ಒಳ್ಳೆ ನಿದ್ದೆಯಲ್ಲಿದ್ದೆ, ಕನಸು ಬಿದ್ದರೂ ನಿದ್ದೆ ಮಾಡುವ ಕನಸೇ ಬೀಳುವಷ್ಟು... ಇಂಥ ಸಮಯದಲ್ಲಿ ಇವಳು ಏಳಿಸಿದರೆ ಹೇಗಾಗಬೇಡ... "ರೀ ಎದ್ದೇಳ್ರಿ ಇನ್ನೂ ಎಷ್ಟೊತ್ತು ಅಂತ ಮಲಗೋದು" ಅಂತ ಚೀರುತ್ತಿದ್ದಳು... ಮಲಗಿದಲ್ಲಿಂದಲೇ ಕೇಳಿದೆ "ಟೈಮ್ ಎಷ್ಟು ಈಗ?", ಉತ್ತರ ಬಂತು, "ಹ್ಮ್... ರಾತ್ರಿ ಹನ್ನೊಂದೂವರೆ..." ಅಲ್ರೀ ನೀವೇ ಹೇಳಿ ಈ ಟೈಮ್ಗೆ ಯಾರಾದ್ರೂ ಎಳಿಸ್ತಾರಾ... ಮುಂಜಾನೆ ತಾನೇ ಎದ್ದೇಳಿಸಬೇಕು... ಅದಕ್ಕೆ ತರಾಟೆ ತೆಗೆದುಕೊಳ್ಳುವ ಮೂಡಿನಲ್ಲಿ "ರಾತ್ರಿ ಈ ಟೈಮ್ಗೆ ಮಲಗಿರದೆ ಇನ್ನೇನೇ ಮಾಡೋಕಾಗುತ್ತೆ?..." ಅಂದೆ... "ಯಜಮಾನ್ರೆ, ಟೈಮ್ ಇಲ್ಲಿ ರಾತ್ರಿ ಹನ್ನೊಂದೂವರೆ, ಅಲ್ಲಿ ಈಗ ಮುಂಜಾನೆ ಹನ್ನೊಂದಾಗಿದೆ. ಕಿಟಕಿ ಪರದೆ ಸ್ವಲ್ಪ ಸರಿಸಿ ಸೂರ್ಯ ದರ್ಶನ ಮಾಡಿ" ಅಂದ್ಲು... ನಾನೇನು ಈ ಸೂರ್ಯನ ಟೈಮ್ ಕೀಪರಾ... ಅವನು ಟೈಮ್ ಟೈಮ್ಗೆ ಸರಿಯಾಗಿ ಬಂದು ಹೋಗ್ತಾನಾ ಇಲ್ವಾ ಅಂತ ನೋಡೋಕೆ ಇನ್ನು ದೇವರ ದರ್ಶನ ಅಂತ ಮಾಡೋದಾದ್ರೆ ಚಂದ್ರದೇವ ದರ್ಶನ್ ಮಾಡಿದ್ರಾಯ್ತು ಅಲ್ವಾ... ಅಂತ ಮನದಲ್ಲೇ ಮಂಥನ ನಡೆಸಿದ್ರೆ... "ವಿದೇಶದಲ್ಲಿದೀರಿ... ನಿದ್ರೆ ಮಂಪರಿನಲ್ಲಿ ಅದೂ ಮರೆತು ಹೋಯ್ತಾ?" ಅಂತ ಕೇಳಿದಾಗಲೇ ನಿದ್ರಾದೇವಿಯ ಮಡಿಲಿನಿಂದಿಳಿದು ವಾಸ್ತವಕ್ಕೆ ಬಂದು... "ಹೀ ಹೀ..." ಅಂತ ಹಲ್ಲು ಕಿರಿದೆ... "ಎಲ್ಲಿದ್ರೂ ನೀವಂತೂ ಸುಧಾರಿಸಲ್ಲ" ಅಂತ ಬಯ್ದಳು "ಎಲ್ಲಿದ್ದರೇನಂತೆ, ನಾವು ನಾವೇ ಅಲ್ವೇ ಅದಕ್ಕೆ ವಿದೇಶದಲ್ಲಿ ನಾವು ಅಂದ್ರೆ, WEದೇಶ" ಅಂದಿದ್ದಕ್ಕೆ "ಇಂಥ ಮಾತಿಗೇನು ಕಮ್ಮಿಯಿಲ್ಲ" ಅಂದು ಫೋನಿಟ್ಟಳು...
ಎರಡು ಸಾರಿ ಹೊರಟು ಕ್ಯಾನ್ಸಲ್ ಆಗಿದ್ದರಿಂದ ಈ ಸಾರಿ ಅವಳಿಗೆ ಕೊನೆವರೆಗೂ ಹೇಳಿಯೇ ಇರಲಿಲ್ಲ, ಅದೊಂದು ದಿನ ಟಿಕೆಟ್ಟು ಕೈಗೆ ಬಂದಾಗ... ಕೋಳಿ ಜಗಳ ಸೃಷ್ಟಿ ಮಾಡಿ, ಕೊನೆಗೆ "ಲೇ ನಿಂಜತೆ ಇದ್ದು ಇದ್ದು ಇನ್ನು ಸಾಕಾಯ್ತು ಕಣೆ, ದೇಶಾಂತರ ಹೊರಟೋಗಿಬಿಡ್ತೀನಿ" ಅಂದಿದ್ದಕ್ಕೆ, "ಆಫ್ರಿಕಾ ಕಾಡಿಗೆ ಇಲ್ಲ, ಅರಬಸ್ಥಾನದ ಮರಳುಗಾಡಿಗೆ ಹೋಗಿ" ಅಂತ ಶಾಪ ಹಾಕಿದರೆ, "ಆಫ್ರಿಕಾ ಯಾಕೆ ಅಮೇರಿಕಾ ಹೊರಟೀದೀನಿ" ಅಂತ ಟಿಕೆಟ್ಟು ತೋರಿಸಿದಾಗ ಮುದ್ದು ಗುದ್ದುಗಳ ಸುರಿಮಳೆಯೇ ಆಗಿತ್ತು. ಈಗಲೇ ಎಲ್ಲಿ ಹಾರಿ ಹೊರಟು ಹೋಗುತ್ತೇನೋ ಅನ್ನುವಂತೆ ಅವುಚಿಕೊಂಡು ಕೂತುಬಿಟ್ಟಿದ್ದಳು. ಸ್ವಲ್ಪ ಹೊತ್ತಿನ ನಂತರ ಪ್ರಶ್ನೆಗಳ ಸೋನೆ ಮಳೆ ಶುರುವಾಗಿತ್ತು...
"ಹ್ಮ್ ಮತ್ತೆ ಫ್ಲೈಟ್ ನಲ್ಲಿ ಹೋಗ್ತೀರಾ ಹಾಗಿದ್ರೆ?" ಹುಬ್ಬು ಹಾರಿಸಿದ್ಲು, "ಇಲ್ಲಾ ಸೈಕಲ್ ತೆಗೆದುಕೊಂಡು ಹೋದ್ರೆ ಹೇಗೆ ಅಂತ ಯೋಚ್ನೆ ಮಾಡ್ತಾ ಇದೀನಿ" ಅಂತ ಕಿಚಾಯಿಸಿದೆ. ಕಣ್ಣು ಕೆಕ್ಕರಿಸಿ ನೋಡಿದ್ಲು, ನಾ ನಕ್ಕೆ. "ಯಾವ್ ಫ್ಲೈಟ್ ಸಿಕ್ಕಿದೆ?" ಕೇಳಿದ್ಲು, "ಕಿಂಗ್ ಫಿಷರ್ ಸಿಕ್ಕಿದ್ರೆ ಚೆನ್ನಾಗಿತ್ತು ಏನ್ ಮಾಡೋದು ಅಲ್ಲಿಗೆ ಅವರ ಸರ್ವೀಸ್ ಇಲ್ವೆ" ಅಂದರೆ, "ಯಾಕೆ ಕಿಂಗ್ ಫಿಷರ್ ಟೈಮ್ ಸರಿಯಾಗಿ ಹೋಗುತ್ತಾ?" ಅಂತ ಮುಗ್ಧ ಪ್ರಶ್ನೆ ಬಂತು, "ಆ ಫ್ಲೈಟ್ ಲೇಟಾಗಿ ಹೋದಷ್ಟು ಒಳ್ಳೇದೆ ಕಣೇ, ಗಗನ ಸಖಿಯರು ಹೇಗೆ ಇರ್ತಾರೆ ಗೊತ್ತಾ? ಅಂತಿದ್ದರೆ, ಮುನಿಸಿಕೊಂಡು ಸುತ್ತುಬಳಸಿದ್ದ ಕೈ ಬಿಡಿಸಿಕೊಂಡು ಎದ್ದು ಹೋದಳು, ನಂಗೊತ್ತು ಇನ್ನೊಂದಿಷ್ಟು ಹೊತ್ತಲ್ಲಿ ಬಂದು ಮತ್ತೆ ಮಾಮೂಲಿ ಮಾತಿಗಿಳಿಯುತ್ತಾಳೆ ಎಂದು. ಹಾಗೇ ಆಯ್ತು ಒಳ್ಳೇ ಒಂದು ಕಪ್ಪು ಟೀ ಮಾಡಿಕೊಂಡು ಬಂದು ಕೂತಳು, ನಿಂಗೆ ಕೊಡಲ್ಲ ಹೋಗು ಅನ್ನುವಂತೆ ನನಗೇನೂ ಕೊಡದೇ. "ಗಗನ ಸಖಿಯರು ಬಹಳ ಸ್ಮಾರ್ಟ್ ಇರ್ತಾರೆ ಅಲ್ವಾ?" ಅಂದ್ಲು ಒಂದೇ ಒಂದು ಸಿಪ್ಪು ಹೀರುತ್ತಾ. "ಇರ್ತಾರೆ ನಿನ್ನಷ್ಟು ಸ್ಮಾರ್ಟ್ ಇರಲ್ಲ ಬಿಡು" ಅಂತ ಸ್ವಲ್ಪ್ ಬೆಣ್ಣೆ ಸವರಲು ನೋಡಿದೆ, ಇಲ್ಲಾಂದ್ರೆ ಟೀ ಸಿಗಲ್ಲವಲ್ಲ ಅದಕ್ಕೆ... "ಆಹಾಹಾ ಈ ಡೈಲಾಗ್ ಎಲ್ಲ ಬೇಡ" ಅಂತ ಮುಖ ತಿರುವಿ ಕೂತಳು, ಸುಂದರಿ ಮುಖ ತೋರಿಸಲು ನಾಚಿದಂತೆ. ಖುಷಿಯಾಗಿದ್ದಾಳೆ ಅಂತ ಖಾತರಿ ಆಗುತ್ತಿದ್ದಂತೆ, ಹಿಂದಿನಿಂದ ಆವರಿಸಿಕೊಂಡು ಒಂದು ಸಿಪ್ಪು ಅವಳ ಕಪ್ಪಿನಿಂದಲೇ ಹೀರಿದೆ. ಕೊಸರಿಕೊಂಡು "ಪಾಕಶಾಲೆಯಲ್ಲಿ ಇನ್ನೊಂದು ಕಪ್ಪಿದೆ ನಿಮಗೆ" ಅಂತ ತಳ್ಳಿದಳು. ನಂಗೊತ್ತು, ಟೀ ಮಾಡಿದರೆ ನನಗೆ ಇಲ್ಲದೆ ಅವಳು ಹೇಗೆ ಒಬ್ಬಳೇ ತನಗಾಗಿ ಮಾಡಿಕೊಂಡಾಳು ಅಂತ. ಟೀ ಹೊಟ್ಟೆಗೆ ಬಿದ್ದ ಮೇಲೆ ಸಮಾಧಾನ ಆಯ್ತು.
ಟೀ, ಮುಗಿಯುತ್ತಿದ್ದಂತೆ ಅವಳ ತುಟಿಗಳಿಗೆ ಬೇರೆ ಕೆಲಸ ಬೇಕಲ್ಲವೇ, ಮುತ್ತುಗಳಿಗೆ ಸಮಯ ಇದಲ್ಲವಾದ್ದರಿಂದ ಮತ್ತೆ ಕೆಲ ಪ್ರಶ್ನೆಗಳನ್ನೇ ಉದುರಿಸಿದಳು. "ಯಾವಾಗ ಹೊರಡ್ತೀರಿ?" ಅಂದ್ಲು. "ನಾಳೆ ನಾಡಿದ್ದು..." ಅಂದೆ. "ಮೊದಲೇ ಹೇಳೋಕೇನಾಗಿತ್ತು? ಹೀಗೆಲ್ಲ ದಿಢೀರನೆ ಹೊರಟು ನಿಂತರೆ ಹೇಗೆ?" ಅಂತ ತಿವಿದಳು, "ಅದನ್ನ ನಮ್ಮ ಮ್ಯಾನೆಜರಗೆ ಕೇಳು, ನನಗೂ ಇಂದೇ ಗೊತ್ತಾಗಿದ್ದು" ಅಂದೆ. "ಎಷ್ಟು ದಿನ?..." ಹೋಗೋದು ಹೋಗ್ತೀಯಾ ಬೇಗಾ ಆದರೂ ಬರ್ತೀಯ ಅಂತ ಕೇಳಿದಂತಿತ್ತು. "ಕೆಲವೇ ತಿಂಗಳು ಅಷ್ಟೇ" ಸಮಾಧಾನಿಸುವಂತೆ ಹೇಳಿದೆ. "ತವರುಮನೆಗೆ ನಾಲ್ಕು ದಿನ ಹೋದ್ರೆ ಎಷ್ಟೋ ದಿನಗಳಾದಂತೆ ಅನಿಸತ್ತೆ, ಕೆಲವೇ ತಿಂಗಳು ಅಂತ ಏನು ಸಲೀಸಾಗಿ ಹೇಳ್ತೀರಾ ನೀವು" ಅಂತ ಭಾವುಕಳಾದಳು. "ಅದಕ್ಕೆ ಯೋಚ್ನೆ ಮಾಡ್ತಾ ಇದೀನಿ ಅಲ್ಲೊಂದು ಟೆಂಪರರಿ ಮದುವೆ ಆದ್ರೆ ಹೇಗೆ ಅಂತಾ" ಅಂತ ಹೇಳಿ ನಗಿಸಿದ್ರೆ, "ಹ್ಮ್ ಒಂದು ಕೆಂಪು ಟೊಮ್ಯಾಟೋ ಹಣ್ಣಿನಂತಾ ಹುಡುಗಿ ಸಿಕ್ರೆ ನೋಡಿ..." ಅಂತ ಮತ್ತೆ ತುಂಟಾಟಕ್ಕಿಳಿದಳು. "ರೀ... ಅಷ್ಟು ದಿನಾ ಹೋಗ್ತಾ ಇದೀರಾ, ಪಕ್ಕದಮನೆ ಪದ್ದುನಾ ಮಿಸ್ ಮಾಡ್ಕೊತೀರ ಪಾಪ..." ಅಂದ್ಲು. ತನ್ನ ಮಿಸ್ ಮಾಡ್ಕೊತೀನಾ ಇಲ್ವಾ ಅನ್ನೋದು ಕೇಳದಿದ್ದರೂ ಪರವಾಗಿಲ್ಲ ಪದ್ದು ಬಗ್ಗೆ ಕೇಳದೆ ಇರಲಾರಳು ನನ್ನಾಕೆ. "ಪದ್ದುಗೆ ಹೇಗೆ ಹೇಳೋದು ಅನ್ನೋದೇ ಚಿಂತೆ ಆಗಿದೆ ನಂಗೆ" ಅಂತಿದ್ದಂಗೆ, ಇಂಥ ವಿಷಯ ಎಲ್ಲ ಹೇಳಿ ಪದ್ದು ಹೊಟ್ಟೆ ಉರಿಸೋದರಲ್ಲಿ ತಾನೇ ಮೇಲು ಅನ್ನುವಂತೆ "ನಾನಿದೀನಲ್ಲ, ಇಂಥಾ ಚಾನ್ಸ್ ಹೇಗೆ ಮಿಸ್ ಮಾಡ್ಲಿ" ಅಂತ ಎದ್ದೊಡಿದಳು. ಇನ್ನು ಪದ್ದು ಜತೆ ಘಂಟೆ ಕಾಲ ಮಾತಾಡಿ, ಪದ್ದು ಹೊಟ್ಟೇಲಿ ಖಾರ ಕಲಿಸಿ ಇಟ್ಟು ಬರಲಿಲ್ಲ ಅಂದ್ರೆ ಕೇಳಿ.
ಊರಲ್ಲಿ ಎಲ್ರಿಗೂ ಫೋನು ಮಾಡಿ ಹೇಳಿದ್ದಾಯ್ತು, ಅಜ್ಜಿಗೆ ಭೇಟಿ ಮಾಡಿ "ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟೀದೀನಿ" ಅಂದ್ರೆ, ಅಷ್ಟರಲ್ಲೇ ಮನೆಕೆಲಸದ ಪಾರಮ್ಮಜ್ಜಿ "ಸಣ್ಣ ಪರಾನ್ಸಿಸ್ಕೋಕ ಹೊರಟೀ.. ನಮ್ಮಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಂಗ್ ಅಲ್ಲಿ ಸಣ್ಣ ಪರಾನ್ಸಿಸ್ಕೋ, ದೊಡ್ಡ ಪರಾನ್ಸಿಸ್ಕೋ ಅದಾವೇನು" ಅಂತ ಕೇಳಬೇಕೆ. ನಮ್ಮಜ್ಜಿ "ಅಲ್ಲಿ ಕನ್ನಡ ಮಾತಾಡ್ತಾರೆನ್ ಪಾರಮ್ಮ, ಎಲ್ಲ ಇಂಗ್ಲೀಸ್ ಅಲ್ಲಿ, ಅದ ಇಂಗ್ಲೀಸ್ ಹೆಸರ ಇರಬೇಕ" ಅಂತ ತಿಳಿಹೇಳಿದಳು. "ಅದ ಸ್ಪಾನಿಶ್ ಹೆಸರ" ಅಂದೆ. ತನ್ನ ಬಗ್ಗೆ ಹೇಳಿಕೊಳ್ಳಲೇ ಕಾದಿದ್ದನೇನೋ ಅನ್ನುವಂತೆ ವಿದೇಶ ಪ್ರಯಾಣ ಮಾಡಿದ್ದ ದೊಡ್ಡಪ್ಪನ ಮಗ ತನ್ನ ವಿದೇಶ ಜ್ಞಾನ ತೆರೆದಿಟ್ಟ, ಅಲ್ಲಿ ಬಗ್ಗೆ ಎಲ್ಲ ಹೇಳತೊಡಗಿದ. ಅವರಿಗೆ ಅವನನ್ನ ಜತೆ ಮಾಡಿ ಮಾತಾಡಲು ಬಿಟ್ಟು ಬಂದರೆ ಪಾರಮ್ಮಜ್ಜಿ ಮುಗ್ಧ ಪ್ರಶ್ನೆ ನನಗೆ ನನ್ನಾಕೆಗೆ ನಗೆ ಬುಗ್ಗೆ ಉಬ್ಬರಿಸಿತ್ತು...
