"ರೀ ರೀ.. ಎದ್ದೇಳ್ರೀ ಬೇಗ ಎದ್ದೇಳ್ರೀ..." ಅಂತ ತದಕುತ್ತಲೇ ಎದ್ದೇಳಿಸಿದಳು, "ನಾನೇನು ಸೂರ್ಯನಾ ನಾನು ಎದ್ದರೇ ಬೆಳಕು ಆಗೋಕೆ, ಬಿಡೇ ಸುಮ್ನೇ ಇನ್ನೂ ಸ್ವಲ್ಪ ಮಲಗೋಕೆ" ಅಂತ ಮತ್ತೆ ಮುಸುಕೆಳೆದರೆ, ಹೊದಿಕೆಯೇ ಕಿತ್ತೊಗೆದು ಗಾಬರಿಯಲ್ಲಿ ನೋಡುತ್ತಿದ್ದಳು, ಎಂದೂ ಹೀಗೆ ಅವಳಂತೂ ಎಬ್ಬಿಸಿಲ್ಲ, ಇಂದು ಯಾಕೆ ಹೀಗೆ ಅಂತ ಕಣ್ಣು ತೀಡುತ್ತ ಎದ್ದು "ಏನು ಆಕಾಶಾನೇ ಕಡಿದುಕೊಂಡು ಬೀಳುತ್ತೇನೊ ಅನ್ನೋ ಹಾಗೆ ಅವಸರ ಮಾಡ್ತಾ ಇದೀಯ" ಅಂತ ಮೊದಲೇ ಛಳಿಗಾಲ, ಛಳಿಗೆ ತಡೆಯಲಾಗದೇ, ಹೊದಿಕೆ ಕಸಿದುಕೊಂಡು ಅಲ್ಲೇ ಹೊದ್ದುಕೊಂಡು ಕೂತೆ, "ಮತ್ತಿನ್ನೇನು ಆಕಾಶಾನೂ ಕಡಿದುಕೊಂಡು ಬೀಳುತ್ತೆ, ಪಕ್ಕದಮನೆ ಪದ್ದು ಈಗಲೇ ಹೇಳ್ತಾ ಇದ್ಲು" ಅಂದ್ಲು, ಮತ್ತೆ ಮಲಗಿದರಾಯ್ತು ಇವಳನ್ನು ಹೇಗಾದರೂ ಇಲ್ಲಿಂದ ಸಾಗಹಾಕೋಣ ಅಂತ "ಹೌದಾ, ಹೋಗು ಬಾಗಿಲು ತೆಗೆದು ನೋಡಿ ಬಾ, ಮನೆ ಹೊರಗೆ ಬೀಳ್ತಿದೆಯೋ ಎನ್ ಕಥೆ" ಅಂದೆ ಎದ್ದು ಹೊರಟೇ ಬಿಟ್ಟವಳು, ನನ್ನ ತರಲೆಯಾಟ ಅಂತ ಗೊತ್ತಾಗಿ, "ತರಲೇ ಮಾಡ್ತೀರಾ" ಅಂತ, ತನ್ನ ತಂಪು ತಂಪು ತಣ್ಣ ಕೈಗಳಲ್ಲಿ ನನ್ನ ಕೆನ್ನೆ ಗಟ್ಟಿಯಾಗಿ ಹಿಡಿದು ಬಿಟ್ಟಳು, "ಲೇ ಲೇ ಛಳಿ ಚಳಿ ಬಿಡೇ" ಅಂತ ಕೊಸರಿಕೊಂಡೆ, ಮತ್ತೆ ಹಿಡಿಯದಂತೆ ದೂರ ಸರಿದು ಕೂತು, "ಬೆಳಗ್ಗೆ ಬೆಳಗ್ಗೇ ಏನೇ ಆಕಾಶಾ ಬೀಳತ್ತೆ ಅಂತ ಎಬ್ಬಿಸ್ತಾ ಇದೀಯಾ, ಬೆಚ್ಚಗೆ ನನ್ನ ಬಳಿ ಹೊದಿಕೆಯಂತೆ ನನ್ನೇ ಸುತ್ತುವರಿದು ಮಲಗಿರೋದು ಬಿಟ್ಟು" ಅಂದೆ, "ಆಸೆ ನೋಡು" ಅಂತ ಪಕ್ಕದಲ್ಲಿ ಬಿದ್ದಿದ್ದ ತಲೆದಿಂಬು ನನ್ನೆಡೆಗೆ ಎಸೆದು, ಹೊರಟವಳು ಹೊರಳಿ ನಿಂತು "ಪ್ರಳಯ ಆಗುತ್ತಂತೆ ನಿಜಾನಾ?" ಅಂದ್ಲು.
