ಮನೆಗೆ ಬಂದು ಬಾಗಿಲು ತೆಗೆದು, ಕೈಕಾಲು ಮುಖ ತೊಳೆದು ಸೀದಾ ಅವಳ ಪಾಕಶಾಲೆಗೆ ಕಾಲಿಟ್ಟೆ, ಅವಳಾ ಮಲಗಿರ್ತಾಳಲ್ಲ ಎಲ್ಲಿ ಹೋಗ್ತಾಳೆ, ಆದರೆ ಪಾಕಶಾಲೆಯಲ್ಲೇನಿದೆ, ಏನಿದೆ ಅಲ್ಲಿ.. ಏನಿಲ್ಲ! ಅದೇ ಟೀ ಕುಡಿದು ಖಾಲಿ ಮಾಡಿಟ್ಟ ಕಪ್ಪು, ಅದನ್ನು ಮಾಡಿದ ಬೋಗುಣಿ, ಸೋಸಿದ ಜಾಳಗಿ(ಜಾಲರಿ) ಮಾತ್ರ. ಪ್ರತೀ ದಿನ ಬಂದಾಗ ಅಲ್ಲಿರುತ್ತಿದ್ದ ನೀಟಾಗಿ ಊಟ ಬಡಿಸಿಟ್ಟ ತಟ್ಟೆ ಎಲ್ಲಿ?... ಏನಾಯ್ತು ಅವಳಿಗೆ, ಅಡಿಗೆ ಮಾಡಿಲ್ವೇ ಇಂದು, ಹುಷಾರಿಲ್ವೇ, ಮರೆತು ಹೋದಳೇ. ಅಯ್ಯೊ ಎಲ್ಲ ನಾನೇ ಯೋಚಿಸ್ತಿದೀನಲ್ಲ, ಇಲ್ಲೇ ಮಲಗಿರ್ತಾಳೆ ಎಲ್ಲಿ ಹೋಗ್ತಾಳೆ, ಎಬ್ಬಿಸಿ ಕೇಳೊಣ ಅಂತ ಬೆಡರೂಮಿಗೆ ಬಂದೆ, ಅಲ್ಲೇನಿದೆ, ಏನಿಲ್ಲ... ಅಲ್ಲೂ ಏನಿಲ್ಲ... ಎಲ್ಲಿ ಅವಳು? ಹಾಲ್, ಹಿತ್ತಿಲು, ವರಾಂಡ, ಕೊನೆಗೆ ಬಾತರೂಮ್ ಟಾಯ್ಲೆಟ್ ಎಲ್ಲ ಕಡೇ ಹುಡುಕಾಡಿಯಾಯ್ತು ಎಲ್ಲಿ ಅವಳು, ಎಲ್ಲೂ ಇಲ್ಲ. ಎಲ್ಲಿ ಹೋದ್ಲು ಅದೂ ಇಷ್ಟೊತ್ತಿನಲ್ಲಿ ಅದೂ ನನಗೇನೂ ಹೇಳದೇ ಎಲ್ಲೂ ಹೋಗಲ್ಲ, ಹೋದರೂ ಇಷ್ಟೊತ್ತು ಲೇಟಾದರೂ ಫೋನು ಮಾಡಿ ಇಲ್ಲಿದೀನಿ ಬರ್ತೀನಿ ಅಂತಾದರೂ ಹೇಳೊಳು, ಇಂದೇನು ಇಲ್ಲ, ಇಲ್ಲೆ ಪಕ್ಕದ ಮನೆಗೆ ಹೋಗೀದಾಳ, ಪಕ್ಕದ ಮನೆ ಪದ್ದು ಹತ್ರ ಬಿಟ್ರೆ ಎಲ್ಲೂ ಹೋಗಲ್ಲ, ಅದೊ ಅವರ ಮನೇಲಿ ಒಂದು ಲೈಟೂ ಉರೀತಿಲ್ಲ, ಕಿಟಕೀಲಿ ಕಾಣಿಸ್ತಿದೆ, ಎಲ್ಲ ಮಲಗೀದಾರೆ, ಎಲ್ಲಿ ಹೋದಳು. ಹಾಗೇ ಸೊಫಾದ ಮೇಲೆ ಕುಸಿದ ಕುಳಿತರೆ, ಅವಳ ಮೊಬೈಲ ಕೆಳಗಿತ್ತು ಪುಟಿದೆದ್ದೆ, ಅದನ್ನು ತೆಗೆದು ಪಕ್ಕಕ್ಕಿಟ್ಟೆ, ಮೊಬೈಲೂ ಇಲ್ಲೇ ಇದೆ ಎಲ್ಲಿ ಹೋದ್ಲು. ನಿಧಾನ ಬೆವರ ತೊಡಗಿದೆ.... ಹೊರಗೆ ಜಿಟಿ ಜಿಟಿ ಮಳೆಯಾಗುತ್ತಿದ್ದರೂ...
ಈ ವಾರವೆಲ್ಲ ಬಹಳೇ ಬಹಳ ಕೆಲಸದಲ್ಲಿ ನಿರತನಾಗಿದ್ದೆ, ಅವಳೊಂದಿಗೆ ಸರಿಯಾಗಿ ಮಾತನಾಡಲೂ ಆಗಿರಲಿಲ್ಲ, ಮುಂಜಾನೆ ಟಿಫಿನ್ನು ಮಾಡುತ್ತ ಡೈನಿಂಗ ಟೇಬಲ್ಲಿನ ಮೇಲೂ ಅದೇ ಆಫೀಸು, ಕೆಲ್ಸ, ಬಹಳ ಟೆನ್ಷನ್ ಇತ್ತು, ಸಂಜೆ... ಅಲ್ಲಲ್ಲ ಅದು ರಾತ್ರಿ, ಬರೋದು ಕೂಡ ಲೇಟಾಗುತ್ತಿತ್ತು, ಹೀಗೇ ಈವತ್ತೂ ಲೇಟಾಗಿದ್ದುದು, ಎಲ್ಲಿ ಹೋಗ್ತಾಳೆ ಮನೇಲೇ ಇರ್ತಾಳೆ ಅಂತನಕೊಂಡಿದ್ದು ಸುಳ್ಳಾಗಿತ್ತು, ನಾನೆಲ್ಲಿ ಮಾತಾಡಿಲ್ಲ ಅಂತ ಬೇಜಾರಾಗಿ ಹೊರಟು ತವರಿಗೆ ಹೋದಳಾ, ಫೋನು ಮಾಡಿ ಕೇಳೋಣ ಅಂತ ಫೋನು ಕೈಗೆತ್ತಿಕೊಂಡೆ, ಏನಂತ ಕೇಳಲಿ? ಅವಳಲ್ಲಿ ಬಂದೀದಾಳ ಅಂತಾನಾ? ಅಲ್ಲಿರದಿದ್ದರೆ, ಮರುಪ್ರಶ್ನೆ ಗ್ಯಾರಂಟಿ ಎಲ್ಲಿ ಹೋಗಿದಾಳೆ ನಿಮಗೆ ಹೇಳದೇ? ಅಂತ, ಏನಂತ ಹೇಳಲಿ ಆಗ, ಮೊದಲೇ ನನಗೆ ಗೊತ್ತಿಲ್ಲ ಇನ್ನು ಅವರೂ ಟೆನ್ಷನ್ ಮಾಡ್ಕೋತಾರೆ, ಅವಳಿಗೇನಾಗಿರಲ್ಲ ಇಲ್ಲೇ ಎಲ್ಲೊ ಹೋಗಿರ್ತಾಳೆ, ಬರ್ತಾಳೆ, ಸುಮ್ನೇ ನಾನೇ ಬಹಳ ಯೋಚಿಸ್ತಿದೀನಿ, ಅಂತ ಸಮಾಧಾನಿಸಿಕೊಂಡೆ, ಅದರೂ ತಲೇಲಿ ಪ್ರಶ್ನೆ ಕೊರೆಯುತ್ತಿತ್ತು ಹುಳುಕೊರೆದಂತೆ. ಅಮ್ಮನಿಗೆ ಫೋನು ಮಾಡಿದರೆ? ಅಯ್ಯೊ ಹಾಗೇನಾದ್ರೂ ಮಾಡಿದ್ರೆ ಚೆನ್ನಾಗಿ ಬೈಸಿಕೋತೀನಿ, ಪಾಪ ಒಬ್ಳೆ ಮನೇಲಿ ಇರ್ತಾಳೆ, ಹುಷಾರಾಗಿ ನೋಡ್ಕೊ ಅಂತ ಮೊದಲೇ ಅಮ್ಮ ಎಚ್ಚರಿಕೆ ಕೊಟ್ಟಿದ್ದು ನೆನಪಿಗೆ ಬಂತು, ಮೊದಲೇ ಬೆಂಗಳೂರು ಮಹಾನಗರ ಬೆಳೆದಂತೆ ಅಪರಾಧ ದುಷ್ಕೃತ್ಯಗಳು ಜಾಸ್ತಿ ಆಗ್ತಿವೆ, ಯಾರಾದರೂ ಅಪಹರಿಸಿದರೋ?
ಏನಿದು ಏನೇನೊ ಯೊಚಿಸ್ತಿದೀನಿ, ಹಾಗೇನು ಆಗಿರಲ್ಲ ಅಂತ ಮನಸಂದರೂ ಯೋಚನೆಗಳು ಬಿಡಬೇಕಲ್ಲ, ಒಂದು ತಿಳಿ ಅಂದ್ರೆ ಹತ್ತು ತಿಳಿಯುತ್ತಿತ್ತು, ಯಾರಾದರೂ ಅಪಹರಿಸಿದ್ರೆ ಫೋನು ಮಾಡಿ ಇಷ್ಟೊತ್ತಿಗೆ ದುಡ್ಡು ಕೇಳಿರೊರು, ನಾನೇ ಬಂದು ಅರ್ಧ ಘಂಟೆ ಆಯ್ತು, ಅದೂ ಇಲ್ಲ, ಮತ್ತೆ ಇನ್ನೂ ಎನೊ ಭಾರಿ ಅನಾಹುತ ಛೇ ಹಾಗಾಗಿರಲ್ಲ, ಬಿಟ್ತು ಅನ್ನು, ಎಲ್ಲ ಒಳಿತಾಗಲಿ, ಯಾರನ್ನ ಕೇಳಲಿ ಈಗ ಅಂತ ಶತಪಥ ಅತ್ತಿಂದಿತ್ತ ತಿರುಗಿದೆ, ಕೂತರೆ ಕೈಬೆರೆಳು ಹಾಗೇ ಟೀಪಾಯಿ ಬಾರಿಸುತ್ತಿದ್ದವು, ಕೋಡಿಂಗ ಮಾಡುವಾಗ ಕಂಪ್ಯೂಟರ್ ಕೀಬೋರ್ಡ ಮೇಲೂ ಅಷ್ಟು ಜೋರಾಗಿ ಓಡಾಡಿರಲಿಕ್ಕಿಲ್ಲ, ಕೊನೇಪಕ್ಷ ಪಕ್ಕದಮನೇಲಿ ಹೇಳಿ ಹೋಗಿರ್ತಾಳೆ ಅವರನ್ನೇ ಕೇಳಿದ್ರೆ, ಪದ್ದು ನೆನಪಿಗೆ ಬಂದ್ಲು, ಮಲಗೀದಾರೆ ಅನಿಸತ್ತೆ, ಎಬ್ಬಿಸಿದರಾಯ್ತು, ಏನಂತ "ಪದ್ದು" ಅಂತಾನಾ, ಹಾಗೆ ಹೇಗೆ ಕರೆಯೋಕೆ ಆಗತ್ತೆ, ಹಾಗಾದ್ರೆ ನಿಜ ಹೆಸರೇನು, ಪದ್ಮಾ, ಪದ್ಮಾವತಿ, ಪದ್ಮಲತಾ... ಏನೂ ನೆನಪಿಗೆ ಬರ್ತಾ ಇಲ್ವೇ... ಪದ್ಮಪ್ರಿಯ.. ಅದು ಉಡುಪಿ ಎಂಎಲ್‌ಏ ಹೆಂಡತಿ ಹೆಸರಲ್ವೇ, ಅದೇ ದೆಹಲಿಯಲ್ಲಿ ಅವಳ ಶವ ದೊರಕಿತಲ್ಲ ಆ ಪದ್ಮಪ್ರಿಯ.. ಹಾಗೆ ನನ್ನಾಕೆಯೂ ನನ್ನ ಬಿಟ್ಟು.. ಛೀ ನನ್ನ ಯೋಚನೆಗಳಿಗಿಷ್ಟು... ಹಾಗೆಲ್ಲ ಏನಿಲ್ಲ, ಮನಸು ಇನ್ನೂ ಬಿಡ್ತಿಲ್ಲ, ಹೌದು ಮನೆಗೆ ಬರೋದೆ ಲೇಟು ಅವಳೊಂದಿಗೆ ಸರಿಯಾಗಿ ಮಾತಾಡೂ ಇಲ್ಲ, ಅದಕ್ಕೆ ಬೇಜಾರಾಗಿ ನನ್ನ ಬಿಟ್ಟು ಓಡಿಹೋಗಿದ್ರೆ, ಅಂತ ಇನ್ನೂ ಬಡಕೊಳ್ಳುತ್ತಿತ್ತು. ಅಷ್ಟರಲ್ಲೇ ಪದ್ದು ಹೆಸರು ಜ್ಞಾಪಕಕ್ಕೆ ಬಂತು, ಪದ್ಮಿನಿ ಅಲ್ವಾ, ಅದು ಈಗ ಬೇಡವಾಗಿತ್ತು, ಅವಳು ಮನೆ ಬಿಟ್ಟು ಹೋಗುವಾಗ ಲೇಟರು ಗಿಟರು ಏನಾದ್ರೂ ಬರೆದಿಟ್ಟು ಹೋಗೀದಾಳೊ ಅಂತ ಹುಡುಕುತ್ತಿದ್ದೆ, ಡ್ರಾವರು, ಅವಳ ಡ್ರೆಸಿಂಗ್, ಟೇಬಲ್ಲು, ಟೀವಿ, ಫ್ರಿಡ್ಜು, ಕೊನೆಗೆ ತಲೆದಿಂಬು ಕೆಳಗೂ ನೋಡಿದ್ದಾಯ್ತು.. ಉಹೂಂ ಅಲ್ಲೂ ಇಲ್ಲ. ಎಲ್ಲಿ ಎಲ್ಲಿ ಅಂತ ಬೆಡಶೀಟು, ಹಾಸಿಗೆ, ಹೊದಿಕೆ ಎಲ್ಲ ಕಿತ್ತು ಬೀಸಾಡಿದ್ದಾಯ್ತು. ಮತ್ತೆ ಹೊರಗೆ ಬಂದು ಕೂತು, ಯಾರಿಗೆ ಕೇಳಲಿ ಅಂತ ಯೋಚಿಸುತ್ತ ಅಕ್ಕ ಮಾಮನಿಗೆ ಫೋನು ಮಾಡತೊಡಗಿದೆ, ಬೆಂಗಳೂರಿನಲ್ಲಿ ಈಗ ನಾ ಇಂಥ ಪರಿಸ್ಠಿತಿಯಲ್ಲಿ ಫೋನು ಮಾಡಬಹುದಾಗಿದ್ದರೆ ಅವರಿಗೆ ಮಾತ್ರ, ಅತ್ತಲಿಂದ ಅಕ್ಕ ಲೇಟಾಗಿ ಬರೊ ನನ್ನ ಬಯ್ದಳು, ಮಾಮ ಪೋಲೀಸು ಕಂಪ್ಲೇಂಟ ಎನಾದ್ರೂ ಕೊಡೋದೊ ಹೇಗೆ ಅಂತಂದು, ಏನಕ್ಕೂ ನಾವು ಬರೊವರೆಗೆ ತಾಳು, ಮೊದಲು ಎಲ್ಲರಿಗೂ ಫೋನು ಮಾಡಿ ಕೇಳಿದರಾಯ್ತು ಅಂತ ಫೋನಿಟ್ಟರು.
ಸ್ವಲ್ಪ ಧೈರ್ಯ ಬಂತು, ತಲೆಗೂದಲಲ್ಲಿ ಕೈ ಹುದುಗಿಸಿಟ್ಟುಕೊಂಡು ಹಾಗೆ ಬಾಗಿ ಕೂತಿದ್ದೆ, "ಕೀರರರರ..." ಅಂತ ಶಬ್ದದೊಂದಿಗೆ ಬಾಗಿಲು ತೆರೆದುಕೊಂಡಿತು, ಕೈತುಂಬ ರಾಶಿ ಹೊರೆಬಟ್ಟೆ ತೆಗೆದುಕೊಂಡು, ಒಳಗೆ ಬಂದವಳೇ ಬಾಗಿಲು ಹಾಕಿದಳು, ಹೋದ ಜೀವ ಬಂದಂತಾಯಿತು, ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡೆ, ಉಸಿರುಗಟ್ಟುವಷ್ಟು ಗಟ್ಟಿಯಾಗಿ, "ರೀ ಏನಾಯ್ತು?" ಅಂತ ಅವಳು ಕೇಳುತ್ತಲೇ ಇದ್ಲು, ನಾನೇನು ಹೇಳುತ್ತಿಲ್ಲ, ಬೆನ್ನಿಗೆ ನಾಲ್ಕು ಗುದ್ದು ಕೊಟ್ಟೆ, ಅವಳ ಮುಖವನ್ನೊಮ್ಮೆ ನೋಡಿ ಮತ್ತೆ ಅಪ್ಪಿಕೊಂಡೆ, ಕೈಲಿದ್ದ ಬಟ್ಟೆ ಚೆಲ್ಲಿ, ತಲೆ ಸವರಿದಳು, ನನ್ನ ಪಾದದಮೇಲೆ ಹತ್ತಿ ನಿಂತು ಹಿಮ್ಮಡಿ ಎತ್ತರಿಸಿ ಹಣೆಗೆ ಮುತ್ತನ್ನಿಟ್ಟಳು. ಆಗಲೇ ನಾ ಮತ್ತೆ ಪ್ರಜ್ಞೆಗೆ ಬಂದಿದ್ದು.
ಮೊದಲು ಮೊಬೈಲು ತೆಗೆದುಕೊಂಡು, ಮಾಮನಿಗೆ ಫೋನು ಮಾಡಿ ಅವಳೆಲ್ಲಿ ಹೋಗಿಲ್ಲ, ಇಲ್ಲೇ ಇದಾಳೆ ಉಳಿದದ್ದು ನಾಳೆ ಹೇಳ್ತೀನಿ, ನಾನೆ ಸುಮ್ನೆ ಹೆದರಿದ್ದೆ ಅಂದೆ, ಅಕ್ಕ "ಹುಚ್ಚಾ, ನಮಗೂ ಹುಚ್ಚು ಹಿಡಿಸಿಬಿಡ್ತೀಯಾ.." ಅಂತ ಬಯ್ದಳು ನಗುತ್ತ... ಅಷ್ಟರಲ್ಲಿ ಬಿದ್ದ ಬಟ್ಟೆಗಳನ್ನೆಲ್ಲ ಎತ್ತಿ ಅವಳು ಇಡಲು ಬೆಡರೂಮಿಗೆ ಹೋಗಿದ್ದಳು ಅಲ್ಲಿನ ಸ್ಠಿತಿ ನೋಡಿ ಹೊರಗೆ ಬಂದು, "ಏನ್ರೀ ಆಯ್ತು, ಹಾಸಿಗೆ ಎಲ್ಲ ಯಾಕೆ ಹಾಗೆ ಚೆಲ್ಲಾಪಿಲ್ಲಿಯಾಗಿದೆ, ಮೊದ್ಲು ಏನಾಯ್ತು ಹೇಳಿ ನನಗೆ" ಅಂತ ಬಟ್ಟೆ ಅಲ್ಲೇ ಬೀಸಾಡಿ ಬಂದ್ಲು, ಅವಳ ಕೈ ಹಿಡಿದುಕೊಂಡು ಸೊಫಾದಲ್ಲಿ ಕುಳಿತೆ, "ನನ್ನೆಂದಾದರೂ ಬಿಟ್ಟು ಹೋಗ್ತೀಯ" ಅಂದೆ "ಹಾಂ!!! ಯಾಕೆ ಬೇರೆ ಯಾರದ್ರೂ ಹುಡುಗಿ ಇಷ್ಟವಾಗಿ ಬಿಟ್ಲಾ ಹೇಗೆ, ಅವಳ ಮದುವೆ ಆಗಬೇಕಂತ ನಾ ಬಿಟ್ಟು ಹೊಗ್ತೀನಾ ಅಂತ ಕೇಳ್ತಿದೀರಾ?" ಅಂದ್ಲು ಅವಳ ಯಾವತ್ತಿನ ತರಲೇ ಧಾಟಿಯಲ್ಲೇ. ನಾ ಸುಮ್ಮನೆ ನಕ್ಕೆ "ನಾನ್ಯಾಕ್ರಿ ಬಿಟ್ಟು ಹೋಗ್ಲಿ, ಈಗ ಏನಾಯ್ತು ಅಂತ ಹೇಳ್ತೀರೊ ಇಲ್ವೊ, ಇಲ್ಲಂದ್ರೆ ಬಿಟ್ಟು ಹೋಗ್ತೀನಿ ನೋಡಿ" ಅಂತ ಹೆದರಿಸಿದ್ಲು, "ಎಲ್ಲಿದ್ದೆ" ಅಂದೆ, "ಮೇಲೇ ಟೆರೆಸಿನಲ್ಲಿ, ಆ ತಗಡಿನ ಶೀಟು ಹಾಕಿ ನೀರು ಬೀಳದಂತೆ ಮರೆ ಮಾಡಿಲ್ವಾ ಅಲ್ಲಿ ಕೂತಿದ್ದೆ, ಮಳೆ ಬರ್ತಿದೆ ಅಂತ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ನಾ, ಮಳೆ ಒಮ್ಮೆಲೆ ಜೋರಾಗಿ ಬಿಟ್ತು, ಹಾಗೆ ಕೆಳಗೆ ಬಂದ್ರೆ ಎಲ್ಲ ಬಟ್ಟೆ ಮತ್ತೆ ತೋಯ್ದು ಹೋಗ್ತವೆ, ಸ್ವಲ್ಪ ಮಳೆ ಕಮ್ಮಿ ಆಗಲಿ ಅಂತ ಅಲ್ಲೇ ಕೂತಿದ್ದೆ" ಅಂದ್ಲು. "ಮಳೆ ಇನ್ನೊಂದು ಸ್ವಲ್ಪ ಹೊತ್ತು ಹೀಗೆ ಸುರಿದಿದ್ದರೆ, ಇಲ್ಲಿ ದೊಡ್ಡ ರಾಧ್ಧಾಂತವಾಗಿರೋದು" ಅಂದೆ, ಏನು ಅನ್ನುವಂತೆ ನೋಡಿದ್ಲು, ಆದ ಸಂಗತಿಯನ್ನೆಲ್ಲ ಒಂದೊಂದಾಗಿ ಹೇಳಿದೆ, ಬಿದ್ದು ಬಿದ್ದು ನಕ್ಕಳು. "ನೀನೇನು ನಗ್ತೀಯಾ ನಂಗೇನಾಗಿತ್ತು ನನಗೇ ಗೊತ್ತು" ಅಂದೆ, "ಅಲ್ಲ ಏನೇನು ಯೊಚ್ನೆ ಮಾಡ್ತೀರೀ ನೀವು, ಅಲ್ಲ ನಾನ್ಯಾಕೆ ನಿಮ್ಮನ್ನ ಬಿಟ್ಟು ಹೋಗ್ಲಿ ಹೇಳಿ, ಮದುವೆಗೆ ಮುಂಚೇನೆ, ನಿಮ್ಮ ಈ ಲೇಟಾಗಿ ಬರೋದು, ಟೆನ್ಷನ್ ಕೆಲಸ ಎಲ್ಲ ಹೇಳಿದ್ರಲ್ಲ, ನಂಗೊತ್ತಿತ್ತು, ಇತ್ತೀಚಿನ ಕೆಲಸದ ಅನಿಶ್ಚಿತತೆ ಬಹಳ ತಲೆನೋವಾಗಿರೊವಾಗ, ನಾನು ಹಾಗ್ಯಾಕೆ ಯೋಚಿಸಲಿ" ಅಂದ್ಲು. ಹಾಗೆ ಅಲ್ಲೇ ಒರಗಿಕೊಂಡೆ, "ನಿಂಗೆ ನೆನಪಿದ್ಯಾ ಮದುವೆಯಾದ ಹೊಸತರಲ್ಲಿ" ಅಂತಿದ್ದಂಗೆ, "ಈಗ ಅದ್ಯಾಕೆ" ಅಂತ ನಾಚಿದಳು, "ಬೇಗ ಬರ್ತಿದ್ದೆ, ಘಂಟೆಗಟ್ಲೆ ನಿನ್ನೊಂದಿಗೆ ಮಾತು, ಹರಟೆ, ನಗು, ಎಲ್ಲಿ ಹೋಯ್ತು ಅದು" ಅಂದೆ. "ಆಫೀಸಲ್ಲಿ ಏನೇನು ನೆಪ ಹೇಳ್ತಾ ಇದ್ರಿ, ಅದೇ, ಗ್ಯಾಸ್ ಕನೆಕ್ಷನ್ ಮಾಡಿಸಬೇಕು ಅಂತ ಒಂದು ದಿನ ಆದ್ರೆ, ಇನ್ನೊಂದು ದಿನ ಸಿಲಿಂಡರ ತರೋಕೆ, ಮತ್ತೊಂದಿನ ತಲೆ ನೋವು ಅಂತ ರಜೆ, ಇನ್ನೊಮ್ಮೆ ಯಾರನ್ನೊ ಪಿಕಅಪ್ ಮಾಡ್ಬೇಕಿತ್ತು ಅಂತ ಲೇಟಾಗಿ ಹೋಗೊದು, ಒಂದೆ ಎರಡೇ, ಹೊಸದಾಗಿ ಮದುವೆ ಆಗಿದೆ ಅಂತ ನಿಮ್ಮ ಮ್ಯಾನೇಜರ್ರೂ ತತಾಸ್ಥು ಅನ್ನೊರೊ ನೀವು ಕೇಳೊ ರಜೆಗಳಿಗೆ, ಹೇಳೊದೆಲ್ಲ ನೆಪಗಳು ಅಂತ ಅವರಿಗೂ ಗೊತ್ತಾಗಿರಬೇಕು" ಅಂತ ನಕ್ಕಳು, ನಾನೂ ನಕ್ಕೆ, ಹಾಗೆ ಇಬ್ಬರೂ ಕೂತು ಹರಟೆ ಹೊಡೆದು ಎಷ್ಟೋ ದಿನಗಳಾಗಿತ್ತು.
