ಮಲಗಿದ್ದೆ, ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ. ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ. ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ. ತೀರ ಕ್ಷೀಣದನಿ ಕೇಳಿತು "ಗುಂಡುಮರಿ, ಗುಂಡುಮರಿ..." ಅಂತ, ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ. "ಎದ್ದೇಳೊ ಗುಂಡುಮರಿ" ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು. ಅವಳು ಹೀಗೇನೆ, ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು, ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು "ಊಂ" ಅಂತ ಊಳಿಟ್ಟೆ, ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ. ಬೆಡ್ರೂಮಿಗೆ ಬಂದು, ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ, ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು, "ಹತ್ತುಗಂಟೆ" ಅಂದು ಮುಗುಳ್ನಕ್ಕು, ಹೊರ ಹೋದಳು. ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು. ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು, ಬೆರಳಿಗೆ ಕಟ್ಟಿದ್ದ "ಪೌಟಿಸ್" ಎಲ್ಲಿ, ಎಲ್ಲೊ ಬಿದ್ದು ಹೋಗಿದೆ, ಪೌಟಿಸ್! ಏನದು ಅಂತಾನಾ... ಹ್ಮ್ ಅದೊಂದು ಮನೆ ಮದ್ದು.
ಸ್ವಲ್ಪ ಫ್ಲಾಶ್ಬಾಕ್ ಹೋಗೊಣ್ವಾ, ನಿನ್ನೆ ಕೂಡ ರಜೆ ಇತ್ತು, ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ. ಸುಮ್ನೇ ಕೂತಿದ್ದೆ, ನಮಗೆ ರಜೆ ಇದ್ರ್ಏನಂತೆ, ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ. ಮೇಜು, ಟೀವಿ, ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು. ಹೇಗೂ ಖಾಲಿ ಕೂತಿದೀನಿ, ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ, "ನಂಗೆ ಕೊಡು ನಾ ಮಾಡ್ತೀನಿ" ಅಂದೆ. "ಏನು ಇಂಜನೀಯರ್ ಸಾಹೇಬ್ರು, ಈಮೇಲು, ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ" ಅಂತ ಹುಬ್ಬು ಹಾರಿಸಿದಳು. "ರಜಾ ದಿನಾ ಯಾವ ಈಮೇಲು, ಇನ್ನ ಫೀಮೇಲು ಅಂದ್ರೆ ನೀನೇ, ನಿನ್ನೇ ನೋಡ್ತಾ ಕೂತಿದ್ದಾಯ್ತು. ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ" ಅಂತ ಗುರಾಯಿಸಿದೆ. "ಹ್ಮ್ ರಜಾ ದಿನಾನೇ ಅಲ್ವಾ; ಪರ್ಸ್ssss...ನಲ್ ಮೇಲ್ ಚೆಕ್ ಮಾಡೋದು. ಫೀಮೇಲು ನಾನೋಬ್ಳೆನಾ, ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ, ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ... ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ, ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು..." ಅಂತ ತಿರುಗಿಬಿದ್ಲು. ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು. ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು, ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ, ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ.
ಟೀವೀ ಫ್ರಿಝ್ ಒರೆಸುವ ಹೊತ್ತಿಗೆ, ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು. "ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ" ಅಂತ ಹುಸಿನಗೆ ಬೀರಿದಳು, ಈ ಹುಡುಗೀರು ನೋಡಿ ನಕ್ಕರೆ, ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ. ಅದೇ ಆಯ್ತು, ಅವಳ ಮುಂದೆ ಸ್ಟೈಲ್ ಮಾಡಿ, ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ, ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ, ನೇರ ಬೆರಳಲ್ಲಿ ತೂರಿಕೊಂಡಿತು. ಚಿಟ್ಟನೆ ಚೀರಿದೆ...
