ ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಾರೆ...
ಇದು ನಿಮ್ಮ ಲೇಖನದ ಹಿರಿಮೆ...
ಸಹಜ.. ಸರಸ...
ದಾಂಪತ್ಯವನ್ನು ಸೊಗಸಾಗಿ ಚಿತ್ರಿಸುತ್ತೀರಿ...
ತಪ್ಪು.. ಒಪ್ಪಿನ..ಉಪ್ಪನ್ನು..
ಉಪ್ಪಿಟ್ಟಿನ ಮೂಲಕ ಇಟ್ಟಿದ್ದೀರಿ...
ಪ್ರಭು...
ಸುಂದರ ಬರಹಕ್ಕೆ ಅಭಿನಂದನೆಗಳು...
ಪ್ರಭು,
"ತಪ್ಪನ್ನೇ ದೊಡ್ಡದು ಮಾಡಿದರೆ ಅದೇ ದೊಡ್ಡ ತಪ್ಪು" ಸಂದೇಶದೊಂದಿಗೆ ಮತ್ತೊಮ್ಮೆ ನಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದೀರಾ...ದಾಂಪತ್ಯವನ್ನು ಉಪ್ಪಿಟ್ಟಿನೊಂದಿಗೆ ಸಹಜವಾಗಿ ಹೇಳುವಲ್ಲಿ ಮತ್ತೆ ಯಶಸ್ವಿಯಾಗಿದ್ದೀರಾ....
ಬಹಳ ಚೆನ್ನಾಗಿತ್ತು.....ಮುಂದಿನ ವಾರಕ್ಕೆ ಕಾಯ್ತಾ ಇರ್ತೀವಿ....
ಪ್ರಭು ಅವರೇ,
ಉಪ್ಪು ಉಪ್ಪಿಟ್ಟಿನಲ್ಲಿ ಸ್ವಲ್ಪ ಉಪ್ಪು ಹೆಚ್ಚಾದರೆನಂತೆ, ಅದರ ಸ್ವಾದ ಮತ್ತು ರುಚಿ ಎಂದಿನಂತೆ (ಲೇಖನ) ಸೂಪರಾಗಿದೆ!!!
ಒಪ್ಪು, ಉಪ್ಪು, ತಪ್ಪುಗಳ ತರ್ಕವನ್ನು ಮನಕ್ಕೆ ತಟ್ಟುವ ಹಾಗೆ ಲೇಖಿಸಿದ್ದೀರಾ! ಚಂದದ ಲೇಖನಕ್ಕೆ ಧನ್ಯವಾದಗಳು!!
sunaath ಅವರಿಗೆ
ಬೆಲ್ಲ ಕೊಡು ಅಂದೆ, ಗಲ್ಲಕ್ಕಾ ಅಂತ ಕೇಳಿದಳು ಆಗಲೇ ಗೊತ್ತಾಯಿತು ನೀವೇನು ಹೇಳಿದ್ದು ಅಂತ...
ಪ್ರೀತಿಯಿ೦ದ ವೀಣಾ :) ಅವರಿಗೆ
ಸಕ್ಕರೆ ಬೆರೆಸಿ ತಿಂದರೂ ಉಪ್ಪಿನ ಹುಳಿ ಇದ್ದೇ ಇರುತ್ತದೆ, ಅದಕ್ಕೇ ಟೇಸ್ಟಗೆ ತಕ್ಕಷ್ಟು ಇರಬೇಕು.
ಸಿಮೆಂಟು ಮರಳಿನ ಮಧ್ಯೆ ಅವರಿಗೆ
ಲೇಖನ ಓದುವವರಿಗೆ ಮದುವೆಯಾಗಬೇಕು ಅನಿಸುತ್ತಿದೆ ಆದರೆ ಬರೆಯುತ್ತಿರುವ ನನಗೆ ಇಲ್ಲವೇ!?!... :)
ನಿಮ್ಮಗಿಷ್ಟವಾದರೆ ನನಗೂ ಖುಷಿ...
ಸವಿಗನಸು ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಸಣ್ಣಪುಟ್ಟ ಸಂಗತಿಯ ಬಗ್ಗೆ ಸಹಜ ಕಥೆಗಳಷ್ಟೇ... ಮತ್ತೇನನ್ನೋ ಮೆಲ್ಲುತ್ತ ಮತ್ತೆ ಸಿಕ್ಕೊಣ...
SSK ಅವರಿಗೆ
ಉಪ್ಪಿಟ್ಟಿಗೆ ಉಪ್ಪು ಜಾಸ್ತಿಯಾದರೂ ಸ್ವಾದ ಇದ್ದೇ ಇರುತ್ತದೆ ಬಿಡಿ, ಆದರೆ ಜೀವನದಲ್ಲಿ ಇಂಥ ಚಿಕ್ಕ ವಿಷಯಗಳೊಂದಿಗೆ ಯಾರಾದರೂ ಹುಳಿಹಿಂಡಿದರೆ ಆ ಮತ್ತೆ ಅದ ಸರಿ ಮಾಡಲಾಗಲಿಕ್ಕಿಲ್ಲವಲ್ಲವೇ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಭು,
ಏನ್ ಚಂದಾಗಿ ಬರೀತೀರಿ ...ಸೂಪರ್
ಎಸ್ಟೋ ಸರ್ತಿ ನಾನು ಕೂಡ ಉಪ್ಪು ಜಾಸ್ತಿ ಹಾಕಿ ಅಮ್ಮನಿಂದ ಬೈಯ್ಸಿಕೊಂಡಿದ್ದಿನಿ ...