ಮದುವೆಯಾದ ಹೊಸತರಲ್ಲಿ ಎಲ್ಲ ಹಾಗೆ ಅಲ್ವ, ಅದೇನೊ ವಿಚಿತ್ರ ಸೆಳೆತ ಇರತ್ತೆ, ಪ್ರತೀ ಮಾತಿಗೂ ಪುಳಕಗೊಳ್ಳುತ್ತದೆ ಮನಸು, ಮತ್ತೆ ಮತ್ತೆ ಮಾತಾಡಲು ಹಾತೊರೆಯುವಂತೆ ಮಾಡುತ್ತದೆ, ಆ ಒಂದು ಸಣ್ಣ ಸ್ಪರ್ಷ, ಒಂದಿಷ್ಟು ನೋಟ, ಮತ್ತೊಂದಿಷ್ಟು ನಗು, ಮಧುರ ಅನುಭೂತಿ. ಅದೇ ದಿನಗಳೆದಂತೆ ಜವಾಬ್ದಾರಿ ಹೆಚ್ಚುತ್ತವೆ, ಹೊಸತು ಹಳೆಯದಾಗುತ್ತದೆ, ನಿತ್ಯ ದಿನಚರಿಗೆ ಹೊಂದಿಕೊಳ್ಳತೊಡಗುತ್ತೇವೆ, ಉದಾಸೀನತೆ ಬಂದು ಬಿಡುತ್ತದೆ, ಅವಳೆಲ್ಲಿ ಹೋಗ್ತಾಳೆ? ಮನೇಲೆ ಇರ್ತಾಳಲ್ಲ ಅಂತ. ಆಫೀಸಿನಲ್ಲಿ ಗೆಳೆಯನೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದು ಬರುತ್ತೇವೆ ಹೊರತು, ಬೇಗ ಬಂದು ಹೆಂಡತಿಯೊಂದಿಗೆ ನಾಲ್ಕು ಮಾತನಾಡಿದರೆ ಅಂತ ಹೊಳೆಯೋದೇ ಇಲ್ಲ, ಯಾಕೆ?... ಅವಳೆಲ್ಲಿ ಹೋಗ್ತಾಳೆ ಮನೇಲೇ ಇರ್ತಾಳಲ್ಲ. ದಿನಾ ಘಂಟೆ ಕಾದು ಅವಳ ಭೇಟಿಯಾಗುತ್ತಿದ್ದ ಪ್ರೇಮಿಗಳು ಕೂಡ, ಘಂಟೆ ಲೇಟಾಗಿ ಬರುತ್ತಾರೆ ಕಾರಣ ಅವಳೆಲ್ಲಿ ಹೋಗ್ತಾಳೆ?. ಹೊಸತು ಚಪ್ಪಲಿಯನ್ನು ಹಾಕಿದರೆಲ್ಲಿ ಏನಾದೀತು ಅಂತ ಎತ್ತಿ ಜತನವಾಗಿ ಕಪಾಟಿನಲ್ಲಿ ಇಟ್ಟವರು ಹಳೆಯದಾಗುತ್ತಿದ್ದಂತೆ ಅಲ್ಲೇ ಬೀಸಾಡಿ ಬರತೊಡಗುತ್ತೇವೆ. ಸಂಬಂಧಗಳೂ ಹಾಗೆ... ಹಳೆಯದಾದಂತೆ ಮತ್ತೆ ಮತ್ತೆ ಹೊಳಪು ಹಾಕಿ ಪಾಲೀಷು ಮಾಡಿದಂತೆ ಮತ್ತೆ ಮತ್ತೆ ಹೊಸದಾಗಿಸುತ್ತ ಬಂದರೆ ಬಾಳಿಕೆ ಬಂದೀತು, ಬಾಳು ಬಂಗಾರವಾದೀತು.
ಮನೆಯಲ್ಲಿ ಅವರೂ ಅಷ್ಟೇ, ಬರೀ ಪ್ರೀತಿಯೊಂದರಿಂದ ಜೀವನ ಸಾಗಲ್ಲ, ಕೆಲ್ಸ ಮಾಡಬೇಕು ದುಡ್ಡು ಗಳಿಸಬೇಕು, ದಿನ ದಿನ ಕೆಲ್ಸ ಜಾಸ್ತಿಯಾಗಿ ಮೊದಲಿನಂತೆ ಇರಲಾಗುವುದಿಲ್ಲ, ದಿನವೂ ಚಕ್ಕರ ಹೊಡೆದರೆ ನಡೆಯಲ್ಲ ಅಂತ ತಿಳಿದುಕೊಳ್ಳಬೇಕು, ಅವಳೆಲ್ಲಿ ಹೋಗ್ತಾಳೆ ಅಂತ ಉದಾಸೀನತೆ ಬರದಂತೆ, ನವೀನತೆ ಕಾಪಾಡಿಕೊಳ್ಳಬೇಕು, ಮನೇ ಮಕ್ಕಳು ಅಯ್ತು ಇನ್ನೇನಿದೆ ಜೀವನ ಅಂತ ನೀರಸವಾಗಬಾರದು. ಪ್ರತೀ ದಿನ ಹೊಸತು, ಪ್ರತೀ ಮಾತು ಹೊಸತು, ಅಂತ ಅದೇ ಚೈತನ್ಯ ಕಾಪಾಡಿಕೊಂಡರೆ ಬದುಕು ಬೊರಾಗಲ್ಲ,(ಬೇಜಾರು).
"ಎಲ್ಲೇ, ನನ್ನ ಊಟದ ತಟ್ಟೆ" ಅಂದೆ, "ದಿನಾ ಬಂದು ಆ ಹಚ್ಚಿಟ್ಟ ತಟ್ಟೆ ಊಟ ತಿಂದು ಮಲಗಿ ಬಿಡ್ತೀರಾ ಒಂದು ಮಾತಿಲ್ಲ ಕತೆಯಿಲ್ಲ, ಅದಕ್ಕೆ ಈವತ್ತು ನಾನೇ ಬಡಿಸೋಣ ಅಂತ ಹಚ್ಚಿಟ್ಟಿಲ್ಲ" ಅಂದ್ಲು. "ಒಳ್ಳೆ ಐಡಿಯಾ" ಅಂದೆ. "ಹೂಂ ಸಾಕು ಸರೀನಿ ಇನ್ನ, ಸಾರು ಬಿಸಿ ಮಾಡಬೇಕು" ಅಂತ ನನ್ನ ಅತ್ತ ನೂಕಿ ಮೇಲೆದ್ದಳು, ಫ್ರಿಡ್ಜು ಬಾಗಿಲು ತೆಗೆದು ಅವಳು ಒಂದೊಂದೆ ಪಾತ್ರೆ ಹೊರಗೆ ತಗೀತಿರಬೇಕಾದ್ರೆ, ನಾನೂ ಒಂದು ಪಾತ್ರೆ ಎತ್ತಿಕೊಂಡು ಅವಳ ಕೆನ್ನೆಗೆ ತಾಕಿಸಿದೆ, "ರೀ, ತಂಪು" ಅಂತ ಓಡಿದಳು. ಗ್ಯಾಸಿನ ಕಟ್ಟೆ ಮೇಲೆ ನಾ ಹತ್ತಿ ಕೂತು, ನೆನೆಸಿದ ಬಟಾಣಿ ಒಂದೊಂದೇ ತಿನ್ನುತ್ತ ಮಾತಾಡುತ್ತಿದ್ದೆ, "ನಾಳೆ ಏನು ಪಲ್ಯ ಏನು ಮಾಡೊದು" ಅಂತ ಅದನ್ನು ಕಸಿದುಕೊಂಡಳು, ಉಳಿದ ನಾಲ್ಕು ಕಾಳು "ಕ್ಯಾಚ್" ಅನ್ನುತ್ತ ಒಂದೊಂದೇ ಅವಳ ಬಾಯಿಗೆಸೆದೆ, ಅದನ್ನೇ ಮೆಲ್ಲುತ್ತ "ಮತ್ತೇ ಏನ ನಡೀತಿದೆ ಅಫೀಸಲ್ಲಿ ಬಹಳ ಬೀಜೀ ಆಗೀದೀರಾ" ಅಂದ್ಲು. "ಅದಾ ಪ್ರೊಜೆಕ್ಟು ಮುಗೀತಿದೆ, ಕಂಪನೀ ಮಾರಾಟ ಮಾಡ್ತಿದಾರೆ, ಮೀಟಿಂಗ ಮೇಲೇ ಮೀಟಿಂಗು ಅದೇ ಟೆನ್ಷನ್ ಈಗ" ಅಂದೆ. "ಅದೆಲ್ಲ ಇದ್ದದ್ದೇ ಬಿಡ್ರೀ, ಹೊಸಾ ಹುಡುಗೀ ಯಾವ್ದೂ ಜಾಯಿನ(ಸೇರಿಕೊ) ಆಗಿಲ್ವ" ಅಂದ್ಲು. "ಇರೊ ಹುಡುಗೀರದು ಮದುವೆ ಆಗ್ತಿದೆ, ಅದ್ರೂ ಹೊಸಾ ರೆಸೆಪ್ಷನಿಸ್ಟ ಬಂದೀದಾಳೆ ಗೊತ್ತ" ಅಂದೆ "ಹಾಗಾದ್ರೆ, ನೀವು ಆಫೀಸು ಒಳಗೇ ಹೋಗ್ತಾನೇ ಇಲ್ಲ ಅನಿಸಿತ್ತೆ ಅಲ್ಲೇ ಬಾಗಿಲಲ್ಲೇ ಅವಳ ನೋಡ್ತಾ ನಿಂತ್ಕೋತಿರಬೇಕು" ಅಂದ್ಲು "ಹಾಗೇನಿಲ್ಲಪ್ಪ, ಏನು ಲೇಟರ ಬರೋದಿಲ್ಲ ಅಂದ್ರೂ ಆಗಾಗ ಹೋಗಿ ಸ್ವಲ್ಪ ಲೇಟರು ಬಂದಿದೇನಾ ಅಂತ ವಿಚಾರಿಸಿಕೊಂಡು ಬರ್ತೀನಿ ಅಷ್ಟೇ" ಅಂದೆ. "ಅಷ್ಟೇ ಅಂತೆ ಅಷ್ಟೇ" ಅಂತ ಕಾದ ಸೌಟಿನಿಂದ ತಿವಿದಳು, ಚೀರಿದೆ. "ಅಂತೂ ನಿಗಾ ಇಟ್ಟಿದೀರಾ ಅವಳ ಮೇಲೆ" ಅಂದ್ಲು, ಬಿಸಿಗೆ ಕೆಂಪಗಾಗಿದ್ದ, ಕೈ ಸವರಿಕೊಳ್ಳುತ್ತ "ಅವಳೆಲ್ಲಿ ಹೋಗ್ತಾಳೆ ಅಲ್ಲೇ ಇರ್ತಾಳೆ" ಅಂದೆ. "ಅವಳು ಅಲ್ಲೇ ಇರಲಿ, ಇಲ್ಲಾಂದ್ರೆ ಇಲ್ಲಿ ನಾನಿರಲ್ಲ" ಅಂತಂದಳು, ಜೋರಾಗಿ ನಗುತ್ತ, ಆದ ಘಟನೆಗಳು ಮತ್ತೆ ನೆನಪಿಗೆ ಬಂದು ನಾನೂ ನಗತೊಡಗಿದೆ. ಊಟ ಮಾಡಿ ಮಲಗೊ ಹೊತ್ತಿಗೆ ಲೇಟಾಗಿತ್ತು, "ನಾಳೆ ಲೇಟಾಗಿ ಹೋಗ್ತೀನಿ" ಅಂದೆ.. "ಯಾಕೆ?"... "ಯಾರನ್ನೊ ಪಿಕ್‌ಅಪ್ ಮಾಡಬೇಕು" ಅಂದೆ... ಅವಳು ನಕ್ಕಳು, ನೆಪ ಅಂತ ಗೊತ್ತಾಗಿರಬೇಕು. "ನಿಮ್ಮ ಮ್ಯಾನೇಜರಿಗೆ ಫೋನ ಮಾಡಿ ಹೇಳ್ತೀನಿ" ಅಂತ ಹೆದರಿಸ್ತಾ ಇದ್ಲು, ಹೀಗೆ ಬಿಟ್ರೆ ಅವಳು ಮಾತಾಡ್ತಾನೇ ಇರ್ತಾಳೆ ಅಂತ, ಬರಸೆಳೆದು ಮುಸುಗೆಳೆದುಕೊಂಡೆ.
ಹೀಗೆ ಮತ್ತೆ ಸಿಕ್ತೀನಿ, ಅವಳನ್ನು ಹುಡುಕಾಡುತ್ತ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/avalelli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, May 31, 2009
ಅವಳೆಲ್ಲಿ ಹೋಗ್ತಾಳೆ?
Sunday, May 24, 2009
ತourಮನೆ
ಮುಂಜಾನೆ ಆರೂವರೆಯಾಗಿರಬೇಕು ಫೋನು ಕಿರುಚಿತು, ಮಸ್ತ ಮುಸುಕು ಹಾಕಿಕೊಂಡು ಮೈಮರೆತು ನಿದ್ದೆಯಲ್ಲಿದ್ದವನು ತಡಬಡಿಸಿ ಎದ್ದೆ, ಇವಳದೇ ಫೋನು, ಅದೇನು ಮನೇಲಿ ಇಲ್ಲ ಅಂದುಕೊಂಡಿರಾ, ತವರುಮನೆಗೆ ಹೋಗಿಬರ್ತೀನಿ ಅಂತ ಹೋಗಿದ್ಲು ಇವತ್ತು ಬರ್ತಾ ಇದಾಳೆ... ಆಕಡೆಯಿಂದ ದನಿ ಬಂತು, ಹಲೊ ಗಿಲೋ ಏನಿಲ್ಲ "ಎದ್ದೇಳು ಮಂಜುನಾಥಾ... ಸತಿ ಬಂದು ಕಾಯುತಿರುಹಳು ನಿನ್ನ ದರುಶನಕೆ ಎದ್ದೇಳು..." ಹಾಡು ಇನ್ನೂ ಸಾಗಿರೋದು, "ರೀ ಮಂಜುನಾಥ ಅಂತ ಯಾರೂ ಇಲ್ಲ ಇಲ್ಲಿ ರಾಂಗ ನಂಬರು ಇದು" ಅಂದೆ, "ನಾವೂ ಕರೆಕ್ಟ ನಂಬರು ಬೇಕು ಅಂತ ಫೋನು ಮಾಡಿಲ್ಲ, ನಮ್ಗೂ ರಾಂಗ ನಂಬರೇ ಬೇಕಿತ್ತು, ಅಲ್ಲ ಇಷ್ಟ ಮಧುರವಾದ ದನಿಯ ಒಬ್ಳು ಹುಡುಗಿ ಫೋನು ಮಾಡಿದ್ರೆ ರಾಂಗ ನಂಬರಾದ್ರೂ ಮಾತಾಡಬೇಕ್ರಿ" ಅಂದ್ಲು, "ಒಹೊ ಅದೆಲ್ಲಾ ನಾವು ಎಕ್ಸಪರ್ಟು, ನೀನು ಅಂತ ಗೊತ್ತಾಗಿದ್ದಕ್ಕೆ ರಾಂಗ ನಂಬರು ಅಂದಿದ್ದು, ಇಲ್ಲಾಂದ್ರೆ ನಾವೇ ರೈಟು ಆಗಿರ್ತಿದ್ವಿ" ಅಂದೆ "ನಿಮ್ಮ ಬುದ್ಧಿ ನಂಗೊತ್ತಿಲ್ವಾ, ಬನ್ರಿ ಬೇಗ ಈಗ ಬೆಂಗಳೂರ ಹತ್ರ ಬಂದಾಯ್ತು, ಇನ್ನೇನು ನವರಂಗ(ಬೆಂಗಳೂರಿನಲ್ಲಿ ಒಂದು ಏರಿಯಾ) ಬಸ್ ಸ್ಟಾಪಗೆ ಬಂದು ಕಾಯ್ತೀನಿ" ಅಂದ್ಲು. "ಆಯ್ತು ಬಂದೆ ಮೇಡಮ್" ಅಂತಂದು ನಾನೇನು ಕಮ್ಮಿ ಅಂತ ನಮ್ಮ ಸಾಹಿತ್ಯದಲ್ಲಿ ನಾನೊಂದು ಹಾಡು ಗುನುಗುನಿಸಿದೆ "ಭಾಗ್ಯದಾ ಲಕ್ಷ್ಮೀ ಬಾರಮ್ಮ, ಗಂಡನಮನೆಗೆ... ಶನಿವಾರದ ಬ್ರೆಕ್‌ಫಾಸ್ಟ ವೇಳೆಗೆ.."