"ಅದಕ್ಕೇ ನಿಮಗೆ ಹೇಳಿದ್ದು, ಬೇಡ ಅಂತ, ನೀವೆಲ್ಲಿ ಕೇಳ್ತೀರಾ, ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ, ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು..." ಸಹಸ್ರನಾಮಾರ್ಚನೆ ನಡೆದಿತ್ತು. ಸಿಟ್ಟು ಅಂತೇನು ಅಲ್ಲ, ಅದೊಂಥರಾ ಕಾಳಜಿ, ಅದಕ್ಕೇ ಕೋಪ, ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ. ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು. ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು, ಮುರಿದು ಅರ್ಧ ಮಾತ್ರ ಹೊರಬಂದಿತ್ತು, ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು. ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ, "ನೋವಾಗ್ತಾ ಇದೇನಾ" ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು. ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ.
ರಕ್ತ ಬರುವುದು ಕಮ್ಮಿಯಾಗಿತ್ತು, "ಸ... ಸ್.. ಸ್" ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು. ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್ಫ್ಯೂಸ್ ಆಯ್ತು. ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು. "ನಡೀರಿ ಡಾಕ್ಟರ್ ಹತ್ರ ಹೋಗೋಣ" ಅಂದ್ಲು, "ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ, ಕಮ್ಮಿಯಾಗತ್ತೆ ಬಿಡು" ಅಂದೆ. ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ, ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು, ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು. "ರೀ ಅತ್ತೆಗೆ ಫೋನ್ ಮಾಡ್ಲಾ" ಅಂದ್ಲು, "ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು" ಅಂದ್ರೆ. "ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ, ಪ್ರಯತ್ನಿಸಿ. ನಾಳೆ ಡಾಕ್ಟರ್ ಹತ್ರ ಹೋದರಾಯ್ತು" ಅಂತ ಒಳ್ಳೇ ಐಡಿಯಾ ಕೊಟ್ಲು.
ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್... ಫೋನು ಕೆಳಗಿಟ್ಟವಳೇ, "ಅಮ್ಮ ಒಳ್ಳೆ ಮದ್ದು ಹೇಳಿದಾರೆ, ಏನ್ ಗೊತ್ತಾ, ಅದರ ಹೆಸ್ರು ಪೌಟಿಸ್ ಅಂತೆ, ಮಾಡೋದು ಸಿಂಪಲ್... ಒಂದು ಸಾರು ಹಾಕೊ ಸೌಟಿನಲ್ಲಿ, ಇಲ್ಲ ಚಿಕ್ಕ ಪಾತ್ರೇಲಿ, ಸ್ವಲ್ಪ ಹಾಲು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ, ಬಿಸಿ ಬಿಸಿ ಉಂಡೆ ಹಾಗೆ ಮಾಡಿ, ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ, ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ" ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು. ನಾನೂ ಅವಳ ಹಿಂಬಾಲಿಸಿದೆ. "ಬಿಸಿ ಬಿಸಿದೇ ಕಟ್ಟಬೇಕಾ" ಅಂತ ಆತಂಕದಲ್ಲಿ ಕೇಳಿದ್ರೆ. "ಸುಡು ಸುಡು ಹಾಗೆ ಕಟ್ಟಬೇಕಂತೆ, ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ" ಅಂತ ಇನ್ನೂ ಹೆದರಿಸಿದ್ಲು.
ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು, ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ, "ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್" ಅಂತ ಹಲ್ಲು ಗಿಂಜಿದೆ. "ಅತ್ತೆ ಹೇಳಿದ ಮೇಲೆ ಮುಗೀತು, ಒಳ್ಳೆ ಮದ್ದೇ ಇರತ್ತೆ, ಏನಾಗಲ್ಲ ಸುಮ್ನಿರಿ" ಅಂತ ಭರವಸೆ ಕೊಟ್ಲು. "ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ, ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ" ಅಂತ ಗೋಗರೆದೆ. ವಾರೆ ನೋಟದಲ್ಲಿ ನೋಡಿ, "ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ" ಅಂತ ಓಡಿಸಿದಳು. ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ.
ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ "ಡಾಕ್ಟರ್ ಹತ್ರಾನೇ ಹೋಗೋಣ ಕಣೇ" ಅಂತ ಮತ್ತೆ ಅವಳ ಮನವೊಲಿಸಲು ಹೋದೆ. "ಅತ್ತೆಗೆ ಫೋನು ಮಾಡ್ತೀನಿ ಈಗ, ಹೀಗೆ ಹಠ ಮಾಡ್ತಾ ಇದೀರಿ ಅಂತ" ಅಂತ ಧಮಕಿ ಹಾಕಿದ್ಲು. ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು, ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು. "ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ" ಅಂತ ಮತ್ತೆ ಮಾತಿಗಿಳಿದೆ. "ಆಹಾಹ್ ಏನ್ ರೂಪದರ್ಶಿ, ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು" ಅಂತ ಹೀಯಾಳಿಸಿದ್ರೆ. "ಹ್ಮ್, ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ" ಅಂತ ರೈಲು ಬಿಟ್ಟೆ. "ಗಲ್ಲ, ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ" ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು. ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ. "ಪ್ಲೀಜ್ ಕಣೆ, ಡಾಕ್ಟರ್ ಹತ್ರ ಹೋಗೊಣ, ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ, ಬೇಕಿದ್ರೆ ಪ್ರಮಾಣ್ ಮಾಡ್ತೀನಿ" ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ, ತಪ್ಪಿಸಿಕೊಂಡು "ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ, ಈವತ್ತು ಮನೆಮದ್ದೇ ಗತಿ, ನಾಳೆ ನೋಡೋಣ, ಕಡಿಮೆ ಆಗದಿದ್ರೆ ಡಾಕ್ಟರ್... ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ" ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ, ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ.
ಅವಳು ಅಡುಗೆ ಮಾಡಿದ್ದಾಯ್ತು, ಕೊನೆಸಾರಿ ಒಂದು ಪ್ರಯತ್ನ ಅಂತ, "ನೋವೆಲ್ಲ ಏನೂ ಇಲ್ಲ, ಎಲ್ಲಾ ಹೊರಟೊಯ್ತು, ನೋಡು" ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ. ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು, ನಗುತ್ತ "ಅಲ್ಲೇ ಕೂತಿರಿ, ಪೌಟಿಸ್ ಮಾಡಿ ತರ್ತೀನಿ" ಅಂತ ಹೋದಳು, ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ, ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ, ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ, ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು. ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು, ಹಲ್ಲು ಗಟ್ಟಿ ಹಿಡಿದು ಕೂತೆ, ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ. "ಕಣ್ಣು ಬಿಡಿ, ಏನಾಗಲ್ಲ" ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ. "ಏನೊ ಒಂದು ಬೆರಳಿಗೆ ಹಚ್ಚೋದು ತಾನೆ, ಕಣ್ಣು ಯಾಕೆ ತೆಗೆಯಬೇಕು, ನಂಗೆ ನೋಡೋಕಾಗಲ್ಲ, ಬೇಗ ಮೆತ್ತಿಬಿಡು" ಅಂದೆ. ಬೆರಳಿಗೆ ಟೋಪಿ ತೊಡಿಸಿದಂತೆ, ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು. ಹಿತವಾಗಿತ್ತು, ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ, ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ, ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ. ತುಟಿಯಗಲಿಸಿದೆ. "ನೋಡಿ ಇಷ್ಟೇ, ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ, ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ, ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು. ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ" ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು. ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ.
ಊಟಕ್ಕೆ ಅನ್ನ ಸಾರು ಬಡಿಸಿ, ಇಟ್ಟಳು. ಅವಳತ್ತ ನೋಡಿದ್ದಕ್ಕೆ "ಓಹ್ ನೋವಾಗಿದೆ ಅಲ್ವಾ" ಅಂತ ಕಲೆಸಿ ಚಮಚ ತಂದಿಟ್ಲು. ಇದೇ ಒಳ್ಳೆ ಸಮಯ ಅಂತ, ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ, ಕೈತುತ್ತು ತಿಂದೆ. ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ. "ನಾಲ್ಕೈದು ದಿನ ಹೀಗೇ ಕಟ್ಟು, ಚೆನ್ನಾಗಿ ಗುಣವಾಗ್ಲಿ" ಅಂದೆ, ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ. "ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ, ಡಾಕ್ಟರ ಹತ್ರ ಹೋಗಿ, ಕುಯ್ಯಿಸಿ ತೆಗೆಸಿ, ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ" ಅಂತ ನಾಟಕಕ್ಕೆ ತೆರೆ ಎಳೆದಳು. "ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ, ನಾಳೆ ಎಲ್ಲಾ ಸರಿ ಹೋಗುತ್ತೆ, ಅಮ್ಮ ಹೇಳಿದ ಮೇಲೆ ಸುಮ್ನೇನಾ" ಅಂತ ಸಂಭಾಳಿಸಿದೆ, ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ. ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ, ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ.
ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ. ಹಾಗಂತೆ ಗುಳಿಗೆ, ಸಿರಪ್ಪು, ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ, ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ. ಈ ಪೌಟಿಸ್ ನೋಡಿ... ಕಸ, ಗಾಜಿನ ಚೂರು, ಕಡ್ಡಿ ಏನೇ ಚುಚ್ಚಿದ್ರೂ, ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ. ಮಾರ್ಬಲ್ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ. ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ, ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು, ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು. ಬಾಯಿ ಹುಣ್ಣು, ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ, ಗಂಟಲ ಕೆರೆತ, ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ, ಒಂದೊ ಎರಡೊ. ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ, ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು.
ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ. ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು, ಹಾಗೇ ಊತ ಕೂಡ ಕಮ್ಮಿಯಾಗಿತ್ತು. ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು. "ಏನನ್ನತ್ತೆ ಬೆರಳು" ಅಂತ ಕುಷಲತೆ ಕೇಳಿದ್ಲು. "ಪೌಟಿಸ್ನ ಬಿಸಿಯಪ್ಪುಗೆ ಇನ್ನೂ ಬೇಕಂತೆ" ಅಂದೆ. "ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ" ಅಂದ್ಲು. "ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ" ಅಂದೆ ಖುಷಿಯಲ್ಲಿ. ಕೈಯಲ್ಲಿ ಕಪ್ಪಿಟ್ಟು, ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ, "ಮನೆ ಮದ್ದೇನೊ ಸಿಕ್ತು, ಮನೆ ಮುದ್ದು???"... ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು, ಅದೆಲ್ಲ ಬರೆಯೋಕೆ ಅಗಲ್ಲ, ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ, ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ...
ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/manemaddu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
15 comments:
Hmm.... olle mane maddu thilskotri... thank you :)
prabhu,
olle manemaddu, ella lekhanadalli ondondu olleyadannu tiLisutteeri dhanyavadagaLu
ಮನೆ ಮದ್ದು, ಮನೆ ಮುದ್ದು ಸಿಗೋದಾದರೆ ಎಂಥಾ ನೋವನ್ನೂ ತಡಕೋಬಹುದು, ಅಲ್ಲವೆ?
Nicely written article :)
ಹೆಂಡ್ತಿ ಊರಿಗೆ ಹೋದಾಗ ನಿಮ್ಮ ಬ್ಲಾಗಗೆ ಬರೂದ ತಪ್ಪ ನೋಡ್ರಿ... :(
ಕಾಲ ಕೆಳಗ ಉದುಗೋಳಿ ಕೊಟ್ಟು ನಮ್ಮ ಅಮ್ಮನ್ನ ನೆನಪಿಸಿದ್ರಿ, ಥ್ಯಾಂಕ್ಸರಿ..
-ಶೆಟ್ಟರು
gottirlila poultice bagge.
chenaagi convey maaDidira information na. :)
Ayyo nangantoo nagu tadeyoke agilla prabhu....nimma lively sambhashane, paristhiti nodi...it was like a real show :))) Excellent:)
ಪ್ರಭು ಸರ್
ಮನೆ ಮದ್ದು ಚೆನ್ನಾಗಿದೆ
Lovely/lively write up with a nice info. Thank you.
treatment gottittu aadre hesru gottirlilla. Halligalalli holadalli enadru tulidu gaya aadre idanne kattodu. Thank You for the information.
Matte nimm article is super!!! tumba chennagi realistic agi barediddira.
Eagerly waiting for your next article
Thank You
Regards
Rekha
@Annapoorna Daithota
ಹ್ಮ್ ಒಳ್ಳೇ ಮದ್ದು ಅದು, ನಿಜವಾಗ್ಲೂ ಚೆನ್ನಾಗಿ ವರ್ಕ್ ಮಾಡತ್ತೆ...