ನೀವ್ ಹೇಳಿರೋ ಹಾಗೆ ಆಲುಗಡ್ಡೆ , ಬೆಲ್ಲ ಮತ್ತೆ ತುಪ್ಪ try ಮಾಡ್ತೀನಿ...
ಇವಾಗ ನಂಗೆ ಉಪ್ಪಿಟ ತಿನ್ಬೇಕು ಅಂತ ಆಸೆ ಆಗ್ತಾ ಇದೆ ನೋಡಿ..:):):)
ಇಂತಿ,
ವೀಣಾ
swalpa kene mosaru beresi tindare, uppaada uppittu hosa ruchiyoDane sogasaagiruttade. prayatnisi.
ವಾರಕ್ಕೊಂದು ಕಿವಿಮಾತು ತುಂಬಾ ಚೆನ್ನಾಗಿದೆ... ನನ್ನವರು ರೇಗಿಸುತ್ತಿದ್ದರು ಬೆಂಗಳೂರಲ್ಲಿ ಶುಕ್ರವಾರದಂದು ಹೊಸ ಚಿತ್ರಗಳ ಬಿಡುಗಡೆ ಆದರೆ ಭಾನುವಾರದಂದು ಪ್ರಭುರಾಜ್ ಅವರ ಲೇಖನ ಬಿಡುಗಡೆ ಎಂದು ಹ ಹ ಹ .... ನಿಮ್ಮ ಲೇಖನ ಬಿಡುಗಡೆಗೆ ಅಭಿಮಾನಿಗಳು ಭಾನುವಾರದಂದು ಕಾದು ಕುಳಿತಿರುತ್ತಾರೆ.
Veena A ಅವರಿಗೆ
ಏನೊ ಮನಸಿಗೆ ಅನಿಸಿದ್ದು ಗೀಚೋದು, ಖಂಡಿತ ಟ್ರೈ ಮಾಡಿ ಏನಾಯ್ತು ಅಂತ ಹೇಳಿ, ಯಾಕೆಂದ್ರೆ ನಾನೇ ಟ್ರೈ ಮಾಡಿಲ್ಲ!!! ಎಲ್ಲೊ ಓದಿದ್ದು ಅಷ್ಟೇ... ಶನಿವಾರ ನಾನೇ ಮನೆಯಲ್ಲಿ ಮಾಡಿಕೊಂಡಿದ್ದೆ, ನೀವೂ ಟ್ರೈ ಮಾಡಿ. ಮೆಣಸಿನಕಾಯಿ ಜಾಸ್ತಿ ಹಾಕಿ ಖಾರ ಆಗಿ ಹರಸಾಹಸ ಮಾಡಿ ತಿನ್ನಬೇಕಾಯಿತು ಅದೇ ಲೇಖನವಾಯ್ತು.
Jayalakshmi ಅವರಿಗೆ
ಕೆನೆಮೊಸರು ಸೂಪರ ಐಡಿಯಾ, ಗೊತ್ತಿದ್ದರೆ ಶನಿವಾರ ಟ್ರೈ ಮಾಡ್ತಿದ್ದೆ ಉಪ್ಪಿಟ್ಟು ಖಾರ ಜಾಸ್ತಿ ಆಗಿತ್ತು, ಅದಕ್ಕೂ ಸರಿಹೋಗುತ್ತದೆ ಅನಿಸುತ್ತದೆ. ಹೀಗೆ ಬರ್ತಾ ಇರಿ...
ಮನಸು ಅವರಿಗೆ
ಹ ಹ ಹ... ಒಳ್ಳೇ ಕಮೆಂಟ, ಒಂದಂತೂ ನಿಜ ಕೆಲವರು ಪ್ರೀತಿಯಿಂದ ಭಾನುವಾರ ತಪ್ಪದೇ ಓದಿದರೆ, ಕೆಲವರಂತೂ ಸೋಮವಾರ ಮೊದಲು ಬ್ಲಾಗ ನೋಡಿಯೇ ಮುಂದೆ ಕೆಲಸ ಮಾಡುತ್ತಾರಂತೆ... ಪತ್ರಗಳಲ್ಲಿ ಬರುವ ಪ್ರತಿಕ್ರಿಯೆಗಳೂ ಕೂಡ ವಿಭಿನ್ನ,ಅಕ್ಕರೆಯಿಂದ ತಮಗನಿಸಿದ್ದು ಹೇಳುತ್ತಿರುತ್ತಾರೆ,(ನನಗೇ ಮರುಪ್ರತಿಕ್ರಿಯೆ ಕಳಿಸಲು ಸಮಯ ಸಾಲುತ್ತಿಲ್ಲ ಅಂತ ಬೇಜಾರು) ಹೀಗಿರುವಾಗ ನಾನೂ ಆದಷ್ಟು ತಪ್ಪದೇ ಅವರನ್ನು ನಿರಾಶೆ ಮಾಡದೇ ವಾರಕ್ಕೊಂದು ಏನೊ ಬರೆದು ಹಾಕುತ್ತೇನೇ, ಇದಕ್ಕಿಂತ ಬರೆಯಲು ನನಗಿನ್ನು ಹೆಚ್ಚಿಗೆ ಏನು ಸ್ಪೂರ್ಥಿ ಬೇಕು ಹೇಳಿ...