ಪ್ರಳಯ ಅಂತ ಇತ್ತೀಚೆಗೆ ಎಲ್ಲ ಕಡೆ ಕೇಳಿದ್ದೆ, ಆದರೆ ಇವಳಿಗೂ ಅದು ಗೊತ್ತಾಗಿದ್ದು ಇಂದೇ ಅಂತ ಕಾಣುತ್ತದೆ. ಅದಕ್ಕೇ ಪ್ರಳಯ ಆಗುತ್ತಾ ಅಂತ ಕೇಳ್ತಿದಾಳೆ ಅಂತಂದುಕೊಂಡು, "ಪ್ರಣಯ ಆಗುತ್ತಂತೆ ನಿಜಾನಾ ಅಂತ ಕೇಳಿದರೆ ಹೇಳಬಲ್ಲೆ, ಆದರೆ ಪ್ರಳಯ..." ಅಂತ ರಾಗ ಎಳೆದೆ. "ಪ್ರಣಯ ಆಗಿ ಮನೇಲಿ ಗೊತ್ತಾದಾಗ ಅಲ್ಲೂ ಪ್ರಳಯವೇ ಆಗುತ್ತದೆ ಬಿಡಿ, ಪದ್ದು ಹೇಳ್ತಾ ಇದ್ಲು ಪ್ರಳಯ ಆಗುತ್ತೆ ಅಂತ, ಅದೇ ಕೇಳಿದೆ" ಅಂದ್ಲು. "ಒಹ್ ಪದ್ದುನ ಮಗನ ಪ್ರೋಗ್ರೆಸ್ ಕಾರ್ಡ ಬರುವುದಿರಬೇಕು, ಗುಂಡು ಗುಂಡು ಭೂಮಿಯಂತೆ ಸೊನ್ನೆ ಮಾರ್ಕ್ಸಗಳನ್ನ ನೋಡಿ ಅವರಪ್ಪ ಸಿಟ್ಟಿಗೆದ್ದು ಹೊಡೆದರೆ ಪ್ರಳಯವೇ ಆಗುತ್ತದೆ ಬಿಡು" ಅಂತಂದೆ. "ಅದಲ್ಲಾರೀ, ನಿಜವಾಗ್ಲೂ ಪ್ರಳಯ ಆಗುತ್ತದಂತೆ" ಅಂದ್ಲು. "ಅಯ್ಯೋ ಎರಡುಸಾವಿರ ಇಸ್ವಿ ಆರಂಭದಲ್ಲೂ ಹೀಗೇ ಹೇಳಿದರು ಆಗಂತೂ ಏನೂ ಆಗಲಿಲ್ಲ ಈಗಲೂ ಅಗುತ್ತೋ ಇಲ್ವೋ ಯಾರಿಗೆ ಗೊತ್ತು" ಅಂದೆ. "ಇಲ್ಲ, ಈ ಸಾರಿ ಆಗುತ್ತದಂತೆ ೨೧೧೨ಕ್ಕೆ" ಅಂತ ಪದ್ದು ಹೇಳಿದ್ದೇ ನಿಜವೇನೊ ಅನ್ನುವಂತೆ ಹೇಳಿದಳು, "ನಿನ್ನ ಹತ್ರ ಇರೋ ಚಿನ್ನದ ಒಡವೆ ಎಲ್ಲ ಮಾರಿದರೆ ಎಷ್ಟು ದುಡ್ಡು ಆಗುತ್ತೆ" ಅಂತ ಕೇಳಿದೆ, "ಯಾಕೆ ನಮ್ಮನೇಲಿ ಪ್ರಳಯ ಆಗಬೇಕಿದೆಯ" ಅಂತ ದುರುಗುಟ್ಟಿ ನೋಡಿದಳು. "ಮತ್ತೆ ಪ್ರಳಯ ಆಗೋದೇ ನಿಜ ಅನ್ನೊದಾದ್ರೆ, ಒಡವೆ ಎಲ್ಲ ಯಾಕೆ ಬೇಕು, ಎಲ್ಲ ಮಾರಿ ಊರೂರು ಸುತ್ತಾಡಿ ಎಂಜಾಯ ಮಾಡಿಬಿಡೋಣ" ಅಂತಂದೆ. "ಹ್ಮ್ ಮೊದಲು ನಿಮ್ಮ ಬ್ಯಾಂಕ ಬ್ಯಾಲನ್ಸ ಎಷ್ಟಿದೆ ಹೇಳಿ ಹಾಗಾದ್ರೆ" ಅಂತ ತಿರುಮಂತ್ರ ಹಾಕಿದಳು, ದಾಳಿ ನಮ್ಮೆಡೆಗೆ ಬಂತು ಅಂತ "ಬೇಡ ಬಿಡು ನಿನ್ನ ಒಡವೆ ನಿನ್ನ ಹತ್ರಾನೇ ಇರಲಿ" ಅಂತ ರಾಜಿಯಾದೆ.
ಈ ಪ್ರಳಯದ ವಿಷಯ ಮುಗಿಯುವ ಪ್ರಮೇಯವೇ ಇರಲಿಲ್ಲ, "ಈ ಪ್ರಳಯ ಹೇಗೆ ಆಗುತ್ತೆ" ಅಂತ ಕೇಳಿದಳು, ಅಲ್ಲ ನನಗೇನು ನಾಲ್ಕಾರು ಪ್ರಳಯಗಳನ್ನು ಕಣ್ಣಾರೆ ನೋಡಿದ ಅನುಭವ ಇದೆಯೇನೊ ಅನ್ನೊವಂತೆ. "ನನಗೂ ಗೊತ್ತಿಲ್ಲ ಕಣೆ, ಈ ಪ್ರೊಜೆಕ್ಟ ಡೆಡಲೈನಿಗೆ ಮುಗಿಯಲಿಲ್ಲ ಅಂದ್ರೆ ಏನೊ ದೊಡ್ಡ ಪ್ರಳಯವಾದಂತೆ ಹಾರಾಡುವ ಕ್ಲೈಂಟಗಳನ್ನು(ಗಿರಾಕಿ) ನೋಡಿದ್ದೇನೇ ಹೊರತು, ನಿಜ ಪ್ರಳಯ ಅನುಭವ ಇಲ್ಲ" ಅಂದೆ, "ಹೂಂ ಪ್ರಕೃತಿಯೂ ಮನುಜನಿಗೆ ಒಂಥರಾ ಡೆಡಲೈನ್ ಕೊಟ್ಟಿದೆ ಆಮೇಲೆ ಪ್ರಳಯವೇ ಆಗಿ ಮನುಜ ಡೆಡ್ ಅಷ್ಟೇ" ಅಂತಂದಳು. "ಹ್ಮ್ ಮಾಡಿದ್ದುಣ್ಣೊ ಮಾರಾಯಾ, ಅಂತಾರಲ್ಲ ಹಾಗೆ, ನಾವೇ ಮಾಡಿದ್ದು ಈಗ ಅನುಭವಿಸಬೇಕು ಅಷ್ಟೇ" ಅಂತ ವೇದಾಂತ ನುಡಿದರೆ, "ನಾವೇನು ಮಾಡೀದೀವಿ, ಅಂಥದ್ದು" ಅಂತ ಕೇಳಿದಳು. "ನಾವಲ್ಲದೇ ಇನ್ಯಾರು ಮಾಡಿದ್ದು, ಈ ಪರಿಸರ ಮಾಲಿನ್ಯ ಮಾಡಿ ಅಸಮತೋಲನ ಸೃಷ್ಟಿ ಮಾಡಿದ್ದು ನಾವೇ ಅಲ್ಲವೇ, ಈಗ ಪ್ರಕೃತಿ ಅದನ್ನು ಸರಿ ಮಾಡಲು ಪ್ರಯತ್ನ ಮಾಡುತ್ತಿದೆ ಅಷ್ಟೇ." ಅಂದರೆ ಹೆದರಿಕೊಂಡು, "ಈಗ ಪ್ರಳಯ ಆಗುತ್ತೆ ಅಂತೀರಾ, ಹಾಗಾದ್ರೆ" ನಾನು ಆಗಬೇಡ ಅಂದ್ರೆ ಬಿಡುತ್ತೆ ಏನೊ ಅನ್ನುವಂತೆ, ನನ್ನಡೆಗೆ ನೋಡಿದಳು. "ಪ್ರಳಯಾ.. ಪ್ಲೀಜ್ ನನ್ನಾಕೆ ಹೆದರಿದ್ದಾಳೆ ಅದಕ್ಕೇ ಈಗಲೇ ಬೇಡ ಆಮೇಲೆ ಆಗು ಓಕೇನಾ..." ಅಂತ ಆಕಾಶದೆಡೆಗೆ ನೋಡುತ್ತ ಕೇಳಿಕೊಂಡೆ. ಸಿಟ್ಟಿನಲ್ಲೇ ನನ್ನ ನೋಡುತ್ತ ಎದ್ದು ಹೋದಳು.
