ಗೋಡೆಗೆ ಆತು ಕೂತ್ಕೊಂಡು, ಕಾಲು ಅಷ್ಟುದ್ದ ಚಾಚಿಕೊಂಡು, ತಲೆ ಕೆರಕೊಂಡು ಉದುರುತ್ತಿದ್ದ ಕೂದಲುಗಳನ್ನು ಒಂದೆಡೆ ರಾಶಿ ಹಾಕುತ್ತ, ಯಾವದೋ ಹಳೆಯ ಸಾಪ್ತಾಹಿಕ ವಿಜಯದ ಊರ್ವಶಿ ಅಂಕಣ ಒದ್ತಾ ಕೂತಿದ್ದೆ, ಇವಳು ಬಂದು
"ಎನ್ ಮಾಡ್ತಾ ಇದೀರಾ" ಅಂದ್ಲು
"ಊರ್ವಶಿ ಎನಂತಾಳೇ ನೋಡ್ತಿದೀನಿ".
"ಅಲ್ಲಾ, ಅಲ್ಲೂ ಹುಡುಗೀರ ಕಾಲ್ಂ ಓದೋದಾ"
"ಅದು ಹುಡುಗೀನೆ ಬರೆದಿರೊದು ಅಂತ ಹೇಗೆ ಹೇಳ್ತೀಯಾ, ಹುಡುಗಾನೆ ಊರ್ವಶಿ ಅಂತ ಹೆಸರಿಟ್ಟುಕೊಂಡು ಬರೆದಿರಬಹುದು, ಇಷ್ಟಕ್ಕೂ ಅದೇನು ಮಹಿಳೆಯರ ಕಾಲಂ ಅಲ್ವಲ್ಲ, ಟೆಕೀಟೀಸಿ ಅಂತ ಎಲ್ರ ಕಾಲೆಳೆಯೊ ಹಾಸ್ಯ ತುಣುಕುಗಳು" ಅಂದೆ.
"ಎನ್ ಕೇಳಿದ್ರೂ ಥಟ ಅಂತ ರೆಡಿಮೇಡ ಆನ್ಸರ ಇರತ್ತೆ ನಿಮ್ಮ ಹತ್ರ"
ಹಾಗೇ, ಬಯ್ದವಳು, ನನ್ನ ಕಾಲುಗಳನ್ನೇ ತಲೆದಿಂಬಿನಂತೆ ಮಾಡಿಕೊಂಡು, ಅಲ್ಲೇ ಒರಗಿಕೊಂಡು ಟೀವೀ ಆನ್ ಮಾಡಿಕೊಂಡು ನೋಡತೊಡಗಿದ್ಲು. ನನ್ನ ಪಾಡಿಗೆ ನಾ ಓದತೊಡಗಿದೆ. ಟೀವೀ ಅಂದ್ರೆ ಒಂದೇ ಚಾನೆಲ್ಲು ಏನಿಲ್ಲವಲ್ಲ, ಅದಕ್ಕೆ ಇಲ್ಲಿ ಜಾಹೀರಾತು ಬಂದ್ರೆ ಅಲ್ಲಿ, ಅಲ್ಲಿ ಬಂದ್ರೆ ಮತ್ತೊಂದಲ್ಲಿಗೆ, ಚಾನೆಲ್ಲು ಬದಲಾಗುತ್ತಿತ್ತು, ಅವಳ ಕೈಯಲ್ಲೇ ರಿಮೋಟು ಅರ್ಧ ಸವೆದಿದ್ದು, ಅಕ್ಷರಗಳೆಲ್ಲ ಅಳಿಸಿಹೋಗಿ "ಲೇ ಮ್ಯೂಟ್ ಬಟನ್ನು ಯಾವುದೇ" ಅಂತ ಕೇಳಿ, ಅವಳು ಹೇಳಿ, ನಾ ಮ್ಯೂಟ್ ಮಾಡೊ ಹೊತ್ತಿಗೆ ಬಂದ ಮೊಬೈಲ್ ಕಾಲ್ ಹೋಗಿರುತ್ತಿತ್ತು. ಆದರೆ ಇಂದೇಕೋ ಅದೇ ಒಂದೇ ಚಾನಲ್ಲಿನಲ್ಲಿದೆ, ಜಾಹೀರಾತು ಬಂದಾಗಲೂ ಬೇರೆ ಬದಲಾಯಿಸುತ್ತಿಲ್ಲ ಅವಳು. ಅವಳ ಗಮನ ಬೇರೆಲ್ಲೊ ಇರಬೇಕು ಅನಿಸಿತು. ಪೇಪರು ಆಕಡೆ ಬೀಸಾಕಿ. "ಎನ್ ಯೋಚಿಸ್ತಿದೀಯಾ" ಅಂದೆ. "ಆಂ" ಅಂತ ಅಂದವಳು ಯೋಚನೆಗಳಿಂದ ಹೊರಗೆ ಬಂದಳಂತೆ ಕಾಣುತ್ತೆ. "ಏನಿಲ್ಲ" ಅಂದ್ಲು. "ಹೇಳು, ನಂಗೊತ್ತು ಏನೊ ಯೋಚಿಸ್ತಿದೀಯಾ" ಅಂದೆ, "ಹೇಳಿದ್ರೆ ಅದಕ್ಕೂ ಒಂದು ಥಟ ಅಂತ ಉತ್ತರ ಹೇಳಿ ಬಾಯಿ ಮುಚ್ಚಿಸಿಬಿಡ್ತೀರ" ಅಂತ ಆರೋಪಿಸಿದಳು. ನಾ ಮತ್ತೆ ಮಾತಾಡಲಿಲ್ಲ.
ಅವಳ ಯೋಚನೆಗಳೆಲ್ಲಾ, ನನ್ನ ತಲೆ ತುಂಬಾ ತುಂಬಿ ಬಿಟ್ಟಿತ್ತು, ನಿಜವಾಗ್ಲೂ ಹಾಗೆ ಮಾಡ್ತೀನ, ನನ್ನ ಹತ್ರ ಅಷ್ಟೊಂದು ಉತ್ತರಗಳಿವೆಯಾ, ಮತ್ತೆ ಪ್ರಶ್ನೆ ಕೇಳಿದ್ರೆ ಉತ್ತರ, ತೊಂದ್ರೆ ಹೇಳಿದಮೇಲೆ ಸಲಹೆ ಕೊಡೋದು ತಪ್ಪಾ! ಯೋಚಿಸ್ತಾನೇ ಇದ್ದೆ. ಅಂಗಾತ ಮಲಗಿ ಟೀವೀ ನೊಡುತ್ತಿದ್ದವಳು, ಬೋರಲಾಗಿ ಮೇಲೆ ಸರಿದು, ಹೊಟ್ಟೆ ಸುತ್ತ ಕೈ ಸುತ್ತಿ ಅವುಚಿಕೊಂಡು ಅಪ್ಪಿ ಮಲಗಿದ್ಲು, ಅವಳ ಜಡೆ ಕೈಯಲ್ಲಿ ತೆಗೆದುಕೊಂಡು ಅತ್ತಿತ್ತ ಬೀಸುತ್ತ ಇನ್ನೂ ಯೋಚನೆಗಳಲ್ಲೇ ಕುಳಿತೆ. ಬಹಳ ಹೊತ್ತು ಮಾತಿಲ್ಲದ್ದು ನೋಡಿ, "ರೀ ನಾ ಹಾಗಂದದ್ದಕ್ಕೆ ಬೇಜಾರಾಯ್ತಾ" ಅಂದ್ಲು, ಇಲ್ಲ ಅನ್ನುವಂತೆ ತಲೆ ಅಲ್ಲಾಡಿಸಿದೆ, ಬೊರಲಾಗಿ, ಮುಖ ನನ್ನ ಮಡಿಲಲ್ಲಿ ಮುಚ್ಚಿಕೊಂಡು ಮಲಗಿದ್ದವಳಿಗೆ ಕಾಣಿಸಿರಲಿಕ್ಕಿಲ್ಲ, ತಲೆ ಮೇಲೆತ್ತಿ ಮತ್ತೆ ಕೇಳಿದ್ಲು, ಮತ್ತೆ ತಲೆ ಆಲ್ಲಾಡಿಸಿದೆ, "ರೀ ಬಾಯಿ ಬಿಡಿ, ನಾನೇನು ಮಾತಾಡಲೇಬೇಡಿ ಅಂದ್ನಾ" ಅಂತದದ್ದಕ್ಕೆ ತಡವರಿಸಿ "ಇಲ್ಲ" ಅಂದೆ.
