Sunday, May 3, 2009

ಬಸ್ಸು ಬಂತು ಬಸ್ಸು...

ಬೇಗ ಬೇಗ ರೆಡಿ ಆಗುತ್ತಿದ್ದೆ, ಬೈಕು ಸರ್ವೀಸಿಂಗಗೆ ಕೊಡಬೇಕಿತ್ತು, ಲೇಟಾದರೆ ಎಲ್ಲಿ ನನ್ನ ಸರದಿ ಬರುವುದಿಲ್ಲವೊ ಅಂತ. ನನ್ನ ಗಡಿಬಿಡಿ ನೋಡಿ ಅವಳು ಬಂದು "ಏನು ಅಷ್ಟು ಅವಸರ, ಏನ್ ನಿಮ್ ಲವರ್ ಯಾರದ್ರೂ ಕಾಯ್ತಾ ಇದಾಳ" ಅಂದ್ಲು. "ಯಾರೂ ಇಲ್ಲಾ ಕಣೇ" ಅಂತ ಹಲ್ಲು ಕಿರಿದೆ, "ಅಹಾಹಾ ನಂಗೊತ್ತಿಲ್ವಾ ನಿಮ್ಮ ಬುಧ್ಧಿ, ಹೇಳ್ರೀ ಪರ್ವಾಗಿಲ್ಲ" ಅಂತ ಪುಸಲಾಯಿಸಿದಳು. ನಿಧಾನವಾಗಿ ಬಾಯಿ ಬಿಟ್ಟೆ "ಲೇ ಅಲ್ಲಿ ಕ್ಯಾಶಿಯರ್ ಅಂತ ಒಬ್ಳು ಹುಡುಗಿ.." ಅಂತಿದ್ದಂಗೆ, "ರೀ ಅಲ್ಲೂ.." ಅಂತ ಬೆನ್ನಿಗೆ ನಾಲ್ಕು ಗುದ್ದು ಕೊಟ್ಟಳು, ಪ್ರೀತಿಯಿಂದ ಕೊಟ್ಟಿದ್ದಳಲ್ವಾ ಹಿತವಾಗಿತ್ತು, "ಅಹಾ ಹಿತವಾಗಿದೆ, ಬೆನ್ನು ಹಗುರವಾಯ್ತು, ಇನ್ನೊಂದು ನಾಲ್ಕು ಕೊಡೇ" ಅಂದೇ ಹೇಳಿದ್ದೆ ತಪ್ಪಯ್ತು, ಈ ಸಾರಿ ಜೋರಾಗಿಯೇ ಏಟು ಬಿತ್ತು. "ಅಮ್ಮ.." ಅಂತ ಚೀರಿ ಕುಳಿತೆ, ಒಮ್ಮೆಲೇ ಗಾಬರಿಗೊಂಡು ಬೆನ್ನು ಸವರಿ "ರೀ ನಿಜವಾಗ್ಲೂ ಪೆಟ್ಟಾಯ್ತಾ, ಜೋರಾಗಿ ಕೊಟ್ಟೆ" ಅಂದ್ಲು, ಅವಳ ಹೆದರಿದ್ದು ನೋಡಿ "ಇಲ್ಲಾ, ಸುಮ್ನೇ ಸೌಂಡ ಏಫೆಕ್ಟ ಕೊಟ್ಟೆ, ಈ ಸಿನಿಮಾದಲ್ಲಿ ಹೀರೊ ಹೊಡೆದರೆ ಚೀರಿ ಬೀಳೊ ವಿಲನಗಳ ಹಾಗೆ" ಅಂದೆ, "ಆಕ್ಟಿಂಗ್ ಮಾಡ್ತೀರಾ ಆಕ್ಟಿಂಗ್..." ಅಂತ ಇನ್ನೆರಡು ಕೊಟ್ಟಳು, ನೋವಾದರೂ ಚೆನ್ನಾಗಿತ್ತು, "ಮಧುರಾ ಯಾತನೆ... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ..." ಅಂತನ್ನುತ್ತಾ ಮೇಲೆದ್ದೆ.

ನಿನ್ನೆ ಉಳಿದ ರೊಟ್ಟಿಗೇ ವಗ್ಗರಣೆ ಹಾಕಿ ತಂದಿಟ್ಟಿದ್ದಳು, "ಉಳಿದದ್ದನ್ನು ಬಳಿದು ತಂದು ಹಾಕೀದೀಯ, ಭಿಕ್ಷೆ ಹಾಕೊ ಹಾಗೆ" ಅಂತ ಕಾಡುತ್ತ ತಿಂದು ಮುಗಿಸಿ ಹೊರಟು ನಿಂತೆ, "ರೀ ನಾನೂ ಬರ್ಲಾ" ಅಂದ್ಲು, "ಲೇ ನಿನ್ನಾಣೆಗೂ ಆ ಕ್ಯಾಶಿಯರ ಕಡೆ ನೋಡಲ್ಲ ಕೂಡ, ಆಯ್ತಾ" ಅಂದೆ. ಎಲ್ಲಿ ಆ ಹುಡುಗಿ ನೊಡಲೇ ನಾ ಹೊಗುತ್ತಿದ್ದೀನೆ ಅಂತ ಕಾಯಲು ಬರ್ತಿರಬೇಕು ಅಂತ ನಾ ಸಮಜಾಯಿಸಿ ಕೊಟ್ಟೆ. "ಇನ್ನೇನು ಕಣ್ಣು ಮುಚ್ಚಿಕೊಂಡು ದುಡ್ಡು ಕೊಡ್ತೀರಾ! ಅದೆಲ್ಲ ಏನಿಲ್ಲ, ನಾನೂ ಅವಳನ್ನೂ ನೋಡಿದ ಹಾಗೆ ಆಗತ್ತೆ, ಅಲ್ದೆ ಒಬ್ಳೆ ಕೂತು ನಾನದ್ರೂ ಎನು ಮಾಡಲಿ" ಅಂತ ಬಾಲಂಗೋಚಿಯಂತೆ ಬೆನ್ನು ಹತ್ತಿದಳು, ತಾಳಿ ಕಟ್ಟಿದ ಮೇಲೆ ಬೆನ್ನಿಗೆ ಬಿದ್ದಂತೆಯೇ ಎಲ್ಲಿ ಹೋದರೂ ಹಿಂಬಾಲಕರು ಹೆಂಡಂದಿರು ಏನು ಮಾಡೋದು, "ಆಯ್ತು ಬಾ, ಬೈಕು ಕೊಟ್ಟು ಬರೊವಾಗ ಆಟೊಗೆ ಬಂದರಾಯ್ತು, ಬಸ್ಸಿಗೆ ಬಂದು ಹಣ ಉಳಿಸೋಣ ಅಂತಿದ್ದೆ ರಿಸೆಷನನಲ್ಲಿ" ಅಂದೆ. "ಯಾಕೆ ಬಸ್ಸಲ್ಲೇ ಬರೋಣ ಏನೀಗ" ಅಂದ್ಲು, "ಅಯ್ಯೊ ಬಸ್ಸು ರಶ್ ನೋಡೀದೀಯಾ, ನಿಂಗೊತ್ತಿಲ್ಲ, ಮೂರು ವರ್ಷ ಬಸ್ಸಲ್ಲಿ ಸುತ್ತಿದ ನನಗೇ ಗೊತ್ತು ಅದೊಂದು ದೊಡ್ಡ ಕಥೆ ಎನ್ ಕೇಳ್ತೀಯಾ" ಅಂದೆ, ಕಣ್ಣರಳಿಸಿ "ಕಥೇನಾ ರೀ.. ರೀ.. ಹೇಳ್ರೀ ಪ್ಲೀಜ್" ಅಂತ ದುಂಬಾಲು ಬಿದ್ದಳು, ಇನ್ನು ಅವಳು ಹೇಳುವವರೆಗೆ ಬಿಟ್ರೆ ಕೇಳಿ "ಲೇಟಾಯ್ತು ದಾರೀಲಿ ಹೇಳ್ತೀನಿ ಬಾ" ಅಂದೆ, ಸೀರೆಯೊಂದು ಸುತ್ತಿಕೊಂಡು ಬಂದು ಹಿಂದೆ ಕೂತಳು, ಹೊರಟಿತು ನಮ್ಮ ಸವಾರಿ...