@ಮನಸು
ಒಂದೊಂದು ಲೇಖನದಲ್ಲಿ ಒಂದು ಸಂದೇಶ, ಏನೊ ಸುಮ್ನೇ ಹಾಗೆ ಒಳ್ಳೇದು ಅಂತ ಪೌಟಿಸ್ ಬಗ್ಗೆ ಬರೆದೆ.
@sunaath
ಹೌದೌದು, ಮದ್ದಿಗಿಂತ ಮುದ್ದೇ ವಾಸಿ... ಒಂದು ಕೊಟ್ರೆ ಸಾಕು ಖಾಯಿಲೆನೇ ವಾಸಿಯಾಗಿಬಿಡತ್ತೆ ಅಂತೀನಿ...
@Chandrashekar
Thank you.
@ಶೆಟ್ಟರು (Shettaru)
ಹ ಹ ಹ... ಹೆಂಡ್ತಿ ಊರಿಂದ ಬಂದ ಮೇಲೆ ಮತ್ತೊಮ್ಮೆ ಓದ್ರಿ... :)
ಹ್ಮ್ ನಮ್ಮ ಅಜ್ಜಿ ಕೂಡ ಹಾಗೇ ಮಾಡ್ತಾ ಇದ್ರು, ಏನ್ ಸೂಪರ್ ಗೊತ್ತಾ... ಹೀಗೆ ಉರುಳಿಸ್ತಾ ಇದ್ದಂಗೇ ನೋವೆಲ್ಲ ಮಾಯ...
ಈಗೆಲ್ಲ ಊದುಗೊಳವೇನೂ ಇಲ್ಲ... ಹಾಗೆ ಹೇಳೊ ಅಜ್ಜಿನೂ ಇಲ್ಲ...
@Greeshma
ಹ್ಮ್ ನಮ್ಮೂರ ಕಡೆ ಇದು ಬಹಳ ಉಪಯೋಗ ಮಾಡ್ತಾರೆ, ಬಹಳ ಜನರಿಗೆ ಗೊತ್ತಿಲ್ಲ... ಈಗೀಗ ಗೊತ್ತಿರೋ ಜನ ಕೂಡಾ ಮರೆತು ಬಿಟ್ಟಿದಾರೆ ಅಷ್ಟೇ...
ಮತ್ತೆ ನೆನಪು ಮಾಡೋಣ ಅಂತ ನಮ್ಮ ಬರವಣಿಗೆ... :)
@Geethashri Ashwathaiah
ಹ ಹ ಹ... ಸುಮ್ನೇ ಏನೊ ಒಂದು ಸನ್ನಿವೇಷ ಸೃಷ್ಟಿ ಮಾಡಿ ಹಾಗೇ ಹೀಗೇ ಅಂತ ಕಲ್ಪನೆ ಮಾಡಿ ಬರೆದದ್ದು... ಅದೇ ನಿಜಜೀವನದಲ್ಲಿ ನಡೆದಂತೆ...
ಇಷ್ಟೊಳ್ಳೆ ಕಮೆಂಟ ಓದಿ ಖುಶಿ ಆಯ್ತು.
@ಸಾಗರದಾಚೆಯ ಇಂಚರ
ಥ್ಯಾಂಕ್ಯೂ...
@Nisha
Your might have heard about this medical term.. Just wanted to write about some homemade medicine added some fun to it...
Thank you...
@Rekha Patil
ಹೌದು ಹಳ್ಳಿಗಳಲ್ಲಿ ಇದು ಬಹಳ ಜನಪ್ರಿಯ, ಮೊನ್ನೆ ಅಪ್ಪ ಕೈಗೆ ಗಾಜಿನ ಚೂರು ಚುಚ್ಚಿಕೊಂಡಿದ್ರು, ಒಳ ಒಳಗೇ ಅದು ಅಳುಕುತ್ತ ನೋವು ಕೊಡ್ತಾ ಇತ್ತು...
