ಮುಂಜಾನೆ ಎಫ್ ಎಂ ರೇಡಿಯೋ ಕೇಳುತ್ತಲೇ ಇವಳೆಲ್ಲ ಕೆಲಸ ಮಾಡೊದು ಹೀಗಾಗಿ ಕೆಲವೊಮ್ಮೆ ಇಷ್ಟವಾಗದಿದ್ದರೂ ಅವಳಿಂದಾಗಿ ಅದು ನನ್ನ ಕಿವಿ ಮೇಲೆ ಬೀಳುತ್ತಲೇ ಇರುತ್ತದೆ. ಇತ್ತೀಚಿನ ಆ ರೇಡಿಯೊ ಜಾಕಿಗಳ ಮಾತುಕತೆಯಂತೂ ಬಹಳ ಕಿರಿಕಿರಿಯಾಗುತ್ತದೆ, ಅವರ ಮಾತಿನ ಹಾಗೂ ಜಾಹೀರಾತಿನ ನಡುವೆ ಎಲ್ಲೋ ಸ್ವಲ್ಪ ಹಾಡು ಕೇಳಿಸಿದರೆ ಅದೇ ನಮ್ಮ ಅದೃಷ್ಟ. ಅಂದು ದುನಿಯಾದ ಹಾಡೊಂದು ಕೇಳಿ ಬರುತ್ತಿತ್ತು... "ಕರಿಯ ಆಯ್ ಲವ್ ಯು..." ಅಂತ.. ನಾನೂ ನನ್ನ ಸಾಹಿತ್ಯ ಸ್ವಲ್ಪ ಸೇರಿಸಿ ಗುನುಗುನಿಸುತ್ತಿದ್ದೆ ಬಾತರೂಮಿನಲ್ಲಿ... ನನ್ನದೇ ದನಿ ಸ್ವಲ್ಪ ಹೆಚ್ಚಾಯಿತೆನ್ನಿಸುತ್ತದೆ, ಪಾಕಶಾಲೆಯಿಂದ ಇವಳು "ರೀ ಎಸ್ ಪೀ ಬಾಲಸುಬ್ರಹ್ಮಣ್ಯಂ ಅವರೇ ಸ್ವಲ್ಪ ಹಾಡೋದು ನಿಲ್ಲಿಸ್ತೀರಾ, ರೇಡಿಯೋದಲ್ಲಿ ಹಾಡು ಬರ್ತಿದೆ, ಆಮೇಲೆ ನೀವು ಹಾಡುವಿರಂತೆ" ಅಂತ ಗದರಿದಳು. "ಆಯ್ತು ಲತಾ ಮಂಗೇಶ್ಕರ ಅವರೇ, ಆಮೇಲೆ ಇಬ್ಬರೂ ಸೇರಿ ಹಾಡೊಣಾ ಅಂತೆ" ಅಂತ ಮಾರುತ್ತರ ಕೊಟ್ಟೆ. ಅಷ್ಟರಲ್ಲಿ ಹಾಡು ಮುಗಿಯಿತು, ಇಲ್ಲಾ ಅವರೇ ಮುಗಿಸಿದರೋ(ಜಾಹೀರಾತು ಹಾಕಬೇಕಲ್ಲ)... ಹಾಡು ನಿಂತಹೋಯಿತಲ್ಲ, ಅವಳ ಅಪ್ಪಣೆಯಂತೆ ನಾ ಮತ್ತೆ ಹಾಡ ಬಹುದಿತ್ತು, ಮತ್ತೆ ಶುರುವಿಟ್ಟುಕೊಂಡೆ... ಅವಳೂ ದನಿ ಸೇರಿಸಿದಳು "ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ.." ನಾನೂ ಜತೆಯಾದೆ, "ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ..." ಅಂತ... ಅದೇ ಸಾಲಿನ ಯೋಚನೆಯಲ್ಲೇ "ನೀನ್ಯಾವತ್ತು ನನಗೆ ಪ್ರೇಮಪತ್ರ ಬರೆದೇ ಇಲ್ವಲ್ಲ" ಅಂದೆ.. ನಾಚಿ ಅವಳ ಕೆನ್ನೆ
ಕೆಂಪಾಯಿತು.. "ನೀವು ಬರೆದಿರಬೇಕಲ್ಲ, ಮೊದಲೇ ಕೃಷ್ಣ ಪರಮಾತ್ಮನ ಕಲಿಯುಗದ ಅವತಾರ, ಯಾರ್‍ಯಾರಿಗೆ ಎಷ್ಟು ಬರೆದೀದೀರಿ" ಅಂದ್ಲು. ನಾನು ಒಂದು ಪ್ರೇಮಪತ್ರದ ಮಾತೆತ್ತಿದರೆ ಇವಳು ಎಷ್ಟು ಅಂತ ಎಣಿಕೆ ಕೇಳಬೇಕೆ? "ಕಾಲೇಜಿನಲ್ಲಿ ಹುಡುಗನಿಗೊಬ್ಬನಿಗೆ ಗೆಳೆಯರೆಲ್ಲ ಸೇರಿ ಹುಡುಗಿ ಹಾಗೆ ಪತ್ರ ಬರೀಬೇಕಾದ್ರೆ ಎನು ಚೂರು ಪಾರು ಸಲಹೆ ನೀಡಿದ್ದು ಬಿಟ್ಟರೆ, ಎಲ್ಲೊ ನಾ ಬರೆದ ನಾಲ್ಕು ಸಾಲುಗಳನ್ನು ಯಾರೋ ತಮ್ಮ ಪತ್ರದಲ್ಲಿ ಉಪಯೋಗಿಸುತ್ತೀನಿ ಅಂತದದ್ದಕ್ಕೆ ಓಕೆ ಅಂದಿದ್ದೆ ಅಷ್ಟೇ, ಪತ್ರಗಿತ್ರ ಬರೆಯೋ 'ಸಾಹಸ'ಕ್ಕೆ ಕೈ ಹಾಕಿಲ್ಲ ಬಿಡು, ಅಲ್ಲದೇ ಪ್ರೀತಿ ಮಾಡುವಷ್ಟು ಯಾರೂ ನನಗೆ ಇಷ್ಟವೇ ಆಗಲಿಲ್ಲ" ಅಂದೆ. "ನನಗಾದ್ರೂ ಒಂದು ಬರೀಬೇಕಿತ್ತಲ್ಲಾ?ಯಾಕೆ ನಾನೂ ಇಷ್ಟ ಅಗಿಲ್ವಾ" ಅಂದ್ಲು. "ಅಲ್ಲಾ ನಿಶ್ಚಿತಾರ್ಥ ಅಂತ ಆದ ಮೇಲೆ ಒಂದು ಬರೆಯೋಣ ಅಂತಿದ್ರೆ, ಮುಂಜಾನೆ ಕಾಲು ಘಂಟೆ, ಮಧ್ಯಾಹ್ನ ಒಂದು ಘಂಟೆ, ರಾತ್ರಿಯೊ ಘಂಟೆಗಳ ಲೆಕ್ಕ ಇಲ್ಲದ ಹಾಗೆ ಫೋನು ಮಾಡಿ ಮಾತಾಡ್ತಿದ್ದೆ, ಇನ್ನು ಪತ್ರದಲ್ಲಿ ಬರೆಯೋಕೆ ಎನಿರತ್ತೆ ಮಣ್ಣು ಎಲ್ಲ ಮಾತಾಡಿ ಮುಗಿಸಿದ ಮೇಲೆ, ಅದಕ್ಕೇ ಬರೀಲಿಲ್ಲ" ಅಂದೆ. ಅವಳಿಗೂ ಅದು ಸರಿಯೆನಿಸಿರಬೇಕು ಸುಮ್ಮನಾದ್ಲು.
ಆದರೆ ನನಗೇಕೋ ಈ ಫೊನು ಬಂದು ಪತ್ರ ಬರೆಯೋದನ್ನೆ ಇಲ್ಲದಾಗಿಸಿಬಿಟ್ಟಿತಲ್ಲ ಅಂತ ತಲೆಯಲ್ಲಿ ಕೊರೆಯುತ್ತಿತ್ತು ಆ ಯೋಚನೆ. ಅದೇ ಯೊಚನೆಯಲ್ಲೇ, ಅಫೀಸಿಗೆ ಬಂದೆ, ಅಲ್ಲಿ ನೋಡಿದ್ರೆ ನೆಟವರ್ಕ ಪ್ರಾಬ್ಲಂ ಆಗಿದೆ, ಇಂಟರನೆಟ್ಟು, ಆಯ್ ಪಿ ಫೋನು ಏನೂ ಕೆಲ್ಸ ಮಾಡ್ತಿಲ್ಲ, ಅದಕ್ಕೆ ಸಧ್ಯ ಅದು ಸರಿ ಹೋಗೊವರೆಗೆ ಏನೂ ಕೆಲಸ ಮಾಡಾಕಾಗಲ್ಲ ಅಂದ್ರು. ನಾ ನಕ್ಕೆ, ಕೆಲ್ಸ ಇಲ್ಲ ಅಂತಲ್ಲ, ಅಲ್ಲಾ ಈವತ್ತೇ ಪತ್ರದ ಬಗ್ಗೆ ಮಾತಾಡ್ತಿದ್ದೆ, ಫೋನು, ಇ-ಮೇಲ್ ಎಲ್ಲ ಇಲ್ಲದಾಗಿ ಬಿಡಬೇಕಾ ಹ ಹ ಹ... ಕ್ಯಾಂಟೀನಿಗೆ ಹೋಗಿ ಬಿಸಿ ಕಪ್ಪು ಕಾಫಿ ಹೊಟ್ಟೆಗೆ ಇಳಿಸಿದ್ದಾಯ್ತು. ಆಗಲೇ ಬಂದದ್ದು ಯೋಚನೆ ನನ್ನಾಕೆಗೆ ಈಗ ಯಾಕೆ ಪತ್ರ ಬರೀಬಾರದು ಅಂತ... ಕಾನ್ಫರೆನ್ಸ ರೂಮ ಒಂದು ಸೇರಿಕೊಂಡು ಕೂತು ಪೆನ್ನು ಪೇಪರು ತೆಗೆದುಕೊಂಡು ಬರೆಯಲು ಕೂತೆ...
ಪ್ರೀತಿಯ, ನನ್ನವಳೇ, ನನ್ನಾಕೆಯೆ, ಲೇ ಇವಳೇ, ತಗಡು, (ಅಲ್ಲಾ ಎದುರು ಮಾತಾಡೋವಾಗ್ಲೇ ನಿನ್ನ ಹೆಸರಿಂದ ಕರೆದಿಲ್ಲ, ಇನ್ನು ಪತ್ರದಲ್ಲಿ ಯಾಕೆ?) ಅದಕ್ಕೇ
ಪ್ರೀತಿಯ ನಿನಗೆ,
ಇಲ್ಲಿ ಎನೂ ಕ್ಷೇಮವಿಲ್ಲ, ಕೆಲಸ ಇಲ್ಲಾ, ಖಾಲೀ ಕೂತಿದ್ದೇನೆ, ಕಾಡಿಸೊಣಾ ಅಂದ್ರೂ ನೀನಿಲ್ಲ, ಅಲ್ಲಿನ ಕ್ಷೇಮ ಸಮಾಚಾರವನ್ನು ನಿರಂತರವಾಗಿ ಏನ್ ಡಿ ಟೀವೀ ಬ್ರೇಕಿಂಗ ನ್ಯೂಜ ಥರ ನೀನು ಫೋನು ಮಾಡಿ ತಿಳಿಸುವುದರಿಂದ.. ಅಲ್ಲಿ ಎಲ್ಲ ಕ್ಷೇಮವಾಗಿದೆ ಎಂದುಕೊಳ್ಳುತ್ತೇನೆ.
ಮುಂಜಾನೆ ಅಲ್ಲಿಂದ ಆಫೀಸಿಗೆ ಹೊರಟು ಘಂಟೆಕಾಲದ ಈ ಟ್ರಾಫಿಕ್ಕಿನಲ್ಲಿ ಹಾಗೂ ಹೀಗೂ ಬಂದು ತಲುಪಿದ್ದೇನೆ, ಪ್ರಯಾಣ ಸುಖಕರವಾಗಿತ್ತು(ಸಿಗ್ನಲ್ಲಿನಲ್ಲಿ ಸುಂದರಿಯರು ಸಿಕ್ಕಿದ್ದರಲ್ಲ), ಸರಿಯಾಗಿ ಬಂದು ತಲುಪಿದ್ದು ನನ್ನ ಅದೃಷ್ಟ. ಬೈಕಿನಲ್ಲಿ ಬಂದಿದ್ದರಿಂದ ಬೇಗ ತಲುಪಿದೆ, ಬಸ್ಸಿನಲ್ಲಿ ಬರುವುದಾಗಿದ್ದರೆ, ಊಹಿಸಲೂ ಸಾಧ್ಯ ಇಲ್ಲ.
ಈಗ ಪತ್ರ ಬರೆಯಲು ಕಾರಣವೇನೆಂದರೆ, ಪತ್ರ ಬರೆಯೋದೇ ಆಗಿದೆ. ನಸುಕಿಗೆ ಕೇಳಿದ ಹಾಡು ನನ್ನ ಮನದಲ್ಲಿ ಹಾಗೆ ಕೊರೆಯುತ್ತಿತ್ತು ಅದರಲ್ಲೂ ನೀನು ಪತ್ರ ಬರೆದೇ ಇಲ್ಲಾ ಅಂದಾಗ ನೀನು ಬರೆದಿಲ್ಲದಿದ್ದರೂ ನಾನ್ಯಾಕೆ ಬರೆಯಬಾರದು ಅಂತ ಬರೆಯಲು ಕುಳಿತೆ.
ಮದುವೆಯಾಗಿ ಇನ್ನೂ ಎಣಿಕೆ ಮಾಡಿ ಹೇಳೊವಷ್ಟು ವರ್ಷಗಳಾಗಿಲ್ಲ ಆದರೂ ಕಷ್ಟಾನೋ ಸುಖಾನೋ ನಾವಿಬ್ಬರೂ ಬೇವು ಬೆಲ್ಲದಂತೆ ಬದುಕು ಅಂತ ಹೊಂದಿಕೊಂಡು ಹೋಗುತ್ತಿದ್ದೇವೆ. ಮದುವೆಯಾದ ಹೊಸತನದಲ್ಲಿನ ನಿನ್ನ ಹಿಂಜರಿತ ಈಗ ಇಲ್ಲವಾಗಿ ನನ್ನೊಂದಿಗೆ ನಿರ್ಭಿಡೆಯಿಂದ ಮಾತಾಡುತ್ತೀ... ಹಾಗಾಗಿ ಎಲ್ಲ ಪಾರದರ್ಶಕವಾಗಿರುವುದರಿಂದ ಅನುಮಾನಗಳು ಹುಟ್ಟಿ ನಮ್ಮಿಬ್ಬರ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಲು ಎಲ್ಲಿ ಆಸ್ಪದವಿದೆ. ಬರೀ ನನ್ನೊಂದಿಗೆ ಮಾತ್ರವಲ್ಲ ನನ್ನವರೊಂದಿಗೂ ನೀ ಬೆರೆತುಕೊಂಡ ರೀತಿ ನನಗೆ ನಂಬಲಾಗುತ್ತಿಲ್ಲ. ನೀನಿಲ್ಲದೇ ನನಗೆ ಒಂದು ದಿನ ಕೂಡ ಕಳೆಯಲಾಗದಷ್ಟು ನನ್ನ ಆವರಿಸಿಕೊಂಡಿರುವಿ. ಚುನಾವಣೆಗೆ ನಿಂತ ರಾಜಕೀಯ ಮುಖಂಡನನ್ನು ಹಿಂಬಾಲಕರು ಹೊಗಳಿದಂತೆ ನನ್ನವು ಹೊಗಳಿಕೆ ಮಾತೆಂದುಕೊಳ್ಳಬೇಡ, ನನ್ನ ಮನದಿಂದ ನನಗನಿಸಿದ್ದು ಮಾತ್ರ ಹೇಳುತ್ತಿದ್ದೇನೆ.
ನಾಯಿ ಬೆಕ್ಕಿನಂತೆ ನಾವಿಬ್ಬರೂ ಎಷ್ಟು ಸಾರಿ ಕಚ್ಚಾಡಿಲ್ಲ, ನಶೆಯೇರದೇ ನಟಿಸಿ ಗೋಳು ಹೊಯ್ದುಕೊಂಡಿದ್ದು, ಸೀರೆ ಖರೀದಿ ಮಾಡಿ ಬಂದಾಗ ಕಣ್ಣಂಚಲ್ಲಿ ಕಣ್ಣೀರಿನೊಂದಿಗೂ ನಿನ್ನ ನಗಿಸಿದ್ದು, ಒಂದೇ ಎರಡೇ ನನ್ನ ಕೀತಾಪತಿಗಳು ಎಲ್ಲವನ್ನೂ ಸಹಿಸಿ, ನಿನ್ನ ಪ್ರೀತಿಯ ಪರಿಧಿಯಲ್ಲಿ ನನ್ನ ಬಂಧಿಸಿ ಬಿಗಿದಪ್ಪಿಕೊಂಡಿದ್ದು ಎಲ್ಲ ನೆನಸಿದರೆ ನಿನ್ನ ನನ್ನಾಕೆಯಾಗಿ ಪಡೆದ ನಾನೇ ಧನ್ಯ. ಇನ್ನೇನು ಹೇಳಲಿ ನಿನ್ನಲ್ಲಿ ನನ್ನದೊಂದೇ ಕೋರಿಕೆ, ದಾರಿ ತಪ್ಪಿ ತಪ್ಪುಗಳ ಮಾಡಲು ನಮಗೆಷ್ಟು ತಿರುವುಗಳಿದ್ದವು, ಎಲ್ಲ ಮೀರಿ ಸರಿದಾರಿಯಲ್ಲಿ ಇಷ್ಟೊಂದು ದೂರ ಪಯಣಿಸಿ ಬಂದಿದ್ದೇವೆ. ನನ್ನ ಈ ಬರುಡು ಬದುಕನ್ನು ಹಸಿರು ಕಾನನ ಮಾಡಲು ನನಗೆ ಹೀಗೆ ಜತೆಯಾಗು, ಎಲ್ಲರಿಗೂ ಮಾದರಿಯಾಗಿ ಬಾಳಿ ತೋರಿಸೋಣ.
ಹೆಚ್ಚಿಗೇನು ಬರೆಯಲು ಇಲ್ಲ, ಹಾಂ ಮುಂಜಾನೆ ನೀ ಹಾಕಿದ್ದ ರಂಗೋಲಿ ಬಹಳ ಚೆನ್ನಾಗಿತ್ತು, ಅದರಲ್ಲಿ ಬಣ್ಣ ತುಂಬಿದ್ದರೆ ಇನ್ನೂ ಚೆನ್ನಾಗಿರೋದು, ನಾನು ಬಣ್ಣ ತುಂಬಲು ಹೆಲ್ಪು ಮಾಡುತ್ತೀನಿ ಅಂದ್ರೂ ನೀನು ಬಿಡಲ್ಲ ಏನ್ ಮಾಡೊದು. ಈ ನೆಟವರ್ಕ ತೊಂದ್ರೆಯಿಂದಾಗಿ ಭಾರೀ ಒತ್ತಡದ ಕೆಲಸದ ನಡುವೆ ಬಿಡುವು ಸಿಕ್ಕಿತ್ತು, ಮತ್ತೆ ಸರಿಯಾಗಿರಬೇಕು ಹೋಗಿ ನೋಡುತ್ತೇನೆ, ಹೊಟ್ಟೇ ಪಾಡು ಕೆಲಸ ಮಾಡಲೇಬೇಕಲ್ಲ, ಸಂಜೆ ಬೇಗ ಬರ್ತೀನೆ.
ಪಕ್ಕದ ಮನೆ ಪದ್ದು, ಮತ್ತು ಹಾಲಿನಂಗಡಿ ಹಾಸಿನಿನಾ ಕೇಳ್ತಾ ಇದ್ದೆ ಅಂತ ಹೇಳು... ಪರಫ್ಯೂಮ್ ಪರಿಮಳ ಅವರು ಬಂದ್ರೆ ನನ್ನ ನಮಸ್ಕಾರಗಳನ್ನು ತಿಳಿಸು.
ಇಂತೀ ಪ್ರೀತಿಯಿಂದ
ನಿನ್ನವ.