ಅದೊಂದು ದಿನ ಹೊರಡುವ ಸಮಯ ಬಂದೇ ಬಿಟ್ಟಿತು, ನಮ್ಮೂರಲ್ಲಿ ಬೆಂಗಳೂರಿಗೆ ಹೊರಟರೇ ಸಾಕು ಆ ಹೈಟೆಕ್ ಬಸ್ ವರೆಗೆ ಬೀಳ್ಕೊಡಲು ಸಹ ಕುಟುಂಬ ಪರಿವಾರ ಸಮೇತರಾಗಿ ಬರುವಾಗ... ಇನ್ನು ವಿದೇಶಕ್ಕೆ ವಿಮಾನದಲ್ಲಿ ಅಂದ್ರೆ ಕೇಳಬೇಕೆ... ಅಪ್ಪ ಅಂತೂ... "ಬೆಂಗಳೂರಿನವರೆಗೆ ಎಲ್ರಿಗೂ ಒಂದು ಬಸ್ ಮಾಡಿಕೊಂಡು ಬರಬೇಕಾಗತ್ತೆ ನಿನ್ನ ವಿದೇಶಕ್ಕೆ ಬೀಳ್ಕೊಡಲು" ಅಂತ ನಗಾಡಿದ್ದರು. ವಿದೇಶಕ್ಕೆ ಹೊರಟರೆ ಸಾಕು ದಿನಪತ್ರಿಕೆಯಲ್ಲಿ ಫೋಟೋ ಹಾಕಿ ಶುಭಾಶಯ ಬೇರೆ ಕೋರುತ್ತಾರೆ. ಅಲ್ಲೇನೋ ಒಂದು ಹೆಮ್ಮೆ, ಪ್ರೀತಿ ಅದಕ್ಕೆ ಏನೂ ಹೇಳಲಾಗಲ್ಲ... ಅಂತೂ ಎಲ್ಲ ಟಿಕೆಟ್ಟು ತೆಗೆದುಕೊಂಡವರ ಫೋಟೋಗಳ ಮಧ್ಯೆ ನನ್ನ ಫೋಟೋ ಕೂಡ ರಾರಾಜಿಸಿತ್ತು. ಎಲ್ಲ ಟಿಕೆಟ್ಟು ತೆಗೆದುಕೊಂಡವರು ಅಂದ್ರೆ, ಸತ್ತು ಸ್ವರ್ಗಕ್ಕೆ ಟಿಕೆಟ್ಟು ತೆಗೆದುಕೊಂಡವರು, ಇಲ್ಲ ಚುನಾವಣೆ ಪಾರ್ಟಿ ಟಿಕೆಟ್ಟು ತೆಗೆದುಕೊಂಡವರು, ವಿದೇಶಕ್ಕೆ ವಿಮಾನದ ಟಿಕೆಟ್ಟು ತೆಗೆದುಕೊಂಡವರು ಎಲ್ಲರನ್ನೂ ಸೇರಿಸಿ ದಿನಪತ್ರಿಕೆಯವರು ಒಂದೇ ಕಡೆ ಕ್ಲಾಸಿಫೈಡ್ ಹಾಕಿರುವುದರಿಂದ, ಹಾಗಂದರೇ ಸರಿಯೇನೋ. ಅಮ್ಮ ನನ್ನಾಕೆ ಸೇರಿ ಬ್ಯಾಗು ಒತ್ತರಿಸಿ ತುಂಬಿಯಾಗಿತ್ತು, ನಾ ಅಡಿಗೆ ಮಾಡಿಕೊಂಡು ತಿನ್ನುವುದು ಅಷ್ಟರಲ್ಲೇ ಇದೆ ಅಂತ ಮ್ಯಾಗಿ ನೂಡಲ್ಸ್ ಪ್ಯಾಕೆಟ್ಟು ಕೂಡ ಸ್ಥಾನ ಆಕ್ರಮಿಸಿಕೊಂಡಿದ್ದವು, ಅಲ್ಲಿ ತೂಕದ ಮಿತಿಯಿದೆ ಎಲ್ಲ ಹೊತ್ತುಕೊಂಡು ಹೋಗಲಾಗಲ್ಲ ಅಂತ ತಿಳಿಹೇಳಿ ಕೆಲ ಸಾಮಗ್ರಿ ಎತ್ತಿಟ್ಟು ಪ್ರೀತಿಯ ಭಾರ ಕಮ್ಮಿ ಮಾಡಿಕೊಳ್ಳುವ ಹೊತ್ತಿಗೆ ನನಗೆ ಸಾಕಾಗಿತ್ತು. ಅಮ್ಮನಿಗೋ ನನ್ನ ಊಟದ ಚಿಂತೆ, "ಹಣ್ಣು ಸಿಕ್ರೆ ತಿನ್ನು, ಬ್ರೆಡ್ಡು ಎಲ್ಲ ಸಿಗತ್ತಂತೆ ಅಲ್ಲಿ" ಹೇಳುತ್ತಲೇ ಇದ್ದಳು.
ನಿಲ್ದಾಣದಲ್ಲಿ ಬೀಳ್ಕೊಡಲು ನಿಂತಾಗ, ಅದೇ ವಾರ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಮಂಗಳೂರಿನ ವಿಮಾನ ಅಪಘಾತ ಅಮ್ಮನ ಧೃತಿಗೆಡಿಸಿತ್ತು. "ವಿಮಾನ ಸೇಫ್ ಇರತ್ತಲ್ಲ" ಅಂತ ಸಂಕೊಚದಲ್ಲೇ ಕೇಳಿದ್ದಳು. ನನ್ನಾಕೆ "ಅತ್ತೆ, ಅಲ್ಲಿ ವಿದೇಶದಲ್ಲಿ ನಿಲ್ದಾಣ ಎಲ್ಲ ಸರಿ ಇರ್ತವೆ ಏನಾಗಲ್ಲ ಬಿಡಿ" ಅಂತ ಸಮಾಧಾನ ಹೇಳುತ್ತಿದ್ದರೂ ಅವಳ ಮುಖದಲ್ಲೂ ಆತಂಕದ ಗೆರೆಗಳು ಮೂಡಿದ್ದವು... ಅಪ್ಪ ದೂರದಲ್ಲಿ ನಿಂತು ನಂಬಿಕೆ ಇದೆ ಬಿಡು.. ಹೋಗಿ ಬಾ ಏನಾಗಲ್ಲ ಅಂತ ಹೇಳಿದಂತಿತ್ತು... ಅಮ್ಮ "ದೇವರ ನೆನೆಯುತ್ತಾ ಕೂತು ಬಿಡು ಏನಾಗಲ್ಲ" ಅಂತಿದ್ದಳು. "ಸುತ್ತಲೂ ಸುಂದರ ಅಪ್ಸರೆಯಂತಾ ಗಗನಸಖಿಯರು ಸುತ್ತುವರೆದಿದ್ದರೆ ದೇವರ ಧ್ಯಾನ್ ಎಲ್ಲಿ ಮಾಡೋಕಾಗತ್ತೆ" ಅಂತಂದು ಎಲ್ಲರನ್ನೂ ನಗಿಸಿ ಪರಿಸ್ಥಿತಿ ತಿಳಿಯಾಗಿಸಿದೆ. ನನ್ನಾಕೆ, "ರೀ ಯಾವ ಗಗನಸಖಿಯನ್ನೂ ನೋಡಲ್ಲ, ಅಂತ ಪ್ರಮಾಣ ಮಾಡ್ರೀ" ಅಂತ ಗಂಟು ಬಿದ್ದಿದ್ದಳು.
ಹಾಂಗಕಾಂಗ್ ಮೂಲಕ ಪ್ರಯಾಣಿಸುತ್ತಿದ್ದರಿಂದ, ಪಕ್ಕದ ಸೀಟಿನಲ್ಲಿ ಹಾಂಗಕಾಂಗ್ ಹುಡುಗಿ ಕೂರಬೇಕೆ!... ನನ್ನಾಕೆಗೆ ಕಾಡಿಸಲು ಒಳ್ಳೆ ವಿಷಯ ಸಿಕ್ತು ಅಂದುಕೊಂಡೆ, ಅವಳೋ ಕಣ್ಣು ತೆರೆದಿದ್ದಳೋ ಇಲ್ಲ ಮುಚ್ಚಿದ್ದಳೋ ಒಂದೂ ತಿಳಿಯದು, ಕಣ್ಣುಗಳೇ ಅಷ್ಟು ಚಿಕ್ಕವು. ನನಗೂ ಎಲ್ಲ ಹೊಸದು... ಕಿಟಕಿ ತೆರೆ ತೆರೆದು ಮೋಡಗಳ ನೋಡುತ್ತಿದ್ದರೆ ಆ ಪುಟ್ಟ ಕಣ್ಣುಗಳಲ್ಲೇ ತನಗೆ ಕಿರಿಕಿರಿಯಾಗುತ್ತಿದೆಯಂತ ಹೇಳಿದ್ದಂತೂ ಅಚ್ಚರಿಯೇ ಸರಿ. ಸರಿ ಕಿಟಕಿ ಮುಚ್ಚಿ ಕೂತೆ, ನಮ್ಮ ಸಿಟಿ ಬಸ್ಸಿನಂತಾಗಿದ್ದರೆ ಗಾಳಿ ಬರಲೆಂದು ತೆರೆದಿದ್ದೇನೆ ಅಂತ ಹೇಳಬಹುದಿತ್ತೇನೋ ಆದರೆ ಇಲ್ಲಿ ಅದೂ ಸಾಧ್ಯವಿರಲಿಲ್ಲ. ಅಷ್ಟರಲ್ಲೇ ಅಪ್ಸರೆ ಬಂದು.. ಅಲ್ಲಲ್ಲ ಗಗನಸಖಿ ಬಂದು, ತಿನ್ನಲು ತಿಂಡಿ ತಂದಿಟ್ಟಳು. ಅವಳಿಗೆ ವೆಜಿಟೇರಿಯನ್, ಸಸ್ಯಹಾರಿ ಊಟ ಕೇಳಿದರೆ ಮೊದಲೇ ಟಿಕೆಟ್ಟಿನಲ್ಲಿ ನಮೂದಿಸಿರಬೇಕೆಂದಳು, ಟಿಕೆಟ್ಟು ಮಾಡಿದ ಏಜೆಂಟ ಶಪಿಸಿದೆ, ಒಂದು ಮುಗುಳ್ನಗೆ ಇತ್ತಿದ್ದಕ್ಕೆ, ಕೊನೆಗೆ ಹೇಗೋ ಒಂದು ಸಸ್ಯಹಾರಿ ಊಟ ಸಿಕ್ತು, ನಿಜಕ್ಕೂ ಸಸ್ಯಾಹಾರಿಯೇ... ಸಸ್ಯಗಳನ್ನು ಹಾಗೇ ಕತ್ತರಿಸಿ ಇಟ್ಟಿದ್ದರು... ವಿಧಿಯಿಲ್ಲದೇ ಪಾಲಿಗೆ ಬಂದಿದ್ದು ತಿಂದದ್ದಾಯ್ತು.
ಸ್ಯಾನ್ ಫ್ರಾನ್ಸಿಸ್ಕೋಗೆ ಬರುತ್ತಿದ್ದಂತೇ ಸಮುದ್ರ ಇನ್ನೂ ಹತ್ತಿರ ಹತ್ತಿರವಾಗುತ್ತ ಬಂದು ಕಾಣತೊಡಗಿತು, ಅಪ್ಪಿ ತಪ್ಪಿ ಅವಘಡವಾಗಿ ಎಲ್ಲಾದ್ರೂ ದೂರ ದ್ವೀಪದಲ್ಲಿ (ಐಲ್ಯಾನ್ಡ) ಹೋಗಿ ಬಿದ್ರೆ ಅಂತ ಯೋಚಿಸಿದೆ, ಹಾಗೇನಾದರೂ ಆದ್ರೆ ಅಪ್ಪಾ ದೇವ್ರೇ ಇರೋ ನಾಲ್ಕು ಗಗನಸಖಿಯರಲ್ಲಿ ಯಾರನ್ನಾದರೂ ನನ್ನ ಜತೆ ಮಾಡು ಅಂತ ಬೇಡಿಕೊಂಡೆ! ಅದನ್ನ ನನ್ನಾಕೆಗೆ ಹೇಳಿ ಉಗಿಸಿಕೊಂಡೆ ಕೂಡ... ಅಂತೂ ಇಂತೂ ಅಮೇರಿಕ ತಲುಪಿಯಾಗಿತ್ತು. ಹೋಟೆಲಿಗೆ ಬಂದು ಇಳಿದುಕೊಳ್ಳುತ್ತಿದ್ದಂತೆ ನನ್ನಾಕೆ ಆಗಲೇ ನಾಲ್ಕು ಸಾರಿ ಫೋನು ಮಾಡಿಯಾಗಿತ್ತು, ಕೊನೆಗಂತೂ "ಇದೇನು ನಮ್ಮ ಸಿಟಿ ಬಸ್ನಲ್ಲಿ ಮೆಜೆಸ್ಟಿಕ್ ಬಂದಂತೆ ಅನ್ಕೊಂಡಿದೀಯ" ಅಂದ್ರೆ, "ರೀ ಹೋಟೆಲ್ ರಿಸೆಪ್ಶನಿಸ್ಟ್ ನೋಡೋಕೆ ಹೇಗಿದಾಳೆ? ಕೇಳೋಕೆ ದ್ವನಿ ಸೂಪರಾಗಿದೆ..." ಅಂತ ಶುರುವಿಟ್ಟುಕೊಳ್ಳಬೇಕೆ... "ಛೆ ನಾನು ಅವಳ್ನಾ ನೋಡಲೇ ಇಲ್ವೆ" ಅಂದೆ.. "ನಂಬಿದೆ.." ಅಂದ್ಲು, ಇಂಥ ಸುಳ್ಳುಗಳೆಲ್ಲ ಅವಳು ನಂಬಿದಂತೆಯೇ... ವಿದೇಶದಲ್ಲಿದ್ದರೂ ನಮ್ಮ ತುಂಟಾಟಗಳಿಗೇನೂ ಕೊನೆಯಿಲ್ಲ ಬಿಡು ಅನಿಸ್ತು...
ವಿದೇಶ ಪ್ರಯಾಣ ವಿಮಾನ ಯಾನ ಒಂಥರಾ ಹೊಸ ಅನುಭವ, ಹೊಸ ದೇಶ, ಹೊಸ ಜನ... ಹೊಸಾ ಭಾಷೆ... ಎಲ್ಲ ಹೊಸತು... ಮೊಟ್ಟ ಮೊದಲ ಪ್ರಯಾಣಕ್ಕೆ ಸ್ವಲ್ಪ ತಯ್ಯಾರಿ ಅತ್ಯಗತ್ಯ, ಯಾರಾದರೂ ಮೊದಲೇ ಹೋಗಿ ಬಂದವರನ್ನು ಕೇಳಿ ತಿಳಿಯುವುದೊಳಿತು. ಎಲ್ಲಿ ಬ್ಯಾಗ ಕೊಡಬೇಕು, ಎಲ್ಲಿ ಯಾವ ಸೈಜ್ ಬ್ಯಾಗ ಇರಬೇಕು, ಎಷ್ಟು ತೂಕಕ್ಕೆ ಅನುಮತಿಯಿದೆ, ಏನೇನು ತೆಗೆದುಕೊಂಡು ಹೋಗಬಹುದು, ಎಲ್ಲ ಗೊತ್ತಿದ್ದರೆ ಒಳ್ಳೆಯದು ಇಲ್ಲವಾದರೆ ಅನಗತ್ಯ ಗೊಂದಲ ಉಂಟಾಗುತ್ತದೆ. ಕೆಲ ಸಲಹೆ ಕೊಡುವುದಾದರೆ ಕ್ಯಾಬಿನ್ ಬ್ಯಾಗ್ನಲ್ಲಿ ಒಂದು ಜತೆ ಬಟ್ಟೆ ಇರಲಿ, ಕೆಲವೊಮ್ಮೆ ಚೆಕ್ ಇನ್ ಮಾಡಿದ ಬ್ಯಾಗ ಬರುವುದು ತಡವಾಗಬಹುದು. ತೀರ ಸಣ್ಣ ಪುಟ್ಟ ಖಾಯಿಲೆಗಳಿಗೆಲ್ಲ ಸೇರಿಸಿ ವೈದ್ಯರ ಪ್ರಿಸ್ಕ್ರಿಪ್ಶನ್ ಸಮೇತ ಕೆಲ ಮಾತ್ರೆ ಗುಳಿಗೆ ತೆಗೆದುಕೊಳ್ಳುವುದು ಉಚಿತ. ವಿಮಾನ ಎತ್ತರದಿಂದ ಇಳಿಯುವಾಗ ವಾತಾವರಣದ ಒತ್ತಡದಿಂದಾಗಿ ಅಸಾಧ್ಯ ಕಿವಿ ನೋವು ಕಾಣಿಸಿಕೊಳ್ಳುವುದುಂಟು, ಬಬಲ್ ಗಂ ಅಗಿಯುವುದು ಇಲ್ಲ, ಸುಮ್ಮನೆ ಬಾಯಿ ತೆರೆದು ಮುಚ್ಚಿ ಆಕಳಿಸಿದಂತೆ ಮಾಡಿದರೆ ಸ್ವಲ್ಪ ಸರಿ ಹೋಗುತ್ತದೆ. ಜೆಟ್ ಲ್ಯಾಗ್ ಅಂತ ಕೆಲ ದಿನ ಹಗಲೆಲ್ಲ ನಿದ್ರೆ ಬರುವುದು, ರಾತ್ರಿ ನಿದ್ರೆ ಬರದೆ ಇರುವುದು ಸಾಮಾನ್ಯ. ಎರಡು ದಿನ ಹಗಲು ಒತ್ತಾಯದಿಂದ ಎಚ್ಚರಿದ್ದರೆ ಎಲ್ಲ ಸರಿಯಾಗುತ್ತದೆ, ತಪ್ಪಿ ಹಗಲು ಸಮಯವಿದೆ ನಿದ್ರೆ ಬರುತ್ತಿದೆ ಎಂದು ಮಲಗಿದರೆ ಅಷ್ಟೇ, ಹೊಂದಾಣಿಕೆ ಕಷ್ಟವಾಗುತ್ತದೆ. ಏನೇ ಹೇಳಿ ಮೊದಲ ಸಾರಿ ಒಂಥರಾ ಏನೋ ಖುಷಿಯಾಗಿರುತ್ತದೆ...
ಅಂತೂ ನನ್ನಾಕೆ ನನ್ನ ಏಳಿಸುವುದರಲ್ಲಿ ಸಫಲಳಾಗಿದ್ದಳು , ಬಾತ್ ಟಬ್ಬಿನಲ್ಲಿ ಬಿದ್ದುಕೊಂಡು ಸ್ವಲ್ಪ್ ಬಾತ್ ಚೀತ್... ಖಾಸ್ ಬಾತ್ ಮಾಡಿಯಾಯ್ತು... ಮತ್ತೇನೂ ಮಾಡಲಾಗದ ನಮ್ಮಂಥವರಿಗೆ ಅಂಥ ತಯ್ಯಾರಾದ ಮ್ಯಾಗಿ ನೂಡಲ್ಸು ಕುದಿಸಿ ಮಾಡಿಟ್ಟಿದ್ದು ತಿಂದೆ. ನಾಲ್ಕು ಬ್ರೆಡ್ಡು ಹಸಿಬಿಸಿ ಬೇಯಿಸಿ ಬ್ಯಾಗಿಗೆ ಹಾಕಿಕೊಂಡು... ಆಫೀಸಿಗೆ ಹೊರಟು ನಿಂತರೆ ಅರೆ ತೆರೆದ ಬಾಗಿಲಲ್ಲಿ ತುಸು ಬಾಗಿ ನಿಂತು ಕೈಬೀಸುವ ನನ್ನಾಕೆ ನೆನಪಾದಳು... ತುಸು ದೂರ ಹೋಗುತ್ತಿದ್ದಂತೆ ಕಾಣುತ್ತಿದ್ದ ಪಕ್ಕದ ಮನೆ ಪದ್ದು ಕೂಡ ನೆನಪಾದಳು.. ಪಕ್ಕದಮನೆ ಪದ್ದು ಇಲ್ಲಾಂದ್ರೆ ಏನಂತೆ?... ಮುತ್ತಿನಂತಾ ಮೂವತ್ತೆರಡೂ ಹಲ್ಲುಗಳು ಕಾಣುವಂತೆ ಮುಗುಳ್ನಗುತ್ತಿದ್ದ ಪಕ್ಕದ ರೂಮ್ ಪರ್ಲ್ ಕಾಣಿಸಬೇಕೆ... ಅವಳು ಯಾರಂತ ಕೇಳಬೇಡಿ... ಯಾರೋ ಏನೋ... ಕಾಣಿಸಿದಾಗೊಮ್ಮೆ ಮುಗುಳ್ನಕ್ಕು ಗುಡ್ ಮಾರ್ನಿಂಗ್ ಹೇಳೋ ಪಕ್ಕದ ರೂಮ್ ಹುಡುಗಿ, ಮುತ್ತಿನಂತ ಹಲ್ಲು ನೋಡಿ ಪರ್ಲ ಅಂತ ಹೆಸರಿಟ್ಟಿದೀನಿ... ನಾವು ಎಲ್ಲಿದ್ರೆನಂತೆ ನಾವು ನಾವೇ.. Weದೇಶದಲ್ಲಿ ಹೀಗೆ ಮತ್ತೆ ಪಕ್ಕದ ರೂಮ್ ಪರ್ಲ್ ಗೆ ಹಾಯ್ ಹೇಳ್ತಾ ಮತ್ತೆ ಸಿಕ್ತೀನಿ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/wedesha.pdfಸಧ್ಯ ವಿದೇಶದಲ್ಲಿರುವುದರಿಂದ,ಸಾಕಷ್ಟು ಸಮಯ ಸಿಗದೇ ಬಹಳ ದಿನಗಳಿಂದ ಬರೆಯಲಾಗಿರಲಿಲ್ಲ ಅದಕ್ಕೆ ಕ್ಷಮಿಸಿ, ಪ್ರತಿಕ್ರಿಯೆಗಳಿಗೂ ಉತ್ತರಿಸದೇ ತಿಂಗಳಾಗಿದೆ... ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ... ಓದುತ್ತಿರಿ.. PDF ಪ್ರತಿ ಕೂಡ ಸಧ್ಯ ಮಾಡಲಾಗಿಲ್ಲ, ಅಲ್ಲಿಯವರೆಗೆ ಬ್ಲಾಗಿನಲ್ಲೇ ಲೇಖನ ಓದಿ...
