Sunday, December 27, 2009

ನಿರುದ್ಯೋಗಿ ನೀ ಇರು ಉದ್ಯೋಗಿ...

ಅಂದು ಬೇಗ ಎದ್ದು, ಸ್ವಲ್ಪ ಫ್ರೆಷ್ ಆಗಿ ಒಂದು ದೊಡ್ಡ ಮಗ್ ತುಂಬಾ ಟೀ ಮಾಡಿಕೊಂಡು ಬಂದು, ಸ್ವಲ್ಪ ಚಳಿ ಇದೆ ಅಂತ ಹಾಗೆ ಸ್ವಲ್ಪ ಹೊದಿಕೆ ಹೊದ್ದು ಪೇಪರು ಹಿಡಿದುಕೊಂಡು ಕೂತು ಟೀ ಹೀರುತ್ತಿದ್ದೆ, ಇವಳು ಪಕ್ಕದಲ್ಲೇ ಮಲಗಿದ್ದಳು. ಮುಂಗುರುಳು ಮುಂಜಾರಿ ಮುಖದ ಮೇಲೆ ಬಿದ್ದು ಕಚಗುಳಿಯಿಡುತ್ತಿರುವುದೂ ಕೂಡ ಪರಿವೆಯಿಲ್ಲದೇ ಪವಡಿಸುತ್ತಿರುವವಳು ಏಳಲು ಇನ್ನೂ ಸಮಯವಿತ್ತು, ಯಾಕೆ ತೊಂದ್ರೆ ಮಾಡೋದು ಅಂತ ನನ್ನ ಪಾಡಿಗೆ ನಾ ಓದುತ್ತಿದ್ದೆ, ಪೇಪರಿನ ಚರ್ ಪರ್ ಸದ್ದಿಗೆ ಎಚ್ಚರಾಯಿತು ಅಂತ ಕಾಣುತ್ತದೆ, "ಏನು ಸಾಹೇಬ್ರು ಬೇಗ ಎದ್ದು, ಆಗಲೇ ಟೀ ಮಗ್ ಹಿಡಿದು ಕೂತಿದೀರಾ" ಅಂತ ಕಣ್ಣು ತೀಡುತ್ತ ಕೇಳಿದಳು, "ಹಾಗೇ ಸುಮ್ನೇ ಬಾಸ್" ಅಂದೆ. ಏನು ನನಗೇ ಬಾಸ್ ಅಂತೀದಾರಲ್ಲ, ಅಶ್ಚರ್ಯದಿಂದ ಕಣ್ಣರಳಿಸಿ, "ನನಗೇ ಬಾಸ್ ಅಂತ ಹೇಳ್ತಾ ಕೂತ್ರೆ ಅಷ್ಟೇ, ಏಳಿ ತಯ್ಯಾರಾಗಿ, ಇಲ್ಲಾಂದ್ರೆ ನಿಮ್ಮ ಬಾಸ್ ಫೋನ್ ಬರತ್ತೆ ನೋಡಿ" ಅಂತಂದಳು, ಸುಮ್ನೇ ಒಂದು ಮುಗುಳ್ನಗು ಕೊಟ್ಟೆ. "ಎದ್ದೇಳ್ರೀ... ಆಫೀಸಿಗೇನು ನಿಮ್ಮ ತಾತ ಹೋಗ್ತಾನಾ" ಅಂತ ಸ್ವಲ್ಪ ಜೋರಾದಳು. "ನಮ್ಮ ತಾತ ಅಂತೂ ಇಲ್ಲ ನಿಮ್ಮ ತಾತನಿಗೇ ಹೋಗು ಅಂತ ಹೇಳು" ಅಂತ ನಾನಂದೆ. "ಇದೊಳ್ಳೆ ರಗಳೆ ಆಯ್ತಲ್ಲ ಕೆಲಸಕ್ಕೆ ಹೋಗಿ ಅಂತ ಏಳಿಸೋದೇ ಒಂದು ಕೆಲಸ ಆಗಿದೆ ನಂಗೆ, ಟೈಮ್ ಬೇರೆ ಎಷ್ಟಾಯಿತೊ" ಅಂತ ಎದ್ದೇಳಲು ನೋಡಿದ್ಲು, "ಇನ್ನೂ ಆರು ಘಂಟೆ ಕೂಡ ಆಗಿಲ್ಲ ನೋಡು" ಅಂತ ವಾಚ್ ತೋರಿಸಿದೆ, "ಅರೇ ಇದೇನಿದು ಹೊಸ ವಾಚ್" ಅಂತ ಆಶ್ಚರ್ಯಗೊಂಡಳು, ಇವತ್ತೇನು ಎಲ್ಲಾ ಹೊಸ ಹೊಸದಾಗಿದೆ, ಅಂತ ಅನಿಸಿರಬೇಕು "ಏನ್ರೀ ವಿಷಯ, ಹೇಳದೇ ಕೇಳದೇ ಹೊಸ ವಾಚ್ ತೆಗೆದುಕೊಂಡೀದೀರಾ" ಅಂತ ಕೇಳಿದಳು. "ಕೊಂಡ್ಕೊಂಡಿದ್ದು ಅಲ್ಲ, ಅದು ಗಿಫ್ಟ್ ಬಂದಿದ್ದು" ಅಂದೆ. "ನಿಮ್ಮ ಈ ಗಿಫ್ಟ ವಿಷಯ ಆಮೇಲೆ ಮಾತಾಡೋಣ ಅಂತೆ, ಆಫೀಸಿಗೆ ಲೇಟಾಗತ್ತೇ" ಅಂತಂದಳು, "ನಿನ್ನೇನೇ ಅಫೀಸಿಗೆ ಕೊನೇ ದಿನ, ಅದಕ್ಕೇ, ಜತೆ ಕೆಲಸ ಮಾಡೊರೆಲ್ಲ ಸೇರಿ ಕೊಟ್ಟ ಗಿಫ್ಟ ಅದು, ನಾನೀಗ ನಿರುದ್ಯೋಗಿ!" ಅಂದೆ...

