Sunday, May 10, 2009

ಪತ್ರ ಬರೆಯಲಾ...


ಮುಂಜಾನೆ ಎಫ್ ಎಂ ರೇಡಿಯೋ ಕೇಳುತ್ತಲೇ ಇವಳೆಲ್ಲ ಕೆಲಸ ಮಾಡೊದು ಹೀಗಾಗಿ ಕೆಲವೊಮ್ಮೆ ಇಷ್ಟವಾಗದಿದ್ದರೂ ಅವಳಿಂದಾಗಿ ಅದು ನನ್ನ ಕಿವಿ ಮೇಲೆ ಬೀಳುತ್ತಲೇ ಇರುತ್ತದೆ. ಇತ್ತೀಚಿನ ಆ ರೇಡಿಯೊ ಜಾಕಿಗಳ ಮಾತುಕತೆಯಂತೂ ಬಹಳ ಕಿರಿಕಿರಿಯಾಗುತ್ತದೆ, ಅವರ ಮಾತಿನ ಹಾಗೂ ಜಾಹೀರಾತಿನ ನಡುವೆ ಎಲ್ಲೋ ಸ್ವಲ್ಪ ಹಾಡು ಕೇಳಿಸಿದರೆ ಅದೇ ನಮ್ಮ ಅದೃಷ್ಟ. ಅಂದು ದುನಿಯಾದ ಹಾಡೊಂದು ಕೇಳಿ ಬರುತ್ತಿತ್ತು... "ಕರಿಯ ಆಯ್ ಲವ್ ಯು..." ಅಂತ.. ನಾನೂ ನನ್ನ ಸಾಹಿತ್ಯ ಸ್ವಲ್ಪ ಸೇರಿಸಿ ಗುನುಗುನಿಸುತ್ತಿದ್ದೆ ಬಾತರೂಮಿನಲ್ಲಿ... ನನ್ನದೇ ದನಿ ಸ್ವಲ್ಪ ಹೆಚ್ಚಾಯಿತೆನ್ನಿಸುತ್ತದೆ, ಪಾಕಶಾಲೆಯಿಂದ ಇವಳು "ರೀ ಎಸ್ ಪೀ ಬಾಲಸುಬ್ರಹ್ಮಣ್ಯಂ ಅವರೇ ಸ್ವಲ್ಪ ಹಾಡೋದು ನಿಲ್ಲಿಸ್ತೀರಾ, ರೇಡಿಯೋದಲ್ಲಿ ಹಾಡು ಬರ್ತಿದೆ, ಆಮೇಲೆ ನೀವು ಹಾಡುವಿರಂತೆ" ಅಂತ ಗದರಿದಳು. "ಆಯ್ತು ಲತಾ ಮಂಗೇಶ್ಕರ ಅವರೇ, ಆಮೇಲೆ ಇಬ್ಬರೂ ಸೇರಿ ಹಾಡೊಣಾ ಅಂತೆ" ಅಂತ ಮಾರುತ್ತರ ಕೊಟ್ಟೆ. ಅಷ್ಟರಲ್ಲಿ ಹಾಡು ಮುಗಿಯಿತು, ಇಲ್ಲಾ ಅವರೇ ಮುಗಿಸಿದರೋ(ಜಾಹೀರಾತು ಹಾಕಬೇಕಲ್ಲ)... ಹಾಡು ನಿಂತಹೋಯಿತಲ್ಲ, ಅವಳ ಅಪ್ಪಣೆಯಂತೆ ನಾ ಮತ್ತೆ ಹಾಡ ಬಹುದಿತ್ತು, ಮತ್ತೆ ಶುರುವಿಟ್ಟುಕೊಂಡೆ... ಅವಳೂ ದನಿ ಸೇರಿಸಿದಳು "ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ.." ನಾನೂ ಜತೆಯಾದೆ, "ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ..." ಅಂತ... ಅದೇ ಸಾಲಿನ ಯೋಚನೆಯಲ್ಲೇ "ನೀನ್ಯಾವತ್ತು ನನಗೆ ಪ್ರೇಮಪತ್ರ ಬರೆದೇ ಇಲ್ವಲ್ಲ" ಅಂದೆ.. ನಾಚಿ ಅವಳ ಕೆನ್ನೆ
ಕೆಂಪಾಯಿತು.. "ನೀವು ಬರೆದಿರಬೇಕಲ್ಲ, ಮೊದಲೇ ಕೃಷ್ಣ ಪರಮಾತ್ಮನ ಕಲಿಯುಗದ ಅವತಾರ, ಯಾರ್‍ಯಾರಿಗೆ ಎಷ್ಟು ಬರೆದೀದೀರಿ" ಅಂದ್ಲು. ನಾನು ಒಂದು ಪ್ರೇಮಪತ್ರದ ಮಾತೆತ್ತಿದರೆ ಇವಳು ಎಷ್ಟು ಅಂತ ಎಣಿಕೆ ಕೇಳಬೇಕೆ? "ಕಾಲೇಜಿನಲ್ಲಿ ಹುಡುಗನಿಗೊಬ್ಬನಿಗೆ ಗೆಳೆಯರೆಲ್ಲ ಸೇರಿ ಹುಡುಗಿ ಹಾಗೆ ಪತ್ರ ಬರೀಬೇಕಾದ್ರೆ ಎನು ಚೂರು ಪಾರು ಸಲಹೆ ನೀಡಿದ್ದು ಬಿಟ್ಟರೆ, ಎಲ್ಲೊ ನಾ ಬರೆದ ನಾಲ್ಕು ಸಾಲುಗಳನ್ನು ಯಾರೋ ತಮ್ಮ ಪತ್ರದಲ್ಲಿ ಉಪಯೋಗಿಸುತ್ತೀನಿ ಅಂತದದ್ದಕ್ಕೆ ಓಕೆ ಅಂದಿದ್ದೆ ಅಷ್ಟೇ, ಪತ್ರಗಿತ್ರ ಬರೆಯೋ 'ಸಾಹಸ'ಕ್ಕೆ ಕೈ ಹಾಕಿಲ್ಲ ಬಿಡು, ಅಲ್ಲದೇ ಪ್ರೀತಿ ಮಾಡುವಷ್ಟು ಯಾರೂ ನನಗೆ ಇಷ್ಟವೇ ಆಗಲಿಲ್ಲ" ಅಂದೆ. "ನನಗಾದ್ರೂ ಒಂದು ಬರೀಬೇಕಿತ್ತಲ್ಲಾ?ಯಾಕೆ ನಾನೂ ಇಷ್ಟ ಅಗಿಲ್ವಾ" ಅಂದ್ಲು. "ಅಲ್ಲಾ ನಿಶ್ಚಿತಾರ್ಥ ಅಂತ ಆದ ಮೇಲೆ ಒಂದು ಬರೆಯೋಣ ಅಂತಿದ್ರೆ, ಮುಂಜಾನೆ ಕಾಲು ಘಂಟೆ, ಮಧ್ಯಾಹ್ನ ಒಂದು ಘಂಟೆ, ರಾತ್ರಿಯೊ ಘಂಟೆಗಳ ಲೆಕ್ಕ ಇಲ್ಲದ ಹಾಗೆ ಫೋನು ಮಾಡಿ ಮಾತಾಡ್ತಿದ್ದೆ, ಇನ್ನು ಪತ್ರದಲ್ಲಿ ಬರೆಯೋಕೆ ಎನಿರತ್ತೆ ಮಣ್ಣು ಎಲ್ಲ ಮಾತಾಡಿ ಮುಗಿಸಿದ ಮೇಲೆ, ಅದಕ್ಕೇ ಬರೀಲಿಲ್ಲ" ಅಂದೆ. ಅವಳಿಗೂ ಅದು ಸರಿಯೆನಿಸಿರಬೇಕು ಸುಮ್ಮನಾದ್ಲು.