ಹಸಿರು ಕಾನನದೂರಿನಿಂದ...
ನಿಮ್ಮ ಪ್ರಭು..
Updated Aug/8/2010
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Wednesday, July 7, 2010
WEದೇಶ - ನಾನು ನನ್ನಾಕೆ & ವಿದೇಶ...
Sunday, April 25, 2010
ಮನೆ ಮ(ಮು)ದ್ದು...
ಮಲಗಿದ್ದೆ, ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ. ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ. ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ. ತೀರ ಕ್ಷೀಣದನಿ ಕೇಳಿತು "ಗುಂಡುಮರಿ, ಗುಂಡುಮರಿ..." ಅಂತ, ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ. "ಎದ್ದೇಳೊ ಗುಂಡುಮರಿ" ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು. ಅವಳು ಹೀಗೇನೆ, ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು, ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು "ಊಂ" ಅಂತ ಊಳಿಟ್ಟೆ, ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ. ಬೆಡ್ರೂಮಿಗೆ ಬಂದು, ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ, ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು, "ಹತ್ತುಗಂಟೆ" ಅಂದು ಮುಗುಳ್ನಕ್ಕು, ಹೊರ ಹೋದಳು. ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು. ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು, ಬೆರಳಿಗೆ ಕಟ್ಟಿದ್ದ "ಪೌಟಿಸ್" ಎಲ್ಲಿ, ಎಲ್ಲೊ ಬಿದ್ದು ಹೋಗಿದೆ, ಪೌಟಿಸ್! ಏನದು ಅಂತಾನಾ... ಹ್ಮ್ ಅದೊಂದು ಮನೆ ಮದ್ದು.
ಸ್ವಲ್ಪ ಫ್ಲಾಶ್ಬಾಕ್ ಹೋಗೊಣ್ವಾ, ನಿನ್ನೆ ಕೂಡ ರಜೆ ಇತ್ತು, ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ. ಸುಮ್ನೇ ಕೂತಿದ್ದೆ, ನಮಗೆ ರಜೆ ಇದ್ರ್ಏನಂತೆ, ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ. ಮೇಜು, ಟೀವಿ, ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು. ಹೇಗೂ ಖಾಲಿ ಕೂತಿದೀನಿ, ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ, "ನಂಗೆ ಕೊಡು ನಾ ಮಾಡ್ತೀನಿ" ಅಂದೆ. "ಏನು ಇಂಜನೀಯರ್ ಸಾಹೇಬ್ರು, ಈಮೇಲು, ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ" ಅಂತ ಹುಬ್ಬು ಹಾರಿಸಿದಳು. "ರಜಾ ದಿನಾ ಯಾವ ಈಮೇಲು, ಇನ್ನ ಫೀಮೇಲು ಅಂದ್ರೆ ನೀನೇ, ನಿನ್ನೇ ನೋಡ್ತಾ ಕೂತಿದ್ದಾಯ್ತು. ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ" ಅಂತ ಗುರಾಯಿಸಿದೆ. "ಹ್ಮ್ ರಜಾ ದಿನಾನೇ ಅಲ್ವಾ; ಪರ್ಸ್ssss...ನಲ್ ಮೇಲ್ ಚೆಕ್ ಮಾಡೋದು. ಫೀಮೇಲು ನಾನೋಬ್ಳೆನಾ, ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ, ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ... ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ, ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು..." ಅಂತ ತಿರುಗಿಬಿದ್ಲು. ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು. ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು, ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ, ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ.
ಟೀವೀ ಫ್ರಿಝ್ ಒರೆಸುವ ಹೊತ್ತಿಗೆ, ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು. "ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ" ಅಂತ ಹುಸಿನಗೆ ಬೀರಿದಳು, ಈ ಹುಡುಗೀರು ನೋಡಿ ನಕ್ಕರೆ, ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ. ಅದೇ ಆಯ್ತು, ಅವಳ ಮುಂದೆ ಸ್ಟೈಲ್ ಮಾಡಿ, ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ, ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ, ನೇರ ಬೆರಳಲ್ಲಿ ತೂರಿಕೊಂಡಿತು. ಚಿಟ್ಟನೆ ಚೀರಿದೆ...
"ಅದಕ್ಕೇ ನಿಮಗೆ ಹೇಳಿದ್ದು, ಬೇಡ ಅಂತ, ನೀವೆಲ್ಲಿ ಕೇಳ್ತೀರಾ, ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ, ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು..." ಸಹಸ್ರನಾಮಾರ್ಚನೆ ನಡೆದಿತ್ತು. ಸಿಟ್ಟು ಅಂತೇನು ಅಲ್ಲ, ಅದೊಂಥರಾ ಕಾಳಜಿ, ಅದಕ್ಕೇ ಕೋಪ, ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ. ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು. ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು, ಮುರಿದು ಅರ್ಧ ಮಾತ್ರ ಹೊರಬಂದಿತ್ತು, ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು. ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ, "ನೋವಾಗ್ತಾ ಇದೇನಾ" ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು. ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ.
ರಕ್ತ ಬರುವುದು ಕಮ್ಮಿಯಾಗಿತ್ತು, "ಸ... ಸ್.. ಸ್" ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು. ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್ಫ್ಯೂಸ್ ಆಯ್ತು. ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು. "ನಡೀರಿ ಡಾಕ್ಟರ್ ಹತ್ರ ಹೋಗೋಣ" ಅಂದ್ಲು, "ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ, ಕಮ್ಮಿಯಾಗತ್ತೆ ಬಿಡು" ಅಂದೆ. ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ, ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು, ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು. "ರೀ ಅತ್ತೆಗೆ ಫೋನ್ ಮಾಡ್ಲಾ" ಅಂದ್ಲು, "ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು" ಅಂದ್ರೆ. "ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ, ಪ್ರಯತ್ನಿಸಿ. ನಾಳೆ ಡಾಕ್ಟರ್ ಹತ್ರ ಹೋದರಾಯ್ತು" ಅಂತ ಒಳ್ಳೇ ಐಡಿಯಾ ಕೊಟ್ಲು.
ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್... ಫೋನು ಕೆಳಗಿಟ್ಟವಳೇ, "ಅಮ್ಮ ಒಳ್ಳೆ ಮದ್ದು ಹೇಳಿದಾರೆ, ಏನ್ ಗೊತ್ತಾ, ಅದರ ಹೆಸ್ರು ಪೌಟಿಸ್ ಅಂತೆ, ಮಾಡೋದು ಸಿಂಪಲ್... ಒಂದು ಸಾರು ಹಾಕೊ ಸೌಟಿನಲ್ಲಿ, ಇಲ್ಲ ಚಿಕ್ಕ ಪಾತ್ರೇಲಿ, ಸ್ವಲ್ಪ ಹಾಲು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ, ಬಿಸಿ ಬಿಸಿ ಉಂಡೆ ಹಾಗೆ ಮಾಡಿ, ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ, ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ" ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು. ನಾನೂ ಅವಳ ಹಿಂಬಾಲಿಸಿದೆ. "ಬಿಸಿ ಬಿಸಿದೇ ಕಟ್ಟಬೇಕಾ" ಅಂತ ಆತಂಕದಲ್ಲಿ ಕೇಳಿದ್ರೆ. "ಸುಡು ಸುಡು ಹಾಗೆ ಕಟ್ಟಬೇಕಂತೆ, ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ" ಅಂತ ಇನ್ನೂ ಹೆದರಿಸಿದ್ಲು.
ಇದೊಳ್ಳೆ ಫಜೀತಿ ಆಯ್ತಲ್ಲ, ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು, ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ, "ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್" ಅಂತ ಹಲ್ಲು ಗಿಂಜಿದೆ. "ಅತ್ತೆ ಹೇಳಿದ ಮೇಲೆ ಮುಗೀತು, ಒಳ್ಳೆ ಮದ್ದೇ ಇರತ್ತೆ, ಏನಾಗಲ್ಲ ಸುಮ್ನಿರಿ" ಅಂತ ಭರವಸೆ ಕೊಟ್ಲು. "ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ, ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ" ಅಂತ ಗೋಗರೆದೆ. ವಾರೆ ನೋಟದಲ್ಲಿ ನೋಡಿ, "ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ" ಅಂತ ಓಡಿಸಿದಳು. ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ.
ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ "ಡಾಕ್ಟರ್ ಹತ್ರಾನೇ ಹೋಗೋಣ ಕಣೇ" ಅಂತ ಮತ್ತೆ ಅವಳ ಮನವೊಲಿಸಲು ಹೋದೆ. "ಅತ್ತೆಗೆ ಫೋನು ಮಾಡ್ತೀನಿ ಈಗ, ಹೀಗೆ ಹಠ ಮಾಡ್ತಾ ಇದೀರಿ ಅಂತ" ಅಂತ ಧಮಕಿ ಹಾಕಿದ್ಲು. ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು, ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು. "ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ" ಅಂತ ಮತ್ತೆ ಮಾತಿಗಿಳಿದೆ. "ಆಹಾಹ್ ಏನ್ ರೂಪದರ್ಶಿ, ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು" ಅಂತ ಹೀಯಾಳಿಸಿದ್ರೆ. "ಹ್ಮ್, ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ" ಅಂತ ರೈಲು ಬಿಟ್ಟೆ. "ಗಲ್ಲ, ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ" ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು. ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ. "ಪ್ಲೀಜ್ ಕಣೆ, ಡಾಕ್ಟರ್ ಹತ್ರ ಹೋಗೊಣ, ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ, ಬೇಕಿದ್ರೆ ಪ್ರಮಾಣ್ ಮಾಡ್ತೀನಿ" ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ, ತಪ್ಪಿಸಿಕೊಂಡು "ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ, ಈವತ್ತು ಮನೆಮದ್ದೇ ಗತಿ, ನಾಳೆ ನೋಡೋಣ, ಕಡಿಮೆ ಆಗದಿದ್ರೆ ಡಾಕ್ಟರ್... ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ" ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ, ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ.
ಅವಳು ಅಡುಗೆ ಮಾಡಿದ್ದಾಯ್ತು, ಕೊನೆಸಾರಿ ಒಂದು ಪ್ರಯತ್ನ ಅಂತ, "ನೋವೆಲ್ಲ ಏನೂ ಇಲ್ಲ, ಎಲ್ಲಾ ಹೊರಟೊಯ್ತು, ನೋಡು" ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ. ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು, ನಗುತ್ತ "ಅಲ್ಲೇ ಕೂತಿರಿ, ಪೌಟಿಸ್ ಮಾಡಿ ತರ್ತೀನಿ" ಅಂತ ಹೋದಳು, ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ, ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ, ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ, ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು. ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು, ಹಲ್ಲು ಗಟ್ಟಿ ಹಿಡಿದು ಕೂತೆ, ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ. "ಕಣ್ಣು ಬಿಡಿ, ಏನಾಗಲ್ಲ" ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ. "ಏನೊ ಒಂದು ಬೆರಳಿಗೆ ಹಚ್ಚೋದು ತಾನೆ, ಕಣ್ಣು ಯಾಕೆ ತೆಗೆಯಬೇಕು, ನಂಗೆ ನೋಡೋಕಾಗಲ್ಲ, ಬೇಗ ಮೆತ್ತಿಬಿಡು" ಅಂದೆ. ಬೆರಳಿಗೆ ಟೋಪಿ ತೊಡಿಸಿದಂತೆ, ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು. ಹಿತವಾಗಿತ್ತು, ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ, ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ, ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ. ತುಟಿಯಗಲಿಸಿದೆ. "ನೋಡಿ ಇಷ್ಟೇ, ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ, ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ, ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು. ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ" ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು. ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ.
ಊಟಕ್ಕೆ ಅನ್ನ ಸಾರು ಬಡಿಸಿ, ಇಟ್ಟಳು. ಅವಳತ್ತ ನೋಡಿದ್ದಕ್ಕೆ "ಓಹ್ ನೋವಾಗಿದೆ ಅಲ್ವಾ" ಅಂತ ಕಲೆಸಿ ಚಮಚ ತಂದಿಟ್ಲು. ಇದೇ ಒಳ್ಳೆ ಸಮಯ ಅಂತ, ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ, ಕೈತುತ್ತು ತಿಂದೆ. ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ. "ನಾಲ್ಕೈದು ದಿನ ಹೀಗೇ ಕಟ್ಟು, ಚೆನ್ನಾಗಿ ಗುಣವಾಗ್ಲಿ" ಅಂದೆ, ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ. "ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ, ಡಾಕ್ಟರ ಹತ್ರ ಹೋಗಿ, ಕುಯ್ಯಿಸಿ ತೆಗೆಸಿ, ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ" ಅಂತ ನಾಟಕಕ್ಕೆ ತೆರೆ ಎಳೆದಳು. "ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ, ನಾಳೆ ಎಲ್ಲಾ ಸರಿ ಹೋಗುತ್ತೆ, ಅಮ್ಮ ಹೇಳಿದ ಮೇಲೆ ಸುಮ್ನೇನಾ" ಅಂತ ಸಂಭಾಳಿಸಿದೆ, ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ. ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ, ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ.
ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು, ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ, ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ. ಹಾಗಂತೆ ಗುಳಿಗೆ, ಸಿರಪ್ಪು, ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ, ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ. ಈ ಪೌಟಿಸ್ ನೋಡಿ... ಕಸ, ಗಾಜಿನ ಚೂರು, ಕಡ್ಡಿ ಏನೇ ಚುಚ್ಚಿದ್ರೂ, ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ. ಮಾರ್ಬಲ್ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ. ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ, ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು, ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು. ಬಾಯಿ ಹುಣ್ಣು, ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ, ಗಂಟಲ ಕೆರೆತ, ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ, ಒಂದೊ ಎರಡೊ. ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ, ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು.
ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ. ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು, ಹಾಗೇ ಊತ ಕೂಡ ಕಮ್ಮಿಯಾಗಿತ್ತು. ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು. "ಏನನ್ನತ್ತೆ ಬೆರಳು" ಅಂತ ಕುಷಲತೆ ಕೇಳಿದ್ಲು. "ಪೌಟಿಸ್ನ ಬಿಸಿಯಪ್ಪುಗೆ ಇನ್ನೂ ಬೇಕಂತೆ" ಅಂದೆ. "ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ" ಅಂದ್ಲು. "ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ" ಅಂದೆ ಖುಷಿಯಲ್ಲಿ. ಕೈಯಲ್ಲಿ ಕಪ್ಪಿಟ್ಟು, ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ, "ಮನೆ ಮದ್ದೇನೊ ಸಿಕ್ತು, ಮನೆ ಮುದ್ದು???"... ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು, ಅದೆಲ್ಲ ಬರೆಯೋಕೆ ಅಗಲ್ಲ, ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ, ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ...
ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/manemaddu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, April 11, 2010
ಅಪ್ಪಿಕೋ ಚಳುವಳಿ...
ಸುಮ್ಮನೇ ಕೂತಿದ್ದೆ, ಮಾತಿಲ್ಲದೇ... ಅವಳಿರುವಾಗ ಮಾತುಗಳಿಗೆ ಬರ ಬರಲು ಕಾರಣ ಮೊನ್ನೆ ಮೊನ್ನೆ ಜರುಗಿದ ಕದನ. ಇದೇನು ದೊಡ್ಡ ಪಾಣಿಪತ್ ಕದನವೇನಲ್ಲ, ಚಿಕ್ಕ ಕೋಳಿ ಕಲಹ. ಸುಖವಾಗಿದ್ದ ಸುಂದರ ಸಂಸಾರದಲ್ಲಿ ಇದೇನು ಸಮಸ್ಯೆ ಬಂತು ಅಂತಾನಾ, ಅದೇನು ದೊಡ್ಡ ಸಮಸ್ಯೆಯೇ ಅಲ್ಲ ಬಿಡಿ. ಆಗಾಗ ಹೀಗೆ ಚಿಕ್ಕ ಪುಟ್ಟ ಜಟಾಪಟಿಗಳು ಇರಲೇಬೇಕೆಂದು ಸುಮ್ಮನೆ ಕೂರದೆ ಕಾಲು ಕೆರೆದುಕೊಂಡು ಕಾಡಿಸಿ ಕೋಪ ಬರಿಸಿ ಕಿತ್ತಾಡಿಕೊಂಡುಬಿಡುವುದು. ಕದನದಲ್ಲೂ ಒಂಥರಾ ಖುಷಿಯಿದೆ ಅಂತ ಆಗಲೇ ಗೊತ್ತಾಗುವುದು. ಮೊನ್ನೆ ಆಗಿದ್ದು ಕೂಡಾ ಹೀಗೇ, "ತಿಳಿ ನೀಲಿ ಬಣ್ಣದ ಶರ್ಟ್ ಇತ್ತಲ್ಲ, ಎಲ್ಲೇ ಸಿಕ್ತಾ ಇಲ್ಲ" ಅಂತ ಕೂಗಿದ್ದಕ್ಕೆ, "ಹಳೆಯದಾಗಿತ್ತು ಅಂತ, ಪೇಂಟ್ ಮಾಡೊ ಹುಡುಗನಿಗೆ ಕೊಟ್ಟು ಬಿಟ್ಟೆ" ಅಂತ ಪಾಕಶಾಲೆಯಿಂದಲೇ ಹೇಳಿದ್ದಳು. ಮೊದಲೇ ಅದು ನನ್ನ ಮೆಚ್ಚಿನ ಶರ್ಟ ಅದನ್ನ ಹೀಗೆ ಕೊಟ್ಟಿದ್ದಾಳೆ ಅಂದರೆ ಸಿಟ್ಟು ಬಂದು ಬಿಟ್ಟಿತ್ತು, ಕೊಡುವ ಮೊದಲು ಒಂದು ಮಾತು ಕೂಡ ಕೇಳಿಲ್ಲವಲ್ಲ ಅನ್ನೋ ಬೇಸರ ಬೇರೆ. "ಯಾರೇ ಅದನ್ನ ಕೊಡು ಅಂತ ಹೇಳಿದ್ದು" ಅಂತ ದನಿ ಏರಿಸಿದ್ದೆ, ಅಡಿಗೆಯ ಖಾರದ ಘಾಟು ಮೂಗು ಸೇರಿ ಅವಳಿಗೂ ಕೋಪ ನೆತ್ತಿಗೇರಿ, "ಎಲ್ಲಿ ಹೊರಟರೂ ಅದನ್ನೇ ಹಾಕ್ಕೊಂಡು ನಿಲ್ತಾ ಇದ್ರಲ್ಲ, ಫೇವರಿಟ್ಟು ಫೇವರಿಟ್ಟು ಅಂತ... ಅದಕ್ಕೇ ಕೊಟ್ಟೆ" ಅಂತ ಚೀರಿದ್ದಳು. ಪಾಕಶಾಲೆಗೆ ಹೋಗಿ "ಇನ್ನೊಮ್ಮೆ ನನ್ನ ಶರ್ಟ್ ಮುಟ್ಟಿದ್ರೆ ನೋಡು" ಅಂತ ಎಚ್ಚರಿಕೆ ಕೊಟ್ಟು ಬಂದರೆ, ಹೊರಬಂದು ನನ್ನ ಶರ್ಟ್ ಒಮ್ಮೆ ಮುಟ್ಟಿದ್ದಲ್ಲದೇ ತೀಡಿ ಮುದ್ದೇ ಮಾಡಿ ಸುಕ್ಕಾಗಿಸಿ ಹೋಗಿದ್ದು ನೋಡಿ ಕುದ್ದು ಹೋದೆ. ಸಿಟ್ಟಿನಲ್ಲಿ ನೋಡಿ ಶೀತಲ ಸಮರಕ್ಕೆ ನಾಂದಿ ಹಾಡಿದಾಗಲೇ ಶುರುವಾಗಿದ್ದು ಅವಳ ಅಪ್ಪಿಕೋ ಚಳುವಳಿ...