ಕಣ್ಣ ಕಣ್ಣ ಬಿಟ್ಟು ನೋಡಿ, "ಅರೇ ಮತ್ತೆ ನಿನ್ನೆ ಹೇಳಲೇ ಇಲ್ಲ" ಅಂದ್ಲು. "ಹ್ಮ್, ಹೇಳಬೇಕು ಅಂತಿದ್ದೆ, ಆದ್ರೆ ಯಾಕೊ ಬಹಳ ಬೇಜಾರಾಗಿತ್ತು, ಸುಮ್ನೇ ಬಂದು ಮಲಗಿಬಿಟ್ಟೆ" ಅಂತ ಮುಖ ಕಿರಿದು ಮಾಡಿದೆ, "ಅನ್ಕೊಂಡೆ ನಿನ್ನೆ ಏನೊ ಆಗಿದೆ ಅಂತ, ನೀವೇ ಹೇಳ್ತೀರಾ ಅಂತ ಸುಮ್ಮನಾಗಿದ್ದೆ, ನೀವೆ ಕಂಪನಿ ಬಿಟ್ಟದ್ದು ಅಲ್ವಾ, ಮತ್ಯಾಕೆ ಬೇಜಾರು" ಅಂತ ಕೇಳಿದ್ಲು. "ಬೇಜಾರಾಗದೇ ಮತ್ತಿನ್ನೇನೆ, ಮೂರುವರ್ಷದ ಮೇಲಾಯ್ತು ಅದೇ ಕಂಪನಿಯಲ್ಲಿ ಇದ್ದು. ಪೀಠಾರೋಹಣ ಮಾಡಿ ಪಟ್ಟಾಗಿ ಕೂತಿದ್ದು, ಕಿರೀಟವಿಲ್ಲದಿದ್ರೂ ರಾಜನಂತಿದ್ದೆ ಗೊತ್ತಾ" ಅಂದೆ. "ಹ್ಮ್ ಗೊತ್ತು ಗೊತ್ತು, ಯಾವಾಗ ನೋಡಿದ್ರೂ ನಮ್ಮ ಟೀಮ್ ಹಾಗೆ, ನಮ್ಮ ಟೀಮ್ ಹೀಗೆ, ಅಂತ ಹೇಳಿದ್ದೇ ಹೇಳಿದ್ದು,
ಕಂಪನಿ ಈಗ ಕೃಷ್ಣನಿಲ್ಲದ ಮಥುರಾನಂತಾಗಿದೆ ಅನ್ನಿ, ಗೋಪಿಕೆಯರೆಲ್ಲ ನಿಟ್ಟುಸಿರು ಬಿಟ್ಟಿರಬೇಕು" ಅಂತ ಚುಡಾಯಿಸಿದಳು. "ನಾ ಸೀತಾಪತಿ ರಾಮನಂತೇ, ಆದ್ರೂ ಹೂವಿನಂತಿದ್ದ ಹುಡುಗಿಯರ ಮುಖಗಳೆಲ್ಲ ಬಾಡಿಹೋಗಿತ್ತು ನಾ ಹೊರಟಿದ್ದೇನೆ ಅಂತ" ಅಂದು ತಿರುಗೇಟು ಕೊಟ್ಟೆ. "ಕೀತಾಪತಿ ಕೃಷ್ಣ ನೀವು, ಹಾಳಾದೋನ ಹಾವಳಿ ಜಾಸ್ತಿಯಾಗಿತ್ತು ಹೋದ ನೋಡು ಅಂತ ಖುಷಿಯಾಗಿರಬೇಕು ಅವ್ರು" ಅಂತ ನಕ್ಕಳು.