ಪ್ರಭು,
ಮೊದಲು ತರಂಗದಲ್ಲಿ ಈಶ್ವರಯ್ಯನವರ "ಸರಸ" ಎಂಬ ಲೇಖನಗಳ ಬರುತ್ತಿದ್ದವು. ಅದು ಎರಡು ಪುಸ್ತಕಗಳಾದವು ಕೂಡ. ನಿಮ್ಮ ಬರಹಗಳು ಅವರನ್ನು ಸೈಡ್ ಹೊಡೆಯುವಂತಿವೆ. ನಿಮ್ಮ ಬರಹಗಳೂ ಪುಸ್ತಕವಾಗಲಿ. ಮದುವೆಯಾಗದವರಿಗೆ ಕನಸು ಕಟ್ಟಿಕೊಟ್ಟರೆ, ಮದುವೆಯಾದವರಿಗೆ ಹೇಗಿರಬೇಕೆಂದು ತಿಳಿಸುವ ಗೈಡ್.
ಉಪ್ಪುಪ್ಪಿಟ್ಟು ಸೂಪರ್..
ಪ್ರಭುಗಳೇ,
ನಮ್ಮ ಅಜ್ಜಿ ಹೇಳುತ್ತಿರುತ್ತಾರೆ, "ನೀನೂ ಅಡಿಗೆ ಮಾಡುವುದನ್ನು ಕಲಿ. ಮನೆಗೆ ಬರುವವಳು ಹೇಗೆ ಇರುತ್ತಾಲೋ ಗೊತ್ತಿಲ್ಲ." ಅಂತ. ಇದು ತಮಾಷೆಗೆ ಹೇಳಿದರೂ, ಅಡಿಗೆ ಮಾಡುವುದು ಗೊತ್ತಿದ್ದರೆ ಸೇಫ್. ಏನಂತೀರಾ.
ಮಡದಿ ಮಾಡಿದ ಅಡಿಗೆ ಯಾವಾಗಲೂ ಚೆನ್ನಾಗಿದ್ದರೆ, ಅದಕ್ಕೆ ಬೆಲೆ ಇರುವುದಿಲ್ಲ. ಆಗಾಗ ಉಪ್ಪಿಟ್ಟನ್ನ ಉಪ್ಪುಪ್ಪಿಟ್ಟು ಮಾಡಿದರೆ ಅದನ್ನು ನೆನಪಿಸಿಕೊಳ್ಳಬಹುದು.
ಪ್ರಭು,
ತಪ್ಪನ್ನೇ ದೊಡ್ಡದು ಮಾಡಿದರೆ ಅದೇ ದೊಡ್ಡ ತಪ್ಪು" ಎಷ್ಟು ಸತ್ಯವಾದ ಮಾತು ಅಲ್ವಾ...ಅದೇ ಅಧಾರದ ಮೇಲೆ ಸೊಗಸಾದ ಲೇಖನವನ್ನು ಬರೆದಿದ್ದೀರಿ...
ಶ್ರೀಮತಿ ಊರಲ್ಲಿಲ್ಲದಾಗ ನಾನೇ ಆಡುಗೆ ಮಾಡಿಕೊಳ್ಳಬೇಕಾಗಿ ಬಂದಾಗ ಫೋನ್ ಮಾಡಿ ಎಲ್ಲಾ ಕೇಳಿಕೊಂಡು ಆಡುಗೆ ಮಾಡುವುದು ನೆನಪಾಯಿತು.
ಧನ್ಯವಾದಗಳು.
ಪ್ರಭುವರೆ,
ತುಂಬಾ ತುಂಬಾ ಚೆನ್ನಾಗಿ ಬರೀತೀರ. ನಿಮ್ಮ ಕಲ್ಪನಾ ಶಕ್ತಿಗೆ ಇದೋ ನಮನ.
ಮದುವೆ ಆದವರು, ಆಗುವವರು,ಆಗದವರು ಎಲ್ಲಾರು ಓದಲೇ ಬೇಕಾದ ಲೇಖನಗಳು.
ಸಂಸಾರದ ಜೀವನ ಹೇಗೆ ಸಾಮರಸ್ಯದಿಂದ ಕೂಡಿರಬೇಕು ಎಂಬುದನ್ನು ಬಹಳ
ಸೂಗಾಸಾಗಿ ಚಿತ್ರಿಕರಿಸ್ತೀರ.
ಬರಹದ ಮಧ್ಯೆ ಕೆಲವೊಂದು ಜೀವನ ಸಂದೇಶ ಅಂತೂ ಸುಪರ್ಬ್.
