ಕೂತು ನಾಲ್ಕು ಸಾರಿ ಕೂಡಿ ಕಳೆದರೂ ಈ ಕ್ರೆಡಿಟ್ಟು ಕಾರ್ಡನ ಬ್ಯಾಲನ್ಸಿನ ಲೆಕ್ಕ ಸರಿ ಹೋಗುತ್ತಿರಲಿಲ್ಲ, ತಲೆ ಕೆರೆದುಕೊಂಡು ಮತ್ತೆ ತಿರುವಿ ಹಾಕುತ್ತಿದ್ದೆ, "ಮುನ್ನೂರು ಮೂವತ್ತು, ಐನೂರು ಹತ್ತು" ಅಂತಿರುವಾಗಲೇ, ಇವಳು ಕೂಗಿದಳು "ರೀ ಪೇಪರ್ ಬಿಲ್ಲಿನವ ಬಂದಿದ್ದ", "ಒಹೋ ಹಾಗೋ ಪೇಪರ್ ಸರಿಯಾಗಿ ಬರ್ತಿದೆ ಅಂತ ಹೇಳಬೇಕಿತ್ತು" ಅಂದೆ, "ಪೇಪರ್ ಸರಿಯಾಗೇ ಬರ್ತಿದೆ ಈಗ ಅವನಿಗೆ ಹಸಿರು ಹಸಿರು ಪೇಪರ್ ನೋಟು ಎಣಿಸಿ ಕೊಡಬೇಕಲ್ಲ" ಅಂದ್ಲು, "ಆಯ್ತು, ಅದೊಂದು ನೂರು ಅಂತ ಲೆಕ್ಕ ಮಾಡಿದೆ, ಲೇ ಪೇಪರ್ ಬೇಕೇನೆ ನಮ್ಗೆ, ನೀನ್ ಓದ್ತೀಯಾ" ಅಂದೆ, "ಅದೇ ಟೈಮ್ ಸಿಕ್ಕಾಗ ಮೇನ್ ಪೇಜ ಕಣ್ಣಾಡಿಸ್ತೀನಿ ಅಷ್ಟೇ, ಇಲ್ಲಾಂದ್ರೆ ಅದೂ ಇಲ್ಲ" ಅಂದ್ಲು. "ಓಕೇ ಹಾಗಾದ್ರೆ ಬರೀ ಮೇನ್ ಪೇಜ ಕೊಡ್ತಾರಾ ಕೇಳು, ಎನಾದ್ರೂ ಡಿಸ್ಕೌಂಟ್ ಸಿಕ್ರೆ ಒಳ್ಳೆದಾಗತ್ತೆ ದುಡ್ಡು ಉಳಿಯತ್ತೆ" ಅಂದೆ. ಪೇಪರನವ ಆ ಪ್ರಶ್ನೆ ಕೇಳಿದರೆ ಹೇಗೆ ಮುಖ ಮಾಡಬಹುದಿತ್ತೊ ಹಾಗೆ ಇವಳೇ ಮಾಡಿದ್ಲು. ಸಾಫ್ಟವೇರ ಕಂಪನಿಗಳಲ್ಲಿ ರಿಸೆಷನ ಅಂತ ಟಾಯ್ಲಿಟ್ಟಿನಲ್ಲಿಡುವ ಟಿಶ್ಯೂ ಪೇಪರ್ ಕೂಡ ಕಟ್ ಮಾಡಿದಂತೆ, ನಮ್ಮನೇ ಪೇಪರ ಮೇಲೆ ಕಣ್ಣು ಬಿದ್ದಿತ್ತು ನಂದು. "ವಾರದ ನಂತರ ಪಕ್ಕದ ಮನೆ ಪದ್ದು ಹೋಗಿ ಹೇಗೂ ರದ್ದಿ ಅಂಗಡಿಗೆ ಹಾಕ್ತಾಳೆ, ಅದನ್ನೇ ನಮ್ಮನೆಗೆ ಕೊಡು ಅಂತ ಹೇಳಿದರಾಯ್ತು ಬಿಡಿ" ಅಂದ್ಲು, ವಾರದ್ದೆಲ್ಲ ಸುದ್ದಿ ಒಮ್ಮೇ ಓದುವ ಯೋಚನೆ ಅವಳದು, ನಾನೇ ಚಾಪೆ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೆ ನುಸುಳುವವಳು. "ಒಳ್ಳೆ ಐಡಿಯಾ ಕೊಡ್ತೀಯಾ, ನೀನ ಯಾವುದಾದ್ರೂ ಕಂಪನಿಗೆ ಕನ್ಸಲ್ಟಂಟ ಅಂತ ಆಗಬಹುದಿತ್ತು" ಅಂದ್ರೆ, "ಕೊಡ್ರೀ ನನ್ನ ಕನ್ಸಲ್ಟಿಂಗ ಫೀಜು" ಅಂದ್ಲು... ಅಯ್ಯೋ ದುಡ್ಡು ಉಳಿಸೊದು ಹೇಳೊಕೂ ದುಡ್ಡಾ ತಲೆ ಚಚ್ಚಿಕೊಂಡು ಮತ್ತೆ ಲೆಕ್ಕ ಮಾಡತೊಡಗಿದೆ...
ಅಂತೂ ಲೆಕ್ಕ ಸೇರಿಸಿ, ಇವಳು ಕೊಟ್ಟ ದಿನಸಿ ಪಟ್ಟಿ ಹಿಡಿದು ಹೊರ ಹೊರಟೆ, ಮನೆ ಮಾಲೀಕರು ಕಾಣಿಸಿದರು, "ಏನು ಬಹಳ ದಿನಾ ಆಯ್ತು ಕಾಣಿಸಿಲ್ಲ" ಅಂದ್ರು. ಹೀ ಅಂತ ಹಲ್ಲು ಕಿರಿದೆ, ತಾರೀಖು ಹತ್ತು ಆಗಿ ಹೋಯ್ತು ಇನ್ನೂ ಬಾಡಿಗೇನೇ ಕೊಟ್ಟಿಲ್ಲ ಅಂತ ಕೇಳ್ತಿದಾರೆ ಅಂತ ಅನ್ಕೊಂಡು, "ಎರಡು ಸಾರಿ ಬಂದಿದ್ದೆ ತಾವೇ ಸಿಕ್ಕಲಿಲ್ಲ" ಅಂತ ಸುಳ್ಳು ರೈಲು ಬಿಟ್ಟು ಸಾವಿರದ ಕಂತೆಗಳನ್ನು ಎಣಿಸಿ ಅವರ ಕೈಗಿಟ್ಟೆ "ಅಯ್ಯೊ ಪರವಾಗಿಲ್ಲ, ನೀವೇನು ಕೊಟ್ಟೇ ಕೊಡ್ತೀರಲ್ಲಾ, ಅರ್ಜೆಂಟೇನಿರಲಿಲ್ಲ" ಅಂದ್ರು, ಪಾಪ ಒಳ್ಳೇವರು(ಬಾಡಿಗೇನೇ ಕೇಳದಿದ್ರೆ ಇನ್ನೂ ಒಳ್ಳೇವರು!!), "ಏನ್ ಮಾಡೊದು ಸಾರ್, ನಾಲ್ಕು ದಿನ ಹೆಚ್ಚಿಗೆ ಇಟ್ಟರೂ ಬ್ಯಾಂಕಿನಲ್ಲಿ ಏನು ಬಡ್ಡಿನೂ ಬರಲ್ಲ ಬಿಡಿ" ಅಂದೆ ನಗುತ್ತ, "ಲೇಟಾಗಿ ಕೊಟ್ರೆ ನಾವೇನು ದಂಡ(ಫೈನ್) ಹಾಕಲ್ಲ ಅಲ್ವಾ" ಅಂತಂದು ನಡೆದರು. ಬಡ್ಡಿನೂ ದುಡ್ಡೇ, ದಂಡಾನೂ ದುಡ್ಡೇ ಅಂತ ಯೋಚಿಸುತ್ತ, ನಾ ಕಿರಾಣಿ(ದಿನಸಿ) ಅಂಗಡಿಗೆ ಬಂದರೆ ಎಂದಿನಂತೆ ಕೀರ್ತಿ(ಕೀರುತಿ, ಕಿರುಚುತಿ, ನಮ್ಮ ನಾಮಕರಣವೇ) ಕಿರುಚುತ್ತಿದ್ಲು. ನನ್ನ ನೋಡಿ ಒಮ್ಮೇಲೆ ಮುಖದ ಮೇಲೆ ಇಷ್ಟು ದೊಡ್ಡ ನಗು ಹೊತ್ತು, "ಎನ್ ನಮ್ಮ ಅಂಗಡಿಗೆ ಬರೋದೇ ಇಲ್ಲಾ ಸರ್, ಡಿಸ್ಕೌಂಟ ಸಿಗತ್ತೇ, ಆಫರ ಅಂತ ಶಾಪಿಂಗ ಮಾಲ್ಗೆ ಹೋಗ್ತೀರಾ, ಅಲ್ಲಿ ಎಲ್ಲ ಹಳೇ ಮಾಲು, ನಮ್ಮಲ್ಲಿ ಎಲ್ಲಾ ಫ್ರೆಷ್" ಅಂದ್ಲು, "ಹಳೇದೊ ಹೊಸದೊ... ದುಡ್ಡು ಹಳೇದಾದ್ರೂ ಅದೇ ಬೆಲೆ, ಹೊಸದಿದ್ರೂ ಅದೇ ಬೆಲೆ" ಅಂದೆ ಅವಳಿಗೆ ತಿಳೀತೊ ಇಲ್ವೊ, ದೊಡ್ಡ ತತ್ವಜ್ಞಾನಿಯಂತೆ ಕಂಡಿರಬೇಕು, ಕಕ್ಕಾಬಿಕ್ಕಿಯಾಗಿ ನೊಡುತ್ತಿದ್ದವಳಿಗೆ ದಿನಸಿ ಪಟ್ಟಿ ಕೊಟ್ಟು, ಆ ಫ್ರೆಷ್ ಸಾಮಾನುಗಳಿಗೆ, ಗರಿಗರಿ ಫ್ರೆಷ್ ನೋಟುಗಳನ್ನೇ ಎಣಿಸಿ ಕೊಟ್ಟೆ(ರಿಜರ್ವ ಬ್ಯಾಂಕಿನಲ್ಲಿ ಪ್ರಿಂಟ ಆಗಿ ನೇರ ನನ್ನ ಕೈಗೇ ಬಂದಿರುವಂತವು.) ಅತ್ತಿತ್ತ ತಿರುವಿ ನಾಲ್ಕು ಬಾರಿ ಪರೀಕ್ಷಿಸಿ ನೋಡಿ ತೆಗೆದುಕೊಂಡಳು, ಅವಳ ಎಣ್ಣೆ, ಹಿಟ್ಟು ಮೆತ್ತಿದ ಕೈಗಳಲ್ಲಿ ಅವೂ ಹಳೆಯದಾದವು, ಖೊಟಾ ನೋಟು ಏನಲ್ಲ ಬಿಡು, ಅಷ್ಟಕ್ಕೂ ಅದೂ ಕೂಡ ದುಡ್ಡೇ ಅಲ್ವೇ ಖೊಟಾ ಅಂತ ಗೊತ್ತಾಗೊವರೆಗೆ... ಅಂತನ್ನಬೇಕೆನಿಸಿದರೂ ಜಾಸ್ತಿ ಮಾತಾಡಿದರೆ ಎಲ್ಲಿ ನಾನೇ ಪ್ರಿಂಟ ಮಾಡಿ ತಂದಿರುವೆ ಅಂತಂದಾಳು ಅಲ್ಲಲ್ಲ ಕಿರುಚಿಯಾಳು ಅಂತ ಹೆದರಿ ಸುಮ್ಮನಾದೆ, ಗಲ್ಲಾ ಪೆಟ್ಟಿಗೆ ಎಲ್ಲ ಸಾರಿಸಿ ಸಪಾಟ ಮಾಡುವ ಹಾಗೆ ಬಳಿದು, ಎಣಿಸಿ ನಾಣ್ಯಗಳನ್ನೇ ಕೊಟ್ಟಳು, ನೋಟಿಲ್ಲ ಬರೀ ಚೇಂಜ ಇದೆ ಅನ್ನುತ್ತ, ಅದೂ ದುಡ್ಡೆ ಅಲ್ವೇ, ಅದನ್ನೇ ಜೇಬಿನಲ್ಲಿಳಿಸಿ ನಡೆದೆ.
ಮನೆಗೆ ಬರುತ್ತಿದ್ದಂತೆ, ಜೇಬಿನಲ್ಲಿ ನಾಣ್ಯಗಳು ನಾಟ್ಯವಾಡಿದಂತಾಗಿ, ಗೆಜ್ಜೆ ಘಲ್ಲು ಘಲ್ಲು ಅನ್ನೊ ಹಾಗೆ ಸದ್ದು ಬರುತ್ತಿದ್ದು ಕೇಳಿ, "ರೀ ಕೀರ್ತಿ ಕಿರಾಣಿ ಅಂಗಡೀಲಿ ದಿನಸಿ ತುಗೊಂಬಾ ಅಂದ್ರೆ ಜತೆಗೆ ಅವಳನ್ನೂ ಕರೆತಂದಿರೋ ಹಾಗಿದೆ, ಏನು ಗೆಜ್ಜೆ ಸದ್ದು ಅದು" ಅಂದ್ಲು, "ಹೂಂ ದಿನಸಿ ಕೊಂಡ್ರೆ ಜತೆಗೆ ಫ್ರೀ ಅಂತ ಕೊಟ್ರು ಕಿರುಚೋಕೆ" ಅಂದೆ, "ಏನ್ ಫ್ರೀನೊ ಏನೊ ಫ್ರೀ ಅಂತ ಹೇಳೋಕಷ್ಟೇ ಅದಕ್ಕೂ ದುಡ್ಡು ಸೇರಿಸಿಯೇ ಇಟ್ಟಿರ್ತಾರೆ ಬಿಡಿ" ಅಂದು, ಅವಳಿಗೇನು ದುಡ್ಡಿನ ಸದ್ದು ಗೊತ್ತಾಗಲ್ವೇ... ತನ್ನ ಉಳಿತಾಯದ ಕುಡಿಕೆ, ಅದೇ ಆ ಹಂದಿ ಮರಿ ಬಾಕ್ಸ್ ಹಿಡಿದು ಹೊರಬಂದ್ಲು, ಸೇವಿಂಗ್ಸ ಮಾಡೊಕೆ ಅಂತ ಚಿಕ್ಕ ಹಂದಿಮರಿ ಆಕಾರದ ಬಾಕ್ಸ ಇರ್ತವಲ್ಲ, ಅದು, ಜೇಬಿನಿಂದ ತೆಗೆದು ಎರಡು ನಾಣ್ಯ ಅದರ ಬೆನ್ನಿನಲ್ಲಿನ ಕಿಂಡಿಗೆ ತಳ್ಳಿದೆ, ಹಂದಿಮರಿ ಖುಷಿಯಾದಂತೆ ಕಂಡರೂ ಇವಳು ಕಾಣಲಿಲ್ಲ, ಜೇಬಿನಲ್ಲಿದ್ದ ಎಲ್ಲ ನಾಣ್ಯ ತೆಗೆದು ಅವಳ ಕೈಗಿತ್ತು... "ದುಡ್ಡು ದುಡ್ಡು ದುಡ್ಡು... ಸಾಕಾಗಿದೆ ಮುಂಜಾನೆಯಿಂದ ಬರೀ ಕೊಡೋದೆ ಆಯ್ತು" ಅಂತ ಬೇಜಾರಿನಲ್ಲಿ ಅಂದರೆ, ನಾನೇ ಕೊಟ್ಟ ನಾಣ್ಯಗಳಲ್ಲಿನದೊಂದು ರೂಪಾಯಿ ನನ್ನ ಕೈಗಿತ್ತಳು ಭಿಕ್ಷೆ ಹಾಕಿದಂತೆ! ಕೊಟ್ಟಿದ್ದು ಯಾಕೆ ಬೇಡ ಅನ್ನಲಿ ಅಂತ ಕಣ್ಣಿಗೊತ್ತಿ ಇಟ್ಕೊಂಡೆ.