ದಾರೀಲಿ ಕಥೆ ಅಂತ ಮತ್ತೆ ನೆನಪು ಮಾಡಿದಳು, ಹೇಳತೊಡಗಿದೆ.. "ಬೆಂಗಳೂರಿಗೆ ಹೊಸದಾಗಿ ಬಂದಾಗ ಬಸ್ಸಿನಲ್ಲಿ ಸುತ್ತಿದ್ದೇ ಸುತ್ತಿದ್ದು, ಬಸ್ಸಿಗೆ ಪಾಸು ಮಾಡಿಸಿದ್ದು ಎಲ್ಲಿ ಬೇಕಾದರೂ ಸುತ್ತು ಅಂತ ಮತ್ತಷ್ಟು ಖುಷಿ, ಅದರಲ್ಲೂ ಹಣ ಉಳಿಸಲು
ಬ್ಲಾಕ ಬೋರ್ಡ ಪಾಸು ಮಾಡಿಸೋದು, ರೆಡ್ ಬೋರ್ಡ ಬಸ್ಸುಗಳು ಬರುತ್ತಿದ್ದರೆ ಶಪಿಸುತ್ತ ಕಾಯೋದರಲ್ಲೂ ಒಂಥರಾ ಸುಖಾ ಇತ್ತು, ಮದುವೆಗೆ ಮೊದಲು ನಿನಗೆ ಕಾದಷ್ಟೆ ಖುಷಿ" ಅನ್ನುತ್ತಿದ್ದರೆ "ಯಾವಾಗ್ರೀ ನಾನು ನಿಮಗೆ ಕಾಯಿಸಿದ್ದು, ನೀವೇ ಹತ್ತು ನಿಮಿಷ ಮುಂಚೆ ಬಂದಿರೊರೊ" ಅಂದ್ಲು, "ಒಟ್ಟಿನಲ್ಲೆ ಕಾದಿದ್ದು ನಿಜವಲ್ಲವೋ, ಹಾಗೆ ಕಾಯಿಸಿದಾಗ ನಾ ಮುನಿಸಿಕೊಂಡಿದ್ದು, ನೀ ರಮಿಸಿದ್ದು" ಅಂದೆ, "ಸರಿ ಗೊತ್ತು ಗೊತ್ತು" ಅಂತ ನಾಚಿ ಬಾಚಿ ತಬ್ಬಿಕೊಂಡು ಕೂತಳು, ಹಿಂದೆ ನೋಡುವ ಕನ್ನಡಿಯಲ್ಲಿ, ಆ ದಿನಗಳ ನೆನಪಿಗೆ ಅವಳ ಕೆನ್ನೆ ಕೆಂಪಾಗಿದ್ದು ಕಂಡಿತು. ಮತ್ತೆ ಮುಂದುವರೆಸಿದೆ "ಮುಂಜಾನೆದ್ದು ಕಂಪನಿಗಳಿಗೆ ಅಲೆಯೋದು ಅಲ್ಲಿ ರೆಸ್ಯುಮು ಕೊಟ್ಟೆ, ಇಲ್ಲಿ ಇಂಟರವೀವ್, ಎಲ್ಲೇಲ್ಲಿ ಸುತ್ತಿದ್ದೆ ಅದಕ್ಕೆಲ್ಲ ಸಾಕ್ಷಿ ಇದೇ ಬಸ್ಸುಗಳಲ್ಲವೇ, ಎಲ್ಲೊ ಗೊತ್ತಿಲ್ಲದ ಏರಿಯಾಗಳಿಗೆ, ತಿಳಿಯದ ವಿಳಾಸಗಳಿಗೆ ನಿರ್ಭೀತಿಯಿಂದ ಹೊರಡುತ್ತಿದ್ದದ್ದು ಇದೇ ಬಸ್ಸು ಅಲ್ಲಿ ತಲುಪಿಸುತ್ತದೆ ಎನ್ನುವ ಖಾತ್ರಿಯಿದ್ದದ್ದರಿಂದಲೇ ಅಲ್ಲವೇ. ದಾರಿ ತಪ್ಪಿದರೆ ಮತ್ತೆ ಮೆಜೆಸ್ಟಿಕ(ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದ ನಿಕ್‌ನೇಮ್!) ಬಸ್ಸು ಹಿಡಿದರೆ ಸಾಕು" ಹೇಳುತ್ತಿದ್ದರೆ "ನಿಮ್ಮ ಮಾಮನ ಮನೆಗೆ ಸುತ್ತಿ ಬಳಸಿ ಬಂದದ್ದು ಹೇಳಿದ್ದಿರಲ್ಲ" ಅಂತ ನೆನೆಪಿಸಿದಳು "ಹೂಂ ನಾನಿರುವಲ್ಲಿಂದ ಎರಡು ಸ್ಟಾಪು ಮುಂದೆ ಹೋದರೆ ಅವರ ಮನೆ ಬರುತ್ತದೆಂದು ಗೊತ್ತಿಲ್ಲದೇ, ಮೆಜೆಸ್ಟಿಕಗೆ ಹೋಗಿ, ಅಲ್ಲಿಂದ ಬಸ್ಸು ಬದಲಾಯಿಸುತ್ತಿದ್ದೆ, ಬಹಳ ಲೇಟಾಗಿ ಬರುವುದ ನೋಡಿ ಮಾವ ಕೇಳಿದಾಗಲೇ ಗೊತ್ತಾಗಿದ್ದು, ನಾನು ಬೆಂಗಳೂರು ದರ್ಶನ ಮಾಡಿ ಬರುತ್ತಿದ್ದೆನೆಂದು ಹ ಹ ಹ.. ಅಲ್ಲಿವರೆಗೆ ಪಕ್ಕದ ಏರಿಯಾದ ಮನೆಗೆ ನಾ ಎಷ್ಟು ಸಾರಿ ಸುತ್ತಿಬಳಸಿ ಹೋಗಿಲ್ಲಾ" ಅವಳೂ ಗಹಗಹಿಸಿ ನಕ್ಕಳು "ನಿಮ್ಮ ಆವಾಂತರಗಳು ಒಂದೇ ಎರಡೇ, ಬಸ್ಸಲ್ಲಿ ಯಾರೂ ಹುಡುಗಿ ಸಿಕ್ಕಿರಲಿಲ್ಲವಾ, ನಿಜ ಹೇಳ್ರೀ ನಂಗೇನೂ ಬೇಜಾರಿಲ್ಲ" ಅಂದಳು. "ನಿನ್ನ ಹತ್ತಿರ ಏನು ಮುಚ್ಚಿಟ್ಟಿದ್ದೀನೆ ಹೇಳು, ಅಲ್ಲಿ ಹುಡುಗೀನಾ, ಹುಡುಗೀರು ಇದ್ರು!!!" ಅಂದೆ "ಕಳ್ಳ ಕೃಷ್ಣ" ಅಂತ ತಿವಿದಳು "ನನಗೆ ಮೊದಲು ಕೆಲ್ಸ ಸಿಕ್ಕಿದ್ದೇ ದೂರದಲ್ಲಿ, ಅಲ್ಲೀವರೆಗೆ ಎರಡು ಬಸ್ಸು ಬದಲಾಯಿಸಬೇಕಿತ್ತು, ಲೇಟಾಗುತ್ತದೆಂದು ಬೇಗ ಆರೂವರೆಗೆ ಮನೆ ಬಿಡ್ತಿದ್ದೆ ಆಗ ಟ್ಯೂಶನ್ನು ಅಂತ ಹೊರಡುವವರು ಇರ್ತಿದ್ರು, ಆಮೇಲೆ ಏಳೂವರೆಗೆ ಹೊರಡುವಾಗಲೊ ಸರಿಯಾಗಿ ಕಾಲೇಜುಗಳು ಶುರುವಾಗುವ ಸಮಯ ದಾರಿಯಲ್ಲಿ ಎರಡು ಕಾಲೇಜುಗಳು ಬರುತ್ತಿದ್ದವು, ಮತ್ತಿನ್ನೇನು ಕೇಳ್ತೀಯಾ, ದಿನಾ ಸಿಗುವವರು ಬಹಳ ಜನ ಇದ್ರು, ಕಣ್ಣಲ್ಲೇ ಮಾತುಗಳ ವಿನಿಮಯವೇನೊ, 'ಏನೀವತ್ತು ಲೇಟಾಯ್ತಾ?' ಅನ್ನುವಂತೆ ನಾ ನೋಡಿದ್ರೆ, 'ಏನು ನೀನು ನನ್ನ ಲವರ್‍ಆ ನಿನ್ನ ಟೈಮಿಗೆ ಸರಿಯಾಗಿ ಬರೋಕೆ' ಅನ್ನುವಂತೆ ಅವರು ಮರಳಿ ನೋಡುತ್ತಿದ್ದುದು ಒಂದೇ ಎರಡೇ, ಯಾರದೋ ಕಣ್ಣು, ಯಾರದೋ ಮೂಗು, ಯಾರದೋ ಜಡೆ, ಯಾರದೋ ಮಾತು, ಯಾರದೋ ಮೌನ, ಯಾರದೋ ನಿಲುವು, ಯಾರದೋ ನಗು ಇಷ್ಟವಾಗಿದ್ದು, ಇಡಿಯಾಗಿ ಯಾರೂ ಇಷ್ಟವಾಗದೆ ಕನಸಿನ ಕನ್ಯೆಯ ಸೃಷ್ಟಿಸಿಕೊಂಡು ಬರೆದೆಲ್ಲ ನಾಲ್ಕು ಸಾಲುಗಳಿಗೆ(ಕವನ ಅಂತ ಕರೆಯಬಹುದು, ಆದ್ರೆ ಆ ಲೇವಲ್ಲಿನಲ್ಲಿ ಇಲ್ಲ ಬಿಡಿ) ಸೂರ್ಥಿಯಾದ ಆ ಬಸ್ಸಿನ ಹುಡುಗಿಯರು ಏಷ್ಟೋ ಏನೊ" ಅನ್ನುತ್ತಿದ್ದರೆ "ಅದೇ ಅಂತೀನೀ ಅದಕ್ಕೆ ಇತ್ತೀಚೆಗೆ ನೀವೇನು ಬರೆದಿಲ್ಲ" ಅಂದ್ಲು, "ಅದೇ ಸಮಯಾನೂ ಇಲ್ಲಾ, ಸೂರ್ಥಿಯೂ ಇಲ್ಲಾ, ಆಫೀಸಿಗೆ ತಲುಪಲು ಎರಡು ಎರಡೂವರೆ ಘಂಟೆಯಾಗುತ್ತಿತ್ತು, ಸೀಟು ಸಿಕ್ಕರೆ ಕೂತು ಬರೆಯೋದೇ, ಒಂದು ದಿನವೂ ಅಷ್ಟು ಸಮಯ ಸಂಚಾರದಲ್ಲಿ ಹಾಳಾಯಿತಲ್ಲ ಅಂತ ನನಗನಿಸಿದ್ದೇ ಇಲ್ಲ, ಬಸ್ಸು ಕುಲುಕುತ್ತ ಬಳುಕುತ್ತ ನಡೆಯುತ್ತಿದ್ದರೆ ಬಸ್ಸಿನ ಮೇಲೂ ಒಂದು ಕವನ ರೆಡಿ, ದಿನಕ್ಕೆ ಐದಾರು ಘಂಟೆ ಟ್ರಾಫಿಕ್ಕಿನಲ್ಲೇ ಕಳೆಯುತ್ತೀ ಬೈಕು ತುಗೊ ಎಂದು ಹೇಳಿದೆಲ್ಲರಿಗೂ ನಗುವೇ ನನ್ನ ಉತ್ತರವಾಗಿತ್ತು". "ಮತ್ಯಾಕೆ ಬೈಕು ತುಗೊಂಡಿದ್ದು" ಅಂತ ಕೇಳಿದ್ಲು ಅಷ್ಟರಲ್ಲಿ ಸರ್ವೀಸ ಸ್ಟೇಷನ್ನು ಬಂದಿತ್ತು.