ಅವಳು ಎದ್ದು ಹೋದಳೆಂದು ಮತ್ತೆ ಹೊದ್ದು ಮಲಗಿದರೂ ನಿದ್ರೆ ಮಾತ್ರ ಹತ್ತಿರ ಸುಳಿಯಲಿಲ್ಲ, ತಂಪು ಕೈಗಳಲ್ಲಿ ಕೆನ್ನೆ ಸವರಿದ್ದಳಲ್ಲ ಇನ್ನೆಲ್ಲಿ ನಿದ್ರೆ ಬಂದೀತು. ಹಾಗೂ ಹೀಗೂ ಎದ್ದು, ಹಲ್ಲುಜ್ಜಿ ಬಂದು ಕುಳಿತರೆ ಮತ್ತೆ ಟೀ ಕಪ್ಪಿನೊಂದಿಗೆ ಹಾಜರಾದಳು ಹರಟೆ ಇನ್ನೂ ಜಾರಿಯಲ್ಲಿರುತ್ತದೆ ಅನ್ನುವ ಹಾಗೆ. ಟೀ ಕಪ್ಪು ಕೈಗಿತ್ತು, ಕೈತೋಳು ಹಿಡಿದುಕೊಂಡು ಭುಜಕ್ಕೆ ತಲೆಯಾನಿಸಿಕೊಂಡು ಕೂತಳು, ಪ್ರಳಯ ಆಗುತ್ತದೆ ಅಂತ ಪ್ರೀತಿ ಜಾಸ್ತಿಯಾಯ್ತೋ ಏನೊ, "ಪ್ರಳಯ ಆಗುತ್ತೆ ಅಂತ ಭಯಾನಾ" ಅಂತ ನಾನೇ ಮಾತಿಗೆಳೆದೆ, "ಮತ್ತಿನ್ನೇನು, ಎಷ್ಟೊ ವರ್ಷಕ್ಕೆ ಒಮ್ಮೇ ಆಗುತ್ತೇ ಅಂತ ಖುಷಿಯಿಂದ ನೋಡೋಕೆ ಅದೇನು ಸೂರ್ಯಗ್ರಹಣನಾ" ಅಂತ ಮುಖ ಸಿಂಡರಿಸಿದಳು, "ಯಾಕೆ ಭಯ" ಅಂತ ಕೇಳಿದೆ, "ಪ್ರಳಯ ಅಂದ್ರೆ ಸುಮ್ನೇನಾ, ಆಕಾಶದಿಂದ ಬೆಂಕಿ ಉಂಡೆಗಳು ಬೀಳುತ್ತವೆ ಅಂತೆ, ನೀರಿನ ದೊಡ್ಡ ದೊಡ್ಡ ಅಲೆಗಳು ಬಂದು ಕೊಚ್ಚಿಕೊಂಡು ಹೋಗುತ್ತವೆ ಅಂತೆ" ಅಂತ ತನ್ನ ಅಂತೆ ಕಂತೆಗಳ ಪುರಾಣ ತೆಗೆದಳು, "ಈ ಬೆಂಕಿ ಉಂಡೆಗಳು ಬಿದ್ದರೆ, ಈ ನೀರಿನ ಅಲೆಗಳಲ್ಲಿ ಅವು ನಂದಿ ಹೋಗೊದಿಲ್ವಾ" ಅಂತ ಅಸಂಭದ್ದ ಪ್ರಶ್ನೆ ತೂರಿಬಿಟ್ಟೆ. "ರೀ ಎಲ್ಲ ಒಮ್ಮೇಲೆ ಆಗಲ್ಲ, ಒಂದೊಂದಾಗಿ ಆಗತ್ತೆ" ಅಂತ ಸಮಜಾಯಿಸಿ ನೀಡಿದಳು, "ಬೆಂಕಿ ಉಂಡೆ ಬಿದ್ದರೇನೊ ಮನೇಲಿದ್ದು ತಪ್ಪಿಸಿಕೋಬಹುದು, ನೀರಿನ ಅಲೆ ಬಂದ್ರೆ ತೊಂದ್ರೆ, ನಿಂಗೆ ಈಜು ಬರುತ್ತಲ್ಲ, ಪ್ಲೀಜ್ ನನ್ನೂ ಎತ್ಕೊಂಡು ಹೋಗೆ ಹಾಗೇನಾದ್ರೂ ಆದ್ರೆ" ಅಂತ ಕೇಳಿಕೊಂಡೆ, "ಬೆಂಕಿ ಉಂಡೆ ಚಿಕ್ಕದಲ್ಲ, ಒಂದು ಬಿದ್ರೆ ಇಡೀ ಕಾಲೊನಿನೇ ಸುಟ್ಟು ಬೂದಿಯಾಗಬೇಕು ಅಷ್ಟು ದೊಡ್ಡದಿರುತ್ತೆ, ಇನ್ನ ನಿಮ್ಮನ್ನ ಎತ್ಕೊಂಡು ಹೋಗೊಕೆ ಆಗಲ್ಲರೀ, ಭಾರ ಜಾಸ್ತಿ" ಅಂದ್ಲು. ಪ್ರಳಯ ಅದ್ರೂ ಅಗಲಿ ಆದ್ರೆ ಈ ನೀರಿನ ಅಲೆಗಳ ಪ್ರಳಯ ಬೇಡ ಅಂತ ಮನಸಲ್ಲೇ ಬೇಡಿಕೊಂಡೆ. "ಮತ್ತೆ ಇನ್ನೂ ಏನೇನು ಆಗತ್ತಂತೆ" ಅಂತ ಅವಳನ್ನೇ ಕೇಳಿದೆ, "ಭೂಮಿ ಬಿರುಕು ಬಿಟ್ಟು, ಸೀಳಿಕೊಂಡು ಭಾಗ ಆಗುತ್ತಂತೆ, ಹಾಗೇನಾದ್ರೂ ಆಗಿ ನೀವೊಂದು ಕಡೆ ನಾನೊಂದು ಕಡೆ ಆದರೆ ಏನ್ ಗತಿ" ಅಂದ್ಲು. "ಏನಾದ್ರೂ ಆಗ್ಲಿ ನಾನು ಪದ್ದು ಮನೆ ಕಡೆ ಇರೋ ಹಾಗೆ ಮಾಡಪ್ಪ ದೇವ್ರೆ" ಅಂತ ಕಿಚಾಯಿಸಿದೆ. "ಪ್ರಳಯ ಅಂದ್ರೂ ಪದ್ದು ಬೇಕಾ ನಿಮ್ಗೆ, ದೇವ್ರೇ ಒಂದು ನಡುಗಡ್ಡೆ ಸೃಷ್ಟಿ ಮಾಡಿ, ನರಪ್ರಾಣಿ ಅಲ್ಲ ನಾಯಿನೂ ಇಲ್ಲದ ಹಾಗೆ ಒಬ್ಬಂಟಿಯಾಗಿ ಕೂರಿಸು ಇವರನ್ನ" ಅಂತ ತಾನೂ ಬೇಡಿಕೆ ಸಲ್ಲಿಸಿದಳು. "ಹಾಗೆಲ್ಲ ಬೇಡ ಕಣೆ, ನನ್ನ ಜತೆ ನೀನಿರ್ತೀಯಾ ತಾನೆ" ಅಂದೆ, "ನಾನು ನೀವು ಅಲ್ಲ, ಯಾರೂ ಇರಲ್ಲ ಪ್ರಳಯ ಆದ್ರೆ, ಪದ್ದು ಹೇಳ್ತಾ ಇದ್ಲು, ಅದ್ಯಾವುದೊ ಮಹಾಕಾಯ ಬಂದು ಭೂಮಿಗೆ ಅಪ್ಪಳಿಸುತ್ತೇ ಅಂತೆ" ಅಂತ ಮತ್ತೆ ಹೊಸ ವಿಷಯ ತೆಗೆದಳು, "ಹೌದೌದು ನಾನೂ ಕೇಳಿದೀನಿ, ಅದೇನಾದ್ರೂ ಭೂಮಿಗೆ ಅಪ್ಪಳಿಸಿದ್ರೆ, ಸಚಿನ್ ಸಿಕ್ಸರ ಹೊಡೆದ ಹಾಗೆ ಭೂಮಿ ಚೆಂಡಿನಂತೆ ಹಾರಿ ಹೋಗುತ್ತದಂತೆ" ಅಂದೆ, "ಸಚಿನ ಯಾಕೆ ಸೆಹವಾಗ್ ಹೊಡೆದ ಹಾಗೆ ಹೋಗಲ್ವಾ" ಅಂತ ತರಲೇ ಪ್ರಶ್ನೆ ಕೇಳಿದಳು. "ಯಾರೋ ಒಂದು, ಭೂಮಿ ತಾನೇ ಹಾರಿ ಬೀಳೊದು ಅದೇ ದೊಡ್ಡ ಪ್ರಾಬ್ಲಂ, ಇಲ್ಲಾಂದ್ರೆ ಒನ್ಸ ಮೋರ್ ಅಂತ ಇನ್ನೊಂದು ಶಾಟ್ ಕೇಳಬಹುದಿತ್ತು" ಅಂತ ತಿರುಗುಬಾಣ ಬಿಟ್ಟೆ ಸುಮ್ಮನಾದಳು.
ಈ ಪ್ರಳಯ ಆಗುತ್ತೆ ಅಂತ ಪತ್ರಿಕೆ, ಟೀವೀ ಎಲ್ಲ ಕಡೆ ಓದಿ ಕೇಳಿದ್ದೇವೆ, ಹಿಂದೇನೂ ಹೀಗೇ ಆಗುತ್ತೆ ಅಂತ ಕೋಲಾಹಲವೆದ್ದಿತ್ತು, ಪುಣ್ಯನೋ ಪಾಪಾನೋ ಯಾಕೋ ಆಗಲೇ ಇಲ್ಲ, ಪುಣ್ಯ ಯಾಕೆಂದ್ರೆ ನಾವೆಲ್ಲ ಬದುಕಿದಿವಿ, ಆದರೆ ಇನ್ನೇನು ಪ್ರಳಯ ಅಗುತ್ತೆ ಅಂತ ಪಾಪ ಕೆಲವ್ರು ಎಲ್ಲ ಆಸ್ತಿ ಮಾರಿ, ಸಾಲ ಮಾಡಿ ತಿಂದು ಕುಣಿದು ಕುಪ್ಪಳಿಸಿದ್ರು ಅವರಿಗೆಲ್ಲ ಸಾಲಕೊಟ್ಟವರು ಮನೆ ಬಾಗಿಲು ಬಾರಿಸಿದಾಗ ಪ್ರಳಯಾಂತಕಾರಿ ಅನುಭವವೇ ಆಗಿರಬೇಕು, ಇನ್ನು ಓದೊ ಹುಡುಗ್ರು ಪ್ರಳಯಾನೇ ಆಗತ್ತೆ ಅಂತೆ ಪರೀಕ್ಷೆ ಆಗೋದಿಲ್ಲ ಬಿಡು ಅಂತ ಓದೋದೇ ಬಿಟ್ಟಿದ್ದರು, ಪರೀಕ್ಷೆ ಬರೆಯಲು ಕೂತಾಗ ಕಾಲ ಕೆಳಗಿನ ಭೂಮಿಯೇ ಸರಿದಂತಾಗಿರಬೇಕು. ಅದಕ್ಕೇ ಈ ಸಾರಿ ಪ್ರಳಯ ಆಗತ್ತೆ ಅಂದ್ರೆ ಎಲ್ರೂ ನಿಜಾನಾ ಅಂತ ಕೇಳ್ತಿದಾರೆ. ಯಾರಿಗೆ ಗೊತ್ತು ಆಗುತ್ತೊ ಇಲ್ವೊ, ಅದರೂ ಪ್ರಕೃತಿಯನ್ನು ಬಲ್ಲವರಾರು, ಈಗಾಗಲೇ ಸುನಾಮಿ, ಚಂಡಮಾರುತ, ಭೂಕಂಪನ, ಉತ್ತರಕರ್ನಾಟಕದಲ್ಲಾದ ಅತೀವೃಷ್ಟಿಯಂತಹ ಘಟನೆಗಳು ಪ್ರಕೃತಿ ಕೊಡುತ್ತಿರುವ ಎಚ್ಚರಿಕೆಗಳೇ?. ಭೂಮಿ ತಾಪಮಾನದಲ್ಲಿನ ಏರುಪೇರು ಆಗಿ ಕರಗುತ್ತಿರುವ ಉತ್ತರ ಧೃವದ ಮಂಜುಗಡ್ಡೆಗಳು ಸಮುದ್ರ ತೀರದ ನಗರಗಳಿಗೆ ಅಪಾಯಕಾರಿಯೇ, ಮಹಾ ಆಕಾಶಕಾಯವೊಂದು ಭೂಮಿಯೆಡೆಗೆ ಬರುತ್ತಿರುವುದು, ಹೆಚ್.