ಅಂತೂ ಇಂತೂ ಮೊದಲ ಪ್ರೇಮ ಪತ್ರ ಬರೆದು ಹಾಕಿದೆ, ಏನೊ ಮನಸಿಗೆ ಹಿತವೆನ್ನಿಸಿತು, ಫೋನಿನಲ್ಲಿ ಘಂಟೆಗಟ್ಟಲೇ ಮಾತಾಡಬಹುದು ಏನು ಬೇಕಾದ್ರೂ, ಅದೇ ಬರೆಯಲು ಆಗಲ್ಲ, ಬರೆಯಲು ಪದಗಳು ಸಿಗೋದಿಲ್ಲ, ಎಲ್ಲಿ ಸರಿಯಾಗಿದೆಯೋ ಇಲ್ವೊ, ಅಲ್ಲಿ ತಪ್ಪಾಯಿತು, ಇಲ್ಲಿ ಸರಿ ಮಾಡು, ಅಂತ ನಾಲ್ಕು ಸಾರಿ ಬರೆದು ಗೀಚಿ, ಗೀಟು ಹಾಕಿ, ಹರಿದು ಬೀಸಾಕಿ, ಬಹಳಷ್ಟು ಶ್ರಮ ಪಟ್ಟಾಗಲೇ ಒಂದು ಸುಂದರ ಪತ್ರ ತಯ್ಯಾರಾಗೋದು, ಆದರೂ ಆ ಶ್ರಮ ಸಾರ್ಥಕ, ಪತ್ರ ಜತನವಾಗಿ ಕಾದಿಟ್ಟು, ಮತ್ತೆ ಮತ್ತೆ ಓದಬಹುದು, ನೆನಪಿನ ಖಜಾನೆಯನ್ನು ಮತ್ತೆ ಮತ್ತೆ ತೆರೆದು ನೋಡಬಹುದು, ಅದೇ ಫೋನಿನಲ್ಲಿ ಮುಂಜಾನೆ ಮಾತಾಡಿ ಸಂಜೆ ಮರೆತು ಬಿಡಬಹುದು. ಫೊನಿನಲ್ಲಿ ಒಂದು ಸಾರಿ ಪ್ರೀತಿಸುತ್ತೀನಿ ಅಂತ ಒಂದು ಸಾರಿ ಭಾವನೆಗಳ ಬಿಚ್ಚಿಡಬಹುದು, ಆದರೆ ಒಂದು ಸಾರಿ ಹೀಗೆ ಬರೆದು, ಅವರು ಅದನ್ನು ಬಚ್ಚಿಟ್ಟುಕೊಂಡು, ಆಗಾಗ ಬಿಚ್ಚಿ ಓದುತ್ತಿದ್ದರೆ, ಒಂದು ಸಾರಿ ಹೇಳಿದ್ದು ನೂರು ಸಾರಿಯಾಗಿರುತ್ತದೆ. ಕೆಲವೊಮ್ಮೆ ಪತ್ರದಲ್ಲಿ ಬರೆದ ಕೆಲ ಸಂಗತಿಗಳು ಅನಾಹುತಕ್ಕೆ ಎಡೆ ಮಾಡಿಕೊಡಬಹುದಾದರೂ, ಪತ್ರಗಳದ್ದೇ, ಒಂದು ಭಾವನೆಗಳ ಬಿತ್ತರಿಸುವ ವಿಭಿನ್ನ ವೈಖರಿ. ಅದೆಲ್ಲ ಈ ಆಧುನಿಕತೆಯಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ ಅನ್ನಿಸಿತು, ಅದಕ್ಕೆ ನಾ ನನ್ನವಳಿಗೆ ಬರೆದೆ... ಪತ್ರಗಳನ್ನು ನನ್ನ ಬದುಕಿನಲ್ಲಿ ಜೀವಂತವಾಗಿರಿಸಿದೆ, ನಿಮ್ಮ ನಿಮ್ಮ ಅನುಕೂಲಗಳು ನಿಮಗೆ ಬಿಟ್ಟಿದ್ದು.
ಪತ್ರ ಬರೆದದ್ದೇನೊ ಆಯ್ತು, ಇನ್ನು ಪೋಸ್ಟಿಗೆ ಹಾಕಿದ್ರೆ, ಅದು ಯಾವಾಗ ಹೋಗಿ ತಲುಪುತ್ತೋ ಯಾರಿಗೆ ಗೊತ್ತು, ನಾ ಮನೆಗೆ ಹೋಗಿ ನಾಲ್ಕು ದಿನಗಳಾದ ಮೇಲೆ ತಲುಪಿದರೆ ತಲುಪೀತು ಅಂದುಕೊಂಡು, ಆಫೀಸಿನಲ್ಲಿ "ಸೂಪರ್ ಸೇವಾ" ಅಂತ ಸೌಲಭ್ಯವಿದೆ, ಬಿಲ್ಲ್ ತುಂಬಲು, ಕೊರಿಯರ್ ಮಾಡಲು.. ಅವರನ್ನು ಹೋಗಿ ಕೇಳಿದ್ದಕ್ಕೆ, ಲೋಕಲ ಕೊರಿಯರ ಈಗ ಕೊಟ್ಟರೆ ಮಧ್ಯಾಹ್ನ ತಲುಪುತ್ತದಂತ ಕೇಳಿ ಖುಶಿಯಾಗಿ ಕೊರಿಯರ ಮಾಡಿ ಬಂದು ಕುಳಿತೆ... ಫೋನಿನಲ್ಲಿ ಮತ್ತೆ ಎಫ್ ಎಂ ಹಾಕಿಕೊಂಡೆ "ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ ಹೇಗೆ ಹೇಳಲಿ ನನ್ನ ಮನದ ಹಂಬಲ..." ಹಾಡು ಬರುತ್ತಿತ್ತು... ಅಯ್ಯೊ ಸಾಕಪ್ಪ ಪತ್ರ ನಾನು ಬರೆದಾಯ್ತು, ಇನ್ನೆಲ್ಲಿ ಚಿತ್ರ ಬಿಡಿಸಲಿ.. ಅಂತ ಆಫ್ ಮಾಡಿದೆ... ನೋಡಬೇಕು ಪತ್ರ ಓದಿ ಫೋನು ಮಾಡುತ್ತಾಳೋ ಇಲ್ಲಾ ಪತ್ರ ಬರೆಯುತ್ತಾಳೊ... ನಿಮಗೆ ಇಷ್ಟವಾಗಿದ್ದರೆ, ನೀವು ಪತ್ರ(ಇಂಚೆ) ಇಲ್ಲಾಂದ್ರೂ ಕಾಮೆಂಟಾದ್ರೂ ಬರೆಯುತ್ತೀರಲ್ಲವೇ...
ಮತ್ತೆ ಸಿಕ್ತೀನಿ, ಹೀಗೆ ಪತ್ರ, ಅಲ್ಲಲ್ಲ ಬ್ಲಾಗ ಪೋಸ್ಟಿನಲ್ಲಿ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಈ ಲೇಖನದೊಂದಿಗೆ ನನ್ನವಳೊಂದಿಗಿನ ನನ್ನ ಲೇಖನಗಳು ಇಪ್ಪತ್ತೈದರ ಗಡಿ ತಲುಪಿವೆ(ಇದೇ ೨೫). ಎಲ್ಲ ಲೇಖನಗಳ ತಲೆಬರಹಗಳ ತುಣುಕುಗಳನ್ನು ಈ ನನ್ನ ಪತ್ರದಲ್ಲಿ ಹುದುಗಿಸಿದ್ದೇನೆ... ಆಸಕ್ತಿಯಿದ್ದವರು ಅವನ್ನೂ ಓದಬಹುದು, ಇಷ್ಟು ದೂರ ಬ್ಲಾಗ ಲೋಕದಲ್ಲಿ ಪಯಣಿಸಲು ನಿಮ್ಮೆಲ್ಲ ಓದುಗರ, ಹಾಗೂ ಸಹ ಬ್ಲಾಗಿಗರ ಪ್ರೊತ್ಸಾಹವೇ ಕಾರಣ, ಅದಕ್ಕೆ ನಿಮೆಲ್ಲರಿಗೂ ನಾನು ಚಿರಋಣಿ, ಹಾಗೆ ಎಲ್ಲ ಲೇಖನಗಳ ಸಂಕಲನ ಮಾಡಿ PDF ಫೈಲು ಮಾಡಿ ಲಿಂಕು ಕೊಡುತ್ತಿದ್ದೇನೆ, ಬಹಳ ದೊಡ್ಡ ದೊಡ್ಡ ಲೇಖನಗಳಾದ್ದರಿಂದ ಇಲ್ಲಿ ಓದಲಾಗದವರು ಅದನ್ನು ಡೌನಲೋಡ ಮಾಡಿಕೊಂಡು ಓದಬಹುದು, ಇದೆಲ್ಲದರ ಬದಲಿಗೆ ನಿಮ್ಮಿಂದ ಒಂದೆರಡು ಮೆಚ್ಚುಗೆಯ ನುಡಿಗಳು ಮಾತ್ರ ನನ್ನ ನಿರೀಕ್ಷೇ. ಹೀಗೆ ಬರುತ್ತಿರಿ...
25 Posts single PDF document
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, May 10, 2009
ಪತ್ರ ಬರೆಯಲಾ...
Sunday, May 3, 2009
ಬಸ್ಸು ಬಂತು ಬಸ್ಸು...
ಬೇಗ ಬೇಗ ರೆಡಿ ಆಗುತ್ತಿದ್ದೆ, ಬೈಕು ಸರ್ವೀಸಿಂಗಗೆ ಕೊಡಬೇಕಿತ್ತು, ಲೇಟಾದರೆ ಎಲ್ಲಿ ನನ್ನ ಸರದಿ ಬರುವುದಿಲ್ಲವೊ ಅಂತ. ನನ್ನ ಗಡಿಬಿಡಿ ನೋಡಿ ಅವಳು ಬಂದು "ಏನು ಅಷ್ಟು ಅವಸರ, ಏನ್ ನಿಮ್ ಲವರ್ ಯಾರದ್ರೂ ಕಾಯ್ತಾ ಇದಾಳ" ಅಂದ್ಲು. "ಯಾರೂ ಇಲ್ಲಾ ಕಣೇ" ಅಂತ ಹಲ್ಲು ಕಿರಿದೆ, "ಅಹಾಹಾ ನಂಗೊತ್ತಿಲ್ವಾ ನಿಮ್ಮ ಬುಧ್ಧಿ, ಹೇಳ್ರೀ ಪರ್ವಾಗಿಲ್ಲ" ಅಂತ ಪುಸಲಾಯಿಸಿದಳು. ನಿಧಾನವಾಗಿ ಬಾಯಿ ಬಿಟ್ಟೆ "ಲೇ ಅಲ್ಲಿ ಕ್ಯಾಶಿಯರ್ ಅಂತ ಒಬ್ಳು ಹುಡುಗಿ.." ಅಂತಿದ್ದಂಗೆ, "ರೀ ಅಲ್ಲೂ.." ಅಂತ ಬೆನ್ನಿಗೆ ನಾಲ್ಕು ಗುದ್ದು ಕೊಟ್ಟಳು, ಪ್ರೀತಿಯಿಂದ ಕೊಟ್ಟಿದ್ದಳಲ್ವಾ ಹಿತವಾಗಿತ್ತು, "ಅಹಾ ಹಿತವಾಗಿದೆ, ಬೆನ್ನು ಹಗುರವಾಯ್ತು, ಇನ್ನೊಂದು ನಾಲ್ಕು ಕೊಡೇ" ಅಂದೇ ಹೇಳಿದ್ದೆ ತಪ್ಪಯ್ತು, ಈ ಸಾರಿ ಜೋರಾಗಿಯೇ ಏಟು ಬಿತ್ತು. "ಅಮ್ಮ.." ಅಂತ ಚೀರಿ ಕುಳಿತೆ, ಒಮ್ಮೆಲೇ ಗಾಬರಿಗೊಂಡು ಬೆನ್ನು ಸವರಿ "ರೀ ನಿಜವಾಗ್ಲೂ ಪೆಟ್ಟಾಯ್ತಾ, ಜೋರಾಗಿ ಕೊಟ್ಟೆ" ಅಂದ್ಲು, ಅವಳ ಹೆದರಿದ್ದು ನೋಡಿ "ಇಲ್ಲಾ, ಸುಮ್ನೇ ಸೌಂಡ ಏಫೆಕ್ಟ ಕೊಟ್ಟೆ, ಈ ಸಿನಿಮಾದಲ್ಲಿ ಹೀರೊ ಹೊಡೆದರೆ ಚೀರಿ ಬೀಳೊ ವಿಲನಗಳ ಹಾಗೆ" ಅಂದೆ, "ಆಕ್ಟಿಂಗ್ ಮಾಡ್ತೀರಾ ಆಕ್ಟಿಂಗ್..." ಅಂತ ಇನ್ನೆರಡು ಕೊಟ್ಟಳು, ನೋವಾದರೂ ಚೆನ್ನಾಗಿತ್ತು, "ಮಧುರಾ ಯಾತನೆ... ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ..." ಅಂತನ್ನುತ್ತಾ ಮೇಲೆದ್ದೆ.
ನಿನ್ನೆ ಉಳಿದ ರೊಟ್ಟಿಗೇ ವಗ್ಗರಣೆ ಹಾಕಿ ತಂದಿಟ್ಟಿದ್ದಳು, "ಉಳಿದದ್ದನ್ನು ಬಳಿದು ತಂದು ಹಾಕೀದೀಯ, ಭಿಕ್ಷೆ ಹಾಕೊ ಹಾಗೆ" ಅಂತ ಕಾಡುತ್ತ ತಿಂದು ಮುಗಿಸಿ ಹೊರಟು ನಿಂತೆ, "ರೀ ನಾನೂ ಬರ್ಲಾ" ಅಂದ್ಲು, "ಲೇ ನಿನ್ನಾಣೆಗೂ ಆ ಕ್ಯಾಶಿಯರ ಕಡೆ ನೋಡಲ್ಲ ಕೂಡ, ಆಯ್ತಾ" ಅಂದೆ. ಎಲ್ಲಿ ಆ ಹುಡುಗಿ ನೊಡಲೇ ನಾ ಹೊಗುತ್ತಿದ್ದೀನೆ ಅಂತ ಕಾಯಲು ಬರ್ತಿರಬೇಕು ಅಂತ ನಾ ಸಮಜಾಯಿಸಿ ಕೊಟ್ಟೆ. "ಇನ್ನೇನು ಕಣ್ಣು ಮುಚ್ಚಿಕೊಂಡು ದುಡ್ಡು ಕೊಡ್ತೀರಾ! ಅದೆಲ್ಲ ಏನಿಲ್ಲ, ನಾನೂ ಅವಳನ್ನೂ ನೋಡಿದ ಹಾಗೆ ಆಗತ್ತೆ, ಅಲ್ದೆ ಒಬ್ಳೆ ಕೂತು ನಾನದ್ರೂ ಎನು ಮಾಡಲಿ" ಅಂತ ಬಾಲಂಗೋಚಿಯಂತೆ ಬೆನ್ನು ಹತ್ತಿದಳು, ತಾಳಿ ಕಟ್ಟಿದ ಮೇಲೆ ಬೆನ್ನಿಗೆ ಬಿದ್ದಂತೆಯೇ ಎಲ್ಲಿ ಹೋದರೂ ಹಿಂಬಾಲಕರು ಹೆಂಡಂದಿರು ಏನು ಮಾಡೋದು, "ಆಯ್ತು ಬಾ, ಬೈಕು ಕೊಟ್ಟು ಬರೊವಾಗ ಆಟೊಗೆ ಬಂದರಾಯ್ತು, ಬಸ್ಸಿಗೆ ಬಂದು ಹಣ ಉಳಿಸೋಣ ಅಂತಿದ್ದೆ ರಿಸೆಷನನಲ್ಲಿ" ಅಂದೆ. "ಯಾಕೆ ಬಸ್ಸಲ್ಲೇ ಬರೋಣ ಏನೀಗ" ಅಂದ್ಲು, "ಅಯ್ಯೊ ಬಸ್ಸು ರಶ್ ನೋಡೀದೀಯಾ, ನಿಂಗೊತ್ತಿಲ್ಲ, ಮೂರು ವರ್ಷ ಬಸ್ಸಲ್ಲಿ ಸುತ್ತಿದ ನನಗೇ ಗೊತ್ತು ಅದೊಂದು ದೊಡ್ಡ ಕಥೆ ಎನ್ ಕೇಳ್ತೀಯಾ" ಅಂದೆ, ಕಣ್ಣರಳಿಸಿ "ಕಥೇನಾ ರೀ.. ರೀ.. ಹೇಳ್ರೀ ಪ್ಲೀಜ್" ಅಂತ ದುಂಬಾಲು ಬಿದ್ದಳು, ಇನ್ನು ಅವಳು ಹೇಳುವವರೆಗೆ ಬಿಟ್ರೆ ಕೇಳಿ "ಲೇಟಾಯ್ತು ದಾರೀಲಿ ಹೇಳ್ತೀನಿ ಬಾ" ಅಂದೆ, ಸೀರೆಯೊಂದು ಸುತ್ತಿಕೊಂಡು ಬಂದು ಹಿಂದೆ ಕೂತಳು, ಹೊರಟಿತು ನಮ್ಮ ಸವಾರಿ...