"ಅಲ್ಲ ನಾನೂ ನೋಡ್ತಾ ಇದೀನಿ, ಏನ್ ದುಡ್ಡು ದುಡ್ಡು ಅಂತೀದೀರಾ, ಎನಾದ್ರೂ ತೊಂದ್ರೇನಾ" ಅಂದ್ಲು, "ದುಡ್ಡು ಇದ್ರೂ ತೊಂದ್ರೆ, ಇಲ್ಲದಿದ್ರೂ ತೊಂದ್ರೆ ಬಿಡು" ಅಂದೆ, "ಇದ್ರೆ ಏನ್ ತೊಂದ್ರೆಪ್ಪಾ, ಜಾಸ್ತಿ ಆಗಿದ್ರೆ ನಂಗೆ ಕೊಡಿ" ಅಂದ್ಲು, "ಜಾಸ್ತಿ ಆಗಿದ್ದು ಕೊಟ್ಟೆನಲ್ಲ ಆಗಲೇ ಆ ಹಂದಿಮರಿಗೆ ತಿನ್ನಿಸಿದೆ" ಅಂದೆ, "ಹತ್ತಿಪ್ಪತ್ತು ರೂಪಾಯಿ ಜಾಸ್ತೀನಾ ನಿಮ್ಗೆ" ಅಂದ್ಲು "ಲೇ ಅಷ್ಟಕ್ಕೇ ದಿನಾ ಪೂರ್ತಿ ದುಡೀತಾರೆ ಕೆಲವು ದಿನಗೂಲಿಗಳು, ಅದು ಜಾಸ್ತೀನೆ" ಅಂದೆ, "ಅವರ ಹತ್ರಾ ದುಡ್ಡು ಜಾಸ್ತಿ ಇದ್ರೆ ತೊಂದ್ರೆನೇ ಇರಲ್ಲ, ಹಾಗಾದ್ರೆ ದುಡ್ಡಿದ್ರೂ ತೊಂದ್ರೆ ಅಂತ ಹೇಗೆ ಹೇಳ್ತೀರಿ" ಅಂತ ಮರುಪ್ರಶ್ನಿಸಿದಳು. "ಅದೇ ದಿನಗೂಲಿಗೆ ಹತ್ತು ಕೋಟಿ ರೂಪಾಯಿ ಲಾಟರಿ ಹತ್ತಿದ್ರೆ, ಹರಿದು ತಿಂದು ಬಿಡ್ತಾರೆ ಅವನನ್ನ, ಆಗ ದುಡ್ಡಿದ್ರೂ ತೊಂದ್ರೆ ಅಲ್ವಾ" ಅಂತ ಸಮಜಾಯಿಸಿದೆ. "ಅದೂ ಸರಿಯೇ... ದುಡ್ಡು ಇಲ್ದೆ ಇದ್ರೆ ಮಾತ್ರ ತೊಂದ್ರೆ ತಪ್ಪಿದ್ದಲ್ಲ" ಅಂದ್ಲು. "ಹಾಗೆ ನೋಡಿದ್ರೆ ಅಪ್ಪ ಕಳಿಸಿದ ಪಾಕೆಟ ಮನಿಯಲ್ಲಿ ಕಾಲೇಜಿನಲ್ಲೇ ಆರಾಮಾಗಿದ್ದೆ" ಅಂತ ಮಾತು ತಿರುವಿದೆ, "ಈಗೇನು ದೊಡ್ಡ ತೊಂದ್ರೆ ಹಾಗಿದ್ರೆ" ಗುರಾಯಿಸಿದಳು. "ಅದೇ ಹಾಸ್ಟೆಲ್ಲು ಊಟ, ಹೊರಗೊಂದು ಕಪ್ಪು ಟೀ ಅಷ್ಟೇ ಚೆನ್ನಾಗೇ ಇತ್ತು, ತಿಂಗಳ ಕೊನೆಗೆ ಖಾಲಿ, ಕಾಲೇಜು ಮುಗೀತು ಕೆಲ್ಸ ಸಿಕ್ತು, ಪಾಕೇಟ ಮನಿಗಿಂತ ಜಾಸ್ತಿ ಸಂಬಳ ಆಯ್ತು, ರೂಮು, ಶಾಪಿಂಗು, ಫಿಲಮ್ಮು, ಆಯ್ತು. ತಿಂಗಳ ಕೊನೆಗೆ ಮತ್ತೆ ಖಾಲಿ. ಪ್ರಮೋಷನ್ನು ಆಯ್ತು ಇನಕ್ರೀಮೆಂಟ ಆಯ್ತು, ಬಸ್ಸು ಹೋಯ್ತು ಬೈಕ ಬಂತು, ಸುತ್ತಿ ಪೆಟ್ರೊಲು ಸುಟ್ಟಿದ್ದೇ ಆಯ್ತು, ದೊಡ್ಡ ರೂಮು, ಬ್ರಾಂಡ ಬಟ್ಟೆ ಮತ್ತೆ ತಿಂಗಳ ಕೊನೆಗೆ ಲೊಟ್ಟೆ, ಮತ್ತೆ ಹೆಚ್ಚಿನ ಸಂಬಳ, ಮದುವೆ ಮಹರಾಣಿಯಂತ ಮಡದಿ, ಅರಮನೆಯಂತ ಮನೆ... ತಿಂಗಳ ಕೊನೆ!!!" ನಿಟ್ಟುಸಿರು ಬಿಟ್ಟೆ.... "ಹೂಂ ಮಹರಾಜರು ಓಡಾಡೊಕೆ ರಥ ಅದೇ ಕಾರು ಬೇರೆ ಬೇಕು ಅದು ಮುಂದಿನ ಕಂತು, ಕೋಟಿ ರೂಪಾಯಿ ಸಿಕ್ರೂ ಸಾಕಾಗಲ್ಲ ಬಿಡಿ" ಅಂದ್ಲು. "ಒಂದಂತೂ ನಿಜ ಜೀವಿಸುವ ಶೈಲಿ, ಸ್ಥರ ಬದಲಾಗುತ್ತ ಹೋಗಿದೆ, ಸೌಕರ್ಯಗಳು ಜಾಸ್ತಿ ಆಗಿವೆ, ದುಡ್ಡಿಲ್ಲದೇ ಜೀವನವಿಲ್ಲ, ಅದು ಎಷ್ಟಾದರೂ ಸಾಕಾಗಲ್ಲ ಅನ್ನೊ ಹಾಗೆ ಆಗಿದೆ" ಅಂದೆ. "ಸಾಕು ಹೊಟ್ಟೆಗೇನು ದುಡ್ಡೆ ತಿನ್ನೊಕಾಗಲ್ಲ, ಏನಾದ್ರೂ ಹೊರಗೆ ತಿನ್ಕೊಂಡು ಬಂದ್ರಾಯ್ತು, ನಿಮ್ಮ ಸೊಡೆಕ್ಸೊ ಫುಡ ಕೂಪನ್ ಇವೆ ಅಲ್ವ" ಅಂದ್ಲು "ಅದೂ ದುಡ್ಡೇ ಕಣೇ, ಸಂಬಳದಲ್ಲಿ ಕಟ್ ಮಾಡಿ ಕೊಡೋದು ಅಂತಿದ್ದರೆ" ತಳ್ಳಿಕೊಂಡು ಹೊರ ನಡೆದಳು, "ಮಾತಾಡಲು ಬಿಟ್ಟರೆ ದುಡ್ಡು ಖರ್ಚು ಆಗಲ್ಲ ಅಂತ ಮಾತಾಲ್ಲೇ ಹೊಟ್ಟೆ ತುಂಬಿಸಿಬಿಡ್ತಾರೆ" ಅಂತನ್ನುತ್ತ.