ಅತ್ತಿತ್ತ ನೋಡುತ್ತ ಸೆರಗಿನ ತುದಿಯನ್ನು ಸುತ್ತಿ ಸುರುಳಿ ಮಾಡುತ್ತಾ ನಿಂತಿದ್ಲು, ನಾ ಕಾಣುತ್ತಿದ್ದಂತೆಯೆ ಕ್ಲೊಜಅಪ್ ಸ್ಮೈಲ್ ಕೊಟ್ಲು, ನಾನೂ ಪ್ರತಿಯಾಗಿ ಹಲ್ಲು ಕಿರಿದೆ, ಪಕ್ಕದಲ್ಲಿ ನೋಡಿದ್ರೆ ಒಂದೇ ಬ್ಯಾಗು, ಅಬ್ಬಾ ಈ ಸಾರಿ ಭಾರೀ ಲಗೇಜು ಇಲ್ಲ ನಾ ಅದನ್ನೆಲ್ಲ ಹೊತ್ತು ಕತ್ತೆಯಾಗಲ್ಲ ಬಚಾವು ಅಂತಿದ್ದರೆ, "ಈ ಬ್ಯಾಗು ತುಗೊಳ್ಳಿ, ಉಳಿದವು ಅಲ್ಲಿ ಟ್ರಾವೆಲ್ ಏಜನ್ಸಿನಲ್ಲಿವೆ" ಅಂದ್ಲು ಪಿಳಿಪಿಳಿ ಕಣ್ಣು ಬಿಡ್ತಾ ಅವಳ ಮುಖ ನೋಡಿದ್ದಕ್ಕೆ, "ಎಲ್ಲ ಅಮ್ಮ ಹಾಕಿದ್ದು ನಾನಾದ್ರೂ ಏನ್ ಮಾಡ್ಲಿ" ಅಂತ ಅಸಹಾಯಕತೆ ಪ್ರದರ್ಶಿಸಿದಳು... ಎಲ್ಲ ಅಮ್ಮ ಹಾಕಿದ್ದು ಅಂತ ಹೇಳೋಕೆ ಮಾತ್ರ, ಅವರು ಹಾಕೊದಲ್ದೇ, ಇವಳೂ ಆ ಉಪ್ಪಿನಕಾಯಿ ಚೆನ್ನಾಗಿದೆ, ಹಪ್ಪಳ ನೀನೇ ಮಾಡಿದ್ದಾ ಅಂತೆಲ್ಲ ಕೇಳಿ ಹೇಳಿ, ಅದೆಲ್ಲ ಕಟ್ಟಿಸಿಕೊಂಡು ಬಂದಿರ್ತಾಳೆ. ಗತ್ಯಂತರವಿಲ್ಲದೇ, ಎಲ್ಲ ಎತ್ತಿ ಆಟೊಗೆ ಹಾಕಿಕೊಂಡು ಮನೆಗೆ ಬಂದಿದ್ದಾಯ್ತು. ಅಟೊನನವನೂ ಹತ್ತು ಜಾಸ್ತಿ ಕೇಳಿದ, ಅದೂ ಸರಿಯೇ ಅಂತ ತೆತ್ತು ಬಂದೆ.
ಲಗೇಜು ಇಳಿಸಿಕೊಳ್ಳಬೇಕಾದ್ರೆ, ಪಕ್ಕದ ಮನೆ ಪದ್ದು ಬಂದು "ಈಗ್ ಬಂದ್ರಾ, ಬಹಳ ದಿನ ಹೋಗಿದ್ರಿ" ಅಂದ್ಲು, ನಾನು ಕೈಯಲ್ಲಿ ಇನ್ನೆರಡು ಬ್ಯಾಗು ತೆಗೆದುಕೊಂಡು ವಿಧೇಯ ಪತಿಯಂತೆ ಅವಳ ಮುಂದೆ ಫೋಸು ಕೊಟ್ಟೆ, ಇವಳು "ಹಾಂ ತವರುಮನೆಗೆ ಹೋಗಿದ್ದೆ, ಎಲ್ಲಿ ನಾಲ್ಕೇ ದಿನ ಆಯ್ತು ಹೋಗಿ" ಅಂದ್ಲು ನಾನು ನಡುವೆ ಬಾಯಿ ಹಾಕಿ "ಇನ್ನೆರಡು ದಿನಾ ಇದ್ದು ಬಾ ಅಂದ್ರೂ ಬೇಗ ಬಂದೀದಾಳೆ" ಅಂತಂದೆ, ಪದ್ದು "ನಿಮ್ಮನ್ನು ಬಿಟ್ಟು ಇರೋಕೆ ಆಗಲ್ಲ ಅನ್ಸತ್ತೆ" ಅಂತ ಛಿಡಾಯಿಸಿದಳು, ನನ್ನಾಕೆ ಕಣ್ಣು ಕೆಕ್ಕರಿಸಿ ನನ್ನ ನೋಡಿದ್ಲು, ಬ್ಯಾಗು ಇಡಲು ಮನೆಯೊಳಗೆ ನುಗ್ಗಿದೆ, ಕೆಕ್ಕರಿಸಿ ನೋಡದೇ ಇನ್ನೇನು, ಹೋಗಿ ಎರಡು ದಿನ ಆಗಿಲ್ಲ, ಆಗಲೇ ನಾಲ್ಕು ಸಾರಿ ಫೋನು ಮಾಡಿ ಕೇಳಿದ್ದೆ ಯಾವಾಗ ಬರ್ತೀಯಾ ಅಂತ. ಈಗ ಹೀಗಂದ್ರೆ ಸಿಟ್ಟಾಗದೇ ಇರ್ತಾಳಾ, ನಾಲ್ಕೇ ದಿನ ಅಂತಾಳೆ ಸರಿಯಾಗಿ ಹದಿನೈದು ದಿನಾ ಆಗಿರಬೇಕು ಅವಳು ಹೋಗಿ ಆದ್ರೂ ಅದು ಕಮ್ಮಿಯೇ ಅವಳಿಗೆ. ಪದ್ದು ಇನ್ನೂ ಹೇಳ್ತಾ ಇದ್ಲು "ನಾವೆಲ್ಲ ಇಲ್ವಾ ಇಲ್ಲಿ ಈ ಕಡೆ ಯಾಕೆ ಚಿಂತೆ ನಿಮಗೆ" ಅಂತೇನೇನೋ... ಅವಳು ಇದ್ದದ್ದೇ ಚಿಂತೆ ನನ್ನವಳಿಗೆ ಅಲ್ವಾ.
ಇನ್ನೂ ಸಿಟ್ಟು ಇಳಿದಿರಲಿಲ್ಲ, ಒಳಗೆ ಬಂದವಳೆ, "ಎಲ್ಲ ಮನೆ ಹರವಿ ಇಟ್ಟೀದೀರಾ ಎರಡು ದಿನ ಇರದಿದ್ರೆ ಮನೇನಾ ಯಾವ ರೀತಿ ಮಾಡಿಡ್ತೀರಾ, ಎರಡು ದಿನಾ ತವರುಮನೇಲಿ ಹಾಯಾಗಿ ಇದ್ದು ಬರೋಣ ಅಂದ್ರೂ ಬಿಡಲ್ಲ" ಅಂತ ಬಯ್ದಳು, ನಾನು ಈಗ್ ಮಾತಾಡುವುದು ಸರಿಯಲ್ಲ ಅನಿಸಿತು ಸುಮ್ಮನಾದೆ. ಅಡುಗೆಮನೆಗೆ ಟೀ ಮಾಡ ಹೋದವಳು ನನ್ನ ಟೂತಬ್ರಷನೊಂದಿಗೆ ಹೊರಬಂದ್ಲು "ಇದು ಬಾತರೂಮಿನಲ್ಲಿಇರಬೇಕಾದ್ದು ಅಡುಗೆ ಮನೇಲಿ ಏನ್ ಮಾಡ್ತಾ ಇತ್ತು" ಅಂತ ಮತ್ತೆ ಶುರುವಾಯ್ತು... "ಇಲ್ಲ ಮುಂಜಾನೆ ಬ್ರಷ್ ಮಾಡ್ತಾ ಟೀ ಮಾಡಿ ಅಲ್ಲೇ ಇಟ್ಟೆ" ಅಂತ ತಲೆ ತುರಿಸಿಕೊಂಡೆ. ಬೆಡರೂಮ ಹೊಕ್ಕವಳಿಗೆ ರಾಶಿ ರಾಶಿಯಾಗಿ ಬಟ್ಟೆಗಳು ಬಿದ್ದಿರುವುದು ಕಾಣಿಸಿತು, ಅವಳು ಕೇಳುವ ಮುಂಚೆಯೇ "ಬೆಳಗ್ಗೆ ಕರವಸ್ತ್ರ ಸಿಗಲಿಲ್ಲ ಅಂತ ಹುಡುಕ್ತಾ.... ಇದ್ದೆ" ಅಂದೆ ನಿಧಾನವಾಗಿ, ಅವಳು ಒಂದೊಂದೇ ಮಡಚಿ ಕೊಟ್ರೆ ಎತ್ತಿ ಬೀರುವಿನಲ್ಲಿಟ್ಟೆ. ಹಾಸಿಗೆ ಹತ್ರ ಹರಡಿಕೊಂಡು ಬಿದ್ದಿರುವ ನಾಲ್ಕು ದಿನದ ದಿನಪತ್ರಿಕೆಗಳು, ಸೊಫಾ ಮೇಲೆ ಒಣಗಿ ಹಾಕಿರುವ ವಸ್ತ್ರಗಳು, ಹಾಲ್‌ಗೆ ಬಂದಿರುವ ಬೂಟುಗಳು ಒಂದೇ ಎರಡೆ ಎಲ್ಲದಕ್ಕೂ ಹರಿಹಾಯ್ದಳು.
ತವರುಮನೆಯಿಂದ ತಂದ ಅದ್ಯಾವುದೊ ಸುವಾಸನೆ ಅಕ್ಕಿ ಅನ್ನ, ಅವರಮ್ಮನ ಕೈ ಹಪ್ಪಳ ಎಲ್ಲ ಚಪ್ಪರಿಸಿದ್ದಯ್ತು, ಅದೇನೊ ದೊಡ್ಡ ಖುಷಿ ಅವಳಿಗೆ, ಸಾರು ಚೆನ್ನಾಗಿದೆ ಅಂದ್ರೆ ಅಮ್ಮ ಕೊಟ್ಟ ಸಾಂಬಾರು ಪುಡಿಯ ಗುಣಗಾನ, ಅಮ್ಮ ಇದು ಮಾಡಿಕೊಟ್ಲು, ಅಮ್ಮ ಅದ ಚೆನ್ನಾಗಿ ಮಾಡ್ತಾಳೆ ಇನ್ನೂ ಏನೇನೊ ಹೇಳ್ತಾನೇ ಇದ್ಲು... ಅಪ್ಪ ಕೊಡಿಸಿದ ಸೀರೆ, ಅಮ್ಮ ಅದಕ್ಕೆ ಗೊಂಡೆ ಕಟ್ಟಿದ್ದು, ಅಣ್ಣ ಕೊಡ್ಸಿದ ಹೊಸ ಸೆಂಟು ಬಾಟಲಿ, ನೇಲಪಾಲಿಶ, ಎಲ್ಲ ನೋಡಿದ್ದಾಯ್ತು. ಚಿಕ್ಕ ಮಗೂ ತನ್ನ ಪೀಪಿ ಬಲೂನು ತೋರಿಸಿ ಸಂಭ್ರಮಿಸಿದಂತಿತ್ತು. ನಾನು ಅದಕ್ಕಿಂತ ಹೆಚ್ಚಿನದನ್ನು ಕೊಡಿಸಿದ್ದರೂ ಅವಳಿಗೆ ಅದರಷ್ಟು ಆನಂದ ಸಿಗುತ್ತಿರಲಿಲ್ಲ ಬಹುಶ:.
ಈ ಹೆಣ್ಣು ಮಕ್ಕಳಿಗೆ ತವರು ಮನೆಯಂದ್ರೆ ಹಾಗೇನೆ ಏನೊ ಒಂದು ಅಕ್ಕರೆ, ತನ್ನ ಮನೆಯವರನ್ನೆಲ್ಲ ಬಿಟ್ಟು ಹೊಸ ಪರಿವಾರದಲ್ಲಿ ಸೇರಿಕೊಂಡರೂ ಬಿಡದಿರುವ ಹಳೆಯ ನಂಟು ಅದು, ಅತ್ತೆ ಮಾವ ಎಷ್ಟೇ ಪ್ರೀತಿ ಮಾಡಿದರೂ ಅಪ್ಪ ಅಮ್ಮ ನೆನಪಿಗೆ ಬಂದೇ ಬರುತ್ತಾರೆ, ಇನ್ನು ಕಾಡುವ ಅತ್ತೆ ಮಾವ ಇದ್ದರಂತೂ ಮುಗಿದು ಹೋಯ್ತು ಅನುದಿನ ನೆನಪಾಗದಿದ್ರೆ ಕೇಳಿ. ಕೆಲವು ಕಡೆಯಂತೂ ಮನೆ ಅಳಿಯನನ್ನಾಗಿಸಿಕೊಂಡು ತವರುಮನೆಯಲ್ಲೇ ಉಳಿದಿರುವವರೂ ಏನು ಕಮ್ಮಿಯಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಂದರೂ ಅದರಿಂದ ಹೊರಗೆ ಬರುವುದು ಸಲೀಸಲ್ಲ. ಆದರೂ ಮದುವೆಯಾದ ಮೇಲೆ ಹೆಣ್ಣು ಮಕ್ಕಳಿಗೆ ಮನೆ ಬಿಟ್ಟು ಬರುವುದು ಅನಿವಾರ್ಯ, ಅದನ್ನರಿತುಕೊಂಡರೆ ಆ ಮಟ್ಟಿಗೆ ದೂರ ಇರುವ ನೋವು ಕಮ್ಮಿಯಾದೀತು.
ಊಟವಂತೂ ಆಯ್ತು ಅಂತ ಹಾಗೆ ಏನೊ ಯೋಚಿಸುತ್ತ ಸೊಫಾದಲ್ಲಿ ಬಿದ್ದುಕೊಂಡಿದ್ದೆ, ತಲೆ ತನ್ನ ತೊಡೆಮೇಲಿರಿಸಿಕೊಂಡು ಜಾಗ ಮಾಡಿಕೊಂಡು ಬಂದು ಕುಳಿತಳು, ಕೈ ಬೆರಳಲ್ಲೇ ಬಾಚಣಿಕೆಯಂತೆ ಬಾಚುತ್ತ "ಮುಂಜಾನೆ ಬಹಳ ರೇಗಿದೆ" ಅಂದ್ಲು "ಏನ್ ಮಾಡೀಯಾ ಬಿಡು ಎಲ್ಲ ಹರವಿ ದನದ ಕೊಟ್ಟಿಗೆ ಮಾಡಿಟ್ಟಿದ್ದೆ, ಬಯ್ಯದೆ ಏನು.." ಅಂದೆ, "ಇನ್ನೂ ನಾಲ್ಕು ದಿನಾ ನಾ ಅಲ್ಲೇ ಇದ್ದಿದ್ರೆ ಅಷ್ಟೇ" ಅಂದ್ಲು "ಅದಕ್ಕೇ ನಾನು ಬಾ ಬಾ ಅಂತ ಕರೆದದ್ದು" ಅಂದೆ ಮತ್ತದೇ ಗೋಳು "ಎರಡು ದಿನ ಹಾಯಾಗಿ ತವರುಮನೇಲಿ ಇರೋಣ ಅಂದ್ರೂ ಆಗಲ್ಲ" ಅಂತ ರಾಗ ತೆಗೆದಳು "ಎಷ್ಟು ದಿನ ಇರ್ತಿದ್ದೆ, ಇನ್ನೆರಡು ದಿನ, ನಾಲ್ಕು, ಇಲ್ಲ ವಾರ, ತಿಂಗಳು ಮತ್ತೆ ಬರಲೇಬೇಕಿತ್ತಲ್ಲ", ಅದಕ್ಕವಳು "ಅದೂ ಸರಿ ಆದ್ರೆ ಏನೊ ಸೆಳೆತ ಬಿಟ್ಟು ಬರಲೇ ಆಗಲ್ಲ" ಅಂದ್ಲು. "ನಾನೂ ಇಲ್ಲಿ ಒಬ್ಬನೇ, ನನ್ನ ಅಪ್ಪ ಅಮ್ಮನೂ ನನ್ನ ಜತೆ ಇಲ್ಲ, ಹಾಗಂತ ನಾನೂ ಅಲ್ಲೇ ಹೋಗಿ ಇದ್ರೆ, ಕೆಲಸ ಮಾಡೋರು ಯಾರು ಇಲ್ಲಿ, ಬೆಂಗಳೂರು ನನ್ನ ನೆಚ್ಚಿನ ಊರು, ಏನೆಲ್ಲ ಕೊಟ್ಟಿದೆ ಈ ಊರು ನನಗೆ, ಆದ್ರೆ ತವರೂರು ನೆನಪಿಗೆ ಬಾರದಿರುತ್ತ ಇಲ್ಲ, ಬೆಂಗಳೂರು ಬಿಟ್ಟು ಹೋಗಲು ಆಗುತ್ತ, ಆಗಬಹುದು ಕೆಲಸ ಎಲ್ಲ ಬಿಟ್ಟು ಹೋಗುತ್ತೀನಿ ಅಂದ್ರೆ ಆದ್ರೆ... ಕೆಲವು ಸಂಗತಿಗಳು ಬದುಕಿನಲ್ಲಿ ಅನಿವಾರ್ಯ, ಅನುಸರಿಸಿಕೊಳ್ಳಬೇಕು ಆಗಲೇ ಬದುಕು. ಬೆಂಗಳೂರು ನಾ ನೆಚ್ಚಿ ಬಂದಿದ್ದು, ಈಗ ಖುಷಿಯಾಗಿಯೇ ಇಲ್ಲಿದ್ದೇನೆ, ನೆನಪಾದಾಗ ಎರಡು ದಿನ ಊರಿಗೆ ಹೋಗಿ ಬರುತ್ತೀನಿ, ಹಾಗೇ ನನ್ನ ನೆಚ್ಚಿ ಮದುವೆಯಾದ ನೀನು ನನ್ನೊಂದಿಗಿರದೇ ಅಲ್ಲಿದ್ದರೆ" ಅಂದೆ "ಹೂಂ ಹದಿನೈದು ದಿನಾ ಆಯ್ತು, ಅದೇ ಹೊಗ್ತೀನಿ ಅಂದ್ರೂ ಅಮ್ಮ ಬಿಡ್ಲಿಲ್ಲ, ಎಷ್ಟು ದಿನಾ ಆದಮೇಲೆ ಬಂದೀದೀಯಾ ಇರು ಅಂತ, ಅಣ್ಣ ಇನ್ನೆರಡು ದಿನಾ ಅಂತ ಹಾಗೆ ಮದುವೆಯೊಂದು ಇದೆ ಅದನ್ನು ಮುಗಿಸಿ ಹೋಗು ಅಂತ ಅಪ್ಪ ಹೀಗೆ ತಡವಾಯ್ತು" ಅಂದ್ಲು "ಒಬ್ನೇ ಬೇಜಾರಾಯ್ತು, ಅಮ್ಮ ಇಲ್ಲಿದ್ದಿದ್ರೆ ನಿಂಗೆಷ್ಟು ದಿನಾ ಬೇಕೊ ಇರು ಅಂತಿದ್ದೆ" ಅಂದೆ "ತವರುಮನೆ ನಾಲ್ಕು ದಿನಾ ಚೆನ್ನ, ಆಮೇಲೆ ಎಲ್ಲ ಏನಿಲ್ಲ" ಅವಳೇ ಅಂದ್ಲು ನಾ ಹೇಳಿದ್ದು ಅವಳಿಗೆ ತಿಳಿದಂತಿತ್ತು.
ತವರುಮನೇಲಿ ತಿಂದು ತಿಂದು ಉಬ್ಬೀದೀಯಾ ನೀನು ಅಂತ ಗಲ್ಲ ಕಿವಿಚಿದೆ, ಚೀರಿದ್ಲು, "ನೀವೊ ಹೊರಗೆ ತಿಂಡಿ ತಿಂದು ಸೊರಗಿ ಸಣಕಲಾಗಿದೀರಾ" ಅಂದ್ಲು "ಇನ್ನೆರಡು ದಿನಾ ಆಗಿದ್ರೆ ಬೇರೆ ಹೆಂಡ್ತಿ ನೊಡ್ಕೊಂಡು ಬಿಡ್ತಿದ್ದೆ" ಅಂದೆ, "ಹಾಗೇನಾದ್ರೂ ಮಾಡಿದ್ರೆ ನಮ್ಮಪ್ಪನಿಗೆ ಹೇಳಿ ಕೇಸು ಹಾಕಿಸ್ತಿದ್ದೆ ನಾನೂ" ಅಂದ್ಲು ಇನ್ನೂ ಸ್ವಲ್ಪ ತವರುಮನೆ ಗುಂಗಿನಿಂದ ಹೊರಬಂದಿರಲಿಲ್ಲ ಅಂತ ಕಾಣ್ತದೆ... "ಅಮ್ಮ ಫೋನು ಮಾಡಿದ್ಲು" ಅಂದೆ, "ಅಯ್ಯೊ, ಅತ್ತೆಗೆ ಮನೆಗೆ ಬರ್ತಿದ್ದಂಗೆ ಫೋನು ಮಾಡ್ತೀನಿ ಅಂದಿದ್ದೆ, ಒಳ್ಳೆದಾಯ್ತು ನೆನಪಿಸಿದ್ದು, ಮನೆಯೊಂದು ಮೂರು ಬಾಗಿಲು ಧಾರವಾಹಿ ಎಲ್ಲಿಗೆ ಬಂತು ಕೇಳ್ಬೇಕು" ಅಂತ ನನ್ನ ಮೊಬೈಲು ಕೈಗೆ ತೆಗೆದುಕೊಂಡಳು, ನಾ ತವರುಮನೆ "ತ" ಅವಳ ತಲೆಯಿಂದ ತೆಗೆದು ourಮನೆ ಬಾಗಿಲು ಹಾಕಿ ಭದ್ರ ಮಾಡಲು ಮೇಲೆದ್ದೆ...
ಕೊನೆಗೆ ಅದ್ಯಾವಗಲೋ ಬರೆದ ಕೆಲವು ಸಾಲುಗಳು...
ನಮಗೆಂದಿದ್ರೂ ourಮನೆ
ಅತಿ ಸುಂದರ ಅರಮನೆ.
ನೆಂಟರಲ್ಲಿ ಹೋದ್ರೆ ಅಂತಾರೆ oh!! urಮನೆ.
ಅದರೆ ಅದೆಂದಿದ್ರೂ ಅವರ ಮನೆ.
ಅವಳಿಗೆ ಪ್ರೀತಿ ತವರುಮನೆ.
ಅದೆಂದೂ ಅವ್ವಾರ ಮನೆ.
ಅವ್ವ ಇಲ್ಲದಿರೆ ಹೋದಾಗೊಂದು hourಮನೆ.
ಮರೆಯಲೇಬೇಕು ತಾಯಿ और ಮನೆ.
ಯಾಕೆಂದರಾಗ ಅದು ಅಣ್ಣಾರ ಮನೆ.
ಅದಕ್ಕೆ ಅದೆಂದೂ ಅನ್ಯರ ಮನೆ.
