Sunday, July 5, 2009

ಹಾgay ಸುಮ್ಮನೇ...

"ಛೀ ಛೀ ಜಗತ್ತು ಹಾಳಾಗ್ತಾ ಇದೆ, ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ, ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ" ಅಂತೇನೊ ಬಡಬಡಿಸುತ್ತ ಪೇಪರು ಆಕಡೆ ಬೀಸಾಕಿ ಪಾಕಶಾಲೆಗೆ ನಡೆದಳು, ಅಲ್ಲಪ್ಪ ಜಗತ್ತಿನ ಯೋಚನೆ ಇವಳಿಗ್ಯಾಕೆ ಬಂತು ಅಂತೀನಿ, ಅದರಲ್ಲೂ ರಾಮ ಕೃಷ್ಣ ಅಂತಾ ಬೇರೆ ಎಲ್ಲ ಹಳೆ ಕಾಲದ ಮನೆ ಮೂಲೆ ಹಿಡಿದು ಕೂತಿರುವ ಮುದುಕಿಯಂತೆ ಇವಳ್ಯಾಕೆ ಮಾತಾಡ್ತಾ ಇದಾಳೆ, ನನ್ನ ಚಿರಯೌವನ ಚೆಲುವೆಗೇನಾದ್ರೂ ವಯಸ್ಸಾಯ್ತಾ, ಅಂತ ಸಂಶಯವಾಯ್ತು. "ಏನೇ ಇದೆ ಪೇಪರಿನಲ್ಲಿ" ಅಂತನ್ನುತ್ತ ಕೆಳಗೆ ಬಿದ್ದಿದ್ದ ಪೇಪರು ಎತ್ತಿ ನೋಡಿದೆ, ನನಗೇನೂ ಅದರಲ್ಲಿ ಅಂಥದ್ದು ವಿಶೇಷವೇನೂ ಕಾಣಲಿಲ್ಲ.

ಪಾಕಶಾಲೆಯತ್ತ ಹೆಜ್ಜೆ ಹಾಕುತ್ತಾ, "ಏನು ಕಲಿಯುಗ, ಕಲ್ಕಿ ಅಂತೆಲ್ಲ ಅಂತಿದ್ದೆ ಏನಾಯ್ತು, ಪೇಪರಿನಲ್ಲೇನಿದೆ ಅಂಥದ್ದು" ಅಂದೆ, "ಯಾಕೆ ಕಾಣಿಸಲಿಲ್ವಾ, ಅದೇನೊ ಗೇ ರೈಟ್ಸ ಅಂತೆ, 377 ಕಲಂ ತೆಗೆದು ಹಾಕಿ ಕಾನೂನು ಸಮ್ಮತ ಮಾಡ್ತಾರಂತೆ... ಕೃಷ್ಣ, ಕಲಿಯುಗ ಅಧಪತನಕ್ಕಿಳಿದಾಗ ಕಲ್ಕಿಯಾಗಿ ಬಂದು ವಿಶ್ವವನ್ನು ಪುನ: ರಚಿಸುತ್ತೇನೆ ಅಂತ ಹೇಳಿದ್ದನಂತೆ, ಇನ್ನೂ ಯಾಕೆ ಕಾಯ್ತಿದಾನೆ ಅಂತ" ಕೈಲಿದ್ದ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿದಳು, ನಾನೊಂದು ಚಿಕ್ಕ ಮುಗುಳ್ನಗು ಕೊಟ್ಟು ಹೊರಗೆ ಬಂದೆ, "ಅಲ್ರೀ ಈ ಜನರಿಗೆ ಬೇರೆ ಕೆಲಸಾನೆ ಇಲ್ವಾ" ಅಂತನ್ನುತ್ತಾ ಮತ್ತೆ ಹೊರಗೆ ಬಂದಳು, "ಕೆಲವರಿಗೆ ಅದೇ ಕೆಲಸ" ಅಂದೆ. ಅದೇನು ಹಾಗಂದ್ರೆ ಅನ್ನೊವಂತೆ ನೋಡಿದ್ಲು, "ಹೀಗೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂತ ಹೇಳಿಕೊಂಡು ಯಾವುದಾದರೂ ಕೆಲಸಕ್ಕೆ ಬಾರದ ವಿಷಯ ಎತ್ತಿ, ಸಮಾಜ ಸೇವೆ ಅಂತ ಸಮಾಜ ಹಾಳು ಮಾಡೊ ಕೆಲಸ ಮಾಡೋದು" ಅಂದೆ. "ಆದರೂ ಕೆಲವು ಒಳ್ಳೆ ಕೆಲ್ಸಾನೂ ಮಾಡ್ತಿವೆ ಅಲ್ರೀ" ಅಂದ್ಲು, "ನಾನೆಲ್ಲಿ ಇಲ್ಲ ಅಂದೆ, ಅದಕ್ಕೆ "ಕೆಲ" ಅಂತ ಹೇಳಿದ್ದು, ಆದರೆ ಒಳ್ಳೇದಕ್ಕಿಂತ ಇಂಥದ್ದೇ ಜಾಸ್ತಿ ಪ್ರಚಾರ ಆಗಿಬಿಡ್ತದೇ ಏನು ಮಾಡೊದು" ಅಂದೆ. "ಈ ಆಧುನಿಕತೆ ಅಂತ ಎಲ್ಲೊ ಹೋಗ್ತಾ ಇದೀವಿ ಏನೊ" ಅಂದ್ಲು, "ಹಾಗೆ ನೋಡಿದ್ರೆ ಇದೇನು ಆಧುನಿಕ ಜಗತ್ತಿನಲ್ಲೇ ಬಂದದ್ದೇನಲ್ಲ, ಪುರಾತನ ಕಾಲದಲ್ಲೂ ಇತ್ತು ಆದರೆ ಪಾಪ ಪ್ರಜ್ಞೆಯಿಂದ ಬಹಳ ಬೆಳಕಿಗೆ ಬಂದಿರಲಿಲ್ಲ ಅಷ್ಟೇ" ಅಂದೆ. "ಮತ್ತೆ ಮುಂದೇನು" ಅಂದಳು, "ಮುಂದೇನು ಅಂದ್ರೆ, ನಿನಗೆ
ಮಗ ಹುಟ್ಟಿ ಮದುವೆ ವಯಸ್ಸಿಗೆ ಬಂದಾಗ ಅಮ್ಮ ನಾನೊಂದು ಹುಡುಗನ್ನ ಇಷ್ಟಪಡ್ತಿದೀನಿ ಅಂತ ಹೇಳದಿರಲಿ ಅಂತ ಬೇಡಿಕೊ ಅಷ್ಟೇ" ಅಂದೆ. "ಇನ್ನೇನು ಯಾವುದೋ ಹುಡುಗಿ ಇಷ್ಟ ಪಡ್ತಿದೀನಿ ಅಂದ್ರೆ ಏನು ಕುಲ ಗೊತ್ರಾ ಏನೂ ನೋಡದೆ ಮದುವೆ ಮಾಡಿಬಿಡೊದಾ?" ಅಂದ್ಲು "ಮತ್ತಿನ್ನೇನು ಹುಡುಗನ್ನ ಮದುವೆ ಆಗ್ತೀನಿ ಅನಲಿಲ್ಲ ಅಂತ ಖುಷಿ ಪಡಬೇಕು ಕಣೇ" ಅಂದೆ. "ಹಾಗೆಲ್ಲ ಆದ್ರೆ ಸಮಾಜ ಏನನ್ನುತ್ತೇರೀ" ಅಂದ್ಲು "ಸಮಾಜ ಏನನ್ನುತ್ತೇ, ಸಮಾಜ ಅನ್ನೊದು ಏನು ಹೇಳು ನಾವೇ ನಮ್ಮ ಸುತ್ತ ಹಾಕಿಕೊಂಡ ಪರಿಧಿ, ಬೇಲಿ ಹಾಗೆ... ಇದೇ ಹದ್ದು ಇದನ್ನು ಮೀರಬಾರದು ಅಂತ ನಮ್ಮವೇ ಕಟ್ಟುಪಾಡುಗಳು, ನಾವೇ ಬದಲಾಗುತ್ತ ನಡೆದರೆ ಆ ಪರಿಧಿಯನ್ನ ದೂರ ಸರಿಸುತ್ತಾ ಹೋಗುತ್ತೇವೆ." ಅಂದೆ.