ದುಡ್ಡು, ಹಾಗೆ ನೋಡಿದ್ರೆ ಒಂದು ತುಣುಕು ಹಾಳೆ, ಚೂರು ಲೋಹ, ನಾವೇ ಅದಕ್ಕೆ ಬೆಲೆ, ಮೌಲ್ಯ ಅಂತ ಕೊಟ್ಟಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಈಗ. ಎಷ್ಟು ದುಡ್ಡಾದರೂ ಸಾಕಾಗಲ್ಲ, ಹಾಗೇ ಇನ್ನೂ ಹೆಚ್ಚು ಹೆಚ್ಚು ಅಂತ ಗಳಿಸುತ್ತಲೇ ಇರುತ್ತೇವೆ, ನಮ್ಮ ಅವಶ್ಯಕತೆಗಳು ಗಳಿಕೆಗೆ ತಕ್ಕಂತೆ ಬೆಳೆಯುತ್ತಲೇ ಹೋಗುತ್ತವೆ, ಬೆಳೆಸುತ್ತಲೂ ಹೋಗುತ್ತೇವೆ. ಕೊನೆಗೆ ಖುಷಿಯಾಗಿರೊಕೆ ದುಡ್ಡು ಅಂತ ಅನ್ನಿಸಿದಾಗ... ಅದಕ್ಕೆ ದುಡ್ಡೇ ಯಾಕೆ ಅನಿಸಿದರೂ, ದುಡ್ಡಿಲ್ಲದೆ ಖುಷಿಯೂ ಇಲ್ಲ ಅನಿಸುತ್ತದೆ, ದುಡ್ಡಿದ್ದರೆ ಖುಷಿಯೇ ಇರುತ್ತದೆ ಅಂತಲೂ ಇಲ್ಲ. ಅದ್ರೂ ದುಡ್ಡು ಬೇಕೇ ಬೇಕು, ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತದೆ ಅಂತ ಸುಮ್ನೇನಾ ಹೇಳಿದ್ದು ಹೆಣಕ್ಕೂ ಜೀವ ಬರಬೇಕೆಂದ್ರೆ, ಜೀವಿಸೊಕೆ ಅದು ಬೇಕೇ ಅಲ್ವೇ.
ಹೊಟೆಲಿನಲ್ಲಿ ಹೊಟ್ಟೆ ತುಂಬ ತಿಂದು, ಫುಡ್ ಕೂಪನ್ನು ಕೊಟ್ಟಾಗ ದುಡ್ಡು ಕೊಟ್ಟಂತೆ ಅನ್ನಿಸಲಿಲ್ಲ, ಆದರೂ ಕೊಟ್ಟಿದ್ದೂ ದುಡ್ಡೇ. ವೇಟರಗೆ ಟಿಪ್ಸ ಅಂತ ಹತ್ತು ರೂಪಾಯಿ ಇಟ್ಟರೆ, ಇವಳು ತೆಗೆದುಕೊಂಡು ಐದು ರೂಪಾಯಿ ಇಡುತ್ತ, "ಏನು ಹೈದರಾಬಾದ ನಿಜಾಮನ ಮೊಮ್ಮಗನಾ ನೀವು, ಟಿಪ್ಸ ಎಷ್ಟು ಇರಬೇಕೊ ಅಷ್ಟೇ..." ಅಂದ್ಲು. ಅದನೆತ್ತಿಕೊಂಡ ವೇಟರ ಮುಖದಲ್ಲಿ ಹತ್ತುರೂಪಾಯಿ ಮೂಡಿಸಬಹುದಾಗಿದ್ದ ನಗುವೇ ಐದು ರೂಪಾಯಿಗೂ ಮೂಡಿತ್ತು, ಅಲ್ಲಿನ ಅವಶ್ಯಕತೆ ಅಷ್ಟೇ ಇತ್ತು ಅದನ್ನ ಇವಳು ಮನಗಾಣಿಸಿದ್ದಳು. ಹೊರಬರುತ್ತ, "ರೀ ಅಮೇರಿಕಾದಲ್ಲಿ ದೊಸೆಗೂ ಹತ್ತಿಪ್ಪತ್ತು ಡಾಲರ ಅಂತೇ, ಏನ ಕಾಸ್ಟ್ಲೀ ಅಲ್ವಾ" ಅಂತಿದ್ಲು, ಇನ್ನೇನು ಇಲ್ಲೀ ಥರ ಹದಿನೈದು ರೂಪಾಯಿಗೆ ದೋಸೆ ಅಲ್ಲಿ ಸಿಗೋಕಾಗುತ್ತಾ, "ಲೇ ಡಾಲರೂ ದುಡ್ಡೇ ಕಣೆ" ಅಂದೆ, ಹೊಟ್ಟೆ ತುಂಬಿದ್ದರೂ ಈಗ ನನ್ನೇ ತಿಂದು ಬಿಡುವ ಹಾಗೇ ನೋಡಿದ್ಲು, "ನಗೇ... ನಗೋಕೇನೂ ದುಡ್ಡು ಕೊಡಬೇಕಾಗಿಲ್ಲ" ಅಂದೆ ಇಬ್ಬರೂ ಪುಕ್ಕಟೆಯಾಗಿ ನಗುನಗುತ್ತ ಹೊರಟೆವು ನಮ್ಮ ನಂದನವನದ ಕಡೆಗೆ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/duddu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
25 comments:
ನಿಜ ಪ್ರಭು ಅವರೇ ನಮಗೆ ಪಾಕೆಟ್ ಮನಿ ಇದ್ದಾಗಲೇ ಆರಾಮ್ ಇತ್ತು , ಈಗ ತಿಂಗಳಿಗೆ ಒಮ್ಮೆ ಸಂಬಳ ಜಾಸ್ತಿ ಆದರು ಅದು ಸಾಕಾಗಲ್ಲ ......... ಇಂದಿನ ದಿನ ದಲ್ಲಿ ದುಡ್ಡು ನಮಗೆ ಅನಿವಾರ್ಯ ಆಗಿ ನಮ್ಮ ಹಳೆ ಸಂತೋಷ ವನ್ನ ಮರೆಸುತ್ತಾ ಇದೆ ......
ಪ್ರಭು ...
ನಿನ್ನೆ ಪರೀಕ್ಷೆ ಬರೆದು ದಣಿದಿದ್ದ ನಂಗೆ ನಿಮ್ಮ blog ಒ೦ದು Refreshment ಆಯಿತು ನೋಡ್ರೀ...
ತುಂಬಾ ಚೆನ್ನಾಗಿದೆ ...
ದುಡ್ಡೇ ದೊಡ್ಡಪ್ಪ ...ವಿದ್ಯೆ ಅವರಪ್ಪ ಆದ್ರೆ Recession ಇವೆರಡರ ದೊಡ್ಡಪ್ಪ ...ಅಂತ ಹೇಳಬೇಕಾಗಿದೆ...
Recessionಗೂ Recession ಬರೋ ದಿನ ಕಾಯ್ತಾ ಇದ್ದೀನಿ...
ಇ೦ತಿ ,
ವೀಣಾ
ಪ್ರಭು,
ದುಡ್ಡಿನ ಬಗ್ಗೆ ಒಳ್ಳೆಯ ಕಣ್ಣು ತೆರುಸುವ ಬರಹ .ಕಡೆಯದಕ್ಕಿ೦ತ ಮೊದಲ ಪ್ಯಾರ( last but one) ನನಗೆ ತು೦ಬಾ ಹಿಡಿಸಿತು . ಅಲ್ಲಿ ಸರಿಯಾಗಿ ವಿಶ್ಲೆಶಿಸಿದ್ದಿರಿ .