ಒನ್.ಎನ್.ಒನ್ ನಂತಹ ಹೊಸ ಹೊಸ ಮಾರಕ ರೋಗಗಳು ಹರಡುತ್ತಿರುವುದು, ಮನುಕುಲದ ಅಳಿವಿನ ಬಗ್ಗೆ ಪ್ರಶ್ನೆಯೊಡ್ಡಿದೆಯನ್ನುವುದಂತೂ ನಿಜ. ಪ್ರಳಯ ಆಗುತ್ತೆ ಅಂತ ಹೆದರಲೂ ಬೇಕಿಲ್ಲ, ಆಗಲಿಕ್ಕಿಲ್ಲ ಅಂತ ನಿರಾಳವಾಗಿರಲೂ ಆಗಲ್ಲ, ಆದರೂ ಇರುವಷ್ಟು ದಿನ ಸಾರ್ಥಕವಾಗಿ ಜೀವಿಸೋಣ ಅನ್ನಬಹುದು.
ಹೀಗೇ ಮಾತಾಡುತ್ತ ಕುಳಿತಿರಬೇಕಾದರೆ, ನಮ್ಮ ವಾಣಿ ಅದೇ ದೂರವಾಣಿ ರಿಂಗಣಿಸಿದಳು, ಆಕಡೆಯಿಂದ ಇನ್ಷೂರನ್ಸ ಏಜೆಂಟ್ ಮಾತಾಡಬೇಕೆ, "ಲೇ ಇನ್ಷೂರನ್ಸ ಮಾಡಿಸಬೇಕಾ" ಅಂತ ಇವಳನ್ನ ಕೇಳಿದೆ, "ಪ್ರಳಯ ಆಗತ್ತೆ ಅಂತೀದಾರೆ ಈಗಲೇ ಬೇಡ ಬಿಡಿ" ಅಂದ್ಲು. "ನೀನೇ ಮಾತಾಡು" ಅಂತ ಅವಳಿಗೆ ಕೊಟ್ಟೆ, ಈ ಏಜೆಂಟಗಳು ಏನು ಹೇಳಿದರೂ ಬಿಡೊದಿಲ್ಲ, ಅವಳೇ ಮಾತಾಡಲು ಸರಿ ಅಂತ, "ಹಲೋ, ಇನ್ಷೂರನ್ಸ ಯಾಕೆ ಮಾಡಿಸಬೇಕು?" ಅಂತ ಶುರುವಿಟ್ಟುಕೊಂಡಳು, "ಏನ್ ಮೇಡಮ್ ಹೀಗೆ ಕೇಳ್ತೀರಾ?, ಏನೋ ಅಚಾನಕ್ಕಾಗಿ ಅವಘಡ ಸಂಭವಿಸಿದ್ರೆ, ನಮ್ಮ ನಂಬಿ ಬದುಕಿರುವವರಿಗೆ ತೊಂದ್ರೆ ಆಗದಿರಲಿ ಅಂತ, ನಮ್ಮದು ಯೂಲಿಪ್ ಪ್ಲಾನ ಅಂತ ಮೇಡಂ, ಒಳ್ಳೆ ರಿಟರ್ನ್ ಇದೇ, ನಿಮ್ಮ ದುಡ್ಡು ಮೂರುವರ್ಷದಲ್ಲಿ ಡಬಲ್ ಗ್ಯಾರಂಟಿ" ಅಂತ ತೀರ ಸರಳವಾಗೇ ವಿವರಿಸಿದ, "ಹೌದಾ, ಮತ್ತೆ ಇನ್ನು ಮೂರು ವರ್ಷ ಅಂದ್ರೆ, ಎರಡು ಸಾವಿರದ ಹನ್ನೆರ್ಅಡನೇ ಇಸ್ವಿ, ಆವಾಗ ಪ್ರಳಯ ಆಗುತ್ತೆ ಅಂತ ನಿಜಾನಾ?" ಅಂತ ಅವನನ್ನೂ ಕೇಳಬೇಕೆ. "ಮತ್ತೆ ಪ್ರಳಯ ಆದ್ರೆ ಯಾರೂ ಬದುಕಿರಲ್ಲ ನೀವು ದುಡ್ಡು ಯಾರಿಗೆ ಕೊಡ್ತೀರಾ?, ಕೊಡೋಕೆ ನೀವಾದರೂ ಎಲ್ಲಿರ್ತೀರಾ?" ಅಂತ ಎಡವಟ್ಟು ಪ್ರಶ್ನೆ ಕೇಳಿದ್ದು ನೋಡಿ ಆಕಡೆಯಿಂದ ಅವನೇ ಲೈನ್ ಕಟ್ ಮಾಡಿದ, ನನ್ನಡೆಗೆ ನೋಡಿ ಹುಬ್ಬು ಹಾರಿಸುತ್ತ ನನ್ನಾಕೆ ನಸುನಕ್ಕಳು, ಪ್ರಳಯ ಅಗುತ್ತೊ ಇಲ್ವೊ, ನಮ್ಮಿಬ್ಬರ ಪ್ರಣಯ ಹೀಗೆ ಜಾಸ್ತಿ ಆಗುತ್ತಲೇ ಇರುತ್ತೆ, ಮತ್ತೆ ಸಿಕ್ತೀವಿ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/pralaya.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
18 comments:
ಪ್ರಭು,
ಪ್ರಳಯ ಆಗುತ್ತೊ ಇಲ್ವೊ ಪ್ರಣಯಕ್ಕೇನೂ ಕಡಿಮೆ ಇಲ್ಲ.....