"ಅರ್ಥ ಆಗ್ಲಿಲ್ಲ" ಅಂದ್ಲು. "ಮೊದಲು ಮದುವೆ ಅಂದ್ರೇನು?" ಅಂದೆ. "ಈ ಡೌಟ್ ಯಾಕೆ ಬಂತೀಗ, ಅದೂ ಮದುವೆ ಆಗಿ ವರ್ಷಗಳೇ ಆದಮೇಲೆ" ಅಂದ್ಲು "ವರ್ಷ ಆಯ್ತಲ್ಲ ಮರೆತು ಹೋಗಿದೆ" ಅಂದೆ "ಸಪ್ತ ಪದಿ ತುಳಿದು, ಏಳೇಳು ಜನ್ಮಕ್ಕೆ ನೀನೇ ನನ್ನ ಸಂಗಾತಿ ಅಂತ ಪ್ರಮಾಣ ಮಾಡಿದ್ದು ಮರೆತು ಹೋಯ್ತಾ?" ಅಂತ ಕಿವಿ ತಿರುವಿದಳು, "ಇನ್ನೂ ತಿರುವಿ ಬಿಡ್ಲಾ ಇಲ್ಲಾ ನೆನಪಿಗೆ ಬಂತಾ" ಅಂದ್ಲು "ಹಾಂ... ನೆನಪಿಗೆ ಬಂತು" ಅಂದೆ, ಕೆಂಪಗಾದ ಕಿವಿ ಸವರಿಕೊಳ್ಳುತ್ತ, "ಈ ಜನ್ಮ ಒಂದೇ ಅಲ್ದೇ ಏಳೇಳು ಜನ್ಮ ಬೇರೆ ಅಂತೆ, ಈಗಲೇ ಸಾಕಾಗಿದೆ" ಅಂತೇನೊ ಗೊಣಗಿದೆ. "ಏನದು ಏನೋ ಗುಸುಗುಸು ಅಂತೀದೀರಾ" ಅಂದ್ಲು "ಹೇ ಏನಿಲ್ಲ ಬರೀ ಏಳೇ ಜನ್ಮಾನಾ, ಇನ್ನೊಂದು ನಾಲ್ಕೈದು ಸೇರಿಸಿ ಒಂದು ಡಜನ್ನು ಮಾಡಿಬಿಡಬಹುದಿತ್ತಲ್ಲ ಅಂತಾ ಇದ್ದೆ.. ಹೀ ಹೀ ಹೀ" ಹಲ್ಲು ಕಿರಿದೆ. "ಏಳೇಳು ಜನ್ಮಾ ಏನೂ ಬೇಡ ಈ ಜನ್ಮದಲ್ಲಾದರೂ ನನ್ನ ಜತೇನೆ ಇದ್ರೆ ಸಾಕಪ್ಪ" ಅಂದ್ಲು. ಅಬ್ಬಾ ದೀಪಾವಳಿ ಬಟ್ಟೆ ಸೇಲಿನಲ್ಲಿ ಒಂದು ತೆಗೆದುಕೊಂಡ್ರೆ ಆರು ಫ್ರೀ ಅಂತ ಡಿಸ್ಕೌಂಟ ಸಿಕ್ಕಷ್ಟು ಖುಷಿಯಾಯ್ತು. "ಹಾಗಾದ್ರೆ ಮದುವೆಯಂದ್ರೆ ನೀನು ನಾನು ಜತೆಯಾಗಿ ಸಂಗಾತಿಗಳಾಗಿ ಜೀವನ ಮಾಡ್ತೀವಿ ಅಂತ ಜೊತೆಯಾಗೋದು ಅಂದ ಹಾಗಾಯ್ತು" ಅಂದೆ, "ಬರೀ ಅಷ್ಟೇ ಏನಲ್ಲ, ಆದರೂ ಚಿಕ್ಕಾದಾಗಿ ಹೇಳಬೇಕೆಂದ್ರೆ ಅದು ನಿಜ" ಅಂದ್ಲು. "ಹಾಗಾದ್ರೆ ಅದನ್ನೇ ಹುಡುಗ ಹುಡುಗಾನೇ, ರಾಮ್ ವೆಡ್ಸ ಶಾಮ್ ಅಂತ, ಇಲ್ಲ ಹುಡುಗಿ ಹುಡುಗಿಯೇ ರಿಂಕಿ ವೆಡ್ಸ ಪಿಂಕಿ ಅಂತಾನೊ ಯಾಕೆ ಮಾಡಬಾರದು, ಅವರೇ ಜತೆ ಜತೆಯಾಗಿ ಯಾಕೆ ಇರಬಾರದು ಅಂತಾನೇ ಅವರು ಕೇಳ್ತಿರೋದು" ಅಂದೆ, "ಅಲ್ಲ ಹುಡುಗೀರು ಹಾಗೇ ಕೇಳ್ತಿದಾರ?" ಅಂದ್ಲು "ಹೂಂ ಮತ್ತೆ , ಅವರಿಗೆ ಲೆಸ್ಬಿಯನ ಅಂತಾರೆ" ಅಂದೆ. "ಅಬ್ಬಾ, ಹುಡುಗೀರು ಇಷ್ಟು ಮುಂದುವರೆದೀದೀರಾ?" ಅಂದ್ಲು "ನೀನೆ ಹಿಂದೆ ಹೀಗೆ ಮನೇಲಿ ಕೂತಿರೋದು, ಲೀಡ ಏನಾದ್ರೂ ತೆಗೆದುಕೊಳ್ತೀಯಾ ಅವರ ಹೋರಾಟದಲ್ಲಿ" ಅಂದೆ, ಕೈಗೆ ಸಿಕ್ಕ ಸೊಫಾ ಮೇಲಿನ ಎಲ್ಲ ದಿಂಬುಗಳ ಪ್ರಹಾರ ನನ್ನ ಮೇಲಾಯ್ತು.