ನಾನಂತೂ ನಿಮ್ಮ ಲೇಖನಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತ ಇರುತ್ತೇನೆ.
ಮಲ್ಲಿಕಾರ್ಜುನ.ಡಿ.ಜಿ. ಅವರಿಗೆ
ಹೌದು ನಾನು ಅದರ ಬಗ್ಗೆ ಹಿಂದೊಮ್ಮೆ ಕಮೆಂಟನಲ್ಲಿ ಬರೆದಿದ್ದೆ, ಅವರ ಲೇವಲ್ಲಿಗೆ ನನ್ನ ಬರಹಗಳಾಗಲಿಕ್ಕಿಲ್ಲ ಬಿಡಿ. ಸುಮ್ನೇ ಏನೊ ಮನಸಿಗನಿಸಿದ್ದು ಗೀಚುತ್ತಿರುವುದು... ನಿಮ್ಮ ಮೆಚ್ಚುಗೆ ಮತ್ತೆ ಮತ್ತೆ ಬರೆಯಲು ಪ್ರೇರಣೆ.
ರಾಜೀವ ಅವರಿಗೆ
ಅಡುಗೆ ಗೊತ್ತಿದ್ದರೆ ಸೇಫ ಕೂಡ ರಿಸ್ಕ ಕೂಡ. ಬರುವವಳು ನನಗೂ ಸ್ವಲ್ಪ ಮಾಡಿ ಹಾಕಿ ಅಂದ್ರೆ ಏನ್ ಗತಿ!!!
ಯಾವಗಲೋ ಒಮ್ಮೊಮ್ಮೆ ಹೀಗೆ ಆಗುತ್ತಿದ್ದರೆ ಒಳ್ಳೆಯದೇ, ರುಚಿ ಬದಲಾವಣೆ ಆದ ಹಾಗೆ ಆಗುತ್ತದೆ.
shivu ಅವರಿಗೆ
ತಪ್ಪುನ್ನ ತಿದ್ದಿಕೊಂಡು ಮತ್ತೆ ಪುನರಾವರ್ತಿಸದಿದ್ದರೆ ಸಾಕು ಅದನ್ನೇ ದೊಡ್ಡ ವಿಷಯ ಮಾಡಿದರೆ ಏನು ಚೆನ್ನ ಅಲ್ವೇ.
ಒಹ್ ನೀವು ಪಾಕಶಾಲೆಗೆ ಪಾದಾರ್ಪಣೆ ಮಾಡಿದ್ದೀರಿ ಅಂದ ಹಾಗಾಯ್ತು...
Damodar Puthiya ಅವರಿಗೆ
ಎನೋ ಸರ್ ಮನದಲ್ಲಿ ಕಾಡುವ ಕಲ್ಪನೆಗಳನ್ನು ಗೀಚೊದು. ಕಲ್ಪನೆಗಳು ಯಾವಾಗಲೂ ಚೆನ್ನ ನಿಜ ಜೀವನ ಕೂಡ ಹಾಗೆ ಆದರೆ ಬಹಳ ಚೆನ್ನಾಗಿರುತ್ತದೆ ಅಲ್ವ... ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನೀವೆಲ್ಲ ಹೀಗೆ ಕಾಯುವಿರೆಂದರೆ ಬರೆಯದೇ ಇರಲಾಗುತ್ತದೆಯೆ, ಬರುತ್ತಿರಿ, ಸಾಧ್ಯವಾದಷ್ಟು ತಪ್ಪದೇ ಬರೆಯಲು ಪ್ರಯತ್ನಿಸುತ್ತೀನಿ..
ಪ್ರಭುರಾಜ್,
ಉಪ್ಪಿಟ್ಟಿಗೆ ಉಪ್ಪು ಹೆಚ್ಚಾದರೂ, ಲೇಖನ ಸವಿಯಾಗಿದೆ :)
ಒಂದು ಕಿವಿಮಾತು : ಬೆಳಗ್ಗೆ ಖಾಲಿ ಹೊಟ್ಟೆಗೆ ಕಡಲೆಬೀಜ ತಿನ್ಬೇಡಿ, ಪಿತ್ತ ಆಗುತ್ತೆ, ಹಾಗೂ ತಿನ್ಲೇಬೇಕು ಅನ್ನೋಹಾಗಿದ್ರೆ, ಸಿಪ್ಪೆ ಜೊತೆ ತಿನ್ನಿ, ಅಥವಾ ತಿಂದಾದ್ಮೇಲೆ ಸ್ವಲ್ಪ ಬೆಲ್ಲ ತಿನ್ನಿ(ಸುನಾಥ್ ಹೇಳಿರೋ ಬೆಲ್ಲ ಅಲ್ಲ):D
ಮಗ ಸಕ್ಕತ್ತಾಗಿದೆ ನಿನ್ ಬ್ಲಾಗ್... ನಂಗೆ ಒಂದು ಫಾರ್ವರ್ಡ್ ಮೇಲ್ ಬಂದಿತ್ತು ನಿಮ್ಮ "ನಶೆ ಏರದೇ ನಟಿಸಿದಾಗ" ಲೇಖನ, ಅಲ್ಲಿಂದ ಲಿಂಕ್ ಹುಡ್ಕೊಂಡು ಬಂದು ಇಲ್ಲಿ ಲ್ಯಾಂಡ್ ಆದೆ ನೋಡು.. Almost all posts are sooperrrbbbbb...