ಬೈಕು ಕೊಟ್ಟೆ, ಗೇರು ಬದಲಾಯಿಸುವ ತೊಂದ್ರೆ, ಬ್ರೆಕು ಅಂತ ನಾ ಹೇಳುತ್ತಿದ್ದರೆ ಇವಳೂ ಬೈಕಿನಲ್ಲಿ ವೈಬ್ರೇಶನ್ನೂ ಬಹಳ ಬರುತ್ತೆ ಅಂತ ತನಗನಿಸಿದ್ದನ್ನೂ ಹೇಳಿದಳು, ಆಯ್ತು ಮೇಡಮ ಚೆಕ ಮಾಡ್ತೀವಿ ಅಂತ ಅವನಂದ. "ಹೊರಡೋಣ, ಸಂಜೆ ಸಿಗುತ್ತೆ ಬೈಕು" ಅಂದೆ, "ರೀ" ಅಂತ ಹುಬ್ಬು ಹಾರಿಸಿದಳು!!!. ಏನು ಅನ್ನುವಂತೆ ನಾ ನೋಡಿದೆ "ಕ್ಯಾಶಿಯರ್, ಕ್ಯಾಶಿಯರ್" ಅಂದ್ಲು ಹ ಹ ಹ ಏನಂತ ಹೇಳಲಿ ಇವಳ ಬಗ್ಗೆ ತಲೆಗೆ ಕೈ ಹಚ್ಚಿ, ನನಗೆ ನೆನಪೇ ಇರಲಿಲ್ಲ... ನನ್ನ ಪೋಲಿತನಗಳಿಗೆ ಇವಳ ಈ ಬೆಂಬಲ ಬೇರೆ... "ಈಗೇನೂ ದುಡ್ಡು ತುಂಬೊದಿಲ್ಲ" ಅಂದೆ ಹುಬ್ಬು ಗಂಟಿಕ್ಕಿದಳು. ಇವಳಿಗೆ ಆ ಕ್ಯಾಶಿಯರನ್ನು ನೊಡಲೇ ಬೇಕಾಗಿತ್ತು. ಆಯ್ತು ಅಂತ ಬೈಕು ಯಾವಾಗ ಸಿಗುತ್ತೊ ಅಂತ ಮ್ಯಾನೇಜರ್ ಕೇಳ ಹೋದ ಹಾಗೆ ಮಾಡಿ ಅದೊ ಅಲ್ಲಿ ಅಂತ ತೋರ್‍ಇಸಿದೆ, "ಪರವಾಗಿಲ್ಲಾರೀ, ಕೃಷ್ಣ ಸುಂದರಿ... ಕಪ್ಪಗಿದ್ದರೂ ಖಳೆಯಿದೆ" ಅಂದ್ಲು "ನನಗೆ ಮದುವೆ ಸಂಭಂದ ಕೇಳ್ತೀಯಾ ನೋಡು ಹಾಗಾದ್ರೆ" ಅಂದೆ. ಎಳೆದುಕೊಂಡು ಹೊರಬಂದ್ಲು, ಆಯ್ತು ಆಟೋ ತರ್ತೀನಿ ಇಲ್ಲೇ ಇರು ಅಂದೆ, "ರೀ ಬಸ್ಸಲ್ಲೇ ಹೋಗೋಣ" ಅಂತ ಹಠ ಹಿಡಿದಳು. "ಬೇಡ ಬಹಳ ರಶ್ ಇರತ್ತೆ ನಿನಗೆ ಗೊತ್ತಾಗಲ್ಲಾ" ಅಂದ್ರೂ ಕೇಳಲಿಲ್ಲ "ಒಂದು ಸಾರಿ ಪ್ಲೀಜ" ಅವಳ ಹಾಗೆ ಮುಖ ಮಾಡಿ ಗೊಗರೆಯುತ್ತಿದ್ದರೆ ಬೇಡವೆನ್ನಲಾಗಲಿಲ್ಲ.

ಬಸ್ಸು ಬಂತು ಬಸ್ಸು... ಹಿಂದಿನ ಬಾಗಿಲಿಗೆ ನಾ ಓಡುತ್ತ ನೀ ಮುಂದೆ ಹತ್ತು ಅಂದೆ, ಒಳಗೆ ಹೋಗಿ, ನನಗೂ ಸೀಟು ಹಿಡಿದಿದ್ಲು, ಮುಂಜಾನೆ ಅಲ್ವಾ ರಶ್ ಕಮ್ಮಿ ಇತ್ತು, ಆದ್ರೆ ಅವಳು ಹಿಡಿದಿದ್ದು ಲೇಡಿಸ ಮೀಸಲು ಸೀಟು, ನಾನೊಲ್ಲೆ ಅಂತ ನಿಂತು ಬಿಟ್ಟೆ, ಗುರಾಯಿಸಿ ನೋಡಿದ್ಲು. ಮುಂದಿನ ಸ್ಟಾಪಿನಲ್ಲಿ ಜನ ಇಳಿದ ಮೇಲೆ ಎರಡು ಅಕ್ಕ ಪಕ್ಕದ ಸೀಟು ಹಿಂದೆ ಖಾಲಿಯಾಯ್ತು, ನಾ ಹೋಗಿ ಕೂರುವಷ್ಟರಲ್ಲಿ ನನಗೆ ಕಿಟಕೀ ಸೀಟು ಅಂತ ಬಂದು ಅಲ್ಲಿ ಆಕ್ರಮಿಸಿಕೊಂಡಳು. "ಲೇ ನಿಮಗೆ ಅಂತ ಅಲ್ಲಿ ರಿಸರ್ವ್ ಸೀಟಿದೆ ಅಲ್ಲಿ ಹೋಗು, ಪಾಪ ನಮಗೆ ಸೀಟು ಬೇಡವಾ" ಅಂತ ಕಿಚಾಯಿಸಿದೆ, ಕೂತಲ್ಲೇ ಚಿವುಟಿದಳು.. ಚೀರಲಾಗದೇ ಸುಮ್ಮನಾದೆ, ಬಾಯಿ ತೆಗೆದರೆ ನೋಡು ಅನ್ನುವಂತೆ ನೋಡಿದ್ಲು.