ಎಲ್ಲ ದಿಂಬುಗಳ ಅತ್ತ ಕಡೆ ಸರಿಯಾಗಿ ಪೇರಿಸಿಟ್ಟು, ಅವಳನ್ನೇ ದಿಂಬು ಮಾಡಿಕೊಂಡು ಒರಗಿದೆ, ಇನ್ನೂ ಕೆಂಪಾಗಿದ್ದ ಕಿವಿ ಸವರುತ್ತ, ಏನೋ ಮಹಾನ ಸಂಶೋಧನೆ ಮಾಡಿ ಕಂಡು ಹಿಡಿದ ಹಾಗೆ "ಸಂತತಿ ಹೇಗೆ ಬೆಳೆಯೋದು, ಅದಕ್ಕಾದರೂ ಹುಡುಗ ಹುಡುಗಿ ಮದುವೆಗೆ ಅರ್ಥ ಇದೆಯಲ್ಲ" ಅಂದ್ಲು. "ಮೊದಲೇ ಜನಸಂಖ್ಯೆ ಬೆಳೀತಿದೆ, ಯಾರಿಗೆ ಮಕ್ಕಳಾಗಿ ಏನಾಗಬೇಕಿದೆ, ಅನಾಥ ಮಕ್ಕಳು ದತ್ತು ತೆಗೆದುಕೊಳ್ತಾರೆ" ಅಂದೆ. "ಶಾಲೆಗೆ ಎಲ್ಲಾ ಸೇರಿಸಬೇಕಾದ್ರೆ ಫಾರ್ಮನಲ್ಲಿ ಅಪ್ಪ ಅಮ್ಮಾ ಅಂತ ಯಾರ ಹೆಸ್ರು ತುಂಬೋದು, ಹೇಳಿಬಿಟ್ರೆ ಸುಮ್ನೇನಾ" ಅಂತ ವಾದ ಮಂಡಿಸಿದಳು. "ಇಷ್ಟಕ್ಕೂ ಈಗ ಸದ್ಯ ಮದುವೆ ಆಗಬಹುದು ಅಂತ ಏನೂ ಸಮ್ಮತಿ ಕೊಟ್ಟಿಲ್ಲ(ವಿದೇಶದಲ್ಲಿ ಅದೂ ಆಗಿದೆ), ಅದು ಕಾನೂನುಬಾಹಿರವಲ್ಲ ಅಂತ ಮಾತ್ರ, ಅದರ ಮೇಲಿದ್ದ ಕಾನೂನನ್ನು ಕಿತ್ತು ಹಾಕೀದಾರೆ ಅಷ್ಟೇ, ಹಾಗೇನಾದ್ರೂ ನಾಳೆ ಮದುವೆಗೂ ಸಮ್ಮತಿ ಕೊಟ್ರೆ ಅದಕ್ಕೂ ಏನೊ ಒಂದು ಉಪಾಯ ಮಾಡ್ತಾರೆ ಬಿಡು" ಅಂದೆ. "ಕಾನೂನು ಅಂತ ಇತ್ತಲ್ಲ ಈಗ ಅದೂ ಇಲ್ಲ" ಅಂದ್ಲು. "ಅಲ್ಲ ಯಾವ ಕಾನೂನು ಇದ್ದು ಏನು ಆಗಿದೆ ಹೇಳು, ಕಾನೂನುಗಳು ಮಾಡಿದ್ದೇ ಅವುಗಳನ್ನು ಮುರಿಯೋಕೆ, ಮೀರಿ ಹೋಗೋಕೆ ಅನ್ನೊ ಹಾಗಿದೆ ಈಗಿನ ಪರಿಸ್ಥಿತಿ, ಹಾಗಿರುವಾಗ ಆ ಕಾನೂನು ಎಷ್ಟರ ಮಟ್ಟಿಗೆ ಉಪಯೋಗ ಆಗಿತ್ತು? ಆದರೆ ಈ ಕಾನೂನು ತೆಗೆದು ಹಾಕಿದ್ದು ಅವರಿಗೊಂದು ನೈತಿಕ ಜಯ ಸಿಕ್ಕ ಹಾಗೆ ಆಗಿದೆ ಅಷ್ಟೇ" ಅಂದೆ. "ಅಲ್ಲಾ ಆಗಲಿಂದ ನೋಡ್ತಾ ಇದೀನಿ, ಏನು ಬರೀ ಅವರ ಪರವಾಗೇ ವಕಾಲತ್ತು ನಡಿಸೀದೀರಾ ಏನ್ ಕಥೆ ನಿಮ್ದು" ಅಂತ ಹುಬ್ಬು ಹಾರಿಸಿದಳು. "ಲೇ ನನ್ನ ಮೇಲೆ ಯಾಕೆ ನಿನಗೇ ಡೌಟು?" ಅಂತ ಅವಳ ಕೈಗಳೆರಡನ್ನೂ ನನ್ನ ಕೈಯಲ್ಲಿ ಬಂಧಿಯಾಗಿಸಿದೆ, ಎಲ್ಲಿ ನನ್ನ ಬಿಟ್ಟು ಹೋದಾಳು ಅಂತ ಏನೋ. ಮುಗುಳ್ನಗುತ್ತಾ "ಯಾರು ಹೇಗೆ ಅಂತ ಏನು ಹೇಳೋದಪ್ಪ" ಅಂದ್ಲು. ಕೈಗಳನ್ನು ಇನ್ನಷ್ಟು ಬಿಗಿಯಾಗಿಸಿದೆ. "ಅವರದ್ದೆ ಆದ ಕೆಲವು ಗುರುತುಗಳಿವೆ, ಅದು ದೇಶದಿಂದ ದೇಶಕ್ಕೆ ಬೇರೆ ಬೇರೆ, ಕೆಲವು ಕಡೆ ಪಿಂಕ ಶರ್ಟು ಹಾಕಿದ್ರೆ" ಅಂತಿದ್ದಂಗೆ "ಅಯ್ಯೊ ಅಲ್ಲೂ ಪಿಂಕಾ, ವ್ಯಾಲೆಂಟೈನ ಡೇಗೆ ಪಿಂಕ ಚಡ್ಡಿ ಅಭಿಯಾನ, ನಿಮ್ಮ ಸಾಫ್ಟವೇರ ಕಂಪನೀಲಿ ಕೆಲಸದಿಂದ ತೆಗೆಯೋಕೆ ಪಿಂಕ ಸ್ಲಿಪ್ಪು, ಇನ್ನೂ ಇಲ್ಲಿ ಇದು ಬೇರೇನಾ, ಅಲ್ಲ ಪಾಪ ಆ ಪಿಂಕ ಕಲರು ಎನ್ ಪಾಪಾ ಮಾಡಿದೆ ಅಂತೀನಿ" ಅಂದವಳು "ಸ್ವಲ್ಪ ಏಳ್ರೀ ಮೇಲೆ
ಬೀರುನಲ್ಲಿ ನಿಮ್ದು ಯಾವದಾದ್ರೂ ಪಿಂಕ ಶರ್ಟ ಇದೇನ ನೋಡಿ ಬರ್ತೀನಿ" ಅಂದ್ಲು, ಅಲ್ಲೇ ನನ್ನ ಕೈಯಲ್ಲಿದ್ದ ಅವಳ ಕೈ ಕಚ್ಚಿದೆ, "ಇಲ್ಲ... ಇಲ್ಲ... ಯಾವದೂ ಇಲ್ಲ ನಂಗೊತ್ತು ಬಿಡಿ ರೀ... ರೀ..." ಅಂತ ಚೀರಿದಳು. "ನೋಡು ನಿನ್ನ ಕೈ ಕೂಡ ಪಿಂಕ ಆಯ್ತು ಕಚ್ಚಿದಲ್ಲಿ" ಅಂದೆ ನಾಚಿದಳು ಗಲ್ಲ ಕೂಡ ಪಿಂಕ ಆಯ್ತು.

"ಇಷ್ಟೇನಾ ಇನ್ನೂ ಏನಾದ್ರೂ ಪಿಂಕ್ ಇದೇನಾ" ಅಂದವಳಿಗೆ "ಪಿಂಕಿ ರಿಂಗ ಅಂತಿದೆ, ಪಿಂಕಿ ಫಿಂಗರ್ ಅಂದ್ರೆ ಕಿರುಬೆರಳಿಗೆ ಸ್ಟೀಲ್ ರಿಂಗ್ ಹಾಕೋತಾರೆ" ಅಂದೆ. "ರಿಂಗ ಬೇರೆನಾ" ಅಂತ ಉದ್ಗಾರ ತೆಗೆದ್ಲು "ಬಲಕಿವೀಲಿ ಕಿವಿಯ ರಿಂಗ, ಕಿಲಿಯೋಲೆ ಹಾಕಿದ್ರೂ ಕೂಡ ಅದೇ ಸಂಕೇತ ಕೆಲವು ಕಡೆ" ಅಂತಂದೆ. ನನ್ನ ಕಿರುಬೆರಳು ಪರೀಕ್ಷೆಯಾಗುತ್ತಿತ್ತು ಆ ಕ್ಷಣದಲ್ಲಿ, "ಲೇ ನನ್ನ ಮೇಲೆ ಯಾಕೇ ನಿನಗೆ ಸಂಶಯ, ಆಗಲಿಂದ ನನ್ನೇ ಚೆಕ್ ಮಾಡ್ತಿದೀಯಾ" ಅಂದರೆ "ಅಲ್ಲ ಇಷ್ಟೆಲ್ಲ ಮಾಹಿತಿ ಎಲ್ಲಿಂದ ಬಂತು ಅಂತ" ಪ್ರಶ್ನಿಸಿದಳು, "ಭಾರತದಲ್ಲಿ ಇದಿನ್ನೂ ಆ ಮಟ್ಟಿಗೆ ಚಾಲ್ತಿಯಲ್ಲಿ ಇಲ್ಲ ಆದರೆ ವಿದೇಶದಲ್ಲಿ ಸ್ವಲ್ಪ ಹುಷಾರಾಗೇ ಇರಬೇಕು. ವಿದೇಶಕ್ಕೆ ಹೊರಟಿದ್ದ ಗೆಳೆಯನಿಗೆ ಕೊಲೀಗ(ಸಹುದ್ಯೋಗಿ) ಕೊಟ್ಟ ಮಾಹಿತಿ, ನನಗೂ ಆಗಲೇ ಇದೆಲ್ಲ ತಿಳಿದದ್ದು... ಇಲ್ಲೇನು ಬಿಡು ಗೆಳೆಯರಿಬ್ರು ಹೆಗಲ ಮೇಲೆ ಕೈ ಹಾಕಿಕೊಂಡು ಹೋದ್ರೂ ಯಾರೂ ಏನೂ ಅನ್ಕೊಳ್ಳಲ್ಲ ಆದರೆ ಕೆಲವು ವಿದೇಶಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟೋ ಹಾಗೆ ಕೂಡ ಇಲ್ಲ" ಅಂದೆ "ಹೌದಾ!" ಅಂತ ಅಶ್ಚರ್ಯಪಟ್ಟಳು, "ಅಷ್ಟೇ ಏನೂ ಹಾಕೊ ಒಂದು ಸಾಕ್ಸು ಬದಲಾದ್ರೂ ಏನೇನೋ ಅರ್ಥ ಬಂದು ಬಿಡತ್ತೆ" ಅಂದೆ. "ಸಾಕ್ಸಾ?!" ಅಂತ ಹೌಹಾರಿದಳು "ಹೂಂ ರೈನಬೊ, ಅದೇ ಕಾಮನಬಿಲ್ಲಿನ ಕಲರು ಸಾಕ್ಸ ಅವರೇ ಹಾಕೋಳ್ಳೋದು, ಅದನ್ನ ಬಿಡು ಕೆಲವು ಕಡೆ ಬಿಳಿ ಸಾಕ್ಸ ಕೂಡ ಅದರ ಗುರುತು" ಅಂದೆ. ಅದನ್ನೆಲ್ಲ ಕೇಳಿ ಅವಳಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು.