ಒಳ್ಳೆ ವಿಷಯ ಅಯ್ಕೆ ಮಾಡಿ ಚರ್ಚೆ ಮಾಡಿದ್ದೀರ....
ಚೆನ್ನಾಗಿತ್ತು ಸಂಭಾಷಣೆ....
ಪ್ರಭು
ಪ್ರಳಯ ಆಗೋದಿಲ್ಲ ಆದರೆ ವೈಜ್ನಾನಿಕ ರೀತಿಯಲ್ಲಿ ನೋಡಿದಾಗಲೂ ಭೂ ಗ್ರಹದ ಕೆಲವು ಭಾಗಗಳು ನೈಸರ್ಗಿಕ ವಿಕೋಪಕ್ಕೆ ಸಿಕ್ಕಿ ನರಳುವುದಂತೂ ನಿಜ.
ಪ್ರಳಯದ ವಿಶ್ಲೇಷಣೆ ಚೆನ್ನಾಗಿತ್ತು
ಪ್ರಭುರಾಜ,
ಇಂತಹ ಪ್ರಣಯ-ಪ್ರಳಯ ಅನುಗಾಲವೂ ಆಗುತ್ತಿರಲಿ!
Namaste prabhu,
Ethichege yelara baiyallu edhe mathu Pralaya agutante nijana antha???
Nim Pralayada bagegina mathu thumbha chanagithu.....
ಪ್ರಭು,
ಪ್ರಳಯ ಈಗಲೇ ಕಾಣುತ್ತಿದೆಯಲ್ಲಾ? ಉತ್ತರ ಕರ್ನಾಟಕದಲ್ಲಿ ಆದ ಪ್ರವಾಹ, ಪ್ರಳಯದಂತೆಯೇ ಅಲ್ಲವೇ? ಇಂತ ಪ್ರವಾಹಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಾವು ಪ್ರಕೃತಿಗೆ ಕೊಟ್ಟಿದ್ದನ್ನು ನಮಗೆ ಅದು ಹಿಂತಿರುಗಿಸುತ್ತಿದೆ. ಅಷ್ಟೆ.
ಚಳಿಗಾಲ ಪ್ರಾರಂಭವಾಯಿತು. ನಿಮ್ಮ ಪ್ರಣಯವೂ ಹೆಚ್ಚಾಗಲೇ ಬೇಕಲ್ಲವೇ? ;-)
ತುಂಬಾ ಚೆನ್ನಾಗಿದೆ. ಹೀಗೇ ನಿಮ್ಮಾಕೆಯ ಪ್ರೀತಿ ಯಾವುದಾದರೂ ನೆಪದಲ್ಲಿ ಹೆಚ್ಚುತ್ತಲೇ ಇರಲಿ ನಿಮ್ಮ ಮೇಲೆ.....
ಸವಿಗನಸು ಅವರಿಗೆ
ಧನ್ಯವಾದ ಸರ್, ಪ್ರಣಯ ಕಡಿಮೆಯಾಗುವ ಪ್ರಶ್ನೆಯೇ ಇಲ್ಲ,
ಅಂಥ ಪ್ರಮೇಯವೇ ಬರದಿರಲಿ.
ರೂಪಾ ಅವರಿಗೆ
ಭೂಗ್ರಹದ ಕೆಲ ಭಾಗಗಳೇ ನಿಧಾನವಾಗಿ ಹೀಗೆ ವಿಕೋಪಕ್ಕೆ ಸಿಕ್ಕಿ ಕ್ಷಯಿಸುತ್ತ ಹೋಗಿ, ಕೊನೆಗೆ ಏನೂ ಇರಲಿಕ್ಕಿಲ್ಲ ನಿಜ.
ನನಗನಿಸಿದಂತೆ ಇಡೀ ಭೂಮಿಯೇ ಒಂದೇ ದಿನ ಇಲ್ಲದಂತೆ ಆಗುವಂತೆ ಪ್ರಳಯವಾಗಲಿಕ್ಕಿಲ್ಲ.
sunaath ಅವರಿಗೆ
ಆಯ್ತು ಹಾಗೆ ಮಾಡುತ್ತೇನೆ ಅಂತ ಪ್ರಮಾಣ ಮಾಡಿ ಹೇಳುತ್ತೇನೆ :)
Shwetha ಅವರಿಗೆ
ಹೌದು ಮತ್ತೆ, ಹಿಂದೆ ಒಮ್ಮೆ ಆಗುತ್ತೆ ಆಗುತ್ತೆ ಅಂತ ಆಗಲೇ ಇಲ್ಲ, ಅದಕ್ಕೆ ಈ ಸಾರಿ ಖಚಿತಪಡಿಸಿಕೊಳ್ಳಲು ಹಾಗೆ ಕೇಳುತ್ತಿದ್ದಾರೆ :)
ಹೀಗೇ ಪ್ರಳಯ... ಅಲ್ಲಲ್ಲ ಪ್ರಣಯ ಪ್ರಸಂಗಗಳು ಇಲ್ಲಿ ಆಗುತ್ತಲೇ ಇರುತ್ತವೆ ಓದುತ್ತಿರಿ.
ರಾಜೀವ ಅವರಿಗೆ
ಪ್ರವಾಹವೂ ಪ್ರಳಯದ ಒಂದು ಮುನ್ಸೂಚನೆಯೇ, ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.