ಹೆಣ್ಣುಮಕ್ಕಳಿಗೆ ತವರೆಂದರೆ ಬಹಳ ಪ್ರೀತಿ ಮೊದಲಿನಿಂದಲೂ, ಅದು ಒಂದು ಲಿಮಿಟ್ಟಿನಲ್ಲಿ ಇದ್ದರೆ ಒಳ್ಳೆಯದು, ನಮ್ಮೂರ ಕಡೆ ಹಳ್ಳಿಗಳಲ್ಲಿ ಹೀಗೆ ತವರುಮನೆ ವ್ಯಾಮೋಹದಲ್ಲಿ ಬಂದು ಅಲ್ಲೇ ತಳವೂರುವ ಹೆಣ್ಣುಮಕ್ಕಳ ಉದ್ದೇಶಿಸಿ ಬರೆದದ್ದು ಇದು ಎಲ್ಲರಿಗೂ ಅನ್ವಯವಾಗಬೇಕೆಂದೇನಿಲ್ಲ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/tavarumane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, May 17, 2009
ಅಪಘಾತ ಆಘಾತ...
ರಾತ್ರಿ ಹನ್ನೊಂದಾಗಿರಬೇಕು, ಆಫೀಸೀನವರೆಲ್ಲ ಸೇರಿ ಪಾರ್ಟಿಗೆ ಹೋಗಿದ್ದು ಸ್ವಲ್ಪ ಲೇಟಾಗಿ ಮನೆಗೆ ಹಿಂದಿರುಗುತ್ತಿದ್ದೆ, ಪಾರ್ಟಿ ಅಂದ್ರೆ ಲೇಟ ಆಗೇ ಆಗುತ್ತೆ, ಆ ಸಮಯದಲ್ಲಿ ವಾಹನ ಸಂಚಾರ ಕೂಡಾ ಕಮ್ಮಿ, ರಸ್ತೆಗಳು ಬಿಕೊ ಅನ್ನುತ್ತಿರುತ್ತವೆ ಅಲ್ಲಲ್ಲಿ ಕಾರು ಬೈಕುಗಳು ಶರವೇಗದಲ್ಲಿ ಸರ್ರೆಂದು ನುಗ್ಗುತ್ತಿರುತ್ತವೆ, ಬೈಕು ಕೊಂಡು ವರ್ಷವಾಯ್ತು, ಇತ್ತೀಚೆಗೆ ಸ್ವಲ್ಪ ಬೈಕು ಓಡಾಡಿಸಿ ರೂಢಿಯಾಗಿ ನಾನೂ ಸ್ವಲ್ಪ ವೇಗವಾಗಿ ಚಲಾಯಿಸುತ್ತೇನೆ ಆದರೂ ಗೆಳೆಯರೆಲ್ಲ ನನಗಿಂತ ಯಾವಾಗಲೂ ಮುಂದು, ತಕ್ಕಮಟ್ಟಿಗೆ ವೇಗ ಬಂದಿದೆಯೆಂದ್ರೆ ಸರಿ, ಹೀಗಾಗಿ ನಾನೂ ಸ್ವಲ್ಪ ವೇಗದಲ್ಲೇ ಹೊರಟಿದ್ದೆ, ಅದು ಮೈಸೂರು ರೋಡ್ ಶಿರ್ಸಿ ಸರ್ಕಲ್ ಹತ್ತಿರ ಫ್ಲೈ ಓವರ ಇಳಿಯುತ್ತಿದ್ದಂತೆ ಮುಂದೆ ಒಂದು ಕಾರು ಹೋಗುತ್ತಿತ್ತು ಹಿಂದೆ ಸ್ವಲ್ಪ ದೂರದಲ್ಲಿ ನಾನು, ಕಾರು ದಾಟಿ ಹೋಯ್ತು, ನಾ ಹಿಂದೆ ಬರಬೇಕು, ರೋಡಲ್ಲಿ ಹಿಡಿಗಾತ್ರದ ಕೆಲವು ಕಲ್ಲುಗಳು ಚೆಲ್ಲಪಿಲ್ಲಿಯಾಗಿ ಹರಡಿದ್ದವು, ಕತ್ತಲೆಯಲ್ಲಿ ವೇಗದಲ್ಲಿ, ನನ್ನ ಗಮನ ಆಕಡೆ ಹರಿಯದೇ ಕಲ್ಲುಗಳಲ್ಲಿ ಬೈಕು ಓಡಿತು, ಮುಂದಿನ ಚಕ್ರ ನಿಯಂತ್ರಣ ತಪ್ಪಿತು, ಧಡ್! ಅಂತ ಶಬ್ದದೊಂದಿಗೆ ಪಲ್ಟಿ ಹೊಡೆದು, ನೆಲಕ್ಕೆ ಉಜ್ಜುತ್ತ ಸ್ವಲ್ಪ ದೂರ ಹೋಗಿ ಬಿದ್ದೆ, ಬೈಕು ಕೈ ತಪ್ಪಿ ನನಗಿಂತ ಮುಂದೆ ಸ್ವಲ್ಪ ದೂರದಲ್ಲಿ ಹೋಗಿ ಬಿತ್ತು...
ಸ್ವಲ್ಪ ಹೊತ್ತು ಹಾಗೆ ಬಿದ್ದಿದ್ದೆ, ಮುಂದೆ ಬೈಕು ಇನ್ನೂ ಸದ್ದು ಮಾಡುತ್ತ ತಿರುಗುತ್ತಿತ್ತು... ಅಪಘಾತವಾಗಿತ್ತು... ಏನಾಗಿದೆ, ಏನಾಗುತ್ತಿದೆ, ಯಾಕಾಯ್ತು, ಏನೂ ತಿಳಿಯುತ್ತಿಲ್ಲ ಆಘಾತ ಆಗ ಶುರುವಾಗಿತ್ತು, ಕೂಡಲೇ ಸಾವರಿಸಿಕೊಂಡು ಮೇಲೇಳಲು ಪ್ರಯತ್ನಿಸಿದೆ ಆಗುತ್ತಿರಲಿಲ್ಲ, ಆಗಲೇ ಹತ್ತಿರದಲ್ಲಿರುವ ಕೆಲ ಜನ ಬಂದು ಏಳಿಸಿದ್ದು, ಯಾರೊ ಬೈಕು ಎತ್ತಿ ತಂದರು, ಬೈಕು ತೆಗೆದುಕೊಂಡು ದಾರಿ ಪಕ್ಕಕ್ಕೆ ಬಂದೆ, ಎಲ್ಲರಿಗೂ ಅನಿಸಿರಬೇಕು ಯಾರೋ ಡ್ರಿಂಕ್ಸ ಮಾಡಿ ನಿಯಂತ್ರಣವಿಲ್ಲದೇ ಬಿದ್ದಿರಬೇಕೆಂದು, ಆಗಲ್ಲೇ ಬಂದ ಪೋಲೀಸಗಂತೂ(ಟ್ರಾಫಿಕ ಅಲ್ಲ ಸಿವಿಲ್ ಸಧ್ಯ, ಇಲ್ಲಾಂದ್ರೆ ಎಲ್ಲಿ ಏನು ಕಾರಣ ಹೇಳಿ ಫೈನು ಹಾಕುತ್ತಿದ್ದರೊ) ಅದೇ ಅನುಮಾನ ಕಾಡಿರಬೇಕು, ಎನಾಯ್ತು ಅನ್ನೊದನ್ನ ಸ್ವತಃ ಪ್ರತ್ಯಕ್ಷದರ್ಶಿಯೊಬ್ಬ ವಿವರಿಸಿದಾಗಲೇ ನನಗೂ ಗೊತ್ತಾಗಿದ್ದು, ಹೇಗೆ ನನಗೆ ನಿಯಂತ್ರಣ ತಪ್ಪಿತೆಂದು, ಆಗಲೇ ನಾ ನೋಡಿದ್ದು ಆ ಚೆಲ್ಲಾಪಿಲ್ಲಿ ಕಲ್ಲುಗಳನ್ನು... ನಾ ನೋಡಿದ್ದರೆ ಅದಹೇಗೆ ಆಗುತ್ತಿತ್ತು... ಅಂತೂ ಪೋಲಿಸಗೆ ಎನಾಗಿದೆ ಅಂತ ಖಾತ್ರಿ ಆಯಿತು ಸ್ವಲ್ಪ ಸುಧಾರಿಸಿಕೊಳ್ಳಲು ಹೇಳಿ ಅಲ್ಲೆ ನಿಂತರು, ನಾ ಡ್ರಿಂಕ್ಸ ಮಾಡೋದಿಲ್ಲ(ಹಾಗಂತ ನೀರೂ ಕುಡಿಯೋದಿಲ್ಲ ಅನ್ಕೋಬೇಡಿ!) ಮಾಡೋರಿಗೆ ಮಾತ್ರ ಕಂಪನಿ ಕೊಡುತ್ತೇನೆ, ಕೂತು ಕೊಲ್ಡಡ್ರಿಂಕ್ಸೊ ಜ್ಯೂಸೊ ಯಾವುದೊ ಹೀರುತ್ತ ಎಲ್ಲರೊಡನೆ ಹಿರಿಹಿರಿ ಹಿಗ್ಗುತ್ತಿದ್ದರೆ ಹೆಚ್ಚು, ಅದೇನು ನನ್ನ ದೊಡ್ದತನವೆಂದು ನಾ ಹೇಳಿಕೊಳ್ಳುವುದಿಲ್ಲ, ಅದು ನನ್ನ ವೈಯಕ್ತಿಕ ಆಯ್ಕೆ, ನನಗಿಷ್ಟವಿಲ್ಲ ಅಷ್ಟೇ. ಸ್ವಲ್ಪ ಕೂತವನು ಕೂರಲಾಗದೇ, ಮತ್ತೆ ಮೇಲೆದ್ದು ಹೊರಟೆ.
ಹಾಗೂ ಹೀಗೂ ಮನೆಗೆ ಬಂದು ತಲುಪಿದೆ, ಗಿಯರ್ ಲೀವರು ಮಣಿದು ಗಿಯರು ಸರಿಯಾಗಿ ಹಾಕಲು ಬರುತ್ತಿಲ್ಲದೇ ಪಡಿಪಾಟಲು ಪಟ್ಟೆ, ಗೇಟಿನಲ್ಲಿ ಗಾಡಿ ನಿಲ್ಲಿಸುವಾಗ ಪಕ್ಕದ ಮನೆ ಪದ್ದುಗೆ ಸಿಗ್ನಲ್ಲು ಕೊಡಬೇಕಲ್ಲ, ಇಂಡಿಕೇಟರ ಒಡೆದಿತ್ತು ನೋಡಿ ಅವಳೂ ಗಾಬರಿಯಾದ್ರೆ? ಅದಕ್ಕೆ ಸುಮ್ಮನೆ ಮನೆಯೊಳಕ್ಕೆ ಸೇರಿಕೊಂಡೆ. ಇವಳು ಮಲಗಿದ್ಲು, ಎಬ್ಬಿಸಲೋ ಬೇಡವೊ ಯೋಚಿಸಿದೆ, ಏಳಿಸಿದ್ರೆ ಹೆದರಿ ಕಂಗಾಲಾಗುವುದು ಗ್ಯಾರಂಟಿ, ಏಳಿಸದಿದ್ರೆ ನಾಳೆ ನಾ ಕಂಗಾಲಾಗಬೇಕು ಅಷ್ಟು ಬಯ್ಯುತ್ತಾಳೆ, ಏಳಿಸೋದೇ ವಾಸಿ ಅಂತ ಮೆತ್ತಗೆ ಕರೆದೆ. ಎದ್ದು ಕಣ್ಣು ತೀಡುತ್ತ ಹೊರಬಂದ್ಲು, ಬೂಟು ತೆರೆಯಲಾಗದೇ ಹಾಲಿನಲ್ಲಿ ಕುಸಿದು ಕೂತಿದ್ದೆ, ಬಂದವಳೇ ನನ್ನ ನೋಡಿ "ರೀ ಏನಾಯ್ತು!!!" ಅಂತ ಹೌಹಾರಿದ್ಲು. ಈಗ ಅವಳಿಗೆ ಆಘಾತವಾಗಿತ್ತು ನಿಜಕ್ಕೂ... "ಏನಿಲ್ಲ ಸ್ವಲ್ಪ ಆಕ್ಸಿಡೆಂಟು ಆಯ್ತು" ಅಂದೆ "ಏನು, ಸ್ವಲ್ಪ ಆಕ್ಸಿಡೆಂಟ್ ಆಯ್ತಾ, ನೋಡಿ ಇದು" ಅಂತ ಜಾಕೆಟ್ಟು(ಜರ್ಕಿನ್) ತೊರಿಸಿದ್ಲು... ಹೌದು ಎಡ ಭಾಗ ಎಲ್ಲ ಕೆತ್ತಿ ಕಿತ್ತು ಬಂದಿತ್ತು, ಗ್ಲೌಸು ಬಿಚ್ಚಿಟ್ಟೆ, ಕೈಗೆ ಸ್ವಲ್ಪ ತರಚು ಗಾಯಗಳಾಗಿದ್ವು, ಮೊಣಕಾಲಿಗೆ ಏಟು ಬಿದ್ದು ಉಬ್ಬಿತ್ತು, ಎಡ ಪಕ್ಕೆಲುಬು ನೋವಾಗುತ್ತಿತ್ತು. "ಇದು ಸ್ವಲ್ಪಾನಾ ನಿಮ್ಗೆ, ಏನ್ ಮಾಡ್ಕೊಂಡ್ರಿ" ಅಂತನ್ನುತ್ತ ಬೂಟು ತೆಗೆಯಲು ಹೆಲ್ಪ ಮಾಡಿದ್ಲು, ಅವಳ ಕಣ್ಣಲ್ಲಿ ನೀರಾಡುತ್ತಿತ್ತು, ಹೆದರಿಕೆ, ಸಿಡುಕು, ದುಃಖ ಎಲ್ಲ ಭಾವನೆಗಳ ಮಿಶ್ರಣ ಮೂಡಿತ್ತು.
ಎದ್ದು ಕೈಕಾಲು ತೊಳೆದು ಬಂದೆ, ಪಕ್ಕೆಲುಬಿಗೆ ಸ್ವಲ್ಪ ಜಾಸ್ತಿಯೆ ನೋವಾದಂತಿತ್ತು, ನಡೆಯಲು ಸರಿಯಾಗಿ ಬರುತ್ತಿರಲಿಲ್ಲ ಅವಳು ಊರುಗೋಲಾದಳು... ಕೈ ತರಚು ಗಾಯಕ್ಕೆ ಡೆಟಾಲ್ ತಂದಳು, ಹತ್ತಿಯಲ್ಲಿ ಅದ್ದಿ ಅಲ್ಲಲ್ಲಿ ಹಚ್ಚತೊಡಗಿದ್ಲು ತಾನೆ "ಸ.. ಸ್... ಸ...." ಅಂತ ವಸಗುಡುತ್ತ... ನೋವಾಗುತ್ತಿದ್ದದ್ದು ನನಗಾದ್ರೂ ಅವಳು ಕಿವುಚುತ್ತಿದ್ದ ಮುಖ ನೋಡಿ ನನಗೆ ಅಂಥದ್ದರಲ್ಲೂ ನಗು ಬಂತು, ನಾ ನಗುತ್ತಿರುವುದ ನೋಡಿ ಸಿಡುಕಿದ್ಲು "ಏನ್ ನಗ್ತೀದೀರಾ, ಬೇಕಿತ್ತಾ ಇದು, ನೋವಾಗ್ತಿಲ್ವಾ" ಅಂದ್ಲು "ನೋವಾಗ್ತಿದೆ, ಎನ್ ಮಾಡ್ಲಿ ನನಗಿಂತ ನಿನಗೇ ಜಾಸ್ತಿ ಅನಿಸತ್ತೆ" ಅಂದೆ. "ಇಂಥ ಡೈಲಾಗುಗಳಿಗೆ ಏನ್ ಕಮ್ಮಿ ಇಲ್ಲ, ಅಂದಹಾಗೆ ಹೇಗಾಯ್ತು ಇದೆಲ್ಲ, ಯಾವ ಹುಡುಗೀ ನೊಡೋಕೆ ಹೋಗಿ ಬಿದ್ರಿ" ಅಂದ್ಲು "ಲೇ ರಾತ್ರಿ ಹನ್ನೊಂದಕ್ಕೆ ಯಾವ ಹುಡುಗಿ ಇರ್ತಾಳೇ ರಸ್ತೇಲೀ, ನೀನೊಳ್ಳೇ ಸರಿಹೋಯ್ತು.." ಅಂತ ಬಯ್ಯುತ್ತ ಆದದ್ದೆಲ್ಲ ಸವಿವರವಾಗಿ ವರದಿ ಒಪ್ಪಿಸಿದೆ.
"ಅದ ಹೇಗೆ ನಿಮಗೆ ಕಲ್ಲುಗಳು ಕಾಣಲಿಲ್ಲ, ರಸ್ತೇ ನೋಡಿಕೊಂಡು ಬರೋಕೆ ಆಗಲ್ವಾ, ನಿದಾನವಾಗಿ ಎಲ್ಲ ಕಡೆ ಗಮನ ಇಟ್ಕೊಂಡು ಗಾಡಿ ಓಡಿಸಬೇಕು" ಅಂತ ಉಪದೇಶ ಮಾಡಿದ್ಲು, "ಇಲ್ಲ ಕಲ್ಲು ಕಾಣಿಸಿದ್ವು, ಅದರಮೇಲೆ ಹತ್ತಿಸಿದ್ರೆ ಹೇಗೆ ಬೀಳ್ತೀನಿ ಅಂತ ಪ್ರಯೋಗ ಮಾಡಿ ನೋಡಿದೆ" ಅಂತ ಕಿರಿಕ್ಕು ಉತ್ತರಕೊಟ್ಟೆ, "ಒಳ್ಳೇದಕ್ಕೆ ಹೇಳಿದ್ರೆ ಜೊಕ್ ಮಾಡ್ತೀರಾ" ಅಂತ ಒಂದು ಗುದ್ದು ಕೊಟ್ಲು, ಅದೇ ಪೆಟ್ಟಾದ ಭುಜಕ್ಕೆ "ಅಮ್ಮಾ" ಅಂತ ಚೀರಿದೆ, "ರೀ ರೀ ಸಾರಿ ಸಾರಿ" ಅಂತನ್ನುತ್ತ ಮೆಲ್ಲಗೆ ನವಿರಾಗಿ ಸವರಿದ್ಲು, ಹಿತವಾಗಿತ್ತು. "ಅಮ್ಮ ಅಂತ ಚೀರಿದಿರಲ್ವಾ ಅವರಿಗೇ ಹೇಳ್ತೀನಿ ತಾಳಿ" ಅಂತಾ ಹೆದರಿಸಿದ್ಲು, "ಪ್ಲೀಜ ಅವರಿಗೆಲ್ಲ ಗೊತ್ತಾಗೋದು ಬೇಡ, ಸುಮ್ಮನೇ ಗಾಬರಿಯಾಗ್ತಾರೆ" ಅಂದೆ, "ಇನ್ನೊಮ್ಮೆ ಆಕ್ಸಿಡೆಂಟ್ ಮಾಡ್ಕೋತೀರಾ ಹಾಗಾದ್ರೆ, ಇಲ್ಲ ತಾನೆ ಆಣೆ ಮಾಡಿ" ಅಂತಂದ್ಲು "ಲೇ ಎನ್ ಹೇಳಿ ಕೇಳಿ ಮಹೂರ್ತ ಎಲ್ಲ ನೋಡಿಕೊಂಡು, ಮಾಡ್ಕೊಳ್ಳೊಕೆ ಅದೇನು ಮದುವೆನಾ, ಮದುವೆನೂ ದೊಡ್ಡ ಆಕ್ಸಿಡೆಂಟೆ ಬಿಡು ಆ ಮಾತು ಬೇರೆ" ಅಂದೆ ದುರುಗುಟ್ಟಿ ನೋಡಿದ್ಲು, ಮತ್ತೆ ಸಮಾಧಾನಿಸಲು ಮುಂದುವರೆಸಿದೆ "ಅಲ್ಲಾ ಕಣೆ, ಆಕ್ಸಿಡೆಂಟ್ ಅಂದ್ರೇನು, ಆಕಸ್ಮಿಕ, ಅಪಘಾತ... ಅದು ಆಕಸ್ಮಿಕವಾಗಿ ಆಗೋದು, ಕೆಲಸಾರಿ ತಪ್ಪು ಇರುತ್ತದೆ ಆದ್ರೆ ಬೇಕೆಂತಲೇ ಯಾರೂ ಆಕ್ಸಿಡೆಂಟ್ ಮಾಡ್ಕೋಳಲ್ಲ ಆಗಿ ಹೋಗುತ್ತೆ, ನಮ್ಮ ಎಚ್ಚರಿಕೆ ಎಲ್ಲ ನಾವು ತುಗೋತೀವಿ ಆದ್ರೂ ಕೆಲ ಸಾರಿ ಎನ್ ಮಾಡೋದು ದುರಾದೃಷ್ಟ" ಅಂದೆ, "ಅದ್ಯಾವ ಹುಡುಗೀ ದೃಷ್ಟೀ ತಾಗಿದೆಯೊ ನಿಮ್ಗೆ" ಅಂತಂದು ಪೊರಕೆಯ ನಾಲ್ಕು ಕಡ್ಡಿ ತಂದು ಅದೇನೋ ಬಡಬಡಿಸಿ, ಮೂಲೇಲಿಟ್ಟು ಸುಟ್ಟಳು, ಚಟಪಟಾಂತ ಸದ್ದು ಮಾಡಿ ಅದು ಉರಿಯುತ್ತಿದ್ದರೆ ನೋಡಿ ಎಷ್ಟು ದೃಷ್ಟಿ ಆಗಿದೆ ಅಂತನ್ನುತ್ತಿದ್ಲು, ನಾವೆಲ್ಲ ಹೀಗೆ ನಮ್ಮ ನಮ್ಮ ಸಮಾಧಾನಕ್ಕೆ ಹೀಗೆ ಎನೊ ನಂಬಿಕೆಗೆ ಮೊರೆ ಹೋಗುತ್ತೇವೆ, ನಮ್ಮ ದುರ್ಬಲವಾದ ಮನಸಿಗೆ ಅದೋಂಥರ ಆಸರೆಯಾಗಿ ನೆಮ್ಮದಿ ಸಿಗುತ್ತದೆ, ಅದರಿಂದ ಅವಳ ಮನಸು ಸ್ವಲ್ಪ ನಿರಾಳವಾಗಿ ಆಘಾತ ಕಮ್ಮಿಯಾಗುತ್ತದೆ ಅಂದ್ರೆ ನಾ ಎನು ನಂಬಲೂ ಸಿದ್ಧ. ಅಪಘಾತಗಳಾದಾಗ ಆಘಾತವಾಗೊದು ಸಹಜ ಅದನ್ನು ಸರಿಯಾಗಿ ನಿರ್ವಹಿಸಬೇಕು ಅಷ್ಟೇ, ಎಲ್ಲ ಮುಗಿದುಹೊಯ್ತು ಅನ್ನೊ ಮನೊ ಸ್ಥಿತಿಗೆ ಹೋಗಬಾರದು, ಮತ್ತೆ ಮರಳಿ ಸಹಜತೆ ಮರಳಿದರೇ ಜೀವನ...