"ಹೀಗಾದ್ರೆ ಹೇಗೆ, ಏನು ಜನ ಹೀಗ್ಯಾಕೆ ಮಾಡ್ತಾರೆ" ಅಂದ್ಲು, "ಸ್ವಲ್ಪ ಈ ಪ್ಯಾಶನ್ನು ಇಂಡಸ್ಟ್ರಿನಲ್ಲಿ ಇದು ಇದೆ, ಎಲ್ರೂ ಅಲ್ಲ ಆದರೂ ಈ ದಿನಾಲು ಹುಡುಗಿಯರ ಗುಂಪಿನಿಂದಲೇ ಸುತ್ತುವರೆದಿರುವ ಅಲ್ಲಿನ ಕೆಲವರಿಗೆ ಇಂಥ ಯೋಚನೆಗಳು ಬಂದರೆ ಅಚ್ಚರಿಯಿಲ್ಲ ಒಂಥರಾ ಅಡುಗೆ ಭಟ್ಟರಿಗೆ ದಿನಾಲೂ ಅದೇ ಸ್ವೀಟು ಮಾಡಿ ಅದರ ಘಾಟು ಬಡಿದು ಬಡಿದು ಅವರೇ ಮಾಡಿದ ಸ್ವೀಟ ಅವರೇ ತಿನ್ನೊಕಾಗದಿರೋ ಹಾಗೆ ಬರುವ ವಾಕರಿಕೆ ನೀರಸತನ ಒಂದು ಕಾರಣವಾಗಿರಬಹುದು" "ಹೌದ್ರೀ, ಈ ಹೂರಣದ ಹೋಳಿಗೆ ಮಾಡಿದಾಗಲೆಲ್ಲ ನನಗೂ ಅದನ್ನ ತಿನ್ನೋಕೆ ಮನಸೇ ಆಗಲ್ಲ" ಅಂದ್ಲು ಹೂರಣದ ಹೋಳಿಗೆ ಹೆಸರು ಕೇಳಿ ಬಾಯಿ ನೀರೂರಿತು, "ಸ್ವಲ್ಪ ತಾಳು ಹಾಗಿದ್ರೆ, ನೀರು ಕುಡಿದು ಬರ್ತೀನಿ ಇನ್ನೊಂದು ಕಾರಣ ಬಂದು ಹೇಳ್ತೀನಿ, ಅಲ್ಲೀವರೆಗೆ ಆ ಪೇಪರು ಮೂರನೇ ಪೇಜು ಮಾತ್ರ ನೋಡಬೇಡ" ಅಂತ ಒಳಗೆ ಅಡುಗೆಮನೆಗೆ ಹೋದೆ.

ಬರುವಷ್ಟರಲ್ಲಿ ಮೂರನೇ ಪೇಜು ತೆಗೆದುಕೊಂಡು ಕೂತಿದ್ದಳು "ಏನಿದೆ ಮೂರನೇ ಪೇಜಿನಲ್ಲಿ ಅಂಥದ್ದು?" ಅಂದ್ಲು "ನನಗೇನು ಗೊತ್ತು, ನಿನಗೆ ನೋಡಬೇಡ ಅಂತ ಅಲ್ವಾ ಹೇಳಿದ್ದು, ಯಾಕೇ ನೋಡಿದೆ?" ಅಂದೆ ತಣ್ಣಗೆ ಮೂವತ್ತೆರಡು ಹಲ್ಲು ಕಾಣಿಸಿದಳು "ಸುಮ್ನೆ ಕುತೂಹಲ, ಈಗ ಏನಿದೆ ಅಂತ ಹೇಳ್ತೀರೊ ಇಲ್ವೊ" ಅಂದ್ಲು. "ಹೇಳೊದೇನು, ಅಲ್ಲೇನೂ ಇಲ್ಲ, ಬೇಡ ಅಂತ ಹೇಳಿ ಯಾವಾಗ ಮುಚ್ಚಿಡಲು ಶುರು ಮಾಡುತ್ತೇವೊ ಆಗ ಅಲ್ಲಿ ಕುತೂಹಲ ಜಾಸ್ತಿಯಾಗತ್ತೆ, ಅದೇ ಇಂಥ ವಿಷಯಗಳಲ್ಲಿ ಆಗೋದು" ಅಂದ್ರೇನು "ಶಾಲೇಗೊ ಹೋಗೊ ಮಗುಗೆ ಇದನ್ನೆಲ್ಲ ಹೇಳೊಕೆ ಆಗತ್ತ? ನಿಮ್ಮಂಗೆ ಪೋಲಿ ಆಗಿ ಹೋಗ್ತಾರೆ ಅಷ್ಟೇ" ಅಂದ್ಲು, "ಶಾಲೆಗೆ ಹೋಗೊ ಮಗೂಗೇ ಹೇಳು ಅಂದ್ನಾ" ಅಂತ ನಾ ಸಿಟ್ಟಿನಿಂದ ನೋಡಿದೆ, "ಪೋಲಿ ಅಂದದ್ದಕ್ಕೆ ಸಿಟ್ಟಾಗಬೇಡ ಪುಟ್ಟಾ" ಅಂದ್ಲು. ನಗು ಬಂತು ತಡೆದುಕೊಂಡು "ಸರಿಯಾದ ವಯಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರೋದು ಪೋಷಕರ ಕರ್ತವ್ಯ, ಹುಟ್ಟಿಸಿ ಬಿಟ್ರೆ ಆಯ್ತಾ, ನನ್ನೂ ಎಲ್ಲೊ ಬೊಂಬೆ ತರೊ ಅಂಗಡೀಲಿ ಕೊಂಡು ತಂದೀದಾರೆ ಅಂತ ಮಕ್ಕಳು ಅಂದುಕೋತಾರೆ ಅಷ್ಟೆ, ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ, ಸಮಾಜ, ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು, ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ.", "ರೀ ನಮ್ಮನೆಗೆ ಬೊಂಬೆ ಯಾವಾಗ ಬರೋದು" ಅಂತ ನಾಚಿದಳು "ಆರ್ಡರ ಕೊಡೋಣ್ವಾ!" ಅಂತ ಹತ್ತಿರ ಹೋದೆ, "ಆಸೇ ನೋಡು" ಅಂತ ದೂರ ತಳ್ಳಿದಳು.

ಸಮಾಜ ನಾವೇ ಕಟ್ಟಿಕೊಂಡ ಒಂದು ವ್ಯವಸ್ಥೆಯಾಗಿರುವಾಗ ಇಂದು ನಾಲ್ಕು ಜನ ಬೇಕೆಂದರು ಅಂತ ಕಟ್ಟುಗಳನ್ನು ಸಡಿಲ ಮಾಡಿದರೆ ಸಮಾಜ ಅನ್ನೋದು ಮುರಿದು ಬೀಳಲ್ಲವೇ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನೇ ಗಮನಿಸಿ, ಈಗಾಗಲೇ ಆಗಿರುವ ಎಷ್ಟೊ ಮಾರ್ಪಾಡುಗಳು, ಲಿವಿಂಗ ಟುಗೆದರ(ಜೊತೆಯಾಗಿ ಮದುವೆಯಾಗದೇ ಇರೋದು), ವೈಫ್ ಸ್ವಾಪಿಂಗ (ಹೆಂಡಂದಿರನ್ನು ಅದಲು ಬದಲಾಯಿಸಿಕೊಳ್ಳುವ) ಇಲ್ಲ ಡಿವೊರ್ಸ ಆಗಿರಬಹುದು, ಅನೈತಿಕ ಸಂಬಂಧಗಳೇ ಆಗಿರಬಹುದು ಇವೆಲ್ಲ ಒಂದಿಲ್ಲ ಒಂದು ರೀತಿ ಕುಟುಂಬ ಅನ್ನೋ ಪರಿಕಲ್ಪನೆಗೆ ಹೊಡೆತ ಕೊಡುತ್ತ ಬಂದಿವೆ, ಈವತ್ತು ಇದನ್ನು ಮಾನ್ಯ ಮಾಡಿದವರು, ನಾಳೆ ಇನ್ನೊಂದಕ್ಕೆ ಅನುಮತಿಯ ಮುದ್ರೆ ಒತ್ತುತ್ತ ಹೋಗಿ, ಹೀಗೆ ಕಟ್ಟುಪಾಡುಗಳೆಲ್ಲ ಕಳೆದುಹೋದರೆ ನಮಗೂ ನಾಯಿ ನರಿಗಳಂತ ಪ್ರಾಣಿಗಳಿಗೂ ಏನು ವ್ಯತ್ಯಾಸವಿರಲಿಕ್ಕಿಲ್ಲ, ಅಂಥ ಕಾಲ ಒಂದು ದಿನ ಬರಬಹುದು, ಯಾಕೆಂದರೆ
ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕು ಅಂತ ಹೇಳುತ್ತ ನಾವೇ ಬದಲಾಗಿ ಕಾಲವನ್ನು ಬಯ್ದುಕೊಳ್ಳುತ್ತಾ ಸಾಗುತ್ತಿದ್ದೇವೆ, ಆದರೆ ಅಂಥ ಕಾಲದ ಬರುವನ್ನು ಸ್ವಲ್ಪ ಮುಂದೂಡಬಹುದೇನೊ ಅನ್ನೊ ಚಿಕ್ಕ ಆಶಯ ಮಾತ್ರ ನನ್ನದು.