ಏನಿದು ಅಪ್ಪಿಕೋ ಚಳುವಳಿ, ಮರಗಳನ್ನ ಕಡಿಯಬೇಡಿ ಅಂತ ಮರಗಳನ್ನು ಅಪ್ಪಿಕೊಂಡು ನಿಂತು ಕಾಪಾಡಲು ಪರಿಸರವಾದಿಗಳು ಮಾಡಿದ ಚಳುವಳಿ ಅಂತೆ, ಆದರೆ ಅದಕ್ಕೆ ಹೊಸ ಭಾಷ್ಯ ಕೊಟ್ಟದ್ದು ನನ್ನಾಕೆ. ಗೆಳೆಯನೊಬ್ಬ ಮಗುವಿನೊಂದಿಗೆ ಮನೆಗೆ ಬಂದಾಗ ಇವಳು ಮುದ್ದುಗರೆದದ್ದು ನೋಡಿ ಮರಳಿ ಹೋಗಲೊಲ್ಲದೇ ಇವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತು ಬಿಟ್ಟಿತ್ತು, ಬಾರೋ ಹೋಗೋಣವೆಂದರೆ ಬಿಡಲೊಲ್ಲದು, ಆಗಲೇ ಅದನ್ನು ನನ್ನಾಕೆ ಅಪ್ಪಿಕೊ ಚಳುವಳಿ ಅಂದಿದ್ದು. ಅಂತೂ ಹರಸಾಹಸ ಮಾಡಿ ಬಿಡಿಸಿಕೊಂಡು ಹೋಗಿದ್ದ, ಆದರೂ ಅದೊಂದು ಒಳ್ಳೆಯ ತಂತ್ರ ಅಂತ ಕಂಡುಕೊಂಡಿದ್ದ ಮಗು ಈಗ ಅವನೆಲ್ಲಿ ಹೊರಟು ನಿಂತರೂ ನಾನೂ ಜತೆ ಬರುತ್ತೀನಿ ಅಂತ ಕಾಲಿಗೆ ಅಮರಿಕೊಂಡು ಅಪ್ಪಿ ಕಾಲು ಕಿತ್ತಿಡದಂತೆ ಕೂತುಬಿಡುತ್ತಿತ್ತಂತೆ, ನನ್ನ ಮಗ ಅಪ್ಪಿಕೋ ಚಳುವಳಿಗಿಳಿದಿದ್ದಾನೆ ಅಂತ ಗೆಳೆಯ ಫೋನು ಮಾಡಿದಾಗಲೆಲ್ಲ ಹೇಳುತ್ತಿದ್ದ. ಮಗುವಿನ ಪ್ರಯೋಗ ಯಶಸ್ವಿಯಾಗಿದ್ದು ಕಂಡು ನನ್ನಾಕೆ ಅದೇ ತಂತ್ರ ನನ್ನ ಮೇಲೆ ಮಾಡುತ್ತಿದ್ದಳು.
ಶರ್ಟ್ ಜಗಳ ಜೋರಾಗಿ, ಮೌನ ಸತ್ಯಾಗ್ರಹ ಶುರು ಮಾಡಿಬಿಟ್ಟಿದ್ದೆ, ಅವಳು ಕೂಗಿದಾಗ ಉತ್ತರಿಸದಾದಾಗ, ನನ್ನೊಂದಿಗೆ ಮಾತಾಡುತ್ತಿಲ್ಲ ಅಂತ ಅವಳಿಗೂ ಗೊತ್ತಾಗಿಹೋಗಿತ್ತು. ಅಂದು ಮುಂಜಾನೆ ಟೇಬಲ್ಲಿನ ಮೇಲೆ ಉಪ್ಪಿಟ್ಟು ಮಾಡಿಟ್ಟು ಕೈಲಿ ಚಮಚೆ ಹಿಡಿದು ನಿಂತಿದ್ದಳು, ಕೇಳಲಿ ಕೊಡೋಣ ಅಂತ. ಮಾತನಾಡಲೇ ಬಾರದು ಅಂತ ತೀರ್ಮಾನಿಸಿದ್ದ ನಾನು ಬಿಸಿ ಬಿಸಿಯಿದ್ದರೂ ಕೈ ಸುಟ್ಟರೂ ಪರವಾಗಿಲ್ಲ ಅಂತ ಕೈಯಲ್ಲೇ ತಿಂದು ಎದ್ದು ಹೋಗಿದ್ದೆ. ಆಗ ಶುರುವಾಗಿದ್ದ ಜಗಳ, ಇನ್ನೂ ಜಾರಿಯಲ್ಲಿತ್ತು. ಈ ಸಾರಿ ಸ್ವಲ್ಪ ಧೀರ್ಘಕಾಲೀನ ಸಮರವಿರಲಿ ಅಂತ ನಿರ್ಧರಿಸಿ, ಪಟ್ಟು ಸಡಲಿಸಿರಲಿಲ್ಲ.
ಎರಡು ದಿನದಿಂದ, ಅಪ್ಪಿಕೋ ಚಳುವಳಿ ಶುರುವಾಗಿತ್ತು, ಮಾತನಾಡುವುದಿಲ್ಲ ಅಂತ ಗೊತ್ತು, ಅದಕ್ಕೆ ಸರಿಯಾಗಿ ಅಫೀಸಿಗೆ ಹೊರಟು ರೆಡಿಯಾಗಿ ನಿಂತಿರುವಾಗ, ಹಿಂದಿನಿಂದ ಬಂದು ಗಪ್ಪನೆ ಅಪ್ಪಿಕೊಂಡು ನಿಂತು ಬಿಡುವವಳು, "ಬಿಡು ಅಂತ ಹೇಳಿ ಬಿಡ್ತೇನೇ, ಇಲ್ಲಾಂದ್ರೆ ಈವತ್ತು ಅಫೀಸಿಗೆ ಚಕ್ಕರ ಹೊಡಿಬೇಕಾಗತ್ತೆ" ಅಂತ ವಾರ್ನಿಂಗ್ ಬೇರೆ, ಹಾಗೂ ಹೀಗೂ ಕೊಸರಿಕೊಂಡು ತಪ್ಪಿಸಿಕೊಂಡು ಹೊರಟು ಹೋಗಿದ್ದೆ, ಎರಡು ದಿನವಂತೂ ಅವಳ ಅಪ್ಪಿಕೋ ಚಳುವಳಿ ಸಫಲವಾಗಿರಲಿಲ್ಲ, ನಿನ್ನೆಯಂತೂ ನಾನು ಪ್ರತಿಭಟಿಸಲೂ ಇಲ್ಲ ಅಂತಾದಾಗ, ತಾನೇ ಬಿಟ್ಟುಕೊಟ್ಟಿದ್ದಳು, ಆಗ ಅವಳ ಮುಖ ನೋಡಿ, ಪಾಪ ಕಾಡಿದ್ದು ಸಾಕೆನಿಸಿ ಮಾತಾಡಿಸಲೇ ಅನ್ನಿಸಿದರೂ ಇರಲಿ ಇನ್ನೊಂದು ಚೂರು... ಮಜವಾಗಿದೆ ಅಂತ ಸುಮ್ಮನಾಗಿದ್ದೆ.
ನನ್ನ ಅಪ್ಪಿಕೋ ಚಳುವಳಿಗಳು ಮಾತ್ರ ಯಾವಾಗಲೂ ಸಫಲವಾಗಿರುತ್ತಿದ್ದವು, ಸಮಯ ಸಾಧಿಸಿ ಸರಿಯಾಗಿ ತಪ್ಪಿಸಿಕೊಳ್ಳದಂತೆ ಬಾಹು ಬಂಧಿಸಿದರೆ ಸಡಲಿಸುತ್ತಿರಲಿಲ್ಲ, ಸಿಡಿಮಿಡಿಗೊಂಡು ಸೋತು ಬಾಯಿಬಿಟ್ಟಿರುತ್ತಿದ್ದಳು. ಅದಂತೂ ಸಫಲವಾಗದಾದಾಗ ಹೊಸ ವರಸೆ ತೆಗೆದಳು, ಅಂದು ಶನಿವಾರ ನಾನಂತೂ ಹೊರಗೆಲ್ಲೂ ಹೋಗುವುದಿಲ್ಲ ಅಂತ ಗೊತ್ತಿದ್ದರಿಂದ, ಗೋಡೆಗಳೊಂದಿಗೆ ಮಾತಾಡುವರಂತೆ ನನ್ನಡೆಗೂ ನೋಡದೇ ವಾರ್ತೆ ಓದತೊಡಗಿದಳು, "ಇಂದಿನ ಸುದ್ದಿಗಳು, ಮನೆಯಲ್ಲಿ ಶುರುವಾದ ಸಮರ, ಸಂಧಾನ ಯತ್ನ ವಿಫಲ, ಮೌನಸತ್ಯಾಗ್ರಹ... ಮನೆತುಂಬ ಕವಿದ ನೀರಸ ವಾತಾವರಣ. ಬಿಕೊ ಅನ್ನುತ್ತಿರುವ ಬೆಡರೂಮು, ಹಾಲ್ನಲ್ಲಿ ಹಗಲು ಹೊತ್ತಿನಲ್ಲೇ ಬಾಯಿಗಳಿಗೆ ಬೀಗ. ಯಜಮಾನರು ಮೂರುದಿನದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪಟ್ಟು ಸಡಲಿಸದಿರುವುದರಿಂದ, ಮುಂದುವರೆದ ಮುಷ್ಕರ, ಪಾಕಶಾಲೆಗೆ ಮೂರು ದಿನ ರಜೆ, ಹೊರಗಿನ ತಿಂಡಿ ತಿನಿಸು ತರದಂತೆ ನಿಷೇಧ. ಮನೆಯಿಂದ ಹೊರ ಹೋಗದಂತೆ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ, ಹೆಚ್ಚಿನ ಸುದ್ದಿಗಳಿಗಾಗಿ ಕೇಳುತ್ತಿರಿ ನಿಮ್ಮ ಮನೆವಾರ್ತೆ." ಅಂತ ಚಿಲಿಪಿಲಿಯೆನ್ನುವಂತೆ ಉಲಿದವಳು, ನಡುವಿಗೆ ಸೆರಗು ಸಿಕ್ಕಿಸಿ, ಸವಾಲು ಹಾಕಿ ಸಿದ್ಧವಾದಳು.
ಪಾಕಶಾಲೆಗೆ ರಜೆಯೆಂದರೆ ಬೇಳೆ ಏನೂ ಬೇಯುವಂತಿರಲಿಲ್ಲ, ಅಪ್ಪಿತಪ್ಪಿ ಕಾನೂನು ಮೀರಿ, ಪಾಕಶಾಲೆಗೆ ಕಾಲಿಟ್ಟರೆ, ಇಲ್ಲ ಪ್ರತಿಬಂಧಕಾಜ್ಞೆ ಮುರಿದು ಮನೆಯಿಂದ ಹೊರಬಿದ್ದರೆ ಮುಂದಿನ ತೀವ್ರ ಪರಿಣಾಮಗಳು ಊಹಿಸಲಸಾಧ್ಯ. ಅಲ್ಲದೇ ಹಾಗೆ ಮಾಡಿ ನಾನೇನೊ ಹೊರಗೇನಾದರೂ ತಿಂದು ಬರಬಹುದೇನೊ ಆದರೆ ಅವಳು ಮಾತ್ರ ಹಾಗೇ ಕೂತಾಳು ಅಂತನ್ನೊ ಬೇಸರ. ಏನು ಮಾಡಲೂ ತಿಳಿಯದಾಯಿತು, ಹಾಗೆ ಮನೆತುಂಬ ಶತಪಥ ತಿರುಗುತ್ತಿದ್ದರೆ ಕಂಡಿತು ಹಣ್ಣಿನ ಬುಟ್ಟಿ, ಅವಳು ಬೇಕಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಿ, ಫಲಾಹಾರ ಸೇವನೆಯಾದರೂ ಮಾಡೋಣ ಅಂತ ಅದನ್ನೇ ಎತ್ತಿಕೊಂಡು ಅವಳಿಗೆ ಕಾಣುವಂತೆ ಹೋಗಿ ಕೂತು, ಸದ್ದು ಮಾಡುತ್ತ ಸೇಬು ಮೆಲ್ಲತೊಡಗಿದೆ ಇನ್ನೊಂದು ಸೇಬುವಿಗೆ ಕೈ ಹಾಕುತ್ತಿದ್ದರೆ, ಕಸಿದುಕೊಂಡು ತಾನೂ ಒಂದು ತಿಂದಳು. ಸಧ್ಯದ ಸಮಸ್ಯೆಯೇನೊ ಬಗೆಹರಿಯಿತು, ಮಧ್ಯಾಹ್ನ ಊಟಕ್ಕೇನು ಮಾಡುವುದು ತಿಳಿಯದಾಯಿತು. ಬೇಗ ರಾಜಿಯಾಗುವ ಇರಾದೆಯೂ ನನಗಿರಲಿಲ್ಲ, ಅದಕ್ಕೆ ಅವಳಿಗೆ ಕೇಳುವಂತೆ "ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ, ಏನೊ ಒಂದು ಆಗುತ್ತೆ" ಅಂತ ಆಕಾಶದತ್ತ ಮುಖ ಮಾಡಿ ಕೈಮುಗಿದು ಹೊರಬಂದೆ.
ದೇವರೇ, ಅವಳನ್ನು ಇನ್ನಷ್ಟು ಕಾಡಿಸು ಅಂತ ಸಹಾಯ ಮಾಡಿದನೋ ಎನೊ, ಪಕ್ಕದಮನೆ ಪದ್ದು ಪಲಾವ್ನೊಂದಿಗೆ ಪ್ರತ್ಯಕ್ಷ ಆಗಬೇಕೆ, "ಏನ್ ಮಾಡ್ತಾ ಇದೀರಾ, ಸಂಡೇ ಸ್ಪೇಶಲ್ ಅಂತ ಅವರೇಕಾಳು ಪಲಾವ್ ಮಾಡಿದ್ದೆ, ತಂದೆ" ಅಂತನ್ನುತ್ತಿದ್ದಂತೆ, "ಬನ್ನಿ, ಬನ್ನಿ" ನಾ ಬರಮಾಡಿಕೊಂಡೆ. ಇವಳು ಓಡಿ ಬಂದು "ಅಯ್ಯೊ ಈಗ ತಾನೆ ಊಟ ಆಯ್ತಲ್ಲ, ಸುಮ್ನೇ ಹಾಳಾಗುತ್ತೆ, ಮತ್ತೆ ಮಾಡಿದಾಗ ಕೊಡುವಿರಂತೆ" ಅಂತ ಕಲ್ಲು ಹಾಕಲು ನೋಡಿದಳು, ತಕ್ಷಣ ನಾನು ಪರವಾಗಿಲ್ಲ "ನಾನು ಟೇಸ್ಟ್ ಮಾಡ್ತೀನಿ ಕೊಡಿ ನೀವು" ಅಂತ ಇಸಿದುಕೊಂಡು ಬಂದೆ, ಪದ್ದು ಫುಲ್ ಇಂಪ್ರೆಸ್ ಕೂಡ ಆದಳು. ಅವರೇಕಾಳು ಪಲಾವ್ ಅಲ್ಲ ದೇವರೇ ಕಾಡು ಅಂತ ಕಳುಹಿದ ಪಲಾವ್ ಅನ್ನುತ್ತ ತಂದು ಟೇಬಲ್ಲಿನ ಮೇಲಿಟ್ಟೆ.
ಪದ್ದು ಜತೆ ಮಾತಾಡಿ, ಕಳುಹಿಸಿಕೊಟ್ಟು ಬಂದಳು, ನಾನಂತೂ ತಿನ್ನಲು ಅಣಿಯಾಗಿ ಕೂತಿದ್ದೆ, ನನಗೊಂದು ಪ್ಲೇಟನಲ್ಲಿ ಸ್ವಲ್ಪ ಹಾಕಿಕೊಂಡು ಉಳಿದದ್ದು ಅವಳಿಗನ್ನುವಂತೆ ಇಟ್ಟು ಬಂದೆ, ಕೋಪದಲ್ಲಿ ಕಣ್ಣು ಕೆಂಪಾಗಿಸಿಕೊಂಡು ಬಂದು ಕೂತು ಅವಳೂ ತಿಂದು ಕೈತೊಳೆದುಕೊಂಡಳು. ನನ್ನಾಕೆ ಮಾಡುವ ಪಲಾವನಷ್ಟು ಟೇಸ್ಟ್ ಏನೂ ಆಗಿರಲಿಲ್ಲ ಬಿಡಿ ಆದರೂ ಹೊಟ್ಟೆ ಹಸಿದಾಗ ಸಿಕ್ಕದ್ದೇ ಪಂಚಾಮೃತವಾಗಿತ್ತು. ಇದೇನೂ ಕೆಲಸ ಮಾಡುವ ಹಾಗೆ ಕಾಣದಾದಾಗ ಕೊನೇದಾಗಿ ಅಮ್ಮನ ಹತ್ತಿರ ದೂರು ಕೊಡುತ್ತಾಳೆ ಇನ್ನು ಅಂತ ಗೊತ್ತಿತ್ತು, ಅಲ್ಲದೇ ಮಾತನಾಡಿಸದೇ ಮೂರು ದಿನಗಳು ಬೇರೆ ಆಗಿದ್ದರಿಂದ ನನಗೂ ಒಂಥರಾ ಚಡಪಡಿಕೆ ಶುರುವಾಗಿತ್ತು. ಸೋಲೊಪ್ಪಿಕೊಳ್ಳಬಾರದು ಅಂತ ಸುಮ್ಮನಿದ್ದೇ ಹೊರತು, ಸಿಟ್ಟು ಯಾವಾಗಲೋ ಹೊರಟು ಹೋಗಿತ್ತು.
ಸಾವಿಲ್ಲದ ಮನೆಯ ಸಾಸಿವೆ ಕಾಳು ತಂದರೆ ಬದುಕಿಸಿಕೊಡುತ್ತೇನೆ ನಿನ್ನ ಮಗನನ್ನು ಅಂತ ಬುಧ್ಧ ಹೇಳಿ ಸಾವಿಲ್ಲದ ಮನೆಯೇ ಇಲ್ಲ ಅಂತ ಹೇಗೆ ತಿಳಿಸಿದ್ದನೊ, ಜಗಳವಿಲ್ಲದ ಮನೆಯ ಜೀರಿಗೆ ತಂದು ಕೊಡಿ, ಜಗಳವಿಲ್ಲದ ಜೀವನ ಸೃಷ್ಟಿ ನಾನು ಮಾಡಿಕೊಡುತ್ತೇನೆ! :) ಸಾವಿಲ್ಲದ ಮನೆ ಸಾಸಿವೆಕಾಳು ಹೇಗೆ ಸಿಗಲಿಕ್ಕಿಲ್ಲವೊ, ಜಗಳವಿಲ್ಲದ ಮನೆ ಜೀರಿಗೆ ಕೂಡ ಸಿಗಲಿಕ್ಕಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಜಗಳವಿಲ್ಲದ ಮನೆ ಕೂಡ ಇಲ್ಲ, ಎಲ್ಲೊ ದೊಡ್ಡ ದೊಡ್ಡ ರಂಪಾಟಗಳಾದರೆ ಇನ್ನೆಲ್ಲೊ, ಜೋರಿಲ್ಲದ ಜಟಾಪಟಿಗಳು ಆದಾವು. ಏನಿಲ್ಲವೆಂದರೂ ಹುಸಿಮುನಿಸು, ತುಸುಕೋಪ ಪ್ರದರ್ಶನಗಳಾದರೂ ಆಗಿರಲೇಬೇಕು. ಈ ಚಿಕ್ಕ ಪುಟ್ಟ ಫೈಟಿಂಗಳಾದ ಮೇಲಿನ ಪ್ರೀತಿಯಿದೆಯಲ್ಲ, ಅದು ಪದಗಳಲ್ಲಿ ಹೇಳಲಾಗದ್ದು. ಯಾರು ಸೋತರು ಯಾರು ಗೆದ್ದರು ಅನ್ನುವುದಕ್ಕಿಂತ, ಇಬ್ಬರೂ ಒಮ್ಮೆಲೇ ಒಬ್ಬರಿಗೊಬ್ಬರು ಸೋಲಲು ತಯ್ಯಾರಾಗಿಬಿಟ್ಟಿರುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳೇ ವಿಕೋಪಕ್ಕೆ ಹೋಗಬಹುದಾದರೂ ಹಾಗಾಗದಂತೆ ಬಿಡದಿದ್ದರೆ, ಸಾರಿಗೆ ಸಾಸಿವೆ ಜೀರಿಗೆಯ ವಗ್ಗರಣೆ ಹಾಕಿದಾಗ ಬರುವ ಚಟಪಟ ಸದ್ದಿನಂತೆ ಆಗೊಮ್ಮೆ ಈಗೊಮ್ಮೆ ಚಿಕ್ಕಪುಟ್ಟ ಜಟಾಪಟಿಯಾಗಿ ಹೋದರೆ ಅಮೇಲೆ ಘಂಮ್ಮೆಂದು ಹರಡುವ ಸುವಾಸನೆಯಂತೇ ಸುಮಧುರವಾಗಿರುತ್ತದೆ ಜೀವನ.