ಅದೃಷ್ಟ ದುರಾದೃಷ್ಟಗಳ ಮಾತಿನಲ್ಲೇ "ನನ್ನ ಅದೃಷ್ಟ, ಹಿಂದೆ ಯಾವ ಗಾಡಿ ಬರುತ್ತಿರಲಿಲ್ಲ, ಹಿಂದೆ ಕಾರೊ ಬಸ್ಸೊ ಲಾರಿಯೊ ಬಂದಿದ್ರೆ, ಸೀದಾ ನಟ್ಟ ನಡುವೆ ರಸ್ತೇಲಿ ಬಿದ್ದುಕೊಂಡಿದ್ದೆ..." ಅವಳೇ ತಡೆದಳು ಮುಂದೇನೂ ಹೇಳದಂತೆ "ಬಿಟ್ತು ಅನ್ನಿ, ಎಲ್ಲ ಒಳ್ಳೇದಾಯ್ತು, ಅಷ್ಟು ಸಾಕು" ಅಂದ್ಲು. ಒಂದೇ ಒಂದು ಘಟನೆಯಲ್ಲಿ ಅದೃಷ್ಟ, ದುರಾದೃಷ್ಟ ಹೇಗೆ ಮಿಳಿತವಾಗಿರುತ್ತಲ್ಲ ಅಂತ ನನಗೆ ಸೋಜಿಗವೆನಿಸಿತು. "ಇನ್ಮೆಲೆ ಬಸ್ಸಿನಲ್ಲೇ ಓಡಾಡಿ, ಬೈಕು ಬೇಡ" ಅಂತ ರಾಗ ತೆಗೆದ್ಲು, "ನನಗೇಕೊ ಹೆದರಿಕೆ, ಏನಾದ್ರೂ ಆದ್ರೆ" ಅಂತ ಬಾಚಿ ತಬ್ಬಿಕೊಂಡ್ಲು, ಎದೆಗವಳು ಆತುಕೊಂಡಿದ್ದಕ್ಕೆ ಪಕ್ಕೆಲುಬು ಮತ್ತಷ್ಟು ನೊವಾಯ್ತು ನಾ ಹೇಳಲಿಲ್ಲ, ಅವಳಿಗೆ ನನ್ನದೇ ಚಿಂತೆಯಾಗಿ ಭಯ ಮೂಡಿತ್ತು, ಅದನ್ನ ನಾ ಹೋಗಲಾಡಿಸಬೇಕಿತ್ತು. "ನೀ ಈರುಳ್ಳಿ ಹೆಚ್ಚುವಾಗ ಕೈ ಕುಯ್ದುಕೊಂಡ್ರೆ ಎನ್ ಮಾಡ್ತೀಯಾ" ಅಂದೆ, "ಡೆಟಾಲ್ ಹಚ್ಚಿಕೊಂಡು ಪಟ್ಟಿ ಕಟ್ತೀನಿ" ಅಂದ್ಲು "ಆಮೇಲೆ ಮತ್ತೆ ಉಳಿದ ಈರುಳ್ಳಿ ಹೆಚ್ಚುತ್ತೀಯೋ ಇಲ್ಲ ಈರುಳ್ಳಿ ಹೆಚ್ಚುವುದೇ ಬಿಡುತ್ತೀಯೊ?" ಅಂತ ಪ್ರಶ್ನಿಸಿದೆ "ಹೆಚ್ತೀನೀ ಸ್ವಲ್ಪ ನೋಡಿಕೊಂಡು ಹೆಚ್ತೀನಿ" ಅಂದ್ಲು "ಅದೇ, ಅಪಘಾತ ಆಯ್ತು ಅಂತ ಬೈಕ್ ಬೇಡ ಅಂದ್ರೆ, ಬಸ್ಸು ಎಲ್ಲ ಸಂಪೂರ್ಣ ಸುರಕ್ಷಿತಾನಾ? ಅಲ್ಲಿ ಎಲ್ಲೊ ಸೀಟು ಸಿಗದೇ ಜೊತು ಬಿದ್ದು ಬರುವಾಗ ಜಾರಿ ಬಿದ್ದರೆ, ಕಾಯುವಾಗಲೇ ಫುಟ್ಪಾತ್ ಮೇಲೆ ಬಸ್ಸು ಏರಿದ್ರೆ, ಅಪಘಾತ ಎಲ್ಲಿ ಬೇಕಾದ್ರೂ ಆಗಬಹುದು, ಅದೂ ಬರೀ ಇಲ್ಲೆ ಅಂತ ನಿರ್ದಿಷ್ಟ ಸ್ಥಾನದಲ್ಲಿ ಅಲ್ಲ, ನಿಜ ಇನ್ನು ಮೆಲೆ ಬೈಕು ಹುಷಾರಾಗಿ ಓಡಿಸು ಅಂತಂದ್ರೆ ಸರಿ, ಬಿಟ್ಟು ಬಿಡು ಅಂದ್ರೆ ಹೇಗೆ" ಅಂದೆ, "ನೀವು ಏನೊ ಒಂದು ಮಾತು ಹೇಳಿ ನನ್ನ ಒಪ್ಪಿಸಿಬಿಡ್ತೀರಿ" ಅಂತ ಕುಸುಗುಟ್ಟಿದ್ಲು. "ಆಯ್ತು ಜೊರಾಗಿ ಓಡಿಸಬೇಡಿ, ನೀವು ಲೇಟಾಗಿ ಬಂದ್ರೂ ನಾನೇನೂ ಕಾಡಿಸಲ್ಲ, ಜಗಳ ಮಾಡಲ್ಲ, ಎನ ನೀವೇನೂ ರೆಸಿಂಗ್ ಬೈಕ್ ಓಡಿಸೊರ ಹಾಗೆ ಆ ಗ್ಲೌಸು, ಜಾಕೆಟ್ಟು ಹಾಕೊಂಡು ಹುಡಿಗೀರ ಮುಂದೆ ಸ್ಟೈಲು ಹೊಡೆಯೊದು ಏನ್ ಬೇಡ" ಅಂದ್ಲು, "ಲೇ ನಾ ಜೋರಾಗಿ ಓಡಿಸಲ್ಲ, ನಿನಗೇ ಗೊತ್ತು, ಏನೊ ರಸ್ತೆ ಖಾಲಿ ಇತ್ತು ಅಂತ ಸ್ವಲ್ಪ ಸ್ಪೀಡಿನಲ್ಲಿದ್ದೆ, ಇನ್ನು ಆ ಜಾಕೆಟ್ಟು ಗ್ಲೌಸು ಹಾಕಿಕೊಂಡಿದ್ದರಿಂದಲೇ ಕೈಯೆಲ್ಲ ಸ್ವಲ್ಪ್ ತರಚುಗಾಯಗಳೊಂದಿಗೆ ಬಚಾವಾಗಿದ್ದು, ಅದಿಲ್ಲದಿದ್ರೆ ಅಷ್ಟೆ" ಅಂದೆ "ಹಾಂ ಹಾಂ ಅದೂ ಸರಿ ಗ್ಲೌಸ್ ಹಾಕೊಳ್ಳಿ ಸ್ಟೈಲ್ ಎಲ್ಲ ಬೇಡ" ಅಂದ್ಲು. ಜಾಕೆಟ್ಟು ಒಂದು ಪಕ್ಕ ಕಿತ್ತು ಬಂದಿತ್ತು, ಗ್ಲೌಸ್ ಹರಿದಿತ್ತು, ನಾನೇ ಹೊಸದು ಕೊಡಿಸುತ್ತೇನೆ ಅಂದ್ಲು, ನಾನೂ ಖುಶಿಯಾದೆ...
"ಎದೆಗೆ ಸ್ವಲ್ಪ ಜೊರಾಗಿ ಪೆಟ್ಟು ಬಿದ್ದಿದೆ ಅನಿಸತ್ತೆ" ಅಂದ್ಲು "ಆ ಎದೆಯೊಳ್ಗಿರುವ ನಿನಗೇನು ಆಗಿಲ್ಲ ಬಿಡು" ಅಂದ್ರೆ ನಸುನಗುತ್ತ ನಾಚಿದಳು, ಅಯೊಡಿಕ್ಸ ತೆಗೆದುಕೊಂಡು ಪಕ್ಕೆಲುಬಿಗೆ ಸ್ವಲ್ಪ ಹಚ್ಚುತ್ತ ಪಕ್ಕದಲ್ಲೆ ಮಲಗಿದಳು, "ನಾಳೆ ಡಾಕ್ಟರ ಹತ್ರ ಹೋಗೊಣ, ಏನಕ್ಕೂ ಒಂದು ಸಾರಿ ಪಕ್ಕೆಲುಬು ತೋರಿಸಿಕೊಂಡು ಬರೊಣ, ಬಹಳ ಉಬ್ಬಿದೆ" ಅಂದ್ಲು "ಸರಿ ಆ ಮೊನ್ನೆ ಹೋಗಿದ್ವಲ್ಲ ಅದೇ ಕ್ಲಿನಿಕಗೆ ಕರಕೊಂಡು ಹೋಗ್ತೀಯಲ್ಲ, ನರ್ಸು ಅದೇ ನಮ್ಮ ನರ್ಗೀಸ್ ಹತ್ರ" ಅಂದೆ "ಹಾಂ!.. ಹೂಂ ಅಲ್ಲೇ ಕರಕೊಂಡು ಹೋಗ್ತೀನಿ, ಅದೇ ನಿಮ್ಮ ನರ್ಗಿಸಗೆ ಹೇಳ್ತೀನಿ, ಪಕ್ಕೆಲುಬು ಮುರಿದಿಲ್ಲ ಅಂದ್ರೂ, ಮುರಿದು ಕಳಿಸು ಅಂತ ನಾಲ್ಕು ದಿನಾ ಮನೇಲಿ ಬಿದ್ಕೊಳ್ಲಿ ಗೊತ್ತಾಗುತ್ತೆ" ಅಂತದ್ಲು. ನೋವಿತ್ತು ಆದ್ರೂ ನಗು ಬರುತ್ತಿತ್ತು, ನಿದ್ದೆ ಬರುವ ಹಾಗಿರಲಿಲ್ಲ ಪೇನ ಕಿಲ್ಲರ(ನೋವುನಿವಾರಕ) ಥರ ಅವಳ ಮಾತುಗಳು ನೋವು ಮರೆಸುತ್ತಿದ್ವು...
ಮತ್ತೆ ಸಿಗೊಣ ಹೀಗೆ ಅಪಘಾತದಲ್ಲಿ... ಅಯ್ಯೊ ಬಿಟ್ತು ಅನ್ನಿ... ಮತ್ತೆ ಮಾತುಕತೆಗಳಲ್ಲಿ...
ಮೊನ್ನೆ ಗುರುವಾರ ಸ್ವಲ್ಪ ಚಿಕ್ಕ ಆಕ್ಸಿಡೆಂಟ ಆಯ್ತು, ಎನೂ ಬಹಳ ಪೆಟ್ಟಾಗಿಲ್ಲ, ಸಧ್ಯ ದೇವರ ದಯೆಯಿಂದ ಚೆನ್ನಾಗಿದ್ದೇನೆ, ಮತ್ತೆ ಬರೆಯುತ್ತಿದ್ದೇನೆ ಕೂಡ, ಅದೃಷ್ಟ ನನ್ನ ಹಿಂದೆ ಯಾವ ವಾಹನವೂ ಬರ್ತಿರಲಿಲ್ಲ, ಅಂತೂ ಬದುಕು ಒಂದು ಹೊಸಾ ಅನುಭವ ಕೊಟ್ಟಿದೆ, ನನಗಾದ ಅನುಭವದ ಆಧಾರದ ಮೇಲೆ ಕೆಲ ಉಪದೇಶ.. ಛೆ ಛೆ.. ಸಲಹೆ ಕೊಡುತ್ತಿದ್ದೇನೆ ಸರಿಯೆನ್ನಿಸಿದರೆ ಅಳವಡಿಸಿಕೊಳ್ಳಿ, ನನಗಾಗಿರುವುದು ಹೀಗೆ ಯಾರಿಗೊ ಆಗದಿರಲಿ ಅನ್ನೋದೆ ನನ್ನ ಆಶಯ..
>ರಾತ್ರಿ ರಸ್ತೆಗಳು ಖಾಲಿ ಇದ್ದರೂ ಎಲ್ಲಿಂದ ಯಾವಕಡೆ ವಾಹನ ಬರುತ್ತವೆ ಗೊತ್ತಾಗಲ್ಲ ತಿರುವುಗಳಲ್ಲೆಲ್ಲ ಹುಷಾರಾಗಿದ್ದರೆ ಒಳ್ಳೇದು
>ಕತ್ತಲೆಯಲ್ಲಿ ರಸ್ತೆಯ ಗುಂಡಿ, ಕಲ್ಲುಗಳು ಸರಿಯಾಗಿ ಕಾಣಿಸುವುದಿಲ್ಲ, ಅದಕ್ಕೆ ರಸ್ತೆಯತ್ತ ವಿಶೇಷ ಗಮನವಿರಲಿ.
>ಸಾಧ್ಯವಾದಷ್ಟು ಕಾರು ಬಸ್ಸು ಹಿಂಬಾಲಿಸದಿರಿ, ಅಂತರ ಕಾಯ್ದುಕೊಳ್ಳಿ ಈ ನಾಲ್ಕು ಚಕ್ರದ ವಾಹನಗಳ ಕೆಳಗೆ ಗುಂಡಿಗಳೆಲ್ಲ ಕಾಣದೆ ಅನಿರೀಕ್ಷಿತವಾಗಿ ನಿಯಂತ್ರಣ ತಪ್ಪುವ ಸಂಭವ ಜಾಸ್ತಿ.
>ಮುಖ್ಯವಾಗಿ ದೇಹದ ಬಹು ಪಾಲು ಮುಚ್ಚುವಂತೆ, ಬೂಟು, ಒಳ್ಳೆ ಗುಣಮಟ್ಟದ ಜಾಕೆಟ್ಟು, ಗ್ಲೌಸು (ಸಂಪೂರ್ಣ ಕೈಬೆರಳು ಮುಚ್ಚುವ) ಧರಿಸಿ, ನನ್ನ ಮಟ್ಟಿಗೆ ಕೆಲವೇ ಕೆಲವು ತರಚು ಗಾಯಗಳೊಂದಿಗೆ ನಾ ಬಚಾವಾಗಿದ್ದು ಸಂಪೂರ್ಣ ಎನೂ ಹೊರಗಿರದ ಹಾಗೆ ಇದೆಲ್ಲ ಧರಿಸಿದ್ದೆ ಕಾರಣ.
>ಹೆಲ್ಮೆಟ್ಟು ಹೇಗೂ ಕಡ್ಡಾಯವಿದೆ ಅದನ್ನು ಪಾಲಿಸಿ.
>ಅನವಶ್ಯಕ ಸ್ಪೀಡಿನಲ್ಲಿ ಹೋಗೊದು ಬೇಡ ಒಂದೈದು ನಿಮಿಷ ಲೇಟಾದರೂ ಪರವಾಗಿಲ್ಲ, ಆದರೆ ಐದು ನಿಮಿಷ ಉಳಿಸಲು ಹೋಗಿ ಮುಂದಿನ ಬದುಕಲ್ಲಿ ಬರುವ ವರ್ಷಗಳೆಲ್ಲ ಕಳೆದುಕೊಳ್ಳೋದು ಬೇಡ, ಇದು ನನಗೂ ಅನ್ವಯ ಆಗುತ್ತದೆ.
ಹೀಗೆ ನಿಮ್ಮಲ್ಲೂ ಇವನ್ನು ಬಿಟ್ಟು ಕೆಲ ಇನ್ನೂ ಒಳ್ಳೆಯ ಸಲಹೆಗಳಿದ್ದರೆ ಹಂಚಿಕೊಳ್ಳಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/apaghaata.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, May 10, 2009
ಪತ್ರ ಬರೆಯಲಾ...
ಮುಂಜಾನೆ ಎಫ್ ಎಂ ರೇಡಿಯೋ ಕೇಳುತ್ತಲೇ ಇವಳೆಲ್ಲ ಕೆಲಸ ಮಾಡೊದು ಹೀಗಾಗಿ ಕೆಲವೊಮ್ಮೆ ಇಷ್ಟವಾಗದಿದ್ದರೂ ಅವಳಿಂದಾಗಿ ಅದು ನನ್ನ ಕಿವಿ ಮೇಲೆ ಬೀಳುತ್ತಲೇ ಇರುತ್ತದೆ. ಇತ್ತೀಚಿನ ಆ ರೇಡಿಯೊ ಜಾಕಿಗಳ ಮಾತುಕತೆಯಂತೂ ಬಹಳ ಕಿರಿಕಿರಿಯಾಗುತ್ತದೆ, ಅವರ ಮಾತಿನ ಹಾಗೂ ಜಾಹೀರಾತಿನ ನಡುವೆ ಎಲ್ಲೋ ಸ್ವಲ್ಪ ಹಾಡು ಕೇಳಿಸಿದರೆ ಅದೇ ನಮ್ಮ ಅದೃಷ್ಟ. ಅಂದು ದುನಿಯಾದ ಹಾಡೊಂದು ಕೇಳಿ ಬರುತ್ತಿತ್ತು... "ಕರಿಯ ಆಯ್ ಲವ್ ಯು..." ಅಂತ.. ನಾನೂ ನನ್ನ ಸಾಹಿತ್ಯ ಸ್ವಲ್ಪ ಸೇರಿಸಿ ಗುನುಗುನಿಸುತ್ತಿದ್ದೆ ಬಾತರೂಮಿನಲ್ಲಿ... ನನ್ನದೇ ದನಿ ಸ್ವಲ್ಪ ಹೆಚ್ಚಾಯಿತೆನ್ನಿಸುತ್ತದೆ, ಪಾಕಶಾಲೆಯಿಂದ ಇವಳು "ರೀ ಎಸ್ ಪೀ ಬಾಲಸುಬ್ರಹ್ಮಣ್ಯಂ ಅವರೇ ಸ್ವಲ್ಪ ಹಾಡೋದು ನಿಲ್ಲಿಸ್ತೀರಾ, ರೇಡಿಯೋದಲ್ಲಿ ಹಾಡು ಬರ್ತಿದೆ, ಆಮೇಲೆ ನೀವು ಹಾಡುವಿರಂತೆ" ಅಂತ ಗದರಿದಳು. "ಆಯ್ತು ಲತಾ ಮಂಗೇಶ್ಕರ ಅವರೇ, ಆಮೇಲೆ ಇಬ್ಬರೂ ಸೇರಿ ಹಾಡೊಣಾ ಅಂತೆ" ಅಂತ ಮಾರುತ್ತರ ಕೊಟ್ಟೆ. ಅಷ್ಟರಲ್ಲಿ ಹಾಡು ಮುಗಿಯಿತು, ಇಲ್ಲಾ ಅವರೇ ಮುಗಿಸಿದರೋ(ಜಾಹೀರಾತು ಹಾಕಬೇಕಲ್ಲ)... ಹಾಡು ನಿಂತಹೋಯಿತಲ್ಲ, ಅವಳ ಅಪ್ಪಣೆಯಂತೆ ನಾ ಮತ್ತೆ ಹಾಡ ಬಹುದಿತ್ತು, ಮತ್ತೆ ಶುರುವಿಟ್ಟುಕೊಂಡೆ... ಅವಳೂ ದನಿ ಸೇರಿಸಿದಳು "ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ.." ನಾನೂ ಜತೆಯಾದೆ, "ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ..." ಅಂತ... ಅದೇ ಸಾಲಿನ ಯೋಚನೆಯಲ್ಲೇ "ನೀನ್ಯಾವತ್ತು ನನಗೆ ಪ್ರೇಮಪತ್ರ ಬರೆದೇ ಇಲ್ವಲ್ಲ" ಅಂದೆ.. ನಾಚಿ ಅವಳ ಕೆನ್ನೆ
ಕೆಂಪಾಯಿತು.. "ನೀವು ಬರೆದಿರಬೇಕಲ್ಲ, ಮೊದಲೇ ಕೃಷ್ಣ ಪರಮಾತ್ಮನ ಕಲಿಯುಗದ ಅವತಾರ, ಯಾರ್‍ಯಾರಿಗೆ ಎಷ್ಟು ಬರೆದೀದೀರಿ" ಅಂದ್ಲು. ನಾನು ಒಂದು ಪ್ರೇಮಪತ್ರದ ಮಾತೆತ್ತಿದರೆ ಇವಳು ಎಷ್ಟು ಅಂತ ಎಣಿಕೆ ಕೇಳಬೇಕೆ? "ಕಾಲೇಜಿನಲ್ಲಿ ಹುಡುಗನಿಗೊಬ್ಬನಿಗೆ ಗೆಳೆಯರೆಲ್ಲ ಸೇರಿ ಹುಡುಗಿ ಹಾಗೆ ಪತ್ರ ಬರೀಬೇಕಾದ್ರೆ ಎನು ಚೂರು ಪಾರು ಸಲಹೆ ನೀಡಿದ್ದು ಬಿಟ್ಟರೆ, ಎಲ್ಲೊ ನಾ ಬರೆದ ನಾಲ್ಕು ಸಾಲುಗಳನ್ನು ಯಾರೋ ತಮ್ಮ ಪತ್ರದಲ್ಲಿ ಉಪಯೋಗಿಸುತ್ತೀನಿ ಅಂತದದ್ದಕ್ಕೆ ಓಕೆ ಅಂದಿದ್ದೆ ಅಷ್ಟೇ, ಪತ್ರಗಿತ್ರ ಬರೆಯೋ 'ಸಾಹಸ'ಕ್ಕೆ ಕೈ ಹಾಕಿಲ್ಲ ಬಿಡು, ಅಲ್ಲದೇ ಪ್ರೀತಿ ಮಾಡುವಷ್ಟು ಯಾರೂ ನನಗೆ ಇಷ್ಟವೇ ಆಗಲಿಲ್ಲ" ಅಂದೆ. "ನನಗಾದ್ರೂ ಒಂದು ಬರೀಬೇಕಿತ್ತಲ್ಲಾ?ಯಾಕೆ ನಾನೂ ಇಷ್ಟ ಅಗಿಲ್ವಾ" ಅಂದ್ಲು. "ಅಲ್ಲಾ ನಿಶ್ಚಿತಾರ್ಥ ಅಂತ ಆದ ಮೇಲೆ ಒಂದು ಬರೆಯೋಣ ಅಂತಿದ್ರೆ, ಮುಂಜಾನೆ ಕಾಲು ಘಂಟೆ, ಮಧ್ಯಾಹ್ನ ಒಂದು ಘಂಟೆ, ರಾತ್ರಿಯೊ ಘಂಟೆಗಳ ಲೆಕ್ಕ ಇಲ್ಲದ ಹಾಗೆ ಫೋನು ಮಾಡಿ ಮಾತಾಡ್ತಿದ್ದೆ, ಇನ್ನು ಪತ್ರದಲ್ಲಿ ಬರೆಯೋಕೆ ಎನಿರತ್ತೆ ಮಣ್ಣು ಎಲ್ಲ ಮಾತಾಡಿ ಮುಗಿಸಿದ ಮೇಲೆ, ಅದಕ್ಕೇ ಬರೀಲಿಲ್ಲ" ಅಂದೆ. ಅವಳಿಗೂ ಅದು ಸರಿಯೆನಿಸಿರಬೇಕು ಸುಮ್ಮನಾದ್ಲು.