ಮರುದಿನ ಆಫೀಸಿಗೆ ಹೊರಡಲು ಸ್ನಾನ ಮಾಡಿ ಬಂದರೆ ದಿನಾಲೂ ಇರುತ್ತಿದ್ದ ಶರ್ಟು ಪ್ಯಾಂಟು ಜತೆಗೆ ಪ್ಯಾಂಟಿನ ಕಲರಿಗೆ ಹೊಂದಿಕೆಯಾಗುವ ಸಾಕ್ಸ ಕೂಡ ಇಟ್ಟಿದ್ಲು ;) ... ಬೇಕೆಂತಲೇ "ಬಿಳಿ ಕಲರ ಸಾಕ್ಸ ಎಲ್ಲೇ ಇದೆ" ಅಂದೆ "ಇಟ್ಟಿರುವುದನ್ನು ಹಾಕಿಕೊಂಡು ಹೋಗ್ತೀರಾ ಇಲ್ಲಾ, ನಾಳೆ ಪಿಂಕ ಶರ್ಟು, ಪಿಂಕಿ ರಿಂಗೂ ತಂದಿಡ್ತೀನಿ" ಅಂತ ಪಾಕಶಾಲೆಯಿಂದಲೇ ಗದರಿಸಿದಳು... "ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ... ಮುದ್ದ್ ಮಾಡೊಕು ಕಾನೂನು ಒಂದು ಬೇಕಾ" ಅಂತ ಹಾಡುತ್ತ ಶರ್ಟು ಹಾಕಿಕೊಳ್ಳುತ್ತಿದ್ರೆ "ಅದು ಹುಡುಗರ ಹಾಡಲ್ಲ, ಹಾಡಿದ್ದು ಸಾಕು ಹೊರಡ್ತೀರೊ ಇಲ್ಲೋ ಆಫೀಸಿಗೆ, ಇಲ್ಲಾ ನಾ ಬರಬೇಕಾ ಅಲ್ಲೀಗ" ಅಂತಂದಳು "ಒಕೇ ಒಕೇ ಬೇರೆ ಹಾಡು ಹಾಡ್ತೀನಿ... ಮಾಯವಾಗಿದೆ ಮದುವೆ ಹಾ.. "ಗೇ".. ಸುಮ್ಮನೇ..." ಅಂತಾ ರಾಗ ಹಿಡಿದು ಹಾಡಲು ಪ್ರಯತ್ನಿಸುತ್ತಿದ್ದರೆ ಅವಳು ಪಾಕಾಶಾಲೆಯಿಂದ ಇತ್ತ ಬರುವ ಸದ್ದಾಯಿತು... ಅವಳು ಬರ್ತಾ ಇದಾಳೆ, ಕೈಲಿ ಏನಿದೆಯೋ? ಸೌಟಿದ್ರೆ ಪರವಾಗಿಲ್ಲ, ಚಾಕೂ ಎಲ್ಲಾ ಇದ್ರೆ ತೊಂದ್ರೆ, ಅಯ್ಯೋ ಓಡಬೇಕು ದಾರಿ ಬಿಡ್ರಿ ಮತ್ತೆ ಸಿಕ್ತೀನಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಈ ಲೇಖನ ಬರೆಯಲೊ ಬೇಡವೊ ಅಂತ ನಿನ್ನೆಯಿಂದ ಯೋಚಿಸಿ ಕೊನೆಗೂ ಬರೆದು ತೆಗೆದಿರುವೆ, ಎಲ್ಲೂ ಅಶ್ಲೀಲ ಅನ್ನಿಸದ ಹಾಗೆ ಜಾಗ್ರತೆವಹಿಸಿ ಬರೆದಿದ್ದೇನೆ, ಹಾಗೂ ಎಲ್ಲೊ ಎಲ್ಲೆ ಮೀರಿದ್ದರೆ ನನ್ನ ಕ್ಷಮಿಸಿ, ಪ್ರಸ್ತಾಪ ಮಾಡಿದ ಕೆಲ ವಿಷಯಗಳು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ, ಇವೆಲ್ಲ ಕೇವಲ ನನ್ನ ಮನದಿಂದ ಹೊರಹಾಕಿದ ಯೋಚನೆಗಳು, ಇದು ಸರಿ ತಪ್ಪು ಅಂತ ಹೇಳೊ ಪ್ರಯತ್ನ ಅಂತಾನೂ ಅಂದುಕೊಳ್ಳಬೇಡಿ, ಎಲ್ಲರಿಗೂ ಅವರದೇ ಆದ ಅನಿಸಿಕೆಗಳಿರುತ್ತವೆ, ಹಾಗಾಗಿ ನಾ ಹೇಳಿದ್ದೆಲ್ಲ ಎಲ್ರಿಗೂ ಅನ್ವಯವಾಗುವುದಿಲ್ಲ.


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/haage-summane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

18 comments:

Nisha said...

ಗೇ ಕಪಲ್ಸ್ ಬಗ್ಗೆ ಬಹಳ ವಿಚಾರಗಳನ್ನ ತಿಳಿಸಿದ್ದೀರಿ. "ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ, ಸಮಾಜ, ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು, ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ" ಈ ಮಾತು ಅಕ್ಷರಶ ನಿಜ. ಮೊದಲಾದರೆ ಕೂಡು ಕುಟುಂಬದಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ, ಅಣ್ಣ, ಅಕ್ಕ, ಯಾರಾದರು ಮಕ್ಕಳ ಚಲನವಲನಗಳ ಮೇಲೆ ಗಮನವಿಟ್ಟು ಅವರ ಹದಿಹರೆಯದ ಭಾವನೆಗಳನ್ನು ಹಾಗು ಸರಿ/ತಪ್ಪುಗಳನ್ನೂ ಮಕ್ಕಳಿಗೆ ಸೂಕ್ಷ್ಮವಾಗಿ ತಿಳಿಸಿಕೊಡುತಿದ್ದರು. ಆದರೆ ಈಗಿನ ಕಂಪ್ಯೂಟರ್ ಯುಗದ ನ್ಯೂಕ್ಲಿಯರ್ ಫಾಮಿಲಿಗಳಲ್ಲಿ ಮಕ್ಕಳ ಬಗ್ಗೆ ಗಮನ ಹರಿಸುವುದಕ್ಕು ತಂದೆ ತಾಯಿಯರಿಗೆ ಬಿಡುವಿರುವುದಿಲ್ಲ. ಮಕ್ಕಳು ಹಾಳಾಗುವುದಕ್ಕೆ ಈಗಿನ ಟಿವಿ, ಸಿನಿಮಾಗಳು, (ಕಂಪ್ಯೂಟರ್ಸ್)ಸಹ ಬಹಳಷ್ಟು ಕಾರಣ. ಇದೆಲ್ಲ ನೋಡುತಿದ್ದರೆ ನಿಮ್ಮಾk ಹೇಳುವಂತೆ "ಛೀ ಛೀ ಜಗತ್ತು ಹಾಳಾಗ್ತಾ ಇದೆ, ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ, ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ" ಎಂದು ನಾವುಗಳೂ ಹೇಳುವಂತೆ ಆಗುತ್ತದೆ.

Prabhuraj Moogi said...

ನಿಮ್ಮ ಕಮೇಂಟ ನೋಡಿ ಸಮಾಧಾನ ಆಯ್ತು, ಇದನ್ನ ಬರೆಯೋವಾಗ ಏನು ಇಂಥಾ ಲೇಖನ ಬರೀತಾ ಇದಾನೇ ಅಂತಾರೋ ಏನೊ ಅನ್ನೊ ಭಯ ಬಹಳ ಕಾಡಿತ್ತು. ನಿಜ ಮೊದಲಾದ್ರೆ ಅಜ್ಜಿ, ಅಜ್ಜ ಅಂತ ಸಂಸಾರಗಳಿದ್ದು ಹದಿವಯಸ್ಸಿನ ಸೂಕ್ಷ್ಮಗಳನ್ನು ತಿಳಿಸಿಕೊಡುತ್ತಿದ್ದರು, ಈಗ ಏನೋ ಈ ಇಬ್ಬರೂ ಕೆಲ್ಸಕ್ಕೆ ಹೋಗೊ ದಂಪತಿಗಳ ನಡುವೆ ಮನೆಯಲ್ಲೋಬ್ಬರೇ ಇರುವ ಮಕ್ಕಳು ಟೀವಿಯಲ್ಲಿ ನೋಡಿ ಏನೇನು ಕಲಿತುಬಿಡುತ್ತಾರೊ ಯಾರಿಗೆ ಗೊತ್ತು... ತಮಗನಿಸಿದ್ದು ಅನಿಸಿಕೆ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.