ಸಂಜೆಗೆ ಕರ್ಫ್ಯೂ ತೆರವಾಗಿತ್ತು, ಹೊರಗೆ ಹೋಗಿ ಪಕೋಡ, ಬಜ್ಜಿ ಪಾರ್ಸೆಲ್ ಮಾಡಿಸಿಕೊಂಡು ಬಂದೆ. ಎರಡು ಕಪ್ಪು ಜಿಂಜರ್ ಟೀ ಮಾಡಿಕೊಂಡು ಬಂದು ಕೂತು ಪ್ಯಾಕೆಟ್ಟು ತೆರೆದು ಕೂತರೆ, "ಮಾಡುವುದೆಲ್ಲ ಮಾಡುವುದು, ಮತ್ತೆ ಮೇಲೆ ಮಾತಾಡದ ಮುನಿಸ್ಯಾಕೊ" ಅಂತನ್ನುತ್ತ, ಪಕೋಡವೊಂದು ಬಾಯಿಗಿಟ್ಟುಕೊಂಡು ಟೀ ಕಪ್ಪು ಹಿಡಿದು ಒಳ ಹೋದವಳು, ಹೊರಬಂದಾಗ ನೋಡಿದರೆ, ಥೇಟ್ ಬೆದರುಬೊಂಬೆಯಂತೇ ಕಾಣುತ್ತಿದ್ದಳು, ಉಟ್ಟಿರುವ ಸೀರೇ ಮೇಲೆ ಜಾಕೆಟ್ಟಿನಂತೆ ಅದೇ ನನ್ನ ಮೆಚ್ಚಿನ ತಿಳಿನೀಲಿ ಬಣ್ಣದ ಹೊಚ್ಚ ಹೊಸ ಶರ್ಟ ಹಾಕಿಕೊಂಡು ನಿಂತಿದ್ದಳು ನಗು ತಡೆಯಲಾಗದೇ ಪಕ್ಕನೇ ನಕ್ಕುಬಿಟ್ಟೆ. ಯಾವಗ ತಂದಿಟ್ಟಿದ್ದಳೊ... ಅಂಥದ್ದೇ ನನ್ನ ಮೆಚ್ಚಿನ ಶರ್ಟನಂತದ್ದೇ ಹುಡುಕಿ ತಂದಿದ್ದಳು. ಕೈಗಳಗಲಿಸಿ ಅವಳು ಕರೆದರೆ ಅಪ್ಪಿಕೋ ಚಳುವಳಿ ಒಪ್ಪಿಕೊಳ್ಳದೇ ಇರಲಾಗುವಂತಿರಲಿಲ್ಲ. ಹೋಗಿ ಬಾಚಿ ತಬ್ಬಿಕೊಂಡರೆ, ನನ್ನನ್ನೂ ಸೇರಿಸಿಕೊಂಡು ಶರ್ಟಿನ ಬಟನ್ನು ಹಾಕಲು ತಡಕಾಡುತ್ತಿದ್ದಳು...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/appiko.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, March 21, 2010
ನನ್ನಾಕೆಯಲ್ಲಿನ ನನ್ನಮ್ಮ
ಕಂಪ್ಯೂಟರ್ ಮುಂದೆ ಕೂತು ಏನೊ ಓದುತ್ತಿದ್ದವ ಸುಮ್ನೇ ನಗುತ್ತಿದ್ದೆ, "ಸುಮ್ ಸುಮ್ನೇ ಹಾಗೆ ಒಬ್ರೇ ನಕ್ಕರೆ ಏನಂತಾರೆ ಗೊತ್ತಾ?" ಅಂದ್ಲು. "ಹಸನ್ಮುಖಿ ಅಂತಾರಾ" ಅಂದ್ರೆ "ಇಲ್ಲಾಪ್ಪ, ಹುಚ್ಚ ಫಿಲಂ ಕಿಚ್ಚ ಅಂತಾರೆ" ಅಂತ ನಿಮ್ಹಾನ್ಸ ಪೇಶಂಟ್ ಅಂತ ಸುತ್ತುಬಳಸಿ ಹೇಳಿದ್ಲು. ಇನ್ನೊಂದು ಬಾರಿ ಹಲ್ಲು ಕಿರಿದೆ "ಕೋತಿ..." ಅಂತ ಬಯ್ದು ಎದ್ದು ಹೋದ್ಲು. ಅವಳಿಗೆ ಹೇಳದೇ ಒಬ್ನೇ ಯಾಕೆ ನಗ್ತಾ ಇದೀನಿ ಅಂತ ಸಿಟ್ಟು. ಹೇಳೊಕೇನೂ ದೊಡ್ಡ ಜೋಕ್ ಇರಲಿಲ್ಲ "ಏನಿಲ್ಲ ಕಣೆ, ಮೊನ್ನೆ ಮಹಿಳಾ ದಿನಾಚರಣೆ ಅಂತ ಆಫೀಸಲ್ಲಿ ಏನೊ ಸೆಲೆಬ್ರೇಷನ್ ಮಾಡಿದ್ರು, ನಿಮ್ಮ ಜೀವನದಲ್ಲಿನ ಅತೀ ಪ್ರಭಾವಿ ಮಹಿಳೆ ಬಗ್ಗೆ ಲೇಖನ ಬರೆಯಲು ಕೇಳಿದ್ರು. ಬಹುಮಾನಿತ ಲೇಖನಗಳೆಲ್ಲ 'ಅಮ್ಮ' ಬಗ್ಗೆಯೇ ಇವೆ. ಮೊದಲೇ ಊಹಿಸಿದ್ದೆ ಅದಕ್ಕೆ ಮುಗುಳ್ನಗ್ತಾ ಇದ್ದೆ" ಅಂತ ವಿವರಿಸಿದೆ. "ಹೌದಾ... ನೀವ್ ಬರೀಬೇಕಿತ್ತು, ಪಕ್ಕದಮನೆ ಪದ್ದು ಬಗ್ಗೆ" ಅಂತ ಕಿಚಾಯಿಸಿದಳು. "ಬರೀತಿದ್ದೆ ಆದ್ರೆ ಮುಂದಿನಮನೆ ಮೀನಾಕ್ಷಿ ಎಲ್ಲಿ ಬೇಜಾರು ಮಾಡ್ಕೊತಾಳೊ ಅಂತ ಬಿಟ್ಟೆ" ಅಂದೆ. ಕೈಯಲ್ಲಿ ಟೀ ಕಪ್ಪು ಕೊಟ್ಟು ಹೊರ ನೂಕಿದಳು, ನಿಮ್ಮ ಜತೆ ಮಾತಾಡೊಕೆ ನನಗೆ ಸಮಯ ಇಲ್ಲಾಂತಾ... ಹೊರಗೆ ಬಂದು ಕೂತು ಯೋಚಿಸತೊಡಗಿದೆ. ನಾ ಬರೆಯುವುದೇ ಆಗಿದ್ದರೆ ಯಾರ ಬಗ್ಗೆ ಬರೀತಿದ್ದೆ ಅಂತ ಎಷ್ಟು ಬಾರಿ ಯೊಚಿಸಿದರೂ ಅಮ್ಮ ಅಂತಲೇ ಅನಿಸಿತು. ಹಾಗೂ ಒಂದು ವೇಳೆ ಬೇರೆ ಬರೆಯುವುದೇ ಆಗಿದ್ದರೆ ಅದು ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆಯೂ ಇರಬಹುದಿತ್ತೇನೊ...
"ಹೌದು ಯಾಕೆ ಬರೀಲಿಲ್ಲ" ಅಂತ ಕೆಲಸ ಮುಗಿಸಿದವಳು ಬಂದು ಮುಂದೆ ಒಂದು ಕುರ್ಚಿ ಎಳೆದುಕೊಂಡು ಕೂತಳು, ಅವಳ ಕೈಲಿದ್ದ ಟೀ ಕಪ್ಪಿನೆಡೆಗೆ ಅಸೆಯಿಂದ ನೋಡಿದ್ದಕ್ಕೆ "ಬೇಕಾ" ಅಂತ ಒಂದು ಸಿಪ್ಪು ಕೊಟ್ಟಳು. "ಕೆಲಸದ ಪ್ರಭಾವ ಜಾಸ್ತಿ ಇತ್ತು ಅದಕ್ಕೆ ಪ್ರಭಾವಿ ಮಹಿಳೆ ಬಗ್ಗೆ ಬರೆಯಲಾಗಲಿಲ್ಲ, ಆದರೆ ಬರೆಯುವುದೇ ಆಗಿದ್ದರೆ ಅಮ್ಮ ಬಗ್ಗೇನೆ ಬರೀತಿದ್ದೆ ಏನೊ" ಅಂತಂದೆ. "ಹೌದು ಅಮ್ಮ ಅನ್ನೊ ಕ್ಯಾರೆಕ್ಟರ್ ಹಾಗೇ ಅಲ್ವೇ ಅಷ್ಟು ಪ್ರಭಾವ ಬೀರುತ್ತದೆ" ಅಂತ ಒಪ್ಪಿಕೊಂಡಳು. "ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆ ಬರೆದಿದ್ರೆ" ಅಂತ ಹುಬ್ಬು ಹಾರಿಸಿದ್ರೆ, "ನನ್ನಲ್ಲಿ ನಿಮ್ಮಮ್ಮ!!!" ಅಂತ ಹೌಹಾರಿದಳು. "ಹೌದು, ಈ ಅಮ್ಮನ ಕೆಲ ಗುಣಗಳನ್ನು ನಿನ್ನಲ್ಲಿ ಹುಡುಕ್ತೀನಿ" ಅಂದಿದ್ದೇ "ಏನದು, ಏನದು" ಅಂತ ಕುತೂಹಲಿಯಾದಳು. "ನಂಗೊತ್ತಿಲ್ಲ, ಹೀಗೆ ಒಂದೇ ಎರಡು ಅಂತಿಲ್ಲ, ನನಗೇ ಗೊತ್ತಿಲ್ಲದೇ ನನ್ನಮ್ಮನನ್ನ ನಿನ್ನಲ್ಲಿ ಹುಡುಕುತ್ತೇನೆ." ಅಂದರೆ "ಅಮ್ಮನ ಬಗ್ಗೆ ಹೇಳಿ, ನಾನು ಊಹಿಸಿಕೊಳ್ತೀನಿ" ಅಂತಂದಳು.
"ಅಮ್ಮ, ಯಾರದೇ ಜೀವನದಲ್ಲೂ ಮೊಟ್ಟ ಮೊದಲಿಗೆ ಪರಿಚಯವಾದ ಮಹಿಳೆ, ಜಗತ್ತಿಗೆ ಬರ್ತಿದ್ದಂಗೇ ಮೊಟ್ಟ ಮೊದಲಿಗೆ ಅಮ್ಮನನ್ನೇ ನೋಡಿದ್ದು" ಅಂತ ಹೇಳ್ತಾ ಇದ್ರೆ "ರೀ ಸುಳ್ಳು ಹೇಳಬೇಡಿ, ನೀವ್ ಫರ್ಸ್ಟ್ ನರ್ಸ್ ನೋಡಿರಬೇಕು" ಅಂತ ತುಂಟಿ ತರಾಟೆಗೆ ತೆಗೆದುಕೊಂಡಳು. "ಇರಬಹುದು, ನೆನಪಿಲ್ಲ ನೋಡು." ಅಂತ ತಪ್ಪಿಸಿಕೊಂಡೆ. "ಊಟ ಮಾಡೋಕೆ ಕೈತುತ್ತು ತಿನಿಸಿದವಳು ಅವಳು, ಎಷ್ಟು ಸಾರಿ ಕೈ ಕಚ್ಚಿದೀನೊ ಏನೊ" ಅಂದ್ರೆ, "ನನ್ನ ಕೈ ಮೂರು ಸಾರಿ ಕಚ್ಚಿದೀರ, ನಾನು ಲೆಕ್ಕ ಇಟ್ಟೀದೀನಿ" ಅಂದ್ಲು, ಇನ್ನು ಕೈತುತ್ತು ತಿನಿಸಿದ್ದು ಯಾಕೆ ಅಂತ ಕೇಳಬೇಡಿ. "ಚಿಕ್ಕಂದಿನಲ್ಲಿ ಅಮ್ಮನ ಕೈಯಿಂದ ಏಟು ತಿಂದೀದೀನಿ, ಏನೊ ತುಂಟಾಟ ಮಾಡಿ, ಒಮ್ಮೆ ಅಂತೂ ಅಮ್ಮ ಒಂದು ವಾರ ಮಾತಾಡಿರಲಿಲ್ಲ. ಆದ್ರೂ ಮತ್ತೆ ಅಮ್ಮ ಅಮ್ಮಾನೆ ಮತ್ತದೇ ಪ್ರೀತಿ... ನಿನ್ನ ಜತೆಗೂ ಈಗ್ ತುಂಟಾಟ ಮಾಡಿ ಏಟು ತಿಂತಾ ಇರ್ತೀನಿ ಅಲ್ವಾ" ಅಂತಿದ್ದಂಗೇ ನನ್ನಾಕೆಗೆ ಎನೊ ನೆನಪು ಬಂತು "ರೀ ಅದೊಂದು ಸಾರಿ, ಫುಲ್ ಫೈಟಿಂಗ್ ಆಗಿತ್ತು ನೆನಪಿದೆಯಾ" ಅಂದ್ಲು. "ಒಹ್ ಯಾಕೆ ನೆನಪಿಲ್ಲ, ವರ್ಡ್ ವಾರ್ ಒನ್ ಅದು. ವಾರ ಏನು, ಹದಿನೈದು ದಿನ ಮಾತಾಡಿರಲಿಲ್ಲ ನೀನು" ಅಂದ್ರೆ. "ಹ್ಮ್, ಒಂದು ವಾರ ಆದಮೇಲೆ ಗೂಗಲ್ ಟಾಕ್ನಲ್ಲಿ ಚಾಟ್ ಮಾಡಿದ್ದೆ, ಟ್ವಿಟ್ಟರ್ ಅಲ್ಲಿ ಟ್ವೀಟ್ ಮಾಡಿರಲಿಲ್ವಾ. ನೀವೇ ಮೌನ ವೃತ ಮಾಡಿದ್ದು, ಒಂದು ರಿಪ್ಲೈ ಕೂಡ ಮಾಡಿರಲಿಲ್ಲ." ಅಂತ ಮುಖ ಗಂಟಿಕ್ಕಿದಳು. ಮುಖ ನನ್ನೆಡೆಗೆ ತಿರುಗಿಸಿಕೊಂಡರೂ ನನ್ನೆಡೆಗೆ ನೋಡಲಿಲ್ಲ. "ಮಾತಾಡೊದಿದ್ರೆ ಡೈರೆಕ್ಟ್ ಮಾತಾಡಬೇಕಿತ್ತಪ್ಪ" ಅಂತ ನಾನಂದೆ. "ಒಟ್ಟಿನಲ್ಲಿ ಮಾತಾಡಿದ್ದೆ ಅಲ್ವಾ" ಅಂದ್ಲು. "ಅಮ್ಮನ ಹಾಗೇನೆ, ಇನ್ನೆಂದೂ ಮಾತಾಡಲ್ವೇನೊ ಅನ್ನೊ ಹಾಗೆ ಕೋಪಗೊಂಡ್ರೂ ಮತ್ತೆ ಅದೇ ಪ್ರೀತಿ" ತೋರಗೊಡಬಾರದೆಂದರೂ ಅವಳ ಮುಖದಲ್ಲೊಂದು ಮಂದಹಾಸ ಮೂಡಿತು.
ಇನ್ನಷ್ಟು ಹತ್ತಿರ ಬಂದು ಕೂತಳು, ಅಲ್ಲೆ ಸ್ವಲ್ಪ ಜಾಗ ಮಾಡಿಕೊಂಡು ಉರುಳಿದೆ, ಅವಳ ಮಡಿಲಲ್ಲಿ ತಲೆ ಇಟ್ಟು. ಅವಳ ಕೈಗಳಿಗೊಂದು ಕೆಲ್ಸ ಸಿಕ್ಕಿತು, ನನ್ನ ಕೂದಲಿನೊಂದಿಗೆ ಆಟಕ್ಕಿಳಿದಳು. "ಹೀಗೆ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿ ಬಿಡ್ತಿದ್ದೆ ಅನ್ಸತ್ತೆ. ಜಗತ್ತಿನಲ್ಲಿರೊ ಯಾವ ಟೆನ್ಷನ್ ತಲೇಲಿದ್ರೂ ಓಡಿ ಹೋಗಬೇಕು." ಅಂದ್ರೆ, "ಚಿಕ್ಕಂದಿನಲ್ಲಿ ಯಾವ ಟೆನ್ಷನ್ ಇತ್ತಪ್ಪಾ ನಿಮ್ಗೆ" ಅಂತ ಕೇಳಿದ್ಲು. "ಪಕ್ಕದ ಬೆಂಚಲ್ಲಿ ಕೂರೊ ಹುಡುಗಿ ನನ್ನಡೆಗೆ ಯಾಕೆ ನೋಡ್ತ ಇದಾಳೆ ಅನ್ನೊದೂ ಟೆನ್ಷನ್ ಆವಾಗ" ಅಂದ್ರೆ "ಯಾರ್ರೀ ಆಕೆ ನಂಗೆ ಹೇಳೇ ಇಲ್ಲಾ ಆಕೆ ಬಗ್ಗೆ" ಅಂದ್ಲು. "ಲೇ ಸುಮ್ನೇ ಉದಾಹರಣೆ ಅಂತ ಹೇಳಿದೆ" ಅಂತ ಸುಮ್ಮನಾಗಿಸಿದೆ. "ಹ್ಮ್ ಈಗ ನನ್ನ ಮಡಿಲಲ್ಲಿ ಹೀಗೆ ಮಲಗಿದ್ರೆ ಟೆನ್ಷನ್ ಮಾಯ ಆಗತ್ತಾ?" ಅಂತ ಮತ್ತೊಂದು ಪ್ರಶ್ನೆ ಎದ್ದಿತು ಅವಳಿಗೆ "ಆವಾಗ ಅನಿಸೋದು, ಏನು ದೊಡ್ಡ ತೊಂದ್ರೆ ಇದ್ರೂ ಏನು... ಅಮ್ಮ ಇದಾಳಲ್ಲ, ನಂಗೇನು ಟೆನ್ಷನ್ ಅಂತ. ಈಗ ನಿನ್ನೊಂದಿಗೆ ಅನಿಸತ್ತೆ, ಏನಾದರಾಗಲಿ, ನನ್ನ ಜತೆ ನೀನ್ ಇದೀಯಲ್ಲ, ಅಮ್ಮನ ಹಿಂದೆ ಅಡಗಿಕೊಂಡು ತಪ್ಪಿಸಿಕೊಳ್ಳಬಹುದಿದಿತ್ತೇನೊ, ಆದರೀಗ ಮುಂದೆ ನಿಂತು ಎದುರಿಸ್ತೀನಿ ಏನೇ ಪ್ರಸಂಗ ಬಂದ್ರೂ, ಹಿಂದೆ ಬೆಂಬಲಕ್ಕೆ ನೀನಿದೀಯಲ್ಲ ಅಂತ. ಏನ್ ಗೊತ್ತಾ, ಟೆನ್ಷನ್ ಆಗಿ ತಲೆ ಸಿಡೀತಾ ಇರುವಾಗ ಹೀಗೆ ನೀ ಹಣೆಮೇಲೆ ಬೆರಳು ಆಡಿಸುತ್ತಿದ್ರೆ ತಲೆನೋವು ಮಾಯ ಆಗಿ ನಿದ್ರೆ ಬಂದು ಬಿಡತ್ತೆ" ಅಂದೆ, ಖುಷಿಯಾದ್ಲು. "ಎದ್ದೇಳ್ರೀ, ಅಡುಗೆ ಮಾಡಬೇಕು, ನೀವ್ ಹೀಗೆ ಮಲಗಿದ್ರೆ ಮಧ್ಯಾಹ್ನ ಊಟ ಏನ್ ಮಾಡೊದು, ಅಂದಹಾಗೆ ಏನು ಬೇಕು? ಸಂಡೇ ಸ್ಪೇಶಲ್ ಈವತ್ತು." ಅಂತ ಪಾಕಶಾಲೆಗೆ ನಡೆದಳು. "ಅಮ್ಮಂಗೆ ನಂಗೇನು ಬೇಕು ಅಂತ ಹೇಗೆ ಗೊತ್ತಾಗುತ್ತೊ ಏನೊ, ಏನು ಮಾಡಿ ಹಾಕಿದ್ರು ಅದೇ ಸ್ಪೇಷಲ್ ಅನಿಸತ್ತೆ, ನಂಗೆ ಎಷ್ಟು ಬೇಕು ಅಂತ ಕೂಡ ಗೊತ್ತು, ಅನ್ನ ಹಾಕಿದ್ದು ಒಮ್ಮೊಮ್ಮೆ ಜಾಸ್ತಿ ಅನಿಸಿದ್ರೂ ಆವತ್ತೇ ಹೊಟ್ಟೇ ತುಂಬ ತಿಂದೆ ಅನಿಸತ್ತೆ" ಅಂತನ್ನುತ್ತ ನಾನೂ ನಡೆದೆ.