ಹೇಗೂ ಲೇಟಾದರೂ ಪರವಾಗಿಲ್ಲ ಅಂತ ಸ್ವಲ್ಪ ಹೊತ್ತು ಅಲ್ಲೇ ಮಲಗಿದಳು, ನಿದ್ರೆ ಬರದಾದಾಗ ನಾ ಓದುತ್ತಿದ್ದ ಪೇಪರು ಕಸಿದುಕೊಂಡು ಓದಲು ಕೂತಳು, "ರೀ ಹೇಗೂ ಕೆಲ್ಸ ಇಲ್ಲ, ಹೋಗ್ರಿ ನಂಗೊಂದು ಕಪ್ಪು ಟೀ ಮಾಡ್ಕೊಂಡು ಬನ್ನಿ" ಅಂತ ಆರ್ಡರ್ ಮಾಡಿದಳು, "ಅದರೊಂದಿಗೆ, ಬ್ರೆಡ ಟೊಸ್ಟ್ ಬೇಕಾ, ಇಲ್ಲ ಆಮ್ಲೆಟ್ ಬೇಕಾ ಮೇಡಮ್" ಅಂದೆ. ಪೇಪರು ತುಸು ಸರಿಸಿ ಬಾಗಿಸಿ ಅದರ ಮರೆಯಲ್ಲೇ ಇಣುಕಿ ನೋಡಿ ಹುಬ್ಬು ಹಾರಿಸಿದಳು. "ಬೇಕೇನೇ, ಮಾಡ್ತೀನಿ" ಅಂದ್ರೆ, "ರೀ ತಮಾಷೇ ಮಾಡಿದೆ" ಅಂತಂದವಳು, ನನ್ನ ಕೈಲಿದ್ದ ಕಪ್ಪು ಕಸಿದುಕೊಂಡು ಒಂದು ಸಿಪ್ಪು ಹೀರಿ, "ಸೂಪರ್ ಸೂಪರ್" ಅಂತ ಬಾಯಿ ಚಪ್ಪರಿಸಿದಳು. ಕಪ್ಪು ಕಸಿದುಕೊಂಡಿದ್ದಕ್ಕೆ ಕನಿಕರ ಬರುವಂತೆ ನೋಡುತ್ತಿದ್ದರೆ, "ರೀ ಇನ್ನೊಂದು ಕಪ್ಪು ಮಾಡಿ ಕೊಡ್ತೀನಿ ಆಯ್ತಾ" ಅಂತೆದ್ದು ಹೋದಳು.

ದಿನವಿಡೀ ಇದ್ದೇ ಇದೆಯಲ್ಲ, ಪೇಪರು ಆಮೇಲೆ ಓದಿದರಾಯ್ತು ಅಂತ ಆದನ್ನು ಅಲ್ಲೇ ಬೀಸಾಕಿ ಹೊರಬಂದೆ, ಸ್ನಾನವಾದರೂ ಮಾಡಿದರಾಯ್ತು ಅಂತ ನಡೆದರೆ "ರೀ, ನಾನು ಸ್ನಾನ ಮಾಡ್ತೀನಿ ತಾಳಿ, ನಿಮಗೇನು ಅರ್ಜೆಂಟ್ ಇಲ್ಲ, ಆಮೇಲೆ ಮಾಡುವಿರಂತೆ" ಅಂತ ಅಡ್ಡಗಾಲು ಹಾಕಿದಳು, ಹೋಗಲಿ ಬಿಡು ಅಂತಿದ್ದರೆ, ಬಾತ್‌ರೂಮಿನಿಂದ ಕೂಗು ಕೇಳಿತು "ಒಲೆ ಮೇಲೆ ಕಾಯಿಸಲು ಹಾಲಿಟ್ಟೀದೀನಿ, ಸ್ವಲ್ಪ ನೋಡಿ" ಅಂತ. ಸಧ್ಯ ಅಡುಗೆ ಮಾಡಿ ಅಂತ ಹೇಳಲಿಲ್ಲ ಅಲ್ಲ, ಹಾಲು ಕಾಯಿಸೋದು ತಾನೆ ಅಂತ ನೋಡಿ ಬಂದು ಕೂತೆ, ಟೀವೀನಾದ್ರೂ ನೋಡೋಣ ಅಂತ ಆನ್ ಮಾಡಿದ್ರೆ ಏನೂ ಬರುತ್ತಿಲ್ಲ. "ಟೀವೀಗೆ ಏನಾಯ್ತೇ" ಅಂತ ಕೇಳಿದ್ರೆ "ಬೆಳಗ್ಗೆ ಬೆಳಗ್ಗೆ ಅದೇನು ಟೀವೀ ನೋಡ್ತಾ ಕೂರ್ತೀರಾ, ಮೊನ್ನೆ ಅಲ್ಲಿ ವಯರು ಕಟ್ಟಾಗಿದೆ ಅಂತೆ ಹೋಗಿ ಅದನ್ನಾದರೂ ರಿಪೇರಿ ಮಾಡ್ಸಿ" ಅಂತ ಉಪದೇಶವಾಯ್ತು, ಟೆರೆಸ್ಸು ಏರಿ ಕಿತ್ತು ಹೋಗಿದ್ದ ವಯರು ಜೋಡಿಸಿ ಬಂದು ಸ್ನಾನ ಮಾಡಿ ಬಂದು ಕೂರಬೇಕೆನ್ನುವಷ್ಟರಲ್ಲಿ, "ಹೇಗೂ ರೆಡಿ ಆಗಿದ್ದೀರಲ್ಲ ಕರೆಂಟ್ ಬಿಲ್ ತುಂಬಬೇಕಿತ್ತು" ಅಂತ ರಾಗ ತೆಗೆದಳು. ಸರಿ ಕರೆಂಟ್ ಬಿಲ್ ತಾನೇ ಅಂತ ಹೊರಟು ನಿಂತರೆ "ಆಕಡೆಯೇ ಹೋಗುತ್ತೀರಿ, ಅಲ್ಲೇ ಮಾರ್ಕೆಟ್ನಲ್ಲಿ ತರಕಾರಿ ಸ್ವಲ್ಪ ತೆಗೆದುಕೊಂಡು ಬನ್ನಿ" ಅಂತ ಹಲ್ಲು ಕಿರಿದಳು. ಇನ್ನು ಎಲ್ಲಿ ಇಲ್ಲವೆನ್ನಲಾಗುತ್ತದೆ, ಸರಿ ಹೋಗಿ ಮಾರುದ್ದ ಕ್ಯೂನಲ್ಲಿ ನಿಂತು ಬಿಲ್ಲು ತುಂಬಿ, ಮಾರ್ಕೆಟ್ ಸುತ್ತಿ ತರಕಾರಿ ಆಯ್ದುಕೊಳ್ಳುವ ಹೊತ್ತಿಗೆ ಹೊತ್ತೇರುವಷ್ಟು ಸಮಯವಾಗಿತ್ತು, ನಡುವೆ ಫೋನು ಬೇರೆ ಮಾಡಿ ರವೆ ಅಕ್ಕಿ ತರುವುದಕ್ಕೂ ಹೇಳಿದ್ದಳು. ಆಫೀಸಿನ ಏ.ಸೀ ರೂಮಿನಲ್ಲಿ ಕಾಲು ಚಾಚಿ ಕೂತಿರುವವನಿಗೆ ಕಾಲುನಡಿಗೆ ಕಷ್ಟವಾಗದಿದ್ದೀತೇ, ಸುತ್ತಿ ಸುಸ್ತಾಗಿ ಮನೆ ಸೇರುವಾಗ ಘಂಟೆ ಒಂದು ಆಗಿತ್ತು.