"ಮತ್ತೆ ಎನೊ ಯೋಚನೆ ಮಾಡ್ತಾ ಇದೀರ"
"ಇಲ್ಲ ಹಾಗೇನಿಲ್ಲ, ಈ ರಿಮೋಟ್ ನಲ್ಲಿ ಆಫ್ ಮಾಡೊ ಬಟನ್ನು ಯಾವ್ದು"
"ಅಷ್ಟೂ ಗೊತ್ತಿಲ್ವ, ಕೆಂಪು ಬಟನ್ನು" ಅಂದ್ಲು.
ಟೀವಿ ಆಫ್ ಮಾಡಿದೆ, ಗೊತ್ತಿದ್ದೂ ಗೊತ್ತಿದ್ದೂ ಆಫ್ ಬಟನ್ನು ಯಾವುದು ಅಂತ ಕೇಳಿದ್ದೆ, ಅವಳು ಥಟ ಅಂತ ಉತ್ತರ ಕೊಡ್ತಳಾ ಇಲ್ವಾ ಅಂತ ನೋಡೋಕೆ. "ನಿಜವಾಗ್ಲೂ ಹಾಗೆ ನಾನು ಯಾವಾಗ್ಲೂ ಮಾಡ್ತೀನಾ, ಪ್ರಶ್ನೆ ಕೇಳಿದ್ರೆ ಉತ್ತರ ಹೇಳೊದು ತಪ್ಪಾ, ಈಗ ನಾನು ಬಟನ್ನು ಯಾವ್ದು ಅಂತ ಕೇಳಿದ್ರೆ ನೀನು ಹೇಳಿದೆ" ಅಂತ ಅವಳನ್ನೇ ಕೇಳಿದೆ. "ರೀ ಅದೆಲ್ಲ ಏನಿಲ್ಲ ಬಿಟ್ ಹಾಕಿ ಸುಮ್ನೇ ಹೇಳಿದೆ" ಅಂದ್ಲು, "ಇಲ್ಲ, ನೀನೇನೊ ಮುಚ್ಚಿಡ್ತಾ ಇದೀಯಾ ಹೇಳು" ಅಂತ ಮತ್ತೆ ಕೆದಕಿದೆ, "ಸುಮ್ನೇ ಅಂದನಲ್ಲ" ಅಂತ ಮತ್ತೆ ಸಿಡುಕಿದ್ಲು, ನಾನೂ ಸುಮ್ಮನಾದೆ, ಅವಳ ಸರಿಸಿ ಎದ್ದು ಹೋಗಲು ನೋಡಿದೆ, ಬಿಡಲಿಲ್ಲ, ಮುಖ ಸಿಂಡರಿಸಿಕೊಂಡು ಸುಮ್ನೆ ಕೂತೆ, ಅವಳು ನನ್ನ ನೋಡಿದ್ರೂ, ಮತ್ತೆ ಪೇಪರು ಎತ್ತಿಕೊಂಡು ಕೂತೆ, ಈಗ ಹೇಳದಿದ್ರೆ ನಾನಿನ್ನು ಮಾತಾಡಲಿಕ್ಕಿಲ್ಲ ಅನಿಸಿರಬೇಕು ಅವಳಿಗೆ. "ನೀವ ಬೇಜಾರ ಮಾಡ್ಕೊಳ್ಳಲ್ಲ ಅಂದ್ರೆ ಹೇಳ್ತೀನಿ" ಅಂತಂದ್ಲು, ಪೇಪರು ಬೀಸಾಕಿ ಮೈಯೆಲ್ಲ ಕಿವಿಯಾಗಿಸಿಕೊಂಡು ಕೂತೆ".
"ಯಾವಾಗ್ಲೂ ಏನಾದ್ರೂ ಕೇಳಿದ್ರೆ, ಎಲ್ಲದಕ್ಕೂ ಉತ್ತರ ಹೇಳ್ಬೇಕು ಅಂತ ಇರಲ್ಲಾರೀ, ಕೆಲವೊಮ್ಮೆ ಬರೀ ಮನಸಿಲ್ಲಿರೋದನ್ನ ಹೇಳ್ಬೇಕು ಅಂತಿರತ್ತೆ, ಯಾರೊ ನಮ್ಮ ನೋವು ಕೇಳಲಿ ಅಂತ ಇರತ್ತೆ, ನಿಮ್ಮ ರೆಡಿಮೇಡ ಸೊಲುಶನ್ ಗಳು ಬೇಕಿರಲ್ಲ, ಸುಮ್ನೆ ಮಾತು ಕೇಳೋ ಕಿವಿ ಬೇಕಿರತ್ತೆ" ಅಂದ್ಲು, ಯಾಕೊ ತಿಳೀದವರ ಹಾಗೆ ಮುಖ ಮಾಡಿದ್ದೆ, ಮತ್ತೆ ಹೇಳತೊಡಗಿದ್ಲು "ತಿಳೀಲಿಲ್ವಾ, ಹೇಳ್ತೀನಿ ಕೇಳಿ ಈಗ ನನಗೆ ತಲೆ ನೋವಿದೆ ಅಂತ ಇಟ್ಕೊಳ್ಳಿ, ನಾನು ನಿಮ್ಮ ಹತ್ರ ಬಂದು ತಲೆ ನೋವಿದೆರೀ ಅಂದ್ರೆ, ಮಾತ್ರೆ ತುಗೊ ಎಲ್ಲ ಸರಿಯಾಗತ್ತೆ ಅಂತೀರಿ ಥಟ ಅಂತ!, ಆದ್ರೆ ಅದು ನಂಗೂ ಗೊತ್ತು, ಅದನ್ನ ನಿಮ್ಮಿಂದ ನಾನು ಕೇಳೊಕೆ ಅಂತ, ನಿಮ್ಮನ್ನ ಕೇಳಿಲ್ಲ, ನಿಮ್ಮ ಹತ್ರ ನನ್ನ ನೋವು ಹೇಳ್ಕೊಬೇಕು ಅಂತ ಆಸೆ ಇರತ್ತೆ, ಯಾರಾದ್ರೂ ನನ್ನ ನೋವು ಕೇಳಲಿ ಅಂತ ಅಷ್ಟೆ, ಅದನ್ನ ಕೇಳದೆ, ಸುಮ್ನೇ ಮಾತ್ರೆ ತುಗೊ ಅಂದ್ರೆ" ಅಂದ್ಲು "ಹಂ... ಮತ್ತೆ ಎನ್ ಮಾಡ್ಬೇಕು ಅಂತೀಯ" ಅಂದೆ, "ಏನೂ ಬೇಡ, ಸುಮ್ನೆ ಯಾಕೆ ಏನಾಯ್ತು, ಬಹಳ ನೋವಿದೆಯಾ, ಅಂತ ನಾಲ್ಕು ಸಾಂತ್ವನದ ಮಾತು ಸಾಕು, ಅದನ್ನೇ ಎದುರಿನ ವ್ಯಕ್ತಿ ನಿರೀಕ್ಷಿಸೋದು, ಇದೇ ಈಗ ನೋಡಿ, ತಲೆ ಕೂದಲು ಉದುರಿ ಬೀಳ್ತಾ ಇದೆ ನಿಮಗೆ, ಇನ್ನೊಂದಿಷ್ಟು ದಿನದಲ್ಲಿ ಬೋಡು ತಲೆ ಬಾಣಲಿ ಆಗೋದು ಗ್ಯಾರಂಟಿ, ಅದಕ್ಕೆ ನೀವು ಬಂದು ನನ್ನ ಹತ್ರ, ಕೇಳಿದ್ರೆ, ತಲೆಗೆ ಏಣ್ಣೆ ಸ್ನಾನ, ಶಾಂಪೂ ಹಾಕಿ ತೊಳೀರೀ ಹೊಟ್ಟು ಆಗಿರಬೇಕು, ಟೆನ್ಷನ ಸ್ವಲ್ಪ ಕಡಿಮೆ ಮಾಡ್ಕೋಳ್ಳಿ ಅಂತ ಉಪದೇಶ್ ಕೊಟ್ರೆ!?. ಅದು ನಿಮಗೂ ಗೊತ್ತಿದೆ, ಅದನ್ನ ನೀವು ಮಾಡ್ತಾ ಇದೀರಿ, ಅದೇ ಬದಲಿಗೆ, ರೀ ಯಾವಾಗಿಂದ ಹೀಗೆ ಆಗ್ತಿದೆ? ಅಂತ ವಾಪಸ್ಸು ಕೇಳಿ, ಕೂದಲೇನು ಬಿಡ್ರೀ, ನೀವು ಹೇಗಿದ್ರೂ ಚೆನ್ನಾಗಿ ಕಾಣ್ತೀರಿ ಅಂತ, ಸ್ವಲ್ಪ ಉಬ್ಬಿಸಿ, ಆ ಮೇಲೆ, ಏನೇನು ಉಪಚಾರ ಪ್ರಯತ್ನ ಮಾಡೀದೀರಾ ಅದಕ್ಕೆ, ಅಂತ ಕೇಳಿ ಆಮೇಲೆ ನನ್ನ ಸಲಹೆ ಅಂತ ಕೊಟ್ರೆ ಅದು ಚೆನ್ನಾಗಿರತ್ತಲ್ವಾ" ಅಂದ್ಲು ಭಲೇ ಕಿಲಾಡಿ ಇವಳು, ಅಲ್ಲಾ ಎನೇನು ತಿಳೀದುಕೊಂಡೀದಾಳೆ ಅಂತೀನಿ, ನನಗೆ ನನ್ನವಳ ಬಗ್ಗೆ ವಿಚಿತ್ರ ಹೆಮ್ಮೆಯುಂಟಾಯಿತು. "ಸೂಪರ್, ಅಲ್ಲ ಇದೆಲ್ಲ ಹೇಗೇ ತಿಳೀತು ನಿಂಗೆ" ಅಂದೆ "ನಿಮ್ಮ್ ಥಟ ಅಂತ ಉತ್ತರ ಕೇಳಿ, ಕೇಳಿ ಆದ, ಅನುಭವ" ಅಂದ್ಲು. "ಅಂದಹಾಗೆ ನಾನೇನು, ಬಾಣಲಿ ಆಗಲ್ಲ" ಅಂದೆ "ಆದ್ರೂ ನೀವು ನಂಗೆ ಚೆನ್ನಾಗೇ ಕಾಣ್ತೀರಾ" ಅಂದ್ಲು, ಮುಗುಳ್ನಕ್ಕೆ.