ಬಸ್ಸು ಸ್ವಲ್ಪ ಮುಂದೆ ಹೊಗುತ್ತಿದ್ದಂತೆ ಕಾಲೇಜಿನ ಹುಡುಗ ಹುಡುಗಿಯರು ತುಂಬಿಕೊಂಡರು, ಬಸ್ಸು ಈಗ ತುಂಬಿ ತುಳುಕತೊಡಗಿತು..
ಇವಳು ನನ್ನ ನೋಡಿ ನಕ್ಕಳು, ಬಂದ್ರು ನೋಡಿ ನಿಮ್ಮ ಬಸ್ಸಿನ ಹುಡುಗಿಯರು, ಕನಸಿನ ಕನ್ಯೆಯ ತುಣುಕುಗಳು ಅನ್ನುವಂತೆ. ನಾನೂ ನಕ್ಕೆ ಕನಸಿನ ಕನ್ಯೆ ನನ್ನಾಕೆ ನನ್ನ ಪಕ್ಕದಲ್ಲೇ ಕೂತಿರುವಾಗ ಅವರೆಲ್ಲ ಯಾಕೆ ಅನ್ನುವಂತೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಹುಡುಗಿಗೆ ನನ್ನ ಸೀಟು ಬಿಟ್ಟು ಕೊಟ್ಟೆ, ಏನು ಇಂಪ್ರೆಸ್ಸು ಮಾಡಲಿಕ್ಕ ಅನ್ನುವ ಪ್ರಶ್ನೆ ನನ್ನವಳ ಮುಖದಲ್ಲಿ ಕಂಡಿತು, ಉತ್ತರವೇನೊ ಅನ್ನುವಂತೆ ನಾ ನಕ್ಕೆ.

ಅಂತೂ ನಮ್ಮ ನಿಲುಗಡೆ ಬಂತು, ಇಳಿದು ನಡೆಯುತ್ತಿದ್ದಂತೆ ಬಂತು ಅವಳ ಮೊದಲ ಪ್ರಶ್ನೆ "ಅಲ್ಲಾ ಆ ಹುಡುಗೀಗೇ ಸೀಟು ಯಾಕ್ರೀ ಬಿಟ್ಟು ಕೊಟ್ರೀ, ಏನ್ ಇಂಪ್ರೆಸ್ ಮಾಡೋಕಾ" ಅಂದ್ಲು, ಸುಮ್ನೇ ನಕ್ಕೆ "ಈ ನಕ್ರೆ ಏನರ್ಥ" ಅಂತ ಮತ್ತೆ... "ಹೂಂ ಇಂಪ್ರೆಸ್ ಮಾಡೋಕೆ" ಅಂದೆ "ನಂಗೊತ್ತು, ಅದಕ್ಕಲ್ಲ, ಅದೇ ಸ್ಟಾಪಿನಲ್ಲಿ ಇಳಿಯೋಕೆ ಜನ ಆಕಡೆ ಈಕಡೆ ಅಂತ ನುಸುಳಿ, ಆ ಹುಡುಗಿ ಅಲ್ಲೇ ಹತ್ತಿಕ್ಕುತ್ತಿದ್ದರೆ ಅವಳು ಹೇಳಲೂ ಆಗದೆ ಬಿಡಲೂ ಆಗದೆ ಒದ್ದಾಡುತ್ತಿದ್ದು ನೋಡಿ ತಾನೇ, ನಾನೇ ನಿಮ್ಮನ್ನ ಏಳಿಸಬೇಕೆಂದಿದ್ದೆ, ನೀವೆ ಎದ್ದು, ರೀ ನಂಗೆ ಖುಷಿಯಾಯ್ತು" ಅಂತ ಕೈನಲ್ಲಿ ಕೈ ಸೇರಿಸಿ ನಡೆಯತೊಡಗಿದಳು, ನನಗೂ ಸಮಾಧಾನವಾಯ್ತು ಅವಳಿಗೆ ಅದು ಅರ್ಥ್ವಾಯಿತಲ್ಲ ಅಂತ.. "ಬೇರೆ ಯಾರಾದ್ರೂ ಇದ್ರೆ ಬಿಟ್ಟು ಕೊಡ್ತಿದ್ರಾ" ಅಂದ್ಲು. "ನಿಜ ಹೇಳಬೇಕೆಂದ್ರೆ ನನಗೆ ಸೀಟು ಬಿಟ್ಟು ಕೊಡಲು ಅವರು ಅರ್ಹರು ಅನ್ನಿಸ್ಬೇಕು ಆಗಲಷ್ಟೇ" ಅಂದ್ರೆ "ಏನು ಮುಖ್ಯಮಂತ್ರಿ ಸೀಟು ಉತ್ತರಾಧಿಕಾರಿಗೆ ಬಿಟ್ಟು ಕೊಟ್ಟ ಹಾಗೆ ಹೇಳ್ತಿದೀರಾ" ಅಂತಂದ್ಲು. "ಅಲ್ಲ ಅದೂ ನಿಜ ಕಣೇ, ಬಸ್ಸಿನಲ್ಲಿ ಸೀಟು ಅಂದ್ರೆ ಸುಮ್ನೇನಾ, ಯಾರಿಗೋ ಯಾಕೆ ಬಿಟ್ಟು ಕೊಡಬೇಕು ಹೇಳು, ಈ ಲೇಡೀಸಗೆ ಅಂತ ಮೀಸಲು ಸೀಟು ಮಾಡಿರ್ತಾರೆ, ಕಾಲೇಜು ಅಮ್ಮಣ್ಣಿಗಳು(ಎಲ್ಲರೂ ಅಲ್ಲ) ನೀಟಾಗಿ ಕುಂತಿರುತ್ತಾರೆ, ಪಕ್ಕದಲ್ಲೇ ಒಬ್ಬಳು ಗರ್ಭಿಣಿ ಪಾಪ ಕಷ್ಟಪಟ್ಟು ನಿಂತಿದ್ದರೆ ಜಾಗ ಕೊಡೊದಿಲ್ಲ, ಕೊಟ್ಟು ಸ್ವಲ್ಪ ನಿಂತ್ರೆ ಏನ್ ಕಾಲು ಸವೆದು ಹೋಗುತ್ತಾ ನಾಳೆ ಅವರೂ... ಬಿಡು ಏನ್ ಹೇಳೊದು, ಈ ಹಿರಿಯ ನಾಗರೀಕರಿಗೆ ಅಂತ ಸೀಟಿರತ್ತೆ ಅದನ್ಯಾರೊ 'ಹಿ' ಅನ್ನೋದನ್ನ 'ಕಿ' ಮಾಡಿ, ಕಿರಿಯ ನಾಗರೀಕರಿಗೆ ಅಂತ ತಿದ್ದಿ ತಮ್ಮ ಸೃಜನಶೀಲತೆ(ಕ್ರಿಯೇಟಿವಿಟಿ) ಪ್ರದರ್ಷಿಸಿರುತ್ತಾರೆ, ಅದನ್ನೆ ಇಟ್ಟುಕೊಂಡು ಜಾಗ ಕೇಳಿದ ಹಿರಿಯರನ್ನ ಈ ಕೆಲ ಪುಂಡರು ಸೀಟು ಬಿಡದೇ ಕಾಡಿಸ್ತಾರೆ ಎನನ್ನೋದು ಇಂಥ ಅನಾಗರೀಕರಿಗೆ. ಇನ್ನು ಬಸ್ಸಿನ ತುಂಬ ಸೀಟು ಖಾಲಿ ಹೊಡೀತಿದ್ರೂ, ಫುಟ್ ಬೊರ್ಡ ಮೇಲೆ ನಿಲ್ಬೇಡಿ ಹತ್ತೋರಿಗೆ ತೊಂದ್ರೆಯಾಗತ್ತೆ ಅಂತ ಕಂಡಕ್ಟರ್ರು ಬಡಕೊಂಡ್ರೂ ಕೇಳದವರಿಗೆ ಬಾ ಅಂತ ಸೀಟು ಬಿಟ್ಟುಕೊಟ್ಟರೂ ಕೂಡೊದಿಲ್ಲ ಏನ್ ಮಾಡ್ತಿಯಾ, ಮೂರು ವರ್ಷದಲ್ಲಿ ನಾ ಏನೇನು ನೋಡಿಲ್ಲ" ಅಂತ ಬೇಜಾರಾಗಿ ನುಡಿದೆ. "ರೀ ಯಾಕ್ರೀ ಅಷ್ಟು ಬೇಜಾರಾಗ್ತೀರಾ, ನಾ ತಮಾಷೆ ಮಾಡಿದೆ" ಅಂದ್ಲು. "ನಿನ್ನ ತಮಾಷೆಗಲ್ಲ ನಾ ಬೇಜಾರಾಗಿದ್ದು ನಮ್ಮದೇ, ವರ್ತನೆಗಳು ನನಗೆ ಹಾಗನಿಸಿದ್ದು, ನಾಗರೀಕರಿಗೆ ಅಂತ ಇರುವ ಸಾರಿಗೆ ಹೀಗೆ ಅನಾಗರೀಕರಿಂದಾಗಿ ಬಹಳ ಜನ ವಿಮುಖವಾಗುವಂತೆ ಆದ್ರೆ ಏನು ಪ್ರಯೋಜನ ಅದಕ್ಕೆ ಬೇಜಾರು" ಅಂದೆ.