ಇತ್ತ ಊಟಕ್ಕೂ ಸಮಯವಲ್ಲ, ತಿಂಡಿ ಕೂಡ ತಿನ್ನಲಾಗಲ್ಲ ಹಾಗಾಗಾಗಿತ್ತು, ಇನ್ನೊಂದು ಸ್ವಲ್ಪ ತಡೆದು ಊಟವೇ ಮಾಡಿದರಾಯ್ತು ಅಂತ ಕೂತವನು ಟೀ ಬೇಕೆಂದು ಕೇಳಿದೆ, "ಇಷ್ಟೊತ್ತಿನಲ್ಲಿ ಟೀ ಏನು, ಆಗಲೇ ಎರಡು ಸಾರಿ ಆಗಿದೆ" ಅಂತ ಅವಳು ಅದನ್ನೂ ಕೊಡಲಿಲ್ಲ, ಕಂಪನಿಯಲ್ಲಿ ಪುಕ್ಕಟೆ ಮಗ್‌ಗಟ್ಟಲೆ ಸಿಗುತ್ತಿದ್ದ ಟೀ ನೆನಪಾಯಿತು, ಕೆಲಸ ಮಾಡುತ್ತೀವೊ ಇಲ್ವೊ ಅದಂತೂ ಸಿಗುತ್ತಿತ್ತು, ಇಲ್ಲಿ ಕೆಲಸ ಮಾಡಿದರೂ ಕೊಡುತ್ತಿಲ್ಲ ಅಂತ ಗೊಣಗಿಕೊಂಡು ಸ್ವಲ್ಪ ಕಾಲ ತಳ್ಳಿದವನಿಗೆ, ತಟ್ಟೆ ಸದ್ದು ಕೇಳಿ ಹೊಟ್ಟೆ ತುಂಬ ಹೋಳಿಗೆ ಊಟ ಮಾಡಿದಷ್ಟೇ ಸಂತೋಷವಾಯ್ತು. ಊಟಕ್ಕೆ ಅನ್ನ ಸಾರು ಉಪ್ಪಿನಕಾಯಿ ಮಾತ್ರ ಇತ್ತು, ಲಂಚಬಾಕ್ಸಿಗೆ ತರಹೇವಾರಿ ಹೊಸರುಚಿಗಳನ್ನು ಮಾಡಿಕೊಡುತ್ತಿದ್ದವಳು, ಮನೆಯಲ್ಲೇ ಇರುವಾಗ ಏನು ಹೊಸದು ಅಂತ ಅನ್ನ ಸಾರು ಮಾತ್ರ ಮಾಡಿದ್ದಳು, ಸಿಕ್ಕಿದ್ದು ಶಿವಾಯನಮಃ ಅಂತ ಅದನ್ನೇ ತಿಂದು ತೇಗಿದ್ದಾಯ್ತು.