"ಈವತ್ತು, ಪಲಾವ್ ಮಾಡ್ತೀನಿ, ತರಕಾರಿ ಹೆಚ್ಚಿ ಹಾಕಿ" ಅಂದ್ಲು, "ಜತೆ ಸ್ವಲ್ಪ ಬಟಾಣಿ ಹಾಕು ಟೇಸ್ಟ್ ಇರತ್ತೆ, ಅದೇ ತಿನ್ನೋಣ ಅನಿಸಿತ್ತು" ಅಂದೆ. "ಆಹಾಹಾ.. ಡೈಲಾಗ್ ಎಲ್ಲಾ ಬೇಡ, ಬೇರೆ ಏನಾದ್ರೂ ಬೇಕಿದ್ರೆ ಹೇಳಿ, ಅತ್ತೆ ಹಾಗೇ ನಿಮ್ಮ ಇಷ್ಟ ನಂಗೊತ್ತಾಗಲ್ಲ" ಅಂತ ಬೆಣ್ಣೆ ಮಾತು ಸಾಕಂದ್ಲು. "ಗೊತ್ತಾಗಲ್ಲ, ಸರಿ ಆದ್ರೆ... ಅಮ್ಮ ಬಂದಾಗ ಏನೇನು ಮಾಡ್ತಾಳೆ, ನೋಡಿಟ್ಟುಕೊಳ್ತೀಯಾ. ಅವಲಕ್ಕಿ ಮಾಡೋವಾಗ ಅರಿಷಿನ ವಗ್ಗರಣೆಗೆ ಹಾಕಿದ್ರೆ ಒಂದು ಟೇಸ್ಟ, ಅವಲಕ್ಕಿ ವಗ್ಗರಣೆಯಲ್ಲಿ ಕಲಿಸೋವಾಗ ಮೇಲೆ ಉದುರಿಸಿದ್ರೆ ಒಂದು ಟೇಸ್ಟ್ ಅನ್ನೊವಂಥ ಚಿಕ್ಕ ಪುಟ್ಟ ಟಿಪ್ಸ್ ಕೇಳಿ ನೆನಪಿಟ್ಟುಕೊಂಡು, ಆಮೇಲೆ ಪ್ರಯತ್ನಿಸ್ತೀ ಅಲ್ವಾ" ಅಂತ ಬರೀ ಬೊಗಳೆ ಏನೂ ಬಿಡ್ತಿಲ್ಲ ಅಂದೆ. "ಆವತ್ತು ಹುಷಾರಿಲ್ದೆ ಇರೊವಾಗ ಅನ್ನ ತುಪ್ಪ ಕಲಿಸಿ ನಿಂಬೆಹಣ್ಣು ಹಿಂಡಿ ಕೊಟ್ಟು ಸರಪ್ರೈಜ್ ಮಾಡಿದ್ದೆ ನೆನಪಿದೆಯಾ" ಅಂತ ಕೇಳಿದ್ಲು "ಅದನ್ನೇ ನಾನೂ ಹೇಳ್ತಿರೊದು, ಅದೇ ನಿನ್ನಲ್ಲಿನ ನನ್ನಮ್ಮ." ಅಂದೆ.
ಊಟ ಆಯ್ತು, ಏನು ಸೊರಗಿ ಸಣಕಲಾಗ್ತಾ ಇದೀರಾ ಅಂತ ಬಯ್ಯುತ್ತ ಜಾಸ್ತಿನೇ ಅನ್ನ ಬಡಿಸಿದ್ಲು, ಅಮ್ಮನ ಹಾಗೇನೆ. ಮತ್ತೊಂದಿನಾ ಹೊಟ್ಟೆ ಬರ್ತಿದೆರೀ ವ್ಯಾಯಾಮ, ಡಯೆಟ್ ಮಾಡಿ ಅಂತ ಬಯ್ಯುತ್ತಾಳೆ ಕೂಡ. ಅಮ್ಮ ಅಂತೂ ಊಟದ ಮೆನು ಹಿಂದೇನೇ ಇರ್ತಾಳೆ, ಫೋನು ಮಾಡಿದ್ರೆ ಮೊದಲು ಕೇಳೋದೇ, ಊಟ ಆಯ್ತಾ ಅಂತ. ಇನ್ನು ನನ್ನಾಕೆ ಊರಿಗೆ ಹೋದ್ರೆ ಕೂಡ ಅದನ್ನೇ ಮಾಡೊದು, ಯಾವ ಹೊಟೆಲ್ನಲ್ಲಿ ಏನು ತಿಂದೆ ಅಂತ ವರದಿ ಒಪ್ಪಿಸಬೇಕು. ತವರಿನಲ್ಲಿ ನಾಲ್ಕು ದಿನ ಇದ್ದು, ಅಯ್ಯೊ ಹೊಟೇಲ್ ಊಟ ಅವರಿಗೆ ತೊಂದ್ರೆ ಅಂತ ನೆಪ ಹೇಳಿ ಓಡಿ ಬಂದು ಬಿಡ್ತಾಳೆ. ಅಮ್ಮನ ಹಾಗೆ ಸೀರೆ ಉಡ್ತಾಳೆ, ಅಮ್ಮ ತಲೆ ಮೇಲೆ ಸೆರಗು ಹೊದ್ದು ದೇವರಿಗೆ ನಮಿಸುತ್ತಿದ್ರೆ, ತಾನೂ ಸೆರಗು ಹೊದ್ದು, ಹೇಗೇ ಕಾಣ್ತಾ ಇದೀನಿ ಅಂತ ಕಣ್ಣಲ್ಲೇ ಕೇಳ್ತಾಳೆ. ಅಮ್ಮ ಕೈಹಿಡಿದು ಅಂಬೆಗಾಲಿಡಿಸಿದಳು, ನನ್ನಾಕೆ ಚಿಕ್ಕ ಮಕ್ಕಳ ಹಾಗೆ ನನ್ನ ಪಾದದಮೇಲೆ ಹತ್ತಿ ನಿಂತು ನಡೆದಾಡು ಅಂತಾಳೆ. ಪೆನ್ಸಿಲ್, ಪೆನ್ನು ತೆಗೆದುಕೊಳ್ಳೊಕೂ ಅಪ್ಪನ ಹತ್ರ ಅಮ್ಮಾನೆ ಕೇಳಿ ಕೊಡಿಸ್ತಾ ಇದ್ದದ್ದು, ನಾ ಕೇಳಿದ್ರೂ ಸಿಗೋದು, ಆದ್ರೆ ಅಮ್ಮ ಕೇಳಿದ್ರೆ ಇಲ್ಲ ಅನ್ನಲ್ಲ ಅಂತ ಅವಳನ್ನೆ ಮುಂದೆ ಮಾಡುತ್ತಿದ್ದುದು. ಈಗ ಏನ್ ಪರಮೀಷನ್ ಬೇಕಿದ್ರೂ ಸೊಸೆಗೆ ಇಲ್ಲ ಅನ್ನಲ್ಲ ಅಂತ ಇವಳನ್ನೇ ಕಳಿಸ್ತೀನಿ. ಹೀಗೇ ನನ್ನಾಕೆಯಲ್ಲಿನ ನನ್ನಮ್ಮನ ಬಗ್ಗೆ ಹೇಳಿಲಿಕ್ಕೆ ಬಹಳ ಇದೆ.
ಅಮ್ಮ, ತಾಯಿ, ಅವ್ವ, ಏನೆಲ್ಲ ಹೆಸರು ಅದೇ ಪ್ರೀತಿ, ಅದೇ ವಾತ್ಸಲ್ಯ. ನಾವು ಹುಡುಗರೇ(ಎಲ್ಲರೂ ಅಂತಲ್ಲ) ಹೀಗೇ ಏನೊ, ನಮ್ಮಾಕೆಯಲ್ಲಿ ಅಮ್ಮನ ಕೆಲ ಗುಣಗಳನ್ನು ಹುಡುಕುತ್ತೇವೇನೊ. ಏನಿಲ್ಲವೆಂದರೂ ಅಮ್ಮನ ಕೈರುಚಿಯಂತೆ ಅಡುಗೆಯಾದ್ರೂ ಮಾಡಲಿ ಅಂತ ಆಸೆ ಇದ್ದೇ ಇರುತ್ತದೆ. ಅಪ್ಪ ಸ್ವಲ್ಪ ನೇರ ದಿಟ್ಟ ನಿರ್ಧಾರಗಳಿಂದ ಸ್ವಲ್ಪ ನಮಗೆ ದೂರವೇ, ಅಮ್ಮ ತಪ್ಪು ಮಾಡಿದರೂ ಕ್ಷಮಿಸುತ್ತ ಮೃದುಧೋರಣೆ ತಳೆಯುತ್ತ, ತುಸು ಜಾಸ್ತಿ ಸಲಿಗೆಯೇ ಕೊಟ್ಟಿರುತ್ತಾಳೆ. ಹೆತ್ತವರಿಗೆ ಹೆಗ್ಗಣವೂ ಮುದ್ದು ಅನ್ನೊವಂತೆ, ನಾವು ಹೇಗಿದ್ದರೂ ಅಮ್ಮನ ಪ್ರೀತಿ ನಮ್ಮ ಮೇಲೇ ಜಾಸ್ತಿ. ಅದೂ ಅಲ್ಲದೇ ಮಗಳಾದ್ರೆ ಮದುವೆ ಮಾಡಿ ಕೊಟ್ರೆ ಹೊರ ಹೋಗುತ್ತಾಳೆ, ಮನೆ ಮಗನಾಗಿ ಜತೆ ನಿಲ್ಲುವನಿವನೇ ಅನ್ನೊ ಭಾವ ಬೇರೆ. ಮಗಳಿಗೆ ತುಸು ಮನೆಕೆಲಸ ಕಲಿಸುವ ಭರದಲ್ಲಿ ಸ್ವಲ್ಪ ಸಿಟ್ಟು ಗಿಟ್ಟು ಮಾಡಿಕೊಂಡರೂ, ಮಗನಿಗೆ ಮಾತ್ರ ಹಾಗೇನಿರುವುದಿಲ್ಲ, ಅದಕ್ಕೇ ಏನೊ ನಿಮಗೆ ಮಗನ ಮೇಲೆ ಪ್ರೀತಿ ಜಾಸ್ತಿ ಅಂತ ಹೆಣ್ಣುಮಕ್ಕಳು ಅಮ್ಮನ ಜತೆ ಮುನಿಸಿಕೊಳ್ಳೋದು. ಹೀಗಿರುವ ಅಮ್ಮ ನಿಜವಾಗಲೂ ನಮಗೆ ಮಾದರಿಯಾಗಿಬಿಟ್ಟಿರುತ್ತಾಳೆ ಅದಕ್ಕೆ ಅದೇ ಗುಣಗಳನ್ನೇ ಮಡದಿಯಲ್ಲಿ ಹುಡುಕುವುದೇನೊ. ಹುಡುಗನ ಅಮ್ಮನನ್ನು ಹುಡುಗಿ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೋ ಅಷ್ಟು ಒಳ್ಳೇ ಹೆಂಡತಿಯಾಗುತ್ತ ಸಾಗಬಲ್ಲಳೇನೊ.
ಸಕತ್ತಾಗಿ ಊಟ ಆಯ್ತು, ಸ್ವಲ್ಪ ನಿದ್ದೆ ಹೊಡೆದರಾಯ್ತು ಅಂತ ಕಾಲು ಚಾಚಿದ್ರೆ. ಪಕ್ಕದಲ್ಲೇ ಕೂತು ಇವಳು ಪೇಪರು ಓದುತ್ತಿದ್ಲು. "ನಿಂಗೆ ನನ್ನಲ್ಲಿ ನಿಮ್ಮಪ್ಪನ್ನ ಏನಾದ್ರೂ ಹುಡುಕಬೇಕು ಅನಿಸತ್ತಾ" ಅಂತ ಕೇಳಿದೆ. "ಹ್ಮ್ ಹೌದು ಕಣ್ರಿ, ನಮ್ಮಪ್ಪನ ಹಾಗೆ ಹುರಿ ಮೀಸೆ ಬಿಡ್ತೀರಾ!!!" ಅಂದ್ಲು. "ಚೆನ್ನಾಗಿ ಕಾಣಲ್ಲ ಕಣೆ, ಪ್ರಯತ್ನ ಮಾಡ್ಲಾ" ಅಂದೆ. "ರೀ ಜೋಕ್ ಮಾಡಿದೆ, ಹೀಗೇ ಚಾಕಲೇಟ್ ಹೀರೊ ಹಾಗಿದೀರಾ ಸಾಕು. ಇಲ್ಲಾಂದ್ರೆ ಇಷ್ಟೇ ಬಾಡಿ, ಇಷ್ಟುದ್ದ ಮೀಸೆ ಬಿಟ್ಟು ವೀರಪ್ಪನ್ ಥರ ಕಾಣ್ತೀರ ಮತ್ತೆ" ಅಂದ್ಲು. ಅದೇನು ಹೊಗಳಿದ್ಲೊ ತೆಗಳಿದ್ಲೊ ಯಾರಿಗೆ ಗೊತ್ತು. ಕಣ್ಣು ಮುಚ್ಚುತ್ತಿದ್ದೆ, "ರೀ ಪೇಪರನಲ್ಲಿ ಈ ಗಗನಸಖಿ ಫೋಟೊ ನೋಡಿದ್ರಾ, ಸೂಪರಾಗಿದೆ" ಅಂದ್ಲು. "ಎಲ್ಲಿ ಎಲ್ಲಿ" ಅಂತೆದ್ದು ಕೂತೆ. ಪೇಪರ್ ಕೊಡಲ್ಲ ಅಂತ ಕಾಡಿಸಿದ್ಲು, ಕೊನೆಗೂ ಕಿತ್ತಾಡಿ ಎಳೆದು ಹರಿದು, ಆ ಫೊಟೊ ಎರಡು ತುಂಡು ಹಾಳೆ ಸೇರಿಸಿ ನೋಡಿದ್ದಾಯ್ತು. ಅವಳು ಪೇಪರ ಬೀಸಾಕಿ ಪಕ್ಕ ಪವಡಿಸಿದರೆ, ಅನಿಸಿತು, ಅಮ್ಮ ಕೂಡ ಹೀಗೆ ಅಲ್ವಾ ಅಂತ. ಅಂಕಲ್, ಅಂಟಿ, ಅಕ್ಕ ಏನೊ ಆಟಿಕೆ ಕೊಟ್ಟರು ಅಂತ ಆಸೆಗೆ ಮಗು ಅವರ ಹತ್ರ ಹೋದರೂ ಕೊನೆಗೆ ನನ್ನಲ್ಲೇ ಬರುತ್ತದೆ ಬಿಡು ಅಂತ ನಂಬಿಕೆ ಅಮ್ಮನಿಗೆ, ಎರಡು ಘಂಟೆ ಆಟಿಕೆಯೊಂದಿಗಾಡಿದರೂ ಅಮೇಲೆ ಏನು ಕೊಟ್ಟರೂ ಅಮ್ಮ ಅಂತಲೇ ಮಗು ರಚ್ಚೆ ಹಿಡಿಯುತ್ತದೆ. ಪಕ್ಕದಮನೆಯಿಂದ ಹಿಡಿದು ಪಕ್ಕದ ಆಫೀಸಿನ ಕನ್ಯಾಮಣಿಗಳ ಕನವರಿಕೆಯಲ್ಲೇ ಅವಳ ಕಾಡಿಸುತ್ತಿದ್ದರೂ ನನ್ನವನೇ ಅನ್ನೊ ನಂಬಿಕೆ ನನ್ನಾಕೆಗೆ... ನಿರಾಳವಾಗಿ ನಿಚ್ಚಿಂತೆಯಿಂದ ನಿದ್ರೆ ಹೋಗಿದ್ದಳು, ಗಗನಸಖಿಯ ಫೋಟೊ ಬೀಸಾಕಿ, ನನ್ನಸಖಿಯ ನೋಡುತ್ತಿದ್ದರೆ ನಿದ್ರೆ ಬೇಕೆನಿಸಲಿಲ್ಲ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/nannakeyalli-nannamma.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು
Sunday, February 28, 2010
ನನ್ನತ್ತೆ...
"ಪಕ್ಕದಮನೆ ಪದ್ದು ಗಂಡನಿಗೆ ಪಕ್ಕದೂರಿಗೆ ಟ್ರಾನ್ಸಫರ್ ಆಗ್ಲಿ, ಹಾಲಿನಂಗಡಿ ಹಾಸಿನಿ ಹಾಲು ಮಾರೊ ಹುಡುಗನೊಂದಿಗೆ ಓಡಿ ಹೋಗ್ಲಿ, ಹೂವಾಡಗಿತ್ತಿ ಗುಲಾಬಿಗೆ ಮಾರೊಕೆ ಹೂವೇ ಸಿಗದಿರಲಿ, ನರ್ಗೀಸ್ ನರ್ಸಗೆ ನೈಟ್ ಶಿಫ್ಟ್ ಆಗ್ಲಿ..." ಅಂತ ಇನ್ನೇನೇನೊ ನನ್ನಾಕೆ ಶಾಪ ಹಾಕುತ್ತಿದ್ಲು. ನಾನೂ ಅಲ್ಲೇ ಕೂತು "ಪದ್ದು ಹೋದ್ರೆ ನೆರೆಮನೆಗೆ ನೂತನವಾಗಿ ನೂತನ್ ಬರಲಿ, ಹಾಸನದ ಹಾಸಿನಿ ಹೋದ್ರೆ, ಹೊನ್ನಾವರದಿಂದ ಹೊನ್ನಿನ ಜಿಂಕೆ ಹರಿಣಿ ಬರಲಿ, ಹೂವಿಲ್ಲದೇ ಗುಲಾಬಿ ಹೋದ್ರೆ, ಹಣ್ಣು ಮಾರಲು ಚಕ್ಕೊತ್ತಾ ಬೇಕಿತ್ತಾ ಅಂತ ಚಕೋರಿ ಬರಲಿ, ನರ್ಗೀಸಗೆ ನೈಟ್ ಶಿಫ್ಟ್ ಆದ್ರೆ, ಮಾರ್ನಿಂಗ್ ಶಿಫ್ಟಗೆ ಮಧುಬಾಲಾ ಬರಲಿ..." ಅಂತ ಶಾಪವೂ ವರವೇ ಅನ್ನುತ್ತಿದ್ದೆ. ಏನಂದರೂ ಜಗ್ಗದ ಜಟ್ಟಿ ಇದು ಅಂತ ಬುಸುಗುಡುತ್ತ ನೋಡಿ ಬಿರಬಿರನೆ ಹೊರಟು ಹೋದಳು. ಅದ್ಯಾಕೆ ಇಷ್ಟು ಸಿತ್ತಾಗಿದ್ದಾಳೆ ನನ್ನಾಕೆ ಅಂತಾನಾ ಅನುಮಾನ. ಇದಕ್ಕೆಲ್ಲ ಕಾರಣ ನನ್ನತ್ತೆ...