SSK said...

ಪ್ರಭು ಅವರೇ,
ಎಂದಿನಂತೆ ಈ ಬಾರಿಯೂ ಒಂದು ಅವಶ್ಯಕ ವಿಷಯದ ಬಗ್ಗೆ ಮತ್ತು ಅದರ ಆಗು ಹೋಗುಗಳ ಬಗ್ಗೆ ನೀವು ಮತ್ತು ನಿಮ್ಮಾಕೆ ಚೆನ್ನಾಗಿ ಚರ್ಚಿಸಿದ್ದೀರ! ನೀವು ಹೇಳಿರುವ ವಿಚಾರಗಳ ಬಗ್ಗೆ ಇಂದಿನ ಪ್ರತಿಯೊಬ್ಬ ಪ್ರಜೆಯೂ ಇವುಗಳ ಬಗ್ಗೆ ಯೋಚಿಸಿ, ಜಾಗರೂಕರಾಗ ಬೇಕಾದಂತಹ ಪರಿಸ್ಥಿತಿ ಬಂದಿದೆ!! ಮುಂಬರುವ ದಿನಗಳು ಅಥವಾ ಪೀಳಿಗೆ ಇದರ ಬಗ್ಗೆ ಎಚ್ಚೆತ್ತುಕೊಂಡು, ಹಾಳಾಗದೆ ಉದ್ದಾರವಾಗುವ ಪರಿಸ್ಥಿತಿ ಏರ್ಪಡಲಿ ಎಂದು ನಿಮ್ಮಾಕೆಯ ಜೊತೆ ನಾವೂ ಸಹ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ!!!

sunaath said...

ಪ್ರಭುರಾಜ,
ಈ ಸಲದ ಲೇಖನ ಮುದ್ದಣ-ಮನೋರಮೆಯರ ಸಂವಾದದಂತಿದೆ. ಅಂದರೆ, ವಿನೋದದ
ಮೈಯೊಳಗೆ ವಿಚಾರದ ಹೂರಣ ತುಂಬಿದೆ.
By the way, ನೀವು ಒಂದೇ ಕಿವಿಗೆ pink ring ಹಾಕ್ಕೋತೀರಾ?

ಸಾಗರದಾಚೆಯ ಇಂಚರ said...

Prabhu, no comments, simply superb,

shivu.k said...

ಪ್ರಭು,

ಎಂದಿನಂತೆ ಅದೇ ಸರಸ ಸಲ್ಲಾಪದ ಶೈಲಿಯಲ್ಲಿ ಲೇಖನ ಬರೆದಿದ್ದರೂ ವಿಚಾರ ಆಯ್ಕೆ ಮಾತ್ರ..ವಿಭಿನ್ನ. ಇಂಥ ವಿಚಾರಗಳನ್ನು ಆಯ್ಕೆಮಾಡಿಕೊಳ್ಳುವ ದೈರ್ಯಕ್ಕೆ ನಾನು ಅಭಿನಂದಿಸುತ್ತೇನೆ. ಮತ್ತು ವಿಚಾರವನ್ನು ಈ ರೀತಿ ವಿಶ್ಲೇಷಣೆ ಮಾಡಿರುವುದು ನನಗೆ ಇಷ್ಟವಾಯಿತು.

ನನಗನ್ನಿಸುತ್ತೆ ನಿಮ್ಮೊಳಗೆ ವಿಭಿನ್ನ ಚಿಂತಕನಿದ್ದಾನೆ ಅಂತ ನಿವ್ಯಾಕೆ ಸ್ವಲ್ಪ ಆ ದಿಕ್ಕಿನಲ್ಲಿ ನಿಮ್ಮ ಕೃಷಿ ಮಾಡಬಾರದು...

ಧನ್ಯವಾದಗಳು.

ರಾಜೀವ said...

ಪ್ರಭುಗಳೇ,

ನ್ಯಾಯಾಲಯದ ಇತ್ತೀಚಿನ ತೀರ್ಪು ಶೋಚನೀಯ. ಮುಂದೆ ಇನ್ನೇನೇನಾಗತ್ತೋ!! ನೆನಸ್ಕೊಂಡ್ರೆ ಭಯ ಆಗತ್ತೆ.
pinkಇನ ವಿಷಯ ಗೊತ್ತಿರಲಿಲ್ಲ. ಸದ್ಯ ನನ್ನ ಹತ್ತಿರ ping ಬಣ್ಣದ ವಸ್ತ್ರ ಇಲ್ಲ. ;)

Greeshma said...

ಪ್ರಭು ಸರ್,
ಯಾವುದೇ ವಿಚಾರನ ಒಂದು frame ಲಿಮಿಟ್ ನಲ್ಲಿ ಮಾತಾಡೋದರಲ್ಲಿ ತಪ್ಪಿಲ್ಲ. infact , ತಪ್ಪು ಆಗದೆ ಇರೋ ಹಾಗೆ ನೋಡಿಕೊಳ್ಳೋದಕ್ಕೆ, ನೀವು ಹೇಳಿದ ಹಾಗೆ ಸರಿಯಾದ ತಿಳುವಳಿಕೆ ಅಗತ್ಯ. pink , rainbow colors significance ಗೊತ್ತಿರ್ಲಿಲ್ಲ ;) topic ತುಂಬಾ sensitive, ತುಂಬಾ ಚೆನಾಗಿ ಹೇಳಿದ್ದೀರ ಹೇಳಬೇಕಾದ್ದ ವಿಷಯವನ್ನ.

ಬಾಲು said...

ಪ್ರಭು ಅವರೇ ಅವರನ್ನ ಗುರುತಿಸೋಕೆ. ಅಥವಾ ಗುರುತಿಸಿ ಕೊಳ್ಳೋಕೆ (ಪಿಂಕ್, ಸಾಕ್ಸ್ ) ಇ ತರ ಎಲ್ಲಾ ಇದೆಯೇ? ಗೊತ್ತಿರಲಿಲ್ಲ. ಒಟ್ಟಲ್ಲಿ ಕರ್ಮ ಕಾಂಡ ಅಷ್ಟೇ.

ಒಂದೇ ಲಿಂಗಿಯರ ಮೇಲೆ ಆಕರ್ಷಣೆ ಏನು ತಪ್ಪಿಲ್ಲ ಅನ್ನೋದು ಹಲವರ ವಾದ. ಅದಕ್ಕೆ ಶತಮಾನ ಗಳ ಇತಿಹಾಸ ಇದೆ ಅಂತೆ. ಇ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಹುಡುಗರನ್ನೇ ಗುರಾಯಿಸಿ ಕೊಂಡು ಹೋಗುತ್ತಿದ್ದ ಬೀದಿ "ಗೇ" ಕಾಮಣ್ಣ ಗಳಿಗೆ ಕೋರ್ಟ್ ತೀರ್ಪು ಕುಶಿ ಕೊಟ್ಟಿದೆ.

ವಿಷ್ಯ ಏನೇ ಇರಲಿ, ಒಬ್ಬ ಹುಡುಗನಿಗೆ ಗರ್ಲ್ ಫ್ರೆಂಡ್ ಇಲ್ಲ ಅಂದ್ರೆ ಜನ ವಿಚಿತ್ರ ದೃಷ್ಟಿ ಲಿ ನೋಡೋ ದಿನ ದೂರ ಇಲ್ಲ. ಇದೆ ಬೇಸರದ ಸಂಗತಿ.

Prabhuraj Moogi said...