ಊಟ ಆಯ್ತು ಇನ್ನೇನು ಬೇರೆ ಕೆಲಸ ಇಲ್ಲ ಅಂತ ಕೂತಿದ್ದವಳನ್ನು ಕೆಣಕಿ ಕೀಟಲೆಯಾದರೂ ಮಾಡಿದರಾಯ್ತು ಅಂತ ಬಂದರೆ, "ರೀ ರಜೆ ಅಂತೂ ನಿಮಗೆ ಸಿಗೊಲ್ಲ, ಇಂದು ಕೆಲಸ ಇಲ್ಲಾಂತಾ ಖಾಲಿ ಈಗಲೇ ಸಿನಿಮಾ ನೋಡಿ ಬರೊಣ್ವಾ, ಮತ್ತೆ ಯಾವಾಗ ಹೀಗೇ ಸಮಯ ಸಿಗುತ್ತೊ" ಅಂತ ಪ್ಲಾನ್ ಹಾಕಿದಳು, "ಟಿಕೆಟ್ಟು ನಿನ್ನದು ಹಾಗಿದ್ರೆ, ನಾನು ನಿರುದ್ಯೋಗಿ ದುಡ್ಡಿಲ್ಲ" ಅಂದೆ. "ಕಂಜ್ಯೂಸ್" ಅಂತ ಹೀಗಳೆದಳು. "ಯಾವ ಫಿಲ್ಮ್" ಅಂದ್ರೆ "ಅವತಾರ್" ಅಂದ್ಲು. ಇದೇನು ದೇವರ ಮೇಲೆ ಭಕ್ತಿ ಬಂದಿರೋ ಹಾಗಿದೆ ಯಾವ ಅವತಾರ, ಯಾವ ದೇವರ ಅವತಾರ್ ಅಂತಂದು "ಯಾವದು ಅದು ವಿಷ್ಣು ವರಾಹ ಅವತಾರ್ ಫಿಲ್ಮಾ" ಅಂತ ಕೇಳಿದೆ. "ಹ್ಮ್.. ದುರ್ಗಾ ಕಾಳಿ ಅವತಾರ್.... ರೀ ಅದು ಇಂಗ್ಲಿಷ್ ಫಿಲ್ಮ್ 'ಅವತಾರ್' ಅಂತ... ಚೆನ್ನಾಗಿದೆ ಅಂತೆ" ಅಂತ ಕೂತಲ್ಲೇ ರೀಲು ಬಿಟ್ಟಳು. ಇನ್ನು ಇಲ್ಲಾಂದ್ರೆ ಇವಳು ದುರ್ಗಾವತಾರ ತಾಳುವುದು ಗ್ಯಾರಂಟಿ ಅಂತ, ಹೋಗಿ ಫಿಲ್ಮ್ ನೋಡಿ, ಪಕ್ಕದಲ್ಲೇ ಚೈನೀಜ್ ಅಂತ ಅದೇನೊ ಹುಲ್ಲು... ಹುಳು ಹುಳು(ನೂಡಲ್), ಹೂವು(ಪ್ಲವರ್, ಗೋಬಿ) ತಿಂದು, ಎರಡು ಹಸಿರು ಗಾಂಧಿ ನೋಟು ಖಾಲಿ ಮಾಡಿ ಬಂದಾಯ್ತು.

ಕೆಲಸ ಇಲ್ಲದೇ ಖಾಲಿ ಇರುವುದು ಸುಮ್ಮನೇ ಅಲ್ಲ, ಖಾಲಿ ಪೀಲಿ ಖರ್ಚುಗಳು ಆಗಲೇ ಜಾಸ್ತಿ ಆಗೋದು. ನಿರುದ್ಯೋಗಿಯಾಗಿ ನಿರಮ್ಮಳವಾಗಿ ನಿಶ್ಚಿಂತೆಯಿಂದ ಎರಡು ದಿನ ಕಳೆದರಾಯ್ತು ಅಂತಿದ್ದರೆ, ನಿರುದ್ಯೋಗಿ...
ನೀ ಇರು ಉದ್ಯೋಗಿ ಆಗಬೇಡ ನಿರುದ್ಯೋಗಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೇಗೂ ಏನೂ ಕೆಲಸ ಇಲ್ಲ, ಇದು ಮಾಡು ಅದು ಮಾಡು ಅಂತ ಆಗಲೇ ಹೆಚ್ಚು ಕೆಲಸ ಬರುತ್ತವೆ. ಕೆಲಸದಲ್ಲಿದ್ದರೆ ಒಹ್ ದುಡಿದು ದಣಿದು ಬಂದಿರಬಹುದೆಂದು ಆದರಾಥಿತ್ಯ ಸಿಕ್ಕರೆ, ಕೆಲಸವಿಲ್ಲದೇ ಖಾಲಿಯಾದರೆ... ಕೂತಿದ್ದರೆ ಉಂಡದ್ದು ಕರಗುವುದು ಯಾವಾಗ ಅಂತ ಎದ್ದೋಡಿಸಲಾಗುತ್ತದೆ. ಕತ್ತೆ ಹಾಗೆ ಕುತ್ತಿಗೆಗೆ ಕುತ್ತು ಬಂದು ಸತ್ತು ಹೋಗುವಷ್ಟು ಒಮ್ಮೊಮ್ಮೆ ಕೆಲಸ ಮಾಡಿದ ಮೇಲೆ, ಒಂದು ದಿನ ಹೀಗೆ ಸುಮ್ಮನೇ ಕೂತು ಬಿಡಬೇಕು... ಊಟ ನಿದ್ರೆಯ ಪರಿವೆ ಕೂಡ ಇಲ್ಲದ ಹಾಗೆ ಎನೂ ಮಾಡದೇ... ಅನ್ನಿಸದಿರಲಿಕ್ಕಿಲ್ಲ. ಆದರೆ... ಜೀವನ ಹಾಗೆ ಕೂರಲು ಬಿಟ್ಟರೆ ತಾನೇ, ಮತ್ತೆ ಎತ್ತಲೋ ಎಳೆದುಕೊಂಡು ಹೊರಟುಬಿಡುತ್ತದೆ.