ಮಾತಾಡಿದರೆಲ್ಲಿ ಮುತ್ತು ಉದುರೀತು ಅಂತ ಮೂಲೆ ಹಿಡಿದು ಮೂಕವಾಗಿ ಕೂತುಬಿಡುವ ನನ್ನತ್ತೆ ಅಂಥದ್ದೇನು ಮಾಡಿಲ್ಲ ಬಿಡಿ. ಈ ಹೆಂಡತಿಯರ ಕೆಲ ಅಮ್ಮಂದಿರು ಹೇಗೆಂದರೆ ಮಗಳನ್ನು ಅವಳ ಅತ್ತೆ (ಗಂಡನ ತಾಯಿ) ಮೇಲೆ ಎತ್ತಿ ಕಟ್ಟುವುದರಲ್ಲಿ ಹೆಸರುವಾಸಿ ಅದಕ್ಕೊಂದು ಅಪವಾದ ಇದು. ಏನಿಲ್ಲ ಬೆಂಗಳೂರಿಗೆ ಮೊದಲ ಸಾರಿ ಬಂದಿರುವುದು, ಅದಕ್ಕೆ ಅವರನ್ನು ಬೆಂಗಳೂರು ಒಂದು ರೌಂಡ್ ಹಾಕಿಸಿಕೊಂಡು ಬರೋಣ ಅಂತ ಇವಳ ಪ್ಲಾನ್, ನನಗೂ ಜತೆ ಬಾ ಅಂದಿದ್ದಕ್ಕೆ, ನಾನು "ದಿನಾ ಸುತ್ತಿದ್ದೇ ಸಾಕಾಗಿದೆ ನಾನೊಲ್ಲೆ" ಅಂತ ನಿರಾಕರಿಸಿದ್ದೇ ತಪ್ಪಾಗಿತ್ತು. ಮನೆಯಲ್ಲಿ ಕೂತು ಪಕ್ಕದಮನೆ ಪದ್ದುಗೆ ಲೈನ ಹೊಡಿತೀರಾ ಅಂತ ಶಾಪ ಹಾಕುತ್ತಿದ್ದಳು.
ಸಂಜೆಗೆಲ್ಲ ಮತ್ತೆ ಸರಿಹೋಗುತ್ತಾಳೆ ಅಂತ ಸುಮ್ಮನಾಗಿದ್ದೆ, ಅಲ್ಲದೆ ಮಾವ, ಅವಳ ತಮ್ಮ ಬೇರೆ ಜತೆ ಇದ್ದಾಗ ನಾ ಹೋಗಲೇಬೇಕೆಂದೆನಿಸಿರಲಿಲ್ಲ. ಅತ್ತೆ ಅಷ್ಟು ದೂರದಲ್ಲಿ ಸುಮ್ಮನೇ ಕೂತಿದ್ದರೆ, "ಅತ್ತೆಗೆ ಕಾಫಿ ಟೀ ಏನಾದ್ರೂ ಕೊಡೇ" ಅಂತ ಆರ್ಡರ್ ಮಾಡಿದೆ. "ಹಾಗಲಕಾಯಿ ರಸ ಮಾತ್ರ ಕುಡಿಯೋದಲ್ವೇನಮ್ಮ ನೀನು, ಸ್ವಲ್ಪ ಡಯಾಬಿಟಿಸ್ ಆದಾಗಿಂದ" ಅಂತ ತಾನೇ ಹೇಳಿ, ಅವರಿಗೆ ಒಂದು ಕಪ್ಪು ಹಾಗಲಕಾಯಿ ರಸ, ನಂಗೆ ಟೀ ಕೊಟ್ಟು ಒಳಗೆ ಹೋದ್ಲು. ಮನಸ್ಸಿಲ್ಲದ ಮನಸಿಂದ ಅತ್ತೆ ಅದನ್ನು ಕುಡಿಯುವುದ ನೋಡುತ್ತಿದ್ದರೆ ನನಗೇಕೊ ನನ್ನ ಟೀ ಕೂಡ ರುಚಿಸಲಿಲ್ಲ. ಆಗ ಎದ್ದು ಬಂದ ಅತ್ತೆ, "ನೀವೂ ಬಂದ್ರೆ ಚೆನ್ನಾಗಿತ್ತು" ಅಂತ ಕ್ಷೀಣ ದನಿಯಲ್ಲಿ ಕೇಳಿದ್ದು ಅಚ್ಚರಿ ಮೂಡಿಸಿತು. ಅಷ್ಟರಲ್ಲಿ "ದಿನಾ ಸುತ್ತಿ ಬೇಜಾರಾಗಿದೆ ಅಂತ ಬಿಡಮ್ಮ" ಅಂತ ನನ್ನಾಕೆಯಂದಳು. ಅಬ್ಬ ಇಷ್ಟೊತ್ತು ಬರಲ್ಲ ಅಂದಿದ್ದಕ್ಕೆ ಜಗಳಕ್ಕಿಳಿದವಳು, ನನ್ನ ಪರವಾಗಿ ಮಾತಾಡೋದಾ. ನನ್ನಾಕೆಗೆ ಗೊತ್ತು, ಬರುವುದಾಗಿದ್ದರೆ ನಾ ಬರುತ್ತಿದ್ದೆ, ಅಲ್ಲದೇ ಸಿಕ್ಕ ಒಂದು ದಿನ ರಜೆ ಮನೆಯಲ್ಲಿದ್ದರಾಯ್ತು ಅನ್ನುವ ನನ್ನ ಪ್ಲಾನಗೆ ಯಾಕೆ ಕಲ್ಲು ಹಾಕಬೇಕು ಅನ್ನುವಷ್ಟು ನನ್ನ ಅರ್ಥ ಮಾಡಿಕೊಂಡಿದ್ದಾಳೆ. ಆದ್ರೂ ಸ್ವಲ್ಪ ಹುಸಿಕೋಪ ತೋರಿಸಿದಾಗಲೇ ಸಮಾಧಾನ.
ತಟ್ಟನೇ ಎದ್ದು, ಸ್ನಾನ ಮಾಡಿ ರೆಡಿಯಾಗಿಬಿಟ್ಟೆ, ಎಂದೂ ಕೇಳದ ಅತ್ತೆ ಕೇಳಿದಮೇಲೆ ಇಲ್ಲವೆನ್ನಲಾದೀತೇ ಅಂತ. ನನ್ನಾಕೆಯ ಕೋಪಕ್ಕೆ ತುಪ್ಪ ಏನು ಪೆಟ್ರೋಲೇ ಸುರಿದ ಹಾಗಾಯ್ತು. "ನಾ ಕರೆದ್ರೆ ಇಲ್ಲ, ಅಮ್ಮ ಕರೆದ್ರೆ... ಇರಲಿ ಇರಲಿ" ಅಂತ ಮೂಗುಮುರಿದು ತಾನೂ ರೆಡಿಯಾದಳು. ಎಲ್ಲಿಗೆ ಮೊದಲು ಅಂದರೆ ಸೀರೆ ಖರೀದಿ ಅಂದ್ಲು, "ಸುತ್ತಾಡಲು ಅಂತ ಹೇಳಿ ಇದೇನೇ ಶಾಪಿಂಗ್" ಅಂತ ಕೇಳಿದ್ದಕ್ಕೆ. "ಅಮ್ಮ ಸೀರೆ ಕೊಂಡಕೊಳ್ಬೇಕು ಅಂತಿದ್ದಳು, ಸುತ್ತಾಡಲೂ ಇನ್ನೂ ದಿನಗಳಿವೆ ಬಿಡಿ" ಅಂತಂದಳು. ಅವಳ ತಮ್ಮನಿಗೆ "ಇನ್ನು ಎರಡು ಮೂರು ಘಂಟೆ ನೊಣ ಹೊಡೆಯುವುದೇ ನಮ್ಮ ಕೆಲ್ಸ" ಅಂದ್ರೆ ಅವನು ಮುಗುಳ್ನಕ್ಕ. ಅವನ ಜತೆ ಬಂದಿದ್ದ ಅವರ ಸಂಬಂಧಿಕರ ಮಗು, "ಅಲ್ಲಿ ನೊಣ ಜಾಸ್ತಿನಾ ಅಂಕಲ್" ಅಂತು. "ಪುಟ್ಟಾ ಜಾಸ್ತಿ ಇಲ್ಲ, ಆದ್ರೂ ನಾವೇ ಹುಡುಕಿ ಹುಡುಕಿ ಹೊಡೀಬೇಕು, ಬೇರೆ ಮಾಡೊಕೆ ಕೆಲ್ಸ ಇರಲ್ಲ ನೋಡು" ಅಂದೆ, ಅದಕ್ಕೆ ಅದು ಅರ್ಥವಾಗಿದ್ದು ಅಷ್ಟಕ್ಕಷ್ಟೇ.
ಸೇಠು ಅಂಗಡಿಗೆ ಹೋಗ್ತಿದ್ದಂಗೆ ದೊಡ್ಡ ಸ್ವಾಗತಾ ಮಾಡಿದ, ಕಳೆದ ಸಾರಿ ಹಾಗೆ ಮತ್ತೆ ನನ್ನಾಕೆಗೆ ಗೊತ್ತಾಗದ ಹಾಗೆ ಅವಳಿಗೆ ಸರಪ್ರೈಜ್ ಮಾಡೊ ಸೀರೆ ಖರೀದಿಯೂ ಇದೆಯಾ ಅಂತ ಕೇಳಿಯೂ ಬಿಟ್ಟ. ಇಲ್ಲ ಅಂದಿದ್ದಕ್ಕೆ ನಿರಾಸೆಯಾಗಿರಬೇಕು, ಟೀ ಕೂಡ ತರಿಸಲಿಲ್ಲ. ಅತ್ತೆ ಒಂದು ಕೆಂಪು ಸೀರೆ ಸೆಲೆಕ್ಟ್ ಮಾಡಿದ್ದು ನೋಡಿದೆ, ಮಾವ ಅಲ್ಲೇ ಕೂತು ಅದಕ್ಕೆಷ್ಟು ಅಂತ ಕೇಳಿದ್ದಕ್ಕೆ "ಮುನ್ನೂರುಷ್ಟೇ" ಅಂತ ಸೇಲ್ಸಮನ್ ಹೇಳಿದ. "ಆಂ ಬರೀ ಮುನ್ನೂರಾ, ಒಳ್ಳೆ ಕಾಸ್ಟ್ಲಿ ಸೀರೆ ತೋರಿಸೊ" ಅಂತ ಅಬ್ಬರಿಸಿದರು. ಜತೆಗೆ ನನ್ನಾಕೆ ಕೂಡ "ಅಮ್ಮ ಕೆಂಪು ಕಲರ್ ಸರಿಹೋಗಲ್ಲ, ಆ ಥರ ಸೀರೆ ಏನು ಇದು ತೆಗೆದುಕೊ" ಅಂತ ಇನ್ನೊಂದು ತೆಗೆದಿಟ್ಟಳು. ನನ್ನಾಕೆ ಅವಳಪ್ಪ ಸೇರಿ ಕಾಸ್ಟ್ಲಿ, ಅಂತ ತಮಗಿಷ್ಟವಾದದ್ದೊಂದು ಆರಿಸಿದರೆ ಅತ್ತೆ ಅದನ್ನೇ ಎತ್ತಿಕೊಂಡು ಬಿಟ್ಟರು. ಮಾವನಿಗೇನೊ ಒಳ್ಳೆ ಬೆಲೆ ಸೀರೆ ಕೊಡಿಸಿದೆ ಅಂತ, ನನ್ನಾಕೆಗೆ ಮಾರ್ಕೆಟನಲ್ಲಿ ಹೊಸ ಶೈಲಿ ಸೀರೆ ಕೊಡಿಸಿದೆ ಅಂತ ಹೆಮ್ಮೆ ಆಯ್ತೇನೊ, ಆದ್ರೆ ಅತ್ತೆಗೆ?
ಹೊಟ್ಟೆ ತಾಳ ಹಾಕುತ್ತಿತ್ತು, ಹೊಟೇಲಿಗೆ ನುಗ್ಗಿದೆವು. ಊಟ ಬೇಡವಾಗಿತ್ತು, ಅದಕ್ಕೆ ನಾನು ದೋಸೆ ಅಂದೆ, ಇವಳು ಇಡ್ಲಿವಡೆ, ಮಾವ ಮೊಸರುವಡೆ ಅಂದ್ರು. ಅತ್ತೆಗೆ ಕೇಳಿದ್ದಕ್ಕೆ "ದೋಸೆ" ಅಂತಿರಬೇಕಾದ್ರೆ, ಇವಳ ತಮ್ಮ "ಅಯ್ಯೊ ಎಣ್ಣೆ ಇರತ್ತೆ ಅಮ್ಮ, ಬೇಡ. ನಮಗೆ ಇಬ್ರಿಗೂ ಮೊಸರನ್ನ, ಹೊಟ್ಟೆಗೆ ಒಳ್ಳೇದು" ಅಂತ ಹೇಳಿಯೂಬಿಟ್ಟ. ನಾನೂ ದೋಸೆ ಕ್ಯಾನ್ಸಲ್ ಮಾಡಿ ಮೊಸರನ್ನ ಹೇಳಿದೆ. ಊಟವಾದ ಮೇಲೆ ಶಾಪಿಂಗ ಮಾಲ್ ನುಗ್ಗಿ ಮತ್ತಿನ್ನೇನೊ ಖರೀದಿ ಆಯ್ತು, ಎಲ್ಲ ಮನೆಬಳಕೆ ಸಾಮಗ್ರಿಗಳೇ. ಹೊರಗೆ ಬಂದ್ರೆ ಅಲ್ಲಿ ಪಾಪ್ಕಾರ್ನ್ ಮಾಡುತ್ತಿದ್ದು ನೋಡಿ ಜತೆ ಬಂದಿದ್ದ ಮಗು ಅದು ಬೇಕೆಂದು ರಚ್ಚೆ ಹಿಡಿಯಿತು. ಅದಕ್ಕೊಂದು ನಮಗೊಂದು ಅಂತ ಎರಡು ತಂದು ತಗೊಳ್ಳಿ ಅಂದ್ರೆ, ಅತ್ತೆ ಕೈಮುಂದೆ ಮಾಡಿದ್ದರೆ, ಮಾವ "ಈಗ ತಾನೇ ಊಟ ಆಯ್ತು, ಅದೇನು ಚಿಕ್ಕಮಕ್ಕಳ ಹಾಗೆ, ನಮಗೆ ಬೇಡ" ಅಂದಿದ್ದು ಕೇಳಿ, ಚಾಚಿದ ಕೈ ಹಿಂದೆ ಸರಿದಿದ್ದು ಗಮನಿಸಿದೆ. ಏನೊ ಹೇಳಬೇಕೆನ್ನಿಸಿದರೂ ಸರಿಯಾದ ಸಮಯ ಇದಲ್ಲ ಅಂತ ಸುಮ್ಮನಾದೆ.
ಸಂಜೆಯಾಗುತ್ತಿದ್ದಂತೇ, "ಕೊನೆದಾಗಿ ಇಸ್ಕಾನ್ ದೇವಸ್ಥಾನಕ್ಕೆ ಪಯಣ" ಅಂತ ಸಾರಿದಳು, ಒಳ್ಳೇ ಐಟಿ ಕಂಪನಿ ಇದ್ದ ಹಾಗೆ ಇದೆ ಅನ್ನುತ್ತ ಮಾವ ಓಡಾಡಿ ನೋಡುತ್ತಿದ್ದರು, ಅವರಿಗಿದು ನಾಲ್ಕನೇ ಸಾರಿ ಆದ್ರೂ ಅತ್ತೆಗೆ ಹೊಸದು ಅಂತ ಅದು ಇದು ತೋರಿಸುತ್ತಲೇ ನಡೆದಿದ್ದರು. ಅತ್ತೆ ನನ್ನಾಕೆಗೆ "ಶನಿವಾರ ಇಂದು, ಹತ್ತಿರದಲ್ಲಿ ಎಲ್ಲಿ ಮಾರುತಿ ದೇವಸ್ಥಾನ ಇಲ್ವ, ಅಲ್ಲಿ ಹೋಗಬಹುದಿತ್ತು." ಕೇಳುತ್ತಿದ್ರು. ಇವಳು "ಅಯ್ಯೊ ಇಸ್ಕಾನ್ ಪ್ರಸಿದ್ದ ಇಲ್ಲಿ, ಅದು ನೋಡಮ್ಮ" ಅಂತ ತಳ್ಳಿಹಾಕಿದಳು. ಹೊರ ಬರುವಾಗ ಹೊತ್ತಾಗಿದ್ದರಿಂದ, ನೇರ ಮನೆಗೆ ನಡೆದೆವು.
ಊಟದ ಶಾಸ್ತ್ರ ಮುಗಿಸಿ, ಬೇಗನೇ ಮೈಚೆಲ್ಲಿದ್ದರೆ. ಪಕ್ಕದಲ್ಲಿ ಮಲಗಿದ್ದ ಇವಳು ಅವಳ ಸುತ್ತು ಬಳಸಿದ ಕೈ ಎತ್ತಿ ಬೀಸಾಕಿದಳು, ಮತ್ತೆ ಅತ್ತೆ ಕೇಳಿದ್ದಕ್ಕೆ ಬಂದೆ, ಅವಳು ಕೇಳಿದ್ರೆ ಇಲ್ಲ ಅಂದಿದ್ದಕ್ಕೆ ಸಿಟ್ಟು ಇನ್ನೂ ಕಮ್ಮಿಯಾಗಿರಲಿಲ್ಲ. "ಅತ್ತೆನಾ ಹೊರಗೆ ಸುತ್ತಲು ಕರೆದೊಯ್ಯದಿದ್ದರೇ ಸರಿಯಿತ್ತು" ಅಂದೆ, "ರೀ, ನಿಮಗೆ ಬೇಡ ಆಗಿದ್ರೆ ಬರಬಾರದಿತ್ತು, ಅಮ್ಮ ಕೇಳಿದ್ಲು ಅಂತ ಅದ್ಯಾಕೆ ಬರುವ ತೊಂದ್ರೆ ತೆಗೆದುಕೊಂಡಿರಿ" ಅಂತ ಸಿಡುಕಿದಳು. ಸಿಡುಕದೇ ಮತ್ತಿನ್ನೇನು. ನಾ ಹೇಳಿದ್ದು ಇನ್ನೂ ಅವಳಿಗೆ ಅರ್ಥವಾಗಿರಲಿಲ್ಲ. "ನಾಳೇನೇ ಊರಿಗೆ ಕಳಿಸ್ತೀನಿ ಬಿಡಿ ನಿಮಗ್ಯಾಕೆ ತೊಂದ್ರೆ" ಅಂತ ಕೂಡ ಸೇರಿಸಿದಳು. ಈಗ ನಿಜಕ್ಕೂ ಅವಳಿಗೆ ಬೇಜಾರು ಸಿಟ್ಟು ಎರಡೂ ಆಗಿತ್ತು ಅನ್ನುವುದರಲ್ಲಿ ಸಂಶಯವಿರಲಿಲ್ಲ. "ಅರ್ಜೆಂಟ್ ಇದ್ರೆ ನಿಮ್ಮಪ್ಪ, ತಮ್ಮನಿಗೆ ಹೋಗು ಅಂತ ಹೇಳು, ಅತ್ತೆ ಇಲ್ಲೇ ಇರ್ತಾರೆ ನಾ ಅವರನ್ನೊಮ್ಮೆ ಹೊರಗೆ ಕರೆದುಕೊಂಡು ಹೋಗಿ ಬರ್ತೀನಿ" ಅಂದೆ. "ಏನು ಬೇಡ, ನಾನು ಸಿಟ್ಟಾಗಿದೀನಿ ಅಂತ ನನ್ನ ಸಮಾಧಾನಕ್ಕೆ ನೀವೇನೂ ಮಾಡೊದು ಬೇಡ" ಅಂತಂದು ಆಕಡೆ ತಿರುಗಿ ಮಲಗಿದಳು. "ನಿನ್ನ ಸಮಾಧಾನಕ್ಕೇನೂ ಅಲ್ಲ, ನನ್ನ ಮನದ ಸಮಾಧಾನಕ್ಕೆ, ಅತ್ತೆಗಾಗಿ... ಅಷ್ಟೇ" ಅಂತ ನಾನೂ ಮಗ್ಗಲು ಬದಲಿಸಿದೆ. ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಅತ್ತೆಗಾಗಿ ಅಂದ್ರೆ, ಅಮ್ಮನಿಗೇನಾಯ್ತು, ನಿಮಗೇನು ಬೇಜಾರು?" ಅಂತ ಕೆದಕಿದಳು. "ಮುಂಜಾನೆಯಿಂದ ನೋಡ್ತಾ ಇದೀನಿ, ಒಂದು ದಿನಾ ಟೀ ಕುಡಿದ್ರೆ ಏನಾಗತ್ತೆ, ಹಾಗಲಕಾಯಿ ರಸ ತಂದಿಟ್ಟೆ ಅತ್ತೆಗೆ, ಸೀರೆ ಕೆಂಪು ಯಾಕೆ ಅಂದೆ, ಮಾವಾನೊ ಕಾಸ್ಟ್ಲೀ ಸೀರೆ ಅಂತ... ನಿಮಗಿಷ್ಟವಾದದ್ದು ಆರಿಸಿದ್ರಿ, ಕೆಂಪೊ, ಹಸಿರೊ ಅವರಿಷ್ಟ ಅಂತ ಏನೂ ಇಲ್ವಾ, ನಿನಗೆ ಕೆಂಪು ಸರಿಯಿಲ್ಲ ಬಿಡು, ಅವರ ಇಷ್ಟ ನಿರ್ಧರಿಸೊಕೆ ನೀನಾರು? ಸಾವಿರಾರು ತೆತ್ತು ತಂದ್ರೂ ಇಷ್ಟಾನೆ ಇಲ್ಲದಮೇಲೆ ಅದೇನು. ಊಟಕ್ಕೆ ಹೋದ್ರೆ, ನಿಮ್ಮ ತಮ್ಮನ ಹೊಟ್ಟೆ ಸರಿ ಇಲ್ಲ, ತನಗೆ ಬೇಕಾದ್ರೆ ಮೊಸರನ್ನ ತಿನ್ನಲಿ. ಎಣ್ಣೆ ಹಾಕ್ದೆ ದೋಸೆನೇ ಆಗಲ್ವಾ? ಸುಮ್ನೇ ತಿಂದು ಎದ್ದು ಬಂದ್ರು ಅತ್ತೆ. ಪಾಪ್ಕಾರ್ನಗೆ ಕೈಚಾಚಿದ್ದ ಅತ್ತೆ, ಮಾವನ ಮಾತಿಗೆ ಹಿಂದೆಗೆದರು ನೋಡಿದ್ಯಾ? ದೊಡ್ಡದಾಗಿ ಇಸ್ಕಾನ್ ಸುತ್ತಿಸಿದೆ, ಅತ್ತೆಗೆ ಮಾರುತಿ ಮಂದಿರಕ್ಕೆ ಹೋಗಬೇಕಿತ್ತು, ಇಸ್ಕಾನ ಇನ್ನೊಮ್ಮೆ ನೋಡಬಹುದಿತ್ತು, ಭಕ್ತಿಯಿಂದ ತಪ್ಪದೇ ಹೋಗಬೇಕು ಅಂತ ಅವರಂದುಕೊಂಡಿದ್ದು ತಪ್ಪಿಸಿದಿರಲ್ಲ, ಯಾರ ಖುಷಿಗೆ ಹೋಗಿದ್ದೆವೊ ಅವರೇ ಖುಷಿಯಗಲಿಲ್ಲ ಅಂದ್ರೆ ಎಲ್ಲ ವ್ಯರ್ಥ" ಒಂದೇಟಿನಲ್ಲಿ ಮನದಲ್ಲಿದ್ದುದನೆಲ್ಲ ಹೊರಹಾಕಿದೆ. ಮರುಮಾತಾಡಬೇಕೆನಿಸಲಿಲ್ಲ.