ಅಮ್ಮ ಆವಾಗ್ಲೇ ಪೌಟಿಸ್ ಮಾಡಿ ಕಟ್ಟಿದ್ರು, ಆಗಲೇ ಇದರ ಬಗ್ಗೆ ಮಾತಾಡಿದ್ವಿ, ಅಪ್ಪ ಅಜ್ಜಿ ಹೇಳಿದ್ದು ಹಾಗೆ ಮಾಡ್ತಾ ಇದೀವಿ ಅಂದ್ರು.. ಹೆಸರೇನೊ ವಿಚಿತ್ರ ಅನಿಸ್ತು, ಗೂಗಲ್ನಲ್ಲಿ ಸರ್ಚ್ ಮಾಡಿ ನೋಡಿದ್ರೆ... ಈ ಮದ್ದು ಬಗ್ಗೆ ಗೊತ್ತಾಯ್ತು...
ಅದನ್ನೇ ಯಾಕೆ ಬರೀಬಾದ್ರು ಅಂತ ಸುಮ್ನೇ ಎನೊ ಕಲ್ಪಿಸಿ, ಬರೆದೆ...
ಇದಕ್ಕೆ ಹಳ್ಳೀಲಿ ಪೋಟಿಸ್ ಕೂಡ ಅಂತಾರೆ... ಓದ್ತಾ ಇರಿ ಸಮಯ ಸಿಕ್ಕಾಗ ಮತ್ತೆ ಏನಾದ್ರೂ ಬರೀತಾ ಇರ್ತೀನಿ...
ಪ್ರಭು ನಿಮ್ಮ ಮನೆ ಮದ್ದು ಸಖತ್ತಾಗಿದೆ .....
ನಿಮ್ಮಿಂದ ಇನ್ನೂ ಒಳ್ಳೆ ಒಳ್ಳೆ ಲೇಖನ ಎದುರು ನೋಡ್ತಿದ್ದೀನಿ.
ಪ್ರಭುರಾಜರೇ..ಏನಪ್ಪಾ..ನೀವು...ಬರೆಯದೇ ಬರೆಯದೇ...ನಾವು ಬರೋದೇ..ಕಡಿಮೆಯಾಯ್ತು,..ಈಗ ನೋಡಿದ್ರೆ ಈ ನಿಮ್ಮ ಬ್ಲಗ್ ಮಿಸ್ ಆಗಿದೆ...ಹಹಹ ಎಂದಿನಂತೆ...ಲವ್ಲಿ ಮತ್ತೆ ಲೈವ್ಲಿ...ನಿಮ್ಮ ಲೇಖ್ನ....
nammajji raagi hittannu upayogisuttiddaru
@ಗಿರೀಶ ರಾಜನಾಳ
ತುಂಬಾ ಧನ್ಯವಾದಗಳು..
ಸಧ್ಯ ವಿದೇಶದಲ್ಲಿರುವುದರಿಂದ,ಸಾಕಷ್ಟು ಸಮಯ ಸಿಗದೇ ಬಹಳ ದಿನಗಳಿಂದ ಬರೆಯಲಾಗಿಲ್ಲ, ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ... ಓದುತ್ತಿರಿ...
@ಜಲನಯನ
ಸರ್ ಏನ್ ಮಾಡ್ಲಿ ಮೊದಲಿನ ಹಾಗೇ ಟೈಮ್ ಸಿಕ್ತಾ ಇಲ್ವೆ... ವೀಕೆಂಡ ಕೂಡ ಕೆಲಸ ಕೆಲವು ಸಾರಿ ಏನೂ ಮಾಡೋಕಾಗಲ್ಲ.... ಥ್ಯಾಂಕ್ಯೂ ಸರ್ ಓದ್ತಾ ಇರಿ..
@Jayalakshmi
ಹೌದಾ... ರಾಗಿ ಹಿಟ್ಟು ಕೂಡ ಉಪಯೋಗಿಸ್ತಾರಾ? ನಮ್ಮಲ್ಲಿ ಗೋದಿ ಹಿಟ್ಟು ಉಪಯೋಗ ಜಾಸ್ತಿ..
Post a Comment