"ಮೊದಲೇ ಹೇಳೊದು ತಾನೆ" ಅಂದೆ "ಹೇಳ್ಬೇಕು ಅನ್ಕೊಂಡೆ ಬಹಳ ಸಾರಿ, ಅಂದು ಮದುವೆಲಾದದ್ದು ನೆನಪಿದೆಯಾ, ನಾನು ನನ್ನ ಗೆಳತಿ ಮಾತಾಡ್ತಾ ನಿಂತಿದ್ವಿ, ಅವಳು ನಂಗೆ ಶೀತ ಆಗಿದೆ ಕಣೇ ಅಂತ ಹೇಳ್ತಿದ್ದಂಗೆ, ಮಾತ್ರೆ ತುಗೊಳ್ಳಿ ಡಿ-ಕೊಲ್ಡ ಚೆನ್ನಾಗಿರತ್ತೆ ಅಂತ ಥಟ ಅಂತ ಉತ್ತರದೊಂದಿಗೆ ನಡುವೆ ಬಾಯಿ ಹಾಕಿದ್ರಿ, ಅವಳು ಕೊಟ್ಟ ಉತ್ತರ ನೆನಪಿದೆ ತಾನೆ" ಅಂದ್ಲು "ಹೂಂ ಅದಹೇಗೆ ಮರೆಯೋಕಾಗತ್ತೆ 'ನಾನು ಡಾಕ್ಟರು ನಂಗೊತ್ತಿದೆ' ಅಂತಂದಿದ್ಲು, ಡಾಕ್ಟರಿಗೆ ಮಾತ್ರೆ ಹೇಳಿದ್ದೆ ನಾ" ಅಂತ ನಕ್ಕೆ..."ನಂಗೆಷ್ಟು ಮುಜುಗರ ಆಗಿತ್ತು ಗೊತ್ತಾ, ಅಂದೇ ಹೇಳಬೇಕೆಂದಿದ್ದೆ, ಅದ್ರೆ ಹೇಳ್ಲಿಲ್ಲ" ಅಂದ್ಲು. "ಎಲ್ಲಿದಾಳೆ ಅವಳು ಈಗ" ಅಂದೆ, "ಯಾಕೆ ಮಾತ್ರೆ ತುಗೊಂಡ್ಲಾ ಇಲ್ಲಾ, ಅಂತ ಕೇಳ್ಬೇಕಿತ್ತಾ" ಅಂತ ರೇಗಿದಳು.
"ಮೊನ್ನೆ ತಾನೆ ಅತ್ತೆ ಮಾವ ಬಂದಿದ್ರಲ್ಲ ಅದೇ ನಿಮಗೆ ಆಕ್ಸಿಡೆಂಟ್ ಆದಾಗ, ಊರಿಂದ ಇಲ್ಲೀವರೆಗೆ ಕೊನೇ ಸೀಟ್ನಲ್ಲಿ ಕೂತು ಮೈಕೈ ನೋವು ಅಂತಿದ್ರೆ, ನೀವು 'ಸ್ಲೀಪರನಲ್ಲಿ ಬರೋದು ತಾನೆ, ರೆಸ್ಟ ತುಗೊಳ್ಳಿ ಸರಿ ಹೋಗತ್ತೆ' ಅಂದಿದ್ರಿ. ಅವರೇನು ಬೇಕು ಅಂತ ಲಾಸ್ಟ ಸೀಟಲ್ಲಿ ಕೂತು ಬಂದಿದ್ರಾ, ರೆಸ್ಟ ಕೂಡ ತುಗೊಂಡಿದ್ರೂ, ನೀವೆನು ಅದೇ ನಿಮ್ಮ ರೆಡಿಮೇಡ ಉತ್ತರಗಳ ಬುಟ್ಟಿಯಿಂದ ಎರಡು ಉತ್ತರ ತೆಗೆದು ಹಲ್ಲು ಕಿರಿದಿದ್ರಿ" ಅಂತ ಚೆನ್ನಾಗೆ ತರಾಟೆಗೆ ತೆಗೆದುಕೊಂಡ್ಲು, "ಅಲ್ಲಾ ಸ್ಲೀಪರ ತುಗೊಬೇಕಿತ್ತು ಅಂತ ಹೇಳಿದ್ದು ತಪ್ಪಾ" ಅಂದೆ, "ರೀ ಸ್ಲೀಪರ್ ಸಿಕ್ಕಿರಲಿಲ್ಲ, ಆದ್ರೂ ನಿಮಗೆ ಆಕ್ಸಿಡೆಂಟ್ ಆಗಿ ಏನಾಯ್ತೊ ಅಂತ ನೋಡ್ಲಿಕ್ಕೆ ಓಡೋಡಿ ಬಂದಿದ್ರು, ಅದಕ್ಕೆ ಪ್ರತಿಯಾಗೆ, ಆ ನೋವು ನಿಮ್ಮೊಂದಿಗೆ ಹಂಚಿಕೊಂಡು ನಾಲ್ಕು ಮಾತಾಡ ಬಯಸಿದ್ರೆ, ನಿಮ್ಮ ಥಟ ಅಂತ ಹೇಳಿ ಉತ್ತರಗಳು" ಅಂದ್ಲು "ಅಯ್ಯೊ ನಾನ್ ಹಾಗೆ ಮಾತಾಡಬಾರ್ದಿತು ಎನ್ ಅನ್ಕೊಂಡ್ರೊ ಏನೊ" ಅಂದೆ "ಏನೂ ಇಲ್ಲಾ, ನಾನಿದ್ನಲ್ಲಾ, ಎಲ್ಲ ಕೇಳಿದೆ, ಅವರು ಎಷ್ಟೇ ಕಷ್ಟ ಆದ್ರೂ ಬಂದಿರೋರು, ಅದನ್ನ ನಿಮಗೆ ಹೇಳಬಯಸಿದ್ದರು ಅಷ್ಟೇ" ಅಂದ್ಲು. "ಅಂತೂ ಸೂಪರ್ ಸೊಸೆ ಅಂತ ಒಳ್ಳೇ ಛಾಪು ಮೂಡಿಸಿದೆ ಅನ್ನು" ಅಂದೆ. "ನಿನ್ನೆ ನಿಮ್ಮ ತಂಗಿ ಫೋನು ಮಾಡಿದ್ಳಲ್ಲ, ಹಾಸ್ಟೆಲ್ನಲ್ಲಿ ಅಡಿಗೆ ಸರಿ ಮಾಡ್ತಿಲ್ಲಾ ಅಂತ, 'ಹೊಟೆಲಗೆ ಹೋಗು' ಅಂತ ನಿಮ್ಮ ಪುಕ್ಕಟೆ ಸಲಹೆ, ಆಮೇಲೆ ನಾ ರಾತ್ರಿ ಫೋನು ಮಾಡಿ ಘಂಟೆ ಕಾಲ ಮಾತಾಡಿದೆ, ಅಲ್ಲಿನ ಅಡುಗೆ, ಅದತಿಂದು ಹೊಟ್ಟೆ ಕೆಟ್ಟಿದ್ದು ಎಲ್ಲಾ, ಫೋನಿಡೊವಾಗ, ಅವಳೇ ಹೇಳಿದ್ಲು, 'ಏನ್ ಅತ್ತಿಗೆ ಇನ್ನೊಂದು ವರ್ಷ ಹೇಗೊ ಕಳೆದು ಹೋಗುತ್ತೆ, ಅಲ್ಲದೇ ಯಾವ ಹಾಸ್ಟೆಲನಲ್ಲಿ ಅಷ್ಟು ಚೆನ್ನಾಗಿ ಊಟ ಸಿಗುತ್ತೆ, ಅದಕ್ಕೆ ಆವಾಗಾವಾಗ ಸ್ವಲ್ಪ ಬದಲಾವಣೆ ಅಂತ ಹೊಟೇಲಿಗೆ ಹೋಗ್ತೀನಿ' ಅಂತ, ಅಲ್ಲಿ ನಿಮ್ಮ ಹೊಟೆಲಿನ ಸಲಹೆ ಅವಳಿಗೆ ಬೇಕಿರಲಿಲ್ಲರೀ, ಅಲ್ಲಿರೊ ಕಷ್ಟ ಯಾರಿಗಾದ್ರೂ ಹೇಳ್ಕೊಬೇಕು ಅಂತಿತ್ತು" ಅಂದ್ಲು. ಹೀಗೆ ಒಂದೊಂದೇ ಘಟನೆ ಪುರಾವೆ ಸಮೇತ ಅವಳು ಹೊರಗೆ ತೆಗೀತಾ ಇದ್ರೆ, ನನ್ನ ತಪ್ಪುಗಳು ನನಗೆ ಗೊತ್ತಾಗ್ತಾ ಇದ್ವು. ಹಗರಣ ಹೊರಬಂದ ರಾಜಕಾರಣಿಯಂತೆ ಹತಾಶನಾಗಿದ್ದೆ, "ನಂಗೆ ಮೊದ್ಲಿಂದಾನೂ ಅಷ್ಟೆ, ಶಾಲೇಲಿ ಕೂಡ ನಾ ಮೊದಲು ತಾ ಮೊದಲು ಅಂತ ಪ್ರಶ್ನೆಗೆ ಉತ್ತರ ಹೇಳ್ತಾ ಇದ್ದೆ, ಅದೇ ರೂಢಿ, ಕೇಳಬೇಕು ಅಂತ ಯಾವಾಗ್ಲೂ ಅನಿಸಿರಲಿಲ್ಲ, ಈಗ ನೀ ಹೇಳಿದಾಗಲೇ ಗೊತ್ತಾಗಿದ್ದು" ಅಂತಂದೆ, "ರೀ ಸಪ್ಪೆ ಮುಖ ಯಾಕೆ ಮಾಡಿದ್ರಿ, ಯಾರು ತಪ್ಪು ಮಾಡಲ್ಲ, ನನ್ನ ಎಷ್ಟೊ ತಪ್ಪು ನೀವು ತಿದ್ದಿಲ್ವಾ" ಅಂದು ಹೊಟ್ಟೆಗೆ ಕಚಗುಳಿಯಿಟ್ಟು ನಗಿಸಿದ್ಲು. "ಹೋದ ಜನ್ಮದಲ್ಲಿ ಲಾಯರ(ವಕೀಲ) ಎನಾದ್ರೂ ಆಗಿದ್ಯಾ, ಅಧಾರ ಸಮೇತ ಎಲ್ಲವಾದ ಮಂಡಿಸಿ ಸೋಲಿಸಿ ಬಿಡ್ತೀಯ" ಅಂದೆ "ಎಲ್ಲಾ ನಿಮ್ಮಂಥ ಲೈಯರ್(ಸುಳ್ಳುಗಾರ) ಗಂಡ ಸಿಕ್ಕ ಮೇಲೆ ಕಲಿತದ್ದು" ಅಂದ್ಲು, "ನಾನ್ಯಾವಾಗ್ಲೇ ಸುಳ್ಳು ಹೇಳಿದೆ" ಅಂತ ಕೇಳಬೇಕೆನಿಸಿತು, ಆದ್ರೆ ಇನ್ನೊಂದು ಕಂತೆ ತಪ್ಪುಗಳನ್ನು ಎಲ್ಲಾದ್ರೂ ಹೊರತೆಗೆದಾಳು ಅಂತ ಸುಮ್ಮನಾದೆ.
ಯೋಚನೆ ಮಾಡಿ ಎಷ್ಟು ಸಾರಿ, ಹೀಗೆ ಮಾಡಿಲ್ಲ, ಗೆಳೆಯ ಫೋನು ಮಾಡಿ ಬೈಕು ಕಳೆದುಹೊಯ್ತೋ, ಅಂದ್ರೆ ಪೋಲೀಸ ಕಂಪ್ಲೇಂಟ ಕೊಡೊ ಅಂತೀವೆ, ಅದನ್ನ ಅವ ಆಗ್ಲೇ ಮಾಡಿರ್ತಾನೆ, ಟ್ರೇನ ಮಿಸ್ಸ ಆಯ್ತೊ ಅಂದ್ರೆ ಬೇಗ ಹೊಗಬೇಕಿತ್ತು, ಅಂತೀವಿ, ಅವರೂ ಪ್ರಯತ್ನ ಮಾಡಿರ್ತಾರೆ ಆಗಿರಲ್ಲ, ಗಂಡ ಮನೆಗೆ ಲೇಟಾಗಿ ಬಂದು, ಆಫೀಸಲ್ಲಿ ಕತ್ತೆ ಥರ ಕೆಲ್ಸಾ ಮಾಡಿ ಬಂದ್ರೆ ಈ ಬಸ್ಸು ಬೇರೆ ರಶು ಸಾಕಾಗಿದೆ ಎನ್ ಮಾಡ್ಲಿ ಅಂದ್ರೆ, ಹೇಂಡ್ತಿ ಥಟ್ ಅಂತ ಬೈಕು ತುಗೊಂಡು ಹೋಗಿ, ಅಂದ್ರೆ, ಅದು ಅವನಿಗೂ ಗೊತ್ತು, ಗ್ಯಾಸ ತೀರಿ ಹೋಗಿ ಸ್ಟವ್ ಮೇಲೆ ಅಡುಗೆ ಮಾಡಿ ಸಾಕಾಯ್ತು ಅಂತ ಅವಳು ಹೇಳಿದ್ದಕ್ಕೆ, ಮೊದಲೇ ಗ್ಯಾಸ್ಗೆ ಬುಕ್ ಮಾಡಬೇಕಿತ್ತು ಅಂದ್ರೆ. ಅಲ್ಲಿ ಯಾರಿಗೂ ಸಲಹೆ ಅಥವಾ ಉತ್ತರ ಬೇಕಿಲ್ಲ, ಬೇಕಿರೋದು ಕೇಳೊ ಕಿವಿಗಳು ಮಾತ್ರ.
ಸಂಜೆ ಊರಿಗೆ ಫೋನು ಮಾಡಿ ಘಂಟೆ ಮೇಲೆ ಮಾತಾಡಿದೆ, ಏನೊ ಮನಸ್ಸಿಗೆ ಶಾಂತಿ ಅನಿಸಿತು, ಫೋನು ಬಿಲ್ಲು ಬಂದಾಗ ಸ್ವಲ್ಪ ಅಶಾಂತಿ ಆಗಬಹುದು, ಆದರೆ ಇಂಥ ಸಂಭಾಷಣೆಗೆ ಆ ಬೆಲೆ ಇನ್ನೂ ಕಮ್ಮಿಯೇ ಅನಿಸಿಬಿಡುತ್ತದೆ, ಹೀಗೆ ಎನೊ ಮತ್ತೆ ಥಟ ಅಂತ ಹೇಳ್ತಾ, ಅಲ್ಲಲ್ಲ ನಿಮ್ಮಿಂದ ಕೇಳ್ತಾ ಕೂಡ ಮತ್ತೆ ಸಿಕ್ತೀನಿ... ನಿಮಗೇನನ್ನಿಸಿತೊ ಹೇಳಿ ನಾನು ಕೇಳ್ತೀನಿ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/that-amta.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
27 comments:
ಪ್ರಭು, ನನಗಂತೂ ನಿಮ್ಮ Someಭಾಷಣೆ ಬಹಳೇ ಹಿಡಿಸುತ್ತೇರೀ...
ನನಗೆ ಒಂದು ಥಟ್ ಅಂತ ಹೇಳ್ಬೇಕು...ಪ್ರತ್ಯಕ್ಷ ಇಲ್ಲ ಅನ್ದ್ಕೊಂಡು ನಿಧಾನವಾಗಿ ಹೇಳಬೇಡಿ. ಓಕೆ...