SSK ಅವರಿಗೆ
ನಾವೆಲ್ಲ ಹಾಗೆ ಆಗದಿರಲಿ ಅಂತ ಬೇಡಿಕೊಳ್ಳಬಹುದು ಆದರೆ ಜನ ಮತ್ತೆ ಅವರೆಲ್ಲರ ವಿಚಾರ ಧೋರಣೆಗಳು ಬದಲಾಗುತ್ತಿವೆ, ಹಾಗಾಗಿ ಮುಂದೊಂದು ದಿನ ಇನ್ನೂ ಕೆಟ್ಟ ಪರಿಸ್ಥಿತಿ ಬರಬಹುದು, ಆದರೆ ಹಾಗಾಗದಂತೆ ಮುಂದೂಡಲು ಮಾತ್ರ ನಾವು ಪ್ರಯತ್ನಿಸಬಹುದು.

sunaath ಅವರಿಗೆ
ಮುದ್ದಣ ಮನೋರಮೆ ಸಲ್ಲಾಪ ಮುಂದೆ ಬರುವ ಜನಾಂಗಕ್ಕೆ ಹಿಡಿಸದೇ... ಮುದ್ದಣ,ಪೆದ್ದಣ ಇಲ್ಲಾ ಮನೋರಮೆ,ಸದಾರಮೆ ಸಲ್ಲಾಪ ಬಂದರೂ ಬರಬಹುದು ;) ಏನಂತೀರ?..
ಯಾವ ರಿಂಗೂ ಹಾಕೊಳ್ಳಲ್ಲ ಸರ್... ಎಂಗೇಜಮೇಂಟ ರಿಂಗ ಕೂಡ ಇಲ್ಲಾ(ಆಗಿಲ್ಲ ಅದಕ್ಕೆ)! ನನಗಿರೋಳು ನನ್ನಾk... "ನನ್ನವನಲ್ಲ"!!!

ಸಾಗರದಾಚೆಯ ಇಂಚರ ಅವರಿಗೆ
ಥ್ಯಾಂಕ್ಸ ಸರ್... ಹೀgay... ಛೆ,ಛೆ ಸ್ಪೆಲ್ಲಿಂಗ ಮಿಸ್ಟೆಕು.. ಹೀಗೇ ಓದುತ್ತಿರಿ...

shivu ಅವರಿಗೆ
ನೀವು ಇಷ್ಟಪಟ್ಟಿದ್ದು, ಈ ವಿಷಯ ಬರೆಯಲು ಕೈಗೆತ್ತಿಕೊಂಡದ್ದಕ್ಕೆ ನನಗೂ ಸಮಾಧಾನ ಅನಿಸಿದೆ, ಬರೆಯುತ್ತಿರುವಾಗ ಕೂಡ ಹೆದರಿಕೆ ಇತ್ತು ಓದುಗರು ಎಲ್ಲ ಹೇಗೆ ತೆಗೆದುಕೊಳ್ಳುತ್ತಾರೋ ಅಂತ...
ಚಿಂತಕ ಇರುವುದೇನೋ ನಿಜ ಆದರೆ ಅವನು ಏನೇನೋ ಚಿಂತಿಸುತ್ತಿರುತ್ತಾನೆ ಅದೇ ವಿಚಿತ್ರ, ಬಹಳ ಚಿಂತಿಸಿ ಎಲ್ಲಿ ನಿಮ್ಮ ಬೊಕ್ಕ ತಲೆಯ ಭೂಪಟಗಳಿಗೆ ಮಾಡೆಲ್ ಆದೀನೋ ಅನ್ನೊ ಭಯ :)(ತಮಾಷೆಗೆ).. ನಿಮ್ಮ ಸಲಹೆ ಬಗ್ಗೆ ಸ್ವಲ್ಪ ಸೀರಿಯಸ ಆಗಿ ಯೋಚಿಸುತ್ತೇನೆ ನೋಡೊಣ.

ರಾಜೀವ್ ಅವರಿಗೆ
ನ್ಯಾಯಾಲಯದ ತೀರ್ಪು ಯಾಕೊ ಸರಿಯಿಲ್ಲ, ಈಗ ಇದಕ್ಕೆ ಸಮ್ಮತಿ ಕೊಟ್ಟರೆ ಮುಂದೆ ಇನ್ನೇನಕ್ಕೆ ಸಮ್ಮತಿ ಕೊಡಬೇಕಾಗುತ್ತದೆ ಅನ್ನೊ ಯೋಚನೆ ಮಾಡಬೇಕಿತ್ತು. ಪಿಂಕ ಅಷ್ಟೇ ಅಲ್ಲ ವಾಯಲೇಟ್(ನೇರಳೆ)ಕೂಡ ಕೆಲವು ಕಡೆ ಅದೇ ಸಂಕೇತ(ಎಲ್ಲ ದೇಶಗಳಲ್ಲಿ ಅಲ್ಲ)... ಬಹಳ ಜನಕ್ಕೇ ಗೊತ್ತಿರಲ್ಲ(ಮೊದಲು ನನಗೂ ಗೊತ್ತಿರಲಿಲ್ಲ,ಕೊಲೀಗ ಹೇಳಿದಾಗಲೇ ತಿಳಿದದ್ದು)... ಎಲ್ಲ್ರಿಗೂ ಗೊತ್ತಿರಲಿ, ವಿದೇಶ ಪ್ರಯಾಣ ಮಾಡುವರಿಗಾದರೂ ಸಹಾಯವಾಗಲಿ ಅಂತ ಬರೆದೆ...

Greeshma ಅವರಿಗೆ
ನಿಜ ನೈತಿಕತೆಯ ಪರಿಧಿಯಲ್ಲಿ ಮಾತಾಡಲು ಅಡ್ಡಿಯಿಲ್ಲ, ಆದರೆ ಬರೆಯುತ್ತ ಬರೆಯುತ್ತ ಎಲ್ಲಿ ಏನು ಬರೆದು ಬಿಡುವೇನೊ ಅನ್ನೊ ಭಯ ಕಾಡಿದ್ದಿದೆ, ಇಂಥ ವಿಷ್ಯಗಳ ಬಗ್ಗೆ ಬರೆಯುವಾಗ ಬಹಳ ಜಾಗರೂಕರಾಗಿರಬೇಕು, ಇಲ್ಲಾಂದ್ರೆ ಒಂದು ಬರೆಯಲು ಹೋಗಿ ಇನ್ನೊಂದು ಆಗಿ ಬಿಡುತ್ತದೆ... ಹಾಂ ಹುಡುಗಿಯರು ಪಿಂಕ ಡ್ರೆಸ್ ಹಾಕಿದರೆ ತೊಂದ್ರೆ ಇಲ್ಲ, ಹುಡುಗರು ಶರ್ಟ ಹಾಕಿದರೆ ಇದು ಬಹಳ ಅನ್ವಯವಾಗುತ್ತದೆ(ಅದೂ ಕೆಲವು ದೇಶಗಳಲ್ಲಿ).

ಬಾಲು ಅವರಿಗೆ
ಹಾಂ ಸರ್ ನನಗೆ ಗೊತ್ತಿರುವ ಕೆಲವು ಸಂಕೇತಗಳನ್ನು ಮಾತ್ರ ಬರೆದಿದ್ದೇನೆ, ಇದೂ ಕಾಲ ಕಾಲಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತ ಬಂದಿದೆ.
ಈ ಫ್ಯಾಷನ್ನು ಇಂಡಸ್ಟ್ರಿಯ ಕೆಲವರ ಉದಾಹರಣೇ ಏನು ಕೊಟ್ಟೀದೀನಿ ಅಲ್ಲಿ ಹೀಗಾದಾಗ ಅದು ಸರಿ ಎಂದೂ ಕೆಲವರ ವಾದವಿದೆ!? ಆದರೆ ಮಕ್ಕಳು ತಿಳಿಯದೇ ಇಂಥ ಕೃತ್ಯಗಳಲ್ಲಿ ಭಾಗಿ ಆಗೋದು ಬೇಡ ಅನ್ನೋದೇ ನನ್ನ ಆಶಯ.
ಹುಡುಗೀ ಜತೆ ಸುತ್ತಿದರೆ ಜನ ಏನೇನೊ ಮಾತೋಡೊ ಕಾಲ ಇತ್ತು ಇನ್ನ ಮೇಲೆ ಹುಡುಗನ ಜತೆ ಸುತಾಡಿದರೆ ಮಾತಾಡೊ ಕಾಲ ಬಂದರೆ ಅಚ್ಚರಿಯೇನಿಲ್ಲ

ವಿನುತ said...

ಮತ್ತದೇ ಸರಸಮಯ ವಿಚಾರಭರಿತ ಬರಹ. ನಾವು ಬದಲಾಗುತ್ತಾ ಕಾಲವನ್ನು ದೊಶಿಸುವುದು ಎಷ್ಟು ಸರಿ ಎ೦ಬ ನಿಮ್ಮ ಪ್ರಶ್ನೆ ಇಷ್ಟವಾಯಿತು, ಉತ್ತರ ಗೊತ್ತಿಲ್ಲದಿದ್ದರೂ :)

Prabhuraj Moogi said...