ಆಫೀಸ್ ಅಲ್ಲಿ ಕೆಲಸ ಮಾಡೋದು ಬಿಟ್ಟು ಒಂದೇ ದಿನ ಎಲ್ಲ posts ಓದಿ ಮುಗಿಸಿದೆ... ee week inda nam office alli ee site na block maadidare... proxy huduki blog open maado ashtralli saakagoytu....
ವೀಕೆಂಡ್ ಸಿಕ್ರೆ ಸಾಕು trip, trek, pub, bar, party, dating ಅಂತ ಟೈಂಪಾಸ್ ಮಾಡೋ ನಮ್ಮಂತ software engnieers ಇರೋವಾಗ., ನೀವು ಈ blog ನ ಬರಿತಿರಲ್ಲಾ ತಾಳ್ಮೆ ಜಾಸ್ತಿ ನಿಮಗೆ.. ಓದೋದು ಬರಿಯೋದು ಬಿಟ್ಟು ವರ್ಷಗಳೇ ಕಳೆದು ಬರಿ ಕಂಪ್ಯೂಟರ್ ಮುಂದೆ ಜೀವನ ಕಳೆಯೋ ಕಾಲದಲ್ಲಿ ನೀವು different ಬಿಡಿ... ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಅಂತ ಯುವ ಜನತೆಗೆ ತಿಳಿ ಹೇಳುತ್ತಿದ್ದಿರ.. :):):) ಮದುವೆ ಆಗದೇನೆ ಇಷ್ಟೆಲ್ಲಾ ಸರಸ ಸಲ್ಲಾಪ ಬರಿತಿರ ಅಂದ್ರೆ ರಸಿಕರು ನೀವು... !!!
ಶೀಘರ್ಮೇವ ಕಲ್ಯಾಣ ಪ್ರಾಪ್ತಿರಸ್ತು....!!!
ಅಂದಹಾಗೆ ಮದುವೆಗೆ ಕರಿರೀ.., ಮರಿಬೇಡಿ..!! "ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ" ಅಂತ ಅಣ್ಣಾವ್ರು ಹಾಡು ಹೇಳಿ ಹಾರೈಸ್ತಿವಿ..
ಪಿಸು ಮಾತು : ಇಷ್ಟೊಂದು ಟೈಪ್ ಮಾಡೋ ಅಷ್ಟರಲ್ಲಿ ಸುಸ್ತಾಗೋದೆ.. :(
Annapoorna Daithota ಅವರಿಗೆ
ಒಂಥರಾ ನೆಲ್ಲಿಕಾಯಿಗೆ ಉಪ್ಪು ಖಾರ ಹಾಕಿಕೊಂಡು ತಿಂದಂಗೆ ಇದೆ, ಉಪ್ಪುಪ್ಪು ಇದ್ದರೂ ಸಿಹಿಯೆನಿಸುತ್ತದೆ...
ಒಳ್ಳೇ ಕಿವಿಮಾತನ್ನೇ ಹೇಳಿದ್ದೀರಿ, ಹಾಂ ಸುನಾಥ ಅವರು ಹೇಳಿದ ಬೆಲ್ಲ ಅಲ್ಲ ಬೇರೆ ಬೆಲ್ಲ ಕೊಡು ಅಂದೆ, ಯಾವ ಬೆಲ್ಲ ಆದರೇನು ಆರೋಗ್ಯಕ್ಕೆ ಒಳ್ಳೇದೇ ಅಂತಂದ್ಲು ನನ್ನಾಕೆ, ಅದಕ್ಕೇ ಎರಡೂ ಸಿಕ್ತು!!!...
ಯಾರಿವನು?? ಅವರಿಗೆ
ನಿಮ್ಮ ಹೆಸರೇ ಪ್ರಶ್ನೇಯಾಗಿದೆ ಇನ್ನು ಯಾರು ಅಂತ ಹೇಗೆ ಕೇಳಲಿ, ಪ್ರೀತಿಯಿಂದ ಇಷ್ಟು ದೊಡ್ಡ ಅನಿಸಿಕೆ ಬರೆದಿದ್ದಕ್ಕೆ ಮೊದಲು ಧನ್ಯವಾದಗಳು, ಬಹಳ ಖುಷಿಯಾಯ್ತು. ಅಬ್ಬಾ "ನಶೇಯೇರದೇ ನಟಿಸಿದಾಗ" ಕೂಡ ಮೇಲನಲ್ಲಿ ಪಾರ್ವರ್ಡ ಅಗ್ತಿದೆಯಾ... :) "ಹಸಿರು ಕಾನನದ" ನಂತರ ಇದೇ ಹೊಸದಾಗಿ ಕೇಳಿದ್ದು...