ಪ್ರಣಯಕ್ಕೆ ಯಾವ ಕಾಲವಾದರೇನು ಹೇಳಿ, ಚಳಿಗೆ ಚೇಷ್ಟೆಯಂತೂ ಜಾಸ್ತಿಯಾಗುತ್ತದೆ... :)
Jyoti Sheegepal
ಕಾರಣವಿಲ್ಲದೇ ಕೂಡ ಕೀಟಲೆ ಮಾಡುವ ನನ್ನಾkಗೆ, ಪ್ರೀತಿಗೆ ಯಾವ ನೆಪವಾದರೇನು... ಪ್ರತೀ ಮಾತಿನಲ್ಲೂ ಪ್ರೀತಿಯಿದ್ದೇ ಇರುತ್ತದೆ.
ಪ್ರಭು ಸರ್ ,
ತುಂಬಾ ಚೆನ್ನಾಗಿದೆ ನೋಡಿ ನಿಮ್ಮ ಪ್ರಳ(ಣ)ಯದ ಕತೆ .. ಇನ್ನು 2 ವರ್ಷಕ್ಕೆ ಆಗೋದು ಪ್ರಳಯ..ಆ 2 ವರ್ಷದೊಳಗೆ ಆಗೋದು ಪ್ರಣಯ ಅಂತ ನಿಮ್ಮಾಕೆಗೆ ಚೆನ್ನಾಗೆ ತಿಳಿಸಿ ಹೇಳಿದ್ದಿರಿ ಬಿಡಿ :)
ಪ್ರಳಯ ಆಗುತ್ತೋ ಇಲ್ವೋ ಅದು ಬೇರೆ ಮಾತು. ಆದರೆ ಪ್ರಳಯದ ನೆಪದಲ್ಲಿ ನಿಮಗಂತೂ ಲಾಭ ಆಗಿದ್ದು ನಿಜ:)
ಪ್ರಭು ಸರ್,
ಪ್ರಳಯದ ನೆಪ ಅಷ್ಟೇ , ನಿಮ್ಮ ಪ್ರಣಯ ಜಾಸ್ತಿಯಾಗಿದೆ..... ನಿಮ್ಮ ಪ್ರಣಯ , ಪ್ರಳಯ ಬಂದರೂ, ಬಂದು ಮುಗಿದರೂ ಹೀಗೆ ಮುಂದುವರಿಯಲಿ......
ಪ್ರಳಯ ಹಹಹ ಅದೇ ನ್ಯೂಸ್ ಪೇಪರ್ನವರಿಗೆ ನ್ಯೂಸ್ ಬೇಕಾದಾವಗಲೆಲ್ಲ ಪ್ರಳಯ ಹಾಟ್ ಟಾಪಿಕ್... ೨೦೦೦, ೨೦೦೪,೨೦೦೮,೨೦೧೨ ಎಲ್ಲ ವರ್ಲ್ಡ್ ಕಪ್ ಕ್ರಿಕೆಟ್ ಮ್ಯಾಚ್ ತರ... ಆಗಾಗ ಬರಲೇ ಬೇಕು... ಅದೇ ನೋಡಿ ಇನ್ನೊದು ರೀತಿ ಹೇಳೋದಾದರೆ, ೨೦೧೨ ಎನ್ನುವ ಇಂಗ್ಲಿಷ್ ಮೂವಿ ಬಂದಿದೆ, ನಾವ್ ಸಾಯೋದನ್ನು ಮೂವಿ ಮಾಡಿ ದುಡ್ಡು ಮಾಡ್ತಾರೆ.. ಹಹಹ...
ಪ್ರಳಯದ ಜೊತೆ ಪ್ರಣಯದ ಪಯಣ ಚೆನ್ನಾಗಿದೆ..
ಇನ್ನೊದು ಜೋಕ್ ಏನ್ ಗೊತ್ತಾ, ನನ್ನ ಸ್ನೇಹಿತರೆಲ್ಲ ಹೇಳ್ತಾ ೨೦೧೨ರ ಒಳಗೆ ಮದುವೆ ಆಗಬೇಕು ಅಂತ ಪ್ಲಾನ್ ಮಾಡ್ಕೊಂಡಿದ್ದಾರೆ... ಹ್ಹ ಹ್ಹ ಹ್ಹ .... :)
ನಿಮ್ಮವ,
ರಾಘು.
Ranjita ಅವರಿಗೆ
ಎರಡು ವರ್ಷದಲ್ಲಿ ಪ್ರಳಯ ಆಗುತ್ತೊ ಇಲ್ವೊ ಯಾರಿಗೆ ಗೊತ್ತು,ಆಗುವುದೇ ಆದರೆ ಆಗಲಿ... ಅಷ್ಟರೊಳಗೆ ಪ್ರಣಯವಂತೂ ಆದೀತು :)
ಗೌತಮ್ ಹೆಗಡೆ ಅವರಿಗೆ
ಪ್ರಳಯದ ನೆಪದಲ್ಲಿ ಏನು ಲಾಭ ಆಯ್ತು ಸರ್, ಏನೂ ಇಲ್ಲ.
ಸುಮ್ನೇ ಇದೆ ಪರಿಸ್ಥಿತಿಯ ಲಾಭ ತೆಗೆದುಕೊಳ್ಳೊಣ ಅಂತ ನನ್ನಾkಗೆ "ಪದ್ದು ಹತ್ರ ಹೋಗಿ ಪ್ರಳಯದ ಬಗ್ಗೆ ಜಾಸ್ತಿ ತಿಳಿದುಕೊಂಡು ಬರ್ತೀನಿ" ಅಂದೆ, ನಮ್ಮನೇಲೇ ಪ್ರಳಯದ ಪ್ರಾತ್ಯಕ್ಷಿಕೆಯಾಯಿತು.
ದಿನಕರ ಮೊಗೇರ.. ಅವರಿಗೆ
ಪ್ರಳಯ ಬರುತ್ತೇ ಅನ್ನೊದಾದರೆ,ಇರೋ ಎರಡೇ ವರ್ಷದಲ್ಲಿ ಇಪ್ಪತ್ತು ವರ್ಷದ ಪ್ರಣಯ ಮುಗಿಸಿಬಿಡೊಣ ಅಂತ ಯೋಚನೆಯಿದೆ :)
Raghu ಅವರಿಗೆ
ಕರೆಕ್ಟಾಗಿ ಹೇಳಿದ್ರಿ, ಒಳ್ಳೆ ನ್ಯೂಸ ಆಯ್ತು ಅದು, ಈಗ ಇಲ್ಲೇ ನೋಡಿ ನನ್ನ ಲೇಖನಕ್ಕೆ ಒಂದು ವಿಷಯ ಕೂಡ ಆಗಿದೆ ;)
ಸಾಯೋದನ್ನೇನೊ ಯಾವುದನ್ನು ಬೇಕಾದರೂ ಬುಸಿನೆಸ್ಸ ಆಗಿ ನೋಡೋದು ಈಗ ಸಾಮಾನ್ಯ ಆಗಿದೆ.