ವಿನುತ ಅವರಿಗೆ:
ತಡವಾದ ಪ್ರತಿಕ್ರಿಯೆಗೆ ಕ್ಷಮಿಸಿ, ನಿಜ ಅಲ್ವಾ ಯಾವಾಗಲೂ ಬದಲಾಗುತ್ತಿರುವವರು ನಾವು ಸುಮ್ನೇ ಕಾಲ ಬದಲಾಗುತ್ತಿದೆ ಅಂತ ಹೇಳುತ್ತಿರುತ್ತೇವೆ. ಇಂಥ ಪಶ್ನೆಗೆ ಉತ್ತರ ಅಂತ ಇರುವುದಿಲ್ಲ, ಉತ್ತರದೊಂದಿಗೆ ಮತ್ತೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಧರಿತ್ರಿ said...

ಖಷಿಯಾಯಿತು..ಪ್ರಭುರಾಜ್. ಒಳ್ಳೆಯ ವಿಚಾರಗಳನ್ನು ಬರಹದೊಳಗೆ ತಂದಿಡ್ತೀರಾ.
-ಧರಿತ್ರಿ

Santhosh Rao said...

Prbhu...

Chintanege hachhuva bharaha... chennagide..

Dhanyavaadagalu

ಜಲನಯನ said...

ಪ್ರಭಣ್ಣ.. ಯಾಕಣ್ಣೋ..? ಗೇ..ಅಂದ್ರೆ..ಗೇಯ್ಮೆ ಅನ್ಕ್ಂಡಿದ್ದೆ....ಇದ್ಯಾವ್ದೋ...ಒಸಾ ಇಸ್ಯಾ ಯೋಳ್ತಾಯಿದ್ದೀಯ..ಅದೋಗ್ಲಿ ಅಂದ್ರೆ ಅಕ್ಕಂಗೂ ತಲೆ ತಿಂತಿದೀಯ...ಇನ್ನೊಂದದೇನೋ ಯೋಳಿದ್ದೀಯಾ..??!! ಲೇಸುಬ್ಬಿಯನ್ನಾ..??? ಅಂದ್ರೆ...ಸುಬ್ಬಿ-ಸುಬ್ಬಿ ಮದ್ವೆನಾ..?? ಇದ್ಯಾಕೋ ..ಯಡ್ವಟ್ಟ್ ಕಾಣಿಸ್ತದೆ...ಪಟ್ಣದೋರು..ತಿಳ್ಕಂಡೋರು..ಬುದ್ವಂತ್ರು ಅಂತ ನಾವೆಲ್ಲ ಅಳ್ಳೀ ಮಕ್ಳು ತಿಳ್ಕಂಡಿದ್ವಿ....ಬುಡು..ನಾವೇ..ವಾಸಿ..ಅಳ್ಳಿಯಾಗಿದ್ರೂ ಇಂತಾ ಎಡ್ವಟ್ಟ ನಾವ್ಮಾಡ್ಕಳಾಕಿಲ್ಲ...ಅಲ್ಲ...ಗಂಡ್ಸು-ಗಂಡ್ಸು ಮದ್ವೆ ಆದ್ರೆ..ಎಂಗಾದದು..???!! ಏಯ್...ಅದೇ ಕಣಣ್ಣ ಮಕ್ಳು ಮರಿ...,,ಅದೇನೋ ಗಾಜಿನ ಟೂಬೊಳಗೆ ಬುಟ್-ಬುಟ್ಟು ಮಾಡ್ತಾರಂತಲ್ಲ ಅದಾ...??? ಬ್ಯಾಡಪಾ ಸ್ವಾಮಿ..ನಿಮ್ ಪಟ್ಣದ್ ಸವಾಸ...ಅಳ್ಳಿ ಎಣ್ಮಕ್ಳನ್ನ ಪಟ್ನಕ್ ಕಳುಸ್ಬಾರ್ದು ಅಂದ್ಕೊಂಡಿದ್ವಿ..ಈ ವಾಗ ನಮ್ಗೂ ಗಂಡ್ಸರಿಗೂ ಅಪಾಯಾನೇಯಾ...ಅಲ್ವಾ..?? ಒಳ್ಳೇ ಕೆಲ್ಸ ಮಾಡ್ದೆ ಬುಡು..ಮೊದ್ಲೇ ಎಚ್ಚ್ರಿರ್ಸ್ ಬುಟ್ಟೆ.....ಸಿವಾ ಅಂತ ಅಳ್ಳ್ಯಾಗೇ ಇದ್ಬುಡ್ತೀವಿ...

Prabhuraj Moogi said...

ಧರಿತ್ರಿ ಅವರಿಗೆ
ಎನೋ ಬರೀಬೇಕನಿಸಿದ್ದು ಗೀಚಿ ಹಾಕ್ತೇನೆ...

ಸಂತೋಷ್ ಚಿದಂಬರ್ ಅವರಿಗೆ
ಚಿಂತನೆ ಹಾಗೆ ಚಿಂತೆ ಎರಡ್ಕ್ಕೂ ಈಡು ಮಾಡಿದ ವಿಷಯ ಇದು ಅಲ್ವಾ...

ಜಲನಯನ ಅವರಿಗೆ
ಮತ್ತೊಂದು ಸುಂದರ ಅನಿಸಿಕೆ ನಿಮ್ಮಿಂದ...
ನಾ ಸುಮ್ಕೇ ಕೂತಿದ್ದೆ ಕಣಣ್ಣ.. ತೆಪ್ಪಗಿರದೇ ಅವ್ಳೆ ಇಸ್ಯಾ ಎತ್ತಿದ್ದು, ಇದ್ದದ್ ಇದ್ದಾಂಗೆ ಹೇಳ್ದೆ, ದಿಟ ಇರೋದ್ನ ಅಂಗೆಯಾ ಹೇಳೋದಲ್ವಾ... ತೆಪ್ಪ ಹೇಳುದ್ರೆ ಸಿವಾ ಮೆಚ್ಚಾಕಿಲ್ಲ... ಅಳ್ಳಿಯಾಗೆ ಏನು ಪಟ್ಟಣದಾಗೆ ಏಟೊ ಜನಕ್ಕೆ ಗೊತ್ತಿಲ್ಲ ಅಂತೀನಿ, ಶಾನೆ ಬೇಜಾರಾಯ್ತು ಇಂಗೂ ಆಯ್ತದಾ ಅಂತ... ಅಳ್ಳಿಯಾಕೆ ಏನು ಬರೋಕಿಲ್ಲ ಅಂತೀಯಾ, ಬತ್ತದೆ ಎಲ್ಲ ಟೇಮು ಕಣಣ್ಣ, ಇಂದಾಗಿಲ್ಲ ಅಂದ್ರೆ ನಾಳೆ... ಮಕ್ಳು ಮರಿ ಇದ್ರೆ ಅವ್ಕೇ ಇದ ತೆಪ್ಪು... ಇದನಾ ಮಾಡೀಯಾ... ಅಂತ ಬುದ್ಧಿ ಯೇಳ್ಬೇಕು ಅಟ್ಟೆಯಾ...

ಜಲನಯನ said...

ಸೂಪರ್, ಪ್ರಭು...ಹ..ಹಹ, ಸ್ವಲ್ಪ ತಡಿಯಿರಿ ಇದು ನಿಮ್ಮ ಹಿಂದಿನ ‘ಗೇ‘ ಪೋಸ್ಟ್ ಗೆ... ನೀವು ನನ್ನ ಪ್ರತಿಕ್ರಿಯೆಗೆ ಬಹಳ ಚನ್ನಾಗಿ ಅದೇ ಭಾಷಾಶೈಲಿಯಲ್ಲಿ ಉತ್ತರಿಸಿದ್ದೀರಿ..
ಇನ್ನು ಈ ಪೋಸ್ಟ್...ಅಲ್ಲ ನಿಮಗೆ ಸಮಯ ಹೇಗೆ ಸಿಗುತ್ತೆ ಅಂತ..? ಅದೂ ಸಿಕ್ಕ ಸಮಯದಲ್ಲಿ...ಬಹಳ ಸುಲಲಿತವಾಗಿ...ಸರಾಗಶೈಲಿಯಲ್ಲಿ ಬರೀತೀರ...ಇದು ನಿಮ್ಮ ಬಹುದೊಡ್ಡ ಪ್ಲಸ್ ಪಾಯಿಂಟ್...ಹೀಗೇ ಉಣುಸ್ತಾಯಿರಿ ..ನಾವು ಉಂಡು ತೇಗ್ತೇವೆ....ಹ್ರಾಂಂಂ ...‘ಅನ್ನದಾತ ಸುಖೀಭವ‘

Prabhuraj Moogi said...

ಜಲನಯನ ಅವರಿಗೆ:
ಇದಕ್ಕೆ ಪ್ರತಿಕ್ರಿಯೆ ಮುಂದಿನ(ಹುಡುಕಾಟ ಹುಡುಗಾಟ)ಲೇಖನದಲ್ಲಿದೆ ನೋಡಿ... ಅನ್ನದಾನದ ಪುಣ್ಯ ನನಗೆ ಹಾಗಾದ್ರೆ :)