ಸುತ್ತಲೂ ಒಮ್ಮೆ ನೋಡಿ, ಹೀಗೆ ನೋಡಿಯೇ ಇರುತ್ತೀರಿ. ಬೇರೆಯವರ ಅಭಿಪ್ರಾಯಗಳ ನಡುವೆ ಸಿಕ್ಕು ತೊಳಲಾಡುವ ಜೀವಗಳನ್ನು. ತಮ್ಮದೇ ಇಷ್ಟನಿಷ್ಟಗಳನ್ನು ಮರೆತು ಎಷ್ಟೊ ವರ್ಷಗಳಾಗಿರುತ್ತದೆ ಇಂಥವರು. ಹುಟ್ಟಿದಾಗ ಅಪ್ಪ, ಮದುವೆಯಾದಮೇಲೆ ಗಂಡ, ನಂತರ ಮಕ್ಕಳು ಎಲ್ಲರ ಹೇಳಿದ್ದು ಕೇಳಿ ಕೇಳಿ ತಮ್ಮಾಸೆಗಳನ್ನು ಹುಗಿದು ಸಮಾಧಿ ಮಾಡಿ ಎಷ್ಟೊ ದಿನವಾಗಿರುತ್ತದೆ ಅವರು. ತಮ್ಮತನ ಅನ್ನುವುದನ್ನು ಎಂದೊ ಕಳೆದುಕೊಂಡು, ಎಲ್ಲೊ ಕಳೆದುಹೋಗಿರುತ್ತಾರೆ. ಬೇರೆಯವರ ಅಭಿಪ್ರಾಯವನ್ನು ಎದುರಿಸುವ ದನಿ ಅಡಗಿಹೋಗಿರುತ್ತದೆ. ನಮ್ಮ ಅಭಿಪ್ರಾಯಗಳು, ನಮ್ಮಲ್ಲಿರಲಿ ಬೇರೆಯವರ ಮೇಲೆ ಯಾಕೆ ಹೇರುವುದು. ಮತ್ತೊಬ್ಬರಿಗೂ ಮನಸಿದೆ, ಅದರದೇ ಆದ ಆಸೆ ಆಕಾಂಕ್ಷೆಗಳಿವೆ ಅಂತ ನಮಗ್ಯಾಕೆ ತಿಳಿಯುವುದಿಲ್ಲ, ನಮಗನಿಸಿದ್ದು ಒಳ್ಳೆಯದೇ ಇರಬಹುದು, ಅವರ ಒಳ್ಳೆಯದಕ್ಕೇ ಇರಬಹುದು, ಆದರೂ ಆಯ್ಕೆ ಅವರದಾಗಿರಲಿ. ಕೆಂಪು ಸೀರೆ ಸರಿ ಕಾಣಲಿಕ್ಕಿಲ್ಲ ಅನ್ನಿ, ಆದರೆ ನಿರ್ಧಾರ ಅವರಿಗೇ ಬಿಡಿ, ದೋಸೆಗೆ ಎಣ್ಣೆ ಜಾಸ್ತಿ ಅನ್ನಿ, ಎಣ್ಣೆ ರಹಿತ ದೋಸೆ ಕೂಡ ಇದೆ, ಕೇಳಲುಬಿಡಿ, ಪಾಪ್ಕಾರ್ನ್ ನಿಮಗೆ ಬೇಡ ಆಗಿರಬಹುದು, ಪಾಪ ಬೇರೆಯವರ ಬಾಯಿ ಕಟ್ಟದಿರಿ. ಮತ್ತೆ ಮೊದಲಿನಂತೆ ಅವರು ತಮ್ಮನ್ನು ತಾವು ವ್ಯಕ್ತಪಡಿಸಲಿಕ್ಕಿಲ್ಲ, ಆ ಸೂಕ್ಷ್ಮಗಳನ್ನು ನೋಡಿ, ಆ ಮಾತುಗಳು ಹೊರಬರಲು ಅವಕಾಶ ಕೊಡಬಾರದೇಕೆ. ಮತ್ತೊಬ್ಬರ ಪರ ವಕಾಲತ್ತು ವಹಿಸುವ ಅಗತ್ಯವೇನಿಲ್ಲ, ಅವರಿಷ್ಟಕ್ಕೆ ಅವರಿರಲು ಬಿಡಿ ಸಾಕು.
ಮತ್ತೆ ಶನಿವಾರ ಬಂತು, "ಅತ್ತೆ ಟೀ" ಅಂದೆ, "ಹಾಗಲಕಾಯಿ ರಸ ಮಾಡ್ತಾ ಇದಾಳೆ" ಅಂದ್ರು. "ಶುಗರ್ಫ್ರೀ ಅಂತ ಗುಳಿಗೆ ಹಾಕಿ ಕುಡೀಬಹುದು ನೋಡಿ" ಅಂದೆ, "ಬಹಳ ದಿನಾ ಆಯ್ತು, ಬಾಯೆಲ್ಲ ಕಹಿಯಾಗಿಬಿಟ್ಟಿದೆ, ಅವಳು ಕೊಡಲ್ಲ" ಅಂತ ನನ್ನಾಕೆ ಬಗ್ಗೆ ಹೇಳಿದ್ರು. ಮುಗುಳ್ನಕ್ಕು "ಎರಡು ಶುಗರಲೆಸ್ ಟೀ" ಅಂದೆ ನನ್ನಾಕೆಗೆ. "ಒಂದು ನಿಮಗೆ, ಮತ್ತೊಂದು ಪಕ್ಕದಮನೆ ಪದ್ದುಗೇನಾ" ಅಂದ್ಲು. "ಹಾಗಾದ್ರೆ ಮೂರು" ಅಂದೆ. ಸುಮ್ಮನೇ ಎರಡು ಕಪ್ಪು ಟೀ, ಒಂದು ಹಾಗಲಕಾಯಿ ರಸ ತಂದಿಟ್ಲು, ಟೀ ತನಗೇ ಅಂದುಕೊಂಡಿರಬೇಕು. ಒಂದು ಟೀ ಕಪ್ಪಿಗೆ ಶುಗರ್ಫ್ರೀ ಗುಳಿಗೆ ಹಾಕಿ ಅತ್ತೆಗೆ ಕೊಟ್ಟು, ನಾನೊಂದು ಎತ್ತಿಕೊಂಡೆ. "ಒಮ್ಮೆ ಹಾಗಲಕಾಯಿ ರಸ್ ಟ್ರೈ ಮಾಡು" ಅಂತ ನನ್ನಾಕೆಗಂದೆ ಒಂದು ಸಿಪ್ಪು ಹೀರಿದವಳ ಮುಖ ಇಂಗುತಿಂದ ಮಂಗನಂತಾಗಿತ್ತು. ಅತ್ತೆ ಅಮೃತವೇ ಸಿಕ್ಕಿದೆಯೇನೊ ಅಂತ ಒಂದೊಂದೆ ಗುಟುಕು ಹೀರುತ್ತಿದ್ದುದು ನೋಡುವಂತಿತ್ತು, ಸಿಕ್ಕ ಒಂದೇ ಚಾಕಲೇಟನ್ನು ಮಗು ಕಚ್ಚದೇ ಖಾಲಿಯಾದೀತೆಂದು ಅಷ್ಟಷ್ಟೇ ಸೀಪುವಂತೆ.
ಸ್ನಾನವಾದಮೇಲೆ "ಹತ್ತಿರದಲ್ಲೆ ವಿಜಯನಗರ ಮಾರುತಿ ಮಂದಿರವಿದೆ, ಹೋಗಬೇಕಾ" ಅಂತ ಅತ್ತೆಗಂದರೆ, ತಕ್ಷಣದಲ್ಲಿ ತಯ್ಯಾರಾಗಿದ್ದರು. ಅತ್ತೆ ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದರೆ, ನಾವಿಬ್ಬರೂ ಕೂತು ಹರಟೆ ಹೊಡೆದೆವು. ಬರಬೇಕಾದರೆ ಏನೊ ಸಮಾಧಾನ ಅತ್ತೆ ಮುಖದಲ್ಲಿ. ಕಳೆದವಾರ ತಪ್ಪಿಸಿದ್ದಕ್ಕೆ ಇನ್ನೆರಡು ಸುತ್ತು ಜಾಸ್ತಿಯೇ ಪ್ರದಕ್ಷಿಣೆ ಹಾಕಿದಂತಿತ್ತು. ಟಿಫಿನ್ನು ಮನೆಯಲ್ಲೇನು ಬೇಡ ಇಲ್ಲೇ ಮಾಡೋಣ ಅಂತ ಅವಳ ತಮ್ಮನನ್ನೂ ಅಲ್ಲೆ ಹೊಟೇಲಿಗೆ ಕರೆದೆವು, ಬೇಕೇಂತಲೇ ನಾ ಕರೆಸಿದೆ ಅಂದರೂ ತಪ್ಪಿಲ್ಲ. ಸರ್ವರ ಆರ್ಡರ ಅಂತಿದ್ದಂಗೆ ಎಂದಿನಂತೆ ಅವಳ ತಮ್ಮ "ನಂಗೆ ಅಮ್ಮಂಗೆ ಇಡ್ಲಿ, ಎಣ್ಣೆ ಎನೂ ಇರಲ್ಲ" ಅಂದ, ನಾ ಅದಕ್ಕೇ ಕಾಯುತ್ತಿದ್ದೆ. "ಏನೊ ಅಮ್ಮನ ಊಟ ತಿಂಡಿ ಕಾಂಟ್ರಾಕ್ಟ ನೀನು ತೆಗೆದುಕೊಂಡೀದೀಯಾ, ನಿನಗೆ ಹೊಟ್ಟೆ ಸರಿಯಿಲ್ಲ ಅಂದ್ರೆ ಇಡ್ಲಿನಾದ್ರೂ ತಿನ್ನು, ಮೊಸರನ್ನನಾದ್ರೂ ತಿನ್ನು, ಅವರಿಗೇನು ಬೇಕು ಅವರೇ ಹೇಳಲಿ" ಅಂತ ಕುಟುಕಿದೆ. "ಅಲ್ಲ, ಅಮ್ಮನ ಆರೋಗ್ಯಕ್ಕೆ ಒಳ್ಳೇದು ಅಂತ ನಾನೇ ಹೇಳ್ತಿದ್ದೆ" ಅಂದ. ಆದರೆ ನನ್ನ ಮಾತು ತಾಕುವಲ್ಲಿ ತಾಕಿಯಾಗಿತ್ತು. "ನನಗೆ ಎಣ್ಣೆ ಇಲ್ಲದ ದೋಸೆ" ಅಂದೆ. ಅತ್ತೆ "ಎಣ್ಣೆ ಇರಲ್ವಾ ದೋಸೇಲಿ" ಅಂದ್ರು. "ಹೇಳಿದ್ರೆ ಹಾಕಲ್ಲ, ಬೇಕಾದ್ರೆ ಟ್ರೈ ಮಾಡಿ" ಅಂದೆ. ದೋಸೆ ಆರ್ಡರ ಮೂರಾಯ್ತು, ನನ್ನಾಕೆ ಕೂಡ ಅದನ್ನೇ ಹೇಳಿದ್ಲು.
ಮರಳಿ ಮನೆಗೆ ಬಂದರೆ ಅತ್ತೆ ಇಂದೇ ಊರಿಗೆ ಹೊರಟಿದ್ದರು, ಮೊದಲಸಾರಿ ನಮ್ಮಲ್ಲಿಗೆ ಬಂದಿದ್ದಕ್ಕೆ ಅಂತ ಉಡುಗೊರೆ ಇದು ಅಂತ ಒಂದು ಪ್ಯಾಕ್ ಕೊಟ್ಟು, ಅರಿಷಿನ ಕುಂಕುಮ ಕೊಟ್ಟಳು ನನ್ನಾಕೆ. ತೆಗೆದು ನೋಡಿ ಅಂತ ಅಲ್ಲೇ ಕಾದೆವು ನಾನು ನನ್ನಾಕೆ. ಈಗೆಲ್ಲೆ ಇದು ಯಾಕೆ ಅನ್ನುತ್ತಲೇ ತೆಗೆದು ನೋಡಿದ ಅತ್ತೆ, ಕಣ್ಣು ಕೆಂಪಾದವು, ಸಿಟ್ಟಿನಿಂದ ಅಲ್ಲ ಕಣ್ರೀ, ಸೀರೆ ಕೆಂಪು ಇತ್ತಲ್ಲ ಅದಕ್ಕೆ. ಸೇಠುಗೆ ಅದನ್ನು ಎತ್ತಿಡಲು ಹೇಳಿದ್ದೆವಲ್ಲ, ಅದೇ ಅತ್ತೆ ಆಸೆ ಪಟ್ಟದ್ದು. ಅತ್ತೆ ಅದನ್ನು ನೀವಿ ಮಡಿಕೆ ಸರಿ ಮಾಡುತ್ತಿದ್ದುದು ನೋಡುತ್ತಿದ್ದರೆ ಗೊತ್ತಾಗುತ್ತಿತ್ತು ಎಷ್ಟು ಇಷ್ಟವಾಗಿದೆ ಅಂತ. "ಉಟ್ಕೊಂಡು ಅಪ್ಪನ ಮುಂದೆ ಒಮ್ಮೆ ಹಾದು ಹೋಗು, ಇನ್ನೊಮ್ಮೆ ಹನಿಮೂನ್ಗೆ ಹೋಗೋಣ ನಡೆ ಅನ್ನಲಿಲ್ಲ ಅಂದ್ರೆ ಕೇಳು" ಅಂತ ಚಟಾಕಿ ಹಾರಿಸಿದಳು ನನ್ನಾಕೆ, ಅತ್ತೆ ನಾಚಿ ನೀರಾದರೆ ಕೆನ್ನೆಗೆ ಕೂಡ ಕೆಂಪಡರಿತ್ತು.
ಟ್ರೇನ್ ಹತ್ತಿಸಿ ಕಿಟಕಿಯಿಂದ ಅತ್ತೆ ಕೈಲಿ ಪಾಪ್ಕಾರ್ನ ಪ್ಯಾಕೆಟ್ ಕೊಟ್ಟು, ಮಾವನಿಗೂ ಕೇಳುವಂತೆ "ದಾರಿಯಲ್ಲಿ ಟೈಮ್ಪಾಸ್ ಆಗತ್ತೆ, ಬರೀ ಚಿಕ್ಕಮಕ್ಕಳೆ ತಿನ್ನಬೇಕಂತಿಲ್ಲ, ಇಷ್ಟವಾದವರು ತಿನ್ನಬಹುದು" ಅಂತ ಅತ್ತೆಗೆ ಹೇಳಿ, ಮಾವನಿಗೂ ಒಂದು ಶಾಕ್ ಕೊಟ್ಟೆ. ಮುಂದಿನ ಬಾರಿ ಬಂದಾಗ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಖಂಡಿತ ಆಗಿರುತ್ತದೆ ಅಂತನಿಸಿತು. ಟ್ರೇನ್ ಹೊರಟರೆ ಕಿಟಕಿಯಲ್ಲಿ ಕೈ ಬೀಸುತ್ತಿದ್ದ ಅತ್ತೆ ಕಣ್ಣಲ್ಲೆ ಕೃತಜ್ಞತೆ ಹೇಳಿದಂತಿತ್ತು. ಟ್ರೇನ ಹೊರಟಾದ ಮೇಲೆ ಮನೆಗೆ ಮರಳುತ್ತಿದ್ದರೆ "ರೀ ನೀವು ಮನಶಾಸ್ತ್ರಜ್ಞ ಆಗಬೇಕಿತ್ತು" ಅಂತ ನನ್ನಾಕೆ ಅಂದ್ಲು, "ಸೈಕೊಲೊಜಿ ಓದಿ ಸೈಕೊ ಆಗು ಅಂತೀಯಾ" ಅಂತ ಕೀಟಲೆ ಮಾಡಿದೆ. "ಅಮ್ಮನ ಬಗ್ಗೆ ಹೀಗೆಂದೂ ನನಗೆ ಅನ್ನಿಸಿರಲೇ ಇಲ್ಲ, ಅದು ಹೇಗೆ ನಿಮಗೆ ಆ ಸೂಕ್ಷ್ಮ ಸಂಗತಿಗಳು ಕಾಣುತ್ತವೆ ಅಂತೀನಿ" ಅಂತ ಕೇಳಿದಳು, "ಮೈಕ್ರೋಸ್ಕೊಪ್ ಹಾಕಿಕೊಂಡು ನೋಡಿದ್ರೆ ಕಾಣ್ತದೆ" ಅಂತ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಲಲನೆಯೆಡೆಗೆ ನೋಡುತ್ತಿದ್ದರೆ, ಟ್ರೇನ ಸ್ಟೇಶನ್ ಪ್ಲಾಟ್ಫಾರ್ಮ್ ಮೇಲಿದಿವೀ ಅನ್ನೊದು ಮರೆತು, ಕೈತೋಳು ಬಳಸಿ ಗಟ್ಟಿ ಹಿಡಿದುಕೊಂಡು ನಡೆದಳು, ಏನೊ ಸಾಧಿಸಿದ ಸಮಾಧಾನದೊಂದಿಗೆ ಹೆಜ್ಜೆಯಿಡತೊಡಗಿದೆ... ಮತ್ತೆ ಸಿಗೋಣ ಹೀಗೆ ಮನದ ಮಾತುಗಳೊಂದಿಗೆ...
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/nannatte.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