ಹೇಳಿ...ನಿಮಗೆ ಮದುವೆಯಾಗಿದೆಯಾ?
ಇದ್ದರೆ ಶ್ರೀಮತಿಯವರು ಕಾರ್ಯವಾಹಕ ಗೃಹಿಣಿಯೇ?
ಇಲ್ಲದಿದ್ದರೇ .ಹೇಗೆ ಇಷ್ಟೊಂದು ಮನಮುಟ್ಟುವ ಸತಿ-ಪತಿ ಸಲ್ಲಾಪ ವಿವರಣೇ ಸಾಧ್ಯ....simply amazing...
ನನಗೆ ಮುದ್ದಣ-ಮನೋರಮೆಯರ ಸಲ್ಲಾಪ ನಮ್ಮ ಹೈಸ್ಕೂಲಿನ ಪಠ್ಯವಸ್ತು ನೆನಪಿಗೆ ಬರುತ್ತೆ...
ಜಲನಯನ ಅವರಿಗೆ:
ಥಟ ಅಂತ ಹೇಳ್ತೀನಿ ಕೇಳಿ "ಇಲ್ಲ"!!!
ನನಗೆ ಪತ್ನಿ ಇದ್ದರೆ, ನಾನು ಹೀಗೆ ಮಾಡಿದರೆ ಅವಳು ಹೇಗೆ ಬಯ್ಯುತ್ತಿದ್ಲು, ನಾನು ಅವಳನ್ನು ಹೇಗೆ ತರಲೆ ಮಾಡಿ ಕಾಡುತ್ತಿದ್ದೆ ಅಂತ ಸ್ವಲ್ಪ ಕಲ್ಪಿಸಿಕೊಳ್ಳುತ್ತೇನೆ, ಅದನ್ನೆ ಬರೆಯುತ್ತೇನೆ. ನಾಳೆ ನನ್ನಾಕೆಯಾಗುವವಳು ಇದನ್ನೆಲ್ಲ ಓದಿ ಹೀಗೆ ನನ್ನೊಂದಿಗೆ ಇದ್ದಾಳು ಅನ್ನೂ ಒಂದು ಚಿಕ್ಕ ಆಸೆಗೆ... ಅದರೂ ಇನ್ನೂ ಬರಹದಲ್ಲಿ ಹಿಡಿತ ಬಂದಿಲ್ಲ, ನನ್ನ ಪ್ರಯತ್ನ ನಾನು ಮಾಡುತ್ತಲೆ ಇದ್ದೇನೆ ನಿಮ್ಮ ಸಲಹೆಗಳು ಬರುತ್ತಿರಲಿ.
ಪ್ರಭು,
ನಾಳೆ ನಿಮ್ಮನ್ನು ಮದುವೆಯಾದ ಹುಡುಗಿ ನಿಮ್ಮ ಈ ಬರಹಗಳನ್ನು ಓದಿದರೆ ಖಂಡಿತ ಕೇಳ್ತಾರೆ ನಿಮಗಿದು ಮೊದಲನೇ ಮದುವೇನ ಅಂತ, ಇದನ್ನು ಓದುತ್ತಾ ಹೋದಾಗ ಎಲ್ಲೂ ಅವಿವಾಹಿತನ ಬರಹ ಅಂತ ಅನ್ಸೋದೆ ಇಲ್ಲ. ಸಕತ್ತಾಗಿರುತ್ತೆ ಓದೋದುಕ್ಕೆ ನಿಮ್ಮ ಬರಹಗಳು. ಆದರು ಒಂದು ಪ್ರಶ್ನೆ ಕಾಡುತ್ತೆ ಇಂತಹ ಹುಡುಗಿಯರು ಸಿಕ್ತಾರ, ಅಥವಾ ಇದು ಕಲ್ಪನೆಯಲ್ಲಿ ಮಾತ್ರಾನ ಅಂತ?
Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ: ನನಗೂ ಅದೇ ಹೆದರಿಕೆ ಇದೆ, ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ಲದಿರುವವಳು ನನ್ನ ಜತೆಯಾಗುವುದೂ ಬೇಡ... ಇಂಥ ಹುಡುಗೀರೂ ಸಿಕ್ತಾರೆ ಸರ್, ಸ್ವಲ್ಪ ಅದೃಷ್ಟ ಬೇಕು, ನಾನು ಸುಮ್ನೇ ಹೇಳ್ತಿಲ್ಲ, ನನಗೆ ಏಷ್ಟೊ ಜನ ಈ ಮೇಲ ಮಾಡಿದ್ದಾರೆ ಅವರ ಜೀವನ ಹೀಗೇ ಇದೆ ಅಂತ(ಕಮೇಂಟು ಬರೆಯಲು ಮುಜುಗರವಾಗಿ)... ಅಲ್ಲದೇ ಈ ಲೇಖನಗಳಲ್ಲಿ ಬರೋ "ನಾನು"(ಅದು ನಿಜವಾದ ನಾನಲ್ಲ) ಅನ್ನೊ ಪಾತ್ರದ ಥರ ಪತಿಯಾಗಲೂ ಪ್ರಯತ್ನಿಸಿದರೆ, ಪತ್ನಿ ಹಾಗೇ ಸಿಗಬಹುದು... ನಾನಂತೂ ಎಲ್ಲ ಲೇಖನಗಳ ಓದಲು ಅಮ್ಮನಿಗೆ ಕೊಟ್ಟಿದ್ದೇನೆ, ಅಂತ ಸೊಸೆ ಸಿಕ್ರೆ ಹುಡುಕು ಅಂತ.. ;) ಇದನ್ನೆಲ್ಲಾ ಓದಿದ ಹುಡುಗಿ ಹೀಗೆ ಇರಲಿಕ್ಕೆ ಪ್ರಯತ್ನಿಸ್ತಾಳೆ ಬಿಡು ಅಂತ ಅವರೂ ಹಾರೈಸಿದ್ದಾರೆ...ಅಷ್ಟು ಸಾಕಲ್ಲವೇ ಸಧ್ಯಕ್ಕೆ...
ಸಕತ್ತಾಗಿ ಬರೀತೀರಿ ಪ್ರಭು,
ಒಳ್ಳೆ ಮನಸ್ಸಿನ ನಿಮಗೆ ಒಳ್ಳೆ ಹೆಂಡತಿ ಸಿಗುತ್ತಾರೆ ಬಿಡಿ. ಕೇಳುವ ಕಿವಿಗಾಗಿಯೇ ಎಷ್ಟೊಂದು ಬಾರಿ ಸಮಸ್ಯೆ ಹೇಳಲು ಬಯಸುತ್ತೇವೆ ಮತ್ತು ನಮಗೆ ಹೆಳುವವರೂ ಆಶಿಸುತ್ತಾರೆ. ಈ ಸೂಕ್ಷ್ಮ ವಿಚಾರ ನವಿರಾಗಿ ಬರೆದಿರುವಿರಿ.
ನಿಜ ಪ್ರಭು ಅವರೇ. ನಾನೂ ಎಷ್ಟೊಂದ್ ಸರ್ತಿ ಹೀಗೇ ಮಾಡ್ತೇನೆ ಅಂತ ಯೋಚಿಸ್ತಾ ಇದ್ದೀನಿ.
ಬರಹ ಎಂದಿನಂತೆ ಚೆನ್ನಾಗಿದೆ.
ಪ್ರಭು
ನೀವು ಸ್ವತಹ ಅನುಭವಿಸಿ ಬರೆದ೦ತೆ ಬರೆವ ನಿಮ್ಮ ಕಥಾನಕದ ಓಘ ವನ್ನು ಗಮನಿಸಿದಾಗ ನಿಮಗೆ ಮದುವೆ ಆಗಿಲ್ಲ ಎ೦ದು ನ೦ಬುವುದಕ್ಕೇ ಅಸಾಧ್ಯವೆನಿಸುತ್ತದೆ. ಮದುವೆ ಆಗದೆ ಇದ್ರೂ, ನಿಮಗೆ "ಅನುಭವ" ಚೆನ್ನಾಗಿದೆ. ನೀವು ಬರೆಯುವ ಕಾಲ್ಪನಿಕ ಸತಿ-ಪತಿ ಸಲ್ಲಾಪ ಗಳು ಅದೆಷ್ಟು ಚೆನ್ನಾಗಿವೆಯೆ೦ದರೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಪ್ರಭು,
ನೀವೇನು ನಮಗೆಲ್ಲ ಫೂಲ್ ಮಾಡ್ತಿಲ್ಲ ತಾನೆ.. ಏನ್ರಿ ನೀವು ಇಷ್ಟು ಚೆನ್ನಾಗಿ ಸತಿ ಪತಿ ಕಾನ್ವರ್ಸೆಶನ್ ಬರಿತಿರ? ನಿಜವಾಗ್ಲೂ ನಿಮ್ಮ ಹೆಂಡ್ತಿ ತಲೆ ಕೆಡಿಸ್ಕೊತಾರೆ.. ಹುಷಾರು.... ತುಂಬಾ ಚೆನ್ನಾಗಿದೆ....... ನಿಜ ಯಾವಾಗಲು ಸಲಹೆ ಕೊಡಬಾರದು... ಸಲಹೆಗಿಂತ ಸಾಂತ್ವಾನ ಒಳ್ಳೇದು... ಅದನ್ನೇ ಎಲ್ರೂ ಎದುರು ನೋಡೋದು....