ರಾತ್ರಿಗೆ ಇವಳು ಏನೂ ಪ್ಲಾನ್ ಮಾಡದಿದ್ರೆ ಸಾಕು ಅಂತ ದೇವರಲ್ಲಿ ಬೇಡಿಕೊಂಡೆ, ಊಟ ಮಾಡಲು ಮನಸಿರಲಿಲ್ಲ, ಸಂಜೆ ತಿಂದಿದ್ದ ಚೈನೀಜ್ ಇನ್ನೂ ಹೊಟ್ಟೆ ತುಂಬ ತುಳುಕುತ್ತಿತ್ತು. ದಿನವಿಡೀ ಕೆಲಸ ಮಾಡಿದ್ದರೂ ಹೀಗೆ ದಣಿಯುತ್ತಿರಲಿಲ್ಲ ಅಷ್ಟು ದಣಿವಾಗಿತ್ತು. ಬೆಡ್ ಮೇಲೆ ಬಿದ್ದುಕೊಂಡು ಮಾತಿಗಿಳಿದರೆ "ರೀ ಇನ್ನೂ ಎಷ್ಟು ದಿನ ನಿರುದ್ಯೋಗಿ ನೀವು" ಅಂದ್ಲು, ಪೂರಾ ಒಂದು ವಾರಕ್ಕೆ ಪ್ಲಾನ ಮಾಡುವದಕ್ಕೇ ಕೇಳಿರಬೇಕು. "ನಾಳೆಯೇ ಹೊಸ ಕೆಲಸಕ್ಕೆ ಹೊರಟುಬಿಡುತ್ತೇನೆ" ಅಂದೆ, "ಪ್ಚ್ ಇನ್ನೂ ಸ್ವಲ್ಪ ದಿನ ಇತ್ತೇನೊ ಅನ್ಕೊಂಡಿದ್ದೆ, ರೇಶನ್ ಕಾರ್ಡಿನಲ್ಲಿ ಹೆಸರು ಎಂಟ್ರಿ ಮಾಡಿಸಬೇಕು, ವೋಟರ್ ಕಾರ್ಡನಲ್ಲಿ ಹೆಸರು ಚೇಂಜ್ ಮಾಡಿಸಬೇಕು, ಗ್ಯಾಸ್ ಸಿಲಿಂಡರ್ ವರ್ಗಾವಣೆ, ಬ್ಯಾಂಕನಲ್ಲಿ ಅಡ್ರೆಸ್ ಬದಲಾವಣೆ..." ಇನ್ನೂ ಅವಳ ಪಟ್ಟಿ ಬೆಳೆಯುತ್ತಲೇ ಇತ್ತು, ನಿರುದ್ಯೋಗ ಬೇಡಪ್ಪಾ... ನೀ ಇರು ಉದ್ಯೋಗಿ ಅಂತ ಹೊದ್ದು ಮಲಗಿದೆ... ನಾಳೆ ಇನ್ಯಾವದೋ ಕ್ಯೂನಲ್ಲಿ ಮತ್ತೆ ಸಿಕ್ತೇನೆ... ಬೈ ಬೈ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/nirudyogi.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

12 comments:

ಮನಸು said...

ಉದ್ಯೋಗ ಇರಲೇ ಬೇಕು ಇಲ್ಲವಾದರೆ ತುಂಬಾ ಕಷ್ಟ. ಉದ್ಯೋಗಂ ಪುರುಷ ಲಕ್ಷಣಂ ಅಲ್ಲವೆ.. ಚೆನ್ನಾಗಿದೆ ಲೇಖನ

ಸವಿಗನಸು said...