ದಾರೀಲಿ ಕಥೆ ಅಂತ ಮತ್ತೆ ನೆನಪು ಮಾಡಿದಳು, ಹೇಳತೊಡಗಿದೆ.. "ಬೆಂಗಳೂರಿಗೆ ಹೊಸದಾಗಿ ಬಂದಾಗ ಬಸ್ಸಿನಲ್ಲಿ ಸುತ್ತಿದ್ದೇ ಸುತ್ತಿದ್ದು, ಬಸ್ಸಿಗೆ ಪಾಸು ಮಾಡಿಸಿದ್ದು ಎಲ್ಲಿ ಬೇಕಾದರೂ ಸುತ್ತು ಅಂತ ಮತ್ತಷ್ಟು ಖುಷಿ, ಅದರಲ್ಲೂ ಹಣ ಉಳಿಸಲು ಬ್ಲಾಕ ಬೋರ್ಡ ಪಾಸು ಮಾಡಿಸೋದು, ರೆಡ್ ಬೋರ್ಡ ಬಸ್ಸುಗಳು ಬರುತ್ತಿದ್ದರೆ ಶಪಿಸುತ್ತ ಕಾಯೋದರಲ್ಲೂ ಒಂಥರಾ ಸುಖಾ ಇತ್ತು, ಮದುವೆಗೆ ಮೊದಲು ನಿನಗೆ ಕಾದಷ್ಟೆ ಖುಷಿ" ಅನ್ನುತ್ತಿದ್ದರೆ "ಯಾವಾಗ್ರೀ ನಾನು ನಿಮಗೆ ಕಾಯಿಸಿದ್ದು, ನೀವೇ ಹತ್ತು ನಿಮಿಷ ಮುಂಚೆ ಬಂದಿರೊರೊ" ಅಂದ್ಲು, "ಒಟ್ಟಿನಲ್ಲೆ ಕಾದಿದ್ದು ನಿಜವಲ್ಲವೋ, ಹಾಗೆ ಕಾಯಿಸಿದಾಗ ನಾ ಮುನಿಸಿಕೊಂಡಿದ್ದು, ನೀ ರಮಿಸಿದ್ದು" ಅಂದೆ, "ಸರಿ ಗೊತ್ತು ಗೊತ್ತು" ಅಂತ ನಾಚಿ ಬಾಚಿ ತಬ್ಬಿಕೊಂಡು ಕೂತಳು, ಹಿಂದೆ ನೋಡುವ ಕನ್ನಡಿಯಲ್ಲಿ, ಆ ದಿನಗಳ ನೆನಪಿಗೆ ಅವಳ ಕೆನ್ನೆ ಕೆಂಪಾಗಿದ್ದು ಕಂಡಿತು. ಮತ್ತೆ ಮುಂದುವರೆಸಿದೆ "ಮುಂಜಾನೆದ್ದು ಕಂಪನಿಗಳಿಗೆ ಅಲೆಯೋದು ಅಲ್ಲಿ ರೆಸ್ಯುಮು ಕೊಟ್ಟೆ, ಇಲ್ಲಿ ಇಂಟರವೀವ್, ಎಲ್ಲೇಲ್ಲಿ ಸುತ್ತಿದ್ದೆ ಅದಕ್ಕೆಲ್ಲ ಸಾಕ್ಷಿ ಇದೇ ಬಸ್ಸುಗಳಲ್ಲವೇ, ಎಲ್ಲೊ ಗೊತ್ತಿಲ್ಲದ ಏರಿಯಾಗಳಿಗೆ, ತಿಳಿಯದ ವಿಳಾಸಗಳಿಗೆ ನಿರ್ಭೀತಿಯಿಂದ ಹೊರಡುತ್ತಿದ್ದದ್ದು ಇದೇ ಬಸ್ಸು ಅಲ್ಲಿ ತಲುಪಿಸುತ್ತದೆ ಎನ್ನುವ ಖಾತ್ರಿಯಿದ್ದದ್ದರಿಂದಲೇ ಅಲ್ಲವೇ. ದಾರಿ ತಪ್ಪಿದರೆ ಮತ್ತೆ ಮೆಜೆಸ್ಟಿಕ(ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದ ನಿಕ್‌ನೇಮ್!) ಬಸ್ಸು ಹಿಡಿದರೆ ಸಾಕು" ಹೇಳುತ್ತಿದ್ದರೆ "ನಿಮ್ಮ ಮಾಮನ ಮನೆಗೆ ಸುತ್ತಿ ಬಳಸಿ ಬಂದದ್ದು ಹೇಳಿದ್ದಿರಲ್ಲ" ಅಂತ ನೆನೆಪಿಸಿದಳು "ಹೂಂ ನಾನಿರುವಲ್ಲಿಂದ ಎರಡು ಸ್ಟಾಪು ಮುಂದೆ ಹೋದರೆ ಅವರ ಮನೆ ಬರುತ್ತದೆಂದು ಗೊತ್ತಿಲ್ಲದೇ, ಮೆಜೆಸ್ಟಿಕಗೆ ಹೋಗಿ, ಅಲ್ಲಿಂದ ಬಸ್ಸು ಬದಲಾಯಿಸುತ್ತಿದ್ದೆ, ಬಹಳ ಲೇಟಾಗಿ ಬರುವುದ ನೋಡಿ ಮಾವ ಕೇಳಿದಾಗಲೇ ಗೊತ್ತಾಗಿದ್ದು, ನಾನು ಬೆಂಗಳೂರು ದರ್ಶನ ಮಾಡಿ ಬರುತ್ತಿದ್ದೆನೆಂದು ಹ ಹ ಹ.. ಅಲ್ಲಿವರೆಗೆ ಪಕ್ಕದ ಏರಿಯಾದ ಮನೆಗೆ ನಾ ಎಷ್ಟು ಸಾರಿ ಸುತ್ತಿಬಳಸಿ ಹೋಗಿಲ್ಲಾ" ಅವಳೂ ಗಹಗಹಿಸಿ ನಕ್ಕಳು "ನಿಮ್ಮ ಆವಾಂತರಗಳು ಒಂದೇ ಎರಡೇ, ಬಸ್ಸಲ್ಲಿ ಯಾರೂ ಹುಡುಗಿ ಸಿಕ್ಕಿರಲಿಲ್ಲವಾ, ನಿಜ ಹೇಳ್ರೀ ನಂಗೇನೂ ಬೇಜಾರಿಲ್ಲ" ಅಂದಳು. "ನಿನ್ನ ಹತ್ತಿರ ಏನು ಮುಚ್ಚಿಟ್ಟಿದ್ದೀನೆ ಹೇಳು, ಅಲ್ಲಿ ಹುಡುಗೀನಾ, ಹುಡುಗೀರು ಇದ್ರು!!!" ಅಂದೆ "ಕಳ್ಳ ಕೃಷ್ಣ" ಅಂತ ತಿವಿದಳು "ನನಗೆ ಮೊದಲು ಕೆಲ್ಸ ಸಿಕ್ಕಿದ್ದೇ ದೂರದಲ್ಲಿ, ಅಲ್ಲೀವರೆಗೆ ಎರಡು ಬಸ್ಸು ಬದಲಾಯಿಸಬೇಕಿತ್ತು, ಲೇಟಾಗುತ್ತದೆಂದು ಬೇಗ ಆರೂವರೆಗೆ ಮನೆ ಬಿಡ್ತಿದ್ದೆ ಆಗ ಟ್ಯೂಶನ್ನು ಅಂತ ಹೊರಡುವವರು ಇರ್ತಿದ್ರು, ಆಮೇಲೆ ಏಳೂವರೆಗೆ ಹೊರಡುವಾಗಲೊ ಸರಿಯಾಗಿ ಕಾಲೇಜುಗಳು ಶುರುವಾಗುವ ಸಮಯ ದಾರಿಯಲ್ಲಿ ಎರಡು ಕಾಲೇಜುಗಳು ಬರುತ್ತಿದ್ದವು, ಮತ್ತಿನ್ನೇನು ಕೇಳ್ತೀಯಾ, ದಿನಾ ಸಿಗುವವರು ಬಹಳ ಜನ ಇದ್ರು, ಕಣ್ಣಲ್ಲೇ ಮಾತುಗಳ ವಿನಿಮಯವೇನೊ, 'ಏನೀವತ್ತು ಲೇಟಾಯ್ತಾ?' ಅನ್ನುವಂತೆ ನಾ ನೋಡಿದ್ರೆ, 'ಏನು ನೀನು ನನ್ನ ಲವರ್‍ಆ ನಿನ್ನ ಟೈಮಿಗೆ ಸರಿಯಾಗಿ ಬರೋಕೆ' ಅನ್ನುವಂತೆ ಅವರು ಮರಳಿ ನೋಡುತ್ತಿದ್ದುದು ಒಂದೇ ಎರಡೇ, ಯಾರದೋ ಕಣ್ಣು, ಯಾರದೋ ಮೂಗು, ಯಾರದೋ ಜಡೆ, ಯಾರದೋ ಮಾತು, ಯಾರದೋ ಮೌನ, ಯಾರದೋ ನಿಲುವು, ಯಾರದೋ ನಗು ಇಷ್ಟವಾಗಿದ್ದು, ಇಡಿಯಾಗಿ ಯಾರೂ ಇಷ್ಟವಾಗದೆ ಕನಸಿನ ಕನ್ಯೆಯ ಸೃಷ್ಟಿಸಿಕೊಂಡು ಬರೆದೆಲ್ಲ ನಾಲ್ಕು ಸಾಲುಗಳಿಗೆ(ಕವನ ಅಂತ ಕರೆಯಬಹುದು, ಆದ್ರೆ ಆ ಲೇವಲ್ಲಿನಲ್ಲಿ ಇಲ್ಲ ಬಿಡಿ) ಸೂರ್ಥಿಯಾದ ಆ ಬಸ್ಸಿನ ಹುಡುಗಿಯರು ಏಷ್ಟೋ ಏನೊ" ಅನ್ನುತ್ತಿದ್ದರೆ "ಅದೇ ಅಂತೀನೀ ಅದಕ್ಕೆ ಇತ್ತೀಚೆಗೆ ನೀವೇನು ಬರೆದಿಲ್ಲ" ಅಂದ್ಲು, "ಅದೇ ಸಮಯಾನೂ ಇಲ್ಲಾ, ಸೂರ್ಥಿಯೂ ಇಲ್ಲಾ, ಆಫೀಸಿಗೆ ತಲುಪಲು ಎರಡು ಎರಡೂವರೆ ಘಂಟೆಯಾಗುತ್ತಿತ್ತು, ಸೀಟು ಸಿಕ್ಕರೆ ಕೂತು ಬರೆಯೋದೇ, ಒಂದು ದಿನವೂ ಅಷ್ಟು ಸಮಯ ಸಂಚಾರದಲ್ಲಿ ಹಾಳಾಯಿತಲ್ಲ ಅಂತ ನನಗನಿಸಿದ್ದೇ ಇಲ್ಲ, ಬಸ್ಸು ಕುಲುಕುತ್ತ ಬಳುಕುತ್ತ ನಡೆಯುತ್ತಿದ್ದರೆ ಬಸ್ಸಿನ ಮೇಲೂ ಒಂದು ಕವನ ರೆಡಿ, ದಿನಕ್ಕೆ ಐದಾರು ಘಂಟೆ ಟ್ರಾಫಿಕ್ಕಿನಲ್ಲೇ ಕಳೆಯುತ್ತೀ ಬೈಕು ತುಗೊ ಎಂದು ಹೇಳಿದೆಲ್ಲರಿಗೂ ನಗುವೇ ನನ್ನ ಉತ್ತರವಾಗಿತ್ತು". "ಮತ್ಯಾಕೆ ಬೈಕು ತುಗೊಂಡಿದ್ದು" ಅಂತ ಕೇಳಿದ್ಲು ಅಷ್ಟರಲ್ಲಿ ಸರ್ವೀಸ ಸ್ಟೇಷನ್ನು ಬಂದಿತ್ತು.
ಬೈಕು ಕೊಟ್ಟೆ, ಗೇರು ಬದಲಾಯಿಸುವ ತೊಂದ್ರೆ, ಬ್ರೆಕು ಅಂತ ನಾ ಹೇಳುತ್ತಿದ್ದರೆ ಇವಳೂ ಬೈಕಿನಲ್ಲಿ ವೈಬ್ರೇಶನ್ನೂ ಬಹಳ ಬರುತ್ತೆ ಅಂತ ತನಗನಿಸಿದ್ದನ್ನೂ ಹೇಳಿದಳು, ಆಯ್ತು ಮೇಡಮ ಚೆಕ ಮಾಡ್ತೀವಿ ಅಂತ ಅವನಂದ. "ಹೊರಡೋಣ, ಸಂಜೆ ಸಿಗುತ್ತೆ ಬೈಕು" ಅಂದೆ, "ರೀ" ಅಂತ ಹುಬ್ಬು ಹಾರಿಸಿದಳು!!!. ಏನು ಅನ್ನುವಂತೆ ನಾ ನೋಡಿದೆ "ಕ್ಯಾಶಿಯರ್, ಕ್ಯಾಶಿಯರ್" ಅಂದ್ಲು ಹ ಹ ಹ ಏನಂತ ಹೇಳಲಿ ಇವಳ ಬಗ್ಗೆ ತಲೆಗೆ ಕೈ ಹಚ್ಚಿ, ನನಗೆ ನೆನಪೇ ಇರಲಿಲ್ಲ... ನನ್ನ ಪೋಲಿತನಗಳಿಗೆ ಇವಳ ಈ ಬೆಂಬಲ ಬೇರೆ... "ಈಗೇನೂ ದುಡ್ಡು ತುಂಬೊದಿಲ್ಲ" ಅಂದೆ ಹುಬ್ಬು ಗಂಟಿಕ್ಕಿದಳು. ಇವಳಿಗೆ ಆ ಕ್ಯಾಶಿಯರನ್ನು ನೊಡಲೇ ಬೇಕಾಗಿತ್ತು. ಆಯ್ತು ಅಂತ ಬೈಕು ಯಾವಾಗ ಸಿಗುತ್ತೊ ಅಂತ ಮ್ಯಾನೇಜರ್ ಕೇಳ ಹೋದ ಹಾಗೆ ಮಾಡಿ ಅದೊ ಅಲ್ಲಿ ಅಂತ ತೋರ್‍ಇಸಿದೆ, "ಪರವಾಗಿಲ್ಲಾರೀ, ಕೃಷ್ಣ ಸುಂದರಿ... ಕಪ್ಪಗಿದ್ದರೂ ಖಳೆಯಿದೆ" ಅಂದ್ಲು "ನನಗೆ ಮದುವೆ ಸಂಭಂದ ಕೇಳ್ತೀಯಾ ನೋಡು ಹಾಗಾದ್ರೆ" ಅಂದೆ. ಎಳೆದುಕೊಂಡು ಹೊರಬಂದ್ಲು, ಆಯ್ತು ಆಟೋ ತರ್ತೀನಿ ಇಲ್ಲೇ ಇರು ಅಂದೆ, "ರೀ ಬಸ್ಸಲ್ಲೇ ಹೋಗೋಣ" ಅಂತ ಹಠ ಹಿಡಿದಳು. "ಬೇಡ ಬಹಳ ರಶ್ ಇರತ್ತೆ ನಿನಗೆ ಗೊತ್ತಾಗಲ್ಲಾ" ಅಂದ್ರೂ ಕೇಳಲಿಲ್ಲ "ಒಂದು ಸಾರಿ ಪ್ಲೀಜ" ಅವಳ ಹಾಗೆ ಮುಖ ಮಾಡಿ ಗೊಗರೆಯುತ್ತಿದ್ದರೆ ಬೇಡವೆನ್ನಲಾಗಲಿಲ್ಲ.
ಬಸ್ಸು ಬಂತು ಬಸ್ಸು... ಹಿಂದಿನ ಬಾಗಿಲಿಗೆ ನಾ ಓಡುತ್ತ ನೀ ಮುಂದೆ ಹತ್ತು ಅಂದೆ, ಒಳಗೆ ಹೋಗಿ, ನನಗೂ ಸೀಟು ಹಿಡಿದಿದ್ಲು, ಮುಂಜಾನೆ ಅಲ್ವಾ ರಶ್ ಕಮ್ಮಿ ಇತ್ತು, ಆದ್ರೆ ಅವಳು ಹಿಡಿದಿದ್ದು ಲೇಡಿಸ ಮೀಸಲು ಸೀಟು, ನಾನೊಲ್ಲೆ ಅಂತ ನಿಂತು ಬಿಟ್ಟೆ, ಗುರಾಯಿಸಿ ನೋಡಿದ್ಲು. ಮುಂದಿನ ಸ್ಟಾಪಿನಲ್ಲಿ ಜನ ಇಳಿದ ಮೇಲೆ ಎರಡು ಅಕ್ಕ ಪಕ್ಕದ ಸೀಟು ಹಿಂದೆ ಖಾಲಿಯಾಯ್ತು, ನಾ ಹೋಗಿ ಕೂರುವಷ್ಟರಲ್ಲಿ ನನಗೆ ಕಿಟಕೀ ಸೀಟು ಅಂತ ಬಂದು ಅಲ್ಲಿ ಆಕ್ರಮಿಸಿಕೊಂಡಳು. "ಲೇ ನಿಮಗೆ ಅಂತ ಅಲ್ಲಿ ರಿಸರ್ವ್ ಸೀಟಿದೆ ಅಲ್ಲಿ ಹೋಗು, ಪಾಪ ನಮಗೆ ಸೀಟು ಬೇಡವಾ" ಅಂತ ಕಿಚಾಯಿಸಿದೆ, ಕೂತಲ್ಲೇ ಚಿವುಟಿದಳು.. ಚೀರಲಾಗದೇ ಸುಮ್ಮನಾದೆ, ಬಾಯಿ ತೆಗೆದರೆ ನೋಡು ಅನ್ನುವಂತೆ ನೋಡಿದ್ಲು.
ಬಸ್ಸು ಸ್ವಲ್ಪ ಮುಂದೆ ಹೊಗುತ್ತಿದ್ದಂತೆ ಕಾಲೇಜಿನ ಹುಡುಗ ಹುಡುಗಿಯರು ತುಂಬಿಕೊಂಡರು, ಬಸ್ಸು ಈಗ ತುಂಬಿ ತುಳುಕತೊಡಗಿತು.. ಇವಳು ನನ್ನ ನೋಡಿ ನಕ್ಕಳು, ಬಂದ್ರು ನೋಡಿ ನಿಮ್ಮ ಬಸ್ಸಿನ ಹುಡುಗಿಯರು, ಕನಸಿನ ಕನ್ಯೆಯ ತುಣುಕುಗಳು ಅನ್ನುವಂತೆ. ನಾನೂ ನಕ್ಕೆ ಕನಸಿನ ಕನ್ಯೆ ನನ್ನಾಕೆ ನನ್ನ ಪಕ್ಕದಲ್ಲೇ ಕೂತಿರುವಾಗ ಅವರೆಲ್ಲ ಯಾಕೆ ಅನ್ನುವಂತೆ. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಹುಡುಗಿಗೆ ನನ್ನ ಸೀಟು ಬಿಟ್ಟು ಕೊಟ್ಟೆ, ಏನು ಇಂಪ್ರೆಸ್ಸು ಮಾಡಲಿಕ್ಕ ಅನ್ನುವ ಪ್ರಶ್ನೆ ನನ್ನವಳ ಮುಖದಲ್ಲಿ ಕಂಡಿತು, ಉತ್ತರವೇನೊ ಅನ್ನುವಂತೆ ನಾ ನಕ್ಕೆ.
ಅಂತೂ ನಮ್ಮ ನಿಲುಗಡೆ ಬಂತು, ಇಳಿದು ನಡೆಯುತ್ತಿದ್ದಂತೆ ಬಂತು ಅವಳ ಮೊದಲ ಪ್ರಶ್ನೆ "ಅಲ್ಲಾ ಆ ಹುಡುಗೀಗೇ ಸೀಟು ಯಾಕ್ರೀ ಬಿಟ್ಟು ಕೊಟ್ರೀ, ಏನ್ ಇಂಪ್ರೆಸ್ ಮಾಡೋಕಾ" ಅಂದ್ಲು, ಸುಮ್ನೇ ನಕ್ಕೆ "ಈ ನಕ್ರೆ ಏನರ್ಥ" ಅಂತ ಮತ್ತೆ... "ಹೂಂ ಇಂಪ್ರೆಸ್ ಮಾಡೋಕೆ" ಅಂದೆ "ನಂಗೊತ್ತು, ಅದಕ್ಕಲ್ಲ, ಅದೇ ಸ್ಟಾಪಿನಲ್ಲಿ ಇಳಿಯೋಕೆ ಜನ ಆಕಡೆ ಈಕಡೆ ಅಂತ ನುಸುಳಿ, ಆ ಹುಡುಗಿ ಅಲ್ಲೇ ಹತ್ತಿಕ್ಕುತ್ತಿದ್ದರೆ ಅವಳು ಹೇಳಲೂ ಆಗದೆ ಬಿಡಲೂ ಆಗದೆ ಒದ್ದಾಡುತ್ತಿದ್ದು ನೋಡಿ ತಾನೇ, ನಾನೇ ನಿಮ್ಮನ್ನ ಏಳಿಸಬೇಕೆಂದಿದ್ದೆ, ನೀವೆ ಎದ್ದು, ರೀ ನಂಗೆ ಖುಷಿಯಾಯ್ತು" ಅಂತ ಕೈನಲ್ಲಿ ಕೈ ಸೇರಿಸಿ ನಡೆಯತೊಡಗಿದಳು, ನನಗೂ ಸಮಾಧಾನವಾಯ್ತು ಅವಳಿಗೆ ಅದು ಅರ್ಥ್ವಾಯಿತಲ್ಲ ಅಂತ.. "ಬೇರೆ ಯಾರಾದ್ರೂ ಇದ್ರೆ ಬಿಟ್ಟು ಕೊಡ್ತಿದ್ರಾ" ಅಂದ್ಲು. "ನಿಜ ಹೇಳಬೇಕೆಂದ್ರೆ ನನಗೆ ಸೀಟು ಬಿಟ್ಟು ಕೊಡಲು ಅವರು ಅರ್ಹರು ಅನ್ನಿಸ್ಬೇಕು ಆಗಲಷ್ಟೇ" ಅಂದ್ರೆ "ಏನು ಮುಖ್ಯಮಂತ್ರಿ ಸೀಟು ಉತ್ತರಾಧಿಕಾರಿಗೆ ಬಿಟ್ಟು ಕೊಟ್ಟ ಹಾಗೆ ಹೇಳ್ತಿದೀರಾ" ಅಂತಂದ್ಲು. "ಅಲ್ಲ ಅದೂ ನಿಜ ಕಣೇ, ಬಸ್ಸಿನಲ್ಲಿ ಸೀಟು ಅಂದ್ರೆ ಸುಮ್ನೇನಾ, ಯಾರಿಗೋ ಯಾಕೆ ಬಿಟ್ಟು ಕೊಡಬೇಕು ಹೇಳು, ಈ ಲೇಡೀಸಗೆ ಅಂತ ಮೀಸಲು ಸೀಟು ಮಾಡಿರ್ತಾರೆ, ಕಾಲೇಜು ಅಮ್ಮಣ್ಣಿಗಳು(ಎಲ್ಲರೂ ಅಲ್ಲ) ನೀಟಾಗಿ ಕುಂತಿರುತ್ತಾರೆ, ಪಕ್ಕದಲ್ಲೇ ಒಬ್ಬಳು ಗರ್ಭಿಣಿ ಪಾಪ ಕಷ್ಟಪಟ್ಟು ನಿಂತಿದ್ದರೆ ಜಾಗ ಕೊಡೊದಿಲ್ಲ, ಕೊಟ್ಟು ಸ್ವಲ್ಪ ನಿಂತ್ರೆ ಏನ್ ಕಾಲು ಸವೆದು ಹೋಗುತ್ತಾ ನಾಳೆ ಅವರೂ... ಬಿಡು ಏನ್ ಹೇಳೊದು, ಈ ಹಿರಿಯ ನಾಗರೀಕರಿಗೆ ಅಂತ ಸೀಟಿರತ್ತೆ ಅದನ್ಯಾರೊ 'ಹಿ' ಅನ್ನೋದನ್ನ 'ಕಿ' ಮಾಡಿ, ಕಿರಿಯ ನಾಗರೀಕರಿಗೆ ಅಂತ ತಿದ್ದಿ ತಮ್ಮ ಸೃಜನಶೀಲತೆ(ಕ್ರಿಯೇಟಿವಿಟಿ) ಪ್ರದರ್ಷಿಸಿರುತ್ತಾರೆ, ಅದನ್ನೆ ಇಟ್ಟುಕೊಂಡು ಜಾಗ ಕೇಳಿದ ಹಿರಿಯರನ್ನ ಈ ಕೆಲ ಪುಂಡರು ಸೀಟು ಬಿಡದೇ ಕಾಡಿಸ್ತಾರೆ ಎನನ್ನೋದು ಇಂಥ ಅನಾಗರೀಕರಿಗೆ. ಇನ್ನು ಬಸ್ಸಿನ ತುಂಬ ಸೀಟು ಖಾಲಿ ಹೊಡೀತಿದ್ರೂ, ಫುಟ್ ಬೊರ್ಡ ಮೇಲೆ ನಿಲ್ಬೇಡಿ ಹತ್ತೋರಿಗೆ ತೊಂದ್ರೆಯಾಗತ್ತೆ ಅಂತ ಕಂಡಕ್ಟರ್ರು ಬಡಕೊಂಡ್ರೂ ಕೇಳದವರಿಗೆ ಬಾ ಅಂತ ಸೀಟು ಬಿಟ್ಟುಕೊಟ್ಟರೂ ಕೂಡೊದಿಲ್ಲ ಏನ್ ಮಾಡ್ತಿಯಾ, ಮೂರು ವರ್ಷದಲ್ಲಿ ನಾ ಏನೇನು ನೋಡಿಲ್ಲ" ಅಂತ ಬೇಜಾರಾಗಿ ನುಡಿದೆ. "ರೀ ಯಾಕ್ರೀ ಅಷ್ಟು ಬೇಜಾರಾಗ್ತೀರಾ, ನಾ ತಮಾಷೆ ಮಾಡಿದೆ" ಅಂದ್ಲು. "ನಿನ್ನ ತಮಾಷೆಗಲ್ಲ ನಾ ಬೇಜಾರಾಗಿದ್ದು ನಮ್ಮದೇ, ವರ್ತನೆಗಳು ನನಗೆ ಹಾಗನಿಸಿದ್ದು, ನಾಗರೀಕರಿಗೆ ಅಂತ ಇರುವ ಸಾರಿಗೆ ಹೀಗೆ ಅನಾಗರೀಕರಿಂದಾಗಿ ಬಹಳ ಜನ ವಿಮುಖವಾಗುವಂತೆ ಆದ್ರೆ ಏನು ಪ್ರಯೋಜನ ಅದಕ್ಕೆ ಬೇಜಾರು" ಅಂದೆ.
ಹೀಗೆ ಮಾತಿನಲ್ಲೇ ಮನೆ ತಲುಪಿದೆವು, ದಣಿದಿದ್ದೆವು, ಬಹಳ ದಿನಗಳಾಯ್ತಲ್ಲ ನಡೆದು, ನಮ್ಮದೆ ಆದ ಕೆಲವು ಸವಲತ್ತುಗಳಿಗೆ(ಬೈಕು, ಕಾರು) ದೇಹ ಕೂಡ ಒಗ್ಗಿಕೊಂಡು ನಾಲ್ಕು ಹೆಜ್ಜೆ ಹಾಕಿದರೂ ಉಸ್ಸೆನ್ನುತ್ತದೆ. ನಿಂಬೆ ಶರಬತ್ತು ಮಾಡಿದ್ಲು, ಹೊಟ್ಟೆ ತಣ್ಣಗಾಯ್ತು. "ಆಗಲೇ ಕೇಳಿದೆ, ಮತ್ಯಾಕ್ಕೆ ನೀವು ಬೈಕು ತುಗೊಂಡಿದ್ದು, ಇದೆಲ್ಲಕ್ಕೆ ಬೇಸತ್ತಾ" ಅಂದ್ಲು, "ಹಾಗೇನಿಲ್ಲ, ಈಗಲೂ ನನಗೆ ಸಾಧ್ಯವಾದಾಗಲೆಲ್ಲ, ನಾ ಬಸ್ಸಿನಲ್ಲೇ ತಿರುಗೋದು ನಿನಗೇ ಗೊತ್ತಿದೆ, ಆದರೂ ಬೈಕು ರೂಢಿಯಾಗಿ ಸ್ವಲ್ಪ ಕಿರಿಕಿರಿಯಾಗುತ್ತದೆ ಆದರೂ ನನಗೇಕೊ ಬಸ್ಸೆಂದರೆ ಇನ್ನೂ ಅದೇ ಪ್ರೀತಿ, ವರ್ಷಗಳಾದಂತೆ ನನ್ನ ಕೆಲಸ ಹೆಚ್ಚಿತು, ರಾತ್ರಿ ಬರುವುದು ಲೇಟಾಗತೊಡಗಿತು, ಕೆಲವು ತಿಂಗಳು ಬಸ್ಸಿನಲ್ಲೇ ರಾತ್ರಿ ಹನ್ನೊಂದೂವರೆ ಹನ್ನೆರಡಕ್ಕೆಲ್ಲ ಬಂದಿದ್ದೇನೆ, ಕೊಲೀಗು ಹತ್ತಿರದ ನಿಲುಗಡೆಗೆ ಬಿಟ್ಟರೆ ಅಲ್ಲಿಂದ ಬಸ್ಸೆ ಗತಿ, ಆಟೊನಲ್ಲಿ ಹೋಗದೆ ಹಣ ಉಳಿಸಲೆಂದಲ್ಲ, ಅದೇನೊ ಬಸ್ಸೆ ಇಷ್ಟ, ಕೆಲವು ಸಾರಿ ಬಸ್ಸಿರದೇ ಆಟೊ ಕೂಡ... ಹೀಗೆ ಕೆಲದಿನಗಳಾದ ಮೇಲೆ ಆ ಅಪರಾತ್ರಿ ಹಾಗೆಲ್ಲ ಬರುವುದು ಸರಿಯಲ್ಲ, ಮೊದಲಿನ ಹಾಗೆ ಭದ್ರತೆಯಿಲ್ಲ ಎಂದು ಎಲ್ಲರೂ ಅನ್ನುವುದು, ನನಗೂ ಅದು ಸರಿಯೆನಿಸಿದ್ದು, ಸಮಯದ ಅಭಾವ, ಬಸ್ಸುಗಳು ಸಮಯಕ್ಕೆ ಸಿಗದಿರುವುದು, ಸಿಕ್ಕರೂ ಕಿಕ್ಕಿರಿದು ತುಂಬಿರುವುದೂ ಎಲ್ಲ ಸೇರಿ ಕೊನೆಗೆ ಬೈಕು ಕೊಳ್ಳಲು ನಿರ್ಧರಿಸಿದ್ದು. ಇನ್ನೂ ಓಡಿಸಲೂ ಬರುತ್ತಿರಲಿಲ್ಲ ನನಗೆ ಆಗ, ಕೆಲವೊಂದು ಸಾರಿ ಬಸ್ಸೇ ಚೆನ್ನಾಗಿತ್ತು ಅನಿಸಿದ್ದೂ ಇದೆ, ಆದ್ರೆ ಈಗ ಈ ಸೌಲಭ್ಯಕ್ಕೆ ಹೊಂದಿಕೊಂಡು ಹೋಗಿದೆ. ಒಂದು ದಿನ ಬೈಕಿಲ್ಲ ಅಂದ್ರೆ ಸಾಕು ಸಾಕಾಗಿ ಹೋಗುತ್ತದೆ. ಈಗೆಲ್ಲ ವೊಲ್ವೊ ಏಸೀ ಬಸ್ಸುಗಳು ಬಂದಿವೆ, ಅಡಿಗಡಿಗೆ ಬಸ್ಸುಗಳೂ ಬಹಳ ಆಗಿವೆ, ಮೆಟ್ರೊ ಆಗೋದಿದೆ ನೋಡೊಣ ಬಸ್ಸುಗಳು ಮಾತ್ರ ಇದ್ದೇ ಇರುತ್ತವೆ" ಅಂದೆ. "ಅದೂ ಸರಿ, ನಾನೂ ಮಾರ್ಕೆಟ್ಗೆ ಬಸ್ಸಿನಲ್ಲೇ ಹೋಗ್ತೀನಿ ಇನ್ಮೇಲೆ" ಅಂದ್ಲು, ಬೇಡ ರಶ್‌ನಲ್ಲಿ ನಿನಗೆಲ್ಲ ಸರಿ ಹೋಗಲ್ಲ ಅಂತ ಹೇಳಬೇಕೆನಿಸಿತು, ಆದ್ರೂ ಅವಳಿಗೂ ಅನುಭವವಾಗ್ಲಿ ಅಲ್ಲದೇ ಈಗೀಗ ಸ್ವಲ್ಪ ಜನರಿಗೆ ತಿಳುವಳಿಕೆ ಬಂದು ಪ್ರಜ್ಞಾವಂತರಾಗಿದ್ದಾರೆ ಏನೂ ತೊಂದರೆ ಆಗಲಿಕ್ಕಿಲ್ಲ ಬಿಡು ಅಂತನ್ನಿಸಿ ಸುಮ್ಮನಾದೆ.
ಸಂಜೆಯಾಗುತ್ತಿದ್ದಂತೆ ಮತ್ತೆ ಬೈಕು ತರಲು ಹೋಗಬೇಕು ಬರ್ತೀಯಾ ಅಂದೆ, ನೀವೇ ಹೋಗಿಬನ್ನಿ ಅಂದ್ಲು, ಕ್ಯಾಶಿಯರ್ ಹುಡುಗಿ ನೋಡಲಲ್ಲ ಅಂತ ಖಾತರಿಯಾಗಿದ್ದರಿಂದ ಬರುವುದಿಲ್ಲ ಅಂದಿರಬೇಕು ಅಂತ ಹೊರಟೆ. "ಮತ್ತೆ ಬಸ್ಸಲ್ಲೇ ಹೋಗ್ತೀರಾ" ಅಂದ್ಲು ಹೌದೆನ್ನುತ್ತಾ ತಲೆಯಾಡಿಸಿದೆ.. "ಬಸ್ಸು ಬಂತು ಬಸ್ಸು..." ಅಂತ ರಾಗವಾಗಿ ಅವಳು ಗುನುಗುನಿಸತೊಡಗಿದರೆ "ಕೆಂಪು ವೊಲ್ವೊ ಬಸ್ಸು..." ಅಂತ ನಾನೂ ದನಿಗೂಡಿಸಿದೆ... ಮನಸಾರೆ ನಕ್ಕೆವು, ಹೊರಗೆ ಕಾಲಿಡುತ್ತಿದ್ದಂತೆ, "ಪೀಂ... ಪೀಂ... ಕ್ಯಾಶಿಯರ್ ಕೇಳ್ದೆ ಅಂತ ಹೇಳಿ" ಅಂದ್ಲು... ತುಂಟಿಯ ತರಲೆಗೆ ನಗು ಬಂದು ಕಂಡಕ್ಟರ ಹಾಗೆ "ಒಕೇ ರೈಟ್ ರೈಟ.." ಅನ್ನುತ್ತ ಹೊರಬಿದ್ದೆ...
ಮತ್ತೆ ಎಂದೊ ಬಸ್ಸಿನಲ್ಲಿ ನಿಮ್ಮ ಪಕ್ಕದ ಸೀಟಿನಲ್ಲಿ ಕೂತು ಹರಟೆ ಹೊಡೆಯುತ್ತ ಸಿಗುತ್ತೇನೆ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/bassu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದುSunday, April 26, 2009
ರಂಗೋಲಿ
ಹಾಸಿಗೆಯಲ್ಲೇ ಬಿದ್ದು ಹೊರಳಾಡುತ್ತಿದ್ದೆ, ಯಾವ ಯಾವ ಕೋನ ತ್ರಿಕೋನಾಕಾರಗಳಲ್ಲಿ ಮೈಮುರಿಯಲು ಸಾಧ್ಯವಿತ್ತೊ ಅದೆಲ್ಲ ಮಾಡಿಯಾಗಿತ್ತು, ಆದರೂ ಇನ್ನೂ ಅವಳೇಕೇ ಬಂದು ಎಬ್ಬಿಸುತ್ತಿಲ್ಲ ಅಂತ ಯೋಚಿಸುತ್ತ ಬಿದ್ದುಕೊಂಡಿದ್ದೆ, ಏನಿಲ್ಲ ಎಬ್ಬಿಸಲು ಬಂದರೆ ಸ್ವಲ್ಪ ಕೀಟಲೆ ಮಾಡಿ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತದಂತ. ಅವಳೂ ಹಾಗೆ ಒಂದೊಂದು ದಿನ ಒಂದೊಂದು ಥರ ಏಳಿಸೊದು, ಒಂದು ದಿನ ಬಯ್ದು, ಬಡಿದು ಎಬ್ಬಿಸಿದರೆ, ಮತ್ತೊಂದು ದಿನ ಮಗು ಎಬ್ಬಿಸಿದ ಹಾಗೆ ಮೆಲ್ಲನೆ ಬಂದು ಮೈದಡುವವಳು. ಮಗುದೊಂದು ದಿನ "ಏಳಿ ಎದ್ದೇಳಿ.." ಅಂಥ ವಿವೇಕಾನಂದರ ಶೈಲಿಯಲ್ಲಿ ಹೊಸ ಹುರುಪುತುಂಬಿ ಎಬ್ಬಿಸೋದು... ಈ ವೈವಿಧ್ಯತೆಯಲ್ಲಿ ಏಕತೆ ಅನ್ನೊ ಹಾಗೆ ನಮ್ಮದು ವೈವಿಧ್ಯತೆಯಲ್ಲಿ ಏಳುವಿಕೆ. ಹೀಗೆ ಬರೆದರೆ ಏಳುವ ಬಗ್ಗೆ ನಾ ಪ್ರಬಂಧ ಮಂಡಿಸಬಹುದು.
ಇನ್ನೇನು ಅವಳು ಬರುವ ಹಾಗೆ ಕಾಣದಾದಾಗ ಎದ್ದೆ, ಎಲ್ಲಿರುವಳೆಂದು ಹುಡುಕಿದೆ ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ, ಅಯ್ಯೊ ದೇವದೂತರು ಬಂದು ದೇವಕನ್ಯೆಯೆಂದು ಎಲ್ಲಾದರೂ ಎತ್ತಿಕೊಂಡು ಹೋದರೋ ಅಂತ ಚಿಂತಿತನಾದೆ ಕೂಡ. ಮನೆ ಬಾಗಿಲು ಸ್ವಲ್ಪ ತೆರೆದಿರುವಂತೆ ಕಾಣಿತು, ಹೊರಬಂದು ನೋಡಿದರೆ ಅಲ್ಲಿರುವಳಲ್ಲ!!! ರಂಗೋಲಿ ಹಾಕುತ್ತಿದ್ದಾಳೆ. ಕುಕ್ಕರಗಾಲಿನಲ್ಲಿ ಕೂತು ಅದೇನೋ ಗಹನ ವಿಚಾರದಲ್ಲಿರುವಂತೆ ತನ್ಮಯತೆಯಿಂದ ಒಂದೊಂದೇ ರೇಖೆ ಎಳೆಯುತ್ತಿದ್ದಾಳೆ, ನಾನು ಸಾಫ್ಟವೇರ ಪ್ರೋಗ್ರಾಮ ಕೂಡ ಅಷ್ಟು ತನ್ಮಯತೆಯಿಂದ ಬರೆದಿರಲಿಕ್ಕಿಲ್ಲ. ಆದರೆ ರಂಗೋಲಿ ಬಿಡಿಸುತ್ತಿರುವುದು ಮತ್ತದೇ ನಾ ಬೇಡವೆಂದ ಜಾಗದಲ್ಲೇ! ಅದೇ ಗೇಟಿನ ಮುಂದೆ, ನನ್ನ ಬೈಕು ಹೊರ ತೆಗೆಯಲಾಗದಂತೆ...
ಇಂದಲ್ಲ ಇದು ನಿನ್ನೆ ಮೊನ್ನೆಯಿಂದಲೇ ನಡೆದಿರುವ ಶೀತಲ ಸಮರ, ಅದೊಂದು ದಿನ ನಾ ಬೇಗ ಆಫೀಸಿಗೆ ಹೋಗಬೇಕಿತ್ತು ಗೇಟಿನ ಮುಂದೆ ಇಷ್ಟು ಅಡ್ಡಗಲ ರಂಗೋಲಿ ಹಾಕಿಬಿಟ್ಟಿದ್ದಳು, ಅದನ್ನ ತುಳಿಯಲು ಮನಸಿಲ್ಲ, ಆದರೂ ಇನ್ನೇನು ಮಾಡಲಾಗುತ್ತೆ ಹಾಗೆ ಬೈಕು ಹೊರ ತೆಗೆದೆ, ರಂಗೊಲಿಯೆಲ್ಲ ಹಾಳಾಯಿತು, ಅಷ್ಟು ಇಷ್ಟಪಟ್ಟು ತೆಗೆದದ್ದು ಹಾಳಾಗಿದ್ದರಿಂದ ಅವಳೂ ಸಿಟ್ಟಿಗೆದ್ದು ಬಯ್ದಳು, ಅವಸರದಲ್ಲಿ ನಾ ಹಾಗೆ ಮಾಡಿದ್ದೆಂದರೂ, ಮುಂಜಾನೆಯೇ ಎದ್ದು ಬೈಕು ಹೊರಗಿಡಬೇಕಿತ್ತೆಂದು ಅವಳ ವಾದ, ನನಗೂ ಲೇಟಾಗಿದ್ದರಿಂದ ಆಕಡೆಯೆಲ್ಲಾದರೂ ಬಿಡಿಸಬೇಕಿತ್ತು ನಡೆದಾಡುವ ದಾರಿಯಲ್ಲಿ ಹಾಕಿದರೆ ಹೇಗೆ ಅಂತ ನಾನು, ಅಂತೂ ಮನಸ್ತಾಪವಾಗಿತ್ತು. ಹೀಗೆ ಕೆಲದಿನ ಅವಳು ಮತ್ತದೇ ಜಾಗದಲ್ಲಿ ರಂಗೋಲಿ ಬಿಡಿಸುವುದು.. ಮತ್ತದೇ ರಾಗ ಮತ್ತದೇ ತಾಳ... ಇಂದು ಅವಳು ತಾದ್ಯಾತ್ಮತೆಯಿಂದ ಆ ರಂಗೋಲಿ ಬಿಡಿಸುತ್ತಿರುವುದ ನೋಡುತ್ತಿದ್ದರೆ ಏನಿದು? ಏನಿದೆ ಈ ರಂಗೋಲಿಯಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ತೀರ್ಮಾನಿಸಿದೆ.
ಅವಳು ನನ್ನ ನೋಡಿರಲಿಲ್ಲ, ನೋಡಲೆಂದೇ ಜೋರಾಗಿ ಆಕಳಿಸಿ ಮೈಮುರಿದೆ, "ಏನೊ ಮಹರಾಜರಿಗೆ ಈಗ ಏಳೊಣವಾಯಿತೋ!" ಅಂತಂದಳು. ಹಲ್ಲುಜ್ಜದ ಹಲ್ಲುಗಳನ್ನೇ ತೆರೆದು ಹೀ.. ಅಂತ ಹಲ್ಲು ಗಿಂಜಿದೆ. "ಬಂದೆ ಟೀ ಇನ್ನೂ ಮಾಡಬೇಕು" ಅಂತ ಮತ್ತೆ ಉಲಿದಳು, "ಏನು ಮಹರಾಣಿಯವರು ಸ್ವತ: ಖುದ್ದಾಗಿ ರಾಜಬೀದಿಯನ್ನು ಅಲಂಕರಿಸುವಂತಿದೆ" ಅಂತ ಅವಳಿಗಿಂತ ನಾನೇನು ಕಮ್ಮಿ ಅನ್ನುವಂತೆ ಡೈಲಾಗು ಹೊಡೆದೆ. ಮುಖವೆತ್ತಿ ನೋಡಿದವಳು, ಹಲ್ಲು ಗಿಂಜುತ್ತಿದ್ದ ನನಗೆ "ಮೊದಲು ಹಲ್ಲು ಉಜ್ಜಿ ಹೋಗಿ, ಬರ್ತೇನೆ" ಅಂತ ಖಾರವಾದಳು. ಹಲ್ಲುಜ್ಜಿ ಬಂದವನು ಮತ್ತೆ ಹಾಗೇ ನೋಡತೊಡಗಿದೆ, ಬಹಳ ಅಂದವಾಗಿ ಬಿಡಿಸಿದ್ದಳು, ನಡುವೆಯೊಂದು ಗುಲಾಬಿ ಹೂವಿನ ತೊಟ್ಟು, ಸುತ್ತಲೂ ಹರಡಿರುವ ಪಕಳೆಗಳು, ಅಲ್ಲೊಂದು ಇಲ್ಲೊಂದು ಅನ್ನುವಂತೆ ಎಲೆಗಳು. ಮೊದಲೆಲ್ಲ ಅಷ್ಟು ಗಮನಿಸಿರಲಿಲ್ಲ, ನನ್ನ ಬೈಕು ತೆಗೆಯುವುದೇ ನನಗೆ ಹೆಚ್ಚಾಗಿತ್ತು. ಅವಳು ಬಿಡಿಸುತ್ತಿದ್ದಲ್ಲಿಗೇ ಹೋಗಿ ಕುಳಿತೆ, ಓರೆಯಾಗಿದ್ದ ಎಲೆಯ ಎಸಳೊಂದನ್ನು ಸರಿಪಡಿಸಿದೆ, ಅಷ್ಟರಲ್ಲಿ "ರೀ ಎದ್ದೇಳ್ರಿ, ಸಾಕು ನೀವೇನಿದು, ಯಾರಾದರೂ ಏನಂದುಕೊಂಡಾರು" ಅಂತ ಎದ್ದೇಳಿಸಿಯೇಬಿಟ್ಟಳು.