ಬೋಜೇಶುಮಾತ ,ಕರಣೇಶು ಮ೦ತ್ರಿ ,ರೂಪೇಶು ರ೦ಭೆ . ಈ ಸೂಕ್ತಿ ನಿಮ್ಮಕೆಗೆ ಸರಿಯಾಗಿ ಹೊ೦ದುತ್ತದೆ.
ಒಟ್ಟಾರೆ ನಿಮ್ಮ ಸು೦ದರ ಬರಹಗಳ ಗುಚ್ಛಕ್ಕೆ ಇನ್ನೂ೦ದು ಸೊಗಸಾದ ಬರಹ . .
ಹೀಗೆ ಸೊಗಸಾಗಿ ಬರೆಯುತ್ತೀರಿ .
ಪ್ರಭು,
"ದುಡ್ಡು, ಹಾಗೆ ನೋಡಿದ್ರೆ ಒಂದು ತುಣುಕು ಹಾಳೆ, ಚೂರು ಲೋಹ, ನಾವೇ ಅದಕ್ಕೆ ಬೆಲೆ, ಮೌಲ್ಯ ಅಂತ ಕೊಟ್ಟಿದ್ದು" ಮುತ್ತಿನಂತಹ ಮಾತು....
ಸಂಸಾರದ ಲೆಕ್ಕಚಾರ ಸರಿಯಾಗಿ ತಿಳಿಸಿದ್ದೀರಾ....ರಿಸೆಷನಲ್ಲಿ ದುಡ್ಡು ಉಳಿಸುವ ಬಗ್ಗೆನೆ ಎಲ್ಲರ ಚಿಂತೆ.....
"ನಗೋಕೇನೂ ದುಡ್ಡು ಕೊಡಬೇಕಾಗಿಲ್ಲ" ಲೇಖನ ಓದಿ ಪುಕ್ಕಟೆಯಾಗಿ ನಗು ತರಿಸಿತು.....
ಚೆನ್ನಾಗಿತ್ತು ಲೆಕ್ಕಚಾರದ ಲೇಖನ...
ಮುಂದಿನ ವಾರಕ್ಕೆ ಕಾಯುತ್ತ....
ಪ್ರಭು ರಾಜ್ ಸರ್,\
ಮನುಷ್ಯನಿಗೆ ಸಮಾಧಾನ ಎಲ್ಲಿದೆ ಹೇಳಿ, ಹಣ ಬಂದ್ರೆ ಇನ್ನಷ್ಟು ಬರಬೇಕು ಅನಿಸುತ್ತೆ, ನಮಗಿಂತ ಭಿಕ್ಷೆ ಎತ್ತೊವ್ರೆ ವಾಸಿ, ಸಿಕ್ಕಷ್ಟರಲ್ಲಿ ಹೊಟ್ಟೆ ತುಂಬಾ ತಿಂದು ನಗ್ತಾ ಇರ್ತಾರೆ,
ನನಗನಿಸುತ್ತೆ, ನಮ್ಮ ಮನಸ್ಸೇ ಇದಕ್ಕೆಲ್ಲ ಕಾರಣವೇನೋ ಅಂತ, ಚಿಕ್ಕವರಿದ್ದಾಗ ಏನು ಸಿಗದೆ ಇದ್ರೂ ಎಷ್ಟೊಂದು ಸಂತೋಷ್ ಆಗಿದ್ವಿ, ಈಗ ಎಲ್ಲ ಸಿಕ್ಕೂ ಆನಂದ್ ಹುಡುಕ್ತ ಇದಿವಿ ಅಲ್ವೇ?
ತುಂಬಾ ಚೆನ್ನಾಗಿದೆ ಸರ್ ...
ನಿಜ ಕಾಲೇಜ್ ಟೈಮ್ ಅಲ್ಲಿ ಅಪ್ಪ ಕಳಿಸಿದ ೨೦೦೦ ದಲ್ಲೇ ತಿಂಗಳು ಕಳಿತಿತ್ತು ಆದ್ರೆ ಈಗ ೫೦೦೦ ಅದ್ರು ಸಾಕಾಗಲ್ಲ...
Money Matters
ಇಲ್ಲಿ ನಾಮ ಪದ, ವಿಶೇಷಣ ಎಲ್ಲಾ ದುಡ್ಡು...ಅದರ ಮಹಿಮೆ ರಿಸೆಶನ್ ಕಾಲದಲ್ಲಿ ಚುರುಕು ಮುಟ್ತಿಸಿದೆ ಎನ್ನಬಹುದು. ನಿಮ್ಮಾK ಯೂ ತನಗರಿವ್ವದೆಯೇ ವ್ಯವಸ್ಥೆ ಹೊಮ್ದಿಕೊಂಡಿರುವುದನ್ನು ಚನ್ನಾಗಿ ಮೂಡಿಸಿದ್ದೀರಿ. ಇನ್ನೇನಿದೆ ನಿಮ್ಮ ಬತ್ತಳಿಕೆಯಲ್ಲಿ ಪ್ರಭೂ..?? ನನಗೋ ಕೆಲವುಸಲ ಏನು ಪೋಸ್ಟ್ ಮಾಡ್ಬೇಕು ತಿಳಿಯದೆ ಪೆದ್ದು-ಪೆದ್ದಾಗಿ ಗೀಚಿ ಹಾಕಿಬಿಡ್ತೇನೆ..ಇಲ್ಲ ಅಂದ್ರ ನೀವೆಲ್ಲಾ ಏನಂದ್ಕೋಬೇಡ..?? ಹೊಸ ಅಗಸ ಗೋಣೀನ ಎತ್ತಿ-ಎತ್ತಿ ಒಗ್ದು ಬಿಟ್ಟ ...ಈಗ ಎನೂ ತಿಳೀದೇ..ಮಂಕಾಗಿ ಕೂತವ್ನೆ...ಅನ್ನೊಲ್ಲವೇ...?? ನಿಮ್ಮದು ಅಕ್ಷಯ ಬತ್ತಳಿಕೆ ಅನಿಸುತ್ತೆ...ಕಾಯ್ತೀನಿ ನಿಮ್ಮ ಹೊಸ ಬಿರುಸಿಗೆ...
ಗುಡ್ಡು ಗುಡ್ಡು ! (Good, Good)
ಪ್ರಭುರಾಜ್,
ನಿಜ, ವೀಣ ಎ ಹೇಳಿದಂತೆ, ನಿಮ್ಮ ಬರಹ ಒಂದು refreshment, ದಣಿದ ಮನಕ್ಕೆ ಮುದ ನೀಡುವಂಥದ್ದು !
ವಿಷಯದ ಗಾಂಭೀರ್ಯವನ್ನೂ ತಿಳಿಸುತ್ತದೆ, ಮನಸ್ಸಿಗೆ ಸಂತೋಷವನ್ನೂ ನೀಡುತ್ತದೆ.
Keep it up !!
ಪ್ರಭುರಾಜ,
ಈ ಸಲ ದಂಗು ಬಡೆದು ಬಿಟ್ಟೆ. ದುಡ್ಡಿನಂತಹ ಗಂಭೀರ philosophic ವಿಷಯದ ಬಗೆಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಮುದ್ದಣ ಮನೋರಮೆಯರ ಹರಟೆ ನೆನಪಾಯ್ತು.
ಒಟ್ಟೀಚ ಮೆ ಕ್ಯಾ ಬಾ?---ದುಡ್ is good!
ಪ್ರಭು,
ದುಡ್ಡಿನ ಬಗ್ಗೆ ಎಂಥಹ ವಿಶ್ಲೇಷಣೆ, ಅವಲೋಕನ, ಆಡಿಟಿಂಗ್....ಅದೂ ಎಲ್ಲಾ ಭಾವನಾತ್ಮಕವಾಗಿ. ನೀವು ಏನು ವಿಚಾರ ತೆಗೆದುಕೊಂಡರೂ ಕೂಡ ಸೊಗಸಾಗಿ ಸುಂದರವಾಗಿ ಬರೆದುಬಿಡುತ್ತೀರಿ. ಅದ್ರೆ ಪೇಪರ್ ತೆಗೆದುಕೊಳ್ಳುವುದು ಬೇಡ ಅಂತ ಹೇಳಬಾರದು....ನಮ್ಮಂಥ ಬಡಪಾಯಿಗಳ ಕತೆ ಏನ್ ಸರ್..
"ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು" ಅಂತ ಬೇಂದ್ರೆಯವರು ಅವತ್ತೇ ಹೇಳಿದ್ದರು. ಇನ್ನು ಈ ಕಾಲದಲ್ಲಿ ಕೇಳಬೇಕೆ? ಎಷ್ಟು ತುಳುಸ್ಕೋಂಡ್ರೂ ನಾವು ಕಾಂಚಣದ ಹಿಂದೆಯೇ ಮತ್ತೆ ಹೋಗುತ್ತೇವೆ. ಅದೊಂತರಾ ಸಹಜ ಪ್ರವೃತ್ತಿ ಆಗಿಬಿಟ್ಟಿದೆ.
ಪ್ರಭುರಾಜರೆ
ನಿಮ್ಮದು ಮನಸಿಗೆ ಮುದ ನೀಡುವ ಬರಹ, ಎ೦ತಹ ಗ೦ಭೀರ ವಿಷಯವನ್ನು ಸ್ವಾರಸ್ಯದೊ೦ದಿಗೆ ಹೇಳುತ್ತೀರಿ. ಚೆನ್ನಾಗಿದೆ.
dudde doddappa allave..? hahaha
nimmantavare paper nillisokke hodre paper suply madovra gati enu heLi
ಪ್ರಭುವರೆ,
ನಿಮ್ಮ ಆರ್ಟಿಕಲ್ ಓದುತ್ತ ಜೋರಾಗಿ ನಗುತ್ತಾ ಇರ್ತಿನಿ. ನನ್ನ ರೂಮ್ಮೇಟ್ಗಂತೂ ಮತ್ಸರ. ಅವನಿಗೆ ಕನ್ನಡ ಓದೋಕೆ ಬರಲ್ಲ.
ಹೀಗೆ ನಗು ನಗಿಸುವ ಆರ್ಟಿಕಲ್ ನಿಮ್ಮಿಂದ ಮತ್ತೆ ಮತ್ತೆ ಬರಲಿ ಎಂದು ಹಾರೈಸುವೆ.
"ಒಹೋ ಹಾಗೋ ಪೇಪರ್ ಸರಿಯಾಗಿ ಬರ್ತಿದೆ ಅಂತ ಹೇಳಬೇಕಿತ್ತು" ಸೂಪರ್ !!
*ತಡವಾದ ಪ್ರತಿಕ್ರಿಯೆಗೆ ವಿಷಾದಿಸುತ್ತೇನೆ, ಸ್ವಲ್ಪ ವೈಯಕ್ತಿಕ ಕೆಲಸಗಳಲ್ಲಿ ನಿರತ, ಅನವರತ! ಅದಕ್ಕೆ ಸಮಯ ಸಿಗುತ್ತಿಲ್ಲ.*
ನಾಗೇಶ್ ಅವರಿಗೆ
ಹೌದು ಪಾಕೆಟ್ ಮನಿ ಇದ್ದಾಗ ಚೆನ್ನಾಗೇ ಇತ್ತು, ಈಗ್ ಪಾಕೇಟು ದೊಡ್ಡದಾಗಿದೆ, ದುಡ್ಡಿನ ಜಾಗದಲ್ಲಿ ಕಾರ್ಡು ಬಂದಿದೆ ಆದರೂ ಯಾಕೋ ಮೊದಲಿನ ಖುಷಿ ಇಲ್ಲ್ಲ.
ಅಪ್ಪ ಕೊಟ್ಟ ಒಂದು ರೂಪಾಯಿ ತಿಂಗಳವರೆಗೆ ಹಾಗೇ ಇರ್ತಿತ್ತು ಚಿಕ್ಕಂದಿನಲ್ಲಿ, ಪೇಪರಮಿಂಟ ತೆಗೆದುಕೊಂಡರೂ ಖರ್ಚು ಆಗುತ್ತದೆಂದು! ಹಾಗೆ ಎಲ್ಲ ಘಟ್ಟಗಳನ್ನು ಮುಗಿಸುತ್ತ ಸಾಗಲೇಬೇಕು.
Veena A ಅವರಿಗೆ
ಬ್ಲಾಗ ಓದಿ ರಿಫ್ರೆಶ ಆದಿರಿ ಹಾಗಾದರೆ, ಮತ್ತೆ ಮತ್ತೆ ಪ್ರೆಷ್ ಪೋಸ್ಟಗಳು ಬರ್ತಿರ್ತವೆ, ಬರ್ತಾ ಇರಿ.
ನಿಜ ರೆಸೆಷನ ಎಲ್ರಿಗೂ ಪಾಠ ಕಲಿಸಿದೆ, ಮತ್ತೆ ಆರ್ಥಿಕ ಚೇತರಿಕೆ ಕಂಡು ಬಂದಿದೆ, ನೋಡೊಣ.
roopa ಅವರಿಗೆ
ನಿಮಗೆ ಮೆಚ್ಚುಗೆಯದರೆ ನನಗೂ ಖುಷಿ, ಈ ಗುಚ್ಛಕ್ಕೆ ನಿಮ್ಮ ಮೆಚ್ಚುಗೆ ಸಿಂಚನ.
ನನ್ನಾkನಾ ಬಹಳ ಹೊಗಳಬೇಡಿ, ನಿಮ್ಮನಿಸಿಕೆ ನೋಡಿ ಉಬ್ಬಿಹೋಗಿದ್ದಾಳೆ.
ಸವಿಗನಸು ಅವರಿಗೆ
ನಿಜ ಅಲ್ವಾ, ಅದಕ್ಕೆ ನಾವೇ ಬೆಲೆ, ಮೌಲ್ಯ ಕೊಟ್ಟಿದ್ದು, ಈಗ ಬೆಲೆಗಳೆಲ್ಲ ಗಗನಕ್ಕೇರಿ ನಮ್ಮ ಕೈಗೇ ಸಿಗುತ್ತಿಲ್ಲ.
ನನಗೇನೂ ಉಳಿಸೋ ಚಿಂತೆ ಇಲ್ಲ ಬಿಡಿ, ಬಹಳೆ ಶ್ರೀಮಂತ ಅಂದುಕೊಂಡಿರಾ... ಇಲ್ಲ ಸರ್, ಯಾಕೆ ಅಂದರೆ ಉಳಿಸೋವಷ್ಟು ಇದ್ದರೆ ತಾನೇ.
ಬರುತ್ತಿರಿ ಪುಕ್ಕಟೆ ಹರಟೆ ಇಲ್ಲಿ ನಿರಂತರ.
ಸಾಗರದಾಚೆಯ ಇಂಚರ ಅವರಿಗೆ
ಸಮಾಧಾನ ತೃಪ್ತಿ ಅಂತ ಇಲ್ಲ ಬಿಡಿ, ಹಾಗೆ ನೋಡಿದರೆ ಅದೂ ಒಳ್ಳೇದೇ, ಮುಂದುವರೆಯಲು ಅದೇ ಪ್ರೇರಣೆ, ಆದರೆ ತೀರ ಅತಿಯಾದ ದಾಹ ಸಲ್ಲ.
ಹಿಂದೆ ಎಲ್ಲೊ ಓದಿದ್ದೇ ಎಂ ಜೀ ರೋಡಲ್ಲಿ ಬಿಕ್ಷೇ ಎತ್ತೊನಿಗೆ, ಸಾಫ್ಟವೇರ ಇಂಜನೀಯರಿಗಿಂತ ಜಾಸ್ತಿ ಗಳಿಕೆ ಅಂತ! ಹೀಗೂ ಇದೆ ಏನ್ ಮಾಡ್ತೀರಾ.
ತೃಪ್ತಿ ಮತ್ತು ಆಕಾಂಕ್ಷೆ ನಡುವಿರುವ ತೆಳು ಗೆರೆಯಿದೆ ಅದರ ನಡುವೇ ನಾವು ತೊಳಲಾಡುತ್ತೇವೆ.