ಪ್ರಭು,
"ಉದ್ಯೋಗಂ ಪುರುಷ ಲಕ್ಷಣಂ" ಅಂತ ಅದಕ್ಕೆ ಮಾಡಿರುವುದು ಅನ್ನಿಸುತ್ತೆ....
ಬೇಡಪ್ಪ ನಿರುದ್ಯೋಗ ....."ಕಂಪನಿಯಲ್ಲಿ ಪುಕ್ಕಟೆ ಮಗ್‌ಗಟ್ಟಲೆ ಸಿಗುತ್ತಿದ್ದ ಟೀ ನೆನಪಾಯಿತು, ಕೆಲಸ ಮಾಡುತ್ತೀವೊ ಇಲ್ವೊ ಅದಂತೂ ಸಿಗುತ್ತಿತ್ತು"
ನಾನು ಈಗ ಕಂಪನಿಯಲ್ಲಿ ಪುಕ್ಕಟೆ ಕಾಫಿ ಕುಡಿಯುತ್ತ ನಿಮ್ಮ ಬ್ಲಾಗ್ ಓದುತ್ತ ಇದ್ದೇನೆ....ಮನೆಯಲ್ಲಿ ಹೀಗೆಲ್ಲಿ ಆಗುತ್ತೆ....
ಚೆಂದದ ಲೇಖನ....

shivu.k said...

ಪ್ರಭು,

ಉದ್ಯೋಗಂ ಪುರುಷಲಕ್ಷಣಂ ಅಂತ ಈಗಲಾದರೂ ಗೊತ್ತಾಯಿತಾ? ಮನೆಯಲ್ಲಿ ಎರಡು ದಿನ ರೆಸ್ಟ್ ತೆಗೆದುಕೊಳ್ಳಲು ಅಂತ ಬಂದರೆ ಏನೇನೆಲ್ಲಾ ಆಗುತ್ತೇ ನೋಡಿ...ಚೆನ್ನಾಗಿದೆ.

sunaath said...

ಹೆದರ್ಕೋಬೇಡಿ, ಪ್ರಭುರಾಜ, ಎಲ್ಲಾ ತಾನೇ ಅಭ್ಯಾಸವಾಗತ್ತೆ!

ಸಾಗರದಾಚೆಯ ಇಂಚರ said...

ಪ್ರಭು ಸರ್
ಎಂದಿನಂತೆ ಒಳ್ಳೆಯ ಲೇಖನ,
ಉದ್ಯೋಗ ಇರದಿದ್ರೆ ತುಂಬಾ ಕಷ್ಟ

ದಿನಕರ ಮೊಗೇರ said...

ಪ್ರಭುರಾಜ್ ಸರ್,
ತುಂಬಾ ಥ್ಯಾಂಕ್ಸ್.......... ಯಾಕಂದ್ರೆ ನಾನೂ ಸಹ ಉದ್ಯೋಗ ಬದಲಾವಣೆ ಮಾಡುವವನಿದ್ದೇನೆ ...... ಹಾಗೆ ಮಾಡುವ ಮೊದಲು ಸ್ವಲ್ಪ ರೆಸ್ಟ್ ತಗೊಳೋಣ ಎಂದು ಯೋಚಿಸಿದ್ದೆ, ಆದ್ರೆ ಈಗ ಹೆದರಿಕೆ ಆಗುತ್ತಿದೆ...... ಬರಹ ಚೆನ್ನಾಗಿದೆ....... ಆದರೆ ನಿಮ್ಮ romantic ಬರಹ ಇಷ್ಟ ನನಗೆ....

ರಾಜೀವ said...

ಪ್ರಭು,

ನಿಮ್ಮ ಈ ಲೇಖನಕ್ಕೆ ಸ್ಪೂರ್ತಿ ಯಾರು/ಏನು ಎಂದು ಕೇಳಬಹುದೇ?
ಇದು ಹಾಸ್ಯ ಲೇಖನ ಅನಿಸಿದರೂ, ಅನುಭವಿಸಿದವರಿಗೇ ಗೊತ್ತು ಈ ಸಂಕಟ.
ರಜ ಹಾಕಿ ಮನೆಯಲ್ಲಿ ಕೂರುವುದು ಅಷ್ಟು ಸುಲಭದ ಮಾತಲ್ಲ!

Ranjita said...

ಪ್ರಭು ಸರ್ , ಎಂದಿನಂತೆ ನಿಮ್ಮ ಲೇಖನ ಸೂಪರ್ ..
ಉದ್ಯೋಗಂ ಪುರುಷ ಲಕ್ಷಣಂ ಎಷ್ಟು ನಿಜ ಅಲ್ವಾ ?

Prabhuraj Moogi said...

@ಮನಸು
ಉದ್ಯೋಗಂ ಪುರುಷ ಲಕ್ಷಣಂ, ಹಾಗೇ ಮಹಿಳೆಯರೂ ಕೂಡ ಉದ್ಯೋಗ ಕ್ಷೇತ್ರದತ್ತ ಧುಮುಕುತ್ತಿದ್ದಾರೆ.
ಮನೆಯಲ್ಲಿ ಖಾಲಿ ಕೂರುವುದೆಂದರೆ ಬಲು ಕಷ್ಟ.