ಆದರೆ ನನಗೇಕೋ ಈ ಫೊನು ಬಂದು ಪತ್ರ ಬರೆಯೋದನ್ನೆ ಇಲ್ಲದಾಗಿಸಿಬಿಟ್ಟಿತಲ್ಲ ಅಂತ ತಲೆಯಲ್ಲಿ ಕೊರೆಯುತ್ತಿತ್ತು ಆ ಯೋಚನೆ. ಅದೇ ಯೊಚನೆಯಲ್ಲೇ, ಅಫೀಸಿಗೆ ಬಂದೆ, ಅಲ್ಲಿ ನೋಡಿದ್ರೆ ನೆಟವರ್ಕ ಪ್ರಾಬ್ಲಂ ಆಗಿದೆ, ಇಂಟರನೆಟ್ಟು, ಆಯ್ ಪಿ ಫೋನು ಏನೂ ಕೆಲ್ಸ ಮಾಡ್ತಿಲ್ಲ, ಅದಕ್ಕೆ ಸಧ್ಯ ಅದು ಸರಿ ಹೋಗೊವರೆಗೆ ಏನೂ ಕೆಲಸ ಮಾಡಾಕಾಗಲ್ಲ ಅಂದ್ರು. ನಾ ನಕ್ಕೆ, ಕೆಲ್ಸ ಇಲ್ಲ ಅಂತಲ್ಲ, ಅಲ್ಲಾ ಈವತ್ತೇ ಪತ್ರದ ಬಗ್ಗೆ ಮಾತಾಡ್ತಿದ್ದೆ, ಫೋನು, ಇ-ಮೇಲ್ ಎಲ್ಲ ಇಲ್ಲದಾಗಿ ಬಿಡಬೇಕಾ ಹ ಹ ಹ... ಕ್ಯಾಂಟೀನಿಗೆ ಹೋಗಿ ಬಿಸಿ ಕಪ್ಪು ಕಾಫಿ ಹೊಟ್ಟೆಗೆ ಇಳಿಸಿದ್ದಾಯ್ತು. ಆಗಲೇ ಬಂದದ್ದು ಯೋಚನೆ ನನ್ನಾಕೆಗೆ ಈಗ ಯಾಕೆ ಪತ್ರ ಬರೀಬಾರದು ಅಂತ... ಕಾನ್ಫರೆನ್ಸ ರೂಮ ಒಂದು ಸೇರಿಕೊಂಡು ಕೂತು ಪೆನ್ನು ಪೇಪರು ತೆಗೆದುಕೊಂಡು ಬರೆಯಲು ಕೂತೆ...

ಪ್ರೀತಿಯ, ನನ್ನವಳೇ, ನನ್ನಾಕೆಯೆ, ಲೇ ಇವಳೇ, ತಗಡು, (ಅಲ್ಲಾ ಎದುರು ಮಾತಾಡೋವಾಗ್ಲೇ ನಿನ್ನ ಹೆಸರಿಂದ ಕರೆದಿಲ್ಲ, ಇನ್ನು ಪತ್ರದಲ್ಲಿ ಯಾಕೆ?) ಅದಕ್ಕೇ
ಪ್ರೀತಿಯ ನಿನಗೆ,

ಇಲ್ಲಿ ಎನೂ ಕ್ಷೇಮವಿಲ್ಲ, ಕೆಲಸ ಇಲ್ಲಾ, ಖಾಲೀ ಕೂತಿದ್ದೇನೆ, ಕಾಡಿಸೊಣಾ ಅಂದ್ರೂ ನೀನಿಲ್ಲ, ಅಲ್ಲಿನ ಕ್ಷೇಮ ಸಮಾಚಾರವನ್ನು ನಿರಂತರವಾಗಿ ಏನ್ ಡಿ ಟೀವೀ ಬ್ರೇಕಿಂಗ ನ್ಯೂಜ ಥರ ನೀನು ಫೋನು ಮಾಡಿ ತಿಳಿಸುವುದರಿಂದ.. ಅಲ್ಲಿ ಎಲ್ಲ ಕ್ಷೇಮವಾಗಿದೆ ಎಂದುಕೊಳ್ಳುತ್ತೇನೆ.

ಮುಂಜಾನೆ ಅಲ್ಲಿಂದ ಆಫೀಸಿಗೆ ಹೊರಟು ಘಂಟೆಕಾಲದ ಈ ಟ್ರಾಫಿಕ್ಕಿನಲ್ಲಿ ಹಾಗೂ ಹೀಗೂ ಬಂದು ತಲುಪಿದ್ದೇನೆ, ಪ್ರಯಾಣ ಸುಖಕರವಾಗಿತ್ತು(ಸಿಗ್ನಲ್ಲಿನಲ್ಲಿ ಸುಂದರಿಯರು ಸಿಕ್ಕಿದ್ದರಲ್ಲ), ಸರಿಯಾಗಿ ಬಂದು ತಲುಪಿದ್ದು ನನ್ನ ಅದೃಷ್ಟ. ಬೈಕಿನಲ್ಲಿ ಬಂದಿದ್ದರಿಂದ ಬೇಗ ತಲುಪಿದೆ, ಬಸ್ಸಿನಲ್ಲಿ ಬರುವುದಾಗಿದ್ದರೆ, ಊಹಿಸಲೂ ಸಾಧ್ಯ ಇಲ್ಲ.

ಈಗ ಪತ್ರ ಬರೆಯಲು ಕಾರಣವೇನೆಂದರೆ, ಪತ್ರ ಬರೆಯೋದೇ ಆಗಿದೆ. ನಸುಕಿಗೆ ಕೇಳಿದ ಹಾಡು ನನ್ನ ಮನದಲ್ಲಿ ಹಾಗೆ ಕೊರೆಯುತ್ತಿತ್ತು ಅದರಲ್ಲೂ ನೀನು ಪತ್ರ ಬರೆದೇ ಇಲ್ಲಾ ಅಂದಾಗ ನೀನು ಬರೆದಿಲ್ಲದಿದ್ದರೂ ನಾನ್ಯಾಕೆ ಬರೆಯಬಾರದು ಅಂತ ಬರೆಯಲು ಕುಳಿತೆ.

ಮದುವೆಯಾಗಿ ಇನ್ನೂ ಎಣಿಕೆ ಮಾಡಿ ಹೇಳೊವಷ್ಟು ವರ್ಷಗಳಾಗಿಲ್ಲ ಆದರೂ ಕಷ್ಟಾನೋ ಸುಖಾನೋ ನಾವಿಬ್ಬರೂ ಬೇವು ಬೆಲ್ಲದಂತೆ ಬದುಕು ಅಂತ ಹೊಂದಿಕೊಂಡು ಹೋಗುತ್ತಿದ್ದೇವೆ. ಮದುವೆಯಾದ ಹೊಸತನದಲ್ಲಿನ ನಿನ್ನ ಹಿಂಜರಿತ ಈಗ ಇಲ್ಲವಾಗಿ ನನ್ನೊಂದಿಗೆ ನಿರ್ಭಿಡೆಯಿಂದ ಮಾತಾಡುತ್ತೀ... ಹಾಗಾಗಿ ಎಲ್ಲ ಪಾರದರ್ಶಕವಾಗಿರುವುದರಿಂದ ಅನುಮಾನಗಳು ಹುಟ್ಟಿ ನಮ್ಮಿಬ್ಬರ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳಲು ಎಲ್ಲಿ ಆಸ್ಪದವಿದೆ. ಬರೀ ನನ್ನೊಂದಿಗೆ ಮಾತ್ರವಲ್ಲ ನನ್ನವರೊಂದಿಗೂ ನೀ ಬೆರೆತುಕೊಂಡ ರೀತಿ ನನಗೆ ನಂಬಲಾಗುತ್ತಿಲ್ಲ. ನೀನಿಲ್ಲದೇ ನನಗೆ ಒಂದು ದಿನ ಕೂಡ ಕಳೆಯಲಾಗದಷ್ಟು ನನ್ನ ಆವರಿಸಿಕೊಂಡಿರುವಿ. ಚುನಾವಣೆಗೆ ನಿಂತ ರಾಜಕೀಯ ಮುಖಂಡನನ್ನು ಹಿಂಬಾಲಕರು ಹೊಗಳಿದಂತೆ ನನ್ನವು ಹೊಗಳಿಕೆ ಮಾತೆಂದುಕೊಳ್ಳಬೇಡ, ನನ್ನ ಮನದಿಂದ ನನಗನಿಸಿದ್ದು ಮಾತ್ರ ಹೇಳುತ್ತಿದ್ದೇನೆ.

ನಾಯಿ ಬೆಕ್ಕಿನಂತೆ ನಾವಿಬ್ಬರೂ ಎಷ್ಟು ಸಾರಿ ಕಚ್ಚಾಡಿಲ್ಲ, ನಶೆಯೇರದೇ ನಟಿಸಿ ಗೋಳು ಹೊಯ್ದುಕೊಂಡಿದ್ದು, ಸೀರೆ ಖರೀದಿ ಮಾಡಿ ಬಂದಾಗ ಕಣ್ಣಂಚಲ್ಲಿ ಕಣ್ಣೀರಿನೊಂದಿಗೂ ನಿನ್ನ ನಗಿಸಿದ್ದು, ಒಂದೇ ಎರಡೇ ನನ್ನ ಕೀತಾಪತಿಗಳು ಎಲ್ಲವನ್ನೂ ಸಹಿಸಿ, ನಿನ್ನ ಪ್ರೀತಿಯ ಪರಿಧಿಯಲ್ಲಿ ನನ್ನ ಬಂಧಿಸಿ ಬಿಗಿದಪ್ಪಿಕೊಂಡಿದ್ದು ಎಲ್ಲ ನೆನಸಿದರೆ ನಿನ್ನ ನನ್ನಾಕೆಯಾಗಿ ಪಡೆದ ನಾನೇ ಧನ್ಯ. ಇನ್ನೇನು ಹೇಳಲಿ ನಿನ್ನಲ್ಲಿ ನನ್ನದೊಂದೇ ಕೋರಿಕೆ, ದಾರಿ ತಪ್ಪಿ ತಪ್ಪುಗಳ ಮಾಡಲು ನಮಗೆಷ್ಟು ತಿರುವುಗಳಿದ್ದವು, ಎಲ್ಲ ಮೀರಿ ಸರಿದಾರಿಯಲ್ಲಿ ಇಷ್ಟೊಂದು ದೂರ ಪಯಣಿಸಿ ಬಂದಿದ್ದೇವೆ. ನನ್ನ ಈ ಬರುಡು ಬದುಕನ್ನು ಹಸಿರು ಕಾನನ ಮಾಡಲು ನನಗೆ ಹೀಗೆ ಜತೆಯಾಗು, ಎಲ್ಲರಿಗೂ ಮಾದರಿಯಾಗಿ ಬಾಳಿ ತೋರಿಸೋಣ.

ಹೆಚ್ಚಿಗೇನು ಬರೆಯಲು ಇಲ್ಲ, ಹಾಂ ಮುಂಜಾನೆ ನೀ ಹಾಕಿದ್ದ ರಂಗೋಲಿ ಬಹಳ ಚೆನ್ನಾಗಿತ್ತು, ಅದರಲ್ಲಿ ಬಣ್ಣ ತುಂಬಿದ್ದರೆ ಇನ್ನೂ ಚೆನ್ನಾಗಿರೋದು, ನಾನು ಬಣ್ಣ ತುಂಬಲು ಹೆಲ್ಪು ಮಾಡುತ್ತೀನಿ ಅಂದ್ರೂ ನೀನು ಬಿಡಲ್ಲ ಏನ್ ಮಾಡೊದು. ಈ ನೆಟವರ್ಕ ತೊಂದ್ರೆಯಿಂದಾಗಿ ಭಾರೀ ಒತ್ತಡದ ಕೆಲಸದ ನಡುವೆ ಬಿಡುವು ಸಿಕ್ಕಿತ್ತು, ಮತ್ತೆ ಸರಿಯಾಗಿರಬೇಕು ಹೋಗಿ ನೋಡುತ್ತೇನೆ, ಹೊಟ್ಟೇ ಪಾಡು ಕೆಲಸ ಮಾಡಲೇಬೇಕಲ್ಲ, ಸಂಜೆ ಬೇಗ ಬರ್ತೀನೆ.

ಪಕ್ಕದ ಮನೆ ಪದ್ದು, ಮತ್ತು ಹಾಲಿನಂಗಡಿ ಹಾಸಿನಿನಾ ಕೇಳ್ತಾ ಇದ್ದೆ ಅಂತ ಹೇಳು... ಪರಫ್ಯೂಮ್ ಪರಿಮಳ ಅವರು ಬಂದ್ರೆ ನನ್ನ ನಮಸ್ಕಾರಗಳನ್ನು ತಿಳಿಸು.

ಇಂತೀ ಪ್ರೀತಿಯಿಂದ
ನಿನ್ನವ.

ಅಂತೂ ಇಂತೂ ಮೊದಲ ಪ್ರೇಮ ಪತ್ರ ಬರೆದು ಹಾಕಿದೆ, ಏನೊ ಮನಸಿಗೆ ಹಿತವೆನ್ನಿಸಿತು, ಫೋನಿನಲ್ಲಿ ಘಂಟೆಗಟ್ಟಲೇ ಮಾತಾಡಬಹುದು ಏನು ಬೇಕಾದ್ರೂ, ಅದೇ ಬರೆಯಲು ಆಗಲ್ಲ, ಬರೆಯಲು ಪದಗಳು ಸಿಗೋದಿಲ್ಲ, ಎಲ್ಲಿ ಸರಿಯಾಗಿದೆಯೋ ಇಲ್ವೊ, ಅಲ್ಲಿ ತಪ್ಪಾಯಿತು, ಇಲ್ಲಿ ಸರಿ ಮಾಡು, ಅಂತ ನಾಲ್ಕು ಸಾರಿ ಬರೆದು ಗೀಚಿ, ಗೀಟು ಹಾಕಿ, ಹರಿದು ಬೀಸಾಕಿ, ಬಹಳಷ್ಟು ಶ್ರಮ ಪಟ್ಟಾಗಲೇ ಒಂದು ಸುಂದರ ಪತ್ರ ತಯ್ಯಾರಾಗೋದು, ಆದರೂ ಆ ಶ್ರಮ ಸಾರ್ಥಕ, ಪತ್ರ ಜತನವಾಗಿ ಕಾದಿಟ್ಟು, ಮತ್ತೆ ಮತ್ತೆ ಓದಬಹುದು, ನೆನಪಿನ ಖಜಾನೆಯನ್ನು ಮತ್ತೆ ಮತ್ತೆ ತೆರೆದು ನೋಡಬಹುದು, ಅದೇ ಫೋನಿನಲ್ಲಿ ಮುಂಜಾನೆ ಮಾತಾಡಿ ಸಂಜೆ ಮರೆತು ಬಿಡಬಹುದು. ಫೊನಿನಲ್ಲಿ ಒಂದು ಸಾರಿ ಪ್ರೀತಿಸುತ್ತೀನಿ ಅಂತ ಒಂದು ಸಾರಿ ಭಾವನೆಗಳ ಬಿಚ್ಚಿಡಬಹುದು, ಆದರೆ ಒಂದು ಸಾರಿ ಹೀಗೆ ಬರೆದು, ಅವರು ಅದನ್ನು ಬಚ್ಚಿಟ್ಟುಕೊಂಡು, ಆಗಾಗ ಬಿಚ್ಚಿ ಓದುತ್ತಿದ್ದರೆ, ಒಂದು ಸಾರಿ ಹೇಳಿದ್ದು ನೂರು ಸಾರಿಯಾಗಿರುತ್ತದೆ. ಕೆಲವೊಮ್ಮೆ ಪತ್ರದಲ್ಲಿ ಬರೆದ ಕೆಲ ಸಂಗತಿಗಳು ಅನಾಹುತಕ್ಕೆ ಎಡೆ ಮಾಡಿಕೊಡಬಹುದಾದರೂ, ಪತ್ರಗಳದ್ದೇ, ಒಂದು ಭಾವನೆಗಳ ಬಿತ್ತರಿಸುವ ವಿಭಿನ್ನ ವೈಖರಿ. ಅದೆಲ್ಲ ಈ ಆಧುನಿಕತೆಯಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ ಅನ್ನಿಸಿತು, ಅದಕ್ಕೆ ನಾ ನನ್ನವಳಿಗೆ ಬರೆದೆ... ಪತ್ರಗಳನ್ನು ನನ್ನ ಬದುಕಿನಲ್ಲಿ ಜೀವಂತವಾಗಿರಿಸಿದೆ, ನಿಮ್ಮ ನಿಮ್ಮ ಅನುಕೂಲಗಳು ನಿಮಗೆ ಬಿಟ್ಟಿದ್ದು.

ಪತ್ರ ಬರೆದದ್ದೇನೊ ಆಯ್ತು, ಇನ್ನು ಪೋಸ್ಟಿಗೆ ಹಾಕಿದ್ರೆ, ಅದು ಯಾವಾಗ ಹೋಗಿ ತಲುಪುತ್ತೋ ಯಾರಿಗೆ ಗೊತ್ತು, ನಾ ಮನೆಗೆ ಹೋಗಿ ನಾಲ್ಕು ದಿನಗಳಾದ ಮೇಲೆ ತಲುಪಿದರೆ ತಲುಪೀತು ಅಂದುಕೊಂಡು, ಆಫೀಸಿನಲ್ಲಿ "ಸೂಪರ್ ಸೇವಾ" ಅಂತ ಸೌಲಭ್ಯವಿದೆ, ಬಿಲ್ಲ್ ತುಂಬಲು, ಕೊರಿಯರ್ ಮಾಡಲು.. ಅವರನ್ನು ಹೋಗಿ ಕೇಳಿದ್ದಕ್ಕೆ, ಲೋಕಲ ಕೊರಿಯರ ಈಗ ಕೊಟ್ಟರೆ ಮಧ್ಯಾಹ್ನ ತಲುಪುತ್ತದಂತ ಕೇಳಿ ಖುಶಿಯಾಗಿ ಕೊರಿಯರ ಮಾಡಿ ಬಂದು ಕುಳಿತೆ... ಫೋನಿನಲ್ಲಿ ಮತ್ತೆ ಎಫ್ ಎಂ ಹಾಕಿಕೊಂಡೆ "ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ ಹೇಗೆ ಹೇಳಲಿ ನನ್ನ ಮನದ ಹಂಬಲ..." ಹಾಡು ಬರುತ್ತಿತ್ತು... ಅಯ್ಯೊ ಸಾಕಪ್ಪ ಪತ್ರ ನಾನು ಬರೆದಾಯ್ತು, ಇನ್ನೆಲ್ಲಿ ಚಿತ್ರ ಬಿಡಿಸಲಿ.. ಅಂತ ಆಫ್ ಮಾಡಿದೆ... ನೋಡಬೇಕು ಪತ್ರ ಓದಿ ಫೋನು ಮಾಡುತ್ತಾಳೋ ಇಲ್ಲಾ ಪತ್ರ ಬರೆಯುತ್ತಾಳೊ... ನಿಮಗೆ ಇಷ್ಟವಾಗಿದ್ದರೆ, ನೀವು ಪತ್ರ(ಇಂಚೆ) ಇಲ್ಲಾಂದ್ರೂ ಕಾಮೆಂಟಾದ್ರೂ ಬರೆಯುತ್ತೀರಲ್ಲವೇ...

ಮತ್ತೆ ಸಿಕ್ತೀನಿ, ಹೀಗೆ ಪತ್ರ, ಅಲ್ಲಲ್ಲ ಬ್ಲಾಗ ಪೋಸ್ಟಿನಲ್ಲಿ...

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
ಈ ಲೇಖನದೊಂದಿಗೆ ನನ್ನವಳೊಂದಿಗಿನ ನನ್ನ ಲೇಖನಗಳು ಇಪ್ಪತ್ತೈದರ ಗಡಿ ತಲುಪಿವೆ(ಇದೇ ೨೫). ಎಲ್ಲ ಲೇಖನಗಳ ತಲೆಬರಹಗಳ ತುಣುಕುಗಳನ್ನು ಈ ನನ್ನ ಪತ್ರದಲ್ಲಿ ಹುದುಗಿಸಿದ್ದೇನೆ... ಆಸಕ್ತಿಯಿದ್ದವರು ಅವನ್ನೂ ಓದಬಹುದು, ಇಷ್ಟು ದೂರ ಬ್ಲಾಗ ಲೋಕದಲ್ಲಿ ಪಯಣಿಸಲು ನಿಮ್ಮೆಲ್ಲ ಓದುಗರ, ಹಾಗೂ ಸಹ ಬ್ಲಾಗಿಗರ ಪ್ರೊತ್ಸಾಹವೇ ಕಾರಣ, ಅದಕ್ಕೆ ನಿಮೆಲ್ಲರಿಗೂ ನಾನು ಚಿರಋಣಿ, ಹಾಗೆ ಎಲ್ಲ ಲೇಖನಗಳ ಸಂಕಲನ ಮಾಡಿ PDF ಫೈಲು ಮಾಡಿ ಲಿಂಕು ಕೊಡುತ್ತಿದ್ದೇನೆ, ಬಹಳ ದೊಡ್ಡ ದೊಡ್ಡ ಲೇಖನಗಳಾದ್ದರಿಂದ ಇಲ್ಲಿ ಓದಲಾಗದವರು ಅದನ್ನು ಡೌನಲೋಡ ಮಾಡಿಕೊಂಡು ಓದಬಹುದು, ಇದೆಲ್ಲದರ ಬದಲಿಗೆ ನಿಮ್ಮಿಂದ ಒಂದೆರಡು ಮೆಚ್ಚುಗೆಯ ನುಡಿಗಳು ಮಾತ್ರ ನನ್ನ ನಿರೀಕ್ಷೇ. ಹೀಗೆ ಬರುತ್ತಿರಿ...


25 Posts single PDF document
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

26 comments:

Nisha said...

ವಾವ್! ನಿಮ್ಮ ಎಲ್ಲಾ ಲೇಖನಗಳನ್ನು ಈ ನಿಮ್ಮ ಒಂದು ಪ್ರೇಮ ಪತ್ರದಲ್ಲಿ ಸೇರಿಸಿ ಸೊಗಸಾಗಿ ಬರೆದ್ದಿದ್ದೀರಿ. ಬಹಳ ಒಳ್ಳೆಯ ಪ್ರಯತ್ನ. ನಿಮ್ಮ ಲೇಖನಗಳು ೨೫ನೆ ಗಡಿ ತಲುಪಿದ್ದಕ್ಕೆ ಶುಭಾಶಯಗಳು. ಸಿಲ್ವರ್ ಜುಬಿಲಿ ಸೆಲೆಬ್ರಶನ್ ಪಾರ್ಟಿ ಯಾವಾಗ ಕೊಡಿಸುವಿರಿ?

SSK said...

ಪ್ರಭು ಅವರೇ, ನಿಮ್ಮ ಲೇಖನಗಳ ರಜತ ಮಹೋತ್ಸವಕ್ಕೆ ನನ್ನ ಹಾರ್ದಿಕ ಶುಭಾಶಯಗಳು ಮತ್ತು ಅಭಿನಂದನೆಗಳು. ಇದೆ ರೀತಿ ಮುಂದೆ ಮುಂದೆ ಇನ್ನಷ್ಟು ಮಹೋತ್ಸವಗಳಲ್ಲಿ ಪಾಲ್ಗೊಳ್ಳಲು ನಮಗೆಲ್ಲ ಮತ್ತಷ್ಟು ಅವಕಾಶಗಳು ದೊರೆಯಲಿ ಎಂದು ಆಶಿಸುತ್ತೇನೆ!
ನಿಮ್ಮ ಎಲ್ಲಾ ಲೇಖನಗಳ ಹೆಸರುಗಳನ್ನು ಇಲ್ಲಿ ಬರುವಂತೆ ಬರೆದದ್ದು ಓದಿ ಸಂತೋಷವಾಯಿತು! ನಾನು ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದರೂ, ಎಲ್ಲ ಹೆಸರುಗಳನ್ನು ಒಟ್ಟಿಗೆ ಓದಿದ್ದರಿಂದ ಯಾವುದಾದರೂ ಲೇಖನವನ್ನು ಓದಲು ಮರೆತಿರುವೆನೇನೋ ಎಂದನ್ನಿಸಿ ಮತ್ತೊಮ್ಮೆ ನಿಧಾನವಾಗಿ ಹೆಸರುಗಳನ್ನು ಓದುತ್ತಾ, ನನ್ನ ಮೆದುಳಿಗೆ ಜ್ಞಾಪಿಸಿಕೊಳ್ಳುವ ಕೆಲಸ ಕೊಟ್ಟಿದ್ದೆ! ಅದು ಕೆಲವು ಕ್ಷಣ ಎಲ್ಲಾ ಪರಿಶೀಲಿಸಿ, ಎಲ್ಲ ಲೇಖನಗಳನ್ನು ಓದಿರುವೆ 100%, 25/25 ಅಂಕಗಳನ್ನು ನೀಡಿ ಅದರ ಫಲಿತಾಂಶವನ್ನು ನಿಮಗೆ ಕಳಿಸಿಕೊಟ್ಟಿದೆ!!! (ನಾನೇನು ಟೀಚರ್ ಅಲ್ಲ ನಿಮ್ಮ ಲೇಖನಕ್ಕೆ ಅಂಕಗಳನ್ನು ನೀಡಲು! ಆದರೆ ಕಾಮೆಂಟ್ ಬರೆಯಲು ಶುರು ಮಾಡಿದಾಗ ನನ್ನ ತುಂಟ ಮನಸ್ಸು ಈ ರೀತಿ ತನ್ನ ಅಭಿಪ್ರಾಯವನ್ನು ನನ್ನಿಂದ ಬರೆಸಿದೆ!!) ಧನ್ಯವಾದಗಳು.

Prabhuraj Moogi said...

Nisha ಅವರಿಗೆ
ಲೇಖನಗಳು ೨೫ ಆಗಿದ್ದಕ್ಕೆ ಎಲ್ಲವನ್ನೂ ಸೇರಿಸಿ ಒಂದು ಸಾರಂಶ ಸಂಗ್ರಹದಂತೆ ಲೇಖನ ಬರೆಯಲು ಯೋಚಿಸಿದ್ದೆ, ಅಲ್ಲದೆ ಇಪ್ಪತ್ತೈದನೇ ಲೇಖನ ಕೂಡ ಬರೆಯಲೇ ಬೇಕಿತ್ತು ಅದಕ್ಕೆ ಎರಡನ್ನೂ ಸೇರಿಸಿ ಯಾಕೆ ಒಂದೇ ಪೋಸ್ಟಮಾಡಬಾರದು ಅಂತ ಪ್ರಯತ್ನಿಸಿದೆ ಅಷ್ಟೇ. ಪಾರ್ಟಿ ಕೊಡಿಸೋಣ ನನ್ನಾಕೆ ಎಲ್ಲಿ ಯಾವ ಹೊಟೇಲು ಅಂತ ನಿರ್ಧರಿಸಲಿ [ಇತ್ತೀಚೆಗೆ ಚುನಾವಣೆ ತಯ್ಯಾರಿ ಮಾಡಿ ಮಾಡಿ ಹೀಗೆ ಆಶ್ವಾಸನೆಗಳನ್ನು ಕೊಡುವುದು ಚೆನ್ನಾಗಿ ಕಲಿತಿದ್ದೇನೆ... :)] ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು, ಹೀಗೆ ನೀವೆಲ್ಲ ಬಂದು ಓದುತ್ತಿದ್ದರೆ ನಾ ಇನ್ನೂ ಬರೆಯುತ್ತಲೇ ಇರುತ್ತೇನೆ...

SSK ಅವರಿಗೆ
ನಿಮ್ಮ ಬೆಂಬಲ ಹೀಗೆ ಇದ್ದರೆ, ಇನ್ನೂ ಹಲವು ಮಹೋತ್ಸವಗಳನ್ನು ನನ್ನ ಬ್ಲಾಗ ಕಂಡರೆ ಅಚ್ಚರಿಯೇನಿಲ್ಲ. ನೊಡೋಣ ಎಲ್ಲೀವರೆಗೆ ಬರೆಯೋಕಾಗುತ್ತೋ ಅಲ್ಲೀವರೆಗೆ ಬರೆಯುತ್ತೇನೆ.. ಹಿಂದಿನ ಎಲ್ಲ ಲೇಖನಗಳನ್ನು ಕಲೆ ಹಾಕಿ ಮತ್ತೆ ನೆನಪಿಸುವ ಉದ್ದೇಶದಿಂದಲೇ ಹಾಗೆ ಬರೆದೆ. ನೀವು ಯಾವ ಲೇಖನವನ್ನೂ ಮರೆತಿರಲಿಕ್ಕಿಲ್ಲ ಬಿಡಿ, ಪ್ರತೀ ಬಾರಿ ತಾವು ಬಂದು ತಮ್ಮ ಅನಿಸಿಕೆ ತಿಳಿಸಿರುತ್ತೀರಿ, ಹೀಗೆ ನೀವೆಲ್ಲ ಖಾಯಂ ಓದುಗರಾಗಿರುವುದರಿಂದಲೇ ತಪ್ಪದೇ ವಾರಕ್ಕೊಮ್ಮೆ ನನಗೆ ಬರೆಯಲು ಪ್ರೇರಣೆ, ಇಲ್ಲಾಂದ್ರೆ ಎಂದೊ ಬರೆಯುವುದ ನಿಲ್ಲಿಸಿ ಮರೆತುಬಿಡುತ್ತಿದ್ದೆ. ಲೇಖನಗಳು ಮರೆಯದಂತೆ ಮೆಲಕು ಹಾಕಲು ಎಲ್ಲ ಲೇಖನಗಳ ಸೇರಿಸಿ ಸಂಕಲನ ಮಾಡಿದ್ದೇನೆ ಮೇಲೆ ಲಿಂಕ್(25 Posts single PDF document) ಇದೆ ಡೌನಲೋಡ ಮಾಡಿಕೊಳ್ಳಬಹುದು... ಹೀಗೆ ಬರುತ್ತಿರಿ...

Greeshma said...

ಅರೇ ವಾಹ್! ಮಸ್ತ್ composition! ಮುಂಚೆ ಯಾವಾಗಲೋ.. ಈ Products ದು tag line ಉಪಯೋಗಿಸಿ ಪ್ರೇಮ ಪತ್ರ forward ಆಗಿ ಓದಿದ್ದ ನೆನಪು. ರಜತ ಮಹೋತ್ಸವಕ್ಕೆ ಒಳ್ಳೇ ಲೇಖನ! ನಿಮ್ಮ creativity ಗೆ hats off!

Prabhuraj Moogi said...

Greeshma ಅವರಿಗೆ:
ಹೌದು ನಾನೂ ಆ ರೀತಿಯ ಪತ್ರ ಓದಿದ ನೆನಪು, ಏನೊ ಸ್ವಲ್ಪ creativity ಅನ್ನೊದು ಬೆಳಿಸಿಕೊಂಡೀದೀನಿ.. ನಿಮ್ಮ ಅನಿಸಿಕೆಗಳು ಹೀಗೆ ಬರುತ್ತಿರಲಿ.

Keshav.Kulkarni said...

keep it up!

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಭು
ಸಕತ್ತಾಗಿದೆ ಅಂತ ಅಂದರೆ ಕೂಡ ಕಡಿಮೆ ಆಗುತ್ತೇನೋ ಎಂಬ ಆತಂಕ. ಒಟ್ಟಿನಲ್ಲಿ ಇಡಿ ಬರಹ ಸಿಂಪ್ಲಿ ಸುಪೆರ್ಬ್....

ನಾಗೇಶ್ said...

ನಿಜಕ್ಕೂ ನಿಮ್ಮ ಲೇಖನಗಳು ನಿಜವಾಗಿಯು ನಿಜವಾದ ಅನುಭವ ಗಳೇನೋ ಅನ್ನುವ ಹಾಗಿದೆ ಹೀಗೆ ಮುಂದು ವರೆಯಲಿ ನಿಮ್ಮ ಇ ಪಯಣ ...................

Umesh Balikai said...

ಪ್ರಭು,

ವಯಸ್ಸು ಮೂವತ್ತಾದರೂ ಮದ್ವೆ ಆಗೋಕೆ ಒಲ್ಲೆ ಅಂತೀರೋ ನನ್ನ ಕೆಲವು ಸ್ನೇಹಿತರಿಗೆ ನಿಮ್ಮ ಬ್ಲಾಗನ್ನು ತೋರಿಸೋಣ ಅಂತಿದೀನಿ. ನಿಮ್ಮ ಲೇಖನಗಳನ್ನು, ಮತ್ತು ಅವುಗಳಲ್ಲಿರೋ ನಿಮ್ಮ ದಾಂಪತ್ಯದ ಸಿಹಿಕ್ಷಣಗಳನ್ನು ಓದಿ ತಿಳಿದು ಅವರೆಲ್ಲ ಖಂಡಿತ ಮದ್ವೇಗೆ ಒಪ್ಕೋತಾರೆ ಅಂತ ನನ್ನ ಭಾವನೆ. :)

ತುಂಬಾ ರಸವತ್ತಾಗಿ ಬರೀತೀರ. ಹೀಗೇ ಮುಂದುವರೆಸಿ ಬ್ಲಾಗು ಲೋಕದ ನಿಮ್ಮ ಪಯಣ.

ಶುಭ ಹಾರೈಕೆಗಳು.

- ಉಮೇಶ್

PARAANJAPE K.N. said...

ಪ್ರಭು,
ನಿಮ್ಮ ಲೇಖನಮಾಲೆ 25 ರ ಗಡಿ ಮುಟ್ಟಿದ್ದಕ್ಕೆ ಅಭಿನ೦ದನೆ. ಬಹಳ ಚೆನ್ನಾದ ನಿರೂಪಣೆ, ವಿನೋದಮಿಶ್ರಿತ ಸ೦ಭಾಷಣೆ ಗಳಿ೦ದ ಅಲ೦ಕೃತವಾದ ನಿಮ್ಮ ಬರಹ ಇಷ್ಟವಾಗುತ್ತದೆ, ಓದಿಸಿಕೊ೦ಡು ಹೋಗುತ್ತದೆ. ಮು೦ದುವರಿಸಿ.

ಮನಸು said...

ಬಹಳ ಅದ್ಭುತವೆನಿಸಿದೆ. ಹೀಗೆ ಮುಂದುವರಿಯಲಿ, ೨೫ರ ಕಂತು ಪೂರೈಸಿದ್ದಕ್ಕೆ ಶುಭಾಶಯಗಳು, ಪ್ರೇಮಪತ್ರ ಬರಿತನೇ ಇರಿ ಪೋಸ್ಟ್ ಮಾಡತನೇ ಇರಿ.... ಅದು ಯಾವ ವಿಳಾಸಕ್ಕೆ ಕಳುಸುತ್ತೀರೋ ಅದು ನಿಮಗೆ ಬಿಟ್ಟಿದ್ದು ಹಹಹ ಉತ್ತರವೇನಾದರು ಬಂದರೆ ನಮ್ಮೊಂದಿಗೆ ಹಂಚಿಕೊಳ್ಳಿ .....
ನಿಮಗೆ ಶುಭವಾಗಲಿ ಮತ್ತಷ್ಟು ಮಗದಷ್ಟು ಲೇಖನಗಳು ಬರಲೆಂದು ಆಶಿಸುತ್ತೇನೆ.
ವಂದನೆಗಳು

guruve said...

ಬಹಳ ಚೆನ್ನಾಗಿದೆ ಪತ್ರ! ಹಾಸ್ಯದಿಂದ ಆರಂಭವಾಗಿ, "ಒಂದಾನೊಂದು ಕಾಲದಲ್ಲಿ" ಹಾಡಿನಲ್ಲಿ ಚ್ಘಲನಚಿತ್ರದ ಹೆಸರುಗಳನ್ನು ಹೆಣೆದಿರುವ ಹಾಗೆ, ಪತ್ರದಲ್ಲಿ ನಿಮ್ಮ ಹಿಂದಿನ ಲೇಖನಗಳ ಶೇರ್ಷಿಕೆಗಲನ್ನು ಬಹಳ ಚೆನ್ನಾಗಿ ಹೆಣೆದು ನೆನಪಿಸಿದ್ದೀರಿ.. :)

Veena DhanuGowda said...

Hi prabhu,
Happy anniversary :)
nivibru madhuve yaagi 25 varsha sukavagi balidastu kushi agide :)
Bareyuthiri nagisuthiri........

Unknown said...

Super ... !!

maaya said...

ಹಲೋ ಪ್ರಭು,
ಬಹಳ ಚೆನ್ನಾಗಿದೆ, ಮನಸಿಗೆ ತುಂಬಾ ಹಿಡಿಸಿತು, ಪ್ರೇಮ ಪತ್ರವಂತು ಮರೆಯಲಾಗೋಲ್ಲ, ಅದರಲ್ಲೂ ನೀವು ಬಳಸಿರುವ ನಿಮ್ಮ ಲೇಖನದ ಹೆಸರುಗಳು ಸಕ್ಕತ್ತಾಗಿದೆ, ನೀವು ೨೫ ದಾಟಿದಕ್ಕೆ ಧನ್ಯವಾದಗಳು, ಹಿಗಂತೂ ಪತ್ರಗಳ ಕಾಲವೇ ಮರೆತು ಹೋಗಿದೆ, ಆದರು ಎಷ್ಟು ಸುಂದರ ಅಲ್ವ ಪತ್ರಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸೋದು, ಬಹಳ ಹಿಡಿಸಿತು, ಹೀಗೆ ಬರೆಯುತ್ತಿರಿ, ನಾವು ಬರುತ್ತಿರುತ್ತೇವೆ,

ಹೇಮಾ

ಬಾಲು said...

25 daatiddakke, adanna PDF nalli haakidakke abhari aagiddene.

Prema patra chennagide, idakke banda uttarakke kayutta iddene.

amele Sarasa pustaka da prathi galu ellu sigalilla, bagashya publisher ne kelabeku ansutte. adara publisher Mysorina Mitralaya anthe!!! mysore ge hodaga huduka beku!

sarasa 2 volume galalli release aagide anthe!!

sunaath said...

ಪ್ರಭು,
ರಸಲೋಕ ರಮಣರು ನೀವು!
ಬೆಳ್ಳಿ ಹಬ್ಬ ಆಚರಿಸ್ತಾ ಇದೀರಿ, ಸುವರ್ಣ ಮಹೋತ್ಸವವೂ ಬೇಗನೇ ಬರಲಿ.

shivu.k said...

ಪ್ರಭುರಾಜ್,

ನಿಮ್ಮ ತುಂಟಾಟದ ಲೇಖನ ಒಟ್ಟು ಮೊತ್ತ ೨೫...ಆಂದರೆ ಆಷ್ಟೋಂದು ತುಂಟಾಟ ಅದರೊಳಗೆ ಪ್ರೀತಿ, ಆತ್ಮೀಯತೆ, ಮುನಿಸು, ರಾಗ ದ್ವೇಷಗಳು, ಕುಹಕ, ಹಾಸ್ಯ ನಗು, ತುಸುಕೋಪ, ಹುಸಿಕೋಪ, ಹುಸಿಮುನಿಸು, ತುಸುಮುನಿಸು, ವರ್ಣಿಸಲು ಇನ್ನೂ ಇವೆ...ಇವೆಲ್ಲಾ ಸೇರಿರುವ ನಿಮ್ಮ ಬೆಳ್ಳಿಹಬ್ಬದ ಆಚರಣೆ....ಸುವರ್ಣ..ವಜ್ರ ಮಹೋತ್ಸವ ಎಲ್ಲಾ ಬೇಗ ಬೇಗ ಬರಲಿ....

ಮತ್ತೊಮ್ಮೆ ಅಭಿನಂದನೆಗಳು...

Prabhuraj Moogi said...

Keshav Kulkarni ಅವರಿಗೆ
ಥ್ಯಾಂಕ್ಸ

Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ
ಏನೋ ಒಂದು ಬರೆಯುವ ಪ್ರಯತ್ನ,ನಿಮ್ಮಷ್ಟು ಚೆನ್ನಾಗಿ ಇನ್ನೂ ಬರೆಯಲು ಬರುವುದಿಲ್ಲ ಬಿಡಿ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು, ಬರುತ್ತಿರಿ...

ನಾಗೇಶ್ ಅವರಿಗೆ
ನನ್ನ ಬ್ಲಾಗಗೆ ಸ್ವಾಗತ ನಾಗೇಶ, ಬೇರೆಯವರ ಅನುಭವಗಳಿಂದ ಕಲಿತವು ಬಹಳ, ಹೀಗಾಗಿ ಅದನ್ನೆ ಬರೆದಿರುವುದರಿಂದ, ನಿಜ ಅನುಭವಗಳೆನಿಸುತ್ತವೆ, ಅಲ್ಲಲ್ಲಿ ಸ್ವಲ್ಪ ನಮ್ಮ ಕಲ್ಪನೆ.

ಉಮೇಶ ಬಾಳಿಕಾಯಿ ಅವರಿಗೆ,
ಮದುವೆಗೆ ಹುಡುಗರೇಕೆ ಹಾಗೆ ಹಿಂಜರಿಯುತ್ತಾರೋ ನನಗೂ ಗೊತ್ತಿಲ್ಲ್, ಕೆಲವು ಬಾರಿ ಸ್ವಲ್ಪ ಚೆನ್ನಾಗಿ ಸೆಟಲ್ಲು ಆದ ಮೇಲೇ ಮದುವೆ ಆಗಬೇಕು ಅಂತಿರತ್ತೆ ಅದಕ್ಕೆ ತಡವಾದರೆ ಸರಿ, ಆದರೆ ಸುಮ್ನೇ ಹಾಗೆ ತಳ್ಳಿ ಹಾಕುವುದು ಬೇಡ... ಮೂವತ್ತೆಲ್ಲ ಆದರೆ ಆಮೇಲೆ ಬಹಳ ತಡವಾಗಿ ಹುಡುಗಿ ಕೂಡ ಸಿಗಲಿಕ್ಕಿಲ್ಲ, ಶೀಘ್ರಮೇವ ಶುಭಮಸ್ತು, ಖಂಡಿತ ಓದಲು ಹೇಳಿ ಓದಿ ಮನಸು ಬದಲಾಯಿಸಿದರೆ ನನಗೂ ಖುಶಿ.. ಹಾರೈಕೆಗೆ ಧನ್ಯವಾದಗಳು.

PARAANJAPE K.N.ಅವರಿಗೆ
ಏನೊ ಸ್ವಲ್ಪ ಮನಸಿಗನಿಸಿದ್ದು ನಿರೂಪಿಸುವ ಪ್ರಯತ್ನ, ನಿಮಗೆ ಇಷ್ಟವಾಗಿದ್ದು ನನಗೆ ಸಂತೊಷ.. ಅವಳೊದಿಗೆ ಮಾಉ ಅಂದ್ರೆ ಅವಳಿಗಿಂತಲೂ ಅಂದವಾಗಿರಬೇಕಲ್ಲವೇ...

ಮನಸು ಅವರಿಗೆ
ಬಹಳ ಪ್ರೇಮ ಪತ್ರಗಳು ಬೇಡ, ಸಾಕು ಒಂದು ಎರಡು, ಅದನ್ನೆ ಸಾವಿರ ಸಾರಿ ಓದುತ್ತಾಳೆ ಅವಳು.. ನಿಜಕ್ಕೂ ಪತ್ರ ಬರೆದು ಪೊಸ್ಟ ಮಾಡಬೇಕೆಂದು ವಿಳಾಸಕ್ಕಾಗಿ ಹುಡುಕಾಡುತ್ತಿದ್ದೇನೆ ಇನ್ನೂ ಸಿಕ್ಕಿಲ್ಲ, ಎಲ್ಲಿರುವಳೊ, ಯಾರಿಗೆ ಗೊತ್ತು... ಸಿಕ್ಕರೆ ನಿಮ್ಮ ಬಾಯಿಗೆ ಸಕ್ಕರೆ... ಹಾಗೆ ನಿಮ್ಮ ಅಕ್ಕರೆಯ ಅನಿಸಿಕೆಗಳಿಗೆ.. ಹಾಗೂ ನಿರಂತರ ಪ್ರೊತ್ಸಾಹಕ್ಕೆ ಏನೆಂದು ಹೇಳಲಿ, ಹೀಗೆ ಬರುತ್ತಿರಿ.

guruve ಅವರಿಗೆ,
ಇಪ್ಪತ್ತೈದನೇ ಪೊಸ್ಟಿನ ಸಂದರ್ಭದಲ್ಲಿ ಎಲ್ಲ ಲೇಖನಗಳನ್ನು ಸೇರಿಸಿ ಒಂದು ಸಂಕಲನ ಕೊಡಬೇಕೆಂಡು ಆಸೆ ಇತ್ತು, ಅದೇ ಯೋಚನೆಯಲ್ಲಿ ಇಪ್ಪತ್ತೈದನೇ ಲೇಖನದಲ್ಲೆ ಎಲ್ಲ ಸೇರಿಸಿ ಗೀಚಿಬಿಟ್ಟೆ...

ಪ್ರೀತಿಯಿ೦ದ ವೀಣಾ :)ಅವರಿಗೆ,
ಮದುವೆಯಾಗಿ ಇಪ್ಪತ್ತೈದು ವರ್ಷ ಅಯ್ಯೊ ಅದಿನ್ನೂ ಬಹಳ ದೂರ... ಅಲ್ಲೀವರೆಗೆ ನನ್ನ ಕಾಡಿಸಿ ಪೀಡಿಸಿ ಏನು ಮಾಡಿಬಿಡುತ್ತಾಳೊ... ಮದುವೆಯಾಗಿ ಇಪ್ಪತ್ತೈದನೇ ವರ್ಷಕ್ಕೂ ನಾನು ಹೀಗೆ ಬರೆಯಲು ಸಾಧ್ಯವಾದರೆ ಸಾರ್ಥಕವಾಗುತ್ತದೆ ಬದುಕು. ಬರುತ್ತಿರಿ...

roopa ಅವರಿಗೆ,
ಧನ್ಯವಾದಗಳು ಅನಿಸಿಕೆಗಳಿಗೆ, ಪ್ರತೀ ಬಾರಿ ಲೇಖನ ಬರೆದಾಗ, ಅತ್ಯಂತ ನಿರ್ಭಿಡೆಯಿಂದ ಮನಸಿಗನಿಸಿದ್ದನ್ನು ಬರೆಯುವ ನೀವು ನನ್ನ ಬ್ಲಾಗ ಓದುಗರಾಗಿರುವುದು ನನಗೆ ಹೆಮ್ಮೆ.. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದು ನನಗೂ ಬಲು ಖುಶಿ, ಹೀಗೆ ಬರುತ್ತಿರಿ, ಹಾಗೂ ನಿಮ್ಮ ಅನಿಸಿಕೆಗಳನ್ನೂ ತಿಳಿಸುತ್ತಿರಿ.

maaya ಅವರಿಗೆ,
ನನ್ನ ಬ್ಲಾಗಗೆ ಮೊಟ್ಟ ಮೊದಲ ಕಾಮೆಂಟು ಬರೆದದ್ದು ನೀವು, ಹಾಗೂ ಬ್ಲಾಗಿನ ಬಗ್ಗೆ ಇಂಚೆ ಕಳಿಸಿದ್ದೂ ನೀವೇ ಮೊದಲು. ಮೊದಲಿನ ಲೇಖನದಿಂದಲೂ ಇಂದಿನವರೆಗೂ ನಿಮ್ಮ ಅನಿಸಿಕೆಗಳು ಹಾಗೆ ಬರುತ್ತಿರುತ್ತವೆ... ನೀವಿನ್ನೂ ನನ್ನ ಬ್ಲಾಗ ಓದುಗರಾಗಿರುವುದು ನನಗೊಂದು ಹೆಮ್ಮೆ... ಪತ್ರಗಳ ಮೂಲಕ ಭಾವನೆ ವ್ಯಕ್ತಪಡಿಸೋದು ಒಂಥರಾ ವಿಭಿನ್ನ.. ಫೋನಿನಲ್ಲು ಮಾತಾಡಿ ಮರೆಯಬಹುದು, ಆದ್ರೆ ಪತ್ರ ಮತ್ತೆ ಮತ್ತೆ ಓದಲು ಇರುತ್ತದೆ ನಮ್ಮ ಹತ್ರ...

ಬಾಲು ಅವರಿಗೆ
ಪತ್ರಕ್ಕೆ ಉತ್ತರ ಬರೆದಿಲ್ಲ ಅವಳು, ಫೋನು ಮಾಡಿ... "ಮನೆಗೆ ಬನ್ನಿ ಹೇಳ್ತೇನೆ ನಿಮಗೆ" ಅಂತ ಹೆದರಿಸಿದ್ದಾಳೆ... ಅದಕ್ಕೆ ಮನೆಗೆ ಹೊಗೋದು ಹೇಗೆ ಅಂತ ಚಿಂತೆಯಾಗಿದೆ... ಮರಳಿ ಪತ್ರ ಬರೆದರೆ ಖಂಡಿತ ಹಾಕುತ್ತೇನೆ...
ಸರಸ ಪುಸ್ತಕ ಎಲ್ಲೂ ಸಿಗುತ್ತಿಲ್ಲ ಅದರ ಎಲ್ಲ ಪ್ರತಿಗಳು ಖಾಲಿಯಾಗಿ ಈಗ ಎರಡು ವರ್ಷ ಆಯಿತಂತೆ, ಮತ್ತೆ ಅಂಕಿತದವರು ಅದನ್ನು ಪಬ್ಲಿಷ್ ಮಾಊತ್ತೀವೆ ಅಂತಿದ್ದರು, ನನಗೆ ಗೊತ್ತಾದರೆ ಖಂಡಿತ ತಿಳಿಸುತ್ತೇನೆ...

sunaath ಅವರಿಗೆ
ಸರ್ ನಿಮ್ಮೆಲ್ಲರ ಬೆಂಬಲ ಹೀಗೆ ಇದ್ದರೆ ಸುವರ್ಣ ಮಹೋತ್ಸವವೇನು ವಜ್ರ ಮಹೋತ್ಸವ ಆಚರಿಸುತ್ತೇನೆ... ಹೀಗೆ ಬರುತ್ತಿರಿ.

shivu ಅವರಿಗೆ
ಶಿವು ಸರ್, ಪ್ರತೀ ಬಾರಿ ಬ್ಲಾಗಗೆ ಬಂದಾಗಲೂ ಒಂದು ಸುಂದರ ಕಾಮೆಂಟು ಕೊಡುತ್ತೀರಿ, ಅದರಲ್ಲಿ ಸಲಹೆ, ಸೂಚನೆ, ಅಲ್ಲದೆ ಲೇಖನದ ಬಗ್ಗೆ ತಮಗಾದ ಅನುಭವಗಳನ್ನೂ ಹಂಚಿಕೊಳುತ್ತೀರಿ, ನಿಮ್ಮೆಲ್ಲ ಸಹಕಾರ ಹೀಗೆ ಇರಲಿ... ನಿಮ ಈ ಕಾಮೆಂಟಿನಲ್ಲಿ ನನ್ನ ಬ್ಲಾಗನಲ್ಲಿ ಕಂಡುಬಂದ ಎಲ್ಲ ಭಾವನೆಗಳನ್ನು ಹಿಡಿದಿಟ್ಟಿದ್ದೀರಿ... ಧನ್ಯವಾದಗಳು

ಶಿವಪ್ರಕಾಶ್ said...

Nice one prabhu

ವಿನುತ said...

ಮದುವೆಯಾಗಿ ವರುಷಗಳು ಬೆರಳೆಣಿಕೆಯಷ್ಟೇ ಅ೦ದಿದ್ದರೂ, ಈ ದಾ೦ಪತ್ಯದ ರಸನಿಮಿಷಗಳು ಬೆಳ್ಳಿಹಬ್ಬವನ್ನಾಚರಿಸಿಕೊಳ್ಳುತ್ತಿವೆ. ಇದೂ ಎ೦ದಿನ೦ತೆ ರಸಭರಿತವಾಗಿದೆ. ಆದಷ್ಟು ಬೇಗ ಈ ಕಲ್ಪನೆಗಳು ದಿಟವಾಗಲಿ :)

Prabhuraj Moogi said...

ಶಿವಪ್ರಕಾಶ್ ಅವರಿಗೆ
ಧನ್ಯವಾದ ಹೀಗೆ ಬರುತ್ತಿರಿ...

ವಿನುತ ಅವರಿಗೆ
ರಸನಿಮಿಷಗಳ ಬೆಳ್ಳಿಹಬ್ಬ ಅಂದಿದ್ದು ಬಹಳ ಇಷ್ಟ ಆಯ್ತು.. ಇನೂ ಸ್ವಲ್ಪ ಕಲ್ಪನೆಯಲ್ಲಿಯೇ ತೇಲೋ ಆಸೆ ಅಲ್ಲದೇ... ಎಲ್ಲಿ ಕಲ್ಪನೆಗಳೆಲ್ಲ ನುಚ್ಚು ನೂರಾದಾವೋ ಅನ್ನೋ ಹೆದರಿಕೆ... ಅದಕ್ಕೆ ಇನ್ನೊಂದಿಷ್ಟು ದಿನ ತಳ್ಳಿದರೆ ಚೆನ್ನ ಅನಿಸಿದೆ...

Raghavendra said...

prabhu avare nimmaakeyodagina rasa nimishagalu rajata mahotsava daatide andare nambakke aagtilla....heege munduvaredu vajra mahotsavavannu annode haaraike :)
ee baravanige tumba ishta aitu.. yella blog article haaki ondralle baridira..shabhaash..
nimma baravanige heege munduvareyali..

Prabhuraj Moogi said...

To: Raghavendra
naMgoo first time count maaDidaaga naMbOkE aaglilla... kelpavu posTgaLalli Enu baredidde annOdoo maretu hOgittu, matte ella oMdusaari odi hiri higgide... heege neevell baruttiddare adellaa saadhyaa aagabahudu... Thanks a lot for the continued support.

Anonymous said...

ಇರುವದೆಲ್ಲವ ಬಿಟ್ಟು ಇರದಿರದ ಬಗ್ಗೆ ಬರೆಯುವುದೇ ಜೀವನ !
ಇಷ್ಟೆಲ್ಲಾ ನೀವು ಅನುಭವಿಸದೇ ಬರಿತಿರಿ, ಬರಿಲಿಕ್ಕೆ ನಿಮಗ ಟೈಮ್ ಎಲ್ಲಿ ಸಿಗ್ತೈತಿ ನಿಮ್ಮ ಉದ್ಯೋಗದಲ್ಲಿ ?
ಅದೇ ಆಶ್ಚರ್ಯ! ಬರವಣಿಗೆಯ ಶೈಲಿ ಯಲ್ಲಿ ಉತ್ತರ ಕರ್ನಾಟಕದ ಜೀವನದ ರಂಗು ಹೊರ ಹೊಮ್ಮುತ್ತದೆ.
ಶುಭಾಶಯಗಳು...

Prabhuraj Moogi said...

ಅನುಭದಿಂದ ಬರೆಯಲು ಅನುಭವಗಳು ಅಷ್ಟ ಚಂದ ಇರಬೇಕಲ್ರೀ.. ಶನಿವಾರ ರವಿವಾರ ಸೂಟಿ ಇತ್ತಂದ್ರ ಬರೀತೀನಿ, ಹಿಂಗ ಬರ್ತಾ ಇರ್ರಿ..