ಒಳಗೆ ಬಂದಮೇಲೆ ಬಿಸಿ ಬಿಸಿ ಟೀ ಸಿಕ್ಕಿತು, ಸ್ನಾನ ಮಾಡದೇ ಹಾಗೆ ಎದ್ದು ಹೊರಗೆ ಹೊರಟೆ, ಶರ್ಟು ಹಾಕಿಕೊಳ್ಳುತ್ತಿದ್ದಂತೇ "ಎಲ್ಲಿ" ಅಂತ ಬಂದು ಕೇಳಿದಳು, "ಈಗ ಬಂದೆ" ಅಂತ ಸುಮ್ಮನೇ ಏನೂ ಹೇಳದೇ ಹಾಗೆ ಹೊರಟೆ, ಹೊರಬಂದು ಹಲಗೆಯೊಂದು ತಂದು ಸ್ವಲ್ಪ ಎತ್ತರಿಸಿ ರಂಗೋಲಿ ಮೇಲಿಟ್ಟು ಅದು ಸ್ವಲ್ಪವೂ ಹಾಳಾಗದಂತೆ ಹರಸಾಹಸ ಮಾಡಿ ಬೈಕು ಹೊರತೆಗೆದೆ. ಅವಳು ನಿಂತು ಕಿಟಕಿಯಲ್ಲಿ ನೋಡುತ್ತಿದ್ದಳು, ಹೊರಗೆ ಬಂದು "ಪರವಾಗಿಲ್ಲ ಹಾಗೇ ಅದರ ಮೇಲೆ ಹೋಗಿ ಏನಾಗಲ್ಲ" ಅಂದ್ಲು ಆದ್ರೂ ರಂಗೋಲಿಗೇನೂ ಆಗದಂತೆ ಹೊರಬಂದೆ. ಸೀದಾ ಅಂಗಡಿಗೆ ಹೋಗಿ ನಾಲ್ಕು ಥರ ಕಲರು, ಅದನ್ನ ಹಾಕಿಡಲು ಚೌಕಾಕಾರದ ಖಾನೆಗಳಿರುವ ಡಬ್ಬಿ ಎಲ್ಲ ತೆಗೆದುಕೊಂಡು ಮನೆಗೆ ಬಂದು, ರಂಗೋಲಿಗೆ ಬಣ್ಣ ಮಿಶ್ರಣ ಮಾಡಿ ಅವಳ ಕೈಗಿತ್ತು ಅದರಲ್ಲಿ ಬಣ್ಣ ತುಂಬೆಂದೆ. ಒಂಥರ ನನ್ನ ಬದುಕೆಂಬ ರಂಗೊಲಿಯಲ್ಲಿ ಬಣ್ಣ ತುಂಬು ಅಂದಂಗಿತ್ತು.
"ಆಂ ಅಲ್ಲಿ ಹಸಿರು, ಅಲ್ಲಿ ತಿಳಿ ಹಸಿರು, ಗುಲಾಬಿ ಸ್ವಲ್ಪ ತಿಳೀಯಾದರೆ ಚೆನ್ನಾಗಿರುತ್ತದೆ" ಅಂತನ್ನುತ್ತ ಅವಳು ಬಣ್ಣ ತುಂಬುತ್ತಿರಬೇಕಾದರೆ ಅಲ್ಲೇ ಹತ್ತಿರ ಕುಳಿತಿದ್ದೆ, ಪಕ್ಕದ ಮನೆ ಪದ್ದು ನೋಡಿ ಅಸೂಯೆಪಟ್ಟಿದ್ದೆ ಪಟ್ಟಿದ್ದು. ಅಂತೂ ರಂಗೋಲಿ ತುಂಬ ಬಣ್ಣ ಬಳಿದದ್ದಾಯ್ತು. ಬಾಗಿಲು ತೆರೆದೇ ಇಟ್ಟಳು ರಂಗೋಲಿ ಕಾಣುತ್ತಿರಲೆಂದು, ಮತ್ತೊಂದು ರೌಂಡು ಅಂತ ಟೀ ಹೀರುತ್ತ ಅದೇ ರಂಗೋಲಿ ನೋಡುತ್ತ ಕುಳಿತವನ ಹತ್ತಿರ ಬಂದು ಅಂಟಿಕೊಂಡು ಕುಳಿತಳು, "ರೀ ಏನ್ ನೀವ್ ಇಷ್ಟೆಲ್ಲ ಮಾಡಿದ್ರೆ, ನಾ ಅಲ್ಲಿ ರಂಗೋಲಿ ಹಾಕದೇ ನಿಮ್ಮ ಬೈಕಿಗೆ ದಾರಿ ಬಿಡ್ತೀನಿ ಅನ್ಕೊಂಡಿದೀರಾ?" ಅಂತ ತಣ್ಣಗೆ ಕೇಳಿದಳು ಅವಳ ಅನುಮಾನವು ಸರಿಯಾಗಿತ್ತು, ದಿನಾಲೂ ರಂಗೊಲಿ ಹಾಕಿದ್ದಕ್ಕೆ ಬಯ್ಯೊವರು ಇಂದು ಅದರಲ್ಲಿ ಬಣ್ಣ ತುಂಬುತ್ತಾರೆಂದ್ರೆ ಅನುಮಾನ ಬಾರದಿರುತ್ತದೆಯೇ, ಇವಳು ಅಂತ ಕೇಳಿ ಪರೀಕ್ಷಿಸ್ತೀದಾಳೆ, ಬೇರೆಯವರಾಗಿದ್ರೆ, ಹಾಗೇ ಅಂದುಕೊಂಡು ಸುಮ್ಮನಾಗಿರುವವರು. "ಮರದ ಹಲಗೆ ಇದೆ, ಏನ್ ಪ್ರಾಬ್ಲಂ ಇಲ್ಲಾ, ನೀನೆಲ್ಲೇ ರಂಗೋಲಿ ಹಾಕು ನನಗೇನೂ ಅಭ್ಯಂತರವಿಲ್ಲ" ಅಂದೆ, "ನಂಗೊತ್ತು ಇಂದು ನಿಮಗೆ ರಂಗೋಲಿ ಇಷ್ಟವಾಗಿದೆ, ಇಲ್ಲಾಂದ್ರೆ ಬಣ್ಣ ಎಲ್ಲ ತಂದಿದ್ದು ಯಾಕೆ" ಅಂದ್ಲು... ನಾನೇನೂ ಹೇಳದೇ ನನಗೆ ರಂಗೋಲಿ ಇಷ್ಟವಾಗಿದ್ದನ್ನು ತಿಳಿಯಪಡಿಸಿದ್ದೆ. "ಮೊನ್ನೇನೂ ನೀನು ಚೆನ್ನಾಗೆ ಬಿಡಿಸಿರಬೇಕು, ನನಗೆ ನೋಡುವ ವ್ಯವಧಾನವಿರಲಿಲ್ಲ ಅಷ್ಟೇ, ನನಗೆ ಬೈಕು ತೆಗೆಯುವುದು ಮುಖ್ಯವಾಗಿತ್ತೇ ಹೊರತು ನೀ ಕಷ್ಟಪಟ್ಟು ಬಿಡಿಸಿದ ರಂಗೋಲಿಯನ್ನೆಲ್ಲ ನೋಡುವುದಲ್ಲ" ಅಂದೆ. "ಅಯ್ಯೊ ಅದರಲ್ಲೇನು ಮಹಾ, ಕಷ್ಟಪಡೋದು, ಸುಮ್ನೇ ಹಾಕಿದ್ದು" ಅಂದ್ಲು "ಯಾವಾಗ ಕಲಿತೆ" ಅಂದೆ. "ಅದಕ್ಕೇನು ಸ್ಕೂಲಾ ಟೀಚರಾ ಅಮ್ಮ ಬಿಡಿಸುವುದ ನೋಡಿ ಕಲಿತೆ" ಅಂದ್ಲು, ಮತ್ತೆ ಯಾವ ಯಾವ ಡಿಸೈನು ಹಾಕುತ್ತಾಳೆ, ಏನಾದ್ರು ಅಚ್ಚುಗಳನ್ನು ತಂದಿಟ್ಟಿದ್ದಾಳಾ, ಅಂತೆಲ್ಲ ಕೇಳಿ ತಿಳಿದುಕೊಂಡೆ, ಅವಳೂ ಬಲು ಹುರುಪಿನಿಂದ ಹೇಳಿದಳು, ಅದು ಬರೀ ಹೊಗಳಿಕೆಗಾಗಿ ಆಗಿರಲಿಲ್ಲ, ಅವಳ ಕಲೆಗೆ ನನ್ನ ಪ್ರಶಂಸೆಯಾಗಿತ್ತು, ಅದರಲ್ಲಿ ನಾ ಆಸಕ್ತಿ ತೋರಿಸಿದ್ದೆ, ಇಷ್ಟೆಲ್ಲ ದಿನ ಶೀತಲ ಸಮರಕ್ಕೂ ಕಾರಣ ಅವಳ ಆ ಕಲೆಯನ್ನು ನಾ ಗುರಿತಿಸಲಾಗದಿದ್ದದ್ದೇ, ಹಾಗೂ ಅದಕ್ಕೆ ತಕ್ಕ ಮನ್ನಣೆ ಕೊಡದಿದ್ದುದು ಅಷ್ಟೇ. ಅವಳಿಗೆ ಕೆಲವು ಹೊಸ ಹೊಸ ಆಧುನಿಕ ಡಿಸೈನುಗಳನ್ನೂ ಬರೆದು ಕೊಟ್ಟೆ, ಜತನವಾಗಿ ತೆಗೆದಿಟ್ಟುಕೊಂಡಳು.
ಎಷ್ಟೋ ಬಾರಿ ಏನೊ ಚೆನ್ನಾಗಿರುವುದ ನೊಡುತ್ತೇವೆ, ಅದನ್ನ ನಾವು ಹೊರಗೆ ಹೇಳಲ್ಲ, ರುಚಿಯಾಗಿ ಮಾಡಿದ ಒಂದು ಸಾರು ಪಲ್ಯವೇ ಇರಬಹುದು, ಇಷ್ಟ ಪಟ್ಟು ಧರಿಸಿದ ಉಡುಪೇ ಆಗಿರಬಹುದು, ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆಯ ಸಾಮಾನುಗಳೇ ಆಗಿರಬಹುದು, ಇಲ್ಲ ಚೆನ್ನಾಗಿ ಬಿಡಿಸಿದ ಈ ರಂಗೋಲಿಯೇ ಆಗಿರಬಹುದು, ಚೆನ್ನಾಗಿದೆ ಅಂತ ಮನಸಿನಲ್ಲಿ ಅಂದುಕೊಂಡುಬಿಟ್ಟರೆ ಹೇಗೆ, ಅದು ಅವರಿಗೆ ಗೊತ್ತಾಗುವುದು ಹೇಗೆ, ಯಾಕೆ ನಾವು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಸಡ್ಡೆ ತೋರಿಸುತ್ತೇವೆ. ಅದೇ, ಅನ್ನಕ್ಕೆ ಉಪ್ಪು ಜಾಸ್ತಿಯಾಗಿದ್ದರೆ ಹೇಳಲು ಮರೆಯುವುದಿಲ್ಲ, ಝಗಮಘ ಅನ್ನುವ ಸೀರೆ ಉಟ್ಟು ಅ-ಸಹ್ಯವಾಗಿ ಕಂಡರೆ ಟೀಕಿಸಲು ಮರೆಯುವುದಿಲ್ಲ, ಎಲ್ಲೋ ಬಿದ್ದಾಡುತ್ತಿರುವ ಸಾಮಾನುಗಳು ಎತ್ತಿ ಇಡುವುದಿಲ್ಲ, ಬೇಕಿದ್ದರೆ ಎತ್ತಿಡು ಅಂತ ಹಾರಾಡುತ್ತೇವೆ. ಯಾಕೆ ಹೀಗೆ ಯಾಕೋ ನನ್ನಲ್ಲೂ ಉತ್ತರವಿಲ್ಲ. ಆದರೂ ಬದುಕೇ ಒಂದು ಸುಂದರ ರಂಗೋಲಿಯೆಂದರೆ ಅದಕ್ಕೆ ಅವಳ ಕೈಯಲ್ಲಿ ನಾ ಬಣ್ಣ ತುಂಬಿಸುತ್ತಿದ್ದೇನೆ. ನಿಮ್ಮ ಮನೆಯ ರಂಗೋಲಿ ಏನು ತುಳಿದು ನಡೆದು ಹೋಗುತ್ತೀರೊ ಇಲ್ಲ... ಏನು ಮಾಡುತ್ತಿರೊ ನಿಮಗೆ ಬಿಟ್ಟಿದ್ದು.
ಮರುದಿನ ಎದ್ದು ಬೈಕು ತೆಗೆದೆ, ಮರದ ಹಲಗೆಯೇನೂ ಇಲ್ಲದೆ ಪ್ರಯಾಸವಿಲ್ಲದೇ, ಅವಳೇನು ರಂಗೋಲಿ ಹಾಕಿಲ್ಲ ಅಂದುಕೊಂಡಿರಾ ಇಲ್ಲ ಜಾಗ ಬದಲಾಯಿಸಿದಳೆಂದು ಅಂದುಕೊಂಡಿರಾ. ಏನೂ ಇಲ್ಲ, ಅದೇ ಗೇಟಿನ ಮುಂದೆ ರಂಗೋಲಿ ಹಾಕಿದ್ದಳು, ಮತ್ತೆ ನಾ ಹಾಳು ಮಾಡಿದೆನೆ ಇಲ್ಲ... ಮತ್ತದೇ ಹೂವುಗಳು ಮತ್ತದೇ ಎಲೆಗಳು, ಬೈಕು ದಾಟುವಷ್ಟು ಜಾಗ ಬಿಟ್ಟು, ಗೇಟಿನ ಇಕ್ಕೆಲಗಳಲ್ಲಿ ಬರುವಂತೆ ರಂಗೋಲಿ ಬಿಡಿಸಿದ್ದಳು, ಬೈಕು ಸರಾಗವಾಗಿ ದಾಟಿತ್ತು. ಬೈಕು ನಿಲ್ಲಿಸಿ ಇಳಿದು, ಅದೊಂದು ಎಸಳನ್ನು ಸರಿ ಮಾಡುತ್ತಿದ್ದೆ, ಕಿಟಕಿಯಲ್ಲಿ ನಿಂತು "ರೀ ಆಫೀಸಿಗೆ ಹೊಗುತ್ತೀರೊ, ಇಲ್ಲ ರಂಗೋಲಿ ಸರಿ ಮಾಡುತ್ತ ಇಲ್ಲೇ ಕೂಡುತ್ತೀರೊ" ಅಂತ ಚೀರಿದಳು, ಪಕ್ಕದ ಮನೆ ಪದ್ದು ಕೂಡ ಹೊರಗೆ ಬಂದಳು ಇವಳ ಬಾಯಿಗೆ, ಪದ್ದೂ ಕೂಡ ನಕ್ಕಳು ನಾ ರಂಗೋಲಿ ಸರಿ ಮಾಡುತ್ತಿರುವುದ ನೋಡಿ, ಎದ್ದು ಅಲ್ಲಿಂದ ಓಟಕ್ಕಿತ್ತೆ... ಅವಳು ಇಂದು ರಂಗೋಲಿಗೆ ಬಣ್ಣ ತುಂಬಿರಲಿಲ್ಲ, ಆದರೂ ಅದು ಬಣ್ಣದ ರಂಗೋಲಿಯೆಂತನಿಸುತ್ತಿತ್ತು ನನಗೆ...
ಮತ್ತೆ ಸಿಗುತ್ತೀನಿ ಅದೇ ನಮ್ಮನೆ ರಂಗೋಲಿ ಸರಿ ಮಾಡುತ್ತ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು
Sunday, April 19, 2009
ನಾ ಚುನಾವಣೆಗೆ ನಿಂತರೆ...
ಬ್ರೆಕಫಾಸ್ಟ ಮುಗಿಸಿ ಬಾಲ್ಕನಿಯಲ್ಲಿ ನಿಂತು ಹಸಿರು ಗಾರ್ಡನಿನಲ್ಲಿ ಬಂದು ಚಿಲಿಪಿಲಿ ಎನ್ನುತ್ತಿರುವ ಹಕ್ಕಿ ಪಕ್ಕಿಗಳ ನೋಡುತ್ತಿದ್ದೆ. "ಕೀಈಈಈಈಈ ರ್..." ಅನ್ನುವ ದನಿಯೊಂದಿಗೆ ದ್ವನಿವರ್ಧಕವೊಂದು ಶುರುವಿಟ್ಟುಕೊಂಡಿತು, ಹಕ್ಕಿಗಳು ಹಾರಿಹೋದವು. "ಬಡವರ ಬಂಧು, ದೀನ ದಲಿತರ ಹಿತರಕ್ಷಕ, ಕಾಯಕಯೋಗಿ, ಸಮಾಜಸೇವಕ ****ಅವರಿಗೆ ತಮ್ಮ ಅತ್ಯಮೂಲ್ಯ ಮತ ನೀಡಬೇಕು ಮತದಾರ ಬಂಧು ಬಾಂಧವರೆ, ಅಕ್ಕತಂಗಿಯರೇ ಅಣ್ಣತಮ್ಮಂದಿರೆ..." ಅಂತ ಚೀರತೊಡಗಿತು. ಒಳಗಿದ್ದ ಇವಳೂ ಹೊರಬಂದು ನಿಂತಳು, ನಾ ಮುಂಜಾನೆ ಮುಂಜಾನೆ ಶಾಂತಿ ಹಾಳು ಮಾಡಿದರೆಂದು ಸಿಟ್ಟಿನಿಂದ ನೋಡುತ್ತಿದ್ದರೆ, ಇವಳು ನಗುತ್ತಿದ್ದಳು.
"ಏನ್ ನಗ್ತಾ ಇದೀಯಾ?" ಅಂದೆ, ಮತ್ತೆ ನಗುತ್ತ ಒಳಗೆ ಹೋದ್ಲು. ನಾನೂ ಒಳಗೆ ಬಂದು ಕೂತು "ಚುನಾವಣೆ ಬಂದ್ರೆ ಸಾಕು.. ಈ ಲೌಡಸ್ಪೀಕರ ಉಪಯೋಗಿಸಬಾರದು ಅಂತ ಕಾನೂನು ಮಾಡಬೇಕು, ಆಗ ಚೆನ್ನಾಗಿರತ್ತೆ" ಅಂದೆ. "ನೀವೇ ಯಾಕೆ ಚುನಾವಣೆಗೆ ನಿಂತು ಗೆದ್ದು ಬಂದು ಕಾನೂನು ಮಾಡಬಾರದು" ಅಂತ ನಕ್ಕಳು. ಪಾಕಶಾಲೆಗೆ ಹೊಕ್ಕೆ, ಗ್ಯಾಸ ಕಟ್ಟೆ ಮೇಲೆ ಪ್ರತಿಷ್ಟಾಪಿತನಾದೆ, ಏನೋ ಬೋಗುಣಿಯಲ್ಲಿ ಹಾಕಿಟ್ಟು ತಿರುವುತ್ತಿದ್ಲು. "ಅಲ್ಲಾ ಚುನಾವಣೆ ಅಂದ್ರೆ ಏನು ಅಂತ ತಿಳಿದಿದೀಯಾ, ಎನ್ ಈ ಸೌಟು ತಿರುವಿದ ಹಾಗಾ?, ನಾ ಚುನಾವಣೆಗೆ ನಿಂತರೆ ಅಷ್ಟೇ..." ಅಂದೆ, "ಎನೀಗ ನಿಮಗೇನು ಚುನಾವಣೆಗೆ ನಿಲ್ಲೋಕೆ" ಅಂದ್ಲು "ಅದಕ್ಕೂ ಅರ್ಹತೆ ಬೇಕೆ" ಅಂದೆ "ಏನು ಅರ್ಹತೆ ಹಾಂ, ಒಂದು ಅರ್ಹತೆ ನಿಮಗಿದೆ ಮೊದ್ಲೇ, ಗುಡಾಣದಂತಾ ಹೊಟ್ಟೆ!" ಅಂತ ಮುಗುಳ್ನಕ್ಕಳು. "ಲೇ ಹೋಗೀ ಹೋಗೀ ನನ್ನ ಹೊಟ್ಟೇ ಮೇಲೆ ಯಾಕೇ ನಿನ್ನ ಕಣ್ಣು" ಅಂತ ಕಿವಿ ಹಿಂಡಿದೆ. ಚೀರಿದ್ಲು. ಕೈಬಿಟ್ಟೆ, ಗ್ಯಾಸ ಆಫ್ ಮಾಡಿ ಹೊರಬಂದ್ಲು. "ನಾಯಕರ್‍ಏ ಹೊರಬನ್ನಿ" ಅಂದ್ಲು "ಏನ ನಾಯಿ ಕರು ಅಂತೀದೀಯಾ, ನಾಯಕರೆಲ್ಲ ನಾಯಿ ಕರುಗಳೇ ಬಿಡು" ಅಂತನ್ನುತ್ತ ಹೊರಬಂದೆ. ಇನ್ನೇನು ಆರಾಮ ಕುರ್ಚಿಯಲ್ಲಿ ಕೂರಬೇಕೆನುವಷ್ಟರಲ್ಲಿ ಇವಳು ಆಕ್ರಮಿಸಿಬಿಟ್ಲು. "ಲೇ ಜಾಗ ಬಿಡೇ ಕೂರಬೇಕು" ಅಂದ್ರೆ. "ಇಲ್ಲೇನು ಕುರ್ಚಿಗಾಗಿ ಜಗಳಾಡ್ತೀರಾ ದಿಲ್ಲೀಲೀ ಅಸೆಂಬ್ಲೀನಲ್ಲಿ ಕುರ್ಚಿಗಾಗಿ ಹೋರಾಡಿ" ಅಂತ ಬಾಣ ಬಿಟ್ಲು. ಇವಳು ನನ್ನ ಚುನಾವಣೆಗೆ ನಿಲ್ಲಿಸಿಯೇ ಕೈಬಿಡುವ ಹಾಗೆ ಕಾಣ್ತಿದೆ. ಅವಳನ್ನು ಸ್ವಲ್ಪ ಆಕಡೆ ತಳ್ಳಿ ಅದರಲ್ಲೇ ಜಾಗ ಮಾಡಿಕೊಂಡು ನಾನೂ ಕೂತುಕೊಂಡೆ, ಮೈತ್ರೀ ಸರ್ಕಾರ ಸೀಟು ಹಂಚಿಕೊಂಡಂತೆ. "ಮುಖ್ಯಮಂತ್ರಿಯ ಪತ್ನಿ ಅನ್ನಿಸಿಕೋಬೇಕಿದೇಯಾ" ಅಂದೆ "ನನಗೆ ಅದೆಲ್ಲ ಬೇಡ ಹೋಮ್ ಮಿನಿಸ್ಟರೀ ಸಾಕು" ಅಂದ್ಲು. ಅಲ್ಲಾ ನಾನೇ ಇನ್ನೂ ಚುನಾವಣೆಗೆ ನಿಂತಿಲ್ಲ, ಆಗಲೇ ಇವಳು ಗೃಹಖಾತೆ ಮೇಲೆ ಕಣ್ಣೀಟ್ಟಿದಾಳಲ್ಲ ಭಲೇ ಅಂತ "ನಿನಗ್ಯಾಕೆ ಮಂತ್ರಿಗಿರಿ ಎಲ್ಲಾ" ಅಂದ್ರೆ "ರೀ ಹೋಮ್ ಮಿನಿಸ್ಟರೀ ಅಂದ್ರೆ ಮನೆ ಕೆಲ್ಸಾ" ಅಂತ ಸಬೂಬು ಹೇಳಿದ್ಲು.
"ನಾ ಚುನಾವಣೆಗೆ ನಿಂತರೆ ಯಾರೇ ಓಟು ಹಾಕ್ತಾರೆ" ಅಂದೆ, "ಒಂದು ಓಟಂತೂ ಗ್ಯಾರಂಟೀ" ಅಂದ್ಲೂ "ಓಹ್ ನಿಂದಾ" ಅಂದೆ, "ಯೇ ಇಲ್ಲಾಪ್ಪಾ, ಸೀರೆ ಬಂಗಾರ ಎನಾದ್ರೂ ಕೊಟ್ಟು ಮನೆಗೆ ಟೀವೀ ಕೊಟ್ರೆ ಮಾತ್ರ ನಾ ಓಟು ಹಾಕೊದು". "ಆಹಾ ಆಸೆ ನೋಡು" ಅಂತ ತಿವಿದೆ. "ಮತ್ತಿನ್ನೇನ್ರೀ ಈಗೆಲ್ಲಾ ಚುನಾವಣೆ ಅಂದ್ರೆ ಸುಮ್ನೆನಾ ಮನೆಗ ಬಂದು ಅರಿಷಿಣ ಕುಂಕುಮಾ ಹಚ್ಚಿ ಸೀರೆ ಕೊಟ್ಟು ಟೀವೀ ಎಲ್ಲಾ ಕೊಡ್ತಾರೆ, ನಿಮ್ಮ ಮತ ಅತ್ಯಮೂಲ್ಯ ಅಂತ, ಸುಮ್ನೇನಾ ಹೇಳ್ತಾರೆ" ಅಂತ ತಿರುಗು ಬಿದ್ಲು. "ಲೇ ನಾ ನಿಂತರೆ ನಿಯತ್ತಿಂದಾ ಮತ ಕೇಳ್ತಿನಿ" ಅಂದೆ. "ಅಂದ್ರೆ ಒಂದೇ ಓಟು ಅಷ್ಟೇ" ಅಂದ್ಲು. "ನಂದೊಂದೇ ಓಟು ಅಲ್ವಾ" ಅಂದೆ ಮತ್ತೆ ಮನಸು ಕರಗಿ ತಾನೂ ಓಟು ನಿಮಗೆ ಹಾಕ್ತೀನೀ ಅಂತಾಳೇನೊ ಅಂತ. "ನಿಮ್ಮದಲ್ಲಾರೀ, ನೀವು ಮೊದಲೇ ವಾಜಪೇಯೀ ಅಭಿಮಾನಿ, ನೀವ ಅವರ ಪಾರ್ಟಿಯಿಂದ ಯಾರು ನಿಲ್ತಾರೆ ಅವರಿಗೇ ಹಾಕಿ ಬರ್ತೀರಾ, ನಿಮ್ಮ ಓಟೂ ನಿಮಗಿಲ್ಲಾ" ಅಂದ್ಲು. "ಲೇ ವಾಜಪೇಯಿ ವ್ಯಕ್ತಿತ್ವ ಅಂದ್ರೆ ನನಗೆ ಅಷ್ಟು ಇಷ್ಟ ಕಣೇ, ಅವರನ್ನು ಬೇರೆ ಪಕ್ಷದವರೂ ಇಷ್ಟ ಪಡ್ತಾರೆ, ಆದ್ರೆ ನನ್ನ ಓಟು ನನಗೇ" ಅಂದೆ. "ಹಾಗಾದ್ರೆ ಎರಡು ಓಟು ಗ್ಯಾರಂಟಿ" ಅಂದ್ಲು. "ಓಹ ಒಂದು ನಂದು ಇನ್ನೊಂದು ನಿಂದು, ನಂಗೊತ್ತಿತ್ತು ನೀನ್ ನನಗೇ ಓಟು ಹಾಕ್ತೀಯಾ ಅಂತಾ" ಅಂತ ಚುನಾವಣೇಲೀ ಗೆದ್ದೇ ಬಂದೆನೇನೂ ಅನ್ನೋವಂತೆ ಮುಖ ಇಷ್ಟಗಲ ಮಾಡಿಕೊಂಡು ಹಲ್ಲು ಗಿಂಜಿದೆ. "ರೀ ನಂದು ಅಂತ ನಾನೆಲ್ಲಿ ಹೇಳಿದೆ, ಅದು ಪಕ್ಕದ ಮನೆ ಪದ್ದೂದೂ, ನಿಮ್ಮ ದೊಡ್ಡ ಫ್ಯಾನ್ ಅಲ್ವಾ ನೀವು ಕೇಳದಿದ್ರೂ ನಿಮ್ಗೇ ಓಟು ಹಾಕ್ತಾಳೆ" ಅಂದ್ಲು, ವಿಶ್ವಾಸಮತದಲ್ಲಿ ಸರ್ಕಾರ ಉರುಳಿದಾಗ ಸೋತ ಮಂತ್ರಿಯ ಥರ ಆಗಿತ್ತು ನನ್ನ ಮುಖಾ, ಸಿಗಬಹುದಾಗಿದ್ದ ಸ್ವಂತ ಪಾರ್ಟಿಯ ಒಂದು ಮತ ಸಿಗಲಿಲ್ಲವಲ್ಲ, ಸಿಕ್ಕರೆ ಸರ್ಕಾರ ಉರುಳುತ್ತಿರಲಿಲ್ಲವಲ್ಲ ಅನ್ನೋ ಹಾಗೆ.
"ನಾ ಚುನಾವಣೆಗೆ ನಿಂತು ಏನಾಗಬೇಕಿದೆ ಹೋಗು, ಬೀಳೊದೇ ಎರಡು ಓಟು ಅಂದಮೇಲೆ" ಅಂತ ಎದ್ದೆ, ಎಳೆದು ಕೂರಿಸಿಕೊಂಡ್ಲು, ಪಕ್ಷ ಬಿಟ್ಟು ಹೋಗುತ್ತೀನೆನ್ನುವವನಿಗೆ ಏನೊ ಖಾತೆ ಕೊಟ್ಟು ಕೂರಿಸಿದಂತೆ. "ನಾನೂ ನಿಮಗೇ ಓಟು ಹಾಕ್ತೀನಿ ಆಯ್ತಾ" ಅಂದ್ಲು, "ಸಿಗೋ ಮೂರು ಓಟಿಗೆ ಚುನಾವಣೆಗೆ ನಿಲ್ಬೇಕಾ ಠೇವಣಿ ಕಳ್ಕೋತೀನೀ ಅಷ್ಟೇ" ಅಂದೆ. "ರೀ, ನಿಮ್ಮ ಬ್ಲಾಗಿನಲ್ಲಿ ಓಟು ಹಾಕಿ ಅಂತ ಪ್ರಚಾರಾ ಮಾಡೋಣ ಬಹಳ ಓಟು ಬರ್ತವೆ" ಅಂದ್ಲು. "ರಾತ್ರಿ ನಿದ್ದೆಗೆಟ್ಟು ಬರೆದಿರೋ ಲೇಖನಕ್ಕೇ ಇಪ್ಪತ್ತು ಕಾಮೆಂಟು ಬರಲ್ಲ, ಇನ್ನು ಓಟು ಬರ್ತಾವಾ, ಚುನವಣೆಗೆ ನಿಂತೆ ಅಂದ್ರೆ ಬರೂ ನಾಲ್ಕು ಓದುಗರೂ ಕಮ್ಮಿಯಾಗಿ ಹೋಗ್ತಾರೆ ಅಷ್ಟೇ" ಅಂದೆ. "ಇರ್ಲಿ ಬಿಡಿ ಬೇರೆ ಪ್ರಚಾರಾ ಮಾಡೊಣಾ, ನಾನು ಮನೆಮನೆಗೆ ಹೋಗಿ ಮತ ಕೇಳ್ತೀನಿ" ಅಂದ್ಲು "ಅರಿಶಿಣ ಕುಂಕುಂಮ ಹಚ್ಚಿ ಸೀರೆ ಕೊಟ್ಟು ಮತ ಕೇಳ್ತೀಯಾ, ನಿನಗೇ ಒಂದು ಸೀರೆ ಕೊಡಿಸೋಕೆ ಆಗ್ತಿಲ್ಲ ನನ್ನ ಕೈಲಿ ಇನ್ನು ಎಲ್ರಿಗೂ!!!" ಅಂತ ನಿಟ್ಟುಸಿರು ಬಿಟ್ಟೆ. "ಎನಾದ್ರೂ ಮಾಡಿ ಪ್ರಚಾರ ಮಾಡೊಣ, ಲೌಡಸ್ಪೀಕರನಲ್ಲಿ, ಬಡವರ ಬಂಧು ಹಳೆಯದಾಯ್ತ್ರಿ... 'ಹುಡುಗಿಯರ ಹೃದಯ ಚೋರ, ಕನ್ಯೆಯರ ಕಲ್ಪನೆಯ ಹುಡುಗ, ಮಾತಿನ ಮಲ್ಲನಿಗೆ ನಿಮ್ಮ ಮತ' ಅಂತ ಹೊಸಾ ಸ್ಟೈಲಿನಲ್ಲಿ ಪ್ರಚಾರಾ ಮಾಡೋಣ ಎಲ್ಲಾ ಹುಡುಗೀರ್ ಓಟೂ ನಿಮ್ಗೇ" ಅಂತ ಬಾಂಬಿಟ್ಟಳು. "ಅಹಾಹಾ.. ಮೊದಲೇ ಹೇಳಬಾರದಿತ್ತಾ ಈ ಲೋಕಸಭೆಗೆ ನಿಂತ್ಕೊತಾ ಇದ್ದೆ, ನಾಮಿನೇಶನ ಟೈಮ ಆಗಿ ಹೋಯ್ತು, ಚುನಾವಣೇನೇ ಹತ್ರ ಬಂತು" ಅಂದೆ. "ಅಹಾ ಆಸೆ ನೋಡು, ರೀ ಮೊದ್ಲು ಬಡಾವಣೆಯ ಮುನ್ಸಿಪಲ್ ಕಾರ್ಪೊರೇಶನ್ನಿಗೆ ಆಯ್ಕೆ ಆಗಿ ಆಮೇಲೆ ಹಾಗೆ ಒಂದೊಂದೇ ಹೆಜ್ಜೆ" ಅಂದ್ಲು "ಓಹ್ ಹಾಗಾದ್ರೆ ನಾನು ಪ್ರಧಾನ ಮಂತ್ರಿ ಆಗೋಷ್ಟೊತ್ತಿಗೆ ಮುದುಕಾ ಆಗಿರ್ತೀನಿ" ಅಂದೆ. "ಇನ್ನೇನು ನೀವ್ ಗಾಂಧಿ ಮೊಮ್ಮಗನಾ, ಇಂದು ಹುಟ್ಟೀ ನಾಳೆ ಪ್ರಧಾನೀ ಆಗೋಕೇ, ಆ ಅದೃಷ್ಟ ನಿಮಗೆಲ್ಲಿ ಇಲ್ಲ ಬಿಡಿ" ಅಂದ್ಲು. "ಆಯ್ತು ನೀನು ಹೇಳಿದ ಹಾಗೆ ಆಗ್ಲಿ" ಅಂದೇ. "ಆಗ್ಲಿ ಅಂದ್ರೆ ಆಯ್ತಾ, ಬಡಾವಣೆಯಲ್ಲೇ ಜನರಿಗೆ ಹೆಲ್ಪ ಆಗೋ ಹಾಗೆ ಕೆಲ್ಸ ಮಾಡಬೇಕು, ನೀರು ಬರದಿದ್ರೆ, ಬರೋ ಹಾಗೆ ಮಾಡೋದು, ಕರೆಂಟು, ರೋಡು ಹೀಗೆ ಏನಾದ್ರೂ ಸಮಾಜ ಸೇವೆ ಮಾಡಿ ಹೆಸರು ಮಾಡ್ಬೇಕು ಆಮೇಲೇ ನಿಂತ್ಕೊಳ್ಳೊದು". "ಓಹ್ ಹೌದಾ, ನೀರು ಬಂದು ಮೂರು ದಿನಾ ಆಯ್ತಲ್ಲ, ಪಾಪ ಪಕ್ಕದ ಮನೆ ಪದ್ದೂಗೆ ತೊಂದ್ರೆ ಆಗಿರಬೇಕು ಹೆಲ್ಪ ಮಾಡಿ ಬರ್ಲಾ" ಅಂದೆ. "ಮೊದಲು ನಮ್ಮ ಮನೇಲಿ ನೀರಿಲ್ಲ ಅದನ್ನ ನೋಡಿ" ಅಂತ ದುರುಗುಟ್ಟಿದ್ಲು.
ಹತ್ತು ಕೊಡ ನೀರು ಹೊತ್ತು ತಂದು ಹಾಕಿದ್ದಾಯ್ತು, ಉಸ್ಸಪ್ಪಾ ಅಂತ ಕೂತೆ, "ಲೇ ಚುನಾವಣೆಗೆ ನಿಲ್ಲಕಾಗಲ್ಲ ಕಣೇ ಕೂತ್ಕೋಬಹುದಾ" ಅಂತ ಕಿಚಾಯಿಸಿದೆ, "ಗೆದ್ದು ಬಂದ ಮೇಲೆ ಸೀಟಿನಲ್ಲಿ ಕೂರೋದೇ ಇರ್ತದೆ, ಚುನಾವಣೆಲಾದ್ರೂ ನಿಂತೊಕೊಳ್ಳಿ ಅಂತಾ ಇರೋದು, ನೀತಿ ಸಂಹಿತೆ ಉಲ್ಲಂಘನೆ ಮಾಡೋಕೆ ಆಗಲ್ಲಾ" ಅಂತ ಅವಳು. "ಅಂದ ಹಾಗೆ ಯಾವ ಪಕ್ಷ ನಿಮ್ದು" ಅಂದ್ಲು. "ಪಕ್ಷನೂ ಇಲ್ಲ ಎನೂ ಇಲ್ಲ ಪಕ್ಷೇತರ ನಾನು" ಅಂದೆ. "ಹಾಗಾದ್ರೆ ಚಿಹ್ನೆ?"... "ಹೌದಲ್ವಾ, ಚಿಹ್ನೇ ಬೇಕು, ಹೂಂ.... ಕಂಪ್ಯೂಟರ್...." ಅಂತ ಹಲ್ಲುಕಿರಿದೆ. "ಯಾವಾಗ ನೋಡಿದ್ರೂ ಕಂಪ್ಯೂಟರ್.. ಅದನ್ನ ಚಿಹ್ನೆ ಮಾಡಿಕೊಂಡ್ರೆ, ಅಷ್ಟೇ ನಿಮ್ಮ (ಕೆಲವು)ಐಟೀನವ್ರು ನಾಲ್ಕು ಜನ ಓಟು ಹಾಕಬಹುದು, ಅದೂ ವೀಕೆಂಡು ಇದ್ರೆ ಮಾತ್ರ, ರೀ ಚಿಹ್ನೆ ಅಂದ್ರೆ ಹೇಗಿರಬೇಕು, ಗೌಡರ ಪಕ್ಷದ್ದು ನೋಡಿ, ಹೊರೆ ಹೊತ್ತ ಮಹಿಳೆ, ರೈತರು, ಮಹಿಳೆಯರು ಇಬ್ರನ್ನೂ ಹಿಡಿದುಕೊಂಡು ಬಿಟ್ರು, ಒಂದೇಟಿನಲ್ಲಿ ಎರಡು ಹಕ್ಕಿ, ಇನ್ನು ಹಸ್ತ, ಪೊಲಿಂಗ್ ಬೂತ್ ಮುಂದೆ ನಿಂತೂ ಕೈ ತೊರಿಸಿ, ನಮಗೇ ಮತ ಹಾಕಿ ಅಂತ ಕೇಳಬಹುದು, ಯಾವ ನೀತಿಸಂಹಿತೆಯೂ ಏನೂ ಮಾಡೋಕೆ ಆಗಲ್ಲ, ಇನ್ನು ಕಮಲ, ಕೆಸರಿನಲ್ಲಿ ಅರಳಿದ ಕಮಲ, ಈ ರಾಜಕೀಯ ಕೆಸರನಲ್ಲಿ ಅರಳಿದ ಹೂವು ನಾವು ಅಂತ ಹೇಳಿಕೊಳ್ಳಬಹುದು... ಹಾಗಿರಬೇಕು ಗುರುತು ಅಂದ್ರೆ" ಅಂತ ನೀತಿ ಬೋಧನೆ ಮಾಡಿದ್ಲು, ಇವಳೇನು ಯಾವ ರಾಜಕೀಯ ನಾಯಕರಿಗಿಂತ ಕಮ್ಮಿಯಿಲ್ಲ ಅನಿಸಿತು. "ಹಾಗಾದ್ರೆ, ಕಂಪ್ಯೂಟರ ಆಪರೇಟ್ ಮಾಡುತ್ತಿರುವ ರೈತ" ಹೇಗಿರ್ತದೆ ಅಂದೆ. ಬುಸುಗುಡುತ್ತ ನೋಡಿದ್ಲು... "ನೇಗಿಲು ಹೊತ್ತ ಸಾಫ್ಟವೇರ ಇಂಜನೀಯರು, ರಿಸೆಷನ್ ಟೈಮಿನಲ್ಲಿ ಚೆನ್ನಾಗಿರತ್ತೆ" ಅಂದೆ, ಅಟ್ಟಿಸಿಕೊಂಡು ಬಂದ್ಲು, ಒಡಾಡಿ ಸುಸ್ತಾಗಿ ಬಂದು ಕುಳಿತೆವು. "ರೀ ನಿಜವಾಗ್ಲೂ ಚುನಾವಣೆಗೆ ನಿಂತು ಹೀಗೆಲ್ಲ ಮಾಡಿದ್ರೆ" ಅಂದ್ಲು, "ನಿನ್ನ ಚುನಾವಣೇನೂ ಬೇಡಾ... ನಾ ನಿಲ್ಲೋದು ಬೇಡ.. ಮಲಗ್ತೀನಿ ಬಿಡು" ಅಂದೆ, "ಎದ್ದೇಳಿ ಯುವಕರೇ ದೇಶ ಕಟ್ಟಲು ಎದ್ದೇಳಿ" ಅಂತ ಎಬ್ಬಿಸಲು ಪ್ರಯತ್ನಿಸಿದ್ಲು, ನಾ ಏಳಲೇ ಇಲ್ಲ.
ಚುನಾವಣೆ ಅಂತಿದ್ದಂಗೆ ಹೇಸಿಗೆ ಬರುವಷ್ಟು ರಾಜಕೀಯ ಗಬ್ಬೆದ್ದು ಹೋಗಿದೆ, ಯಾರಾದ್ರೂ ಎಲ್ಲ ಒಮ್ಮೇಲೇ ಸರಿ ಮಾಡಲು ಹೋಗಬೇಕೆಂದ್ರೆ. ಕೊಳಚೆಗೆ ಫಿನಾಯ್ಲು ಸುರಿದಂತೇ ಸರಿ, ಕೊಳಚೆಗೇನೂ ಆಗಲ್ಲ, ಅದಕ್ಕೇ ಕೊಳಚೆ ಹರಿದು ಹೋಗಿ ಹೊಸ ಹರಿವು ಬರಬೇಕು, ಆಗ ಹೊಸ ತಿಳಿನೀರು ಎಲ್ಲ ತೊಳೆಯುತ್ತ ಹೋಗುತ್ತದೆ, ಇತ್ತೀಚೆಗೆ ಕೆಲವು ಪ್ರತಿಭಾನ್ವಿತರು, ನಿಜ ನಾಯಕರು ಹೊರಹೊಮ್ಮುತ್ತಿರುವುದೇ ಅದರ ಲಕ್ಷಣ, ಆದರೆ ಎಲ್ಲ ಸರಿಯಾಗುವವರೆಗೆ ಈ ಕೊಳಚೆ ಸ್ವಲ್ಪ ನಾರುವುದೇ...
ಮಧ್ಯಾಹ್ನ ಗಡದ್ದಾಗಿ ನಿದ್ದೆ ಹೊಡೆದು ಎದ್ದೆ, ಬಿಸಿಬಿಸಿ ಟೀ ಸಿಕ್ಕಿತ್ತು, ಮತ್ತೆ ಕೇಳಿದ್ಲು, "ಚುನಾವಣೆಗೆ ನಿಲ್ಲದಿದ್ರೂ ಸರಿ, ಓಟಾದ್ರೂ ಹಾಕ್ತೀರಲ್ವಾ" ಅಂತ... "ಏನಂತ ಹಾಕಲಿ, ಯಾರಿಗೆ ಹಾಕಲಿ, ಎಲ್ಲ ನಾಯಕರು, ನಾಲಾಯಕರ್‍ಏ ನಿಂತಿದ್ದರೆ... ಈ ಪ್ರಶ್ನೆಗೆ ಉತ್ತರಿಸಿ ಅಂತ, ನಾಲ್ಕು ಆಯ್ಕೆ ಕೊಟ್ಟಿರ್ತಾರಲ್ಲ, ಅಲ್ಲಿ ಕೊನೇ ಆಯ್ಕೆ "ಮೇಲಿನದಾವೂದೂ ಅಲ್ಲ(none of the above)" ಅಂತ ಇರುತ್ತಲ್ಲ ಹಾಗೇ ಇಲ್ಲೂ "ಮೇಲಿನವರಾರೂ ಅಲ್ಲ" ಅಂತ ಕೊನೇ ಆಯ್ಕೆ ಅಂತಿದ್ದರೆ ಚೆನ್ನಾಗಿತ್ತು ಅದನ್ನೇ ಒತ್ತಿ ಬರುತ್ತಿದ್ದೆ" ಅಂದೆ ನಗುತ್ತಿದ್ಲು. "ಹೌದು ಹಾಗೆ ಮಾಡಿದ್ರೆ ಹೇಗಿರುತ್ತದೆ ಒಟ್ಟು ಮತದಾನದ ಪೈಕಿ ಅರ್ಧಕ್ಕಿಂತ ಜಾಸ್ತಿ ಪಡೆದರೆ ಮಾತ್ರ ಗೆಲುವು, ಹೆಚ್ಚಿಗೆ ಜನ "ಮೇಲಿನವರಾರೂ ಅಲ್ಲ" ಅಂದು ಯಾರೂ ಗೆಲ್ಲದಿದ್ರೆ, ಈಗ ನಿಂತವರು ಬಿಟ್ಟು ಮತ್ತೆ ಹೊಸಬರು ನಿಲ್ಲಬೇಕು ಅವರಲ್ಲಿ ಆಯ್ಕೆ ನಡೆಯಬೇಕು, ಹಾಗಿದ್ದರೆ ಹೇಗೆ, ಈ ರೀತಿ ಮಾಡಿದರೂ ಲೋಪದೋಷಗಳಿವೆ, ಎಷ್ಟು ಸಾರಿಯಂತ ಚುನಾವಣೆ ಮಾಡೊದು?, ಹಾಗೆ ಮತ್ತೆ ಹೊಸಬರು ನಿಲ್ಲದಿದ್ರೆ? ಆದರೂ ಎನೋ ಆಗ ಎಲ್ರೂ ಓಟು ಮಾಡಬಹುದು ಅಂತ ನನಗನ್ನಿಸುತ್ತದೆ, ಈಗ ಆಗುತ್ತಿರುವ ಐವತ್ತು ಅರವತ್ತು ಪ್ರತಿಶತಕ್ಕಿಂತ ಹೆಚ್ಚು ಮತಾದಾನವಾಗಬಹುದೇನೊ... ಬಹಳ ಜನರಿಗೆ ಓಟು ಹಾಕಬಾರದೆಂದಿಲ್ಲ, ಸರಿಯಾದ ಅಭ್ಯರ್ಥಿಗಳಿಲ್ಲದೇ ಓಟು ಹಾಕಲು ಮುಂದೆ ಬರುತ್ತಿಲ್ಲ ಅಷ್ಟೇ..." ಅಂದೆ. "ರೀ ಒಳ್ಳೇ ಭಾಷಣ ಮಾಡ್ತೀರ್ರೀ, ನೀವು ಚುನಾವಣೆಗೆ ನಿಂತರೆ..." ಅಂತ ಇವಳು ಮತ್ತೆ ಶುರುವಿಟ್ಟುಕೊಂಡ್ಲು...
ಹೀಗೇ ಬರುತ್ತಿರಿ, ಬ್ಲಾಗ್ ಬಂಧು ಬಾಂಧವರೇ!!! ಓಟು ಹಾಕದಿದ್ರೂ ಪರವಾಗಿಲ್ಲ, ಕಾಮೆಂಟಾದರೂ ನನಗೇ ಹಾಕಿ... :)
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/chunaavane.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದುMonday, April 13, 2009
ನಾನ್ಯಾಕೆ?... ನನ್ನಾಕೆ...
ಮಧ್ಯಾಹ್ನ ಅದೇ ಆಗ ಮಲಗಿದ್ದೆ, ತಲೆ ನೋವು, ನೋವಲ್ಲ ಸಿಡಿತ ಅಂದ್ರೇನೇ ಸರಿ. ತಲೆ ನೋವು ಬಂದ್ರೆ ಅದೂ ನನಗೆ ಅಂತೂ ತಡೆದುಕೊಳ್ಳಲಾಗಲ್ಲ, ಸ್ವಲ್ಪ ಮಲಗಿ ಎದ್ರೆ ಸರಿ ಹೋಗುತ್ತದೆ ಇಲ್ಲಾಂದ್ರೆ, ಇವಳು ತಲೆ ಒತ್ತಬೇಕು, ಹಿತವಾಗಿರುತ್ತೆ. ಅವಳು ಇರಲಿಲ್ಲ, ಅದೇ ಪಕ್ಕದ ಮನೆ ಪದ್ದು ಹತ್ರ ಹರಟೆ ಹೊಡೀತಿರಬೇಕು. ಅದಕ್ಕೆ ಹಾಗೆ ಉರುಳಿದ್ದೆ, ಇನ್ನೇನು ನಿದ್ರೆ ಹತ್ತುತ್ತಿರಬೇಕು. ಒಳಗೆ ಬಂದವಳೇ ಧಡ್ ಅಂತ ಬಾಗಿಲು ಹಾಕಿದ್ಲು. ಹತ್ತುತ್ತಿದ್ದ ನಿದ್ರೆ ಹಾರಿ ಹೊಯ್ತು, ಸಿಟ್ಟು ಬಂದಿತ್ತು ಆದರೂ ತಡೆದುಕೊಂಡು, ಮತ್ತೆ ಮಲಗೊಣ ಅಂತ ಪ್ರಯತ್ನಿಸುತ್ತಿರಬೇಕಾದ್ರೆ, ಬಂದು ಪಕ್ಕ ಬಿದ್ದುಕೊಂಡವಳೇ ಸೀರೆ ಸೆರಗಿನ ತುದಿಯ ಚುಂಗವನ್ನು ತಿರುಗಿಸಿ ತೀಡಿ ಉದ್ದಮಾಡಿ ಕಿವಿಯಲಿ ಕಚಗುಳಿಯಿಟ್ಲು. "ಲೇ ತಲೆ ನೊಯ್ತಿದೆ, ಮಲಗೀದೀನಿ ಬಿಡು" ಅಂದೆ, ಅವಳಿಗೆ ಸುಳ್ಳು ಹೇಳಿದೆನೆಂದು ಅನಿಸಿರಬೇಕು. ಮತ್ತೆ ಅಲುಗಾಡಿಸಿ ಕೀಟಲೆಗಿಳಿದಳು. ಸಿಟ್ಟು ನೆತ್ತಿಗೇರಿತು, "ತಲೆ ನೋವಿದೆ ಅಂದ್ರೆ ಅರ್ಥ ಆಗಲ್ಲ, ಒಂದಿಷ್ಟೊತ್ತು ಮಲಗೋಣ ಅಂದ್ರೂ ಬಿಡಲ್ಲ, ಬಾಗಿಲು ಧಡಾರಂತ ಬಡಿದೆ, ಈಗ ನೋಡಿದ್ರೆ ಬಂದು ತರಲೇ ಬೇರೆ, ಸಾಕಾಗಿ ಹೋಗಿದೆ ನಂಗೆ" ಅಂತ ಬಯ್ದು, ಎದೆ ಮೇಲೆ ಇರಿಸಿ ಮಲಗಿದ್ದ ಅವಳ ಕೈ ಎತ್ತಿ ಆಕಡೆ ಹಾಕಿ, ತಿರುಗಿ ಮಲಗಿದೆ. ಸುಮ್ಮನೇ ಎದ್ದು ಹೊರ ನಡೆದಳು. ಬಾಗಿಲು ಹಾಕಿದ್ದೇ ಗೊತ್ತಾಗಲಿಲ್ಲ ಆ ರೀತಿ ಎಳೆದುಕೊಂದು ಹೋಗಿದ್ದಳು.
ಸ್ವಲ್ಪ ಜಾಸ್ತಿಯೇ ಬಯ್ದೆ, ತಲೆ ನೋವಿತ್ತಲ್ಲ, ಸಿಟ್ಟು ತಾಳಲಾಗಲಿಲ್ಲ, ಅದು ಹಾಗೇನೆ ನನಗೆ ನಿದ್ದೆ ಹತ್ತುತ್ತಿದೆ ಅನ್ನುವಾಗ ಹೀಗೆ ಯಾರಾದ್ರೂ ಹಾಳು ಮಾಡಿದ್ರೆ ಎಲ್ಲೂ ಇಲ್ಲದ ಕೋಪ ಬರುತ್ತದೆ, ಏನು ಮಾಡೋದು ತಡೆದುಕೊಳ್ಳಲಾಗಲ್ಲ, ಆದರೂ ಆ ರೀತಿ ಎಂದೂ ಬಯ್ದಿರಲಿಲ್ಲ, ಅದಕ್ಕೆ ಅವಳ ಮನಸ್ಸಿಗೆ ನಾಟಿತ್ತು. ಒಳ್ಳೇದೇ ಆಯ್ತು ಸ್ವಲ್ಪ ಹೊತ್ತು ಶಾಂತವಾಗಿ ಮಲಗಬಹುದು ಅಂತ ಮಲಗಲು ಪ್ರಯತ್ನಿಸಿದೆ ಆಗಲಿಲ್ಲ, ಅವಳಿಗೆ ಬಯ್ದ ಅಪರಾಧೀ ಭಾವನೆ ಕಾಡತೊಡಗಿತು, ನಿಜವಾಗಲೂ ಮನಸು ನೋಯಿಸಿದೆನೆ, ಅವಳೇನು ಅಂದುಕೊಂಡಿರಬಹುದು. ಹೀಗೆ ಯೊಚನೆಗಳೇ ಸಾಗಿತ್ತು ಮನದಲ್ಲಿ ನಿದ್ರೆ ಎಲ್ಲಿಂದ ಬಂದೀತು.
ಸ್ವಲ್ಪ ಹೊತ್ತಾದ ಮೇಲೆ ಇನ್ನು ನಿದ್ರೆ ಬರಲಿಕ್ಕಿಲ್ಲ ಅಂತ ಗೊತ್ತಾದ ಮೇಲೆ, ಎದ್ದೆ. ಮುಖ ತೊಳೆಯಲು ಬಾತರೂಮಿಗೆ ಹೋಗುತ್ತ ಅವಳೆಲ್ಲಿದ್ದಾಳೆ ಅಂತ ನೋಡಿದೆ, ಹಿತ್ತಿಲಲ್ಲಿ ನಿಂತು ಒರಳಿನಲ್ಲಿ ಏನೊ ಕುಟ್ಟುತ್ತಿದ್ದಳು, ಎಲ್ಲಿ ಮತ್ತೆ ನನಗೆ ಶಬ್ದವಾದೀತೆಂದು ಅಲ್ಲಿ ಹೋಗಿರಬೇಕು. ಹಾಗೆ ಮುಖ ತೊಳೆದು ಹಿತ್ತಲಿಗೆ ನಡೆದೆ, ನನ್ನ ನೋಡಿಯೂ ನೋದದವರಂತೆ ಹಾಗೆ ಒಳಗೆ ಬಂದು ಪಾಕಶಾಲೆ (ನಮ್ಮ ಅಡುಗೆಮನೆ, ನಾ ಹಾಗೆ ಕರೆಯೋದು) ಸೇರಿದಳು. ಬೇಜಾರಾಗಿತ್ತು, ಅದಕ್ಕೆ ಮುನಿಸಿಕೊಂಡಿದ್ದಾಳೆ ಮಾತಾಡುತ್ತಿಲ್ಲ, ನೋಡುತ್ತಲೂ ಇಲ್ಲ. ಸ್ವಲ್ಪ ಹೊತ್ತಾದಮೇಲೆ ಎಲ್ಲ ಸರಿಹೋಗುತ್ತದೆ ಅಂದುಕೊಂಡು, ಒಳ ಬಂದು ಆರಾಮ್ ಕುರ್ಚಿಯಲ್ಲಿ ಒರಗಿದೆ, ಇನ್ನೂ ತಲೆ ನೋಯುತ್ತಿತ್ತು. ಹೊರಬಂದವಳು, ಟೀಪಾಯಿ ಮೇಲೆ ಗ್ಲಾಸಿನಲ್ಲಿ ಟೀ ಇಟ್ಟು ಹೋದಳು. ಏನೂ ಹೇಳಲೇ ಇಲ್ಲ, ತೆಗೆದುಕೊಳ್ಳಲೊ ಬೇಡವೋ ಅಂತ ಯೋಚಿಸಿದೆ, ಮಸಾಲೆ ಟೀ ಘಂ ಅಂತ ಸುವಾಸನೆ ಬಂತು, ಇನ್ಯಾವಾಗಲೋ ಆಗಿದ್ದರೆ ಬಿಡಬಹುದಿತ್ತು, ನಾನ್ಯಾಕೆ ಸೋಲಲಿ ಅಂತ, ಆದ್ರೆ ಈಗ ಟೀ ಅತ್ಯಂತ ಅವಶ್ಯಕವಾಗಿತ್ತು, ತಲೆ ಸಿಡಿತಕ್ಕೆ ಮಸಾಲೆ ಟೀ ಅಂದ್ರೆ ಕೇಳ್ತೀರಾ. ಸುಮ್ನೆ ಏನೂ ಆಗದಿರುವಂತೆ ಟೀ ತೆಗೆದುಕೊಂಡು ಹೀರತೊಡಗಿದೆ, ಆಹಾ ಸೂಪರ್, ಆದ್ರೆ ಹೇಳೋ ಹಾಗಿಲ್ಲ!.
ಗ್ಲಾಸು ಎತ್ತಿಕೊಂಡು ಹಾಗೆ ತೊಳೆಯಲಿಟ್ಟವರ ಹಾಗೆ ಮಾಡಿ ಏನು ಮಾಡುತ್ತಿದಾಳೋ ನೋಡಿದರಾಯ್ತು ಅಂತ ಪಾಕಶಾಲೆಗೆ ನಡೆದೆ. ಏನೊ ತೊಳೆಯುತ್ತಿದ್ಲು, ಅದೂ ಸದ್ದಿಲ್ಲದ ಹಾಗೆ, ಒಂದೊಂದೇ ತೊಳೆದು ಬೊರಲಾಗಿ ಶಬ್ದವಾಗದಂತೆ ಮೆಲ್ಲನೆ ಇಡುತ್ತಿದ್ದಳು. ಅಲ್ಲೇ ಇದನ್ನೊಂದು ಇಟ್ಟು ನಿಂತೆ, ನನ್ನೆಡೆಗೆ ನೋಡಲೂ ಇಲ್ಲ, ಇನ್ನೂ ಕಾವೇರಿದ ವಾತಾವರಣವಿದೆ ಅಂತ ಹೊರಗೆ ಬಂದು, ಕೂತೆ. ಇನ್ನೂ ತಲೆ ನೋವಿತ್ತು. ತಲೆ ನೊವಿಗೆಲ್ಲ ಮಾತ್ರೆ ಯಾವಾಗಲೂ ತೆಗೆದುಕೊಳ್ಳೋದಿಲ್ಲ, ಇಂದು ಯಾಕೊ ಜಾಸ್ತಿಯೇ ಆಗಿತ್ತು, ತಡೆಯಲಾಗದೇ, ಮಾತ್ರೆ ಎಲ್ಲಿದೆ ಅಂತ ಡ್ರಾವರ ತೆಗೆದು ಹುಡುಕತೊಡಗಿದೆ, ಎಲ್ಲಿ ಸಿಗುತ್ತದೆ?... ಹುಡುಕಿ ಗೊತ್ತಿದ್ದರೆ ತಾನೇ, ಏನು ಸಿಗಲಿಲ್ಲವೆಂದರೂ... ಲೇ ಅದು ಎಲ್ಲಿದೆ, ಲೇ ಇದು ಎಲ್ಲಿದೆ ಅಂತ ಕೇಳಿ ಗೊತ್ತೇ ಹೊರತು, ಹುಡುಕಿಯಲ್ಲ, ಈಗ ಕೇಳಲಾಗಲ್ಲ, ಮತ್ತದು ಸಿಗಲಿಲ್ಲ.
ಬೆಡ್‌ರೂಮಿನಲ್ಲಿ ಎಲ್ಲಾದ್ರೂ ಇರಬಹುದೆಂದು ಅಲ್ಲಿ ಕಿತ್ತಾಡುತ್ತಿದ್ದೆ, ಅಲ್ಲೂ ಸಿಗಲಿಲ್ಲ ಮತ್ತೆ ಹೊರಬಂದು ಕೂತೆ ಹಾಗೆ ಟೀಪಾಯಿ ಕಡೆ ನೋಡಿದ್ರೆ, ಒಂದು ಮಾತ್ರೆ, ನೀರು ಇತ್ತು!!!. ಅವಳಿಗೇನು ನನ್ನ ತಲೆಯಿಂದ ನೇರ ಸಂಪರ್ಕವಿದೆಯೇನೋ, ನಾ ಯೋಚಿಸುತ್ತಿರುವುದೆಲ್ಲ ಹೇಗೆ ಗೊತ್ತಾಗುತ್ತದೆ ಅಂತ, ನಾನೀಗ ಮಾತ್ರೆ ಹುಡುಕುತ್ತಿರುವೆ ಅಂತ, ಹೇಳೇ ಇಲ್ಲ ಆದ್ರೆ ಅದ್‍ಹೇಗೆ ಗೊತ್ತಾಯ್ತು. ಅಂತೂ ಮಾತ್ರೆ ಸಿಕ್ಕಿತಲ್ಲ ಅಂತ ಗಂಟಲಿಗಿಳಿಸಿ ಗುಟುಕರಿಸಿದೆ.
ರಾತ್ರಿ ಎಂಟಾಯಿತು ಅಲ್ಲೇ ಬಿದ್ದುಕೊಂಡಿದ್ದೆ, ದಿನಾಲೂ ಅದ್ಯಾವುದೊ ಧಾರಾವಾಹಿಯೋ ಇಲ್ಲ ಪ್ರೊಗ್ರಾಮೊ ಇದೆಯಂತ ನೋಡುತ್ತ ಟೀವೀ ಮುಂದೆ ಕೂರುತ್ತಿದ್ದವಳು ಹೊರಗೆ ಹೋಗಿ ಕೂತಿದ್ದಳು, ಮನೆಯಲ್ಲಿ ಬಹಳ ಸೆಕೆ ಅಲ್ವಾ ಹೊರಗೆ ತಂಗಾಳಿ ಅಂತ ಕೂತಿರಬೇಕು ಅಂತ ನನ್ನ ನಾನೇ ಸಮಾಧಾನಿಸಿಕೊಂಡೆ, ನನಗೂ ಗೊತ್ತು ಮುನಿಸಿಕೊಂಡಿದಾಳೆ ಅಂತ, ಅದರೂ ಮನಸು ಏನೊ ಒಂದು ನೆಪ ಸೃಷ್ಟಿಸಿಕೊಳ್ಳುತ್ತಿತ್ತು. ಮೊದಲೇ ಬಾಗಿಲು ಹಾಕಿದ್ದಕೆ ಬಯ್ದೆ ಇನ್ನು, ಟೀವೀ ಹಾಕಿ ಶಬ್ದ ಮಾಡಿದರೆ ಹೇಗೆ ಅಂತ ಅವಳು ಯೋಚಿಸಿರಬೇಕು, ಏನೊ ತಲೆ ತುಂಬಾ ಯೋಚನೆಗಳು, ತಲೆ ನೋವಿಗಿಂತ ಅವೇ ಜಾಸ್ತಿಯಾಯ್ತು.
ಸ್ವಲ್ಪ ಸಮಯದ ನಂತರ ಬಂದು ಮತ್ತೆ ಪಾಕಶಾಲೆ ಸೇರಿದಳು, ರಾತ್ರಿಗೆ ಅಡಿಗೆ ಮಾಡುತ್ತಿರಬೇಕು, ಅಯ್ಯೋ ಪಜೀತಿ ಆಯ್ತುಲ್ಲ, ಈಗ ನನಗೆ ಊಟ ಮಾಡಲು ಮನಸಿಲ್ಲ, ಹಾಗೇ ನಾಲಗೆ ರುಚಿಸಲೊಲ್ಲದು, ಹುಶಾರಿಲ್ಲದಾಗ ಏನೂ ತಿನ್ನಲು ಮನಸಿರುವುದಿಲ್ಲ, ಅಡಿಗೆ ಮಾಡಿದ ಮೇಲೆ ತಿನ್ನಲ್ಲ ಅನ್ನಲಾಗಲ್ಲ, ಈಗ ಹೇಳುವುದು ಹೇಗೆ. ಮಾತನಾಡಿಸಿಬಿಡಲೇ ಅಂತ ಯೋಚಿಸಿದೆ, ಆದರೆ ಪ್ರತೀ ಬಾರಿ ರಾಜಿಯಾಗುವುದು ನಾನೇ, ಮತ್ತೆ ಇಂದೂ ಕೂಡ "ನಾನ್ಯಾಕೆ?", ಹೌದು ನಾನೇ ಯಾಕೆ, ಅವಳು ಮಾತನಾಡಿಸಿದರೇನು ಗಂಟು ಹೋಗುತ್ತೆ, ಹೌದು ಬಯ್ದೆ ಏನೀಗ, ಬೇಕೆಂತಲೇ ಬಯ್ದಿಲ್ಲವಲ್ಲ, ತಲೆ ನೋವಿತ್ತು, ಹಾಗಾಯ್ತು ಅದನ್ನ ಅವಳೂ ಅರ್ಥ ಮಾಡಿಕೊಳ್ಳಬೇಕಲ್ಲ ಅಂತ ನನ್ನದೇ ವಾದಗಳನ್ನು ಹುಟ್ಟಿಸಿಕೊಂಡು ಸುಮ್ಮನಾದೆ.
ಅವಳೂ ಹಾಗೇ ಯೊಚಿಸಿರಬೇಕು, ಏನು ನನಗೆ ಹೇಗೆ ಗೊತ್ತಾಗಬೇಕು ತಲೆ ನೋವಿದೆಯೆಂದು, ಹೇಳಿದರೆ ತಾನೆ, ನಾನೇನು ಬೇಕೆಂತಲೇ ಬಾಗಿಲು ನೂಕಿ ಸದ್ದು ಮಾಡಿದೆನೆ, ಹಾಗೇ ಯಾವಾಗಲೂ ತೆರೆಯುವಂತೆ ತೆರೆದೆ... ಸದ್ದು ಮಾಡಿದರೆ ನಾನೇನು ಮಾಡಬೇಕು, ಬಾಗಿಲಿಗೂ ಇವರಿಗೆ ತಲೆನೋವಿದೆ ಸದ್ದು ಮಾಡಬಾರದು ಅಂತ ಯೋಚಿಸಲು ತಲೆಯಿದೆಯೇ. ನನಗೇನೊ ಹೇಳಿದರು, ಸುಮ್ನೆ ಸುಳ್ಳು ಹೇಳುತ್ತಿರಬೇಕೆಂದು ಮತ್ತೆ ತುಂಟಾಟಕ್ಕಿಳಿದೆ, ಮತ್ತೊಮ್ಮೆ ನಿಜಾವಾಗ್ಲೂ ತಲೆ ನೋವಿದೆ ಅಂದಿದ್ರೆ ಇವರ ಗಂಟೇನು ಹೋಗುತ್ತಿತ್ತು, ತಪ್ಪೆಲ್ಲ ಅವರದೇ.. ಅವರೇ ಮಾತಾಡಿಸಲಿ "ನಾನ್ಯಾಕೆ?" ಮಾತಾಡಿಸಲಿ, ಅಂತ ಅವಳೂ ವಾದಗಳ ಸೃಷ್ಟಿಸಿಕೊಂಡಿರಬೇಕು. ಅದಕ್ಕೇ ಮಾತನಾಡಿಸಿಲ್ಲ.
ಈ "ನಾನ್ಯಾಕೆ" ಅಂತ ಯಾವಾಗ ಶುರುವಾಗತ್ತೊ ಆಗ, "ನಾವು" ಅನ್ನೊದಕ್ಕೆ ಅರ್ಥ ಕಡಿಮೆಯಾಗತೊಡಗುತ್ತೆ. "ನಾನು" ಅನ್ನೋದೆ ಅಹಂಭಾವದ ಮೊದಲ ಪದ, ಅದಕ್ಕೆ "ಯಾಕೆ" ಸೇರಿದರೆ ಮುಗೀತು, ಅದೇ ಮುಂದುವರಿದು "ನಾವ್ಯಾಕೆ" ಅಂತಾಗಿ, "ನಾನು", "ನೀನು" ಅಂತ ಬೇರೆಯಾಗೋಣ ಬಿಡು, "ನಾವು" ಯಾಕೆ ಅನ್ನೊ ಹಂತಕ್ಕೆ ಬಂದು ತಲುಪುತ್ತೆ. ಇದೆಲ್ಲ ಗೊತ್ತಿದ್ದರೂ ಪ್ರತೀ ಬಾರಿ ರಾಜಿಯಾಗಿದ್ದ ನನಗೆ ಈ ಸಾರಿ ಸೋಲಲು ಮನಸಿರಲಿಲ್ಲ, ಸೋಲಲ್ಲಿ ಗೆಲುವಿದ್ದರೂ, ಗೆಲ್ಲಲು ಹೊರಡುವ ನ್ಯಾಯಾಲಯದ ಕಟ್ಟೆಯೇರಿದ ಶ್ರೀಸಾಮಾನ್ಯನಂತೆ ಯೋಚಿಸುತ್ತಿದ್ದೆ, ನ್ಯಾಯದ ಕಟ್ಟೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅಂತಾರೆ ಹಾಗಿದ್ದರೂ ವಾದ, ವಿವಾದ, ವ್ಯಾಜ್ಯಗಳು ನಿಂತಿಲ್ಲ. ನಾನಿಲ್ಲಿ ಗೆಲ್ಲುವುದಕ್ಕಿಂತ "ನಾನ್ಯಾಕೆ" ಅನ್ನೊದು ಹೆಚ್ಚಾಗಿ, ಸೋಲಲ್ಲಿ ಗೆಲುವಿದ್ದರೂ, ಗೆದ್ದು ಸೋಲಲು ನಿರ್ಧರಿಸಿದಂತಿತ್ತು.
ಊಟಕ್ಕೆ ತಟ್ಟೆ ಡೈನಿಂಗ್ ಟೇಬಲ್ಲಿನ ಮೇಲೆ, ತಂದಿಟ್ಟಳು, ಅಡಿಗೆ ತಯ್ಯಾರಾಗಿದೆ ಊಟ ಮಾಡಬಹುದು ಅನ್ನೋದರ ಸೂಚನೆಯೆನ್ನುವಂತೆ. ಅವಳ ಮೇಲಿನ ಸಿಟ್ಟು ಅನ್ನದ ಮೇಲೆ ಯಾಕೆ ಅಂತ ಕೈತೊಳೆದು ಕೂತೆ, ಬಿಸಿ ಅನ್ನ ತಂದು ಪ್ಲೇಟಿಗೆ ಹಾಕಿದಳು, ಸ್ವಲ್ಪ ಹಾಕುತ್ತಿದ್ದಂತೆ ಸಾಕೆನ್ನುವಂತೆ ಕೈ ಮಾಡಿದೆ ಆದರೆ, ನನ್ನ ಮೇಲೆ ಸಿಟ್ಟಿಗೆ ಹೊಟ್ಟೆ ಯಾಕೆ ಹಸಿದುಕೊಂಡಿರುತ್ತೀರಿ ಅನ್ನೋ ಹಾಗೆ ಸುಮ್ಮನೆ ಇನ್ನೂ ಜಾಸ್ತಿ ಹಾಕಿದಳು, ಕೊನೆಗೆ ಅನ್ನದ ಚಮಚೆ ಕಸಿದು ಕೆಳಗಿಟ್ಟೆ. ಒಳಗಿನಿಂದ ತುಪ್ಪ ತೆಗೆದುಕೊಂಡು ಬಂದ್ಲು, ಇಷ್ಟೇ ಇಷ್ಟು ಸುರಿದಳು, ಇನ್ನೂ ಜಾಸ್ತಿ ಬೇಕಾಗಿತ್ತು, ಆದ್ರೆ ಕೇಳೋದು ಹೇಗೆ, ಬೇಕೆಂದದ್ದು ಸಿಗಲ್ಲ, ಬೇಡವೆಂದದ್ದು ಜಾಸ್ತಿ. ಇನ್ನು ಸಾರು ತರುತ್ತಾಳೆ, ತಿನ್ನಲು ಮನಸಿಲ್ಲ, ಏನು ಮಾಡೊದು ಅಂತಿದ್ದಂಗೆ, ನಿಂಬೆ ಹಣ್ಣಿನ ಎರಡು ಹೋಳು ತಂದು, ಇಟ್ಟಳು. ಹಿರಿ ಹಿರಿ ಹಿಗ್ಗಿದೆ...ಯಾಕೆ ಗೊತ್ತಾ, ಅಮ್ಮ ನನಗೆ ಹುಶಾರಿಲ್ಲದಾಗೆ ಹೀಗೆ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿ, ನಿಂಬೆ ಹಿಂಡಿ, ಕಲಸಿ ಉಂಡೆ ಮಾಡಿ ಕೊಡುತ್ತಿದ್ಲು, ಬೇಕೆಂದರೆ ನಂಜಿಕೊಳ್ಳಲು ನಿಂಬೆ ಉಪ್ಪಿನಕಾಯಿ ಜತೆಯಿರುತ್ತಿತ್ತು, ಪ್ರಯತ್ನಿಸಿ ನೋಡಿ, ಎಲ್ಲ ಸರಿಯಾದ ಪ್ರಮಾಣದಲ್ಲಿ ಹದವಾಗಿ ಬೆರೆಸಿ ಬಿಸಿಬಿಸಿ ಅನ್ನ ಇದ್ದರೆ ಅದರ ರುಚಿಯೇ ಬೇರೆ. ಅದು ಇವಳಿಗೆ ಗೊತ್ತಾದದ್ದೆಲ್ಲಿ, ಅಮ್ಮ ಸೊಸೆಗೆ ನಾಲೇಜು ಟ್ರಾನ್ಸಫರ್(ಈ ಸಾಫ್ಟವೇರಿನ ಉದ್ಯೊಗದಲ್ಲಿ ಒಬ್ಬ ಕೆಲಸ ಬಿಡಬೇಕಾದ್ರೆ ಮಾಡಿದ ಎಲ್ಲ ಪ್ರೊಜೆಕ್ಟಿನ ಮಾಹಿತಿ ಮತ್ತೊಬ್ಬನಿಗೆ ನೀಡುತ್ತಾನೆ ಅದೇ ಇದು..) ಮಾಡಿದ್ದು ಯಾವಾಗ??. ಖುಶಿಯಾಗೆ ಬರಸೆಳೆದು ಮುತ್ತಿಕ್ಕಲೇ ಅನ್ನಿಸಿತು, ಮತ್ತೆ ನೆನಪಾಯಿತು.. "ನಾನ್ಯಾಕೆ?"...
ಚೆನ್ನಾಗಿ ಕಲಸಿ ತಿನ್ನುತ್ತಿದ್ದರೆ ಉಪ್ಪಿನಕಾಯಿ ಕಳೆದುಕೊಂಡಂತಾಯಿತು, ಬೇಕೆಂತಲೇ ತಂದಿಲ್ಲ ಅವಳು ಕೇಳಿದರೆ ಕೊಡೊಣವೆಂದು, ನಾ ಕೇಳಬೇಕಲ್ಲ?. ಮೊದಲು ಉಪ್ಪಿನಕಾಯಿ ಬಾಟಲಿ ಇರುತ್ತಿದ್ದ ಜಾಗದಲ್ಲಿ ಹುಡುಕಾಡಿದಂತೆ ಮಾಡಿದೆ, ಅವಳಿಗೆ ಗೊತ್ತಾಗಲಿ ಅಂತ, ಕ್ಷಣ ಮಾತ್ರದಲ್ಲಿ ಉಪ್ಪಿನಕಾಯಿ ಪ್ರತ್ಯಕ್ಷ! ತಂದಿಟ್ಟಿಳಲ್ಲ, ತಟ್ಟೆ ನೆಕ್ಕಿ ತೊಳೆಯೊದೇ ಬೇಡ ಹಾಗೆ ಮಾಡಿಟ್ಟೆ. ಇನ್ನೂ ಕೈ ನೆಕ್ಕುತ್ತಿದ್ದೆ, ಆಸೆಗಣ್ಣಿನಿಂದ ನೊಡುತ್ತ, ಅವಳಿಗೆ ನಗು ಬಂದಿರಬೇಕು, ಹಾಗೇ ತಡೆದುಕೊಂಡು ಮತ್ತಿಷ್ಟು ನೀಡಿದಳು, ಅವಳ ಮುಖದಲ್ಲಿ ಮುಗುಳ್ನಗು ಹೊರ ಬರಲು ಕಾಯುತ್ತಿತ್ತು, ಅವಳು ಬಿಟ್ಟರೆ ತಾನೆ, "ನಾನ್ಯಾಕೆ??" ಅಂತ ಅವಳೂ ಕೂಡ...
ಅಂತೂ ಊಟ ಮುಗಿಸಿ, ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡೆ, ಇನ್ನೂ ಸ್ವಲ್ಪ ತಲೆ ನೋವಿತ್ತು, ಅವಳೂ ಬಂದು ಉರುಳಿದಳು, ನಡುವೆ ಅಂತರವಿತ್ತು, ನಿದ್ರೆ ಮಾತ್ರ ಬರುತ್ತಿಲ್ಲ, ಆಕಡೆ ಈಕಡೆ ಹೊರಳಾಡುತ್ತಿದೆ, ಬಹಳ ಹೊತ್ತಿನವರೆಗೆ... ನಾಳೆ ನಾನೇ ಮಾತಾಡಿಸಿಬಿಡೋಣ ಎನು ಮಹಾ ವಿಷಯ, ತಪ್ಪು ನಂದೇ ಅಲ್ಲವೇ, ಇನ್ನೊಂದು ಬಾರಿ ನಾನೇ ರಾಜಿಯಾದರೆ ಏನಾಗುತ್ತೆ, ಈಗ ಮಲಗಿದ್ದಾಳೆ ಇಲ್ಲದಿದ್ರೆ ಈಗಲೇ... ಅಂತ ಯೊಚನೆಯಲ್ಲೇ ಇದ್ದೆ. ಅವಳೀಗೂ ಪಾಪ ತಲೆ ನೋವು ಇನ್ನೂ ಕಡಿಮೆಯಾಗಿಲ್ಲವೇನೋ ಅನಿಸಿರಬೇಕು, ಪ್ರತೀ ಬಾರಿ ನಾನೇ ಹಠ ಸಾಧಿಸುತ್ತೇನೆ, ಇಂದು ನಾನೇ ಯಾಕೆ ಸೋಲಬಾರದು, ಅದೇ ಯಾವಾಗ್ಲೂ "ಅವರ್‍ಯಾಕೆ" ಅಂತ... ನಿಧಾನವಾಗಿ ಹತ್ತಿರ ಬಂದಳು, ಹಣೆಮೇಲೆ ಕೈಯಿಟ್ಟು ನಿಧಾನವಾಗಿ ಒತ್ತತೊಡಗಿದಳು, "ನಿದ್ರೆ ಬರ್ತಿಲ್ವಾ" ಅಂತಿದ್ಲು... ಬಾಯಿಮೇಲೆ ಕೈಯಿಟ್ಟೆ, ನಾ ಸೋತು ಗೆಲ್ಲಬೇಕೆಂದಿದ್ದರೆ, ಸೋತು ಗೆದ್ದುಬಿಟ್ಟಿದ್ಲು, ಕಣ್ಣಾಲಿಗಳು ತುಂಬಿ ಬಂದವು ಸಧ್ಯ ಕತ್ತಲೆಯಿತ್ತು ಅವಳಿಗೆ ಕಾಣಲಿಕ್ಕಿಲ್ಲ, "ನಿನ್ಮೇಲೆ ಸುಮ್ನೇ ರೇಗಿದೆ.. " ಅಂತ ಏನೋ ಹೇಳ ಹೋದೆ, ಅವಳು ಬಾಯಿ ಮುಚ್ಚಿಬಿಟ್ಲು, ಇಷ್ಟೊತ್ತು ಮಾತಾಡಲು ಹಾತೊರೆಯುತ್ತಿದ್ದವರಿಗೆ ಮಾತೇ ಬೇಡವಾಗಿತ್ತು, ಎದೆ ಮೇಲೆ ಎರಡು ಹನಿ ಬಿದ್ದಂತಾಯಿತು, ನನ್ನದೋ??? ಅವಳದೂ ಜಿನುಗಿರಬಹುದು, ಯಾರದಾದರೇನು ಯಾರು ಸೋತರು, ಯಾರು ಗೆದ್ದರು, ಅದೆಲ್ಲ "ನಾನ್ಯಾಕೆ" ಯೋಚಿಸಲಿ, ಅಲ್ಲಲ್ಲ ಅದೆಲ್ಲ "ನಮಗ್ಯಾಕೆ"... "ನಾನ್ಯಾಕೆ?" ಅಂತ "ನಾನ್ಯಾಕೆ" ಹಠ ಸಾಧಿಸಲಿ, ಎಷ್ಟೆಂದರೂ ಅವಳು "ನನ್ನಾಕೆ"...
ಹೀಗೇ ಬರುತ್ತಿರಿ, ನನ್ನಾಕೆಯೊಂದಿಗೆ ಮತ್ತೆ ಸಿಗುತ್ತೇನೆ...
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
The PDF document can be found at http://www.telprabhu.com/naanyaake.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