@ಸವಿಗನಸು
ಸರ್ ಕಂಪನಿಯಲ್ಲಿ ಪುಕ್ಕಟೇ ಕಾಫಿ, ಟೀ, ಕೊಂಪ್ಲಾನ ಎಲ್ಲ ಸಿಗುತ್ತಿತ್ತು, ಯಾರ ದೃಷ್ಟಿ ತಾಕಿತೊ ಈಗ ಹೊಸ ಕಂಪನಿಯಲ್ಲಿ ಏನೂ ಇಲ್ಲ :)

@shivu
ಮನೆಯಲ್ಲಿ ರೆಸ್ಟ ಅಂತ ಸಿಗಲ್ಲ ಬಿಡಿ, ಒಂದು ಸಾರಿ ಈ ಜೀವನದಲ್ಲಿ ಬದಲಾವಣೆಗಳ ಬಿರುಗಾಳಿ ಬೀಸಿತೆಂದರೆ ಏನೂ ಮಾಡಲಾಗಲ್ಲ.

@sunaath
ಅಭ್ಯಾಸ ಆಗದಿದ್ದರೂ ಬದುಕು ಅಭ್ಯಾಸ ಮಾಡಿಸುತ್ತದೆ!

@ಸಾಗರದಾಚೆಯ ಇಂಚರ
ಧನ್ಯವಾದಗಳು, ಇರದಿದ್ದರೂ ಕಷ್ಟ... ಹಾಗೇ ಇದ್ದರೂ ಕಷ್ಟ...

@ದಿನಕರ ಮೊಗೇರ..
ಉದ್ಯೋಗ ಬದಲಾವಣೆ ಮಾಡುವರಿದ್ದೀರಾ... ಹ್ಮ್ ರೆಸ್ಟ ಸಿಗುತ್ತದೆ ಅಂತ ಹೇಳೋಕೆ ಆಗಲ್ಲ ಆದರೂ ಸ್ವಲ್ಪ ಬಿಡುವು ಮಾಡಿಕೊಳ್ಳಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿರುವ ಕೆಲಸಗಳೆಲ್ಲ ಆಗುತ್ತವೆ.
ಬದುಕಲ್ಲಿ ಬರೀ ರೋಮಾನ್ಸ್ ಮಾತ್ರ ಇರಲ್ಲ ನೋಡಿ ಅದಕ್ಕೆ ಹೀಗೂ ಒಂದು ಬರಹ ಬರೆದೆ.. :)

@ರಾಜೀವ
ಹ್ಮ್ ನನ್ನ ಅನುಭವವೇ, ಮೊನ್ನೆ ಮೊನ್ನೆ ಕೆಲಸ ಬದಲಾವಣೆ ಮಾಡಿ ಬೇರೆ ಕಂಪನಿ ಸೇರಿದೆ. ಊರಲ್ಲಿ ಹಾಯಾಗಿ ಇರೋಣ ಅಂತ ಹೋದರೆ ಅದು ಇದು ಅಂತ ಕೆಲಸ ಮಾಡಿದ್ದೇ ಆಯ್ತು, ಅದೇ ಸ್ವಲ್ಪ ಬದಲಾವಣೆಗಳೊಂದಿಗೆ ಬರೆದೆ...

@Ranjita
ಥ್ಯಾಂಕ್ಯೂ... ಹೌದೌದು ಸ್ವಂತ ಅನುಭವದೊಂದಿಗೆ ಹೇಳುತ್ತಿದ್ದೇನೆ.

ವಿನುತ said...

ಎಲ್ಲರೂ ಒಂಥರಾ ಹಿಂಗೇ ಏನೋ! ಸಾಕಪ್ಪ ಕೆಲ್ಸ ಅಂತ ೧ ವಾರ ರಜ ಹಾಕಿ ಮನೇಲಿದ್ರೆ, ಮತ್ತೆ ಆಫೀಸ್ ಯವಾಗಪ್ಪಾ ಅಂತ ಚಟಪಡಿಕೆ ಶುರುವಾಗಿರತ್ತೆ! ಸೊಗಸಾದ ಲೇಖನ.

Chaithrika said...

ಹ್ಹ ಹ್ಹ... So funny....ಚೆನ್ನಾಗಿದೆ.

Prabhuraj Moogi said...

@ವಿನುತ
ಹ್ಮ್ ನನಗೂ ಅದೇ ಅನುಭವ ಆಯ್ತು ನೋಡಿ, ಜೀವನ ಒಮ್ಮೆ ಒಂದು ಹೆಚ್ಚಿನ ಗೇರ್‌ನಲ್ಲಿ ಬಂದುಬಿಟ್ಟು ಆಕ್ಸಲರೇಟ್ ಆಯಿತೆಂದರೆ... ಒಂದು ಓಟಕ್ಕಿಳಿದುಬಿಡುತ್ತದೆ... ಆಗ ಕೆಲಸಗಳೋ ಕೆಲಸ... ಮಾಡದೇ ವಿಧಿಯಿಲ್ಲ...

@Chaithrika
ಧನ್ಯವಾದಗಳು, So funny... So ಮತ್ತೆ ಬನ್ನಿ...