ನನ್ನ ಆಫೀಸಿನಲ್ಲೂ ಬ್ಲಾಕ ಮಾಡಲಾಗಿದೆ :( ನನ್ನ ಲೇಖನಗಳ PDF ಪ್ರತಿಗಳು ನನ್ನ ಸೈಟನಲ್ಲೂ ಸಿಗುತ್ತವೆ ಅದನ್ನು ಕೊಡ ಡೌನಲೋಡ ಮಾಡಿ ಓದಬಹುದು, ಇಲ್ಲ ಬ್ಲಾಗನಲ್ಲಿ ಇರುವ ಅಟೊಮ್ಯಾಟಿಕ ಅಂಚೆ ಕಳಿಸುವದನ್ನು ಸಬ್ಸಕ್ರೈಬ ಮಾಡಿದರೆ ನಿಮ್ಮ ಈ-ಮೇಲನಲ್ಲೇ ಓದಬಹುದು.(ಬ್ಲಾಗನಲ್ಲಿ ರೈಟ್ ಸೈಡ ಮಾಹಿತಿ ಇದೆ ನೋಡಿ).
ನನಗೆ ಹೊರಗೇ ಸುತ್ತುವ ಹವ್ಯಾಸವಿಲ್ಲ ನಾನಾಯಿತು ನನ್ನ ಕೆಲಸವಾಯ್ತು, ವೀಕೆಂಡ ಸ್ವಲ್ಪ ಸಮಯ ಸಿಕ್ಕಾಗ ಬರೆಯುತ್ತೇನೆ, ಹೀಗೇ ನೀವೆಲ್ಲ ಓದಿ ಪ್ರೋತ್ಸಾಹಿಸುತ್ತೀರಲ್ಲ ಅದೇ ನನಗೆ ಬರೆಯಲು ಪ್ರೇರಣೆ. ಎಷ್ಟೋ ಬಾರಿ ಹೆದರಿಕೆಯಾಗುತ್ತದೆ ಹೀಗೆಲ್ಲ ಬರೆಯುತ್ತೇನೆ, ಕೊನೆಗೆ ಕನಸೆಲ್ಲ ಕಣ್ಣ ಮುಂದೇನೇ ಕಮರಿ ಹೋದರೆ ಅಂತ, ಆದರೆ ಏನೊ ಒಂದು ಆಶಾಭಾವನೆ, ಹಾಗೇ ನಿಮ್ಮೆಲ್ಲರ ಹಾರೈಕೆಗಳು ನಿಜವಾದಾವು ಅನ್ನೊ ನಂಬಿಕೆ...
ಖಂಡಿತ ಮದುವೆಗೆ ಕರೆಯುತ್ತೇನೆ ಬನ್ನಿ, ಹಾರೈಸಿ.
ತುಸು ಮಾತು: ಸುಸ್ತಾದರೂ ಟೈಪು ಮಾಡಿದ್ದೀರಲ್ಲ, ಸಂತೊಷವಾಯ್ತು
ಪ್ರಭುರಾಜ್..ಚೆನ್ನಾಗಿದೆ ಉಪ್ಪಿಟ್ಟು ಪುರಾಣ...
ಸುಂದರ ದಾಂಪತ್ಯ ಬದುಕಿನ ಚಿತ್ರಣ ...
-ಧರಿತ್ರಿ
ರೊಮ್ಯಾಂಟಿಕ್ ಪ್ರಭು,
ನಿಮ್ ಪೇಜ್ ಓದಿದ್ರೆ ಮನಸು ಯೆಲೂ ಹೋಗುತೆ ರೀ . ಹಿಗೆ ಬರಿತ ಎಲ್ಲರನು ಕುಶಿ ಪದುಸ್ಥ ನೂರ್ ಕಲ ಬಾಳಿ ..........
ಇಂತಿ ನಿಮ್ಮವ
ಸತ್ಯನ್
9886255436
ಪ್ರಭು,
ನಾನು ಓದಿದ ನಿಮ್ಮ ಬ್ಲಾಗ್ ಗಳಲ್ಲಿ, ಇದು ಅತ್ಯುತ್ತಮ.......
ಪ್ರತಿಯೊಬ್ಬ ಮನುಷ್ಯನು ತಮ್ಮ ಸಂಬಂಧಿಗಳ ಮನಸ್ಸಿನ ಸೂಕ್ಷ್ಮಗಳನ್ನು ಅರಿತು ನಡೆದರೆ ಅದೇ ಸ್ವರ್ಗ....
ಇದೆ ಥರ ವಿಷಯಗಳನ್ನು ಆರಿಸಿಕೊಳ್ಳಿ, ಇಂದಿನ ಸಮಾಜದಲ್ಲಿ ಬಹಳ ಅವಶ್ಯಕ....
ಪವನ
ಪ್ರಭುರಾಜರೆ,
ಜಾಸ್ತಿ ಉಪ್ಪು ತಿ೦ದರೆ ಬಿ ಪಿ ಬರುತ್ತೆ ಅ೦ತ, ಬರಿ ಬೆಲ್ಲ ತಿನ್ನೊಕೆ ಹೊಗಬೇಡಿ!! :)
ಚೆನ್ನಾಗಿದೆ ಲೆಖನ.
ಧರಿತ್ರಿ ಅವರಿಗೆ
ಸುಮ್ಮನೆ ಮನಸಿಗನಿಸಿದ್ದು ಬರೆದದ್ದು, ಧನ್ಯವಾದಗಳು.
Sathyana ಅವರಿಗೆ
ಅಬ್ಬಾ "ರೊಮ್ಯಾಂಟಿಕ್ ಪ್ರಭು"!! :), ಏನೊ ಸರ್ ನನಗೂ ಗೊತ್ತಿಲ್ಲ, ನನ್ನವು ಬರೀ ತುಂಟ ಕಲ್ಪನೆಗಳು...
ನನ್ನೊಂದಿಗೆ ನನ್ನ ಕಲ್ಪನಾಲೋಕಕ್ಕೆ ಬಂದಿರುತ್ತೀರಿ ಅದಕ್ಕೇ ಹಾಗನಿಸಿರಬೇಕು. ನೂರು ಕಾಲವೇ... ನನ್ನಾಕೆ ಜೊತೆಯಾದರೆ ಬಾಳಿಯೇನು... :)
Complicated ಅವರಿಗೆ
ಪವನ, ನನಗೂ ಈ ಲೇಖನ ತೃಪ್ತಿ ಕೊಟ್ಟಿತು, ಬರೆದಿದ್ದು ಚೆನ್ನಾಗಿದೆ ಅನ್ನಿಸಿತು.
ನಿಜ ಮನಸ್ಸಿನ ಸೂಕ್ಷ್ಮಗಳನ್ನು ಅರಿತರೆ ಒಳ್ಳೆಯದು ಇಲ್ಲದಿದ್ದರೆ ಇಂಥ್ ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡ ಕಂದಕಗಳಾಗಿ ಮನಗಳ ನಡುವೆ ದಾರಿ ಮುಚ್ಚಿಬಿಡುತ್ತವೆ.
ವಿಷಯ ಅಂತ ಆರಿಸಿ ಬರೆಯಲ್ಲ, ಹಾಗೆ ಎನೋ ಒಂದು ಬರೆಯುತ್ತೇನೆ, ಈಗ ಈ ಶನಿವಾರ ಉಪ್ಪಿಟ್ಟು ಮಾಡಿದ್ದೆ ಖಾರ ಜಾಸ್ತಿ ಆಗಿತ್ತು, ಅದೇ ಯೋಚನೆಯಲ್ಲೇ ಈ ಲೇಖನ ಬಂತು... ಹೀಗೇ ಅಂಥ ಯೋಚನೆಗಳು ಬರಬೇಕಷ್ಟೇ. ಖಂಡಿತ ಒಳ್ಳೇ ವಿಷಯಗಳ ಮೇಲೆ ಬರೆಯಲು ಪ್ರಯತ್ನಿಸುತ್ತೇನೆ.
ಬಾಲು ಅವರಿಗೆ
ಅದೂ ಸರಿಯೇ... ಬರೀ ಬೆಲ್ಲ ತಿಂದು ಮಧುಮೇಹ ಬಂದೀತಂತ ಭಯವೇ ಇರುತ್ತದೆ. (ಅದು ವಂಶಪಾರಂಪರ್ಯವಾಗಿ ಬರುವುದು). ಹಾಗೇ ಜೀವನಕ್ಕೆ ಎಲ್ಲವೂ ಬೇಕು.
ಪ್ರಭು, ನಿಮಗೆ ಬಹು ಪರಾಕ್..ಎರಡು ಸರ್ತಿ ಬೈಸಿಕೊಂಡಿದ್ದ ಇಲ್ಲ ನನ್ನಾK ಮುನಿಸಿಗೆ ಕಾರಣವಾಗಿದ್ದ ನಿಮ್ಮ ಲೇಖನಗಳು..ಮದ್ವೆ ಯಾಕೆ ಆಗ್ಬೇಕು..?? ಪ್ರೀತ್ಸೋದು ತಪ್ಪಾ..???
ಈ ಸರ್ತಿ ನನ್ನಾಕೆ...ನನ್ನ ರಮಜಾನ್ ಉಪವಾಸದ ಬ್ರೇಕ್ ಸಮಯಕ್ಕೆ ಅಂತ ಖೀಮಾ-ಬಿರಿಯಾನಿ ಮಾಡಿದ್ದಳು..ಮಾಡುವಾಗ ..ಸ್ವಲ್ಪ ಉಪ್ಪು ಜಾಸ್ತಿಯಾಗಿತ್ತು...ಇನ್ನೂ (ಅರ್ಧ ಬೆಂದ) ಅನ್ನ ಹಾಕಿರಲಿಲ್ಲ ಆಗಲೇ ಗೊತ್ತಾಗಿದ್ದು ಖೀಮಾ-ರಸದಲ್ಲಿ ಉಪ್ಪು ಜಾಸ್ತಿಯಾಗಿದೆ ಅಂತ..ನನ್ನನ್ನ ಕೇಳಿದಳು..ನಿಮ್ಮ ಸೂತ್ರ ಕೊಟ್ಟೆ...ಸೂಪರ್ ರ್ರೀ...ಆಲೂಗಡ್ಡೆ ಕೆಲಸ ಮಾಡಿತ್ತು...ನನಗೋ ವಿಶೇಷ ಟ್ರೀಟ್ಮೆಂಟು....ಥ್ಯಾಂಕ್ಸ್...