ಹೀಗೆ ಮಾತಿನಲ್ಲೇ ಮನೆ ತಲುಪಿದೆವು, ದಣಿದಿದ್ದೆವು, ಬಹಳ ದಿನಗಳಾಯ್ತಲ್ಲ ನಡೆದು,
ನಮ್ಮದೆ ಆದ ಕೆಲವು ಸವಲತ್ತುಗಳಿಗೆ(ಬೈಕು, ಕಾರು) ದೇಹ ಕೂಡ ಒಗ್ಗಿಕೊಂಡು ನಾಲ್ಕು ಹೆಜ್ಜೆ ಹಾಕಿದರೂ ಉಸ್ಸೆನ್ನುತ್ತದೆ. ನಿಂಬೆ ಶರಬತ್ತು ಮಾಡಿದ್ಲು, ಹೊಟ್ಟೆ ತಣ್ಣಗಾಯ್ತು. "ಆಗಲೇ ಕೇಳಿದೆ, ಮತ್ಯಾಕ್ಕೆ ನೀವು ಬೈಕು ತುಗೊಂಡಿದ್ದು, ಇದೆಲ್ಲಕ್ಕೆ ಬೇಸತ್ತಾ" ಅಂದ್ಲು, "ಹಾಗೇನಿಲ್ಲ, ಈಗಲೂ ನನಗೆ ಸಾಧ್ಯವಾದಾಗಲೆಲ್ಲ, ನಾ ಬಸ್ಸಿನಲ್ಲೇ ತಿರುಗೋದು ನಿನಗೇ ಗೊತ್ತಿದೆ, ಆದರೂ ಬೈಕು ರೂಢಿಯಾಗಿ ಸ್ವಲ್ಪ ಕಿರಿಕಿರಿಯಾಗುತ್ತದೆ ಆದರೂ ನನಗೇಕೊ ಬಸ್ಸೆಂದರೆ ಇನ್ನೂ ಅದೇ ಪ್ರೀತಿ, ವರ್ಷಗಳಾದಂತೆ ನನ್ನ ಕೆಲಸ ಹೆಚ್ಚಿತು, ರಾತ್ರಿ ಬರುವುದು ಲೇಟಾಗತೊಡಗಿತು, ಕೆಲವು ತಿಂಗಳು ಬಸ್ಸಿನಲ್ಲೇ ರಾತ್ರಿ ಹನ್ನೊಂದೂವರೆ ಹನ್ನೆರಡಕ್ಕೆಲ್ಲ ಬಂದಿದ್ದೇನೆ, ಕೊಲೀಗು ಹತ್ತಿರದ ನಿಲುಗಡೆಗೆ ಬಿಟ್ಟರೆ ಅಲ್ಲಿಂದ ಬಸ್ಸೆ ಗತಿ, ಆಟೊನಲ್ಲಿ ಹೋಗದೆ ಹಣ ಉಳಿಸಲೆಂದಲ್ಲ, ಅದೇನೊ ಬಸ್ಸೆ ಇಷ್ಟ, ಕೆಲವು ಸಾರಿ ಬಸ್ಸಿರದೇ ಆಟೊ ಕೂಡ... ಹೀಗೆ ಕೆಲದಿನಗಳಾದ ಮೇಲೆ ಆ ಅಪರಾತ್ರಿ ಹಾಗೆಲ್ಲ ಬರುವುದು ಸರಿಯಲ್ಲ, ಮೊದಲಿನ ಹಾಗೆ ಭದ್ರತೆಯಿಲ್ಲ ಎಂದು ಎಲ್ಲರೂ ಅನ್ನುವುದು, ನನಗೂ ಅದು ಸರಿಯೆನಿಸಿದ್ದು, ಸಮಯದ ಅಭಾವ, ಬಸ್ಸುಗಳು ಸಮಯಕ್ಕೆ ಸಿಗದಿರುವುದು, ಸಿಕ್ಕರೂ ಕಿಕ್ಕಿರಿದು ತುಂಬಿರುವುದೂ ಎಲ್ಲ ಸೇರಿ ಕೊನೆಗೆ ಬೈಕು ಕೊಳ್ಳಲು ನಿರ್ಧರಿಸಿದ್ದು. ಇನ್ನೂ ಓಡಿಸಲೂ ಬರುತ್ತಿರಲಿಲ್ಲ ನನಗೆ ಆಗ, ಕೆಲವೊಂದು ಸಾರಿ ಬಸ್ಸೇ ಚೆನ್ನಾಗಿತ್ತು ಅನಿಸಿದ್ದೂ ಇದೆ, ಆದ್ರೆ ಈಗ ಈ ಸೌಲಭ್ಯಕ್ಕೆ ಹೊಂದಿಕೊಂಡು ಹೋಗಿದೆ. ಒಂದು ದಿನ ಬೈಕಿಲ್ಲ ಅಂದ್ರೆ ಸಾಕು ಸಾಕಾಗಿ ಹೋಗುತ್ತದೆ. ಈಗೆಲ್ಲ ವೊಲ್ವೊ ಏಸೀ ಬಸ್ಸುಗಳು ಬಂದಿವೆ, ಅಡಿಗಡಿಗೆ ಬಸ್ಸುಗಳೂ ಬಹಳ ಆಗಿವೆ, ಮೆಟ್ರೊ ಆಗೋದಿದೆ ನೋಡೊಣ ಬಸ್ಸುಗಳು ಮಾತ್ರ ಇದ್ದೇ ಇರುತ್ತವೆ" ಅಂದೆ. "ಅದೂ ಸರಿ, ನಾನೂ ಮಾರ್ಕೆಟ್ಗೆ ಬಸ್ಸಿನಲ್ಲೇ ಹೋಗ್ತೀನಿ ಇನ್ಮೇಲೆ" ಅಂದ್ಲು, ಬೇಡ ರಶ್‌ನಲ್ಲಿ ನಿನಗೆಲ್ಲ ಸರಿ ಹೋಗಲ್ಲ ಅಂತ ಹೇಳಬೇಕೆನಿಸಿತು, ಆದ್ರೂ ಅವಳಿಗೂ ಅನುಭವವಾಗ್ಲಿ ಅಲ್ಲದೇ ಈಗೀಗ ಸ್ವಲ್ಪ ಜನರಿಗೆ ತಿಳುವಳಿಕೆ ಬಂದು ಪ್ರಜ್ಞಾವಂತರಾಗಿದ್ದಾರೆ ಏನೂ ತೊಂದರೆ ಆಗಲಿಕ್ಕಿಲ್ಲ ಬಿಡು ಅಂತನ್ನಿಸಿ ಸುಮ್ಮನಾದೆ.