ಆದರೆ ನನಗೇಕೋ ಈ ಫೊನು ಬಂದು ಪತ್ರ ಬರೆಯೋದನ್ನೆ ಇಲ್ಲದಾಗಿಸಿಬಿಟ್ಟಿತಲ್ಲ ಅಂತ ತಲೆಯಲ್ಲಿ ಕೊರೆಯುತ್ತಿತ್ತು ಆ ಯೋಚನೆ. ಅದೇ ಯೊಚನೆಯಲ್ಲೇ, ಅಫೀಸಿಗೆ ಬಂದೆ, ಅಲ್ಲಿ ನೋಡಿದ್ರೆ ನೆಟವರ್ಕ ಪ್ರಾಬ್ಲಂ ಆಗಿದೆ, ಇಂಟರನೆಟ್ಟು, ಆಯ್ ಪಿ ಫೋನು ಏನೂ ಕೆಲ್ಸ ಮಾಡ್ತಿಲ್ಲ, ಅದಕ್ಕೆ ಸಧ್ಯ ಅದು ಸರಿ ಹೋಗೊವರೆಗೆ ಏನೂ ಕೆಲಸ ಮಾಡಾಕಾಗಲ್ಲ ಅಂದ್ರು. ನಾ ನಕ್ಕೆ, ಕೆಲ್ಸ ಇಲ್ಲ ಅಂತಲ್ಲ, ಅಲ್ಲಾ ಈವತ್ತೇ ಪತ್ರದ ಬಗ್ಗೆ ಮಾತಾಡ್ತಿದ್ದೆ, ಫೋನು, ಇ-ಮೇಲ್ ಎಲ್ಲ ಇಲ್ಲದಾಗಿ ಬಿಡಬೇಕಾ ಹ ಹ ಹ... ಕ್ಯಾಂಟೀನಿಗೆ ಹೋಗಿ ಬಿಸಿ ಕಪ್ಪು ಕಾಫಿ ಹೊಟ್ಟೆಗೆ ಇಳಿಸಿದ್ದಾಯ್ತು. ಆಗಲೇ ಬಂದದ್ದು ಯೋಚನೆ ನನ್ನಾಕೆಗೆ ಈಗ ಯಾಕೆ ಪತ್ರ ಬರೀಬಾರದು ಅಂತ... ಕಾನ್ಫರೆನ್ಸ ರೂಮ ಒಂದು ಸೇರಿಕೊಂಡು ಕೂತು ಪೆನ್ನು ಪೇಪರು ತೆಗೆದುಕೊಂಡು ಬರೆಯಲು ಕೂತೆ...
ಪ್ರೀತಿಯ, ನನ್ನವಳೇ, ನನ್ನಾಕೆಯೆ, ಲೇ ಇವಳೇ, ತಗಡು, (ಅಲ್ಲಾ ಎದುರು ಮಾತಾಡೋವಾಗ್ಲೇ ನಿನ್ನ ಹೆಸರಿಂದ ಕರೆದಿಲ್ಲ, ಇನ್ನು ಪತ್ರದಲ್ಲಿ ಯಾಕೆ?) ಅದಕ್ಕೇ
ಪ್ರೀತಿಯ ನಿನಗೆ,
ಇಲ್ಲಿ ಎನೂ ಕ್ಷೇಮವಿಲ್ಲ, ಕೆಲಸ ಇಲ್ಲಾ, ಖಾಲೀ ಕೂತಿದ್ದೇನೆ, ಕಾಡಿಸೊಣಾ ಅಂದ್ರೂ ನೀನಿಲ್ಲ, ಅಲ್ಲಿನ ಕ್ಷೇಮ ಸಮಾಚಾರವನ್ನು ನಿರಂತರವಾಗಿ ಏನ್ ಡಿ ಟೀವೀ ಬ್ರೇಕಿಂಗ ನ್ಯೂಜ ಥರ ನೀನು ಫೋನು ಮಾಡಿ ತಿಳಿಸುವುದರಿಂದ.. ಅಲ್ಲಿ ಎಲ್ಲ ಕ್ಷೇಮವಾಗಿದೆ ಎಂದುಕೊಳ್ಳುತ್ತೇನೆ.
ಮುಂಜಾನೆ ಅಲ್ಲಿಂದ ಆಫೀಸಿಗೆ ಹೊರಟು ಘಂಟೆಕಾಲದ ಈ ಟ್ರಾಫಿಕ್ಕಿನಲ್ಲಿ ಹಾಗೂ ಹೀಗೂ ಬಂದು ತಲುಪಿದ್ದೇನೆ, ಪ್ರಯಾಣ ಸುಖಕರವಾಗಿತ್ತು(ಸಿಗ್ನಲ್ಲಿನಲ್ಲಿ ಸುಂದರಿಯರು ಸಿಕ್ಕಿದ್ದರಲ್ಲ), ಸರಿಯಾಗಿ ಬಂದು ತಲುಪಿದ್ದು ನನ್ನ ಅದೃಷ್ಟ. ಬೈಕಿನಲ್ಲಿ ಬಂದಿದ್ದರಿಂದ ಬೇಗ ತಲುಪಿದೆ, ಬಸ್ಸಿನಲ್ಲಿ ಬರುವುದಾಗಿದ್ದರೆ, ಊಹಿಸಲೂ ಸಾಧ್ಯ ಇಲ್ಲ.
ಈಗ ಪತ್ರ ಬರೆಯಲು ಕಾರಣವೇನೆಂದರೆ, ಪತ್ರ ಬರೆಯೋದೇ ಆಗಿದೆ. ನಸುಕಿಗೆ ಕೇಳಿದ ಹಾಡು ನನ್ನ ಮನದಲ್ಲಿ ಹಾಗೆ ಕೊರೆಯುತ್ತಿತ್ತು ಅದರಲ್ಲೂ ನೀನು ಪತ್ರ ಬರೆದೇ ಇಲ್ಲಾ ಅಂದಾಗ ನೀನು ಬರೆದಿಲ್ಲದಿದ್ದರೂ ನಾನ್ಯಾಕೆ ಬರೆಯಬಾರದು ಅಂತ ಬರೆಯಲು ಕುಳಿತೆ.
ಮದುವೆಯಾಗಿ ಇನ್ನೂ ಎಣಿಕೆ ಮಾಡಿ ಹೇಳೊವಷ್ಟು ವರ್ಷಗಳಾಗಿಲ್ಲ ಆದರೂ ಕಷ್ಟಾನೋ ಸುಖಾನೋ ನಾವಿಬ್ಬರೂ ಬೇವು ಬೆಲ್ಲದಂತೆ ಬದುಕು ಅಂತ ಹೊಂದಿಕೊಂಡು ಹೋಗುತ್ತಿದ್ದೇವೆ. ಮದುವೆಯಾದ ಹೊಸತನದಲ್ಲಿನ ನಿನ್ನ ಹಿಂಜರಿತ ಈಗ ಇಲ್ಲವಾಗಿ ನನ್ನೊಂದಿಗೆ ನಿರ್ಭಿಡೆಯಿಂದ ಮಾತಾಡುತ್ತೀ... ಹಾಗಾಗಿ ಎಲ್ಲ ಪಾರದರ್ಶಕವಾಗಿರುವುದರಿಂದ ಅನುಮಾನಗಳು ಹುಟ್ಟಿ ನಮ್ಮಿಬ್ಬರ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಲು ಎಲ್ಲಿ ಆಸ್ಪದವಿದೆ. ಬರೀ ನನ್ನೊಂದಿಗೆ ಮಾತ್ರವಲ್ಲ ನನ್ನವರೊಂದಿಗೂ ನೀ ಬೆರೆತುಕೊಂಡ ರೀತಿ ನನಗೆ ನಂಬಲಾಗುತ್ತಿಲ್ಲ. ನೀನಿಲ್ಲದೇ ನನಗೆ ಒಂದು ದಿನ ಕೂಡ ಕಳೆಯಲಾಗದಷ್ಟು ನನ್ನ ಆವರಿಸಿಕೊಂಡಿರುವಿ. ಚುನಾವಣೆಗೆ ನಿಂತ ರಾಜಕೀಯ ಮುಖಂಡನನ್ನು ಹಿಂಬಾಲಕರು ಹೊಗಳಿದಂತೆ ನನ್ನವು ಹೊಗಳಿಕೆ ಮಾತೆಂದುಕೊಳ್ಳಬೇಡ, ನನ್ನ ಮನದಿಂದ ನನಗನಿಸಿದ್ದು ಮಾತ್ರ ಹೇಳುತ್ತಿದ್ದೇನೆ.
ನಾಯಿ ಬೆಕ್ಕಿನಂತೆ ನಾವಿಬ್ಬರೂ ಎಷ್ಟು ಸಾರಿ ಕಚ್ಚಾಡಿಲ್ಲ, ನಶೆಯೇರದೇ ನಟಿಸಿ ಗೋಳು ಹೊಯ್ದುಕೊಂಡಿದ್ದು, ಸೀರೆ ಖರೀದಿ ಮಾಡಿ ಬಂದಾಗ ಕಣ್ಣಂಚಲ್ಲಿ ಕಣ್ಣೀರಿನೊಂದಿಗೂ ನಿನ್ನ ನಗಿಸಿದ್ದು, ಒಂದೇ ಎರಡೇ ನನ್ನ ಕೀತಾಪತಿಗಳು ಎಲ್ಲವನ್ನೂ ಸಹಿಸಿ, ನಿನ್ನ ಪ್ರೀತಿಯ ಪರಿಧಿಯಲ್ಲಿ ನನ್ನ ಬಂಧಿಸಿ ಬಿಗಿದಪ್ಪಿಕೊಂಡಿದ್ದು ಎಲ್ಲ ನೆನಸಿದರೆ ನಿನ್ನ ನನ್ನಾಕೆಯಾಗಿ ಪಡೆದ ನಾನೇ ಧನ್ಯ. ಇನ್ನೇನು ಹೇಳಲಿ ನಿನ್ನಲ್ಲಿ ನನ್ನದೊಂದೇ ಕೋರಿಕೆ, ದಾರಿ ತಪ್ಪಿ ತಪ್ಪುಗಳ ಮಾಡಲು ನಮಗೆಷ್ಟು ತಿರುವುಗಳಿದ್ದವು, ಎಲ್ಲ ಮೀರಿ ಸರಿದಾರಿಯಲ್ಲಿ ಇಷ್ಟೊಂದು ದೂರ ಪಯಣಿಸಿ ಬಂದಿದ್ದೇವೆ. ನನ್ನ ಈ ಬರುಡು ಬದುಕನ್ನು ಹಸಿರು ಕಾನನ ಮಾಡಲು ನನಗೆ ಹೀಗೆ ಜತೆಯಾಗು, ಎಲ್ಲರಿಗೂ ಮಾದರಿಯಾಗಿ ಬಾಳಿ ತೋರಿಸೋಣ.
ಹೆಚ್ಚಿಗೇನು ಬರೆಯಲು ಇಲ್ಲ, ಹಾಂ ಮುಂಜಾನೆ ನೀ ಹಾಕಿದ್ದ ರಂಗೋಲಿ ಬಹಳ ಚೆನ್ನಾಗಿತ್ತು, ಅದರಲ್ಲಿ ಬಣ್ಣ ತುಂಬಿದ್ದರೆ ಇನ್ನೂ ಚೆನ್ನಾಗಿರೋದು, ನಾನು ಬಣ್ಣ ತುಂಬಲು ಹೆಲ್ಪು ಮಾಡುತ್ತೀನಿ ಅಂದ್ರೂ ನೀನು ಬಿಡಲ್ಲ ಏನ್ ಮಾಡೊದು. ಈ ನೆಟವರ್ಕ ತೊಂದ್ರೆಯಿಂದಾಗಿ ಭಾರೀ ಒತ್ತಡದ ಕೆಲಸದ ನಡುವೆ ಬಿಡುವು ಸಿಕ್ಕಿತ್ತು, ಮತ್ತೆ ಸರಿಯಾಗಿರಬೇಕು ಹೋಗಿ ನೋಡುತ್ತೇನೆ, ಹೊಟ್ಟೇ ಪಾಡು ಕೆಲಸ ಮಾಡಲೇಬೇಕಲ್ಲ, ಸಂಜೆ ಬೇಗ ಬರ್ತೀನೆ.
ಪಕ್ಕದ ಮನೆ ಪದ್ದು, ಮತ್ತು ಹಾಲಿನಂಗಡಿ ಹಾಸಿನಿನಾ ಕೇಳ್ತಾ ಇದ್ದೆ ಅಂತ ಹೇಳು... ಪರಫ್ಯೂಮ್ ಪರಿಮಳ ಅವರು ಬಂದ್ರೆ ನನ್ನ ನಮಸ್ಕಾರಗಳನ್ನು ತಿಳಿಸು.
ಇಂತೀ ಪ್ರೀತಿಯಿಂದ
ನಿನ್ನವ.
ಅಂತೂ ಇಂತೂ ಮೊದಲ ಪ್ರೇಮ ಪತ್ರ ಬರೆದು ಹಾಕಿದೆ, ಏನೊ ಮನಸಿಗೆ ಹಿತವೆನ್ನಿಸಿತು, ಫೋನಿನಲ್ಲಿ ಘಂಟೆಗಟ್ಟಲೇ ಮಾತಾಡಬಹುದು ಏನು ಬೇಕಾದ್ರೂ, ಅದೇ ಬರೆಯಲು ಆಗಲ್ಲ, ಬರೆಯಲು ಪದಗಳು ಸಿಗೋದಿಲ್ಲ, ಎಲ್ಲಿ ಸರಿಯಾಗಿದೆಯೋ ಇಲ್ವೊ, ಅಲ್ಲಿ ತಪ್ಪಾಯಿತು, ಇಲ್ಲಿ ಸರಿ ಮಾಡು, ಅಂತ ನಾಲ್ಕು ಸಾರಿ ಬರೆದು ಗೀಚಿ, ಗೀಟು ಹಾಕಿ, ಹರಿದು ಬೀಸಾಕಿ, ಬಹಳಷ್ಟು ಶ್ರಮ ಪಟ್ಟಾಗಲೇ ಒಂದು ಸುಂದರ ಪತ್ರ ತಯ್ಯಾರಾಗೋದು, ಆದರೂ ಆ ಶ್ರಮ ಸಾರ್ಥಕ, ಪತ್ರ ಜತನವಾಗಿ ಕಾದಿಟ್ಟು, ಮತ್ತೆ ಮತ್ತೆ ಓದಬಹುದು, ನೆನಪಿನ ಖಜಾನೆಯನ್ನು ಮತ್ತೆ ಮತ್ತೆ ತೆರೆದು ನೋಡಬಹುದು, ಅದೇ ಫೋನಿನಲ್ಲಿ ಮುಂಜಾನೆ ಮಾತಾಡಿ ಸಂಜೆ ಮರೆತು ಬಿಡಬಹುದು. ಫೊನಿನಲ್ಲಿ ಒಂದು ಸಾರಿ ಪ್ರೀತಿಸುತ್ತೀನಿ ಅಂತ ಒಂದು ಸಾರಿ ಭಾವನೆಗಳ ಬಿಚ್ಚಿಡಬಹುದು, ಆದರೆ ಒಂದು ಸಾರಿ ಹೀಗೆ ಬರೆದು, ಅವರು ಅದನ್ನು ಬಚ್ಚಿಟ್ಟುಕೊಂಡು, ಆಗಾಗ ಬಿಚ್ಚಿ ಓದುತ್ತಿದ್ದರೆ, ಒಂದು ಸಾರಿ ಹೇಳಿದ್ದು ನೂರು ಸಾರಿಯಾಗಿರುತ್ತದೆ. ಕೆಲವೊಮ್ಮೆ ಪತ್ರದಲ್ಲಿ ಬರೆದ ಕೆಲ ಸಂಗತಿಗಳು ಅನಾಹುತಕ್ಕೆ ಎಡೆ ಮಾಡಿಕೊಡಬಹುದಾದರೂ, ಪತ್ರಗಳದ್ದೇ, ಒಂದು ಭಾವನೆಗಳ ಬಿತ್ತರಿಸುವ ವಿಭಿನ್ನ ವೈಖರಿ. ಅದೆಲ್ಲ ಈ ಆಧುನಿಕತೆಯಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ ಅನ್ನಿಸಿತು, ಅದಕ್ಕೆ ನಾ ನನ್ನವಳಿಗೆ ಬರೆದೆ... ಪತ್ರಗಳನ್ನು ನನ್ನ ಬದುಕಿನಲ್ಲಿ ಜೀವಂತವಾಗಿರಿಸಿದೆ, ನಿಮ್ಮ ನಿಮ್ಮ ಅನುಕೂಲಗಳು ನಿಮಗೆ ಬಿಟ್ಟಿದ್ದು.
ಪತ್ರ ಬರೆದದ್ದೇನೊ ಆಯ್ತು, ಇನ್ನು ಪೋಸ್ಟಿಗೆ ಹಾಕಿದ್ರೆ, ಅದು ಯಾವಾಗ ಹೋಗಿ ತಲುಪುತ್ತೋ ಯಾರಿಗೆ ಗೊತ್ತು, ನಾ ಮನೆಗೆ ಹೋಗಿ ನಾಲ್ಕು ದಿನಗಳಾದ ಮೇಲೆ ತಲುಪಿದರೆ ತಲುಪೀತು ಅಂದುಕೊಂಡು, ಆಫೀಸಿನಲ್ಲಿ "ಸೂಪರ್ ಸೇವಾ" ಅಂತ ಸೌಲಭ್ಯವಿದೆ, ಬಿಲ್ಲ್ ತುಂಬಲು, ಕೊರಿಯರ್ ಮಾಡಲು.. ಅವರನ್ನು ಹೋಗಿ ಕೇಳಿದ್ದಕ್ಕೆ, ಲೋಕಲ ಕೊರಿಯರ ಈಗ ಕೊಟ್ಟರೆ ಮಧ್ಯಾಹ್ನ ತಲುಪುತ್ತದಂತ ಕೇಳಿ ಖುಶಿಯಾಗಿ ಕೊರಿಯರ ಮಾಡಿ ಬಂದು ಕುಳಿತೆ... ಫೋನಿನಲ್ಲಿ ಮತ್ತೆ ಎಫ್ ಎಂ ಹಾಕಿಕೊಂಡೆ "ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ ಹೇಗೆ ಹೇಳಲಿ ನನ್ನ ಮನದ ಹಂಬಲ..." ಹಾಡು ಬರುತ್ತಿತ್ತು... ಅಯ್ಯೊ ಸಾಕಪ್ಪ ಪತ್ರ ನಾನು ಬರೆದಾಯ್ತು, ಇನ್ನೆಲ್ಲಿ ಚಿತ್ರ ಬಿಡಿಸಲಿ.. ಅಂತ ಆಫ್ ಮಾಡಿದೆ... ನೋಡಬೇಕು ಪತ್ರ ಓದಿ ಫೋನು ಮಾಡುತ್ತಾಳೋ ಇಲ್ಲಾ ಪತ್ರ ಬರೆಯುತ್ತಾಳೊ... ನಿಮಗೆ ಇಷ್ಟವಾಗಿದ್ದರೆ, ನೀವು ಪತ್ರ(ಇಂಚೆ) ಇಲ್ಲಾಂದ್ರೂ ಕಾಮೆಂಟಾದ್ರೂ ಬರೆಯುತ್ತೀರಲ್ಲವೇ...
ಮತ್ತೆ ಸಿಕ್ತೀನಿ, ಹೀಗೆ ಪತ್ರ, ಅಲ್ಲಲ್ಲ ಬ್ಲಾಗ ಪೋಸ್ಟಿನಲ್ಲಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಈ ಲೇಖನದೊಂದಿಗೆ ನನ್ನವಳೊಂದಿಗಿನ ನನ್ನ ಲೇಖನಗಳು ಇಪ್ಪತ್ತೈದರ ಗಡಿ ತಲುಪಿವೆ(ಇದೇ ೨೫). ಎಲ್ಲ ಲೇಖನಗಳ ತಲೆಬರಹಗಳ ತುಣುಕುಗಳನ್ನು ಈ ನನ್ನ ಪತ್ರದಲ್ಲಿ ಹುದುಗಿಸಿದ್ದೇನೆ... ಆಸಕ್ತಿಯಿದ್ದವರು ಅವನ್ನೂ ಓದಬಹುದು, ಇಷ್ಟು ದೂರ ಬ್ಲಾಗ ಲೋಕದಲ್ಲಿ ಪಯಣಿಸಲು ನಿಮ್ಮೆಲ್ಲ ಓದುಗರ, ಹಾಗೂ ಸಹ ಬ್ಲಾಗಿಗರ ಪ್ರೊತ್ಸಾಹವೇ ಕಾರಣ, ಅದಕ್ಕೆ ನಿಮೆಲ್ಲರಿಗೂ ನಾನು ಚಿರಋಣಿ, ಹಾಗೆ ಎಲ್ಲ ಲೇಖನಗಳ ಸಂಕಲನ ಮಾಡಿ PDF ಫೈಲು ಮಾಡಿ ಲಿಂಕು ಕೊಡುತ್ತಿದ್ದೇನೆ, ಬಹಳ ದೊಡ್ಡ ದೊಡ್ಡ ಲೇಖನಗಳಾದ್ದರಿಂದ ಇಲ್ಲಿ ಓದಲಾಗದವರು ಅದನ್ನು ಡೌನಲೋಡ ಮಾಡಿಕೊಂಡು ಓದಬಹುದು, ಇದೆಲ್ಲದರ ಬದಲಿಗೆ ನಿಮ್ಮಿಂದ ಒಂದೆರಡು ಮೆಚ್ಚುಗೆಯ ನುಡಿಗಳು ಮಾತ್ರ ನನ್ನ ನಿರೀಕ್ಷೇ. ಹೀಗೆ ಬರುತ್ತಿರಿ...