Manju ಅವರಿಗೆ
ನಮ್ಮಪ್ಪ ಹನ್ನೆರಡು ನೂರು ಕಳಿಸ್ತಿದ್ರು, ಈಗ ಕೇವಲ ಮೊಬೈಲು ಬಿಲ್ಲ ಆಗತ್ತೆ ಅಷ್ಟು.
ಜಲನಯನ ಅವರಿಗೆ
ಹೌದೌದು, money matters a lot... so these are all money matters.
ಬತ್ತಳಿಕೆಯಲ್ಲಿ ಏನಿದೆಯೋ ಗೊತ್ತಿಲ್ಲ, ಕೈ ಹಾಕಿದಾಗ ಒಂದು ಬಾಣ ಸಿಗುತ್ತದೆ, ಹೆದೆಯೇರಿಸಿ ಹೊಡೆಯುತ್ತೇನೆ, ಗುರಿ ತಲುಪುತ್ತೋ ಇಲ್ವೋ ಗೊತ್ತಿಲ್ಲ.
ಒಟ್ಟಿನಲ್ಲಿ ಬ್ರಹ್ಮಚಾರಿ ಭೀಷ್ಮ ಬಾಣದ ಮಂಚದ ಮೇಲೆ ಮಲಗಿರೊವರೆಗೆ, ನಮ್ಮ ಮಹಾಭಾರತ ನಿರಂತರ.
ಈಗೀಗ ನನಗೂ ಸ್ವಲ್ಪ ಸಮಯ ಸಾಲುತ್ತಿಲ್ಲ, ಹಾಗಾಗಿ ಚಿಕ್ಕಪುಟ್ಟದ್ದೇನೊ ಬರೆದು ಹಾಕುತ್ತಿದ್ದೇನೆ.
ಮತ್ತೊಂದು ಬಿರುಸಿನ ಬಾಣ ಭರ್ರನೆ ಬರುತ್ತದೆ ಕಾಯುತ್ತಿರಿ...
Annapoorna Daithota ಅವರಿಗೆ
ಗುಡ್ಡು ಗುಡ್ಡು ಚೆನ್ನಾಗಿದೆ :) ನಾಲ್ಕಾರ್ರು ಘಂಟೆ ಶ್ರಮ ಪಟ್ಟು ಡಣಿದು ಬರೆದದ್ದು, ಹೀಗೆ ಮನಕ್ಕೇ ಮುದ ನೀಡುತ್ತದೆಂದರೆ, ಇನ್ನಷ್ಟು ದಣಿದರೂ ಬರೆಯುತ್ತೇನೆ... :) (ತಮಾಶೆಗೆ ಹೇಳಿದೆ)
ಶ್ರಮ ಅಂತೇನೂ ಇಲ್ಲ, ಸಮಯ ಹೊಂದಿಸುವುದೇ ಸಮಸ್ಯೆ.
ನಿಮ್ಮ ಎಲ್ಲರ ಮೆಚ್ಚುಗೆ, ನನಗೆ ಮತ್ತೆ ಮತ್ತೆ ಬರೆಯಲು ರಿಫ್ರೆಷಮೆಂಟ್.
sunaatha ಅವರಿಗೆ
ಖುಷಿಯಾಯ್ತು, ನಿಮಗೆ ಅಷ್ಟು ಇಷ್ಟವಾಯಿತೆಂದರೆ. ನನಗೇನೊ "ದುಡ್ಡಣ moneyರಮೆ"ಯರ ಹರಟೆ ಅನಿಸಿತು :)
ಮೈ ಭೀ ವಹೀಚ್ ಬೊಲ್ರಾ!
shivu ಅವರಿಗೆ
ಎನೋ ಮನದಲ್ಲಿ ಕಾಡುವ ವಿಚಾರಗಳು ಬರೆದು ಹಾಕುತ್ತೇನೆ.
ನಿಮ್ಮಿಂದ ಹೀಗೆ ಎನೋ ಕಮೆಂಟ ನಿರೀಕ್ಶಿಸಿದ್ದೆ, ಸಧ್ಯ ಅಂತೂ ಪೇಪರ ತೆಗೆದುಕೊಳ್ಳುತ್ತಿಲ್ಲ, ಮುಂಜಾನೆ ಮನೆ ಬಿಟ್ಟರೆ ತೀರ ರಾತ್ರಿ ಮನೆ ತಲುಪೊವಾಗ ಯಾವಾಗ ಓದಲಿ.
ಆದ್ರೆ ನನ್ನಾk ಬಂದ ನಂತರ ಖಂಡಿತ ತೆಗೆದುಕೊಳ್ಳುತ್ತೇನೆ.
ರಾಜೀವ ಅವರಿಗೆ
ಒಂಥರಾ ತುಳಿದರೂ ಮೇಲೆದ್ದು ನಿಲ್ಲೋ ನಮ್ಮ ಆತ್ಮಬಲವೇನೊ ಹ ಹ ಹ :)
ಕಾಂಚಾಣ ಕುಣಿಸುತ್ತದೆ ಈಗ.
PARAANJAPE K.N. ಅವರಿಗೆ
ನಿಮ್ಮ ಮೆಚ್ಹುಗೆಗೆ ಧನ್ಯವಾದಗಳು, ಗಂಭೀರ ವಿಷಯ ಗಂಭೀರವಾಗಿ ಹೇಳಿದರೆ ತಲೆಗೆ ಹತ್ತೋದಿಲ್ಲ, ಅದಕ್ಕೆ ಈ ತರಲೆ ರೀತಿ ಬರೆಯೋದು.
ಮನಸು ಅವರಿಗೆ
ದುಡ್ಡೇ ದೊಡ್ಡಪ್ಪ ಏನೊ ಸರಿ, ಹಾಗೇ ದುಡ್ಡಿಲ್ಲದವ ದಡ್ಡಪ್ಪ... :)
ಪೇಪರ, ಸದ್ಯ ಓದೊಕೇ ಆಗಲ್ಲ,ವೀಕೆಂಡ ಸಮಯ ಇದ್ರೆ ತೆಗೆದುಕೊಂಡು ಓದುತ್ತೇನೆ.
ದಾಮು ಅವರಿಗೆ
:) ಸಾದ್ಯ ಆದರೆ ಚಿಕ್ಕದಾಗಿ ನಗೆಹನಿ ಹಾಗೆ ಟ್ರಾನ್ಸಲೇಟ್ ಮಾಡಿ ಹೇಳಿ, ಇಬ್ರೂ ಸೇರಿ ನಗಬಹುದು :)
ಇಲ್ಲಿ ನನಗೆ ಗೊತ್ತಿರುವ ನನ್ನ ತೆಲಗು ಗೆಳೆಯ ಒಬ್ರು ಬೇರೆಯವರಿಂದ ಟ್ರಾನ್ಸಲೇಟ ಮಾಡಿಸಿಕೊಂಡು ತಿಳಿದುಕೊಳ್ಳುತ್ತಾರೆ ಅಂತ ಮೊನ್ನೆ ಗೊತ್ತಾಯಿತು, ನನಗೊ ಅದನ್ನು ಕೇಳಿ ಬಹಳ ಖುಷಿಯಾಯ್ತು.
ಹಾಗೇ ಹೇಳಿದೆ ಸರ್, "ದುಡ್ಡು ಕೊಡದಿದ್ರೆ ಇನ್ನು ಮೇಲೆ ಸರಿಯಾಗಿ ಬರಲ್ಲ" ಅಂದ್ರು ಅದಕ್ಕೆ ಬಿಲ್ ತುಂಬಬೇಕಾಯಿತು.
ಕುರುಡು ಕಾ೦ಚಾಣ ಕುಣಿಯುತಲಿತ್ತು..ಕಾಲಿಗೆ ಸಿಕ್ಕವರ ತುಳಿಯುತಲಿತ್ತು.. :)
ಸರಸದೊ೦ದಿಗೆ ಸ೦ದೇಶವನ್ನೂ ಹೇಳುವ ನಿಮ್ಮ ಶೈಲಿ ಆಪ್ತವಾಗುತ್ತದೆ....