ಹೇಮಾ
ಪ್ರಭು,
ಥಟ್ ಅಂತ ಹೇಳ್ಳಾ? ಬೇಡ ಬಿಡಿ, ನಿಮಗೆ ಅದು ಗೊತ್ತಿದ್ದದ್ದೇ!
ಪ್ರಭು
ಈ ಸಲದ ವಿಷಯ ತುಂಬಾ ಚೆನ್ನಾಗಿದೆ.
ಮನ ಮುಟ್ಟುವಂತೆ . ನಿಜ ಎಷ್ಟೋ ಸಲ ನಾನೂ ಹೇಳುವ ದನಿಗೆ ಕಿವಿಯಾಗದೆ ಬದಲಿ ಬಾಯಿಯಾಗಿದ್ದೇನೆ. ಆದರೆ ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ಅದೇ ಬೇರೊಬ್ಬರು (ಆತ್ಮೀಯರು) ನೀವು ಹೇಳಿದ ಹಾಗೆ ಥಟ್ ಎಂದು ಒಂದು ಸಲಹೆ ಕೊಟ್ಟಾಗ ಬೇಸರ ಆಗುತ್ತದೆ
ಚೆನ್ನಾಗಿದೆ.
ಹಾಸ್ಯದ ಜೊತೆಗೆ ಒಂದಷ್ಟು ಚಿಂತನೆಗೂ ಹತ್ತಿಸುತ್ತದೆ ನಿಮ್ಮ I someಭಾಷಣೆ(I for imaginary).
ಪ್ರಭು ಅವರೇ, ಇದನ್ನು ಓದಿದ ಮೇಲೆ ನಾನು ಕೂಡ ಹಾಗೆ ಅನ್ನಿಸ್ತು. ಮನೇಲಿ ಒಂದೇ ಅಲ್ಲ. ಆಫೀಸ್ ನಲ್ಲಿ ಕೂಡ ಅಷ್ಟೇ. ತಕ್ಷಣ ರಿಪ್ಲೈ ಕೊಟ್ಟು ಬಿಡೋದು.
ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿ ಬರುತ್ತಾ ಇದೆ. ಇಗಿನ ನಿಮ್ಮ ಬರಹದ ವಿಚಾರ ತುಂಬ ಸೂಕ್ಷ್ಮ, ಅದನ್ನು ಅತ್ಯಂತ ಸುಂದರವಾಗಿ ಹೃದಯ ಸ್ಪರ್ಶಿಯಾಗಿ ಬರೆದಿದ್ದೀರಿ.
ಆಮೇಲೆ ನಿಮಗೆ ತುಂಬ ಭಯಂಕರ ಒಳ್ಳೆ ಹೆಂಡತಿ ಸಿಗಲಿ ಎಂದು ಹಾರೈಸುವೆ!!!
ಮಲ್ಲಿಕಾರ್ಜುನ.ಡಿ.ಜಿ.ಅವರಿಗೆ
ನೋಡೋಣ ನಿಮ್ಮ ಹಾರೈಕೆಯೇ ನನ್ನಾಸೆ, ನಾವೂ ಹಾಗೆ ಅಲ್ವೇ ಕೆಲವೊಮ್ಮೆ ಕೇಳುವ ಕಿವಿಗಳಿಗಾಗೆ ಹುಡುಕುತ್ತೇವೆ ಹಾಗೆ ಮತ್ತೊಬ್ಬರು ಕೂಡ ಅದೇ ನಮಗೆ ಗೊತ್ತಾಗಲ್ಲ.
ಜ್ಯೋತಿ ಅವರಿಗೆ
ನಮಗೆ ಗೊತ್ತಿಲ್ಲದೆ ಹೀಗೆ ಥಟ್ ಅಂತ ಉತ್ತರ ಹೇಳುತ್ತಿರುತ್ತೇವೆ, ಅದಕ್ಕೆ ಇನ್ಮೇಲೆ ಸ್ವಲ್ಪ ಯೋಚಿಸಿ ಉತ್ತರಿಸೋಣ ಅಂತ ಇದ್ದೀನಿ, ನನ್ನಾಕೆ ಹೆಲ್ಪ್ ಮಾಡ್ತಾಳಲ್ಲ..
PARAANJAPE K.N. ಅವರಿಗೆ
ಮದುವೆ ಆಗಿಲ್ಲ ಸರ್ ನಿಜವಾಗಲೂ, ಎಲ್ರಿಗೂ ಹೀಗೆ ಸಂಶಯವಾಗಿ ಬಿಡುವಂತೆ ಆಗುತ್ತದೆ, ಇನ್ನೂ ಕೆಲವರು ನಾನು ಹೇಳಿದರೂ ನಂಬಲು ಸಿಧ್ಧರಿಲ್ಲ!... ಕಲ್ಪನೆಗಳೇ ಹಾಗೆ ಅಲ್ವೇ ವಾಸ್ತವಕ್ಕಿಂತ ಸುಂದರ ಅದಕ್ಕೆ ಮತ್ತೆ ಮತ್ತೆ ಓದಬೇಕೆನಿಸಿರಬೇಕು.
ರಜನಿ. ಎಂ.ಜಿ ಅವರಿಗೆ
ಚೆನ್ನಾಗಿ ಹೇಳಿದ್ರಿ ನಾನ್ ಇಡೀ ಪೋಸ್ಟಿನಲ್ಲಿ ಹೇಳಿದ್ದು ಎರಡೇ ಸಾಲಿನಲ್ಲಿ..
maaya ಅವರಿಗೆ
ಇಲ್ಲಾರೀ ನಿಜವಾಗಲೂ ನಿಮ್ಮನ್ನು ಫೂಲ ಅಂತೂ ಮಾಡ್ತಿಲ್ಲ, ನನ್ನ ಕಲ್ಪನೆಗಳೇ ಹುಚ್ಚು.. ಥಟ್ಅಂತ ಸಲಹೆ ಎಲ್ರಿಗೂ ಬೇಕಿಲ್ಲ (ಕೆಲವು ಸಾರಿ ಕೆಲವರಿಗೆ ಬಿಟ್ಟು) ಅನ್ನೋದು ನಿಜ.
sunaath ಅವರಿಗೆ
ನಿಮ್ಮ ಕಮೆಂಟು ಸೂಪರ್ ಸರ್, ಹೇಳಿ ಸರ್ ನಾನ್ ಸುಮ್ನೆ ಕೇಳ್ತೀನಿ...
ರೂಪಾ ಅವರಿಗೆ
ಕರೆಕ್ಟು , ನಾವು ಹಾಗೆ ಮಾಡಿದಾಗ ನಮಗೆ ಗೊತ್ತೇ ಆಗಲ್ಲ ಆದ್ರೆ ಅದೇ ಬೇರೊಬ್ಬರು ನಮಗೆ ಹಾಗೆ ಮಾಡಿದಾಗ ಗೊತ್ತಾಗಿ ಬೇಜಾರಾಗುತ್ತೆ.. ಮೊದ ಮೊದಲು ಬರೀ ಹಾಸ್ಯ ಬರೀತಾ ಇದ್ದೆ, ಈಗ ಸ್ವಲ್ಪ ಚಿಂತನೆಗೆ ಮೂಲವಾಗುವ ಹಾಗೆ ಬರೆಯೋ ಪ್ರಯತ್ನ ಮಾಡ್ತಾ ಇದ್ದೀನಿ. "I someಭಾಷಣೆ" ವರ್ಡ್ ಬಹಳ ಹಿಡಿಸಿತು.