ಸಂಜೆಯಾಗುತ್ತಿದ್ದಂತೆ ಮತ್ತೆ ಬೈಕು ತರಲು ಹೋಗಬೇಕು ಬರ್ತೀಯಾ ಅಂದೆ, ನೀವೇ ಹೋಗಿಬನ್ನಿ ಅಂದ್ಲು, ಕ್ಯಾಶಿಯರ್ ಹುಡುಗಿ ನೋಡಲಲ್ಲ ಅಂತ ಖಾತರಿಯಾಗಿದ್ದರಿಂದ ಬರುವುದಿಲ್ಲ ಅಂದಿರಬೇಕು ಅಂತ ಹೊರಟೆ. "ಮತ್ತೆ ಬಸ್ಸಲ್ಲೇ ಹೋಗ್ತೀರಾ" ಅಂದ್ಲು ಹೌದೆನ್ನುತ್ತಾ ತಲೆಯಾಡಿಸಿದೆ.. "ಬಸ್ಸು ಬಂತು ಬಸ್ಸು..." ಅಂತ ರಾಗವಾಗಿ ಅವಳು ಗುನುಗುನಿಸತೊಡಗಿದರೆ "ಕೆಂಪು ವೊಲ್ವೊ ಬಸ್ಸು..." ಅಂತ ನಾನೂ ದನಿಗೂಡಿಸಿದೆ... ಮನಸಾರೆ ನಕ್ಕೆವು, ಹೊರಗೆ ಕಾಲಿಡುತ್ತಿದ್ದಂತೆ, "ಪೀಂ... ಪೀಂ... ಕ್ಯಾಶಿಯರ್ ಕೇಳ್ದೆ ಅಂತ ಹೇಳಿ" ಅಂದ್ಲು... ತುಂಟಿಯ ತರಲೆಗೆ ನಗು ಬಂದು ಕಂಡಕ್ಟರ ಹಾಗೆ "ಒಕೇ ರೈಟ್ ರೈಟ.." ಅನ್ನುತ್ತ ಹೊರಬಿದ್ದೆ...

ಮತ್ತೆ ಎಂದೊ ಬಸ್ಸಿನಲ್ಲಿ ನಿಮ್ಮ ಪಕ್ಕದ ಸೀಟಿನಲ್ಲಿ ಕೂತು ಹರಟೆ ಹೊಡೆಯುತ್ತ ಸಿಗುತ್ತೇನೆ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

The PDF document can be found at http://www.telprabhu.com/bassu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

19 comments:

Nisha said...

ಚೆಂದದ ಬರಹ. ಸ್ಕೂಲಿಗೆ, ಕಾಲೇಜಿಗೆ ಬಸ್ಸಿನಲ್ಲಿ ಓಡಾಡುತಿದ್ದ ದಿನಗಳು ನೆನಪಿಗೆ ಬಂತು. ಸೀಟು ಸಿಗದೇ ಓದ್ದಾಡುತಿದ್ದದ್ದು, ಸೀಟು ಸಿಕ್ಕಿದಾಗ ಸಂತೋಷಪಡುತಿದ್ದದ್ದು ಎಲ್ಲ ನೆನಪಾಯಿತು.
ಧನ್ಯವಾದಗಳು.

ಮನಸು said...

ಬಹಳ ಚೆನ್ನಾಗಿದೆ..ಬಸ್ಸು ಬಸ್ಸು....ಹಳೆಯ ಪುಟಗಳು ತಿರುವಿ ಹಾಕಿದೆವು... ಹ ಹ ಹ ಕಾಲೇಜು ಹುಡುಗರಂತು ಸೀಟಿದ್ದರು ಕುಳಿತುಕೊಳ್ಳೊಲ್ಲ ಪುಟ್ ಬೋರ್ಡನಲ್ಲೆ ನಿಲ್ಲೊದು ಹ ಹ.. ಸೂಪರ್ ಅನುಭವವನ್ನು ನಿಮ್ಮಾಕೆಗೆ ಹೇಳಿದ್ದೀರಿ...ಹ ಹ ಹ
ಧನ್ಯವಾದಗಳು

Unknown said...

u r bus experience is same as every one .. so by reading we felt that the character is us only . really a nice experience of reading ... good article ... 7th para will make every one to think for a while ...

guruve said...

ಎಂದಿನಂತೆ ಚೆನ್ನಾಗಿ, ನವಿರಾಗಿ ಬರೆದಿದ್ದೀರಿ. ಜೊತೆಗೆ ಬಸ್ಸಿನ ನೆನಪುಗಳನ್ನೂ ತೆರಿಸಿದ್ದೀರಿ. ಹಿಂದೊಮ್ಮೆ ಬಸ್ಸಿನ ನೆನಪಿನಲ್ಲಿ ನಾ ಬರೆದಿದ್ದೆ. ಸಮಯ ಸಿಕ್ಕಾಗ ಓದಿ.. http://guruve.blogspot.com/2007/01/blog-post.html

maaya said...

hi,
nice article.. i remembered my colg life.. and recently experienced badly in bus.. i think u understood.. nice experience u shared wit ur wife.. gud u thought something for middleclass people who run around everyday in bus.. still our people not changed u know.. that specially bus traveler.. ha ha ha...

hema.nth

Veena DhanuGowda said...

Nice one :)
Punyavantaru igaladru nimma bali bike ide
I remembered my coll days.... aa campus interview, adress hudkodu ... yappaaaaaaaaa :(
nimma prathiyondu article nalu public ge yavudadru ond msg iruthe sumne time pass goskara blog ododu aste alla we will learn some good things :)
thnks for dat :)

Raghavendra said...

awesome... ur bus experience same as everyone else but the way u wrote it.. is very nice..
ee blog odi nanna hale dinagala nenapaitu...
yeno bassalli hogodu andre ontara khushi.. aadu kitaki seat sikre innu maja :)
keep writing n will be keep visiting

Prabhuraj Moogi said...

Nisha ಅವರಿಗೆ:
ಬಸ್ಸಿನಲ್ಲಿ ಸೀಟು ಸಿಗೋದು ಸುಮ್ನೆನಾ ಬೆಂಗಳೂರಲ್ಲಿ ಸೈಟು ಸಿಕ್ಕಷ್ಟೇ ಖುಷಿ.... ಅನಿಸಿಕೆಗೆ ಧನ್ಯವಾದಗಳು.

ಮನಸು ಅವರಿಗೆ:
ಎಲ್ಲ ಕಾಲೇಜು ಹುಡುಗರು ಹಾಗೆ ಮಾಡಲಿಕ್ಕಿಲ್ಲಾ (ಯಾಕೆಂದರೆ ನಾನು ಕಾಲೇಜಲ್ಲಿ ಹಾಗೆ ಮಾಡಿಲ್ಲ!!! ಹ ಹ ಹ...) ನನ್ನಾಕೆಗೆ ನಮ್ಮ ಅನುಭವಗಳ ಧಾರೆ ನಿರಂತರ.. ಅನಿಸಿಕೆಗೆ ಧನ್ಯವಾದಗಳು.

roopa ಅವರಿಗೆ:
ಎಲ್ಲರಿಗೂ ಬಸ್ಸಿನಲ್ಲಿನ ಅನುಭವಗಳು ಒಂದೊಂದು ಥರ, ಆ ಪ್ಯಾರ ಬರೆಯುವಾಗ ನನಗಾದ ಅನುಭವಗಳು ಅದರಿಂದಾಗಿ ನನಗನಿಸಿದ ಅನಿಸಿಕೆ, ಬೇಜಾರು ಎಲ್ಲಾ ಸೇರಿಸಿ ಬರೆದೆ, ಕೆಲವೊಂದು ಸಾರಿ ಜನ ಹೀಗೇಕೆ ಮಾಡ್ತಾರೆ ಅಂತನಿಸಿದೆ.. ಆದರೆ ಉತ್ತರ ಸಿಕ್ಕಿಲ್ಲ

guruve ಅವರಿಗೆ:
ನಿಮ್ಮ ಬಸ್ಸಿನ ಅನುಭವ ಕೂಡ ಚೆನ್ನಾಗಿದೆ ಸರ್... ಚಿತ್ರ ವಿಚಿತ್ರ ಪ್ರಪಂಚ ಬಸ್ಸಿನಲ್ಲಿ....

maaya ಅವರಿಗೆ:
Most of the time I write about the same middle class people,and being from middle class help me understand those feelings... many type of people travel by bus and you see many different way of behaviors...

ಪ್ರೀತಿಯಿ೦ದ ವೀಣಾ :) ಅವರಿಗೆ:
ಒಹ್ ನೀವು ಕಾಲೇಜ್ ಇಂಟರ್ವೀವ್ ಅಂತ ಬಸ್ಸಿನಲ್ಲಿ ಸುತ್ತಿದ್ದೀರಿ .. ಸುಮ್ನೆ ತಮಾಷೆಯಾದ್ರೆ ಏನ್ ಪ್ರಯೋಜನ ಹೇಳಿ ಅದಕ್ಕೆ ಏನಾದರೂ ಪಬ್ಲಿಕ್ ಗೆ ಮೆಸೇಜ್ ಕೊಡೋದು...