ಹೆಚ್ಚಿದ ಹಣದೊ೦ದಿಗೆ ಜೀವನಶೈಲಿಯೂ ಬದಲಾಗಲೇ ಬೇಕೆ೦ಬ ಅನಿವಾರ್ಯತೆಯಿಲ್ಲದಿದ್ದಲ್ಲಿ ನೆಮ್ಮದಿಯಿ೦ದಿರಬಹುದೇನೊ..
ವಿನುತ ಅವರಿಗೆ
ಕಾಂಚಾಣದ ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟವರೂ ನಾವೇ ಅಲ್ವೇ, ಈಗ ತುಳಿದರೆ ತುಳಿಸಿಕೊಳ್ಳಲೇಬೇಕಾಗುತ್ತದೆ... ಇದೊಂಥರ ವಿಷವರ್ತುಲ ಹೆಚ್ಚಿಗೆ ಹಣದಿಂದ ಹೆಚ್ಚಿನ ಜೀವನ ಶೈಲಿ ಮತ್ತೆ ಆ ಶೈಲಿ ಹೆಚ್ಚಿಸಲು ಹಣ... ಹೀಗೆ ಗಿರಕಿ ಹೊಡೆಯುತ್ತಲೇ ಇರಬೇಕು.
ನಿಮ್ಮವರ ಬಗ್ಗೆ ತುಂಬಾ ಹೊಗಳಬೇಡಿ, ಆದರು ಅವರು ಬದ್ದಿವಂತರು,,,, ಹೌದಲ್ವಾ.... ಪಾಕೆಟ್ ಮನಿಯಲ್ಲಿ ನಮ್ಮ ಕಾಲೇಜನ್ನ ಮುಗಿಸಿದರು, ಈಗ ಗರಿ ಗರಿ ನೋಟು ಎಣಿಸುತಿದ್ದರು ಸಹ ಈಗ ತಿಂಗಳ ಕೊನೆಯಲ್ಲಿ ಸೊನ್ನೆ...... ಸೊನ್ನೆ..... ನಿಮಗೆ ಇಂತವಳೇ ಹೆಂಡತಿ ಸಿಗಲಿ.......
ದಿನಕರ ಮೊಗೇರ ಅವರಿಗೆ
ಎಲ್ಲಿ ಹೊಗಳೋದಾ ನಾನು, ತರಲೆ ಅಂತ ತಗಾದೆ ತೆಗೆಯುತ್ತಲೇ ಇರ್ತೇನೇ...
ನಿಜ ಪಾಕೆಟ್ ಮನಿಯಿಂದ ಪ್ಲಾಸ್ಟಿಕ ಮನಿ(ಕಾರ್ಡ)ವರೆಗೆ ಬೆಳವಣಿಗೆ ಆಗಿದ್ದರೂ ಎನೂ 'ಸಾಲ'ದು.
ನಿಮ್ಮ ಹಾರೈಕೆಗೆ ಧನ್ಯವಾದಗಳು.
ಭಾನುವಾರ ಬಂತು...ಪ್ರಭುಲೀಲಾ ಪ್ರಸಂಗ ಏನು ಬರುತ್ತೋ ನಿರೀಕ್ಷೆಯಲ್ಲಿದ್ದೇನೆ...ಬರ್ತೇನೆ ಮತ್ತೆ...
ಜಲನಯನ ಅವರಿಗೆ
ಪ್ರಸಂಗ ಬಂದಿದೆ ನೋಡಿ ಸರ್, ಈ ಸಾರಿ ನಾ ಕೇಳಿರುವ ಪ್ರಶ್ನೆಯನ್ನು(ನಾ ಸತ್ತು ಹೋದರೆ? ಅಂತ!!!) ನೀವೂ ನಿಮ್ಮಾಕೆಗೆ ಕೇಳಲು ಹೋಗಿ ಎಡವಟ್ಟು ಮಾಡಕೊಳ್ಳದಿರಿ :) ಮೊದಲೇ ಎಚ್ಚರಿಸಿದ್ದೇನೆ.
I like your writing, simple and plain. Your writing reminds KSN's poetry!
- Keshav
To: Keshav Kulkarni
Thank you, Sir, KSN's poetry is great, I am not up to that level... just simple blogger, with some funny fantasies... glad to hear that you liked some of my random thoughts...
ಪ್ರಭು ಅವರೆ,
ಯಾವುದೇ ವಿಚಾರವಾಗಲಿ ಬಹಳ ಸ್ವಾರಸ್ಯಪೂರ್ಣವಾಗಿ ಬರೆಯುತ್ತೀರಿ. "ದುಡ್ಡು, ಒಂದು ತುಣುಕು ಹಾಳೆ, ಚೂರು ಲೋಹ, ನಾವೇ ಅದಕ್ಕೆ ಬೆಲೆ, ಮೌಲ್ಯ ಅಂತ ಕೊಟ್ಟಿದ್ದು" ವಾಹ್ ಮುತ್ತಿನಂತಹ ಮಾತು!!
ನಿಮ್ಮ ಲೇಖನ ಓದುತ್ತಾ ಶ್ರೀ ಭಾವಿಸಮೀರ ವಾದಿರಾಜ ತೀರ್ಥರ ಈ ಹರಿದಾಸಪದ ನೆನಪಾಯ್ತು....
ಹಣವೇ ನಿನ್ನಯ ಗುಣ ಎಷ್ಟು ಬಣ್ಣಿಸಲಿ, ಎಷ್ಟು
ಬಣ್ಣಿಸಲಿ, ಇನ್ನೆಷ್ಟು ಮೋಹಿಸಲಿ
ಬೆಲೆಯಾಗದಾನೆಲ್ಲ ಬೆಲೆಯ ಮಾಡಿಸುವಿ
ಎಲ್ಲಾ ವಸ್ತುಗಳ ಇದ್ದಲ್ಲಿಗೆ ತರಿಸುವಿ
ಕುಲಗೆಟ್ಟವನ ಸತ್ಕುಲಕೆ ಚರಿಸುವಿ
ಹೊಲೆಯನಾದರು ತಂದು ಒಳಗೆ ಸೇರಿಸುವಿ
ಅಂಗನೆಯರ ಸಂಗವನು ಮಾಡಿಸುವಿ
ಶೃಂಗಾರಭರಣಂಗಳ ನೀ ಕೊಡಿಸುವಿ
ಮಂಗನ್ನಾದರು ಅನಂಗನೆಂದೆನಿಸುವಿ
ಕಂಗಳಿಲ್ಲದವನ್ಗೆ ಮಗಳ ಕೊಡಿಸುವಿ
ಹರಣಕ್ಕೆ ಬಂದಂತ ದುರಿತವ ಹಿಡಿಸುವಿ
ಸರ್ವರೊಳಗೆ ಶ್ರೇಷ್ಟ ನರನೆಂದೆನಿಸುವಿ
ಅರಿಯದ ಶುಂಠನ ಅರಿತವನೆನಿಸುವಿ
ಸಿರಿ ಹಯವದನನ ಸ್ಮರಣೆ ಮರೆಯುಸುವಿ
ರೂpaश्री ಅವರಿಗೆ
ಎನೋ ಒಂದು ವಿಷಯ, ಹಾಗೆ ಅದರ ಬಗ್ಗೆ ನನ್ನ ನನ್ನಾk ಮಾತುಕತೆ ಇದ್ದೇ ಇರುತ್ತದೆ. ನಿಮಗಿಷ್ಟವಾದರೆ ನನಗೂ ಖುಷಿ.
ಹರಿದಾಸಪದ ಬಹಳ ಚೆನ್ನಾಗಿದೆ. ದುಡ್ಡಿನ ಮಹಿಮೆ ಸಾರಿಹೇಳುತ್ತಿದೆ.
Post a Comment