ಬಾಲು ಅವರಿಗೆ
ಬಾಲು ಸರ್ ನಾನೂ ಹೀಗೆ ಮಾಡ್ತಿದ್ದೆ, ಇನ್ನು ಕಂಟ್ರೋಲ್ ಮಾಡೋಣ ಅಂತ ತೀರ್ಮಾನಿಸಿದ್ದೇನೆ. ಸ್ವಲ್ಪ್ ಬರವಣಿಗೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇನೆ ಅದಕ್ಕೆ ಭಿನ್ನ ಭಿನ್ನ ವಿಷಯಗಳ ಮೇಲೆ ಬರೆಯುತ್ತಿದ್ದೇನೆ, ನಿಮ್ಮ ಹಾರೈಕೆಗೆ ಧನ್ಯವಾದಗಳು
ತುಂಬಾ ಚನ್ನಾಗಿದೆ ಪ್ರಭು
ಪ್ರಭು,
ಮೊದಲ ಬಾರಿಗೆ ಸ್ವಲ್ಪ ಗಂಭೀರವಾಗಿ ಅದೇ ನವಿರು ಹಾಸ್ಯದಿಂದ ಲೇಖನದಲ್ಲಿ ಮನಸ್ಸಿಗೆ ತಟ್ಟುವಂತ ವಿಚಾರವನ್ನು ಹೇಳಿದ್ದೀರಿ...ಈಗ ಎಲ್ಲರಿಗೂ ಮನಸ್ಸಿಟ್ಟು ಕೇಳುವ ಕಿವಿ, ಮನಮಿಡಿಯುವ ಹೃದಯ ಬೇಕೇ ಬೇಕು. ಅದನ್ನು ಇಲ್ಲಿ ತುಂಬಾ ಚೆನ್ನಾಗಿ ಅನಾವರಣಗೊಳಿಸಿದ್ದೀರಿ...
ಧನ್ಯವಾದಗಳು.
ಒಳ್ಳೆಯ ಚಿಂತನಕಾರಿ ಬರಹ... ಮನಸ್ಸಿಗೆ ಹಿಡಿಸ್ತು..
ಈ ತರಹ ಯಥಾ ವತ್ತಾಗಿ ಗಂಡ ಹೆಂಡತಿಯರ ಬಗ್ಗೆ ಬರಿತಿರಲ್ಲ ನನಗ್ಯಾಕೋ ಡೌಟು.. ನೀವು bachelor ಅಂತ :)
ಶಿವಪ್ರಕಾಶ್ ಅವರಿಗೆ
ಥ್ಯಾಂಕ್ಸ್ ಶಿವಪ್ರಕಾಶ್
shivu ಅವರಿಗೆ
ಅದೇ ಬಹಳ ದಿನಗಳಿಂದ ಏನಾದರೂ ಬೇರೆ ಥರ ಬರೀಬೇಕು ಅಂತ ಪ್ರಯತ್ನ ಮಾಡ್ತಾ ಇದ್ದೆ, ಈ ಸಾರಿ ನನ್ನಾಕೆಯಿಂದ ನನಗೇ ಪಾಠ ಹೇಳಿಸಿಕೊಂಡೆ, ನಿಮಗಿಷ್ಟವಾಗಿದ್ದು ಕೇಳಿ ಖುಶಿ ಆಯ್ತು.
Raghavendra ಅವರಿಗೆ
ಡೌಟ ಎಲ್ಲಾ ಬೇಡ ಸರ್... ಇನ್ನನೂ ಮದುವೆ ಆಗಿಲ್ಲ... ಬರೀ ಕಲ್ಪನೆಗಳು ಅಷ್ಟೇ.. ನನ್ನಾಕೆಯಿದ್ರೆ ಹೇಗಿರಬೇಕು ಅನ್ನೋ ಕನಸುಗಳು..
ಹೌದು ಪ್ರಭು, ನೀವು ಹೇಳೋದು ನಿಜ. ಎಷ್ಟೋ ಸರ್ತಿ ಯಾರಾದ್ರೂ ನಂ ಹತ್ರ ಏನಾದ್ರೂ ಕಷ್ಟ ಹೇಳ್ಕೊಂಡ್ರೆ ಥಟ್ ಅಂತ ಅದಕ್ಕೊಂದು ಪರಿಹಾರ ಸೂಚಿಸಿ ಕೈ ತೊಳೆದುಕೊಂಡು ಬಿಡ್ತೀವಿ. ಅವರಿಗೆ ಬೇಕಿರೋದು ಪರಿಹಾರ ಅಲ್ಲ, ತಾಳ್ಮೆಯಿಂದ ಹೇಳಿದ್ದನ್ನು ಕೇಳಿ ನಾಲ್ಕು ತಂಪಾದ ಮಾತು ಆಡೊ ಮನಸ್ಸು ಅನ್ನೋದನ್ನ ಅರ್ಥಾ ನೇ ಮಾಡ್ಕೋಳೋದಿಲ್ಲ. ಹೀಗೆ ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದ್ರೆ ಮನೆ ನಂದನವನ ಅಲ್ವಾ..
ನಿಮ್ಮ ಕಥೇಲಿ ಬರೋ ಕಥಾನಾಯಕಿ ಒಂದು ಕಲ್ಪನೆ ಅಂತ ನಂಬುವುದೇ ಕಷ್ಟ; ಅಷ್ಟು ಚೆನ್ನಾಗಿ ಎಲ್ಲ ನಿಜವಾಗಿ ನಡೆಯಿತೇನೋ ಅನ್ನೋ ರೀತಿ ಬರೀತೀರಾ. ಗುಡ್ ಲಕ್.
ಉಮೇಶ ಬಾಳಿಕಾಯಿ ಅವರಿಗೆ
ಈ ರೀತಿ ಥಟ್ ಅಂತ ಪರಿಹಾರ ಸೂಚಿಸಿ ಬಿಡುವ ಚಾಳಿ ನನಗೂ ಇದೆ.. ಈಗ ಮಾತ್ರ ಉತ್ತರ ಕೊಡೊ ಮುಂಚೆ ನಾಲ್ಕು ಸಾರಿ ಯೋಚಿಸ್ತಿದೀನಿ.. ಹೀಗೆ ಅರ್ಥ ಮಾಡಿಕೊಂಡು ಜೀವನ ಸಾಗಿಸೋದು ಎಷ್ಟು ಚೆನ್ನಾಗಿರುತ್ತೆ ಅನ್ನೋದನ್ನ ತಿಳಿಸೋದೆ ನನ್ನ ಬ್ಲಾಗ ಪೋಸ್ಟಗಳ ಉದ್ದೇಶ , ನನ್ನಾಕೆ ಬರೀ ಒಂದು ಕಲ್ಪನೆ..ಸನ್ನಿವೇಶಗಳನ್ನು ಕಲ್ಪಿಸಿ ಅದರಲ್ಲಿ ಇದ್ದಂತೆ ಭಾವಿಸಿಕೊಂಡೆ ನಾನು ಬರೆಯೋದು ಅದಕ್ಕೆ ನಿಮಗೆ ಹಾಗನಿಸಿರಬಹುದು.. ಹೀಗೆ ಬರ್ತಾ ಇರಿ..
Simply Superb Prabhu
ಸಾಗರದಾಚೆಯ ಇಂಚರ ಅವರಿಗೆ
thank you sir, please keep visiting...
superb yaar.............write more.
naveen
ಸಿಂಪ್ಲಿ ಸೂಪರ್... ನೀವು ಹೇಳೋಧು ಅಕ್ಷರಸಹ ನಿಜ... ನಾವು ಗಂಡನಿಂದ ಸಾಂತ್ವನ ಬಯಸ್ತಾ ಇರ್ತಿವಿ.. ... ಆದರೆ ಎಲ್ಲ ಗಂಡಂದಿರಿಗೆ ಹೆಂಡತಿ ಹೇಳಿದ್ಧು ಸ್ವೀಕರಿಸೋ ಮನಸ್ಸು ಇರಲ್ಲ.. ಅವರಿಗೆ ಹೆಂಡತಿ ತನ್ನ ಬಗ್ಗೆ ಕಂಪ್ಲೇಂಟ್ ಮಾಡ್ತಾಳೆ, ತಾ ಹೇಗಿದಿನಿ ಹಾಗೆ ತನ್ನನ್ನು ಸ್ವಿಕರಿಸ್ತಿಲ್ಲ ಅನ್ನೋ ಫೀಲಿಂಗ್ ಬಂದು ಬಿಡತ್ತೆ...
ನಂಗೆ ನಿಮ್ಮ ಅರ್ತಿಕ್ಲೆ ಓದಾಕೆ ತುಂಬಾ ಎಸ್ಟ.... ಕೀಪ್ ರೈಟಿಂಗ್ .....