ಹೌದೌದು, ನಾನೂ ನಿಮ್ಮ ಗೆಳೆಯರಂತೆ ೨೦೧೨ರ ಒಳಗೆ ಮದುವೆ ಆಗಬೇಕು ಅಂತ ಪ್ಲಾನ್ ಮಾಡ್ತಿದಿನೀ, ಪ್ರಳಯ ಆಗತ್ತೆ ಅಂತೇನಲ್ಲ, ಆಮೇಲೆ ಲೇಟಾಗಿ ಮದುವೆ ಆದರೆ ಎನೂ ಉಪಯೋಗ ಇಲ್ಲ ಅಂತ... :)
namaskara prabhu,
barahavannu astondu chennagi, kaNNige kaTTuvante barediddeeri..
praLaya praNayagaLa combination antu sakattagittu...
nimma srujanatege nanna abhindanegaLu...
ello ondu kaDe gumaniyu barutte...
nijavaglu idu kalpanikateya..?! kaalpanika anno shabdakke ennenadru artha ideya anta...!!
heegondu uttama prayogadinda odugara mana taNisuvudakkagi dhanyavadagaLu...
preetiyinga
-giri
November
ತುಂಬಾ ಚೆನ್ನಾಗಿದೆ ಪ್ರಭು, ಪ್ರಳಯವಾಗದಿದ್ದರೆ ಸಾಕು ನಿಮ್ಮ ಪ್ರಣಯದಲ್ಲಿ....
ಚೆನ್ನಾಗಿದೆ :-)
ಸದ್ಯಕ್ಕೆ ಬಿಸಿ ಬಿಸಿಯಾಗಿ ಚರ್ಚಿಸಲ್ಪಡುತ್ತಿರೋ ವಿಚಾರವನ್ನು ಚೆನ್ನಾಗಿ ಬರೆದಿದ್ದೀರ.
ನವೀನ್ ಕೆ.ಎಸ್.
ಪ್ರಭು
ಯಾಕೋ ಪ್ರಣಯ ಮತ್ತು ಪ್ರಳಯ ಎರಡೂ ನಮ್ಮನ್ನು ವಿರುದ್ಧ ದಿಕ್ಕುಗಳತ್ತ ಎಳೆದಿವೆ ಅನ್ಸುತ್ತೆ...ಪ್ರಳಯದ ಭಯ ಬೇಡ ಅಂತ ನೀವು ಇನ್-ಡೈರೆಕ್ಟಾಗಿ ಪ್ರಣಯಕ್ಕೆ ಪ್ರೋತ್ಸಾಹ ನೀಡ್ತಿರೋದು ನೋಡಿದ್ರೆ...ಎಲ್ಲಾದರೂ ಇರು ನೀನು ಎಂತಾದರೂ ಇರು..ಪ್ರಣಯವನ್ನು ಮಾತ್ರ ಮರೆಯದಂತಿರು ಎನ್ನುವಹಾಗಿದೆ.....ಒಳ್ಲೆಯ ಪ್ರಯತ್ನ...attention Divert ಮಾಡೋಕೆ...
ಗಿರಿ ಅವರಿಗೆ
ನಿಮ್ಮ ಅಭಿನಂದನೆಗೆ ತುಂಬಾ ಧನ್ಯವಾದಗಳು, ಏನೊ ಎಲ್ರೂ ಪ್ರಳಯದ ಬಗ್ಗೆ ಮಾತಾಡ್ತಾ ಇದ್ರಲ್ಲ ಅಂತ ನಾನು ನನ್ನಾಕೆ ಅದೇ ಮಾತಿಗೆ ಕುಳಿತೆವು.
ನಿಜವಾಗ್ಲೂ ಕಲ್ಪನೆ ಸರ್, ನಾನು ಹೆಣೆದ ಕಟ್ಟು ಕಥೆಗಳು ಇವು :)
ವಾಸ್ತವಿಕ ವಿಷಯವೊಂದನ್ನು ಆರಿಸಿ, ನನ್ನಾಕೆಯಿದ್ದರೆ ಹೇಗೆ ಹರಟುತ್ತಿದ್ದೆವು ಅಂತ ಮಾಡಿದ ಕಲ್ಪನೆ.
ಮನಸು ಅವರಿಗೆ
ಪ್ರಣಯದಲ್ಲಿ ಪ್ರಳಯ... ಛೇ ಛೇ.. ಹಾಗೆಲ್ಲ ಏನೂ ಆಗಲ್ಲ ಬಿಡಿ... ಇದೇ ನೆಪದಲ್ಲಿ ಪ್ರಚಾರ ಮಾತ್ರ ಜಾಸ್ತಿಯಾಗುತ್ತಿದೆ :)
Annapoorna Daithota ಅವರಿಗೆ
ಧನ್ಯವಾದಗಳು.
ನವೀನ್ ಅವರಿಗೆ
ಬಿಸಿ ಬಿಸಿ ವಿಷಯಗಳನ್ನು ಕೂಲಾಗಿ ಕಲ್ಪನೆಗಳಲ್ಲಿ ಇಳಿಸಿಬಿಡುವುದು ನಮ್ಮ ಕೆಲಸ.
ಜಲನಯನ ಅವರಿಗೆ
ಪ್ರಣಯವಾದರೆ ಕೆಲವೊಮ್ಮೆ ಮನೆಯಲ್ಲಿ ಗೊತ್ತಾಗಿ ಪ್ರಳಯವೇ ಆಗೊಲ್ಲವೇ, ಹಾಗೇ ಪ್ರಳಯ ಆಗುತ್ತೇ ಅಂತ ಪ್ರಣಯ ಪ್ರೀತಿ ಜಾಸ್ತಿ ಕೂಡ ಆಗಬಹುದು :)
ನಿಮ್ಮ ಮೆಚ್ಹುಗೆಗೆ ಧನ್ಯವಾದಗಳು.
Post a Comment