Raghavendra ಅವರಿಗೆ:
ಕಿಟಕೀ ಸೀಟು ಅಂದ್ರೆ ನನಗೂ ಅಷ್ಟೇ ಖುಷಿ ಸಾರ್... ಅದೂ ಹನಿ ಹನಿ ಮಳೆಯಾಗ್ತಿರ್ಬೇಕಾದ್ರೆ ಕಿಟಕೀ ಪಕ್ಕಾ ಕೂತು ಮಂಜು ಒರೆಸಿ ಹೊರಗೆ ನೋಡ್ತಿದ್ರೆ!!! ಅಬ್ಬಾ ಚೆನ್ನಾಗಿತ್ತು...

sunaath said...

ಈ ಸಲ ರಸಿಕತನದ ಜೊತೆಗೇ ನಾಗರಿಕ ವಿಮರ್ಶೆಯೂ ನಡೆದಿದೆ. ನಿಮ್ಮ ಕಾಲ್ಪನಿಕ ದಾಂಪತ್ಯ ಸಂಭಾಷಣೆ ‘ಮುದ್ದಣ-ಮನೋರಮೆ’ಯರ ಸಂಭಾಷಣೆಯನ್ನು ನೆನಪಿಸುತ್ತದೆ.
ಜೈ ಹೊ!

Greeshma said...

ನಿಮ್ಮಂತ ಹುಡುಗರ ನೋಟದ ಕಾಟಕ್ಕೇ ಸಾಕಾಗಿ ಎಷ್ಟೋ ಸಲ ಬಸ್ ನಲ್ಲಿ ಹೋಗಕ್ಕೆ ಮನಸ್ಸು ಬರಲ್ಲ ;)
ಎಂದಿನಂತೆ ಚೆನಾಗಿದೆ ಬರಹ :)

SSK said...

ಪ್ರಭು ಅವರೇ,
ನಿಮ್ಮ ಲೇಖನಗಳು ಒಂದಕ್ಕಿಂತಾ ಒಂದು ವಿಭಿನ್ನವಾಗಿದ್ದು, ಓದಲು ತುಂಬಾ ಮಜವಾಗಿರುತ್ತದೆ! ಈ ಲೇಖನದ ಮೂಲಕ ಪ್ರತಿಯೊಬ್ಬರಿಗೂ ಅವರವರ ಬಸ್ಸಿನ ಅನುಭವವನ್ನು ಮರುಕಳಿಸುವಂತೆ ಮಾಡಿದ್ದೀರಿ.

ನಾನೂ ಸಹ ಕೆಲವು ವರ್ಷಗಳ ಹಿಂದೆ ಬಸವನಗುಡಿಯಿಂದ, ಬೊಮ್ಮಸಂದ್ರದವರೆಗೆ ಕೆಲಸಕ್ಕೆ ಹೋಗಿ ಬರುತ್ತಿದ್ದೆ. ಆಗೆಲ್ಲಾ ಈ ರೀತಿ ದೊಡ್ಡ ದೊಡ್ಡ ರಸ್ತೆಗಳೆಲ್ಲ ಇನ್ನೂ ಆಗಿರಲಿಲ್ಲ. ಹೋಗುವ ಮತ್ತು ಬರುವ ವಾಹನಗಳಿಗೆ ಒಂದೇ ರಸ್ತೆ ಇತ್ತು ಆಗ! ಆ ಟ್ರಾಫಿಕ್ ಜಾಮ್ ಆ ಗೌಜು, ಗದ್ದಲ ಆಗೆಲ್ಲ ಇಷ್ಟೊಂದು ಬಸ್ಗಳ ಅಂತರಗಳೂ ಹೆಚ್ಚಾಗಿ ಇರಲಿಲ್ಲ, ಮಳೆಗಾಲ ಬಂದರಂತೂ ಇನ್ನೂ ಫಜೀತಿಯಾಗುತ್ತಿತ್ತು! ಮತ್ತು ಅಲ್ಲಿ ಕೆಲಸಕ್ಕೆ ಹೋಗುತ್ತಿದ್ದಲ್ಲಿ ಕೆಲವು ತಿಂಗಳ ವರೆಗೂ ಮುಖ್ಯ ರಸ್ತೆಯಿಂದ ೨ ಕೀ.ಮೀ. ಒಳಕ್ಕೆ ನಡೆದು ಹೋಗಿ ಬರಬೇಕಾಗಿತ್ತು, ಮತ್ತು ಮನೆಗೆ ಬರುವಾಗಲೂ ಅಷ್ಟೇ ಬಸ್ ಸ್ಟಾಪಿನಿಂದ ಮನೆಗೆ ೧ ಕೀ.ಮೀ. ನಡೆದು ಹೋಗಬೇಕಾಗಿತ್ತು. (ಆಗೆಲ್ಲಾ ಆಟೋ ಫೇರ್ ಮಿನಿಮಂ ೫ ರೂಗಳಿತ್ತು ಮತ್ತು ಆ ಕಾಲದಲ್ಲಿ ಅದೇ ಜಾಸ್ತಿ ಅನ್ನಿಸುತ್ತಿತ್ತು) ಅಲ್ಲಿ ನಾವು ಕೆಲಸ ಮಾಡುತ್ತಿದ್ದ ಆಯಾಸಕ್ಕಿಂತ, ಹೋಗಿ ಬರುವ ಆಯಾಸವೇ ಹೆಚ್ಚಾಗಿರುತ್ತಿತ್ತು. ಒಟ್ಟಾರೆ ಅದೂ ಒಂದು ರೀತಿಯ ಕಷ್ಟ ಮತ್ತು ಸುಖದ ಅನುಭವ!!

ಬಸ್ಸಿನಲ್ಲಿ ಪ್ರಯಾಣಿಸಿ, ಮತ್ತು ಮುದ್ದಿನ ಹೆಂಡತಿಯಿಂದ ಏಟು ತಿಂದು ಆಯಾಸವಾಗಿದ್ದೀರಿ ಅನ್ನಿಸುತ್ತೆ, ವಿಶ್ರಮಿಸಿಕೊಳ್ಳಿ ಪಾಪ! ಹ ಹ್ಹ ಹ್ಹಾ ಹ್ಹಾ........! (ಈ ಕೆಳಗಿನ ಸಾಲು ತಮಾಷೆಗಾಗಿ, ಮುನಿಸಿಕೊಳ್ಳಬೇಡಿ!)

PARAANJAPE K.N. said...

ಪ್ರಭು
ಬಹಳ ಚೆನ್ನಾಗಿದೆ ಈ ಕಥನ.

ಬಾಲು said...

houdu prabhu avare, BMTC li seat sigodu, illi brahmna chari galige olle mane sigodu bahala kashta!!!

any how nimage bus nalli seat sikku, hendathi ondige prayana madiddiri!!! adu kushi vichara. nange bus nalli seat sikki bahala kaala aagide!!! :(

ಶಿವಪ್ರಕಾಶ್ said...

ಚನ್ನಾಗಿದೆ ರೀ ನಿಮ್ಮ ಬಸ್ ಕಥೆ..
ಧನ್ಯವಾದಗಳು

Prabhuraj Moogi said...

sunaath ಅವರಿಗೆ:
ನಮ್ಮಿಬ್ಬರ ಸಂಭಾಷಣೆಗೆ ಏನು ವಿಷಯವಾದರೂ ಸರಿ... ನಾನು ಮುದ್ದಣ ಮನೊರಮೆಯರ ಸಂಭಾಷಣೆ ಕೇಳಿಲ್ಲ(ಓದಿಲ್ಲ)... ಹಾಗಾಗಿ ನನಗೇನು ಹೇಳಬೇಕೆಂದು ತಿಳಿಯುತ್ತಿಲ್ಲ... ಏನೊ ನನ ಕಲ್ಪನೆಗಳು ನಿಮಗೆ ಹಿಡಿಸುತ್ತವಲ್ಲ ನನಗದೇ ಸಂತೋಷ...

Greeshma ಅವರಿಗೆ:
ಹ ಹ ಹ... ಚೆನ್ನಾಗಿದೆ ನಿಮ್ಮ ಕಾಮೇಂಟು... ನಾನೇನು ಹಾಗೆ ಮತ್ತೊಬ್ಬರಿಗೆ ಮುಜುಗರವಾಗುವ ಹಾಗೆ ನೋಡಿಲ್ಲ ಬಿಡಿ, ಆದರೂ ಸೃಷ್ಟಿ ನಿಯಮ, ಸೆಳೆತ ಇದ್ದೇ ಇರುತ್ತದೆ... ಸುಂದರವಾದವರು ಮುಂದೆ ಹಾದು ಹೋದರೆ ಕಣ್ಣು ತಂತಾನೆ ಆಕಡೆಗೆ ಹೋಗುತ್ತದೆ "Men are from mars" ಅಂತ ಸುಮ್ಮನೆ ಹೇಳಿಲ್ಲ...

SSK ಅವರಿಗೆ:
ಮೊದಲಿಗೆ ಇಷ್ಟೊಂದು ಸವಿವರವಾಗಿ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಕೋಟಿ ಧನ್ಯವಾದಗಳು... ನನ್ನವಳ ಯೋಚನೆಗಳು ಅಷ್ಟು ಭಿನ್ನ ವಿಭಿನ್ನ ಹಾಗಾಗಿ ಲೇಖನಗಳೂ ಕೂಡ... ಬಸ್ಸೇ ಹತ್ತಿರದವರು ಬಹಳ ಕಡಿಮೆ, ಹಾಗಾಗಿ ಎಲ್ಲರಿಗೂ ಅವರವರ ನೆನೆಪು ಮರುಕಳಿಸಿದೆ...(ಬಸ್ಸೇ ಹತ್ತಿಲ್ಲದಷ್ಟು ಶ್ರೀಮಂತರು ಯಾರೂ ನನ್ನ ಬ್ಲಾಗ ಓದುತ್ತಿಲ್ಲ ಅಂದುಕೊಂಡಿದ್ದೇನೆ.. ಓದುತ್ತಿದ್ದರೆ ಹೇಳಿ, ಏನೊ ಕುತೂಹಲ).
ಈ ಒಂದೇ ರಸ್ತೆ ಇದ್ದರೆ ಬಸ್ಸುಗಳು ಪ್ರಯಾಣ ಅದೂ ಟ್ರಾಫಿಕ್ಕು ಜಾಮ್‌ಗಳಲ್ಲಿ ದೊಡ್ಡ ಪಜೀತಿ.. ಮಳೆಗಾಲದಲ್ಲಿ ತೊಂದ್ರೆಯಾದ್ರೂ... ಹೊರಗೆ ಹನಿ ಹನಿ ಮಳೆ ಬೀಳುತ್ತಿದ್ದರೆ ಬಸ್ಸೊಳಗೆ ಬೆಚ್ಚಗೆ ಕೂತು ಕಿಟಕಿಯ ಗ್ಲಾಸಿನ ಮಂಜು ಒರೆಸಿ ಹೊರಗೆ ನೋಡುತ್ತಿದ್ದರೆ, ಆ ಅನುಭವ ಹೇಳೊಕೆ ಆಗಲ್ಲ... ನಾನೂ ಕೆಲವು ಸಾರಿ ಎರಡು ಕಿಲೋ ಮೀಟರುಗಳವರೆಗೆ ನಡೆದೇ ಓಡಾಡಿದ್ದೇನೆ... ಅದೊಂಥರಾ "ಮಧುರಾ ಯಾತನೆ..!!!"... ಏಟು ಕೊಟ್ಟರೂ ಪ್ರೀತಿಯಿಂದ ಕೊಟ್ಟ ಏಟು ಆಯಾಸ ಹೇಗೆ ಆದೀತು. ನಾನೆಲ್ಲ ಮುನಿಸಿಕೊಳ್ಳಲ್ಲ... ನಿಮ್ಮ ಅನಿಸಿಕೆಗಳು ಹೀಗೆ ಬರುತ್ತಿರಲಿ..

PARAANJAPE K.N. ಅವರಿಗೆ:
ಧನ್ಯವಾದಗಳು.. ಬರ್ತಿರಿ..

ಬಾಲು ಅವರಿಗೆ:
ಬ್ರಹ್ಮಚಾರಿಗಳಿಗೆ ಮನೆ ಸಿಗೊದು, ಬಸ್ಸಿನಲ್ಲಿ ಸೀಟು ಸಿಗೋ ಹೋಲಿಕೆ ಚೆನ್ನಾಗಿತ್ತು... ಅದಕ್ಕೆ ಬೇಗ ಮದುವೆಯಾಗಿ.. ಸೀಟು ಮನೆ ಎರಡೂ ಸಿಗಬಹುದು...

ಶಿವಪ್ರಕಾಶ್ ಅವರಿಗೆ:
ಧನ್ಯವಾದಗಳು.. ಬರ್ತಿರಿ..

shivu.k said...

ಪ್ರಭು,

ಈ ಲೇಖನದಲ್ಲಿ ಬಸ್ಸಿನವರೆಗೂ ನಿಮ್ಮ ತುಂಟಾಟಗಳನ್ನು ತಂದು ಪಬ್ಲಿಕ್ ಮಾಡಿದ್ದೀರಿ...[ನಗು]ಜೊತೆಗೊಂದಿಷ್ಟು ನೀತಿ ನಿಯತ್ತಿನ ಮಾತುಗಳು ಬೇರೆ...
ಬೇಗ ಮದುವೆಯಾದರೇ ಇವೆಲ್ಲಾ ಪ್ರಾಕ್ಟಿಕಲ್ಲಾಗಿ ಸಿಗಬಹುದು...
ಮನಸ್ಸು ಮಾಡಿ...

ಧನ್ಯವಾದಗಳು...

Prabhuraj Moogi said...

shivu ಅವರಿಗೆ:
ನಗು ಜತೆಗೆ ಸ್ವಲ್ಪ ಮಾತುಕತೆಗಳೇ ನಮ್ಮ ಕಥೆಗಳು... ಅಯ್ಯೋ ಮದುವೆ ಈಗಲೇ ಬೇಡ ಸಾರ ಮನಸ್ಸಿನ ಕಲ್ಪನೆಗಳಲ್ಲೇ ಎಲ್ಲ ಮ್ಯಾನೇಜು ಮಾಡಿ ಹತೋಟಿಯಲ್ಲಿ ಇಡಲಾಗುತ್ತಿಲ್ಲಾ ಇನ್ನು ಮದುವೆ ಆದ್ರೆ, ಮದುವೆ ಎಲ್ಲ ಆಗೋದು ಇದ್ದೇ ಇದೆ, ಸ್ವಲ್ಪ ಸಮಯ ಹೀಗೇ ಇರಲಿ...

ವಿನುತ said...

ಆಹ್ಲಾದಕರವಾಗಿತ್ತು ಈ ನಿಮ್ಮ ಬಸ್ ಪ್ರಯಾಣ. ನಾನ೦ತೂ ಮಹಿಳೆಯರು ಮತ್ತು ಪುರುಷರು ಬೇರೆ ಬೇರೆ ಬಾಗಿಲುಗಳಲ್ಲಿ ಹತ್ತಬೇಕೆ೦ಬ ನಿಯಮ ಮಾಡಿದವರಿಗೆ ಋಣಿ. ಮೀಸಲಾತಿಯ (ಅ೦ಗವಿಕಲ ಹಾಗೂ ಮುದಿಜೀವಗಳ ಹೊರತಾಗಿ) ವಿರೋಧಿಯಾದರೂ, ಈ ನಿಯಮ ಅನಿವಾರ್ಯವಾಗಿತ್ತೆ೦ದೇ ಅನಿಸುತ್ತದೆ.

Prabhuraj Moogi said...

ವಿನುತ ಅವರಿಗೆ
ಬೇರೆ ಬೇರೆ ಬಾಗಿಲಿನ ನಿಯಮ ಬಹಳ ಚೆನ್ನಾಗಿದೆ.. ನನಗೂ ಅವರು ಮಾಡಿದ್ದು ಬಹಳ ಇಷ್ಟವಾಯ್ತು.. ನಾನೂ ಸ್ವಲ್ಪ ಮೀಸಲಾತಿಗಳ ಬಗ್ಗೆ ಅಷ್ಟೇನೂ ಒಳ್ಳೇ ಅಭಿಪ್ರಾಯ ಹೊಂದಿಲ್ಲ.. ಯಾಕೋ ಮೀಸಲು ಅತಿಯಾಯ್ತು ಅನಿಸುತ್ತದೆ.. ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಿದ್ದು ಸರಿಯಾಗಿದೆ, ಮೀಸಲು ಸೀಟು ಇಲ್ಲದಿದ್ದರೂ ಅವರಿಗೆ ಸೀಟು ಬಿಟ್ಟು ಕೊಡುವ ಭುದ್ದಿ ಜನರಿಗೆ ಸ್ವಲ್ಪ ಬರಲಿ..