ನಾನೂ ರಾಜೇಶ್ ಮಂಜುನಾಥ್ ಹೇಳಿದಂಗೆ ಹೇಳೋಣ ಅಂದುಕೊಂಡೆ ಮಾರಾಯ್ರೆ..ಖಂಡಿತವಾಗಿಯೂ ಕೈಹಿಡಯೋ ಹುಡುಗಿ ಕೇಳೋ ಪ್ರಶ್ನೆಗಳಿಗೆ ಉತ್ತರಿಸಲು ರಿಹರ್ಸಲ್ ನಡೆಸೋದು ಒಳ್ಳೆದು!! ತುಂಬಾ ಚೆನ್ನಾಗಿದೆ ನಿಮ್ ಬರಹ...
ಒಂದಂತೂ ಸತ್ಯ..ಕಲ್ಪನೆಯಲ್ಲಿ ಕಟ್ಟುವ ಸಾಹಿತ್ಯ,,ನೈಜ ಬದುಕಲ್ಲಿ ಕಟ್ಟೋದು ಅಸಾಧ್ಯ ವಲ್ವಾ?
-ಧರಿತ್ರಿ
ನನ್ನ ಹೆಸರು ನವೀನ್ ಅವರಿಗೆ
Naveen, Keep visiting, lot more yet to come...
Shilpa Sooryanarayan ಅವರಿಗೆ
ಸಾಂತ್ವನದ ಬಯಕೆ ಇರತ್ತೆ ಆದರೆ ಅದನ್ನ ಎದುರಿನವರು ಅರ್ಥ ಮಾಡಿಕೊಳ್ಳದೇ ಏನೊ ಒಂದು ಉತ್ತರ ಹೇಳಿ ಸಾಗಹಾಕಿಬಿಡುತ್ತಾರೆ, ಎಲ್ಲ ಗಂಡಂದಿರಿಗೂ ಹಾಗೆ ಸ್ವೀಕರಿಸೊ ಮನಸು ಇರಲ್ಲ ಅದು ಸರಿ, ಅದೇನೊ ಸ್ವಲ್ಪ್ ಅಹಂ(ಅಹಂಕಾರ ಅಲ್ಲ) ಅಡ್ಡಿ ಬಂದು ಬಿಡುತ್ತದೆ, ನನ್ನನ್ನು ನಾನಿರುವ ಹಾಗೆ ಸ್ವೀಕರಿಸಲಿ ಅನ್ನೋ ಮನೊಭಾವ ಸಹಜ, ಆದರೆ ಕೆಲವು ಸಾರಿ ನಾವು ಮಾಡುವ ತಪ್ಪುಗಳನ್ನು ಅವಳು ತಿದ್ದಲು ಹಾಗೆ ಹೇಳುತ್ತಿದ್ದಾಳೆ ಅನ್ನೊ ಸತ್ಯ ನಾವು ಅರಿತುಕೊಂಡರೆ ಚೆನ್ನ, ಹೊಗಳಿ ಹೊನ್ನ ಶೂಲಕ್ಕೇರಿಸಿದರು ಅನ್ನೊಕಿಂತ ತೆಗಳಿ ತಿದ್ದಿದರೆ ಒಳ್ಳೆದಲ್ವೆ.
ಧರಿತ್ರಿ ಅವರಿಗೆ
ರಾಜೇಶ್ ಹೇಳಿದಂತೆ ಹಾಗೆ ಕೇಳುವ ಮೊದಲೇ ನಾ ನನ್ನಾಕೆಯಾಗುವವಳಿಗೆ ಈ ಬ್ಲಾಗ್ ಓದುವಂತೆ ಹೇಳುತ್ತೇನೆ, ಹಾಗೆ ಇದನ್ನು ಓದಿ ಕೂಡ ಅನುಮಾನಿಸುವವಳು ನನ್ನಾಕೆಯಾಗದಿದ್ರೆ ಒಳ್ಳೇದು ಅಲ್ವೇ, ಇಷ್ಟೆಲ್ಲ ನನ್ನ ಕಲ್ಪನೆಗಳು ಅವಳ ಬಗೆಗೇ, ಅದನ್ನು ಅರಿತುಕೊಳ್ಳುವವಳು ಸಿಕ್ರೆ ನನ್ನ ಅದೃಷ್ಟ.
ಕಲ್ಪನೆ ಕೂಡ ಕಟ್ಟೋದು ವಾಸ್ತವದ ತಳಹದಿಯ ಮೇಲೆ, ನನ್ನ ಕಲ್ಪನೆಗೆ ತಕ್ಕ ಹುಡುಗಿ ಸಿಕ್ಕರೆ ನನ್ನೀ ಕಲ್ಪನೆಗಳಿಗಿಂತ ಚೆಂದದ ಬದುಕು ಅವಳಿಗಾಗಿ ಕಟ್ಟುತ್ತೇನೆ ಅನ್ನೊದರಲ್ಲಿ ಸಂಶಯವಿಲ್ಲ.
ತುಂಬ ಚೆನ್ನಾಗಿ ಬರಿಥಿರ. ನನಿಗೆ ಬರಲ್ಲ ಆಧರು ಒಂದು ಪ್ರಯತ್ನ
ಇವಗಿನ ಕಾಲಧಲ್ಲಿ ಥಟ್ ಅಂತ ಹೇಳುಧು(practicle aagiradhu) ಒಂಥರಾ ಒಳ್ಳೆಧೆ ಬಿಡಿ. ಆತರ ಇರೋರು ತಾವು ಏನ್ ಮಾಡಬೇಕು, ಹೇಗಿರಬೇಕು ಅಂತ ಯೋಚುಸ್ತಾರೆ ಒರ್ತು ಬೇರೆಯವರು ನಂಜೊತೆ ಹೇಗೆ ಇರಬೇಕು ಅಂತ ಯೋಚ್ಸಕ್ಕೆ ಹೋಗಲ್ಲ. ಥಟ್ ಅಂತ ಹೇಳಧೆ ಇರೋರು ಏನು, ಯಾವಾಗ, ಹೇಗೆ ಮಾತನಾಡಬೇಕು ಅಂತ ಬೇರೆಯವರನ್ನ ಅರ್ಥ ಮಾಡಿಕೊಲ್ಲೋಧುಕ್ಕಿಂಥ ಅಪಾರ್ಥ ಮಾಡ್ಕಿಕೊಲ್ಲೋಧುನ್ನ ನಾವು ನೋಡಬಹುದು.
ಇನ್ನು ನಿಮ್ಮ ಕೊನೆ ಸಲು "ಅಲ್ಲಿ ಯಾರಿಗೂ ಸಲಹೆ ಅಥವಾ ಉತ್ತರ ಬೇಕಿಲ್ಲ, ಬೇಕಿರೋದು ಕೇಳೊ ಕಿವಿಗಳು ಮಾತ್ರ"
ನಿಜನೋ ನಿಜ. ಅಧಕ್ಕೆ ತಕ್ಕಂತೆ ನಿಮ್ಮ "ವಾಣಿ" ಈ ಕಾಲಧಲ್ಲಿ ಬಹಳ ಸಹಾಯ ಮಾಡ್ತಾಳೆ. ಸುಮಾರ್ ಸಲ ನಾನು ಇಯರ್ ಫೋನ್ ಕಿವಿಗೆ ಹಾಕಂಡು "ಹು ಹು" ಅಂತ ಸ್ನೇಹಿತೆ ಅತ್ರ ಕೆಳುಸ್ಕಂಥ ಇರ್ಥಿದಿದ್ದು ನೆನಪು
ಥಟ ಅಂತ ಹೇಳದಿದ್ರೆ ಅಪಾರ್ಥ ಮಾಡಿಕೋತಾರೆ ಅನ್ನೋಕಿಂತ ಥಟ ಅಂತ ಹೇಳದಿದ್ದ್ರೆ ಅಪಾರ್ಥ ಮಾಡಿಕೊಳ್ಳೋರೂ ಇಲ್ಲದಿಲ್ಲ... ಏನು ನಾನು ಇಷ್ಟು ಮಾತಾಡ್ತಾ ಇದೀನಿಇವನು ಬರೀ ಕೇಳ್ತಾ ಇದಾನಲ್ಲ ಅಂದುಕೊಂಡರೂ ಆಶ್ಚರ್ಯವಿಲ್ಲ.. ಆದರೆ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು.. ಸುಮ್ನೇ ಏನೊ ಒಂದು ಥಟ ಅಂತ ಹೇಳಿದ್ರೆ ಪ್ರಯೋಜನವಿಲ್ಲ ನಿಜ...
"ವಾಣಿ" ಮಾತ್ರ ಕೇಳುತ್ತಾಳೆ ಅನ್ನೋದಂತೂ ನಿಜ, ಆದರೆ ಆಕಡೆಯಿಂದ ದೂರವಾಣಿ ಮಾಡಿದವರು ಥಟ್ ಅಂತ ಹೇಳುವವರಾಗಿಲ್ಲದಿದ್ದ್ರೆ ಮಾತ್ರ...
Post a Comment