ಜಲನಯನ ಅವರಿಗೆ
ಅಂತೂ ನನ್ನ ಟಿಪ್ ನಿಮ್ಗೆ ಹೆಲ್ಪ ಆಯ್ತು ಬಿಡಿ, ಆಗಾಗ ಸ್ವಲ್ಪ ಮುನಿಸು ಮತ್ತೆ ಮುಗುಳುನಗು ಇದ್ರೇನೆ ಚೆನ್ನ, ಹೀಗೆ ಇರಲಿ ನಿಮ್ಮ ಜೀವನ...
ಪ್ರಭು,
ತು೦ಬಾ ತಡವಾಗಿ ಬ೦ದಿದೀನಿ, ಕ್ಷಮೆಯಿರಲಿ.
"ಸರಸ ಜನನ, ವಿರಸ ಮರಣ, ಸಮರಸವೇ ಜೀವನ" - ಬೇ೦ದ್ರೆ ಸಾಲುಗಳು ನೆನಪಾದವು ನಿಮ್ಮ ಈ ಲೇಖನದ ಸ೦ದೇಶದಲ್ಲಿ..
ನಿಜಕ್ಕೂ, ಒ೦ದಿಷ್ಟು ಪಿಳ್ಳೆ ನೆವ ಸಿಕ್ಕರೆ ಸಾಕು ಅ೦ತ ಕಾಯ್ತ ಇರ್ತಾರೆ ಜನ ಚೆನ್ನಾಗಿರೋ ಸ೦ಸಾರನೂ ಎಕ್ಕುಟ್ಸೋಕೆ :(
ಪರಸ್ಪರ ನ೦ಬಿಕೆ ವಿಶ್ವಾಸಗಳೇ ನಮ್ಮನ್ನ ಕಾಯಬೇಕು.
ವಿನುತ ಅವರಿಗೆ
ನಿಮಗೆ ಸಮಯ ಸಿಕ್ಕಾಗಲೇ ಓದಿ, ಓದುತ್ತಿರಲ್ಲ ಅದೇ ನನಗೆ ಖುಷಿ...
ಆ ಉಕ್ತಿ ನಿಜಕ್ಕೂ ಸರಿ... ಕೆಲ ಜನ ಚಿಕ್ಕನೆವ ಸಿಕ್ಕರೂ ಸಾಕು ಅಂತ ಕಾಯ್ತಾ ಇರ್ತಾರೆ, ಎನಾದ್ರೂ ಮಾಡಿ ಹಾಳು ಮಾಡಲಿಕ್ಕೆ, ನಮ್ಮವರ ಮೇಲೆ ನಮಗೆ ನಂಬಿಕೆಯಿದ್ದರೆ ಸಾಕು...
Hello Sir,
Bhaari Mast ava ri nim article... 2008 enda baritiddiri ... nanga ega oodo chance sikktu... Thank God now atleast i came to know about your blog... oodak start maadidra bidlikka manas aagolla... nan PM kan tappis-tappis oodtirteni... Really superb...
@veena
ಹ್ಮ್ 2008 ರಲ್ಲಿ ಬರೆಯಲು ಶುರು ಮಾಡಿದ್ದು ಆಗೆಲ್ಲ ವಾರಕ್ಕೊಮ್ಮೆ ಬರೀತಾ ಇದ್ದೆ ಈಗ ಸಮಯ ಸಿಗದೇ ಬರೆಯೋದೇ ಕಮ್ಮಿ ಆಗಿದೆ.. ಅಂತೂ ಇಂದ ಆದರೂ ನಿಮಗೆ ಗೊತ್ತು ಆಯ್ತಲ್ಲ ಓದಿ... ಎಂಜಾಯ್ ಮಾಡಿ... ಬಹಳ ಲೇಖನ ಇವೆ ಬೇಕಿದ್ದರೆ PDF ದೌನಲೋಡ್ ಮಾಡಿಕೊಂಡು ಸಮಯ್ ಸಿಕ್ಕಾಗ್ ಓದಿ... ನಿಮ್ಮ PM ಗೆ ಗೊತ್ತಾದ್ರೆ ನನ್ನ ಬಯ್ದುಕೊಳ್ದೆ ಇರಲ್ಲ ಅಂತೀನಿ... :)
neevu tumbne chennagi bareeteera, tamsheyagirodara jotege tumba arthapurna abhipraya, anisikegalirutte nimma barahadalli, baravanige kalpane andare nijavaagi namboke aagtilli, nimma kalpaneyantiro balasangati sigali anta ashistene, naanu maduvege modalu nimma barahagala haage ellavannu nanna kalpanegalli ee tarahada chikka chikka sanniveshagalannu think maadtidde, but nanna and nanna lifepartner swabhava tadhviruddha, he is more practical and he thinks i am emotional fool, and in my opinion he is more practical and insensitive, kalpanegala swalpa anshagaladaru iro baala sangati iddare life is beautiful.
Post a Comment