25 Posts single PDF document
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, May 3, 2009
ಬಸ್ಸು ಬಂತು ಬಸ್ಸು...
ಬೇಗ ಬೇಗ ರೆಡಿ ಆಗುತ್ತಿದ್ದೆ, ಬೈಕು ಸರ್ವೀಸಿಂಗಗೆ ಕೊಡಬೇಕಿತ್ತು, ಲೇಟಾದರೆ ಎಲ್ಲಿ ನನ್ನ ಸರದಿ ಬರುವುದಿಲ್ಲವೊ ಅಂತ. ನನ್ನ ಗಡಿಬಿಡಿ ನೋಡಿ ಅವಳು ಬಂದು "ಏನು ಅಷ್ಟು ಅವಸರ, ಏನ್ ನಿಮ್ ಲವರ್ ಯಾರದ್ರೂ ಕಾಯ್ತಾ ಇದಾಳ" ಅಂದ್ಲು. "ಯಾರೂ ಇಲ್ಲಾ ಕಣೇ" ಅಂತ ಹಲ್ಲು ಕಿರಿದೆ, "ಅಹಾಹಾ ನಂಗೊತ್ತಿಲ್ವಾ ನಿಮ್ಮ ಬುಧ್ಧಿ, ಹೇಳ್ರೀ ಪರ್ವಾಗಿಲ್ಲ" ಅಂತ ಪುಸಲಾಯಿಸಿದಳು. ನಿಧಾನವಾಗಿ ಬಾಯಿ ಬಿಟ್ಟೆ "ಲೇ ಅಲ್ಲಿ ಕ್ಯಾಶಿಯರ್ ಅಂತ ಒಬ್ಳು ಹುಡುಗಿ.." ಅಂತಿದ್ದಂಗೆ, "ರೀ ಅಲ್ಲೂ.." ಅಂತ ಬೆನ್ನಿಗೆ ನಾಲ್ಕು ಗುದ್ದು ಕೊಟ್ಟಳು, ಪ್ರೀತಿಯಿಂದ ಕೊಟ್ಟಿದ್ದಳಲ್ವಾ ಹಿತವಾಗಿತ್ತು, "ಅಹಾ ಹಿತವಾಗಿದೆ, ಬೆನ್ನು ಹಗುರವಾಯ್ತು, ಇನ್ನೊಂದು ನಾಲ್ಕು ಕೊಡೇ" ಅಂದೇ ಹೇಳಿದ್ದೆ ತಪ್ಪಯ್ತು, ಈ ಸಾರಿ ಜೋರಾಗಿಯೇ ಏಟು ಬಿತ್ತು. "ಅಮ್ಮ.." ಅಂತ ಚೀರಿ ಕುಳಿತೆ, ಒಮ್ಮೆಲೇ ಗಾಬರಿಗೊಂಡು ಬೆನ್ನು ಸವರಿ "ರೀ ನಿಜವಾಗ್ಲೂ ಪೆಟ್ಟಾಯ್ತಾ, ಜೋರಾಗಿ ಕೊಟ್ಟೆ" ಅಂದ್ಲು, ಅವಳ ಹೆದರಿದ್ದು ನೋಡಿ "ಇಲ್ಲಾ, ಸುಮ್ನೇ ಸೌಂಡ ಏಫೆಕ್ಟ ಕೊಟ್ಟೆ, ಈ ಸಿನಿಮಾದಲ್ಲಿ ಹೀರೊ ಹೊಡೆದರೆ ಚೀರಿ ಬೀಳೊ ವಿಲನಗಳ ಹಾಗೆ" ಅಂದೆ, "ಆಕ್ಟಿಂಗ್ ಮಾಡ್ತೀರಾ ಆಕ್ಟಿಂಗ್..." ಅಂತ ಇನ್ನೆರಡು ಕೊಟ್ಟಳು, ನೋವಾದರೂ ಚೆನ್ನಾಗಿತ್ತು, "ಮಧುರಾ ಯಾತನೆ... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ..." ಅಂತನ್ನುತ್ತಾ ಮೇಲೆದ್ದೆ.
ನಿನ್ನೆ ಉಳಿದ ರೊಟ್ಟಿಗೇ ವಗ್ಗರಣೆ ಹಾಕಿ ತಂದಿಟ್ಟಿದ್ದಳು, "ಉಳಿದದ್ದನ್ನು ಬಳಿದು ತಂದು ಹಾಕೀದೀಯ, ಭಿಕ್ಷೆ ಹಾಕೊ ಹಾಗೆ" ಅಂತ ಕಾಡುತ್ತ ತಿಂದು ಮುಗಿಸಿ ಹೊರಟು ನಿಂತೆ, "ರೀ ನಾನೂ ಬರ್ಲಾ" ಅಂದ್ಲು, "ಲೇ ನಿನ್ನಾಣೆಗೂ ಆ ಕ್ಯಾಶಿಯರ ಕಡೆ ನೋಡಲ್ಲ ಕೂಡ, ಆಯ್ತಾ" ಅಂದೆ. ಎಲ್ಲಿ ಆ ಹುಡುಗಿ ನೊಡಲೇ ನಾ ಹೊಗುತ್ತಿದ್ದೀನೆ ಅಂತ ಕಾಯಲು ಬರ್ತಿರಬೇಕು ಅಂತ ನಾ ಸಮಜಾಯಿಸಿ ಕೊಟ್ಟೆ. "ಇನ್ನೇನು ಕಣ್ಣು ಮುಚ್ಚಿಕೊಂಡು ದುಡ್ಡು ಕೊಡ್ತೀರಾ! ಅದೆಲ್ಲ ಏನಿಲ್ಲ, ನಾನೂ ಅವಳನ್ನೂ ನೋಡಿದ ಹಾಗೆ ಆಗತ್ತೆ, ಅಲ್ದೆ ಒಬ್ಳೆ ಕೂತು ನಾನದ್ರೂ ಎನು ಮಾಡಲಿ" ಅಂತ ಬಾಲಂಗೋಚಿಯಂತೆ ಬೆನ್ನು ಹತ್ತಿದಳು, ತಾಳಿ ಕಟ್ಟಿದ ಮೇಲೆ ಬೆನ್ನಿಗೆ ಬಿದ್ದಂತೆಯೇ ಎಲ್ಲಿ ಹೋದರೂ ಹಿಂಬಾಲಕರು ಹೆಂಡಂದಿರು ಏನು ಮಾಡೋದು, "ಆಯ್ತು ಬಾ, ಬೈಕು ಕೊಟ್ಟು ಬರೊವಾಗ ಆಟೊಗೆ ಬಂದರಾಯ್ತು, ಬಸ್ಸಿಗೆ ಬಂದು ಹಣ ಉಳಿಸೋಣ ಅಂತಿದ್ದೆ ರಿಸೆಷನನಲ್ಲಿ" ಅಂದೆ. "ಯಾಕೆ ಬಸ್ಸಲ್ಲೇ ಬರೋಣ ಏನೀಗ" ಅಂದ್ಲು, "ಅಯ್ಯೊ ಬಸ್ಸು ರಶ್ ನೋಡೀದೀಯಾ, ನಿಂಗೊತ್ತಿಲ್ಲ, ಮೂರು ವರ್ಷ ಬಸ್ಸಲ್ಲಿ ಸುತ್ತಿದ ನನಗೇ ಗೊತ್ತು ಅದೊಂದು ದೊಡ್ಡ ಕಥೆ ಎನ್ ಕೇಳ್ತೀಯಾ" ಅಂದೆ, ಕಣ್ಣರಳಿಸಿ "ಕಥೇನಾ ರೀ.. ರೀ.. ಹೇಳ್ರೀ ಪ್ಲೀಜ್" ಅಂತ ದುಂಬಾಲು ಬಿದ್ದಳು, ಇನ್ನು ಅವಳು ಹೇಳುವವರೆಗೆ ಬಿಟ್ರೆ ಕೇಳಿ "ಲೇಟಾಯ್ತು ದಾರೀಲಿ ಹೇಳ್ತೀನಿ ಬಾ" ಅಂದೆ, ಸೀರೆಯೊಂದು ಸುತ್ತಿಕೊಂಡು ಬಂದು ಹಿಂದೆ ಕೂತಳು, ಹೊರಟಿತು ನಮ್ಮ ಸವಾರಿ...
ದಾರೀಲಿ ಕಥೆ ಅಂತ ಮತ್ತೆ ನೆನಪು ಮಾಡಿದಳು, ಹೇಳತೊಡಗಿದೆ.. "ಬೆಂಗಳೂರಿಗೆ ಹೊಸದಾಗಿ ಬಂದಾಗ ಬಸ್ಸಿನಲ್ಲಿ ಸುತ್ತಿದ್ದೇ ಸುತ್ತಿದ್ದು, ಬಸ್ಸಿಗೆ ಪಾಸು ಮಾಡಿಸಿದ್ದು ಎಲ್ಲಿ ಬೇಕಾದರೂ ಸುತ್ತು ಅಂತ ಮತ್ತಷ್ಟು ಖುಷಿ, ಅದರಲ್ಲೂ ಹಣ ಉಳಿಸಲು ಬ್ಲಾಕ ಬೋರ್ಡ ಪಾಸು ಮಾಡಿಸೋದು, ರೆಡ್ ಬೋರ್ಡ ಬಸ್ಸುಗಳು ಬರುತ್ತಿದ್ದರೆ ಶಪಿಸುತ್ತ ಕಾಯೋದರಲ್ಲೂ ಒಂಥರಾ ಸುಖಾ ಇತ್ತು, ಮದುವೆಗೆ ಮೊದಲು ನಿನಗೆ ಕಾದಷ್ಟೆ ಖುಷಿ" ಅನ್ನುತ್ತಿದ್ದರೆ "ಯಾವಾಗ್ರೀ ನಾನು ನಿಮಗೆ ಕಾಯಿಸಿದ್ದು, ನೀವೇ ಹತ್ತು ನಿಮಿಷ ಮುಂಚೆ ಬಂದಿರೊರೊ" ಅಂದ್ಲು, "ಒಟ್ಟಿನಲ್ಲೆ ಕಾದಿದ್ದು ನಿಜವಲ್ಲವೋ, ಹಾಗೆ ಕಾಯಿಸಿದಾಗ ನಾ ಮುನಿಸಿಕೊಂಡಿದ್ದು, ನೀ ರಮಿಸಿದ್ದು" ಅಂದೆ, "ಸರಿ ಗೊತ್ತು ಗೊತ್ತು" ಅಂತ ನಾಚಿ ಬಾಚಿ ತಬ್ಬಿಕೊಂಡು ಕೂತಳು, ಹಿಂದೆ ನೋಡುವ ಕನ್ನಡಿಯಲ್ಲಿ, ಆ ದಿನಗಳ ನೆನಪಿಗೆ ಅವಳ ಕೆನ್ನೆ ಕೆಂಪಾಗಿದ್ದು ಕಂಡಿತು. ಮತ್ತೆ ಮುಂದುವರೆಸಿದೆ "ಮುಂಜಾನೆದ್ದು ಕಂಪನಿಗಳಿಗೆ ಅಲೆಯೋದು ಅಲ್ಲಿ ರೆಸ್ಯುಮು ಕೊಟ್ಟೆ, ಇಲ್ಲಿ ಇಂಟರವೀವ್, ಎಲ್ಲೇಲ್ಲಿ ಸುತ್ತಿದ್ದೆ ಅದಕ್ಕೆಲ್ಲ ಸಾಕ್ಷಿ ಇದೇ ಬಸ್ಸುಗಳಲ್ಲವೇ, ಎಲ್ಲೊ ಗೊತ್ತಿಲ್ಲದ ಏರಿಯಾಗಳಿಗೆ, ತಿಳಿಯದ ವಿಳಾಸಗಳಿಗೆ ನಿರ್ಭೀತಿಯಿಂದ ಹೊರಡುತ್ತಿದ್ದದ್ದು ಇದೇ ಬಸ್ಸು ಅಲ್ಲಿ ತಲುಪಿಸುತ್ತದೆ ಎನ್ನುವ ಖಾತ್ರಿಯಿದ್ದದ್ದರಿಂದಲೇ ಅಲ್ಲವೇ. ದಾರಿ ತಪ್ಪಿದರೆ ಮತ್ತೆ ಮೆಜೆಸ್ಟಿಕ(ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದ ನಿಕ್‌ನೇಮ್!) ಬಸ್ಸು ಹಿಡಿದರೆ ಸಾಕು" ಹೇಳುತ್ತಿದ್ದರೆ "ನಿಮ್ಮ ಮಾಮನ ಮನೆಗೆ ಸುತ್ತಿ ಬಳಸಿ ಬಂದದ್ದು ಹೇಳಿದ್ದಿರಲ್ಲ" ಅಂತ ನೆನೆಪಿಸಿದಳು "ಹೂಂ ನಾನಿರುವಲ್ಲಿಂದ ಎರಡು ಸ್ಟಾಪು ಮುಂದೆ ಹೋದರೆ ಅವರ ಮನೆ ಬರುತ್ತದೆಂದು ಗೊತ್ತಿಲ್ಲದೇ, ಮೆಜೆಸ್ಟಿಕಗೆ ಹೋಗಿ, ಅಲ್ಲಿಂದ ಬಸ್ಸು ಬದಲಾಯಿಸುತ್ತಿದ್ದೆ, ಬಹಳ ಲೇಟಾಗಿ ಬರುವುದ ನೋಡಿ ಮಾವ ಕೇಳಿದಾಗಲೇ ಗೊತ್ತಾಗಿದ್ದು, ನಾನು ಬೆಂಗಳೂರು ದರ್ಶನ ಮಾಡಿ ಬರುತ್ತಿದ್ದೆನೆಂದು ಹ ಹ ಹ.. ಅಲ್ಲಿವರೆಗೆ ಪಕ್ಕದ ಏರಿಯಾದ ಮನೆಗೆ ನಾ ಎಷ್ಟು ಸಾರಿ ಸುತ್ತಿಬಳಸಿ ಹೋಗಿಲ್ಲಾ" ಅವಳೂ ಗಹಗಹಿಸಿ ನಕ್ಕಳು "ನಿಮ್ಮ ಆವಾಂತರಗಳು ಒಂದೇ ಎರಡೇ, ಬಸ್ಸಲ್ಲಿ ಯಾರೂ ಹುಡುಗಿ ಸಿಕ್ಕಿರಲಿಲ್ಲವಾ, ನಿಜ ಹೇಳ್ರೀ ನಂಗೇನೂ ಬೇಜಾರಿಲ್ಲ" ಅಂದಳು. "ನಿನ್ನ ಹತ್ತಿರ ಏನು ಮುಚ್ಚಿಟ್ಟಿದ್ದೀನೆ ಹೇಳು, ಅಲ್ಲಿ ಹುಡುಗೀನಾ, ಹುಡುಗೀರು ಇದ್ರು!!!" ಅಂದೆ "ಕಳ್ಳ ಕೃಷ್ಣ" ಅಂತ ತಿವಿದಳು "ನನಗೆ ಮೊದಲು ಕೆಲ್ಸ ಸಿಕ್ಕಿದ್ದೇ ದೂರದಲ್ಲಿ, ಅಲ್ಲೀವರೆಗೆ ಎರಡು ಬಸ್ಸು ಬದಲಾಯಿಸಬೇಕಿತ್ತು, ಲೇಟಾಗುತ್ತದೆಂದು ಬೇಗ ಆರೂವರೆಗೆ ಮನೆ ಬಿಡ್ತಿದ್ದೆ ಆಗ ಟ್ಯೂಶನ್ನು ಅಂತ ಹೊರಡುವವರು ಇರ್ತಿದ್ರು, ಆಮೇಲೆ ಏಳೂವರೆಗೆ ಹೊರಡುವಾಗಲೊ ಸರಿಯಾಗಿ ಕಾಲೇಜುಗಳು ಶುರುವಾಗುವ ಸಮಯ ದಾರಿಯಲ್ಲಿ ಎರಡು ಕಾಲೇಜುಗಳು ಬರುತ್ತಿದ್ದವು, ಮತ್ತಿನ್ನೇನು ಕೇಳ್ತೀಯಾ, ದಿನಾ ಸಿಗುವವರು ಬಹಳ ಜನ ಇದ್ರು, ಕಣ್ಣಲ್ಲೇ ಮಾತುಗಳ ವಿನಿಮಯವೇನೊ, 'ಏನೀವತ್ತು ಲೇಟಾಯ್ತಾ?' ಅನ್ನುವಂತೆ ನಾ ನೋಡಿದ್ರೆ, 'ಏನು ನೀನು ನನ್ನ ಲವರ್‍ಆ ನಿನ್ನ ಟೈಮಿಗೆ ಸರಿಯಾಗಿ ಬರೋಕೆ' ಅನ್ನುವಂತೆ ಅವರು ಮರಳಿ ನೋಡುತ್ತಿದ್ದುದು ಒಂದೇ ಎರಡೇ, ಯಾರದೋ ಕಣ್ಣು, ಯಾರದೋ ಮೂಗು, ಯಾರದೋ ಜಡೆ, ಯಾರದೋ ಮಾತು, ಯಾರದೋ ಮೌನ, ಯಾರದೋ ನಿಲುವು, ಯಾರದೋ ನಗು ಇಷ್ಟವಾಗಿದ್ದು, ಇಡಿಯಾಗಿ ಯಾರೂ ಇಷ್ಟವಾಗದೆ ಕನಸಿನ ಕನ್ಯೆಯ ಸೃಷ್ಟಿಸಿಕೊಂಡು ಬರೆದೆಲ್ಲ ನಾಲ್ಕು ಸಾಲುಗಳಿಗೆ(ಕವನ ಅಂತ ಕರೆಯಬಹುದು, ಆದ್ರೆ ಆ ಲೇವಲ್ಲಿನಲ್ಲಿ ಇಲ್ಲ ಬಿಡಿ) ಸೂರ್ಥಿಯಾದ ಆ ಬಸ್ಸಿನ ಹುಡುಗಿಯರು ಏಷ್ಟೋ ಏನೊ" ಅನ್ನುತ್ತಿದ್ದರೆ "ಅದೇ ಅಂತೀನೀ ಅದಕ್ಕೆ ಇತ್ತೀಚೆಗೆ ನೀವೇನು ಬರೆದಿಲ್ಲ" ಅಂದ್ಲು, "ಅದೇ ಸಮಯಾನೂ ಇಲ್ಲಾ, ಸೂರ್ಥಿಯೂ ಇಲ್ಲಾ, ಆಫೀಸಿಗೆ ತಲುಪಲು ಎರಡು ಎರಡೂವರೆ ಘಂಟೆಯಾಗುತ್ತಿತ್ತು, ಸೀಟು ಸಿಕ್ಕರೆ ಕೂತು ಬರೆಯೋದೇ, ಒಂದು ದಿನವೂ ಅಷ್ಟು ಸಮಯ ಸಂಚಾರದಲ್ಲಿ ಹಾಳಾಯಿತಲ್ಲ ಅಂತ ನನಗನಿಸಿದ್ದೇ ಇಲ್ಲ, ಬಸ್ಸು ಕುಲುಕುತ್ತ ಬಳುಕುತ್ತ ನಡೆಯುತ್ತಿದ್ದರೆ ಬಸ್ಸಿನ ಮೇಲೂ ಒಂದು ಕವನ ರೆಡಿ, ದಿನಕ್ಕೆ ಐದಾರು ಘಂಟೆ ಟ್ರಾಫಿಕ್ಕಿನಲ್ಲೇ ಕಳೆಯುತ್ತೀ ಬೈಕು ತುಗೊ ಎಂದು ಹೇಳಿದೆಲ್ಲರಿಗೂ ನಗುವೇ ನನ್ನ ಉತ್ತರವಾಗಿತ್ತು". "ಮತ್ಯಾಕೆ ಬೈಕು ತುಗೊಂಡಿದ್ದು" ಅಂತ ಕೇಳಿದ್ಲು ಅಷ್ಟರಲ್ಲಿ ಸರ್ವೀಸ ಸ್ಟೇಷನ್ನು ಬಂದಿತ್ತು.
ಬೈಕು ಕೊಟ್ಟೆ, ಗೇರು ಬದಲಾಯಿಸುವ ತೊಂದ್ರೆ, ಬ್ರೆಕು ಅಂತ ನಾ ಹೇಳುತ್ತಿದ್ದರೆ ಇವಳೂ ಬೈಕಿನಲ್ಲಿ ವೈಬ್ರೇಶನ್ನೂ ಬಹಳ ಬರುತ್ತೆ ಅಂತ ತನಗನಿಸಿದ್ದನ್ನೂ ಹೇಳಿದಳು, ಆಯ್ತು ಮೇಡಮ ಚೆಕ ಮಾಡ್ತೀವಿ ಅಂತ ಅವನಂದ. "ಹೊರಡೋಣ, ಸಂಜೆ ಸಿಗುತ್ತೆ ಬೈಕು" ಅಂದೆ, "ರೀ" ಅಂತ ಹುಬ್ಬು ಹಾರಿಸಿದಳು!!!. ಏನು ಅನ್ನುವಂತೆ ನಾ ನೋಡಿದೆ "ಕ್ಯಾಶಿಯರ್, ಕ್ಯಾಶಿಯರ್" ಅಂದ್ಲು ಹ ಹ ಹ ಏನಂತ ಹೇಳಲಿ ಇವಳ ಬಗ್ಗೆ ತಲೆಗೆ ಕೈ ಹಚ್ಚಿ, ನನಗೆ ನೆನಪೇ ಇರಲಿಲ್ಲ... ನನ್ನ ಪೋಲಿತನಗಳಿಗೆ ಇವಳ ಈ ಬೆಂಬಲ ಬೇರೆ... "ಈಗೇನೂ ದುಡ್ಡು ತುಂಬೊದಿಲ್ಲ" ಅಂದೆ ಹುಬ್ಬು ಗಂಟಿಕ್ಕಿದಳು. ಇವಳಿಗೆ ಆ ಕ್ಯಾಶಿಯರನ್ನು ನೊಡಲೇ ಬೇಕಾಗಿತ್ತು. ಆಯ್ತು ಅಂತ ಬೈಕು ಯಾವಾಗ ಸಿಗುತ್ತೊ ಅಂತ ಮ್ಯಾನೇಜರ್ ಕೇಳ ಹೋದ ಹಾಗೆ ಮಾಡಿ ಅದೊ ಅಲ್ಲಿ ಅಂತ ತೋರ್‍ಇಸಿದೆ, "ಪರವಾಗಿಲ್ಲಾರೀ, ಕೃಷ್ಣ ಸುಂದರಿ... ಕಪ್ಪಗಿದ್ದರೂ ಖಳೆಯಿದೆ" ಅಂದ್ಲು "ನನಗೆ ಮದುವೆ ಸಂಭಂದ ಕೇಳ್ತೀಯಾ ನೋಡು ಹಾಗಾದ್ರೆ" ಅಂದೆ. ಎಳೆದುಕೊಂಡು ಹೊರಬಂದ್ಲು, ಆಯ್ತು ಆಟೋ ತರ್ತೀನಿ ಇಲ್ಲೇ ಇರು ಅಂದೆ, "ರೀ ಬಸ್ಸಲ್ಲೇ ಹೋಗೋಣ" ಅಂತ ಹಠ ಹಿಡಿದಳು. "ಬೇಡ ಬಹಳ ರಶ್ ಇರತ್ತೆ ನಿನಗೆ ಗೊತ್ತಾಗಲ್ಲಾ" ಅಂದ್ರೂ ಕೇಳಲಿಲ್ಲ "ಒಂದು ಸಾರಿ ಪ್ಲೀಜ" ಅವಳ ಹಾಗೆ ಮುಖ ಮಾಡಿ ಗೊಗರೆಯುತ್ತಿದ್ದರೆ ಬೇಡವೆನ್ನಲಾಗಲಿಲ್ಲ.
ಬಸ್ಸು ಬಂತು ಬಸ್ಸು... ಹಿಂದಿನ ಬಾಗಿಲಿಗೆ ನಾ ಓಡುತ್ತ ನೀ ಮುಂದೆ ಹತ್ತು ಅಂದೆ, ಒಳಗೆ ಹೋಗಿ, ನನಗೂ ಸೀಟು ಹಿಡಿದಿದ್ಲು, ಮುಂಜಾನೆ ಅಲ್ವಾ ರಶ್ ಕಮ್ಮಿ ಇತ್ತು, ಆದ್ರೆ ಅವಳು ಹಿಡಿದಿದ್ದು ಲೇಡಿಸ ಮೀಸಲು ಸೀಟು, ನಾನೊಲ್ಲೆ ಅಂತ ನಿಂತು ಬಿಟ್ಟೆ, ಗುರಾಯಿಸಿ ನೋಡಿದ್ಲು. ಮುಂದಿನ ಸ್ಟಾಪಿನಲ್ಲಿ ಜನ ಇಳಿದ ಮೇಲೆ ಎರಡು ಅಕ್ಕ ಪಕ್ಕದ ಸೀಟು ಹಿಂದೆ ಖಾಲಿಯಾಯ್ತು, ನಾ ಹೋಗಿ ಕೂರುವಷ್ಟರಲ್ಲಿ ನನಗೆ ಕಿಟಕೀ ಸೀಟು ಅಂತ ಬಂದು ಅಲ್ಲಿ ಆಕ್ರಮಿಸಿಕೊಂಡಳು. "ಲೇ ನಿಮಗೆ ಅಂತ ಅಲ್ಲಿ ರಿಸರ್ವ್ ಸೀಟಿದೆ ಅಲ್ಲಿ ಹೋಗು, ಪಾಪ ನಮಗೆ ಸೀಟು ಬೇಡವಾ" ಅಂತ ಕಿಚಾಯಿಸಿದೆ, ಕೂತಲ್ಲೇ ಚಿವುಟಿದಳು.. ಚೀರಲಾಗದೇ ಸುಮ್ಮನಾದೆ, ಬಾಯಿ ತೆಗೆದರೆ ನೋಡು ಅನ್ನುವಂತೆ ನೋಡಿದ್ಲು.
ಬಸ್ಸು ಸ್ವಲ್ಪ ಮುಂದೆ ಹೊಗುತ್ತಿದ್ದಂತೆ ಕಾಲೇಜಿನ ಹುಡುಗ ಹುಡುಗಿಯರು ತುಂಬಿಕೊಂಡರು, ಬಸ್ಸು ಈಗ ತುಂಬಿ ತುಳುಕತೊಡಗಿತು.. ಇವಳು ನನ್ನ ನೋಡಿ ನಕ್ಕಳು, ಬಂದ್ರು ನೋಡಿ ನಿಮ್ಮ ಬಸ್ಸಿನ ಹುಡುಗಿಯರು, ಕನಸಿನ ಕನ್ಯೆಯ ತುಣುಕುಗಳು ಅನ್ನುವಂತೆ. ನಾನೂ ನಕ್ಕೆ ಕನಸಿನ ಕನ್ಯೆ ನನ್ನಾಕೆ ನನ್ನ ಪಕ್ಕದಲ್ಲೇ ಕೂತಿರುವಾಗ ಅವರೆಲ್ಲ ಯಾಕೆ ಅನ್ನುವಂತೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಹುಡುಗಿಗೆ ನನ್ನ ಸೀಟು ಬಿಟ್ಟು ಕೊಟ್ಟೆ, ಏನು ಇಂಪ್ರೆಸ್ಸು ಮಾಡಲಿಕ್ಕ ಅನ್ನುವ ಪ್ರಶ್ನೆ ನನ್ನವಳ ಮುಖದಲ್ಲಿ ಕಂಡಿತು, ಉತ್ತರವೇನೊ ಅನ್ನುವಂತೆ ನಾ ನಕ್ಕೆ.
ಅಂತೂ ನಮ್ಮ ನಿಲುಗಡೆ ಬಂತು, ಇಳಿದು ನಡೆಯುತ್ತಿದ್ದಂತೆ ಬಂತು ಅವಳ ಮೊದಲ ಪ್ರಶ್ನೆ "ಅಲ್ಲಾ ಆ ಹುಡುಗೀಗೇ ಸೀಟು ಯಾಕ್ರೀ ಬಿಟ್ಟು ಕೊಟ್ರೀ, ಏನ್ ಇಂಪ್ರೆಸ್ ಮಾಡೋಕಾ" ಅಂದ್ಲು, ಸುಮ್ನೇ ನಕ್ಕೆ "ಈ ನಕ್ರೆ ಏನರ್ಥ" ಅಂತ ಮತ್ತೆ... "ಹೂಂ ಇಂಪ್ರೆಸ್ ಮಾಡೋಕೆ" ಅಂದೆ "ನಂಗೊತ್ತು, ಅದಕ್ಕಲ್ಲ, ಅದೇ ಸ್ಟಾಪಿನಲ್ಲಿ ಇಳಿಯೋಕೆ ಜನ ಆಕಡೆ ಈಕಡೆ ಅಂತ ನುಸುಳಿ, ಆ ಹುಡುಗಿ ಅಲ್ಲೇ ಹತ್ತಿಕ್ಕುತ್ತಿದ್ದರೆ ಅವಳು ಹೇಳಲೂ ಆಗದೆ ಬಿಡಲೂ ಆಗದೆ ಒದ್ದಾಡುತ್ತಿದ್ದು ನೋಡಿ ತಾನೇ, ನಾನೇ ನಿಮ್ಮನ್ನ ಏಳಿಸಬೇಕೆಂದಿದ್ದೆ, ನೀವೆ ಎದ್ದು, ರೀ ನಂಗೆ ಖುಷಿಯಾಯ್ತು" ಅಂತ ಕೈನಲ್ಲಿ ಕೈ ಸೇರಿಸಿ ನಡೆಯತೊಡಗಿದಳು, ನನಗೂ ಸಮಾಧಾನವಾಯ್ತು ಅವಳಿಗೆ ಅದು ಅರ್ಥ್ವಾಯಿತಲ್ಲ ಅಂತ.. "ಬೇರೆ ಯಾರಾದ್ರೂ ಇದ್ರೆ ಬಿಟ್ಟು ಕೊಡ್ತಿದ್ರಾ" ಅಂದ್ಲು. "ನಿಜ ಹೇಳಬೇಕೆಂದ್ರೆ ನನಗೆ ಸೀಟು ಬಿಟ್ಟು ಕೊಡಲು ಅವರು ಅರ್ಹರು ಅನ್ನಿಸ್ಬೇಕು ಆಗಲಷ್ಟೇ" ಅಂದ್ರೆ "ಏನು ಮುಖ್ಯಮಂತ್ರಿ ಸೀಟು ಉತ್ತರಾಧಿಕಾರಿಗೆ ಬಿಟ್ಟು ಕೊಟ್ಟ ಹಾಗೆ ಹೇಳ್ತಿದೀರಾ" ಅಂತಂದ್ಲು. "ಅಲ್ಲ ಅದೂ ನಿಜ ಕಣೇ, ಬಸ್ಸಿನಲ್ಲಿ ಸೀಟು ಅಂದ್ರೆ ಸುಮ್ನೇನಾ, ಯಾರಿಗೋ ಯಾಕೆ ಬಿಟ್ಟು ಕೊಡಬೇಕು ಹೇಳು, ಈ ಲೇಡೀಸಗೆ ಅಂತ ಮೀಸಲು ಸೀಟು ಮಾಡಿರ್ತಾರೆ, ಕಾಲೇಜು ಅಮ್ಮಣ್ಣಿಗಳು(ಎಲ್ಲರೂ ಅಲ್ಲ) ನೀಟಾಗಿ ಕುಂತಿರುತ್ತಾರೆ, ಪಕ್ಕದಲ್ಲೇ ಒಬ್ಬಳು ಗರ್ಭಿಣಿ ಪಾಪ ಕಷ್ಟಪಟ್ಟು ನಿಂತಿದ್ದರೆ ಜಾಗ ಕೊಡೊದಿಲ್ಲ, ಕೊಟ್ಟು ಸ್ವಲ್ಪ ನಿಂತ್ರೆ ಏನ್ ಕಾಲು ಸವೆದು ಹೋಗುತ್ತಾ ನಾಳೆ ಅವರೂ... ಬಿಡು ಏನ್ ಹೇಳೊದು, ಈ ಹಿರಿಯ ನಾಗರೀಕರಿಗೆ ಅಂತ ಸೀಟಿರತ್ತೆ ಅದನ್ಯಾರೊ 'ಹಿ' ಅನ್ನೋದನ್ನ 'ಕಿ' ಮಾಡಿ, ಕಿರಿಯ ನಾಗರೀಕರಿಗೆ ಅಂತ ತಿದ್ದಿ ತಮ್ಮ ಸೃಜನಶೀಲತೆ(ಕ್ರಿಯೇಟಿವಿಟಿ) ಪ್ರದರ್ಷಿಸಿರುತ್ತಾರೆ, ಅದನ್ನೆ ಇಟ್ಟುಕೊಂಡು ಜಾಗ ಕೇಳಿದ ಹಿರಿಯರನ್ನ ಈ ಕೆಲ ಪುಂಡರು ಸೀಟು ಬಿಡದೇ ಕಾಡಿಸ್ತಾರೆ ಎನನ್ನೋದು ಇಂಥ ಅನಾಗರೀಕರಿಗೆ. ಇನ್ನು ಬಸ್ಸಿನ ತುಂಬ ಸೀಟು ಖಾಲಿ ಹೊಡೀತಿದ್ರೂ, ಫುಟ್ ಬೊರ್ಡ ಮೇಲೆ ನಿಲ್ಬೇಡಿ ಹತ್ತೋರಿಗೆ ತೊಂದ್ರೆಯಾಗತ್ತೆ ಅಂತ ಕಂಡಕ್ಟರ್ರು ಬಡಕೊಂಡ್ರೂ ಕೇಳದವರಿಗೆ ಬಾ ಅಂತ ಸೀಟು ಬಿಟ್ಟುಕೊಟ್ಟರೂ ಕೂಡೊದಿಲ್ಲ ಏನ್ ಮಾಡ್ತಿಯಾ, ಮೂರು ವರ್ಷದಲ್ಲಿ ನಾ ಏನೇನು ನೋಡಿಲ್ಲ" ಅಂತ ಬೇಜಾರಾಗಿ ನುಡಿದೆ. "ರೀ ಯಾಕ್ರೀ ಅಷ್ಟು ಬೇಜಾರಾಗ್ತೀರಾ, ನಾ ತಮಾಷೆ ಮಾಡಿದೆ" ಅಂದ್ಲು. "ನಿನ್ನ ತಮಾಷೆಗಲ್ಲ ನಾ ಬೇಜಾರಾಗಿದ್ದು ನಮ್ಮದೇ, ವರ್ತನೆಗಳು ನನಗೆ ಹಾಗನಿಸಿದ್ದು, ನಾಗರೀಕರಿಗೆ ಅಂತ ಇರುವ ಸಾರಿಗೆ ಹೀಗೆ ಅನಾಗರೀಕರಿಂದಾಗಿ ಬಹಳ ಜನ ವಿಮುಖವಾಗುವಂತೆ ಆದ್ರೆ ಏನು ಪ್ರಯೋಜನ ಅದಕ್ಕೆ ಬೇಜಾರು" ಅಂದೆ.
ಹೀಗೆ ಮಾತಿನಲ್ಲೇ ಮನೆ ತಲುಪಿದೆವು, ದಣಿದಿದ್ದೆವು, ಬಹಳ ದಿನಗಳಾಯ್ತಲ್ಲ ನಡೆದು, ನಮ್ಮದೆ ಆದ ಕೆಲವು ಸವಲತ್ತುಗಳಿಗೆ(ಬೈಕು, ಕಾರು) ದೇಹ ಕೂಡ ಒಗ್ಗಿಕೊಂಡು ನಾಲ್ಕು ಹೆಜ್ಜೆ ಹಾಕಿದರೂ ಉಸ್ಸೆನ್ನುತ್ತದೆ. ನಿಂಬೆ ಶರಬತ್ತು ಮಾಡಿದ್ಲು, ಹೊಟ್ಟೆ ತಣ್ಣಗಾಯ್ತು. "ಆಗಲೇ ಕೇಳಿದೆ, ಮತ್ಯಾಕ್ಕೆ ನೀವು ಬೈಕು ತುಗೊಂಡಿದ್ದು, ಇದೆಲ್ಲಕ್ಕೆ ಬೇಸತ್ತಾ" ಅಂದ್ಲು, "ಹಾಗೇನಿಲ್ಲ, ಈಗಲೂ ನನಗೆ ಸಾಧ್ಯವಾದಾಗಲೆಲ್ಲ, ನಾ ಬಸ್ಸಿನಲ್ಲೇ ತಿರುಗೋದು ನಿನಗೇ ಗೊತ್ತಿದೆ, ಆದರೂ ಬೈಕು ರೂಢಿಯಾಗಿ ಸ್ವಲ್ಪ ಕಿರಿಕಿರಿಯಾಗುತ್ತದೆ ಆದರೂ ನನಗೇಕೊ ಬಸ್ಸೆಂದರೆ ಇನ್ನೂ ಅದೇ ಪ್ರೀತಿ, ವರ್ಷಗಳಾದಂತೆ ನನ್ನ ಕೆಲಸ ಹೆಚ್ಚಿತು, ರಾತ್ರಿ ಬರುವುದು ಲೇಟಾಗತೊಡಗಿತು, ಕೆಲವು ತಿಂಗಳು ಬಸ್ಸಿನಲ್ಲೇ ರಾತ್ರಿ ಹನ್ನೊಂದೂವರೆ ಹನ್ನೆರಡಕ್ಕೆಲ್ಲ ಬಂದಿದ್ದೇನೆ, ಕೊಲೀಗು ಹತ್ತಿರದ ನಿಲುಗಡೆಗೆ ಬಿಟ್ಟರೆ ಅಲ್ಲಿಂದ ಬಸ್ಸೆ ಗತಿ, ಆಟೊನಲ್ಲಿ ಹೋಗದೆ ಹಣ ಉಳಿಸಲೆಂದಲ್ಲ, ಅದೇನೊ ಬಸ್ಸೆ ಇಷ್ಟ, ಕೆಲವು ಸಾರಿ ಬಸ್ಸಿರದೇ ಆಟೊ ಕೂಡ... ಹೀಗೆ ಕೆಲದಿನಗಳಾದ ಮೇಲೆ ಆ ಅಪರಾತ್ರಿ ಹಾಗೆಲ್ಲ ಬರುವುದು ಸರಿಯಲ್ಲ, ಮೊದಲಿನ ಹಾಗೆ ಭದ್ರತೆಯಿಲ್ಲ ಎಂದು ಎಲ್ಲರೂ ಅನ್ನುವುದು, ನನಗೂ ಅದು ಸರಿಯೆನಿಸಿದ್ದು, ಸಮಯದ ಅಭಾವ, ಬಸ್ಸುಗಳು ಸಮಯಕ್ಕೆ ಸಿಗದಿರುವುದು, ಸಿಕ್ಕರೂ ಕಿಕ್ಕಿರಿದು ತುಂಬಿರುವುದೂ ಎಲ್ಲ ಸೇರಿ ಕೊನೆಗೆ ಬೈಕು ಕೊಳ್ಳಲು ನಿರ್ಧರಿಸಿದ್ದು. ಇನ್ನೂ ಓಡಿಸಲೂ ಬರುತ್ತಿರಲಿಲ್ಲ ನನಗೆ ಆಗ, ಕೆಲವೊಂದು ಸಾರಿ ಬಸ್ಸೇ ಚೆನ್ನಾಗಿತ್ತು ಅನಿಸಿದ್ದೂ ಇದೆ, ಆದ್ರೆ ಈಗ ಈ ಸೌಲಭ್ಯಕ್ಕೆ ಹೊಂದಿಕೊಂಡು ಹೋಗಿದೆ. ಒಂದು ದಿನ ಬೈಕಿಲ್ಲ ಅಂದ್ರೆ ಸಾಕು ಸಾಕಾಗಿ ಹೋಗುತ್ತದೆ. ಈಗೆಲ್ಲ ವೊಲ್ವೊ ಏಸೀ ಬಸ್ಸುಗಳು ಬಂದಿವೆ, ಅಡಿಗಡಿಗೆ ಬಸ್ಸುಗಳೂ ಬಹಳ ಆಗಿವೆ, ಮೆಟ್ರೊ ಆಗೋದಿದೆ ನೋಡೊಣ ಬಸ್ಸುಗಳು ಮಾತ್ರ ಇದ್ದೇ ಇರುತ್ತವೆ" ಅಂದೆ. "ಅದೂ ಸರಿ, ನಾನೂ ಮಾರ್ಕೆಟ್ಗೆ ಬಸ್ಸಿನಲ್ಲೇ ಹೋಗ್ತೀನಿ ಇನ್ಮೇಲೆ" ಅಂದ್ಲು, ಬೇಡ ರಶ್‌ನಲ್ಲಿ ನಿನಗೆಲ್ಲ ಸರಿ ಹೋಗಲ್ಲ ಅಂತ ಹೇಳಬೇಕೆನಿಸಿತು, ಆದ್ರೂ ಅವಳಿಗೂ ಅನುಭವವಾಗ್ಲಿ ಅಲ್ಲದೇ ಈಗೀಗ ಸ್ವಲ್ಪ ಜನರಿಗೆ ತಿಳುವಳಿಕೆ ಬಂದು ಪ್ರಜ್ಞಾವಂತರಾಗಿದ್ದಾರೆ ಏನೂ ತೊಂದರೆ ಆಗಲಿಕ್ಕಿಲ್ಲ ಬಿಡು ಅಂತನ್ನಿಸಿ ಸುಮ್ಮನಾದೆ.
ಸಂಜೆಯಾಗುತ್ತಿದ್ದಂತೆ ಮತ್ತೆ ಬೈಕು ತರಲು ಹೋಗಬೇಕು ಬರ್ತೀಯಾ ಅಂದೆ, ನೀವೇ ಹೋಗಿಬನ್ನಿ ಅಂದ್ಲು, ಕ್ಯಾಶಿಯರ್ ಹುಡುಗಿ ನೋಡಲಲ್ಲ ಅಂತ ಖಾತರಿಯಾಗಿದ್ದರಿಂದ ಬರುವುದಿಲ್ಲ ಅಂದಿರಬೇಕು ಅಂತ ಹೊರಟೆ. "ಮತ್ತೆ ಬಸ್ಸಲ್ಲೇ ಹೋಗ್ತೀರಾ" ಅಂದ್ಲು ಹೌದೆನ್ನುತ್ತಾ ತಲೆಯಾಡಿಸಿದೆ.. "ಬಸ್ಸು ಬಂತು ಬಸ್ಸು..." ಅಂತ ರಾಗವಾಗಿ ಅವಳು ಗುನುಗುನಿಸತೊಡಗಿದರೆ "ಕೆಂಪು ವೊಲ್ವೊ ಬಸ್ಸು..." ಅಂತ ನಾನೂ ದನಿಗೂಡಿಸಿದೆ... ಮನಸಾರೆ ನಕ್ಕೆವು, ಹೊರಗೆ ಕಾಲಿಡುತ್ತಿದ್ದಂತೆ, "ಪೀಂ... ಪೀಂ... ಕ್ಯಾಶಿಯರ್ ಕೇಳ್ದೆ ಅಂತ ಹೇಳಿ" ಅಂದ್ಲು... ತುಂಟಿಯ ತರಲೆಗೆ ನಗು ಬಂದು ಕಂಡಕ್ಟರ ಹಾಗೆ "ಒಕೇ ರೈಟ್ ರೈಟ.." ಅನ್ನುತ್ತ ಹೊರಬಿದ್ದೆ...
ಮತ್ತೆ ಎಂದೊ ಬಸ್ಸಿನಲ್ಲಿ ನಿಮ್ಮ ಪಕ್ಕದ ಸೀಟಿನಲ್ಲಿ ಕೂತು ಹರಟೆ ಹೊಡೆಯುತ್ತ ಸಿಗುತ್ತೇನೆ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/bassu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು