Sunday, December 27, 2009

ನಿರುದ್ಯೋಗಿ ನೀ ಇರು ಉದ್ಯೋಗಿ...

ಅಂದು ಬೇಗ ಎದ್ದು, ಸ್ವಲ್ಪ ಫ್ರೆಷ್ ಆಗಿ ಒಂದು ದೊಡ್ಡ ಮಗ್ ತುಂಬಾ ಟೀ ಮಾಡಿಕೊಂಡು ಬಂದು, ಸ್ವಲ್ಪ ಚಳಿ ಇದೆ ಅಂತ ಹಾಗೆ ಸ್ವಲ್ಪ ಹೊದಿಕೆ ಹೊದ್ದು ಪೇಪರು ಹಿಡಿದುಕೊಂಡು ಕೂತು ಟೀ ಹೀರುತ್ತಿದ್ದೆ, ಇವಳು ಪಕ್ಕದಲ್ಲೇ ಮಲಗಿದ್ದಳು. ಮುಂಗುರುಳು ಮುಂಜಾರಿ ಮುಖದ ಮೇಲೆ ಬಿದ್ದು ಕಚಗುಳಿಯಿಡುತ್ತಿರುವುದೂ ಕೂಡ ಪರಿವೆಯಿಲ್ಲದೇ ಪವಡಿಸುತ್ತಿರುವವಳು ಏಳಲು ಇನ್ನೂ ಸಮಯವಿತ್ತು, ಯಾಕೆ ತೊಂದ್ರೆ ಮಾಡೋದು ಅಂತ ನನ್ನ ಪಾಡಿಗೆ ನಾ ಓದುತ್ತಿದ್ದೆ, ಪೇಪರಿನ ಚರ್ ಪರ್ ಸದ್ದಿಗೆ ಎಚ್ಚರಾಯಿತು ಅಂತ ಕಾಣುತ್ತದೆ, "ಏನು ಸಾಹೇಬ್ರು ಬೇಗ ಎದ್ದು, ಆಗಲೇ ಟೀ ಮಗ್ ಹಿಡಿದು ಕೂತಿದೀರಾ" ಅಂತ ಕಣ್ಣು ತೀಡುತ್ತ ಕೇಳಿದಳು, "ಹಾಗೇ ಸುಮ್ನೇ ಬಾಸ್" ಅಂದೆ. ಏನು ನನಗೇ ಬಾಸ್ ಅಂತೀದಾರಲ್ಲ, ಅಶ್ಚರ್ಯದಿಂದ ಕಣ್ಣರಳಿಸಿ, "ನನಗೇ ಬಾಸ್ ಅಂತ ಹೇಳ್ತಾ ಕೂತ್ರೆ ಅಷ್ಟೇ, ಏಳಿ ತಯ್ಯಾರಾಗಿ, ಇಲ್ಲಾಂದ್ರೆ ನಿಮ್ಮ ಬಾಸ್ ಫೋನ್ ಬರತ್ತೆ ನೋಡಿ" ಅಂತಂದಳು, ಸುಮ್ನೇ ಒಂದು ಮುಗುಳ್ನಗು ಕೊಟ್ಟೆ. "ಎದ್ದೇಳ್ರೀ... ಆಫೀಸಿಗೇನು ನಿಮ್ಮ ತಾತ ಹೋಗ್ತಾನಾ" ಅಂತ ಸ್ವಲ್ಪ ಜೋರಾದಳು. "ನಮ್ಮ ತಾತ ಅಂತೂ ಇಲ್ಲ ನಿಮ್ಮ ತಾತನಿಗೇ ಹೋಗು ಅಂತ ಹೇಳು" ಅಂತ ನಾನಂದೆ. "ಇದೊಳ್ಳೆ ರಗಳೆ ಆಯ್ತಲ್ಲ ಕೆಲಸಕ್ಕೆ ಹೋಗಿ ಅಂತ ಏಳಿಸೋದೇ ಒಂದು ಕೆಲಸ ಆಗಿದೆ ನಂಗೆ, ಟೈಮ್ ಬೇರೆ ಎಷ್ಟಾಯಿತೊ" ಅಂತ ಎದ್ದೇಳಲು ನೋಡಿದ್ಲು, "ಇನ್ನೂ ಆರು ಘಂಟೆ ಕೂಡ ಆಗಿಲ್ಲ ನೋಡು" ಅಂತ ವಾಚ್ ತೋರಿಸಿದೆ, "ಅರೇ ಇದೇನಿದು ಹೊಸ ವಾಚ್" ಅಂತ ಆಶ್ಚರ್ಯಗೊಂಡಳು, ಇವತ್ತೇನು ಎಲ್ಲಾ ಹೊಸ ಹೊಸದಾಗಿದೆ, ಅಂತ ಅನಿಸಿರಬೇಕು "ಏನ್ರೀ ವಿಷಯ, ಹೇಳದೇ ಕೇಳದೇ ಹೊಸ ವಾಚ್ ತೆಗೆದುಕೊಂಡೀದೀರಾ" ಅಂತ ಕೇಳಿದಳು. "ಕೊಂಡ್ಕೊಂಡಿದ್ದು ಅಲ್ಲ, ಅದು ಗಿಫ್ಟ್ ಬಂದಿದ್ದು" ಅಂದೆ. "ನಿಮ್ಮ ಈ ಗಿಫ್ಟ ವಿಷಯ ಆಮೇಲೆ ಮಾತಾಡೋಣ ಅಂತೆ, ಆಫೀಸಿಗೆ ಲೇಟಾಗತ್ತೇ" ಅಂತಂದಳು, "ನಿನ್ನೇನೇ ಅಫೀಸಿಗೆ ಕೊನೇ ದಿನ, ಅದಕ್ಕೇ, ಜತೆ ಕೆಲಸ ಮಾಡೊರೆಲ್ಲ ಸೇರಿ ಕೊಟ್ಟ ಗಿಫ್ಟ ಅದು, ನಾನೀಗ ನಿರುದ್ಯೋಗಿ!" ಅಂದೆ...

ಕಣ್ಣ ಕಣ್ಣ ಬಿಟ್ಟು ನೋಡಿ, "ಅರೇ ಮತ್ತೆ ನಿನ್ನೆ ಹೇಳಲೇ ಇಲ್ಲ" ಅಂದ್ಲು. "ಹ್ಮ್, ಹೇಳಬೇಕು ಅಂತಿದ್ದೆ, ಆದ್ರೆ ಯಾಕೊ ಬಹಳ ಬೇಜಾರಾಗಿತ್ತು, ಸುಮ್ನೇ ಬಂದು ಮಲಗಿಬಿಟ್ಟೆ" ಅಂತ ಮುಖ ಕಿರಿದು ಮಾಡಿದೆ, "ಅನ್ಕೊಂಡೆ ನಿನ್ನೆ ಏನೊ ಆಗಿದೆ ಅಂತ, ನೀವೇ ಹೇಳ್ತೀರಾ ಅಂತ ಸುಮ್ಮನಾಗಿದ್ದೆ, ನೀವೆ ಕಂಪನಿ ಬಿಟ್ಟದ್ದು ಅಲ್ವಾ, ಮತ್ಯಾಕೆ ಬೇಜಾರು" ಅಂತ ಕೇಳಿದ್ಲು. "ಬೇಜಾರಾಗದೇ ಮತ್ತಿನ್ನೇನೆ, ಮೂರುವರ್ಷದ ಮೇಲಾಯ್ತು ಅದೇ ಕಂಪನಿಯಲ್ಲಿ ಇದ್ದು. ಪೀಠಾರೋಹಣ ಮಾಡಿ ಪಟ್ಟಾಗಿ ಕೂತಿದ್ದು, ಕಿರೀಟವಿಲ್ಲದಿದ್ರೂ ರಾಜನಂತಿದ್ದೆ ಗೊತ್ತಾ" ಅಂದೆ. "ಹ್ಮ್ ಗೊತ್ತು ಗೊತ್ತು, ಯಾವಾಗ ನೋಡಿದ್ರೂ ನಮ್ಮ ಟೀಮ್ ಹಾಗೆ, ನಮ್ಮ ಟೀಮ್ ಹೀಗೆ, ಅಂತ ಹೇಳಿದ್ದೇ ಹೇಳಿದ್ದು,
ಕಂಪನಿ ಈಗ ಕೃಷ್ಣನಿಲ್ಲದ ಮಥುರಾನಂತಾಗಿದೆ ಅನ್ನಿ, ಗೋಪಿಕೆಯರೆಲ್ಲ ನಿಟ್ಟುಸಿರು ಬಿಟ್ಟಿರಬೇಕು" ಅಂತ ಚುಡಾಯಿಸಿದಳು. "ನಾ ಸೀತಾಪತಿ ರಾಮನಂತೇ, ಆದ್ರೂ ಹೂವಿನಂತಿದ್ದ ಹುಡುಗಿಯರ ಮುಖಗಳೆಲ್ಲ ಬಾಡಿಹೋಗಿತ್ತು ನಾ ಹೊರಟಿದ್ದೇನೆ ಅಂತ" ಅಂದು ತಿರುಗೇಟು ಕೊಟ್ಟೆ. "ಕೀತಾಪತಿ ಕೃಷ್ಣ ನೀವು, ಹಾಳಾದೋನ ಹಾವಳಿ ಜಾಸ್ತಿಯಾಗಿತ್ತು ಹೋದ ನೋಡು ಅಂತ ಖುಷಿಯಾಗಿರಬೇಕು ಅವ್ರು" ಅಂತ ನಕ್ಕಳು.

ಹೇಗೂ ಲೇಟಾದರೂ ಪರವಾಗಿಲ್ಲ ಅಂತ ಸ್ವಲ್ಪ ಹೊತ್ತು ಅಲ್ಲೇ ಮಲಗಿದಳು, ನಿದ್ರೆ ಬರದಾದಾಗ ನಾ ಓದುತ್ತಿದ್ದ ಪೇಪರು ಕಸಿದುಕೊಂಡು ಓದಲು ಕೂತಳು, "ರೀ ಹೇಗೂ ಕೆಲ್ಸ ಇಲ್ಲ, ಹೋಗ್ರಿ ನಂಗೊಂದು ಕಪ್ಪು ಟೀ ಮಾಡ್ಕೊಂಡು ಬನ್ನಿ" ಅಂತ ಆರ್ಡರ್ ಮಾಡಿದಳು, "ಅದರೊಂದಿಗೆ, ಬ್ರೆಡ ಟೊಸ್ಟ್ ಬೇಕಾ, ಇಲ್ಲ ಆಮ್ಲೆಟ್ ಬೇಕಾ ಮೇಡಮ್" ಅಂದೆ. ಪೇಪರು ತುಸು ಸರಿಸಿ ಬಾಗಿಸಿ ಅದರ ಮರೆಯಲ್ಲೇ ಇಣುಕಿ ನೋಡಿ ಹುಬ್ಬು ಹಾರಿಸಿದಳು. "ಬೇಕೇನೇ, ಮಾಡ್ತೀನಿ" ಅಂದ್ರೆ, "ರೀ ತಮಾಷೇ ಮಾಡಿದೆ" ಅಂತಂದವಳು, ನನ್ನ ಕೈಲಿದ್ದ ಕಪ್ಪು ಕಸಿದುಕೊಂಡು ಒಂದು ಸಿಪ್ಪು ಹೀರಿ, "ಸೂಪರ್ ಸೂಪರ್" ಅಂತ ಬಾಯಿ ಚಪ್ಪರಿಸಿದಳು. ಕಪ್ಪು ಕಸಿದುಕೊಂಡಿದ್ದಕ್ಕೆ ಕನಿಕರ ಬರುವಂತೆ ನೋಡುತ್ತಿದ್ದರೆ, "ರೀ ಇನ್ನೊಂದು ಕಪ್ಪು ಮಾಡಿ ಕೊಡ್ತೀನಿ ಆಯ್ತಾ" ಅಂತೆದ್ದು ಹೋದಳು.

ದಿನವಿಡೀ ಇದ್ದೇ ಇದೆಯಲ್ಲ, ಪೇಪರು ಆಮೇಲೆ ಓದಿದರಾಯ್ತು ಅಂತ ಆದನ್ನು ಅಲ್ಲೇ ಬೀಸಾಕಿ ಹೊರಬಂದೆ, ಸ್ನಾನವಾದರೂ ಮಾಡಿದರಾಯ್ತು ಅಂತ ನಡೆದರೆ "ರೀ, ನಾನು ಸ್ನಾನ ಮಾಡ್ತೀನಿ ತಾಳಿ, ನಿಮಗೇನು ಅರ್ಜೆಂಟ್ ಇಲ್ಲ, ಆಮೇಲೆ ಮಾಡುವಿರಂತೆ" ಅಂತ ಅಡ್ಡಗಾಲು ಹಾಕಿದಳು, ಹೋಗಲಿ ಬಿಡು ಅಂತಿದ್ದರೆ, ಬಾತ್‌ರೂಮಿನಿಂದ ಕೂಗು ಕೇಳಿತು "ಒಲೆ ಮೇಲೆ ಕಾಯಿಸಲು ಹಾಲಿಟ್ಟೀದೀನಿ, ಸ್ವಲ್ಪ ನೋಡಿ" ಅಂತ. ಸಧ್ಯ ಅಡುಗೆ ಮಾಡಿ ಅಂತ ಹೇಳಲಿಲ್ಲ ಅಲ್ಲ, ಹಾಲು ಕಾಯಿಸೋದು ತಾನೆ ಅಂತ ನೋಡಿ ಬಂದು ಕೂತೆ, ಟೀವೀನಾದ್ರೂ ನೋಡೋಣ ಅಂತ ಆನ್ ಮಾಡಿದ್ರೆ ಏನೂ ಬರುತ್ತಿಲ್ಲ. "ಟೀವೀಗೆ ಏನಾಯ್ತೇ" ಅಂತ ಕೇಳಿದ್ರೆ "ಬೆಳಗ್ಗೆ ಬೆಳಗ್ಗೆ ಅದೇನು ಟೀವೀ ನೋಡ್ತಾ ಕೂರ್ತೀರಾ, ಮೊನ್ನೆ ಅಲ್ಲಿ ವಯರು ಕಟ್ಟಾಗಿದೆ ಅಂತೆ ಹೋಗಿ ಅದನ್ನಾದರೂ ರಿಪೇರಿ ಮಾಡ್ಸಿ" ಅಂತ ಉಪದೇಶವಾಯ್ತು, ಟೆರೆಸ್ಸು ಏರಿ ಕಿತ್ತು ಹೋಗಿದ್ದ ವಯರು ಜೋಡಿಸಿ ಬಂದು ಸ್ನಾನ ಮಾಡಿ ಬಂದು ಕೂರಬೇಕೆನ್ನುವಷ್ಟರಲ್ಲಿ, "ಹೇಗೂ ರೆಡಿ ಆಗಿದ್ದೀರಲ್ಲ ಕರೆಂಟ್ ಬಿಲ್ ತುಂಬಬೇಕಿತ್ತು" ಅಂತ ರಾಗ ತೆಗೆದಳು. ಸರಿ ಕರೆಂಟ್ ಬಿಲ್ ತಾನೇ ಅಂತ ಹೊರಟು ನಿಂತರೆ "ಆಕಡೆಯೇ ಹೋಗುತ್ತೀರಿ, ಅಲ್ಲೇ ಮಾರ್ಕೆಟ್ನಲ್ಲಿ ತರಕಾರಿ ಸ್ವಲ್ಪ ತೆಗೆದುಕೊಂಡು ಬನ್ನಿ" ಅಂತ ಹಲ್ಲು ಕಿರಿದಳು. ಇನ್ನು ಎಲ್ಲಿ ಇಲ್ಲವೆನ್ನಲಾಗುತ್ತದೆ, ಸರಿ ಹೋಗಿ ಮಾರುದ್ದ ಕ್ಯೂನಲ್ಲಿ ನಿಂತು ಬಿಲ್ಲು ತುಂಬಿ, ಮಾರ್ಕೆಟ್ ಸುತ್ತಿ ತರಕಾರಿ ಆಯ್ದುಕೊಳ್ಳುವ ಹೊತ್ತಿಗೆ ಹೊತ್ತೇರುವಷ್ಟು ಸಮಯವಾಗಿತ್ತು, ನಡುವೆ ಫೋನು ಬೇರೆ ಮಾಡಿ ರವೆ ಅಕ್ಕಿ ತರುವುದಕ್ಕೂ ಹೇಳಿದ್ದಳು. ಆಫೀಸಿನ ಏ.ಸೀ ರೂಮಿನಲ್ಲಿ ಕಾಲು ಚಾಚಿ ಕೂತಿರುವವನಿಗೆ ಕಾಲುನಡಿಗೆ ಕಷ್ಟವಾಗದಿದ್ದೀತೇ, ಸುತ್ತಿ ಸುಸ್ತಾಗಿ ಮನೆ ಸೇರುವಾಗ ಘಂಟೆ ಒಂದು ಆಗಿತ್ತು.

ಇತ್ತ ಊಟಕ್ಕೂ ಸಮಯವಲ್ಲ, ತಿಂಡಿ ಕೂಡ ತಿನ್ನಲಾಗಲ್ಲ ಹಾಗಾಗಾಗಿತ್ತು, ಇನ್ನೊಂದು ಸ್ವಲ್ಪ ತಡೆದು ಊಟವೇ ಮಾಡಿದರಾಯ್ತು ಅಂತ ಕೂತವನು ಟೀ ಬೇಕೆಂದು ಕೇಳಿದೆ, "ಇಷ್ಟೊತ್ತಿನಲ್ಲಿ ಟೀ ಏನು, ಆಗಲೇ ಎರಡು ಸಾರಿ ಆಗಿದೆ" ಅಂತ ಅವಳು ಅದನ್ನೂ ಕೊಡಲಿಲ್ಲ, ಕಂಪನಿಯಲ್ಲಿ ಪುಕ್ಕಟೆ ಮಗ್‌ಗಟ್ಟಲೆ ಸಿಗುತ್ತಿದ್ದ ಟೀ ನೆನಪಾಯಿತು, ಕೆಲಸ ಮಾಡುತ್ತೀವೊ ಇಲ್ವೊ ಅದಂತೂ ಸಿಗುತ್ತಿತ್ತು, ಇಲ್ಲಿ ಕೆಲಸ ಮಾಡಿದರೂ ಕೊಡುತ್ತಿಲ್ಲ ಅಂತ ಗೊಣಗಿಕೊಂಡು ಸ್ವಲ್ಪ ಕಾಲ ತಳ್ಳಿದವನಿಗೆ, ತಟ್ಟೆ ಸದ್ದು ಕೇಳಿ ಹೊಟ್ಟೆ ತುಂಬ ಹೋಳಿಗೆ ಊಟ ಮಾಡಿದಷ್ಟೇ ಸಂತೋಷವಾಯ್ತು. ಊಟಕ್ಕೆ ಅನ್ನ ಸಾರು ಉಪ್ಪಿನಕಾಯಿ ಮಾತ್ರ ಇತ್ತು, ಲಂಚಬಾಕ್ಸಿಗೆ ತರಹೇವಾರಿ ಹೊಸರುಚಿಗಳನ್ನು ಮಾಡಿಕೊಡುತ್ತಿದ್ದವಳು, ಮನೆಯಲ್ಲೇ ಇರುವಾಗ ಏನು ಹೊಸದು ಅಂತ ಅನ್ನ ಸಾರು ಮಾತ್ರ ಮಾಡಿದ್ದಳು, ಸಿಕ್ಕಿದ್ದು ಶಿವಾಯನಮಃ ಅಂತ ಅದನ್ನೇ ತಿಂದು ತೇಗಿದ್ದಾಯ್ತು.

ಊಟ ಆಯ್ತು ಇನ್ನೇನು ಬೇರೆ ಕೆಲಸ ಇಲ್ಲ ಅಂತ ಕೂತಿದ್ದವಳನ್ನು ಕೆಣಕಿ ಕೀಟಲೆಯಾದರೂ ಮಾಡಿದರಾಯ್ತು ಅಂತ ಬಂದರೆ, "ರೀ ರಜೆ ಅಂತೂ ನಿಮಗೆ ಸಿಗೊಲ್ಲ, ಇಂದು ಕೆಲಸ ಇಲ್ಲಾಂತಾ ಖಾಲಿ ಈಗಲೇ ಸಿನಿಮಾ ನೋಡಿ ಬರೊಣ್ವಾ, ಮತ್ತೆ ಯಾವಾಗ ಹೀಗೇ ಸಮಯ ಸಿಗುತ್ತೊ" ಅಂತ ಪ್ಲಾನ್ ಹಾಕಿದಳು, "ಟಿಕೆಟ್ಟು ನಿನ್ನದು ಹಾಗಿದ್ರೆ, ನಾನು ನಿರುದ್ಯೋಗಿ ದುಡ್ಡಿಲ್ಲ" ಅಂದೆ. "ಕಂಜ್ಯೂಸ್" ಅಂತ ಹೀಗಳೆದಳು. "ಯಾವ ಫಿಲ್ಮ್" ಅಂದ್ರೆ "ಅವತಾರ್" ಅಂದ್ಲು. ಇದೇನು ದೇವರ ಮೇಲೆ ಭಕ್ತಿ ಬಂದಿರೋ ಹಾಗಿದೆ ಯಾವ ಅವತಾರ, ಯಾವ ದೇವರ ಅವತಾರ್ ಅಂತಂದು "ಯಾವದು ಅದು ವಿಷ್ಣು ವರಾಹ ಅವತಾರ್ ಫಿಲ್ಮಾ" ಅಂತ ಕೇಳಿದೆ. "ಹ್ಮ್.. ದುರ್ಗಾ ಕಾಳಿ ಅವತಾರ್.... ರೀ ಅದು ಇಂಗ್ಲಿಷ್ ಫಿಲ್ಮ್ 'ಅವತಾರ್' ಅಂತ... ಚೆನ್ನಾಗಿದೆ ಅಂತೆ" ಅಂತ ಕೂತಲ್ಲೇ ರೀಲು ಬಿಟ್ಟಳು. ಇನ್ನು ಇಲ್ಲಾಂದ್ರೆ ಇವಳು ದುರ್ಗಾವತಾರ ತಾಳುವುದು ಗ್ಯಾರಂಟಿ ಅಂತ, ಹೋಗಿ ಫಿಲ್ಮ್ ನೋಡಿ, ಪಕ್ಕದಲ್ಲೇ ಚೈನೀಜ್ ಅಂತ ಅದೇನೊ ಹುಲ್ಲು... ಹುಳು ಹುಳು(ನೂಡಲ್), ಹೂವು(ಪ್ಲವರ್, ಗೋಬಿ) ತಿಂದು, ಎರಡು ಹಸಿರು ಗಾಂಧಿ ನೋಟು ಖಾಲಿ ಮಾಡಿ ಬಂದಾಯ್ತು.

ಕೆಲಸ ಇಲ್ಲದೇ ಖಾಲಿ ಇರುವುದು ಸುಮ್ಮನೇ ಅಲ್ಲ, ಖಾಲಿ ಪೀಲಿ ಖರ್ಚುಗಳು ಆಗಲೇ ಜಾಸ್ತಿ ಆಗೋದು. ನಿರುದ್ಯೋಗಿಯಾಗಿ ನಿರಮ್ಮಳವಾಗಿ ನಿಶ್ಚಿಂತೆಯಿಂದ ಎರಡು ದಿನ ಕಳೆದರಾಯ್ತು ಅಂತಿದ್ದರೆ, ನಿರುದ್ಯೋಗಿ...
ನೀ ಇರು ಉದ್ಯೋಗಿ ಆಗಬೇಡ ನಿರುದ್ಯೋಗಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೇಗೂ ಏನೂ ಕೆಲಸ ಇಲ್ಲ, ಇದು ಮಾಡು ಅದು ಮಾಡು ಅಂತ ಆಗಲೇ ಹೆಚ್ಚು ಕೆಲಸ ಬರುತ್ತವೆ. ಕೆಲಸದಲ್ಲಿದ್ದರೆ ಒಹ್ ದುಡಿದು ದಣಿದು ಬಂದಿರಬಹುದೆಂದು ಆದರಾಥಿತ್ಯ ಸಿಕ್ಕರೆ, ಕೆಲಸವಿಲ್ಲದೇ ಖಾಲಿಯಾದರೆ... ಕೂತಿದ್ದರೆ ಉಂಡದ್ದು ಕರಗುವುದು ಯಾವಾಗ ಅಂತ ಎದ್ದೋಡಿಸಲಾಗುತ್ತದೆ. ಕತ್ತೆ ಹಾಗೆ ಕುತ್ತಿಗೆಗೆ ಕುತ್ತು ಬಂದು ಸತ್ತು ಹೋಗುವಷ್ಟು ಒಮ್ಮೊಮ್ಮೆ ಕೆಲಸ ಮಾಡಿದ ಮೇಲೆ, ಒಂದು ದಿನ ಹೀಗೆ ಸುಮ್ಮನೇ ಕೂತು ಬಿಡಬೇಕು... ಊಟ ನಿದ್ರೆಯ ಪರಿವೆ ಕೂಡ ಇಲ್ಲದ ಹಾಗೆ ಎನೂ ಮಾಡದೇ... ಅನ್ನಿಸದಿರಲಿಕ್ಕಿಲ್ಲ. ಆದರೆ... ಜೀವನ ಹಾಗೆ ಕೂರಲು ಬಿಟ್ಟರೆ ತಾನೇ, ಮತ್ತೆ ಎತ್ತಲೋ ಎಳೆದುಕೊಂಡು ಹೊರಟುಬಿಡುತ್ತದೆ.

ರಾತ್ರಿಗೆ ಇವಳು ಏನೂ ಪ್ಲಾನ್ ಮಾಡದಿದ್ರೆ ಸಾಕು ಅಂತ ದೇವರಲ್ಲಿ ಬೇಡಿಕೊಂಡೆ, ಊಟ ಮಾಡಲು ಮನಸಿರಲಿಲ್ಲ, ಸಂಜೆ ತಿಂದಿದ್ದ ಚೈನೀಜ್ ಇನ್ನೂ ಹೊಟ್ಟೆ ತುಂಬ ತುಳುಕುತ್ತಿತ್ತು. ದಿನವಿಡೀ ಕೆಲಸ ಮಾಡಿದ್ದರೂ ಹೀಗೆ ದಣಿಯುತ್ತಿರಲಿಲ್ಲ ಅಷ್ಟು ದಣಿವಾಗಿತ್ತು. ಬೆಡ್ ಮೇಲೆ ಬಿದ್ದುಕೊಂಡು ಮಾತಿಗಿಳಿದರೆ "ರೀ ಇನ್ನೂ ಎಷ್ಟು ದಿನ ನಿರುದ್ಯೋಗಿ ನೀವು" ಅಂದ್ಲು, ಪೂರಾ ಒಂದು ವಾರಕ್ಕೆ ಪ್ಲಾನ ಮಾಡುವದಕ್ಕೇ ಕೇಳಿರಬೇಕು. "ನಾಳೆಯೇ ಹೊಸ ಕೆಲಸಕ್ಕೆ ಹೊರಟುಬಿಡುತ್ತೇನೆ" ಅಂದೆ, "ಪ್ಚ್ ಇನ್ನೂ ಸ್ವಲ್ಪ ದಿನ ಇತ್ತೇನೊ ಅನ್ಕೊಂಡಿದ್ದೆ, ರೇಶನ್ ಕಾರ್ಡಿನಲ್ಲಿ ಹೆಸರು ಎಂಟ್ರಿ ಮಾಡಿಸಬೇಕು, ವೋಟರ್ ಕಾರ್ಡನಲ್ಲಿ ಹೆಸರು ಚೇಂಜ್ ಮಾಡಿಸಬೇಕು, ಗ್ಯಾಸ್ ಸಿಲಿಂಡರ್ ವರ್ಗಾವಣೆ, ಬ್ಯಾಂಕನಲ್ಲಿ ಅಡ್ರೆಸ್ ಬದಲಾವಣೆ..." ಇನ್ನೂ ಅವಳ ಪಟ್ಟಿ ಬೆಳೆಯುತ್ತಲೇ ಇತ್ತು, ನಿರುದ್ಯೋಗ ಬೇಡಪ್ಪಾ... ನೀ ಇರು ಉದ್ಯೋಗಿ ಅಂತ ಹೊದ್ದು ಮಲಗಿದೆ... ನಾಳೆ ಇನ್ಯಾವದೋ ಕ್ಯೂನಲ್ಲಿ ಮತ್ತೆ ಸಿಕ್ತೇನೆ... ಬೈ ಬೈ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/nirudyogi.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Monday, December 7, 2009

ಕಂಪನಿ ಕಪ್ಪು...

ಅದೊಂದು ದಿನ ಶೋಕೇಸಿನಲ್ಲಿದ್ದ ಸಾಮಾನುಗಳನ್ನೆಲ್ಲ ಒರೆಸಿ ಒರೆಸಿ ಪೇರಿಸಿ ಇಡುತ್ತಿದ್ದಳು, ಆ ಗಾಜಿನ ಹಿಂದೆ ಕೂಡ ಅಷ್ಟು ಧೂಳು ಹೇಗೆ ಹೋಗುತ್ತದೋ ನನಗಂತೂ ಗೊತ್ತಿಲ್ಲ, ಹಾಳು ಧೂಳಿನಿಂದಾಗಿ ಇರೋ ಕೆಲಸಗಳೇ ಸಾಕಾಗಲಿಲ್ಲವೇನೊ ಅನ್ನೊ ಹಾಗೆ ಇದೊಂದು ಕೆಲಸ ಬೇರೆ, ಏನೊ ಒಬ್ಳೆ ಮಾಡ್ತಾ ಇದ್ದದ್ದು ನೋಡಿ ಹೆಲ್ಪ ಮಾಡೊಣ ಅಂತ, ಹೋದೆ.
"ನಾನು ಒರೆಸಿ ಕೊಡ್ತೀನಿ ಕೊಡು" ಅಂದೆ. "ಬೇಡ ಬಿಡಿ, ನಾನು ಮಾಡ್ಕೊತೀನಿ" ಅಂತ ನಿರಾಕರಿಸಿದಳು, ಅದರೂ ನಾನು ಇನ್ನೂ ಅಲ್ಲೇ ಇದ್ದದ್ದು ನೋಡಿ, "ಆಯ್ತು, ಜೋಡಿಸಿ ಇಡಿ" ಅಂತ ಬಿಟ್ಟುಕೊಟ್ಟಳು, ಅವಳು ಒರೆಸಿಕೊಡುತ್ತಿದ್ದರೆ ಜೋಡಿಸಿ ಇಡತೊಡಗಿದೆ, ಆಗಲೇ ಕಂಡದ್ದು ಈ ಕಂಪನಿ ಕಪ್ಪು!

ಕಂಪನಿ ಕಪ್ಪು, ಅಂದ್ರೆ, ಅದೇ ಟೀ ಕಾಫಿ ಮಗ್. ಅವಳು ಎಷ್ಟು ಸಾರಿ ಮಗ್ ಅನ್ನಿ ಅಂತ ಹೇಳಿದರೂ, ನಾನು ಮಾತ್ರ ಕಪ್ಪು ಅಂತಾನೇ ಅನ್ನೋದು, ನನ್ನ ಲೆಕ್ಕಕ್ಕೆ ಅದು ಕಪ್ಪೇ ಸರಿ, ಈ ನಮ್ಮ ಕಂಪನಿಗಳಲ್ಲಿ ಆಗಾಗ ಹೀಗೆ ಏನಾದ್ರೂ ಕಪ್ಪು ಗಿಪ್ಪು ಕೊಡ್ತಾ ಇರ್ತಾರೆ, ಕೆಲವೊಮ್ಮೆ ಕೈಗೆ ಚಿಪ್ಪು ಕೂಡ ಕೊಡ್ತಾರೆ! ಆದರೂ ಹೀಗೆ ಪುಕ್ಕಟೆಯಾಗಿ ಕೊಟ್ಟ ಗಿಫ್ಟಗಳೆಂದ್ರೆ ಏನಾದ್ರೂ ಸರಿ ತೆಗೆದುಕೊಳ್ಳುತ್ತೇವೆ. ನಾವು ಕೆಲವೊಂದಿಷ್ಟು(ಎಲ್ರೂ ಅಲ್ಲ) ಸಾಫ್ಟವೇರ ಇಂಜನೀಯರುಗಳು ಹೀಗೇ. ಹೀಗೆ ಕಂಪನಿಯಲ್ಲಿ ಕೊಟ್ಟ ವಸ್ತುಗಳನ್ನು ಬಹಳ ಜತನವಾಗಿಡುತ್ತೇವೆ, ಸಾವಿರ ರೂಪಾಯಿ ಕೊಟ್ಟು ತಂದ ಶರ್ಟ ಚೆನ್ನಾಗಿ ಇಟ್ಕೊತೀವೊ ಇಲ್ವೊ ಆದ್ರೆ ಕಂಪನಿಯಲ್ಲಿ ಕೊಟ್ಟ ಪುಕ್ಕಟೆ ಟೀಶರ್ಟ್ ಮಾತ್ರ ಹೊಸದರಂತೇ ಕಾಪಾಡಿರುತ್ತೇವೆ. ಎಲ್ಲಿ ಹೊರಟು ನಿಂತರೂ ಅದನ್ನೇ ಹಾಕಿಕೊಂಡು ನಿಲ್ಲೋದು, "ನೀವೇನು ನಿಮ್ಮ ಕಂಪನಿ ಬ್ರಾಂಡ್ ಅಂಬ್ಯಾಸಿಡರಾ, ಬೇರೆ ಹಾಕೊಳ್ಳಿ" ಅಂತ ಇವಳು ಬಯ್ದಾಗಲೇ ಬಿಡೋದು. ಇನ್ನೂ ಹುಟ್ಟೂರಿಗೆ ಹೊರಟು ನಿಂತರೆ ಬಸ್ಸು ತುಂಬಾ ಕಾಣುವುದು ಈ ಕಂಪನಿಯ ಟೀಶರ್ಟಗಳೇ, ಹೆಚ್ಚು ಕಮ್ಮಿ ಎಲ್ರೂ ಅವನ್ನೇ ಹಾಕಿಕೊಂಡು ಬಂದಿರ್ತಾರೆ, ನಾನಿಲ್ಲೇ ಕೆಲಸ ಮಾಡೋದು ಅಂತ ಹೆಮ್ಮೆಯಿಂದ ತೋರಿಸಿಕೊಳ್ಳೋಕೆ. ಊರಲ್ಲಿ ಎಲ್ರೂ ಇವನಿಗೇನು ಬೇರೆ ಬಟ್ಟೆನೇ ಇಲ್ವೇನೊ ಯಾವಾಗ ನೋಡಿದ್ರೂ ಅದೇ ಟೀಶರ್ಟನಲ್ಲಿ ಊರಿಗೆ ಬರ್ತಾನೇ ಅಂದ್ರೂ ಪರವಾಗಿಲ್ಲ. ಈ ತೋರಿಕೆ ಇಲ್ಲೇ ನಿಲ್ಲಲ್ಲ, ಕಂಪನಿಯಲ್ಲಿ ಒಂದು ದಿನ ಐಡಿ ಕಾರ್ಡು ಹಾಕಿಕೊಂಡು ಇರ್ತೀವೋ ಇಲ್ವೊ, ಆದ್ರೆ ಅದನ್ನ ಹಾಕಿಕೊಂಡು ಊರೆಲ್ಲ ಸುತ್ತಿ ಬರ್ತೀವಿ. ಒಂದು ಕಂಪನಿಯಲ್ಲಿ ಕೊಟ್ಟ ಜಾಕೆಟ್ಟು, ಬ್ಯಾಗು, ಪೆನ್ನು, ಪೇಪರು, ಬುಕ್ ಏನೇ ಇರಲಿ ಅದೊಂಥರಾ ಅಕ್ಕರೆ, ನಾವಿರೋದೇ ಹಾಗೆ... ಹಾಗೇ ಈ ಕಂಪನಿ ಕಪ್ಪು ಕೂಡಾ... ಟೀ ಕಾಫಿ ಕುಡಿಯೋ ಅಂತ ಅವರು ಕೊಟ್ಟಿದ್ದರೆ, ತಂದು ಜೋಪಾನವಾಗಿ ಶೋಕೇಸಿನಲ್ಲಿಟ್ಟಿದ್ದೆ,
ಕಪಿಲದೇವ್ ಗೆದ್ದ ವರ್ಡ್ ಕಪ್ ಅವನಿಗೇ ಕೊಟ್ಟಿದ್ರೆ ಅವನು ಕೂಡ ಅಷ್ಟು ಚೆನ್ನಾಗಿ ಇಟ್ಕೊಳ್ಳಲಿಕ್ಕಿಲ್ಲ. ಯಾವುದೋ ದೊಡ್ಡ ಚಾಂಪಿಯನಶಿಪ್ ಗೆದ್ದು ತಂದು ಕಪ್ ಏನೋ ಅನ್ನೊವಂತೆ, ಯಾರು ಕೇಳಿದರೂ, ಕೇಳದಿದ್ರೂ, ಬಂದವರಿಗೆಲ್ಲ ಕಂಪನೀಲಿ ಕೊಟ್ಟಿದ್ದು ಅಂತ ಹೇಳಿಕೊಳ್ಳೊದು.

ಅಂತೂ ಅದನ್ನು ಅವಳು ಒರೆಸಿ ಕೊಡುತ್ತಿದ್ದಂತೆ, "ನಮ್ಮ ಕಂಪನೀಲಿ ಕೊಟ್ಟಿದ್ದು ಎರಡು ವರ್ಷದ ಹಿಂದೆ" ಅಂತ ಅವಳಿಗೆ ತೋರಿಸಿದೆ.
ಒಂದು ನಗೆ ಬೀರೀ "ಗೊತ್ತು, ಆಮೇಲೆ ಮತ್ತೇನೊ ಕೊಟ್ಟಿಲ್ವೇ" ಅಂದ್ಲು.
"ಅಯ್ಯೋ ರಿಸೆಷನ್ ಅಂತ ಕಂಪನೀಲಿ ಟೀ ಕಾಫಿ ಕೊಡೋದು ನಿಲ್ಲಿಸಿದ್ರು ಇನ್ನು ಕಪ್ಪು ಎಲ್ಲಿಂದ ಕೊಡ್ತಾರೆ, ಕೊಟ್ರೂ ಏನ್ ಮಾಡೋದು"
"ಏನ್ ಮಾಡೋದಾ! ಕೊಟ್ರೆ ಅದರಲ್ಲಿ ಕಾಫಿ ಟೀನಾ ನೀವೆಲ್ಲಿ ಕುಡೀತೀರ, ತಂದು ಇಲ್ಲೇ ಶೋಕೇಸಿನಲ್ಲಿ, ದಸರಾ ಬೊಂಬೆ ತರಹ ಜೋಡಿಸಿ ಇಡೊದು" ಅಂತ ಅಣಕಿಸಿದಳು.
"ಮಾಡಿ ಕೊಟ್ಟರೆ ಕುಡಿಯಬಹುದೇನೊ"
"ನಮ್ಮ ಮದುವೆ ಆದಾಗಿಂದ ಒಂದು ಸಾರಿ ಕೂಡ ಅದರಲ್ಲಿ ಕಾಫಿ ಕುಡಿದದ್ದು ನೋಡಿಲ್ಲ, ಅದಕ್ಕೇ ನಾನೂ ಅದನ್ನ ಮುಟ್ಟಿರಲಿಲ್ಲ, ಅಲ್ಲೇ ಇತ್ತು" ಅಂತ ನನ್ನ ನೋಡಿದಳು, ಒಂದು ಸಾರಿ ಹಲ್ಲು ಕಿರಿದೆ.

ಹೇಗೊ ಅಲ್ಲಿಗೆ ಎಲ್ಲ ಸಾಮಾನು ಶೋಕೇಸಿನಲ್ಲಿ ಜೋಡಿಸಿ ಆಗಿತ್ತು, ಟೀ ಮಾಡಿ ಅದರಲ್ಲೇ ಕೊಡ್ತೀನಿ ಅಂತ ಕಂಪನಿ ಕಪ್ಪು ಎತ್ತಿಕೊಂಡು ಪಾಕಶಾಲೆಗೆ ನಡೆದಳು, ನಾನೇನೊ ಬೇರೆ ಕೆಲಸದಲ್ಲಿ ನಿರತನಾದೆ. ಏಲಕ್ಕಿ ಪರಿಮಳ ಬಂದಾಗಲೇ ಗೊತ್ತಾಯ್ತು, ಸ್ಪೇಷಲ್ ಟೀ ರೆಡಿ ಆಗ್ತಿದೆ ಅಂತ, ಸವಿಯಲು ಕಾತುರತೆಯಿಂದಲೇ ಕಾದು ಕೂತೆ. ಸುವಾಸನೆ ಮಾತ್ರ ಬರುತ್ತಿದ್ದುದು, ಒಮ್ಮೆಲೆ ಹಿನ್ನೆಲೆಗೆ ಸೌಂಡ ಕೂಡ ಬೇಕೇನೊ ಅನ್ನೊವಂತೆ, "ಠಳ್!!!..." ಅಂತ ಸದ್ದು ಬಂತು... ಎದ್ದು ಶಬ್ದ ಬಂದತ್ತ ಓಡಿದೆ.

ನೋಡಿದರೆ, ಟೀ ಹಾಲ್ ತುಂಬೆಲ್ಲ ಚೆಲ್ಲಿದೆ, ಕಪ್ಪು ಒಡೆದು ಚೂರು ಚೂರಾಗಿದೆ, ಬಿಸಿ ಬಿಸಿ ಟೀ ಕೈಮೇಲೆಲ್ಲ ಬಿದ್ದು ಕೆಂಪಾಗಿ ನೋವಿನಲ್ಲಿ ಕಣ್ಣೀರು ಕೆನ್ನೆಗಿಳಿದು ಬಂದು ಕುಸಿದು ಕೂತಿದ್ದಾಳೆ ಇವಳು... ಒಮ್ಮೆಲೇ ತಲೆ ತುಂಬ ನೂರಾರು ಯೋಚನೆಗಳು ಓಡಾಡಿದವು, ಮೆಚ್ಚಿನ ಕಪ್ಪು ಒಡೆದಿದ್ದಕ್ಕೆ ಸಿಟ್ಟು ಬರಬೇಕೇ, ನೋವಿನಲ್ಲಿರುವ ಅವಳ ಮೇಲೆ ಅನುಕಂಪ ಬರಬೇಕೆ ಮನಸಿಗೇ ಗೊಂದಲ, ಒಂದು ಕ್ಷಣ ಎಲ್ಲ ಸ್ಥಬ್ದ... ಆ ಸಮಯದಲ್ಲಿ ಆವೇಶದ ಭರದಲ್ಲಿ ಬಯ್ದು ಬಿಡುತ್ತಿದ್ದೆ, ಆದರೇನೊ ಹಾಗೇ ಮಾಡಲೇ ಇಲ್ಲ... ಕೂಡಲೇ ಅಲ್ಲೇ ಇದ್ದ ಮಗ್‌ನಲ್ಲಿ ನೀರು ತೆಗೆದುಕೊಂಡು ಅವಳ ಕೈಮೇಲೆ ಸುರಿದೆ, ಸ್ವಲ್ಪ ಸುಧಾರಿಸಿಕೊಂಡಳು, "ರೀ ಅದು ಅದೂ... ಕೈ ಜಾರಿ..." ಅಂತೇನೊ ಹೇಳಲು ನೋಡಿದಳು, ಅವಳಿಗೊ ಕಪ್ಪು ಒಡೆದು ಹೋಯ್ತುಲ್ಲ ಅಂತ ನೋವು, ನಾ ಕೇಳಲೇ ಇಲ್ಲ "ಬರ್ನಾಲ್ ಕ್ರೀಮ ಎಲ್ಲಿ" ಅಂತನ್ನುತ್ತ... ಕಪಾಟು ತಡಕಾಡಿದೆ, ಸಧ್ಯ ಅಲ್ಲೇ ಇತ್ತು, ಸ್ವಲ್ಪ ಅದನ್ನೇ ನಿಧಾನವಾಗಿ ಸವರಿ ಈಚೆ ಕರೆತಂದು "ಸ್ವಲ್ಪ್ ಇಲ್ಲೇ ಕೂತಿರು" ಅಂದೆ. ಎಲ್ಲಿ ಕಾಲಿಗೆ ಚುಚ್ಚಿದರೆ ಅಂತ ಒಂದೊಂದೇ ಚೂರು ಅರಿಸಿ ಆಕಡೆ ತೆಗೆದಿಟ್ಟೆ. ಸ್ವಲ್ಪ ನೀರು ಚುಮುಕಿಸಿ, ಎಲ್ಲ ಮೂಲೆಗೆ ನೂಕಿದೆ, "ನಾನ್ ಮಾಡ್ತೀನಿ ಬಿಡಿ" ಅಂತ ಅವಳಂದ್ರೂ ಕೇಳದಂತೆ, ಎಲ್ಲ ಎತ್ತಿ ದಸ್ಟಬಿನ್ ತುಂಬಿದೆ.

ಮನಸ್ಸಿನಲ್ಲಿ ಇನ್ನೂ ತಾಕಲಾಟ ನಡೆದೇ ಇತ್ತು, ಕ್ಷಣ ಆವೇಶದ ಭರದಲ್ಲಿ ಏನೋ ಅಂದು ಬಿಡುತ್ತಿದ್ದೆನಲ್ಲ, ತಡೆದದ್ದೇ ಒಳ್ಳೇದಾಯ್ತು. ಬಂದು ಸೊಫಾ ಮೇಲೆ ಕೂತೆ, ಅವಳು ಕೂತಲ್ಲಿಂದಲೇ ತಲೆ ಎತ್ತದೇ ಹಾಗೆ ಓರೆ ನೊಟದಲ್ಲಿ ನನ್ನತ್ತ ನೋಡುತ್ತಿದ್ದಳು, ಒಂದು ಅಪರಾಧೀ ಭಾವನೆ ಅವಳ ಕಾಡುತ್ತಿದ್ದಂತಿತ್ತು. ಮನೆಯಲ್ಲಿ ಸ್ವಲ್ಪ ಹೊತ್ತು ನೀರವ ಮೌನ ನಿರ್ಭಾವುಕ ಭಾವ ತುಂಬಿದಂತಿತ್ತು. ಮೆಚ್ಚಿನ ಕಪ್ಪು ಒಡೆದ ಬೇಸರದಲ್ಲಿ ಎಲ್ಲಿ ನಾನು ಏನಾದರೂ ಮಾತಾಡಿ ಅವಳಿಗೆ ಬೇಜಾರು ಮಾಡಿಬಿಡುತ್ತೀನೊ ಅಂತ ನಾನೂ ಸುಮ್ಮನಿದ್ದೆ. ಸುಮ್ಮನೇ ಶೋಕೇಸಿನಲ್ಲಿ ಇಟ್ಟಿರುವುದ ಬಿಟ್ಟು, ಅಣಕಿಸಿ ಹೊರ ತೆಗೆದು ಹೀಗೆ ಹಾಳು ಮಾಡಿಟ್ಟೆನಲ್ಲ, ಈಗ ಏನಂತ ಹೇಳಲಿ ಅಂತ ಅವಳು.

ನಾನೇ ಬಹಳ ಹೊತ್ತು ಕಾದು ಕೂತವ, ಹಾಗೆ ಕೂರಲಾಗದೇ, "ಈಗ ಹೇಗಿದೆ, ಡಾಕ್ಟರ್ ಹತ್ರ ಹೋಗೋಣ್ವಾ" ಅಂತಂದೆ, "ಬೇಡ" ಅಂತ ಕ್ಷೀಣ ದನಿ ಹೊರಬಂತು. ಜಾಸ್ತಿ ಮಾತಾಡಲೂ ಸಂಕೋಚವಾದಂತೆ, "ಇಲ್ಲ, ಹೋಗೊಣ ಬಾ ಸುಮ್ನೇ ಅದು ಜಾಸ್ತಿ ನೋವು ಆಗೋದು ಬೇಡ" ಅಂತ, ಸ್ವಲ್ಪ ಮಾತಾಡಲು ಪ್ರೇರೇಪಿಸಿದೆ, "ಇಲ್ಲ ಸ್ವಲ್ಪ ಕೆಂಪಗಾಗಿದೆ, ಸುಟ್ಟಿಲ್ಲ, ಬರ್ನಾಲ್ ಕ್ರೀಮ್ ಸಾಕು" ಅಂತ ಹೇಳಿ ಸುಮ್ಮನಾದಳು.

ಮತ್ತೆ ಟೀ ಬೇಕೆನಿಸಲಿಲ್ಲ, ಪೇಪರು ಓದುತ್ತ ಕೂತೆ, ಅವಳು ಒಳಗೆ ಏನೋ ಮಾಡಲು ಹೋದಳು, ಮಾತು ಇಬ್ಬರಿಗೂ ಬೇಕಾಗಿರಲಿಲ್ಲ, ಸುಮ್ಮನೇ ಉಳಿದೆವು, ಮಧ್ಯಾಹ್ನಕ್ಕೆ ಅನ್ನ ಸಾರು ಮಾಡಿದ್ದಳು ಊಟಕ್ಕೆ ಕೂತಾಗಲೂ ಏನೂ ಮಾತಾಡಲು ತೋಚಲೇ ಇಲ್ಲ. ಅವಳಿಗಿನ್ನೂ ತಾನೇನೊ ದೊಡ್ಡ ತಪ್ಪು ಮಾಡಿಬಿಟ್ಟೆ ಅನ್ನೊ ಹಾಗೆ ಆಗಿತ್ತು, ಒಂದು ದಿನ ಮತ್ತೆ ಸರಿ ಹೋಗುತ್ತಾಳೆ ಬಿಡು ಅಂತ ನಾನೂ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಊಟದ ನಂತರ ಹಾಗೇ ಟೀವಿ ನೋಡುತ್ತ ಕೂತಿರಬೇಕಾದರೆ, ರೆಡಿಯಾಗಿ, ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಎಲ್ಲೊ ಹೊರಟು ನಿಂತಳು, "ಎಲ್ಲಿ, ಡಾಕ್ಟ್ರ ಹತ್ರನಾ?" ಅಂತ ಕೇಳಿದೆ, "ಈಗ ಬಂದೆ, ಹಾಲು ತರಲು" ಅಂತ ಹೊರ ಹೋದಳು, ಮತ್ತೆ ಯಾವಾಗಲೋ ಆಗಿದ್ದರೆ, "ಹಾಲಿನಂಗಡಿ ಹಾಸಿನಿನಾ ನೊಡ್ಕೊಂಡು ಬರ್ತೀನೀ, ನಾನೇ ತರ್ತೀನಿ" ಅಂತ ಹೊರಟು ಬಿಡುತ್ತಿದ್ದೆ. ಏನೂ ಹೇಳದೇ ಸುಮ್ಮನಾದೆ, ಮತ್ತೆ ಟೀ ಮಾಡಲಿರಬೇಕು ಬಿಡು ಅಂತ.

ಸ್ವಲ್ಪ ಹೊತ್ತಿನಲ್ಲಿ ಮರಳಿದಳು, ನಾನು ಏನೊ ವಿಶೇಷ ಅಂಕಣ ಓದುವುದರಲ್ಲಿ ಮಗ್ನನಾಗಿದ್ದೆ, ಸೀದಾ ಪಾಕಶಾಲೆಗೆ ನುಗ್ಗಿದಳು, ಸರಿ ಬಿಡು ಟೀ ಸಿಗುತ್ತದೆ ಅಂತ ಖಾತ್ರಿಯಾಯ್ತು. ಮತ್ತೆ ಟೀ ಪರಿಮಳ ಬರಲಿಕ್ಕೂ ಅವಳು ಅದೇ ಹೊತ್ತಿಗೆ ಹೊರಗೆ ಬರುವುದಕ್ಕೂ ಸರಿ ಹೋಯ್ತು. ಬಂದವಳೇ ಮುಂದೆ ಟೀಪಾಯಿ ಮೇಲೆ ಇಟ್ಟು ಹೋದಳು, ಸರಿ ಮಾತಾಡಲು ಇನ್ನೂ ಬೇಸರಿಕೆಯೇನೊ ಅಂತ ಅದಕ್ಕೇ ಹಾಗೆ ಇಟ್ಟು ಸುಮ್ಮನೇ ಹೋದಳು ಬಿಡು ಅಂತ ಪೇಪರು ಸರಿಸಿಟ್ಟು ನೋಡಿದರೆ, ಅಲ್ಲೇನೊ ಬೇರೆ ಇದೆ, ಟೀ ತಂದಳೇನೊ ಅಂತ ನಾನಂದುಕೊಂಡರೆ, ಕೆಂಪು ಬಣ್ಣ ವೆಲ್ವೇಟು ಪೇಪರು ಸುತ್ತಿ, ಬಿಳಿ ಬಣ್ಣದ ಲೇಸು ಕಟ್ಟಿದ ಡಬ್ಬಿ ಇದೆ.

ಅದರಲ್ಲೇನಿದೆ ಅಂತ ಬೇರೆ ಹೇಳಲೇಬೇಕಾಗಿಲ್ಲ, ಸಂತೋಷವೋ ಏನೊ ಕಣ್ಣಲ್ಲಿ ನೀರಾಡಿತು, ಮಾತೇ ಹೊರಡಲಿಲ್ಲ ತುಟಿಗಳ ಒಳಗೇ ಅಮುಕಿಕೊಂಡು, ಭಾವನೆಗಳ ಒತ್ತರವನ್ನು ತಡೆದೆ, ಅದನ್ನು ಎತ್ತಿಕೊಂಡು ಪಾಕಶಾಲೆಯತ್ತ ನಡೆದೆ, ಅಲ್ಲಿ ನೋಡಿದರೆ, ಸೀರೆ ಸೆರಗಿನ ತುದಿಯನ್ನು ಸುರುಳಿ ಸುತ್ತುತ್ತ ತಲೆ ಕೆಳಗೆ ಮಾಡಿಕೊಂಡು ಗ್ಯಾಸಿನ ಕಟ್ಟೆ ಮುಂದೆ ನಿಂತಿದ್ದಾಳೆ ಇವಳು, ಒಳ್ಳೇ ಪರೀಕ್ಷೇ ಫಲಿತಾಂಶಕ್ಕೆ ಕಾದಂತೆ. "ಏನಿದು" ಅಂದೆ ಏನೊ ಗೊತ್ತಿಲ್ಲವೇನೊ ಅನ್ನುವ ಹಾಗೆ, ತಿರುಗಿ ನೋಡದೇ "ನೀವೇ ನೋಡಿ" ಅಂದ್ಲು. ಬೆನ್ನು ಮಾಡಿ ನಿಂತಿರುವವಳ ಹಿಂದೆ ಹೋಗಿ, ಅವಳ ಮುಂದೆ ಆ ಡಬ್ಬಿ ಇಟ್ಟು ಅವಳನ್ನು ಬಳಸಿ ನಿಂತು, ಭುಜಕ್ಕೆ ಕತ್ತು ಇರಿಸಿ, ಅವಳ ಕೈಗಳೆರಡು ನನ್ನ ಕೈಯಲ್ಲಿ ಹಿಡಿದು ಆ ಪ್ಯಾಕ ಅವಳಿಂದಲೇ ತೆಗೆಯಿಸತೊಡಗಿದೆ. ಹೊರತೆಗೆದರೆ ಸುಂದರ ಕಾಫಿ ಮಗ್ ಇತ್ತು, ಮೊದಲೇ ಗೊತ್ತಾಗಿದ್ದರೂ ಅದು ಹೇಗಿರಬಹುದೆಂಬ ಕುತೂಹಲವಿತ್ತು, ಶುಭ್ರ ಬಿಳಿಬಣ್ಣ, ಅದರ ಮೇಲೆ ಓರೆಯಾಗಿ "SORRY" ಅಂತ ಬರೆದಿತ್ತು ಪಕ್ಕದಲ್ಲೊಂದು ಕಿವಿ ಹಿಡಿದು ಕ್ಷಮೆ ಕೇಳುವಂತಿರುವ ಚಿಕ್ಕ ಚಿತ್ರ, ಎಂತಹ ತಪ್ಪು ಇದ್ದರೂ ಮರೆತು ನಕ್ಕು ಬಿಡುವಂತೆ... ಆಗಲೇ ಮಾಡಿಟ್ಟಿದ್ದ ಟೀ ಅವಳ ಕೈಯಲ್ಲೇ ಅದಕ್ಕೇ ಸುರಿದು, ಅವಳ ತುಟಿಗಳ ಮುಂದೆ ಹಿಡಿದೆ, "ಅದು ನಿಮಗೆ" ಅಂತ ಮುಖ ತಿರುಗಿಸಿದಳು, ಮತ್ತೆ ಆಕಡೆ ಹಿಡಿದೆ ಏನೂ ಮಾತಾಡದೇ, ಈ ಬಾಹು ಬಂಧನದಲ್ಲಿ ಸಿಕ್ಕಿರುವಾಗ ಇನ್ನು ಬಿಡುವುದಿಲ್ಲ ಅಂತ ಅವಳಿಗೂ ಗೊತ್ತಾಗಿದ್ದರಿಂದ ಒಂದು ಗುಟುಕು ಹೀರಿದಳು. ಅಲ್ಲೇ ಒಂದು ಚೂರು ನಾನೂ ಗುಟುಕರಿಸಿ, "ಸೂಪರ" ಅಂತಂದು, ಅವಳನ್ನು ಸೆರೆಯಿಂದ ಮುಕ್ತ ಮಾಡಿ ಹೊರಬಂದೆ.

ಕ್ಷಣ ಆವೇಶದಲ್ಲಿ ಏನೇನೊ ಆಗಿಬಿಡುತ್ತದಲ್ಲ, ಯಾವುದೊ ನಮ್ಮ ಮೆಚ್ಚಿನ ವಸ್ತು ಯಾರೋ ಹೀಗೆ ಹಾಳು ಮಾಡಿದಾಗ ಹಿಂದೆ ಮುಂದೆ ನೋಡದೇ ಸುಮ್ಮನೇ ರೇಗಿ ಬಿಟ್ಟಿರುತ್ತೇವೆ,
ಕವಡೆ ಕಿಮ್ಮತ್ತೂ ಇಲ್ಲದ ಸಾಮಾನಿಗಾಗಿ ಮೌಲ್ಯ ಕಟ್ಟಲಾಗದಂತಹ ಸುಂದರ ಸಂಬಂಧಗಳು ಹಾಳಾಗಿ ಹೋಗಿರುತ್ತವೆ ಅಲ್ವೇ, ಹಾಳಾಗುವುದಂತೂ ಹಾಳಾಗಿ ಹೋಗಿದೆ ಇನ್ನು ಸರಿ ಮಾಡಲಂತೂ ಬರಲಿಕ್ಕಿಲ್ಲ, ಅದೇ ಭರದಲ್ಲಿ ಸಂಬಂಧಗಳೂ ಹಾಳಾಗುವಂತೆ ನಡೆದುಕೊಳ್ಳಬೇಕೆ? ಈ ಸಂದರ್ಭದಲ್ಲೇ ನೋಡಿದರೆ ಅದೇನು ದೊಡ್ಡ ವಸ್ತು, ಕಂಪನಿಯಲ್ಲಿ ಪುಕ್ಕಟೆಯಾಗಿ ಕೊಟ್ಟ ಕಪ್ಪು, ಬೆಲೆ ಇನ್ನೂರೋ ಮುನ್ನೂರೋ ಇದ್ದೀತು, ಅಷ್ಟಕ್ಕಾಗಿ ಅವಳ ಮೇಲೆ ಹರಿಹಾಯ್ದಿದ್ದರೆ, ಕಪ್ಪೇನೊ ಒಡೆದು ಹೋಗಿತ್ತು ಸಂಬಂಧದಲ್ಲಿ ದೊಡ್ಡ ಒಡಕು ಮೂಡುತ್ತಿತ್ತು.

ಟೀ ಕುಡಿದು ಮುಗಿಸಿ, ತೊಳೆದು ನೀಟಾಗಿ ಒರೆಸಿ, ಮೊದಲು ಕಂಪನಿ ಕಪ್ಪು ಇದ್ದ ಜಾಗದಲ್ಲಿ ಇಟ್ಟೆ, ಇನ್ನೂ ಪಾಕಶಾಲೆಲ್ಲೇ ಇದ್ದ ಅವಳ ಕರೆತಂದು ತೋರಿಸಿದೆ, ಅವಳು ಅದನ್ನು ನೋಡಿ ನನ್ನತ್ತ ಇನ್ನೂ ಅಪರಾಧಿ ಪ್ರಜ್ಞೆಯಲ್ಲಿಯೇ ನೋಡುತ್ತಿದ್ದಳು, ನನ್ನ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.
"ನಿಮಗೆ ಸಿಟ್ಟು ಬಂದಿದ್ರೆ ಬಯ್ದು ಬಿಡಿ, ಹೀಗೇ ಸುಮ್ಮನಿರಬೇಡಿ" ಅಂದ್ಲು.
"ಸುಮ್ನೇ ಇದನ್ನು ಯಾಕೆ ತರೋಕೆ ಹೋದೆ" ಅಂತ ಮಾತು ಬದಲಿಸಿದೆ.
"ನಿಮಗೆ ಸಿಟ್ಟೆ ಬರಲಿಲ್ವಾ, ಬೇಜಾರು ಆಗ್ಲೇ ಇಲ್ವಾ? ಸುಳ್ಳು ಹೇಳ್ಬೇಡಿ, ನಾನು ಅದನ್ನು ತೆಗೆದುಕೊಂಡು ಬರ್ತಾ ಇದ್ನಾ, ಆಗಲೇ ತೊಳೆದಿದ್ದರಿಂದ ಇನ್ನೂ ನೀರಿತ್ತು ಜಾರುತ್ತಿತ್ತು, ಬಿಸಿ ತಾಕಿ ಕೈ ಬದಲಿಸಲು ಹೋದೆ ಬಿತ್ತು" ಅಂತ ಒಂದೇ ಸಮನೆ ಪಟಪಟ ಅಂತ ಹೇಳಿಕೊಂಡಳು.
"ಈಗ ಏನಾಯ್ತು ಅಂತ ನಾ ಕೇಳಿದೆನಾ, ನನಗೂ ಗೊತ್ತು ಯಾರೂ ಬೇಕೆಂತಲೇ ಚೆಲ್ಲಿ ಒಡೆಯುವುದಿಲ್ಲ ಅಂತ, ಎನೊ ಆಗಿರಬೇಕೆಂದು ಊಹಿಸಿದ್ದೆ, ಆ ಕ್ಷಣ ಆವೇಶ ಇತ್ತು, ಆದರೆ ಕೋಪ ಮಾಡಿಕೊಳ್ಳಲೇಬೇಕೆನಿಸಲಿಲ್ಲ, ಅದು ಒಡೆದು ಹೋಯ್ತಲ್ಲ ಅಂತ ಬೇಸರವಾಗಿತ್ತೇ ಹೊರತು ನೀನು ಒಡೆದೆ ಅಂತ ಅಲ್ಲ, ಇಷ್ಟಕ್ಕೂ ಸಿಟ್ಟು ಬಂದು ನಿನ್ನ ಬಯ್ದಿದ್ದರೆ ಏನಾಗುತ್ತಿತ್ತು, ಸುಮ್ನೇ ಬೇಜಾರಾಗುತ್ತಿತ್ತು ಇಬ್ಬರಿಗೂ... ಈಗ ನೋಡು ನನಗೆ ಮತ್ತೊಂದು ಸುಂದರ ಮಗ್ ಸಿಕ್ತು" ಅಂತ ನಕ್ಕೆ, ಸ್ವಲ್ಪ ನಿರಾಳವಾದಳು.
"ನಾನಾಗಿದ್ದರೆ ನಿಮ್ಮನ್ನು ಬಯ್ಯುತ್ತಿದ್ದೆ ಏನೊ", ಅಂತ ಮುಚ್ಚು ಮರೆಯಿಲ್ಲ ಮನದಲ್ಲಿದ್ದುದು ಹಾಗೆ ಹೇಳಿದಳು, ನಾನೂ ಹಾಗೆ ಮಾಡುತ್ತಿದ್ದೆ ಏನೊ, ಆದರೆ ಕ್ಷಣ ಹೊತ್ತು ಯೋಚಿಸಿದ್ದಕ್ಕೆ, ಹೀಗೆ ಆವೇಶದ ಭರದಲ್ಲಿ ಏನೂ ಮಾತಾಡಕೂಡದು ಅಂತ ಮೊದಲೇ ಅಂದುಕೊಂಡಿದ್ದಕ್ಕೆ ಎಲ್ಲ ಸರಿ ಹೋಯ್ತು.
"ಮತ್ತೆ, ಇನ್ನೂ ನೋವಿದೆಯಾ" ಅಂತ ಕೈ ಹಿಡಿದು ಕೇಳಿದೆ
"ಇಲ್ಲ ಪರವಾಗಿಲ್ಲ" ಅಂದವಳು, "ರೀ, ಕಂಪನಿಯಲ್ಲಿ ಕೇಳ್ರೀ ಇನ್ನೊಂದು ಕಪ್ಪು ಕೊಡ್ತಾರಾ" ಅಂತ ಕೇಳಿದಳು, ಅವಳು ಇನ್ನೂ ಆ ಕಪ್ಪಿನ ಗುಂಗಿನಲ್ಲೇ ಇದ್ದಳು.
"ಲೇ ಸುಮ್ನಿರೇ, ಮೊದಲೇ ಈಗ ರೆಸೆಷನಿಂದ ಹೊರಗೆ ಬರ್ತಾ ಇದಾರೆ, ಹೀಗೆಲ್ಲ ಹೋಗಿ ಕಪ್ಪು ಕೇಳಿದ್ರೆ ಕೈಗೆ ಚೊಂಬು ಕೊಡ್ತಾರೆ ಅಷ್ಟೇ" ಅಂದೆ ಇಬ್ಬರೂ ಮನಪೂರ್ತಿ ನಕ್ಕೆವು. "ಈ ನೋವಿಗೆ ನನ್ನ ಹತ್ರ ಒಂದು ಒಳ್ಳೆ ನೋವು ನಿವಾರಕ ಇದೆ ಕೊಡ್ತೀನಿ ತಾಳು" ಅಂತ ಅವಳ ಕೈ ನನ್ನ ತುಟಿಯೆಡೆಗೆ ಒಯ್ದೆ, "ಈ ತುಂಟಾಟಕ್ಕೇನು ಕಮ್ಮಿಯಿಲ್ಲ" ಅಂತ ಕೊಸರಿಕೊಂಡು ಓಡಿದಳು ನಸುನಗುತ್ತ. ಮತ್ತೆ ಹೀಗೆ ಏನೊ ಸನ್ನಿವೇಷದೊಂದಿಗೆ ಸಿಕ್ತೀನಿ ಕಂಪನಿ ಕೊಡ್ತೀರಾ ತಾನೇ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/kappu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, November 22, 2009

ಐವತ್ತರ ಸಂಭ್ರಮ : ನನ್ನಾk++

ರಜೆ ಅಂದರೆ ಮುಂಜಾವನ್ನು ಸ್ವಲ್ಪ ಮುಂದೂಡಿ ಮಲಗಿಬಿಡುವುದರಿಂದ, ಏಳಾದರೂ ಏಳಲೇಬೇಕೆನ್ನಿಸಿರಲಿಲ್ಲ, ಬಹಳ ಚಳಿ ಅಲ್ವಾ ಅದಕ್ಕೆ ನನ್ನ ಬಳಿಯಿಂದ ಬಿಡುಗಡೆ ಸಿಗದೇ ಬೆಚ್ಚಗೆ ತಾಚಿ ಮಾಡುತ್ತಿದ್ದಳು ತುಂಟಿ ನನ್ನಾಕೆ ನನ್ನ ಜತೆಗೇ... ಹೀಗಿರುವುದನ್ನು ನೋಡಲಾಗದೇ ಹೊಟ್ಟೆಯುರಿದು ವಾಣಿ(ದೂರವಾಣಿ) ಕಿರುಚಿಕೊಂಡಳು, "ಇವರಿಗೇನು ಹೆಂಡ್ತಿ ಮಕ್ಳು ಇಲ್ವಾ ಹೊತ್ಕೊಂಡು ಹಾಯಾಗಿ ಮಲಗೋದು ಬಿಟ್ಟು ಹೊತ್ತೇರೊ ಮುಂಚೇನೆ ಕರೆ ಮಾಡಿದಾರೆ" ಅಂತ ಗೊಣಗುತ್ತಲೇ ಫೋನೆತ್ತಿದರೆ, ಹಿನ್ನೆಲೆ ಸಂಗೀತದಂತೆ "ಎಲ್ರೂ ನಿಮ್ಮಂತೆ ಸುಖಜೀವಿಗಳಲ್ಲ ಬಿಡಿ" ಅನ್ನುತ್ತ ಹೆಗಲಿಗೆ ತಲೆಯಾನಿಸಿ ಹುಲ್ಲಿನ ಹೊರೆಗೆ ಹುರಿ(ಹಗ್ಗ) ಕಟ್ಟುವರಂತೆ ಬಿಗಿದಪ್ಪಿ ಬಿದ್ದುಕೊಂಡಳು, ಹಾಗಾಗಿ ಎದ್ದೇಳದೇ ಬಿದ್ದಲ್ಲಿಂದಲೇ ಮಾತಾಡತೊಡಗಿದೆ ಅವಳೂ ಕಿವಿಯಾದಳು, ಪರಿಚಯದವರೊಬ್ಬರು ಕರೆ ಮಾಡಿದ್ದರು, "ಮಲಗಿದ್ದಿರಿ ಅಂತ ಕಾಣ್ತದೆ" ಅಂತ ಆಕಡೆಯಿಂದ ಅಂದರೆ, ನಾವು ಹೀಗೆ ಮಲಗಿರುವುದು ಅವರಿಗೆ ಕಾಣ್ತಿದೆಯೋ ಏನೊ ಅನ್ನೊ ಸಂಶಯ ಬಂದು "ಏನು ನಿಮಗೆ ಕಾಣ್ತಿದೆಯೆ" ಅಂದೆ, "ಇಲ್ಲ ಹಾಗೆ ಊಹಿಸಿದೆ" ಅಂದ್ರು, ಹಾಗೋ ಸರಿ ಒಳ್ಳೆದಾಯ್ತು ಅಂದುಕೊಂಡು, ಅದೂ ಇದೂ ಹಾಳು ಮೂಳು ಮಾತಾಡಿದ್ದು ಆಯ್ತು, ಕೊನೆಗೆ "ಮತ್ತೇನು ವಿಶೇಷಾ, ಏನಂತಾರೆ ನಿಮ್ಮಾಕೆ" ಅಂತ ಸಾಂದರ್ಭಿಕವಾಗಿ ಕೇಳಿದರು, "ನನ್ನಾಕೆ ಏನಂತಾರೆ ಐವತ್ತು ಆಯ್ತಲ್ಲ" ಅಂದೆ, ಅಲ್ಲೇ ಮುಖ ತಿರುಗಿಸಿ ಹುಬ್ಬು ಗಂಟಿಕ್ಕಿ, ಹುರಿದು ತಿಂದು ಬಿಡುವಂತೆ ನೋಡಿದಳು, ಮತ್ತಿನ್ನೇನು ಇನ್ನೂ ಮೂವತ್ತೂ ಆಗದವಳಿಗೆ ಐವತ್ತು ಆಯಿತೆಂದರೆ, ಆಕಡೆಯಿಂದ ಅವರೂ "ಐವತ್ತಾ, ಜೋಕ್ ಮಾಡ್ತಿಲ್ಲ ತಾನೆ" ಅಂದ್ರು. ಇಬ್ಬರಿಗೂ ಉತ್ತರಿಸುವಂತೆ "ನನ್ನಾk ಲೇಖನಗಳು ಐವತ್ತು ಆಯ್ತು", ಅಂದೆ. ಫೋನಿಡುವುದಕ್ಕೂ ಬಿಡದೆ ಇವಳು ಉತ್ಸುಕತೆಯಲ್ಲಿ "ರೀ ಹೌದೇನ್ರಿ" ಅಂತ ಪುಟಿದೆದ್ದು ಕೂತು ಕೈಕುಲುಕಿ ಅಭಿನಂದಿಸಿಯೂಬಿಟ್ಟಳು, ವಾಣಿಯ ಪಕ್ಕ ಸರಿಸಿಟ್ಟು ಮೇಲೆದ್ದು ಕೂತರೆ "ರೀ ಏನಾದ್ರೂ ಹೊಸದು ಮಾಡೋಣ ಐವತ್ತನೇ ಲೇಖನಕ್ಕೆ" ಅಂತ ತಲೆ ಕೆರೆದುಕೊಳ್ಳುತ್ತ ಹೊಸ ಐಡಿಯಾಗಾಗಿ ತಡಕಾಡಿದಳು "ಏನೊ ಒಂದು ಬರೆದರಾಯ್ತು ಬಿಡು" ಅಂತಿದ್ದರೂ ಕೇಳದೇ, "ಈ ದೊಡ್ಡ ದೊಡ್ಡ ಸಾಹಿತಿಗಳಿಗೆ ಐವತ್ತೊ ನೂರೊ ವಯಸ್ಸಾದಾಗ ಪುಟ್ಟ ಸಂದರ್ಶನ ಮಾಡೊದಿಲ್ವೇ ಹಾಗೆ ಸಂದರ್ಶನ ಮಾಡುತ್ತೀನಿ ತಾಳಿ" ಅಂತ ಸಿದ್ಧವಾದಳು, ಸಾಹಿತಿ.. ನೀ ಸಾಯುತಿ ಅಂತ ಸಾಯಿಸ್ತಾಳೆ ಇಂದು ನಿಜವಾಗಲೂ ಅಂತ ಅನಿಸುತ್ತಿತ್ತು.

ಅವಳು ಸಂದರ್ಶಕಿಯಾದರೆ, ನಾನು ಉತ್ತರಿಸಲು ಕೂತೆ, "ಒನ್ ಟೂ ತ್ರೀ ಮೈಕ್ ಟೆಸ್ಟಿಂಗ ಮೈಕ್ ಟೆಸ್ಟಿಂಗ್" ಅಂತ ಪಕ್ಕದಲ್ಲಿದ್ದ ಟಾರ್ಚನ್ನೇ ಮೈಕನಂತೆ ಹಿಡಿದಳು, "ಲೇ ಒಳ್ಳೆ ಚುನಾವಣಾ ರ್‍ಯಾಲಿನಲ್ಲಿ ಭಾಶಣದ ಮೈಕ್ ಟೆಸ್ಟ ಮಾಡಿದ ಹಾಗೆ ಮಾಡ್ತಾ ಇದೀಯಾ, ಸಂದರ್ಶನದಲ್ಲಿ ಎಲ್ಲ ಹಾಗೆ ಮಾಡಲ್ಲ" ಅಂದ್ರೆ, "ಈಗ ಸಂದರ್ಶಕಿ ಯಾರು, ನಾನು... ಸುಮ್ನೇ ಕೂತ್ಕೊಳ್ಳಿ" ಅಂತ ಅಬ್ಬರಿಸಿದಳು.

"ಈ ದಿನ ನಮ್ಮ ಜತೆ ನನ್ನಾk ಲೇಖನ ಬರೆಯುವ ಲೇಖk, ಗಣk ಅಭಿಯಾಂತ್ರಿk, ಯುವk ನಮ್ಮೊಂದಿಗಿದ್ದಾರೆ, ಅವರ ಬಗ್ಗೆ ಜಾಸ್ತಿ ಏನು ಹೇಳೊದು ಹುಟ್ಟಿನಿಂದ ಹೊಟ್ಟೆ ಹೊರೆಯುವ ಉದ್ಯೋಗದವರೆಗೆ ಅವರ ವೆಬಸೈಟಿನಲ್ಲಿ ಉದ್ದುದ್ದಕ್ಕೆ ಬರೆದುಕೊಂಡಿದ್ದಾರೆ, ಹೊಗಳಿಕೊಂಡಿದ್ದಾರೆ, ಅದೆಲ್ಲಾ ನಂಬೋಕೇ ಹೋಗಬೇಡಿ, ನಂಬಿದರೆ ಕಿವಿಮೇಲೆ ಹೂವ ಏನು ಹೂವಿನ ಕುಂಡವನ್ನೇ ಇಡ್ತಾರೆ, ಅದನ್ನ ಬಿಟ್ಟು ಹೊಸದನ್ನೇನಾದರೂ ಕೇಳೊಣ ಅಂತ ಇಲ್ಲಿ ನಮ್ಮೊಂದಿಗಿದ್ದಾರೆ, ಬನ್ನಿ ಮಾತಾಡೋಣ..." ಅಂತ ಚಿಕ್ಕ ಕಿರು ಪರಿಚಯ ನೀಡಿದಳು "ಅಲ್ಲಾ ನೀವು ಏನು ಹೊಗಳ್ತಾ ಇದೀರೊ, ತೆಗಳ್ತಾ ಇದೀರೊ ಏನ್ ಕಥೆ, ರೇಶಿಮೇ ವಸ್ತ್ರದಲ್ಲಿ ಮುಚ್ಚಿ ಚಪ್ಪಲಿಯಲ್ಲಿ ಏಟು ಕೊಟ್ಟಹಾಗಿದೆ" ಅಂದೆ. "ನಾವು ಕೇಳೊ ಪ್ರಶ್ನೆಗಳಿಗೆ ಉತ್ತರ ಕೊಡ್ರಿ, ನಮಗೆ ಹೇಗೆ ಬೇಕೊ ಹಾಗೆ ತಿರುಚಿ ಬರೆದುಕೊಳ್ತೀವಿ" ಅಂತ ಪಕ್ಕಾ ಸಂದರ್ಶನದ ಬಿಸಿ ತಲುಪಿಸಿದಳು, ಹಾಟ್ ಸೀಟ್ ಮೇಲೆ ಕುಳಿತಾಗಿದೆ ಎನೂ ಮಾಡೊಕಾಗಲ್ಲ ಅಂತ ಸುಮ್ಮನಾದೆ.
***
ಸಂದರ್ಶಕಿ: ಕೆಲ ದಿನಗಳ ಹಿಂದೆ, ನಿಮಗೆ ಅಪಘಾತ ಆಗಿತ್ತು ಹೇಗೊ ದೇವರ ದಯೆ ಇಂದು ನಮ್ಮೊಂದಿಗೆ ಕೂತು ಮಾತಾಡುತ್ತಿದ್ದೀರಿ, ಆ ದಿನ ರಸ್ತೇಲಿ ಹಾಗೆ ಬಿದ್ದುಕೊಂಡಿದ್ದರಲ್ಲ ಹೇಗನ್ನಿಸ್ತಾ ಇತ್ತು ನಿಮಗೆ?
ನಾನು: ಬಹಳ ಚೆನ್ನಾಗಿತ್ತು, ಯಾರಾದ್ರೂ ಬಂದು ಹೊದಿಕೆ ಒಂದು ಹೊದಿಸಿ ಒಂದು ತಲೆದಿಂಬು ಕೊಟ್ರೆ ಇನ್ನೂ ಚೆನ್ನಾಗಿರುತ್ತೆ ಅನಿಸ್ತಾ ಇತ್ತು, ರೀ ಎನ್ ಪ್ರಶ್ನೇ ಅಂತಾ ಕೇಳ್ತೀರಾ, ರಸ್ತೆ ನಡುವೆ ಬಿದ್ಕೊಂಡಿದ್ದೆ, ಹಿಂದೆ ಏನಾದ್ರೂ ಕಾರು ಗೀರು ಬಂದ್ರೆ ಏನಾಗಿರಬೇಡ, ಹೇಗನ್ನಿಸುತ್ತೇ ಅಂತೆ, ಅಪಘಾತದ ಆಘಾತದ ಬಗ್ಗೆ ಏನ್ರೀ ಗೊತ್ತು ನಿಮಗೆ, ಒಳ್ಳೆ ನ್ಯೂಜ್ ಚಾನಲ್ಲಿನವರ ಹಾಗೆ ಎಲ್ಲೊ ಅಪಘಾತದಲ್ಲಿ ಸಿಲುಕಿ ಗಾಯ ಅಗಿರುವವರ ಮುಂದೆ ನಿಂತು 'ಹೇಗನಿಸ್ತಾ ಇದೆ ನಿಮಗೆ ಈಗ' ಅಂತ ಕೇಳಿದ ಹಾಗೆ ಕೇಳ್ತಿದೀರಾ
ನಾನು ಹಾಗೆ ಸಿಡುಕಿದ್ದು ನೋಡಿ, ಸಂದರ್ಶಕಿ ಹೆದರಿ, ಇಲ್ಲ ಬಿಡಿ ಆ ವಿಷಯ ಬೇಡ ಅಂತ ಹೊಸ ಬೇರೆ ಏನಾದ್ರೂ ಮಾತಾಡೊಣ ಅಂತ ವಿಷಯ ಬದಲಾಯಿಸಿದಳು.
***
ಸಂ: ನಿಮ್ಮ ಜತೆ ನಿಮ್ಮಾಕೆಯನ್ನೂ ಕರೆತರಬಹುದಿತ್ತಲ್ಲ, ಯಾಕೆ ಬಂದಿಲ್ಲ, ಏನಾದ್ರೂ...?
ನಾ: ಅವಳು ತವರುಮನೆಗೆ ಹೋಗಿದಾಳೆ, ಇಲ್ಲಾಂದ್ರೆ ಬಂದಿರ್ತಾ ಇದ್ಲು, ನೀವು ಹೀಗೆ ಪ್ರಶ್ನೆ ಕೇಳಿ ಏನು ಜಗಳ ಇಲ್ದೇ ಇದ್ರೂನೂ, ಏನೊ ಕಥೆ ಹುಟ್ಟಿಸಿ ಬಿರುಕು ಮೂಡಿಸಿಬಿಡ್ತೀರಾ ನಂಗೊತ್ತಿಲ್ವಾ.
ಹಾಗಂದು ಅವರಿಗೆ ಸರಿಯಾದ ತಿರುಗೇಟೇ ನೀಡಿದೆ.
***
ಸಂ: ಸರಿ ಸರಿ, ನಿಮ್ಮಾಕೆ ತವರುಮನೆಗೆ ಹೋಗಿದಾರೆ ಒಪ್ಕೋತೀವಿ, ಹಾಗೆ ಒಂದು ದಿನ ನಿಮ್ಮಾಕೆ ನಿಮ್ಮನ್ನ ಬಿಟ್ಟು ಹೊರಟು ಹೋದ್ರೆ ಏನ್ ಮಾಡ್ತೀರಾ? ಹಾಗಾಗದಿರಲಿ ಅಂತಾನೇ ನಮ್ಮಾಸೆ ಆದರೆ ಹಾಗೆ ಬಿಟ್ಟು ಹೋದರೆ?
ನಾ: ಅವಳೆಲ್ಲಿ ಹೋಗ್ತಾಳೆ? ಎಲ್ಲೂ ಹೋಗಲ್ಲ ನನ್ನ ಮನಸಲ್ಲಿ ಸದಾ ಇದ್ದೇ ಇರ್ತಾಳೆ, ಹಾಗೊಂದು ವೇಳೆ ಬಿಟ್ಟು ಹೋದರೂ ಹುಚ್ಚನಾಗಿ ನಿಮಗೆ ಇನ್ನೊಂದು ಸುದ್ದಿಯಂತೂ ಆಗಲ್ಲ ಬಿಡಿ, ಅವಳೊಂದು ಕನಸು, ಆ ಕನಸು ಕಮರಲು ಬಿಡುವುದಿಲ್ಲ, ನಾನಿರುವವರೆಗೆ ನನ್ನಾk ನನ್ನೊಂದಿಗೇ...
***
ಸಂ: ನೀವು ಅತ್ಯಂತ ಪ್ರೀತಿಸುವ ಹುಡುಗಿ ಯಾರು?
ನಾ: ಹೀಗೆ ಥಟ್ ಅಂತ ಹೇಳಿ ಅಂತ ಕೇಳಿದ್ರೆ ಯಾರು ಅಂತ ಹೇಳೊದು... ಆಯ್ಕೆ ಕೊಡ್ರಿ ಆರಿಸೋಕೆ.
ಹಾಂ, ಇದಕ್ಕೆ ಆಯ್ಕೆ ಬೇರೆ ಬೇಕಾ ನಿಮಗೆ, ಎಷ್ಟು ಜನರನ್ನ ಪ್ರೀತಿಸ್ತೀರಾ? ಅಂತ ಕಿವಿ ಹಿಡಿದಳು, "ಲೇ ಲೇ ಬಿಡೆ ನಿನ್ನಲ್ಲದೇ ಇನ್ಯಾರನ್ನೇ ಪ್ರೀತ್ಸೊದು" ಅಂತ ಬಿಡಿಸಿಕೊಂಡೆ.
***
ಸಂ: ನಿಮ್ಮಾಕೆಯನ್ನ ಬಿಟ್ಟರೆ, ಇನ್ನೊಬ್ಬರು ಯಾರನ್ನ ಬಿಟ್ಟಿರೊಕೆ ನಿಮ್ಮಿಂದ ಆಗಲ್ಲ?
ನಾ: ವಾಣಿನಾ... ವಾಣಿ ಅಂದ್ರೆ ಬೇರೆ ಯಾರೊ ಹುಡುಗಿ ಅಲ್ಲ ಕಣ್ರೀ, ಮತ್ತೆ ಹೊಸ ಗಾಸಿಪ್ಪು ಏನೂ ಹುಟ್ಟು ಹಾಕಬೇಡಿ, ವಾಣಿ ಅಂದ್ರೆ ದೂರವಾಣಿ, ನನ್ನ ಮೊಬೈಲು, ಅವಳಿಲ್ದೇ ಒಂದು ದಿನ ಕೂಡ ಊಹಿಸಲಾಗಲ್ಲ :)
***
ಸಂ: ಸಿಟ್ಟು ಜಾಸ್ತಿ ಅಂತೆ ನಿಮಗೆ? ನಿಮಗೆ ತುಂಬಾ ಸಿಟ್ಟು ಬಂದ ಪ್ರಸಂಗ ಯಾವುದಾದ್ರೂ ನಮ್ಮೊಂದಿಗೆ ಹಂಚಿಕೊಳ್ತೀರಾ?
ನಾ: ಹೂಂ, ಸ್ವಲ್ಪ ಮುಂಗೋಪ, ಈಗೀಗ ಬಹಳ ಕಮ್ಮಿಯಾಗಿದೆ ಆದ್ರೂ ಬಹಳ ಸಿಟ್ಟು ಬಂದದ್ದು ಅಂದ್ರೆ, ಅದೊಂದು ದಿನ ನನ್ನಾk ಊರಿಂದ ವಾಪಾಸು ಬಂದಾಗ ನೀಲವೇಣಿಯಿಂದ nilವೇಣಿ ಆಗಿಬಿಟ್ಟಿದ್ಲು, ಅಲ್ಲಾ ಅಷ್ಟುದ್ದ ಅಂದವಾದ ಕೂದಲು ಯಾಕೆ ಹಾಗೆ ಹೇಳದೇ ಕೇಳದೆ ಕತ್ತರಿಸಿಹಾಕಿದ್ಲು ಅಂತ ತುಂಬಾ ಸಿಟ್ಟು ಬಂದಿತ್ತು, ಮತ್ತೆ ಬರದೇ ಇರುತ್ತಾ ಆ ವೇಣಿಯೊಂದಿಗೆ ಹಲವು ಕೀಟಲೆ ಮಾಡಿದ್ದು ಎಲ್ಲಾ ಅಳಿಸಿ ಹಾಕಿದಂತಾಗಿತ್ತಲ್ಲ. ಈಗ ಮತ್ತೆ ಅವಳು ನೀಲವೇಣಿಯೇ...
ಹಾಗನ್ನೋದೇ ತಡ, ಖುಷಿಯಾಗಿ ತನ್ನ ಜಡೆ ತುದಿ ಕೂದಲಿನಲ್ಲಿ ಕಚಗುಳಿಯಿಟ್ಟಳು.
***
ಸಂ: ನೀವು ವೃತ್ತಿಯಲ್ಲಿ ಐಟಿ ಉದ್ಯೋಗಿ, ಕೋಡು ಕುಟ್ಟೋದು ಬಿಟ್ಟು ಈ ಕಥೆ ಕವನದ ಗೀಳು ಹೇಗೆ ಬಂತು?
ನಾ: ಹಾಗೆ ನೋಡಿದರೆ ನಾನು ಕಾನನದ codeಕೋಣವೇ ಸರಿ, ಕೋಡ ಬರೆಯುವುದ ಬಿಟ್ಟರೆ ಬೇರೇ ಏನೂ ಜಾಸ್ತಿ ಗೊತ್ತಿಲ್ಲ, ಅದು ವೃತ್ತಿ, ಇನ್ನು ಪ್ರವೃತ್ತಿ ಅಂತ ಒಂದಿರುತ್ತೆ ನೋಡಿ, ಅದೇ ಇದು, ಮನದಲ್ಲಿನ ಹಲವು ವಿಚಿತ್ರ, ಹುಚ್ಚು ಕನಸುಗಳನ್ನು ಬರೆಯುವ ಪ್ರಯತ್ನ.
***
ಸಂ: ಸರಿ ಈ ನನ್ನಾk ಅಂತ ಪಾತ್ರ ಸೃಷ್ಟಿ ಮಾಡಿ ಬರೆಯೋಕೆ ಶುರು ಮಾಡಿದ್ದು ಹೇಗೆ?
ನಾ: ಹಾಗೇ ಸುಮ್ಮನೇ, ಅಂತ ಹೇಳಿದ್ರೆ ಸಿನಿಮಾ ಹೆಸರು ಅಂತೀರಾ, ಆದ್ರೆ ಶುರುವಾಗಿದ್ದೇ ಹಾಗೇ... ಒಂದಿನಾ ಸಹುದ್ಯೊಗಿ ಕಳಿಸಿದ ಒಂದು ಈ ಥರದ ರಸನಿಮಿಷಗಳ ಕಥೆ ಓದಿ, ತಲೆಯಲ್ಲಿ ಒಂದು ಐಡಿಯಾ ಬಂತು ನನ್ನಾಕೆ ಅಂತ ಒಬ್ಬಳಿದ್ದಿದ್ದರೆ ಹೇಗೆಲ್ಲ ನಾನಿರುತ್ತಿದ್ದೆ ಅಂತ ಬರೆಯಬೇಕನಿಸಿತು, ಅದನ್ನೇ ಬರೆದೆ... ಚೆನ್ನಾಗಿದೆ ಬ್ಲಾಗಗೆ ಹಾಕು ಅಂದ್ರು ಗೆಳೆಯರು... ಹಾಕಿದೆ, ಬಹಳ ಜನ ಓದಿ ಬೆಂಬಲಿಸಿದರು, ಹಾಗೆ ಇಲ್ಲೀವರೆಗೆ ಬಂದು ತಲುಪಿಬಿಟ್ಟೆ.
***
ಸಂ: ಮದುವೇನೇ ಆಗಿಲ್ಲ ಅಂತೀರಾ? ನಿಜಾನಾ?
ನಾ: ಇಲ್ಲ ಇನ್ನೂ ಆಗಿಲ್ಲ, ಇದೊಂಥರಾ ಹುಡುಗಾಟ, ಹುಡುಕಾಟ ಕೂಡ ಇನ್ನೂ ಶುರುವಾಗಿಲ್ಲ, ಇಲ್ಲಿ ಬರುವ ನನ್ನಾk ಒಂದು ಸುಂದರ ಕಲ್ಪನೆ ಮಾತ್ರ.
ಇದನ್ನ ಕೇಳಿ, ಅವಳು ಬೇಜಾರಾಗಿ "ಏನಂದ್ರಿ, ನಾನು ಬರೀ ಕಲ್ಪನೆನಾ?" ಅಂತ ಪೆಚ್ಚುಮೋರೆ ಹಾಕಿದ್ಲು, "ಹ್ಮ್ ಹಾಗಲ್ಲ ಕಣೇ, ವಾಸ್ತವಾಗಲು ಕಾದಿರುವ ಕನಸು ನೀನು, ಒಂದಲ್ಲ ಒಂದು ದಿನ ಈ ಕಲ್ಪನೆ ನನ್ನ ಕಣ್ಣ ಮುಂದೆ ನಿಂತಿರುತ್ತೆ" ಅಂತ ಸಮಾಧಾನಿಸಬೇಕಾಯ್ತು, ಆ ಮಾತಿಗೆ ಪುಳಕಗೊಂಡಳು.
***
ಸಂ: ಅಲ್ಲಾ ಇಷ್ಟೆಲ್ಲ ಬರೆಯೋಕೆ ಯಾವಾಗ ಸಮಯ ಸಿಗುತ್ತೇ ನಿಮಗೆ? ಯಾವಾಗ ನೋಡಿದ್ರೂ ಬೀಜೀ ಅಂತೀರಾ ಮತ್ತೆ.
ನಾ: ವೀಕೆಂಡಿನಲ್ಲಿ ಹಾಗೆ ಸ್ವಲ್ಪ ಸಮಯ ಮಾಡ್ಕೊತೀನಿ, ಬೇರೆ ಎನೂ ಇಲ್ದೇ ಸುಮ್ನೇ ಕೂರೊದಂದ್ರೆ ಸುಮ್ನೇನಾ, ಸಾಧ್ಯ ಆದಾಗಲೆಲ್ಲ ಕಂಡ ಕನಸುಗಳನ್ನೆಲ್ಲ ಪೋಣಿಸಿ ಬರೆದು ಬೀಸಾಕುತ್ತೇನೆ, ಪ್ರತೀ ದಿನ ಪ್ರತೀ ಘಟನೆಯಲ್ಲೂ ನನ್ನಾಕೆ ಇದ್ದಿದ್ದರೆ ಹೇಗಿರುತ್ತಿತ್ತು ಅಂತ ಯೋಚನೆ ಇದ್ದೇ ಇರುತ್ತದೆ, ಅದರಲ್ಲೇ ಯಾವುದೋ ಒಂದು ಹೆಕ್ಕಿ ತೆಗೆದು ಬರೆದರೆ ಒಂದು ಲೇಖನವಾಯ್ತು.
***
ಸಂ: ಈ ನಿಮ್ಮ ಕಲ್ಪನೆಗೆ ಸ್ಪೂರ್ಥಿ ಯಾರು?
ನಾ: ಸ್ಪೂರ್ಥಿನಾ, ಯಾರ್ಯಾರು ಅಂತ ಹೇಳಲಿ, ಬಸ್ಸಿನಲ್ಲಿ ಕಂಡ ಬೆಡಗಿ, ಟ್ರಾಫಿಕ್ ಸಿಗ್ನಲ್ಲಿನಲ್ಲಿ ಸಿಕ್ಕ ಹುಡುಗಿ, ಯಾರದೋ ಕಣ್ಣು, ಯಾರದೊ ನಗು, ಯಾರದೋ ನಡೆ ನುಡಿ, ಮತ್ತಿನ್ಯಾರದೋ ಮೌನ... ಹೀಗೆ ಬರೆಯಲು ಸ್ಪೂರ್ಥಿಯಾದವರೊ ಎಷ್ಟೊ ನನಗೇ ಗೊತ್ತಿಲ್ಲ... ಧೋ ಅಂತ ಮಳೆ ಸುರಿಯುತ್ತಿದ್ದರೆ ನೀರು ತೊಟ್ಟಿಕ್ಕುವಂತೆ ನೆನೆದಿದ್ದ ಆ ಮಳೆ ಹುಡುಗಿ ಕೂಡ ಸ್ಪೂರ್ಥಿಯೇ.
***
ಸಂ: ಓದುಗರ ಪ್ರತಿಕ್ರಿಯೆ ಹೇಗಿದೆ? ಪ್ರೇಮ ಪತ್ರ ಎಲ್ಲ ಬಂದಿದೆಯಾ? :)
ನಾ: ಸಧ್ಯ ಪ್ರೇಮ ಸಂದೇಶ ಯಾವುದೂ ಬಂದಿಲ್ಲ, ಬಂದಿರುವುದೆಲ್ಲ ಸ್ನೇಹ ಸಂದೇಶಗಳೇ, ಅನ್ನೊದೇ ಖುಷಿ, ಬಹಳ ಜನ ಪರಿಚಯವಾಗಿದ್ದಾರೆ, ಸ್ನೇಹಿತರಾಗಿದ್ದಾರೆ, ಹಿತೈಷಿಗಳಾಗಿದ್ದಾರೆ, ಅವರಿಗೆಲ್ಲ ನಾ ಚಿರಋಣಿ.
***
ಸಂ: ನಿಮ್ಮಾಕೆ ಏನಂತಾರೆ ನಿಮ್ಮ ಬಗ್ಗೆ?
ನಾ: ಅವಳ ಮಾತಿನಲ್ಲೇ ಹೇಳೊದಾದ್ರೆ... "ಹತ್ತು ಹಲವು ಕಲ್ಪನೆಗಳ ಹುಚ್ಚು ಹುಡುಗ", ಅಂಥ ಹುಚ್ಚುತನವನ್ನೇ ಮೆಚ್ಚುವ ಹುಚ್ಚಿ ಅವಳು.
***
ಸಂ: ಈ ವಯಸ್ಸಿನಲ್ಲೇ ಇಷ್ಟೆಲ್ಲ ಕನಸುಗಳಾ?
ನಾ: ಅಯ್ಯೋ ಕನಸು ಕಾಣದಿರಲು ನನಗೇನು ವಯಸ್ಸಾಯ್ತಾ? ಇಷ್ಟಕ್ಕೂ ಕನಸಿಗೂ ವಯಸ್ಸಿಗೂ ಏನು ಸಂಭಂದ. ಈ ವಯಸ್ಸಿನಲ್ಲಿ ಹೀಗೆ ಕನಸುಗಳಿರದೇ ಏನಿರಲು ಸಾಧ್ಯ, ನನ್ನ ಕನಸುಗಳಿಗೆ ಕೊನೆಯುಸಿರುವರೆಗೂ ಕೊನೆಯಿಲ್ಲ.
***
ಸಂ: ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಾ: ಅಲ್ಲ ನನ್ನ ಈ ಐವತ್ತು ಲೇಖನ ಓದಿದಮೇಲೂ ಮದುವೆ ಯಾಕಾಗಬೇಕು ಅಂತನಿಸಿದರೆ ಆಗಲೇಬೇಡಿ. ಮಾನವ ಸಂಘಜೀವಿ ಕಣ್ರೀ, ಜೀವಕ್ಕೆ ಜೊತೆಯಾಗಿ ಸಂಗಾತಿ ಇರಲಿ ಅಂತಾನೆ ಮದುವೆ ಮಾಡಿದ್ದು.
***
ಸಂ: ಆಯ್ತು ಮದುವೆ ಬಿಡಿ, ಹಾಗಾದ್ರೆ ಪ್ರೀತಿ ಬಗ್ಗೆ ಏನಂತೀರ?
ನಾ: ಪ್ರೀತ್ಸೊದ ತಪ್ಪಾ? ಮದುವೆ ಆದಮೇಲೂ ಪ್ರೀತಿ ತಾನೆ ಆ ಬಂಧನವನ್ನು ಗಟ್ಟಿಯಾಗಿಡೊದು. ಆದರೆ ಈ ಹದಿಹರೆಯದ ಆಕರ್ಷಣೆಯೇ ಪ್ರೀತಿ ಅಂತಂದುಕೊಳ್ಳೋದು ತಪ್ಪು, ಹಾಗೆ ತಪ್ಪುಗಳಾಗುವುದನ್ನು ನೋಡಿದರೆ ಬೇಜಾರಾಗುತ್ತದೆ.
***
ಸಂ: ಪಾಕಶಾಲೆ ಬಗ್ಗೆ ಬಹಳ ಬರೀತಾ ಇರ್ತೀರಾ? ಅಡುಗೆ ಮಾಡೊಕೆ ಬರ್ತದಾ?
ನಾ: ನಾನೇನೊ ಮಾಡ್ತೀನಿ ಅಂದ್ರೂ ಅವಳು ಬಿಡಲ್ಲ, ನಳಪಾಕವಂತೂ ಬರಲ್ಲ, ನಾ ಮಾಡಿದ್ದು ನಾ ತಿನ್ನುವ ಮಟ್ಟಿಗಾದರೂ ಚೆನ್ನಾಗಿರುತ್ತದೆ, ಆದ್ರೂ ಏನೇ ಅನ್ನಿ ಉಪ್ಪು ಹೆಚ್ಚಾದರೂ ಅವಳು ಮಾಡಿದ್ದರೆ ಉಪ್ಪುಪ್ಪಿಟ್ಟು ಕೂಡ ರುಚಿಯಾಗಿರುತ್ತದೆ.
***
ಸಂ: ಮೊದಲೆಲ್ಲ ಬರೀ ಹಾಸ್ಯ ಕಥೆ ಇರ್ತಾ ಇತ್ತು, ಲೇಖನದಲ್ಲಿ ಏನೊ ಒಳ್ಳೇ ಒಳ್ಳೇ ಮೆಸೇಜು ಕೊಡ್ತಾ ಇದೀರಲ್ಲ, ಏನು ಸಮಾಜ ಸೇವೆನಾ?
ನಾ: ಹೌದು ಬರೀ ನಗಿಸುವ ನಲಿವಿನ ಲೇಖನಗಳೆ ಬರೆಯುತ್ತಿದ್ದೆ, ಸಮಾಜ ಸೇವೆ ಅಂತೇನೂ ಇಲ್ಲ, ಒಬ್ರು ಇದರ ಜತೆಗೆ ಒಳ್ಳೇ ಮೆಸೇಜು ಕೊಡಿ ಅಂತ ಸಲಹೆ ನೀಡಿದ್ರು ನನಗೂ ಸರಿಯೆನ್ನಿಸಿತು, ಬರೀ ದುಡ್ಡು ದುಡ್ಡು ಅಂತ ಕೆಲ್ಸ ಮಾಡ್ತಾ ಇದ್ರೆ, ಜೀವನದ ಮೌಲ್ಯಗಳ ಅರಿವು ಆಗೋದು ಯಾವಾಗ? ಅದಕ್ಕೆ ಆ ಮೌಲ್ಯಗಳ ಬಗ್ಗೆ ಬರೆಯತೊಡಗಿದೆ, ತೀರ ಗಂಭೀರವಾಗಿ ಹೇಳಿದ್ರೆ ಯಾರೂ ಓದಲ್ಲ ಅಂತ ಹಾಸ್ಯದೊಂದಿಗೆ ಹಾಗೆ ಒಂದು ಮೆಸೇಜು ಇರ್ತದೆ.
***
ಸಂ: ಇಷ್ಟೆಲ್ಲಾ ಕಷ್ಟಪಟ್ಟು ಇದೆಲ್ಲ ಮಾಡಿ ನಿಮಗೇನು ಲಾಭ?
ನಾ: ಹತ್ತರಲ್ಲಿ ಹನ್ನೊಂದರಂತೆ ಹೀಗೆ ಹುಟ್ಟಿ ಸತ್ತು ಹೋದರೆ ಏನಾಯ್ತು ಹೇಳಿ, ನಾಳೆ ಹೀಗೊಬ್ಬ ಇದ್ದ, ಹೀಗೆ ಬರೀತಾ ಇದ್ದ ಅಂತ ಜನ ನೆನಪಿಡ್ತಾರಲ್ಲ, ಅದೇ ಸಾಕು, ಎಷ್ಟೊ ದಂಪತಿಗಳು ನಿಮ್ಮ ಲೇಖನ ಓದಿ ನಮ್ಮ ಜೀವನ ಸ್ವಲ್ಪ ಸುಧಾರಿಸಿದೆ ಅಂತಾನೋ, ಯಾರೊ ತಮ್ಮ ಭಾವಿ ಜೀವನಕ್ಕೆ ನಿಮ್ಮಿಂದ ಇನ್ನಷ್ಟು ಕನಸುಗಳು ಸಿಕ್ಕಿವೆ ಅಂತಾನೊ ಪತ್ರ ಬರೀತಾರಲ್ಲ ಅದರ ಮುಂದೆ ಇನ್ನಾವ ಲಾಭ ಬೇಕು ಹೇಳಿ, ಆ ತೃಪ್ತಿಯೆ ನನಗೆ ಲಾಭ, ನಾಳೆ ನನ್ನಾಕೆ ಇದನ್ನ ಓದಿ ಕನಸುಗಳು ನನಸಾದ್ರೆ ಅದಕ್ಕಿಂತ ಲಾಭ ಏನಿದೆ.
***
ಸಂ: ಒಂದು ವೇಳೆ ನಿಮಗೆ ಕೋಟಿ ರೂಪಾಯಿ ಲಾಟರಿಯಲ್ಲಿ ಸಿಕ್ರೆ ಏನ್ ಮಾಡ್ತೀರಾ?
ನಾ: ಅಷ್ಟು ದುಡ್ಡಿನಲ್ಲಿ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಲಂತೂ ಆಗಲ್ಲ, ಕೊನೇ ಪಕ್ಷ ಯಾವುದೋ ಕೆರೆಯಿಂದಾದರೂ ಕನೆಕ್ಷನ ಹಾಕಿಸ್ತೀನಿ, ನೀರಿನದು ದೊಡ್ಡ ಪ್ರಾಬ್ಲ್ಂ ಕಣ್ರೀ ನಮಗೆ.
"ಅಯ್ಯೋ ನಾನೇನೊ ನಾಲ್ಕು ಜನಕ್ಕೇ ಒಳ್ಳೇದಾಗೊ ಕೆಲಸ ಮಾಡ್ತೀರ ಅಂತ ಕೇಳಿದ್ರೆ ನೀವೇನ್ರಿ" ಅಂತ ಮೂಗು ಮುರಿದಳು, "ಸರಿ ಹಾಗಾದ್ರೆ ಬೋರವೆಲ್ ಕೆಟ್ಟರೆ ಪಕ್ಕದಮನೆ ಪದ್ದುಗೆ ನೀರು ಕೊಟ್ಟರಾಯ್ತು" ಅಂದೆ, "ಪಬ್ಲಿಕಗೆ ಹೆಲ್ಪ ಮಾಡು ಅಂದ್ರೆ ಪದ್ದುಗೆ ಹೆಲ್ಪ ಮಾಡ್ತಾರಂತೆ" ಅಂತ ಬಯ್ದಳು.
***
ಸಂ: ಯಾವ ಬಣ್ಣ ಇಷ್ಟ ನಿಮಗೆ?
ನಾ: ಹಾಗೆ ನೋಡಿದರೆ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲ ಬಣ್ಣಗಳೂ ಇಷ್ಟ, ಎಲ್ಲ ಬಣ್ಣ ಸೇರಿದ ಬಿಳಿ ಬಣ್ಣವೂ ಇಷ್ಟ ಅದರಲ್ಲೇ ಬಹಳ ಇಷ್ಟವಾಗುವ ಬಣ್ಣ ತಿಳಿನೀಲಿ ಬಣ್ಣ.
***
ಸಂ: ಬೇಜಾರಾದ್ರೆ, ಬಹಳ ದುಖಃ ಆದ್ರೆ ಏನ್ ಮಾಡ್ತೀರ?
ನಾ: ಅವಳಿದ್ರೆ ಕೀಟಲೆ, ಇಲ್ಲಾಂದ್ರೆ ಒಬ್ಬಂಟಿಯಾಗಿ ಕೂತು ಬಿಡ್ತೀನಿ, ಮನಸ್ಸಿನಲ್ಲಿ ಓಡುವ ಯೋಚನೆಗಳನ್ನು ಬೆಂಬತ್ತಿ ಹಿಡಿಯಲು ಪ್ರಯತ್ನಿಸುತ್ತ, ಕಾಡುವ ನೆನಪುಗಳ ಕೈಯಿಂದ ತಪ್ಪಿಸಿಕೊಳ್ಳುತ್ತ.
***
ಸಂ: ನಿಮಗಿಷ್ಟವಾದ ತಿಂಡಿ ತಿನಿಸು?
ನಾ: ಇಂಥದ್ದೇ ಅಂತೇನೂ ಇಲ್ಲ, ಅಮ್ಮನ ಕೈಯಡುಗೆ ರುಚಿ ಬಿಟ್ಟರೆ, ಅವಳು ಮಾಡುವ ತರ ತರನೆಯ ಹೊಸರುಚಿ ಟೀ ಕೂಡ ನನಗೆ ಇಷ್ಟ, ಅದಕ್ಕೆ ಓದುಗರೊಬ್ಬರು ನಿಮ್ಮ ಲೇಖನಗಳಲ್ಲಿ ಎಣಿಸಲಾಗದಷ್ಟು ಬಾರಿ ಟೀ ಹೀರಿದ್ದೀರಿ ಅಂತ ಬರೆದಿದ್ದರು!
***
ಸಂ: ಸರಿ, ಟೀ ಅಂತಿದ್ದಂತೆ ನೆನಪಾಯ್ತು, ನಮ್ಮ ಟೀ ಟೈಮ್ ಆಯ್ತು, ಕೊನೆಗೆ ನಿಮಗೇನಾದ್ರೂ ಕೇಳಬೇಕು ಅಂತಿದೆಯಾ?
ನಾ: ಪ್ರಳಯ ಆಗುತ್ತಂತೆ ನಿಜಾನಾ? ಯಾರಿಗಾದ್ರೂ ಗೊತ್ತಿದ್ರೆ ಹೇಳಿ ಪ್ಲೀಜ್, ಆಗೊದೇ ಆದ್ರೆ ಎರಡೇ ವರ್ಷದಲ್ಲಿ ಎರಡು ದಶಕದ ಜೀವನ ಜೀವಿಸಿಬಿಡ್ತೀನಿ :)
"ಈ ನಿಮ್ಮ ಪ್ರಳಯ ಆಗುತ್ತೊ ಇಲ್ವೋ ಮಾತಾಡುತ್ತ ಕೂತರೆ ಸಮಯ ಆಗತ್ತೆ ಏಳಿ, ಟೀ ಮಾಡ್ತೀನಿ" ಅಂತ ಎದ್ದು ಹೊರಟಳು, "ಕೇಳಿದ್ದಕ್ಕೆಲ್ಲ ಇಲ್ಲ ಅನ್ನದೇ ಉತ್ತರಿಸಿದೆ, ಕೊನೆಗೆ ಕೇಳು ಅಂದಿದಕ್ಕೆ ಒಂದು ಪ್ರಶ್ನೇ ಕೇಳಿದ್ರೆ ಹೀಗೆ ಉತ್ತರ ಕೊಡೊದಾ" ಅನ್ನುತ್ತ ಪಾಕಶಾಲೆಯೆಡೆಗೆ ನಡೆದರೆ "ರೀ ಹಾಲು ಖಾಲಿ, ಹಾಲಿನಂಗಡಿಯ ಹಾಸಿನಿನಾ ನೊಡ್ಕೊಂಡು ಬರಹೋಗಿ" ಅಂತ ಹಾಲು ತರಲು ಕಳಿಸಿದಳು, ಹಾಸಿನಿ ನೋಡುವ ಹುಮಸ್ಸಿನಲ್ಲಿ ಹೊರಟೆ... ಮತ್ತೆ ಸಿಕ್ತೀನಿ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...


ಕಳೆದ ವರ್ಷ ಇದೇ ದಿನವೇ(22 Nov 2008) ನನ್ನ ಮೊದಲ ನನ್ನಾಕೆ ಲೇಖನ ಬ್ಲಾಗಿಗೆ ಹಾಕಿದ್ದು, ಇಂದೇ ಈ ಲೇಖನದೊಂದಿಗೆ ಒಟ್ಟಿಗೆ ಐವತ್ತು ಲೇಖನಗಳಾಗಿವೆ, ಮೊದಲು ಬರೆದ ಇಪ್ಪತ್ತೈದು ಲೇಖನಗಳ ಬಗ್ಗೆ ಈ ಪತ್ರದಲ್ಲಿ ನೀವು ಓದಿರಬಹುದು, ಮೇಲಿನ ಉತ್ತರಗಳಲ್ಲಿ ಅನುಕ್ರಮವಾಗಿ ಮತ್ತೊಂದಿಷ್ಟು ಲೇಖನಗಳ ಹೆಸರು ಹುದುಗಿಸಿದ್ದೇನೆ, ಆಸಕ್ತಿಯಿದ್ದವರು ಅವನ್ನೂ ಓದಬಹುದು, ಎಲ್ಲ ಲೇಖನಗಳನ್ನೂ ಸೇರಿಸಿ, ನನ್ನಾk++ ಅಂತ ಐವತ್ತು ಲೇಖನಗಳ ಸಂಕಲನ ಕೊಡುತ್ತಿದ್ದೇನೆ, ನನ್ನ ಸೈಟಿನಿಂದ ಡೌನಲೋಡ ಮಾಡಿಕೊಂಡು ಸಮಯ ಸಿಕ್ಕಾಗ ಓದಬಹುದು ಹಾಗೂ ಸ್ನೇಹಿತರಿಗೂ ಹಂಚಬಹುದು, ಆ ಹೆಸರು ಯಾಕೆ ಅಂತೀರಾ, ಮೊದಲೇ ಐಟಿ ಉದ್ಯೋಗಿ, ಈ C ಆದಮೇಲೆ C++ ಅಂತ ಪ್ರೊಗ್ರಾಮಿಂಗ ಭಾಷೆ ಬರಲಿಲ್ಲವೇ ಹಾಗೆ ಇದೂ ಕೂಡ ನನ್ನಾk ನಂತರ ನನ್ನಾk++... :-), ಹೀಗೆ ನಿಮ್ಮ ಪ್ರೊತ್ಸಾಹ ಚಿರಕಾಲ ಇರಲಿ ಎಂಬ ಕೋರಿಕೆಯೊಂದಿಗೆ...


ನನ್ನಾk++ - 50 Posts single PDF document
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, November 15, 2009

ಪ್ರಳಯ ಆಗುತ್ತಂತೆ ನಿಜಾನಾ?

"ರೀ ರೀ.. ಎದ್ದೇಳ್ರೀ ಬೇಗ ಎದ್ದೇಳ್ರೀ..." ಅಂತ ತದಕುತ್ತಲೇ ಎದ್ದೇಳಿಸಿದಳು, "ನಾನೇನು ಸೂರ್ಯನಾ ನಾನು ಎದ್ದರೇ ಬೆಳಕು ಆಗೋಕೆ, ಬಿಡೇ ಸುಮ್ನೇ ಇನ್ನೂ ಸ್ವಲ್ಪ ಮಲಗೋಕೆ" ಅಂತ ಮತ್ತೆ ಮುಸುಕೆಳೆದರೆ, ಹೊದಿಕೆಯೇ ಕಿತ್ತೊಗೆದು ಗಾಬರಿಯಲ್ಲಿ ನೋಡುತ್ತಿದ್ದಳು, ಎಂದೂ ಹೀಗೆ ಅವಳಂತೂ ಎಬ್ಬಿಸಿಲ್ಲ, ಇಂದು ಯಾಕೆ ಹೀಗೆ ಅಂತ ಕಣ್ಣು ತೀಡುತ್ತ ಎದ್ದು "ಏನು ಆಕಾಶಾನೇ ಕಡಿದುಕೊಂಡು ಬೀಳುತ್ತೇನೊ ಅನ್ನೋ ಹಾಗೆ ಅವಸರ ಮಾಡ್ತಾ ಇದೀಯ" ಅಂತ ಮೊದಲೇ ಛಳಿಗಾಲ, ಛಳಿಗೆ ತಡೆಯಲಾಗದೇ, ಹೊದಿಕೆ ಕಸಿದುಕೊಂಡು ಅಲ್ಲೇ ಹೊದ್ದುಕೊಂಡು ಕೂತೆ, "ಮತ್ತಿನ್ನೇನು ಆಕಾಶಾನೂ ಕಡಿದುಕೊಂಡು ಬೀಳುತ್ತೆ, ಪಕ್ಕದಮನೆ ಪದ್ದು ಈಗಲೇ ಹೇಳ್ತಾ ಇದ್ಲು" ಅಂದ್ಲು, ಮತ್ತೆ ಮಲಗಿದರಾಯ್ತು ಇವಳನ್ನು ಹೇಗಾದರೂ ಇಲ್ಲಿಂದ ಸಾಗಹಾಕೋಣ ಅಂತ "ಹೌದಾ, ಹೋಗು ಬಾಗಿಲು ತೆಗೆದು ನೋಡಿ ಬಾ, ಮನೆ ಹೊರಗೆ ಬೀಳ್ತಿದೆಯೋ ಎನ್ ಕಥೆ" ಅಂದೆ ಎದ್ದು ಹೊರಟೇ ಬಿಟ್ಟವಳು, ನನ್ನ ತರಲೆಯಾಟ ಅಂತ ಗೊತ್ತಾಗಿ, "ತರಲೇ ಮಾಡ್ತೀರಾ" ಅಂತ, ತನ್ನ ತಂಪು ತಂಪು ತಣ್ಣ ಕೈಗಳಲ್ಲಿ ನನ್ನ ಕೆನ್ನೆ ಗಟ್ಟಿಯಾಗಿ ಹಿಡಿದು ಬಿಟ್ಟಳು, "ಲೇ ಲೇ ಛಳಿ ಚಳಿ ಬಿಡೇ" ಅಂತ ಕೊಸರಿಕೊಂಡೆ, ಮತ್ತೆ ಹಿಡಿಯದಂತೆ ದೂರ ಸರಿದು ಕೂತು, "ಬೆಳಗ್ಗೆ ಬೆಳಗ್ಗೇ ಏನೇ ಆಕಾಶಾ ಬೀಳತ್ತೆ ಅಂತ ಎಬ್ಬಿಸ್ತಾ ಇದೀಯಾ, ಬೆಚ್ಚಗೆ ನನ್ನ ಬಳಿ ಹೊದಿಕೆಯಂತೆ ನನ್ನೇ ಸುತ್ತುವರಿದು ಮಲಗಿರೋದು ಬಿಟ್ಟು" ಅಂದೆ, "ಆಸೆ ನೋಡು" ಅಂತ ಪಕ್ಕದಲ್ಲಿ ಬಿದ್ದಿದ್ದ ತಲೆದಿಂಬು ನನ್ನೆಡೆಗೆ ಎಸೆದು, ಹೊರಟವಳು ಹೊರಳಿ ನಿಂತು "ಪ್ರಳಯ ಆಗುತ್ತಂತೆ ನಿಜಾನಾ?" ಅಂದ್ಲು.

ಪ್ರಳಯ ಅಂತ ಇತ್ತೀಚೆಗೆ ಎಲ್ಲ ಕಡೆ ಕೇಳಿದ್ದೆ, ಆದರೆ ಇವಳಿಗೂ ಅದು ಗೊತ್ತಾಗಿದ್ದು ಇಂದೇ ಅಂತ ಕಾಣುತ್ತದೆ. ಅದಕ್ಕೇ ಪ್ರಳಯ ಆಗುತ್ತಾ ಅಂತ ಕೇಳ್ತಿದಾಳೆ ಅಂತಂದುಕೊಂಡು,
"ಪ್ರಣಯ ಆಗುತ್ತಂತೆ ನಿಜಾನಾ ಅಂತ ಕೇಳಿದರೆ ಹೇಳಬಲ್ಲೆ, ಆದರೆ ಪ್ರಳಯ..." ಅಂತ ರಾಗ ಎಳೆದೆ. "ಪ್ರಣಯ ಆಗಿ ಮನೇಲಿ ಗೊತ್ತಾದಾಗ ಅಲ್ಲೂ ಪ್ರಳಯವೇ ಆಗುತ್ತದೆ ಬಿಡಿ, ಪದ್ದು ಹೇಳ್ತಾ ಇದ್ಲು ಪ್ರಳಯ ಆಗುತ್ತೆ ಅಂತ, ಅದೇ ಕೇಳಿದೆ" ಅಂದ್ಲು. "ಒಹ್ ಪದ್ದುನ ಮಗನ ಪ್ರೋಗ್ರೆಸ್ ಕಾರ್ಡ ಬರುವುದಿರಬೇಕು, ಗುಂಡು ಗುಂಡು ಭೂಮಿಯಂತೆ ಸೊನ್ನೆ ಮಾರ್ಕ್ಸಗಳನ್ನ ನೋಡಿ ಅವರಪ್ಪ ಸಿಟ್ಟಿಗೆದ್ದು ಹೊಡೆದರೆ ಪ್ರಳಯವೇ ಆಗುತ್ತದೆ ಬಿಡು" ಅಂತಂದೆ. "ಅದಲ್ಲಾರೀ, ನಿಜವಾಗ್ಲೂ ಪ್ರಳಯ ಆಗುತ್ತದಂತೆ" ಅಂದ್ಲು. "ಅಯ್ಯೋ ಎರಡುಸಾವಿರ ಇಸ್ವಿ ಆರಂಭದಲ್ಲೂ ಹೀಗೇ ಹೇಳಿದರು ಆಗಂತೂ ಏನೂ ಆಗಲಿಲ್ಲ ಈಗಲೂ ಅಗುತ್ತೋ ಇಲ್ವೋ ಯಾರಿಗೆ ಗೊತ್ತು" ಅಂದೆ. "ಇಲ್ಲ, ಈ ಸಾರಿ ಆಗುತ್ತದಂತೆ ೨೧೧೨ಕ್ಕೆ" ಅಂತ ಪದ್ದು ಹೇಳಿದ್ದೇ ನಿಜವೇನೊ ಅನ್ನುವಂತೆ ಹೇಳಿದಳು, "ನಿನ್ನ ಹತ್ರ ಇರೋ ಚಿನ್ನದ ಒಡವೆ ಎಲ್ಲ ಮಾರಿದರೆ ಎಷ್ಟು ದುಡ್ಡು ಆಗುತ್ತೆ" ಅಂತ ಕೇಳಿದೆ, "ಯಾಕೆ ನಮ್ಮನೇಲಿ ಪ್ರಳಯ ಆಗಬೇಕಿದೆಯ" ಅಂತ ದುರುಗುಟ್ಟಿ ನೋಡಿದಳು. "ಮತ್ತೆ ಪ್ರಳಯ ಆಗೋದೇ ನಿಜ ಅನ್ನೊದಾದ್ರೆ, ಒಡವೆ ಎಲ್ಲ ಯಾಕೆ ಬೇಕು, ಎಲ್ಲ ಮಾರಿ ಊರೂರು ಸುತ್ತಾಡಿ ಎಂಜಾಯ ಮಾಡಿಬಿಡೋಣ" ಅಂತಂದೆ. "ಹ್ಮ್ ಮೊದಲು ನಿಮ್ಮ ಬ್ಯಾಂಕ ಬ್ಯಾಲನ್ಸ ಎಷ್ಟಿದೆ ಹೇಳಿ ಹಾಗಾದ್ರೆ" ಅಂತ ತಿರುಮಂತ್ರ ಹಾಕಿದಳು, ದಾಳಿ ನಮ್ಮೆಡೆಗೆ ಬಂತು ಅಂತ "ಬೇಡ ಬಿಡು ನಿನ್ನ ಒಡವೆ ನಿನ್ನ ಹತ್ರಾನೇ ಇರಲಿ" ಅಂತ ರಾಜಿಯಾದೆ.

ಈ ಪ್ರಳಯದ ವಿಷಯ ಮುಗಿಯುವ ಪ್ರಮೇಯವೇ ಇರಲಿಲ್ಲ, "ಈ ಪ್ರಳಯ ಹೇಗೆ ಆಗುತ್ತೆ" ಅಂತ ಕೇಳಿದಳು, ಅಲ್ಲ ನನಗೇನು ನಾಲ್ಕಾರು ಪ್ರಳಯಗಳನ್ನು ಕಣ್ಣಾರೆ ನೋಡಿದ ಅನುಭವ ಇದೆಯೇನೊ ಅನ್ನೊವಂತೆ. "ನನಗೂ ಗೊತ್ತಿಲ್ಲ ಕಣೆ, ಈ ಪ್ರೊಜೆಕ್ಟ ಡೆಡಲೈನಿಗೆ ಮುಗಿಯಲಿಲ್ಲ ಅಂದ್ರೆ ಏನೊ ದೊಡ್ಡ ಪ್ರಳಯವಾದಂತೆ ಹಾರಾಡುವ ಕ್ಲೈಂಟಗಳನ್ನು(ಗಿರಾಕಿ) ನೋಡಿದ್ದೇನೇ ಹೊರತು, ನಿಜ ಪ್ರಳಯ ಅನುಭವ ಇಲ್ಲ" ಅಂದೆ, "ಹೂಂ ಪ್ರಕೃತಿಯೂ ಮನುಜನಿಗೆ ಒಂಥರಾ ಡೆಡಲೈನ್ ಕೊಟ್ಟಿದೆ ಆಮೇಲೆ ಪ್ರಳಯವೇ ಆಗಿ ಮನುಜ ಡೆಡ್ ಅಷ್ಟೇ" ಅಂತಂದಳು. "ಹ್ಮ್ ಮಾಡಿದ್ದುಣ್ಣೊ ಮಾರಾಯಾ, ಅಂತಾರಲ್ಲ ಹಾಗೆ, ನಾವೇ ಮಾಡಿದ್ದು ಈಗ ಅನುಭವಿಸಬೇಕು ಅಷ್ಟೇ" ಅಂತ ವೇದಾಂತ ನುಡಿದರೆ, "ನಾವೇನು ಮಾಡೀದೀವಿ, ಅಂಥದ್ದು" ಅಂತ ಕೇಳಿದಳು. "ನಾವಲ್ಲದೇ ಇನ್ಯಾರು ಮಾಡಿದ್ದು, ಈ ಪರಿಸರ ಮಾಲಿನ್ಯ ಮಾಡಿ ಅಸಮತೋಲನ ಸೃಷ್ಟಿ ಮಾಡಿದ್ದು ನಾವೇ ಅಲ್ಲವೇ, ಈಗ ಪ್ರಕೃತಿ ಅದನ್ನು ಸರಿ ಮಾಡಲು ಪ್ರಯತ್ನ ಮಾಡುತ್ತಿದೆ ಅಷ್ಟೇ." ಅಂದರೆ ಹೆದರಿಕೊಂಡು, "ಈಗ ಪ್ರಳಯ ಆಗುತ್ತೆ ಅಂತೀರಾ, ಹಾಗಾದ್ರೆ" ನಾನು ಆಗಬೇಡ ಅಂದ್ರೆ ಬಿಡುತ್ತೆ ಏನೊ ಅನ್ನುವಂತೆ, ನನ್ನಡೆಗೆ ನೋಡಿದಳು. "ಪ್ರಳಯಾ.. ಪ್ಲೀಜ್ ನನ್ನಾಕೆ ಹೆದರಿದ್ದಾಳೆ ಅದಕ್ಕೇ ಈಗಲೇ ಬೇಡ ಆಮೇಲೆ ಆಗು ಓಕೇನಾ..." ಅಂತ ಆಕಾಶದೆಡೆಗೆ ನೋಡುತ್ತ ಕೇಳಿಕೊಂಡೆ. ಸಿಟ್ಟಿನಲ್ಲೇ ನನ್ನ ನೋಡುತ್ತ ಎದ್ದು ಹೋದಳು.

ಅವಳು ಎದ್ದು ಹೋದಳೆಂದು ಮತ್ತೆ ಹೊದ್ದು ಮಲಗಿದರೂ ನಿದ್ರೆ ಮಾತ್ರ ಹತ್ತಿರ ಸುಳಿಯಲಿಲ್ಲ, ತಂಪು ಕೈಗಳಲ್ಲಿ ಕೆನ್ನೆ ಸವರಿದ್ದಳಲ್ಲ ಇನ್ನೆಲ್ಲಿ ನಿದ್ರೆ ಬಂದೀತು. ಹಾಗೂ ಹೀಗೂ ಎದ್ದು, ಹಲ್ಲುಜ್ಜಿ ಬಂದು ಕುಳಿತರೆ ಮತ್ತೆ ಟೀ ಕಪ್ಪಿನೊಂದಿಗೆ ಹಾಜರಾದಳು ಹರಟೆ ಇನ್ನೂ ಜಾರಿಯಲ್ಲಿರುತ್ತದೆ ಅನ್ನುವ ಹಾಗೆ. ಟೀ ಕಪ್ಪು ಕೈಗಿತ್ತು, ಕೈತೋಳು ಹಿಡಿದುಕೊಂಡು ಭುಜಕ್ಕೆ ತಲೆಯಾನಿಸಿಕೊಂಡು ಕೂತಳು, ಪ್ರಳಯ ಆಗುತ್ತದೆ ಅಂತ ಪ್ರೀತಿ ಜಾಸ್ತಿಯಾಯ್ತೋ ಏನೊ, "ಪ್ರಳಯ ಆಗುತ್ತೆ ಅಂತ ಭಯಾನಾ" ಅಂತ ನಾನೇ ಮಾತಿಗೆಳೆದೆ, "ಮತ್ತಿನ್ನೇನು, ಎಷ್ಟೊ ವರ್ಷಕ್ಕೆ ಒಮ್ಮೇ ಆಗುತ್ತೇ ಅಂತ ಖುಷಿಯಿಂದ ನೋಡೋಕೆ ಅದೇನು ಸೂರ್ಯಗ್ರಹಣನಾ" ಅಂತ ಮುಖ ಸಿಂಡರಿಸಿದಳು, "ಯಾಕೆ ಭಯ" ಅಂತ ಕೇಳಿದೆ, "ಪ್ರಳಯ ಅಂದ್ರೆ ಸುಮ್ನೇನಾ, ಆಕಾಶದಿಂದ ಬೆಂಕಿ ಉಂಡೆಗಳು ಬೀಳುತ್ತವೆ ಅಂತೆ, ನೀರಿನ ದೊಡ್ಡ ದೊಡ್ಡ ಅಲೆಗಳು ಬಂದು ಕೊಚ್ಚಿಕೊಂಡು ಹೋಗುತ್ತವೆ ಅಂತೆ" ಅಂತ ತನ್ನ ಅಂತೆ ಕಂತೆಗಳ ಪುರಾಣ ತೆಗೆದಳು, "ಈ ಬೆಂಕಿ ಉಂಡೆಗಳು ಬಿದ್ದರೆ, ಈ ನೀರಿನ ಅಲೆಗಳಲ್ಲಿ ಅವು ನಂದಿ ಹೋಗೊದಿಲ್ವಾ" ಅಂತ ಅಸಂಭದ್ದ ಪ್ರಶ್ನೆ ತೂರಿಬಿಟ್ಟೆ. "ರೀ ಎಲ್ಲ ಒಮ್ಮೇಲೆ ಆಗಲ್ಲ, ಒಂದೊಂದಾಗಿ ಆಗತ್ತೆ" ಅಂತ ಸಮಜಾಯಿಸಿ ನೀಡಿದಳು, "ಬೆಂಕಿ ಉಂಡೆ ಬಿದ್ದರೇನೊ ಮನೇಲಿದ್ದು ತಪ್ಪಿಸಿಕೋಬಹುದು, ನೀರಿನ ಅಲೆ ಬಂದ್ರೆ ತೊಂದ್ರೆ, ನಿಂಗೆ ಈಜು ಬರುತ್ತಲ್ಲ, ಪ್ಲೀಜ್ ನನ್ನೂ ಎತ್ಕೊಂಡು ಹೋಗೆ ಹಾಗೇನಾದ್ರೂ ಆದ್ರೆ" ಅಂತ ಕೇಳಿಕೊಂಡೆ, "ಬೆಂಕಿ ಉಂಡೆ ಚಿಕ್ಕದಲ್ಲ, ಒಂದು ಬಿದ್ರೆ ಇಡೀ ಕಾಲೊನಿನೇ ಸುಟ್ಟು ಬೂದಿಯಾಗಬೇಕು ಅಷ್ಟು ದೊಡ್ಡದಿರುತ್ತೆ, ಇನ್ನ ನಿಮ್ಮನ್ನ ಎತ್ಕೊಂಡು ಹೋಗೊಕೆ ಆಗಲ್ಲರೀ, ಭಾರ ಜಾಸ್ತಿ" ಅಂದ್ಲು. ಪ್ರಳಯ ಅದ್ರೂ ಅಗಲಿ ಆದ್ರೆ ಈ ನೀರಿನ ಅಲೆಗಳ ಪ್ರಳಯ ಬೇಡ ಅಂತ ಮನಸಲ್ಲೇ ಬೇಡಿಕೊಂಡೆ. "ಮತ್ತೆ ಇನ್ನೂ ಏನೇನು ಆಗತ್ತಂತೆ" ಅಂತ ಅವಳನ್ನೇ ಕೇಳಿದೆ, "ಭೂಮಿ ಬಿರುಕು ಬಿಟ್ಟು, ಸೀಳಿಕೊಂಡು ಭಾಗ ಆಗುತ್ತಂತೆ, ಹಾಗೇನಾದ್ರೂ ಆಗಿ ನೀವೊಂದು ಕಡೆ ನಾನೊಂದು ಕಡೆ ಆದರೆ ಏನ್ ಗತಿ" ಅಂದ್ಲು. "ಏನಾದ್ರೂ ಆಗ್ಲಿ ನಾನು ಪದ್ದು ಮನೆ ಕಡೆ ಇರೋ ಹಾಗೆ ಮಾಡಪ್ಪ ದೇವ್ರೆ" ಅಂತ ಕಿಚಾಯಿಸಿದೆ. "ಪ್ರಳಯ ಅಂದ್ರೂ ಪದ್ದು ಬೇಕಾ ನಿಮ್ಗೆ, ದೇವ್ರೇ ಒಂದು ನಡುಗಡ್ಡೆ ಸೃಷ್ಟಿ ಮಾಡಿ, ನರಪ್ರಾಣಿ ಅಲ್ಲ ನಾಯಿನೂ ಇಲ್ಲದ ಹಾಗೆ ಒಬ್ಬಂಟಿಯಾಗಿ ಕೂರಿಸು ಇವರನ್ನ" ಅಂತ ತಾನೂ ಬೇಡಿಕೆ ಸಲ್ಲಿಸಿದಳು. "ಹಾಗೆಲ್ಲ ಬೇಡ ಕಣೆ, ನನ್ನ ಜತೆ ನೀನಿರ್ತೀಯಾ ತಾನೆ" ಅಂದೆ, "ನಾನು ನೀವು ಅಲ್ಲ, ಯಾರೂ ಇರಲ್ಲ ಪ್ರಳಯ ಆದ್ರೆ, ಪದ್ದು ಹೇಳ್ತಾ ಇದ್ಲು, ಅದ್ಯಾವುದೊ ಮಹಾಕಾಯ ಬಂದು ಭೂಮಿಗೆ ಅಪ್ಪಳಿಸುತ್ತೇ ಅಂತೆ" ಅಂತ ಮತ್ತೆ ಹೊಸ ವಿಷಯ ತೆಗೆದಳು, "ಹೌದೌದು ನಾನೂ ಕೇಳಿದೀನಿ, ಅದೇನಾದ್ರೂ ಭೂಮಿಗೆ ಅಪ್ಪಳಿಸಿದ್ರೆ, ಸಚಿನ್ ಸಿಕ್ಸರ ಹೊಡೆದ ಹಾಗೆ ಭೂಮಿ ಚೆಂಡಿನಂತೆ ಹಾರಿ ಹೋಗುತ್ತದಂತೆ" ಅಂದೆ, "ಸಚಿನ ಯಾಕೆ ಸೆಹವಾಗ್ ಹೊಡೆದ ಹಾಗೆ ಹೋಗಲ್ವಾ" ಅಂತ ತರಲೇ ಪ್ರಶ್ನೆ ಕೇಳಿದಳು. "ಯಾರೋ ಒಂದು, ಭೂಮಿ ತಾನೇ ಹಾರಿ ಬೀಳೊದು ಅದೇ ದೊಡ್ಡ ಪ್ರಾಬ್ಲಂ, ಇಲ್ಲಾಂದ್ರೆ ಒನ್ಸ ಮೋರ್ ಅಂತ ಇನ್ನೊಂದು ಶಾಟ್ ಕೇಳಬಹುದಿತ್ತು" ಅಂತ ತಿರುಗುಬಾಣ ಬಿಟ್ಟೆ ಸುಮ್ಮನಾದಳು.

ಈ ಪ್ರಳಯ ಆಗುತ್ತೆ ಅಂತ ಪತ್ರಿಕೆ, ಟೀವೀ ಎಲ್ಲ ಕಡೆ ಓದಿ ಕೇಳಿದ್ದೇವೆ, ಹಿಂದೇನೂ ಹೀಗೇ ಆಗುತ್ತೆ ಅಂತ ಕೋಲಾಹಲವೆದ್ದಿತ್ತು, ಪುಣ್ಯನೋ ಪಾಪಾನೋ ಯಾಕೋ ಆಗಲೇ ಇಲ್ಲ, ಪುಣ್ಯ ಯಾಕೆಂದ್ರೆ ನಾವೆಲ್ಲ ಬದುಕಿದಿವಿ, ಆದರೆ ಇನ್ನೇನು ಪ್ರಳಯ ಅಗುತ್ತೆ ಅಂತ ಪಾಪ ಕೆಲವ್ರು ಎಲ್ಲ ಆಸ್ತಿ ಮಾರಿ, ಸಾಲ ಮಾಡಿ ತಿಂದು ಕುಣಿದು ಕುಪ್ಪಳಿಸಿದ್ರು ಅವರಿಗೆಲ್ಲ ಸಾಲಕೊಟ್ಟವರು ಮನೆ ಬಾಗಿಲು ಬಾರಿಸಿದಾಗ ಪ್ರಳಯಾಂತಕಾರಿ ಅನುಭವವೇ ಆಗಿರಬೇಕು, ಇನ್ನು ಓದೊ ಹುಡುಗ್ರು ಪ್ರಳಯಾನೇ ಆಗತ್ತೆ ಅಂತೆ ಪರೀಕ್ಷೆ ಆಗೋದಿಲ್ಲ ಬಿಡು ಅಂತ ಓದೋದೇ ಬಿಟ್ಟಿದ್ದರು, ಪರೀಕ್ಷೆ ಬರೆಯಲು ಕೂತಾಗ ಕಾಲ ಕೆಳಗಿನ ಭೂಮಿಯೇ ಸರಿದಂತಾಗಿರಬೇಕು. ಅದಕ್ಕೇ ಈ ಸಾರಿ ಪ್ರಳಯ ಆಗತ್ತೆ ಅಂದ್ರೆ ಎಲ್ರೂ ನಿಜಾನಾ ಅಂತ ಕೇಳ್ತಿದಾರೆ. ಯಾರಿಗೆ ಗೊತ್ತು ಆಗುತ್ತೊ ಇಲ್ವೊ, ಅದರೂ ಪ್ರಕೃತಿಯನ್ನು ಬಲ್ಲವರಾರು, ಈಗಾಗಲೇ ಸುನಾಮಿ, ಚಂಡಮಾರುತ, ಭೂಕಂಪನ, ಉತ್ತರಕರ್ನಾಟಕದಲ್ಲಾದ ಅತೀವೃಷ್ಟಿಯಂತಹ ಘಟನೆಗಳು ಪ್ರಕೃತಿ ಕೊಡುತ್ತಿರುವ ಎಚ್ಚರಿಕೆಗಳೇ?. ಭೂಮಿ ತಾಪಮಾನದಲ್ಲಿನ ಏರುಪೇರು ಆಗಿ ಕರಗುತ್ತಿರುವ ಉತ್ತರ ಧೃವದ ಮಂಜುಗಡ್ಡೆಗಳು ಸಮುದ್ರ ತೀರದ ನಗರಗಳಿಗೆ ಅಪಾಯಕಾರಿಯೇ, ಮಹಾ ಆಕಾಶಕಾಯವೊಂದು ಭೂಮಿಯೆಡೆಗೆ ಬರುತ್ತಿರುವುದು, ಹೆಚ್.ಒನ್.ಎನ್.ಒನ್ ನಂತಹ ಹೊಸ ಹೊಸ ಮಾರಕ ರೋಗಗಳು ಹರಡುತ್ತಿರುವುದು, ಮನುಕುಲದ ಅಳಿವಿನ ಬಗ್ಗೆ ಪ್ರಶ್ನೆಯೊಡ್ಡಿದೆಯನ್ನುವುದಂತೂ ನಿಜ.
ಪ್ರಳಯ ಆಗುತ್ತೆ ಅಂತ ಹೆದರಲೂ ಬೇಕಿಲ್ಲ, ಆಗಲಿಕ್ಕಿಲ್ಲ ಅಂತ ನಿರಾಳವಾಗಿರಲೂ ಆಗಲ್ಲ, ಆದರೂ ಇರುವಷ್ಟು ದಿನ ಸಾರ್ಥಕವಾಗಿ ಜೀವಿಸೋಣ ಅನ್ನಬಹುದು.

ಹೀಗೇ ಮಾತಾಡುತ್ತ ಕುಳಿತಿರಬೇಕಾದರೆ, ನಮ್ಮ ವಾಣಿ ಅದೇ ದೂರವಾಣಿ ರಿಂಗಣಿಸಿದಳು, ಆಕಡೆಯಿಂದ ಇನ್ಷೂರನ್ಸ ಏಜೆಂಟ್ ಮಾತಾಡಬೇಕೆ, "ಲೇ ಇನ್ಷೂರನ್ಸ ಮಾಡಿಸಬೇಕಾ" ಅಂತ ಇವಳನ್ನ ಕೇಳಿದೆ, "ಪ್ರಳಯ ಆಗತ್ತೆ ಅಂತೀದಾರೆ ಈಗಲೇ ಬೇಡ ಬಿಡಿ" ಅಂದ್ಲು. "ನೀನೇ ಮಾತಾಡು" ಅಂತ ಅವಳಿಗೆ ಕೊಟ್ಟೆ, ಈ ಏಜೆಂಟಗಳು ಏನು ಹೇಳಿದರೂ ಬಿಡೊದಿಲ್ಲ, ಅವಳೇ ಮಾತಾಡಲು ಸರಿ ಅಂತ, "ಹಲೋ, ಇನ್ಷೂರನ್ಸ ಯಾಕೆ ಮಾಡಿಸಬೇಕು?" ಅಂತ ಶುರುವಿಟ್ಟುಕೊಂಡಳು, "ಏನ್ ಮೇಡಮ್ ಹೀಗೆ ಕೇಳ್ತೀರಾ?, ಏನೋ ಅಚಾನಕ್ಕಾಗಿ ಅವಘಡ ಸಂಭವಿಸಿದ್ರೆ, ನಮ್ಮ ನಂಬಿ ಬದುಕಿರುವವರಿಗೆ ತೊಂದ್ರೆ ಆಗದಿರಲಿ ಅಂತ, ನಮ್ಮದು ಯೂಲಿಪ್ ಪ್ಲಾನ ಅಂತ ಮೇಡಂ, ಒಳ್ಳೆ ರಿಟರ್ನ್ ಇದೇ, ನಿಮ್ಮ ದುಡ್ಡು ಮೂರುವರ್ಷದಲ್ಲಿ ಡಬಲ್ ಗ್ಯಾರಂಟಿ" ಅಂತ ತೀರ ಸರಳವಾಗೇ ವಿವರಿಸಿದ, "ಹೌದಾ, ಮತ್ತೆ ಇನ್ನು ಮೂರು ವರ್ಷ ಅಂದ್ರೆ, ಎರಡು ಸಾವಿರದ ಹನ್ನೆರ್‍ಅಡನೇ ಇಸ್ವಿ, ಆವಾಗ ಪ್ರಳಯ ಆಗುತ್ತೆ ಅಂತ ನಿಜಾನಾ?" ಅಂತ ಅವನನ್ನೂ ಕೇಳಬೇಕೆ. "ಮತ್ತೆ ಪ್ರಳಯ ಆದ್ರೆ ಯಾರೂ ಬದುಕಿರಲ್ಲ ನೀವು ದುಡ್ಡು ಯಾರಿಗೆ ಕೊಡ್ತೀರಾ?, ಕೊಡೋಕೆ ನೀವಾದರೂ ಎಲ್ಲಿರ್ತೀರಾ?" ಅಂತ ಎಡವಟ್ಟು ಪ್ರಶ್ನೆ ಕೇಳಿದ್ದು ನೋಡಿ ಆಕಡೆಯಿಂದ ಅವನೇ ಲೈನ್ ಕಟ್ ಮಾಡಿದ, ನನ್ನಡೆಗೆ ನೋಡಿ ಹುಬ್ಬು ಹಾರಿಸುತ್ತ ನನ್ನಾಕೆ ನಸುನಕ್ಕಳು, ಪ್ರಳಯ ಅಗುತ್ತೊ ಇಲ್ವೊ, ನಮ್ಮಿಬ್ಬರ ಪ್ರಣಯ ಹೀಗೆ ಜಾಸ್ತಿ ಆಗುತ್ತಲೇ ಇರುತ್ತೆ, ಮತ್ತೆ ಸಿಕ್ತೀವಿ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/pralaya.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, November 1, 2009

ಹೊಸರುಚಿ: ಚಹ ಮಾಡೊದು ಹೇಗೆ.

"ಒಂದು ರುಚಿ ರುಚಿಯಾದ ಸ್ಪೇಸ...ಲ್ ಟೀ..." ಅಂತ ಟೀವೀ ಆನ್ ಮಾಡುತ್ತಾ ಕೂಗಿದೆ, "ಎನು ರುಚಿ ರುಚಿ ಸ್ಪೇ...ಷಲ್ಲು ಟೀ ಅಂತೀದೀರಿ, ಅದೇನು ಹೊಸ ರುಚಿ ಅಡುಗೇನಾ, ಅದೇ ಚಹಪುಡಿ ಸಕ್ರೆ, ಇಷ್ಟು ಹಾಲು, ಅದರಲ್ಲೇನು ವಿಶೇಷ" ಅಂದ್ಲು. "ಮಾಡೋ ರೀತಿ ಮಾಡಿದ್ರೆ ಎಲ್ಲಾನೂ ವಿಶೇಷಾನೇ" ಅಂತನ್ನುತ್ತ ಚಾನೆಲ್ಲು ಬದಲಾಯಿಸುತ್ತಿದ್ದವನ ಕೈಯಿಂದ ರಿಮೋಟು ಕಿತ್ತುಕೊಂಡು, "ಒಂದು ಹೊಸರುಚಿ ಕಾರ್ಯಕ್ರಮ ಬರತ್ತೆ ತಾಳಿ, ಬಾಳೆಹಣ್ಣಿನ ಬಜ್ಜಿ ಮಾಡೊದು ತೋರಿಸ್ತಾರೆ" ಅಂತ ಬಂದು ಕೂತಳು, ಮುಂಜಾನೆ ಮುಂಜಾನೆ ಇಂಥ ಅನಾಹುತಕಾರಿ!!! ಕಾರ್ಯಕ್ರಮಗಳನ್ನು ಯಾಕಾದರೂ ತೋರಿಸುತ್ತಾರೋ ಅಂದುಕೊಳ್ಳುತ್ತ, ಎದ್ದು ಹೊರಟಿದ್ದೆ, ಸರಿಯಾಗಿ ಅದೇ ಸಮಯಕ್ಕೆ ಕರೆಂಟು ಹೋಯ್ತು, ಕೇಪೀಟೀಸೀಎಲ್‌ನವರಿಗೆ ಇಂಥ ಒಳ್ಳೆಯ ಸಮಯೋಚಿತ ಕೆಲಸ ಮಾಡಿದ್ದಕ್ಕೆ ಅಭಿನಂದಿಸುತ್ತ, ಈ ಕಾರ್ಯಕ್ರಮ ನೋಡಿ, ನನ್ನಂತೆ ಎಷ್ಟೊ ನರಪ್ರಾಣಿಗಳು ಈ ಹೊಸರುಚಿಯ ಪರೀಕ್ಷೆಗೆ ಪಾಲಾಗುವುದು ತಪ್ಪಿತಲ್ಲ ಅಂತ ಖುಷಿಯಾದೆ. ಇವಳೋ ಶಪಿಸಿ ನಟಿಕೆ ಮುರಿದಳು, ಆ ಶಾಪಕ್ಕಿಂತ ನಮ್ಮನ್ನುಳಿಸಿದ ಪುಣ್ಯವೇ ಹೆಚ್ಚು ಬಿಡು ಅಂತಂದು, ಕೂತಿದ್ದವಳಿಗೆ ಹಿಂದಿನಿಂದ ತೆಕ್ಕೆಬಿದ್ದು, "ಬೈ ಟೂ ಟೀ" ಅಂದೆ. "ನಿಮಗೆ ಅರ್ಧ ಮತ್ತೆ ಇನ್ನರ್ಧ ಯಾರಿಗೆ?" ಅಂತ ಕೇಳಿದ್ದಕ್ಕೆ "ಪಕ್ಕದಮನೆ ಪದ್ದುಗೆ" ಅಂತ ಬಿಸಿ ಮುಟ್ಟಿಸಿದರೆ, ತಣ್ಣಗೆ, "ಹೋಗಿಪ್ಪಾ ಬೈಟೂ ಟೀ ನನಗಿಲ್ಲ ಅಂದ್ರೆ, ನಿಮ್ಮ ಜತೆ ಟೂ... ಟೂ ಟೂ..." ಅಂತ ಚಿಕ್ಕ ಮಕ್ಕಳ ಹಾಗೆ ಗೆಳೆತನ ಬಿಡುವಂತೆ ಮಾಡಿದಳು. "ನನ್ನ ಟೀ ನಿನ್ನ ಜತೆ ಹಂಚಿಕೊಳ್ದೆ ಇನ್ನಾರ ಜತೆ ಹಂಚಿಕೊಳ್ತೀನಿ, ಅದೂ ಕೇಳೋ ಪ್ರಶ್ನೇನಾ" ಅಂತನ್ನುತ್ತ ಅವಳ ಹಾಗೇ ಏಳಿಸಿ ನೂಕುತ್ತ ಪಾಕಶಾಲೆಗೆ ನಡೆದೆ... "ಸ್ವಾಗತ... ಸುಸ್ವಾಗತ... ಸುಡು ಸುಡು ಸ್ವಾಗತ...(ವಾರ್ಮ್ ವೆಲಕಮ್ ಅಂತಾರಲ್ಲ ಹಾಗೆ!), ನಮ್ಮ 'ರುಚಿ ಕಿಚಿಪಿಚಿ' ಕಾರ್ಯಕ್ರಮಕ್ಕೆ, ಇಂದಿನ ಹೊಸ ರುಚಿ 'ಚಹ'" ಅಂತ ಘೊಷಣೆ ಮಾಡುತ್ತ...

"ರೀ ಏನ್ರೀ ಇದು ರುಚಿ ಕಿಚಿಪಿಚಿ... ಏನದು ಹೆಸರು" ಅಂದ್ಲು. "ಮೇಡಮ್, ರುಚಿ ಮಾಡಲು ಅದು ಇದು ಎಲ್ಲ ಸೇರಿಸಿ ಕಿವುಚಿ, ಕೀಸರಿಟ್ಟು, ಕೆಸರು ಮಾಡಿದ ಹೊಸರುಚಿ; ರಾಡಿಯಲ್ಲಿ ಕಾಲಿಟ್ಟರೆ ಅನಿಸುವಂತೆ ಕಿಚಿಪಿಚಿ, ಪಿಚಿಪಿಚಿ ಆಗಿರುತ್ತದೆ ಅದನ್ನು, ಕಣ್ಣು ಮುಚ್ಚಿ, ಪಿಚ ಪಿಚ ಪಿಚಕ್ಕಂತ ಲೊಚಗುಟ್ಟದೇ ತಿನ್ನುವ ಕಾರ್ಯಕ್ರಮ ಇದಾಗಿದ್ದರಿಂದ, ಅದನ್ನೇ ಹೆಸರು ಮಾಡಿದ್ದೇವೆ... ಹೀ ಹೀ ಹೀ" ಅಂತ ವಿವರಿಸಿದೆ, "ಅಬ್ಬ ಎನು ಒಳ್ಳೆ ಕಾರ್ಯಕ್ರಮ ಇದು, ನನಗೆ ಇದರಲ್ಲಿ ಭಾಗವಹಿಸುತ್ತಿದ್ದೇನೆ ಅಂತ ಬಹಳ ಹೆಮ್ಮೆ ಇದೆ, ಸರಿ ನಾನು ಒಂದು ಹೊಸ ರು'ಛೀ...' ರು'ಛೀ...' ಯಾದ ಹೊಸರುಚಿ ತೋರಿಸುತ್ತೇನೆ" ಅಂತ ಅವಳೂ ಬೋಗಿಯಿಲ್ಲದ ರೈಲು ಬಿಟ್ಟಳು. ಅಲ್ಲಿಗೆ ನಮ್ಮ ಕಾರ್ಯಕ್ರಮ ಶುರುವಾಯಿತು.

"ವೀಕ್ಷಕರೇ, ಈವತ್ತು ನಮ್ಮ ಜತೆ ಈ ರುಚಿ ಕಿಚಿಪಿಚಿ ಕಾರ್ಯಕ್ರಮದಲ್ಲಿ ನನ್ನಾಕೆ ಇದಾರೆ, ಇವರು ನಿಮಗೆ ಹೊಸರುಚಿ ಅಂತ ಚಹ ಮಾಡುವುದು ಹೇಗೆ ಹೇಳಿಕೊಡಲಿದ್ದಾರೆ, ಬನ್ನಿ ಅವರಿಗೆ ಸ್ವಾಗತ ಕೋರೋಣ" ಅಂತ ಅವಳ ಪಕ್ಕ ಬರ್ಶನ್ನು ಮುಂದೆ ನಿಂತಾಯಿತು, "ನಮಸ್ಕಾರ" ಅಂತ ನಕ್ಕಳು. "ಈ ಹೊಸರುಚಿಗೆ ಏನೇನು ತಯಾರಿ ಮಾಡಿಕೊಂಡು ಬಂದೀದೀರಾ" ಅಂತ ಮಾತಿಗಿಳಿದೆ, "ಕಾರ್ಯಕ್ರಮಕ್ಕೆ ಬರೋದು ಅಂತ ಗೊತ್ತಾದ ತಕ್ಷಣಾನೇ, ಹೊಸ ಸೀರೆ ಮ್ಯಾಚಿಂಗ ಬ್ಲೌಜು ಎಲ್ಲ ರೆಡಿ, ಮಾಡಿಕೊಂಡೆ, ಮತ್ತೆ ನಿನ್ನೆ ಎರಡುಸಾರಿ ಮಾತ್ರ! ಬ್ಯೂಟಿಪಾರ್ಲರಗೆ ಹೋಗಿದ್ದೆ, ಯು ನೋ(ಇದೇ ರೀತಿ ಇನ್ನೂ ಇಂಗ್ಲೀಶಲ್ಲಿ ಅನ್ನೊ ಚಾಳಿ ನಮ್ಮಲ್ಲಿ ಬಹಳ ಇರ್ತದೆ), ಮಾರ್ನಿಂಗ ಒಂದೇ ಘಂಟೆ ಮೇಕಪ ಮಾಡಿಕೊಂಡಿದ್ದು, ಆಕ್ಚುಲಿ ಈ ಆಭರಣ ಎಲ್ಲಾ ಸೇಫ ಅಲ್ಲ, ಅದ್ರೂ ಸಿಂಪಲ್ಲಾಗಿ, ಈ ನೆಕ್ಲೆಸ್, ಸರ, ನಾಲ್ಕು ಬಳೆ, ಮೂರು ಉಂಗುರ, ಕಿವಿಯೋಲೆ, ಕಾಲುಗೆಜ್ಜೆ ಅಷ್ಟೇ ಹಾಕೊಂಡು ಬಂದಿರೊದು." ಅಂತ ವಿದಿಶಪಡಿಸಿದಳು, "ಮೇಡಮ್ ನಾನು ಹೊಸರುಚಿ ಮಾಡೋಕೆ ಏನು ತಯ್ಯಾರಿ ಅಂತ ಕೇಳಿದ್ದು, ಆದ್ರೂ ಇದೂ ಅದೇ ಬಿಡಿ, ನಿಮ್ಮ ಕಾಲುಗೆಜ್ಜೆ ವೀಕ್ಷಕರಿಗೆ ಕಾಣಲಿಕ್ಕಿಲ್ಲ ಹ್ಮ್" ಅಂದೆ. "ಅದೂ ಸರಿ ಬಿಡಿ, ಆದ್ರೆ ನಿಮಗೆ ಕಾಣುತ್ತಲ್ಲ" ಅಂತ ಕಣ್ಣು ಮಿಟಿಕಿಸಿದಳು.

"ಮೇಡಮ್ ನೀವು ಈ ಚಹದಂತಹ ಸಾಮಾನ್ಯ ರುಚಿ ಯಾಕೆ ಆರಿಸಿಕೊಂಡಿರಿ ಅಂತ ನಮ್ಮ ವೀಕ್ಷಕರಿಗೆ ತಿಳಿಸಿಕೊಡ್ತೀರಾ" ಅಂತ ಕೇಳಿದೆ, "ಅಕ್ಚುಲಿ ಮೊದಲು ಬಿಸಿನೀರು ಕಾಯಿಸೊದು ಹೇಗೆ ಅಂತ ತಿಳಿಸಿಕೊಡೋಣ ಅಂತ ಇದ್ದೆ, ಬಟ್ ನಮ್ಮ ಯಜಮಾನ್ರು ಬೇಡ ಆಟ್ಲೀಸ್ಟ್ ಟೀನಾದ್ರೂ ಮಾಡು ಅಂದ್ರು ಅದಕ್ಕೆ ಕಷ್ಟಪಟ್ಟು ಅದನ್ನೇ ಹೇಳ್ತಾ ಇದೀನಿ" ಅಂತಂದಳು. "ಒಹ್ ನಿಮ್ಮ ಹಿಂದಿರುವ ಸ್ಪೂರ್ಥಿ ನಿಮ್ಮ ಯಜಮಾನ್ರು ಅಂತ ಆಯ್ತು, ನಿಮಗೆ ಇಷ್ಟು ಮುಂದುವರೆಯಲು ಅವಕಾಶ ಮಾಡಿಕೊಟ್ಟ ಅವರು ನಿಜಕ್ಕೂ ಗ್ರೇಟ್" ಅಂತ ಹೊಗಳಿದೆ. "ಹೌದೌದು ಅವರ ಬೆಂಬಲದಿಂದಲೇ ಇದೆಲ್ಲ ಸಾಧ್ಯ ಆಗಿರೋದು, ಏನೇ ಕೆಟ್ಟದಾಗಿ ಮಾಡಿದ್ರು ಚೆನ್ನಾಗಿದೆ ಚೆನ್ನಾಗಿದೆ ಅಂತ ಹೊಗಳಿ ಹುರಿದುಂಬಿಸ್ತಾರೆ, ನನ್ನ ಹೊಸರುಚಿ ಮೊದಲು ಟೇಸ್ಟ್ ಮಾಡೊದೇ ಅವರು" ಅಂತ ಹೆಮ್ಮೆ ಪಟ್ಟಳು.

ಶುರು ಮಾಡೋಣ ಅಂತ, "ಮೊದಲಿಗೆ ಸ್ವಲ್ಪ ನೀರು ಒಂದು ಸ್ಟೀಲ್ ಪಾತ್ರೇಲಿ ತುಗೋಬೇಕು" ಅಂದ್ಲು. "ಮೇಡಮ ಈಗ ಮನೇಲಿ ಸ್ಟೀಲ್ ಪಾತ್ರೆ ಇಲ್ದೇ ಇದ್ರೆ" ಅಂದೆ, "ಸ್ಟೀಲ್ ಪಾತ್ರೆ ಇಲ್ಲ ಅಂದ್ರೂ ಓಕೇ, ಅಲ್ಯೂಮಿನಿಯಮ್ ಪಾತ್ರೆನೂ ಉಪಯೋಗಿಸಬಹುದು" ಅಂತ ಹೇಳಿದ್ದಕ್ಕೆ "ನೋಡಿ ವೀಕ್ಷಕರೆ ಯಾವ ಪಾತ್ರೆನಲ್ಲಿ ಬೇಕಾದ್ರೂ ಮಾಡಬಹುದು, ಇಂಥದೇ ಪಾತ್ರೆ ಬೇಕು ಅಂತಿಲ್ಲ, ಅದೇ ವೈಶಿಷ್ಟ್ಯ" ಅಂತ ಅದರ ಹಿರಿಮೆ ಹೇಳಿದೆ. ಪಾತ್ರೆ ಬರ್ಶನ್ ಮೇಲಿಟ್ಟು ಲೈಟರನಿಂದ ಹೊತ್ತಿಸಿದಳು, ಇನ್ನೇನು ನಾನು ಲೈಟರ್ ಇಲ್ದಿದ್ರೆ ಅಂತ ಕೇಳ್ತೀನಿ ಅಂತ ಅವಳೇ "ಈಗ ಕೆಲವರ ಮನೇಲಿ ಲೈಟರ್ ಇರಲ್ಲ ಅವ್ರು ಬೆಂಕಿಪೊಟ್ಟಣ ಕೂಡ ಉಪಯೋಗಿಸಬಹುದು" ಅಂತ ಸಂದೇಹ ದೂರ ಮಾಡಿದಳು. ನೀರು ಬಿಸಿಯಾಗುತ್ತಿದ್ರೆ "ನೀರು ಕುದಿಯೋಕೆ ಬಿಡಬೇಕು" ಅಂದ್ಲು. "ಒಹ್ ಹೌದಾ, ಎಷ್ಟು ಡಿಗ್ರೀ ಬಿಸಿ ಆಗಲು ಬಿಡಬೇಕು" ಅಂತ ಮರು ಪ್ರಶ್ನೆ ನನ್ನಿಂದ ಹೊರಟಿತು, ಕೆಂಗಣ್ಣಿನಿಂದ ನೋಡುತ್ತ "ಇಷ್ಟೇ ಡಿಗ್ರೀ ಅಂತಿಲ್ಲ, ಬಿಸಿಯಾಗಿ ಕುದಿದು ಗುರುಳೆ ಬರೋಕೆ ಶುರು ಮಾಡಿದ್ರೆ ಸಾಕು" ಅಂದ್ಲು. ಬಹಳ ಸಿಟ್ಟಾದಾಳು ಅಂತ ಅವಳನ್ನು ತಣ್ಣಗಾಗಿಸಲು ತರಲೆ ಅಂತ, ಅವಳ ಜಡೆ ಹಿಡಿದು ಒಮ್ಮೆ ಎಳೆದೆ, "ರೀ" ಅಂತ ಚೀರುತ್ತ ಓರೆಗಣ್ಣಲ್ಲಿ ನೋಡಿ ನಕ್ಕವಳು
"ವೀಕ್ಷಕರೇ, ಹೀಗೆ ಹೆಂಡ್ತಿ ಚಹ ಮಾಡೊವಾಗ ಕೀಟಲೆ ಮಾಡಿದ್ರೆ ಚಹ ಇನ್ನೂ ರುಚಿಯಾಗಿರತ್ತೆ" ಅಂತ ಟಿಪ್ ಹೇಳಿದಳು, ಅಷ್ಟು ಹೇಳೊದೇ ತಡ, ಹಿಂದಿನಿಂದ ಬಾಚಿ ತಬ್ಬಿಕೊಂಡು "ಚಹ ಬೇಗ ಮಾಡೇ" ಅಂತ ಗೋಗರೆದೆ. "ರೀ ಪ್ರೋಗ್ರಾಮ್ ನಡೀತಿದೆ ಲೈವ್" ಅಂತ ದೂರ ತಳ್ಳಿದಳು. "ವೀಕ್ಷಕರೇ, ಸ್ವಲ್ಪ ತಾಂತ್ರಿಕ ತೊಂದರೆಯಿಂದ ಪ್ರಸಾರದಲ್ಲಿ ಕಡಿತವಾಯ್ತು ಅದಕ್ಕೆ ವಿಷಾದಿಸುತ್ತೇವೆ." ಅಂತ ಸಂಭಾಳಿಸಿದೆ.

ನೀರು ಕುದಿಯುತ್ತಿದ್ದಂತೆ "ಈಗ ಎರಡು ಸ್ಪೂನ್ ಚಹಪುಡಿ ಹಾಕಬೇಕು." ಅಂತ ಅದಕ್ಕೆ ಚಹ ಪುಡಿ ಹಾಕಿದಳು, "ಈಗ ಎರಡು ಸ್ಪೂನ ಅಂತ ಹೇಳಿದ್ರಲ್ಲ, ಅನ್ನ ನೀಡುವ ಸ್ಪೂನನಲ್ಲಿ ಎರಡು ಹಾಕೋದಾ" ಅಂದೆ, "ನೀವು ಟೀ ಎಸ್ಟೇಟ್ ಮಾಲೀಕರಾಗಿದ್ರೆ ಹಾಗೆ ಮಾಡಬಹುದು, ಇಲ್ಲಾಂದ್ರೆ ಚಿಕ್ಕ ಟೀ ಸ್ಪೂನನಲ್ಲಿ ಎರಡು ಸಾಕು" ಅಂತ ತಿರುಗೇಟು ನೀಡಿದ್ಲು. "ಮತ್ತೆ ಚಹಪುಡಿ ಯಾವುದು ಉಪಯೋಗಿಸಬೇಕು?" ಅಂತ ಕೇಳಿದೆ, ಅವಳು ಕಿವಿಯಲ್ಲಿ ಪಿಸುಮಾತಲ್ಲಿ ಕೇಳಿದಳು "ನಿಮ್ಮ ಪ್ರೋಗ್ರಾಮ್ ಸ್ಪಾನ್ಸರ ಮಾಡಿ ಟೀ ಕಂಪನಿಯವರು ಅಡವರ್ಟೈಜಮೆಂಟ್ ಯಾರಾದ್ರೂ ಕೊಟ್ಟೀದಾರಾ?" ಅಂತ, "ಇಲ್ಲ" ಅಂದೆ. "ಹಾಗಿದ್ರೆ ಅದೆಲ್ಲ ನಿಮಗ್ಯಾಕೆ? ಯಾವುದು ಹಾಕಿದರೇನಂತೆ?" ಅಂತಂದಳು, ಅದೂ ಸರಿಯೇ ಅಂತ ಸುಮ್ಮನಾದೆ. ಟೀ ಕುದಿಯಲು ಇನ್ನೂ ಸಮಯವಿದ್ದದ್ದರಿಂದ ಒಂದು ಬ್ರೆಕ್ ಕೊಡಬಹುದಲ್ಲ ಅಂತ, "ಈಗ ಒಂದು ಬ್ರೇಕನ ನಂತರ ಮತ್ತೆ ಮುಂದುವರೆಯುತ್ತದೆ ರುಚಿ ಕಿಚಿಪಿಚಿ" ಅಂತ ಹೇಳುತ್ತಿದ್ದಂತೆ... "ವಾಶಿಂಗ ಪೌಡರ್ ನಿರ್ಮಾ, ವಾಶಿಂಗ ಪೌಡರ್ ನಿರ್ಮಾ, ಹಾಲಿನಂತ ಬಿಳುಪು ನಿರ್ಮಾನಿಂದ ಬಂತು... ನಮ್ಮಯ ನೆಚ್ಚಿನ ನಿರ್ಮಾ..." ಅಂತ ಅಲ್ಲೇ ತೂಗುಬಿದ್ದಿದ್ದ ಬಿಳಿ ಕೈ ವಸ್ತ್ರ ಹಾರಾಡಿಸಿದ್ದೂ ಆಯ್ತು.

ಜಾಹೀರಾತಿನ ನಂತರ ಮತ್ತೆ ಸ್ವಾಗತ ಕೋರುವಷ್ಟರಲ್ಲಿ, ಚಹ ಕುದಿಯತೊಡಗಿತ್ತು, "ಎರಡು ಚಮಚ ಸಕ್ಕರೆ ಹಾಕಿ ಸ್ವಲ್ಪ ಹೊತ್ತು ಬಿಡಿ" ಅಂದ್ಲು, "ಎರಡು ಸಾಕಾ" ಅಂತ ನಾ ಕೇಳಿದ್ದಕ್ಕೆ "ಸಕ್ಕರೆ ಪಾನಕದಂತೆ ಕುಡಿಯಬೇಕಿದ್ದರೆ ನಾಲ್ಕು ಕೂಡ ಹಾಕಿಕೊಳ್ಳಬಹುದು" ಅಂತ ದುರುಗುಟ್ಟಿದಳು, "ಈಗ ಈ ಮಧುಮೇಹಿಗಳು ಸಕ್ಕರೆ ಉಪಯೋಗಿಸುವಂತಿಲ್ಲ, ಹಾಗಾಗಿ ಅವರಂತೂ ನಿಮ್ಮ ಹೊಸರುಚಿ ಮುಟ್ಟುವಂತಿಲ್ಲ" ಅಂತ ಸುಮ್ಮನೆ ಕೆದಕಿದೆ, "ಹ್ಮ್ ಹಾಗೇನಿಲ್ಲ, ಸಕ್ಕರೆ ಉಪಯೋಗಿಸಲೇಬೇಕೆಂದೇನಿಲ್ಲ ಹಾಗೇ ಕೂಡ ಮಾಡಬಹುದು, ಇಲ್ಲ ಸಕ್ಕರೆಯಿಲ್ಲದೇ ಮಾಡಿ ಸಕ್ಕರೆ ರುಚಿಯ ಮಾತ್ರೆ ಹಾಕಿಕೊಂಡು ಕೂಡ ಕುಡಿಯಬಹುದು, ನಮ್ಮ ಹೊಸರುಚಿ ಏನು ಸುಮ್ನೇ ಅಂದುಕೊಂಡಿರಾ, ಇದರ ಬಗ್ಗೆ ಆಗಾಗ ಸಂಶೋಧನೆ ನಡೆಯುತ್ತಲೇ ಇರುತ್ತದೆ ಒಮ್ಮೆ ಚಹ ಆರೋಗ್ಯಕ್ಕೆ ಒಳ್ಳೇದು ಅಂದರೆ ಕೆಲವೊಮ್ಮೆ ಹಾನಿಕಾರಕ ಅಂತ ವಾದ ವಿವಾದ ಮಾಡುತ್ತಲೇ ಇರುತ್ತಾರೆ ಅದೂ ಅಂತರರಾಷ್ಟ್ರೀಯ ಮಟ್ಟದಲ್ಲಿ..." ಅಂತ ತನ್ನ ಹೊಸರುಚಿಯ ಸಮರ್ಥಿಸಿಕೊಂಡಳು. "ನೋಡಿ ವೀಕ್ಷಕರೇ ಎಂಥ ಅಂತರರಾಷ್ಟ್ರೀಯ ಹೊಸರುಚಿ ಇದು. ಇದನ್ನ ನೀವು ನಮಗೆ ಹೇಳಿಕೊಡ್ತಾ ಇರೋದಕ್ಕೆ ನಮಗೆ ಖುಷಿಯಾಗ್ತಿದೆ" ಅಂತ ಹೊಗಳಿದೆ. ಇಷ್ಟೊತ್ತಿಗೆ ಇನ್ನು ಚಹ ಸಿಕ್ಕರೆ ಸಾಕು ಅನ್ನುವ ಹಾಗಾಗಿತ್ತು, ಅವಳು ಹಾಲು ಹಾಕಿ ಕುದಿಸುತ್ತಿದ್ದರೆ, ಆಕಳ ಹಾಲಾ ಎಮ್ಮೇ ಹಾಲಾ ಅಂತ ಕಾಡಿಸುವ ಮನಸಾದರೂ, ಸುಮ್ಮನಾದೆ.

ಪಾತ್ರೆ ಇಳಿಸಿ, ಚಹಪುಡಿ ಸೋಸಿ ಕಪ್ಪಿಗೆ ಸುರಿದು ಕೊಟ್ಟಳು, ಒಂದು ಸ್ವಲ್ಪ ಹೀರಿ "ವಾವ್... ಸೂಪರ್..." ಅಂತ ಉದ್ಗಾರ ತೆಗೆದೆ. "ಹೊಸರುಚಿ, ಅಷ್ಟೇ ರುಚಿ ನೋಡಬೇಕು, ಜಾಸ್ತಿ ಬೇಡ, ಈ ಹೊಸರುಚಿ ಕಾರ್ಯಕ್ರಮಗಳಲ್ಲಿ ಒಂದೇ ಚಮಚ ಮಾತ್ರ ರುಚಿ ನೋಡುವುದಿಲ್ಲವೇ ಹಾಗೆ." ಅಂತ ಕಪ್ಪು ಕಸಿದುಕೊಂಡು ತಾನೇ ಅರ್ಧ ಖಾಲಿ ಮಾಡಿಟ್ಟಳು. ಆಫೀಸಿನಲ್ಲಿ ಪುಕ್ಕಟೆ ಅಂತ ಮಗ್ ತುಂಬ ಚಹ ಹೀರುವ ನನಗೆ ಈ ಗುಟುಕು ಚಹ ಎಲ್ಲಿ ಸಾಕಾದೀತು ಅಂತ, ಪೆಪ್ಪರುಮೆಂಟ್ ಕಸಿದುಕೊಂಡ ಮಗುವಿನಂತೆ ಮುಖ ಮಾಡಿದ್ದಕ್ಕೆ, "ಚಹ ಅಂದ್ರೆ ಸಾಕು, ಎಕ್ಸ್ಟ್ರಾ ಹೊಟ್ಟೆ ಬಂದು ಬಿಡುತ್ತದೆ, ಎಷ್ಟಾದರೂ ಸಾಕಾಗಲ್ಲ" ಅಂತ ಹುಸಿಮುನಿಸು ತೋರಿಸುತ್ತ ಇನ್ನಷ್ಟು ಬಸಿದು ಕೊಟ್ಟಳು, ಹಿರಿ ಹಿರಿ ಹಿಗ್ಗಿ ಸ್ವಲ್ಪ ಮತ್ತೆ ಹೀರಿ "ನೀ ರುಚಿ ನೋಡಿದ ಮೇಲಂತೂ ರುಚಿ ದುಪ್ಪಟ್ಟಾಗಿದೆ ಬಿಡು" ಅಂದರೆ, "ಆಹಾಹ ಸಾಕು ಹೊಗಳಿದ್ದು, ಹೊರಡಿ" ಅಂತ ಹೊರ ತಳ್ಳಿದಳು.

ಚಹ ಹೊಸರುಚಿಯಾಗಬಹುದಾ, ಯಾಕಾಗಲಿಕ್ಕಿಲ್ಲ ಹೊಸ ಹೊಸ ರೀತಿಯಲ್ಲಿ ಮಾಡಿದರೆ ಅದೂ ಹೊಸರುಚಿಯೇ, ಹಾಲು ಹಾಕಿ ಕುದಿಸಿದರೆ ಒಂದು ರುಚಿ, ಕುದಿಸದೇ ಹಸಿ ಹಾಲು ಹಾಗೇ ಹಾಕಿದರೆ ಒಂದು ರುಚಿ, ಸರಿಯಾಗಿ ಸಕ್ಕರೆ ಹಾಕಿದರೆ ಸರಿ ಇಲ್ಲದಿದ್ದರೆ ಸಕ್ಕರೆ ಪಾನಕವೇ ರೆಡಿ, ಸಕ್ಕರೆ ಬದಲಿ ಬೆಲ್ಲ ಬಳಸಿದರೆ ಬರುವದು ಇನ್ನೊಂದು ರುಚಿ, ನಿಂಬೆ ಎಲೆಯೋ, ಇಲ್ಲ ಶುಂಟಿಯ(ಜಿಂಜರ್) ತುಣುಕೊ ಹಾಕಿದರೆ ಬರುವ ಸುವಾಸನೆ ಸ್ವಾದವೇ ಬೇರೆ. ಗೆಳೆಯ ಗೆಳತಿಯರು ಸೇರಿದರೆ ಸುಮ್ಮನೇ ಮಾತುಕಥೆಗೆ ಪೀಠಿಕೆಯೇ ಬೈಟೂ ಟೀ. ಮನೆಗೆ ಬಂದವರಿಗೆ ಸ್ವಾಗತ ಪಾನೀಯ, ಮನೆಯಲ್ಲಿರುವವರಿಗೆ ದಿನದ ಶುರುವಾತಿಗೆ ಬೇಕೇ ಬೇಕು ಚಹ, ಹೇಳಲು ಕುಳಿತರೆ ಹೇಳುತ್ತ ಹೇಳುತ್ತ ನಾಲ್ಕು ಕಪ್ಪು ಚಹ ಕುಡಿದು ಮುಗಿಸಬಹುದಾದಷ್ಟು ಇದೆ ಇದರ ಮಹಿಮೆ. ಜಾಸ್ತಿಯಾದರೆ ಆಸಿಡಿಟಿ, ಹುಳಿ ತೇಗುಬರುವಂತೆ ಆಗಬಹುದಾದರೂ, ನೀರಸ ಸಂಜೆಗೆ ಒಂದು ಕಪ್ಪು ಖಡಕ ಚಹ ಆಹ್ಲಾದವನ್ನೀಯಬಲ್ಲುದು, ಹಾಗಾಗಿ ಹಿತಮಿತವಾಗಿ ಚಹ ಸೇವಿಸಿದರೆ ಸಾಕು. ಏನು ದಿನಾಲು ಅದೇ ಚಹ ಅಂತ ನೀರಾಸೆಯಾಗದೇ ಅದರಲ್ಲೂ ಹೊಸತನವಿದೆ ಹೊಸರುಚಿಯಿದೆ ಅಂದುಕೊಂಡು, ಕೀಟಲೆ ಮಾಡುತ್ತ ಸಂಗಾತಿಯೊಂದಿಗಿನ ಹರಟೆಯೊಂದಿಗೆ ಸಂಜೆಗೆ ಒಂದು ಕಪ್ಪು ಚಹ ಇದ್ದರೆ ಅದಕ್ಕಿಂತ ಸಂತೋಷ ಇನ್ನೇನಿದೆ.

ಚಹ ಕುಡಿದು, ಚೂರು ಪಾರು ಚಾನಲ್ಲು ಬದಲಿಸಿ ಬದಲಿಸಿ ಟೀವೀ ನೋಡುವ ಹೊತ್ತಿಗೆ, ಮಧ್ಯಾಹ್ನವೇ ಆಗಿತ್ತು, ಇವಳು ಊಟಕ್ಕೆ ಅಡಿಗೆ ಏನಾದರೂ ಮಾಡಿದರಾಯ್ತು ಅಂತ ಪಾಕಶಾಲೆಯತ್ತ ಪಾದ ಬೆಳೆಸಿದರೆ, "ಮತ್ತೆ ಏನು ಹೊಸರುಚಿ ತೋರಿಸುತ್ತೀರಾ ಮೇಡಮ್" ಅಂತ ಹೋದರೆ, "ಚಪಾತಿ ಮಾಡುವಳಿದ್ದೇನೆ, ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಏಟಿನ ರುಚಿ ತೋರಿಸುತ್ತೇನೆ ಬೇಕಾ" ಅಂದಳು. "ಸಾರಿನ ಸೌಟ ಕೂಡ ಇದೆಯಲ್ಲ" ಅಂದೆ. "ಪಾಕಶಾಲೆಗೆ ಬಂದ್ರೆ ಯಾವುದರಲ್ಲಿ ಬೇಕೊ ಅದರಲ್ಲೇ ವಿಧ ವಿಧವಾಗಿ ಹೊಸ ಹೊಸತಾಗಿ ಕೊಡುತ್ತೇನೆ" ಅಂದ್ಲು. ಇನ್ನು ಹೋದರೆ ಏಟು ಮಾತ್ರ ಗ್ಯಾರಂಟಿ ಅಂತ, ರುಚಿಸದಿದ್ದರೂ ಯಾವುದೊ ಕಾರ್ಯಕ್ರಮ ನೋಡುತ್ತ ಕುಳಿತೆ... ಮತ್ತೆ ಹೀಗೆ ಚಹ ಹೀರುತ್ತ ಸಿಗುತ್ತೇನೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/hosaruchi.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, October 11, 2009

ಒಬ್ಬಂಟಿ

ಹಲ್ಲುಜ್ಜದೇ ಹಾಳು ಮುಖದಲ್ಲಿ ಹಾಗೇ ಎದ್ದು ಕೂತಿದ್ದೆ, ಆಕಳಿಸುತ್ತ ಅತ್ತಿತ್ತ ನೋಡುತ್ತ ಎನೂ ಮಾತಿಲ್ಲದೇ, ಮಾತನಾಡಲೇಬೇಕೆನ್ನಿಸುತ್ತಿರಲಿಲ್ಲ. ಅವಳೊ ಆಗಲೇ ಎದ್ದು ಏನೋ ಕೆಲಸದಲ್ಲಿ ನಿರತಳಾಗಿದ್ದಳು, ಎಂದಿನಂತಾಗಿದ್ದರೆ ಎನೋ ತುಂಟಾಟ ಮಾಡುತ್ತ ಅವಳ ಕಾಡಿಸುತ್ತಿದ್ದೆ, ಇಂದೇಕೊ ಮನಸಿರಲಿಲ್ಲ, ಮನದಲ್ಲಿನ ಮಾತುಗಳೆಲ್ಲ ಮಾತಾಡಿ ಮಾತಾಡಿ ಖಾಲಿಯಾಗಿ ಹೋದವೇನೊ ಅನ್ನಿಸುತ್ತಿತ್ತು. ಮತ್ತೆ ಹೊದ್ದು ಎದ್ದೇಳದಂತೆ ಮಲಗಿಬಿಡಲೇನೊ ಅಂದರೂ ನಿದ್ರೆ ಕೂಡ ಹತ್ತಿರ ಸುಳಿಯದಂತೆ ಓಡಿ ಹೋಗಿತ್ತು, ಮನೆಯಲ್ಲಿ ವಟಗುಡುತ್ತಿರುವ ಎಫ್‌ಎಂನ ರೇಡಿಯೋ ಜಾಕಿ, ಹೊರಗೆ ಚಿಲಿಪಿಲಿಗುಡುತ್ತಿರುವ ಹಕ್ಕಿ, ಕಸಗುಡಿಸುತ್ತಿರುವ ಪಕ್ಕದಮನೆ ಪದ್ದುನ ಪೊರಕೆ ಸದ್ದು, ಓಣಿಯಲ್ಲಿ ಪ್ರತಿದ್ವನಿಸುತ್ತಿದ್ದ ಹೂವಾಡಗಿತ್ತಿ ಗುಲಾಬಿಯ ಕೂಗು, ಏನೊಂದು ಕೇಳಿದರೂ ಕೇಳಿಸದಂತೆ ಆವರಿಸಿತ್ತು ನಿಶಬ್ದ, ನನ್ನ ಮೌನಕ್ಕೆ ಜತೆಯಾಗಲೆಂದು. ಆ ನೀರಸ ಮೌನಕ್ಕು ಕೂಡ ನಿಶಬ್ದ ಜತೆಯಾದರೆ, ನಾನೊಬ್ಬನೇ ಯಾಕೊ ಒಬ್ಬಂಟಿಯಾದಂತಿತ್ತು.

ಮದುವೆಯಾಗಿ ಮಡದಿ ಮನೆಯಲ್ಲಿದ್ದು, ಮನೆತುಂಬ ಮಕ್ಕಳಿರಲವ್ವ ಅಂತ ಹರಸುವ ಹೊತ್ತಿನಲ್ಲಿ, ಇವನ್ಯಾಕೆ ಒಬ್ಬಂಟಿಯಾದಾನು ಅಂದಿರಾ, ಸುತ್ತ ಸಂತೆ ಸೇರಿದ್ದರೂ ಒಮ್ಮೊಮ್ಮೆ ಹೀಗೆ ಏಕಾಂಗಿ ಅನಿಸಿಬಿಡುತ್ತದೆ, ಈ ಮನಸೇ ಹಾಗೆ, ಯಾರೂ ಇಲ್ಲದ ಹೊತ್ತಿನಲ್ಲಿ ಯಾರನ್ನೊ ಕಲ್ಪಿಸಿಕೊಂಡು ಕನಸು ಕಟ್ಟುವ ಮನಸು, ಎಲ್ಲರಿದ್ದರೂ ಎಲ್ಲೊ ದೂರ ಹೋಗಿ ಒಬ್ಬಂಟಿಯಂತೆ ನಿಂತು ಬಿಡುತ್ತದೆ. ಇನ್ನೊಂದು ಬಾರಿ ಬಾಯಿತುಂಬ ಆಕಳಿಸಿ, ಮೈಮುರಿದು ಮೇಲೆದ್ದವನು ಮತ್ತೇನೂ ಮಾಡಲು ಇಲ್ಲವೇನೊ ಅನ್ನುವಂತೆ ಮತ್ತೆ ಅಲ್ಲೇ ಕುಳಿತೆ, ಅವಳು ಬಂದಳು.

ದಿಕ್ಕೆಟ್ಟು ದೇವರ ನೆನೆಸುತ್ತಿದ್ದಂತೆ ಕೂತವನನ್ನು ನೋಡಿ, ಅಲುಗಿಸಿ ಏನಾಯ್ತು ಅನ್ನೊವಂತೆ ಹುಬ್ಬು ಹಾರಿಸಿದಳು, ಸುಮ್ಮನೇ ನಕ್ಕೆ, "ಏನು ಮೌನವೃತಾನಾ, ಮಾತಾಡೊಲ್ವಾ" ಅಂತಂದಳು, ಅವಳಿಗೆ ಗೊತ್ತಾಗಿತ್ತು ಒಂದು ಮಾತಾಡಿದರೆ ಹತ್ತು ಹಲವು ಹರಟೆ ಹೊಡೆಯುವವ ಸುಮ್ಮನೇ ಕೂತಿದ್ದರೆ ಗೊತ್ತಾಗದಿದ್ದೀತೆ. ಮತ್ತೇನೂ ಮಾತೇ ಹೊರಡದಿದ್ದಾಗ, ಅವಳೂ ಒಂದು ಸಾರಿ ಹಲ್ಲು ಕಿರಿದು ಹೊರಟು ಹೋದಳು, ಈ ಮಾತಿನ ಮಷೀನಿನ ಬ್ಯಾಟರಿ ಬಿಸಿಯಾಗಲು ಸ್ವಲ್ಪ ಸಮಯ ಬೇಕೇನೊ, ಇನ್ನೊಂದಿಷ್ಟು ಹೊತ್ತಾದರೆ ತಾನೇ ಸರಿಹೊಗುತ್ತದೆಂದು. ಮೌನ ಮಾತಾಡು ನೋಡೊಣ ಅಂತ ಮುಂದೆ ಕೂತಿದ್ದರೂ ಮತ್ತೆ ನಾನು ಒಬ್ಬಂಟಿಯೇ.

ಹಲ್ಲಿನೊಂದಿಗೆ ಬ್ರಷು ತೆಕ್ಕೆ ಹಾಯ್ದು ನಾನಿನ್ನ ಜತೆಯಿದ್ದೇನೆ ಅನ್ನುತ್ತಿದೆಯೇನೊ ಅನ್ನುವಂತೆ ಹಲ್ಲುಜ್ಜಿದೆ, ಬಕೆಟ್ಟಿಗೆ ಜತೆಯಾಗಿ ತೂಗುಬಿದ್ದಿದ್ದ ಮಗ್ ಕಿತ್ತುಕೊಂಡು ಮುಖ ತೊಳೆದರೆ, ನೀರಿಗೆ ಜತೆಯಾಗಿ ಸೋಪು ತೊಳೆದು ಹೋಯ್ತು. ಜಗತ್ತಿನಲ್ಲಿ ಎಲ್ಲ ಜತೆ ಜತೆಯಾಗೇ ಇದೆ, ನಾನೊಬ್ಬನೇ ಒಬ್ಬಂಟಿಯೇನೊ ಅಂತ ಅಣಕಿಸಿದಂತೆ. ಹಾಗೆ ನೋಡಿದರೆ ನಾನೆಲ್ಲಿ ಒಬ್ಬಂಟಿ ಇದ್ದಾಳಲ್ಲ ನನ್ನಾಕೆ ಅಂತ ಅವಳಿದ್ದಲ್ಲಿಗೇ ಹೋದೆ, ಮಾತಾಡುವ ಮಲ್ಲಿ, ಮಾತಿಲ್ಲದೇ ಕೈಗೆ ಕಾಫಿ ಕಪ್ಪಿತ್ತಳು, ಕಪ್ಪಿನ ಜತೆ ಬಸಿ(ಸಾಸರ್) ಕೂಡ ಬಂತು ಜತೆಯಾಗಿ. ಹಾಗೇ ಹೊರಗೆ ಬಂದು ಓದಲೆಂದು ಪೇಪರು ಕೈಗೆತ್ತಿಕೊಂಡೆ ಸಪ್ಲಿಮೆಂಟು ಉಚಿತವಾಗಿ ಅದರ ಜತೆ ಸೇರಿಕೊಂಡಿತ್ತು. ಓದಲೂ ಮನಸಿಲ್ಲದೇ ಅದನ್ನಲ್ಲೇ ಬೀಸಾಕಿ, ಬಿಸಿ ಬಿಸಿ ಕಾಫಿ ಹೀರಿದರೆ ಕಾಫಿ ಪುಡಿಗೆ ಹಾಲು ಸಕ್ಕರೆ ಕೂಡಿತ್ತು.

ಅಲ್ಲೇ ಬಂದು ಅವಳೂ ಪಕ್ಕ ಕೂತಳು, "ಮುಂಜಾನೆಯಿಂದ ನೋಡ್ತಾ ಇದೀನಿ, ಏನಾಗಿದೆ ನಿಮಗೆ, ಮಾತಿಲ್ಲ ಕಥೆಯಿಲ್ಲ" ಅಂತ ಮತ್ತೆ ಕೆದಕಿದಳು, ಧೀರ್ಘ ನಿಟ್ಟುಸಿರು ಬಿಟ್ಟು, "ಯಾಕೊ ಒಬ್ಬಂಟಿ ಅಂತ ಅನಿಸ್ತಾ ಇದೆ, ಮಾತನಾಡಲೇ ಮನಸಿಲ್ಲ, ಒಂಥರಾ ಬೇಜಾರು" ಅಂತ ಹೇಳಿದೆ, ಅವಳಿಗೇನು ಹೇಳಬೇಕೊ ತಿಳಿಯಲಿಲ್ಲ, ಸಪ್ತಪದಿ ತುಳಿದು ಸಂಗಾತಿಯಾಗಿರುತ್ತೇನೆ ಅಂತ ವಚನವಿತ್ತವನೇ, ಯಾಕೊ ಒಬ್ಬಂಟಿ ಅನಿಸ್ತಾ ಇದೆ, ಅಂದರೆ ಏನು ಹೇಳಿಯಾಳು. "ನಾನಿಲ್ಲವೇ ಇಲ್ಲಿ, ನೀವ್ಯಾಕೆ ಒಬ್ಬಂಟಿ, ಏನೇನೊ ಮಾತಾಡಬೇಡಿ ನೀವು" ಅಂತ ಹತ್ತಿರ ಬಂದು ಕೈಹಿಡಿದುಕೊಂಡು ಕೂತಳು, ಅವಳಿಗೇನು ಅಂತ ಹೇಳಲಿ, ಅವಳು ನಾನು ಅಂತ ಬೇರೆ ಬೇರೆಯಾದರೆ ಅವಳಿಗೆ ನಾ ಜತೆ, ನನಗವಳು ಆಗಬಹುದೇನೊ, ಆದರೆ, ನಾನು ನನ್ನಾಕೆ ಒಂದೇ ಆದರೆ... ಅಲ್ಲಿ ಜತೆ ಯಾರು. ನನಗವಳು ಜತೆ ಅಂತ ಹೇಳಿ ಅವಳ ನನ್ನಿಂದ ಬೇರೆ ಮಾಡಲೇ,
ನಾನು ಅವಳು ಇಬ್ಬರೇ?, ಇಬ್ಬರೂ ಸೇರಿ ಒಬ್ಬರೇ? ಒಬ್ಬರೇ ಆದರೆ ಒಬ್ಬಂಟಿ ಅಲ್ಲವೇ... ಅಂತ ಏನೇನು ಹುಚ್ಚು ಯೋಚನೆಗಳು ಸುತ್ತ ಮುತ್ತಿಕೊಂಡವು. ಆ ಯೋಚನೆಗಳ ನಡುವೆ ನಾನೊಬ್ಬನೇ ಒಬ್ಬಂಟಿ ಬಂಧಿಯಾಗಿದ್ದೆ.

ಸ್ವಲ್ಪ ಹೊತ್ತು ಸುಮ್ಮನಿದ್ದವಳು, "ಒಮ್ಮೊಮ್ಮೆ ಹಾಗೇ ಒಬ್ಬಂಟಿ ಅನಿಸಿಬಿಡುತ್ತದೆ, ಆದರೆ ಅದ್ಯಾಕೊ ಗೊತ್ತಿಲ್ಲ" ಅಂತ ತನ್ನ ಅಂತರಾಳ ತೆರೆದಳು, ನಾನು ಒಬ್ಬಂಟಿ ಅಂದಿದ್ದಕ್ಕೆ ಅವಳಿಗೂ ಹಾಗೇ ಅನ್ನಿಸಿತೇನೊ ಪಾಪ ಅಂತ "ನಾ ನಿನ್ನೊಂದಿಗೇ ಇದ್ದೇನೆ, ಆದರೂ ಯಾಕೊ ಹೀಗೆ ಅನಿಸ್ತಾ ಇದೆ" ಅಂತ ನನ್ನ ದುಗುಡ ಹೊರತೆಗೆದೆ. "ಒಂದೊಂದು ದಿನ ಮನೇಲಿ ಒಬ್ಳೆ ಇರ್ತೀನಲ್ಲ, ಆಗಲೂ ಹಾಗೆ ಅನಿಸಿಬಿಡುತ್ತದೆ, ಏನು ಮಾಡಲೂ ತಿಳಿಯುವುದಿಲ್ಲ, ಯಾರಿಗೊ ಫೋನು ಮಾಡಿ ಹರಟುತ್ತೇನೆ" ಅಂತ ತನ್ನನುಭವ ಹೇಳಿದರೆ, "ನನಗೇನೊ ಯಾರೊಂದಿಗೂ ಮಾತಾಡಲೂ ಮನಸಿಲ್ಲ" ಅಂತ ನಾನಂದೆ, ಅವಳೊಂದಿಗೂ ಕೂಡ ಅಂತ ಸುಮ್ಮನೇ ಕೂತಳು.

ಬಹಳ ಹೊತ್ತು ಹಾಗೇ ಕೂತಿದ್ದರೆ ಎಲ್ಲಿ ನಿಜವಾಗಲೂ ಒಬ್ಬಂಟಿಯಾದೇನೊ ಅನ್ನಿಸಿರಬೇಕು ಅವಳಿಗೆ "ನೀವು ಹೀಗೇ ಕೂರೋದಾದ್ರೆ, ಕೂತು ಬಿಡಿ ಒಬ್ಬಂಟಿ ಅಂತ, ನಾ ತವರುಮನೆಗೆ ಹೋಗಿ ಬಿಡ್ತೀನಿ" ಅಂತ ಹೆದರಿಸಿದಳು, "ಮೊದಲೇ ಒಬ್ಬಂಟಿ ಅನಿಸ್ತಾ ಇದೆ, ನೀನೂ ಹೋದರೆ" ಅಂದರೆ, "ಇದಾಳಲ್ಲ ನಿಮ್ಮ ಜತೆ ಪಕ್ಕದ ಮನೆ ಪದ್ದು" ಅಂತ ಕೀಟಲೆಗಿಳಿದಳು, "ಪಕ್ಕದಮನೆ ಬಿಡು, ನನಗೇನೊ ಊರು ಬಿಟ್ಟು ಎಲ್ಲೊ ದೂರ ದಟ್ಟಡವಿಯಲ್ಲಿ ಹೋಗಿ ಸುಮ್ಮನೇ ಕೂತುಬಿಡಬೇಕೆನ್ನಿಸಿದೆ ಒಬ್ಬಂಟಿಯಾಗಿ" ಅಂದೆ. "ಬಟ್ಟೆ ಎಷ್ಟು ಪ್ಯಾಕ್ ಮಾಡಲಿ" ಅಂದ್ಲು, ಈಗ ನಾನು ಕಾಡಿಗೆ ಹೊರಟಿದ್ದೇನೇನೊ ಅನ್ನುವಂತೆ. "ಹಾಗಲ್ಲ, ಅದು ಅನಿಸಿಕೆ ಮಾತ್ರ, ಎಲ್ಲೊ ದೂರ ಬೆಟ್ಟದ ಮೇಲೆ ಹತ್ತಿ ಅದರ ತುಟ್ಟತುದಿಗೆ ಕೂತು ಬಿಡಬೇಕು ಅನ್ನಿಸುತ್ತದೆ" ಅಂದರೆ, "ಇಲ್ಲೇ ಈ ಏಣಿ ಮೇಲೆ ಏರಿ ಕೂರಲೇ ಭಯ, ಇನ್ನು ಬೆಟ್ಟವಂತೂ ದೂರದ ಮಾತು" ಅಂತ ತಳ್ಳಿಹಾಕಿದಳು. "ನಾನೂ ಅದನ್ನೇ ಹೇಳುತ್ತಿರುವುದು, ಅಷ್ಟು ಏಕಾಂಗಿಯಾಗಿಬಿಡಬೇಕು ಅನ್ನಿಸುತ್ತದೆ, ಆದರೆ ಆಗುವುದಿಲ್ಲ, ಅದರೂ ಅನ್ನಿಸುವುದೇಕೆ ಅಂತ ಗೊತ್ತಿಲ್ಲ,
ಕಡಲತೀರದಲ್ಲಿ ಕಾಲಿಗೆ ಅಲೆ ತಾಕುತ್ತಿದ್ದರೆ ಉಸುಕಿನಲ್ಲಿ ಬಿದ್ದುಕೊಂಡು ಒಬ್ಬನೇ ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸಬೇಕೆನ್ನಿಸುತ್ತದೆ." ಅಂದರೆ, "ರೀ ನಾನೂ ಜತೆ ಬರ್ತೀನಿ, ಎಣಿಸೋಕೆ ನಿಮ್ಮ ಕೈಬೆರಳು ಸಾಕಾಗಲ್ಲ, ನಾನು ಸ್ವಲ್ಪ ಹೆಲ್ಪ ಮಾಡ್ತೀನಿ" ಅಂತ ದುಂಬಾಲು ಬಿದ್ದಳು. "ಹಾಗೆ ಹೋಗಲು ಬೆಂಗಳೂರಲ್ಲಿ ಯಾವ ಕಡಲೂ ಇಲ್ಲ, ನಾನು ಹೊರಟೂ ಇಲ್ಲ, ಆದರೆ ಹಾಗೆ ಅನಿಸುತ್ತದೆ ಅಂತ ಹೇಳ್ತಾ ಇದೀನಿ" ಅಂದರೆ, "ಏನು ಅನಿಸಿಕೆನೊ ಏನೊ, ಅದೇ ನೆಪದಲ್ಲಿ ಮಂಗಳೂರು ಟ್ರಿಪ್ ಆಗುತ್ತೇನೊ ಅಂತ ನಾನೆಣಿಸಿದ್ದೆ" ಅಂತವಳು. "ಎಲ್ಲೊ ದೂರದ ಊರಿಗೆ ಹೋಗುತ್ತಿರುವ ಬಸ್ಸಿನಲ್ಲಿ ಒಬ್ಬನೇ ಕಿಟಕಿ ಪಕ್ಕ ಕೂತು ದೂರ ದೂರಕೆ ದಾರಿಯುದ್ದಕ್ಕೂ ನೋಡುತ್ತಿರಬೇಕು ಅನಿಸುತ್ತದೆ" ಅಂದರೆ, "ಟಿಕೆಟ್ಟು ಎಲ್ಲೀವರೆಗೆ ಅಂತ ತೆಗೆದುಕೊಳ್ಳೊದು" ಅಂತ ಕೇಳಿದ್ಲು, ನಾನು ಪಕ್ಕದ ದಾರಿ ನೋಡುತ್ತಿರುವ ಭಾವನೆ ಬಗ್ಗೆ ಮಾತಾಡುತ್ತಿದ್ದರೆ, ಇವಳಿಗೆ ಟಿಕೆಟ್ಟಿನ ಚಿಂತೆ, "ಅದು ಹಾಗಲ್ಲ" ಅಂತ ಸಮಜಾಯಿಸಿ ನೀಡಲು ಹೋದಾಗ, "ನೀವು ಹೇಳುವುದೆಲ್ಲ ಅರ್ಥವಾಗಿದೆ, ಆದರೆ ನಿಮ್ಮ ಆ ಒಂಟಿತನಕ್ಕೆ ಕಡಿವಾಣ ಹಾಕಲೇ ನಾನೀ ಕೀಟಲೆಗಿಳಿದಿದ್ದು" ಅಂದಳು. ಹೌದಲ್ಲ, ಮಾತನಾಡಲೇ ಮನಸಿಲ್ಲ ಅಂತ ಕೂತವನನ್ನು ಕೆದಕಿ ಏನೇನೊ ಮಾತಾಡಿಸಿ ಒಂಟಿತನದ ಆ ಭಾವನೆಯನ್ನೇ ದೂರ ಮಾಡಿದ್ದಳಲ್ಲ, ಇವಳು ನನ್ನೊಂದಿಗಿರುವವರೆಗೆ ನಾನೇನು ಒಬ್ಬಂಟಿಯಾಗಲಿಕ್ಕಿಲ್ಲ ಅಂತ ಅನ್ನಿಸತೊಡಗಿತ್ತು.

ಏನೊ ಒಮ್ಮೆ, ಒಂದು ದಿನ ಹೀಗೆ ಎಲ್ಲರಿಗೂ ಒಬ್ಬಂಟಿ ಅಂತ ಅನ್ನಿಸಿರಲೇಬೇಕು, ಎಲ್ಲರ ಜತೆಗಿದ್ದರೂ, ಎಲ್ಲರ ನಡುವಿದ್ದರೂ ಎಲ್ಲೊ ಕಳೆದುಹೋದಂತೆ, ಯಾರೂ ಇಲ್ಲದೇ ಒಬ್ಬಂಟಿಯಾಗಿದ್ದಂತೆ, ಏನೂ ಮಾತಾಡದೇ ಮೌನವಾಗಿ ಕೂತುಬಿಡಬೇಕು ಅಂತ ಅನಿಸಿರಬೇಕು. ಒಂದು ದಿನವಾದರೆ ಪರವಾಗಿಲ್ಲ ಆದರೆ ಹಾಗೇ ಆ ಭಾವನೆ ಉಳಿದುಹೋಗಬಾರದು, ಸಂಘಜೀವಿ ಮಾನವನೇನೂ ಒಂಟಿಸಲಗವೇನಲ್ಲ, ಒಂಟಿಯಾಗಿದ್ದವರಿಗೂ ಯಾರೋ ಒಬ್ಬ ಗೆಳೆಯನಾದರೂ ಇದ್ದೇ ಇರುತ್ತಾನೆ. ಇಲ್ಲ ಒಮ್ಮೊಮ್ಮೆ ಇನ್ನೊಂದು ತರಹದ ಭಾವನೆ, ಎಲ್ಲ ಇದ್ದರೂ ಬಿಟ್ಟು ಎಲ್ಲೋ ದೂರ ಒಬ್ಬಂಟಿಯಾಗಿ ಹೋಗಬೇಕು ಅನ್ನೊವಂತೆ, ಹಾಗೆ ಹೋಗಲೂ ಆಗುವುದಿಲ್ಲ, ಸಂಸಾರ, ಸಂಗಾತಿ, ಸ್ನೇಹಿತರು ಅಂತೆಲ್ಲ ಇರುವಾಗ, ಮತ್ತೊಂದು ದಿನ ಆ ಒಬ್ಬಂಟಿ ಬದುಕೂ ಬೇಡವಾಗಬಹುದು.

ಮಾತಿಲ್ಲದೇ, ಹಾಗೆ ಎಷ್ಟೋ ಹೊತ್ತು ಕುಳಿತಿದ್ದೆವು, ಮಾತನಾಡಬೇಕು ಅಂತ ಅನಿಸದೇ. ಮನೆಯಲ್ಲಿ ಇಬ್ಬರಿದ್ದರೂ ಯಾರಿಲ್ಲವೇನೊ ಅನ್ನೊವಂತೆ ಮನೆಯೇ ಒಬ್ಬಂಟಿಯಾಗಿತ್ತು. ಅಷ್ಟರಲ್ಲಿ ವಾಣಿ, ಅದೇ ನಮ್ಮ ದೂರವಾಣಿ ಮೊಬೈಲು ಕಿರುಚಿಕೊಂಡಳು, ನನ್ನ ಜತೆಗಾದರೂ ಮಾತಾಡಿ ಅಂತ. ನನ್ನೊಂದಿಗೇ ಮಾತಾಡುತ್ತಿಲ್ಲ ಇನ್ನು ನಿನ್ನೊಂದಿಗೇನು ಮಾತಾಡುತ್ತಾರೆ ಅಂತ ಅದರ ತಲೆಗೊಂದು ಕುಕ್ಕಿ ಪಕ್ಕಕ್ಕಿಟ್ಟಳು, ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಕೂಗಿಕೊಂಡಿತು, ಯಾರೋ ಏಕಾಂತಕ್ಕೆ ದಾಳಿಯಿಡಲು ಬಂದರೇನೊ ಅನ್ನುವಂತೆ, ಬಾಗಿಲು ತೆರೆದರೆ ಒಬ್ಬಂಟಿ, ಒಬ್ಬ ಅಂಟಿ ಬಂದಿದ್ದರು, ಒಬ್ಳೆ ಕೂತು ಬೇಜಾರಾಗಿತ್ತು ಸುಮ್ನೇ ಹಾಗೇ ಮಾತಾಡಿಸಿಕೊಂಡು ಹೋಗೊಣವೆಂದು ಬಂದೆ ಅಂತ... ಮತ್ತೆ ಹೀಗೆ ಒಬ್ಬಂಟಿಯಾಗಿ, ಅಲ್ಲಲ್ಲ ನನ್ನಾkಯೊಂದಿಗೆ ಸಿಗುತ್ತೇನೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/obbanti.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, October 4, 2009

ಕಾಮನ್-ಬಿಲ್ಲು!

ಸುಳ್ಳೇ ಗೊರಕೇ ಸದ್ದು ಮಾಡ್ತಾ ಮಲಗಿದ್ದೆ, ಇವಳು ಪಾಪ ಗಾಢ ನಿದ್ರೇಲೀ ಇದೀನಿ ಅಂತ ಏಳಿಸದಿರಲಿ ಅಂತ, "ರೀ ಸುಮ್ನೇ ಏಳಿ ನಂಗೊತ್ತು ನೀವು ನಿದ್ರೇಲೀ ಗೊರಕೆ ಸದ್ದೆಲ್ಲ ಮಾಡಲ್ಲ, ನಾಟಕ ಸಾಕು" ಅಂತ ಇವಳು ಬಂದು ಅಲಾರ್ಮಿನಂತೆ ಗೊಣಗಿದಳು, ಅಲಾರ್ಮ್ ಸದ್ದು ಮಾಡಿದ್ರೆ ಏನ್ ಎದ್ದೇಳ್ತೀವಾ, ಬೆಳಗಾಯ್ತು ಅಂತ ಗೊತ್ತಾಗ್ತದೆ ಅಷ್ಟೇ, ನಾವೆದ್ದೇಳೋದು ನಮಗಿಷ್ಟ ಬಂದಾಗಲೇ, ಅಂತನಕೊಂಡು ಇನ್ನು ಜೋರು ಸದ್ದು ಮಾಡುತ್ತ ಮಲಗಿದೆ, "ಇದು ಜಾಸ್ತಿ ಆಯ್ತು" ಅಂತ ಮತ್ತೊಂದು ವಾರ್ನಿಂಗ್ ಕೊಟ್ಟಳು, ಅಲ್ಲೇ ಮಲಗಿದಲ್ಲಿಂದಲೇ "ಒಮ್ಮೊಮ್ಮೇ ಸುಸ್ತಾಗಿ ಮಲಗಿದಾಗ ಗೊರಕೆ ಸದ್ದು ಎಲ್ರೂ ಮಾಡ್ತಾರೆ" ಅಂತ ಉತ್ತರಿಸಿದೆ. "ಓಹೋ, ನಿದ್ರ್‍ಎಲೀ ಉತ್ತರ ಕೂಡಾ ಕೊಡ್ತಾರೆ ಅಲ್ವಾ" ಅಂತ ಅಲ್ಲಿಗೇ ಬಂದು ತಡವಿದಳು. ಇನ್ನೂ ಎದ್ದೇಳದಿದ್ದಾಗ "ಈಗ ಎದ್ದರೆ ಸರಿ ಇಲ್ಲಾಂದ್ರೆ ಪೇಂಟ್ ತಂದು ಸುರೀತೀನಿ" ಅಂದ್ಲು. ಇದೇನಿದು ಹೊಸದು ನೀರು ಸುರಿಯೋ ಬದಲು ಪೇಂಟ್ ಅಂತೀದಾಳೆ ಅಂತ ಅನುಮಾನ ಬೇಡ, ಅಂದು ಮನೆ ಪೇಂಟ್ ಮಾಡಿಸೋರು ಇದೀವಿ ಅಂತ ಆಗಲೇ ನನಗೂ ನೆನಪಾಗಿದ್ದು. ತಡಬಡಿಸಿ ಎದ್ದೆ, "ಪೇಂಟರ್ ಬಂದಿದೀದಾನಾ" ಅನ್ನುತ್ತ. "ಇನ್ನೂ ಇಲ್ಲ, ಪೇಂಟ ತಂದಿಡಿ ಬರ್ತಾನೆ" ಅಂದ್ಲು. "ಯಾವ ಬಣ್ಣ ಇನ್ನೂ ನಿರ್ಧರಿಸೇ ಇಲ್ಲ" ಅಂದ್ರೆ. "ಒಂದು ನಾಲ್ಕೈದು ಬಣ್ಣ ಸ್ವಲ್ಪ ಸ್ವಲ್ಪ ತಂದಿಡಿ, ನೊಡೋಣ" ಅಂತ ಹೇಳಿದಳು, "ಇದೇನು ಮನೇನಾ ಕಾಮನಬಿಲ್ಲುನಾ, ಮನೆಗೆ ಪೇಂಟ ಮಾಡ್ತಾ ಇರೋದು ಕಣೇ, ಕಾಮನಬಿಲ್ಲು ಬಿಡಿಸ್ತಾ ಇಲ್ಲ, ಬಿಲ್ಲು ಎಷ್ಟಾಗುತ್ತೊ ಏನೊ" ಅಂತ ಕಣ್ಣುಜ್ಜುತ್ತ ಹೊರಬಂದೆ.

ಈರುಳ್ಳಿ ಮೆನಸಿನಕಾಯಿ ಹೆಚ್ಚುತ್ತ ಕುಳಿತಿದ್ದವಳು "ಇದೋ ಈ ಮೆಣಸಿನಕಾಯಿ ಇದೆಯಲ್ಲ, ಈ ಬಣ್ಣ ಇಲ್ಲಿ ಸರಿಯಾಗಿರತ್ತೇ" ಅಂತ ಗೊಡೆಯೊಂದನ್ನು ತೋರಿಸಿದಳು. "ಹೂಂ ಮತ್ತೆ ಅಲ್ಲಿ, ಯಾವುದು, ಸೌತೇಕಾಯಿ, ಗಜ್ಜರಿ ತಂದು ಕೊಡಲಾ ಬಣ್ಣ ಹೇಳಲು" ಅಂದ್ರೆ. "ರೀ ಗಜ್ಜರಿ ಬಣ್ಣ ಅಲ್ಲಿ ಸೂಪರ್" ಅಂತಂದಳು. "ಸರಿ ಬಿಡು ಬಣ್ಣ ತರುವ ಮೊದಲು ತರಕಾರಿ ಮಾರ್ಕೆಟಗೇ ಹೋಗಬೇಕು ಅಂತಾಯ್ತು, ಪೇಂಟ ಅಂಗಡೀಲಿ ತರಕಾರಿ ಹಿಡಿದು ನಿಲ್ಬೇಕು ಅಷ್ಟೇ" ಅಂತ ಬಯ್ದರೂ, ಮತ್ತೆ "ಈ ಕೆನೆ ಬಣ್ಣ ಬೆಡರೂಮಿಗೆ" ಅಂತ ಹಾಲಿನ ಪಾತ್ರೆ ತೋರಿಸಿದಳು. "ಸರಿ ಮೊದಲು ಹಾಲು ತರ್ತೀನಿ ಹಾಗಾದ್ರೆ, ಹಾಲಿನಂಗಡಿ ಹಾಸಿನಿ ನೋಡಿ ಬಹಳ ದಿನ ಬೇರೆ ಆಯ್ತು" ಅಂತ ನಡೆದರೆ, ದುರುಗುಟ್ಟಿಕೊಂಡು ನೋಡಿದಳು.

ಟೀ ಹೀರುತ್ತ ಕೂತವರ ಮಾತು ಮತ್ತೆ ಬಣ್ಣದೆಡೆಗೆ ಮರಳಿತು, "ಮನೆಯೆಲ್ಲ ಕ್ರೀಮ, ಕೆನೆ ಬಣ್ಣ ಮಾಡಿಸೋಣ ಬೆಳಕು ಚೆನ್ನಾಗಿರ್ತದೆ" ಅಂತ ನಾನಂದೆ,
"ಮನೆ ಪೂರಾ ಒಂದೇ ಬಣ್ಣ ಮಾಡಿಸೋಕೇ ಇದೇನು ವೈಟಹೌಸಾ" ಅಂತ ತಿರುಗಿಬಿದ್ಲು. ಇವಳಂತೂ ಕಾಮನಬಿಲ್ಲು ಮಾಡೊ ಯೋಚನೆಯಲ್ಲೆ ಇದ್ದಂತಿತ್ತು, "ಅದೂ ಒಳ್ಳೆ ಐಡಿಯಾನೇ, ಮನೆಯೆಲ್ಲ ಬಿಳಿ ಬಣ್ಣ ಪೇಂಟ್ ಮಾಡಿಸಿ, ಯಾವ ರೂಮಲ್ಲಿ ಯಾವ ಬಣ್ಣ ಬೇಕೊ ಆ ಬಣ್ಣದ ಲೈಟು ಹಾಕಿದ್ರೆ, ಹಾಲ್ ಒಂದಿನಾ ಹಸಿರು, ಮತ್ತೊಂದಿನಾ ಕೆಂಪು" ಅಂತಿದ್ದರೆ, "ಇನ್ನೊಂದು ದಿನಾ ಕೇಸರಿ... ಸರಿಯಾಗಿರ್ತದೆ, ಮನೇನಾ ಟ್ರಾಫಿಕ ಸಿಗ್ನಲ್ಲಾ, ಕರೆಂಟು ಬಿಲ್ಲು ಯಾರು ಕಟ್ಟೊದು" ಅಂತ ಸಿಡುಕಿದಳು. "ನಿಂಗೆ ಯಾವ ಬಣ್ಣ ಬೇಕೊ ಅದೇ ಮಾಡಿಸ್ಕೊ ಹೋಗು, ದಿನದ ಹನ್ನೆರಡು ಘಂಟೆ ಆಫೀಸಲ್ಲೇ ಇರ್ತೀನಿ, ಮನೆ ಬಣ್ಣ ಯಾವುದಿದ್ರೆ ಏನಂತೆ" ಅಂತ ಕೈಚೆಲ್ಲಿದೆ. ಪಕ್ಕದಲ್ಲಿ ಬಂದು ಆತುಕೊಂಡು ಕೂತು ಬಣ್ಣ ಬಿಟ್ಟು ಬೆಣ್ಣೆ ಹಚ್ಚತೊಡಗಿದಳು "ಬೇಜಾರಾಯ್ತಾ" ಅಂತ. "ನನಗ್ಯಾಕೆ ಬೇಜಾರು ನಿನ್ಗೆ ಹೇಗೆ ಬೇಕೋ ಹಾಗೆ ಬಣ್ಣ ಮಾಡಿಸು, ಬಣ್ಣದಲ್ಲಿ ಹೆಣ್ಮಕ್ಕಳಿಗೇ ಜಾಸ್ತಿ ತಿಳಿಯೋದು" ಅಂದೆ. "ಏಳು ಬಣ್ಣ ಸೇರಿನೇ ಬಿಳಿ ಬಣ್ಣ ಆಗೋದು ಅನ್ನೊ ಹಾಗೆ ಇಬ್ರೂ ಸೇರಿನೇ ನಿರ್ಧರಿಸೋದು" ಅಂದ್ಲು, "ಅದೇ ಬಿಳಿ ಬಣ್ಣ ಮಾಡಿಸಿ, ಅದರಲ್ಲಿ ನಿನ್ನಿಷ್ಟದ ಬಣ್ಣ ನನ್ನಿಷ್ಟದ ಬಣ್ಣ ಎಲ್ಲ ಇದೇ ಅನ್ಕೊಂಡರೆ" ಅಂದೆ, "ರೀ ಈಗೇನು ಬಿಳಿ ತಾನೆ ಅದೇ ಮಾಡಿಸಿ, ಆಮೇಲೆ ಧೂಳು ಕೂತು ಕಲೆಯಾದರೆ ನನ್ನ ಕೇಳ್ಬೇಡಿ" ಅಂತ ಈಗಲೇ ಎಚ್ಚರಿಸಿದಳು. ಅದೂ ನಿಜವೆನಿಸಿತು, ಅಲ್ದೆ ಇದೇನು ವೈಟಹೌಸೂ ಅಲ್ಲ ಆ ಬಣ್ಣ ಮಾಡಿಸೊಕೆ ಅಂತ.

"ಪಿಂಕ ಹೇಗಿರ್ತದೆ" ಅಂದೆ ಹುಡುಗಿಯರಿಗೆ ಅದು ಇಷ್ಟ ಆಗಬಹುದು ಅಂತ. "ಪಿಂಕ ಚಡ್ಡಿ, ಪಿಂಕ ಸ್ಲಿಪ್, ಪಿಂಕಿ ಫಿಂಗರ್ರು ಅಂತೆಲ್ಲ ಕೇಳಿ ಕೇಳಿ ಸಾಕಾಗಿಲ್ವಾ, ಮನೇನೂ ಅದೇ ಬಣ್ಣ ಬೇಕಾ" ಅಂತ ತಿರುಗಿಬಿದ್ಲು, "ನಂಗೂ ಇಷ್ಟ ಇರಲಿಲ್ಲ ಬಿಡು, ನಿನ್ಗೆ ಇಷ್ಟ ಎನೊ ಅಂತ ಕೇಳಿದೆ" ಅಂದೆ. "ನನ್ನಿಷ್ಟ ಎಲ್ಲ ಬೇಡ ನಿಮ್ಮಿಷ್ಟ ಹೇಳಿ" ಅಂತ ಕೇಳಿದ್ದಕ್ಕೆ "ಸುತ್ತಲೂ ತಿಳಿ ಹಸಿರು ಗಾರ್ಡನ್ನಿನಂತೆ ವಾಲ ಪೇಂಟಿಂಗ್, ಅದೊ ಆ ಗೋಡೆಯಲ್ಲಿ ನೀರಿಗೆ ಹೊರಟು ನಿಂತು ತಿರುಗಿ ನೋಡುತ್ತಿರುವಂತ ಹುಡುಗಿ, ಅಲ್ಲಿ ಪಕ್ಕದಲ್ಲಿ ಹುಲ್ಲು ಮೇಯುತ್ತಿರುವ ಹಸು, ಇಲ್ಲಿ ನೀರ ಝರಿ, ಆ ಪಿಲ್ಲರ ಸುತ್ತ ಹರಡಿರುವ ಬಳ್ಳಿ ಅಲ್ಲಲ್ಲಿ ಬಿಳಿ ಬಿಳಿ ಹೂವು, ಮೇಲೆ ತಿಳಿ ನೀಲಿ ಆಕಾಶ, ಮೋಡಗಳು, ಕತ್ತಲಾದರೆ ಈ ಬೆಡ್ ಮೇಲೆ ಮಲಗಿ ಮೇಲೆ ನೋಡುತ್ತಿದ್ದರೆ ಅಲ್ಲಲ್ಲಿ ಮಿನುಗುವ ನಕ್ಷತ್ರದಂತ ಚಿಕ್ಕ ಚಿಕ್ಕ ಎಲ್.ಈ.ಡೀ ಲೈಟುಗಳು. ಪಕ್ಕದಲ್ಲಿ ಚಂದ್ರನಂತೆ ನೀನು" ಅಂದೆ. ಕನಸುಗಣ್ಣುಗಳನ್ನು ತೆರೆದು ನೋಡುತ್ತಲೇ ಇದ್ಲು, ಅಲುಗಿಸಿದೆ ಮತ್ತೆ ಕಲ್ಪನೆಯಿಂದ ಹೊರಬಂದಳು, ಮತ್ತೆ ಹೇಳಿದೆ "ಇದು ನನ್ನಿಷ್ಟ, ಆದರೆ ಈ ರೀತಿ ಬಣ್ಣ ಮಾಡಿಸಿದರೆ ಬರುವ ಬಿಲ್ಲು ಎದೆಗೇ ನಾಟುತ್ತದೆ ಬಾಣದಂತೆ, ಅಲ್ಲದೇ ಬಾಡಿಗೆ ಮನೆ ಬೇರೆ, ಸ್ವಂತದ್ದಾದರೆ ನಮ್ಮಿಷ್ಟ ಏನು ಮಾಡಿದರೂ ಓಕೇ" ಅಂದೆ. "ಐಡಿಯಾ ಎನೋ ಬಹಳೇ ಚೆನ್ನಾಗಿದೆ, ಆದ್ರೆ ಕಾಸ್ಟ್ಲಿ" ಅಂತ ಸುಮ್ಮನಾದಳು.

ಅಷ್ಟರಲ್ಲಿ ಮನೆ ಮಾಲೀಕರು ಬಂದರು, ಈಗಿರುವ ಬಣ್ಣವೇ ಮಾಡಿಸಿ ಅಂತಂದರು, ನಮ್ಮ ಬದಲಾವಣೆ ಯೋಜನೆಗಳನ್ನು ಹೇಳಬೇಕೆನಿಸಿದರೂ ಮನೆ ಅವರದಲ್ಲವೇ ಅಂತ ಸುಮ್ಮನಾದೆವು, ಹಾಗೂ ಹೀಗೂ ಇವಳು ತಿಳಿನೀಲಿ ಬಣ್ಣ ಎಲ್ಲ ಕಡೆ ಒಂದೇ ರೀತಿ ಆಗುತ್ತದೆ ಅಂತ ಹೇಳಿ ಒಪ್ಪಿಸಿದಳು, ಹಾಲ್‌ನಲ್ಲಿನ ತಿಳಿ ಹಸಿರು ಬಣ್ಣಕ್ಕೆ ವಿದಾಯ ಹೇಳಿಯಾಯ್ತು. ಪೇಂಟರ್ ಬೇರೆ ಒಂದೇ ಬಣ್ಣವಾದರೆ ಅವನಿಗೂ ಅನುಕೂಲ ಅಂದ, ಅಲ್ಲದೇ ಉಳಿತಾಯ ಕೂಡ ಆಗುತ್ತದೆ ಅಂದದ್ದು ಕೇಳಿ ಖುಷಿಯಯ್ತು. ಇನ್ನೇನು ಹೊರಡಬೇಕೆನ್ನುವಲ್ಲಿ "ಬಾರ್ಡರಗೆ ಯಾವ ಬಣ್ಣ" ಅಂತ ಕೇಳಿದಳು. ನಾನು "ಇದೇನು ಸೀರೆನಾ, ಬಾರ್ಡರ ಬಣ್ಣ ಬೇರೆ ಮಾಡಿ ಗೊಂಡೆ ಕಟ್ಟೊದಕ್ಕೆ" ಅಂದೆ, ಅಷ್ಟರಲ್ಲಿ ಪೇಂಟರ್ "ಸರ್ ಸೀಲಿಂಗ ಬಾರ್ಡರ್ ಕಲರು ಬೇರೆ ಇರ್ತದೆ" ಅಂದ. ಗೊತ್ತಿಲ್ಲದೇ ಏನೊ ಹೇಳಹೋದ ನನ್ನ ಪೆಚ್ಚು ಮೋರೆ ನೋಡಿ ನಕ್ಕಳು "ಅದು ಮೇಡಮ್ ಇಷ್ಟ" ಅಂತ ಸಂಭಾಳಿಸಿದೆ.

ಅಂತೂ ಇಂತೂ ಮುಂಜಾನೆಯಿಂದ ಸಂಜೇವರೆಗೆ ಪೇಂಟರ ಹಿಂದೆ ಸುತ್ತಿ, ಅಲ್ಲಿ ಕೆತ್ತು, ಇಲ್ಲಿ ಮೆತ್ತು ಅಂತ ಏನೇನೊ ಹೇಳಿ ಪೇಂಟ್ ಮಾಡಿಸಿದಳು, ಸಂಜೇ ಹೊತ್ತಿಗೆ, ಅವಳ ಮುಖದಲ್ಲೂ ಬಣ್ಣ ಮೆತ್ತಿತ್ತು, "ಬಾರೆ ಇಲ್ಲಿ ಮೀಸೆ ಕೊರೆಯುತ್ತೀನಿ" ಅಂತ ಅಂದವನಿಗೆ ಗಲ್ಲದ ಮೇಲೆ ಅವಳು ಕೊರೆದ ಎರಡು ಗೆರೆಗಳೊಂದಿಗೆ ಥೇಟ್ ಆದಿವಾಸಿಗಳಂತೆ ಕಾಣುತ್ತಿದ್ದೆ, ನಾ ಕೊರೆದ ಮೀಸೆ ತಿರುವಿಕೊಂಡು, ನನ್ನ ಅವಳು ಹೆದರಿಸುತ್ತಿದ್ದುದು ನೋಡಿ ಪೇಂಟರ ಕೂಡ ನಗುತ್ತಿದ್ದ.

ಎನೇನೊ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತೇವೆ, ಬದುಕೇ ಬಣ್ಣ ತುಂಬಿ ಕಾಮನಬಿಲ್ಲು ಆಗಲಿ ಅನ್ನುತ್ತೇವೆ, ಅದರೆ ಅದೇ ಕಾಮನ್ ಮ್ಯಾನ, ಶ್ರೀಸಾಮಾನ್ಯನ ಪ್ರಾಬ್ಲ್ಂ ಅಂತ ಬಿಲ್ಲು ಧುತ್ತೆಂದು ಮುಂದೆ ಬಂದು ನಿಂತಾಗ ಕನಸುಗಳ ಬಣ್ಣ ಬಿಳಚಿಕೊಂಡುಬಿಡುತ್ತದೆ. ಒಬ್ಬರಿಗೆ ಹಸಿರು ಇಷ್ಟವಾರದೆ, ಇನ್ನೊಬ್ಬರಿಗೆ ಕೆಂಪು, ಮತ್ತೊಬ್ಬರಿಗೆ ನೀಲಿ... ಎಲ್ಲವನ್ನೂ ಸೇರಿಸಿದರೆ ಬಿಳಿ ಅಂತ ಹೀಗೆ ಬದುಕು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಸುತ್ತದೆ. ಹಾಗಂತ ಕನಸು ಕಾಣಲೇಬಾರದೆಂದಿಲ್ಲ, ಕಾಣಬೇಕು ಕನಸು ನನಸಾಗಿಸಲು ಶ್ರಮಿಸಬೇಕು, ನನಸಾಗದಿದ್ದರೆ ನಸುನಗುತ್ತ ಬಂದದ್ದನ್ನು ಸ್ವೀಕರಿಸಲೂ ಸಿದ್ಧರಾಗಿರಬೇಕು.

ನಮ್ಮಿಬ್ಬರ ಕಾಮನ್ ಇಷ್ಟವಾದ ತಿಳಿನೀಲಿ ಬಣ್ಣ ಮನೆ ತುಂಬ ಬಳಿದಾಗಿತ್ತು, ಬಿಲ್ಲು ಕೂಡ ಕಮ್ಮಿಯಾಗಿತ್ತು, ಒಂಥರಾ ಕಾಮನಬಿಲ್ಲೇ ಆಗಿತ್ತು. ಎಲ್ಲ ತೊಳೆದು ಮತ್ತೆ ಸಾಮಾನೆಲ್ಲ ಜೋಡಿಸಿ ಪೇರಿಸಿಟ್ಟು ಸುಸ್ತಾಗಿತ್ತು. ಬೆಡ್ ಮೇಲೆ ಮಲಗಿಕೊಂಡು ಪಕ್ಕದಲ್ಲಿದ್ದವಳಿಗೆ ಕೇಳಿದೆ "ಇಷ್ಟ ಆಯ್ತಾ ಬಣ್ಣ" ಅಂತ. "ನಿಮ್ಮ ಕನಸಿನ ಬಣ್ಣದಷ್ಟೇನೂ ಅಲ್ಲ, ಆದ್ರೆ ನಮ್ಮಿಬ್ಬರ ಇಷ್ಟದ ತಿಳಿನೀಲಿ ಆದರೂ ಇದೆ ಅಂತ ಸಮಾಧಾನ ಆಯ್ತು, ರೀ ಒಂದು ಕೆಲ್ಸ ಮಾಡೊಣ ಈ ಮೇಲಿನ ಸ್ಲ್ಯಾಬ ಕಿತ್ತು ತೆಗೆಸಿದ್ರೆ ಮೇಲೆ ಆಕಾಶ ನಕ್ಷತ್ರ ಎಲ್ಲ ಕಾಣಿಸ್ತದೆ" ಅಂದ್ಲು. "ಮಳೆ ಆದ್ರೆ ಮನೆಯಲ್ಲ ನೀರು ಸುರಿದು ಇಲ್ಲಿ ನೀರ ಝರಿ ಕೂಡ ಹರಿಯುತ್ತದೆ, ಹಾಗೆ ಹೊರಗೆ ಕಾಮನಬಿಲ್ಲೂ ಕಾಣ್ತದೆ" ಅಂದೆ, "ಅಲ್ಲಿ ನೀರಿಗಾಗಿ ಹೊರಟ ಹುಡುಗಿಯಂತೆ ಬಿಂದಿಗೆ ಹಿಡಿದುಕೊಂಡು ತಿರುಗಿ ನೋಡುತ್ತ ಬೇಕಾದ್ರೆ ನಾನು ನಿಲ್ತೀನಿ, ಹಸು ಒಂದು ತಂದರಾಯ್ತು ನೋಡಿ" ಅಂದ್ಲು. "ಬಕೆಟ್ಟು ತೆಗೆದುಕೊಂಡು ಝರಿಯ ನೀರು ಹೊರಹಾಕುತ್ತ ನಾ ನಿಲ್ಲಬಹುದುಲ್ಲ" ಅಂದೆ ನಕ್ಕಳು, "ನಮ್ಮನೆ ಅಂತ ಆದರೆ ಹಾಗೇ ಬಣ್ಣ ಮಾಡಿಸೋಣ, ಸಧ್ಯಕ್ಕೆ ನಮ್ಮಿಬ್ಬರ ಇಷ್ಟದ ಒಂದು ಬಣ್ಣವಾದರೂ ಇದೆಯಲ್ಲ" ಅಂತಂದೆ, "ನಮ್ಮನೆ ಆದರೆ ಕಾಮನಬಿಲ್ಲು ಮಾಡೊಣ" ಅಂತಿದ್ದಳು, ಹಾಗೇ ಕನಸುಗಳೊಂದಿಗೆ ನಿದ್ರೆಗೆ ಜಾರಿದೆವು, ಮತ್ತೆ ಹೀಗೆ ಬದುಕಿನ ಬಣ್ಣ ಬಣ್ಣದ ಕನಸುಗಳೊಂದಿಗೆ ಮತ್ತೆ ಸಿಗುತ್ತೇನೆ.


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.
ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/kamanabillu.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, September 27, 2009

ಚಂದ್ರನಿಂದ ನಲ್ಲಿ ಕನೆಕ್ಷನ್!

ದಸರಾ ಹಬ್ಬ ಆಯುಧಪೂಜೆ ಅಂತ, ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ, ಇನ್ನೇನು ಈವತ್ತು ಗಾಡಿ ತೊಳೆದು ಪೂಜೆ ಮಾಡೊ ಹೊತ್ತಿಗೆ ಮಧ್ಯಾಹ್ನ ಆಗುತ್ತದೆಂದು, ನಾನೇ ತೊಳೆದರಾಯ್ತು ಅಂತ ಇವಳಿಗೆ ನೀರು ಕೇಳಿದೆ, "ರೀ ನಲ್ಲಿ ನೀರು ಬಂದು ಎರಡು ದಿನ ಆಯ್ತು, ಸ್ನಾನಕ್ಕೇ ನೀರಿಲ್ಲ ಅಂತ ನಾನಿದ್ದರೆ, ನೀವು ಬೈಕ ತೊಳೆಯೋದಕ್ಕೆ ನೀರೆಲ್ಲಿಂದ ತರಲಿ" ಅಂದ್ಲು. "ಹೇ, ಚಂದ್ರನಲ್ಲೂ ನೀರಿದೆ ಅಂತ ಇಸ್ರೋ ಚಂದ್ರಯಾನದಿಂದ ಪತ್ತೆ ಆಗಿದೆ, ಅಂಥಾದ್ದರಲ್ಲಿ ನಮ್ಮನೇಲಿ ನೀರಿಲ್ಲ ಅಂದ್ರೆ ಹೇಗೇ" ಅಂದೆ, ಖಾಲಿ ಬಕೆಟು ಒಂದು ತಂದಿಟ್ಟು, "ಹೌದಾ ಹಾಗಿದ್ರೆ, ಆ ನಿಮ್ಮ ಚಂದ್ರನಿಂದ ಒಂದು ಬಕೆಟ್ಟು ನೀರು ತುಗೊಂಬನ್ನಿ, ನಂಗೂ ಬಟ್ಟೆ ತೊಳೆಯೋಕಾಗತ್ತೆ." ಅಂತ ಹಲ್ಲು ಕಿರಿದಳು, "ಛೇ, ನನಗೆ ರೈಲು ಬಿಡೊದು ಗೊತ್ತು, ರಾಕೆಟ್ಟು ಹಾರಿಸೋದು ಗೊತ್ತಿಲ್ವೇ, ಇಲ್ಲಂದ್ರೆ ಹೋಗಿ ತರಬಹುದಿತ್ತೇನೊ" ಅಂತ ಒಂದು ರೈಲು ಬಿಟ್ಟೆ. "ಪಾಪ ಹೌದಲ್ವಾ, ಒಂದು ಕೆಲಸ ಮಾಡಿ ನೀವೇನು ಹೋಗೊದು ಬೇಡ, ನಮ್ಮನೆಗೇ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಿಬಿಡಿ" ಅಂದ್ಲು....

ಆಕಾಶಕ್ಕೇ ಏಣಿ ಕಟ್ಟೊರನ್ನ ನೋಡೀದೀನಿ, ನಲ್ಲಿ ಹಾಕಿಸಿದ್ರೆ ನಾನೇ ಮೊದಲಿಕೆ ಆಗಬಹುದೇನೊ, ನೀರಿಗಾಗಿ ಎಲ್ರೂ ಪಾತಾಳ ಅಂತರ್ಜಲದತ್ತ ಮುಖ ಮಾಡಿದ್ರೆ, ಅಪ್ಪಟ ವಿರುದ್ಧ ದಿಕ್ಕಿನಲ್ಲಿ ಆಕಾಶದೆಡೆಗೆ ಕೈ ಚಾಚು ಅಂತ ಇವಳು ಹೇಳ್ತಿದಾಳೆ. "ಅಲ್ಲೀವರೆಗೆ ಪೈಪು ಹಾಕ್ಸೊಕೆ ಬಹಳ ಖರ್ಚಾಗತ್ತೇ, ಅಷ್ಟೆಲ್ಲ ದುಡ್ಡು ಇರೋಕೆ, ನಾನೇನು ಬಿಲ್ ಗೇಟ್ಸಾ, ಸಿಲ್ಲಿ ಸಾಫ್ಟವೇರ ಇಂಜನೀಯರು ನಾನು" ಅಂದೆ, ಅದೇ ಬಕೆಟ್ಟಿಗೆ ನಾಲ್ಕು ಮಗ್ ನೀರು ಸುರಿದು, "ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಇಷ್ಟೇ ನೀರಲ್ಲಿ ಎಲ್ಲಾ ಮುಗಿಸಿ ಪೂಜೆ ಮಾಡಿ ಬನ್ನಿ, ನಿಮ್ ಜತೆ ಮಾತಾಡ್ತಾ ನಿಂತರೆ ಹೋಳಿಗೆ(ಒಬ್ಬಟ್ಟು) ಹೊತ್ತಿ ಹೋಗುತ್ತೆ" ಅಂತ ಪಾಕಶಾಲೆ ಸೇರಿದಳು, ಅವಳಿಗೆ ಕಾಣದಂತೆ ಇನ್ನೆರಡು ಮಗ ನೀರು ಸುರಿದುಕೊಂಡು ಬೈಕ್ ತೊಳೆದದ್ದಾಯ್ತು. ತುಪ್ಪು ಹಾಕಿಕೊಂಡು, ಹೋಳಿಗೆ ತಿನ್ನುತ್ತ, "ಈ ಹೋಳಿ ಹಬ್ಬ ಯಾವಾಗ ಬರತ್ತೇ" ಅಂದೆ, "ಇನ್ನೂ ದೂರ, ಅದ್ಯಾಕೆ ನೆನಪು ಬಂತು" ಅಂದ್ಲು. "ಏನಿಲ್ಲ ಹೋಳಿಗೆ ತಿಂತಾ ಹೋಳೀ ಹಬ್ಬ ನೆನಪು ಬಂತು, ಬಣ್ಣ ಓಕುಳಿ ಚೆನ್ನಾಗಿರ್ತದೆ" ಅಂತ ಖುಷಿಯಾದೆ, "ಹೂಂ ಚೆನ್ನಾಗಿರ್ತದೆ, ಆಮೇಲೆ ಬಣ್ಣ ಬಿದ್ದ ಅಂಗಳ ಎಲ್ಲ ತೊಳಿಯೋಕೆ ಎರಡು ಡ್ರಮ್ ನೀರೂ ಸಾಕಾಗಲ್ಲ" ಮತ್ತೆ ನೀರಾಟಕ್ಕಿಳಿದಳು, ಈ ಹೆಂಗಳೆಯರದು ಇದೊಂದು ದೊಡ್ಡ ಪ್ರಾಬ್ಲ್ಂ, ಮನೇಲಿ ನೀರಿಲ್ಲಾ ಅಂದ್ರೆ ಅದೇ ಗುಂಗಿನಲ್ಲೇ ಇರ್ತಾರೆ. ಊಟ ಮುಗಿಸಿ ನಿಧಾನಕ್ಕೆ ಎದ್ದು, ಹೋಗಿ ನಾನೇ ಲೋಟ ನೀರು ತೆಗೆದುಕೊಂಡು ಬಂದೆ, ಅವಳನ್ನು ಕೇಳಿದ್ರೆ ಎಲ್ಲಿ ಮತ್ತೆ ಖಾಲಿ ಬಾಟಲಿ ಕೊಟ್ಟು, ಹೋಗಿ ನಿಮ್ಮ ಚಂದ್ರನಿಂದ ತುಂಬಿಸಿಕೊಂಡು ಬನ್ನಿ ಅಂದಾಳು ಅಂತ. ನೀರು ಕುಡಿದರೆ ಯಾಕೋ ಟೇಸ್ಟ ಬೇರೆ ಇತ್ತು "ಎಲ್ಲಿ ನೀರು ಚಂದ್ರನಿಂದ ತಂದದ್ದಾ" ಅಂದೆ, ದುರುಗುಟ್ಟಿ ನೋಡುತ್ತ "ಪಕ್ಕದಮನೆ ಪದ್ದು ಬೋರವೆಲ್ ನೀರು" ಅಂದ್ಲು. "ಅದಕ್ಕೇ ಟೇಸ್ಟಿ ಇದೆ" ಅಂತ ಮುಗುಳ್ನಕ್ಕೆ, "ಗಡಸು ಉಪ್ಪು ನೀರದು, ಅದೆಲ್ಲಿಂದ ಟೇಸ್ಟ್ ಬಂತೋ" ಅಂತ ಉರಿದುಕೊಂಡಳು.

ಬೈಕ ತೊಳೆದದ್ದು ಇನ್ನೂ ಸಾಕಾಗಿರಲಿಲ್ಲ, ಆನೆಗೆ ಗಿಂಡಿ(ಚಿಕ್ಕ ಲೋಟ) ನೀರಲ್ಲಿ ಸ್ನಾನ ಮಾಡಿಸಿದಂತೆ ಕಾಣುತ್ತಿತ್ತು. "ಇನ್ನೊಮ್ಮೆ ಬೈಕ್ ತೊಳೆದುಬಿಡ್ತೀನಿ, ಹೇಗೂ ಪಕ್ಕದಮನೆ ಪದ್ದು ಬೋರವೆಲ್ ನೀರಿದೆಯಲ್ಲ" ಅಂದೆ, "ಏನೂ ಬೇಕಿಲ್ಲ, ಪದ್ದು ನೀರು ಕೊಡ್ತೀನಿ ಅಂದ್ರು ನಾನು ಬಿಡಲ್ಲ, ನಂಗೊತ್ತಿಲ್ವಾ, ನಿಮಗೆ ಮತ್ತೆ ನೀರು ಯಾಕೆ ಬೇಕಿದೆ ಅಂತ, ಎಲ್ಲ ನೆಪ ಪದ್ದು ನೋಡಲು" ಅಂತ ನನ್ನ ಪ್ಲಾನಗೆ ನೀರೆರೆಚಿದಳು!.

ಸಂಜೆ ಮಳೆಯಾಗಬಹುದಿತ್ತೇನೊ, ಅದಕ್ಕೆ ಮಧ್ಯಾಹ್ನಕ್ಕೆ ಸೆಕೆ, ಧಗೆ ಜಾಸ್ತಿ ಆಯ್ತು, ಹಣೆ ಮೇಲೆ ತುಂತುರು ನೀರು ಸೆಲೆಯೊಡೆಯುತ್ತಿತ್ತು, "ಲೇ ತಲೇಲಿ ನೀರು ಸೆಲೆ ಹುಟ್ಟಿದೆ, ಪರಮೇಶ್ವರನ ಜಡೆಯಲ್ಲಿ ಗಂಗೆ ಅವತರಿಸಿದಂತೆ, ನೀರು ತುಂಬಿಸ್ತೀಯಾ" ಅಂದೆ. "ಇಂಜನೀಯರ ಸಾಹೇಬ್ರೆ, ವಿಶ್ವೇಶ್ವರಯ್ಯ ಅವರು ಕಟ್ಟಿದಂಗೆ ಒಂದು ಆಣೆಕಟ್ಟೆ ಕಟ್ಟಿ ನೀರು ಹಿಡಿದಿಡಿ ಆಮೇಲೆ ತುಂಬಿಸ್ಕೋತೀನಿ" ಅಂತ ಮಾರುತ್ತರ ಕೊಟ್ಲು, "ಅಷ್ಟೆಲ್ಲಾ ತಲೆ ಇದ್ದಿದ್ರೆ ನಾನ್ಯಾಕೆ ಇಲ್ಲಿರ್ತಿದ್ದೆ, ಚಂದ್ರನಮೇಲೆ ಮನೆ ಕಟ್ಕೊಂಡು ಇರ್ತಿದ್ದೆ" ಅಂದರೆ, "ಹ್ಮ್... ಆದ್ರೆ ಪಕ್ಕದಮನೆ ಪದ್ದುನ ಮಿಸ್ ಮಾಡ್ಕೊತಾ ಇದ್ರಿ" ಅಂತ ಕಾಲೆದಳು. "ಹೇ ಹಾಗೇನಿಲ್ಲ, ನಮ್ಮ ವಿಜಯನಗರ ಬೆಳೆಸಿ ಅದರ ಪಕ್ಕ 'ಚಂದ್ರಾ'ಲೇಔಟ್ ಮಾಡೊ ಬದಲು ಅದನ್ನೂ ಸೇರಿಸಿಕೊಂಡು ಹೋಗಿ, ಅಲ್ಲೇ ದೊಡ್ಡ ಚಂದ್ರನ ಲೇಔಟೇ ಮಾಡ್ತಾ ಇದ್ವಿ ಬಿಡು" ಅಂತ ನಾನು ಮರು ಮಾತಿಟ್ಟೆ. "ಹೌದೂ, ನೀವ್ಯಾಕೆ ವಿಜ್ಞಾನಿ ಆಗಲಿಲ್ಲ" ಅಂತ ಬೆರಗಾದಳು, "ನಾನೂ ಆಗಬೇಕು ಅಂತ ಪರೀಕ್ಷೆ ಎಲ್ಲಾ ಕಟ್ಟಿದೆ, ಪಾಸೇ ಅಗಲಿಲ್ಲ" ಅಂತ ಬೇಸರಿಸಿದೆ. "ಆಗದಿದ್ದುದು ಒಳ್ಳೇದೆ ಆಯ್ತು ಬಿಡಿ,
ನೀವೇನಾದ್ರೂ ಸ್ಯಾಟಲೈಟ್ ಬಿಟ್ಟಿದ್ರೆ, ಅದು ಕಂಟ್ರೊಲ್ ರೂಮಗೆ ಸಿಗ್ನಲ್ ಕಳಿಸೊ ಬದಲು, ಪಕ್ಕದಮನೆ ಪದ್ದುಗೆ ಸಿಗ್ನಲ್ ಕಳಿಸಿರೋದು." ಅಂತ ನಕ್ಕಳು, "ರಾಕೆಟ್ಟು ಬಿಟ್ಟರೆ, ಮೇಲೆ ಹಾರಿ ಮತ್ತೆ ತಿರುಗಿ ನಮ್ಮೆಡೆಗೆ ಬಂದಿರೋದು, ನಿನಗೆ ಪ್ರಶ್ನೆ ಕೇಳಿದ್ದವು ಎಲ್ಲ ನನಗೇ ತಿರುಗಬಾಣ ಆಗ್ತವಲ್ಲ ಹಾಗೆ" ಅಂತಂದು ನಾನೂ ನಕ್ಕೆ. "ಹಾಗಂದೆ ಅಂತ ಬೇಜಾರಾಯ್ತಾ" ಅಂತ ತಲೆ ಸವರಿದಳು, ಬೆವರ ಹನಿ ಸೆರಗಿಂದ ಒರೆಸುತ್ತ, "ನನಗೇನು ಬೇಜಾರಿಲ್ಲ ಪರದೇಶಿ ಕಂಪನಿಯಲ್ಲಿ ಪ್ರೊಗ್ರಾಮರ್ ಅಂತಿದೀನಿ ಅಂತ, ನನ್ನಿಂದ ಏನಾಗುತ್ತೊ ಅದನ್ನ ನಾನು ಮಾಡ್ತಾ ಇದೀನಿ, ಮನುಕುಲಕ್ಕೆ ಎನೋ ಸಹಾಯವಾಗುವಂತದ್ದು ನೇರವಾಗಿ ಮಾಡಿಲ್ಲದಿದ್ರೂ, ಪರೋಕ್ಷವಾಗಿಯಾದ್ರೂ ಯಾರಿಗೊ ಸಹಾಯ ಆಗಿದೆ, ದುಡಿದು ನಿಯತ್ತಾಗಿ ಟ್ಯಾಕ್ಸ ಕಟ್ತಾ ಇದೀನಲ್ಲ ಅದರಲ್ಲಿ ಹತ್ತು ಪೈಸೆನಾದ್ರೂ ಇಂಥ ಸಂಶೋಧನೆಗೆ ಬಳಕೆ ಆಗಿದೆ ಅಂತ ಸಮಾಧಾನ ಇದೆ" ಅಂದೆ.

"ಏನು ಸಂಶೋಧನೆನೊ ಏನೊ, ಚಂದ್ರನಮೇಲೆ ನೀರಿದೆ ಅಂದ್ರೆ, ಬಿಂದಿಗೆ ತೆಗೆದುಕೊಂಡು ಕ್ಯೂನಲ್ಲಿ ನಿಲ್ಲೋಕಾಗುತ್ತಾ" ಅಂತ ನೀರಸವಾಗಿ ನುಡಿದಳು, ಎಲ್ಲ ಶ್ರೀಸಾಮಾನ್ಯ ಹಾಗೇ ಅನ್ನಬಹುದಲ್ಲ, ಏನಾಗುತ್ತೆ ಇಂಥ ಸಂಶೊಧನೆಗಳಿಂದ ಅಂತ, ಆದರೆ ತಿಳಿಸಿ ಹೇಳಿದರೆ ಅರ್ಥ ಆದೀತು, ಅದನ್ನೇ ನನ್ನಾಕೆಗೆ ನಾ ಮಾಡಬೇಕಿದ್ದು, "ವ್ಯರ್ಥ ಅಂತೂ ಅಲ್ಲ, ಅಲ್ಲೂ ಜೀವಿಗಳಿರಬಹುದು" ಅಂದರೆ "ಅಲ್ಲ ಇಲ್ಲೇ ಕೋಟಿ ಕೋಟಿ ಜೀವಿಗಳಿದೀವೀ, ಇನ್ನ ಅಲ್ಲೂ ಇದ್ರೆ, ಅವರನ್ನೂ ಕರ್ಕೊಂಡು ಬಂದರೆ, ನಮಗೇ ನೀರು ಸಾಕಾಗ್ತಿಲ್ಲ, ಇನ್ನ ಅವರಿಗೆಲ್ಲಿಂದ" ಅಂದ್ಲು, "ಇಲ್ಲ ಬಿಡು, ಭೂಮಿಗೆ ಬರೊವಾಗ ನಿಮ್ಮ ನಿಮ್ಮ ವಾಟರ್ ಬಾಟಲ್ ನೀವೇ ತುಂಬ್ಕೊಂಡು ಬನ್ನಿ ಅಂತ ಶಾಲಾ ಮಕ್ಕಳಿಗೆ ಹೇಳಿದ ಹಾಗೆ ಹೇಳಿದ್ರಾಯ್ತು" ಅಂದ್ರೆ, ನಸುನಕ್ಕಳು. "ಮತ್ತೆ ಈ ಸಂಶೊಧನೆಯಿಂದ ಎನಾಗುತ್ತೆ ಹೇಳ್ರೀ" ಅಂತ ಸ್ವಲ್ಪ ಗಂಭೀರವಾದಳು. "ನಂಗೂ ಬಹಳ ಗೊತ್ತಿಲ್ಲ, ಅಲ್ಲಿಂದ ನೀರಂತೂ ಭೂಮಿಗೆ ತರುವುದಿಲ್ಲ, ಆದರೆ ಅಲ್ಲಿ ನೀರು ಹೇಗೆ ಬಂತು ಅಂತ ತಿಳಿಯಬಹುದು, ನೀರು ಉತ್ಪತ್ತಿ ಆಗೋ ವಿಧಾನ ಗೊತ್ತಾಗಬಹುದು, ಇಲ್ಲ ಅಷ್ಟು ಬಿಸಿ ಸುಡುವ ಚಂದ್ರನಲ್ಲಿ ಕೂಡ ಆವಿ ಆಗದ ನೀರು ಹೇಗಿದೆ ಅಂತ ತಿಳೀಬಹುದು, ಇಲ್ಲ ಸೂರ್ಯನೇ ಕಾಣದ ಚಂದ್ರನ ಭಾಗದಲ್ಲಿ ಇನ್ನೂ ಹೆಚ್ಚು ನೀರಿದೆ ಅಂತ ಗೊತ್ತಾದರೆ ಅಲ್ಲಿ ಹೋಗಿ ಮಾನವಜೀವಿಗಳು ಟೆಂಟು ಕೂಡ ಹಾಕಬಹುದು. ಇಲ್ಲ ಅದೇ ನೀರಿನಲ್ಲಿನ ಜಲಜನಕ(ಹೈಡ್ರೋಜನ್) ಬೇರ್ಪಡಿಸಿ ಇಂಧನ ಮಾಡಿಕೊಂಡು, ಅಲ್ಲಿ ಸ್ಪೇಸ್ ಸ್ಟೇಷನ್ನು ಕಟ್ಟಬಹುದು, ಇಲ್ಲ ಮಂಗಳ ಗ್ರಹಕ್ಕೆ ಹೋಗಲು ನಡುನಿಲ್ದಾಣದಂತೆ ಮಾಡಿ ಅಲ್ಲಿ ಇಂಧನ ತುಂಬಿಸಿಕೊಂಡು ಪ್ರಯಾಣ ಮಾಡಬಹುದು, ಹೀಗೆ ಸಾಧ್ಯತೆಗಳಿಗೆ ಲೆಕ್ಕವಿಲ್ಲ" ಅಂತ ವಿವರಿಸಿದೆ, ಬಹಳ ಕುತೂಹಲ ಹುಟ್ಟಿತು ಅವಳಿಗೆ, "ನನಗೇನೊ ಇಲ್ಲಿ ತೊಟ್ಟು ಕುಡಿಯೋಕೆ ನೀರು ಇಲ್ಲ, ಕೊಳಚೆ ನೀರು ಹರಿದು ಹೋಗೋಕೆ ಚರಂಡಿ, ಹೀಗೆ ಮೂಲಭೂತ ಸೌಲಭ್ಯಗಳು ಇಲ್ದೆ ಇರೋವಾಗ, ಕೊಟಿಗಟ್ಟಲೆ ಖರ್ಚು ಮಾಡಿ ಅಲ್ಲಿ ನೀರು ಕಂಡು ಹಿಡಿದು ಏನು ಮಾಡ್ತಾರೆ ಅನಿಸಿತ್ತು" ಅಂತ ಮುಗ್ಧತನ ವಿಶದಪಡಿಸಿದಳು. "ಹಾಗನ್ನಿಸೋದು ನಿಜ, ವಿದೇಶಿ ಕೆಲವರು, ಭಾರತದವರಿಗೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಯಾಕೆ, ಅಂತ ಹೀಗಳೆದರು, ಆದರೆ ಇಂಥ ಸಂಶೋಧನೆಗಳು ಅವಶ್ಯಕ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಥ ಕೆಲಸಗಳಿಗೆ ಮೀಸಲಿಡುವ ಹಣ ಏನೇನೂ ಅಲ್ಲ, ಆದರೂ ಅದರಲ್ಲೇ ಇಷ್ಟೆಲ್ಲ ಮಾಡಲಿಕ್ಕಾಗುತ್ತದೆ ಅಂತ ತೋರಿಸಿದರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯಂತ್ರಗಳನ್ನು ಅಭಿವೃದ್ಧಿ ಮಾಡಿದ್ದು, ಅವೆಲ್ಲ ಸಾಧನೆಗಳೇ, ಬರೀ ಬಾಹ್ಯಾಕಾಶ ಅಷ್ಟೇ ಅಲ್ಲ, ದಿನನಿತ್ಯದ ಸಾಮಾನುಗಳಿಗೂ ಅವು ಉಪಯೋಗವಾಗಬಹುದು, ನೀರಷ್ಟೇ ಯಾಕೆ ಅಲ್ಲಿ ಬೇರೆ ಖನಿಜಗಳು ಸಿಕ್ಕರೂ ಸಾಕು, ಅದನ್ನ ಇಲ್ಲಿಗೆ ತರಬಹುದು ಕೂಡ" ಅಂದರೆ... "ಇನ್ನೇನಾದ್ರೂ ಸಿಕ್ಕರೆ ಟನ್‌ಗಟ್ಟಲೇ ಚಿನ್ನ(ಬಂಗಾರ) ಸಿಗಲಿರೀ" ಅಂತ ಕಣ್ಣು ಮಿಟಿಕಿಸಿದಳು, "ಹ್ಮ್ ಹಾಗೆ ಸಿಕ್ಕರೆ ನಾನೂ ಒಂದೆರಡು ಕೇಜಿ ತಂದು ನಿನಗೆ ಬಳೆ ಮಾಡಿಸಿಕೊಡ್ತೀನಿ ಬಿಡು" ಅಂದೆ.

ನನಗಂತೂ ನಮ್ಮ ಈ ಇಸ್ರೋ ಸಂಸ್ಥೆಯ ಈ ಸಾಧನೆ ಬಗ್ಗೆ ಬಹಳ ಹೆಮ್ಮೆಯಿದೆ, ಚಂದ್ರಯಾನ ವಿಫಲ ಅಂತ ಬೊಬ್ಬೆ ಹಾಕುತ್ತಿದ್ದವರಿಗೆ ತಕ್ಕ ಉತ್ತರವೂ ಸಿಕ್ಕಿದೆ, ಹಾಗೆ ನೋಡಿದರೆ ವಿಫಲತೆ ಅನ್ನೋದೇ ಇಲ್ಲ, ಈ ಸಂಶೋಧನೆ ಹೊರಬರದಿದ್ದರೂ, ಅದು ಒಂದು ಒಳ್ಳೇ ಪ್ರಯತ್ನ ಆಗಿತ್ತು ಅಂತಲೇ ನಾನು ಭಾವಿಸುತ್ತಿದ್ದೆ, ಪಿ.ಎಸ್.ಎಲ್.ವಿ ವಿಫಲತೆಯಾದಾಗ ಸುಮ್ಮನೆ ಕೈಚಲ್ಲದೆ, ಮತ್ತೆ ಪ್ರಯತ್ನಿಸಿದ್ದಕ್ಕೆ ಒಂದಾದಮೇಲೊಂದರಂತೆ ಸಫಲ ಸ್ಯಾಟಲೈಟ ಉಡಾವಣೆ ಮಾಡಿದ್ದು, ಮತ್ತೆ ಮರುಪ್ರಯತ್ನ ಇನ್ನೂ ಯಶಸ್ವಿ ಆಗುತ್ತದೆ ಅನ್ನೊದರಲ್ಲಿ ಸಂದೇಹವೇ ಇಲ್ಲವೆಂಬತೆ ತೊರ್‍ಇಸಿಕೊಟ್ಟಿದೆ. ಸೀಮಿತ ಬಜೆಟ್ಟು, ಸ್ವದೇಶಿ ತಂತ್ರಜ್ಞಾನ, ಕಡಿಮೆ ಸಂಬಳದ ಇಂಜನೀಯರುಗಳು, ಸರಕಾರದ ರಾಜಕೀಯಗಳು ಎಲ್ಲವನ್ನೂ ನಿಭಾಯಿಸಿ ಸಿಕ್ಕ ಅವಧಿಯಲ್ಲೆ ಇಷ್ಟು ಸಾಧನೆ ಮಾಡಿರುವುದಕ್ಕೆ ನಿಜಕ್ಕೂ ಅಭಿನಂದನೀಯ. ಯಾವಾಗ ನೋಡಿದರೂ ವಿಫಲತೆಗಳನ್ನೇ ಹಿರಿದಾಗಿಸಿ ಯಾಕೆ ನಾವು ನೋಡಬೇಕು. ಐಸ್ಯಾಕ, ಭಾರ್ಕ, ಡಿಅರ್‌ಡಿಓ, ಹೆಚ್‌ಏಎಲ್, ಎನ್‌ಏಎಲ್, ಬಿಈಎಲ್ ನಂತಹ ಇನ್ನೂ ಹಲವು ಪಟ್ಟಿ ಮಾಡಲಾಗಷ್ಟು ಸಂಸ್ಥೆಗಳು ಮಾಡಿದ ಸಾಧನೆಗಳೇನು ಕಮ್ಮಿಯೆ, ಒಂದು ಪರಮಾಣು ಬಾಂಬ, ಕ್ಷಿಪಣಿ ಇರಬಹುದು, ಇಲ್ಲ ಯುಧ್ಧ ವಿಮಾನ, ಹೆಲಿಕ್ಯಾಪ್ಟರ್, ರಾಡಾರ್ ಇರಬಹುದು, ಇಂದೇನಾದರೂ ನಮ್ಮ ದೇಶದ ಮೇಲೆ ಯಾರೂ ಕಣ್ಣೆತ್ತಿ ಕೂಡ ನೋಡದಂತೆ ಇರಲು, ಭಾರತದ ಮಾತಿಗೆ ಕಿಮ್ಮತ್ತು, ಗೌರವ ಬಂದಿರುವುದು ಸಾಧ್ಯವಾಗಿದ್ದರೆ ಇದೇ ಕಾರಣವಾಗಿಲ್ಲವೇ. ಚಿಕ್ಕೂನಿದ್ದಾಗ ನಾನು ನನ್ನ ಅಪ್ಪಾಜಿ ಈ ಸ್ಯಾಟಲೈಟ್ ಉಡಾವಣೆ ದೂರದರ್ಶನದಲ್ಲಿ ನೋಡಲು ಕೂರುತ್ತಿದ್ದುದು ಇನ್ನೂ ನೆನಪಿದೆ, ಬಹಳ ಖರ್ಚು ಮಾಡಿ ಇದನ್ನು ಮಾಡೀದಾರೆ, ಬಹಳ ಶ್ರಮ ಇದೆ ಇದರ ಹಿಂದೆ, ಹೇಗಾದರೂ ಸಫಲ ಆಗಲಿ ಅಂತ ಆಶಿಸುತ್ತಿದ್ದುದು, ನಾನೇ ಉಡಾವಣೆ ಪೈಲಟ್ಟು ಸೀಟಿನಲ್ಲಿ ಕೂತಷ್ಟು ಆತಂಕಪಟ್ಟದ್ದು ಎಲ್ಲ ಮರುಕಳಿಸುತ್ತದೆ, ಬಹುಶ ಬದ್ಧ ವೈರಿಗಳ ಕ್ರಿಕೆಟ್ಟು ಮ್ಯಾಚು, ಇಲ್ಲ ನನ್ನ ಪರೀಕ್ಷೆ ರಿಜಲ್ಟು ಕೂಡ ಅಷ್ಟು ಕುಕ್ಕರಗಾಲಿನಮೇಲೆ ಕೂತು ನೋಡಿರಲಿಕ್ಕಿಲ್ಲ. ಹೀಗೆ ಹೋದ ಸ್ಯಾಟಲೈಟುಗಳು, ಖನಿಜ ಪತ್ತೆ ಮಾಡಿದವು, ದೂರಸಂಪರ್ಕಕ್ರಾಂತಿ ಮಾಡಿದವು, ಅಂತರ್ಜಲ ಪತ್ತೆ ಹಚ್ಚಿದವು, ಒಂದೇ ಎರಡೇ... ವಿಜ್ಞಾನಿಗಳೇ ವಿಫಲತೆಯೋ ಸಾಫಲ್ಯವೋ ನೀವು ಮುಂದುವರೆಸಿ, ನಾವಿದ್ದೇವೆ ನಿಮ್ಮ ಹಿಂದೆ ಬೆಂಬಲಕ್ಕೆ. ಹ್ಯಾಟ್ಸ ಆಫ್...

ಹೀಗೆ ಮಾತಾಡುತ್ತ ಕೂತವರಿಗೆ, ಸಮಯ ಹೋಗಿದ್ದೆ ಗೊತ್ತಾಗಲಿಲ್ಲ, ಚಂದ್ರನಂತೇ ಅರಳಿತ್ತು ಇವಳ ಬೆಳ್ಳನೇ ಅಕ್ಕಿ ರೊಟ್ಟಿಯಂಥಹ ಮುಖ!, ಸಂಜೆ ಬೆಳದಿಂಗಳ ಚಂದ್ರ ಬರಲು ಇನ್ನೂ ಸಮಯ ಇದ್ರೂ. "ಚಂದ್ರನಂತೆ ಕಂಗೊಳಿಸ್ತಾ ಇದೀಯ, ಚಂದ್ರಯಾನ ಅಂತ ಮತ್ತೊಮ್ಮೆ ಮಧುಚಂದ್ರಕ್ಕೆ ಹೋಗೊಣ ನಡಿಯೇ" ಅಂದರೆ, "ರೀ
ಚಂದ್ರನ ಮೇಲೆ ಮಧು(ಹನಿ, ಜೇನು) ಸಿಕ್ಕಿಲ್ಲ, ನೀರು ಸಿಕ್ಕಿದೆ... ಅದಕ್ಕೆ ಜಲಚಂದ್ರಕ್ಕೆ ಹೋಗೋಣ್ವಾ ಅಂತ ಹೇಳಿ" ಅಂದ್ಲು, "ಅದೂ ಸರಿಯೇ ಬಿಡು 'ನೀರುಹನಿ'ಮೂನ್ ಗೇ ಹೊಗೋಣ, ನೀರ ಬಗ್ಗೆ ಮಾತಾಡ್ತಾ ಹೊಟ್ಟೆಗೆ ತಣ್ಣೀರು ಬಟ್ಟೇನೆ ಗತಿಯೋ ಇಲ್ಲ ಏನಾದ್ರೂ ಬೇಯಿಸಿ ಹಾಕ್ತೀಯೊ" ಅಂತ ಕೇಳಿದ್ದಕ್ಕೆ, "ಆಗಲೇ ಹೊಟ್ಟೇ ಹಸಿವಾಯ್ತಾ" ಅಂತ ಚಂದ್ರನಂತೇ ಗುಂಡುಗುಂಡಾಗಿರುವ ಹೊಟ್ಟೆಗೆ ಏಟು ಕೊಟ್ಟು ಪಾಕಶಾಲೆ ಸೇರಿದಳು. ಆಗಲೇ ಧಾರಾಕಾರವಾಗಿ ಮಳೆ ಸುರಿಯತೊಡಗಿತು... "ಮಳೆ ನೀರು ತುಂಬಿಸ್ತೀಯ, ನೀರು ನೀರು ಅಂತಿದ್ದೆಯಲ್ಲ, ಮಳೆ ಹೇಗೆ ಸುರೀತಿದೆ ನೋಡು" ಅಂತ ಕೂಗಿ ಕರೆದೆ, ಅಲ್ಲಿಂದಲೇ "ಆ ನಿಮ್ಮ ಚಂದ್ರನ ಮೇಲಿನ ನೀರು ತುಂಬಿ ತುಳುಕುತ್ತಿರಬೇಕು, ಅದೇ ಬೀಳ್ತಾಯಿದೆಯೇನೊ ನೋಡಿ" ಅಂತ ಮತ್ತೆ ಕೀಟಲೆಗಿಳಿದಳು, ಈ ಪರಿಯ ಮಳೆ ನೋಡಿ, ರೋಡುಗಳಿಲ್ಲ ತುಂಬಿ, ಚರಂಡಿ ಕಿತ್ತು ಬಂದು ಕೊಚ್ಚೆ ಕೊಳೆಯಾಗಿ, ಪ್ರವಾಹವಾಗಿ, ಟ್ರಾಫಿಕ್ಕು ಜಾಮ ಆಗಿ, ಮರಗಳು ಬಿದ್ದು, ಕರೆಂಟು ಹೋಗಿ, ಇಡೀ ಊರಿಗೆ ಗ್ರಹಣ ಹಿಡಿದಂತೆ ಚಂದ್ರನಿಲ್ಲದ ಖಗ್ರಾಸು ಅಮವಾಸ್ಯೆಯಂತೆ ಕತ್ತಲಾದೀತೆನ್ನಿಸಿದರೂ, ಮನಸೇಕೊ ಇನ್ನೂ ಆ ಚಂದ್ರನ ಮೇಲೆ ಕಂಡ ನೀರ ತುಂತುರು ಹನಿಗಳ ಬಗ್ಗೇ ಯೋಚಿಸುತ್ತಿತ್ತು... ಪಕ್ಕದಲ್ಲಿ ಬಂದು ನಿಂತಿದ್ದ ಇವಳಿಗೆ ಎರಡು ಹನಿ ನೀರು ಸಿಡಿಸಿ, ನೀರಾಟಕ್ಕಿಳಿದರೆ... "ನೀರು ದೋಸೆ ಹುಯ್ದು ಕೊಡಲಾ ತಿನ್ನೊಕೆ" ಅಂತ ಕೇಳುತ್ತ ಒಳಗೋಡಿದಳು....
ದಸರಾ ಹಬ್ಬದ ಶುಭಾಷಯಗಳೊಂದಿಗೆ, ನಿಮ್ಮೆಲ್ಲರ ನಾನು ಮತ್ತು ನನ್ನಾk.
ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/chandra.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, September 20, 2009

ನಾ ಸತ್ತು ಹೋದರೆ?

"ಈ ಹಾಳು ಪೇಪರಿನವರಿಗೆ ಕೊಡಲು ಬೇರೆ ಸುದ್ದೀನೇ ಇಲ್ವೇನೊ, ಬರೀ ಅಲ್ಲಿ ಅಷ್ಟು ಜನ ಸತ್ತರು, ಇಲ್ಲಿ ಕೊಲೆ ಆಯ್ತು, ಮತ್ತೆ ಬಿಟ್ಟರೆ ಆತ್ಮಹತ್ಯೆಗಳು ಇದೇ ಸುದ್ದಿ, ಮುಂಜಾನೆ ಮುಂಜಾನೆ ಇದನ್ನ ನೋಡಿ ಎದ್ದೇಳಬೇಕೇನೊ" ಅಂತ ವಟಗುಡುತ್ತ ಪೇಪರು ಬೀಸಾಕಿ ಮೇಲೆದ್ದಳು, ಸತ್ತ ಹೆಣದಂತೆ ಥೇಟ್ ಶವಾಸನ ಹಾಕಿ ಬಿದ್ದುಕೊಂಡಿದ್ದ ನನಗೆ ಒಮ್ಮೆಲೆ ಜೀವ ಬಂದಂತಾಯಿತು, "ಏನಾಯ್ತು" ಅಂತ ಅವಳನ್ನು ತಡೆದೆ, "ಒಹ್ ಏನು ಬೇಗ ಎಚ್ಚರಾಗಿದೆ, ಏನಿಲ್ರೀ, ಪೇಪರು ಸುದ್ದಿ ನೋಡೊಣ ಅಂತ ತೆರೆದರೆ ಸಾಕು, ಬರೀ ಅವೇ ಸುದ್ದಿ ಅದಕ್ಕೆ ಹಾಗಂದೆ, ಈಗಂತೂ ಈ ಹಂದಿಜ್ವರದಿಂದ ಸಾಯೋರ ಅಂಕಿಅಂಶಗಳೇ ಪೇಪರು ತುಂಬ, ದಿನ ಸಾಯೋರಿಗೆ ಅಳೋರು ಯಾರು ಅನ್ನೊ ಹಾಗೆ ತೀರಾ ಸಾಮಾನ್ಯ ಆಗಿಬಿಟ್ಟಿದೆ" ಅಂದ್ಲು, "ಅದೇನೊ ಕೇಳಿದ್ದೀನಿ ಮೊದಲೆಲ್ಲ ಪ್ಲೇಗ ಎಲ್ಲಾ ಬಂದು ಊರಿಗೆ ಊರೇ ಖಾಲಿ ಆಗ್ತಿದ್ವಂತೆ, ಅಳೋರು ಬಿಡು ಹಿಡಿ ಮಣ್ಣು ಹಾಕೋರೂ ಯಾರೂ ಇರ್ತಿರಲಿಲ್ಲ ಅಂತೆ. ಒಂದು ವೇಳೆ ನಾ ಸತ್ತು ಹೋದರೆ?..." ಮುಂದೇನೂ ಬಾಯಿ ಬಿಡದಂತೆ ಗಟ್ಟಿಯಾಗಿ ಮುಚ್ಚಿದಳು, "ಬಿಟ್ತು ಅನ್ನಿ, ಏನಂತ ಮಾತು ಆಡ್ತೀರ, ಅಪಶಕುನ ಅದೂ ಮುಂಜಾನೆ..." ಅಂತ ಬಯ್ದು ಎದ್ದು ಹೋದಳು... ನಾನೂ ಎದ್ದು ಹಿಂಬಾಲಿಸಿದೆ, "ನಾ ಸತ್ತು ಹೋದರೆ..." ಅಂತನ್ನುತ್ತ...

ಮುಖ ತೊಳೆದುಕೊಂಡು ಬಂದು ನನ್ನೇ ದುರುಗುಟ್ಟಿ ನೋಡುತ್ತ ದೇವರ ಮುಂದೆ ದೀಪ ಹಚ್ಚಿಟ್ಟು ಕಣ್ಣು ಮುಚ್ಚಿ ಏನೊ ಬೇಡಿಕೊಂಡು ಬಂದಳು, "ಅಲ್ಲ ನಾ ಎನ್ ಹೇಳ್ತ ಇದ್ದೆ ಅಂದ್ರೆ, ನಾ..." ಅಂತಿದ್ದಂಗೆ... "ರೀ ಆ ವಿಷಯ ಎತ್ತಿದ್ರೆ ಕೊಂದ ಹಾಕ್ತೀನಿ ಇನ್ನ್" ಅಂತ ಜಬರಿಸಿದಳು ನಸು ನಗುತ್ತ ಹಲ್ಲುಜ್ಜಲು ನಡೆದೆ, "ಎನು ನಗ್ತೀರ?" ಅಂತ ಮತ್ತೆ ಕೆದಕಿದಳು, "ನೀ ಕೊಂದು ಹಾಕಿದರೆ ನಾ ಸತ್ತು ಹೋಗ್ತೀನಿ ಅದಕ್ಕೆ ನಗು ಬಂತು" ಅಂದೆ, ಅವಳಿಗೂ ತಾನು ಸಿಟ್ಟಿನ ಭರದಲ್ಲಿ ಏನು ಹೇಳಿದೆ ಅಂತ ಗೊತ್ತಾಗಿ ನಗು ಬಂತು, ಹಾಗೇ ಮುಗುಳ್ನಗುತ್ತ "ಆ ಸುದ್ದಿ ಇನ್ನು ಎತ್ತಿದರೆ ನೋಡಿ ನನ್ನ ಮೇಲಾಣೆ" ಅಂತಂದು ಮುಚ್ಚಿಹಾಕಲು ನೋಡಿದಳು, ಮತ್ತೆ ಮಾಮೂಲಿ ಅದೇ ವಿಷಯಕ್ಕೇ ಬಂದೆ "ನಾ ಆಣೆ ಪಾಲಿಸದೇ ನೀ ಸತ್ತು ಹೋದರೆ?"(ಆಣೆ ಪ್ರಮಾಣ ಪಾಲಿಸದಿದ್ದರೆ ಆಣೆ ಯಾರ ಮೇಲೆ ಹಾಕಿರುತ್ತೆವೊ ಅವರು ಸತ್ತು ಹೋಗ್ತಾರಂತೆ, ನಾನಂತೂ ಪ್ರಯೋಗ ಮಾಡಿ ನೋಡಿಲ್ಲ ಬಿಡಿ, ಮಾಡಬೇಕೆಂದರೂ ಯಾರೂ ಸಿಕ್ಕಿಲ್ಲ!) ಈಗಂತೂ ಬಹಳೆ ಕಿರಿಕಿರಿ ಆಯ್ತು ಅಂತ ಕಾಣುತ್ತದೆ, ಕಸ ಗುಡಿಸಲು ಪೊರಕೆ ಹಿಡಿದು ನಿಂತಿದ್ದವಳು "ರೀಈಈಈ... ಇದಕ್ಕೆ ಪೊರಕೆ ಅಂತಾರೆ ಗೊತ್ತಲ್ವಾ... ಕಸ ಗುಡಿಸೋದು ಅಷ್ಟೇ ಅಲ್ಲ ಬೇರೇನೂ ಉಪಯೋಗ ಆಗ್ತದೆ, ಇದರಲ್ಲೇ ನಾಲ್ಕು ಕೊಡ್ತೀನಿ ಈವಾಗ" ಅಂತ ಹೆದರಿಸಿದಳು... "ಹ್ಮ್... ಎರದೇಟು ಜೋರಾಗಿ ಕೊಟ್ಟು ನಾ ಸತ್ತು ಹೋದರೆ?" ಅಂದೆ ಅವ್ಳು ನನ್ನೆಡೆಗೇ ಬರುವ ಹಾಗೆ ಕಾಣಿತು, ನಿಜಕ್ಕೂ ಪೊರಕೆ ಪೂಜೆ ಆದೀತು ಅಂತ ಬಾತ್ರೂಮ್ ಒಳಗೋಡಿ ಬಾಗಿಲು ಹಾಕಿಕೊಂಡೆ, ಬಂದು ಬಾಗಿಲು ಬಾರಿಸಿ "ಎನ್ ದಿನ ಪೂರ್ತಿ ಅಲ್ಲೇ ಇರ್ತೀರಾ, ಬನ್ನಿ ಹೊರಗೆ... ತಿಥಿ ಮಾಡ್ತೀನಿ" ಅಂದ್ಲು "ಲೇ ಸತ್ತ ಮೇಲೆ ತಿಥಿ ಮಾಡೊದಲ್ವಾ" ಅಂತ ಅಲ್ಲಿಂದಲೇ ಕೂಗಿದೆ. ಬಾಗಿಲು ಜೋರಾಗಿ ಕುಟ್ಟಿ ಹೊರಟುಹೋದಳಂತೆ ಕಾಣುತ್ತದೆ, ಹೊರಹೋದರೆ ನನ್ನ ತಿಥಿಯಾಗುವುದು ಗ್ಯಾರಂಟಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಲ್ಲುಜ್ಜಿ ಮುಖ ತೊಳೆದು ನಿಧಾನವಾಗಿ ಬಾಗಿಲು ತೆರೆದು ಸ್ವಲ್ಪ ಇಣುಕಿ ನೋಡಿದೆ ಅಲ್ಲೇ ನಿಂತಿದ್ದಾಳೊ ಹೇಗೆ ಅನ್ನೊ ಹಾಗೆ. ಅದೋ ದೂರದಲ್ಲಿ ಕಸ ಗುಡಿಸುವ ಸದ್ದಾಗುತ್ತಿತ್ತು, ನಿಧಾನಕ್ಕೆ ಅಲ್ಲಿ ಹೋಗಿ ಹಿಂದಿನಿಂದ, ಕೈಗಳೆರಡೂ ಬಿಡಿಸಲಾಗದ ಹಾಗೆ ಬಾಚಿ ತಬ್ಬಿಕೊಂಡೆ, ಕೊಸರಾಡಿದಳು ಬಿಡಿಸಿಕೊಳ್ಳಲು, ಹಿಡಿತ ಸಡಲಿಸಲಿಲ್ಲ "ರೀ ಈಗ್ ಬಿಡ್ತಿರೋ ಇಲ್ವೊ" ಅಂತ ಕೇಳಿದಳು "ಏಟು ಕೊಡಲ್ಲ ಅಂತ ಆಣೆ ಮಾಡು ಬಿಡ್ತೀನಿ" ಅಂದ್ರೆ "ಆಣೆ ಪ್ರಮಾಣ ಮಾಡಿ ಮುರಿದು ಹಾಕೋ ಮನಸಿಲ್ಲ" ಅಂದ್ಲು, ಒಟ್ಟಿನಲ್ಲಿ ಏಟು ಗ್ಯಾರಂಟಿ ಅಂತನ್ನೊ ಹಾಗೆ. ಕೈಬಿಟ್ಟು ಓಟಕ್ಕಿತ್ತೆ, ಓಡಾಡಿಸಿ ಬರಿಗೈಯಲ್ಲೇ ಏಟು ಕೊಟ್ಟಳು, ಓಡಿ ಸುಸ್ತಾಗಿ ಎದೆ ಹಿಡಿದುಕೊಂಡು ಏದುಸಿರುಬಿಡುತ್ತ ಕೂತೆ, ಒಮ್ಮೆಲೇ ಗಾಬರಿಯಾದಳು. "ಏನಾಯ್ತು" ಅನ್ನುತ್ತ ಎದೆ ನೀವಿ, ಕೈಗೆ ಲೋಟ ನೀರಿತ್ತಳು, "ಏನಿಲ್ಲ ಬರೀ ಕೂತು ಕೆಲ್ಸ ಮಾಡೊನು ಹೀಗೆ ಒಮ್ಮೆಲೆ ಓಡಾಡಿದರೆ ಏನಾಗಬೇಡ, ಸುಸ್ತಾಗಿ ಕೂತೆ ಅಷ್ಟೇ... ಹಾರ್ಟ್ ಅಟ್ಯಾಕ ಎನಾದ್ರೂ ಆಗಿ ಸತ್ತು ಹೋಗ್ತೀನಿ ಅಂದುಕೊಂಡ್ಯಾ" ಅಂತಂದೆ. "ಈ ಸುಡುಗಾಡು ಪೇಪರು ಸುಟ್ಟು ಬರೋವಷ್ಟು ಸಿಟ್ಟು ಬರ್ತಿದೆ, ಎಲ್ಲ ಅದ್ರಿಂದಲೇ ಶುರುವಾಗಿದ್ದು" ಅಂತ ಸಿಡುಕಿದಳು "ಸುಡುಗಾಡು ಶವ ಸುಡೊಕಲ್ವೇ" ಅಂತ ಮತ್ತೆ ವಿಷಯಕ್ಕೆ ಮರಳಿದೆ. ನಾನಂತೂ ಈ ವಿಷಯ ಅಲ್ಲಿಗೇ ಬಿಡೊದಿಲ್ಲ ಅನ್ನೋದು ಅವಳಿಗೂ ಖಾತ್ರಿ ಆಯ್ತು, "ಅಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಸತ್ತು ಹೋಗೊ ವಿಷಯದ ಚಿಂತೆ ಯಾಕೆ?" ಅಂತ ಸಮಚಿತ್ತದಿಂದ ನುಡಿದಳು, ನನಗೂ ಅವಳು ಭಾವುಕತೆ ಬಿಟ್ಟು ವಾಸ್ತವಿಕವಾಗಿ ಮಾತಾಡುವುದೇ ಬೇಕಿತ್ತು. "ಮತ್ತೆ ಯಾವ ಹೊತ್ತಲ್ಲಿ ಮಾತಾಡೋಣ ಹೇಳು" ಅಂದೆ. ಪೊರಕೆ ಬೀಸಾಕಿ ಪಕ್ಕ ಬಂದು ಕೂತಳು, ಹೇಳು ಮಹರಾಯ ನಿನ್ನದೂ ಈಗಲೇ ಆಗಲಿ ಅಂತನ್ನೊ ಭಾವದಲ್ಲಿ.

"ಹೊತ್ತಲ್ಲದ ಹೊತ್ತಲ್ಲಿ ಅಂತ ಏನಿದೆ, ಯಮರಾಯ ಏನು ಹೇಳಿ ಕೇಳಿ ಮಹೂರ್ತ ತೆಗೆಸಿಟ್ಟುಕೊಂಡು, ವೀಕೆಂಡು ಫ್ರೀ ಇದೀಯಾ ಬರ್ತಾ ಇದೀನಿ ಅಂತ ಅಪಾಯಿಂಟಮೆಂಟ ತೆಗೆದುಕೊಂಡಾ ಬರ್ತಾನೇ" ಅಂದೆ, ನಸುನಗುತ್ತ "
ಸಾಯೋಕೂ ಪುರೊಸೊತ್ತಿಲ್ಲದ ಸಾಫ್ಟವೇರ ಇಂಜನೀಯರಗಳು ನೀವು, ವೀಕೆಂಡೂ ಕೇಳಿಕೊಂಡೆ ಬರಬೇಕೇನೊ ಯಮ, ಹಾಗೇನಾದ್ರೂ ಬಂದರೆ ನನ್ನಾಕೆ ಹತ್ರ ಕೇಳು ಅಂತ ಕಳಿಸಿ, ನಾಳೆ ಅಲ್ಲ ನಾಡಿದ್ದು ಬಾ ಅಂತ ಅವನನ್ನೇ ಓಡಾಡಿಸಿ ಸೋತು ಸತ್ತು ಹೋಗುವಂತೆ ಮಾಡುತ್ತೇನೆ" ಅಂತ ಕಿಚಾಯಿಸಿದಳು. ಕೊಲ್ಲಲು ಬರುವ ಯಮನನ್ನೇ ಕೊಲ್ಲುವ ಯೋಚನೆ ಇವಳ್ದು ಒಳ್ಳೇ ಕ್ರಿಮಿನಲ ಐಡಿಯಾ... "ಹ್ಮ್ ಅದು ಬಿಡು ನಾ ಸತ್ತು ಹೋದರೆ ಅಳ್ತೀಯಾ" ಅಂದೆ "ಮತ್ತಿನ್ನೇನು" ಅಂದವಳ ಕಣ್ಣಾಲಿಗಳು ಆಗಲೇ ತುಂಬಿಕೊಂಡಿದ್ದವು, "ಆದ್ರೆ ನಿಜವಗ್ಲೂ ಅಳಬೇಕಾ?" ಅಂದ್ರೆ ಏನು ಇಂಥ ಎಡವಟ್ಟು ಪ್ರಶ್ನೇ ಅನ್ನೊ ಹಾಗೆ ನೋಡಿ, "ದುಖಃ ಅದರೆ ಅಳು ಬಂದೆ ಬರುತ್ತೇ" ಅಂದ್ಲು, "ಹಾಗಾದ್ರೆ ಎಷ್ಟು ದಿನ ಅಳ್ತೀಯಾ?" ಅಂದೆ "ಇನ್ನೇನು ಜೀವನ ಪೂರ್ತಿ ಅಳಕೊಂಡು ಕೂರೊಕಾಗುತ್ತಾ, ಕೆಲವು ದಿನ, ಆಮೇಲೆ ಮತ್ತೆ ಎಲ್ಲ್ ಮಾಮೂಲಿ ಆಗತ್ತೆ" ಅಂದ್ಲು. ಅವಳ ನಿರ್ಭಿಡೆಯ ಸತ್ಯವಾದ ಉತ್ತರ ಕೇಳಿ ಖುಷಿಯಾಯ್ತು, ಸ್ವಲ್ಪ ಹೊತ್ತು ಏನೊ ಯೋಚಿಸಿದವರಂತೆ ಮಾಡಿ "ರೀ ನೀವೇ ಇಲ್ಲದ ಮೇಲೆ ನಾನೇನು ಮಾಡ್ಲಿ ಇಲ್ಲಿ, ನಿಮಗೆ ಹೇಗೂ ಟಿಕೆಟ್ ಕೊಟ್ಟ ದೇವರಿಗೆ, ಅದರೊಂದಿಗೆ ನನಗೂ ಒಂದು ಫ್ರೀ ಟಿಕೆಟ್ ಕೊಟ್ಟು ಬಿಡು ಅಂತ ಕೇಳ್ತೀನ್ರಿ" ಅಂತಂದ್ಲು "ಲೇ ನೀ ಸ್ವಲ್ಪ ಲೇಟಾಗಿ ಬಾರೇ, ನಾನು ಹೋಗಿ ಸ್ವಲ್ಪ ಸ್ವರ್ಗ ಎಂಜಾಯ್ ಮಾಡ್ತೀನಿ" ಅಂದೆ, "ಸ್ವರ್ಗಕ್ಕೆ ಹೋಗ್ತೀರಿ ಅಂತ ಎನು ಗ್ಯಾರಂಟಿ, ನರಕಕ್ಕೇ ಹೋದ್ರೆ", "ಏಯ್ ನನ್ನ ಸ್ವರ್ಗದ ಕನಸುಗಳಿಗೆ ಕಲ್ಲು ಹಾಕಬೇಡ ಕಣೇ, ಇಂದ್ರ ನನ್ನ ಲೇಖನ ಓದಿಯಾದ್ರೂ ಪ್ರಭಾವಿತನಾಗಿ ಅಲ್ಲೇ ಕರಿಸಿಕೊಳ್ತಾನೆ ಅನ್ನೊ ಅಶಾಭಾವನೆ ಇದೆ ನಂಗೆ, ಒಂಥರಾ ಇಂದ್ರನ ಅಸಿಸ್ಟೆಂಟ ಹುದ್ದೆ ಕಬಳಿಸೊ ಯೋಚನೆ ಇದೆ, ಅವನ ಜತೆ ನಾನೂ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಸುರಾಪಾನ ಸುಧೆ ಹೀರುತ್ತ, ಗಂಧರ್ವರ ಹಾಡಿಗೆ ಕಾಲು ಕುಣಿಸುತ್ತ, ನರ್ತಿಸುತ್ತಿರುವ ರಂಭೆ ಮೇನಕೆ ಊರ್ವಶಿಯರನ್ನು ನೋಡುತ್ತ... ಆಹಾಹಾ" ಅಂತ ಕಲ್ಪನಾ ಲೋಕದಲ್ಲಿದ್ದರೆ, "ಅದಕ್ಕೇ ಏನೊ ಸಾಹೇಬ್ರಿಗೆ ಸಾಯೋ ಯೋಚನೆ ಬಂದಿದ್ದು, ದೇವರೇ, ಮೇಲೆ ಕರಿಸಿಕೊಂಡ ಮೇಲೆ, ಹಿಡಂಬೆ, ಮಂಥರೆ, ಶೂರ್ಪನಖಿಯರ ಸೆಲ್‌ನಲ್ಲೇ ಇವರನ್ನೂ ಕೂಡಿ ಹಾಕು" ಅಂತ ಆಕಾಶದತ್ತ ನೋಡಿ ಬೇಡಿಕೊಂಡಳು. "ಎಲ್ರೂ ಗಂಡನಿಗೆ ಒಳ್ಳೇದಾಗಲಿ ಅಂತ ಬೇಡಿಕೊಂಡರೆ ನೀನೇನೊ" ಅಂತ ಬೇಜಾರಾದ್ರೆ. "ರೀ ನಿಜಕ್ಕೂ ಸ್ವರ್ಗ ಅಂತಿದೆಯಾ?" ಅಂತ ಕೇಳಿದಳು ಕಣ್ಣರಳಿಸಿಕೊಂಡು. "ಅಲ್ಲಿದೆಯೋ ಇಲ್ವೊ ನಂಗೂ ಗೊತ್ತಿಲ್ಲ ಬಿಡು ಎಕ್ಸಪೀರಿಯನ್ಸ ಇಲ್ಲ ನೋಡು, ಇದ್ರೆ ಏನು ಪಿಕನಿಕ ಅಂತ ಹೋಗೋಕಾದ್ರೂ ಆಗುತ್ತಾ ಅದೂ ಇಲ್ಲ" ಅಂದೆ "ಎನು ಸ್ವರ್ಗನೊ ಎನೊ, ಸತ್ತರೆ ಸ್ವರ್ಗ ಬೇಕು ಎಲ್ರಿಗೂ, ಆದ್ರೆ ಸಾಯೋದು ಬೇಡ" ಅಂತ ವೇದಾಂತ ನುಡಿದಳು. "ಅಲ್ಲಿನೇ ಸ್ವರ್ಗ ಅಂತ ಯಾಕೆ ಅನ್ಕೊಬೇಕು, ಇಲ್ಲಿನೇ ಸ್ವರ್ಗ ಇಲ್ವಾ, ನೀನಿರುವ ನನ್ನ ಜೀವನ ಸ್ವರ್ಗನೇ ಆಗಿದೆ ಅಲ್ಲ" ಅಂತ ಪುಸಲಾಯಿಸಿದೆ. "ಮಹಾಪ್ರಭುಗಳೇ ಸುರಾಪಾನ ಬೇಕಾ" ಅಂತಂದಳು. "ಇಲ್ಲ ಸಧ್ಯ ಚಹಾಪಾನ ಸಾಕು" ಅಂದೆ ಚಹ ಮಾಡಲು ಮೇಲೆದ್ದಳು. ರಾಗವಾಗಿ "ನಯನ ಮನೋಹರಿ, ನಾಟ್ಯಮಯೂರಿ, ನನ್ನಾಕೆ... ನನಗ್ಯಾಕೆ ಆ... ಮೇನಕೆ... ರಂಭೆ ಊರ್ವಶಿ.. ಬೇಕೆ" ಅಂತ ಹಾಡುತ್ತಿದ್ದರೆ "ಇಲ್ಲೇ ಇದೆ ಇನ್ನೂ ಪೊರಕೆ... ಇನ್ನೆರಡು ಏಟು ಬೇಕೆ" ಅಂತ ಪೂರ್ಣಗೊಳಿಸುತ್ತ ಹಂಸ ನಡಿಗೆಯಲ್ಲಿ ಹೆಜ್ಜೆ ಹಾಕುತ್ತ ನಡೆದಳು.

ಚಹ ಹೀರುತ್ತ ಕೂತಿದ್ದವನಿಗೆ ಅವಳ ಪ್ರಶ್ನೇ ತೂರಿ ಬಂತು "ರೀ ಮುತ್ತೈದೇ ಸಾವು ಅಂತ, ನಾನೇ ಮೊದಲು ಸತ್ತು ಹೋದರೆ, ಮತ್ತೆ ಮದುವೆ ಆಗ್ತೀರ" ಅಂದ್ಲು. "ಆಗ ಪಕ್ಕದಮನೆ ಪದ್ದು ನನ್ನ ಮದುವೆ ಆಗ್ತಾಳೆ ಅಂತೀಯಾ" ಅಂದೆ. "ರೀ ಪದ್ದುಗೆ ಮದುವೆ ಆಗಿದೆ, ಅವಳೆಲ್ಲಿ ಆಗಬೇಕು" ಅಂದ್ಲು, "ಛೇ ಹೌದಲ್ವಾ, ಮತ್ತಿನ್ಯಾರು ಆಗ್ತಾರೆ ಬಿಡು" ಅಂದೆ. "ನಮ್ಮ ನರ್ಸ ನರ್ಗೀಸ್ ಕೇಳಿದ್ರೆ, ನಾನೇ ಬೇಕಾದ್ರೆ ಮಾತಾಡ್ತೀನಿ" ಅಂದ್ಲು, ಈಗಲೇ ಇನ್ನೊಂದು ಮದುವೆ ಮಾಡಿ ಬಿಡ್ತಾಳೆ ಅನ್ನೋ ಹಾಗಿತ್ತು. "ಲೇ ನಿನ್ನಂಥಾ ಹುಡುಗಿ ನನಗೆಲ್ಲೇ ಸಿಕ್ತಾಳೆ, ಒಂದು ವೇಳೆ ನಾನಿಲ್ಲ ಅಂದ್ರೆ ನೀನು ಬೇರೆ ಮದುವೆ ಆಗ್ತೀಯಾ" ಅಂದೆ, "ಅದನ್ನೆಲ್ಲ ಸಮಾಜ ಒಪ್ಪಲ್ಲ ಬಿಡಿ, ನೋಡು ಹೇಗೆ ಬೇರೆ ಮದುವೆ ಆದ್ಲು ಅಂತ ನಗಾಡತ್ತೇ" ಅಂದ್ಲು. "ಒಹೊ ಹಾಗಾದ್ರೆ ಹುಡುಗ ಮಾಡಿದ್ರೆ ತಪ್ಪಲ್ಲ, ಹುಡುಗಿ ಮಾಡಿದ್ರೆ ತಪ್ಪಾ" ಅಂದೆ. "ಸಮಾಜ ಇನ್ನೂ ಅಷ್ಟು ವಿಕಸಿತವಾಗಿಲ್ಲ" ಅಂದ್ಲು, "ಆಗಬೇಕು, ಯಾಕೇ ಯಾವುದೊ ಹುಡುಗಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದ್ರೆ ಕರ್ಮ ಅಂತ ಹಾಗೇ ಇರಬೇಕು, ಅವಳಿಗೂ ಆಸೆ ಆಕಾಂಕ್ಷೆ ಅಂತ ಇಲ್ವಾ, ಅವಳು ಎಷ್ಟು ದಿನ ಅಳಬೇಕು, ಎಷ್ಟು ದಿನದ ಮೇಲೆ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಬೇಕು, ಅಂತ ಈ ಸಮಾಜ ಯಾಕೆ ನಿರ್ಧರಿಸಬೇಕು, ವಿಧುರರು ಯಾಕೆ ಅಂಥವರ ಕೈ ಹಿಡಿಯಬಾರದು, ಸಮಾಜ ಕೂಡ ಬದಲಾಗ್ತಿದೆ, ಬದಲಾಗತ್ತೆ, ನಿಜಕ್ಕೂ ಒಳ್ಳೇ ಜೋಡಿ ಸಿಕ್ಕರೆ ಮದುವೆಯಾದರೆ ತಪ್ಪೇನಿದೆ" ಅಂದೆ. "ಹಾಗಾದಾಗ ನೋಡೋಣ ಬಿಡಿ, ಅಲ್ದೇ ಮಕ್ಕಳು ಎಲ್ಲ ಇದ್ರೆ ಇನ್ನೂ ತೊಂದ್ರೆ" ಅಂದ್ಲು, "ಅದೂ ಸರಿ, ಮಕ್ಕಳಿದ್ರೆ ಅವರ ಬಗ್ಗೆಯೂ ಯೋಚಿಸಬೇಕಾಗ್ತದೆ, ಅದ್ರೆ ಅವೆಲ್ಲ ಮೀರಿ, ಸಾಧ್ಯವಿದ್ದರೆ ಯಾಕಿಲ್ಲ, ಒಳ್ಳೆ ಜೋಡಿ ಸಿಕ್ರೆ ನೀನು ಮದುವೆ ಆಗ್ತೀನಿ ಅಂತ ಆಣೆ ಮಾಡು" ಅಂದೆ. "ನಿಮ್ಮೇಲೆ ಆಣೆ ಮಾಡಿದ್ರೆ ಏನು ಬಂತು ಸತ್ತೇ ಹೋದ ಮೇಲೆ, ಇನ್ನು ನನ್ನ ಮೇಲೆ ನಾ ಆಣೆ ಮಾಡಿಕೊಂಡು, ಪಾಲಿಸದೆ ನಾ ಸತ್ತು ಹೋದ್ರೆ, ಅದಕ್ಕೇ ಎನೂ ಬೇಡ, ಆದ್ರೆ ನೀವು ಹೇಳಿದ್ದು ಸರಿ ಒಪ್ಕೊತೀನಿ, ಇಂಥದ್ದೇ ತರಲೆ ತುಂಟ ಸಿಕ್ರೆ ಆಗ್ತೀನಿ ಆಯ್ತಾ" ಅಂದ್ಲು. ಎಷ್ಟೊ ಹೊತ್ತು ಮಾಡಿಸಿರುವ ಪಾಲಸಿಗಳು, ಬ್ಯಾಂಕ ಅಕೌಂಟಗಳು ಎಲ್ಲ ಮಾಹಿತಿ ನೀಡುತ್ತಿದ್ದೆ, ನಾನಿಲ್ಲದಿದ್ರೆ ಯರ್ಯಾರು ಎನು ಹೆಲ್ಪ ಮಾಡಬಹುದು, ಯಾರ್ಯಾರಿಗೆ ಏನು ಕೇಳಬಹುದು ಎಲ್ಲ ಮಾಹಿತಿ ಮನವರಿಕೆ ಮಾಡಿಕೊಟ್ಟೆ, ಸುಮ್ಮನೇ ಕೇಳುತ್ತಿದ್ಲು, ತಲೆಗೆ ಎಷ್ಟು ಹೋಯಿತೊ ಗೊತ್ತಿಲ್ಲ.

ಒಂದಿಲ್ಲೊಂದು ದಿನ ಸತ್ತು ಹೋಗೊದು ನಿಜವೇ ಆದ್ರೂ ಇಂದೇ ಆ ಬಗ್ಗೆ ಯೋಚಿಸಲೂ ಹಿಂದೇಟು ಹಾಕುತ್ತೇವೆ, ಯಾರಿಗೆ ಗೊತ್ತು ಯಾವ ಮುಸುಕಿನ ಜಾವದಲ್ಲಿ ಜವರಾಯನ ಕರೆಗೆ ಓಗೊಡಬೇಕಾಗುತ್ತದೋ ಏನೊ. ಇರುವಷ್ಟು ದಿನ ಎಲ್ಲ ಸರಿಯಾಗೇ ಇರುತ್ತದೇ, ನಮ್ಮ ಮೇಲೆ ಅವಲಂಬಿತರಾಗಿರುವವರ ಬಗ್ಗೆ ಇರುವಾಗಲೇ ಯೊಚಿಸುವುದೊಳಿತು, ಹಾಗಂತ ನಾನೇನು ಇನ್ಸೂರನ್ಸ ಕಂಪನಿ ಏಜೆಂಟ್ ಆಗಿದ್ದೇನೆಂದು ತಿಳಿಯಬೇಡಿ!, ಬರೀ ಆರ್ಥಿಕವಾಗಿ ಅಂತೇ ಅಲ್ಲ ಮಾನಸಿಕವಾಗಿ ಕೂಡ ಅವರಿಗೆ ಆಗಬಹುದಾದ ಎಲ್ಲವನ್ನೂ ಯೋಚಿಸಿ ಎಲ್ಲದಕ್ಕೂ ಪ್ಲಾನ ಮಾಡಿದ್ದರೆ ಒಳ್ಳೇದೆ ಅಲ್ವಾ. ನಾ ಸತ್ತು ಹೋದರೆ ಅಂತ ಒಮ್ಮೆ ಯೋಚಿಸಿ ಮುಂದಾಗಬಹುದಾದ ಎಲ್ಲ ಘಟನೆಗಳ ಬಗ್ಗೆ ಕ್ರಮ ಅಗತ್ಯ ಅಂತ ನನ್ನನಿಸಿಕೆ.

ರಾತ್ರಿ ಊಟ ಮಾಡಿ ಮಲಗಿದಾಗಲೂ ಅದೇ ಯೋಚನೆಗಳು ಇನ್ನೂ ತಲೆಯಲ್ಲಿದ್ದವು, "ರೀ ನಾ ಸತ್ತು ಹೋಗಿ ಮೋಹಿನಿ ಆಗಿ ಬಂದು ನಿಮ್ಮನ್ನ ಕಾಡಿದರೆ" ಅಂದ್ಲು, "ಹ್ಮ್ ಹಾಡು ಹಾಡ್ತಾ ಬಿಳಿ ಸೀರೆ ಉಟ್ಕೊಂಡು... ಗೆಜ್ಜೆ ಸದ್ದು ಮಾಡ್ತಾ ಹೋಗ್ತಾ ಇದ್ರೆ... ಲೇ ಹಾಗೇನಾದ್ರೊ ಅದ್ರೆ ನೀನು ಬಿಳಿ ಸೀರೆ ಹಾಕೋಬೇಡ, ನಂಗೆ ಈ ತಿಳಿ ನೀಲಿ ಇಷ್ಟ ಆ ಸೀರೇನೇ ಹಾಕೊ ಒಕೇನಾ" ಅಂದೆ "ರೀ ಅದು ಮೋಹಿನಿ, ಬಿಳಿ ಸೀರೆನೇ ಹಾಕೋದು, ಏನೊಪ್ಪಾ ಬೇಕಿದ್ರೆ ನಿಮ್ಗೆ ಅಂತ ನೀಲಿ ಬಾರ್ಡರ್ ಇರೋ ಬಿಳಿ ಸೀರೆ ಹಾಕೋತೀನಿ ಆಯ್ತಾ" ಅಂದ್ಲು. ಮೋಹಿನಿ ಮಾತಾಡಲು ಬಿಟ್ರೆ ಮಾತಾಡ್ತಾನೇ ಇರ್ತಾಳೆ ಅಂತ... "ಅದೋ ಅಲ್ಲಿ ಬಾಗಿಲ ಮರೆಯಲ್ಲಿ ಯಾರೊ ನಿಂತ ಹಾಗೆ ಕಾಣಿಸ್ತಾ ಇದೆ ಅಲ್ವಾ, ದೆವ್ವ ಎನಾದ್ರೂ... " ಅಂತಿದ್ದಂಗೇ, ನಿಧಾನಕ್ಕೆ ಸರಿದು ನನ್ನೆಡೆಗೆ ಬಂದು ಅವುಚಿಕೊಂಡು ಮಲಗಿದಳು, "ಅದೊ ನೋಡು ನಮ್ಮೆಡೆಗೇ ಬರ್ತಾ ಇರ್‍ಒ ಹಾಗೆ ಕಾಣ್ತಿದೆ" ಅಂದೆ. ಇನ್ನಷ್ಟು ಹತ್ತಿರವಾದಾಳು ಹೆದರಿ ಅಂತ. "ಯಾರೂ ಇಲ್ಲ ಅಲ್ಲಿ ನನ್ನೇ ಹೆದರಿಸ್ತೀರಾ" ಅಂತನ್ನುತ್ತ ತಳ್ಳಿದಳು... ಹಾಗೆ ನಿದ್ರೆ ಹೋದವನಿಗೆ ಸ್ವಲ್ಪ ಹೊತ್ತಿನಲ್ಲಿ "ತಂಗಾಳಿಯಲ್ಲಿ ನಾನು ತೇಲಿ ಬಂದೆ, ನಿನ್ನನ್ನು ಪ್ರೀತಿಯಿಂದ ಸೇರಲೆಂದೇ.. ಓ ಇನಿಯಾ... ನನ್ನನ್ನು ಸೇರಲೂ ಬಾ..." ಅಂತ ಹಾಡುವುದು ಕೇಳಬೇಕೇ... ಇವಳು ಎಲ್ಲಿ ನಿಜವಾಗಿಯೂ ಮೋಹಿನಿ ಆದಳೋ ಅಂತ ಹೆದರಿ ಬೆವರಿದೆ, ಪಕ್ಕದಲ್ಲಿದ್ದವಳ ಕೈ ಗಟ್ಟಿಯಾಗಿ ಹಿಡಿದೆ... "ಲೇ ಮೋಹಿನಿ" ಅಂತ ಚೀರಿದೆ... "ರೀ ಮೋಹಿನಿನೂ ಇಲ್ಲ ಏನೂ ಇಲ್ಲ, ಅದು ನನ್ನ ಮೊಬೈಲ್ ರಿಂಗಟೋನು" ಅಂತನ್ನುತ್ತ ಯಾರು ಇಷ್ಟೊತ್ತಿನಲ್ಲಿ ಫೋನು ಮಾಡುತ್ತಿರುವವರು ಅಂತ ನೋಡಲೆದ್ದಳು. ಒಂದು ಕ್ಷಣ ಹೆದರಿ ಸತ್ತೇ ಹೋಗಿದ್ದೆ ಅನಿಸುತ್ತಿತ್ತು.


ಈ ಲೇಖನ ಓದಿ ಯಾರಾದ್ರೂ ಹೀಗೆ ಪ್ರಶ್ನೆ ತಮ್ಮ ಪತ್ನಿಯನ್ನು ಕೇಳಿ ಏಟು ತಿಂದ್ರೆ ನಾನು ಹೊಣೆಯಲ್ಲ! ಜೀವನ ಎಷ್ಟು ಕ್ಷಣಿಕ ಅಲ್ವಾ ಅನ್ನಿಸಿ ಬರೆದ ಲೇಖನ, ಇಂದಿರೊರು ನಾಳೆ ಇರಲ್ಲ... ಹಾಗಂತ ನಾಳೆ ಸತ್ತು ಹೋಗುವವರಂತೆಯೂ ಜೀವಿಸಬೇಕಿಲ್ಲ, ಆದ್ರೂ ಎಲ್ಲ ಪ್ಲಾನ ಮಾಡಿಟ್ಟಿದ್ರೆ ಒಳ್ಳೇದು ಅಂತ ಹೇಳಲು ಮಾತ್ರ. ಹಾಂ ಅಂದ ಹಾಗೆ, ನಾ ಸತ್ತು ಹೋದ್ರೆ ನನ್ನ ಬ್ಲಾಗ ಓದುಗರಿಗೆ ಗೊತ್ತಾಗೊ ಹಾಗೆ ಕಮೆಂಟ ಒಂದು ಹಾಕು ಅಂತ ಗೆಳೆಯನಿಗೆ ಹೇಳಿಟ್ಟಿದ್ದೇನೆ, ಅವನು ಮರೆತರೂ ನಿಮಗೆ ಯಾರಿಗಾದ್ರೂ ಗೊತ್ತಾದ್ರೆ, ಇಲ್ಲ ಬಹಳ ದಿನ ಹೇಳದೇ ಕೇಳದೇ ನಾ ಬರೆಯುವುದು ಬಿಟ್ಟರೆ, ಒಂದು ಸಾರಿ ಕೆಳಗಿರುವ ಮೇಲ ಆಯ್.ಡಿಗೇ ಮೇಲ್ ಮಾಡಿ ಉತ್ತರ ಬರದೇ ಇದ್ರೆ, ಕಮೆಂಟ ಹಾಕಿದ್ರೆ ಸಾಕು(ಯಾಕೇಂದ್ರೆ ಎಲ್ಲ ಮೇಲ್‌ಗಳಿಗೂ ತಪ್ಪದೇ ಉತ್ತರಿಸುತ್ತೇನೆ), ಇಷ್ಟು ದಿನ ತಪ್ಪದೇ ಬರೆಯುತ್ತಿದ್ದವ ಎಲ್ಲಿ ಕಣ್ಮರೆಯಾದ ಅಂತ ಎಲ್ರೂ ಅನ್ಕೋಬಾರದು ನೋಡಿ :)


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/sattu-hodare.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Monday, September 14, 2009

ದುಡ್ಡು ದುಡ್ಡು

ಕೂತು ನಾಲ್ಕು ಸಾರಿ ಕೂಡಿ ಕಳೆದರೂ ಈ ಕ್ರೆಡಿಟ್ಟು ಕಾರ್ಡನ ಬ್ಯಾಲನ್ಸಿನ ಲೆಕ್ಕ ಸರಿ ಹೋಗುತ್ತಿರಲಿಲ್ಲ, ತಲೆ ಕೆರೆದುಕೊಂಡು ಮತ್ತೆ ತಿರುವಿ ಹಾಕುತ್ತಿದ್ದೆ, "ಮುನ್ನೂರು ಮೂವತ್ತು, ಐನೂರು ಹತ್ತು" ಅಂತಿರುವಾಗಲೇ, ಇವಳು ಕೂಗಿದಳು "ರೀ ಪೇಪರ್ ಬಿಲ್ಲಿನವ ಬಂದಿದ್ದ", "ಒಹೋ ಹಾಗೋ ಪೇಪರ್ ಸರಿಯಾಗಿ ಬರ್ತಿದೆ ಅಂತ ಹೇಳಬೇಕಿತ್ತು" ಅಂದೆ, "ಪೇಪರ್ ಸರಿಯಾಗೇ ಬರ್ತಿದೆ ಈಗ ಅವನಿಗೆ ಹಸಿರು ಹಸಿರು ಪೇಪರ್ ನೋಟು ಎಣಿಸಿ ಕೊಡಬೇಕಲ್ಲ" ಅಂದ್ಲು, "ಆಯ್ತು, ಅದೊಂದು ನೂರು ಅಂತ ಲೆಕ್ಕ ಮಾಡಿದೆ, ಲೇ ಪೇಪರ್ ಬೇಕೇನೆ ನಮ್ಗೆ, ನೀನ್ ಓದ್ತೀಯಾ" ಅಂದೆ, "ಅದೇ ಟೈಮ್ ಸಿಕ್ಕಾಗ ಮೇನ್ ಪೇಜ ಕಣ್ಣಾಡಿಸ್ತೀನಿ ಅಷ್ಟೇ, ಇಲ್ಲಾಂದ್ರೆ ಅದೂ ಇಲ್ಲ" ಅಂದ್ಲು. "ಓಕೇ ಹಾಗಾದ್ರೆ ಬರೀ ಮೇನ್ ಪೇಜ ಕೊಡ್ತಾರಾ ಕೇಳು, ಎನಾದ್ರೂ ಡಿಸ್ಕೌಂಟ್ ಸಿಕ್ರೆ ಒಳ್ಳೆದಾಗತ್ತೆ ದುಡ್ಡು ಉಳಿಯತ್ತೆ" ಅಂದೆ. ಪೇಪರನವ ಆ ಪ್ರಶ್ನೆ ಕೇಳಿದರೆ ಹೇಗೆ ಮುಖ ಮಾಡಬಹುದಿತ್ತೊ ಹಾಗೆ ಇವಳೇ ಮಾಡಿದ್ಲು. ಸಾಫ್ಟವೇರ ಕಂಪನಿಗಳಲ್ಲಿ ರಿಸೆಷನ ಅಂತ ಟಾಯ್ಲಿಟ್ಟಿನಲ್ಲಿಡುವ ಟಿಶ್ಯೂ ಪೇಪರ್ ಕೂಡ ಕಟ್ ಮಾಡಿದಂತೆ, ನಮ್ಮನೇ ಪೇಪರ ಮೇಲೆ ಕಣ್ಣು ಬಿದ್ದಿತ್ತು ನಂದು. "ವಾರದ ನಂತರ ಪಕ್ಕದ ಮನೆ ಪದ್ದು ಹೋಗಿ ಹೇಗೂ ರದ್ದಿ ಅಂಗಡಿಗೆ ಹಾಕ್ತಾಳೆ, ಅದನ್ನೇ ನಮ್ಮನೆಗೆ ಕೊಡು ಅಂತ ಹೇಳಿದರಾಯ್ತು ಬಿಡಿ" ಅಂದ್ಲು, ವಾರದ್ದೆಲ್ಲ ಸುದ್ದಿ ಒಮ್ಮೇ ಓದುವ ಯೋಚನೆ ಅವಳದು, ನಾನೇ ಚಾಪೆ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೆ ನುಸುಳುವವಳು. "ಒಳ್ಳೆ ಐಡಿಯಾ ಕೊಡ್ತೀಯಾ, ನೀನ ಯಾವುದಾದ್ರೂ ಕಂಪನಿಗೆ ಕನ್ಸಲ್ಟಂಟ ಅಂತ ಆಗಬಹುದಿತ್ತು" ಅಂದ್ರೆ, "ಕೊಡ್ರೀ ನನ್ನ ಕನ್ಸಲ್ಟಿಂಗ ಫೀಜು" ಅಂದ್ಲು... ಅಯ್ಯೋ ದುಡ್ಡು ಉಳಿಸೊದು ಹೇಳೊಕೂ ದುಡ್ಡಾ ತಲೆ ಚಚ್ಚಿಕೊಂಡು ಮತ್ತೆ ಲೆಕ್ಕ ಮಾಡತೊಡಗಿದೆ...

ಅಂತೂ ಲೆಕ್ಕ ಸೇರಿಸಿ, ಇವಳು ಕೊಟ್ಟ ದಿನಸಿ ಪಟ್ಟಿ ಹಿಡಿದು ಹೊರ ಹೊರಟೆ, ಮನೆ ಮಾಲೀಕರು ಕಾಣಿಸಿದರು, "ಏನು ಬಹಳ ದಿನಾ ಆಯ್ತು ಕಾಣಿಸಿಲ್ಲ" ಅಂದ್ರು. ಹೀ ಅಂತ ಹಲ್ಲು ಕಿರಿದೆ, ತಾರೀಖು ಹತ್ತು ಆಗಿ ಹೋಯ್ತು ಇನ್ನೂ ಬಾಡಿಗೇನೇ ಕೊಟ್ಟಿಲ್ಲ ಅಂತ ಕೇಳ್ತಿದಾರೆ ಅಂತ ಅನ್ಕೊಂಡು, "ಎರಡು ಸಾರಿ ಬಂದಿದ್ದೆ ತಾವೇ ಸಿಕ್ಕಲಿಲ್ಲ" ಅಂತ ಸುಳ್ಳು ರೈಲು ಬಿಟ್ಟು ಸಾವಿರದ ಕಂತೆಗಳನ್ನು ಎಣಿಸಿ ಅವರ ಕೈಗಿಟ್ಟೆ "ಅಯ್ಯೊ ಪರವಾಗಿಲ್ಲ, ನೀವೇನು ಕೊಟ್ಟೇ ಕೊಡ್ತೀರಲ್ಲಾ, ಅರ್ಜೆಂಟೇನಿರಲಿಲ್ಲ" ಅಂದ್ರು, ಪಾಪ ಒಳ್ಳೇವರು(ಬಾಡಿಗೇನೇ ಕೇಳದಿದ್ರೆ ಇನ್ನೂ ಒಳ್ಳೇವರು!!), "ಏನ್ ಮಾಡೊದು ಸಾರ್, ನಾಲ್ಕು ದಿನ ಹೆಚ್ಚಿಗೆ ಇಟ್ಟರೂ ಬ್ಯಾಂಕಿನಲ್ಲಿ ಏನು ಬಡ್ಡಿನೂ ಬರಲ್ಲ ಬಿಡಿ" ಅಂದೆ ನಗುತ್ತ, "ಲೇಟಾಗಿ ಕೊಟ್ರೆ ನಾವೇನು ದಂಡ(ಫೈನ್) ಹಾಕಲ್ಲ ಅಲ್ವಾ" ಅಂತಂದು ನಡೆದರು. ಬಡ್ಡಿನೂ ದುಡ್ಡೇ, ದಂಡಾನೂ ದುಡ್ಡೇ ಅಂತ ಯೋಚಿಸುತ್ತ, ನಾ ಕಿರಾಣಿ(ದಿನಸಿ) ಅಂಗಡಿಗೆ ಬಂದರೆ ಎಂದಿನಂತೆ ಕೀರ್ತಿ(ಕೀರುತಿ, ಕಿರುಚುತಿ, ನಮ್ಮ ನಾಮಕರಣವೇ) ಕಿರುಚುತ್ತಿದ್ಲು. ನನ್ನ ನೋಡಿ ಒಮ್ಮೇಲೆ ಮುಖದ ಮೇಲೆ ಇಷ್ಟು ದೊಡ್ಡ ನಗು ಹೊತ್ತು, "ಎನ್ ನಮ್ಮ ಅಂಗಡಿಗೆ ಬರೋದೇ ಇಲ್ಲಾ ಸರ್, ಡಿಸ್ಕೌಂಟ ಸಿಗತ್ತೇ, ಆಫರ ಅಂತ ಶಾಪಿಂಗ ಮಾಲ್‌ಗೆ ಹೋಗ್ತೀರಾ, ಅಲ್ಲಿ ಎಲ್ಲ ಹಳೇ ಮಾಲು, ನಮ್ಮಲ್ಲಿ ಎಲ್ಲಾ ಫ್ರೆಷ್" ಅಂದ್ಲು,
"ಹಳೇದೊ ಹೊಸದೊ... ದುಡ್ಡು ಹಳೇದಾದ್ರೂ ಅದೇ ಬೆಲೆ, ಹೊಸದಿದ್ರೂ ಅದೇ ಬೆಲೆ" ಅಂದೆ ಅವಳಿಗೆ ತಿಳೀತೊ ಇಲ್ವೊ, ದೊಡ್ಡ ತತ್ವಜ್ಞಾನಿಯಂತೆ ಕಂಡಿರಬೇಕು, ಕಕ್ಕಾಬಿಕ್ಕಿಯಾಗಿ ನೊಡುತ್ತಿದ್ದವಳಿಗೆ ದಿನಸಿ ಪಟ್ಟಿ ಕೊಟ್ಟು, ಆ ಫ್ರೆಷ್ ಸಾಮಾನುಗಳಿಗೆ, ಗರಿಗರಿ ಫ್ರೆಷ್ ನೋಟುಗಳನ್ನೇ ಎಣಿಸಿ ಕೊಟ್ಟೆ(ರಿಜರ್ವ ಬ್ಯಾಂಕಿನಲ್ಲಿ ಪ್ರಿಂಟ ಆಗಿ ನೇರ ನನ್ನ ಕೈಗೇ ಬಂದಿರುವಂತವು.) ಅತ್ತಿತ್ತ ತಿರುವಿ ನಾಲ್ಕು ಬಾರಿ ಪರೀಕ್ಷಿಸಿ ನೋಡಿ ತೆಗೆದುಕೊಂಡಳು, ಅವಳ ಎಣ್ಣೆ, ಹಿಟ್ಟು ಮೆತ್ತಿದ ಕೈಗಳಲ್ಲಿ ಅವೂ ಹಳೆಯದಾದವು, ಖೊಟಾ ನೋಟು ಏನಲ್ಲ ಬಿಡು, ಅಷ್ಟಕ್ಕೂ ಅದೂ ಕೂಡ ದುಡ್ಡೇ ಅಲ್ವೇ ಖೊಟಾ ಅಂತ ಗೊತ್ತಾಗೊವರೆಗೆ... ಅಂತನ್ನಬೇಕೆನಿಸಿದರೂ ಜಾಸ್ತಿ ಮಾತಾಡಿದರೆ ಎಲ್ಲಿ ನಾನೇ ಪ್ರಿಂಟ ಮಾಡಿ ತಂದಿರುವೆ ಅಂತಂದಾಳು ಅಲ್ಲಲ್ಲ ಕಿರುಚಿಯಾಳು ಅಂತ ಹೆದರಿ ಸುಮ್ಮನಾದೆ, ಗಲ್ಲಾ ಪೆಟ್ಟಿಗೆ ಎಲ್ಲ ಸಾರಿಸಿ ಸಪಾಟ ಮಾಡುವ ಹಾಗೆ ಬಳಿದು, ಎಣಿಸಿ ನಾಣ್ಯಗಳನ್ನೇ ಕೊಟ್ಟಳು, ನೋಟಿಲ್ಲ ಬರೀ ಚೇಂಜ ಇದೆ ಅನ್ನುತ್ತ, ಅದೂ ದುಡ್ಡೆ ಅಲ್ವೇ, ಅದನ್ನೇ ಜೇಬಿನಲ್ಲಿಳಿಸಿ ನಡೆದೆ.

ಮನೆಗೆ ಬರುತ್ತಿದ್ದಂತೆ, ಜೇಬಿನಲ್ಲಿ ನಾಣ್ಯಗಳು ನಾಟ್ಯವಾಡಿದಂತಾಗಿ, ಗೆಜ್ಜೆ ಘಲ್ಲು ಘಲ್ಲು ಅನ್ನೊ ಹಾಗೆ ಸದ್ದು ಬರುತ್ತಿದ್ದು ಕೇಳಿ, "ರೀ ಕೀರ್ತಿ ಕಿರಾಣಿ ಅಂಗಡೀಲಿ ದಿನಸಿ ತುಗೊಂಬಾ ಅಂದ್ರೆ ಜತೆಗೆ ಅವಳನ್ನೂ ಕರೆತಂದಿರೋ ಹಾಗಿದೆ, ಏನು ಗೆಜ್ಜೆ ಸದ್ದು ಅದು" ಅಂದ್ಲು, "ಹೂಂ ದಿನಸಿ ಕೊಂಡ್ರೆ ಜತೆಗೆ ಫ್ರೀ ಅಂತ ಕೊಟ್ರು ಕಿರುಚೋಕೆ" ಅಂದೆ, "ಏನ್ ಫ್ರೀನೊ ಏನೊ ಫ್ರೀ ಅಂತ ಹೇಳೋಕಷ್ಟೇ ಅದಕ್ಕೂ ದುಡ್ಡು ಸೇರಿಸಿಯೇ ಇಟ್ಟಿರ್ತಾರೆ ಬಿಡಿ" ಅಂದು, ಅವಳಿಗೇನು ದುಡ್ಡಿನ ಸದ್ದು ಗೊತ್ತಾಗಲ್ವೇ... ತನ್ನ ಉಳಿತಾಯದ ಕುಡಿಕೆ, ಅದೇ ಆ ಹಂದಿ ಮರಿ ಬಾಕ್ಸ್ ಹಿಡಿದು ಹೊರಬಂದ್ಲು, ಸೇವಿಂಗ್ಸ ಮಾಡೊಕೆ ಅಂತ ಚಿಕ್ಕ ಹಂದಿಮರಿ ಆಕಾರದ ಬಾಕ್ಸ ಇರ್ತವಲ್ಲ, ಅದು, ಜೇಬಿನಿಂದ ತೆಗೆದು ಎರಡು ನಾಣ್ಯ ಅದರ ಬೆನ್ನಿನಲ್ಲಿನ ಕಿಂಡಿಗೆ ತಳ್ಳಿದೆ, ಹಂದಿಮರಿ ಖುಷಿಯಾದಂತೆ ಕಂಡರೂ ಇವಳು ಕಾಣಲಿಲ್ಲ, ಜೇಬಿನಲ್ಲಿದ್ದ ಎಲ್ಲ ನಾಣ್ಯ ತೆಗೆದು ಅವಳ ಕೈಗಿತ್ತು... "ದುಡ್ಡು ದುಡ್ಡು ದುಡ್ಡು... ಸಾಕಾಗಿದೆ ಮುಂಜಾನೆಯಿಂದ ಬರೀ ಕೊಡೋದೆ ಆಯ್ತು" ಅಂತ ಬೇಜಾರಿನಲ್ಲಿ ಅಂದರೆ, ನಾನೇ ಕೊಟ್ಟ ನಾಣ್ಯಗಳಲ್ಲಿನದೊಂದು ರೂಪಾಯಿ ನನ್ನ ಕೈಗಿತ್ತಳು ಭಿಕ್ಷೆ ಹಾಕಿದಂತೆ! ಕೊಟ್ಟಿದ್ದು ಯಾಕೆ ಬೇಡ ಅನ್ನಲಿ ಅಂತ ಕಣ್ಣಿಗೊತ್ತಿ ಇಟ್ಕೊಂಡೆ.

"ಅಲ್ಲ ನಾನೂ ನೋಡ್ತಾ ಇದೀನಿ, ಏನ್ ದುಡ್ಡು ದುಡ್ಡು ಅಂತೀದೀರಾ, ಎನಾದ್ರೂ ತೊಂದ್ರೇನಾ" ಅಂದ್ಲು, "ದುಡ್ಡು ಇದ್ರೂ ತೊಂದ್ರೆ, ಇಲ್ಲದಿದ್ರೂ ತೊಂದ್ರೆ ಬಿಡು" ಅಂದೆ, "ಇದ್ರೆ ಏನ್ ತೊಂದ್ರೆಪ್ಪಾ, ಜಾಸ್ತಿ ಆಗಿದ್ರೆ ನಂಗೆ ಕೊಡಿ" ಅಂದ್ಲು, "ಜಾಸ್ತಿ ಆಗಿದ್ದು ಕೊಟ್ಟೆನಲ್ಲ ಆಗಲೇ ಆ ಹಂದಿಮರಿಗೆ ತಿನ್ನಿಸಿದೆ" ಅಂದೆ, "ಹತ್ತಿಪ್ಪತ್ತು ರೂಪಾಯಿ ಜಾಸ್ತೀನಾ ನಿಮ್ಗೆ" ಅಂದ್ಲು "ಲೇ ಅಷ್ಟಕ್ಕೇ ದಿನಾ ಪೂರ್ತಿ ದುಡೀತಾರೆ ಕೆಲವು ದಿನಗೂಲಿಗಳು, ಅದು ಜಾಸ್ತೀನೆ" ಅಂದೆ, "ಅವರ ಹತ್ರಾ ದುಡ್ಡು ಜಾಸ್ತಿ ಇದ್ರೆ ತೊಂದ್ರೆನೇ ಇರಲ್ಲ, ಹಾಗಾದ್ರೆ ದುಡ್ಡಿದ್ರೂ ತೊಂದ್ರೆ ಅಂತ ಹೇಗೆ ಹೇಳ್ತೀರಿ" ಅಂತ ಮರುಪ್ರಶ್ನಿಸಿದಳು. "ಅದೇ ದಿನಗೂಲಿಗೆ ಹತ್ತು ಕೋಟಿ ರೂಪಾಯಿ ಲಾಟರಿ ಹತ್ತಿದ್ರೆ, ಹರಿದು ತಿಂದು ಬಿಡ್ತಾರೆ ಅವನನ್ನ, ಆಗ ದುಡ್ಡಿದ್ರೂ ತೊಂದ್ರೆ ಅಲ್ವಾ" ಅಂತ ಸಮಜಾಯಿಸಿದೆ. "ಅದೂ ಸರಿಯೇ... ದುಡ್ಡು ಇಲ್ದೆ ಇದ್ರೆ ಮಾತ್ರ ತೊಂದ್ರೆ ತಪ್ಪಿದ್ದಲ್ಲ" ಅಂದ್ಲು. "ಹಾಗೆ ನೋಡಿದ್ರೆ ಅಪ್ಪ ಕಳಿಸಿದ ಪಾಕೆಟ ಮನಿಯಲ್ಲಿ ಕಾಲೇಜಿನಲ್ಲೇ ಆರಾಮಾಗಿದ್ದೆ" ಅಂತ ಮಾತು ತಿರುವಿದೆ, "ಈಗೇನು ದೊಡ್ಡ ತೊಂದ್ರೆ ಹಾಗಿದ್ರೆ" ಗುರಾಯಿಸಿದಳು. "ಅದೇ ಹಾಸ್ಟೆಲ್ಲು ಊಟ, ಹೊರಗೊಂದು ಕಪ್ಪು ಟೀ ಅಷ್ಟೇ ಚೆನ್ನಾಗೇ ಇತ್ತು, ತಿಂಗಳ ಕೊನೆಗೆ ಖಾಲಿ, ಕಾಲೇಜು ಮುಗೀತು ಕೆಲ್ಸ ಸಿಕ್ತು, ಪಾಕೇಟ ಮನಿಗಿಂತ ಜಾಸ್ತಿ ಸಂಬಳ ಆಯ್ತು, ರೂಮು, ಶಾಪಿಂಗು, ಫಿಲಮ್ಮು, ಆಯ್ತು. ತಿಂಗಳ ಕೊನೆಗೆ ಮತ್ತೆ ಖಾಲಿ. ಪ್ರಮೋಷನ್ನು ಆಯ್ತು ಇನಕ್ರೀಮೆಂಟ ಆಯ್ತು, ಬಸ್ಸು ಹೋಯ್ತು ಬೈಕ ಬಂತು, ಸುತ್ತಿ ಪೆಟ್ರೊಲು ಸುಟ್ಟಿದ್ದೇ ಆಯ್ತು, ದೊಡ್ಡ ರೂಮು, ಬ್ರಾಂಡ ಬಟ್ಟೆ ಮತ್ತೆ ತಿಂಗಳ ಕೊನೆಗೆ ಲೊಟ್ಟೆ, ಮತ್ತೆ ಹೆಚ್ಚಿನ ಸಂಬಳ, ಮದುವೆ ಮಹರಾಣಿಯಂತ ಮಡದಿ, ಅರಮನೆಯಂತ ಮನೆ... ತಿಂಗಳ ಕೊನೆ!!!" ನಿಟ್ಟುಸಿರು ಬಿಟ್ಟೆ.... "ಹೂಂ ಮಹರಾಜರು ಓಡಾಡೊಕೆ ರಥ ಅದೇ ಕಾರು ಬೇರೆ ಬೇಕು ಅದು ಮುಂದಿನ ಕಂತು, ಕೋಟಿ ರೂಪಾಯಿ ಸಿಕ್ರೂ ಸಾಕಾಗಲ್ಲ ಬಿಡಿ" ಅಂದ್ಲು. "ಒಂದಂತೂ ನಿಜ ಜೀವಿಸುವ ಶೈಲಿ, ಸ್ಥರ ಬದಲಾಗುತ್ತ ಹೋಗಿದೆ, ಸೌಕರ್ಯಗಳು ಜಾಸ್ತಿ ಆಗಿವೆ, ದುಡ್ಡಿಲ್ಲದೇ ಜೀವನವಿಲ್ಲ, ಅದು ಎಷ್ಟಾದರೂ ಸಾಕಾಗಲ್ಲ ಅನ್ನೊ ಹಾಗೆ ಆಗಿದೆ" ಅಂದೆ. "ಸಾಕು ಹೊಟ್ಟೆಗೇನು ದುಡ್ಡೆ ತಿನ್ನೊಕಾಗಲ್ಲ, ಏನಾದ್ರೂ ಹೊರಗೆ ತಿನ್ಕೊಂಡು ಬಂದ್ರಾಯ್ತು, ನಿಮ್ಮ ಸೊಡೆಕ್ಸೊ ಫುಡ ಕೂಪನ್ ಇವೆ ಅಲ್ವ" ಅಂದ್ಲು "ಅದೂ ದುಡ್ಡೇ ಕಣೇ, ಸಂಬಳದಲ್ಲಿ ಕಟ್ ಮಾಡಿ ಕೊಡೋದು ಅಂತಿದ್ದರೆ" ತಳ್ಳಿಕೊಂಡು ಹೊರ ನಡೆದಳು, "ಮಾತಾಡಲು ಬಿಟ್ಟರೆ ದುಡ್ಡು ಖರ್ಚು ಆಗಲ್ಲ ಅಂತ ಮಾತಾಲ್ಲೇ ಹೊಟ್ಟೆ ತುಂಬಿಸಿಬಿಡ್ತಾರೆ" ಅಂತನ್ನುತ್ತ.

ದುಡ್ಡು, ಹಾಗೆ ನೋಡಿದ್ರೆ ಒಂದು ತುಣುಕು ಹಾಳೆ, ಚೂರು ಲೋಹ, ನಾವೇ ಅದಕ್ಕೆ ಬೆಲೆ, ಮೌಲ್ಯ ಅಂತ ಕೊಟ್ಟಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಈಗ. ಎಷ್ಟು ದುಡ್ಡಾದರೂ ಸಾಕಾಗಲ್ಲ, ಹಾಗೇ ಇನ್ನೂ ಹೆಚ್ಚು ಹೆಚ್ಚು ಅಂತ ಗಳಿಸುತ್ತಲೇ ಇರುತ್ತೇವೆ, ನಮ್ಮ ಅವಶ್ಯಕತೆಗಳು ಗಳಿಕೆಗೆ ತಕ್ಕಂತೆ ಬೆಳೆಯುತ್ತಲೇ ಹೋಗುತ್ತವೆ, ಬೆಳೆಸುತ್ತಲೂ ಹೋಗುತ್ತೇವೆ. ಕೊನೆಗೆ ಖುಷಿಯಾಗಿರೊಕೆ ದುಡ್ಡು ಅಂತ ಅನ್ನಿಸಿದಾಗ... ಅದಕ್ಕೆ ದುಡ್ಡೇ ಯಾಕೆ ಅನಿಸಿದರೂ, ದುಡ್ಡಿಲ್ಲದೆ ಖುಷಿಯೂ ಇಲ್ಲ ಅನಿಸುತ್ತದೆ, ದುಡ್ಡಿದ್ದರೆ ಖುಷಿಯೇ ಇರುತ್ತದೆ ಅಂತಲೂ ಇಲ್ಲ. ಅದ್ರೂ ದುಡ್ಡು ಬೇಕೇ ಬೇಕು, ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತದೆ ಅಂತ ಸುಮ್ನೇನಾ ಹೇಳಿದ್ದು ಹೆಣಕ್ಕೂ ಜೀವ ಬರಬೇಕೆಂದ್ರೆ, ಜೀವಿಸೊಕೆ ಅದು ಬೇಕೇ ಅಲ್ವೇ.

ಹೊಟೆಲಿನಲ್ಲಿ ಹೊಟ್ಟೆ ತುಂಬ ತಿಂದು, ಫುಡ್ ಕೂಪನ್ನು ಕೊಟ್ಟಾಗ ದುಡ್ಡು ಕೊಟ್ಟಂತೆ ಅನ್ನಿಸಲಿಲ್ಲ, ಆದರೂ ಕೊಟ್ಟಿದ್ದೂ ದುಡ್ಡೇ. ವೇಟರಗೆ ಟಿಪ್ಸ ಅಂತ ಹತ್ತು ರೂಪಾಯಿ ಇಟ್ಟರೆ, ಇವಳು ತೆಗೆದುಕೊಂಡು ಐದು ರೂಪಾಯಿ ಇಡುತ್ತ, "ಏನು ಹೈದರಾಬಾದ ನಿಜಾಮನ ಮೊಮ್ಮಗನಾ ನೀವು, ಟಿಪ್ಸ ಎಷ್ಟು ಇರಬೇಕೊ ಅಷ್ಟೇ..." ಅಂದ್ಲು. ಅದನೆತ್ತಿಕೊಂಡ ವೇಟರ ಮುಖದಲ್ಲಿ ಹತ್ತುರೂಪಾಯಿ ಮೂಡಿಸಬಹುದಾಗಿದ್ದ ನಗುವೇ ಐದು ರೂಪಾಯಿಗೂ ಮೂಡಿತ್ತು, ಅಲ್ಲಿನ ಅವಶ್ಯಕತೆ ಅಷ್ಟೇ ಇತ್ತು ಅದನ್ನ ಇವಳು ಮನಗಾಣಿಸಿದ್ದಳು. ಹೊರಬರುತ್ತ, "ರೀ ಅಮೇರಿಕಾದಲ್ಲಿ ದೊಸೆಗೂ ಹತ್ತಿಪ್ಪತ್ತು ಡಾಲರ ಅಂತೇ, ಏನ ಕಾಸ್ಟ್ಲೀ ಅಲ್ವಾ" ಅಂತಿದ್ಲು, ಇನ್ನೇನು ಇಲ್ಲೀ ಥರ ಹದಿನೈದು ರೂಪಾಯಿಗೆ ದೋಸೆ ಅಲ್ಲಿ ಸಿಗೋಕಾಗುತ್ತಾ, "ಲೇ ಡಾಲರೂ ದುಡ್ಡೇ ಕಣೆ" ಅಂದೆ, ಹೊಟ್ಟೆ ತುಂಬಿದ್ದರೂ ಈಗ ನನ್ನೇ ತಿಂದು ಬಿಡುವ ಹಾಗೇ ನೋಡಿದ್ಲು, "ನಗೇ... ನಗೋಕೇನೂ ದುಡ್ಡು ಕೊಡಬೇಕಾಗಿಲ್ಲ" ಅಂದೆ ಇಬ್ಬರೂ ಪುಕ್ಕಟೆಯಾಗಿ ನಗುನಗುತ್ತ ಹೊರಟೆವು ನಮ್ಮ ನಂದನವನದ ಕಡೆಗೆ...


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/duddu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

Sunday, September 6, 2009

ಉಪ್ಪುಪ್ಪಿಟ್ಟು!

ಮುಂಜಾನೆ ಟಿಫಿನ್ನಿಗೆ ಅಂತ ಉಪ್ಪಿಟ್ಟು ಮಾಡಿದ್ಲು, ಅದೇ ಖಾರಭಾಥ್, ಉಪಮಾ ಅಂತಾರಲ್ಲ ಅದೇ ನಮ್ಮೂರಲ್ಲಿ ಉಪ್ಪಿಟ್ಟು. ನನಗೆ ಟೇಬಲ್ಲಿನ ಮೇಲೆ ಹಾಕಿಟ್ಟು ಸ್ನಾನಕ್ಕೆ ಹೋಗಿದ್ಲು, ಸ್ವಲ್ಪ ಸುಡು ಸುಡು ಬಿಸಿ ಇತ್ತು, ಆರಲಿ ಅಂತ ಕಾದು ಕೂತಿದ್ದೆ, ಸ್ನಾನ ಮುಗಿಸಿ, ನೀರು ಹೀರಲು ತಲೆಗೆ ಟವೆಲ್ಲು ಹಾಕಿ ತುರುಬು ಕಟ್ಟಿಕೊಳ್ಳುತ್ತ ಬಂದವಳು, ನನ್ನ ಮುಖದ ಮುಂದೆ ಕೈಯಾಡಿಸಿದಳು, ಡ್ರಾಪ್ ಕೇಳಲು ನಿಲ್ಲು ಅಂತ ಸೂಚಿಸುವರಂತೆ, "ಏನು ಧ್ಯಾನ ಮಾಡ್ತಾ ಇದೀರ, ಉಪ್ಪಿಟ್ಟು ಆರಿ ಹೋದರೆ ಏನು ಚೆನ್ನಾಗಿರ್ತದೆ ತಿನ್ನಿ" ಅಂದ್ಲು. "ಹೂಂ, ತಪಸ್ಸು ಮಾಡ್ತಾ ಇದ್ದೆ, ಊರ್ವಶಿ ಏನಾದರೂ ಪ್ರತ್ಯಕ್ಷ ಆಗ್ತಾಳೋ ಅಂತ" ಅಂದೆ, "ದೇವರು ಪ್ರತ್ಯಕ್ಷ ಆಗಲಿ ಅಂತ ಎಲ್ರೂ ತಪಸ್ಸು ಮಾಡಿದ್ರೆ ಊರ್ವಶಿಗಾಗಿ ತಪಸ್ಸು ಮಾಡೋರು ನೀವೆ ಅಂತ ಕಾಣ್ತದೆ, ಊರ್ವಶಿ ಎನೂ ಇಲ್ಲ... ನಿಮಗೆ ನಾನೇ ವಾಸಿ" ಅಂತ ಬುದ್ಧಿ ಹೇಳಿದಳು, ಬುದ್ಧಿ ಬಂತೋ ಇಲ್ವೊ ಗೊತ್ತಿಲ್ಲ, ಆ ಕಡೆ ನಡೆದಿದ್ದವಳ ಕೈ ಹಿಡಿದೆಳೆದು, ಯಾವಾಗಿನಂತೆ, ಆ ಕೇಶರಾಶಿಯ ಸುವಾಸನೆ ಎಳೆದು ಬಿಟ್ಟುಕೊಟ್ಟೆ, ಆಗ ತಾನೆ ಮಜ್ಜನಗೈದ ಮುಡಿಯ ಪರಿಮಳ ಮುದ ಕೊಡುತ್ತದೆ, ಕೈಸೆರೆ ಬಿಡಿಸಿಕೊಂಡು, ಧ್ಯಾನ ಮಾಡುತ್ತ ಪೂಜೆ ಮಾಡಲು ಹೊರಟಳು. ಇತ್ತ ಉಪ್ಪಿಟ್ಟು, "ನಿನ್ನ ಊರ್ವಶಿಯೊಂದಿಗಿನ ಸರಸ ಸಾಕು, ವಸಿ ನನ್ನ ಪರಿಮಳವೂ ನೋಡು" ಅಂತ ಬಿಸಿ ಉಗಿ(ಆವಿ) ಬಿಟ್ಟಿತು. ಒಂದು ತುತ್ತು ಊದಿ ಆರಿಸಿ ಬಾಯಿಗಿಟ್ಟೆ, ಉಪ್ಪಿಟ್ಟು ಉಪ್ಪುಪ್ಪಾಗಿತ್ತು.

ತುತ್ತು ತಿಂದವನು, ಇಂಗು ತಿಂದ ಮಂಗನಂತೆ ಮುಖ ಮಾಡಿಕೊಂಡು ಕೂತೆ, ಇನ್ನೂ ಪ್ಲೇಟು ತುಂಬ ಉಪ್ಪಿಟ್ಟು ಇತ್ತು,
"ನಿನ್ನ ನಲ್ಲೆಯ ಸಿಹಿ ಮುತ್ತುಗಳೇ ಬೇಕೇ ನಿಂಗೆ, ತಿನ್ನು ಉಪ್ಪು ಉಪ್ಪು ಉಪ್ಪಿಟ್ಟು" ಅಂತ ಅಣಕಿಸುತ್ತಿತ್ತು. ಅಗರಬತ್ತಿಯ ಪರಿಮಳ ಸೂಸುತ್ತ ಹೊರಬಂದಳು, ನನ್ನ ಮುಖ ನೋಡಿ ಮಂತ್ರ ಪಟಿಸುತ್ತಲೇ, ಏನು ಅನ್ನುವಂತೆ ಹುಬ್ಬು ಮೇಲೇರಿಸಿದಳು, "ಉಪ್ಪಿಟ್ಟೂ ಅಂತ ಗೊತ್ತು... ಆದ್ರೆ, ಎನೂ ಇಲ್ಲ ಉಪ್ಪು ಬಿಟ್ಟು" ಅಂದೆ, "ಸ್...." ಅಂತ ತಲೆ ಮೇಲೆ ಕೈಯಿಂದ ಕುಟ್ಟಿಕೊಂಡವಳು, ಮಂತ್ರ ಮುಗಿಸಿ ಬಂದು ಹಲ್ಲು ಕಿರಿದಳು, "ಅಯ್ಯೊ... ಕೈಜಾರಿ ಸ್ವಲ್ಪ ಜಾಸ್ತಿ ಬಿದ್ದಿರಬೇಕು ರೀ..." ಅಂತ. ನಾ ನಗುತ್ತ ಮತ್ತೊಂದು ತುತ್ತಿಗೆ ಕೈ ಹಾಕುತ್ತಿದ್ದರೆ, ಬೇಡವೆಂದು ಕಸಿದುಕೊಂಡು ಪಾಕಶಾಲೆ ಸೇರಿದಳು, ನಾನೂ ಹಿಂಬಾಲಿಸಿದೆ "ಪರವಾಗಿಲ್ಲ ಕೊಡೆ ತಿಂತೀನಿ" ಅನ್ನುತ್ತ, ತಾನೂ ಸ್ವಲ್ಪ ಬಾಯಿಗಿಟ್ಟುಕೊಂಡು ರುಚಿ ನೋಡಿದವಳು, ಸಿಟ್ಟಿನಿಂದ ನೋಡಿ "ಅದ ಹೇಗೆ ತಿಂತೀರಾ, ಬಹಳ ಉಪ್ಪಾಗಿದೆ, ಬೀಪೀ ಜಾಸ್ತಿ ಆದರೆ ನನ್ನ ಮೇಲೆ ಹಾರಾಡ್ತೀರ.. ಎನೂ ಬೇಡ" ಅಂತ ತವೆ ಬಿಸಿ ಮಾಡಲಿಟ್ಟಳು, "ಬೇಗ ಬ್ರೆಡ ಟೋಸ್ಟ ಮಾಡಿ ಕೊಡ್ತೀನಿ ತಿಂದು ಹೋಗಿ" ಅಂತನ್ನುತ್ತ. "ಟೈಮಿದೆ ಬಿಡು ಇನ್ನೂ" ಅಂದು ಅಲ್ಲೇ ಇದ್ದ ಕಡಲೇಬೀಜ ನಾಲ್ಕು ತಿನ್ನುತ್ತ ಹೊರಬಂದೆ.

ಮತ್ತೆ ಡೈನಿಂಗ ಟೇಬಲ್ ಮೇಲೆ ಆಸೀನರಾದಾಗ ಮುಂದೆ ಬಿಸಿಬಿಸಿ ಟೋಸ್ಟಗಳಿದ್ದವು, ಅವಳು ಅಲ್ಲೇ ಚೇರು ಎಳೆದುಕೊಂಡು ಕುಳಿತಳು, "ನೀನು ತಿನ್ನಲ್ವಾ" ಅಂತ ಕೇಳಿದೆ, ಅಮೇಲೇ ಆ ಉಪ್ಪು ಉಪ್ಪಿಟ್ಟು ತಿನ್ನುವ ಪ್ಲಾನ ಏನಾದ್ರೂ ಮಾಡಿದ್ದಾಳೊ ಅಂತ ತಿಳಿದುಕೊಳ್ಳಲು, ಈ ಗೃಹಿಣಿಯರ ಮನೋಭಾವಗಳೇ ಹಾಗೆ, ಎಲ್ಲಿ ಹಾಳಾಗುತ್ತದೆ ಅಂತ ಉಪ್ಪಿದ್ದರೂ ತಿನ್ನಲು ನೋಡುತ್ತಾರೆ, ಆದರೆ ಅದು ತಿನ್ನಲು ಆಗಲ್ಲ ಅಂತ ಗೊತ್ತಾಗಿದ್ದರಿಂದ, ತನಗೂ ಟೊಸ್ಟ ಮಾಡಿಕೊಂಡಿದ್ದಳು, ಟೀ ಮಾಡಲಿಟ್ಟಿದ್ದೇನೆ, ಅದರ ಜತೆ ತನಗೂ ಟೊಸ್ಟ ತರುತ್ತೇನೆ ಅಂತದದ್ದು, ಕೇಳಿ ಸುಮ್ಮನಾದೆ.

ಹಾಗೇ ತಿನ್ನುತ್ತಿದ್ದವ ಏನೊ ನೆನಪಾಗಿ ಸುಮ್ಮನೇ ನಕ್ಕೆ, ಇವಳು ಇನ್ಯಾವ ತಪ್ಪು ಮಾಡಿದೆನೊ ಈ ಸಾರಿ, ಅಂತ ಗಾಬರಿಯಾಗಿ "ಮತ್ತೆ ಏನಾಯ್ತು, ಸರಿ ಇಲ್ವಾ" ಕೇಳಿದ್ಲು. "ಉಪ್ಪು!! ನೆನಪಿದೇನಾ..." ಅಂದೆ, ಹುಬ್ಬು ಗಂಟಿಕ್ಕಿದವಳು ನೆನಪಾಗಿ "ಒಹ್ ಅದ ಹೇಗೆ ಮರೆಯೋಕಾಗುತ್ತೆ" ಅಂದ್ಲು, ಅದು ಮರೆಯೋಕಾಗದ ಘಟನೆಯೇ ಸರಿ.

ಆಗ ಮದುವೆಯಾದ ಹೊಸತು, ಮೊದಲ ಬಾರಿ ಅಡುಗೆ ಮಾಡಲು ಪಾಕಶಾಲೆಗೆ ಕಾಲಿಟ್ಟಿದ್ದಳು, ಸೊಸೆ ಮಾಡುವ ಊಟದ ರುಚಿ ನೊಡಲು ಮನೆಯೇ ಕಾದಿತ್ತು, ಅಮ್ಮನಿಗೆ ಅವಳೆಲ್ಲ ಮಾಡ್ತಾಳೆ ಇಲ್ಲಿ ಬಾ ಕೂರು ಅಂದರೂ, ಆಗಾಗ ಹೋಗಿ ತರಕಾರಿ ಹೆಚ್ಚಿ ಕೊಡಲೇ, ಖಾರ ಅಲ್ಲಿದೆ, ಮೆಣಸು ಇಲ್ಲಿದೆ ಅಂತ ಹೇಳಿಬರುತ್ತಿದ್ದಳು, ನನ್ನ ಮಗನಿಗೆ ಇನ್ನು ಅಡಿಗೆ ಮಾಡಿ ಹಾಕುವಳು ಇವಳೇ, ಹೇಗೆ ಮಾಡುತ್ತಾಳೊ, ಹಾಸ್ಟೆಲ್ಲು ಹೊಟೇಲು ಅಂತ ತಿಂದವನಿಗೆ ಮನೆ ಅಡಿಗೆ ಮಾಡಿಹಾಕುವಳು, ಸರಿ ಇಲ್ಲದಿದ್ದರೆ ಹೇಗೆ ಅಂತ ಆತಂಕ ಬೇರೆ. ಮೊದಲ ಸಲ ಎಲ್ಲಿ ಯಾವ ಡಬ್ಬಿ ಎಲ್ಲಿದೆ ಸಿಗಲಿಕ್ಕಿಲ್ಲ ಅಂತಲೂ ಇರಬಹುದು, ಕೇಳಲು ಸಂಕೋಚ ಮಾಡಿಕೊಂಡಾಳು ಅಂತ ಕೂಡ ಏನೋ. ನಾನೂ ಒಳ ಹೋಗಿ ನೋಡಿದೆ, ಮೊದಲ ಬಾರಿ ಅತ್ತೆ ಮನೆಯಲ್ಲಿ ಅಡಿಗೆ, ಏನನ್ನುತ್ತಾರೊ, ರುಚಿಯಾಗಿರದಿದ್ದರೆ! ಇವಳ ಕಣ್ಣುಗಳಲ್ಲೂ ಭಯ ಕಂಡಿತು, ಕಣ್ಣು ಮುಚ್ಚಿ ನಿಧಾನವಾಗಿ ತೆರೆದು, ಕಣ್ಣಲ್ಲೇ ಎನೂ ಹೆದರಬೇಡ ಎಲ್ಲ ಸರಿಯಾಗುತ್ತದೆ ಮಾಡು, ಅಂತ ಹೇಳಿ ಬಂದೆ.

ಚಟಪಟ ಸದ್ದು ಕೇಳಿತು, ಸಾರಿಗೆ ವಗ್ಗರಣೆ ಹಾಕುತ್ತಿದ್ದಳು, ಅಮ್ಮ ಹೋಗಿ, ಪೂರ್ತಿ ಮಾಡುವವರೆಗೂ ತಡೆದುಕೊಳ್ಳಲು ಆಗದೇ, ರುಚಿ ನೋಡಲು ಸ್ವಲ್ಪ ಸೌಟಿನಲ್ಲಿ ತೆಗೆದುಕೊಂಡು ಸರಕ್ಕೆಂದು ಹೀರಿದ ಸದ್ದು ಬಂತು, ಅಮ್ಮನ ಮುಖ ಕಪ್ಪಿಟ್ಟಿರಬೇಕು, ಇವಳು ಹೇಗಾಗಿದೆ? ಅಂತ ಕೇಳಿದಳು ಅಂತ ಕಾಣುತ್ತದೇ, ಅಮ್ಮ "ಉಪ್ಪು ಜಾಸ್ತಿಯಾಗಿದೆ" ಅಂತನ್ನುತ್ತಿದ್ದಂತೇ, ಇದಕ್ಕೇ ಕಾಯುತ್ತಿದ್ದರೇನೊ ಅನ್ನುವಂತೆ ಸೋದರ ಸಂಬಂಧಿಯೊಬ್ಬರು, "ಈಗೀನ ಹುಡುಗೀರಿಗೆ ಅಡಿಗೆ ಮಾಡ್ಲಿಕ್ಕೆ ಎಲ್ಲಿ ಬರ್ತದೆ, ಓದಿದ್ದೇವೆ ಅಂತ ಅಡಿಗೆ ಮನೆಗೆ ಕಾಲಿಟ್ಟಿರಲ್ಲ" ಅಂತ ಮೂದಲಿಸಿದರು, ಅಡುಗೆ ಮನೆ ನಮ್ಮ ಡಿಪಾರ್ಟಮೆಂಟ ಅಲ್ಲ ಅಂತ ಇರಬೇಕಾಗಿದ್ದವ ನಾನು, ಈ ಪರಿಸ್ಥಿತಿ ಕೈಮೀರುವ ಎಲ್ಲ ಲಕ್ಷಣ ಕಂಡು ಅಲ್ಲಿಗೆ ಧಾವಿಸಿದೆ. ಈ ಮನೆಗಳಲ್ಲಿ ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೊಂದಿಗೆ ಸಂಬಂಧಗಳಿಗೆ ಉಪ್ಪಿಗಿಂತ ಜಾಸ್ತಿ ಹುಳಿ ಹಿಂಡಲು ಕಾದಿರುತ್ತಾರೆ ಕೆಲವರು... ಅದಕ್ಕೇ ಜಾಗರೂಕರಾಗಿರಬೇಕು.

ನಮ್ಮ ಮನೆಯಲ್ಲಿ ಅಜ್ಜಿಗೆ ಬೀಪೀ ಜಾಸ್ತಿಯಾದ ಮೇಲೆ, ಅಪ್ಪ "ಎಲ್ರೂ ಉಪ್ಪು ಕಮ್ಮಿ ತಿಂದರೇ ಒಳ್ಳೇದು" ಅಂತ ಹೇಳಿ, ಅಮ್ಮನಿಗೆ ಕಮ್ಮಿ ಉಪ್ಪು ಹಾಕು ಎಲ್ರಿಗೂ ಹೊಂದಿಕೆಯಾಗುತ್ತದೆ ಅಂತ ಕಟ್ಟಪ್ಪಣೆ ಮಾಡಿದರು, ಅಮ್ಮನ ಕೈಯಡುಗೆ ಉಪ್ಪು ಕಮ್ಮಿಯಾದರೂ ರುಚಿಕಳೆದುಕೊಳ್ಳಲಿಲ್ಲ, ನಮಗೂ ಕಡಿಮೆ ಉಪ್ಪಿನ ಊಟ ಒಗ್ಗಿ ಹೋಯಿತು, ಊರಿಂದ ಬಂದ ಸೋದರಮಾವ, ಉಪ್ಪು ಖಾರ ಇಲ್ಲದೆ ಸಪ್ಪೆ ಊಟ ಏನು ತಿಂತೀರಿ ಅಂತ, ಉಪ್ಪು ಉದುರಿಸಿಕೊಂಡು, ಹಸಿ ಕೆಂಪುಖಾರ ನಂಜಿಕೊಂಡೇ ಊಟ ಮಾಡುತ್ತಿದ್ದುದು ನಮ್ಮಲ್ಲಿ. ಹೀಗೆ ನಮ್ಮ ಮನೆಯಲ್ಲಿ ಉಪ್ಪಿನ ಉಪಯೋಗ ಕಮ್ಮಿಯಾಗಿತ್ತು, ಹೀಗಾಗಿ ಅವಳು ಸರಿ ಪ್ರಮಾಣ ಹಾಕಿದ್ದರೂ ಜಾಸ್ತಿ ಅಂತ ಅಮ್ಮನಿಗೆ ಅನಿಸಿದ್ದರೆ ಅಚ್ಚರಿಯಿರಲಿಲ್ಲ.

ಆ ಮೂದಲಿಸಿದ ಸಂಬಂಧಿಗೆ, ಇದೆಲ್ಲ ನಮ್ಮನೆಯಲ್ಲಿ ನಿನ್ನಾಟ ನಡೆಯಲ್ಲ ಅಂತ ತಿಳುವಳಿಕೆ ಬರುವಂತೆ "ಮೊದಲ ಸಲ ಅಲ್ವಾ, ಎನೊ ಮಿಸ್ಟೇಕು ಆಗುತ್ತದೆ, ಅಲ್ದೇ ನಮ್ಮನೇಲಿ ಉಪ್ಪು ಕಮ್ಮಿ ಉಪಯೋಗಿಸ್ತೀವಿ ಅಮ್ಮನಿಗೆ ಅದು ಗೊತ್ತಿದೆ" ಅಂತ ಮಧ್ಯಪ್ರವೇಶಿಸಿದೆ ಅಮ್ಮನ ಕಣ್ಣಿನಲ್ಲಿ ನೋಡುತ್ತ... "ಹೌದು, ಹೌದು ನಮ್ಮನೇಲಿ ಅಡಿಗೆಗೆ ಉಪ್ಪು ಕಮ್ಮಿ" ಅಮ್ಮ ಅಂತ ಅನುಮೋದಿಸಿದಳು. ಇವಳ ಹಣೆಯಲ್ಲಿ ಬೆವರು ಹನಿ ಮೂಡಿದ್ದವು ಭೀತಿಯಿಂದ, ಸೌಟು ಇಸಿದುಕೊಂಡು ಸ್ವಲ್ಪ ಕೈಯಲ್ಲಿ ಸಾರು ಹಾಕಿಕೊಂಡು ಆರಿಸಲು ಊದುತ್ತ... ಅವಳ ಹಣೆಗೂ ಸ್ವಲ್ಪ ಊದಿದೆ ಬೆವರ ಹನಿ ಹೋಗಲಾಡಿಸಲು... ರುಚಿ ನೋಡಿದೆ, ನಿಜವಾಗಲೂ ಉಪ್ಪು ಸ್ವಲ್ಪ ಜಾಸ್ತಿಯಾಗಿತ್ತು, ಅವಳಿಗೂ ಕೈಯಲ್ಲಿ ಹಾಕಿದೆ ರುಚಿ ನೋಡಿದವಳು, ನನ್ನಡೆಗೆ ಮುಂದೇನು ಅನ್ನುವಂತೆ ನೋಡಿದಳು, ನೋಟದಲ್ಲೇ ನೋ ಪ್ರಾಬ್ಲಂ ಅನ್ನುವಂತೆ ನಸುನಕ್ಕೆ.

ಎಲ್ಲೋ ಓದಿದ್ದ ಟಿಪ್ಸ ನೆನಪಿತ್ತು, ಅಮ್ಮನ ಹೊರಕಳಿಸಿ, ಟೀವೀ ನೋಡಹೋಗು ಅಂತಂದು, ಆಲೂಗಡ್ಡೆ(ಬಟಾಟಿ, ಪೊಟ್ಯಾಟೊ) ಕೊಡು ಅಂದೆ ನನ್ನಾಕೆಗೆ, ಹತ್ತುವರ್ಷ ಹೊರಗೇ ತಿಂದವನಿಗೇನು ಗೊತ್ತಿರಬಹುದು ಅನ್ನುವ ಅನುಮಾನದಲ್ಲೇ ತಂದುಕೊಟ್ಟಳು, ಚೆನ್ನಾಗಿ ತೊಳೆದು ಎರಡು ಹೋಳು ಮಾಡಿ, ಸಾರಿನಲ್ಲಿ ಮುಳುಗಿಸಿದೆ, ಒಂದು ಹದಿನೈದು ನಿಮಿಷ ಹಾಗೇ ಇರಲಿ ಹೆಚ್ಚಿನ ಉಪ್ಪು ಹೀರಿಕೊಳ್ಳುತ್ತವೆ, ಆಮೇಲೆ ಅವನ್ನ ತೆಗೆದುಹಾಕಿ, ಸ್ವಲ್ಪ ಚಿಟಿಕೆ ಬೆಲ್ಲ ಹಾಕಿ ಕುದಿಸಿಬಿಡು. ಊಟಕ್ಕೆ ನೀಡುವಾಗ, ತುಪ್ಪ ಹಾಕಿ ನೀಡು ಎಲ್ಲ ಸರಿ ಹೋಗುತ್ತದೆ ಅಂದೆ. ಅವಳ ಸೆರಗು ತೆಗೆದುಕೊಂಡು ಅವಳ ಹಣೆಗೆ ಒತ್ತಿದೆ, ಸ್ವಲ್ಪ ನಿರಾಳವಾದಳು... ಹೇಳಿದಂತೇ ಮಾಡಿದಳು, ಅಪ್ಪ ಎರಡನೇ ಬಾರಿ ಅನ್ನ ಹಾಕಿಸಿಕೊಂಡಾಗಲೇ ಗೊತ್ತಾಯ್ತು, ಇಷ್ಟವಾಗಿದೆ ಎಂದು. ಅಮ್ಮನ ಮುಖದಲ್ಲಿ ಲಾಸ್ಯ ಮನೆ ಮಾಡಿತ್ತು, ಉಪ್ಪಿನ ತಪ್ಪಾದರೂ ಮನೆ ಒಪ್ಪ ಓರಣವಾಗಿತ್ತು. ಅಮ್ಮ ಬಂದು ಏನೋ ಮಾಡಿದೆ ಅಂತ ಕೇಳುತ್ತಲೇ ಇದ್ದಳು, ಎಲ್ಲ ನಿನ್ನ ಸೊಸೆಯ ಮ್ಯಾಜಿಕ ಅನ್ನುತ್ತಿದ್ದೆ. ಅದರೊಂದಿಗೆ,
ತಪ್ಪು ತಪ್ಪೇ, ಆದರೆ ತಪ್ಪು ತಿದ್ದಬಹುದು ಕೂಡ, ತಪ್ಪನ್ನೇ ದೊಡ್ಡದು ಮಾಡಿದರೆ ಅದೇ ದೊಡ್ಡ ತಪ್ಪು. ಈ ಮನೆಗೆ ಯಾರು ಹುಳಿ ಹಿಂಡಲು ಬಂದರೂ ಅಷ್ಟೇ ಏನೂ ಆಗದು, ಸಿಹಿ ಸಿಂಚನಗೈಯ್ಯಲಾಗದಿರಬಹುದು, ಆದ್ರೆ ಹುಳಿಯನ್ನಂತೂ ಇಂಗಿಸಿಕೊಳ್ಳುತ್ತೇವೆ ಅನ್ನುವ ಒಂದು ಸಂದೇಶ ಮನೆಯಲ್ಲಿ ಎಲ್ಲರಿಗೂ ರವಾನೆಯಾಗಿತ್ತು.

ಆದದ್ದನ್ನೆಲ್ಲ ಅಮ್ಮನಿಗೆ ಇವಳು ಹೇಳಿ, ಅಮ್ಮನ ಹೆಮ್ಮೆಯ ಮಗನನ್ನಾಗಿಸಿದಳು, ಎಷ್ಟೊ ಬಾರಿ ಅದನ್ನು ಪ್ರಸ್ತಾಪಿಸಿ ನಕ್ಕಿದ್ದೇವೆ, ಅಮ್ಮನ ಹತ್ತಿರ ಇವಳು ಇನ್ನೂ ಅಡುಗೆಯಲ್ಲಿ ಪಳಗಿದ್ದಾಳೆ, ಆ ಹುಳಿ ಸಾರಿನ ಪ್ರಸಂಗ ಇನ್ನೂ ನೆನಪಿದೆ, ಆ ನೆನಪು ಮಾತ್ರ ಸಿಹಿ ಸವಿ ನೆನಪಿನಂತೆ.

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅಂತ ಸುಮ್ನೇ ಗಾದೆ ಬಂದಿದ್ದಾ, ಉಪ್ಪು ಹೆಚ್ಚಾದರೂ ತಪ್ಪೇ, ಕಡಿಮೆಯಾದರೂ ತಪ್ಪೇ, ಪ್ರಮಾಣಕ್ಕೆ ತಕ್ಕದಾಗಿದ್ದರೆ ಮಾತ್ರ ರುಚಿ, ಉಪ್ಪು ಜಾಸ್ತಿ ಆಗಿದೆ ಅಂತ ಬೀಪೀ ಏರಿಸಿಕೊಂಡು ಎಷ್ಟು ಮನೆಗಳಲ್ಲಿ ಜಗಳವಾಗಿಲ್ಲ, ಅದಕ್ಕೇ ರಾತ್ರಿ ಉಪ್ಪು ಕೇಳಬಾರದು ಮನೆಯಲ್ಲಿ ಜಗಳವಾಗುತ್ತದೆ ಅಂತ ಮೂಢನಂಬಿಕೆ ಬಂದಿದ್ದೇನೊ. ಅಂತೂ ಉಪ್ಪು ಮಾತ್ರ ಅಡಿಗೆಗೆ ಬೇಕೇ ಬೇಕು. ಉಪ್ಪಿನ ಸೇವನೆಯಿಂದ ಬೀಪೀ ಜಾಸ್ತಿ ಆಗುತ್ತದೆ ಅಂತ ವೈಜ್ಞಾನಿಕ ಕಾರಣವೇನೊ ಇದೆ ಆದರೆ ಉಪ್ಪು ಜಾಸ್ತಿ ಆದದ್ದಕ್ಕೇ, ಇನ್ನೂ ತಿನ್ನುವ ಮೊದಲೇ ಬೀಪೀ ಜಾಸ್ತಿ ಮಾಡಿಕೊಂಡು ಉಪ್ಪಿನ ಮೇಲೆ ಉರಿದುಬೀಳುವವರನ್ನು ನೋಡಿದ್ದೇನೆ. ಈ ಕ್ಷಣಿಕ ಆವೇಶ ತರವಲ್ಲ, ಉಪ್ಪಿನಂಥ ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡ ಕಂದಕಗಳನ್ನು ಸೃಷ್ಟಿಸಬಹುದು, ಸ್ವಲ್ಪ ಸಹನೆ ಇದ್ದರೆ ಸಾಕು, ನನ್ನನ್ನೂ ಸೇರಿಸಿಕೊಂಡು ಹೇಳುತ್ತಿರುವುದು, ನನಗಿದೆ ಬೇರೆಯವರಿಗೆ ಇಲ್ಲ ಅಂತಲ್ಲ. ಹಾಗಂತ ಉಪ್ಪು ಜಾಸ್ತಿಯಿದ್ದರೂ ತಿನ್ನಿ ಅಂತಲ್ಲ, ರಕ್ತದೊತ್ತಡ(ಬೀಪೀ) ಜಾಸ್ತಿ ಆಗಿ ಹೃದಯದ ಖಾಯಿಲೆಗಳು ಬಂದಾವು ಉಪ್ಪು ಸ್ವಲ್ಪ ಕಡಿಮೆ ಮಾಡಿ, ಅತ್ತ ಬಿಟ್ಟು ಬಿಟ್ಟರೆ ಐಯೋಡಿನ ಕೊರತೆಯಾದೀತು, ಅದಕ್ಕೆ ರುಚಿಗೆ ಹಿತ ಮಿತಕ್ಕೆ ತಕ್ಕಷ್ಟು ಇರಲಿ, ಆಗ ಜೀವನ ನಳಪಾಕವಾಗುತ್ತದೆ.

ಆ ಘಟನೆಯ ಮರು ಉಲ್ಲೇಖ ಇವಳ ಮೊಗದಲ್ಲಿ ನಗು ತಂದಿತ್ತು "ರೀ, ಉಪ್ಪಿಟ್ಟಿಗೂ ಏನಾದ್ರೂ ಐಡಿಯಾ ಇದೇನಾ" ಪ್ರಶ್ನಿಸಿದಳು, "ನಾನೇನು ಅಡುಗೆಭಟ್ಟ ಅನ್ಕೊಂಡಿದೀಯಾ" ಅಂದೆ. "ಮತ್ತೆ ಆಗ ಹೇಗೆ ಆ ಐಡಿಯಾ ಸಿಕ್ಕಿತ್ತು" ಅಂದ್ಲು. "ಎಲ್ಲೊ ಓದಿದ ನೆನಪಿತ್ತು, ಮತ್ತೆ ಈಗ ಏನ್ಮಾಡ್ತೀಯಾ" ಅಂದೆ. "ನಳ ಮಹರಾಜರೇ, ಪಾಕಶಾಲೆ ನಮಗೆ ಬಿಟ್ಟು, ನಿಮ್ಮ ಕಂಪ್ಯೂಟರ ಕುಟ್ಟಲು ಜಾಗ ಖಾಲಿ ಮಾಡಿ" ಅಂದಾಗಲೇ ಆಫೀಸಿನ ನೆನಪಾಯಿತು, "ಅಮ್ಮನಿಗೆ ಗೊತ್ತಿದ್ರೆ ಕೇಳು" ಅನ್ನುತ್ತ ಎದ್ದೆ, ಹಳೆ ನೆನಪಿನೊಂದಿಗೆ ಹರಟೆ ಹೊಡೆದರಾಯ್ತು ಅದನ್ನ ಕೇಳುವ ನೆಪದಲ್ಲಿ ಅಂತ, ಅಮ್ಮನಿಗೆ ಫೋನು ಮಾಡಲು ನಡೆದಳು. ಮತ್ತೆ ನನ್ನಾಕೆಯೊಂದಿಗೆ, ಉಪ್ಪು ಜಾಸ್ತಿಯಾದರೆ, ಸಕ್ಕರೆ ಹಾಕಿ, ಸಿಹಿಯಾದರೆ, ಖಾರ ಹಾಕಿ ಮತ್ತೆ ಇಂಥದ್ದೇ ಖಾರಾಬಾಥ... ಅಲ್ಲಲ್ಲ ಖಾಸಭಾತಗಳೊಂದಿಗೆ ಸಿಕ್ತೀನಿ


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/uppu.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು